ಮಾರಾಟಕ್ಕೆ ಸಿದ್ಧ ಥರಾವರಿ ಕಂಬಳಿ

ಗಾಂಧೀಜಿ ಜನಪದರ ವೃತ್ತಿ ಕಸಬುಗಳನ್ನೇ ಆಧರಿಸಿದ ಪುಟ್ಟ- ಪುಟ್ಟ ಕೈಗಾರಿಗೆಗಳನ್ನು ಅಭಿವೃದ್ಧಿಪಡಿಸುವ ಗುಡಿ ಕೈಗಾರಿಕೆಗಳ ಕಲ್ಪನೆಯನ್ನು ಕೊಟ್ಟರು. ಆ ಮೂಲಕ ಜನಸಾಮಾನ್ಯರು ಸ್ವಾವಲಂಬಿಗಳಾಗಿ ಬದುಕುವ ಕನಸು ಕಂಡಿದ್ದರು. ಆದರೆ, ಇಂದು ಜನಪದರ ಕಸಬುಗಳು ಕೆಲವು ಕಳೆದೇ ಹೋದವು. ಕಾರಣ ಅವುಗಳು ವರ್ತಮಾನದ ಜತೆ ಸಾವಯವ ಸಂಬಂಧ ಕಡಿದುಕೊಂಡು ಪರಕೀಯ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು.

ಇಷ್ಟೆಲ್ಲದರ ನಡುವೆ ಇನ್ನೂ ಅನೇಕ ಜನಪದ ಕುಲಕಸಬುಗಳು ಜೀವಂತವಾಗಿವೆ. ಆದರೆ, ಅವುಗಳು ಪಡೆದ ವ್ಯಾಪಕ ವಿಸ್ತಾರವನ್ನು ಕಡಿದುಕೊಂಡು ಒಂದು ಸಣ್ಣ ವಲಯದಲ್ಲಿ ಜೀವಿಸುತ್ತಿವೆ. ಅದನ್ನು ಗುರುತಿಸಿ ಅದರ ವಲಯದ ವ್ಯಾಪ್ತಿಯನ್ನು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಬೇಕಿದೆ. ಮುಖ್ಯವಾಗಿ ಆಯಾ ಕಸಬು ಯಾವ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ? ಅದನ್ನು ನಂಬಿದ ಜನರ ಬದುಕು ಹೇಗಿದೆ? ಈ ಕಸುಬಿಗೆ ಮರುಜೀವ ತುಂಬಲು ಅದನ್ನು ನಂಬಿದವರು ನಿರೀಕ್ಷಿಸುವುದೇನು? ಅದರ ಬಳಕೆಯ ವಲಯವನ್ನು ಹೆಚ್ಚಿಸಿ ಆಯಾ ಕಸಬಿಗೆ ಮರುಜೀವ ನೀಡುವ ಸಾಧ್ಯತೆಗಳೇನು? ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಬಗೆಯ ವೃತ್ತಿಕಸಬುಗಳನ್ನು ಮರು ಭೇಟಿ ಮಾಡುವ ಅಗತ್ಯವಿದೆ. ಹೀಗೆ ಚಳ್ಳಕೆರೆಯ ಕಂಬಳಿ ಉದ್ಯಮವನ್ನು ಮರು ಭೇಟಿ ಮಾಡಿ ಅದರ ಸದ್ಯದ ಸ್ಥಿತಿಯನ್ನು ಗುರುತಿಸಲು ಈ ಬರಹದಲ್ಲಿ ಪ್ರಯತ್ನಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಚಳ್ಳಕೆರೆ. ಇದೊಂದು ವಾಣಿಜ್ಯ ಪಟ್ಟಣ. ಇಲ್ಲಿ ಎಣ್ಣೆ, ಭತ್ತ ಮುಂತಾದ ಕಾರ್ಖಾನೆಗಳಿವೆ. ಎಣ್ಣೆಯ ಉದ್ಯಮಕ್ಕೆ ಹೆಚ್ಚು ಹೆಸರುವಾಸಿಯಾಗಿರುವುದರಿಂದ ಚಳ್ಳಕೆರೆಯನ್ನು ‘ಆಯಿಲ್ ಟೌನ್’ ಎಂತಲೂ ಕರೆಯುತ್ತಾರೆ. ಇಲ್ಲಿನ ದೇಸಿ ಮಾರುಕಟ್ಟೆ ಜನಸಮುದಾಯದ ವ್ಯಾಪಕ ವಿಸ್ತಾರವನ್ನು ಹೊಂದಿದೆ.

ಮುಖ್ಯವಾಗಿ ಈ ಭಾಗದಲ್ಲಿ ಕಂಬಳಿ ನೇಯುವ ಜನಪದ ಕಸಬು ಜೀವಂತವಾಗಿದೆ. ಇಂದು ಕರ್ನಾಟಕದ ಬೇರೆ- ಬೇರೆ ಭಾಗಗಳಲ್ಲಿಯೂ ಕಂಬಳಿ ನೇಯ್ಗೆ ಇದೆ. ಆದರೆ, ಅದರ ಪ್ರಮಾಣ ಮೊದಲಿಗಿಂತ ಈಗ ಕಡಿಮೆಯಾಗುತ್ತಾ ಸಾಗುತ್ತಿದೆ. ಇದು ಮೂಲತಃ ಕುರಿಸಾಕಣೆಗೆ ಹೊಂದಿಕೊಂಡಂತಹ ಉಪಕಸಬು. ಕುರಿಯ ಕೂದಲನ್ನು ಕತ್ತರಿಸಿ, ಆ ಕೂದಲಿನಿಂದ ನೂಲು ತೆಗೆದು, ಆ ನೂಲಿನಿಂದ ಕಂಬಳಿ ನೇಯುವುದು, ಆ ಕಂಬಳಿಯನ್ನು ಮಾರಾಟ ಮಾಡುವುದು ನಡೆಯುತ್ತದೆ.

ಇಂದು ಕುರಿ ಸಾಕಣೆಯ ಪ್ರಮಾಣವೇ ಕಡಿಮೆಯಾಗುತ್ತಿರುವುದರಿಂದ ಸಹಜವಾಗಿ ಅದಕ್ಕೆ ಹೊಂದಿಕೊಂಡಂತಹ ಕಂಬಳಿ ನೇಯ್ಗೆಯೂ ಮೊದಲಿಗಿಂತ ಕಡಿಮೆಯಾಗಿದೆ. ಈ ನಡುವೆಯೂ ಚಳ್ಳಕೆರೆಯಲ್ಲಿ ಕಂಬಳಿ ಉದ್ಯಮ ಪ್ರತಿ ವಾರವೂ ಹತ್ತಾರು ಲಕ್ಷಗಳ ವಹಿವಾಟು ನಡೆಸುತ್ತಿದೆ. ಈ ಉದ್ಯಮವನ್ನು ನಂಬಿ ಈ ಭಾಗದ ನೂರಾರು ಹಳ್ಳಿಗಳ ಜನರು ಕಂಬಳಿ ನೇಯುವ ಕುಲಕಸಬಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಒಂದು ನೋಟ ಇಲ್ಲಿದೆ.

ಕಂಬಳಿ ಮಾರಾಟ ಭರಾಟೆ

ಚಳ್ಳಕೆರೆಯ ಸಂತೆಪೇಟೆಯ ಕಂಬಳಿಕಟ್ಟೆ ಎನ್ನುವ ಪ್ರದೇಶದಲ್ಲಿ ಪ್ರತಿ ಭಾನುವಾರ ಕಂಬಳಿ ಸಂತೆ ನಡೆಯುತ್ತದೆ. ಆ ದಿನ ಕಂಬಳಿ ಅಂಡಿಗೆಗಳು ಬಂದು ಇಳಿಯುತ್ತವೆ. ಒಂದೆರಡು ಕಂಬಳಿಗಳನ್ನು ನೇಯ್ದು ವಾರದ ಮನೆ ಕರ್ಚಿಗೆಂದು ಮಾರಲು ಬಂದ ಬಿಡಿ ಕಂಬಳಿದಾರರೂ ಇರುತ್ತಾರೆ. ಇಲ್ಲಿ ಸುತ್ತಮುತ್ತಲ ಹಳ್ಳಿಗಳ ಕುರಿಗಾರರು, ರೈತರು, ನೇಕಾರರು ತಾವು ನೇಯ್ದು ತಂದ ಕಂಬಳಿಗಳನ್ನು ಮಾರಾಟ ಮಾಡುತ್ತಾರೆ. ಕಂಬಳಿಯನ್ನು ಕೊಳ್ಳಲು ಆಂಧ್ರ, ಮಹಾರಾಷ್ಟ್ರ, ಹಿಮಾಚಲ, ಕಾಶ್ಮೀರ, ಅಂಡಮಾನ್- ನಿಕೋಬರ್ ಭಾಗಗಳಿಂದಲೂ ವ್ಯಾಪಾರಸ್ಥರು ಬರುತ್ತಾರೆ.

ವಿಪರ್ಯಾಸವೆಂದರೆ, ಕಂಬಳಿಯ ಬಳಕೆ ಈ ಭಾಗದಲ್ಲಿಯೇ ಕಡಿಮೆಯಾಗಿದೆ. ಹಿಮಾಲಯ, ಕಾಶ್ಮೀರ ಮುಂತಾದ ಹಿಮ- ಚಳಿ ಹೆಚ್ಚಿರುವ ಉತ್ತರ ಭಾರತದಲ್ಲಿ ಕಂಬಳಿಗೆ ದೊಡ್ಡ ಬೇಡಿಕೆ ಇದೆ. ಈ ಬೇಡಿಕೆಯನ್ನು ಆಧರಿಸಿಯೇ ಇಲ್ಲಿ ಕಂಬಳಿ ಸಂತೆ ಈಗಲೂ ಕಳೆಗಟ್ಟುತ್ತಿರುವುದು. ಉತ್ತರ ಭಾರತದ ರಾಜ್ಯಗಳ ಜನರು ಬೆಚ್ಚಗಿರಲು ಚಳ್ಳಕೆರೆ ಭಾಗದ ಕಂಬಳಿಯನ್ನು ನೆಚ್ಚಿದ್ದರಿಂದ ಕಂಬಳಿ ನೇಯ್ಗೆಯನ್ನು ನಂಬಿದ ಸಮುದಾಯಗಳ ಹೊಟ್ಟೆ ತಣ್ಣಗಿದೆ.

ನೇಕಾರರು ಸಂತೆ ಕಂಬಳಿಯನ್ನು ಎರಡು ದಿನಕ್ಕೆ ಒಂದರಂತೆ ನೇಯ್ದರೆ, ನೈಸ್ ಕಂಬಳಿಯನ್ನು ವಾರಕ್ಕೆ ಒಂದರಂತೆ ನೇಯುತ್ತಾರೆ. ಒಂದು ಕಂಬಳಿಗೆ ೩೫೦ ರೂಪಾಯಿಗಳಿಂದ ಆರಂಭವಾಗಿ, ೨೦೦೦ ರೂಪಾಯಿಗಳ ತನಕ ತಾರಾವರಿ ಬೆಲೆ ಇದೆ. ಈ ಬೆಲೆಯು ಆಯಾ ಕಂಬಳಿಯ ಗುಣಮಟ್ಟ ಮತ್ತು ಕಂಬಳಿಗೆ ಬಳಸಿದ ಉಣ್ಣೆಯ ಗುಣಮಟ್ಟವನ್ನು ಆಧರಿಸಿರುತ್ತದೆ. ಸಂತೆ ಕಂಬಳಿ ಒರಟಾಗಿದ್ದರೆ, ನೈಸ್ ಕಂಬಳಿ ತುಂಬಾ ನಯವಾಗಿಯೂ ತೆಳ್ಳಗೂ ಇರುತ್ತದೆ. ಆಧುನಿಕ ಕಾಲಮಾನಕ್ಕೆ ಒಪ್ಪುವಂತೆ ನಯವಾದ ಕಂಬಳಿಯನ್ನು ನೇಯುವ ಬದಲಾವಣೆಯೂ ಈ ನೇಯ್ಗೆಯಲ್ಲಿ ಆಗಿದೆ.

ಈ ಕಂಬಳಿ ಸಂತೆಯಲ್ಲಿ ಕೇವಲ ಕಂಬಳಿ ಮಾತ್ರ ಮಾರಾಟವಾಗುವುದಿಲ್ಲ, ಅದಕ್ಕೆ ಹೊಂದಿಕೊಂಡಂತೆ ಉಣ್ಣೆ ಮತ್ತು ಕಂಬಳಿ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಾಟವೂ ನಡೆಯುತ್ತದೆ. ಅದರಲ್ಲಿ ಮುಖ್ಯವಾಗಿ ಹುಣಸೆ ಹಿಟ್ಟು (ಸರಿ ಪುಡಿ), ದಾರ (ಬೆದ), ಬಣ್ಣ (ನೀಲಿ ಮತ್ತು ಕೆಂಪು), ಕುಂಚಿಗೆ, ಉಣ್ಣೆ ಕತ್ತರಿ ಮುಂತಾದವುಗಳ ಮಾರಾಟವೂ ನಡೆಯುತ್ತದೆ.

ಇಲ್ಲಿಗೆ ಪ್ರಮುಖವಾಗಿ ಚಳ್ಳಕೆರೆ ಸುತ್ತಮುತ್ತಲ ಗೊರಲಕಟ್ಟಿ, ನೀರಲಗುಂಟೆ, ಚೌಳೂರು, ತರಗಲಬಂಡೆ, ಕಾಮ ಸಮುದ್ರ, ದೊಡ್ಡುಳ್ಳಾರ್ತಿ, ಗಟ್ಟಪರ್ತಿ, ಓಬಳಾಪುರ, ಕೊಂಡ್ಲಹಳ್ಳಿ, ಮೊಗಲಹಳ್ಳಿ, ತಾಯಕನಹಳ್ಳಿ, ಉಡೇಂ, ಪರೆಕೋಲಮ್ಮನಹಳ್ಳಿ ಮುಂತಾದ ಹಳ್ಳಿಗಳಿಂದ ಕಂಬಳಿ ತಯಾರಕರು ಕಂಬಳಿ ಮಾರಲು ಬರುತ್ತಾರೆ.

ಕುರಿಗಾರಿಕೆ ಮತ್ತು ಕಂಬಳಿ ನೇಯ್ಗೆಯಲ್ಲಿ ಇಲ್ಲಿನ ಹಲವಾರು ಸಮುದಾಯಗಳು ಭಾಗಿಯಾಗಿವೆ. ಪ್ರಮುಖವಾಗಿ ಇದರಲ್ಲಿ ಕುರುಬರು, ಗೊಲ್ಲರು, ಬೇಡರು, ಒಕ್ಕಲಿಗರ ಸಮುದಾಯಗಳಿವೆ. ಉಣ್ಣೆ ತೆಗೆಯುವುದು, ಉಣ್ಣೆಯನ್ನು ಸ್ವಚ್ಚಗೊಳಿಸುವುದು, ನೂಲು ತೆಗೆಯುವುದು, ನೇಯುವುದರಲ್ಲಿ ಮಹಿಳೆಯರ ಭಾಗವಹಿಸುವಿಕೆ ದೊಡ್ಡ ಪ್ರಮಾಣದಲ್ಲಿದೆ. ಆದರೆ, ಇದರ ಮಾರಾಟ, ವ್ಯವಹಾರದಲ್ಲಿ ಮಾತ್ರ ಮಹಿಳೆಯರ ಪಾತ್ರ ಶೂನ್ಯ.

ಕಂಬಳಿಯ ವ್ಯಾಪಾರದಲ್ಲಿ ಪುರುಷ ಪ್ರಧಾನತೆಯೇ ಎದ್ದು ಕಾಣುತ್ತದೆ. ಕುರಿಯವರಿಂದ ನೇಕಾರರು ಕುರಿಯ ಉಣ್ಣೆಯನ್ನು ಕತ್ತರಿಸಿಕೊಂಡು ಬಂದು, ಅದಕ್ಕೆ ಬದಲಿಯಾಗಿ ಕುರಿಯವರಿಗೆ ಕಂಬಳಿಯನ್ನು ಕೊಡುವ ಪದ್ಧತಿ ಇದೆ. ಈಗೀಗ ಕುರಿಯ ಉಣ್ಣೆ ಕತ್ತರಿಸಲು ಕುರಿಯವರೇ ನೇಕಾರರಿಗೆ ಒಂದು ಕುರಿಗೆ ಎರಡು ರೂಪಾಯಿಯನ್ನು ಕೊಡುತ್ತಾರೆ. ಸ್ವಚ್ಚಗೊಂಡ ಒಂದು ಮಣ ಉಣ್ಣೆಗೆ ೩೫೦ ರಿಂದ ೪೦೦ ರೂ.ಗಳವರೆಗೆ ಬೆಲೆ ಇದೆ.

ಕಂಬಳಿ ನೇಯುವ ನೇಕಾರ ಕುಟುಂಬಗಳಿಗೆ ಸ್ವಲ್ಪಮಟ್ಟಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರ ಕಲ್ಯಾಣ ಯೊಜನೆಯಡಿ ಸಹಾಯ ದೊರೆಯುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಹೆರಿಗೆ ಭತ್ಯೆ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಹೀಗೆ ಹಲವಾರು ಯೋಜನೆಗಳಿವೆ. ಇವುಗಳ ಸಮರ್ಥವಾದ ವಿತರಣೆಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸೌಲಭ್ಯಗಳನ್ನು ಕೂಡ ರಾಜಕೀಯವಾಗಿ ಪ್ರಬಲವಿರುವವರು ಪಡೆಯುತ್ತಾರೆ. ಹಾಗಾಗಿ ಇಲ್ಲಿಯೂ ಅಸಹಾಯಕ ನೇಕಾರರು ಸೌಲಭ್ಯಗಳನ್ನು ಪಡೆಯಲು ಇಲ್ಲದ ಹರಸಾಹಸ ಮಾಡಬೇಕಾಗಿದೆ.

ಪಟ್ಟೆ ಕಂಬಳಿಗೆ ಚೌಕಾಸಿ!

ಈ ಕಂಬಳಿ ಉದ್ಯಮವನ್ನು ಆಧರಿಸಿ ಚಳ್ಳಕೆರೆಯಲ್ಲಿ ಸರ್ಕಾರ ‘ಉಣ್ಣೆ ಉತ್ಪಾದನಾ ಮಾರಾಟ ಸಹಕಾರ ಮಹಾ ಮಂಡಳ’ವನ್ನು ಸ್ಥಾಪಿಸಿದೆ. ಈ ಮಂಡಳಿ ನೇಕಾರರಿಗೆ ಉಣ್ಣೆಯನ್ನು ಮಾರಾಟ ಮಾಡುತ್ತದೆ, ಅಂತೆಯೇ ಕಂಬಳಿಯನ್ನು ಕೊಳ್ಳುವ ಮತ್ತು ಮಾರುವ ಕೆಲಸಕ್ಕೆ ಸಹಕಾರವನ್ನೂ, ಕಂಬಳಿಗೆ ಪೂರಕವಾದ ಸಾಲ- ಸೌಲಭ್ಯಗಳನ್ನೂ ಒದಗಿಸುತ್ತದೆ. ಆದರೆ, ಅದು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನೇಕಾರರಿಗೆ ಸ್ಪಂದಿಸಿದಂತೆ ಕಾಣುವುದಿಲ್ಲ.

ಇಲ್ಲಿ ಕಂಬಳಿಯನ್ನು ಆಧರಿಸಿದ ದೊಡ್ಡ ಆಚರಣಾ ಪರಂಪರೆಯೇ ಇದೆ. ಇದರಲ್ಲಿ ಸ್ವಲ್ಪ ಬದಲಾವಣೆಯಾಗಿದೆಯಾದರೂ ಅದರ ಸಾಂಪ್ರದಾಯಿಕ ನಂಬಿಕೆಯ ಲೋಕದಲ್ಲಿ ಅಷ್ಟು ಬದಲಾವಣೆ ಆದಂತಿಲ್ಲ. ಈ ಕಂಬಳಿ ನೇಯ್ಗೆಯ ಉದ್ಯಮದಲ್ಲಿ ಯುವ ಜನತೆಯನ್ನು ಆಕರ್ಷಿಸುವಂತಹ ಗುಣ ಕಡಿಮೆ. ಅದರಲ್ಲೂ ವಿದ್ಯಾವಂತ ಯುವ ಜನತೆ ಈ ಕಂಬಳಿ ನೇಯ್ಗೆ ಉದ್ಯಮದ ಕಡೆ ಬರುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ಅಥವಾ ನಗರಗಳತ್ತ ವಲಸೆ ಹೋಗುವ ಯುವಕರನ್ನು ಕಂಬಳಿ ಉದ್ಯಮದಲ್ಲಿ ತೊಡಗಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ಈ ಕಂಬಳಿ ಉದ್ಯಮವನ್ನು ಮತ್ತಷ್ಟು ಬೆಳೆಸುವ ಸಾಧ್ಯತೆಗಳಿವೆ.