ಕಾರ್ಟೀಸಿಯನ್ ಸಿದ್ಧಾಂತದ ವಿರೋಧಿಗಳು (ವಿಕೊ ೧೬೬೮-೧೭೭೪)

ಆಧಾರಗಳ ವಿಮರ್ಶಾತ್ಮಕ ಹಾಗೂ ವಿಭಜನೆ ಮಾರ್ಗದ ಅಧ್ಯಯನಕ್ಕೆ ಕಾರ್ಟೀಸಿಯನ್‌ ಸಿದ್ಧಾಂತದ ಕೊಡುಗೆಯನ್ನು ಮರೆಯಲಾಗದು. ಇತಿಹಾಸದ ಬೆಳವಣಿಗೆ ಮತ್ತು ಪ್ರಾಕೃತಿಕ ಪರಿಸರದ ಮಧ್ಯದ ಸಂಬಂಧಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿತು. ಕಾರ್ಟೀಸಿಯಸ್ ಸಿದ್ಧಾಂತವನ್ನು ವಿರೋಧಿಸಿದವರಲ್ಲಿ ಲಾಕ್‌, ಬರ್ಕ್ಲಿ ಮತ್ತು ಹ್ಯೂಮ್‌ ಪ್ರಮುಖರು. ಆದರೆ ಈ ಸಿದ್ಧಾಂತವನ್ನು ಅಲ್ಲಗಳೆದ ಹೆಚ್ಚು ಯಶಸ್ವೀ ಇತಿಹಾಸಕಾರರೆಂದರೆ ವಿಕೊ.

ಇಟಲಿಯ ನೇಪಲ್ಸ್‌ನಲ್ಲಿ ಜನಿಸಿದ ವಿಕೊ ಇತಿಹಾಸ, ತತ್ವಶಾಸ್ತ್ರ, ಸಾಹಿತ್ಯ ಮತ್ತು ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡಿದ್ದರು. ಅವರು ಪ್ಲೇಟೊ, ಟ್ಯಾಸಿಟಸ್, ಬೇಕನ್ ಮತ್ತು ಗ್ರೋಶಿಯಸ್ ಅವರ ಬರವಣಿಗೆಗಳಿಂದ ಪ್ರಭಾವಿತರಾಗಿದ್ದರು. ಪ್ರಸ್ತಾವ ಮಾಡುವ ವಿಧಾನವನ್ನು ಪ್ಲೇಟೊ ಅವರಿಂದಲೂ, ಇತಿಹಾಸ ಸಂಗತಿಗಳ ಯಥಾರ್ಥತೆಯನ್ನು ಗೊತ್ತು ಪಡಿಸುವ ವಿಧಾನವನ್ನು ಟ್ಯಾಸಿಸ್ಟಸ್ ಅವರಿಂದಲೂ, ಪರೀಕ್ಷಾ ವಿಧಾನದ ತಾಂತ್ರಿಕತೆಯನ್ನು ಬೇಕನ್ ಅವರಿಂದಲೂ ಮತ್ತು ಇತಿಹಾಸದಲ್ಲಿ ಸರ್ವವ್ಯಾಪಿ ನಿಯಮದ ಕೆಲವು ವಿಚಾರಗಳನ್ನು ಗ್ರೋಶಿಯಸ್ ಅವರಿಂದಲೂ ಕಲಿತಿದ್ದರು. ಹೀಗೆ ತರಬೇತಿ ಹೊಂದಿದ ಯಶಸ್ಸಿನ ಇತಿಹಾಸಕಾರರಾದ ವಿಕೊ ಇತಿಹಾಸ ವಿಧಾನದ ತತ್ವಗಳನ್ನು ನಿರೂಪಿಸುವುದರಲ್ಲಿ ತೊಡಗಿದರು.

ಅವರು ಗಣಿತಶಾಸ್ತ್ರ ಜ್ಞಾನದ ಸಪ್ರಮಾಣತೆಯನ್ನು ವಿರೋಧಿಸಲಿಲ್ಲ. ಆದರೆ ಗಣಿತಶಾಸ್ತ್ರದ ಹೊರತಾಗಿ ಇತರ ವಿಧದ ಜ್ಞಾನ ಸಾಧ್ಯವಿಲ್ಲವೆಂಬ ಕಾರ್ಟೀಸಿಯನ್ ದರ್ಶನಕಾರರ ನಿಲುವನ್ನು ಅವರು ವಿರೋಧಿಸಿದರು. ಮಾನವನು ತನ್ನ ಇತಿಹಾಸವನ್ನು ನಿರ್ಮಿಸುತ್ತನೆಂದು ಅವರು ವಾದಿಸಿದರು. ಇತಿಹಾಸದ ಪ್ರಕ್ರಿಯೆಯು ಒಂದು ಪ್ರಕ್ರಿಯೆಯಾಗಿದ್ದು ಅಲ್ಲಿ ಮಾನವ ಜೀವಿಗಳು ತಮ್ಮ ಭಾಷೆ, ಸಂಪ್ರದಾಯ, ನಿಯಮ, ಸರ್ಕಾರ ಮೊದಲಾದವುಗಳನ್ನು ತಾವೇ ರಚಿಸುತ್ತಾರೆ. ಇತಿಹಾಸವು ಮಾನವ ಸಮಾಜಗಳ ಮತ್ತು ಸಂಘ ಸಂಸ್ಥೆಗಳ ಮೂಲ ಮತ್ತು ಪುರೋಭಿವೃದ್ಧಿಯ ಇತಿಹಾಸವಾಗಿದೆ. ಇತಿಹಾಸದ ವಸ್ತು ವಿಷಯವನ್ನು ಕುರಿತ ಪೂರ್ಣವಾದ ಆಧುನಿಕ ಭಾವವನ್ನು ಮೊದಲ ಬಾರಿಗೆ ನಾವು ಇಲ್ಲಿ ಕಾಣುತ್ತೇವೆ.

ಇತಿಹಾಸದ ಯೋಜನೆಯು ಪೂರ್ಣವಾಗಿ ಮಾನವನ ಯೋಜನೆಯಾಗಿದೆ. ಸಮಾಜದ ಚೌಕಟ್ಟನ್ನು ನಿರ್ಮಿಸಿದವರು ಮಾನವನೇ ಆದದ್ದರಿಂದ ಈ ಚೌಕಟ್ಟಿನ ಪ್ರತಿಯೊಂದು ವಿವರವನ್ನೂ ತಿಳಿಯಬಹುದಾಗಿದೆ. ಭೂತಕಾಲದಲ್ಲಿ ಜನರು ನಿರ್ಮಿಸಿದ ಕ್ರಮ ವಿಧಾನವನ್ನು ಇತಿಹಾಸಕಾರನು ತನ್ನ ಮನಸ್ಸಿನಲ್ಲಿಯೇ ಪುನರ್‌ನಿರ್ಮಿಸಬಹುದು.

ಇತಿಹಾಸಕಾರನ ಮನಸ್ಸು ಹಾಗೂ ಆತನು ಅಧ್ಯಯನ ಮಾಡಲು ಹೊರಟಿರುವ ವಿಷಯದ ನಡುವೆ ಒಂದು ರೀತಿಯ ಪೂರ್ವ ಸ್ಥಾಪಿತ ಸಾಮರಸ್ಯವಿದೆ. ಆದರೆ ಈ ಪೂರ್ವ ಸ್ಥಾಪಿತ ವಿಚಾರಗಳ ಮೇಲೆ ಆಧಾರಿತವಾಗಿರುವ ಈ ಸಾಮರಸ್ಯ ಇತಿಹಾಸಕಾರ ಮತ್ತು ಆತನು ನಡೆಸುತ್ತಿರುವ ಅಧ್ಯಯನದ ಕ್ರಿಯೆಗಳ ಕರ್ತೃಗಳನ್ನು ಒಂದುಗೂಡಿಸುತ್ತದೆ.

ಎಂದು ವಿಕೊ ಅಭಿಪ್ರಾಯ ಪಡುತ್ತಾರೆ. ಇತಿಹಾಸದ ಬಗೆಗಿನ ಈ ದೃಷ್ಟಿಕೋನವು ನಿಶ್ಚಯವಾಗಿ ಕಾರ್ಟೀಸಿಯನ್ ಸಿದ್ಧಾಂತಕ್ಕೆ ವಿರೋಧವಾಗಿದೆ.

ವಿಕೊನ ಪ್ರಕಾರ ಗತಕಾಲವು ಗತಕಾಲವನ್ನು ಕುರಿತಾದ್ದೆಂದು ಇತಿಹಾಸವು ಭಾವಿಸುವುದಿಲ್ಲ. ಅದು ನಾವು ವಾಸಿಸುವ ಸಮಾಜದ ವಾಸ್ತವಿಕ ಚೌಕಟ್ಟು ಮತ್ತು ನಮ್ಮ ಸುತ್ತಮುತ್ತಲಿರುವ ಜನರೊಂದಿಗೆ ಪಾಲ್ಗೊಳ್ಳುವ ನಡಾವಳಿ ಮತ್ತು ಸಂಪ್ರದಾಯಗಳನ್ನು ಕುರಿತದ್ದಾಗಿದೆ. ಇವುಗಳ ಅಧ್ಯಯನ ಮಾಡುವಾಗ ಅವು ನಿಜವಾಗಿ ಅಸ್ತಿತ್ವದಲ್ಲಿದ್ದವೆ ಎಂಬ ಪ್ರಶ್ನೆಯನ್ನು ಕೇಳುವುದು ಅನಾವಶ್ಯಕ. ಅಂತಹ ಪ್ರಶ್ನೆಗಳನ್ನು ಅರ್ಥವಿಲ್ಲವೆಂಬುದು ಅವರ ಅಭಿಪ್ರಾಯ. ಅತಿ ಪುರಾತನ ಹಾಗೂ ಅವ್ಯಕ್ತ ಯುಗಗಳ ಇತಿಹಾದಲ್ಲಿ ವಿಕೊ ಅವರಿಗೆ ಹೆಚ್ಚು ಆಸಕ್ತಿಯಿತ್ತು. ಇತಿಹಾಸದ ಜ್ಞಾನವು ವಿಸ್ತಾರಗೊಳ್ಳುವುದು ಈ ಆಸಕ್ತಿಗೆ ಕಾರಣವಾಗಿತ್ತು. ಇತಿಹಾಸದ ರಚನೆಯ ವಿಧಾನಕ್ಕೆ ಸಂಬಂಧಿಸಿಂತೆ ವಿಕೊ ಕೆಲವು ನಿಯಮಗಳನ್ನು ಸೂಚಿಸಿದ್ದಾರೆ.

೧. ಇತಿಹಾಸದ ಕೆಲವು ಯುಗಗಳು ಒಂದು ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದು ಅವು ಪ್ರತಿಯೊಂದು ವಿವರಕ್ಕೂ ಮೆರಗಿಡುತ್ತದೆ. ಈ ಲಕ್ಷಣಗಳು ಇತರ ಯುಗಗಳಲ್ಲಿ ಪುನರಾವರ್ತನೆಯಾಗಬಹುದು. ಆದ್ದರಿಂದ ಎರಡು ವಿಭಿನ್ನ ಯುಗಗಳು ಒಂದೇ ಸಾಮಾನ್ಯ ಲಕ್ಷಣವನ್ನು ಹೊಂದಿರಬಹುದು.

೨. ಒಂದೇ ವಿಧದ ಯುಗಗಳು ಒಂದೇ ರೀತಿಯಲ್ಲಿ ಪುನರಾವರ್ತನೆಯಾಗುತ್ತದೆಂದು ಅವರು ತೋರಿಸಿದರು.

೩. ಚಕ್ರಗತಿಯಲ್ಲಿ ಆವರ್ತಿಸುವ ಚಲನೆಯು ಗೊತ್ತುಪಡಿಸಿದ ಹಂತದ ಆವೃತ್ತಿಯಲ್ಲಿ ಚಲಿಸುವುದರಿಂದ ಅದನ್ನು ಕೇವಲ ಇತಿಹಾಸದ ಆವರ್ತವೆಂದು ಪರಿಗಣಿಸಬಾರದು. ಏಕೆಂದರೆ ಅದು ಆವೃತ್ತವಾಗಿರದೆ ಸುರುಳಿಯಾಗಿದೆ. ಇತಿಹಾಸವು ಪುನರಾವರ್ತಿಯಾಗದಿರುವುದಕ್ಕೆ ಇದೇ ಕಾರಣ. ಪ್ರತಿ ಹೊಸ ಹಂತವೂ ಹಿಂದಿನ ಹಂತಕ್ಕಿಂತ ವಿಭಿನ್ನ ರೂಪವನ್ನು ತಳೆದು ಹೊರಬರುತ್ತದೆ. ಇತಿಹಾಸವು ನವೀನತೆಗಳನ್ನು ಸೃಜಿಸುವುದರಿಂದ ಭವಿಷ್ಯವನ್ನು ನಿರ್ಧರಿಸಲು ಅವಕಾಶವಿಲ್ಲವಾಗಿದೆ.

ಇತಿಹಾಸಕಾರರು ಪೂರ್ವಗ್ರಹದ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂದು ತಿಳಿಸಿ, ಈ ಕೆಳಗಿನ ಐದು ದೋಷಗಳನ್ನು ನಮೂದಿಸಿದ್ದಾರೆ.

೧. ಪ್ರಾಚೀನತೆಯನ್ನು ಕುರಿತಾಗಿ ಒಂದು ಉಜ್ವಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಮತ್ತು ಅದರ ಶ್ರೀಮಂತಿಕೆ, ಸಾಮರ್ಥ್ಯ, ವೈಭವ ಮೊದಲಾದುವನ್ನು ಕುರಿತಾದ ಅತಿಶಯೋಕ್ತಿಯಿಂದ ಕೂಡಿದ ವರ್ಣನೆಯನ್ನು ಇತಿಹಾಸಕಾರರು ಕೊಡಬಾರದು. ಗತಕಾಲದ ಇತಿಹಾಸವು ಅಧ್ಯಯನಕ್ಕೆ ಏಕೆ ಯೋಗ್ಯವಾಗುತ್ತದೆಂದರೆ ಅದರಸಾಧನೆಗಳ ಸಹಜವಾದ ಅರ್ಹತೆಯಿಂದಲ್ಲ. ಆದರೆ ಇತಿಹಾಸದ ಸಾಮಾನ್ಯ ಹರಿವುಗೆ ಅದಕ್ಕಿರುವ ಸಂಬಂಧವಿದೆ. ಕಾಲಿಂಗ್‌ವುಡ್ ಅವರು ತಿಳಿಸುವಂತೆ ಈ ಪೂವಾಗ್ರಹವು ನಿಜವಾದು ದಾಗಿದೆ.

೨. ರಾಷ್ಟ್ರಗಳ ಪ್ರತಿಷ್ಠೆ ಅಥವಾ ಗರ್ವ ಈ ಸಂದರ್ಭದಲ್ಲಿ ಗಮನಾರ್ಹವಾದುದು. ಪ್ರತಿಯೊಂದು ರಾಷ್ಟ್ರವೂ ತನ್ನ ಪ್ರಾಚೀನ ಕಾಲದ ಇತಿಹಾಸವನ್ನು ಅನುಕೂಲಕರವಾದ ಬಣ್ಣಗಳಲ್ಲಿ ಚಿತ್ರಿಸುವುದು.

೩. ವಿದ್ಯಾವಂತರ ಪ್ರತಿಷ್ಠೆ ಗಮನಾರ್ಹವಾದ ವಿಚಾರ. ತಾವು ಯೋಚಿಸುತ್ತಿರುವ ಜನಗಳು ತಮ್ಮಂತೆಯೇ ಇದ್ದರೆಂದು ಭಾವಿಸುವುದು. ಪಾಂಡಿತ್ಯವುಳ್ಳ ಜನರು ತಾವು ಯೋಚಿಸುತ್ತಿರುವ ವ್ಯಕ್ತಿಗಳೂ ಸಹ ಪಾಂಡಿತ್ಯವುಳ್ಳವರಾಗಿದ್ದಿರಬೇಕೆಂದು ಭಾವಿಸುವುದು. ಹಾಗೆ ನೋಡಿದರೆ, ಇತಿಹಾಸದ ಹೆಚ್ಚಿನ ಪರಿಣಾಮಕಾರಿ ಜನರು ಪಾಂಡಿತ್ಯವುಳ್ಳವರಾಗಿರಲಿಲ್ಲವೆಂದು ವಿಕೊ ತಿಳಿಸಿದ್ದಾರೆ. ಅವರೇ ಹೇಳಿರುವಂತೆ ಐತಿಹಾಸಿಕ ಪ್ರಸಿದ್ಧತೆ ಮತ್ತು ಪ್ರತಿಫಲಿಸುವ ಬೌದ್ಧಿಕತೆ ಅತಿ ಅಪರೂಪವಾಗಿ ಮೇಳಿಸುತ್ತದೆ. ಇತಿಹಾಸಕಾರನ ಸ್ವಂತ ಜೀವನವನ್ನು ನಿರ್ವಹಿಸಿದ ಮೌಲ್ಯಗಳ ಪ್ರಮಾಣವು ಆತನ ಪ್ರಧಾನ ವ್ಯಕ್ತಿಗಳ ಜೀವನವನ್ನು ನಿರ್ವಹಿಸುವುದಕ್ಕಿಂತ ವಿಭಿನ್ನವಾಗಿರುತ್ತದೆ. ಆದ್ದರಿಂದ ಈ ರೀತಿಯ ಸಮೀಕರಣ ಇತಿಹಾಸದ ಒಂದು ಪ್ರಮುಖ ದೋಷವಾಗುತ್ತದೆ.

೪. ಆಧಾರಗಳ ನಿಖರತೆಗಳಲ್ಲಿನ ಅಭಾಸ ಈ ದೃಷ್ಟಿಯಲ್ಲಿ ಮುಖ್ಯವಾದುದು. ಇದನ್ನು ವಿಕೊ ಅವರು ಅತಿ ಪಾಂಡಿತ್ಯದ ಅನುಕ್ರಮವೆಂದು ಕರೆದಿದ್ದಾರೆ. ಅಂದರೆ, ಎರಡು ರಾಷ್ಟ್ರಗಳು ಒಂದೇ ರೀತಿಯ ಭಾವನೆಗಳು ಅಥವಾ ಸಂಘ-ಸಂಸ್ಥೆಗಳನ್ನು ಹೊಂದಿರುವಾಗ ಒಂದು ರಾಷ್ಟ್ರ ಮತ್ತೊಂದರಿಂದ ಕಲಿತುಕೊಂಡಿತೆಂದು ಭಾವಿಸುವುದು ದೋಷವಾಗುತ್ತದೆ. ಏಕೆಂದರೆ, ನಾವು ಈ ನಿಲುವನ್ನು ಸಮರ್ಥಿಸದಿದ್ದರೆ, ಮಾನವ ಮನಸ್ಸಿನ ಮೂಲಭೂತ ವಾದ ರಚನಾತ್ಮಕ ಶಕ್ತಿಯನ್ನು ನಿರಾಕರಿಸಿದಂತಾಗುತ್ತದೆ. ಮತ್ತೊಬ್ಬರಿಂದ ಕಲಿತುಕೊಳ್ಳದೆ ತನಗೆ ಅವಶ್ಯಕವಾದ ಭಾವನೆಗಳನ್ನು ಪುನರ್ ಕಂಡುಹಿಡಿಯುವ ಸಾಧ್ಯತೆ ಇದೆ. ಮಾತ್ರವಲ್ಲ. ಒಬ್ಬರು ಬೋಧಿಸಿದರೂ ಸಹ, ಕಲಿಯುವವನು ಅವರ ಬೋಧನೆಯಿಂದ ಪಾಠಗಳನ್ನು ಕಲಿತುಕೊಳ್ಳುವುದಿಲ್ಲ. ಆದರೆ ತನ್ನ ಪೂರ್ವದ ಇತಿಹಾಸಕ ಬೆಳವಣಿಗೆಯು ತಯಾರಿಸಿದ ಪಾಠಗಳನ್ನು ಮಾತ್ರ ಕಲಿತುಕೊಳ್ಳುತ್ತಾನೆ. ಈ ರೀತಿಯಲ್ಲಿ ರಾಷ್ಟ್ರದ ಐತಿಹಾಸಿಕ ಹಿನ್ನೆಲೆಯು ಮುಖ್ಯವಾಗುತ್ತದೆ.

೫. ತಮ್ಮ ಸಮೀಪದ ಕಾಲಗಳ ಬಗ್ಗೆ ಪೂರ್ವಿಕರು ನಮಗಿಂತ ಉತ್ತಮವಾಗಿ ವಿಷಯ ತಿಳಿದಿದ್ದರಿಂದ ಪೂರ್ವಗ್ರಹದಿಂದ ಯೋಚಿಸುವುದು. ಇತಿಹಾಸಕಾರನು ತನ್ನ ತಿಳುವಿಗೆ ನಿರಂತರವಾದ ಸಂಪ್ರದಾಯವನ್ನು ಅವಲಂಬಿಸಿರುವುದಿಲ್ಲ. ಸಂಪ್ರದಾಯಗಳ ಆಧಾರದಿಂದ ರಚಿಸಲಾಗದುದನ್ನು ಇತಿಹಾಸಕಾರನು ವೈಜ್ಞಾನಿಕ ವಿಧಾನಗಳಿಂದ ಗತಕಾಲದ ಚಿತ್ರಣವನ್ನು ಪುನರ‍್ರಚಿಸಲು ಸಾಧ್ಯ. ಇತಿಹಾಸವು ನೆನಪು ಅಥವಾ ಅಧಿಕೃತ ಹೇಳಿಕೆಗಳನ್ನು ಅವಲಂಬಿಸಿರುವುದಿಲ್ಲ.

ಇತಿಹಾಸಕಾರನು ಅಧಿಕೃತ ಕಾಲಗಳ ಬಗ್ಗೆ ನಮ್ಮ ಪೂರ್ವಿಕರು ನಮಗಿಂತ ಉತ್ತಮವಾಗಿ ವಿಷಯ ತಿಳಿದಿದ್ದರೆಂದು ಪೂರ್ವಗ್ರಹದಿಂದ ಯೋಚಿಸುವುದು. ಇತಿಹಾಸಕಾರನು ತನ್ನ ತಿಳುವಿಗೆ ನಿರಂತರವಾಗಿ ಸಂಪ್ರದಾಯವನ್ನು ಅವಲಂಬಿಸಿರುವುದಿಲ್ಲ. ಸಂಪ್ರದಾಯಗಳ ಆಧಾರದಿಂದ ರಚಿಸಲಾಗದುದನ್ನು ಇತಿಹಾಸಕಾರನು ವೈಜ್ಞಾನಿಕ ವಿಧಾನಗಳಿಂದ ಗತಕಾಲದ ಚಿತ್ರಣವನ್ನು ಪುನರ‍್ರಚಿಸಲು ಸಾಧ್ಯ. ಇತಿಹಾಸವು ನೆನಪು ಅಥವಾ ಅಧಿಕೃತ ಹೇಳಿಕೆಗಳನ್ನು ಅವಲಂಬಿಸಿರುವುದಿಲ್ಲ.

ಇತಿಹಾಸಕಾರನು ಅಧಿಕೃತ ಹೇಳಿಕೆಗಳ ಅವಲಂಬನೆಯನ್ನು ಅತಿಶಯಿಸಿ ಇತಿಹಾಸ ರಚನೆಗೆ ಅನುಕೂಲವಾಗಲು ಕೆಲವು ವಿಧಾನಗಳನ್ನು ಸೂಚಿಸಿದ್ದಾರೆ. ಮೊದಲನೆಯದಾಗಿ, ಭಾಷೆಗಳ ಅಧ್ಯಯನವು ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದು. ಇತಿಹಾಸದ ಅರಿವಿಗೆ ಭಾಷೆಯು ಯಾವ ರೀತಿಯ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ಶಬ್ಧ ನಿಷ್ಪತ್ತಿಯು ತೋರಿಸುತ್ತದೆ. ತನ್ನ ಅಧ್ಯಯನದ ಒಂದು ನಿರ್ದಿಷ್ಟ ಜನರ ಮಾನಸಿಕ ಬದುಕು, ಭಾವನೆಗಳು ಮೊದಲಾದುವನ್ನು ಪುನರ‍್ರಚಿಸುವ ಗುರಿ ಹೊಂದಿರುವ ಇತಿಹಾಸಕಾರನಿಗೆ ಅವರ ಪದಗಳ ಸಂಗ್ರಹವು ಅವರ ಭಾವನೆಗಳ ಸಂಗ್ರಹವೇನೆಂಬುದನ್ನು ತೋರಿಸುತ್ತದೆ. ತನ್ನ ಅಧ್ಯಯನದ ಒಂದು ನಿರ್ದಿಷ್ಠ ಜನರ ಮಾನಸಿಕ ಬದುಕು, ಭಾವನೆಗಳು ಮೊದಲಾದುವನ್ನು ಪುನರ‍್ರಚಿಸುವ ಗುರಿ ಹೊಂದಿರುವ ಇತಿಹಾಸಕಾರನಿಗೆ ಅವರ ಪದಗಳ ಸಂಗ್ರಹವು ಅವರ ಭಾವನೆಗಳ ಸಂಗ್ರಹವೇನೆಂಬುದನ್ನು ತೋರಿಸುತ್ತದೆ. ಮತ್ತು ಅವರು ತಮ್ಮ ಹೊಸ ಭಾವನೆಯನ್ನು ಪ್ರಕಟಿಸಲು ಯಾವ ರೀತಿಯಲ್ಲಿ ಹಳೆಯ ಪದವನ್ನು ಹೊಸ ಭಾವನೆಯಲ್ಲಿ ವ್ಯಕ್ತಪಡಿಸುತ್ತಿದ್ದರೆಂಬುದನ್ನು ತೋರಿಸುವುದರ ಜೊತೆಗೆ ಈ ಹೊಸ ಭಾವನೆ ಅಸ್ತಿತ್ವಕ್ಕೆ ಬರುವ ಮುನ್ನ ಅವರ ಭಾವನೆಗಳ ಸಂಗ್ರಹವೇನೆಂಬುದನ್ನೂ ತೋರಿಸುತ್ತದೆ. ಆದ್ದರಿಂದ ಭಾಷೆಯು ಮಾನವನ ಮನಸ್ಸಿನಿಂದ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಮಾತ್ರವಲ್ಲ, ಭಾಷೆಯು ಮನಸ್ಸಿನ ಕ್ರಮಗಳು ಮತ್ತು ಮನೋಭಾವನೆಗಳನ್ನು ಸೂಚಿಸುತ್ತದೆ. ಭಾಷೆಯು ಸಮಾಜದಲ್ಲಿ ವ್ಯಾಪಕವಾದ ಚಿಂತನೆಗಳ ಪ್ರತಿನಿಧಿಯಾಗಿದ್ದು ಪ್ರತಿಯೊಂದು ಸಂದರ್ಭದಲ್ಲಿಯೂ ಜನತೆಯ ಪ್ರೇರಣೆಗೆ ಯಥೋಚಿತವಾಗಿರುತ್ತದೆ. ಭಾಷೆಯು ಜನರು ತಮ್ಮ ಭಾವನೆಗಳನ್ನು ಪ್ರಚುರಪಡಿಸಲು ಉಪಯೋಗಿಸುವ ಕೃತಕ ಮಾಧ್ಯಮವಲ್ಲ. ಆದರೆ ಅದು ಸ್ವಾಭಾವಿಕವಾಗಿ ವಿಕಸನಗೊಂಡುದಾಗಿದೆ. ಭಾಷೆಯು ಸಮಾಜದ ಸಂಸ್ಕೃತಿಯ ಸಾರಭೂತವಾಗಿದೆ ಮತ್ತು ತಮ್ಮ ಭಾವನೆಗಳನ್ನು ಪ್ರಚುರಪಡಿಸಲು ಉಪಯೋಗಿಸುವ ಕೃತಕ ಮಾಧ್ಯಮವಲ್ಲ. ಆದರೆ ಅದು ಸ್ವಾಭಾವಿಕವಾಗಿ ವಿಕಸನಗೊಂಡುದಾಗಿದೆ. ಭಾಷೆಯು ಸಮಾಜದ ಸಂಸ್ಕೃತಿಯ ಸಾರಭೂತವಾಗಿದೆ. ಮತ್ತು ಅದರ ವಾಸ್ತವಿಕ ಮೌಲ್ಯಗಳನ್ನು ಹೊರಗೆಡಹುತ್ತದೆ.

ಎರಡನೆಯದು, ಮಿಥ್‌ಗಳ ಉಪಯುಕ್ತತೆ. ಸಮಾಜ ವಿನ್ಯಾಸವನ್ನು ಕಂಡು ಹಿಡಿದ ಜನರನ್ನು ಅರೆ ಕವನ ರೂಪದಲ್ಲಿ ವ್ಯಕ್ತಪಡಿಸುವುದನ್ನು ಪುರಾತನ ಧರ್ಮದ ದೈವಗಳು ಪ್ರತಿನಿಧಿಸುತ್ತವೆ. ಗ್ರೀಕ್ ಮತ್ತು ರೋಮನ್ನರ ಕಾಲ್ಪನಿಕ ಕಥೆಗಳು ಅಥವಾ ಮಿಥ್‌ಗಳಲ್ಲಿ ವಿಕೊ ಅವರು ಪುರಾತನರ ಗೃಹಕೃತ್ಯದ, ಆರ್ಥಿಕ ಮತ್ತು ರಾಜಕೀಯ ಜೀವನದ ಪ್ರತಿಬಿಂಬಗಳನ್ನು ಕಂಡರು. ಪ್ರತಿಫಲಿಸುವ ಮನಸ್ಸು ನ್ಯಾಯಶಾಸ್ತ್ರ ಮತ್ತು ನೈತಿಕತೆಯನ್ನು ಸಂಹಿತೆಗಳಲ್ಲಿ ವ್ಯಕ್ತಪಡಿಸುವಂತೆ, ಈ ರೀತಿಯಲ್ಲಿ ಪುರಾತನ ಹಾಗೂ ಕಾಲ್ಪನಿಕ ಮನಸ್ಸು ಮಿಥ್ಯೆಗಳ ರೂಪದಲ್ಲಿ ವ್ಯಕ್ತಪಡಿಸಿತು.

ಮೂರನೆಯದಾಗಿ, ಸಂಪ್ರದಾಯಗಳನ್ನು ಉಪಯೋಗಿಸಿಕೊಂಡು ಒಂದು ಹೊಸ ವಿಧಾನವನ್ನು ವಿಕೊ ಪರ್ಯಾಲೋಚನೆಗಾಗಿ ನಮ್ಮ ಮುಂದಿಟ್ಟಿದ್ದಾರೆ. ಸಂಪ್ರದಾಯಗಳನ್ನು ವಾಚ್ಯಾರ್ಥದಲ್ಲಿ ಸತ್ಯವೆಂದು ಪರಿಗಣಿಸಬಾರದು. ಆದರೆ ಅವು ವಕ್ರೀಕರಣಗೊಳಿಸುವ ಮಾರ್ಗದರ್ಶಕದ ಮಾಧ್ಯಮದ ಅಪಾರ್ಥಗೊಳಿಸುವ ಸಂಗತಿಗಳ ಕಂಗೆಡಿಸುವ ನೆನಪುಗಳಾಗಿವೆ. ಅವರ ವಕ್ರೀಕರಣಗೊಳಿಸುವ ಮಾರ್ಗದರ್ಶಕವನ್ನು ನಾವು ಅರ್ಥೈಸಬಹುದು. ಸಂಪ್ರದಾಯ ಗಳೆಲ್ಲವೂ ನಿಜ. ಆದರೆ ಅವು ತಿಳಿಸುವುದು ಅಥವಾ ಹೇಳಿರುವುದು ಅವುಗಳ ಮನಸ್ಸಿನಲ್ಲಿರುವುದಿಲ್ಲ. ಅವುಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಕಂಡುಹಿಡಿಯಲು, ಅಥವಾ ಅವುಗಳ ಉದ್ದೇಶಗಳನ್ನು ಪತ್ತೆ ಮಾಡಲು ಯಾವ ರೀತಿಯ ಜನರು ಅವುಗಳನ್ನು ಸೃಷ್ಟಿಸಿದರು ಮತ್ತು ಅವರು ವ್ಯಕ್ತಪಡಿಸಿರುವ ರೀತಿಯಲ್ಲಿ, ಈ ರೀತಿಯ ಜನರು ಏನು ಉದ್ಧೇಶಿಸಿದ್ದರೆಂಬುದನ್ನು ಅರಿಯಬೇಕು.

ನಾಲ್ಕನೆಯದಾಗಿ, ಈ ಪುನರ್ ಅರ್ಥ ವಿವರಣೆಯ ಮೇಲೆ ಹತೋಟಿ ಹೊಂದಲು ನಾವು ಒಂದು ನಿರ್ದಿಷ್ಟ ಹಂತದ ಬೆಳವಣಿಗೆ ಮನಸ್ಸುಗಳು ಒಂದೇ ರೀತಿಯ ವಿಷಯಗಳು ಅಥವಾ ಭಾವನೆಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕ. ಅಸಂಸ್ಕೃತರು ಅಥವಾ ಅನಾಗರಿಕರು, ಯಾವ ಕಾಲದಲ್ಲಿಯೇ ಆಗಲಿ ಅಥವಾ ಯಾವ ಸ್ಥಳದಲ್ಲಿಯೇ ಆಗಲಿ ಅನಾಗರಿಕರು ಹೇಗಿದ್ದರೆಂಬುದನ್ನು ತಿಳಿಯಬಹುದು. ಈ ವಿಧಾನದಿಂದ ಅತಿ ಪ್ರಾಚೀನ ಇತಿಹಾಸದ ಗೋಪ್ಯವಾಗಿಟ್ಟಿರುವ ಸಂಗತಿಗಳನ್ನು ಈ ಅನಾಗರಿಕ ಮಿಥ್ಯೆಗಳು ಮತ್ತು ಕಾಲ್ಪನಿಕ ಕಥೆಗಳಿಂದ ಹೇಗೆ ಅರ್ಥೈಸಬಹುದೆಂಬುದನ್ನು ಕಂಡುಹಿಡಿಯಬಹುದು. ಮಕ್ಕಳು ಸಹ ಒಂದು ರೀತಿಯಲ್ಲಿ ಅನಾಗರಿಕರು. ಮಕ್ಕಳ ಕಲ್ಪಿತ ಕಥೆಗಳು ಈ ನಿಟ್ಟಿನಲ್ಲಿ ನೆರವು ನೀಡಬಹುದು. ಆಧುನಿಕ ರೈತರು ಪ್ರತಿಫಲಿಸುವ ಮತ್ತು ಕಲ್ಪನಾಶಕ್ತಿಯುಳ್ಳ ವ್ಯಕ್ತಿಗಳಾಗಿದ್ದಾರೆ. ಅವರ ಭಾವನೆಗಳು ಅನಾಗರಿಕ ಸಮಾಜದ ಭಾವನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. ಹೀಗೆ ಅಧಿಕೃತ ಹೇಳಿಕೆಗಳ ನೆರವಿಲ್ಲದೆ ಇತಿಹಾಸವನ್ನು ರಚಿಸುವ ವಿಧಾನಗಳನ್ನು ವಿಕೊ ಅವರು ಪ್ರತಿಪಾದಿಸಿದ್ದಾರೆ.

ಇತಿಹಾಸ ಸಂಶೋಧನಾ ವಿಧಾನ ಕ್ಷೇತ್ರಕ್ಕೆ ವಿಕೊ ಅವರು ಎರಡು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ೧೭ನೆಯ ಶತಮಾನದ ಅಂತ್ಯ ವೇಳೆಗೆ ಇತಿಹಾಸಕಾರರು ವಿಮರ್ಶಾತ್ಮಕ ವಿಧಾನದಲ್ಲಿ ಸಾಧಿಸಿದ ಮುನ್ನಡೆಯಲ್ಲಿ ವಿಕೊ ಅವರು ಪೂರ್ಣವಾಗಿ ಬಳಸಿಕೊಂಡರಲ್ಲದೆ, ಐತಿಹಾಸಿಕ ಚಿಂತನೆಯು ರಚನೆಕಾರಿಯು ಮತ್ತು ವಿಮರ್ಶಾತ್ಮಕವೂ ಆಗಬಲ್ಲದೆಂಬುದನ್ನು ತೋರಿಸಿ, ಈ ಮುನ್ನಡೆಯನ್ನು ಮತ್ತೊಂದು ಹೆಚ್ಚಿನ ಹಂತಕ್ಕೆ ಕೊಂಡೊಯ್ದರು. ಅಧಿಕೃತ ಬರಹಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ಇತಿಹಾಸವನ್ನು ಸ್ವಯಂ ಅವಲಂಬಿತ ಮತ್ತು ಯಥಾರ್ಥವಾಗಿ ಹಾಗೂ ಸ್ವತಂತ್ರವಾಗಿ ಆಲೋಚಿಸುವ ಶಿಸ್ತನ್ನಾಗಿ ಮಾರ್ಪಡಿಸಿದರು. ದತ್ತಾಂಶಗಳ ವೈಜ್ಞಾನಿಕ ವಿಶ್ಲೇಷಣದಿಂದ ಸಂಪೂರ್ಣವಾಗಿ ನೆನಪಿನಿಂದ ಮರೆಯಾಗಿದ್ದ ಸತ್ಯಗಳನ್ನು ಮರಳಿ ಪಡೆಯುವಲ್ಲಿ ಶಕ್ಯರಾದರು. ಎರಡನೆಯದಾಗಿ, ಇತಿಹಾಸ ಕೃತಿಗಳಲ್ಲಿ ಅಡಕವಾಗಿರುವ ದಾರ್ಶನಿಕ ತತ್ವಗಳನ್ನು ಅಭಿವೃದ್ಧಿಗೊಳಿಸಿ ಕಾರ್ಟೀಸಿಯನ್ ಅವರ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದರ್ಶನದ ಸಂದೇಹವಾದಕ್ಕೆ ಸಮರ್ಪಕವಾದದ ಉತ್ತರವನ್ನು ನೀಡಿದ್ದಾರೆ. ಸಂಕುಚಿತತೆ ಮತ್ತು ಪ್ರಚಲಿತದಲ್ಲಿದ್ದ ದಾರ್ಶನಿಕ ನಂಬಿಕೆಯನ್ನು ಖಂಡಿಸಿ ಜ್ಞಾನದ ಕಲ್ಪನೆಗೆ ಒಂದು ವಿಶಾಲವಾದ ನೆಲೆಯನ್ನು ಅಪೇಕ್ಷಿಸಿದರು.

ಆಧುನಿಕ ಯುಗದಲ್ಲಿ ಇತಿಹಾಸ ವಿಸ್ತೀರ್ಣ ಅಥವಾ ಪರಿಣಾಮವನ್ನು ವಿಸ್ತಾರಗೊಳಿಸಿ ಇತಿಹಾಸಕ್ಕೆ ಹೊಸ ವಿಧಾನದ ತನಿಖಾ ಕ್ರಮವನ್ನು ನಿರ್ದೇಶಿಸಿದವರಲ್ಲಿ ವಿಕೊ ಅವರು ಮೊದಲಿಗರು ಮತ್ತು ಅಗ್ರಗಣ್ಯರೂ ಆಗಿದ್ದಾರೆ. ಇತಿಹಾಸಕ್ಕೆ ಅವರ ಈ ಮಹತ್ತರವಾದ ಕೊಡುಗೆಯನ್ನು ಎರಡು ತಲೆಮಾರುಗಳ ನಂತರ ಗುರುತಿಸಲಾಯಿತು. ವಿಕೊ ಅವರು ವಿಜ್ಞಾನಿಯೂ ಮತ್ತು ಮನೋವಿಜ್ಞಾನಿಯೂ ಆಗಿದ್ದರು. ಇತಿಹಾಸಕ್ಕೆ ಅವರು ಸಲ್ಲಿಸಿದ ಸೇವೆಯ ಆಧಾರದ ಮೇಲೆ ಅವರನ್ನು ಇತಿಹಾಸ ವಿಜ್ಞಾನದ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಬಹುದಾಗಿದೆ.

ಜ್ಞಾನೋದಯ ಯುಗದ ಬೆಳವಣಿಗೆ

ಹದಿನೆಂಟನೆಯ ಶತಮಾನದ ಉತ್ತರಾರ್ಧ ಮತ್ತು ಹತ್ತೊಂಭತ್ತನೆಯ ಶತಮಾನದ ಪುರ್ವಾರ್ಧ ಕಾಲವನ್ನು ಜ್ಞಾನೋದಯ ಯುಗವೆಂದು ಹೆಸರಿಸಲಾಗಿದೆ. ಜ್ಞಾನೋದಯ ಚಳವಳಿಯು ಬೌದ್ಧಿಕ ಕ್ರಾಂತಿಯ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತಿತ್ತು. ಹದಿನೇಳನೆಯ ಶತಮಾನದ ಅಂತ್ಯದಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದ ಈ ಚಳವಳಿಯು ಹದಿನೆಂಟನೆಯ ಶತಮಾನದಲ್ಲಿ ಪ್ರಾನ್ಸ್‌ನಲ್ಲಿ ತನ್ನ ಬಲವನ್ನು ವೃದ್ಧಿಗೊಳಿಸಿಕೊಂಡಿತು. ಧರ್ಮ ಮತ್ತು ದೇವತಾ ಲೌಕಿಕವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಿತು.

ಜ್ಞಾನೋದಯವು ಈ ಕೆಳಗಿನ ಚಿಂತನಾರೂಪಗಳ ಮೇಲೆ ಆಧಾರಿತವಾಗಿದ್ದಿತು.

೧. ವಿವೇಚನೆಗೆ ಸಮರ್ಥನೆಯೊಂದೇ ಮೋಸಹೋಗಲಾಗದ ಮಾರ್ಗದರ್ಶಿಯಾಗಿದೆ.

೨. ಸಮರ್ಥನೆ ಮತ್ತು ಸಹಜ ಪ್ರವೃತ್ತಿ ಮಾನವ ಪರಿಪೂರ್ಣತೆ ಹೊಂದಲು ಜನರಿಗೆ ಮಾರ್ಗದರ್ಶಿಯಾಗುತ್ತದೆ.

೩. ಸರಳವು ಮತ್ತು ಅತಿ ಸ್ವಾಭಾವಿಕವೂ ಆದ ಸಮಾಜ ವಿನ್ಯಾಸವು ಅತಿ ಉತ್ತಮವಾದುದು.

೪. ಜಗತ್ತು ಒಂದು ಯಂತ್ರವಾಗಿದ್ದು ಅನನ್ಯ ನಿಯಮಗಳಿಂದ ನಿಶ್ಚಯಿಸಲ್ಪಟ್ಟಿರುವುದರಿಂದ ಅವುಗಳನ್ನು ಬದಲಾಯಿಸಲಾಗುವುದಿಲ್ಲ. ಮತ್ತು ಪ್ರಕೃತಿಯ ಅನುಕ್ರಮವು ಸಮಗ್ರವಾಗಿ ಏಕ ಪ್ರಕಾರದಲ್ಲಿರುವುದರಿಂದ ದೈವದ ಮಧ್ಯ ಪ್ರವೇಶದಿಂದ ಯಾವ ಮಾರ್ಪಾಡು ಆಗುವುದಿಲ್ಲ.

ಪುರೋಹಿತರು ಮತ್ತು ನಿರಂಕುಶಾಧಿಪತಿಗಳು ಜನರನ್ನು ಪ್ರಜಾಪೀಡಿತ ಕೃತ್ಯಗಳಲ್ಲಿ ತೊಡಗುವಂತೆ ಮಾಡುತ್ತಾರೆಂದು ಜ್ಞಾನೋದಯ ಯುಗವು ಪ್ರತಿಪಾದಿಸಿತು. ನಾಗರಿಕತೆಯ ಮುನ್ನಡೆಯು ಅವರ ನಿರಂಕುಶಾಧಿಕಾರವನ್ನು ಚಿರಸ್ಮರಣೀಯ ಮಾಡಲು ಸಹಾಯಕವಾಗುತ್ತದೆ.

ಜ್ಞಾನೋದಯಕ್ಕೆ ಡೆಕಾರ್ಟ್, ಸ್ಪಿನೋಜ ಮತ್ತು ಹಾಬ್ಸ್ ಅವರ ತರ್ಕ ಪಾರಮ್ಯವಾದವು. ಉತ್ತೇಜನದ ಆಧಾರವಾಗಿ ಪರಿಣಮಿಸಿತು. ಆದರೆ ನ್ಯೂಟನ್ ಮತ್ತು ಲಾಕ್ ಅವರು ಈ ಚಳವಳಿಯ ನಿಜವಾದ ಸ್ಥಾಪಕರಾಗಿದ್ದರು. ನ್ಯೂಟನ್ ಅವರು ತಮ್ಮ ತಾಂತ್ರಿಕ ಅರ್ಥ ವಿವರಣೆಯನ್ನು ಇತಿಹಾಸದ ಬೆಳವಣಿಗೆಗಳಿಗೆ ಪ್ರಯೋಗಿಸಿದರು. ಪ್ರಕೃತಿಯ ಪ್ರತಿಯೊಂದು ಘಟನೆಯೂ ಸಾರ್ವಲೋಕಿಕ ನಿಯಮಗಳಿಂದ ನಿಶ್ಚಯಿಸಲ್ಪಟ್ಟಿರುತ್ತದೆ. ಅವುಗಳನ್ನು ಗಣಿತಶಾಸ್ತ್ರದ ತತ್ವಗಳಂತೆ ನಿಷ್ಕೃಷ್ಟವಾಗಿ ಸೂತ್ರೀಕರಿಸಬಹುದು. ವಿಜ್ಞಾನದ ಕರ್ತವ್ಯವು ಈ ನಿಯಮಗಳನ್ನು ಕಂಡುಹಿಡಿಯುವುದಾದರೆ, ಈ ನಿಯಮಗಳು ಎಡೆ ತಡೆಯಿಲ್ಲದೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವುದು ಮಾನವರ ಕರ್ತವ್ಯವಾಗಿದೆ.

ಈ ವಿಚಾರ ಸರಣಿಯು ಜಗತ್ತಿನ ಮೇಲೆ ದೈವದ ಸ್ವಾಮಿತ್ಯವನ್ನು ಕಸಿದುಕೊಂಡಿತು. ಡೇಕಾರ್ಟೆ ಅವರ ಸಹಜವಾದ ಭಾವನೆಗಳ ಮನೋಭಾವನೆಗಳನ್ನು ಲಾಕ್ ನಿರಾಕರಿಸಿ ಹಾಬ್ಸ್‌ ಅವರ ಸಂವೇದನ ಜ್ಞಾನ ವಾದವನ್ನು ವಿಧಿಬದ್ಧವಾದ ವಿಚಾರ ಸರಣಿಯನ್ನಾಗಿ ಬೆಳೆಸಿದರು. ಈ ವಿಚಾರ ಸರಣಿಯು ಜ್ಞಾನೋದಯ ದರ್ಶನದ ಕೇಂದ್ರ ಬಿಂದುವಾಯಿತು. ಲಾಕ್ ಅವರ ಪ್ರಕಾರ, ಜ್ಞಾನವು ಇಂದ್ರೀಯ ಸಂವೇದನದಿಂದ ಉದಯಿಸುತ್ತದೆ. ಜನನ ಕಾಲದಲ್ಲಿ ಮಾನವನ ಮನುಸ್ಸು ಬರಿದಾದ ಫಲಕವಾಗಿರುತ್ತದೆ. ಆದರೆ ಅನುಭವಗಳನ್ನು ಸರಳವಾದ ಭಾವನೆಗಳ ರೂಪದಲ್ಲಿ ಅದು ಗ್ರಹಿಸುತ್ತದೆ. ಇಂದ್ರಿಯಾನುಭವ ಈ ಭಾವನೆಗಳನ್ನು ಕಚ್ಚಾ ವಸ್ತುಗಳ ರೂಪದಲ್ಲಿ ಒದಗಿಸಿದರೆ ಸಮರ್ಥನೆಯು ಅವುಗಳನ್ನು ಜ್ಞಾನದ ಅಂಗಗಳಾಗಿ ವ್ಯವಸ್ಥಿತಗೊಳಿಸುತ್ತದೆ.

ಆದ್ದರಿಂದ ಜ್ಞಾನೋದಯವನ್ನು ಮಾನವ ಜೀವನ ಹಾಗೂ ಚಿಂತನೆಯ ಪ್ರತಿಯೊಂದು ವಿಭಾಗವನ್ನು ಲೌಕಿಕಗೊಳಿಸುವ ಪ್ರಯತ್ನವೆಂದು ಅರ್ಥೈಸಬಹುದಾಗಿದೆ. ಇದು ಸಾಂಘಿಕ ಧರ್ಮ ಹಾಗೂ ಧರ್ಮದ ವಿರುದ್ಧದ ಒಂದು ಕ್ರಾಂತಿಯಾಗಿತ್ತು. ಈ ಚಳವಳಿಯಲ್ಲಿ ಅಂತರ್ಗತವಾಗಿದ್ದ ದಾರ್ಶನಿಕ ವಿಚಾರ ಸರಣಿ ಎಂದರೆ ಮಾನಸಿಕ ಚಟುವಟಿಕೆಗಳ ಕೆಲವು ರೂಪಗಳು ಅನಾಗರಿಕ ರೂಪಗಳಾಗಿರುತ್ತವೆ ಮತ್ತು ಮನಸ್ಸು ಪರಿಪಕ್ವಗೊಂಡಾಗ ನಾಶವಾಗುತ್ತವೆ. ಈ ಬೆಳವಣಿಗೆಯನ್ನು ಬಹಳ ಹಿಂದೆಯೇ ವಿಕೊ ಹೇಳಿದ್ದರು. ಈ ಬಗ್ಗೆ ಅವರು ಮೂರು ಹಂತಗಳನ್ನು ಗುರುತಿಸಿದ್ರು.

೧. ಕವಿತೆಯು ಸ್ವಾಭಾವಿಕ ಅಥವಾ ಸಹಜವಾದ ಮಾರ್ಗವಾಗಿರುತ್ತದೆ. ಅದರಲ್ಲಿ ಅನಾಗರಿಕ ಮನಸ್ಸು ವ್ಯಕ್ತಪಡಿಸುತ್ತದೆ.

೨. ಮಾನವನು ಬೆಳದಂತೆ ಕಲ್ಪನೆ ಮತ್ತು ಭಾವೋದ್ರೇಕಗಳ ಮೇಲೆ ಸಮರ್ಥನೆಯು ಮೇಲುಗೈಯಾಗುತ್ತದೆ ಮತ್ತು ಕವಿತೆಯನ್ನು ಗದ್ಯವು ಸ್ಥಳಾಂತರಿಸುತ್ತದೆ.

೩. ಇದರ ಮಧ್ಯೆ ಮಿಥ್ಯೆ ಅಥವಾ ಅರೆ ಕಾಲ್ಪನಿಕತೆ ಕಂಡು ಬರುತ್ತದೆ. ಈ ಬೆಳವಣಿಗೆಯ ಹಂತದಲ್ಲಿ ಸಮಗ್ರ ಅನುಭವಗಳು ಧಾರ್ಮಿಕ ಅರ್ಥ ವಿವರಣೆಗೆ ಒಳಗಾಗುತ್ತವೆ.

ಹೀಗೆ ಮಾನವನ ಮನಸ್ಸು, ಕಲೆ, ಧರ್ಮ ಮತ್ತು ದರ್ಶನ ಈ ಮೂರು ವಿಭಿನ್ನ ಮಾರ್ಗಗಳಲ್ಲಿ ಪ್ರಕಟಗೊಳ್ಳುತ್ತದೆ ಅಥವಾ ತನ್ನ ಸಮಗ್ರ ಅನುಭವವನ್ನು ರೂಪಿಸುತ್ತದೆ. ಅವು ಅಕ್ಕಪಕ್ಕದಲ್ಲಿ ಶಾಂತಿಯಿಂದ ಜೀವಿಸಲು ಸಾಧ್ಯವಿಲ್ಲ. ಅವುಗಳ ಪರಸ್ಪರ ಸಂಬಂಧವೆಂದರೆ ಒಂದು ನಿಶ್ಚಿತ ಕ್ರಮದಲ್ಲಿ ತಾರ್ಕಿಕ ಅನುಕ್ರಮ ಇದರಿಂದ ವ್ಯಕ್ತವಾಗುವುದೆಂದರೆ, ಜೀವನದ ಬಗ್ಗೆ ಧಾರ್ಮಿಕ ಭಾವವನ್ನು ತರ್ಕ ಸಮ್ಮತವಾದುದು ತಳ್ಳಿ ಹಾಕುತ್ತದೆ.

ಜ್ಞಾನೋದಯದ ಇತಿಹಾಸಕಾರರು ಈ ರೀತಿಯ ವಿಚಾರ ಸರಣಿಯನ್ನು ಮನಃ ಪೂರ್ವಕವಾಗಿ ರೂಪಿಸಲಿಲ್ಲ. ಧರ್ಮವನ್ನು ಕುರಿತಾದ ಅವರ ಚರ್ಚಾಸ್ಪದ ಭಂಗಿಯು ಒಂದೇ ಪಕ್ಕದ್ದು ಮತ್ತು ತೀಕ್ಷ್ಣವಾಗಿದ್ದುದರಿಂದ ಮಾನವ ಇತಿಹಾಸದಲ್ಲಿ ಇಂತಹ ವಿಚಾರ ಸರಣಿಯ ಸ್ಥಾನಕ್ಕೆ ಬೆಂಬಲ ಸಿಗುವುದು ದುಸ್ಸಾಧ್ಯವಾಯಿತು. ಧರ್ಮ, ಪುರೋಹಿತರು, ಮಧ್ಯಕಾಲೀನ ಯುಗಗಳು ಮುಂತಾದ ಪದಗಳು ಆ ವ್ಯಕ್ತಿಗಳಿಗೆ ಐತಿಹಾಸಿಕ, ದಾರ್ಶನಿಕ, ಸಾಮಾಜಿಕವಾದ ಮುಂತಾದವು ಒಂದು ನಿಶ್ಚಿತ ವೈಜ್ಞಾನಿಕ ಅರ್ಥವುಳ್ಳ ಪದಗಳಾಗಿರದೆ ಕೇವಲ ಬೈಗುಳದ ಪದಗಳಾಗಿದ್ದವು. ಅವರು ಆವೇಶಪರ ಮಹತ್ವವನ್ನು ಹೊಂದಿದ್ದರೇ ವಿನಃ ಭಾವನಾತ್ಮಕ ವಾದುದಲ್ಲ. ಆದ್ದರಿಂದ ಅವು ಕೇವಲ ಕೆಡಕು ಅಥವಾ ದೋಷವಾಗಿರದೆ ಕ್ರಮವಾದ ಮೌಲ್ಯ ವುಳ್ಳದ್ದಾಗಿದೆ. ಮಾತ್ರವಲ್ಲ. ಸಂಸ್ಥಾರೂಪದಲ್ಲಿ ಸೃಷ್ಟಿಸಿದ ಜನರ ಮನಸ್ಸುಗಳ ಅಗತ್ಯಗಳನ್ನು ಪೂರೈಸುತ್ತವೆ. ಇತಿಹಾಸದಲ್ಲಿ ಒಂದು ವಿವೇಚನೆಯಿಲ್ಲದ ಹಂತವನ್ನು ಯೋಚಿಸುವುದು ಇತಿಹಾಸಕಾರನಾಗಿ ಅಲ್ಲ, ಒಬ್ಬ ರಾಷ್ಟ್ರ ವಿಚಾರ ಲೇಖಕನಾಗಿ, ಆದ್ದರಿಂದ ಜ್ಞಾನೋದಯ ಇತಿಹಾಸದ ಹೊರ ನೋಟವು ಅಪ್ಪಟವಾದ ಐತಿಹಾಸಿಕವಾಗಿರಲಿಲ್ಲ. ಅದರ ಪ್ರಮುಖ ಉದ್ದೇಶದಲ್ಲಿ ಅದು ಇತಿಹಾಸದ ವಿರೋಧಿ ಮತ್ತು ವಾದ ಪ್ರತಿವಾದಗಳುಳ್ಳ ಚರ್ಚೆಯಾಗಿತ್ತು.

ಜ್ಞಾನೋದಯವು ತನ್ನ ಸಂಕುಚಿತ ಭಾವನೆಯಲ್ಲಿ ಧರ್ಮದ ವಿರುದ್ಧದ ಚಳವಳಿಯಾಗಿ ತನ್ನ ಆಧಾರಕ್ಕಿಂತ ಎತ್ತರಕ್ಕೆ ಏರಲಿಲ್ಲ. ಆದರೆ ತನ್ನ ಮೂಲ ಲಕ್ಷಣಗಳನ್ನು ಕಳೆದುಕೊಳ್ಳದೆ ವಿಭಿನ್ನ ಮಾರ್ಗದಲ್ಲಿ ಬೆಳೆಯಿತು. ಅಂಥ ಹಾಗೂ ವಿವೇಚನಾರಹಿತ ಮಾನವ ಜೀವನವನ್ನು ವಿವೇಚನೆಯುಳ್ಳದ್ದಾಗಿ ಮಾರ್ಪಡಿಸುವ ಸಾಧ್ಯತೆ ಇದೆ ಎಂದು ಅವರು ನಂಬಿದ್ದರು. ಎರಡು ತ್ವರಿತಗತಿಯ ಬೆಳವಣಿಗೆಗಳಿಗೆ ಅದು ಗರ್ಭಾಣುಗಳನ್ನು ಒಳಗೊಂಡಿದ್ದಿತು.

೧. ಹಿನ್ನೋಟ ಅಥವಾ ಗಂಭೀರವಾದ ಇತಿಹಾಸದ ಬೆಳವಣಿಗೆ. ಇದು ಗತಕಾಲದ ಇತಿಹಾಸವನ್ನು ವಿವೇಚನಾರಹಿತ ಶಕ್ತಿಗಳ ಒಂದು ನಾಟಕವೆಂದು ಪ್ರದರ್ಶಿಸುವುದು.

೨. ಮುನ್ನೋಟ ಅಥವಾ ಹೆಚ್ಚು ಪ್ರಾಯೋಗಿಕ ಅಥವಾ ರಾಜಕೀಯ ಬೆಳವಣಿಗೆಯ ಬಗ್ಗೆ ಭವಿಷ್ಯ ನುಡಿಯುತ್ತಾ ಮತ್ತು ಒಂದು ಸಾವಿರ ವರ್ಷಗಳಲ್ಲಿ ಸಮರ್ಥನೆಯ ಅಥವಾ ವಿವೇಚನೆಯ ಆಡಳಿತವನ್ನು ಸ್ಥಾಪಿಸುವತ್ತ ಪ್ರಯತ್ನ ಪಡುವುದಾಗಿದೆ.

ಈ ಯುಗದ ಬರಹಗಾರರಲ್ಲಿ ಡೇವಿಡ್‌ಹ್ಯೂಂ, ವಾಲ್ಟೈರ್‌ ಮತ್ತು ಎಡ್ವರ್ಡ್‌ಗಿಬ್ಬನ್ ಪ್ರಮುಖರು. ಧರ್ಮದ ವಿರೋಧಿಗಳಾದ ಅವರು ಮಾನವ ಜೀವನ ಮತ್ತು ಚಿಂತನದ ಪ್ರತಿಯೊಂದು ವಿಭಾಗವನ್ನೂ ಲೌಕಿಕವಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಅವರ ಪ್ರಕಾರ, ಇತಿಹಾಸವು ಕೇವಲ ಕಥನವಾಗಿರದೆ ಮಾನವನ ವಿಶಿಷ್ಟ ಕಾರ್ಯ ಚಟುವಟಿಕೆಗಳನ್ನು ಅರಿತುಕೊಳ್ಳುವ ಒಂದು ವ್ಯವಸ್ಥಿತ ಕ್ರಮವಾಗಿತ್ತು. ಈ ದೃಷ್ಟಿಯಿಂದ ಅವರು ಆಧುನಿಕ ಇತಿಹಾಸ ಚಿಂತನದ ಸ್ಥಾಪಕರಾಗಿದ್ದಾರೆ. ಇತಿಹಾಸದ ವಿಚಾರಣೆಗೆ ಒಳಪಡಿಸಬೇಕಾದ ವಿಷಯಗಳಲ್ಲಿ ನಡತೆಗಳು, ಸಂಪ್ರದಾಯಗಳು, ನಂಬಿಕೆಗಳು, ವಿಧಿಗಳು ಅಥವಾ ಕಟ್ಟಳೆಗಳು, ವಿಜ್ಞಾನ, ದರ್ಶನ, ಕಲೆ, ತಂತ್ರಜ್ಞಾನ, ವ್ಯಾಪಾರ, ಕೈಗಾರಿಕೆ, ಯುದ್ಧ ಮುಂತಾದ ಮಾನವನ ಚಿಂತನ ಹಾಗೂ ಕಾರ್ಯಚಟುವಟಿಕೆಗಳು ಸೇರಿಸಲ್ಪಟ್ಟವು. ನಾಗರಿಕತೆಗಳ ಕ್ರಮಾನುಗತಿಯನ್ನು ಚಿತ್ರಿಸುವ ಹಾಗೂ ಪ್ರಾಚೀನ ಇತಿಹಾಸವನ್ನು ತಿಳಿಯುವ ಹೊಸ ವಿಧಾನದ ಕಲ್ಪನೆಯು ಬೆಳಕಿಗೆ ಬಂದಿತು.

ಬ್ರಿಟಿಷ್ ಇತಿಹಾಸಕಾರ ಡೇವಿಡ್‌ಹ್ಯೂಂ (೧೭೧೧-೧೭೭೬) ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದರು. ಪ್ರಾಚೀನ ಘಟನೆಗಳನ್ನು ಅರಿಯಲು ಮತ್ತು ಅವುಗಳನ್ನು ಅರ್ಥೈಸುಲು ಹೊಸ ಬೌದ್ಧಿಕ ಸಾಧನೋಪಾಯಗಳನ್ನು ಉಪಯೋಗಿಸಿಕೊಂಡರು. ಮಾನವನನ್ನು ಅರಿಯಲು ವೈಜ್ಞಾನಿಕ ಮಾಧ್ಯಮವನ್ನು ಉಪಯೋಗಿಸಲು ನಿರ್ಧರಿಸಿದರು. ದಿ ಹಿಸ್ಟರಿ ಆಫ್ ಇಂಗ್ಲೆಂಡ್ ಅವರ ಮೇರು ಕೃತಿಯಾಗಿದೆ.

ವಾಲ್ಟೈರ್ (೧೬೯೪-೧೭೭೮) ಈ ಇತಿಹಾಸ ಚಿಂತನೆಯ ಹೊಸ ಪಂಥದ ಮುಖ್ಯಸ್ಥರಾಗಿದ್ದಾರೆ. ಅವರು ಈ ಪಂಥದ ಅತ್ಯುತ್ತಮ ಮತ್ತು ಹೆಚ್ಚು ವೈಲಕ್ಷಣ್ಯದ ನಿರೂಪಕರಾಗಿದ್ದಾರೆ. ಒಬ್ಬ ಕವಿಯಾಗಿ, ರಾಜಕೀಯ ಚಿಂತಕರಾಗಿ, ಇತಿಹಾಸಕಾರರಾಗಿ ಮತ್ತು ದಾರ್ಶನಿಕರಾಗಿ ಇತಿಹಾಸದಲ್ಲಿ ಮಿಂಚಿದ್ದಾರೆ. ಅವರು ತಮ್ಮ ವಿಮರ್ಶಾತ್ಮಕ ಸಾಮರ್ಥ್ಯ, ಮರ್ಮಭೇದಕ ಬುದ್ಧಿ ಚಾತುರ್ಯ ಮತ್ತು ಸಮೃದ್ಧ ಬರವಣಿಗೆಗೆ ಹೆಸರಾಗಿದ್ದರು. ಫ್ರಾನ್ಸ್‌ನ ಕುಲೀನವರು ಅಥವಾ ಶ್ರೀಮಂತರು ಮತ್ತು ಅಧಿಕಾರ ವರ್ಗದವರ ತೀವ್ರ ವಿಮರ್ಶಕರಾಗಿದ್ದರು. ನಿರಂಕುಶಾಧಿಪತ್ಯ ಹಾಗೂ ಪ್ರಜಾಪೀಡನೆಗಳನ್ನು ವಿರೋಧಿಸಿದ ಜನರ ಹತ್ಯೆ ಇವುಗಳನ್ನು ನೋಡಿ ದಿಗ್ಭ್ರಾಂತರಾದರು. ತಮ್ಮ ಬರವಣಿಗೆಗಳಲ್ಲಿ ಈ ಘೋರ ಕೃತ್ಯಗಳನ್ನು ಖಂಡಿಸಿದ್ದಾಗಿ ಅವರನ್ನು ಬ್ಯಾಸ್ಟಿಲ್ ಕಾರಾಗೃಹಕ್ಕೆ ಕಳುಹಿಸಲಾಯಿತು. ನಂತರ ಮೂರು ವರ್ಷಗಳ ಅವಧಿಗೆ ಅವರನ್ನು ಇಂಗ್ಲೆಂಡಿಗೆ ಗಡಿಪಾರು ಮಾಡಲಾಯಿತು. ಆದಾಗ್ಯೂ ಅವರು ತಮ್ಮ ನಿಲುವನ್ನು ಬದಲಿಸಲಿಲ್ಲ. ಅವರು ಫಿಲಸಾಫಿಕಲ್ ಡಿಕ್ಷನ್ನರಿ, ಯುಟೋಪಿಯಾ ಆಫ್ ಎಲ್ ಡೊರಾಡೊ, ದಿ ಎಸ್ಸೈ, ದಿ ಏಜ್ ಆಫ್ ಲೂಯಿ XIV, ಚಾರ್ಲ್ಸ್ XII, ಹಿಸ್ಟರಿ ಆಫ್ ರಷ್ಯಾ ಅಂಡರ್ ಪೀಟರ್ ದಿ ಗ್ರೇಟ್ ಗ್ರಂಥಗಳನ್ನು ರಚಿಸಿದ್ದಾರೆ.

ಫಿಲಾಸಾಫಿಕಲ್ ಡಿಕ್ಷನ್ನರಿಯಲ್ಲಿ ಈ ಜಗತ್ತು ಪ್ರಕೃತಿ ನಿಯಮಗಳಿಗೆ ಬದ್ಧವಾಗಿರುತ್ತದೆಂಬ ಸಿದ್ಧಾಂತವನ್ನು ರೂಪಿಸಿ, ಅನುಭವ ಹಾಗೂ ವಿವೇಚನೆಗಳು ಮಾನವರಿಗೆ ಇರುವ ಅವಲಂಬಿತವಾದ ಮಾರ್ಗದರ್ಶಿಗಳೆಂದು ತಿಳಿಸಿದ್ದಾರೆ. ತಮ್ಮ ಎಲ್‌ಡೊರಾಡೊ ಯುಟೋಪಿ ಯಾವನ್ನು ದಕ್ಷಿಣ ಅಮೆರಿಕಾದ ಒಂದು ಪ್ರದೇಶದಲ್ಲಿ ಗುರುತಿಸಿ, ಅಲ್ಲಿನ ಜನರು ವಿವೇಚನೆಯ ಅನುಜ್ಞೆಗಳಿಗೆ ಅನುಗುಣವಾಗಿ ದೇವರನ್ನು ಪೂಜಿಸುತ್ತಾರೆ. ಅವರ ಸಮಸ್ಯೆಗಳನ್ನು ವಿಜ್ಞಾನ ಮತ್ತು ತರ್ಕದಿಂದ ಪರಿಹರಿಸಿಕೊಳ್ಳುತ್ತಾರೆ ಮತ್ತು ಅವರು ಸ್ವಾತಂತ್ರ‍್ಯ ಮತ್ತು ಶಾಂತಿಯನ್ನು ಅನುಭೋಗಿಸುತ್ತಿರುವರೆಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸನ್ಯಾಸಿಗಳಿಲ್ಲ, ಮೊಕದ್ದಮೆಗಳಿಲ್ಲ ಮತ್ತು ಕಾರಾಗೃಹಗಳಿಲ್ಲ ಎಂದು ಹೇಳಿದ್ದಾರೆ. ಅವರ ದಿ ಎಸ್ಸೈ ಜಗತ್ತಿನ ಇತಿಹಾಸದ ರೂಪರೇಖೆಯನ್ನು ಒಳಗೊಂಡಿದ್ದು, ಮಾನವ ಚಟುವಟಿಕೆಗಳ ಎಲ್ಲ ಮುಖಗಳನ್ನು, ಅಂದರೆ, ಕಲೆ, ವಿಜ್ಞಾನ, ವಿದ್ಯಾಭ್ಯಾಸ, ನಡವಳಿ, ದೈನಂದಿನ ಜೀವನ ಮತ್ತು ತಂತ್ರಜ್ಞಾನಗಳನ್ನು ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ಅರಬ್ಬರು, ಭಾರತೀಯರು ಮತ್ತು ಚೀನಿಯರನ್ನು ಕುರಿತಾದ ವಿವರಣೆ ಇದೆ. ೧೫ನೆಯ ಶತಮಾನದ ಪೂರ್ವದ ಇತಿಹಾಸದ ಬಗ್ಗೆ ಖಚಿತವಾಗಿ ತಿಳಿದುಕೊಳ್ಳುವುದು ಸಾಧ್ಯವಿಲ್ಲವೆಂದು ಬಹಿರಂಗವಾಗಿ ಪ್ರಕಟಿಸಿದ್ದಾರೆ. ಪ್ರಾಚೀನ ಕಾಲದ ಇತಿಹಾಸದ ಬಗ್ಗೆ ಒಂದು ಹೊಸ ಭಾವ ಅವರಿಂದ ವ್ಯಕ್ತವಾಗಿದೆ.

ಜ್ಞಾನೋದಯ ಯುಗದ ಆದರ್ಶ ಸ್ವರೂಪದ ಇತಿಹಾಸಕಾರರೆಂದರೆ ಎಡ್ವರ್ಡ್ ಗಿಬ್ಬನ್ (೧೭೩೭-೧೭೯೪). ಪೂರ್ವ ಜಗತ್ತು ಮತ್ತು ನೂತನ ಜಗತ್ತುಗಳ ನಡುವೆ ಒಂದು ಭವ್ಯ ಸೇತುವೆಯನ್ನು ಅವರು ನಿರ್ಮಿಸಿದರು. ಆ ಕಾಲದಲ್ಲಿ ನಿರ್ಮಿತವಾದ ಎಲ್ಲ ಕಟ್ಟಡಗಳು ನಾಶಗೊಂಡರೂ ಈ ಸೇತುವೆ ನೇರವಾಗಿ ನಿಂತಿದೆ ಎಂದು ಗೂಚ್ ಅಭಿಪ್ರಾಯಪಟ್ಟಿದ್ದಾರೆ. ಗಿಬ್ಬನೇ ಅವರು ಜ್ಞಾನೋದಯ ಯುಗದ ಸಂಸ್ಕೃತಿ ಮತ್ತು ನಂಬಿಕೆಗಳನ್ನು ತಮ್ಮಲ್ಲಿ ಸಂಕ್ಷೇಪಗೊಳಿಸಿದ್ದರು. ಈ ಇಂಗ್ಲೀಷ್ ಇತಿಹಾಸಕಾರರ ಮೇಲೆ ಕ್ಲಾಸಿಕಲ್ ಸಾಹಿತ್ಯದ ಪ್ರಭಾವ ಗಾಢವಾಗಿತ್ತು. ಅವರ ಡಿಕ್ಲೈನ್‌ ಆಂಡ್ ಫಾಲ್‌ ಆಫ್ ದಿ ರೋಮನ್ ಎಂಪೈರ್ ಪುನರುಜ್ಜೀವನ ಯುಗದ ನಂತರದ ಏಕಮಾತ್ರ ಪ್ರಸಿದ್ಧ ಇತಿಹಾಸ ಕೃತಿಯಾಗಿದೆ. ತನ್ನ ಸ್ವರೂಪ ಹಾಗೂ ನಿಜವಾದ ಭಾವದ ದೃಷ್ಟಿಯಿಂದ ಒಂದು ಕ್ಲಾಸಿಕ್ ಕೃತಿಯಾಗಿ ಶಾಶ್ವತವಾದ ಶ್ರೇಣಿಯನ್ನು ಪಡೆದಿದೆ. ಅವರ ಯಥಾದೃಷ್ಟ ರೂಪಣ ೧೪ನೆಯ ಶತಮಾನಗಳವರೆಗೆ ವಿಸ್ತರಿಸಿತ್ತು. ಗಿಬ್ಬನ್ ಅವರಿಗಿಂತ ಹಿಂದೆ ಯಾವ ಇತಿಹಾಸಕಾರರೂ ನೈರಂತರ್ಯದ ಕಲ್ಪನೆಯನ್ನು ಹೊಂದಿರಲಿಲ್ಲ. ಈ ಹೊಸ ಇತಿಹಾಸವು ತನ್ನ ಪರಾಕಾಷ್ಠೆಯನ್ನು ಗಿಬ್ಬನ್ ಅವರಲ್ಲಿ ಕಂಡಿತು.

ಎಡ್ವರ್ಡ್ ಗಿಬ್ಬನ್‌ಅವರು ೧೭೩೭ ರಲ್ಲಿ ಇಂಗ್ಲಿಷ್ ಕುಟುಂಬದಲ್ಲಿ ಜನಿಸಿದರು. ಅವರು ಹಿರಿಯರೂ ಹಾಗೂ ಉಳಿದ ಒಂದೇ ಮಗುವು ಆಗಿದ್ದರು. ಬಾಲ್ಯದಿಂದಲೇ ರೋಗಪೀಡಿತರಾದ ಅವರು ತಮ್ಮ ಚಿಕ್ಕಮ್ಮನ ಆರೈಕೆಯಿಂದ ಬದುಕಿ ಉಳಿದರು. ೧೭೫೨ ರಲ್ಲಿ ಮಾಗ್ಡಲೆನ್ ಕಾಲೇಜಿನಿಂದ (ಆರ್ಕ್ಸ್‌ಫರ್ಡ್) ಮೆಟ್ರಿಕ್ಯೂಲೇಶನ್‌ನಲ್ಲಿ ತೇರ್ಗಡೆ ಹೊಂದಿದ ಮೇಲೆ ಕಾಲೇಜ್‌ಬಗ್ಗೆ ನಿರುತ್ಸಾಹಗೊಂಡು ೧೪ ತಿಂಗಳುಗಳನ್ನು ವ್ಯರ್ತಗೊಳಿಸದರು. ನಂತರ ಸ್ವಿಟ್ಜರ್‌ಲೆಂಡಿನ ಲುಸಾನಗೆ ತೆರಳಿ ಪೆವಿಲಿಯಾರ್ಡ್‌ಅವರಿಂದ ಶಿಕ್ಷಣ ಪಡೆದರು. ಇಲ್ಲಿ ಅವರ ಮಾನಸಿಕ ಬೆಳವಣಿಗೆಯಾಯಿತಲ್ಲದೆ ಶಿಕ್ಷಣವು ದೃಢಗೊಂಡಿತು. ಅಲ್ಲಿದ್ದ ಐದು ವರ್ಷಗಳಲ್ಲಿ ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳನ್ನು ಕಲಿತರು. ಈ ವರ್ಷಗಳು ಗಿಬ್ಬನ್ ಅವರ ಜೀವನದಲ್ಲಿ ಎಣಿಸಲಾಗದ ಪ್ರಾಮುಖ್ಯತೆಯನ್ನು ಹೊಂದಿದ್ದವು. ಸ್ವತಂತ್ರ ಅಧ್ಯಯನದಲ್ಲಿ ನಂಬಿಕೆಯಿಟ್ಟಿದ್ದ ಅವರು ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯಗಳನ್ನು ದ್ವೇಷಿಸುತ್ತಿದ್ದರು. ಶಾಸ್ತ್ರಾಧಾರದ ಧರ್ಮದಲ್ಲಿ ಆಸಕ್ತಿ ಹೊಂದಿರದ ಅವರು ತಮ್ಮ ಪ್ರಾಟಸ್ಟೆಂಟ್ ಧರ್ಮದಿಂದ ಕ್ಯಾಥೊಲಿಕ್ ಮತ್ತು ಪುನಃ ಪ್ರಾಟಸ್ಟೆಂಟ್ ಧರ್ಮಕ್ಕೆ ಮತಾಂತರಗೊಂಡರು.

ಯೌವನದಲ್ಲಿ ಅತ್ಯಾಸೆಯ ಓದುಗರಾಗಿದ್ದ ಅವರು ಪ್ರಧಾನವಾಗಿ ಕ್ಲಾಸಿಕಲ್ ಮತ್ತು ಐತಿಹಾಸಿಕ ಸಾಹಿತ್ಯಗಳಿಗೆ ಒಲವು ತೋರುತ್ತಿದ್ದರು. ಲುಸಾವೆಯಲ್ಲಿದ್ದಾಗ ಹೆಚ್ಚು ಶಿಸ್ತು ಮತ್ತು ಶ್ರದ್ಧೆಯಿಂದ ವ್ಯಾಪಕವಾಗಿ ತಮ್ಮ ಓದನ್ನು ಮುಂದುವರಿಸಿದರು. ಲಾಕ್, ೧೭ ಹಾಗೂ ೧೮ನೆಯ ಶತಮಾನದ ಇತಿಹಾಸಕಾರರು ಮತ್ತು ನ್ಯಾಯದರ್ಶಿಗಳ ತರ್ಕ ಹಾಗೂ ದರ್ಶನ, ಲ್ಯಾಟಿನ್ ಕ್ಲಾಸಿಕ್ಸ್ ಮತ್ತು ಸಿಸಿರೊ ಮೊದಲಾದವರ ಕೃತಿಗಳನ್ನು ಅಧ್ಯಯನ ಮಾಡಿದರು. ಇದರ ನಂತರ ಅವರೇ ತಿಳಿಸಿರುವಂತೆ

ನಾನು ಭಾಷೆಯ ಸೌಂದರ್ಯವನ್ನು ಸವಿದಿದ್ದೇನೆ. ನಾನು ಸ್ವಾತಂತ್ರ‍್ಯ ಚೇತನವನ್ನು ಉಸಿರಿಸಿದ್ದೇನೆ ಮತ್ತು ಅವರ ಬೋಧನಗಳು ಮತ್ತು ಉದಾಹರಣೆಗಳಿಂದ ಸಾರ್ವಜನಿಕ ಹಾಗೂ ಖಾಸಗಿ ಮಾನವನ ಭಾವವನ್ನು ನಾನು ಅಂತರ್ಗತ ಮಾಡಿಕೊಂಡಿದ್ದೇನೆ.

ಸೆವೆನ್ ಈಯರ್ಸ್‌ ವಾರ್ ಕಾಲದಲ್ಲಿ ಸೈನ್ಯದಳಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ಯುದ್ಧವನ್ನೇ ನೋಡಲಿಲ್ಲ. ತನ್ನ ಹೆಚ್ಚಿನ ವೇಳೆಯನ್ನು ಕ್ಲಾಸಿಕ್ಸ್‌ಮತ್ತು ಇತಿಹಾಸವನ್ನು ಓದುವುದರಲ್ಲಿ ಸವೆಸಿದರು. ಆದರೆ ಈ ಸೈನ್ಯದಲ್ಲಿನ ಸೇವೆ ಪಂಕ್ತಿ ವ್ಯೂಹ ಮತ್ತು ಪದಾತಿಗಳು ಹಾಗೂ ಅಶ್ವ ಸೈನ್ಯದ ದಳಗಳ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಪಡೆಯಲು ಸಾಧ್ಯವಾಯಿತು. ೧೭೭೪ ರಲ್ಲಿ ಸದಸ್ಯರಾಗಿ ಪಾರ್ಟಿಮೆಂಟನ್ನು ಪ್ರವೇಶಿಸಿದ ಅವರು ಬರ್ಕ್‌, ಶೆರಿಡನ್ ಮತ್ತು ಫಾಕ್ಸ್ ಅವರ ವಾಗ್ಮಿತೆಯನ್ನು ಕೇಳಿದರೇ ವಿನಃ ತಾವು ನಿರರ್ಗಳವಾಗಿ ಭಾಷಣ ಮಾಡುವ ಕಲೆಯನ್ನು ರೂಢಿಸಿಕೊಳ್ಳಲಿಲ್ಲ. ಆದರೆ ನಾರ್ತ್ ಸರ್ಕಾರಕ್ಕೆ ಅವರು ನೀಡುತ್ತಿದ್ದ ನಿಶ್ಯಬ್ಧವಾದ ಬೆಂಬಲ ಹಾಗೂ ಫ್ರಾನ್ಸ್‌ಬಗ್ಗೆ ಬ್ರಿಟಿಷರ ನಡಾವಳಿಯನ್ನು ಎತ್ತಿ ಹಿಡಿದು ಫ್ರೆಂಚ್ ಭಾಷೆಯಲ್ಲಿ ರಚಿಸಿದ ಲಘು ಪುಸ್ತಕ ಬಹುಮಾನವನ್ನು ತಂದಿತು. ಅವರು ಕಮೀಷನರ್ ಆಫ್ ಟ್ರೇಡ್ ಆಂಡ್ ಪ್ಲಾಂಟೇಷನ್‌ಆಗಿ ನೇಮಕಗೊಂಡುದೇ ಆ ಬಹುಮಾನ. ನಾರ್ತ ಅವರು ಪಾರ್ಲಿಮೆಂಟಿನಲ್ಲಿ ತಮ್ಮ ಬಹುಮತವನ್ನು ಕಳೆದುಕೊಂಡಾಗ ಗಿಬ್ಬನ್ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಉಳಿದ ಕಾಲವನ್ನು ಬರವಣಿಗೆಗೆ ವಿನಿಯೋಗಿಸಿದರು.

ಮೊದಲಿಗೆ ಯಾವುದಾದರೂ ಒಂದು ರೀತಿಯ ಇತಿಹಾಸವನ್ನು ಬರೆಯಬೇಕೆಂದು ಯೋಚಿಸಿದ ಅವರು ಹತ್ತನೆಯ ಚಿರಲ್ಸ್ ಒಂದನೆಯ ರಿಚರ್ಡ್‌ನ ಧರ್ಮಯುದ್ಧ, ಸ್ವಿಸ್ ಜನರ ಸ್ವಾತಂತ್ರ‍್ಯ ಇತಿಹಾಸ ಮುಂತಾದ ವಿಷಗಳ ಬಗ್ಗೆ ಆಲೋಚಿಸಿದರು. ಈ ವಿಷಯಗಳನ್ನು ಕುರಿತಾಗಿ ಆಧಾರಗಳ ಕೊರತೆ ಅಥವಾ ಅವು ಆಸಕ್ತಿ ಕೆರಳಿಸುವ ವಿಷಯಗಳಲ್ಲವೆಂದೂ, ಅವುಗಳನ್ನು ಕೈ ಬಿಟ್ಟರು. ತಮ್ಮ ಬರವಣಿಗೆಗೆ ಫ್ರೆಂಚ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಆಲೋಚಿಸಿದರು. ಆದರೆ ಹ್ಯೂಂ ಅವರ ಸಲಹೆಯ ಮೇರೆಗೆ ಇಂಗ್ಲೀಷ್‌ನಲ್ಲಿ ಬರೆಯಲು ನಿರ್ಧರಿಸಿದರು. ಆದಾಗ್ಯೂ ಅವರ ಮನಸ್ಸೇ ಅವರಿಗೆ ಅರ್ಥವಾಗಿರಲಿಲ್ಲ. ಅವರು ೧೭೬೪ರಲ್ಲಿ ರೋಮ್‌ಗೆ ಭೇಟಿಯಿತ್ತರು. ಪ್ರೌಢ ಪ್ರಾಚೀನ ಶೈಲಿಯಲ್ಲಿ ತರಬೇತಿ ಹೊಂದಿದ ಅವರಿಗೆ ಆ ನಿತ್ಯ ನಗರದ ನೋಟವು ಮರೆಯಲಾಗದ ಅನುಭವವನ್ನುಂಟು ಮಾಡಿತು. ರೋಮ್ ನಗರವು ಅವರ ಜೀವಾತ್ಮವಾಯಿತು. ರೋಮುಲಸ್ ನಿಂತಿದ್ದ, ಟುಲ್ಲಿಯು ಭಾಷಣ ಮಾಡಿದ ಹಾಗೂ ಸೀಸರ್ ಮರಣ ಹೊಂದಿದ ಸ್ಮರಣಾರ್ಥವಾದ ಜಾಗಗಳಲ್ಲಿ ಓಡಾಡಿದರು. ಅಕ್ಟೋಬರ್ ೧೫, ೧೭೬೪ ರಲ್ಲಿ ಕ್ಯಾಪಿಟಲೇನ ಅವಶೇಷಗಳ ಮೇಲೆ ಕುಳಿತು ಆಲೊಚಿಸುತ್ತಿದ್ದಾಗ ಆ ನಗರದ ಅವನತಿ ಮತ್ತು ನಾಶದ ಮೇಲೆ ಬರೆಯಬೇಕೆಂಬ ಭಾವನೆ ಮೊಟ್ಟ ಮೊದಲಿಗೆ ಅವರ ಮನಸ್ಸಿಗೆ ಹೊಳೆಯಿತು. ಈ ವಿಷಯದ ಬಗ್ಗೆ ಸುಮಾರು ನಾಲ್ಕು ವರ್ಷಗಳು ಯೋಚಿಸಿ ೧೭೬೪ ರಲ್ಲಿ ಬರೆಯಲು ನಿರ್ಧರಿಸಿದರು. ಈ ನಗರವು ಹೇಗೆ ಸಾಮ್ರಾಜ್ಯವಾಗಿ ಬೆಳೆಯಿತು ಎಂಬ ವಿಚಾರ ಅವರ ಮನಸ್ಸನ್ನು ನಾಟಿತು. ಅವರ ರಚನಾ ಕಾರ್ಯ ಮುಂದುವರೆದಂತೆ ತಾವು ಒಂದು ಸುಪ್ರಸಿದ್ಧ ವಿಷಯವನ್ನು ಆಯ್ಕೆ ಮಾಡಿಕೊಂಡ ಸಮಾಧಾನವುಂಟಾಯಿತು.