೩. ಭಾರತೀಯ ಚರಿತ್ರೆ ಲೇಖನ ಪರಂಪರೆ

ಭಾರತೀಯ ಚರಿತ್ರೆ ಲೇಖನ ಪರಂಪರೆಯನ್ನು ಕುರಿತು ಮಾತನಾಡುವಾಗ ಎದುರಾಗುವ ಮೊದಲ ಪ್ರಶ್ನೆ ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆ ಇತ್ತೇ ಅಥವಾ ಇರಲಿಲ್ಲವೇ ಎಂಬುದು. ಭಾರತೀಯ ಚಾರಿತ್ರಿಕ ಪರಂಪರೆಯನ್ನು ಕುರಿತು ಬಂದಿರುವ ಎಲ್ಲ ಕೃತಿಗಳಲ್ಲೂ ಈ ವಿಷಯದ ಪ್ರಸ್ತಾಪಗಳಿವೆ. ಹೀಗಾಗಿ ಈ ಪ್ರಶ್ನೆಯನ್ನು ಪ್ರಸ್ತಾಪಿಸದೆ ದಾಟಿ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕೃತಿಗಳು ಭಾರತೀಯರಿಗೆ ಚರಿತ್ರೆಯನ್ನು ದಾಖಲಿಸುವ ಪರಂಪರೆ ಇರಲಿಲ್ಲವೆಂದೇ ಹೇಳುತ್ತವೆ. ಆದರೆ ಯಾಕೆ ಹೀಗೆ ಎಂದು ವಿಶ್ಲೇಷಿಸುವುದಿಲ್ಲ. ತತ್ವಜ್ಞಾನಿಗಳು, ದಾರ್ಶನಿಕರು, ವೈಜ್ಞಾನಿಕ ಚಿಂತನೆಯ ಹರಿಕಾರರು ಹೀಗೆ ಹಲವು ಬಗೆಯಲ್ಲಿ ಭಾರತದ ಬೌದ್ಧಿಕ ವಲಯ ಬೆಳೆಯುತ್ತಲೇ ಬಂದಿದೆ. ಆದರೆ ಚರಿತ್ರೆಯ ದೃಷ್ಟಿಕೋನವನ್ನು ಯಾಕೆ ಕಟ್ಟಿಕೊಡಲಿಲ್ಲವೆನ್ನುವುದು ಒಂದು ಪ್ರಶ್ನೆ ಮತ್ತು ವಿಸ್ಮಯವಾಗಿಯೇ ಉಳಿದಿದೆ. ಬಹುಶಃ ಭಾರತೀಯರ ಜೀವನದೃಷ್ಟಿಯೇ ಇದಕ್ಕೆ ಕಾರಣವಾದಂತೆ ತೋರುತ್ತದೆ. ಕಾಲಾತೀತ ದೃಷ್ಟಿಕೋನ ಭಾರತೀಯರನ್ನು ಬಿಡದಂತೆ ಕಾಡಿದೆ. ಅಲೌಕಿಕತೆಯ ಪ್ರಭಾವವು ಭಾರತೀಯರ ಮೇಲೆ ಬಹಳಷ್ಟು ಇರುವುದರಿಂದ ಹೀಗಾಗಿರಬಹುದು ಎನ್ನಬಹುದು.

ಇನ್ನೊಂದು ಕುತೂಹಲದ ಸಂಗತಿಯೆಂದರೆ ಭಾರತೀಯರು ಪುರಾಣಪ್ರಿಯರಾಗಿದ್ದದ್ದು. ವಾಸ್ತವವನ್ನೂ ಪುರಾಣೀಕರಣಗೊಳಿಸುವ ಮನೋಧರ್ಮದ ಕಾರಣದಿಂದಲೇ ಪಶ್ಚಿಮದವರಂತೆ ಚರಿತ್ರೆಯನ್ನು ನೋಡುವ ಕ್ರಮ ಇರಲಿಲ್ಲ. ಇವರು ಬದುಕಿದ್ದು, ಬದುಕನ್ನು ಕಟ್ಟಿಕೊಂಡ ಬಗೆಯನ್ನು ದಾಖಲಿಸಿದ್ದು ಪ್ರಮುಖವಾಗಿ ಮೌಖಿಕ ಕ್ರಮದಲ್ಲಿ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಧಾರ್ಮಿಕ ವಿಚಾರಗಳಿಗೆ, ಕಥನಗಳಿಗೆ ಚರಿತ್ರೆಯನ್ನು ಕೃತ, ತ್ರೇತ, ದ್ವಾಪರ ಹಾಗೂ ಕಲಿಯುಗಗಳನ್ನು ಯುಗಗಳ ಪರಿಕಲ್ಪನೆಯಲ್ಲಿ ಅರ್ಥೈಸಿಕೊಂಡರು. ಪ್ರತಿ ಯುಗವೂ ವಿಭಿನ್ನ ಬಗೆಯ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಸಣ್ಣ ಸಣ್ಣ ಕ್ರಿಯೆಗಳಲ್ಲಿ ಅನಾವರಣಗೊಳ್ಳುವ, ತೆರೆದುಕೊಳ್ಳುವ ಬದುಕನ್ನು ದಾಖಲಿಸಬೇಕೆಂಬ ಹಂಬಲ ಅದಕ್ಕೆ ಬಾರದಿದ್ದುದನ್ನು ಗಮನಿಸಬಹುದು. ಆದರೆ ಅಕ್ಷರ ಪ್ರಪಂಚದಿಂದ ಹೊರಗುಳಿದ ಸಮುದಾಯಗಳು ತಮ್ಮ ಬದುಕನ್ನು ದಾಖಲಿಸಿಕೊಂಡಿದ್ದು ತಮ್ಮ ಮೌಖಿಕ ಪರಂಪರೆಯಲ್ಲಿ. ದೊಡ್ಡ ಪ್ರಮಾಣದಲ್ಲಿ ಸಂಚಿತಗೊಂಡ ಈ ಪರಂಪರೆಯ ಆಳ ತುಂಬಾ ವಿಸ್ತಾರವಾದದ್ದು. ವಿಭಿನ್ನ ಕಾಲಘಟ್ಟಗಳಲ್ಲಿ ಚರಿತ್ರೆಗೆ ಮುಖಾಮುಖಿಯಾಗಿಯೇ ರೂಪುಗೊಂಡ ಪ್ರಕಾರವಿದು. ಅದರಲ್ಲಿ ವಾಸ್ತವದ ನೆಲೆಗಳಿವೆ. ಆದರೆ ಅವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಈಗಿರುವ ಚರಿತ್ರೆಯ ಸಂಶೋಧನಾ ವಿಧಾನದಿಂದ ಸಾಧ್ಯವಾಗುವುದಿಲ್ಲ. ಬೇರೆ ಬಗೆಯ ಸಂಶೋಧನಾ ವಿಧಾನಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಏಕೆಂದರೆ ಸಂಶೋಧನಾ ವ್ಯಾಪ್ತಿಗೆ ಒಳಪಟ್ಟ ಕಾಲ, ತುಂಬಾ ಹಿಂದೆ ಹೋಗದಂತೆ ಅದನ್ನು ಅರ್ಥೈಸಿಕೊಳ್ಳಬೇಕಾದ ವಿಧಾನ ಅತ್ಯಾಧುನಿಕವಾಗಿರಬೇಕಾಗುತ್ತದೆ. ಪ್ರಾಚೀನ ಭಾರತದ ಚರಿತ್ರೆಯನ್ನು ಅರ್ಥೈಸಿಕೊಳ್ಳಲು ಬೇಕಾದ ಸಂಶೋಧನಾ ಮಾರ್ಗವನ್ನು ಇನ್ನೂ ಕಟ್ಟಿಕೊಳ್ಳಬೇಕಾಗಿದೆ. ಅಂದರೆ ಭಾರತದ ಚರಿತ್ರೆಗೆ ಸಂಬಂಧಿಸಿದಂತೆ ದಾಖಲೆಗಳಿಲ್ಲವೆಂದಲ್ಲ. ಇಲ್ಲಿ ವಿಪುಲ ದಾಖಲೆಗಳು, ಗ್ರಂಥಗಳಿವೆ, ಆದರೆ ಅವುಗಳಲ್ಲಿ ಪಾಶ್ಚಾತ್ಯರು ಕಟ್ಟಿಕೊಟ್ಟ ಚರಿತ್ರೆಗೆ ಅಂಟಿಕೊಂಡ ದೃಷ್ಟಿಕೋನಗಳಿಲ್ಲ ವೆಂಬುದೇ ಮುಖ್ಯ ಪ್ರಶ್ನೆ.

ಪ್ರಾಚೀನ ಕಾಲದಲ್ಲಿ ಗ್ರಂಥಗಳನ್ನು ಸಂಸ್ಕೃತ, ಪಾಲಿ, ತಮಿಳು ಮತ್ತು ಕನ್ನಡ ಮುಂತಾದ ಭಾಷೆಗಳಲ್ಲಿ ರಚಿಸಿದರು. ವಿಪುಲವಾದ ಗ್ರಂಥಗಳು ರಚನೆಗೊಂಡವು. ವಿದೇಶಿ ಯಾತ್ರಿಕರಾದ ಹ್ಯೂಯನ್‌ತ್ಸಾಂಗ್, ಆಲ್ ಬಿರೂನಿ ಮುಂತಾದವರು ಪತ್ರಾಗಾರಗಳಿದ್ದವು ಎಂಬುದನ್ನು ತಿಳಿಸುತ್ತಾರೆ. ಜಗತ್ತಿನ ಯಾವುದೇ ನಾಗರಿಕತೆಯಲ್ಲೂ ಇಷ್ಟೊಂದು ಪ್ರಮಾಣದ ಗ್ರಂಥಗಳು ರಚನೆಯಾಗಲಿಲ್ಲ. ಆದರೆ ಅವುಗಳನ್ನು ಚರಿತ್ರೆಯ ಗ್ರಂಥಗಳೆಂದು ಹೇಳಲಾಗುವುದಿಲ್ಲ. ಕಲ್ಹಣದ ರಾಜತರಂಗಿಣಿಯೇ ನಾವು ಕಾಣುವ ಪ್ರಮುಖ ಚರಿತ್ರೆಯ ಗ್ರಂಥ. ಈ ಗ್ರಂಥವು ಕಾಶ್ಮೀರಿ ರಾಜರ ವಂಶಾವಳಿಯನ್ನು ಕಟ್ಟಿಕೊಡುತ್ತದೆ. ಶಾಸನಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಈ ಗ್ರಂಥವನ್ನು ರಚಿಸಿದ್ದಾಗಿ ಕಲ್ಹಣ ಹೇಳಿಕೊಳ್ಳುತ್ತಾನೆ.

ಭಾರತದ ಚಾರಿತ್ರಿಕ ಪರಂಪರೆಯಲ್ಲಿ ಪ್ರಧಾನವಾದ ಒಂದು ಗುಣವಿದೆ. ಅದೆಂದರೆ ವಂಶಾವಳಿಗಳನ್ನು ದಾಖಲಿಸುವುದು. ಇದು ಪ್ರಮುಖವಾಗಿ ರಾಜವಂಶಾವಳಿಗಳಿಗೆ ಸಂಬಂಧಿಸಿದುದು. ವಂಶಚರಿತ್ರೆ, ಇತಿವೃತ್ತಗಳ (ಘಟನೆ) ಬಗೆಗಿನ ಆಸಕ್ತಿಗಳು ಪ್ರಾಚೀನ ಭಾರತದ ಚರಿತ್ರೆ ಪರಂಪರೆಯಲ್ಲಿ ಪ್ರಧಾನ ಅಂಶಗಳಾಗಿವೆ. ಉತ್ತರ ವೈದಿಕ ಕಾಲದಲ್ಲಿ (ಕ್ರಿ.ಪೂ. ೧೦೦೦-೬೦೦) ಸುತ ಅಥವಾ ಮಗದರೆಂದು ಕರೆಯಲ್ಪಡುತ್ತಿದ್ದ ಆಸ್ಥಾನಿಕರಿದ್ದರು. ಅವರ ಮುಖ್ಯ ಕರ್ತವ್ಯವೇ ರಾರ ಮತ್ತು ಪ್ರಮುಖ ಪುರೋಹಿತರ ವಂಶಾವಳಿಗಳನ್ನು ರಚಿಸುವುದು. ಕ್ರಿ.ಶ. ೫ನೆಯ ಶತಮಾನದ ಹೊತ್ತಿಗೆ ಇದು ಒಂದು ದೊಡ್ಡ ಪರಂಪರೆಯಾಗಿಯೇ ಬೆಳೆಯಿತು. ರಾಜವ್ಯವಸ್ಥೆಯ ಭಾಗವಾಗಿ ಪತ್ರಾಗಾರಗಳು ಬೆಳೆಯತೊಡಗಿದವು. ವಿದೇಶಿ ಯಾತ್ರಿಕರಾದ ಹ್ಯೂಯನ್‌ತ್ಸಾಂಗ್‌ಮತ್ತು ಆಲ್‌ಬರೋನಿಯವರು ಪತ್ರಾಗಾರಗಳು ಅಸ್ತಿತ್ವದಲ್ಲಿ ಇದ್ದವು ಎಂಬುದನ್ನು ದೃಢೀಕರಿಸುತ್ತಾರೆ. ಕೌಟಿಲ್ಯನ ಅರ್ಥಶಾಸ್ತ್ರ ಈ ಬಗೆಯ ಪತ್ರಾಗಾರಗಳನ್ನು ಪಟ್ಟಿ ಮಾಡುತ್ತದೆ.

ಮೌಖಿಕ ಸಂಪ್ರದಾಯವು ಚರಿತ್ರೆಯನ್ನು ಶ್ರೀಮಂತಗೊಳಿಸಿದೆ. ಇತಿಹಾಸ ಮತ್ತು ಪುರಾಣದ ಪರಿಕಲ್ಪನೆಗಳು ಮೊದಲಬಾರಿಗೆ ಅಥವರ್ಣ ವೇದದಲ್ಲಿ ಬರುತ್ತವೆ. ಅನಂತರದಲ್ಲಿ ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ತುಗಳಲ್ಲಿ ಈ ಕಲ್ಪನೆಗಳು ಅಂತರ್ಗತ ಗೊಂಡಿವೆ. ಪುರಾಣಗಳಲ್ಲಿ ವಿಶ್ವದ ಬಗೆಗಿನ ಕಲ್ಪನೆಗಳು ಅನಾವರಣಗೊಳ್ಳುತ್ತವೆ. ವಿಶ್ವವು ವಿಕಾಸಗೊಂಡ ಬಗೆ, ಯುಗಗಳಲ್ಲಿ ವಿಭಜನೆಗೊಳ್ಳುವುದು, ದೇವರುಗಳ ಮತ್ತು ಋಷಿಗಳ ವಂಶಾವಳಿಯ ಕಥನಗಳು ಮುಂತಾದವು ಪುರಾಣಗಳಲ್ಲಿ ಬರುತ್ತವೆ. ಅನಂತರದಲ್ಲಿ ಪುರಾಣಗಳು ವೈದಿಕ ಧರ್ಮದ ಪುನರುತ್ಥಾನದ ಪರಿಕರಗಳಾಗಿ, ಸಂಕೇತಗಳಾಗಿ ಮತ್ತೆ ಮತ್ತೆ ಬಳಕೆಗೊಂಡಿವೆ. ಪುರಾಣಗಳನ್ನು ಚರಿತ್ರೀಕರಿಸುವ ಪ್ರಯತ್ನವನ್ನು ಎಪ್‌.ಇ. ಪರ್ರ‍್ಲೀ‍ಟಕ್ ಎನ್ನುವ ವಿದ್ವಾಂಸ ಮಾಡಿದ್ದಾನೆ. ಇತಿಹಾಸ ಎನ್ನುವ ಪರಿಕಲ್ಪನೆಗಳು ಹುಟ್ಟಿಕೊಂಡಿದ್ದರೂ ಇಂದಿನ ಅರ್ಥದಲ್ಲಿ ಇತಿಹಾಸ ಎನ್ನುವ ಬಗೆ ಭಾರತದಲ್ಲಿ ರೂಪುಗೊಳ್ಳಲಿಲ್ಲ. ಆಖ್ಯಾನ ಅಥವಾ ಚರಿತ್ರೆಯ ಕಥನ ಎಂಬುದು ಕೂಡ ಪರಂಪರೆಯ ಭಾಗವಾಗಿತ್ತು.

ಪುರಾಣಗಳಲ್ಲಿ ವಂಶಗಳ ಕುರಿತ ವಿವರಗಳು ಬರುತ್ತವೆ. ಭವಿಷ್ಯವು ಕಲಿಯುಗದ ಬಗ್ಗೆ ತಿಳಿಸುವ ಮೊದಲ ಪುರಾಣವಾಗಿದೆ. ವಂಶಾವಳಿಗಳನ್ನು ಕಟ್ಟಿಕೊಡುವ ಇತರ ಪ್ರಮುಖ ಪುರಾಣಗಳೆಂದರೆ ವಾಯು, ಬ್ರಹ್ಮನಂದ, ಬ್ರಹ್ಮ, ಹರಿವಂಶ, ಮತ್ರ‍್ಯಕ ಮತ್ತು ವಿಷ್ಣು. ಶಿಶುನಾಗರು, ನಂದರು, ಮೌರ‍್ಯರು, ಶುಂಗರು, ಕಣ್ವರು ಮತ್ತು ಆಂಧ್ರರ ಬಗೆಗೆ ವಂಶಾವಳಿಗಳನ್ನು ಬರೆಯಲಾಗಿದೆ. ಮಹಾಭಾರತದ ಕಾಲದಿಂದ ಜೈನ ಮತ್ತು ಬೌದ್ಧ ಧರ್ಮಗಳ ಏಳಿಗೆಯ ಕಾಲದವರೆಗಿನ ಚರಿತ್ರೆಯನ್ನು ವಿಶೇಷವಾಗಿ ರಾಜಕೀಯ ಚರಿತ್ರೆಯನ್ನು ಕಟ್ಟಲು ಇವು ತುಂಬಾ ಅಮೂಲ್ಯ ದಾಖಲೆಗಳಾಗಿವೆ. ಬೌದ್ಧ ಧರ್ಮಕ್ಕೆ ಸೇರಿದ ರಾಜವಂಶ, ದೀಪವಂಶ ಮತ್ತು ಮಹಾವಂಶ, ಜೈನಧರ್ಮದ ಹರಿವಂಶ, ವೈದಿಕ ಪರಂಪರೆಯ ರಘುವಂಶ, ಶಶಿವಂಶ ಮತ್ತು ಕಲ್ಹಣನ ರಾಜತರಂಗಿಣಿ ಮುಂತಾದವು ವಂಶಾವಳಿ ಪರಂಪರೆಯ ಪ್ರಮುಖ ಗ್ರಂಥಗಳು.

ಇದರ ಮುಂದುವರಿದ ಭಾಗವೇ ಕಾವ್ಯಾತ್ಮಕ ಜೀವನ ಚರಿತ್ರೆಗಳು. ಇವು ಮೂಲತಃ ಆಲಂಕಾರಿಕ ಪ್ರಧಾನ ಕಾವ್ಯಗಳು. ಚರಿತೆಗಳೆಂದೇ ಇವು ಪ್ರಸಿದ್ಧಿಯಾಗಿವೆ. ಅಶ್ವಘೋಷನ ಬುದ್ಧ ಚರಿತವೇ ಈ ಪ್ರಕಾರದ ಮೊದಲ ಕೃತಿ. ರಾಜರ ಆಸ್ಥಾನದ ಕವಿಗಳು ಈ ಬಗೆಯ ಕಾವ್ಯಾತ್ಮಕ ಆಲಂಕಾರಿಕ ಜೀವನ ಚರಿತ್ರೆಗಳ ಕಥನಗಳನ್ನು ಸೃಷ್ಟಿಸಿದ್ದಾರೆ. ಇತರೆ ಉದಾಹರಣೆಗಳೆಂದರೆ ಹರ್ಷಚರಿತ, ಗೌಡವಾಹ, ವಿಕ್ರಮಾಂಕದೇವ ಚರಿತ, ನನಸಾಹಸಾಂಕ ಚರಿತ, ಕುಮಾರಪಾಲ ಚರಿತ, ರಾಮಚರಿತ, ಸೋಮಪಾಲ ವಿಲಾಸ ಮುಂತಾದವು. ಬಾಣಭಟ್ಟನ ಹರ್ಷಚರಿತೆಯನ್ನು ಮೊದಲ ಚಾರಿತ್ರಿಕ ಕೃತಿಯೆಂದು ಭಾವಿಸಲಾಗಿದೆ. ಢಾಣೇಶ್ವರ ಮತ್ತು ಕನೌಜಿನ ಹರ್ಷವರ್ಧನನ ಪೂರ್ಣವದ ಜೀವನಚರಿತ್ರೆ. ಈ ಕೃತಿಯನ್ನು ಕ್ರಿ.ಶ. ೭ನೆಯ ಶತಮಾನದ ಆದಿ ಭಾಗದಲ್ಲಿ ರಚಿಸಲಾಗಿದೆ. ಈ ಕೃತಿಯ ವಿಶೇಷವೆಂದರೆ ಭಾಗಶಃ ಇದು ಬಾಣನ ಆತ್ಮಚರಿತ್ರೆ ಮತ್ತು ಭಾಗಶಃ ಹರ್ಷನ ಜೀವನ ಚರಿತ್ರೆ. ಹರ್ಷನ ಮೊದಲ ವರ್ಷದ ಆಡಳಿತದ ಬಗ್ಗೆ ಇದರಲ್ಲಿ ವಿವರಗಳು ದೊರೆಯುತ್ತವೆ. ಜೊತೆಗೆ ಹರ್ಷನ ಹಿಂದಿನ ತಲೆಮಾರುಗಳ ಬಗ್ಗೆ, ಹರ್ಷನ ತಂಗಿ ರಾಜ್ಯ ಶ್ರೀಯನ್ನು ಗೃಹವರ್ಮನಿಗೆ ಮದುವೆ ಮಾಡಿಕೊಟ್ಟ ಬಗ್ಗೆ ವಿವರಗಳು ದೊರೆಯುತ್ತವೆ. ಹರ್ಷವರ್ಧನನ ತಂದೆ ಪ್ರಭಾಕರವರ್ಧನನ ಸಾವಿನ ಘಟನೆ ದಾಖಲಾಗಿದೆ. ಗೌಡದೇಶದ ಶಶಾಂಕನಿಂದ ರಾಜ್ಯವರ್ಧನನು ಹತ್ಯೆಯಾದದ್ದನ್ನು ಈ ಕೃತಿ ತಿಳಿಸುತ್ತದೆ. ಈ ಕೃತಿಯು ಹರ್ಷನ ಕಾಲದ ಪ್ರಮುಖ ರಾಜಕೀಯ ಘಟನೆಗಳನ್ನು ಗದ್ಯಾತ್ಮಕ ಮತ್ತು ಕಾವ್ಯಾತ್ಮಕ ಕ್ರಮಗಳಲ್ಲಿ ಅನಾವರಣಗೊಳಿಸುತ್ತದೆ. ಎಂದರೆ ಈ ಕೃತಿಯಲ್ಲಿ ಚರಿತ್ರೆಯ ಚರಿತ್ರೆಯ ಗುಣಗಳಿಗಿಂತ ಸಾಹಿತ್ಯಕ ಗುಣಗಳು ಪ್ರಧಾನವಾಗಿವೆ. ಹೀಗಿದ್ದರೂ ಹರ್ಷನ ಮತ್ತು ಬಾಣಭಟ್ಟನ ಸಮಕಾಲೀನ ಸಾಮಾಜಿಕ ಸನ್ನಿವೇಶಗಳ ಬಗೆಗೆ ಬೆಳಕನ್ನು ಚೆಲ್ಲುವ ಒಂದು ವಿಶೇಷ ಕೃತಿ. ಭಾರತೀಯ ಚರಿತ್ರೆ ಲೇಖನ ಪರಂಪರೆಯಲ್ಲಿ ಈ ಕೃತಿ ಒಂದು ಮೈಲಿಗಲ್ಲು.

ಕ್ರಿ.ಶ. ೮ನೆಯ ಶತಮಾನದ ಉತ್ತರಾರ್ಧದಲ್ಲಿ ವಾಕ್ಪತಿರಾಜನಿಂದ ರಚನೆಗೊಂಡ ಗೌಡವಾಹ ಎಂಬುದು ಮತ್ತೊಂದು ಪ್ರಮುಖ ಕಾವ್ಯ ಕೃತಿ. ಕನೌಜಿನ ಯಶೋವರ್ಮನ ಗೌಡದೇಶದ ರಾಜನನ್ನು ಸೋಲಿಸಿದ ವಿವರಗಳನ್ನು ಈ ಕೃತಿಯು ನೀಡುತ್ತದೆ. ಇದು ಒಂದು ಅಪೂರ್ಣ ಪದ್ಯ. ಬಹುಶಃ ಅವನ ಆಶ್ರಯದಾತ ಯಶೋವರ್ಮನು ಕಾಶ್ಮೀರದ ಲಲಿತಾದಿತ್ಯನಿಂದ ಹತನಾದ ನಂತರದ ಸಂದರ್ಭವನ್ನು ಸೇರಿಸಲಾಗದೆ ಅರ್ಧಕ್ಕೆ ನಿಲ್ಲಿಸಿದ್ದಾನೆ ಎಂದು ಭಾವಿಸಬಹುದು. ಚಾರಿತ್ರಿಕ ಕಾವ್ಯಾತ್ಮಕ ಕಥನಗಳ ಸಾಲಿಗೆ ಸೇರುವ ಮತ್ತೊಂದು ಕೃತಿ ಅತುಲನ ‘ಮೂಷಿಕ ವಂಶ’. ಇದರಲ್ಲಿ ಸುಮಾರು ಒಂದು ಸಾವಿರ ಶ್ಲೋಕಗಳಿವೆ. ಕೇರಳದ ಉತ್ತರ ಭಾಗದ ಕೊಲ್ಲಂ ಪ್ರದೇಶದ ಮೂಷಿಕ ರಾಜರ ವಂಶಾವಳಿಯ ವಿವರಣೆಗಳ ಕಾವ್ಯ. ೧೧ನೆಯ ಶತಮಾನದ ಉತ್ತರಾರ್ಧದಲ್ಲಿ ರಾಜ್ಯವಾಳುತ್ತಿದ್ದ ರಾಜವರ್ಮನೆಂದೂ ಕರೆಯಲ್ಪಡುತ್ತಿದ್ದ ಶ್ರೀಕಂಠನ ಆಸ್ಥಾನದ ಕವಿಯಾಗಿರಬೇಕು.

೧೧ನೆಯ ಶತಮಾನದ ಮತ್ತೊಂದು ಪ್ರಮುಖ ಕೃತಿ ಬಿಲ್ಹಣನ ವಿಕ್ರಮದೇವ ಚರಿತೆ. ಇವನು ಕಾಶ್ಮೀರಿ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದನು. ಅಲೆಮಾರಿ ಬದುಕಿನ ಬೆನ್ನೇರಿ ಮಥುರ, ಕನೌಜ್, ಪ್ರಯಾಗ, ವಾರಣಾಸಿ, ಸೋಮನಾಥ ರಾಮೇಶ್ವರ ಹಾಗೂ ಚಾಲುಕ್ಯರ ಕಲ್ಯಾಣವನ್ನು ಸುತ್ತಾಡಿದನು. ಒಮ್ಮೆ ಕಲ್ಯಾಣಕ್ಕೆ ಬಂದು ವಾಪಸ್ಸಾದವನು ಕೊನೆಯಲ್ಲಿ ಚಾಲುಕ್ಯರ ಕಲ್ಯಾಣಕ್ಕೆ ಬಂದು ನೆಲೆ ನಿಂತನು. ಆರನೆಯ ವಿಕ್ರಮಾದಿತ್ಯನು ಇವನನ್ನು ವಿದ್ಯಾಪತಿಯನ್ನಾಗಿ ನೇಮಕ ಮಾಡಿದನು. ತನ್ನ ಆಶ್ರಯದಾತನಿಗೆ ತನ್ನ ಕಾವ್ಯದ ಮೂಲಕ ಕ್ಷಾತ್ರ ತೇಜಸ್ಸನ್ನು ಕಟ್ಟುವ ಪ್ರಯತ್ನ ಮಾಡಿದನು. ಪೌರುಷವನ್ನೇ ಒಂದು ಪರಮ ಮೌಲ್ಯವೆಂದು ಬಗೆದು ಪುರಾಣಗಳ ಮತ್ತು ಮಹಾಕಾವ್ಯಗಳ ಶೌರ್ಯ ಸಾಹಸ ಪ್ರದರ್ಶಿಸಿದ ನಾಯಕರೊಂದಿಗೆ ತಮ್ಮ ಆಶ್ರಯದಾತರನ್ನು ಹೋಲಿಸುವ ಪರಂಪರೆ ಪ್ರಾರಂಭವಾಯಿತು. ಬಿಲ್ಹಣನು ತನ್ನ ಆಶ್ರಯದಾತನನ್ನು ಈ ಬಗೆಯಲ್ಲಿ ಅನನ್ಯ ಪರಾಕ್ರಮಿ ಎಂದು ರಾಮನಿಗೆ ಸಮೀಕರಿಸುತ್ತಾನೆ. ಕನ್ನಡದ ಕವಿ ರನ್ನನು ತನ್ನ ದೊರೆ ಚಾಲುಕ್ಯ ಸತ್ಯಾಶ್ರಯನನ್ನು ಭೀಮನೆಂದು ಹೋಲಿಸಿದ ರೀತಿಯಲ್ಲಿ. ಕೇವಲ ಶೌರ್ಯದ ನೆಲೆಯಲ್ಲಿ ಮಾತ್ರ ಆರನೆಯ ವಿಕ್ರಮಾದಿತ್ಯನನ್ನು ಕೊಂಡಾಡುವುದಿಲ್ಲ, ತ್ಯಾಗದ ನೆಲೆಯಲ್ಲಿಯೂ ಅವನನ್ನು ಕೊಂಡಾಡುತ್ತಾನೆ. ತನ್ನ ಅಣ್ಣನ ವಿರುದ್ಧವಾಗಿಯೇ ಇವನು ಬಂಡೆದ್ದು ಸಿಂಹಾಸನವನ್ನು ವಶಪಡಿಸಿಕೊಂಡಿದ್ದನ್ನು ಬಿಲ್ಹಣ ಬೇರೆ ಬಗೆಯಲ್ಲಿಯೇ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ. ಹನ್ನೊಂದನೆಯ ಶತಮಾನದ ಕೊನೆಯ ಭಾಗದ ರಾಜಕೀಯ ಚದುರಂಗದ ಆಯಾಮಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ರಾಜರು ಹೀಗೆ ತಮ್ಮ ಆಸ್ಥಾನ ಪಂಡಿತರನ್ನು ತಮ್ಮ ವೈಭವೀಕರಣಕ್ಕೆ ಬಳಸಿಕೊಳ್ಳುತ್ತಿದ್ದರು. ಇಂತಹ ಆಯಾಮಗಳನ್ನು ಬಿಲ್ಹಣ ಮತ್ತು ಆರನೆಯ ವಿಕ್ರಮಾದಿತ್ಯರ ನಡುವಣ ಸಂಬಂಧಗಳಲ್ಲಿ ಅರ್ಥೈಸಿಕೊಳ್ಳಬಹುದು.

ಆರನೆಯ ವಿಕ್ರಮಾದಿತ್ಯನ ಮಗ ಮತ್ತು ಮಾನಸೋಲ್ಲಾಸ ಮತ್ತು ವಿಕ್ರಮಾಂಕಾಭ್ಯುದಯ ಕೃತಿಗಳ ಕರ್ತೃ ಮೂರನೆಯ ಸೋಮೇಶ್ವರ. ಇವನು ಮತ್ತೊಬ್ಬ ಪ್ರಮುಖ ಲೇಖಕ. ಇವನಿಗೆ ಭೂಲೋಕ ಮಲ್ಲ ಎಂಬ ಬಿರುದೂ ಇದೆ. ೧೨ನೆಯ ಶತಮಾನದ ಪೂರ್ವಾರ್ಧದ ಕಲ್ಯಾಣ ಚಾಲುಕ್ಯರ ಚರಿತ್ರೆಯನ್ನು ತಿಳಿಯಲು ಈ ಕೃತಿಗಳು ಸಹಾಯಕವಾಗುತ್ತವೆ. ವಿಕ್ರಮಾಂಕಾಭ್ಯುದಯ ಕೃತಿಯು ಅವನ ತಂದೆ ಆರನೆಯ ವಿಕ್ರಮಾದಿತ್ಯನ ಜೀವನ ಚರಿತ್ರೆ. ಈ ಕೃತಿಯ ಮತ್ತೊಂದು ವಿಶೇಷವೆಂದರೆ ಅದು ಕರ್ನಾಟಕ ಭೂ ಲಕ್ಷಣ ಮತ್ತು ಜನರ ಬಗೆಗೆ ವಿವರಗಳನ್ನು ನೀಡುತ್ತದೆ.

ಜಯನಾಕ ಎಂಬುವನು ಹನ್ನೆರಡನೆಯ ಶತಮಾನದ ಕಾಶ್ಮೀರಿ ಕವಿ. ಇವನ ಪೃಥ್ವೀರಾಜ ವಿಜಯ ಹೆಸರಿಸಬೇಕಾದ ಕೃತಿ. ಈ ಕೃತಿಯಲ್ಲಿ ೧೧೯೧ ರಲ್ಲಿ ನಡೆದ ಒಂದನೆಯ ತರೈಯನ್ ಯುದ್ಧದಲ್ಲಿ ತನ್ನ ಆಶ್ರಯದಾತ ಪೃಥ್ವೀರಾಜ ಚೌಹನನು ಘೋರಿ ಮಹಮದ್ಧನ ವಿರುದ್ಧ ಜಯಶೀಲನಾದುದನ್ನು ಮತ್ತು ಈ ವಿಜಯವನ್ನು ಸಂಭ್ರಮದಿಂದ ಆಚರಿಸಿದ್ದನ್ನು ವಿವರಿಸುತ್ತಾನೆ. ಇವನನ್ನು ರಾಮನಿಗೆ ಹೋಲಿಸುತ್ತಾನೆ. ವಿಷ್ಣುವೇ ಅವತಾರ ತಳೆದ ಪರಕೀಯರನ್ನು ಶಿಕ್ಷಿಸಲು ಬಂದಿದ್ದಾನೆಂದು ಬಣ್ಣಿಸುತ್ತಾನೆ. ಪರಕೀಯರು ಅಥವಾ ವಿದೇಶಿಯರನ್ನು ರಾವಣ ಸಂತಾನಕ್ಕೆ ಹೋಲಿಸುತ್ತಾನೆ. ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಬರುವ ನೇತ್ಯಾತ್ಮಕ ಪಾತ್ರಗಳಿಗೆ ಹೋಲಿಸುವುದರ ಮೂಲಕ ವಿದೇಶಿಯರ ಆಗಮನವು ಒಪ್ಪಿತವಲ್ಲ ಎನ್ನುವುದನ್ನು ತಿಳಿಸುತ್ತಾನೆ. ಪೃಥ್ವೀರಾಜ ಚೌಹಾನನು ಒಡ್ಡಿದ ಪ್ರತಿರೋಧವನ್ನು ದಾಖಲಿಸುತ್ತಾನೆ.

ಪ್ರಾಚೀನ ಭಾರತದ ಚರಿತ್ರೆ ಲೇಖನ ಪರಂಪರೆಯಲ್ಲಿ ಕಲ್ಹಣನ ರಾಜತರಂಗಿಣಿಗೆ ವಿಶೇಷವಾದ ಸ್ಥಾನವಿದೆ. ಆದ್ದರಿಂದ ಈ ಕೃತಿಯ ಒಳಗೊಂಡಿರುವ ಅಂಶಗಳ ಬಗೆಗೆ ಒಂದು ವಿಸ್ತೃತ ನೋಟ ಮುಖ್ಯವಾಗುತ್ತದೆ. ಈ ಕೃತಿಯು ಸುಮಾರು ಎಂಟು ಸಾವಿರ ಸಂಸ್ಕೃತ ಕಾವ್ಯ ಶ್ಲೋಕಗಳನ್ನು ಒಳಗೊಂಡಿದೆ. ಹನ್ನೆರಡನೆಯ ಶತಮಾನದ ಮಧ್ಯ ಭಾಗದಲ್ಲಿ ರಚನೆಯಾದ ಕೃತಿಯಿದು. ಕಾಶ್ಮೀರಿ ರಾಜರ ವಂಶಾವಳಿಯ ಕಥನ ಇದರ ವಸ್ತು. ಕಾಶ್ಮೀರಿ ಭೌಗೋಳಿಕ ಲಕ್ಷಣಗಳು ಮತ್ತು ಬೌದ್ಧ ಪರಂಪರೆಗಳು, ವಿದೇಶಿ ಆಕ್ರಮಣಗಳು ಮುಂತಾದವು ಇಲ್ಲಿ ಚರಿತ್ರೆಯ ಸಂವೇದನೆಗಳು ರೂಪುಗೊಳ್ಳಲು ಕಾರಣವಾಗಿರಬಹುದು. ಕಾಶ್ಮೀರದ ಸಾಮಾಜಿಕ ಬದುಕಿನ ಬಹುಮುಖ ಆಯಾಮಗಳನ್ನು ಈ ಕೃತಿ ಕಟ್ಟಿಕೊಡುತ್ತದೆ. ಜಾತಿ ಆಯಾಮಗಳು ಪ್ರಕಟಗೊಳ್ಳುತ್ತಿದ್ದ ಕ್ರಮವನ್ನು ತೆರೆದಿಡುತ್ತದೆ. ಬೇರೆ ಬೇರೆ ಆಡಳಿತಗಳಲ್ಲಿ ಘಟಿಸಿದ ಪ್ರಮುಖ ಘಟನೆಗಳನ್ನು ದಾಖಲಿಸುತ್ತದೆ. ಅಂದರೆ ಈ ಕೃತಿಯು ಕೃತಿಕಾರನ ಸಮಕಾಲೀನ ಸಂದರ್ಭವನ್ನು ಮಾತ್ರ ನಮಗೆ ಕಟ್ಟಿಕೊಡುವುದಿಲ್ಲ. ಹಿಂದೆ ಹಿಂದೆ ಸರಿದು ಕಾಶ್ಮೀರದ ರಾಜಕೀಯ ಚರಿತ್ರೆಯ ಗತ ಆಯಾಮಗಳನ್ನು ಮರುದಾಖಲಿಸುವ ಪ್ರಯತ್ನ ಮಾಡುತ್ತದೆ. ಮರುದಾಖಲಿಸುವ ಸಂದರ್ಭದಲ್ಲಿ ಹಿಂದಿನ ರಾಜರ ಶಾಸನಗಳು, ನಾಣ್ಯಗಳು ಹಾಗೂ ಇತರೆ ಬಗೆಯ ದಾಖಲೆಗಳನ್ನು ಬಳಸಿಕೊಂಡಿದ್ದಾನೆ. ಜನಮುಖಿ ಮತ್ತು ಸಮಾಜಮುಖಿ ನಿರಂಕುಶ ಪ್ರಭುತ್ವದ ಗುಣಗಳನ್ನು ಕುರಿತು ಬರೆದಿದ್ದಾನೆ. ಎ.ಬಿ.ಕೀತ್ ಮತ್ತು ಆರ್.ಸಿ. ಮಜುಂದಾರರು ಅವನು ದಾಖಲೆಗಳನ್ನು ಬಳಸಿಕೊಂಡಿರುವ ಬಗೆಯನ್ನು ಕೊಂಡಾಡುತ್ತಾರೆ. ಎಲ್ಲ ಮಿತಿಗಳಲ್ಲೂ ಅವನು ಪ್ರಾಚೀನ ಭಾರತ ಕಂಡ ಪ್ರಮುಖ ಚರಿತ್ರೆಕಾರ ಎಂದು ಹೇಳುತ್ತಾರೆ. ವಿಶೇಷವಾಗಿ ಕಾಲಗಣನಾಕ್ರಮ ಮತ್ತು ದಾಖಲೆಗಳನ್ನು ಬಳಸಿಕೊಂಡಿರುವುದು ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಅದರ ಕಾವ್ಯಾತ್ಮಕ ಮತ್ತು ಗದ್ಯಾತ್ಮಕ ಮಿಶ್ರಣದ ಗುಣಗಳು ಅದನ್ನು ಅನನ್ಯ ಕೃತಿಯನ್ನಾಗಿಸಿದೆ.

ದಕ್ಷಿಣ ಭಾರತದಲ್ಲೂ ಚರಿತ್ರೆ ಕುರಿತ ದೃಷ್ಟಿಕೋನಗಳು ಇದ್ದವು ಎಂಬುದಕ್ಕೆ ವಿವಿಧ ಕಾಲಘಟ್ಟಗಳಿಗೆ ಸಂಬಂಧಿಸಿದ ಸಾಹಿತ್ಯಕ ಕೃತಿಗಳೇ ಸಾಕ್ಷಿ. ಕರ್ನಾಟಕದ ಸಂದರ್ಭದಲ್ಲಿ ಹನ್ನೆರಡನೆಯ ಶತಮಾನದ ವಚನಕಾರರ ಸಾಹಿತ್ಯ ಪ್ರಮುಖವಾದದ್ದು. ಇದರ ಹಿಂದೆಯೇ ಬಂದ ದಾಸ ಪರಂಪರೆಯ ಕೃತಿಗಳೂ ಕೂಡ ಚರಿತ್ರೆಯ ಪ್ರತಿಫಲನಗಳೇ. ತಮಿಳುನಾಡಿನಲ್ಲಿ ಸಂಗಂ ಸಾಹಿತ್ಯ ಪ್ರಮುಖವಾದದ್ದು.

ತಮೀಲು ಪ್ರದೇಶದಲ್ಲಿ ಸೃಷ್ಟಿಯಾದ ಸಂಗಮ್ ಸಾಹಿತ್ಯ ಪ್ರಮುಖ ಐತಿಹಾಸಿಕ ಕಥನಗಳನ್ನು ಒಳಗೊಂಡಿದೆ. ತನ್ನಕಾಲದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ವಲಯಗಳ ಬಗೆಗೆ ಅನನ್ಯ ಬೆಳಕನ್ನು ಈ ಸಾಹಿತ್ಯ ಚೆಲ್ಲುತ್ತದೆ. ಪಾಂಡ್ಯರ ಆಶ್ರಯದಲ್ಲಿ ಬೆಳೆದದ್ದರಿಂದ ಅವರ ಕಾಲದ ಬಗ್ಗೆ ವಿಶೇಷ ಒಳನೋಟಗಳನ್ನು ಕೊಡುತ್ತವೆ. ಮಣಿಮೇಖಲೈ ಮತ್ತು ಶಿಲಪ್ಪದಿಕಾರಂ ಕೃತಿಗಳು ಎರಡು ಮಹಾಕಾವ್ಯಗಳು. ಇವು ವಂಶಾವಳಿ ಚರಿತ್ರೆಯನ್ನು ಕಟ್ಟಿಕೊಡುವುದಿಲ್ಲ.

ಕನ್ನಡ ಪ್ರದೇಶಗಳಲ್ಲಿ ವಚನ ಸಾಹಿತ್ಯವನ್ನು ಚರಿತ್ರೀಕರಿಸಿ ನೋಡುವ ಪ್ರಯತ್ನಗಳು ನಡೆದಿವೆ. ಹನ್ನೆರಡನೆಯ ಶತಮಾನದ ಸಾಮಾಜಿಕ ಸಂಘರ್ಷಗಳು, ಮಾನವ ಅಸ್ತಿತ್ವದ ಆಯಾಮಗಳು, ಹೆಣ್ಣುಗಂಡಿನ ಸಂಬಂಧಗಳ ತಾತ್ವಿಕ ನೆಲೆಗಟ್ಟುಗಳು ಮುಂತಾದ ಪ್ರಮುಖ ಅಂಶಗಳ ಬಗೆಗೆ ವಚನ ಸಾಹಿತ್ಯದ ಬೆಳಕನ್ನು ಚೆಲ್ಲುತ್ತದೆ. ಗದ್ಯವನ್ನೇ ಕಾವ್ಯಾತ್ಮಕವಾಗಿ ದುಡಿಸಿಕೊಂಡು ವಚನಕಾರರು ತಮ್ಮ ಕಾಲದ ಸಾಮಾಜಿಕ ಚಲನಶೀಲತೆಯ ಆಯಾಮಗಳನ್ನು ಕಟ್ಟಿಕೊಟ್ಟಿದ್ದಾರೆ. ಬೇರೆ ಬೇರೆ ಸಾಮಾಜಿಕ ಹಿನ್ನೆಲೆಗಳಿಂದ ಬಂದ ವಚನಕಾರರ ಅವರ ಕಾಲದ ಸಾಮಾಜಿಕ ಆಯಾಮಗಳ ಬಗೆಗೆ ಭಿನ್ನ ಸಂವೇದನೆಗಳನ್ನು ಪ್ರಕಟಿಸುತ್ತಾರೆ. ಅವೆಲ್ಲವೂ ಮನುಷ್ಯಮುಖೀ ನೆಲೆಗಳಿಂದ ರೂಪುಗೊಂಡಿವೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ ಮುಂತಾದವರು ತಮ್ಮ ವಚನಗಳ ಮೂಲಕ ಶೋಷಣೆಯ ಎಲ್ಲ ಆಯಾಮಗಳನ್ನು ವಿರೋಧಿಸಿದ್ದಾರೆ. ವಚನಗಳು ಚರಿತ್ರೆಯ ಸ್ವರೂಪದ ಕಥನಗಳಲ್ಲದಿದ್ದರೂ, ಚರಿತ್ರೆಯನ್ನೇ ಮುಖಾಮುಖಿಯಾಗಿರಿಸಿಕೊಂಡವು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇತ್ತೀಚೆಗೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಸಾಹಿತ್ಯವನ್ನು ಚರಿತ್ರೀಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಚನಗಳು ನಮಗೆ ಪ್ರಮುಖ ಆಧಾರಗಳು.

ಇದೇ ರೀತಿಯಲ್ಲಿ ದಾಸ ಸಾಹಿತ್ಯವನ್ನು ನೋಡಬಹುದು. ವಿಶೇಷವಾಗಿ ದಾಸಕೂಟ ಪಂಥದ ದಾಸರ ಕಾವ್ಯವನ್ನು ಈ ಬಗೆಯಲ್ಲಿ ನೋಡಲು ಅವಕಾಶವಿದೆ. ಪುರಂದರ ಮತ್ತು ಕನಕದಾಸರ ಕೃತಿಗಳು ಚಾರಿತ್ರಿಕ ಕಥನಗಳೇ. ಚರಿತ್ರೆ ಲೇಖನ ಕಲೆಯಲ್ಲಿನ ಶಿಸ್ತು ಇಲ್ಲದಿದ್ದರೂ ಇವುಗಳನ್ನು ದಾಟಿ ಮುಂದೆ ಹೋಗಲು ಸಾಧ್ಯವಿಲ್ಲ. ಮಧ್ಯಕಾಲೀನ ಸಂದರ್ಭಕ್ಕೆ ಈ ಸಾಹಿತ್ಯ ಪ್ರಕಾರ ಸೇರಿತ್ತು. ಧಾರ್ಮಿಕ ಪರಂಪರೆಗಳ ಚರಿತ್ರೆಯಲ್ಲಿ ದಾಸಪರಂಪರೆ ಒಂದು ಪ್ರಮುಖ ಕಾಲಘಟ್ಟ. ಪುರಂದರದಾಸರು ಕೀರ್ತನೆಗಳನ್ನು ರಚಿಸುವುದರ ಮೂಲಕ ಆ ಕಾಲದಲ್ಲಿ ಬಹಳ ಜನಪ್ರಿಯರಾಗಿದ್ದರು. ಕನಕದಾಸರು ಕೀರ್ತನೆಗಳ ಜೊತೆಗೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವರ ಹರಿಭಕ್ತಸಾರ, ಮೋಹನತರಂಗಿಣಿ, ರಾಮಧಾನ್ಯಚರಿತ್ರೆ, ನಳಚರಿತೆ, ಮತ್ತು ನರಸಿಂಹಸ್ತವ ಪ್ರಮುಖ ಕೃತಿಗಳು. ಭಾಮಿನೀ ಷಟ್ಪದಿ ಕ್ರಮದಲ್ಲಿ ತಮ್ಮ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ವೈಕುಂಠದಾಸರು, ಗೋಪಾಲದಾಸರು, ವಿಜಯದಾಸರು, ಜಗನ್ನಾಥದಾಸರು ಮುಂತಾದವರು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ನೀತಿಬೋಧನೆಯನ್ನು ಮಾಡಿದರು. ಅದು ಅವರ ಸಾಮಾಜಿಕ ಕಾಳಜಿಯಾಗಿತ್ತು.

ಸಂಗಮ್ ಸಾಹಿತ್ಯ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪರಂಪರೆಗಳು ಚಾರಿತ್ರಿಕ ಕಥನಗಳಲ್ಲದಿದ್ದರೂ ದಕ್ಷಿಣ ಭಾರತದ ಚರಿತ್ರೆಯ ಪುನರಾಚನೆಗೆ ಅಮೂಲ್ಯ ಸಾಮಗ್ರಿಗಳನ್ನು ಒದಗಿಸುತ್ತವೆ.

ಪ್ರಾಚೀನ ಭಾರತದ ಚರಿತ್ರೆ ಲೇಖನ ಪರಂಪರೆಯ ವೈಜ್ಞಾನಿಕ ನೆಲೆಗಳನ್ನು ಒಳಗೊಳ್ಳದಿದ್ದರೂ, ಚರಿತ್ರೆಯ ದೃಷ್ಟಿಕೋನವನ್ನು ಒಳಗೊಂಡಿತ್ತು. ಮೇಲೆ ಚರ್ಚಿಸಿದ ಪ್ರಾಚೀನ ಕೃತಿಗಳು ವಿಧಾನದ ದೃಷ್ಟಿಯಿಂದ ಚರಿತ್ರೆಯಲ್ಲಿ, ಆದರೆ ಅದು ಚರಿತ್ರೆಗೆ ಮುಖಾಮುಖಿಯಾಗಿರುವ ಕ್ರಮದಲ್ಲಿ ಚರಿತ್ರೆಯಿದೆ. ಆ ಕೃತಿಗಳು ಚರಿತ್ರೆಯ ಸಂವೇದನೆಗಳನ್ನು ಗರ್ಭೀಕರಿಸಿಕೊಂಡಿವೆ. ಅವುಗಳನ್ನು ನಾವು ನೋಡುವ ಕ್ರಮದಲ್ಲಿ ವೈಜ್ಞಾನಿಕ ವಿಧಾನಗಳಿದ್ದರೆ ಖಂಡಿತವಾಗಿಯೂ ಅವು ಬಹುದೊಡ್ಡ ಚಾರಿತ್ರಿಕ ಪರಂಪರೆಯನ್ನು ನಮಗೆ ದರ್ಶನ ಮಾಡಿಸುತ್ತವೆ.

ಒಟ್ಟಾರೆ ಪ್ರಾಚೀನ ಭಾರತದ ಚರಿತ್ರೆ ಲೇಖನ ಪರಂಪರೆಯ ಪ್ರಮುಖ ಲಕ್ಷಣಗಳನ್ನು ಈ ಕೆಳಕಂಡಂತೆ ನೋಡಬಹುದಾಗಿದೆ. ಮೊದಲನೆಯದಾಗಿ ಜೀವನ ಚರಿತ್ರೆಗಳ ವೈಭವೀಕರಣ ಇದರ ಮುಖ್ಯ ಲಕ್ಷಣವಾಗಿದೆ. ಚರಿತ್ರೆಯ ರಚನಾ ವಿನ್ಯಾಸದ ದೃಷ್ಟಿಯಿಂದ ಅವುಗಳಲ್ಲಿ ಅನೇಕ ಮಿತಿಗಳಿವೆ. ವಂಶಾವಳಿಯ ಕಥನಗಳಲ್ಲಿ ವೈಭವೀಕರಣವೂ ಒಂದು ಪ್ರಧಾನವಾದ ಅಂಶವಾಗಿದೆ. ತಮ್ಮ ಆಶ್ರಯದಾತರ ದಿಗ್ವಿಜಯಗಳು, ಖಾಸಗಿ ಬದುಕು, ರಾಜವೈಭವ, ಮುಂತಾದ ಅಂಶಗಳ ಸುತ್ತಲೇ ಈ ಬರಹಗಳು ಕೇಂದ್ರೀಕರಿಸುತ್ತವೆ. ಎರಡನೆಯದಾಗಿ, ಕಾಲಗಣನಾಶಾಸ್ತ್ರದಲ್ಲಿ ಅವುಗಳಿಗೆ ಆದ್ಯತೆಯಿಲ್ಲ. ಏಕೆಂದರೆ ಈ ಲೇಖಕರು ಚರಿತ್ರೆ ಬರವಣಿಗೆಯಲ್ಲಿ ಘಟನೆಗಳ, ವ್ಯಕ್ತಿಗಳ ಬಗೆಗಿನ, ನಿಜವನ್ನು ಕಟ್ಟಿಕೊಡಬೇಕೆಂದು ಬಯಸಿದವರಲ್ಲ. ಕಾಲಾತೀತ ದೃಷ್ಟಿಕೋನ, ಯುಗ ಕಲ್ಪನೆಗಳೂ ಇಲ್ಲಿ ಪ್ರಮುಖವಾಗಿ ಹರಿದಾಡುತ್ತವೆ. ಇದರಿಂದ ಇವುಗಳಿಗೆ ಗಂಭೀರ ಮಿತಿಗಳು ಉಂಟಾಗಿವೆ. ಮೂರನೆಯದಾಗಿ, ಭೂತಕಾಲವನ್ನು ಪುರಾಣೀಕರಿಸುವುದು ಈ ಬರಹಗಳಲ್ಲಿ ಹಾಸುಹೊಕ್ಕಾಗಿದೆ. ವೈಭವೀಕರಣದ ಭಾಗವಾಗಿ ಕಟ್ಟುಕತೆಗಳು ಹೇರಳವಾಗಿ ನುಸುಳಿವೆ. ಕರ್ಮಸಿದ್ಧಾಂತ, ಪುನರ್‌ಜನ್ಮದ ನಂಬಿಕೆಗಳು, ಮಾನವರ ಬದುಕನ್ನು ದೈವವೇ ನಿರ್ಧರಿಸುತ್ತದೆ ಎಂಬ ಕಲ್ಪನೆ ಮೊದಲಾದವು ಒಟ್ಟು ಬರವಣಿಗೆಯನ್ನು ನಿಯಂತ್ರಿಸಿವೆ. ರಾಜತರಂಗಿಣಿಯನ್ನು ಬಿಟ್ಟರೆ ಉಳಿದಂತೆ ಎಲ್ಲ ಕೃತಿಗಳಲ್ಲೂ ಈ ಬಗೆಯ ನಂಬಿಕೆಗಳು ಕೆಲಸ ಮಾಡಿವೆ. ಕೊನೆಯದಾಗಿ, ಭಾಷಾ ಪ್ರಯೋಗಕ್ಕೆ ಬಂದಾಗ ಈ ಕಥನಗಳೆಲ್ಲವೂ ಕಾವ್ಯಾತ್ಮಕ ರೂಪದಲ್ಲಿಯೇ ಸೃಷ್ಟಿಯಾಗಿವೆ. ಚರಿತ್ರೆ ಬರವಣಿಗೆ ಗದ್ಯರೂಪದ್ದು. ಆದರೆ ಇಲ್ಲಿ ಗದ್ಯೇತರ ಸಾಹಿತ್ಯಕ ಪ್ರಕಾರಗಳು ವಿಶೇಷವಾಗಿ ಕಾವ್ಯ ರೂಪಗಳು ಪ್ರಧಾನವಾಗಿವೆ.

ಮಧ್ಯಕಾಲೀನ ಭಾರತೀಯ ಚರಿತ್ರೆ ಲೇಖನ ಪರಂಪರೆ

ಈ ಲೇಖನ ಪರಂಪರೆಯನ್ನು ಎರಡು ಹಂತಗಳಲ್ಲಿ ನೋಡಬಹುದು. ಮೊದಲನೆಯ ಹಂತ ದೆಹಲಿ ಸುಲ್ತಾನರ ಕಾಲ ಮತ್ತು ಎರಡನೆಯ ಹಂತ ಮೊಗಲರ ಕಾಲ. ಸುಮಾರು ಕ್ರಿ.ಶ. ೧೨೦೦ ರಿಂದ ೧೫೨೬ರವರೆಗೆ ಸುಲ್ತಾನರ ಕಾಲ, ನಂತರದ್ದು ಮೊಗಲರ ಕಾಲ. ಇಲ್ಲಿ ೧೮ನೆಯ ಶತಮಾನದ ಅಂತ್ಯದವರೆಗೂ ಬಂದ ಕೃತಿಗಳನ್ನು ಅವಲೋಕಿಸುವ ಪ್ರಯತ್ನವನ್ನು ಮಾಡಲಾಗಿದೆ.

ಪ್ರಾಚೀನ ಭಾರತೀಯ ಚರಿತ್ರೆ ಲೇಖನ ಪರಂಪರೆಯಲ್ಲಿ ಕಾಣದ ಒಂದು ವಿಶೇಷತೆಯನ್ನು ಈ ಪರಂಪರೆಯಲ್ಲಿ ಕಾಣುತ್ತೇವೆ. ಅದು ಅವರು ಕಾಲಗಣನೆಗೆ ನೀಡಿರುವ ಮಹತ್ವ. ಕ್ರಿಶ್ಚಿಯನ್ನರಂತೆ ಮುಸ್ಲಿಮರಲ್ಲಿ ಚರಿತ್ರೆಗೆ ವಿಶೇಷ ಮನ್ನಣೆಯಿತ್ತು. ಚರಿತ್ರೆ ಎಂದರೆ ಕಾಲಗಣನೆಯು ಆದರ ಭಾಗವಾಗಿದೆ. ಅರಬ್, ಟರ್ಕಿ ಮತ್ತು ಪರ್ಶಿಯನ್ ದಾಖಲೆಗಳನ್ನು, ಚರಿತ್ರೆಯ ಕೃತಿಗಳನ್ನು ಒಮ್ಮೆ ಗಮನಿಸಿದರೆ ತಟ್ಟನೆ ಯಾರಿಗಾದರೂ ಹೊಳೆಯುವ ಸತ್ಯ. ಇಸ್ಲಾಮ್ ಧರ್ಮೀಯರು ಭಾರತಕ್ಕೆ ಪ್ರವೇಶಿಸಿದ ನಂತರ ಚರಿತ್ರೆಯನ್ನು ನೋಡುವ ದೃಷ್ಟಿಕೋನದಲ್ಲಿ ಒಂದು ಗುಣಾತ್ಮಕ ಬದಲಾವಣೆ ಬಂದಿತು. ದೊರೆಗಳ ದರ್ಬಾರಿನಲ್ಲಿ ಅವರ ಆದೇಶದ ಮೇರೆಗೂ ಅಥವಾ ಅವರಿಂದ ಲಾಭಗಳನ್ನು ಪಡೆದುಕೊಳ್ಳಲು ಅಲ್ಲಿನ ಪಂಡಿತರು ಅಥವಾ ಅಧಿಕಾರಗಳು ಕಾಲಾನುಕ್ರಮಣೆಯ ಚಾರಿತ್ರಿಕ ವೃತ್ತಾಂತಗಳನ್ನು ಕುರಿತು ಬರೆಯುತ್ತಿದ್ದರು. ಇಸ್ಲಾಮ್ ಧರ್ಮದಲ್ಲಿನ ಅವರ ಶ್ರದ್ಧೆಯೂ ಕೂಡ ಅವರ ಬರವಣಿಗೆಯ ಹಿನ್ನೆಲೆಯಲ್ಲಿ ತಾತ್ವಿಕಶಕ್ತಿಯಾಗಿ ಕೆಲಸ ಮಾಡುತ್ತಿತ್ತು.

೧೩ನೆಯ ಶತಮಾನದ ಆರಂಭದಿಂದ ಮೊಗಲ್ ಸಾಮ್ರಾಜ್ಯದ ಸ್ಥಾಪನೆಯವರೆಗಿನ ಕಾಲಘಟ್ಟದಲ್ಲಿ ಅನೇಕ ಪ್ರಮುಖ ಕೃತಿಗಳನ್ನು ನಾವು ಗುರುತಿಸಬಹುದು. ಮುಬಾರಕ ಷಾ ಬರೆದು ೧೨೦೬ ರಲ್ಲಿ ಕುತ್ಬುದ್ದೀನ್ ಐಬಕ್‌ನಿಗೆ ಅರ್ಪಿಸಲ್ಪಟ್ಟ ಶಾಜಾರ-ಐ-ಅರ್ನಸಾಬ್-ಐ ಮುಬಾರಕ್ ಷಾಹಿ ಕೃತಿಯು ಮುಖ್ಯವಾದದ್ದು. ಇದರಲ್ಲಿ ವಂಶಾವಳಿಯ ವಿವರಗಳಿವೆ. ಸುಮಾರು ನೂರಾಮೂವತ್ತೇಳು ವಂಶಾವಳಿಗಳ ಬಗೆಗೆ ಮಾಹಿತಿಯಿದೆ. ಮಹಮದ್ ಘೋರಿಯ ಕೊಲೆ ಐಬಕನ ಜೀವನದ ಬಗೆಗಿನ ವಿವರಗಳು, ಮತಾಂತರದ ಮಾಹಿತಿಗಳು ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡ ಕೃತಿ ಇದು.

ಮತ್ತೊಂದು ಪ್ರಮುಖ ಕೃತಿಯೆಂದರೆ ತಬಕತ್-ಐ-ನಸಿರಿ ಇದನ್ನು ಮಿಲ್‌ಹಜ್-ಆಸ್-ಸಿರಾಜ್‌ಜುಸ್ವಾನಿ ರಚಿಸಿದ್ದಾನೆ. ಇವನು ಸುಲ್ತಾನ ನಾಸಿರುದ್ದೀನ್‌ನ ಕಾಲದಲ್ಲಿ ದೆಹಲಿಯಲ್ಲಿ ಮುಖ್ಯ ಕಾಜಿಯಾಗಿ ನೇಮಕಗೊಂಡನು. ಈ ಕೃತಿಯನ್ನು ರಚಿಸಲು ವಿವಿಧ ಬಗೆಯ ಮೂಲ ಆಕರಗಳನ್ನು ಬಳಸಿಕೊಂಡಿದ್ದಾನೆ. ವಿವಿಧ ರಾಜವಂಶಗಳನ್ನು ಕುರಿತು ಬರೆದಿದ್ದಾನೆ. ಪ್ರತಿ ವಂಶದ ಬಗೆಗೂ ಪ್ರತ್ಯೇಕವಾಗಿ ಮಾಹಿತಿಗಳನ್ನು ನೀಡುತ್ತಾನೆ. ಇಸ್ಲಾಮ್ ಜಗತ್ತಿನ ೨೦ ಪ್ರಮುಖ ರಾಜವಂಶಗಳ ವಿವರಗಳನ್ನು ದಾಖಲಿಸುತ್ತಾನೆ. ಇಸ್ಲಾಂ ಧರ್ಮದ ಏಳು-ಬೀಳುಗಳ ಕತೆಗಳನ್ನು ಹೇಳುತ್ತಾನೆ. ಘಜನಿ, ಘೋರಿ ಮತ್ತು ಮ್ಯೂಜಿ ಸುಲ್ತಾನರ ಬಗೆಗಿನ ವಿವರಗಳು ಭಾರತದ ಮಧ್ಯಕಾಲೀನ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿವೆ. ಎಲ್ಲ ಘಟನೆಗಳ ಮತ್ತು ವ್ಯಕ್ತಿಗಳ ಹಿಂದೆ ದೈವೀಶಕ್ತಿಯ ಪಾತ್ರ ಇದ್ದೇ ಇರುತ್ತದೆ ಎಂದು ನಿರೂಪಿಸಲು ಪ್ರಯತ್ನಿಸುತ್ತಾನೆ. ಅಲ್ತಮಶನು ಪ್ರವರ್ಧಮಾನಕ್ಕೆ ಬರಲು ಇಸ್ಲಾಮ್ ದೈವೀ ಪ್ರೇರಣೆಯೇ ಕಾರಣವೆಂದು ಬರೆಯುತ್ತಾನೆ.

ತಾರೀಖ್-ಐ-ಮುಬಾರಕ್‌ ಷಾಹಿ ಕೃತಿಯನ್ನು ಯಾಹ್ಯಾ ಐಬಿಸ ಅಹಮದ್ ಸರ್ ಹಿಂದಿ ರಚಿಸಿದ್ದಾನೆ. ಅವನು ಮಹಮದ್ ಘೋರಿಯ ಕಾಲದಿಂದ ೧೪೩೪ರವರೆಗಿನ ರಾಜಕೀಯ ಘಟನೆಗಳನ್ನು ಕುರಿತು ಬರೆದಿದ್ದಾನೆ. ಘೋರಿಯ ಕಾಲದಿಂದ ಫಿರೋಜ್ ಷಾ ತುಘಲಕನ ಪಟ್ಟಾಭಿಷೇಕದವರೆಗೆ ಬರುವ ವಿವರಗಳನ್ನು ಬೇರೆ ಬೇರೆ ಆಕರ-ಮೂಲಗಳಿಂದ ತೆಗೆದುಕೊಂಡಿದ್ದಾಗಿಯೂ, ತದನಂತರದ ಘಟನೆಗಳನ್ನು ತನ್ನ ಅನುಭವ ಮತ್ತು ನೆನಪುಗಳ ಸಹಾಯದಿಂದ ಬರೆದಿದ್ದಾಗಿಯೂ ಅಸ್ಪಷ್ಟವಾಗಿ ಅವನು ಹೇಳಲೆತ್ನಿಸಿದ್ದಾನೆ. ಇಷ್ಟಾದರೂ ತಾನು ಹೇಳುತ್ತಿರುವುದೆಲ್ಲವೂ ಪರಮ ಸತ್ಯವೆಂದು ಅವನು ಹೇಳಿಕೊಳ್ಳುವುದಿಲ್ಲ. ಅವನ ಪ್ರಕಾರ ದೇವರೊಬ್ಬನಿಗೆ ಮಾತ್ರ ಸತ್ಯ ತಿಳಿದಿದೆ ಹರ್ಬನ್ಸ್‌ಮುಖಿಯ ಎನ್ನುವ ಚರಿತ್ರೆಕಾರರು ಇವನ ಕೃತಿಯ ವಿಶ್ಲೇಷಣೆಯನ್ನು ಮಾಡಿದ್ದಾರೆ. ಯಾಹ್ಯಾ ಸರ್ ಹಿಂದಿಯು ಘಟನೆಗಳ ಅಥವಾ ವ್ಯಕ್ತಿಗಳ ವಿಶ್ಲೇಷಣೆಗೆ ತೊಡಗುವುದಿಲ್ಲ. ನೈತಿಕ ನೆಲೆಯಲ್ಲಿ ಒಟ್ಟು ಘಟನಾವಳಿಗಳನ್ನು ಅವನು ಕಟ್ಟಿಕೊಡುತ್ತಾನೆ. ೧೪ನೆಯ ಶತಮಾನದ ಮೊದಲ ಭಾಗದ ಉತ್ತರ ಭಾರತದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಅವನು ಸಹಾಯಕವಾಗುತ್ತಾನೆ. ಸುಲ್ತಾನರ ಸಿಂಹಾಸನಾವರೋಹಣಗಳು, ಅಧಿಕಾರಿಗಳ ನೇಮಕಾತಿಗಳು, ಯುದ್ಧಗಳು, ದಂಗೆಗಳು ಮುಂತಾದುವುಗಳ ಬಗ್ಗೆ ಈ ಕೃತಿಯು ಬೆಳಕನ್ನು ಚೆಲ್ಲುತ್ತದೆ. ನೀತಿಬೋಧನೆಯೇ ಅವನ ಮುಖ್ಯ ಕಾಳಜಿಯಾಗಿತ್ತು.

ಇಸಾಮಿ ಎಂಬುವವನು ಬರೆದ ಫೊತೂಹುಸಲಾತೀನ್ ಕೃತಿಯು ಈ ಲೇಖನ ಪರಂಪರೆಯ ಮತ್ತೊಂದು ಕೃತಿ. ಇಸಾಮಿ ಸುಮಾರು ೨೫ ವರ್ಷಗಳ ಕಾಲ ದಕ್ಷಿಣದಲ್ಲಿ ಕಳೆದಿರುವೆನೆಂದು ಹೇಳಿಕೊಂಡಿದ್ದರೂ, ಅವನ ವೈಯಕ್ತಿಕ ವಿವರಗಳನ್ನು ದಾಖಲಿಸಿಲ್ಲ. ಮಹಮದ್ ಬಿನ್ ತೊಘಲಖನ ಕಾಲದಲ್ಲಿ ದೌಲತಾಬಾದಿಗೆ ಬಂದು ಅಲ್ಲಿಯೇ ಈ ಕೃತಿಯನ್ನು ರಚಿಸಿದನೆಂದು ತೋರುತ್ತದೆ. ಘಜ್ನಿ ಮಹಮದನ ಕಾಲದಿಂದ ತುಘಲಕರ ಕಾಲದವರೆಗಿನ ರಾಜಕೀಯ ಚರಿತ್ರೆಯನ್ನು ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾನೆ. ಹಾಗೆಯೇ ತಾರೀಖ್-ಐ-ಮಹಮದಿ ಎಂಬುದು ಮಹಮದ್ ಬಿಹಾಮದ್ ಖಾನಿನಿಂದ ರಚಿಸಲ್ಪಟ್ಟಿರುವ ಇನ್ನೊಂದು ಕೃತಿ. ೧೪೩೯ ರಲ್ಲಿ ಈ ಕೃತಿಯನ್ನು ಬರೆದು ಮುಗಿಸಿದ್ದಾನೆ. ದೆಹಲಿ ಸುಲ್ತಾನರು, ತೈಮೂರ್ ಮೊದಲಾದ ಸುಲ್ತಾನರ ಹೋರಾಟಗಳ ಬಗೆಗೆ ಅವನು ವಿವರಿಸುತ್ತಾನೆ.

ಈ ಕಾಲದ ಚರಿತ್ರೆ ಲೇಖನ ಪರಂಪರೆಯಲ್ಲಿ ಆತ್ಮ ಚರಿತ್ರೆಗಳು ಮತ್ತು ವಸೀಯತ್-ನಾಮಾಗಳು (ಉತ್ತರಾಧಿಕಾರಿಗಳಿಗೆ ರಾಜರು ಮತ್ತು ರಾಜನೀತಿಜ್ಞರು ರೂಪಿಸಿದ ನೀತಿಬೋಧಗಳು) ಪ್ರಮುಖವಾದವು. ಜೀವನ ಚರಿತ್ರೆ ಮತ್ತು ವಂಶಾವಳಿ ಚರಿತ್ರೆಯ ಕ್ರಮ ವ್ಯಾಪಕವಾಗಿ ಚಾಲ್ತಿಯಲ್ಲಿತ್ತು. ಆತ್ಮಚರಿತ್ರೆಯ ಕಲ್ಪನೆಗಳು ಇನ್ನೂ ರೂಪಿಸಿಗೊಂಡಿರದ ಕಾಲದಲ್ಲಿ ಬಂದ ಫಿರೋಜ್ ಷಾ ಎಂಬ ಸುಲ್ತಾನನ ಫುತೂಹಾತ್‌ಫಿರೋಜ್‌ಷಾಹಿ ಕೃತಿ ಪ್ರಮುಖವಾದುದು. ರಾಜರ ಬಗೆಗಿನ ಜೀವನ ಚರಿತ್ರೆ ಪರಂಪರೆಯ ಜೊತೆಯಲ್ಲೇ ಇದ್ದ ಮತ್ತೊಂದು ಪ್ರಕಾರ ಎಂದರೆ ಸೂಫಿ ಸಂತರು ಮತ್ತು ಕವಿಗಳ ಕುರಿತಾದ ಜೀವನ ಚರಿತ್ರೆಗಳು. ಪರ್ಷಿಯನ್‌ಭಾಷೆಯನ್ನು ಬಳಸಿ ಬರೆದ ಈ ಬಗೆಯ ಜೀವನ ಚರಿತ್ರೆ ವೃತ್ತಾಂತಗಳು ಸೂಫಿ ಸಾಹಿತ್ಯ ಬೆಳೆಯಲು ಕಾರಣವಾದವು. ಬಾಬಾ ಫರೀದನ ಅಸ್ರಾರುಲ್‌ಜಾಲಿಯಾ, ನಿಜಾಮುದ್ದೀನ್ ಜಾಲಿಯಾನ ಮಲ್‌ಫೂಜತ್‌, ಹಮಿದ್ ಖಲಂದರನ ಖೈರುತ್‌ಮಜಾಲೀಸ್ ಮುಂತಾದವು ಪ್ರಮುಖ ಕೃತಿಗಳು. ಮಧ್ಯಕಾಲೀನ ಚರಿತ್ರೆಯ ಪ್ರಮುಖ ಲಕ್ಷಣಾದ ಸಾಂಸ್ಕೃತಿಕ ಸಮ್ಮಿಳಿತಗಳು ಅನಾವರಣಗೊಳ್ಳುವುದೇ ಪ್ರಮುಖವಾಗಿ ಸೂಫಿ ಸಾಹಿತ್ಯದಲ್ಲಿ. ಮಧ್ಯಕಾಲೀನ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಕ್ಕೆ ಈ ಕೃತಿಗಳು ಅನನ್ಯ ಆಕರಗಳಾಗಿವೆ.

ಮಧ್ಯಕಾಲೀನ ಭಾರತದ ಚರಿತ್ರೆ ಲೇಖನ ಪರಂಪರೆಯಲ್ಲಿ ಕಾವ್ಯಾತ್ಮಕ ಪ್ರಕಾರದ ಸಾಹಿತ್ಯ ರೂಪವೂ ಚಾಲ್ತಿಯಲ್ಲಿತ್ತು. ಚರಿತ್ರೆಯ ಕಥನಗಳನ್ನು ದಾಖಲಿಸುವಾಗ ಪದ ಮತ್ತು ಪ್ರಾಸಬದ್ಧ ಗದ್ಯದ ಭಾಷೆಯನ್ನು ಬಳಸಿದ್ದಾರೆ. ಇದು ಪ್ರಾಚೀನ ಹಿಂದು ಭಾರತೀಯ ಸಂಪ್ರದಾಯ ರೀತಿಯಲ್ಲಿದೆ. ಕ್ರಿ.ಶ. ೧೨೦೬-೧೨೧೭ರ ನಡುವೆ ಬರೆದ ಹಸನ್ ನಿಜಾಮಿಯ ತಾಜ್-ಅಸ್-ಮಾ ಮೊದಲ ಕೃತಿ. ಇವನ ನಂತರದ ಬಹುದೊಡ್ಡ ಪ್ರತಿಭೆ ಅಮರಿ‌ಖುಸ್ರು (ಕ್ರಿ.ಶ. ೧೨೫೩-೧೩೨೫). ಖುಸ್ರು ಚರಿತ್ರೆಯ ಪ್ರಮುಖ ಘಟನೆಗಳನ್ನು ಕಾವ್ಯಾತ್ಮಕವಾಗಿ ವಿವರಿಸುತ್ತಾನೆ. ಕೈಕುಬಾಜ್, ಬುಘ್ರಖಾನ್ ಜಲಾಲುದ್ದೀನ್ ಖಿಲ್ಜಿ, ಅಲ್ಲಾವುದ್ದಿನ್ ಖಿಲ್ಜಿ, ಕುತ್ಪುದ್ದೀನ್ ಮುಬಾರಕ್ ಷಾ ಮತ್ತು ಫಯಾಸುದ್ದೀನ್ ತುಘಲಕ್ ಎಂಬ ಆರ ಸುಲ್ತಾನರ ಕಾಲದಲ್ಲಿ ಬದುಕಿದ್ದ ದೊಡ್ಡ ಸಾಕ್ಷಿ ಪ್ರಜ್ಞೆ ಇವನು. ಇವನ ತಂದೆ ಅಲ್ತಮಷನ ಕಾಲದ ಆಸ್ಥಾನದ ಕವಿ. ಅವನ ತಾಯಿ ಬಲ್ಬನ್ನನ ಕಾಲದ ದೊಡ್ಡ ಅಧಿಕಾರಿಯೊಬ್ಬನ ಮಗಳು. ಆಸ್ಥಾನದ ಒಳಸಂಬಂಧಗಳು ಇದ್ದಿದ್ದರಿಂದ ಇವನಿಗೆ ಒಳಗಿನವನೊಬ್ಬನಿಗೆ ಸತ್ಯಗಳನ್ನು ತಿಳಿದುಕೊಳ್ಳುವ ಅವಕಾಶಗಳು ಇವನಿಗೂ ಇದ್ದವು. ಖಿರಾನುಸ್-ಸಾದೈನ್ ಕೃತಿಯನ್ನು ಕ್ರಿ.ಶ. ೧೨೮೫ ರಲ್ಲಿ ರಚಿಸಿದನು. ಇದರ ಅರ್ಥ ಎರಡು ಗ್ರಹಗಳ ಸಮಾಗಮ ಎಂದು. ಇವನ ತಂದೆ ಬುಘ್ರಾಖಾನ್ ಮತ್ತು ಸುಲ್ತಾನ್ ಕೈಕೂಬಾದರ್ ಭೇಟಿಯಾದದ್ದು ಇದರ ವಸ್ತು. ಬಲ್ಬನನ ಮೊಮ್ಮಗನಾದ ಕೈಕೂಬಾದನ ಗುಣಗಳನ್ನು ಅವನು ಹೊಗಳುತ್ತಾನೆ. ಕ್ರಿ.ಶ. ೧೨೯೧ ರಲ್ಲಿ ಮುಕ್ತಾಯಗೊಂಡ ಮಿಫಗತಾಹ್ಸ್ ಫ್ರತ್ಹ ಕೃತಿಯು ಸುಲ್ತಾನ ಜಲಾಲುದ್ದೀನ್ ಖಿಲ್ಜಿಯ ನಾಲ್ಕು ಯುದ್ಧ ಜಯಗಳನ್ನು ವರ್ಣಿಸುತ್ತದೆ. ೧೩೨೦ ರಲ್ಲಿ ಪೂರ್ಣಗೊಂಡ ಮತ್ತೊಂದು ಕೃತಿ ಆಶಿಕಾವು ಅಲ್ಲಾವುದ್ಧಿನ್ ಖಿಲ್ಜಿಯ ಮಗನಾದ ಖಿಜಿರ್ ಖಾನ್ ಮತ್ತು ನಹಲ್‌ವಾಲಾದ ರಾಜಕರಣ್‌ನ ಮಗಳು ದುವಲ್‌ರಾಣಿ ನಡುವಿನ ದುರಂತ ಪ್ರೇಮವನ್ನು ದಾಖಲಿಸುತ್ತದೆ. ೧೩೧೮ ರಲ್ಲಿ ರಚನೆಗೊಂಡ ನೂಹ್ ಸಿಫಿರ್‌ನಲ್ಲಿ ದೇವಗಿರಿಯ ಮೇಲಿನ ವಿಜಯ, ಕುತ್ಲೂಲ್-ದಿನ್‌ಮುಬಾರಕ್‌ಷಾ ಖಿಲ್ಜಿಯ ಸಾಧನೆಗಳು, ಅವನ ಆಸ್ಥಾನ, ಭಾರತದ ಭಾಷೆಗಳು, ಪ್ರಾಣಿ ಮತ್ತು ಸಸ್ಯ ಸಂಪತ್ತಿನ ವರ್ಣನೆಯಿದೆ. ತುಘಲಕ್ ನಾಮ ಗ್ರಂಥವು ಫಿಯಾಸುದ್ದೀನ್ ತುಘಲಕ್‌ನ ಯುದ್ಧಗಳು ಮತ್ತು ಅವನ ಜಯಗಳ ಬಗೆಗೆ ವಿವರಣೆಗಳನ್ನು ನೀಡುತ್ತದೆ. ಹಾಗೆಯೇ ೧೩೧೧ ರಲ್ಲಿ ಬಂದ ಅವನ ಖಾಜಾ ಇನ್‌ಸ್‌ಫುತಾಃ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯ ಮತ್ತು ಅವನ ಸೈನಿಕರ ಸಾಧನೆಗಳನ್ನು ಕೊಂಡಾಡುತ್ತದೆ. ಅಮಿರ್‌ಖುಸ್ರುವಿನ ಗ್ರಂಥಗಳಲ್ಲಿ ಚರಿತ್ರೆಗಿಂತ ಸಾಹಿತ್ಯಕ ಮೌಲ್ಯಗಳಿಗೇ ಹೆಚ್ಚಿನ ಬೆಲೆಯಿದೆ. ಆದರೆ ೧೪ನೆಯ ಶತಮಾನದ ಆದಿ ಭಾಗದ ಉತ್ತರಭಾರತದ ಚರಿತ್ರೆಯ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಗ್ರಹಿಸಲು ಇವನ ಕೃತಿಗಳು ಸಹಾಯಕವಾಗಿದೆ. ಇವನು ಕೂಡ ಚರಿತ್ರೆಯನ್ನು ದೈವ ಪ್ರೇರಿತ ಪ್ರತಿಫಲವೆಂದು ಭಾವಿಸುತ್ತಾನೆ.

ಜಿಯಾ ಆಲ್-ದಿನ್ ಬರನೀ (ಕ್ರಿ.ಶ. ೧೨೮೫-೧೩೫೯) ಸುಲ್ತಾನರ ಆಶ್ರಯದಲ್ಲಿ ಕೃತಿಗಳನ್ನು ರಚಿಸಿದ ಮತ್ತೊಬ್ಬ ಪ್ರಮುಖ ಚರಿತ್ರೆಕಾರ. ಇವನ ಕುಟುಂಬ ದೆಹಲಿ ಸುಲ್ತಾನರ ಸೇವೆಯಲ್ಲಿ ತೊಡಗಿಸಿಕೊಂಡಿತ್ತು. ಸುಮಾರು ಹದಿನೇಳು ವರ್ಷಗಳಿಗೂ ಮೀರಿದ ಅವಧಿಗೆ ಸುಲ್ತಾನ ಮಹಮದ್ ಬಿನ್ ತುಘಲಕನ ಆಪ್ತನಾಗಿದ್ದನು. ಕ್ರಿ.ಶ. ೧೩೫೧ ರಲ್ಲಿ ತುಘಲಕನ ಮರಣದೊಂದಿಗೆ ಇವನ ಕಷ್ಟದ ದಿನಗಳು ಪ್ರಾರಂಭವಾದವು. ಅನಂತರ ದಿನಗಳಲ್ಲಿ ಸುಲ್ತಾನ ಫಿರೋಜ್ ಷಾ ತುಘಲಕನ ಪ್ರೀತಿ ಪಾತ್ರನಾಗಲು ಹೆಣಗಾಡಿದನು. ಒಂದು ಹಂತಕ್ಕೆ ಅವನ ವಿಶ್ವಾಸವನ್ನು ಪಡೆಯುವಲ್ಲಿ ಸಫಲನಾದನು. ೧೩೫೭ ರಲ್ಲಿ ತನ್ನ ಪ್ರಸಿದ್ಧ ಕೃತಿ ತಾರೀಖ್-ಇ-ಫರೋಜ್‌ಷಾಹಿಯನ್ನು ಪೂರ್ಣಗೊಳಿಸಿದನು. ಈ ಗ್ರಂಥವನ್ನು ದೇವರು ಮತ್ತು ಸುಲ್ತಾನರಿಬ್ಬರಿಗೂ ಅರ್ಪಿಸಿದನು. ಮಹಮ್ಮದ್ ಬಿನ್ ತುಘಲಕನು ತೀರಿಕೊಂಡ ನಂತರ ಇವನು ಪಟ್ಟ ಯಾತನೆಗಳೆಲ್ಲವೂ ಈ ಕೃತಿಯಲ್ಲಿ ಅಲ್ಲಲ್ಲಿ ದಾಖಲಾಗಿವೆ. ಕೆಳವರ್ಗಗಳ ಬಗ್ಗೆ ಇವನು ದ್ವೇಷದಿಂದಲೇ ಬರೆಯುತ್ತಾನೆ. ಏಕೆಂದರೆ ಇವನಿಗೆ ತೊಂದರೆ ಉಂಟುಮಾಡಿದ ಅಧಿಕಾರಿಗಳು ಈ ವರ್ಗದವರಾಗಿದ್ದರು ಎನ್ನುವುದು ಇಲ್ಲಿ ವೇದ್ಯ.

ಬರನೀ ಮುಖ್ಯವಾಗುವುದು ಅವನ ಚರಿತ್ರೆಯ ಕುರಿತಾದ ಗ್ರಹಿಕೆಗಳಿಂದ. ಇವನು ಚರಿತ್ರೆಯಿಂದ ಆಗುವ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಾನೆ. ಚರಿತ್ರೆಯನ್ನು ಬರೆಯುವಾಗ ಸಿಕ್ಕ ಮಾಹಿತಿಯನ್ನು ವಿಮರ್ಶೆಗೆ ಒಳಪಡಿಸುವುದಿಲ್ಲ. ಬದಲಿಗೆ ಲೇಖಕನ ವೈಯಕ್ತಿಕ ಅನುಭವನ, ಜ್ಞಾಪಕ ಸಂಚಯದ ಸಹಾಯದಿಂದ ಘಟನೆಗಳನ್ನು ದಾಖಲಿಸಬೇಕು ಎನ್ನುತ್ತಾನೆ. ತನ್ನ ಅರಿವಿಗೆ ಮತ್ತು ಅನುಭವಕ್ಕೆ ದಕ್ಕಿದ್ದೆಲ್ಲವನ್ನು ಅವನು ದಾಖಲಿಸುತ್ತಾನೆ. ಹಾಗೆ ದಾಖಲಿಸುವಾಗ ನೇಪಥ್ಯದಲ್ಲಿ ಜಾಗೃತವಾಗಿರುವ ಅವನ ಧರ್ಮನಿಷ್ಠೆಯ ಬರವಣಿಗೆಯನ್ನು ನೀತಿಬೋಧನೆಯನ್ನಾಗಿ ಮಾಡುತ್ತದೆ. ಇವನ ಬರವಣಿಗೆಯ ವಿಶೇಷವೆಂದರೆ ಇವನು ಕಾಲಾನುಕ್ರಮಣಿಕೆಯಲ್ಲಿ ಘಟನೆಗಳನ್ನು ದಾಖಲಿಸುವುದಿಲ್ಲ. ತನ್ನ ಕೃತಿಯ ಮುನ್ನುಡಿಯಲ್ಲಿಯೇ ಚರಿತ್ರೆಯ ಬಗೆಗೆ ಚರ್ಚಿಸುತ್ತಾನೆ. ಅವನ ಒಟ್ಟು ಬರವಣಿಗೆಯನ್ನು ಗಮನಿಸಿದರೆ ಅವನ ಉದ್ದೇಶ ಅರ್ಥವಾಗುತ್ತದೆ. ಅವನು ಚರಿತ್ರೆಯನ್ನು ವಾಸ್ತವಕ್ಕೆ ಹಿಡಿದ ಕನ್ನಡಿ ಎಂದು ಹೇಳುತ್ತಾನೆ. ಚರಿತ್ರೆಯೆನ್ನುವುದು ಮನುಷ್ಯನ ಕೃತ್ಯಗಳ ಅನಾವರಣವೆನ್ನುತ್ತಾನೆ. ಮನುಷ್ಯ ತನ್ನ ಭೂತವನ್ನು ಕಂಡುಕೊಂಡು ತನ್ನನ್ನು ಸರಿಮಾಡಿಕೊಳ್ಳುತ್ತಾನೆ ಎಂದು ನಂಬುತ್ತಾನೆ. ನೀತಿಬೋಧನೆಯು ಅದರ ಪರಮ ಕರ್ತವ್ಯ ಎಂದು ಸಾರುತ್ತಾನೆ ಆದರೆ ಅವನ ಕೃತಿಯು ಶ್ರೀಮಂತರ ಮತ್ತು ಆಳುವ ವರ್ಗಗಳ ದೃಷ್ಟಿಯಿಂದಲೇ ಚರಿತ್ರೆಯನ್ನು ಗ್ರಹಿಸುತ್ತದೆ. ಸದ್ಗುಣಗಳು ಕೇವಲ ಉಚ್ಚವರ್ಗಗಳಲ್ಲಿ ಇರುವ ಮೌಲ್ಯಗಳು, ದುರ್ಗುಣಗಳೆಲ್ಲವೂ ಕೆಳವರ್ಗಗಳ ಜನರಿಗೆಸೀಮಿತವಾಗಿರುವಂತಹದು ಎಂದು ವಾದಿಸುತ್ತಾನೆ.

ಮೊಗಲರ ಪೂರ್ವದ ಮತ್ತೊಬ್ಬ ಚರಿತ್ರೆಕಾರನೆಂದರೆ ಷಂಸುದ್ದೀನ್ ಸಿರಾಜ್ ಆಸೀಫ್‌. ಇವನ ಕೃತಿಯ ಹೆಸರು ತಾರೀಖ್ ಫಿರೋಜ್ ಷಾಹಿ. ಇದೊಂದು ಗದ್ಯಾತ್ಮಕ ನಿರೂಪಣೆ. ಈ ಕೃತಿಯಲ್ಲಿ ಘಿಯಾಸುದ್ಧೀನ್ ತುಘಲಕ್, ಮಹಮದ್-ಬಿನ್ ತುಘಲಕ್‌ ಮತ್ತು ಫಿರೋಜ್ ಷಾ ತುಘಲಕರ ಗುಣಗಳನ್ನು ಮತ್ತು ತೈಮೂರ ದಾಳಿಯ (೧೩೯೯) ನಂತರ ದೆಹಲಿಯು ಹೇಗೆ ನಾಶವಾಯಿತೆಂಬುದನ್ನು ವಿವರಿಸುತ್ತಾನೆ. ಫಿರೋಜ್ ಷಾ ತುಘಲಕನ ಕಾಲದಲ್ಲಿ ಧರ್ಮಗುರುಗಳ ಪಾತ್ರ, ಆಡಳಿತದಲ್ಲಿ ಇದ್ದ ಭ್ರಷ್ಟಾಚಾರ ಮತ್ತು ರಾಜನು ಹೇಗೆ ಪರೋಕ್ಷವಾಗಿ ಅದನ್ನು ಬೆಂಬಲಿಸುತ್ತಿದ್ದನು ಎಂಬ ವಿಚಾರಗಳಿವೆ. ಇಷ್ಟಾದರೂ ಫಿರೋಜ್ ಷಾನ ಗುಣಗಳನ್ನು ಹೊಗಳುತ್ತಾನೆ. ಈ ಕೃತಿಯಲ್ಲಿ ಮಿಲಿಟರಿ ಆಡಳಿತ, ಅದರಲ್ಲಿದ್ದ ಅರಾಜಕತೆ, ಮತ್ತು ಬಹುಮುಖ್ಯವಾಗಿ ಪ್ರಪ್ರಥಮ ಬಾರಿಗೆ ರಾಜ್ಯದ ಒಟ್ಟು, ಆದಾಯದ ಪ್ರಮಾಣವನ್ನು ಹೇಳುತ್ತಾನೆ. ತೆರಿಗೆಗಳ ಪದ್ಧತಿ, ವಸ್ತುಗಳ ಬೆಲೆಗಳು ಮುಂತಾದ ಪ್ರಮುಖ ವಿಚಾರಗಳನ್ನು ದಾಖಲಿಸುತ್ತಾನೆ. ಆರ್ಥಿಕ ಚರಿತ್ರೆಯನ್ನು ಗ್ರಹಿಸಲು ಬೇಕಾದ ವಿವರಗಳನ್ನು ಅವನು ನೀಡುತ್ತಾನೆ. ಹೀಗೆ ಮೊಗಲರ ಪೂರ್ವಕಾಲದ ಚರಿತ್ರೆ ಲೇಖನ ಪರಂಪರೆಯನ್ನು ಮೇಲಿನ ಕೃತಿಗಳು ಮತ್ತು ಕೃತಿಕಾರರ ಮೂಲಕ ಗ್ರಹಿಸಬಹುದು.

ಮೊಗಲರ ಕಾಲದ ಪೂರ್ವದ ಮಧ್ಯಕಾಲೀನ ಚರಿತ್ರೆ ಲೇಖನ ಪರಂಪರೆಯಲ್ಲಿ ಚರಿತ್ರೆಯ ಭಾಗ ಅಥವಾ ಚರಿತ್ರೆ ಎನ್ನಬಹುದಾದದ್ದು ಬಹಳ ಕಡಿಮೆ ಹಾಗೂ ಅವರಿಗೆ ಚರಿತ್ರೆ ಲೇಖನ ಕಲೆಯ ಕಲ್ಪನೆ ಇರಲಿಲ್ಲ ಎನ್ನುವದು ಗಮನಾರ್ಹ.

ಮೊಗಲರ ಕಾಲದ ಚರಿತ್ರೆ ಲೇಖನ ಪರಂಪರೆ

ಮೊಗಲರ ಕಾಲದಲ್ಲಿ ಚರಿತ್ರೆ ಲೇಖನ ಕಲೆಯು ದೊಡ್ಡ ಗುಣಾತ್ಮಕ ಬದಲಾವಣೆಗೆ ಒಳಗಾಯಿತು. ತಾಂತ್ರಿಕವಾಗಿ ಚರಿತ್ರೆಯನ್ನು ನೋಡುವ ಕ್ರಮಗಳು ಬೆಳೆಯತೊಡಗಿದವು. ವಿಷಯಗಳನ್ನು ನೋಡುವ ಕ್ರಮ, ನಿರೂಪಣೆಯ ತಂತ್ರಗಳಲ್ಲಿ ಸ್ಪಷ್ಟ ಬದಲಾವಣೆಗಳನ್ನು ಕಾಣಬಹುದು. ವಸ್ತುನಿಷ್ಠತೆಯ ವಿಷಯದಲ್ಲಿ ಇನ್ನೂ ತೊಡಕುಗಳಿದ್ದರೂ, ಚರಿತ್ರೆ ಒಂದು ಶಿಸ್ತಾಗಿ ವ್ಯಾಪಕ ಆಯಾಮಗಳನ್ನು ಪಡೆದುಕೊಳ್ಳತೊಡಗಿತು. ರಾಜರಲ್ಲಿ ತಮ್ಮನ್ನು, ತಮ್ಮ ಸಾಧನೆಗಳನ್ನೂ ದಾಖಲಿಸಿಕೊಳ್ಳಬೇಕೆಂಬ ಅದಮ್ಯ ಹಂಬಲವನ್ನು ನೋಡುತ್ತೇವೆ. ಪರ್ಶಿಯನ್ನರ ಪ್ರಭಾವದಿಂದ ಸರ್ಕಾರಿ ಅಧಿಕಾರಿಗಳು ಚರಿತ್ರೆಯನ್ನು ಸರಕಾರಕ್ಕೋಸ್ಕರವೇ ಬರೆದರು. ಅಕ್ಬರನು ಸರಕಾರಿ ದಾಖಲೆಗಳನ್ನು ಸಿಗುವಂತೆ ಮಾಡಿ ಚರಿತ್ರೆಯನ್ನು ಬರೆಯಲೆಂದೇ ಅಧಿಕಾರಿವಲಯವನ್ನು ಸೃಷ್ಟಿಸಿದನು. ತನ್ನ ಹೊಸ ಸಾಮ್ರಾಜ್ಯದ ಬಗೆಗೆ ಚರಿತ್ರೆ ರೂಪುಗೊಳ್ಳಬೇಕೆಂದು ಬಯಸಿ ಆಜ್ಞೆಯಿತ್ತನು. ನಂತರದ ಅರಸರು ಈ ಕ್ರಮವನ್ನು ಮುಂದುವರೆಸಿದರು. ಆದರೆ ಔರಂಗಜೇಬ ಈ ಪದ್ಧತಿಯನ್ನು ತನ್ನ ಹನ್ನೊಂದನೇ ಆಡಳಿತ ವರ್ಷದಲ್ಲಿ ನಿಲ್ಲಿಸಿದನು. ರಾಜ ಫರ್ಮಾನುಗಳು ಅಖ್ಬಾರತೆ ದರ್ಬಾರೆ ಮೊ ಅಲ್ಲ (ಪ್ರತಿದಿನವೂ ಗುಮಾಸ್ತರು ಬರೆಯುತ್ತಿದ್ದ ಆಸ್ಥಾನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿಗಳು) ಐತಿಹಾಸಿಕ ದಾಖಲೆಗಳಾಗಿದ್ದವು.

ಆತ್ಮಚರಿತ್ರೆಗಳು ಮೊಗಲ್ ಸಾಮ್ರಾಟರು ನೀಡಿದ ವಿಶೇಷ ಕೊಡುಗೆಗಳು. ರಾಜರು ಮತ್ತು ಖಾಸಗಿ ವ್ಯಕ್ತಿಗಳ ಆತ್ಮಚರಿತ್ರೆಗಳು ಚರಿತ್ರೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಪ್ರಮುಖ ಗ್ರಂಥಗಳು. ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಬಾಬರನು ತೈಮೂರನ ಆತ್ಮಚರಿತ್ರೆ ತುಜುಕ್ ತೈಮೂರಿ ಅಥವಾ ಮಲ್ ಫೂಜಾತ್ ತೈಮೂರಿಯ ಮಾದರಿಯನ್ನು ಅನುಸರಿಸಿ ತುಜುಕ್‌ ಅಥವಾ ಬಾಬಲ್‌ ನಾಮವನ್ನು ರಚಿಸಿದನು. ಈ ಗ್ರಂಥವು ಚರಿತ್ರೆ ಮತ್ತು ಸಾಹಿತ್ಯಕವಾಗಿ ಅತ್ಯಮೂಲ್ಯವೆಂದು ಪರಿಗಣಿತವಾಗಿದೆ. ಇವನ ಗ್ರಂಥವನ್ನು ಸಂತ ಅಗಸ್ಟೈನ್, ರೂಸೋ, ನ್ಯೂಟನ್ ಹಾಗೂ ಎಡ್ವರ್ಡ್ ಗಿಬ್ಬನ್ನರ ಆತ್ಮಕಥನಗಳಿಗೆ ಹೋಲಿಸಲಾಗಿದೆ. ಬಾಬರನೇ ಹೇಳಿಕೊಳ್ಳುವ ಹಾಗೆ ಅವನು ಕೇವಲ ಸತ್ಯವನ್ನು ಮಾತ್ರ ಬರೆದಿದ್ದಾನೆ. ಘಟನೆಗಳು ನಡೆದ ಹಾಗೆ ಅನಾವರಣ ಮಾಡಿದ್ದೇನೆ ಎಂದು ದಾಖಲಿಸುತ್ತಾನೆ. ಹಾಗಿದ್ದರೂ ತನ್ನ ಅಭಿಪ್ರಾಯಗಳನ್ನು ಘಟನೆಗಳನ್ನು ಕುರಿತಂತೆ ಹೇಳುತ್ತಲೇ ಹೋಗುತ್ತಾನೆ. ಭಾರತದಲ್ಲಿ ತಗೆ ಸಿಕ್ಕಿದ ಜಯಕ್ಕೇ ದೇವರ ಕರುಣೆ ಮತ್ತು ಇಲ್ಲಿಯ ಜನರಲ್ಲಿನ ವಿಭಜಿತ ಧೋರಣೆಗಳೇ ಕಾರಣವೆನ್ನುತ್ತಾನೆ. ಉಳಿದಂತೆ ಅವನ ಆತ್ಮಚರಿತ್ರೆ ಇಲ್ಲಿಯ ಸಾಮಾಜಿಕ ನಡವಳಿಕೆಗಳು, ಹವಾಗುಣ, ಮಾನವ ಸಂಪತ್ತು, ಅರ್ಥ ಸಂಪತ್ತು ಮುಂತಾದ ಇಷಯಗಳನ್ನು ಚಿತ್ರಿಸುತ್ತದೆ. ಇಲಿಯಟ್ ಡೊಸನ್ ಎಂಬ ವಿದ್ವಾಂಸರು ಬಾಬರನ ನೆನಪಿನ ಕಥನ ಒಂದು ಆತ್ಮಚರಿತ್ರೆಯ ಉತ್ಕೃಷ್ಟ ಗ್ರಂಥ ಎಂದು ಹೇಳುತ್ತಾರೆ.

ಬಾಬರನ ಹಾಗೆ ಆತ್ಮಚರಿತ್ರೆಯನ್ನು ರಚಿಸಿದ ಇನ್ನೊಬ್ಬ ಮೊಗಲ ದೊರೆಯೆಂದರೆ ಜಹಾಂಗೀರನು. ಇವನ ನೆನಪಿನ ಕಥನ ತುಜುತಿ-ಜಹಂಗೀರಿ ಬಾಬರನ ಆತ್ಮಚರಿತ್ರೆಯ ಗ್ರಂಥದಷ್ಟೇ ಆಸಕ್ತಿದಾಯಕವಾದದ್ದು. ಇವನು ತನ್ನ ಆತ್ಮಕಥನವನ್ನು ತಾನೇ ಇಡಿಯಾಗಿ ಬರೆಯಲು ಸಾಧ್ಯವಾಗಲಿಲ್ಲ. ಮೊದಲ ಭಾಗವನ್ನು ಎಂದರೆ ತನ್ನ ಮೊದಲ ಹನ್ನೆರಡು ವರ್ಷದ ಆಡಳಿತಾವಧಿಯನ್ನು ಕುರಿತಂತೆ ತಾನೇ ರಚಿಸಿದ್ದಾನೆ. ತನ್ನ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಮುತಾಮದ್ ಖಾನ್ ಎಂಬ ತನ್ನ ಮಿಲಿಟರಿ ಅಧಿಕಾರಿಯನ್ನು (ಭಕ್ಷಿ) ನೇಮಕ ಮಾಡಿ ತನ್ನ ನಿರ್ದೇಶನದಂತೆ ಉಳಿದಿದ್ದನ್ನು ಪೂರ್ಣಗೊಳಿಸಬೇಕೆಂದು ಆಜ್ಞಾಪಿಸಿದನು. ಮಹದಷಾನ ಕಾಲದಲ್ಲಿ ಮಹಮದ್ ಹದಿ ಎಂಬುವನು ಎರಡೂ ಭಾಗಗಳನ್ನು ಪುನಃ ಸಂಪಾದಿಸಿ ಪ್ರಕಟಿಸಿದನು. ಈ ಆತ್ಮಕಥನವು ಜಹಂಗೀರನ ಇಪ್ಪತ್ತೆರಡು ವರ್ಷಗಳ ಆಳ್ವಿಕೆಗೆ ಹಿಡಿದ ಕನ್ನಡಿ. ಈ ಕೃತಿಯ ವಿಶೇಷತೆಯೆಂದರೆ ಜಹಂಗೀರನು ತನ್ನ ಮಿತಿಗಳನ್ನು ಹೇಳಿಕೊಳ್ಳುತ್ತಾನೆ. ತನ್ನ ಕಾಲದಲ್ಲಿ ಅಬುಲ್ ಫಜಲನ ಕೊಲೆಯನ್ನು ತಾನೇ ಮಾಡಿಸಿದ್ದಾಗಿ ದಾಖಲಿಸುತ್ತಾನೆ. ನೂರ್‌ಜಹಾನಳ ಜೊತೆ ತಾನು ಮದುವೆಯಾದುದ್ದನ್ನು ಹೇಳಿಕೊಳ್ಳುವುದಿಲ್ಲ. ಒಟ್ಟಾರೆ ಅವನ ಕಾಲದ ಸಮಾಜ, ಜನರ ಮನೋಭೂಮಿಕೆ, ನಡವಳಿಕೆಗಳು, ಆರ್ಥಿಕ ಪರಿಸ್ಥಿತಿ ವಾಸ್ತುಶಿಲ್ಪ ಮುಂತಾದುವುಗಳ ಬಗೆಗೆ ಅಮೂಲ್ಯ ವಿವರಗಳನ್ನು ನೀಡುವ ಮಹತ್ವದ ಗ್ರಂಥ ಅವನ ಆತ್ಮಚರಿತ್ರೆ.

ಆತ್ಮಕಥನವಲ್ಲದ ಮತ್ತೊಂದು ಗ್ರಂಥವೆಂದರೆ ಬಾಬರನ ಮಗಳು ಗುಲ್ ಬದಲ್ ಬೇಗಂ ಬರೆದ ಹುಮಾಯೂನ್ ನಾಮ. ಹುಮಾಯೂನನ ಜೀವನ, ಬಾಬರ್ ಮತ್ತು ಹುಮಾಯೂನನ ಕಾಲದ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದಂತೆ ಅವಳು ವಿವರಗಳನ್ನು ನೀಡುತ್ತಾಳೆ. ಹಾಗೆಯೇ ಬಾಬರನ ಚಿಕ್ಕಮ್ಮನ ಮಗನಾಗಿದ್ದ ಮಿರ್ಜಾಹೈದರ್ ತುಘಲಕ್ ರಚಿಸಿದ ‘ತಾರೀಖ್-ರಷೀದಿ’ ಹುಮಾಯೂನ್ ಮತ್ತು ಶೇರ್‌ಷಾನಗೂ ನಡೆದ ಯುದ್ಧ ಮತ್ತು ಆ ಕಾಲದ ಪ್ರಮುಖ ಘಟನೆಗಳನ್ನು ದಾಖಲಿಸುತ್ತದೆ. ಮತ್ತೊಂದು ಕೃತಿ ತಜಕಿರಾತುಲ್ ವಾಖಿಯತನ್ನು ಔಹರ್‌ಎಂಬುವರು ರಚಿಸಿದ್ದಾನೆ. ಈ ಕೃತಿಯೂ ಹುಮಾಯೂನನ ಬಗೆಗೆ ವಿವರಗಳನ್ನು ನೀಡುವ ಗ್ರಂಥ.