ಹದಿನಾಲ್ಕನೆಯ ಶತಮಾನ ಮತ್ತು ಅನಂತರ ಯೂರೋಪು ಮಹತ್ವದ ಬದಲಾವಣೆಗಳನ್ನು ಅನುಭವಿಸಿತು. ಪಾಶ್ಚಿಮಾತ್ಯದ ಮೂರು ಪ್ರಸಿದ್ಧ ಸಂಸ್ಥೆಗಳು – ಪವಿತ್ರ ರೋಮನ್ ಸಾಮ್ರಾಜ್ಯ, ಪೋಪ್‌ಗುರುವಿನ ಅಧಿಕಾರ ಮತ್ತು ಊಳಿಗಮಾನ್ಯ ಪದ್ಧತಿ ಅಳಿಯಲಾರಂಭಿಸಿದವು. ಪೂರ್ವ ರೋಮನ್ ಸಾಮ್ರಾಜ್ಯದ ಅವನತಿಯಿಂದ ಕಾನ್‌ಸ್ಟಾಂಟಿ ನೋಪಲ್ ತುರ್ಕಿಯರ ಕೈವಶವಾಯಿತು. ಕ್ಲಾಸಿಕಲ್ ವಿದ್ವಾಂಸರು ಪಶ್ಚಿಮ ದೇಶಗಳಿಗೆ ಪಲಾಯನ ಮಾಡಿ, ತಮ್ಮ ಹೊಸ ಸ್ವದೇಶದಲ್ಲಿ ಗ್ರೀಸ್ ಮತ್ತು ರೋಮ್ ದೇಶಗಳ ಸಾಹಿತ್ಯವನ್ನು ಬೋಧಿಸಲಾರಂಭಿಸಿದರು. ಇದರಿಂದ ಕ್ಲಾಸಿಕಲ್ ವಿದ್ಯೆ ಅಥವಾ ಜ್ಞಾನದಲ್ಲಿ ಹೊಸ ಆಸಕ್ತಿ ಸೃಷ್ಟಿಯಾಯಿತು. ಇದರ ಪರಿಣಾಮವೇ ಪುನರುಜ್ಜೀವನ.

ಈ ಬೆಳವಣಿಗೆಯನ್ನು ಭೌಗೋಳಿಕ ಅನ್ವೇಷಣೆ, ಪ್ರಾಟಸ್ಟೆಂಟ್ ಸುಧಾರಣೆ, ವಾಣಿಜ್ಯಾಭಿವೃದ್ಧಿ ಮತ್ತು ರಾಷ್ಟ್ರೀಯ ಉದಯ ಇವುಗಳು ಅನುಸರಿಸಿದವು. ಕಲೆಗಳು, ಸಾಹಿತ್ಯ, ವಿಜ್ಞಾನ, ತತ್ವಜ್ಞಾನ, ರಾಜಕೀಯ ಶಾಸ್ತ್ರ ಮತ್ತು ವಿದ್ಯಾ ಕ್ಷೇತ್ರಗಳಲ್ಲಿ ಹೊಸ ಸಾಧನೆಗಳು ಕಂಡುಬಂದವು. ಇತಿಹಾಸದ ಯೋಜನೆಯನ್ನು ನಿರ್ಧರಿಸುತ್ತಿದ್ದ ದೇವತಾ ಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿನ ಆಸಕ್ತಿಯು ಮಾನವವಿಷಯಗಳ ಆಸಕ್ತಿಗೆ ಎಡೆಮಾಡಿ ಕೊಟ್ಟಿತು. ಸ್ವಾಭಾವಿಕವಾಗಿ ಪ್ರಾಚೀನ್ ಗ್ರೀಕ್ ಮತ್ತು ರೋಮ್ ಜಗತ್ತಿನ ಮೇಲೆ ಈ ಆಸಕ್ತಿ ಕೇಂದ್ರೀಕೃತವಾಯಿತು. ಇತಿಹಾಸಕಾರರು ತಮ್ಮ ಬರಹಗಳ ವಿಷಯ ವಸ್ತುವಾಗಿ ವ್ಯಾಪಕವಾದ ಹಾಗೂ ವಿಭಿನ್ನವಾದ ಪ್ರದೇಶಗಳನ್ನು ಕಂಡುಕೊಂಡರು. ಇತಿಹಾಸ ಬರಹಗಳಲ್ಲಿ ದೇವತಾ ಶಾಸ್ತ್ರಕ್ಕೆ ಬದಲಾಗಿ ಮಾನವಾಸಕ್ತಿ ಪ್ರಾಬಲ್ಯವನ್ನು ಗಳಿಸಿಕೊಂಡಿತು. ಇತಿಹಾಸವು ಪ್ರಾಪಂಚಿಕ ಹಾಗೂ ಪಕ್ಷೇತರವಲ್ಲದ ರೂಪವನ್ನು ತಳೆಯಿತು. ಇದರ ಪರಿಣಾಮವಾಗಿ ಪುನರುಜ್ಜೀವನ ಯುಗದಲ್ಲಿ ಆಧುನಿಕ ಇತಿಹಾಸ ಚಿಂತನೆಯ ವಸ್ತ್ರಕ್ಕೆ ಅನೇಕ ಹೊಸ ಎಳೆಗಳನ್ನು ನೇಯಲಾಯಿತು. ಪುನರುಜ್ಜೀವನ ಯುಗದಲ್ಲಿ ಬೆಳಕಿಗೆ ಬಂದ ಇತಿಹಾಸದಲ್ಲಿ ಬದಲಾವಣೆಗಳು ಈ ಕೆಳಕಂಡಂತಿವೆ.

ಒಂದು ಸ್ವತಂತ್ರವಾದ ಮತ್ತು ಸಾಮಾನ್ಯ ಜನಜೀವನವನ್ನು ಚಿತ್ರಿಸುವ ಸಾಹಿತ್ಯವಾಗಿ ಇತಿಹಾಸ ಬರಹಗಳಲ್ಲಿ ಉಂಟಾಯಿತು. ಎರಡನೆಯದಾಗಿ ನೈತಿಕ ಹಾಗೂ ರಾಜಕೀಯ ಶಿಕ್ಷಣಕ್ಕೆ ಉಪಯುಕ್ತ ಉದಾಹರಣೆಗಳ ಆಧಾರವಾಗಲು ಉನ್ನತ ಬೋಧ ಪರಮೌಲ್ಯಗಳನ್ನು ಅಳವಡಿಸಿಕೊಳ್ಳಲು ಇತಿಹಾಸ ರಚನೆಗೆ ಪ್ರೇರಣೆಯನ್ನು ನೀಡುವ ಪ್ರಯತ್ನವು ಈ ಯುಗದಲ್ಲಿ ನಡೆಯಿತು. ಮೂರನೆಯದಾಗಿ, ಪ್ರಾಚೀನ ಬರಹಗಳ ಅಧ್ಯಯನಕ್ಕೆ ಮೀಸಲಿಡುವ ಉದ್ದೇಶದಿಂದ ರಚಿಸಿದ ವಿದ್ವಾಂಸರ ಮಂಡಲ ಇತಿಹಾಸ ಸಂಶೋಧನೆಯ ತಾಂತ್ರಿಕತೆಗಳಿಗೆ ಮಹತ್ತರವಾದ ಕೊಡುಗೆಯನ್ನು ನೀಡಿತು. ಕೊನೆಯದಾಗಿ, ಈ ಬೆಳವಣಿಗೆಯ ಪರಿಣಾಮವಾಗಿ, ಗತಕಾಲದ ಬಗ್ಗೆ ಮಧ್ಯಕಾಲೀನ ದೃಷ್ಟಿಯಲ್ಲಿದ್ದ ಐತಿಹಾಸಿಕ ಲಕ್ಷಣಗಳನ್ನು ತೊರೆದು ಹಾಕಿ, ವಿಭಿನ್ನತೆ, ಬದಲಾವಣೆ ಮತ್ತು ಅಸಂಗತಿಗಳ ಬಗ್ಗೆ ಮೂಲ ಐತಿಹಾಸಿಕ ಸೂಕ್ಷ್ಮ ಪರಿಜ್ಞಾನ ಪಡೆಯಲು ಸಾಧ್ಯವಾಯಿತು. ಪುನರುಜ್ಜೀವನ ಯುಗದಲ್ಲಿ ಉದ್ಭವಿಸಿದ ಈ ಬೆಳವಣಿಗೆಗಳಿಂದಾಗಿ ಹದಿನೆಂಟನೆಯ ಶತಮಾನವು ಒಂದು ಶ್ರೀಮಂತ ಇತಿಹಾಸ ಲೇಖನ ಸಂಪ್ರದಾಯವನ್ನು ಪಡೆಯಿತು.

ಪುನರುಜ್ಜೀವನ ಯುಗದಲ್ಲಿ ಇತಿಹಾಸದ ಪರಿಕಲ್ಪನೆಯನ್ನು ಆರೋಗ್ಯಕರ ಬದಲಾವಣೆ ಉಂಟಾಯಿತು. ಇತಿಹಾಸವೂ, ಬೋಧನೀಯವೂ, ದಾರ್ಶನಿಕವೂ ಆಗಿ ಮಾರ್ಪಾಡಾಯಿತು. ಮಾನವರನ್ನು ಈ ಜಗತ್ತಿನ ಶಾಶ್ವತ ವಾಸಿಗಳೆಂದು ನಿರೂಪಿಸಬೇಕೇ ವಿನಃ ಮುಂದಿನ ಪ್ರಪಂಚಕ್ಕೆ ಪ್ರಯಾಣದಲ್ಲಿರುವ ಪ್ರಯಾಣಿಕರಂತಲ್ಲ ಎಂಬ ನಿಲುವು ಬೆಳೆಯಿತು. ಇತಿಹಾಸವು ರಾಜಕೀಯ ಪಕ್ಷದ ಉಪಕರಣವಾಗಬಾರದು ಮತ್ತು ಮಾನವನು ಸ್ವತಂತ್ರನೂ ಹಾಗೂ ಪಾರಮಾರ್ಥಿಕತೆಯಿಂದ ಸ್ವತಂತ್ರನೂ ಆಗಿದ್ದಲ್ಲಿ ಸುಖವಾಗಿರುತ್ತಾನೆಂದು ಸೂಚಿಸಬೇಕು. ಮಾತ್ರವಲ್ಲ, ಮಾನವನನ್ನು ಪ್ರೇರಣೆ ಹಾಗೂ ಭಾವೋದ್ರೇಕದ ಜೀವಿಯೆಂದು ವರ್ಣಿಸಬೇಕು. ಹೀಗೆ, ಇತಿಹಾಸವು ಮಾನವನ ಭಾವೋದ್ರೇಕಗಳ ಇತಿಹಾಸವಾಯಿತಲ್ಲದೆ ಮಾನವ ಸ್ವಭಾವದ ಅಗತ್ಯವಾದ ಪ್ರದರ್ಶನಗಳೆಂದು ಪರಿಗಣಿಸಲ್ಪಟ್ಟಿತು. ಇತಿಹಾಸಕಾರನ ಕ್ಷೇತ್ರವು ವಿಸ್ತೃತಗೊಂಡಿತಲ್ಲದೆ ಪ್ರತಿಷ್ಠೆಯನ್ನೂ ಪಡೆಯಿತು.

ಅಂತರ್‌ಸಂಬಂಧವುಳ್ಳ ಅಸಂಖ್ಯಾತ ಪ್ರವೃತ್ತಿಗಳು ಪುನರುಜ್ಜೀವನ ಕಾಲದಲ್ಲಿ ಇತಿಹಾಸದ ಚಟುವಟಿಕೆಗಳ ಪುನರುತ್ಥಾನಕ್ಕೆ ಕಾರಣವಾದವು. ಪುರಾತನತ್ವವನ್ನು ಕುರಿತಾದ ಬರವಣಿಗೆಯಲ್ಲಿ ಹುಟ್ಟಿದ ನೂತನ ಆಸಕ್ತಿಯು ಗ್ರೀಕ್ ಮತ್ತು ರೋಮನ್ನರ ಜಗತ್ತು ವಿಶೇಷವಾಗಿ ರೋಮ್ ಇತಿಹಾಸದ ಅಧ್ಯಯನದಲ್ಲಿ ಒಲವು ವ್ಯಕ್ತಪಡಿಸಿತು. ಪುರಾತನ ಇತಿಹಾಸಕಾರರ ಕೃತಿಗಳು ಹೆಚ್ಚು ಮೆಚ್ಚಿಗೆಯನ್ನು ಕೆರಳಿಸದವಲ್ಲದೆ ಅನುಕರಿಸಬಹುದಾದ ಮಾದರಿಗಳಾಗಿ ಪರಿಣಮಿಸಿದವು. ಪುರಾತನ ರೋಮನ್ ಮತ್ತು ಗ್ರೀಕ್ ಸಾಹಿತ್ಯಗಳನ್ನು ಪ್ರಾಚೀನ ಯುಗಗಳ ಸಂಸ್ಕೃತಿಯ ಸಂಬಂಧವನ್ನು ಸ್ಫುಟಗೊಳಿಸುವುದು ಅವಶ್ಯಕವೆಂದು ಭಾವಿಸಿದ ಕಾರಣ, ಇತಿಹಾಸ ವಿಶ್ಲೇಷಣೆಯ ಪ್ರಮುಖ ಸಮಸ್ಯೆಗಳತ್ತ ಗಮನಹರಿಸಬೇಕಾಯಿತು. ಈ ಎಲ್ಲಾ ಪ್ರವೃತ್ತಿಗಳ ಪರಿಣಾಮವಾಗಿ, ಪುನರುಜ್ಜೀವನ ಯುಗದಲ್ಲಿ ಆಧುನಿಕ ಇತಿಹಾಸ ಚಿಂತನದ ಚೌಕಟ್ಟನ್ನು ಹೊಸ ಎಳೆಗಳಿಂದ ಹೆಣೆಯಲಾಯಿತು.

ಇತಿಹಾಸದ ಬರವಣಿಗೆಯು ಪ್ರಮುಖವೂ ಮತ್ತು ಸಾಹಿತ್ಯವೂ ಶೈಲಿಯಿಂದ ಸ್ವತಂತ್ರ ವಾದುದೆಂಬ ಬೆಳವಣಿಗೆ ಈ ಯುಗದಲ್ಲಿ ವ್ಯಕ್ತವಾಯಿತು. ಇತಿಹಾಸಕ್ಕೆ ಬೋಧನಾತ್ಮಕ ಮಹತ್ವವನ್ನು ಕೊಟ್ಟು ರಚಿಸುವ ಪ್ರವೃತ್ತಿಯು ಈ ಯುಗದಲ್ಲಿ ತೀವ್ರವಾಯಿತು. ಇತಿಹಾಸವು ನೈತಿಕ ಹಾಗೂ ರಾಜಕೀಯ ತಿಳುವಳಿಕೆಯನ್ನು ನೀಡುವ ಉಪಯುಕ್ತವಾದ ಆಧಾರವಾಯಿತು. ಈ ತಿಳುವಳಿಕೆಯನ್ನು ರೋಮ್ ಇತಿಹಾಸದಿಂದ ಉದಾಹರಿಸಲಾಗುತ್ತಿತ್ತು. ಪ್ರಾಚೀನ ಬರವಣಿಗೆಗಳ ಅಧ್ಯಯನಕ್ಕಾಗಿಯೇ ಮೀಸಲಾದ ಒಂದು ಮಾರ್ಗವನ್ನು ರಚಿಸಿದುದು ಈ ಯುಗದ ಅತಿ ಮಹತ್ವದ ಕೊಡುಗೆಯಾಗಿದೆ. ಈ ಬೆಳವಣಿಗೆಯು ಪ್ರಾಚೀನ ಹಾಗೂ ಮಧ್ಯಕಾಲೀನ ಇತಿಹಾಸದ ಆಧುನಿಕ ವಿಮರ್ಶೆಗನುಗುಣವಾಗಿ ಅಧ್ಯಯನಕ್ಕೆ ದಾರಿ ದೀಪವಾಯಿತಲ್ಲದೆ ಸಂಮೃದ್ಧವಾದ ಇತಿಹಾಸ ಲೇಖನಾ ಸಂಪ್ರದಾಯದ ನಿರ್ಮಾಣಕ್ಕೆ ಕಾರಣವಾಯಿತು.

ಪುನರುಜ್ಜೀವನ ಯುಗದ ಪ್ರಾರಂಭದಲ್ಲಿಯೇ ಪೆಟ್ರಾರ್ಕ್‌(೧೩೦೪-೧೩೭೪) ಒಂದು ನೂತನ ಹಾಗೂ ಗಾಢವಾದ ಆಸಕ್ತಿಯಿಂದ ಪ್ರಾಚೀನ ಇತಿಹಾಸದತ್ತ ತಿರುಗಿದರು. ಇದರ ಪರಿಣಾಮವಾಗಿ ಪ್ರವಾಹೋಪಾದಿಯಲ್ಲಿ ಇತಿಹಾಸ ಕೃತಿಗಳ ರಚನೆಯಾಯಿತು. ರೋಮ್ ದೇಶವನ್ನು ಅತಿಯಾಗಿ ಮೆಚ್ಚಿಕೊಂಡ ಪೆಟ್ರಾರ್ಕ್‌, ಆ ದೇಶದ ಸಂಸ್ಕೃತಿಯ ಪೂರ್ಣ ಅರಿವನ್ನು ಪಡೆಯಲು ಪ್ರಯತ್ನಿಸಿದರು. ಲಿವಿಯು ಅವರಿಗೆ ಹಿತವಾಗಿ ಕಂಡರು. ಪ್ರಾಚೀನ ಕಾಲವು ಆಧುನಿಕ ಅಥವಾ ವರ್ತಮಾನಕ್ಕೆ ಪ್ರಯೋಗಿಸಬಹುದಾದ ಉದಾಹರಣೆಗಳಿಗೆ ಆಧಾರವಾಗಬಹುದೆಂಬ ಆಧುನಿಕ ಇತಿಹಾಸಗಳ ನಡುವೆ ಸ್ಪಷ್ಟವಾದ ಗಡಿ ರೇಖೆಯನ್ನು ಎಳದರು.

ಕ್ಲಾಸಿಕಲ್ ಶಿಕಷಣದ ಪುನರುತ್ಥಾನವು ಇಟಲಿಯಲ್ಲಿ ಪ್ರಾರಂಭವಾಯಿತು. ಇಟಲಿಯ ನಗರ ರಾಜ್ಯಗಳು ಕ್ಲಾಸಿಕಲ್ ಸಂಪ್ರದಾಯವನ್ನು ರಕ್ಷಿಸಿದ್ದವು. ಬೋಧಪರ ಮಹತ್ವವನ್ನು ಹೊಂದಿದ್ದರಿಂದ ವ್ಯಾಸಂಗ ಕ್ರಮದಲ್ಲಿ ಇತಿಹಾಸಕ್ಕೆ ನಗರ ರಾಜ್ಯಗಳ ಮುಖಂಡರು ತಮ್ಮ ರಾಜ್ಯದ ಯಥಾರ್ಥವಾದ ಹಾಗೂ ಅತ್ಯುತ್ತಮವಾದ ಇತಿಹಾಸವನ್ನು ಪಡೆಯಲು ಆಶಿಸಿದರು. ಪುನರುಜ್ಜೀವನ ಇಟಲಿಯ ಇತಿಹಾಸಕಾರರು ವಿಮರ್ಶಾತ್ಮಕ ವಿಧಾನ ಹಾಗೂ ವಾಸ್ತವಿಕತೆಯನ್ನು ಪ್ರದರ್ಶಿಸಿದರು. ಈ ನಗರ ರಾಜ್ಯಗಳ ಭವ್ಯ ಇತಿಹಾಸವನ್ನು ಭವಿಷ್ಯದ ತಲೆಮಾರಿಗೆ ಒದಗಿಸುವ ಜವಾಬ್ದಾರಿಯನ್ನು ಫ್ಲಾರೆನ್ಸ್ ನಗರವು ವಹಿಸಿಕೊಂಡಿತು. ವಿಲ್ಲಾನಿಯು ಹಿಸ್ಟರಿ ಆಫ್ ಫ್ಲಾರೆನ್ಸ್ ಎಂಬ ಕೃತಿಯನ್ನು ರಚಿಸಿದರು. ಘಟನೆಗಳ ಗತಿಯನ್ನು ವಿವರಿಸುವಾಗ ಕಾರಣಗಳು, ಪರಿಸ್ಥಿತಿಗಳು ಮತ್ತು ಪರಿಣಾಮಗಳಿಗೆ ಹೆಚ್ಚು ಗಮನವನ್ನು ಇತ್ತಿದ್ದಾರೆ. ಲಿಯನಾರ್ಡೋ ಬ್ರುನಿ ಅವರು ಫ್ಲಾರಂಟೈನ್ ಹಿಸ್ಟರಿಯನ್ನು ೧೨ ಭಾಗಗಳಲ್ಲಿ ರಚಿಸಿದರು. ವಿಚಾರಣೆ ಮತ್ತು ವಿಶ್ಲೇಷಣದ ಮೂಲಕ ಕಾಲ್ಪನಿಕ ಕಥೆ ಮತ್ತು ಇತಿಹಾಸಗಳ ನಡುವಣ ವ್ಯತ್ಯಾಸವನ್ನು ಎತ್ತಿ ತೋರಿಸಿದರು. ಮಾನವ ಹಾಗೂ ಮಾನಸಿಕ ಅಂಶಗಳತ್ತ ಅಗತ್ಯವಾದ ಗಮನವನ್ನು ಹರಿಸಿದರು. ಈ ಕೃತಿಯು ೧೫ನೆಯ ಶತಮಾನದ ನಗರದ ಇತಿಹಾಸದ ಶ್ರೇಷ್ಠ ಉದಾಹರಣೆಯಾಗಿದೆ. ಕೊರಿಯೊ ಹಿಸ್ಟರಿ ಆಫ್ ಮಿಲಾನ್ ಎಂಬ ಕೃತಿಯನ್ನು ರಚಿಸಿದರು. ಪ್ರಸಿದ್ಧ ವಿದ್ವಾಂಸರಾದ ಅವರು ನಿಷ್ಕೃಷ್ಟತೆಗೆ ಹೆಸರಾಗಿದ್ದರು. ಅವರ ಇತಿಹಾಸ ಕಥನವು ಸಮಾಜ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಕುರಿತಾಗಿ ಸಮೃದ್ಧ ವಿಷಯಗಳನ್ನೊಳಗೊಂಡಿದೆ.

ಪುನರುಜ್ಜೀವನ ಯುಗದ ಇಟಲಿಯ ನಿಸ್ಸಂಶಯವಾದ ಪ್ರಸಿದ್ಧ ಇತಿಹಾಸದ ನಿಕೊಲೊ ಮೆಕೆವೆಲೆ (೧೪೯೬-೧೫೨೩) ಅವರನ್ನು ವರ್ಗೀಕರಿಸುವುದು ಸುಲಭವಲ್ಲ. ರಾಜತಂತ್ರಜ್ಞ, ಇತಿಹಾಸಕಾರ, ನಾಟಕಕಾರ, ದಾರ್ಶನಿಕ, ತಮ್ಮ ಕಾಲದ ತಿರಸ್ಕಾರ ಭಾವದ ಚಿಂತಕ ಮತ್ತು ಶ್ರೇಷ್ಠ ಭಾವನೆಗಳುಳ್ಳ ದೇಶ ಭಕ್ತರಾಗಿದ್ದರು. ತಮ್ಮ ಯುಗದ ಇತರ ವ್ಯಕ್ತಿಗಳಂತೆ ಅವರು ಇತಿಹಾಸದ ಮೇಲೆ ಆಳವಾಗಿ ಅಂಕಿಸಿದ್ದಾರೆ.

ಫ್ಲಾರಂಟೈನ್ ನ್ಯಾಯವಾದಿಯ ಮಗನಾದ ಅವರು ಲ್ಯಾಟಿನ್ ಕ್ಲಾಸಿಕ್ಸ್‌ಅಧ್ಯಯನ ಮಾಡಿ ಪೊಲಿಬಿಯಸ್ ಅವರ ಪ್ರಭಾವಕ್ಕೆ ಒಳಗಾದರು. ತಮ್ಮ ೨೫ನೆಯ ವಯಸ್ಸಿನಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ, ಸೈನಿಕ ತಾಂತ್ರಿಕತೆಗಳ ಜ್ಞಾನವನ್ನು ಸಂಪಾದಿಸಿಕೊಂಡರು. ಸೂಕ್ಷ್ಮಮತೀಯ ರಾಜನೀತಿಜ್ಞರಾದ ಅವರು ಎರಡನೆಯ ಚಾನ್ಸಲರ್‌ ಮತ್ತು ಕೌನ್ಸಿಲ್ ಆಫ್ ಟೆನ್‌ನ ಕಾರ್ಯದರ್ಶಿಯಾದರು. ಪಿತೂರಿಯೊಂದರಲ್ಲಿ ಪಾಲ್ಗೊಂಡಿದ್ದ ರೆಂಬ ಕಾರಣಕ್ಕಾಗಿ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು. ಬಂಧನದಿಂದ ಬಿಡುಗಡೆ ಹೊಂದಿದ ಮೇಲೆ ತಮ್ಮ ತೋಟದ ಮನೆಗೆ ಹಿಂದಿರುಗಿ ವ್ಯವಸಾಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಪ್ರಸಿದ್ಧ ಕೃತಿಗಳಲ್ಲಿ ದಿ ಪ್ರಿನ್ಸ್ ಡಿಸ್‌ಕೋರ್ಸಸ್ ಆನ್‌ ಲಿವಿ, ದಿ ಹಿಸ್ಟರಿ ಆಫ್ ಫ್ಲಾರೆನ್ಸ್ ಮತ್ತು ದಿ ಆರ್ಟ್ ಆಫ್ ವಾರ್, ಇವುಗಳನ್ನು ಹೆಸರಿಸಬಹುದಾಗಿದೆ. ಇಟಲಿಯ ರಾಜ್ಯಗಳ ರಾಜಕೀಯ ವ್ಯವಸ್ಥೆ ಅಧ್ಯಯನ ಮಾಡಿ, ದತ್ತಾಂಶಗಳನ್ನು ನಿಷ್ಕೃಷ್ಟತೆಯಿಂದ ವಿಶ್ಲೇಷಿಸಿ, ತಮ್ಮ ಅಮರ ಕೃತಿ ದಿ ಪ್ರಿನ್ಸ್‌ ರಚಿಸಿದರು. ರಾಜಕೀಯ ದರ್ಶನದ ಈ ಕೃತಿಯಲ್ಲಿ ಮೆಕೆವಲಿ ಅವರು ಕ್ರಿ.ಶ. ೧೫೦೦ರ ಇಟಲಿಯ ರಾಜಕೀಯಗಳು, ಸರ್ಕಾರ ಮತ್ತು ರಾಯಭಾರ ನಿರ್ವಹಣ ಕೌಶಲದ ಯಥಾರ್ಥವಾದ ಚಿತ್ರಣವನ್ನು ನೀಡಿದ್ದಾರೆ. ರಾಜಕುಮಾರರಿಗೆ ಈ ಕೃತಿಯು ಪ್ರಯೋಗ ಪುಸ್ತಕವಾಗಿದೆ. ರಾಜಕೀಯ ಕಾರ್ಯರೀತಿ, ರಾಯಭಾರ ನಿರ್ವಹಣ ಕೌಶಲದ ವಿಧಾನ, ರಾಜರ ಆಸ್ಥಾನಗಳಲ್ಲಿ ಒಳಸಂಚುಗಳು ಮತ್ತು ರಾಜ್ಯಗಳನ್ನು ಗೆಲ್ಲುವ, ಗೆದ್ದ ಪ್ರದೇಶವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಮತ್ತು ಕಳೆದುಕೊಳ್ಳುವ ವಿಧಾನಗಳ ಸ್ಪಷ್ಟವಾದ ವಿವರಣೆಗಳನ್ನು ಈ ಕೃತಿ ಒಳಗೊಂಡಿದೆ. ಇಂದಿನ ಆಡಳಿತಗಾರರ ಕಾರ್ಯ ರೀತಿಗೂ ಸಹ ಈ ಕೃತಿಯು ಒಂದು ಉಪಯುಕ್ತ ಮಾರ್ಗದರ್ಶಿಯಾಗಿದೆ. ಸರ್ಕಾರಕ್ಕೆ ಸಂಬಂಧಿಸಿದ ಪ್ರಬಂಧಗಳನ್ನು ಅವರ ಡಿಸ್‌ಕೋರ್ಸ್ಸ್ ಒಳಗೊಂಡಿದೆ. ಈ ಹಿಸ್ಟರಿ ಆಫ್ ಫ್ಲಾರೆನ್ಸ್‌ಅವರ ಪ್ರಮುಖ ಇತಿಹಾಸ ಕೃತಿ. ಇತಿಹಾಸ ಲೇಖನ ಪರಂಪರೆಯಲ್ಲಿ ಈ ಕೃತಿಯು ಒಂದು ನಿರ್ಣಯಕವಾದ ಕ್ರಾಂತಿಯಾಗಿದೆ. ಈ ಕೃತಿಯಲ್ಲಿ ಹಲವಾರು ದೋಷಗಳಿವೆಯಲ್ಲದೆ, ಹಿಂದಿನ ಇತಿಹಾಸಕಾರರ ಕೃತಿಚೌರ್ಯ ಮಾಡಲಾಗಿದೆ. ಸಂಘ ಸಂಸ್ಥೆಗಳ ಬೆಳವಣಿಗೆಗಿಂತ ಸ್ವಾರ್ಥಪರ ಜಗಳಗಳಲ್ಲಿ ಆಸಕ್ತಿಯುತರಾಗಿದ್ದಾರೆ. ಸಾಂಸ್ಕೃತಿಕ ಇತಿಹಾಸವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಆದರೆ ಇಟಾಲಿಯನ್ ಭಾಷೆಯಲ್ಲಿ ರಚಿತವಾದ ಪ್ರಥಮ ಪ್ರಧಾನ ಕೃತಿಯಾಗಿದ್ದು, ಕೃತಿಯ ಭಾಷೆಯು ಸ್ಪಷ್ಟವೂ ನೇರವೂ ಕಸುವುಳ್ಳದ್ದೂ ಆಗಿದೆ. ಫ್ಲಾರೆನ್ಸ್‌ನ ಉಗಮವನ್ನು ಕುರಿತಾದ ಮಿಥ್ಯೆಗಳನ್ನು, ಕಾರಣಗಳನ್ನು ಮತ್ತು ಪರಿಣಾಮಗಳನ್ನು ಚಿತ್ರಿಸಿದ್ದಾರೆ. ಫ್ಲಾರಂಟೈನ್ ರಾಜಕೀಯದ ಕ್ಷೋಭೆಗಳು ಮತ್ತು ಕುಟುಂಬಗಳು, ವರ್ಗಗಳು ಮತ್ತು ಇತರ ಆಸಕ್ತಿಗಳ ನಡುವಣ ಹೋರಾಟಗಳ ಸ್ಪಷ್ಟವಾದ ವಿಶ್ಲೇಷಣವಿದೆ. ಈ ಕಥನವನ್ನು ಎರಡು ಐಕ್ಯಗೊಳಿಸುವ ವಿಷಯಗಳಲ್ಲಿ ಕೊಂಡೊಯ್ಯಲಾಗಿದೆ. ಪೋಪ್ ಗುರುವಿನ ಅಧಿಕಾರದ ಐಹಿಕ ಸ್ವಾತಂತ್ರ‍್ಯವನ್ನು ರಕ್ಷಿಸುವ ಸಲುವಾಗಿ ಪೋಪ್ ಗುರುಗಳು ಇಟಲಿಯನ್ನು ವಿಭಾಗಿಸಿಟ್ಟಿದ್ದರು ಮತ್ತು ಇಟಲಿಯ ಪ್ರಸಿದ್ಧ ಪುರೋಭಿವೃದ್ಧಿಗಳು ಥಿಯೋಡಿರಿಕ್, ಕಾಸಿಮೊ ಮತ್ತು ಲೊರೆಂಜೊ ದೊರೆಗಳ ಕಾಲದಲ್ಲಿ ಆದವು. ಇವೇ ಆ ಎರಡು ಐಕ್ಯಗೊಳಿಸುವ ವಿಷಯಗಳು. ದಿ ಆರ್ಟ್‌ ಆಫ್ ವಾರ್‌ನಲ್ಲಿ ಯುದ್ದದ ತಾಂತ್ರಿಕತೆಗಳ ಬಗ್ಗೆ ವ್ಯಾಪಕವಾದ ವಿವರಣೆಯನ್ನು ಕೊಟ್ಟಿದ್ದಾರೆ.

ರಾಜಕೀಯಕ್ಕಿಂತ ಪಾರಮಾರ್ಥಿಕ ಅಧಿಕಾರವು ಶ್ರೇಷ್ಠವೆಂಬ ಮಧ್ಯಕಾಲೀನ ಭಾವನೆಯನ್ನು ಅವರು ವಿರೋಧಿಸಿದರು. ಮಾನವನ ಸ್ವಭಾವವು ಬದಲಾಗುವುದಿಲ್ಲವಾದುದರಿಂದ ಇತಿಹಾಸ ದರ್ಶನವು ಸಾಧ್ಯವೆಂದು ಹೇಳಿದರು. “ವಿವೇಕಯುತ ಜನರು ಸಮರ್ಥಿಸಿರುವಂತೆ ಯಾರು ಭವಿಷ್ಯವನ್ನು ಮುಂದಾಗಿ ಕಾಣಲು ಆಶಿಸುವರು ಪ್ರಾಚೀನ ಕಾಲದೊಡನೆ ಆಲೋಚಿಸಬೇಕು; ಏಕೆಂದರೆ ಮಾನವ ಘಟನೆಗಳು ಹಿಂದಿನ ಕಾಲದ ಘಟನೆಗಳನ್ನು ಹೋಲುತ್ತವೆ. ಈ ಸಂಗತಿ ಏಕೆ ಉದ್ಭವಿಸುತ್ತಿದೆಯೆಂದರೆ, ಅವುಗಳನ್ನು ಉತ್ಪತ್ತಿ ಮಾಡಿದ ಜನರು ಮತ್ತು ಮುಂದಿನವರು ಒಂದೇ ಭಾವೋದ್ರೇಕಗಳಿಂದ ಉತ್ಸಾಹಗೊಂಡಿರುವುದರಿಂದ ಅವರು ಅವಶ್ಯಕವಾಗಿ ಒಂದೇ ಪರಿಣಾಮಗಳನ್ನು ಪಡೆಯುತ್ತಾರೆ.” ಮುಂದುವರಿದು ಅವರು ಹೀಗೆ ತಿಳಿಸಿದ್ದಾರೆ:

ಜಗತ್ತು ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತದೆಂದೂ, ಯಾವಾಗಲೂ ಒಳ್ಳೆಯದು ಮತ್ತು ಕೆಟ್ಟದನ್ನು ಹೊಂದಿದ್ದಿತೆಂದೂ, ಕಾಲಕ್ಕನುಗುಣವಾಗಿ ಎಲ್ಲ ರಾಷ್ಟ್ರಗಳೊಡನೆ ವಿಭಿನ್ನ ರೀತಿಯಲ್ಲಿ ವಿತರಿಸಲ್ಪಟ್ಟಿದ್ದಿತೆಂದು ನಾನು ನಂಬುತ್ತೇನೆ.

ಮೆಕೆವೆಲಿ ಅವರ ಪ್ರಕಾರ, ನಾಗರಿಕತೆಗಳು ಮತ್ತು ರಾಜ್ಯಗಳ ಬೆಳವಣಿಗೆ ಮತ್ತು ಅಳಿವು ಇವುಗಳ ಪ್ರಕೃತಿ ಘಟನೆ ನಾವು ಇತಿಹಾಸದಲ್ಲಿ ಕಾಣುವ ನಿಯಮಗಳಾಗಿವೆ. “ನಮ್ಮ ಕ್ರಿಯೆಗಳಲ್ಲಿ ಒಂದು ಅರ್ಥದ ನ್ಯಾಯ ವಿಮರ್ಶಕ, ಇತರ ಅರ್ಥವನ್ನು ನಿರ್ದೇಶಿಸಲು ನಮಗೆ ಆಕೆ ಬಿಟ್ಟಿದ್ದಾಳೆ” ಎಂದು ಅವರು ವಿಶ್ಲೇಷಿಸುತ್ತಾರೆ. ಮಾನವರು ಹೆಚ್ಚು ಪರಾಕ್ರಮ ಶಾಲಿಯಾದಂತೆ ಆತನು ಅದೃಷ್ಟದ ಅಧೀನದಿಂದ ದೂರವಾಗುತ್ತಾನೆ ಎಂದು ಅವರು ಹೇಳಿದ್ದಾರೆ.

ಫ್ರಾನ್ಸಿಸ್ಕೊ ಗೈಸಿಯಾರ್ಡಿನಿ ಪುನರುಜ್ಜೀವನ ಯುಗದ ಇತಿಹಾಸಕಾರರಲ್ಲಿ ಅತಿ ಪ್ರಸಿದ್ಧರಾಗಿದ್ದಾರೆ. ಇತಿಹಾಸದ ವಿಶ್ಲೇಷಣದಲ್ಲಿ ಅವರು ಮೆಕೆವಲಿಗಿಂತ ಹೆಚ್ಚು ವೈಜ್ಞಾನಿಕವಾಗಿದ್ದರು. ತಮ್ಮ ಯುಗದ ತೀಕ್ಷ್ಣಮತಿಯುಳ್ಳವರಿಂದ ಅವರು ಹೆಚ್ಚು ತಿರಸ್ಕಾರ ಭಾವವುಳ್ಳವರು, ಹೆಚ್ಚು ದುಃಖ ಪ್ರಪಂಚವಾದಿಯೂ ಆದ ಅವರು ಸೂಕ್ಷ್ಮಗ್ರಾಹಿಯಾಗಿದ್ದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅವರು ಹಲವಾರು ರಾಜ್ಯತಂತ್ರಜ್ಞ ಹುದ್ದೆಗಳನ್ನು ಅಲಂಕರಿಸಿದ್ದರು. ಪೌರನ್ಯಾಯ ಶಾಸ್ತ್ರವನ್ನು ಅಧ್ಯಯನ ಮಾಡಿದ ಅವರು ವ್ಯಾಪಕವಾಗಿ ಸಂಚರಿಸಿದ್ದರು. ಅವರ ಫ್ಲಾರಂಟೈನ್ ಹಿಸ್ಟರಿ ಫ್ರಂ ೧೩೭೮-೧೦೫೯ ರಲ್ಲಿ ಪುನರುಜ್ಜೀವನ ಇತಿಹಾಸವು ತನ್ನ ಉಜ್ಜಲವಾದ ಪರಕಾಷ್ಠೆಯನ್ನು ಕಂಡಿತು. ತಾವು ಆಯ್ಕೆ ಮಾಡಿಕೊಂಡ ಯುಗದ ನಿಖರವಾದ ವಿವರಣೆಯನ್ನು ನೀಡುವುದರ ಜೊತೆಗೆ ಮೂಲಾಧಾರಗಳನ್ನು ವಿಮರ್ಶಕವಾಗಿ ಪರೀಕ್ಷಿಸಿದ್ದಾರೆ. ಈ ಕೃತಿಯು ಕಾರಣಗಳ ತೀಕ್ಷ್ಣಮತಿಯ ವಿಶ್ಲೇಷಣೆ, ಪಕ್ವವಾದ ಮತ್ತು ನಿಷ್ಪಕ್ಷಪಾತವಾದ ನಿರ್ಣಯಕ್ಕೆ ಹೆಸರಾಗಿದೆ. ಈ ಕಥನವು ಅಪ್ಪಟವಾದ ಇಟಾಲಿಯನ್ ಭಾಷೆಯಲ್ಲಿದೆ.

ಅವರ ಈ ಕೃತಿಯು ತಾವು ನೆರವಾಗಿ ತಿಳಿದ ವಿಷಯಗಳು ಹಾಗೂ ತಾವು ಪಾಲ್ಗೊಂಡಿದ್ದ ಘಟನೆಗಳ ಮೇಲೆ ಆಧಾರಿತವಾಗಿದೆ. ನಿಖರವಾದ ದಾಖಲೆಗಳು ಮತ್ತು ಭಾಷಣಗಳು ಅವರ ಇತರ ಆಧಾರಗಳು. ಈ ಕೃತಿಯು ಅವರನ್ನು ೧೬ನೆಯ ಶತಮಾನದ ಪ್ರಸಿದ್ಧ ಇತಿಹಾಸಕಾರರನ್ನಾಗಿ ಮಾಡಿದೆ. ಅವರೇ ಹೇಳಿರುವಂತೆ ನಾನು ಒಂದು ಗಂಟೆಯಲ್ಲಿ ನೂರು ಒಡೆಯರನ್ನು ಸೃಷ್ಟಿಸಬಲ್ಲೆ, ಆದರೆ ೨೦ ವರ್ಷಗಳಲ್ಲಿ ಅಂತಹ ಇತಿಹಾಸಕಾರರನ್ನು ಸೃಷ್ಟಿಸುವುದು ಸಾಧ್ಯವಾಗುವುದಿಲ್ಲ. ಈ ಹೇಳಿಕೆಯು ಅವರು ಇತಿಹಾಸಕಾರರಲ್ಲಿ ಏನನ್ನು ನಿರೀಕ್ಷಿಸಿದ್ದರೆಂಬುದು ವ್ಯಕ್ತವಾಗುತ್ತದೆ.

ಫ್ಲೆವಿಯೆ ಬಿಯಾನ್ಡೊ ರೋಮನ್ ಪುರಾತತ್ವ ಶೋಧನೆಯ ಜೊತೆಗೆ ಯೂರೋಪ್‌ ಸಿನ್ಸ್ ದಿ ಡಿಕ್ಲೈನ್‌ ಆಫ್ ದಿ ಪವರ್ ಆಫ್ ದಿ ರೋಮನ್ಸ್ ಎಂಬ ಕೃತಿಯನ್ನೂ, ಎರಡನೆಯ ಪಯಸ್ ದಿ ಹಿಸ್ಟರಿ ಆಫ್ ಯೂರೋಪ್ ಮತ್ತು ದಿ ಹಿಸ್ಟರಿ ಆಫ್ ಬೊಹಿಮಿಯ ಮೊದಲಾದ ಗ್ರಂಥಗಳನ್ನು ರಚಿಸಿದರು. ಈ ಇತಿಹಾಸ ಕೃತಿಗಳು ಪುನರಜ್ಜೀವನ ಯುಗದಲ್ಲಿನ ಇತಿಹಾಸ ಬರವಣಿಗೆಯ ಮಟ್ಟವನ್ನು ಪ್ರತಿನಿಧಿಸುತ್ತವೆ. ಸುಮಾರು ಎರಡು ಶತಮಾನಗಳವರೆಗೆ ಈ ಇತಿಹಾಸಗಳಿಗೆ ಸರಿಸಮನಾದ ಇತಿಹಾಸ ಕೃತಿಗಳು ರಚಿತವಾಗಲಿಲ್ಲವೆಂಬುದನ್ನು ಇಲ್ಲಿ ಸ್ಮರಿಸಬಹುದು.

ತಾತ್ವಿಕವಾಗಿ ಮತ್ತು ಸಾಂಪ್ರದಾಯಿಕವಾಗಿ, ಪುನರುಜ್ಜೀವನ ಯುಗವು ಇತಿಹಾಸ ಲೇಖನ ಪರಂಪರೆಯಲ್ಲಿ ಹೊಸ ನೆಲೆಯನ್ನು ಮುಟ್ಟಿತು. ಇತಿಹಾಸವು ಬೋಧಪರ ಮಹತ್ವವನ್ನು ಪಡೆದಿದೆ ಎಂಬುದನ್ನು ಹೊರಗೆಡಹಿತಲ್ಲದೆ, ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳ ಕೂಲಂಕುಷವಾದ ಚರ್ಚೆಗೆ ಅವಕಾಶ ಕಲ್ಪಿಸಿತು. ರೋಮ್ ದೇಶದ ಪುರಾತತ್ವ ಸ್ಮಾರಕಗಳು ಇದಕ್ಕೆ ಆಧಾರವಾಗಿ ಪರಿಣಮಿಸಿತು. ಇತಿಹಾಸಕ್ಕೆ ಸಂಬಂಧಿಸಿದ ಆಧಾರಗಳ ಪ್ರಕಟಣೆ, ಹಾಗೂ ಆ ಆಧಾರಗಳನ್ನು ವಿಮರ್ಶಾ ವಿಧಾನಕ್ಕೆ ಒಳಪಡಿಸಿ ಇತಿಹಾಸ ರಚನೆಯ ಕಾರ್ಯ ಈ ಯುಗದಲ್ಲಿ ಆರಂಭವಾಯಿತು. ಸಂಶೋಧನೆಯ ಹೊಸ ವಿಧಾನಗಳು ಬೆಳಕಿಗೆ ಬಂದುದು ಈ ಯುಗದಲ್ಲಿಯೇ. ದಾಖಲೆಗಳ ಕಾದ ನಿರ್ಣಯವು ಒಂದು ಕಾಲದಿಂದ ಮತ್ತೊಂದು ಕಾಲದಲ್ಲಿ ಕಂಡುಬರುವ ವಿಭಿನ್ನತೆಗಳ ಅರಿವನ್ನುಂಟು ಮಾಡಿತು. ೧೩೪೧ರ ವೇಳೆಗಾಗಲೇ ಪ್ರಾಚೀನ ಮತ್ತು ಆಧುನಿಕ ಇತಿಹಾಸಗಳ ಬಗ್ಗೆ ಸ್ಪಷ್ಟ ಮೇರೆಯನ್ನು ಪೆಟ್ರಾರ‍್ಕ್‌ಗುರುತಿಸಿದ್ದರು. ಗತಕಾಲದ ಯಥಾದೃಷ್ಟ ರೂಪಣ ಅವರಲ್ಲಿ ಮೊದಲು ಕಂಡುಬರುತ್ತದೆ. ಪ್ರಾಚೀನ ರೋಮನ್ ಮತ್ತು ಗ್ರೀಕ್ ಸಾಹಿತ್ಯಗಳನ್ನು ಮತ್ತು ವಿಷಯಳನ್ನು ವಿಚಾರಣೆ ಮಾಡುತ್ತಿದ್ದ ವಿದ್ವಾಂಸರು ಮಧ್ಯಕಾಲೀನ ಯುಗವನ್ನು ಸೇರಿದರು. ಇದರ ಪರಿಣಾಮವಾಗಿ ಹದಿನೇಳನೆಯ ಶತಮಾನದ ಅಂತ್ಯದ ವೇಳೆಗೆ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂಬ ಮೂರು ಯುಗಗಳಾಗಿ ವಿಭಜಿಸುವುದು ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸರ್ವೇ ಸಾಮಾನ್ಯವಾಯಿತು. ಈ ವಿಭಜನೆಯು ಅಪಕ್ವವಾಗಿದ್ದರೂ ಸಹ ಪಶ್ಚಿಮ ಯೂರೋಪಿನಲ್ಲಿ ಇತಿಹಾಸದ ಅರಿವನ್ನು ಬೆಳಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿತ್ತು.

ಪುನರುಜ್ಜೀವನದ ವಿದ್ವತ್ತು ಸೃಜಿಸಿದ ಇತಿಹಾಸದ ಅರಿವು ರೋಮನ್‌ನ್ಯಾಯಶಾಸ್ತ್ರದ ಅಧ್ಯಯನದಲ್ಲಿ ತನ್ನ ಪೂರ್ಣ ಅಭಿವೃದ್ಧಿಯನ್ನು ಕಂಡಿತು. ಪುನರ‍್ರಚಿತ ಸಮಾಜದ ಸನ್ನಿವೇಶದಲ್ಲಿ ನ್ಯಾಯಶಾಸ್ತ್ರವನ್ನು ಅರ್ಥನಿರೂಪಣೆ ಮಾಡುವುದಕ್ಕೆ ಬೆಂಬಲ ದೊರೆಯಿತು. ಇದರ ಪರಿಣಾಮವಾಗಿ ನ್ಯಾಯಶಾಸ್ತ್ರ ಮತ್ತು ಇತಿಹಾಸ ನಡುವೆ ಫಲಕಾರಿಯಾದ ಸಂಬಂಧ ಬೆಳೆಯಿತು. ಈ ಸಂಬಂದ ವಿಶೇಷವಾಗಿ, ಹದಿನಾರನೆಯ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ವ್ಯಕ್ತವಾಯಿತು.

ಹೀಗೆ ಪುನರುಜ್ಜೀವನ ಯುಗವು ಪ್ರಮುಖ ಕ್ಷೇತ್ರಗಳಲ್ಲಿ ಅಸಮಾನ್ಯ ಸಾಧನೆಗೆ ಹೆಸರಾಗಿದೆ. ಈ ಕ್ಷೇತ್ರಗಳಲ್ಲಿ ಹೆಸರಿಸಬಹುದಾದುದೆಂದರೆ

೧. ಕಥಾರೂಪದ ಇತಿಹಾಸ ರಚನೆ.

೨. ವಿದ್ವತ್ತಿನ ಪ್ರಯೋಗದ ವಿಧಾನದ ಬೆಳವಣಿಗೆ.

೩. ಇತಿಹಾಸ ರಚನೆಯ ಬಗ್ಗೆ ಹೊಸ ಅರಿವು.

ಈ ಪ್ರವೃತ್ತಿಗಳು ಮಧ್ಯಕಾಲೀನ ಯುಗದಲ್ಲಿ ಕಂಡು ಬರುವುದಿಲ್ಲ. ಇವೆಲ್ಲದರ ಪರಿಣಾಮವಾಗಿ, ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ ಒಂದು ಭವ್ಯವಾದ ಇತಿಹಾಸದ ಸಂಪ್ರದಾಯವನ್ನು ಯೂರೋಪ್ ಹೊಂದಿತ್ತು. ಪ್ರಮುಖ ರಾಜಕೀಯ ಮತ್ತು ಧಾರ್ಮಿಕ ಘಟನೆಗಳ ವಿವರಗಳನ್ನು ಒಳಗೊಂಡ ಕಥನಗಳು ಸಿದ್ಧವಾಗಿದ್ದವು. ಆಧಾರಗಳನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಲಾಗಿತ್ತು. ಆಧಾರಗಳಿಂದ ಇತಿಹಾಸದ ಸಂಗತಿಗಳನ್ನು ಪಡೆಯುವ ವಿಧಾನಗಳು ರೂಪಿಸಲ್ಪಟ್ಟಿದ್ದವು. ಯುಗ ಯುಗಗಳ ನಡುವಣ ಅಂತರ ಮತ್ತು ವ್ಯತ್ಯಾಸಗಳ ಬಗೆಗೆ ಅರಿವು ಮೂಡಿತ್ತು. ಆದರೆ ಇತಿಹಾಸದ ವಿವೇಚನೆಗಾಗಿ ಈ ಘಟಕಾಂಶಗಳನ್ನು ಪರಿಣಾಮಕಾರಿಯಾದ ಸಾಧನವಾಗಿ ಸಂಯೋಜಿಸುವ ಯಾವ ಯತ್ನವೂ ಕಂಡು ಬರುವುದಿಲ್ಲ.

ಕಾರ್ಟೀಸಿಯನ್ ಸಿದ್ಧಾಂತ

ಕ್ರಿ.ಶ. ಹದಿನೇಳನೆಯ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿದ ಇತಿಹಾಸ ಚಿಂತನೆಯ ಹೊಸ ಪರಂಪರೆಯನ್ನು ಕಾಲಿಂಗ್ ವುಡ್ ಅವರು ಕಾರ್ಟೀಸಿಯನ್ ಇತಿಹಾಸ ಲೇಖನ ಸಂಪ್ರದಾಯವೆಂದು ಕರೆದಿದ್ದಾರೆ. ಈ ಸಿದ್ಧಾಂತವು, ಕಾರ್ಟೀಸಿಯನ್ ದರ್ಶನದಂತೆ, ವ್ಯವಸ್ಥಿತ ಸಂದೇಹವಾದ ಮತ್ತು ವಿಮರ್ಶಾತ್ಮಕ ತತ್ವಗಳನ್ನು ಕೂಲಂಕುಶವಾಗಿ ಅಂಗೀಕರಿಸುವುದರ ಮೇಲೆ ಆಧಾರವಾಗಿತ್ತು. ಪ್ರಸಿದ್ಧ ಫ್ರೆಂಚ್‌ ಚಿಂತನಕಾರ ರೇನ್‌ ಡೇಕಾರ್ಟ್ ರೂಪಿಸಿದ ತತ್ವಗಳು ಕಾರ್ಟೀಸಿಯನ್ ಸಿದ್ಧಾಂತದ ಮೂಲ ವಸ್ತುವಾಯಿತು.

ಯೋಧ, ಗಣಿತಜ್ಞ ಮತ್ತು ಭೌತ ವಿಜ್ಞಾನಿಯಾದ ಡೆಕಾರ್ಟ್‌ ನ್ಯಾಯವಾದಿಯಾದರು. ಕಾವ್ಯ, ಇತಿಹಾಸ, ದರ್ಶನ ಮತ್ತು ದೇವತಾಶಾಸ್ತ್ರಗಳನ್ನು ವಿಶ್ಲೇಷಿಸಿದರು. ಆದರೆ ತಮ್ಮ ಈ ನೂತನ ವಿಧಾನವನ್ನು ದರ್ಶನದಲ್ಲಿ ಮಾತ್ರ ಪ್ರಯೋಗಿಸಿದರು. ದೃಢವೂ ಹಾಗೂ ಖಚಿತವಾದ ತಿಳುವನ್ನು ಗಣಿತಶಾಸ್ತ್ರ, ಭೌತಶಾಸ್ತ್ರ ಮತ್ತು ಆಧ್ಯಾತ್ಮಶಾಸ್ತ್ರಗಳಲ್ಲಿ ಪಡೆಯಬಹುದೆಂಬುದು ಅವರ ನಿಲುವು. ಅವರು ಎಲ್ಲ ವಿಧದ ಪ್ರಮಾಣ ಗ್ರಂಥಗಳನ್ನು ಅಲ್ಲಗಳೆದರಲ್ಲದೆ, ಪುಸ್ತಕಗಳ ಉಪಯುಕ್ತತೆಯ ವಿಚಾರದಲ್ಲಿ ನಂಬಿಕೆ ಇರಲಿಲ್ಲ. ವಿವೇಚನಾ ಶಕ್ತಿಯೇ ಜ್ಞಾನಕ್ಕೆ ನಿಜವಾದ ಮಾರ್ಗವೆಂದು ಅವರು ವಾದಿಸಿದರು.

ಇತಿಹಾಸದ ಬಗ್ಗೆ ಅವರಿಗೆ ತಾತ್ಸರ ಭಾವನೆಯಿತ್ತು.ಇತಿಹಾಸವು ಎಷ್ಟೇ ಆಸಕ್ತಿಯುತವೂ, ಬೋಧನಾಪ್ರದವೂ ಆಗಿದ್ದರೂ, ಜೀವನದ ಕಾರ್ಯಶೀಲ ಭಾವಗಳನ್ನು ರೂಪಿಸಲು ಅದು ಎಷ್ಟೇ ಅಮೂಲ್ಯವಾಗಿದ್ದರೂ, ಪ್ರಾಮಾಣಿಕತೆಯು ತನಗೆ ಸೇರಿದುದೆಂದು ವಾದಿಸಲಾರದು. ಏಕೆಂದರೆ ಅದು ವಿವರಿಸುವ ಘಟನೆಗಳು. ಅದು ವಿವರಿಸುವ ರೀತಿಯಲ್ಲಿ ನಿಖರವಾಗಿ ಯಾವಾಗಲೂ ನಡೆದಿರುವುದಿಲ್ಲ. ಆದ್ದರಿಂಡ ಡೆಕಾರ್ಟ್‌ ಅವರು ಆಲೋಚಿಸಿದ ಹಾಗೂ ಕಾರ್ಯರೂಪಕ್ಕೆ ತಂದ ಜ್ಞಾನದ ಸುಧಾರಣೆಯು ಇತಿಹಾಸದ ಚಿಂತನಕ್ಕೆ ಸಹಾಯಕನಾಗುವ ಆಶಯವನ್ನು ಹೊಂದಿರಲಿಲ್ಲ. ಏಕೆಂದರೆ ಇತಿಹಾಸವು ಜ್ಞಾನದ ಒಂದು ಅಂಗವೆಂಬ ವಿಶ್ವಾಸ ಅವರಿಗಿರಲಿಲ್ಲ. ತಮ್ಮ ಈ ನಿಲುವಿಗೆ ಅವರು ಈ ಕೆಳಗಿನ ನಾಲ್ಕು ಕಾರಣಗಳನ್ನು ಕೊಡುತ್ತಾರೆ.

ಅ. ಐತಿಹಾಸಿಕ ಪಾರಾಗುವಿಕೆ

ಆ. ಐತಿಹಾಸಿಕ ಸಂಶಯಾತ್ಮಕತೆ

ಇ. ಐತಿಹಾಸಿಕ ಉಪಯುಕ್ತತೆಯ ವಿರೋಧವಾದದ ಭಾವನೆ

ಈ ಬಗೆಯ ಇತಿಹಾಸವು ಭ್ರಮೆ ಹುಟ್ಟಿಸುವಂತಿರುವುದು. ಅವರ ಈ ಕಾರಣಗಳನ್ನು ಕೂಲಂಕುಷವಾಗಿ ವಿಶ್ಲೇಷಿಸುವುದು ಅಗತ್ಯ. ಇವುಗಳನ್ನು ಹೀಗೆ ವಿವರಿಸಬಹುದಾಗಿದೆ:

ಅ. ಐತಿಹಾಸಿಕ ಪಾರಾಗುವಿಕೆ

ಐತಿಹಾಸಿಕ ಪಾರಾಗುವಿಕೆ ಎಂಬ ವಿಷಯವನ್ನು ಕುರಿತು ಡೇಕಾರ್ಟ್‌ ತಿಳಿಸುವುದೇನೆಂದರೆ, ಇತಿಹಾಸಕಾರನು ಒಬ್ಬ ಪ್ರವಾಸಿಗನಂತಿದ್ದು, ತನ್ನ ನಾಡಿನ ಬಹು ದೂರ ಪ್ರಯಾಣಿಸಿ ತನ್ನ ಯುಗಕ್ಕೆ ಒಬ್ಬ ಅಪರಿಚಿತ ವ್ಯಕ್ತಿಯಾಗುತ್ತಾನೆ. ಅವರ ಈ ನಿಲುವನ್ನು ನಾವು ಒಪ್ಪಲಾಗುವುದಿಲ್ಲ. ಕಾರಣ, ಕಾಲಿಂಗ್‌ವುಡ್ ಅವರು ತಿಳಿಸಿರುವಂತೆ, ವರ್ತಮಾನದಲ್ಲಿ ದೃಢವಾಗಿ ನಿಂತಲ್ಲಿ ಮಾತ್ರ ಇತಿಹಾಸಕಾರನಿಗೆ ಗತಿಸಿದುದನ್ನು ಯಥಾರ್ಥವಾಗಿ ನೋಡಲು ಸಾಧ್ಯವಾಗುತ್ತದೆ. ಇತಿಹಾಸಕಾರನು ಎಲ್ಲ ರೀತಿಯಲ್ಲಿಯೂ, ಭೂತಕಾಲದಲ್ಲಿರುವ ಆತನು ತನ್ನ ಯುಗದ ದೃಷ್ಟಿಕೋನದಲ್ಲಿ ಕಾಣುವಂತೆ ಗತಕಾಲವನ್ನು ವೀಕ್ಷಿಸಬೇಕು. ಹಾಗೆ ನೋಡಿದರೆ ಮಾತ್ರ ಗತಕಾಲದ ಘಟನೆಗಳ ಪೂರ್ಣ ಅರಿವು, ಅವುಗಳ ಅರ್ಥ ಅಥವಾ ಪ್ರಾಮುಖ್ಯತೆ ನಮಗೆ ತಿಳಿದುಬರುತ್ತದೆ. ಐತಿಹಾಸಿಕ ಪರಿಜ್ಞಾನವನ್ನು ತನ್ನ ಯುಗದ ದೃಷ್ಟಿಕೋನದಿಂದ ಪಡೆಯಬಹುದೇ ವಿನಃ ತನ್ನ ಯುಗದಿಂದ ದೂರವಾಗುವುದರಿಂದಲ್ಲ.

ಆ. ಐತಿಹಾಸಿಕ ಸಂಶಾಯಾತ್ಮಕತೆ

ಐತಿಹಾಸಿಕ ಸಂಶಯಾತ್ಮಕತೆ ಎಂದರೆ, ಇತಿಹಾಸದ ಕಥನಗಳು ಗತಕಾಲದ ಘಟನೆಗಳ ವಿಶ್ವಾಸನೀಯ ವಿವರಣೆಗಳಲ್ಲ. ಐತಿಹಾಸಿಕ ಕಥನಗಳು ಸಂಶಯಾತ್ಮಕವೆಂದು ಹೇಳುವುದಾದರೆ, ಅದರ ಗುಣ ವಿಮರ್ಶೆಗೆ ನಾವು ಪ್ರಮಾಣವನ್ನು ಇಟ್ಟುಕೊಂಡಿರುವಂತೆ ಭಾಸವಾಗುತ್ತದೆ. ಆ ಪ್ರಮಾಣಗಳು ಯಾವುವೆಂದು ಡೆಕಾರ್ಟ್‌ಅವರು ತಿಳಿಸಿಲ್ಲ. ಇತಿಹಾಸಕಾರನಿಗೆ ಆ ಪ್ರಮಾಣಗಳು ಲಭ್ಯವಾದಲ್ಲಿ ಅವರ ಪ್ರಶ್ನೆಗೆ ಉತ್ತರವು ಸಿಕ್ಕುತ್ತದೆ.

ಇ. ಇತಿಹಾಸದ ಉಪಯುಕ್ತತೆಯ ವಿರೋಧಿ ಭಾವನೆ

ಈ ಇತಿಹಾಸದ ಉಪಯುಕ್ತತೆಯ ವಿರೋಧಿ ಭಾವನೆಯಿಂದ ಡೇಕಾರ್ಟ್‌ ಅವರು ಇತಿಹಾಸಕ್ಕೆ ಅಪಚಾರವೆಸಗಿದ್ದಾರೆ. ಪುನರುಜ್ಜೀವನ ಯುಗದ ವಿದ್ವಾಂಸರು ರಾಜಕೀಯ ಹಾಗೂ ಕಾರ್ಯಶೀಲ ಜೀವನದಲ್ಲಿ ಇತಿಹಾಸದ ಉಪಯುಕ್ತತೆಯನ್ನು ಎತ್ತಿ ಹಿಡಿದಿದ್ದಾರೆ. ಇತಿಹಾಸದ ಉಪಯುಕ್ತತೆಯ ಬಗ್ಗೆ ಈಗಾಗಲೇ ಚರ್ಚಿಸಿರುವುದರಿಂದ ಇಲ್ಲಿ ಹೆಚ್ಚೇನನ್ನೂ ಹೇಳಬೇಕಾದುದು ಅನಾವಶ್ಯಕ.

ಈ. ಇತಿಹಾಸವು ಭ್ರಮೆ ಹುಟ್ಟಿಸುತ್ತದೆ

ಇತಿಹಾಸವು ಭ್ರಮೆ ಹುಟ್ಟಿಸುತ್ತದೆ. ಏಕೆಂದರೆ ಇತಿಹಾಸಕಾರರು ಗತಕಾಲದ ವೈಭವವನ್ನು ಅತಿಶಯೋಕ್ತಿಯಿಂದ ವರ್ಣಿಸುತ್ತಾನೆಂದು ಡೆಕಾರ್ಟ್ ಆಪಾದಿಸಿದ್ದಾರೆ. ಯಾವುದೋ ಒಂದು ಪ್ರಮಾಣದ ಆಧಾರದ ಮೇಲೆ ಈ ಅಭಿಪ್ರಾಯಕ್ಕೆ ಬಂದಿರಬೇಕೆಂಬುದು ಸ್ಪಷ್ಟವಾಗಿಲ್ಲ. ಇತಿಹಾಸದ ವಿಮರ್ಶನಾ ವಿಧಾನವನ್ನು ಕುರಿತು ಒಂದು ಸಂಹಿತೆಯನ್ನು ಅವರು ರಚಿಸಿದ್ದಲ್ಲಿ ಇತಿಹಾಸಕಾರರಿಗೆ ಹೆಚ್ಚು ನೆರವಾಗುತ್ತಿತ್ತು. ಆದರೆ ಆ ಕೆಲಸವನ್ನು ಮಾಡದೆ ಇತಿಹಾಸದ ಮೇಲೆ ನೇರವಾದ ಅಪವಾದವನ್ನು ಹೊರಿಸುವ ಕೆಲಸವನ್ನು ಮಾತ್ರ ಮಾಡಿದ್ದಾರೆ. ಅವರ ಬೌದ್ಧಿಕ ಆಸಕ್ತಿಯು ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಮೇಲೆ ಕೇಂದ್ರೀಕೃತವಾಗಿದ್ದುದರಿಂದಲೂ ಇತಿಹಾಸವನ್ನು ಅಭಿವೃದ್ಧಿ ಪಡಿಸುವುದು ಅಸಾಧ್ಯವೆಂಬ ನಿಲುವನ್ನು ಅವರು ತಳೆದಿದ್ದರಿಂದ ಇತಿಹಾಸ ವಿಮರ್ಶಾ ವಿಧಾನವನ್ನು ಕುರಿತು ಸಂಹಿತೆ ರಚಿಸುವ ಗೋಜಿಗೆ ಹೋಗಲಿಲ್ಲ. ಅವರ ಟೀಕೆಗಳನ್ನು ಪ್ರಶ್ನಿಸಬಹುದಾದರೂ, ಆ ಟೀಕೆಗಳು ಇತಿಹಾಸಕಾರನನ್ನು ಎಚ್ಚರಿಸಿದು ವಲ್ಲದೆ ಆತನು ತನ್ನ ರಚನೆಯಲ್ಲಿ ನಿಷ್ಕೃಷ್ಟತೆಯತ್ತ ಹೆಚ್ಚು ಗಮನ ಹರಿಸುವಂತೆ ಮಾಡಿದವೆಂಬುದರಲ್ಲಿ ಸಂದೇಹವಿಲ್ಲ.

ಆಂಟಿ – ಕಾರ್ಟೀಸಿಯನ್ ಚರಿತ್ರೆ ಬರವಣಿಗೆಗಳು

ಡೆಕಾರ್ಟ್‌ ಅವರ ಸಂದೇಹವಾದವು ಇತಿಹಾಸಕಾರರನ್ನು ಎದೆಗುಂದಿಸಲಿಲ್ಲ. ಗತಕಾಲದ ಘಟನೆಗಳನ್ನು ಕುರಿತಂತೆ ತಮ್ಮ ವಿವರಣೆಗಳಿಗೆ ಯಥಾರ್ಥತೆಯನ್ನು ಪಡೆಯಲು ತಮ್ಮದೆ ಆದ ಇತಿಹಾಸ ವಿಮರ್ಶನಾ ವಿಧಾನಗಳನ್ನು ರೂಪಿಸಲು ಪ್ರಾರಂಭಿಸಿದರು. ಇಂತಹ ಇತಿಹಾಸಕಾರರಲ್ಲಿ ಫ್ರಾರ್ನ್ಸ್‌‌ನ ಪೈರೆ ಬೇಲ್ (Pierre Bayle) ಮೊದಲಿಗರು. ಅವರು ಸಂದೇಹವಾದದ ಅವತಾರವೇ ಆಗಿದ್ದರು. ಅವರಿಗೆ ಯಾವುದೂ ಪರಿಶುದ್ಧವೆಂದು ತೋರಲಿಲ್ಲ. ಬೈಬಲ್‌ಕುರಿತಂತೆ ಕ್ಯಾತೋಲಿಕರ ವ್ಯಾಖ್ಯಾನವನ್ನು ಅವರು ವಿರೋಧಿಸಿದರು. ಅವರ ನಂತರ ಟಿಲ್ಲಿಮಾಂಟ್‌ ವಿಭಿನ್ನ ಆಧಾರಗಳಲ್ಲಿನ ಹೇಳಿಕೆಗಳನ್ನು ಸರಿಹೊಂದಿಸಿ ರೋಮನ್ ಚಕ್ರವರ್ತಿಗಳ ಇತಿಹಾಸವನ್ನು ರಚಿಸಲು ಪ್ರಯತ್ನಿಸಿದರು. ನಂತರ ಜೀವನ ಚರಿತ್ರೆಯನ್ನು ಪುನರ‍್ರಚಿಸಲು ಬೊಲಾಂಡಿಸ್ಟರು ಆಧಾರಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದರಲ್ಲದೆ ಸಾಹಿತ್ಯಿಕ ಆಧಾರಗಳನ್ನು ಶಾಸನಗಳ ಆಧಾರಗಳೊಂದಿಗೆ ತುಲನೆ ಮಾಡಿದರು. ಸಂಪ್ರದಾಯವು ಒಂದು ಉಪಯುಕ್ತ ಆಧಾರವೆಂದು ವ್ಯಕ್ತವಾಯಿತು.

ಕಾರ್ಟೀಸಿಯನ್ ತತ್ವಗಳನ್ನು ಪ್ರಯೋಗಿಸಿದವರಲ್ಲಿ ಹೆಚ್ಚು ಪ್ರಖ್ಯಾತರಾದವರೆಂದರೆ ಮಾಂಟೆಸ್ಕೂ. ಅವರ ಗ್ರಂಥಗಳಲ್ಲಿ ದಿ ಪರ್ಷಿಯನ್ ಲೆಟೆರ್ಸ್, ದಿ ಕನ್ಸಿಡರೇಶನ್‌ ಆಂಡ್ ದಿ ಸ್ಪಿರಟ್‌ ಆಫ್ ಲಾಸ್ ಹೆಚ್ಚು ಪ್ರಸಿದ್ಧವಾಗಿವೆ. ರೋಮನ್ ಚಕ್ರಾಧಿಪತ್ಯದ ವೈಭವ ಮತ್ತು ಅದರ ಅವನತಿಗೆ ಕಾರಣಗಳನ್ನು ಪರೀಕ್ಷಿಸುವಾಗ ಐತಿಹಾಸಿಕ ಆಧಾರಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು. ಶಾಸ್ತ್ರಾಧಾರಿತ ಇತಿಹಾಸದ ವ್ಯಾಖ್ಯಾನವನ್ನು ಕಡೆಗಣಿಸಿದ ಅವರು ಮಾನವ ಸಂಸ್ಕೃತಿಯ ವೈಜ್ಞಾನಿಕ ಇತಿಹಾಸಕ್ಕೆ ಅಸ್ತಿಭಾರ ಹಾಕಿದರು.

ಆದರೆ ಅವರ ಬರಹಗಳು ದೋಷಗಳಿಂದ ಮುಕ್ತವಾಗಿಲ್ಲ. ಅವರು ಮುಖ್ಯವಾಗಿ ಜ್ಞಾನವಂತರ ಉಪಯೋಗಕ್ಕಾಗಿಯೆ ಕೃತಿಗಳನ್ನು ರಚಿಸಿದರು. ಎರಡನೆಯದಾಗಿ, ತಮ್ಮ ಸಿದ್ಧಾಂತಗಳ ಸಮರ್ಥನೆಗಾಗಿಯೇ ಸಂಗತಿಗಳನ್ನು ಅರ್ಥೈಸಿದರು. ಇತಿಹಾಸವು ಅವರಿಗೆ ಮಾನವನ ಪ್ರಕೃತಿ ಸಿದ್ಧ ಇತಿಹಾಸವಾಗಿ ಕಂಡಿತು. ಈ ಕಾರಣದಿಂದಾಗಿ ಅವರು ರಾಷ್ಟ್ರಗಳು ಮತ್ತು ಸಂಸ್ಕೃತಿಗಳ ನಡುವೆ ಮತ್ತು ಹವಾಗುಣ ಹಾಗೂ ಭೂಗೋಳಶಾಸ್ತ್ರದ ನಡುವೆ ವ್ಯತ್ಯಾಸಗಳನ್ನು ಸೂಚಿಸಿದ್ದಾರೆ. ಪ್ರಕೃತಿ ಮತ್ತು ಸಂಸ್ಕೃತಿಯ ಬಗ್ಗೆ ನಿಕಟ ಸಂಬಂಧವಿದ್ದಾಗಲೂ, ಮಾನವನ ವಿವೇಚನಾಶಕ್ತಿ ಅವರ ವೈಲಕ್ಷಣ್ಯವನ್ನು ನಿರ್ಧರಿಸುತ್ತದೆಂಬುದನ್ನು ಗಮನದಲ್ಲಿಡುವುದು ಅವಶ್ಯಕ.

ಕಾರ್ಟೀಸಿಯನ್ ಸಿದ್ಧಾಂತದಿಂದ ಪ್ರಭಾವಿತರಾದ ಮತ್ತೊಬ್ಬ ಚಿಂತನಕಾರರೆಂದರೆ ಲೈಬ್ನಿಜ್. ಅವರು ಇತಿಹಾಸ ದರ್ಶನಕ್ಕೆ ಇತಿಹಾಸ ಪಾಂಡಿತ್ಯದ ಹೊಸ ವಿದಾನಗಳನ್ನು ಪರಿಣಾಮಕಾರಿಯಾಗಿ ಪರಯೋಗಿಸಿದರು. ಅವರು ಇಂತಹ ಅಧ್ಯಯನದ ಆಧುನಿಕ ಸಂಸ್ಥಾಪಕರಾಗಿದ್ದಾರೆ. ದರ್ಶನ ಕಲ್ಪನೆಯು ಒಂದು ನಿರಂತರ ಇತಿಹಾಸ ಸಂಪ್ರದಾಯ ಎಂಬ ಅಂಶ ಹೊರ ಬರಲು ಅವರೇ ಕಾರಣ. ಒಟ್ಟಾರೆ ಹೇಳುವುದಾದರೆ, ಕಾರ್ಟೀಸಿಯನ್ ಸಿದ್ಧಾಂತವು ಇತಿಹಾಸದ ವಿರೋಧಿಯಾಗಿತ್ತು. ಈ ವಿರೋಧವೇ ಅದರ ಅವನತಿಗೂ ಕಾರಣವಾಯಿತು. ಈ ಸಿದ್ಧಾಂತವು ಒಂದು ಪ್ರಬಲವಾದ ಇತಿಹಾಸ ಸಂಶೋಧನಾ ಚಳವಳಿಯ ಉದಯಕ್ಕೆ ಕಾರಣವಯಿತು. ಇತಿಹಾಸದಲ್ಲಿ ರಚನಾಕಾರಿ ಆಸಕ್ತಿಯುಳ್ಳವರು ಈ ಚಳವಳಿಯ ನಾಯಕರಾದರು.