ಪ್ರಾಧಾನ್ಯ

ಚಲನೆ – ಬಲು ಪರಿಚಿತ ಪದ. ಭೌತಶಾಸ್ತ್ರದ ಆರಂಭಿಕ ಪಾಠಗಳಲ್ಲಿ ಅಗ್ರಸ್ಥಾನದಲ್ಲಿ ಇರುವ ಪಾಠದ ಶೀರ್ಷಿಕೆ. ವಿಶ್ವದಲ್ಲಿ ಇರುವ ಸಮಸ್ತವೂ ಒಂದಲ್ಲ ಒಂದು ರೀತಿಯ ಚಲನೆಯಲ್ಲಿ ಸದಾ ಇರುವುದೇ ಇದಕ್ಕೆ ಕಾರಣ. ನಿಮ್ಮ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿ. ಒಂದಲ್ಲ ಒಂದು ಜೀವಿ ಅಥವ ನಿರ್ಜೀವಿ ಒಂದಲ್ಲ ಒಂದು ರೀತಿಯ ಚಲನೆಯಲ್ಲಿ ಇರುವುದು ಗೋಚರಿಸುತ್ತದೆಯಲ್ಲವೇ? ಕೆಲವು ತಾವು ಇದ್ದಲ್ಲಿಯೇ ಗಿರಕಿ ಹೊಡೆಯುತ್ತಿದ್ದರೆ ಕೆಲವು ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುತ್ತಿರುತ್ತವೆ. ನಮ್ಮ ಗಮನಕ್ಕೆ ಬರದೇ ಇರುವ ಚಲನೆಗಳೂ ಇವೆ – ಗೋಚರಿಸದ ಇಲೆಕ್ಟ್ರಾನುಗಳು ತಮ್ಮ ಪರಮಾಣು ಬೀಜದ ಸುತ್ತ, ನಾವು ಇರುವ ಭೂಮಿ ತನ್ನ ಅಕ್ಷದ ಸುತ್ತ ಮತ್ತು ಸೂರ್ಯನ ಸುತ್ತ, ಸೂರ್ಯ ತನ್ನ ಅಕ್ಷದ ಸುತ್ತ ಮತ್ತು ತನ್ನ ಪರಿವಾರ ಸಮೇತ ಬ್ರಹ್ಮಾಂಡ ಅಥವ ಗೆಲಕ್ಸಿಯ ಕೇಂದ್ರದ ಸುತ್ತ, ಪ್ರತೀ ಗೆಲಕ್ಸಿ ಇತರ ಗೆಲಕ್ಸಿಗಳಿಂದ ದೂರಕ್ಕೆ – ಹೀಗೆ ವಿಶ್ವದಲ್ಲಿ ಎಲ್ಲವೂ ಚಲಿಸುತ್ತಿವೆ. ವಿಶ್ವದಲ್ಲಿ ಘಟಿಸುವ ಅನೇಕ ವಿದ್ಯಮಾನಗಳ ಬುನಾದಿಯಲ್ಲಿ ಇರುವ ವಿದ್ಯಮಾನ – ಚಲನೆ. ಗ್ರಹಣ, ಹುಣ್ಣಿಮೆ – ಅಮಾವಾಸ್ಯೆ, ಸಮುದ್ರದ ಉಬ್ಬರ – ಇಳಿತ, ವಾಣಿಜ್ಯ ಮಾರುತ, ಉಸಿರಾಟ – ಹೀಗೆ ಅಸಂಖ್ಯ ವಿದ್ಯಮಾನಗಳ ಬುನಾದಿಯಲ್ಲಿದೆ ಯಾವುದೋ ಒಂದು ರೀತಿಯ ಚಲನೆ. ರೇಖೀಯ ಚಲನೆ (ಲೀನಿಯರ್ ಮೋಷನ್, ನೇರ ರೇಖೆಯ ಮೇಲೆ ಚಲಿಸುವಿಕೆ), ವಕ್ರರೇಖೀಯ ಚಲನೆ (ಕರ್ವಿಲೀನಿಯರ್ ಮೋಷನ್, ವಕ್ರ ರೇಖೆಯ ಮೇಲೆ ಚಲಿಸುವಿಕೆ), ವರ್ತುಲೀಯ ಚಲನೆ (ಸರ್ಕ್ಯುಲರ್ ಮೋಷನ್, ವೃತ್ತಾಕಾರದ ಪಥದಲ್ಲಿ ಚಲಿಸುವಿಕೆ), ಕಂಪನ ಚಲನೆ (ವೈಬ್ರೇಟರಿ ಮೋಷನ್, ಇದ್ದಲ್ಲಿಯೇ ಕಂಪಿಸುವಿಕೆ) , ಸರಳ ಸಂಗತ ಚಲನೆ (ಸಿಂಪಲ್ ಹಾರ್ಮೋನಿಕ್ ಮೋಷನ್, ಗಡಿಯಾರದ ಲೋಲಕದಂತೆ ಆಂದೋಲಿಸುವ ಚಲನೆ), ತರಂಗ ಚಲನೆ (ವೇವ್ ಮೋಷನ್, ನೀರಿನ ಅಲೆಗಳ ಚಲನೆಯಂತಿರುವ ಚಲನೆ) – ಹೀಗೆ ಒಂದಲ್ಲ ಒಂದು ರೀತಿಯ ಚಲನೆ ಎಲ್ಲ ವಿದ್ಯಮಾನಗಳ ಬುನಾದಿಯಲ್ಲಿ ಇದ್ದೇ ಇರುತ್ತದೆ. ಎಂದೇ, ಚಲನೆಯ ಅಧ್ಯಯನಕ್ಕೆ ಭೌತಶಾಸ್ತ್ರದಲ್ಲಿ ಅಗ್ರಸ್ಥಾನ. ಬರಿಗಣ್ಣಿಗೆ ಗೋಚರಿಸುವ ವಸ್ತುಗಳ ಚಲನೆಯನ್ನು ಅಧ್ಯಯಿಸುತ್ತದೆ ಭೌತಶಾಸ್ತ್ರದ ಅಭಿಜಾತ ಬಲವಿಜ್ಞಾನ ಶಾಖೆ (ಕ್ಲಾಸಿಕಲ್ ಮೆಕ್ಯಾನಿಕ್ಸ್).

ಅರ್ಥ

ಅಭಿಜಾತ ಬಲವಿಜ್ಞಾನ ಶಾಖೆಯ ಪ್ರಕಾರ ಯಾವುದಾದರೊಂದು ನಿರ್ದೇಶಕ ಬಿಂದುವಿಗೆ (ರೆಫರೆನ್ಸ್ ಪಾಇಂಟ್) ಅಥವ ವೀಕ್ಷಕರಿಗೆ ಸಂಬಂಧಿಸಿದಂತೆ ವಸ್ತುವೊಂದರ ಸ್ಥಾನದ ನಿರಂತರ ಬದಲಾವಣೆಯೇ ಚಲನೆ. ಮೇಲ್ನೋಟಕ್ಕೆ ಅತೀ ಸರಳವಾಗಿ ಕಾಣುವ ಈ ವ್ಯಾಖ್ಯಾನವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಅಚ್ಚರಿದಾಯಕ ಅಂಶಗಳು ಹೊರಹೊಮ್ಮುತ್ತವೆ. ಇದಕ್ಕೋಸ್ಕರ ಮುಂದೆ ನೀಡಿರುವ ವಿಭಿನ್ನ ಸನ್ನಿವೇಶಗಳಲ್ಲಿ ಜರಗುವ ಚಲನೆಯ ಉದಾಹರಣೆಗಳನ್ನು ಅಧ್ಯಯಿಸಿ.

ಸನ್ನಿವೇಶ: ಒಂದು ವಸ್ತು ‘ಅ’ ಎಂಬ ಸ್ಥಳದಿಂದ ‘ಆ’ ಎಂಬ ಸ್ಥಳವನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ತಲುಪುತ್ತದೆಂದೂ ಬೇರೊಂದು ಸ್ಥಳದಲ್ಲಿ ನಿಂತು ಈ ವಿದ್ಯಮಾನವನ್ನು ವ್ಯಕ್ತಿಯೊಬ್ಬರು ನೋಡುತ್ತಿದ್ದಾರೆ ಎಂದೂ ಕಲ್ಪಿಸಿಕೊಳ್ಳಿ ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದಿಷ್ಟ ದೂರದಲ್ಲಿ ಗೋಚರಿಸುತ್ತಿದ್ದ ವಸ್ತು ಕಾಲ ಸರಿದಂತೆಲ್ಲ ಗೋಚರಿಸುತ್ತಿದ್ದ ದಿಕ್ಕು ಬದಲಾಗುವುದರ ಜೊತೆಗೆ ಅವರಿಂದ ಅದಕ್ಕೆ ಇದ್ದ ದೂರವೂ ಬದಲಾಗುತ್ತಿರುವುದು ಅವರ ಗಮನಕ್ಕೆ ಬರುತ್ತದೆ (ಚಿತ್ರ ೧). ಅವರ ತೀರ್ಮಾನ – ವಸ್ತು ಚಲಿಸುತ್ತಿದೆ.

ಸನ್ನಿವೇಶ: ಚಿತ್ರ ೨ ಪ್ರತಿನಿಧಿಸುವ ಸನ್ನಿವೇಶದಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದಿಷ್ಟ ದೂರದಲ್ಲಿ ಗೋಚರಿಸುತ್ತಿದ್ದ ವಸ್ತು ಕಾಲ ಸರಿದಂತೆಲ್ಲ ಅವರಿಂದ ಅದಕ್ಕೆ ಇದ್ದ ದೂರ ಬದಲಾಗದೇ ಇದ್ದರೂ ಗೋಚರಿಸುತ್ತಿದ್ದ ದಿಕ್ಕು ಬದಲಾಗುತ್ತಿರುವುದು ಅವರ ಗಮನಕ್ಕೆ ಬರುತ್ತದೆ. ಅವರ ತೀರ್ಮಾನ – ವಸ್ತು ಚಲಿಸುತ್ತಿದೆ.

ಸನ್ನಿವೇಶ: ಚಿತ್ರ ೩ ಪ್ರತಿನಿಧಿಸುವ ಸನ್ನಿವೇಶದಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದಿಷ್ಟ ದೂರದಲ್ಲಿ ಗೋಚರಿಸುತ್ತಿದ್ದ ವಸ್ತು ಕಾಲ ಸರಿದಂತೆಲ್ಲ ಅದು ಗೋಚರಿಸುತ್ತಿದ್ದ ದಿಕ್ಕು ಬದಲಾಗದೇ ಇದ್ದರೂ ಅವರಿಂದ ಅದಕ್ಕೆ ಇದ್ದ ದೂರ ಬದಲಾಗುತ್ತಿರುವುದು ಅವನ ಗಮನಕ್ಕೆ ಬರುತ್ತದೆ. ಅವರ ತೀರ್ಮಾನ – ವಸ್ತು ಚಲಿಸುತ್ತಿದೆ.

ಸನ್ನಿವೇಶ: ಚಿತ್ರ ೩ ಪ್ರತಿನಿಧಿಸುವ ಸನ್ನಿವೇಶದಲ್ಲಿ ಸ್ಥಳ ‘ಅ’ ವೀಕ್ಷಕನಿಂದ ಬಲು ದೂರದಲ್ಲಿ ಇದೆ (ಸುಮಾರು ೧೦೦ ಮೀ ಗಿಂತ ಅಧಿಕ) ಎಂದೂ ಅದರ ಹತ್ತಿರವೇ (ಸುಮಾರು ೧ ಮೀ ದೂರದಲ್ಲಿ) ಸ್ಥಳ ‘ಆ’ ಇದೆ ಎಂದೂ ಕಲ್ಪಿಸಿಕೊಳ್ಳಿ. ವಸ್ತು ‘ಅ’ದಿಂದ ‘ಆ’ಕ್ಕೆ ನಿಧಾನವಾಗಿ ಜರುಗುತ್ತದೆ ಎಂದೂ ಕಲ್ಪಿಸಿಕೊಳ್ಳಿ. ತನ್ನಿಂದ ಅದಕ್ಕಿರುವ ದೂರದಲ್ಲಿ ಆಗುವ ಬದಲಾವಣೆಯನ್ನು ವೀಕ್ಷಕ ಅಳತೆ ಮಾಡದೇ ಇದ್ದರೆ ವಸ್ತು ಚಲಿಸಿದ್ದು ಅರಿವಿಗೆ ಬರುವ ಸಾಧ್ಯತೆ ಬಲು ಕಮ್ಮಿ ಅಥವ ಇಲ್ಲವೇ ಇಲ್ಲ. ಅಳತೆ ಮಾಡದೇ ಇದ್ದರೆ ಅವರ ತೀರ್ಮಾನ – ಅದು ಇದ್ದಲ್ಲಿಯೇ ಇದೆ. ಈಗ ಅದೇ ಸನ್ನಿವೇಶದಲ್ಲಿ ಇನ್ನೊಬ್ಬ ವೀಕ್ಷಕರು ಬೇರೊಂದು ಸ್ಥಳದಿಂದ ವಿದ್ಯಮಾನವನ್ನು ವೀಕ್ಷಿಸುತ್ತಿದ್ದಾರೆ ಎಂದು ಕಲ್ಪಿಸಿಕೊಳ್ಳಿ (ಚಿತ್ರ ೪). ಅಳತೆ ಮಾಡದೇ ಇದ್ದರೂ ಅವರ ತೀರ್ಮಾನ – ವಸ್ತು ಚಲಿಸುತ್ತಿದೆ.

ಅಂದ ಮೇಲೆ ‘ವಸ್ತುವೊಂದರ ಸ್ಥಾನದಲ್ಲಿ ನಿರಂತರ ಬದಲಾವಣೆ ಆಗುತ್ತಿದೆ, ಅರ್ಥಾತ್ ಅದು ಚಲಿಸುತ್ತಿದೆ’ ಎಂದು ವೀಕ್ಷಕ ಹೇಳಬೇಕಾದರೆ ಇಂತಾಗಲೇ ಬೇಕು : ಒಂದು ಸ್ಥಳದಿಂದ ಅದು ಗೋಚರಿಸುತ್ತಿದ್ದ ದಿಕ್ಕು, ಆ ಸ್ಥಳದಿಂದ ವಸ್ತುವಿಗಿದ್ದ ದೂರ ಇವೆರಡೂ ಅಥವ ಇವೆರಡರ ಪೈಕಿ ಯಾವುದಾದರೂ ಒಂದು ಕಾಲ ಸರಿದಂತೆಲ್ಲ ಅಳತೆ ಮಾಡಬಹುದಾದಷ್ಟು ಬದಲಾಗುತ್ತಿರಬೇಕು. ಯುಕ್ತ ವಿಧಾನಗಳಿಂದ ದಿಕ್ಕಿನಲ್ಲಿ ಅಥವ ದೂರದಲ್ಲಿ ಆಗುವ ಬದಲಾವಣೆಗಳನ್ನು ಅಳತೆ ಮಾಡದೆಯೇ ಚಲನೆಯನ್ನು ಎಲ್ಲ ಸನ್ನಿವೇಶಗಳಲ್ಲಿ ಗ್ರಹಿಸಲು ಸಾಧ್ಯವಿಲ್ಲ. ಅರ್ಥಾತ್, ವಸ್ತುವಿನ ಚಲನೆ ಮೇಲ್ನೋಟಕ್ಕೆ ಅರಿವಿಗೆ ಬರದೇ ಇದ್ದರೂ ಅಳತೆ ಮಾಡಿದರೆ ಅರಿವಿಗೆ ಬರುತ್ತದೆ.

ಚಲನೆಯ ವ್ಯಾಖ್ಯಾನದಲ್ಲಿ ಯಾವುದಾದರೊಂದು ನಿರ್ದೇಶಕ ಬಿಂದುವಿಗೆ ಅಥವ ವೀಕ್ಷಕರಿಗೆ ಸಂಬಂಧಿಸಿದಂತೆ ಎಂದು ಹೇಳಿರುವುದರ ಔಚಿತ್ಯ ತಿಳಿಯಲು ಮುಂದೆ ವಿವರಿಸಿದ ವಿದ್ಯಮಾನ ಅಧ್ಯಯಿಸಿ.

ಸನ್ನಿವೇಶ: ಯಾವುದೋ ಊರಿಗೆ ಪಯಣಿಸುವ ಸಲುವಾಗಿ ರೈಲೊಂದರಲ್ಲಿ ನೀವು ಪುಸ್ತಕವೊಂದನ್ನು ಓದುತ್ತ ಕುಳಿತಿದ್ದೀರಿ, ನಿಮ್ಮ ರೈಲಿನ ಪಕ್ಕದಲ್ಲಿ ಇನ್ನೊಂದು ರೈಲು ನಿಂತಿದೆ ಎಂದು ಕಲ್ಪಿಸಿಕೊಳ್ಳಿ. ನೀವು ಕುಳಿತಿರುವ ನೇರದಲ್ಲಿ ಇರುವ ಬೋಗಿಯನ್ನು ‘೧’ ರೇಖೆಯಿಂದ ಸೂಚಿಸಿದೆ (ಚಿತ್ರ ೫). ರೈಲು ಶಿಳ್ಳೆ ಹೊಡೆದು ಹೊಟ ಶಬ್ದ ಕೇಳಿಸಿದಾಗ ನೀವು ತಲೆ ಎತ್ತಿ ಪಕ್ಕದ ರೈಲನ್ನು ನೋಡುತ್ತೀರಿ. ಎರಡೂ ರೈಲುಗಳು ನಿಂತಿದ್ದಾಗ ನಿಮ್ಮ ಬೋಗಿಯ ನೇರದಲ್ಲಿದ್ದ ಬೋಗಿಯ ಸ್ಥಾನ ನಿರಂತರವಾಗಿ ನಿಮ್ಮ ರೈಲು ಹೋಗಬೇಕಾದ ವಿರುದ್ಧ ದಿಕ್ಕಿನಲ್ಲಿ ಬದಲಾಗುತ್ತಿರುವುದನ್ನು (ಚಿತ್ರದಲ್ಲಿ ೨, ೩, ೪ ಎಂದು ಗುರುತಿಸಿದ ರೇಖೆಗಳಿಂದ ಸೂಚಿಸಿದೆ) ಗಮನಿಸಿದ ನೀವು ನಿಮ್ಮ ರೈಲು ಹೊರಟಿತೆಂದು ಭಾವಿಸುತ್ತೀರಿ. ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಮೇಲೆ ನಿಂತಿರುವ ವ್ಯಕ್ತಿಗೆ ಈ ವಿದ್ಯಮಾನ ಹೇಗೆ ಗೋಚರಿಸುತ್ತದೆ ಎಂಬುದನ್ನು ಸೂಚಿಸುತ್ತದೆ ಚಿತ್ರ ೬.

ನೀವು ಇರುವ ರೈಲಿಗೆ ಸಂಬಂಧಿಸಿದಂತೆ ಕಾಲ ಸರಿದಂತೆಲ್ಲ ನಿಮ್ಮ ಬೋಗಿಗೂ ವ್ಯಕ್ತಿಗೂ ನಡುವಿನ ದೂರವೇ ಆಗಲಿ ಅದು ಗೋಚರಿಸುತ್ತಿದ್ದ ದಿಕ್ಕಾಗಲೀ ಬದಲಾಗುವುದಿಲ್ಲ (ಚಿತ್ರದಲ್ಲಿ ರೇಖೆ ೧ ನೋಡಿ). ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದಿಷ್ಟ ದೂರದಲ್ಲಿ ಗೋಚರಿಸುತ್ತಿದ್ದ ಇನ್ನೊಂದು ರೈಲಿನ ಬೋಗಿ ಕಾಲ ಸರಿದಂತೆಲ್ಲ ಅದು ಗೋಚರಿಸುತ್ತಿದ್ದ ದಿಕ್ಕು ಬದಲಾಗುವುದರ ಜೊತೆಗೆ ವ್ಯಕ್ತಿಯಿಂದ ಅದಕ್ಕೆ ಇದ್ದ ದೂರವೂ ಬದಲಾಗುತ್ತಿರುವುದು ವ್ಯಕ್ತಿಯ ಗಮನಕ್ಕೆ ಬರುತ್ತದೆ (ಚಿತ್ರದಲ್ಲಿ ರೇಖೆ ೨,೩,೪ ನೋಡಿ). ವ್ಯಕ್ತಿಯ ತೀರ್ಮಾನ : ನಿಮ್ಮ ರೈಲು ಅಲ್ಲಿಯೇ ನಿಂತಿದೆ, ಇನ್ನೊಂದು ರೈಲು ಚಲಿಸಲಾರಂಭಿಸಿದೆ.

ರೈಲು ಶಿಳ್ಳೆ ಹೊಡೆದು ಹೊಟ ಶಬ್ದ ಕೇಳಿಸಿದಾಗ ನೀವು ತಲೆ ಎತ್ತಿ ಪಕ್ಕದ ರೈಲನ್ನೂ ಪ್ಲಾಟ್‌ಫಾರ್ಮ್ ಮೇಲೆ ನಿಂತಿರುವ ವ್ಯಕ್ತಿಯನ್ನೂ ನೋಡಿದರೆ – ಕಾಲ ಸರಿದಂತೆಲ್ಲ ನಿಮಗೂ ಆ ವ್ಯಕ್ತಿಗೂ ನಡುವಿನ ದೂರವೇ ಆಗಲಿ ವ್ಯಕ್ತಿ ಇದ್ದ ದಿಕ್ಕಾಗಲಿ ಬದಲಾಗದಿರುವುದನ್ನೂ ಇನ್ನೊಂದು ರೈಲಿನ ಬೋಗಿ ಇದ್ದ ದಿಕ್ಕು ಮತ್ತು ಅದಕ್ಕಿದ್ದ ದೂರ ಬದಲಾಗುತ್ತಿರುವುದನ್ನೂ ಗಮನಿಸುತ್ತೀರಿ (ಚಿತ್ರ ೭).

ನಿಮ್ಮ ತೀರ್ಮಾನ : ನಿಮ್ಮ ರೈಲು ಅಲ್ಲಿಯೇ ನಿಂತಿದೆ, ಇನ್ನೊಂದು ರೈಲು ಚಲಿಸಲಾರಂಭಿಸಿದೆ.

ಮೊದಲನೇ ಸಲ ಜರಗಿದ್ದು ನಿಮಗೆ ಸಂಬಂಧಿಸಿದಂತೆ ವೀಕ್ಷಣೆ, ಆನಂತರದಲ್ಲಿ ಜರಗಿದ್ದು ಬೇರೆ ವೀಕ್ಷಕರಿಗೆ ಸಂಬಂಧಿಸಿದಂತೆ ವೀಕ್ಷಣೆ. ನಿರ್ದೇಶಕ ಬಿಂದು ಬೇರೆಬೇರೆ ಆದದ್ದರಿಂದ ಚಲನೆಯ ಅರ್ಥೈಸುವಿಕೆಯೂ ಬದಲಾಯಿತು. ಮುಂದೆ ನೀಡಿರುವ ಇನ್ನೂ ಒಂದು ಸನ್ನಿವೇಶವನ್ನು ಇದಕ್ಕೆ ಉದಾಹರಣೆಯಾಗಿ ಅಧ್ಯಯಿಸಿ.

ಸನ್ನಿವೇಶ: ಚಲಿಸುತ್ತಿರುವ ರೈಲಿನಲ್ಲಿ ನೀವು ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದೀರಿ ಎಂದೂ ಸ್ವಲ್ಪ ಸಮಯದ ಬಳಿಕ ನೀವು ಕಿಟಕಿಯ ಮೂಲಕ ಹೊರಗೆ ನೋಡಿದಾಗ ಇನ್ನೊಂದು ರೈಲಿನ ಬೋಗಿ ಗೋಚರಿಸುತ್ತದೆ ಎಂದೂ ಕಲ್ಪಿಸಿಕೊಳ್ಳಿ. ಕಾಲ ಸರಿದಂತೆಲ್ಲ ಆ ಬೋಗಿ ಗೋಚರಿಸುವ ದಿಕ್ಕು ಮತ್ತು ಅದಕ್ಕೂ ನಿಮಗೂ ನಡುವಿನ ದೂರ ಬದಲಾಗುದಿರುವುದು ನಿಮ್ಮ ಅರಿವಿಗೆ ಬರುತ್ತದೆ. ಅಂದ ಮೇಲೆ, ಆ ರೈಲು ನಿಮಗೆ ಸಂಬಂಧಿಸಿದಂತೆ ಸಾಪೇಕ್ಷವಾಗಿ ಚಲಿಸುತ್ತಿಲ್ಲ! ಹೀಗಾಗಬೇಕಾದರೆ ವಾಸ್ತವವಾಗಿ ಆ ಎರಡೂ ರೈಲುಗಳು ಎಲ್ಲಿಯೋ ಒಂದೆಡೆ ನಿಂತಿರ ಬೇಕು ಅಥವ ಒಂದೇ ವೇಗದಲ್ಲಿ ಚಲಿಸುತ್ತಿರ ಬೇಕಲ್ಲವೇ? ನಿಜ ಏನು ಎಂದು ತಿಳಿಯಬೇಕಾದರೆ ಈ ಎರಡೂ ರೈಲುಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ನಿರ್ದೇಸಕ ಬಿಂದುವಿಗ ಸಂಬಂಧಿಸಿದಂತೆ ಎರಡೂ ರೈಲುಗಳನ್ನು ವೀಕ್ಷಿಸಬೇಕು. ಅಂದ ಹಾಗೆ, ನಿಮ್ಮ ಕೈನಲ್ಲಿ ಇರುವ ಪುಸ್ತಕ ನಿಮಗೆ ಸಂಬಂದಿಸಿದಂತೆ ಸಾಪೇಕ್ಷವಾಗಿ ಚಲಿಸುತ್ತಿಲ್ಲ ಎಂಬುದೂ ನಿಜ, ನೀವು ಎಷ್ಟು ವೇಗದಲ್ಲಿ ಚಲಿಸುತ್ತಿದ್ದೀರೋ ಅಷ್ಟೇ ವೇಗದಲ್ಲಿ ಪುಸ್ತಕವೂ ಚಲಿಸುತ್ತಿದೆ ಎಂಬುದೂ ನಿಜ!

ಎಂದೇ, ಎಲ್ಲ ಚಲನೆಯೂ ಸಾಪೇಕ್ಷ ಚಲನೆಗಳು. ಅಂತೆಯೇ, ಚಲನೆರಹಿತ (ಮೋಷನ್‌ಲೆಸ್) ಸ್ಥಿತಿ ಅಥವ ವಿಶ್ರಾಂತ (ರೆಸ್ಟ್) ಸ್ಥಿತಿ ಅಥವ ನಿಶ್ಚಲ (ಸ್ಟೇಷನರಿ) ಸ್ಥಿತಿ ಕೂಡ ಸಾಪೇಕ್ಷ. ಒಂದು ನಿರ್ದೇಶಕ ಬಿಂದುವಿಗೆ ಸಂಬಂಧಿಸಿದಂತೆ ಅಥವ ಒಂದು ನಿರ್ದೇಶಕ ಚೌಕಟ್ಟಿನಲ್ಲಿ (ಫ್ರೇಮ್ ಆಫ್ ರೆಫರೆನ್ಸ್) ನಿಶ್ಚಲವಾಗಿ ಗೋಚರಿಸುವ ವಸ್ತು ಬೇರೊಂದು ನಿರ್ದೇಶಕ ಬಿಂದುವಿಗೆ ಸಂಬಂಧಿಸಿದಂತೆ ಅಥವ ಒಂದು ನಿರ್ದೇಶಕ ಚೌಕಟ್ಟಿನಲ್ಲಿ (ಫ್ರೇಮ್ ಆಫ್ ರೆಫರೆನ್ಸ್) ಚಲನೆಯಲ್ಲಿ ಇರುವಂತೆ ಗೋಚರಿಸಬಹುದು. ನಿರಪೇಕ್ಷ (ಅಬ್ಸಲ್ಯೂಟ್) ಚಲನೆ ಎಂಬುದೇ ಅರ್ಥವಿಹೀನ ಪರಿಕಲ್ಪನೆ.

ಚಲನೆಯನ್ನು ವರ್ಣಿಸಲು ಉಪಯೋಗಿಸುವ ಪದಗಳು

. ಚಲಿಸಿದ ದೂರ (ಡಿಸ್ಟೆನ್ಸ್ ಟ್ರಾವಲ್ಡ್) ಮತ್ತು ಸ್ಥಾನಂತರಣ (ಸ್ಥಳ ಪಲ್ಲಟನ, ವಿಸ್ಥಾಪನೆ, ಡಿಸ್‌ಪ್ಲೇಸ್‌ಮೆಂಟ್): ವಸ್ತು ಚಲಿಸಲು ಆರಂಭಿಸಿದ ಸ್ಥಳದಿಂದ ತಲುಪಬೇಕಾದ ಅಂತಿಮ ಸ್ಥಳಕ್ಕೆ ಇರುವ ಕನಿಷ್ಠ ದೂರಕ್ಕೆ ಸ್ಥಾನಾಂತರಣ ಎಂದು ಹೆಸರು. ವಾಸ್ತವವಾಗಿ ವಸ್ತು ಚಲಿಸಿದ ದೂರಕ್ಕಿಂತ ಇದು ಕಮ್ಮಿ ಇರಲೂ ಬಹುದು ಅಥವ ಸಮವಾಗಿಯೂ ಇರಬಹುದು. ಚಿತ್ರ ೮ ರಲ್ಲಿ ವಸ್ತುವೊಂದು ‘ಅ’ ಸ್ಥಳದಿಂದ ಆರಂಭಿಸಿ ‘ಆ’ ಸ್ಥಳವನ್ನು ತಲುಪಲು ವಾಸ್ತವವಾಗಿ ಚಲಿಸಿದ ಪಥದ ಉದ್ದಕ್ಕೂ ಆ ಎರಡು ಸ್ಥಳಗಳ ನಡುವಿನ ಕನಿಷ್ಠ ಅಂತರಕ್ಕೂ ಇರುವ ವ್ಯತ್ಯಾಸ ಗಮನಿಸಿ. ಚಲಿಸಿದ ದೂರ ಸ್ಥಾನಾಂತರಣಕ್ಕೆ ಸಮವಾಗಿ ಇರಬಹುದು ಇಲ್ಲದೆಯೂ ಇರಬಹುದು. ಚಲಿಸಿದ ದೂರ ಹೇಳುವಾಗ ಚಲನೆಯ ದಿಕ್ಕನ್ನು ನಮೂದಿಸ ಬೇಕಿಲ್ಲ, ಸ್ಥಾನಾಂತರಣವನ್ನು ಹೇಳುವಾಗ ನಮೂದಿಸ ಬೇಕು. ದಿಕ್ಕು, ಪ್ರಮಾಣ ಇವೆರಡನ್ನೂ ನಮೂದಿಸಬೇಕಾದ ಪರಿಮಾಣಗಳಿಗೆ ಭೌತಶಾಸ್ತ್ರದಲ್ಲಿ ಸದಿಶಗಳು (ವೆಕ್ಟರ‍್ಸ್) ಎಂದೂ ಪ್ರಮಾಣ ಮಾತ್ರ ನಮೂದಿಸಬೇಕಾದ ಪರಿಮಾಣಗಳಿಗೆ ಅದಿಶಗಳು (ಸ್ಕೇಲಾರ‍್ಸ್) ಎಂದೂ ಹೆಸರು. ಸ್ಥಾನಾಂತರಣ ಒಂದು ಸದಿಶ, ಚಲಿಸಿದ ದೂರ ಒಂದು ಅದಿಶ. ದೂರದ ಅಳತೆಯ ಅಂತಾರಾಷ್ಟ್ರೀಯ ಏಕಮಾನ ಮೀಟರ್

. ಜವ (ಸ್ಪೀಡ್) ಮತ್ತು ವೇಗ (ವೆಲಾಸಿಟಿ): ‘ಏಕಮಾನ ಕಾಲದಲ್ಲಿ ಚಲಿಸಿದ ದೂರ’ ಅಥವ ‘ಚಲನೆಯ ದರ’ ಅಥವ ‘ಸ್ಥಾನದ ಬದಲಾವಣೆಯ ದರ’ವೇ ಜವ. ಎಂದೇ, ೧ ಗಂಟೆಗೆ ಅಥವ ೧ ಸೆಕೆಂಡಿಗೆ ಇಂತಿಷ್ಟು ದೂರ ಎಂದು ಜವವನ್ನು ನಮೂದಿಸುವುದು ವಾಡಿಕೆ. ಚಲಿಸಿದ ಒಟ್ಟು ದೂರವನ್ನು ಆ ದೂರ ಕ್ರಮಿಸಲು ತೆಗೆದುಕೊಂಡ ಒಟ್ಟು ಸಮಯದಿಂದ ಭಾಗಿಸಿದರೆ ಸರಾಸರಿ ಜವ ತಿಳಿಯುತ್ತದೆ. ಚಲನೆಯ ದಿಕ್ಕು ಸಹಿತ ನಮೂದಿಸಿದ ಜವವೇ ವೇಗ. ಉದಾಹರಣೆಗೆ ಹೇಳಿಕೆಗಳ ‘ಗಂಟೆಗೆ ೩೦ ಕಿಮೀ ಜವದಲ್ಲಿ ಚಲಿಸುತ್ತಿದೆ’ ಅನ್ನುವುದು ಸರಿ, ‘ಗಂಟೆಗೆ ೩೦ ಕಿಮೀ ವೇಗದಲ್ಲಿ ಚಲಿಸುತ್ತಿದೆ’ ಅನ್ನುವುದು ತಪ್ಪು. ‘ಗಂಟೆಗೆ ಪೂರ್ವಾಭಿಮುಖವಾಗಿ ೩೦ ಕಿಮೀ ವೇಗದಲ್ಲಿ ಚಲಿಸುತ್ತಿದೆ ಅಥವ ‘ಅ’ ಎಂಬ ಸ್ಥಳದಿಂದ ‘ಬ’ ಎಂಬ ಸ್ಥಳಕ್ಕೆ ನೇರ ರೇಖೆಯ ಮೇಲೆ ೩೦ ಕಿಮೀ ವೇಗದಲ್ಲಿ ಚಲಿಸುತ್ತಿದೆ’ ಅನ್ನುವುದು ಸರಿ. ಜವ ಸದಿಶ, ವೇಗ ಅದಿಶ. ‘ಏಕಮಾನ ಕಾಲದಲ್ಲಿ ಆಗುವ ಸ್ಥಾನಾಂತರಣ ಅಥವ ಸ್ಥಾನಾಂತರಣದ ದರವೇ ವೇಗ’ ಅನ್ನುವ ವ್ಯಾಖ್ಯಾನವೂ ಇದೆ. ‘ಸ್ಥಾನಾಂತರಣ’ ಒಂದು ಸದಿಶ, ಎಂದೇ ವೇಗವೂ ಒಂದು ಸದಿಶ. ಚಿತ್ರ ೮ ಅನ್ನು ಇನ್ನೊಮ್ಮೆ ಗಮನಿಸಿ. ‘ಅ’ದಿಂದ ‘ಅ’ಗೆ ಚಲಿಸಿದ ದೂರ ೧೦೦ ಕಿಮೀ, ಚಲಿಸಲು ತೆಗೆದುಕೊಂಡ ಸಮಯ ೨ ಗಂಟೆ ಎಂದು ಇಟ್ಟುಕೊಂಡರೆ ಸರಾಸರಿ ಜವ ಗಂಟೆಗೆ ೫೦ ಕಿಮೀ ಆಗುತ್ತದೆ. ಈ ಎರಡು ಸ್ಥಳಗಳ ನಡುವಿನ ಕನಿಷ್ಠ ಅಂತರ ೬೦ ಕಿಮೀ ಎಂದು ಇಟ್ಟುಕೊಂಡರೆ ೨ ಗಂಟೆಯಲ್ಲಿ ೬೦ ಕಿಮೀ ಸ್ಥಾನಾಂತರಣವಾಗಿದೆ ಎಂದರ್ಥ. ಭೌತಶಾಸ್ತ್ರದ ಪರಿಭಾಷೆಯಲ್ಲಿ ‘ಅ’ ದಿಂದ ‘ಆ’ಕ್ಕೆ ಚಲಿಸಿದ ಸರಾಸರಿ ವೇಗ ಗಂಟೆಗೆ ೩೦ ಕಿಮೀ. ಈ ಉದಾಹರಣೆಯಲ್ಲಿ ಸರಾಸರಿ ಜವದ ಮೌಲ್ಯಕ್ಕೂ ಸರಾಸರಿ ವೇಗದ ಮೌಲ್ಯಕ್ಕೂ ವ್ಯತ್ಯಾಸ ಇರುವುದನ್ನು ಗಮನಿಸಿ. ‘ಸ್ಥಿರ ಅಥವ ಏಕರೀತಿಯ (ಕಾನ್‌ಸ್ಟೆಂಟ್, ಯೂನಿಫಾರ್ಮ್) ವೇಗ’ದಲ್ಲಿ ಚಲಿಸುತ್ತಿದೆ ಅಂದರೆ ಚಲನೆಯ ದಿಕ್ಕೂ ಬದಲಾಗುತ್ತಿಲ್ಲ ಜವವೂ ಬದಲಾಗುತ್ತಿಲ್ಲ ಎಂದರ್ಥ. ಇದು ಸಾಧ್ಯವಾಗುವುದು ನೇರ ರೇಖೀಯ ಚಲನೆಯಲ್ಲಿ ಮಾತ್ರ. ಚಲನೆಯ ದಿಕ್ಕು, ಚಲನೆಯ ಜವ ಈ ಎರಡರ ಪೈಕಿ ಒಂದು ಬದಲಾದರೂ ವೇಗದಲ್ಲಿ ಬದಲಾವಣೆ ಆಗಿದೆ ಎಂದೇ ಅರ್ಥೈಸಬೇಕು. ದೈನಂದಿನ ಆಡುಬಾಷೆಯಲ್ಲಿ ನಾವು ಇಂಗ್ಲಿಷ್‌ನ ‘ಸ್ಪೀಡ್’ ಪದಕ್ಕೆ ಪಾರಿಭಾಷಿಕ ಪದವಾಗಿ ‘ವೇಗ’ ಅನ್ನುವ ಪದದ ಬಳಕೆ ಮಾಡುತ್ತಿದ್ದೇವೆ. ಭೌತಶಾಸ್ತ್ರದ ಪ್ರಕಾರ ಇದ್ದು ತಪ್ಪು ಬಳಕೆ. ಜವ, ವೇಗ ಇವುಗಳ ಅಳತೆಯ ಅಂತಾರಾಷ್ಟ್ರೀಯ ಏಕಮಾನ ಮೀ/ಸೆ (ಉದಾ : ೧೦೦ಮೀ/ಸೆ : ೧ ಸೆಕೆಂಡಿಗೆ ೧೦೦ ಮೀಟರ್)

. ವೇಗೋತ್ಕರ್ಷ (ಆಕ್ಸೆಲರೇಷನ್) : ಏಕಮಾನ ಕಾಲದಲ್ಲಿ ವೇಗದಲ್ಲಿ ಅಗುವ ಬದಲಾವಣೆ ಅಥವ ವೇಗದಲ್ಲಿ ಆಗುವ ಬದಲಾವಣೆಯ ದರವೇ ವೇಗೋತ್ಕರ್ಷ. ವೇಗೋತ್ಕರ್ಷವೂ ಒಂದು ಸದಿಶ. ಬದಲಾವಣೆಯ ದರ ಸ್ಥಿರವಾಗಿದ್ದರೆ ಅದು ಏಕರೀತಿಯ (ಯೂನಿಫಾರ್ಮ್) ವೇಗೋತ್ಕರ್ಷ. ಇದರ ಅಳತೆಯ ಅಂತಾರಾಷ್ಟ್ರೀಯ ಏಕಮಾನ ಮೀ/ಸೆ೨ (ಉದಾ: ೧೦ಮೀ/ಸೆ೨ : ೧ ಸೆಕೆಂಡಿನಲ್ಲಿ ವೇಗ ೧೦ ಮೀಟರ್/ಸೆ ನಷ್ಟು ಬದಲಾಗುತ್ತದೆ). ವೇಗೋತ್ಕರ್ಷದ ಮೌಲ್ಯಕ್ಕೆ + ಚಿಹ್ನೆಯನ್ನು ಲಗತ್ತಿಸಿದ್ದರೆ ವೇಗ ಹೆಚ್ಚುತ್ತಿದೆ ಎಂದೂ – ಚಿಹ್ನೆಯನ್ನು ಲಗತ್ತಿಸಿದ್ದರೆ ವೇಗ ಕಮ್ಮಿಯಾಗುತ್ತಿದೆ ಎಂದೂ ಅರ್ಥೈಸಬೇಕು (ಉದಾ: +೧೦ಮೀ/ಸೆ೨ : ೧ ಸೆಕೆಂಡಿನಲ್ಲಿ ವೇಗ ೧೦ ಮೀಟರ್/ಸೆ ನಷ್ಟು ಹೆಚ್ಚುತ್ತಿದೆ, – ೧೦ಮೀ/ಸೆ೨ : ೧ ಸೆಕೆಂಡಿನಲ್ಲಿ ವೇಗ ೧೦ ಮೀಟರ್/ಸೆ ನಷ್ಟು ಕಮ್ಮಿಯಾಗುತ್ತಿದೆ).

 

ಆಕರಗಳು

1. George Gamow, John M. Cleveland (1978) Physics: Foundations and Frontiers (3rd Edition). New Delhi: Prentice Hall of India Limited

2. Robert Resnick, David Halliday (1987) Physics Part I. New Delhi: Wiley Eastern Limited

3. Hugh D. Young, Mark W. Zemansky, Francis W. Sears (1988) University Physics. New Delhi: Narosa Publishing House

. ಇಂಗ್ಲಿಷ್ಕನ್ನಡ ವಿಜ್ಞಾನ ಪದಕೋಶ (೨೦೦೭) ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು

. ನವಕರ್ನಾಟಕ ವಿಜ್ಞಾನ ಪದ ವಿವರನ ಕೋಶ (೨೦೦೧) ನವಕರ್ನಾಟಕ ಪ್ರಕಾಶನ, ಬೆಂಗಳೂರು

6. The Mysore University English – Kannada Dictionary (2004) Prasaranga, Mysore University