ಚಾಂದ್ ಬೀಬಿ ಅಹಮದ್ ನಗರ ಇಂದಿನ ಮಹಾರಾಷ್ಟ್ರ ರಾಜ್ಯದಲ್ಲಿ ಒಂದು ಚಿಕ್ಕ ಜಿಲ್ಲೆ. ಜಿಲ್ಲೆಯ ಹೆಸರನ್ನೇ ಹೊಂದಿರುವ ಅಹಮದ್‌ನಗರ ಆ ಜಿಲ್ಲೆಯ ಮುಖ್ಯ ಸ್ಥಳ. ಅಹಮದ್‌ನಗರ ಇಂದು ಒಂದು ಚಿಕ್ಕ ಊರಾದರೂ ಸುಮಾರು ಐನೂರು ವರ್ಷಗಳ ಹಿಂದೆ ಒಂದು ದೊಡ್ಡ ರಾಜ್ಯದ ರಾಜಧಾನಿ ಯಾಗಿತ್ತು. ನಿಜಾಂಷಾಹಿ ಅರಸರ ಆಳ್ವಿಕೆಯಲ್ಲಿ ಆ ರಾಜ್ಯ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿತ್ತು. ಬಹಮನಿ ರಾಜ್ಯದ ಪತನದ ನಂತರ ಪ್ರಾಮುಖ್ಯಕ್ಕೆ ಬಂದ ನಾಲ್ಕು ರಾಜ್ಯಗಳಲ್ಲಿ ಅಹಮದ್ ನಗರವೂ ಒಂದಾಗಿತ್ತು.


ರಾಜ್ಯದಲ್ಲಿ ಒಡಕು

ಅಹಮದ್ ನಗರದ ಕೋಟೆ ಬಹಳ ಭದ್ರವಾಗಿತ್ತು.

ಮೊದಲು ಈ ಕೋಟೆಯನ್ನು ಹುಸೇನ್ ನಿಜಾಂ ಷಾ ಮಣ್ಣಿನಿಂದ ಕಟ್ಟಿಸಿದ. ಅನಂತರ ಅದನ್ನು ಮತ್ತೆ ಕಲ್ಲುಗಳಿಂದ ಕಟ್ಟಿ ಭದ್ರಪಡಿಸಲಾಯಿತು. ಕೋಟೆಯನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ಮಿಸಿದ್ದು, ಶತ್ರುಗಳು ಕೋಟೆಯೊಳಕ್ಕೆ ಪ್ರವೇಶಿಸುವುದು ಬಹಳ ಕಷ್ಟವಾಗಿತ್ತು. ಹುಸೇನ್ ನಿಜಾಂ ಷಾ ೧೫೫೩ ರಿಂದ ೧೫೬೫ರ ವರೆಗೆ ರಾಜ್ಯವಾಳಿದನು. ಅನಂತರ ಅವನ ಮಗ ಬುರ‍್ಹಾನ್ ಉಲ್ ಮುಲ್ಕ್ ಅಣ್ಣನೊಡನೆ ಜಗಳವಾಡಿ ತಾನೇ ರಾಜನಾದ.

ಹೊಸ ರಾಜ

ಬುರ‍್ಹಾನ್ ಉಲ್ ಮುಲ್ಕ್ ರಾಜ್ಯವನ್ನೇನೋ ಪಡೆದ. ಆದರೆ ಅವನು ಸಮರ್ಥನಾದ ರಾಜನಾಗಿರಲಿಲ್ಲ. ರಾಜ್ಯಭಾರಕ್ಕಿಂತ ಅವನಿಗೆ ಸುಖವಾಗಿ ಕಾಲ ಕಳೆಯುವುದು ಹೆಚ್ಚು ಇಷ್ಟವಾಗಿತ್ತು. ರಾಜ್ಯದ ಕಾರ್ಯಭಾರಗಳನ್ನು ಮಂತ್ರಿಗಳಿಗೇ ಬಿಟ್ಟು, ಅವನು ಸದಾ ಮದ್ಯಪಾನ ಮಾಡುತ್ತಾ ಸುಂದರ ಸ್ತ್ರೀಯರೊಂದಿಗೆ ಸಂಗೀತ, ನರ್ತನಗಳಲ್ಲಿ ಕಾಲ ಕಳೆಯುತ್ತಿದ್ದ.

ಬುರ‍್ಹಾನ್ ೧೫೯೫ರಲ್ಲಿ ಮರಣಹೊಂದಿದ, ತಂದೆಯ ಆದೇಶದಂತೆ ಇಬ್ರಾಹಿಂ ಸಿಂಹಾಸನವನ್ನೇರಿದ. ಒಂದು ಯುದ್ಧದಲ್ಲಿ ಇಬ್ರಾಹಿಂ ಶತ್ರುವಿನ ಬಾಣಕ್ಕೆ ಬಲಿ ಯಾದ. ಅಹಮದ್ ನಗರದ ಸಿಂಹಾಸನಕ್ಕೆ ಹಕ್ಕುದಾರರು ಯಾರೆಂದು ಮತ್ತೆ ಜಗಳ ಶುರುವಾಯಿತು. ಬುರ‍್ಹಾನನ ಮೊಮ್ಮಗ ಅಹಮದ್ ಸಿಂಹಾಸನವನ್ನೇರಬೇಕೆಂದು ಕೆಲವರೂ, ಇಬ್ರಾಹಿಂನ ಮಗ ಬಹದ್ದೂರ್ ನ್ಯಾಯವಾದ ಹಕ್ಕುದಾರನೆಂದು ಕೆಲವರೂ ಗುಂಪು ಕಟ್ಟಿದರು.

ಬಹದ್ದೂರ್ ಚಿಕ್ಕ ಹುಡುಗನಾದುದರಿಂದ, ಅವನ ಹೆಸರಿನಲ್ಲಿ ತಾವು ಅಧಿಕಾರ ನಡೆಸಬಹುದೆಂದು ಕೆಲವು ಮುಖಂಡರು ಯೋಚಿಸಿದರು. ಆದರೆ ಅವರಿಗೆಲ್ಲ ಒಂದು ದೊಡ್ಡ ಆಶ್ಚರ್ಯ ಕಾದಿತ್ತು. ಹುಸೇನ್ ನಿಜಾಂ ಷಾನ ಮಗಳೂ ಬುರ‍್ಹಾನನ ಸಹೋದರಿಯೂ ಆಗಿದ್ದ ಚಾಂದ್ ಬೀಬಿ ಬಹದ್ದೂರನೇ ರಾಜನೆಂದೂ ಅವನ ಪರವಾಗಿ ತಾನು ರಾಜ್ಯವನ್ನು ಆಳುವುದಾಗಿಯೂ ಘೋಷಿಸಿದಳು.

ಹೆಂಗಸಿನ ಆಡಳಿತವೇ!

ಒಬ್ಬ ಹೆಂಗಸು ರಾಜ್ಯವಾಳುವುದು ಅನೇಕರಿಗೆ ಬೇಡವಾದರೂ ಮುಖಂಡರ ಜಗಳಗಳಿಂದ ಬೇಸರ ಗೊಂಡಿದ್ದ ಜನತೆ ಅವಳನ್ನು ರಾಣಿಯೆಂದು ಸಂತೋಷ ದಿಂದಲೇ ಒಪ್ಪಿಕೊಂಡಿತು. ಹೆಂಗಸೋ ಗಂಡಸೋ ಚೆನ್ನಾಗಿ ರಾಜ್ಯವಾಳಿದರೆ ಸಾಕಾಗಿತ್ತು ಜನರಿಗೆ. ರಾಜ್ಯದೊಳಗಿನ ಜಗಳಗಳ ಜೊತೆಗೆ ಮೊಗಲ್ ಸಾಮ್ರಾಟ ಅಕ್ಬರ್ ರಾಜ್ಯಕ್ಕೆ ಮುತ್ತಿಗೆ ಹಾಕುವ ಭಯವೂ ಇತ್ತು. ಆದುದರಿಂದ ಚಾಂದ್ ಬೀಬಿ ರಾಜ್ಯ ಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡಾಗ ಸಾಮಾನ್ಯ ಜನತೆ ವಿರೋಧಿಸಲಿಲ್ಲ.

ಹೆಂಗಸೂ ಆಳಬಲ್ಲಳು

ಚಾಂದ್ ಬೀಬಿಯನ್ನು ಬಿಜಾಪುರದ ಆಲಿ ಆದಿಲ್ ಷಾನಿಗೆ ಮದುವೆ ಮಾಡಿಕೊಡಲಾಗಿತ್ತು. ಇವನು ಬಹಳ ಒಳ್ಳೆಯ ರಾಜ. ಇವನಿಗೆ ‘ಕನ್ನಡ ಜಾಣ’ ಎಂಬ ಬಿರುದಿತ್ತು. ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಆದಿಲ್ ಷಾನ ಮರಣದನಂತರ ಚಾಂದ್ ಬೀಬಿ ಆತನ ಸಹೋದರನ ಪುತ್ರ ಇಬ್ರಾಹಿಂ ಆದಿಲ್ ಷಾನಿಗೆ ಪಟ್ಟಕಟ್ಟಿದಳು, ಅವನ ಪರವಾಗಿ ತಾನೇ ಸ್ವಲ್ಪಕಾಲ ರಾಜ್ಯವಾಳಿದಳು. ಇವಳು ಬಹು ಚೆನ್ನಾಗಿ ರಾಜ್ಯವಾಳಿದಳು. ಜನರಿಗೆ ಇವಳಲ್ಲಿ ತುಂಬ ಗೌರವ ಮತ್ತು ಪ್ರೀತಿ ಬೆಳೆಯಿತು.  ಇವಳಿಗೊಬ್ಬ-ವಜೀರ-ಮುಖ್ಯಮಂತ್ರಿ ಇದ್ದ. ಅವನು ಮಹಾಪುಂಡ. ಅವನನ್ನು ತೆಗೆದುಹಾಕಿ ಮತ್ತೊಬ್ಬನನ್ನು ನೇಮಿಸಿದಳು. ಅಧಿಕಾರ ಕಳೆದುಕೊಂಡ ವಜೀರ ಮೋಸ ದಿಂದ ಚಾಂದ್ ಬೀಬಿಯನ್ನು ಸೆರೆಹಿಡಿದು ಸಾತಾರೆಯಲ್ಲಿಟ್ಟ. ಆದರೆ ಜನರಿಗೆ ಚಾಂದ್ ಬೀಬಿಯಲ್ಲಿ ಗೌರವ, ಆದರ. ಅವರು ದಂಗೆ ಎದ್ದರು. ವಜೀರನನ್ನು ತಳ್ಳಿಹಾಕಿ ಅವಳನ್ನು ಬಿಡಿಸಿದರು.

ಚಾಂದ್ ಬೀಬಿ ಎಷ್ಟು ಚೆನ್ನಾಗಿ ರಾಜ್ಯವಾಳಿದ್ದಳು ಎಂಬುದಕ್ಕೆ ಇದು ಗುರುತು.

ಇಬ್ರಾಹಿಂ ಆದಿಲ್‌ಷಾ ಪ್ರಾಪ್ತವಯಸ್ಕನಾದ, ಚಾಂದ್ ಬೀಬಿ ತೌರೂರಿಗೆ ಹಿಂದಿರುಗಲು ನಿಶ್ಚಯಿಸಿದಳು. ಅಹಮದ್ ನಗರದಲ್ಲಿ ಅಣ್ಣ ಬುರ‍್ಹಾನ್ ಸತ್ತುಹೋಗಿ ಬಾಲಕ ಬಹದ್ದೂರ್ ಸಿಂಹಾಸನವನ್ನೇರಿದಾಗ ಅವನಿಗೆ  ನೆರವಾಗಲು ನಿರ್ಧರಿಸಿದಳು.

ಚಾಂದ್ ಬೀಬಿ ಬಹಳ ಸುಂದರಿ. ಹೆಸರಿಗೆ ತಕ್ಕಂತೆ ಅವಳು ಚಂದ್ರನಂತೆಯೇ ಇದ್ದಳು. ಅವಳು ಬಹಳ ಚತುರೆಯೂ ಆಗಿದ್ದಳು. ರಾಜ್ಯದ ಆಡಳಿತ ಸುಗಮ ವಾಗಬೇಕಾದರೆ, ವಿವಿಧ ಪಕ್ಷಗಳ ಮುಖಂಡರ ಸಹಕಾರ ಅವಳಿಗೆ ಅಗತ್ಯವಾಗಿತ್ತು. ಆ ಸಹಕಾರ ಪಡೆದು ರಾಜ್ಯದಲ್ಲಿ ಒಗ್ಗಟ್ಟನ್ನು ಮೂಡಿಸಲು ಅವಳು ಬಹುವಾಗಿ ಶ್ರಮಿಸಿದಳು.

ಮೂರ್ಖ ಸರದಾರ

ಚಾಂದ್ ಬೀಬಿ ಆಡಳಿತ ನಡೆಸುವುದನ್ನು ವಿರೋಧಿಸುತ್ತಿದ್ದವರಲ್ಲಿ ಮಿಯಾನ್ ಮಂಜು ಎನ್ನುವ ಸರದಾರ ಮುಖ್ಯನಾಗಿದ್ದನು. ‘ಹೆಂಗಸಿಗೇನು ಗೊತ್ತು ರಾಜ್ಯಭಾರ ಕ್ರಮ ? ಅವಳ ಸುತ್ತಮುತ್ತ ಸೇರಿಕೊಳ್ಳುವ ಅನುಯಾಯಿಗಳ ಕೈಗೊಂಬೆಯಾಗುತ್ತಾಳೆ. ಇದೆಂದಿಗೂ ಆಗಕೂಡದು’ ಎನ್ನುತ್ತಿದ್ದ ಮಿಯಾನ್ ಮಂಜು. ಚಾಂದ್ ಬೀಬಿ ಪ್ರಬಲಳಾಗುವುದನ್ನು ತಪ್ಪಿಸಲು ಅವನು ಮೊಗಲರ ಸಹಾಯ ಪಡೆಯಲು ಹಿಂಜರಿಯಲಿಲ್ಲ. ಅಹಮದ್ ನಗರದ ರಾಜಕೀಯ ಗೊಂದಲವನ್ನು ಸರಿಪಡಿಸಬೇಕೆಂದು ಅವನು ಮೊಗಲ್ ಸಾಮ್ರಾಟ ಅಕ್ಬರನಿಗೆ ಒಂದು ಪತ್ರವನ್ನು ಬರೆದ. ಅವನ ಮಿತ್ರರು ಅವನ ಈ ಕೆಲಸವನ್ನು ಒಪ್ಪಲಿಲ್ಲ. “ನೀನು ಬಹಳ ದೊಡ್ಡ ತಪ್ಪು ಮಾಡುತ್ತಿರುವೆ, ಮಿಯಾನ್. ಮೊಗಲರನ್ನು ರಾಜ್ಯಕ್ಕೆ ಆಹ್ವಾನಿಸುವುದು ಸರಿಯಲ್ಲ. ನಮ್ಮನಮ್ಮ ಜಗಳದಲ್ಲಿ ಮೂರನೆಯವರು ಏಕೆ ಬರಬೇಕು? ಅಕ್ಬರ್ ಬಾದಶಹ ನಮ್ಮನ್ನು ಈ ಗೊಂದಲದಿಂದ ಪಾರು ಮಾಡುವುದಿಲ್ಲ. ನಮ್ಮ ರಾಜ್ಯವನ್ನು ಮೊಗಲ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ನಮ್ಮನ್ನು ಅವರ ದಾಸರನ್ನಾಗಿ ಮಾಡುತ್ತಾನೆ” ಎಂದರು. ಆದರೆ ಮಿಯಾನ್ ಮಂಜು ಯಾರ ಮಾತನ್ನೂ ಕೇಳಲಿಲ್ಲ.

ಇಬ್ಬರೂ ಸೇನಾನಿಗಳು !

ಅಕ್ಬರ್ ಇಂತಹ ಒಂದು ಅವಕಾಶಕ್ಕಾಗಿಯೇ ಕಾಯುತ್ತಿದ್ದ. ಉತ್ತರ ಹಿಂದೂಸ್ತಾನದ ಬಹು ಭಾಗವನ್ನು  ತನ್ನ ಸಾಮ್ರಾಜ್ಯಕ್ಕೆ ಸೇರಿಸಿದರೂ ಸಾಮ್ರಾಜ್ಯವನ್ನು ವಿಸ್ತರಿಸುವ ಹಂಬಲ ತೀರಿರಲಿಲ್ಲ. ಅಕ್ಬರ್ ದಕ್ಷಿಣದ ರಾಜ್ಯಗಳ ಕಡೆಗೂ ದೃಷ್ಟಿ ಹಾಕಿದ. ೧೫೯೧ ರಲ್ಲಿ ಅಕ್ಬರ್ ತನ್ನ ಪ್ರತಿನಿಧಿ ಮಹಮದ್ ಅಮೀನನನ್ನು ಅಹಮದ್ ನಗರಕ್ಕೆ ಕಳುಹಿಸಿದಾಗ, ಬುರ‍್ಹಾನ್, ಸಾಮ್ರಾಟನ ಪ್ರತಿನಿಧಿ ಎಂಬುದನ್ನೂ ಮರೆತು ಅವನನ್ನು ಅಪಮಾನಗೊಳಿಸಿದ್ದ, ಅಕ್ಬರನಿಗೆ ಬಹಳ ಕೋಪ ಬಂದು ಅಹಮದ್ ನಗರವನ್ನು ಮುತ್ತಿ, ಯುದ್ಧಮಾಡಲು ನಿಶ್ಚಯಿಸಿದ್ದ. ಬುರ‍್ಹಾನನ ಮರಣಾ ನಂತರ, ಆ ರಾಜ್ಯದಲ್ಲಿ ಗೊಂದಲ ಉಂಟಾಗಿದ್ದುದು ಅವನಿಗೆ ಅನುಕೂಲವೇ ಆಯಿತು. ಮಿಯಾನ್ ಮಂಜು ವಿನ ಆಹ್ವಾನ ‘ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ’ ಎನ್ನುವಂತಾಗಿತ್ತು. ಅಕ್ಬರ್ ಕೂಡಲೇ ಖಾನ್‌ಖಾನನ್ ಮಿರ್ಜಾ ಅಬ್ದುರ್ ರಹೀಮ್ ಎಂಬ ಸೇನಾನಿಯನ್ನು ದೊಡ್ಡ ಸೈನ್ಯದೊಂದಿಗೆ ದಕ್ಷಿಣಕ್ಕೆ ಕಳುಹಿಸಿದ.

ಖಾನ್‌ಖಾನನ್‌ನ ಸೈನ್ಯ ಅಹಮದ್ ನಗರದತ್ತ ಸಾಗುತ್ತಿದ್ದಾಗ, ಅಕ್ಬರನ ಮಗ ಮುರಾದನು ಆ ದಂಡ ಯಾತ್ರೆಯಲ್ಲಿ ತಾನೂ ಭಾಗವಹಿಸಬೇಕೆಂದು ನಿರ್ಧರಿಸಿದ,. ದಕ್ಷಿಣದ ರಾಜ್ಯಗಳನ್ನು ಗೆದ್ದು, ಬಾದಷಹನಿಂದ ಮೆಚ್ಚುಗೆ ಪಡೆಯುವುದಲ್ಲದೆ, ಗೆದ್ದ ರಾಜ್ಯ ಬೊಕ್ಕಸವನ್ನೂ ವಶ ಪಡಿಸಿಕೊಳ್ಳುವ ಅವಕಾಶವನ್ನು ಮುರಾದ ಬಿಡುವನೇ?   ಅವನು ಅಕ್ಬರನಿಗೆ ಖಾನ್‌ಖಾನನ್‌ನಿಗೂ ತಿಳಿಸದೆಯೇ ಅಹಮದ್ ನಗರಕ್ಕೆ ತನ್ನ ಸೈನ್ಯದೊಂದಿಗೆ ಹೊರಟ.

ಅಹಮದ್ ನಗರದ ಸಮೀಪದಲ್ಲಿ ಚಾಂದ್ ಎಂಬ ದುರ್ಗದ ಬಳಿ ಎರಡು ಸೈನ್ಯಗಳೂ ಒಟ್ಟುಗೂಡಿದವು. ಆದರೆ ಈ ಸಮಾಗಮ ಸ್ವಲ್ಪವೂ ಸೌಹಾರ್ದಯುತ ವಾಗಿರಲಿಲ್ಲ. ಮುರಾದನಿಗೆ ಮೊದಲಿನಿಂದಲೂ ಖಾನ್ ಖಾನನ್‌ನ ವಿಷಯದಲ್ಲಿ ಅಸೂಯೆ. ಖಾನ್‌ಖಾನನ್‌ನಿ ಗಾದರೋ ದಂಡಯಾತ್ರೆಗೆ ಬಾದಷಹರು ನೇಮಿಸಿದ ಸೇನಾನಿ ನಾನೆಂಬ ಗರ್ವ. ಇಬ್ಬರಿಗೂ ಒಂದಲ್ಲ ಒಂದು ವಿಷಯಕ್ಕೆ ಅಸಮಾಧಾನವಿದ್ದೇ ಇರುತ್ತಿತ್ತು. ಹೀಗಾಗಿ ಸೈನ್ಯದ ಮುನ್ನಡೆ ಬಹಳ ನಿಧಾನವಾಗಿತ್ತು.

ಅಹಮದ್ ನಗರದ ರಕ್ಷೆ ಚಾಂದ್ ಬೀಬಿ

ರಾಜ್ಯದ ಆಡಳಿತದ ಹೊಣೆಯನ್ನು ಹೊತ್ತ ಚಾಂದ್ ಬೀಬಿ ಮೈಯೆಲ್ಲ ಕಣ್ಣಾಗಿ ರಾಜ್ಯವನ್ನು ರಕ್ಷಿಸುತ್ತಿದ್ದಳು. ಮೊಗಲರ ಎರಡು ಸೈನ್ಯಗಳು ಬರುತ್ತಿದ್ದ ವಿಷಯ ಅವಳಿಗೆ ತಿಳಿಯುವುದು ತಡವಾಗಲಿಲ್ಲ. ರಾಜಕುಮಾರನಿಗೂ ಸೇನಾನಿಗೂ ಆದ ಜಗಳದಿಂದ ಉಂಟಾದ ವಿಳಂಬವನ್ನು ಚಾಂದ್ ಬೀಬಿ ಬಹಳ ಜಾಣ್ಮೆಯಿಂದ ಬಳಸಿಕೊಂಡಳು. ಕೋಟೆಯ ರಕ್ಷಣೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನೂ ಅವಳು ಕೈಗೊಂಡಳು. ಕೋಟೆಯೊಳಗೆ ಆಹಾರ ಸಾಮಗ್ರಿಗಳನ್ನೂ ಮದ್ದುಗುಂಡುಗಳನ್ನೂ ಸಂಗ್ರಹಿಸಿದಳು. ಅವಳ ಸೈನಿಕರು ಧೈರ್ಯ ಸಾಹಸಗಳಿಂದ ಯುದ್ಧ ಮಾಡಬಹುದಾದರೂ ಮೊಗಲರ ದೊಡ್ಡ ದಂಡನ್ನು ಎದುರಿಸುವುದು ಸುಲಭಸಾಧ್ಯವಾಗಿರಲಿಲ್ಲ. ನೆರೆ ಹೊರೆಯ ರಾಜ್ಯಗಳ ಸಹಾಯ ಪಡೆಯುವುದು ಅಗತ್ಯವಾಗಿತ್ತು. ಆದರೆ ಸಹಾಯ ಕೇಳುವ ಮೊದಲೇ ಖಾಂದೇಶದ ಅರಸ ಆದಿಲ್ ಖಾನನು ಮೊಗಲ್ ಸೈನ್ಯಕ್ಕೆ ಶರಣಾದ. ತನ್ನ ಸೈನ್ಯವನ್ನೂ ಸಾಮ್ರಾಟನ ಸೈನ್ಯದೊಂದಿಗೆ ಸೇರಿಸಿದ. ಆದರೆ ಚಾಂದ್ ಬೀಬಿ ಹೆದರಲಿಲ್ಲ. ಬಿಜಾಪುರ ಮತ್ತು ಗೋಲ್ಕೊಂಡದ ಅರಸರ ಸಹಾಯ ಪಡೆಯಲು ಯತ್ನಿಸಿದಳು. ಆ ರಾಜ್ಯಗಳಲ್ಲಿ ಹೆಚ್ಚಿನ ಪ್ರಭಾವ ಪಡೆದಿದ್ದ ಮಿಯಾನ್ ಮಂಜುವನ್ನೇ ಅಲ್ಲಿಗೆ ಕಳುಹಿಸಲು ನಿರ್ಧರಿಸಿದಳು.

ಆ ವೇಳೆಗೆ ಮಂಜುವಿನ ಧೋರಣೆಯೂ ಬದಲಾಗಿತ್ತು. ಮೊಗಲರನ್ನು ಕರೆದುದು ತಪ್ಪೆಂದು ಅವನಿಗೂ ಅರಿವಾಗಿತ್ತು. ಚಾಂದ್ ಬೀಬಿಗೆ ರಾಜ್ಯದಲ್ಲಿ ಬೆಂಬಲ ಹೆಚ್ಚುತ್ತಿತ್ತು. ಅವನೂ ಅವಳ ಪಕ್ಷಕ್ಕೆ ಸೇರುವುದು ಉತ್ತಮವಾಗಿತ್ತು. ಆದುದರಿಂದ ಚಾಂದ್ ಬೀಬಿಯ ಸೂಚನೆ ಬಂದೊಡನೆ ಅವನು ಬಹದ್ದೂರನನ್ನು ರಾಜನೆಂದು ಒಪ್ಪಿಕೊಂಡು, ಚಾಂದ್ ಬೀಬಿಗೆ ಬೆಂಬಲ ಕೊಡಲು ಒಪ್ಪಿದ. ಅವಳ ಸೂಚನೆಯಂತೆ ಬಿಜಾಪುರ ಮತ್ತು ಗೋಲ್ಕೊಂಡ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯವನ್ನು ಕರೆತರಲು ಬಿಜಾಪುರಕ್ಕೆ ತೆರಳಿದ.

ಮೊಗಲ್ ಸೇನೆ ನಿಧಾನವಾಗಿ ಮುನ್ನಡೆಯುತ್ತಿತ್ತು. ಚಾಂದ್ ಬೀಬಿ, ಅನುಭವ ಹೊಂದಿದ ನಿವೃತ್ತ ಸೇನಾನಿ ಗಳನ್ನು ಬರಮಾಡಿಕೊಂಡು ಕೋಟೆಯ ರಕ್ಷಣೆಗೆ ಅವರ ಸಲಹೆಗಳನ್ನು ಪಡೆದಳು. ಅಬಿಸೀನಿಯಾ ದೇಶಕ್ಕೆ ಸೇರಿದ್ದ ಮುಜಾಹುದ್ದೀನ್ ಷಂಷೇರ್ ಖಾನನೆಂಬ ಅನುಭವಿ ದಂಡನಾಯಕನನ್ನು ಮೊಗಲರ ವಿರುದ್ಧ ಹೋರಾಡಲು ಸೇನಾಧಿಪತಿಯನ್ನಾಗಿ ನೇಮಿಸಿದಳು. ಷಂಷೇರ್ ಖಾನನ ಅನೇಕ ಬೆಂಬಲಿಗರೂ ಅಹಮದ್ ನಗರದ ರಕ್ಷಣೆಗೆ ಸಿದ್ಧರಾದರು. ಮಹಮದ್ ಖಾನ್ ಮತ್ತು ಅಭಂಗ್ ಖಾನರೆಂಬ ಇಬ್ಬರು ಸಮರ್ಥ ನಾಯಕರ ನೆರವನ್ನೂ ಚಾಂದ್ ಬೇಬಿ ಪಡೆದಳು.

ಮುತ್ತಿಗೆ ಪ್ರಾರಂಭ

೧೫೯೫ ನೇ ವರ್ಷದ ಕೊನೆಯಲ್ಲಿ ಮೊಗಲ್ ಸೇನೆ ಅಹಮದ್ ನಗರಕ್ಕೆ ಮುತ್ತಿಗೆ ಹಾಕಿತು. ಕೋಟೆಯ ಸಮೀಪದಲ್ಲಿ ವಿಶಾಲವಾದ ಮೈದಾನದಲ್ಲಿ ಸೇನೆ ಬೀಡು ಬಿಟ್ಟಿತು. ಕೋಟೆಯ ಸಮೀಪಕ್ಕೆ ಹೋಗಲು ರಸ್ತೆಗಳನ್ನೂ ಕೋಟೆಯ ಸುತ್ತ ಸಿಡಿಮದ್ದನ್ನು ತುಂಬಲು ಸುರಂಗಗಳನ್ನೂ ತೋಡಿದರು. ಕೋಟೆಯ ಸುತ್ತ ಆಯಕಟ್ಟಿನ ಪ್ರದೇಶಗಳಲ್ಲಿ ಫಿರಂಗಿಗಳನ್ನಿಟ್ಟು ಸಿದ್ಧಪಡಿಸಿದರು. ಕೋಟೆಯನ್ನು ಹೇಗಾದರೂ ಮಾಡಿ ಒಡೆದು, ಅಹಮದ್ ನಗರದೊಳಕ್ಕೆ ಪ್ರವೇಶಿಸುವುದು ಅವರ ಗುರಿಯಾಗಿತ್ತು. ಮುರಾದನು ತಾನೇ ಸ್ವಂತವಾಗಿ ಈ ಸಿದ್ಧತೆಗಳನ್ನು ಮಾಡಿಸುತ್ತಿದ್ದರೂ ಸೈನ್ಯದ ಅಧಿಕಾರಿಗಳಲ್ಲಿ ಸ್ವಲ್ಪವೂ ಒಮ್ಮತವಿರಲಿಲ್ಲ ವಾದ್ದರಿಂದ ಮುತ್ತಿಗೆಯಲ್ಲಿ ಕ್ರಮಬದ್ಧತೆಯಾಗಲೀ ಅಚ್ಚುಕಟ್ಟುತನವಾಗಲೀ ಇರಲಿಲ್ಲ. ಮುರಾದನ ಆಜ್ಞೆಗಳು ಕಾರ್ಯಗತವಾಗುವಷ್ಟರಲ್ಲಿ ಖಾನ್‌ಖಾನನ್ ಬೇರೆ ಸೂಚನೆಗಳನ್ನು ನೀಡುತ್ತಿದ್ದ. ಇದರಿಂದಾಗಿ ಯಾವ ಒಂದು ಸೂಚನೆಯೂ ಸರಿಯಾಗಿ ಪಾಲಿಸಲ್ಪಡುತ್ತಿರಲಿಲ್ಲ. ಮೊಗಲ್ ಸೇನೆಯ ಈ ಲೋಪದ ಪೂರ್ಣ ಪ್ರಯೋಜನ ಪಡೆದು, ಅಭಂಗ್‌ಖಾನನು ಕೋಟೆಯ ಪೂರ್ವ ಭಾಗದಲ್ಲಿ ಮೊಗಲರ ಮೇಲೆ ಹಠಾತ್ತನೆ ದಾಳಿ ಮಾಡಿ, ಸೇನೆಗೆ ಬಹಳ ನಷ್ಟವನ್ನುಂಟುಮಾಡಿದ.

ಧೈರ್ಯ-ಸ್ಥೈರ್ಯಗಳ ಮೂರ್ತಿ

ಚತುರೆಯಾದ ಚಾಂದ್ ಬೀಬಿ ಶತ್ರುಗಳ ಯೋಜನೆಗಳನ್ನು ಬೇಹುಗಾರರಿಂದ ತಿಳಿಯುತ್ತಿದ್ದಳು. ಮೊಗಲರ ಸೇನೆ ತಾವು ಬಂದಿದ್ದ ಮಾರ್ಗದಲ್ಲಿ ಸಾಕಷ್ಟು ರಕ್ಷಣಾ ಪಡೆಗಳನ್ನು ಬಿಟ್ಟಿರಲಿಲ್ಲ. ಚಾಂದ್ ಬೀಬಿ ಈ ವಿಷಯವನ್ನು ತಿಳಿದುಕೊಂಡಳು. ಆ ಪ್ರದೇಶಗಳಿಗೆ ಸೈನ್ಯ ಕಳುಹಿಸಿ, ಮೊಗಲರಿಗೆ ಆಹಾರ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯಾಗುವುದನ್ನು ತಡೆದಳು. ವೆಂಕೋಜಿ ಎಂಬ ಸೇನಾನಿಯನ್ನು ಕಳುಹಿಸಿ ಮೊಗಲ್ ಸೇನೆಗೂ ಗುಜರಾತಿಗೂ ಇದ್ದ ಸಂಪರ್ಕವನ್ನು ಕಡಿಸಿಹಾಕಿದಳು. ಶತ್ರು ಸೈನ್ಯ ಬಹಳ ದೊಡ್ಡದಾಗಿತ್ತು. ಆದರೂ ಚಾಂದ್ ಬೀಬಿ ಧೈರ್ಯಗೆಡದೆ, ಎಲ್ಲರಿಗೂ ಧೈರ್ಯ ನೀಡುತ್ತಾ, ಸೈನಿಕರನ್ನು ಹುರಿದುಂಬಿಸುತ್ತಿದ್ದಳು. ತಾನೇ ಆನೆಯ ಮೇಲೆ ಕುಳಿತು ಕೈಯಲ್ಲಿ ಹಿರಿದ ಕತ್ತಿ ಹಿಡಿದು ಹೊರಟಳು. ಅವಳ ಧೈರ್ಯ ಮತ್ತು ಸ್ಥೈರ್ಯಗಳು ಅಹಮದ್ ನಗರದ ಜನತೆಗೆ ಚೇತನಕಾರಿಯಾಗಿದ್ದವು.

“ಅಹಮದ್ ನಗರದ ವೀರ ಸೈನಿಕರೇ, ಇದೀಗ ನಮ್ಮ ಸತ್ವಪರೀಕ್ಷೆಯ ಕಾಲ. ಕೆಚ್ಚೆದೆಯ ಕಲಿಗಳಾದ ನೀವು, ಇಂದು ನಮ್ಮ ನಾಡನ್ನು ಮೊಗಲರ ದಾಳಿಯಿಂದ ರಕ್ಷಿಸಬೇಕು. ನಿಜಾಂಷಾಹಿ ಅರಸರ ಭೂಮಿಯಾದ ಅಹಮದ್ ನಗರದ ಉಳಿವು ನಿಮ್ಮ ಪಾಲಿಗೆ ಸೇರಿದ್ದು. ಈ ಗುರುತರ ಹೊಣೆ ನಿಮ್ಮದು. ಈ ಸಮಯದಲ್ಲಿ ಯಾರೂ ಹಿಮ್ಮೆಟ್ಟಬಾರದು. ಪ್ರತಿಯೊಬ್ಬರೂ ರಾಜ್ಯದ ರಕ್ಷಣೆಗಾಗಿ ಹೋರಾಡಬೇಕು.”

ಧೈರ್ಯವೇ ಮೂರ್ತಿವೆತ್ತಂತೆ ತಮ್ಮ ಮುಂದೆ ನಿಂತು ವೀರಾವೇಶಗಳಿಂದ ಮಾತನಾಡುತ್ತಿದ್ದ ರಾಣಿ ಚಾಂದ್ ಬೀಬಿಯ ಮಾತುಗಳು ಎಂತಹವರನ್ನಾದರೂ ಕತ್ತಿ ಹಿಡಿದು ಮುನ್ನುಗ್ಗುವಂತೆ ಮಾಡುತ್ತಿದ್ದವು. ರಾಜಕೀಯದ ಗೊಂದಲ ಬೇಡವೆಂದು ದೂರವಿದ್ದವರೂ, ಕಾರಣಾಂತರಗಳಿಂದ ಸೇನೆಯನ್ನು ಬಿಟ್ಟಿದ್ದ ಅಧಿಕಾರಿಗಳೂ ಮತ್ತೆ ಚಾಂದ್ ಬೀಬಿಯ ನೆರವಿಗೆ ಬಂದರು. ಆನೆ ಕುದುರೆಗಳು ಸಿದ್ಧವಾದವು. ಶಸ್ತ್ರಾಸ್ತ್ರಗಳು ಸಂಗ್ರಹವಾದವು. ಚಾಂದ್ ಬೀಬಿಯ ಸುಂದರ, ಗಂಭೀರ ನಿಲುವು, ಅವಳ ಕೆಚ್ಚು, ಧೈರ್ಯಗಳಿಂದ ತಮ್ಮ ತಮ್ಮಲ್ಲೇ ಜಗಳವಾಡುತ್ತಿದ್ದ ವಿವಿಧ ಗುಂಪುಗಳ ನಾಯಕರೂ ಸಹ ತಮ್ಮ ಜಗಳವನ್ನು ಮರೆತು, ರಾಜ್ಯದ ರಕ್ಷಣೆಗಾಗಿ ಒಂದಾಗಲು ನಿರ್ಧರಿಸಿದರು.

ಮೊಗಲ್ ಸೇನೆ ಅಹಮದ್ ನಗರದ ಕೋಟೆಯೊಳಕ್ಕೆ ನುಗ್ಗಲು ಸತತವಾಗಿ ಪ್ರಯತ್ನಿಸುತ್ತಿತ್ತು. ಕೋಟೆಯ ಸುತ್ತಲೂ ಗೋಡೆಗೆ ಸಮೀಪವಾಗಿ ಸುರಂಗಗಳನ್ನು ತೋಡಿ ಸಿಡಿಮದ್ದನ್ನಿಟ್ಟು ಕೋಟೆಯನ್ನು ಒಡೆಯಲು ಸೇನಾನಿಗಳು ನಿರ್ಧರಿಸಿದರು. ಗೋಡೆ ಸ್ವಲ್ಪ ಬಿರುಕುಬಿಟ್ಟು ಒಡೆದರೂ ಸೇನೆ ಒಳಕ್ಕೆ ನುಗ್ಗಲು ಸಾಧ್ಯವಾಗುತ್ತಿತ್ತು. ಐದು ಸುರಂಗಗಳನ್ನು ತೋಡಿ ಅವುಗಳಲ್ಲಿ ಸಿಡಿಮದ್ದನ್ನು ತುಂಬಿಟ್ಟರು.

ಗೂಢಚಾರರಿಂದ ಈ ಸುಳಿವನ್ನು ತಿಳಿದ ಚಾಂದ್ ಬೀಬಿ ಮೊಗಲರ ಈ ಕಾರ್ಯವನ್ನು ವಿಫಲಗೊಳಿಸಲು ನಿಶ್ಚಯಿಸಿದಳು.

ನಾನೇ ಆ ಕೆಲಸ ಮಾಡುತ್ತೇನೆ

ಚಾಂದ್ ಬೀಬಿ ತನ್ನ ಸಲಹೆಗಾರರೊಂದಿಗೆ ಈ ವಿಷಯವನ್ನು ಚರ್ಚಿಸಿದಳು. “ಮೊಗಲರು ಇಟ್ಟಿರುವ ಐದು ಸಿಡಿಮದ್ದಿನ ಸುರಂಗಗಳೂ ಸಿಡಿದರೆ, ನಮ್ಮ ಕೊಟೆ ನುಚ್ಚುನೂರಾಗುತ್ತದೆ. ಶತ್ರುಸೈನ್ಯ ಯಾವ ಅಡ್ಡಿಯೂ ಇಲ್ಲದೆ ನಗರವನ್ನು ಪ್ರವೇಶಿಸುತ್ತದೆ” _ ಆಕೆಯ ಧ್ವನಿ ಚಿಂತೆ, ಆತಂಕಗಳಿಂದ ಭಾರವಾಗಿತ್ತು.

“ಹೌದು, ಬೇಗಂ ಸಾಹೀಬ. ಆದರೇನು ಮಾಡು ವುದು? ಸುರಂಗಗಳಲ್ಲಿ ಈಗಾಗಲೇ ಸಿಡಿಮದ್ದನ್ನು ತುಂಬಲಾಗಿದೆ.”

“ಇದನ್ನು ಹೇಗಾದರೂ ತಡೆಗಟ್ಟಲೇಬೇಕು, ಮಹಮದ್ ಷಿರಾಜಿ. ಇಲ್ಲದಿದ್ದರೆ ನಮಗೆ ಉಳಿಗಾಲವೇ ಇಲ್ಲ.”

“ಹೇಗೆ ಸುಲ್ತಾನಾ ?”

“ಶತ್ರುಗಳು ತುಂಬಿಟ್ಟಿರುವ ಸಿಡಿಮದ್ದನ್ನೆಲ್ಲ ತೆಗೆದುಹಾಕಿ, ಸುರಂಗಗಳನ್ನು ಬರಿದು ಮಾಡಬೇಕು.”

“ಆದರೆ ಸುಲ್ತಾನಾ,” ಷಿರಾಜಿ ಅಂಜುತ್ತಾ ಹೇಳಿದ, “ಇದು ಬಹು ಕಷ್ಟ ಹಾಗೂ ಅಪಾಯಕರ.”

“ಹೌದು, ಆದರೆ ಬೇರೆ ಮಾರ್ಗವೇ ಇಲ್ಲ.”

“ಸುರಂಗಗಳನ್ನು ಬರಿದು ಮಾಡುತ್ತಿರುವಾಗಲೇ ಸಿಡಿಮದ್ದು ಸಿಡಿದು ಕೆಲಸ ಮಾಡುತ್ತಿರುವ ಜನರೆಲ್ಲ ಒಂದೇ ಬಾರಿಗೆ ಸುಟ್ಟುಹೋಗುತ್ತಾರೆ ಸುಲ್ತಾನಾ.”

“ನನಗದು ಗೊತ್ತು, ಷಿರಾಜಿ. ಆದರೀಗ ಬೇರೆ ಮಾರ್ಗವೇ ಇಲ್ಲ. ಸಿಡಿಮದ್ದನ್ನು ಹೊರತೆಗೆಯಲೇಬೇಕು.”

“ಈ ಪ್ರಾಣಾಂತಕ ಕೆಲಸವನ್ನು ಮಾಡಲು ಯಾರು ಒಪ್ಪುತ್ತಾರೆ ಸುಲ್ತಾನಾ ?”

ಚಾಂದ್ ಬೀಬಿ ಒಮ್ಮೆ ತನ್ನ ಸುತ್ತ ನೋಡಿದಳು.   ಅಲ್ಲಿ ಸೇರಿದ್ದ ಜನರಲ್ಲಿ ಯಾರೊಬ್ಬರೂ ಚಾಂದ್ ಬೀಬಿ ಸೂಚಿಸಿದ ಅಪಾಯಕಾರಿ ಕೆಲಸವನ್ನು ಮಾಡಲು ಸಿದ್ಧರಾಗಿದ್ದಂತಿರಲಿಲ್ಲ. ಎಲ್ಲರೂ ರಾಣಿಯ ದೃಷ್ಟಿ ತಪ್ಪಿಸಲು ಯತ್ನಿಸುತ್ತಿದ್ದರು. ಚಾಂದ್ ಬೀಬಿ ಮತ್ತೆ ಗಂಭೀರ ಧ್ವನಿಯಲ್ಲಿ ಕೇಳಿದಳು: “ಅಹಮದ್ ನಗರದಲ್ಲಿ ಯಾರೂ ವೀರರೇ ಇಲ್ಲವೇನು ? ಯುದ್ಧರಂಗದಲ್ಲಿ ಕೆಲಸ ಅಪಾಯಕರವಾಗಿರದೆ, ಮೇಜವಾನಿ ಮಾಡಲು ಸಾಧ್ಯವೇನು ? ಇಷ್ಟು ದೊಡ್ಡ ರಾಜ್ಯದಲ್ಲಿ ಯಾರಿಗೂ ಧೈರ್ಯವೇ ಇಲ್ಲವೇ?”

ನಾನೇ ಆ ಕೆಲಸ ಮಾಡುತ್ತೇನೆ.

 

ಯಾರಿಗೂ ಉತ್ತರ ಹೇಳುವ ಧ್ವನಿಯೇ ಇರಲಿಲ್ಲ.

“ಸರಿ ಬಿಡಿ, ನಾನೇ ಆ ಕೆಲಸ ಮಾಡುತ್ತೇನೆ. ನನ್ನ ಸೇವಕರಲ್ಲಿ ಕೆಲವರನ್ನು ಕರೆದುಕೊಂಡು ನಾನೇ ಸಿಡಿ ಮದ್ದನ್ನು ಹೊರತೆಗೆಯುತ್ತೇನೆ.”

ಜನರಲ್ಲಿ ಗುಜುಗುಜು ಆರಂಭವಾಯಿತು. ಚಾಂದ್ ಬೀಬಿಯ ವೀರಾವೇಶದ ನುಡಿಗಳಿಂದ ಅವರಿಗೆ ಎಲ್ಲಿಲ್ಲದ ಧೈರ್ಯ ಬಂದಿತು.

“ನಾನು ಮಾಡುತ್ತೇನೆ.” “ನಾನೂ ಬರುತ್ತೇನೆ, ಸುಲ್ತಾನಾ.”

“ನನ್ನನ್ನೂ ಸೇರಿಸಿಕೊಳ್ಳಿ ಬೇಗಂ.”

ಕೋಟೆ ಉಳಿಯಿತು

ಕ್ಷಣಮಾತ್ರದಲ್ಲಿ ನೂರಾರು ಜನ ಚಾಂದ್ ಬೀಬಿಯ ಸೂಚನೆಯಂತೆ ಸುರಂಗಗಳನ್ನು ಬರಿದುಮಾಡಲು ಸಿದ್ಧರಾದರು. ಅವರುಗಳು ಬೇಡವೆಂದರೂ ಸಹ, ಚಾಂದ್ ಬೀಬಿ ಸುರಂಗಗಳ ಬಳಿ ಹೋಗಿ ಅಲ್ಲಿ ಕೆಲಸಮಾಡುತ್ತಿದ್ದ ವರಿಗೆ ಧೈರ್ಯ ತುಂಬುತ್ತಿದ್ದಳು. ನೂರಾರು ಮಂದಿ ರಾತ್ರೋರಾತ್ರಿ ಕೆಲಸಮಾಡಿ, ಸುರಂಗಗಳಿಂದ ಸಿಡಿದುದನ್ನು ಹೊರಕ್ಕೆ ಹಾಕಿದರು. ಆದರೆ ಒಂದು ಸುರಂಗದಲ್ಲಿ ತುಂಬಿಟ್ಟಿದ್ದ ಸಿಡಿಮದ್ದು ಸಿಡಿಯಿತು. ಕೋಟೆಯ ಒಂದು ಭಾಗ ಸಿಡಿತದಿಂದ ಒಡೆಯಿತು. ಉಳಿದ ಸುರಂಗಗಳ ಬಳಿ ಕೆಲಸಮಾಡುತ್ತಿದ್ದ ಅನೇಕರು ಸಿಡಿತದಿಂದ ಸತ್ತುಹೋದರು.

 

ತಾನೇ ಆನೆಯ ಮೇಲೆ ಕುಳಿತು ಕತ್ತಿ ಹಿಡಿದು ಹೊರಟಳು.

ಕೋಟೆ ಒಡೆದ ಸುದ್ದಿ ತಿಳಿದೊಡನೆ ಚಾಂದ್ ಬೀಬಿ ಆ ಸ್ಥಳಕ್ಕೆ ಧಾವಿಸಿದಳು. ಬಿರುಕನ್ನು ಆದಷ್ಟು ಜಾಗ್ರತೆ ಸರಿಪಡಿಸದಿದ್ದಲ್ಲಿ, ಶತ್ರುಸೇನೆ ಕೋಟೆಯೊಳಕ್ಕೆ ನುಗ್ಗಿಬರುವ ಸಾಧ್ಯತೆ ಇತ್ತು. ಚಾಂದ್ ಬೇಬಿ ತಕ್ಷಣ ಆ ಬಿರುಕಿನ ಸ್ಥಳವನ್ನು ಸರಿಪಡಿಸುವಂತೆ ಆದೇಶ ನೀಡಿದಳು. ಬೆಳಗಾಗಿ ಮೊಗಲ್ ಸೈನಿಕರು ಕೋಟೆಯನ್ನು ನೋಡುವಷ್ಟರಲ್ಲಿ, ಒಡೆದ ಗೋಡೆಯನ್ನು ಸರಿಪಡಿಸಲು ಅವಳ ಸೈನಿಕರು ಶ್ರಮಿಸಿದರು. ಚಾಂದ್ ಬೀಬಿ ಅವರಿಗೆ ಧೈರ್ಯ ತುಂಬುತ್ತಾ ಸೂಚನೆಗಳನ್ನು ನೀಡುತ್ತಿದ್ದಳು. ತಾವು ತೋಡಿದ್ದ ಐದು ಸುರಂಗಗಳಲ್ಲೂ ಇಟ್ಟಿದ್ದ ಮದ್ದು ಗುಂಡುಗಳು ಸಿಡಿಯಲಿ ಎಂದು ಮೊಗಲ್‌ಸೇನೆ ಕಾಯುತ್ತಿತ್ತು. ಆ ಸಮಯದಲ್ಲಿ ಗೋಡೆಯನ್ನು ಸರಿಪಡಿಸಲು ಚಾಂದ್ ಬೀಬಿಯ ಸೈನಿಕರು ಶ್ರಮಿಸುತ್ತಿದ್ದರು. ಕಲ್ಲು, ಮಣ್ಣು, ಮರಮಟ್ಟುಗಳು, ಕೊನೆಗೆ ಮೃತದೇಹಗಳನ್ನು ಉಪಯೋಗಿಸಿ, ಸೂರ್ಯ ಹುಟ್ಟುವ ಮೊದಲೇ ಕೋಟೆಯ ಬಿರುಕನ್ನು ಸರಿಪಡಿಸಿ, ಭದ್ರಗೊಳಿಸಿದರು. ಕೋಟೆಯ ಮೇಲಿನಿಂದ ಸೈನಿಕರು, ಮೊಗಲ್ ಸೈನಿಕರ ಮೇಲೆ ಗುಂಡು ಹಾರಿಸುತ್ತಿದ್ದರು. ಕೊನೆಗೂ ಕೋಟೆಯನ್ನು ಶತ್ರುಗಳು ಪ್ರವೇಶಿಸದಂತೆ ತಡೆ ಗಟ್ಟಿದರು.

ಅಹಮದ್ ನಗರದ ದೇವಿ

“ಅಬ್ಬ ! ನನಗೀಗ ನೆಮ್ಮದಿ. ಕೋಟೆಯನ್ನು ಒಡೆದರೂ ಮೊಗಲ್ ಸೇನೆ, ಆ ಬಿರುಕಿನಿಂದ ಒಳಕ್ಕೆ ಬರದಂತೆ ನಾವು ಕೋಟೆಯನ್ನು ಭದ್ರಪಡಿಸಿದ್ದೇವೆ” – ಚಾಂದ್ ಬೀಬಿ ಹೇಳಿದಳು.

“ಹೌದು, ಸುಲ್ತಾನಾ. ತಮ್ಮ ಸೂಚನೆ ಸರಿಯಾಗಿತ್ತು. ಈ ರಾತ್ರಿ ನಾವು ಈ ಕೆಲಸ ಮಾಡದೇ ಇದ್ದಿದ್ದರೆ, ಬೆಳಗಾದೊಡನೆ ಮೊಗಲ್ ಸೇನೆ ನಮ್ಮ ನಗರದ ಬೀದಿ ಬೀದಿಗಳಲ್ಲಿ ಮುನ್ನುಗುತ್ತಿತ್ತು.” ಎಲ್ಲರೂ ಸಮಾಧಾನ ಪಟ್ಟರು.

ಕೋಟೆ ಮತ್ತೆ ಭದ್ರವಾದುದು ಅಹಮದ್ ನಗರದ ಪ್ರಜೆಗಳಿಗೆ ಸಂತೋಷವನ್ನುಂಟುಮಾಡಿತ್ತು. ಜನತೆ ಚಾಂದ್ ಬೀಬಿಗೆ ಕೃತಜ್ಞವಾಗಿತ್ತು. ಅಹಮದ್ ನಗರದ ಜನತೆ ತಮ್ಮತಮ್ಮ ಜಗಳಗಳನ್ನು ಮರೆತು ಒಂದಾದರು. ಅಲ್ಲಿ ಹಿಂದೆಂದೂ ಕಂಡುಬರದಂತಹ ಒಗ್ಗಟ್ಟು ಜನರಲ್ಲಿ ಮೂಡಿತ್ತು. ಮಾರನೆಯ ದಿನ ಚಾಂದ್ ಬೀಬಿ ನಗರದ ಮುಖ್ಯರಸ್ತೆಗಳಲ್ಲಿ ಆನೆಯನ್ನು ಏರಿ ಬಂದಾಗ ಜನ ಅವಳಿಗೆ ಜಯಘೋಷ ಮಾಡಿದರು.

‘ಚಾಂದ್ ಬೀಬಿಗೆ ಜಯವಾಗಲಿ.’
‘ಚಾಂದ್ ಸುಲ್ತಾನಾ ನಮ್ಮನ್ನು ಸದಾ ಆಳಲಿ.’
‘ಅಹಮದ್ ನಗರದ ದೇವಿಗೆ ಜಯವಾಗಲಿ.’

ಇನ್ನೂ ಭಾರ ಇಳಿಯಲಿಲ್ಲ

ಆದರೆ ಚಾಂದ್ ಬೀಬಿ ಜನರ ಹೊಗಳಿಕೆಯಿಂದ ಸಂತಸಗೊಂಡು ಸುಮ್ಮನೆ ಕುಳಿತಿರುವಂತಿರಲಿಲ್ಲ. ಮುಂದೆ ಕೈಗೊಳ್ಳಬೇಕಾದ ಕ್ರಮವನ್ನು ಅವಳು ಎಚ್ಚರಿಕೆಯಿಂದ ಯೋಚಿಸಬೇಕಾಗಿತ್ತು.

ಬಿಜಾಪುರಕ್ಕೆ ಹೋಗಿದ್ದ ಮಿಯಾನ್ ಮಂಜುವಿನ ರಾಯಭಾರ ಫಲಿಸಿತ್ತು. ಬಿಜಾಪುರ ಮತ್ತು ಗೋಲ್ಕೊಂಡ ರಾಜ್ಯಗಳ ಅರಸರು ಚಾಂದ್ ಬೀಬಿಗೆ ಸಹಾಯ ಮಾಡಲು ಒಪ್ಪಿದ್ದರು. ಎರಡು ರಾಜ್ಯಗಳ ಸೇನೆಗಳೂ ಅಹಮದ್ ನಗರದತ್ತ ಧಾವಿಸಿ ಬರುತ್ತಿದ್ದವು. ಇದರಿಂದ ಚಾಂದ್ ಬೀಬಿ ಸಂತೋಷಪಟ್ಟರೂ ಆ ಸೇನೆಗಳು ಬರುವವರೆಗೂ ಮೊಗಲರ ಸೇನೆ ಕೋಟೆಯೊಳಗೆ ನುಗ್ಗದಂತೆ ತಡೆಹಿಡಿಯ ಬೇಕಾಗಿತ್ತು. ಅಲ್ಲದೆ, ಶತ್ರುವಿಗೆ ತಿಳಿಯದಂತೆ ಅವರ ಮೇಲೆ ದಾಳಿ ಮಾಡಿ ಅವರಿಗೆ ಕಷ್ಟನಷ್ಟಗಳನ್ನುಂಟು ಮಾಡಬೇಕಾಗಿತ್ತು. ಷಾ ಆಲಿ ಮತ್ತು ಅಭಂಗ್ ಖಾನ್ ಕತ್ತಲಾದ ನಂತರ ಶತ್ರುಸೇನೆಯ ಮೇಲೆ ಬೀಳುತ್ತಿದ್ದರು. ಮುನ್ನುಗ್ಗುವ ಆತುರದಲ್ಲಿ ಮುರಾದನು ಕ್ರಮಿಸಿದ ಹಿಂದಿನ ದಾರಿಯಲ್ಲಿ ರಕ್ಷಣೆಗಾಗಿ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಚಾಂದ್ ಬೀಬಿಯ ಸೈನಿಕರು ಮೊಗಲ್ ಸೇನೆಗೆ ಗುಜರಾತಿನಿಂದ ಯಾವ ಸಹಾಯವೂ ಬಾರದಂತೆ ತಡೆಗಟ್ಟುವುದು ಸಾಧ್ಯವಾಯಿತು.

ಮುರಾದನ ಹಂಚಿಕೆ ಸಫಲವಾಗಲಿಲ್ಲ. ಕೋಟೆ ಯೊಳಕ್ಕೆ ನುಗ್ಗುವುದು ಸಾಧ್ಯವಾಗಿರಲಿಲ್ಲ. ಬಿಜಾಪುರ ಮತ್ತು ಗೋಲ್ಕೊಂಡಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಬಂದು ಚಾಂದ್ ಬೀಬಿಯ ಸೈನ್ಯವನ್ನು ಸೇರಿಕೊಂಡರೆ ಆಗ ಮೊಗಲ್ ಸೇನೆಗೆ ಗೆಲ್ಲುವ ಸಾಧ್ಯತೆ ಬಹು ದೂರವೇ ಆಗಿತ್ತು. ಅವನ ಸೈನ್ಯದಲ್ಲಿ ಸ್ವಲ್ಪವೂ ಒಗ್ಗಟ್ಟಿರಲಿಲ್ಲ. ಅವನ ಸೈನಿಕರಿಗೂ ಖಾನ್‌ಖಾನನ್‌ನ ಸೈನಿಕರಿಗೂ ಘರ್ಷಣೆ ಇಲ್ಲದ ದಿನವೇ ಇರಲಿಲ್ಲ. ಕೋಟೆಯ ಸುತ್ತ ಸುರಂಗಗಳನ್ನು ತೋಡಿ ಸಿಡಿಮದ್ದನ್ನು ಇಡುವ ವಿಷಯದಲ್ಲೂ ಸಹ ಎರಡು ಗುಂಪುಗಳಲ್ಲೂ ಒಮ್ಮತವಿಲ್ಲದೆ, ಆ ಕಾರ್ಯಾ ಚರಣೆ ವಿಫಲವಾಗಿತ್ತು. ಒಬ್ಬ ಸಮರ್ಥನಾದ ಸೇನಾನಿ ಸುಲಭವಾಗಿ ಮಾಡಬಹುದಾಗಿದ್ದ ಕೆಲಸಗಳು ಇಬ್ಬರು ಸೇನಾನಿಗಳಿಂದ ಕೆಡುತ್ತಿದ್ದವು. ಇಬ್ಬರು ಸೇನಾನಿಗಳ ವೈಮನಸ್ಯದ ಪೂರ್ಣ ಪ್ರಯೋಜನವನ್ನು ಚಾಂದ್ ಬೀಬಿ ಪಡೆದಳು. ಮತ್ತೆಮತ್ತೆ ಮೊಗಲರ ಸೈನ್ಯದ ಮೇಲೆ ದಾಳಿ ನಡೆಸಿ, ಚದುರಿಸಲು ಯತ್ನಿಸುತ್ತಿದ್ದಳು.

ಇಬ್ಬರಿಗೂ ಚಿಂತೆ !

ಮೊಗಲರ ಮುತ್ತಿಗೆ ಪೂರ್ತಿಯಾಗಿ ವಿಫಲವಾಗಿತ್ತು. ಬಿಜಾಪುರದ ದಂಡನಾಯಕ ಸುಹೀಲ್ ಖಾನನು ಬಿಜಾಪುರ ಮತ್ತು ಗೋಲ್ಕೊಂಡ ರಾಜ್ಯಗಳ ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಸೈನ್ಯದೊಂದಿಗೆ ಚಾಂದ್ ಬೀಬಿಗೆ ಸಹಾಯ ಮಾಡಲು ಅಹಮದ್ ನಗರಕ್ಕೆ ಬರುತ್ತಿರುವ ಸುದ್ದಿ ಕೇಳಿ ಮುರಾದನಿಗೂ ಖಾನ್‌ಖಾನ್‌ಗೂ ಕಳವಳ ಹೆಚ್ಚಾಯಿತು. ದಂಡಯಾತ್ರೆ ಅವರ ಎಣಿಕೆಯಂತೆ ನಡೆದಿರಲಿಲ್ಲ. ಅವರ ಸೇನೆಗೆ ಹೆಚ್ಚು ನಷ್ಟವುಂಟಾಗಿತ್ತು. ಅನೇಕ ಸೈನಿಕರು ಹತರಾದುದಲ್ಲದೆ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳೂ ನಾಶವಾಗಿದ್ದವು. ಆಹಾರ ಸಾಮಗ್ರಿಗಳ ಸಂಗ್ರಹವೂ ಕರಗುತ್ತಿತ್ತು. ಮುರಾದನ ಉದಾಸೀನ ಹಾಗೂ ಅಲಕ್ಷ್ಯದ ಪರಿಣಾಮವಾಗಿ ಗುಜರಾತ್ ಹಾಗೂ ಮಾಳ್ವ ದೇಶಗಳಿಂದ ಅವರಿಗೆ ಬರಬಹುದಾಗಿದ್ದ ಸಹಾಯವನ್ನೂ ಚಾಂದ್ ಬೀಬಿ ಬಹಳ ಬುದ್ಧಿವಂತಿಕೆಯಿಂದ ನಿಲ್ಲಿಸಿದ್ದಳು.

ಕೋಟೆಯ ಒಳಗೂ ಚಾಂದ್‌ಬೀಬಿಗೂ ಚಿಂತೆ ಇಲ್ಲದೆ ಇರಲಿಲ್ಲ. ಕೋಟೆಯೊಳಗೇ ಎಷ್ಟು ದಿನ ಅಡಗಿ ಕುಳಿತಿರಲು ಸಾಧ್ಯ? ಕೂಡಿಟ್ಟ ಆಹಾರ ಸಾಮಗ್ರಿಗಳೂ ಶೇಖರಿಸಿದ ಮದ್ದು ಗುಂಡು ಶಸ್ತ್ರಾಸ್ತ್ರಗಳೂ ಎಷ್ಟು ದಿನ ಉಪಯೋಗಕ್ಕೆ ಬಂದಾವು? ಬಿಜಾಪುರ ಮತ್ತು ಗೋಲ್ಕೊಂಡಗಳಿಂದ ಸೈನ್ಯ ಬೇಗ ಬಂದರೇನೋ ಪರಿಸ್ಥಿತಿ ಬದಲಾಗಬಹುದು. ಆದರೆ ಆ ಸೇನೆಗಳು ಬೇಗ ಬರುತ್ತಲೇ ಇಲ್ಲ. ತನ್ನ ಸೈನ್ಯದ ಬಲ ದಿನೇದಿನೇ ಕಡಿಮೆಯಾಗುತ್ತಿದೆ. ಮುತ್ತಿಗೆ ಹೀಗೆಯೇ ಮುಂದುವರಿದರೆ, ಕಷ್ಟಪಟ್ಟು ಒಂದುಗೂಡಿ ಸಿರುವ ಜನ ಮತ್ತೆ ಬೇರೆಯಾಗುತ್ತಾರೆ. ಒಗ್ಗಟ್ಟಿನಿಂದಿದ್ದು ಮೊಗಲರ ವಿರುದ್ಧ ಹೋರಾಡುವ ಬದಲು ತಮ್ಮತಮ್ಮಲ್ಲೇ ಜಗಳವಾಡಲು ಶುರು ಮಾಡಿದರೆ ಏನು ಮಾಡುವುದು?

ಸಂಧಾನ

“ಯುದ್ಧವನ್ನು ಎಷ್ಟು ದಿನ ಹೀಗೇ ಮುಂದುವರಿಸ ಬಹುದು?” ಚಾಂದ್ ಬೀಬಿ ತನ್ನ ಮಂತ್ರಿಗಳ ಸಭೆ ಕರೆದು ಪರಿಸ್ಥಿತಿಯನ್ನು ಚರ್ಚಿಸಿದಳು. “ಬಿಜಾಪುರ ಮತ್ತು ಗೋಲ್ಕೊಂಡಗಳ ದಂಡು ಬೇಗ ಬಂದರೆ ನಾವೇ ಮೊಗಲರ ಮೇಲೆ ದಾಳಿ ಮಾಡಬಹುದು” – ಒಬ್ಬ ಮಂತ್ರಿ ಹೇಳಿದ.

“ಆದರೆ ಆ ಸೇನೆ ಬೇಗ ಬರುತ್ತಲೇ ಇಲ್ಲ. ಸೇನಾನಿ ಸುಹೀಲ್ ಖಾನರು ಇಲ್ಲಿಗೆ ಎಂದು ಬರುವರೋ ಆ ಅಲ್ಲಾನಿಗೇ ಗೊತ್ತು. ಅವರು ಬರುವವರೆಗೆ ನಾವು ಹೀಗೆಯೇ ಇರುವುದು ಸಾಧ್ಯವೇ ?” _ ಇನ್ನೊಬ್ಬ ಸಂಶಯಪಟ್ಟ.

“ನನಗೇನೋ ಯದ್ಧ ಮುಗಿಸಿ ರಾಜಿ ಮಾಡಿಕೊಳ್ಳು ವುದು ಒಳ್ಳೆಯದೆಂದು ಕಾಣುತ್ತದೆ.”

“ಖಂಡಿತ ಕೂಡದು. ಮೈಯಲ್ಲಿ ಕಡೆಯ ತೊಟ್ಟು  ರಕ್ತವಿರುವ ತನಕ ನಾವು ಹೋರಾಡಲೇಬೇಕು.” ಒಬ್ಬೋ ಬ್ಬರದು ಒಂದೊಂದು ಯೋಚನೆ.

“ಪರಾಕ್ರಮ ಭೂಷಣವೇ. ಆದರೆ ಪರಾಕ್ರಮ ಹುಚ್ಚು ಧೈರ್ಯ ಆಗಬಾರದು. ನಾವು ಜಾಣ್ಮೆಯಿಂದ ವರ್ತಿಸ ಬೇಕು” – ಚಾಂದ್ ಬೀಬಿ ಹೇಳಿದಳು. “ಆದರೂ ರಾಜಿ ಮಾಡಿಕೊಳ್ಳುವುದು ಹೇಡಿಗಳ ಲಕ್ಷಣ” _ ಕೆಲವರ ಅಭಿಪ್ರಾಯ.

“ಖಂಡಿತ ಅಲ್ಲ. ಜನರಿಗೆ ಅನ್ಯಾಯವಾಗದಂತೆ ನಾವು ಯಾವ ಕ್ರಮ ಕೈಗೊಂಡರೂ ಅದು ಹೇಡಿತನವಲ್ಲ. ಪ್ರಬಲರಾದ ಶತ್ರುಗಳೊಂದಿಗೆ ರಾಜಿ ಮಾಡಿಕೊಳ್ಳುವುದೇ ಉತ್ತಮ.”

“ಆದರೆ, ಸುಲ್ತಾನಾ, ಮೊಗಲರು ಸಂಧಾನಕ್ಕೆ ಒಪ್ಪುವರೇ ?” – ಒಬ್ಬನ ಸಂಶಯ.

“ಪ್ರಯತ್ನಿಸಲು ಏನು ಅಡ್ಡಿ ? ಮೊಗಲರಿಗೂ ಈ ಮುತ್ತಿಗೆ ಅಷ್ಟೇನು ಹಿತಕರವಾಗಿಲ್ಲ. ಗೌರವಯುತವಾದ ಯಾವುದೇ ಸಂಧಾನ ಸೂಚನೆಯನ್ನೂ ಅವರು ಒಪ್ಪಿಕೊಳ್ಳ ಬಹುದು.”

ಚಾಂದ್ ಬೀಬಿಯ ಸಂಧಾನ ಸೂಚನೆ ಸಮ ಯೋಚಿತವಾಗಿದೆಯೆಂದು ಎಲ್ಲರಿಗೂ ಅರಿವಾಯಿತು. ಅಫಜ್ಜಲ್ ಖಾನನೆಂಬ ಪ್ರಮುಖನನ್ನು ಮೊಗಲರ ಬಳಿಗೆ ಸಂಧಾನಕ್ಕಾಗಿ ಕಳುಹಿಸಿದರು.

ಅಫ್ಜಲ್ ಖಾನನ ಸಂಧಾನದ ಸೂಚನೆಯನ್ನೇನೋ ಮುರಾದ ಒಪ್ಪಿದ. ಆದರೆ ಅವನ ಸಚಿವ ಸಾದಿಕ್ ಖಾನನು ಸಂಧಿಯ ಷರತ್ತುಗಳನ್ನು ಒಪ್ಪಲಿಲ್ಲ. ಬೀರಾರ್ ಮತ್ತು ದೌಲತಾಬಾದುಗಳ ವಿಷಯದಲ್ಲಿ ಮೊಗಲರ ಸೂಚನೆ ಚಾಂದ್ ಬೀಬಿಗೂ ಒಪ್ಪಿಗೆಯಾಗಲಿಲ್ಲ. ಕೊನೆಗೆ ಅಹಮದ್ ನಗರದ ರಾಜ್ಯಕ್ಕೆ ಬಹದ್ದೂರನೇ ರಾಜನೆಂದು ಮೊಗಲರು ಒಪ್ಪಿಕೊಂಡರು. ಆದರೆ ಬಹದ್ದೂರ್ ಅಕ್ಬರನ ಸಾರ್ವ ಭೌಮತ್ವವನ್ನು ಒಪ್ಪಿಕೊಳ್ಳಬೇಕಾಯಿತು. ಬೀರಾರ್ ರಾಜ್ಯವನ್ನೂ ಸಹ ಬಿಟ್ಟುಕೊಡಬೇಕಾಯಿತು. ಅಲ್ಲದೆ ನೂರಾರು ಆನೆಗಳನ್ನೂ ಬೆಲೆಬಾಳುವ ರತ್ನಖಚಿತ ಆಭರಣಗಳನ್ನೂ ಇತರ ಅಮೂಲ್ಯ ಕಾಣಿಕೆಗಳನ್ನೂ ಚಾಂದ್ ಬೀಬಿ ಮುರಾದನಿಗೆ ಕೊಡಬೇಕಾಯಿತು.

ಶಾಂತಿ-ನೆಮ್ಮದಿ

ಸುಮಾರು ಮೂರು ತಿಂಗಳ ಕಾಲ ಅಹಮದ್ ನಗರಕ್ಕೆ ಹಾಕಿದ ಮುತ್ತಿಗೆಯನ್ನು ನಿಲ್ಲಿಸಿ, ಮೊಗಲ್ ಸೇನೆ ನಗರವನ್ನು ಬಿಟ್ಟು ಉತ್ತರದ ಕಡೆ ಪ್ರಯಾಣ ಬೆಳೆಸಿತು. ಎರಡು ಪಕ್ಷಗಳಿಗೂ ಹೆಚ್ಚುಕಾಲ ಯುದ್ಧ ಮಾಡುವುದರಲ್ಲಿ ಆಸಕ್ತಿ ಇಲ್ಲದಿದ್ದುದರಿಂದ ಸಂಧಿಯ ಕಾರ್ಯ ಬೇಗ ಮುಗಿಯಿತು. ರಾಜ್ಯಕ್ಕೆ ಬಂದ ಗಂಡಾಂತರ ಮುಗಿಯಿ ತೆಂದು ಜನ ಸಂತೋಷಪಟ್ಟರು.

ಚಾಂದ್ ಬೀಬಿ ಬಹದ್ದೂರನ ಪರವಾಗಿ ರಾಜ್ಯ ವಾಳಲು ನಿರ್ಧರಿಸಿದಾಗ, ಹೆಂಗಸೇನು ಮಾಡಬಲ್ಲಳು ಎಂದು ಮೂಗು ಮುರಿದಿದ್ದ ಅವಳ ವಿರೋಧಿಗಳೂ ಸಹ ಅವಳ ಬಗೆಗೆ ಈಗ ಮೆಚ್ಚುಗೆ ಸೂಚಿಸುವಂತಾಯಿತು. ಜನ ಗುಂಪುಗುಂಪಾಗಿ ಬಂದು ತಮ್ಮನ್ನು ರಕ್ಷಿಸಿದ ರಾಣಿಗೆ ಪ್ರಣಾಮಗಳನ್ನು ಅರ್ಪಿಸಿದರು. ವಿರೋಧ ಪಕ್ಷಗಳ ನಾಯಕರು ಸಹ ಮುತ್ತಿಗೆಯ ಸಮಯದಲ್ಲಿ ಚಾಂದ್ ಬೀಬಿ ತೋರಿದ ಧೈರ್ಯ, ಸಾಹಸ, ಬುದ್ಧಿವಂತಿಕೆಗಳನ್ನು ಮೆಚ್ಚಿ ಅವಳಿಗೆ ‘ಚಾಂದ್‌ಸುಲ್ತಾನಾ’ ಎಂಬ ಬಿರುದನ್ನು ಕೊಟ್ಟರು. ಮುತ್ತಿಗೆಯ ಸಮಯದಲ್ಲಿ ಪ್ರಾಣಾಪಾಯವನ್ನೂ ಲಕ್ಷಿಸದೆ, ಸೈನಿಕರ ನಡುವೆ ನಿರ್ಭಯವಾಗಿ ಸಂಚರಿಸುತ್ತಾ ಅವರಿಗೆ ಧೈರ್ಯ ನೀಡುತ್ತಾ ಸಮಯೋಚಿತ ಸಲಹೆಗಳನ್ನು ನೀಡುತ್ತಾ ಚಾಂದ್ ಬೀಬಿಯನ್ನು ಎಲ್ಲರೂ ಹಾಡಿ ಹೊಗಳುವವರೇ.

ರಾಜ್ಯ ಸೂತ್ರಗಳನ್ನು ಕೈಗೆ ತೆಗೆದುಕೊಂಡ ಕಾಲ ದಿಂದಲೂ ಕಷ್ಟಗಳನ್ನೇ ಎದುರಿಸಬೇಕಾಗಿದ್ದ ಚಾಂದ್ ಬೀಬಿ ಈಗ ನಿರಾಳವಾಗಿ ಉಸಿರಾಡುವಂತಾಯಿತು. ಯುದ್ಧದ ಭಯವಿಲ್ಲದೆ, ಪ್ರಜೆಗಳ ಯೊಗಕ್ಷೇಮಕ್ಕೆ ಹೆಚ್ಚಿನ ಗಮನ ಕೊಡಲು ಈಗ ಸಾಧ್ಯವಾಯಿತು.

ಚಾಂದ್ ಬೀಬಿ ಆಡಳಿತದಲ್ಲಿ ನೆರವಾಗಲು ಮಹಮದ್ ಖಾನನನ್ನು ನೇಮಿಸಿಕೊಂಡಳು.

ಮತ್ತೆ ಒಳಜಗಳ

ಮೊಗಲರ ಮುತ್ತಿಗೆ ಮುಗಿದ ಸಂತೋಷದಲ್ಲಿ ಅಹಮದ್ ನಗರದ ವಿವಿಧ ಗುಂಪುಗಳ ಜನರು ಚಾಂದ್ ಬೀಬಿಯನ್ನು ಹೊಗಳಿ ಹರಸಿದರು.

ಆದರೆ, ಕ್ರಮೇಣ ಆಕ್ರಮಣದ ಭಯ, ಕಷ್ಟಗಳು ಮರೆತಂತೆ ಅವಳು ಬಹು ಕಷ್ಟದಿಂದ ಮೂಡಿಸಿದ್ದ ಒಗ್ಗಟ್ಟು ಸಡಿಲವಾಗುತ್ತ ಬಂದಿತು. ಸ್ವಾರ್ಥಪರ ಜನರು ಮತ್ತೆ ಗುಂಪುಗಳನ್ನು ಕಟ್ಟಲಾರಂಭಿಸಿದರು. ಪ್ರಧಾನಿ ಮಹಮದ್ ಖಾನ್ ಸರ್ವಾಧಿಕಾರಿಯಂತೆ ನಡೆಯಲಾರಂಭಿಸಿದ. ಅವನ ಪಂಗಡದವರು ಚಾಂದ್ ಬೀಬಿಗೆ ಅಪಮಾನ ಮಾಡುವ ರೀತಿಯಲ್ಲಿ ವರ್ತಿಸ ತೊಡಗಿದರು. ಚಾಂದ್ ಬೀಬಿ ತನ್ನಲ್ಲಿಟ್ಟಿದ್ದ ನಂಬುಗೆಯನ್ನು ಮಹಮದ್ ಖಾನ್ ದುರುಪಯೋಗಪಡಿಸಿಕೊಂಡ. ಮೊಗಲರ ಮುತ್ತಿಗೆಯ ಸಮಯದಲ್ಲಿ ರಾಣಿಗೆ ಸಹಾಯ ಮಾಡಿದ್ದ ಅಭಂಗ್ ಖಾನ್ ಮತ್ತು ಷಂಷೇರ್ ಖಾನ್‌ರನ್ನು ಅವನು ಸೆರೆಹಿಡಿಸಿ, ರಾಜ್ಯದ ಎಲ್ಲ ಮುಖ್ಯ ಅಧಿಕಾರಗಳಿಗೂ ತನ್ನ ಜನರನ್ನೇ ನೇಮಿಸಿದ.

ಬಿಜಾಪುರಕ್ಕೆ ತೆರಳಿದ್ದ ಮಿಯಾನ್ ಮಂಜು ಮತ್ತೆ ಅಹಮದ್ ನಗರಕ್ಕೆ ಬಂದು ಅಲ್ಲಿನ ರಾಜಕೀಯದಲ್ಲಿ ತಲೆ ಹಾಕಲಾರಂಭಿಸಿದ. ಬಹದ್ದೂರ್ ಅಹಮದ್ ನಗರಕ್ಕೆ ನ್ಯಾಯವಾದ ಹಕ್ಕುದಾರನಲ್ಲವೆಂದೂ ಬುರ‍್ಹಾನ್ ಉಲ್ ಮುಲ್ಕನ ಮತ್ತೊಬ್ಬ ಮೊಮ್ಮಗ ಅಹಮದ್ ರಾಜನಾಗಬೇಕೆಂದೂ ಜಗಳ ತೆಗೆದ. ಚಾಂದ್ ಬೀಬಿ ಉಪಾಯದಿಂದ ಬಿಜಾಪುರದ ಇಬ್ರಾಹಿಂ ಆದಿಲ್‌ಷಾನ ಸಹಾಯ ಪಡೆದು, ಮಂಜು ಅಹಮದ್ ನಗರವನ್ನು ಬಿಟ್ಟು ಹೊರಡುವಂತೆ ಮಾಡಿದಳು. ಅವನು ಬಿಜಾಪುರಕ್ಕೆ ಹೊರಟುಹೋದುದರಿಂದ ಚಾಂದ್ ಬೀಬಿಗೆ ವಿರೋಧಿ ಗಳಲ್ಲಿ ಒಬ್ಬ ಪ್ರಮುಖನ ತೊಂದರೆ ತಪ್ಪಿದಂತಾಯಿತು.

ಆದರೆ ದೈವ ಚಾಂದ್ ಬೀಬಿಗೆ ಶಾಂತಿಯಿಂದ ರಾಜ್ಯವಾಳಲು ಅವಕಾಶ ಕೊಡದಿರಲು ಮನಸ್ಸು ಮಾಡಿದಂತಿತ್ತು. ಮಹಮದ್ ಖಾನನ ದಬ್ಬಾಳಿಕೆ ಮಿತಿಮೀರುತ್ತಿತ್ತು. ಅವನನ್ನು ಅಧಿಕಾರದಿಂದ ತೆಗೆಯಲು ಅವಳು ಮತ್ತೆ ಬಿಜಾಪುರದ ಆದಿಲ್‌ಷಾನ ಸಹಾಯ ಕೋರಿದಳು. ಮೊಗಲರ ವಿರುದ್ಧ ಚಾಂದ್ ಬೀಬಿಗೆ ಸಹಾಯ ಮಾಡಲು ದೊಡ್ಡ ಸೈನ್ಯದೊಂದಿಗೆ ಬರುತ್ತಿದ್ದ ಸುಹೀಲ್ ಖಾನನ ನೆರವು ಪಡೆಯುವಂತೆ ಆದಿಲ್‌ಷಾ ಸೂಚಿಸಿದ. ಮಹಮದ್ ಖಾನ್ ಸುಹೀಲ್ ಖಾನನಿಗೆ ಸೆರೆಸಿಕ್ಕಿದ. ಅವನ ಸ್ಥಾನದಲ್ಲಿ ಅಭಂಗ್ ಖಾನನನ್ನು ಮತ್ತೆ ನೇಮಿಸಲಾಯಿತು.

ಬೇಡ, ಮೂರ್ಖತನ ಬೇಡ !

ಇಷ್ಟರಲ್ಲಿ ಚಾಂದ್ ಬೀಬಿಯ ವಿರುದ್ಧ ಗುಂಪು ಕಟ್ಟುತ್ತಿದ್ದ ಹಲವಾರು ಪ್ರಮುಖರು, ಮೊಗಲರೊಂದಿಗೆ ಸುಲ್ತಾನಾ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು. ಚಾಂದ್ ಬೀಬಿ ಎಷ್ಟೇ ಹೇಳಿದರೂ ಅವಳ ಮಾತುಗಳಿಗೆ ಕಿವಿಗೊಡಲಿಲ್ಲ.

‘ನನ್ನ ಪ್ರಜೆಯನಾಗಿ ಯುದ್ಧದಲ್ಲಿ ಸಾಯುವುದು ನನಗಿಷ್ಟವಿಲ್ಲ.’

“ಮೊಗಲರ ದೀರ್ಘ ಮುತ್ತಿಗೆ ಇದೀಗ ಮುಗಿದಿದೆ. ಪುನಃ ಯುದ್ಧದ ಅಗತ್ಯವಾದರೂ ಏನು ?” ಚಾಂದ್ ಬೀಬಿ ಕೇಳಿದಳು.

“ನಾವು ಮೊಗಲರನ್ನು ಸದೆ ಬಡಿಯಬೇಕು.”

“ಅದು ಅಷ್ಟು ಸುಲಭದ ಕೆಲಸವಲ್ಲ. ಯುದ್ಧದ ಭೀತಿಯಿಂದ ಜನ ತಲ್ಲಣಿಸಿದ್ದಾರೆ. ನಮ್ಮ ಬೊಕ್ಕಸವೂ ಯುದ್ಧದ ಖರ್ಚಿನಿಂದಾಗಿ ಬರಿದಾಗಿದೆ. ಮತ್ತೆ ಯುದ್ಧ ಮಾಡಿ, ಮತ್ತಷ್ಟು ನಷ್ಟ ಮಾಡಿಕೊಳ್ಳುವುದೇಕೆ ?”

“ಇಲ್ಲ, ಸುಲ್ತಾನಾ. ಮೊಗಲರ ಸೇನೆಯಲ್ಲಿ ಈಗ ಒಡಕು ಬಹಳವಾಗಿದೆ. ಈಗ ಬೀರಾರಿನಲ್ಲಿ ಖಾನ್ ಖಾನನ್‌ರ ಸೈನ್ಯ ಮಾತ್ರವಿದೆ. ಬೀರಾರನ್ನು ತೆರವು ಮಾಡಿಕೊಡಲಿಲ್ಲವೆಂದು ಆ ಸೇನೆ ನಮ್ಮ ಸೈನ್ಯದೊಂದಿಗೆ ಕಾದುತ್ತಿದೆಯಂತೆ. ಇದು ನಮಗೆ ಬಹಳ ಒಳ್ಳೆಯ ಅವಕಾಶ. ಈಗ ನಾವೂ ಅವರ ಮೇಲೆ ಬಿದ್ದರೆ ಅವರನ್ನು ಸುಲಭವಾಗಿ ಸೋಲಿಸಬಹುದು.”

“ಆದರೆ ನಮಗೀಗ ಶಾಂತಿ ಅಗತ್ಯ. ಮಾಡಿಕೊಂಡ ಒಪ್ಪಂದವನ್ನು ಮುರಿಯುವುದು ಸರಿಯಲ್ಲ. ನನ್ನ ಪ್ರಜೆಗಳು ಅನ್ಯಾಯವಾಗಿ ಯುದ್ಧದಲ್ಲಿ ಸಾಯುವುದು ನನಗಿಷ್ಟವಿಲ್ಲ.”

“ಇಲ್ಲ ಬೇಗಂ ಸಾಹೀಬ, ಈ ಯುದ್ಧದಲ್ಲಿ ನಮಗೆ ಗೆಲವು ಖಂಡಿತ.”

“ಸೋಲೋ ಗೆಲವೋ, ಯುದ್ಧಕ್ಕೆ ಖರ್ಚಂತೂ ವಿಪರೀತವಾಗುತ್ತದೆ. ಸೋತರಂತೂ ಅವರಿಗೆ ಕಪ್ಪಕಾಣಿಕೆ ಕೊಡಲು ಮತ್ತಷ್ಟು ಹಣ ವ್ಯರ್ಥ.”

“ನಮ್ಮ ಯೋಚನೆ ತಮಗೆ ಒಪ್ಪಿಗೆಯಾಗದಿದ್ದಲ್ಲಿ ತಮ್ಮ ಒಪ್ಪಿಗೆಯಿಲ್ಲದೆಯೇ ನಾವು ಮೊಗಲರ ವಿರುದ್ಧ ಹೋರಾಡುತ್ತೇವೆ. ಬೀರಾರಿಗೆ ನಮ್ಮ ಸೈನ್ಯದೊಂದಿಗೆ ಹೋರಾಡುತ್ತೇವೆ.”

ಮೂರ್ಖರು ಕೇಳಲಿಲ್ಲ.

ಚಾಂದ್ ಬೀಬಿಯ ವಿವೇಕಯುತ ಮಾತುಗಳಿಂದ ಯಾವ ಪರಿಣಾಮವೂ ಆಗಲಿಲ್ಲ. ನೆಹೂಂಗ್ ಖಾನನೆಂಬ ಸೇನಾನಿಯ ನಾಯಕತ್ವದಲ್ಲಿ ದೊಡ್ಡ ಸೇನೆ ಬೀರಾರಿ ನತ್ತ ಹೊರಟಿತು. ಬಿಜಾಪುರದ ಸುಹೀಲ್ ಖಾನನ ಸೈನ್ಯವೂ ಗೋಲ್ಕೊಂಡದ ಸೈನ್ಯವೂ ಬಂದು ಸೇರಿದವು. ಈ ಎಲ್ಲ ಸೈನ್ಯಗಳಿಗೂ ಸುಹೀಲ್ ಖಾನ್ ದಂಡನಾಯಕ ಆದ.

ಮೊಗಲ್ ಸೇನೆಗೂ ದಕ್ಷಿಣದ ಸೈನ್ಯಕ್ಕೂ ಗೋದಾವರಿ ನದಿ ತೀರದ ಸೂಪ ಎಂಬಲ್ಲಿ ದೊಡ್ಡ ಯುದ್ಧವಾಯಿತು.  ಮೊದಲು ಅಬ್ದುರ್ ರಹೀಮನಿಗೆ ಬಹಳ ನಷ್ಟ ಉಂಟಾಗಿ, ಸುಹೀಲ್ ಖಾನನಿಗೇ ಜಯ ದೊರಕಿದಂತೆ ಕಂಡರೂ ಕೊನೆಗೆ ಸುಹೀಲ್ ಖಾನ್ ಗಾಯಗೊಂಡು, ಪ್ರಜ್ಞೆ ಕಳೆದುಕೊಂಡ. ದಕ್ಷಿಣದ ಸೇನೆ ದಿಕ್ಕಾಪಾಲಾಗಿ ಚದುರಿಹೋಯಿತು. ಯುದ್ಧ ತಟಸ್ಥವಾಯಿತು. ಅಬ್ದುರ್ ರಹೀಮ್ ಷಹಾಪುರಕ್ಕೆ ಹೊರಟುಹೋದ.

ಈ ವೇಳೆಗೆ ಮುರಾದನಿಗೂ ರಹೀಮನಿಗೂ ಇದ್ದ ವೈಮನಸ್ಯ ವಿಪರೀತ ಹೆಚ್ಚಾಗಿ, ಅಕ್ಬರ್ ರಹೀಮನನ್ನು ಹಿಂದಕ್ಕೆ ಕರೆಸಿಕೊಂಡ. ಚಾಂದ್ ಬೀಬಿಗೆ ಸ್ವಲ್ಪ ಕಾಲ ಮೊಗಲರ ಭೀತಿ ಇಲ್ಲದೆ ನಿರಾಳವಾಗಿರುವಂತಾಯಿತು. ಆದರೆ ಅವಳಿಗೆ ರಾಜ್ಯದಲ್ಲೇ ವಿರೋಧ ಹೆಚ್ಚುತ್ತಿತ್ತು. ಅವಳೇ ಆರಿಸಿ, ನೇಮಿಸಿದ್ದ ಅಭಂಗ್ ಖಾನ್ ಸಹ ಅವಳ ವಿರೋಧಿಯಾದ.

ಮತ್ತೆ ಮೊಗಲರು ಬಂದರು

೧೫೯೯ರಲ್ಲಿ ಮುರಾದನು ತೀವ್ರ ಖಾಯಿಲೆ ಯಿಂದಾಗಿ ಸತ್ತುಹೋದನು. ಅಕ್ಬರನು ದಕ್ಷಿಣದ ರಾಜ್ಯಗಳ ವಿದ್ಯಮಾನಗಳನ್ನು ವಿವರವಾಗಿ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು, ತನ್ನ ನೆಚ್ಚಿನ ಸಚಿವರಲ್ಲೊಬ್ಬ ನಾದ ಅಬ್ದುಲ್ ಫಸಲ್‌ನನ್ನು ನೇಮಿಸಿದನು. ಅಲ್ಲದೆ ತಾನೇ ಒಮ್ಮೆ ದಕ್ಷಿಣದ ರಾಷ್ಟ್ರಗಳಿಗೆ ಭೇಟಿ ಕೊಡಲೂ ಸಿದ್ಧತೆ ನಡೆಸಿದ್ದನು.

ಅಬ್ದುಲ್ ಫಸಲ್ ದಕ್ಷಿಣಕ್ಕೆ ಬಂದಾಗ ಅಲ್ಲಿನ ಪರಿಸ್ಥಿತಿ ಮೊಗಲರಿಗೆ ಸ್ವಲ್ಪವೂ ಅನುಕೂಲವಾಗಿರಲಿಲ್ಲ. ಅಹಮದ್ ನಗರದ ಮುತ್ತಿಗೆಯ ಸಮಯದಲ್ಲಿ ಮೊಗಲರಿಗೆ ಸಹಾಯ ಮಾಡಿದ್ದ ಖಾಂದೇಶ ಈಗ ತಿರುಗಿಬಿದ್ದಿತ್ತು. ರಾಜಾ ಆಲಿ ಖಾನನ ಅನಂತರ ಆ ದೇಶದ ಅರಸ ಮಿರಾನ್‌ಬಹದ್ದೂರ್ ಖಾನನು ಮೊಗಲರಿಗೆ ಪ್ರತಿಭಟನೆ ತೋರಿದ. ಅತ್ಯಂತ ಭದ್ರವೂ ಅಭೇದ್ಯವೂ ಆದುದೆಂದು ಹೆಸರಾದ ಆಸಿರ್‌ಘರ್ ಕೋಟೆಯೊಳಗೆ ಇದ್ದು, ಕೋಟೆಯ ಎಲ್ಲ ಬಾಗಿಲುಗಳನ್ನು ಮುಚ್ಚಿಸಿಬಿಟ್ಟನು. ಅಕ್ಬರನಿಗೆ ಬಹಳ ಕೋಪ ಬಂದು, ಸ್ವತಃ ಆಸಿರ್‌ಘರ್‌ಗೆ ಹೋಗಲು ನಿಶ್ಚಯಿಸಿ, ಅಹಮದ್ ನಗರಕ್ಕೆ ತನ್ನ ಮಗ ಧಾನಿಯಲ್‌ನನ್ನು ಕಳುಹಿಸಿದನು.

ಅಬ್ದುಲ್ ಫಸಲ್ ಅಹಮದ್ ನಗರಕ್ಕೆ ಮುತ್ತಿಗೆ ಹಾಕುವ ಮೊದಲು, ಸಂಧಾನ ಸಾಧ್ಯವೇ ಎಂದು ಪರೀಕ್ಷಿಸಲು ನಿರ್ಧರಿಸಿದ. ಅದಕ್ಕಾಗಿ ಚಾಂದ್ ಬೀಬಿಗೆ ಪತ್ರಗಳನ್ನೂ ಕಳುಹಿಸಿದ. ಚಾಂದ್ ಸುಲ್ತಾನಾಳಿಗೂ ಯುದ್ಧ ಬೇಕಿಲ್ಲವೆಂದೂ ಗೌರವಯುತವಾದ ಸಂಧಾನಕ್ಕೆ ಆಕೆ ಸಿದ್ಧಳೆಂದೂ ತಿಳಿದಾಗ ಅವನಿಗೆ ಬಹಳ ಸಂತೋಷ ವಾಯಿತು. ಸಂಧಾನ ಮುಂದುವರಿಯುವಷ್ಟರಲ್ಲಿ ರಾಜಕುಮಾರ ಧಾನಿಯಲ್, ಅಹಮದ್ ನಗರಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ. ದಾರಿಯಲ್ಲಿ ಅಭಂಗ್ ಖಾನನು ಸೇನೆಯನ್ನು ತಡೆಯಲು ಯತ್ನಿಸಿ ವಿಫಲನಾದ, ಮೊಗಲ್ ಸೇನೆ ಮತ್ತೊಮ್ಮೆ ಅಹಮದ್ ನಗರಕ್ಕೆ ಮುತ್ತಿಗೆ ಹಾಕಿತು.

ದ್ರೋಹಕ್ಕೆ ಬಲಿ

ಚಾಂದ್ ಬೀಬಿ ಅಹಮದ್ ನಗರದ ಸೇನೆಯ ಬಲದಲ್ಲಿ ಈಗ ನಂಬಿಕೆ ಕಡಿಮೆಯಾಗಿತ್ತು. ಅಲ್ಲದೆ ಸಾಮ್ರಾಟ್ ಅಕ್ಬರ್ ನಗರಕ್ಕೆ ಸಮೀಪದಲ್ಲೇ ಇದ್ದ ಬುರ‍್ಹಾನ್‌ಪುರಕ್ಕೆ ಬಂದು ತಲಪಿದ್ದರಿಂದ ಅವನು ನಗರಕ್ಕೆ ಸೇನೆಯೊಡನೆ ಬರಬಹುದಾಗಿತ್ತು. ಮುತ್ತಿಗೆ ಅನೇಕ ತಿಂಗಳುಗಳ ಕಾಲ ಮುಂದುವರಿಯಿತು. ಚಾಂದ್ ಬೀಬಿ ಅಬ್ದುಲ್ ಫಸಲ್‌ನ ಸಂಧಾನ ಸೂಚನೆಯನ್ನು ಒಪ್ಪುವುದೇ  ಒಳ್ಳೆಯದೆಂದು ಯೋಚಿಸಿದಳು.

ಆದರೆ ಅವಳ ಸೇನೆಯ ಅಧಿಕಾರಿಗಳು ಶಾಂತಿ ಸಂಧಾನದಲ್ಲಿ ಆಸಕ್ತಿ ತೋರಲಿಲ್ಲ. “ನಾವೀಗ ಸಂಧಾನಕ್ಕೆ ಒಪ್ಪಿಕೊಂಡರೆ ಶತ್ರುಗಳು ನಮ್ಮನ್ನು ಹೇಡಿಗಳೆಂದು ಕೊಳ್ಳುತ್ತಾರೆ. ನಾವು ಹೆಚ್ಚು ಕಾಣಿಕೆ ಕೊಡಬೇಕಾ

ಗುತ್ತದೆ, ಸಂಧಾನ ಬೇಡ. ಕೊನೆಯವರೆಗೂ ಹೋರಾ ಡೋಣ” _ ಸೈನ್ಯದ ಅಧಿಕಾರಿಗಳು ಹೇಳಿದರು.

“ಆದರೆ ನೀವು ಒಂದು ಮುಖ್ಯ ಅಂಶವನ್ನು ಮರೆತಿದ್ದೀರಿ. ನಮ್ಮ ಬಲ ದಿನೇದಿನೇ ಕುಗ್ಗುತ್ತಿದೆ. ಪ್ರಬಲ ಶತ್ರುವಿನೆದುರು ಶಕ್ತಿ ಸಾಲದಾದಾಗ ನಾವು ಯುಕ್ತಿಯಿಂದ ನಡೆಯಬೇಕು.”

“ಕೂಡದು. ಸಂಧಾನ ಕೂಡದು. ಯುದ್ಧವೇ ಬೇಕು.”

ಚಾಂದ್ ಬೀಬಿ ಅಹಮದ್ ನಗರದ ಒಳಿತಿಗಾಗಿ ಹಗಲು-ರಾತ್ರಿ ಚಿಂತಿಸುತ್ತಿದ್ದಳು. ಶ್ರಮಿಸುತ್ತಿದ್ದಳು. ಆದರೆ ಅವಳ ಅಧಿಕಾರಿಗಳಲ್ಲೆ ಹಲವರು ಸಂಪೂರ್ಣವಾಗಿ ಅವಳಿಗೆ ವಿರೋಧವಾಗಿದ್ದರು. ಬಿಸಿರಕ್ತದ ಅವರಿಗೆ ತಮ್ಮ ಶಕ್ತಿಯನ್ನೂ ಶತ್ರುವಿನ ಶಕ್ತಿಯನ್ನೂ ಅಳೆದು ನೋಡಿ ತೀರ್ಮಾನ ಮಾಡಬೇಕು, ಹುಚ್ಚು ಸಾಹಸದಿಂದ ಅಪಾಯ ಎಂಬುದು ಅರ್ಥವಾಗಲಿಲ್ಲ. ರಾಣಿ ಮೊಗಲ ರೊಡನೆ ಸಂಧಿ ಮಾಡಿಕೊಳ್ಳಬಹುದು ಎಂದು ಅವರಿಗೆ ಆತಂಕ.

ಅಭಂಗ್ ಖಾನನ ಆಪ್ತರಲ್ಲಿ ಕೆಲವರು ಪಿತೂರಿ ಮಾಡಿದರು, ಒಂದು ರಾತ್ರಿ ಅಂತಃಪುರಕ್ಕೆ ನುಗ್ಗಿ ಚಾಂದ್ ಬೀಬಿಯನ್ನು ಮೋಸದಿಂದ ಕೊಂದರು.

ಜನ ‘ಅಹಮದ್ ನಗರದ ದೇವಿ’ ಎಂದು ಗೌರವಿಸಿದ ರಾಣಿ ದ್ರೋಹಿಗಳ ಕೈಯಲ್ಲಿ ಸಿಕ್ಕು ಪ್ರಾಣ ಬಿಟ್ಟಳು.

ಅವರಿಗಾಗಲಿ, ಅಹಮದ್ ನಗರಕ್ಕಾಗಲಿ ಇದರಿಂದ ಒಳ್ಳೆಯದಾಗಲಿಲ್ಲ. ಚಾಂದ್ ಬೀಬಿ ಹೇಳಿದ್ದಂತೆ ಅವರು ಯುದ್ಧದಲ್ಲಿ ಸೋತರು. ೧೬೦೦ ರಲ್ಲಿ ಅಹಮದ್ ನಗರ ಮೊಗಲರ ವಶವಾಯಿತು.

ಚಾಂದ್ ಬೀಬಿ ತನ್ನ ಜೀವನವನ್ನು ಅಹಮದ್ ನಗರಕ್ಕಾಗಿ ಮುಡಿಪಿಟ್ಟ ವೀರ ರಮ. ಯುದ್ಧಕಾಲದಲ್ಲೂ ಶತ್ರು ಮನೆಯ ಮುಂದೆ ಬೀಡುಬಿಟ್ಟಿದ್ದ ಸಮಯದಲ್ಲೂ ಶಾಂತಿಕಾಲದಲ್ಲೂ ಆಕೆ ಸದಾ ಅಹಮದ್ ನಗರದ ಒಳಿತಿಗೇ ಚಿಂತಿಸುತ್ತಿದ್ದಳು. ಆ ರಾಜ್ಯದ ಮುಖಂಡರು ಅವಳಿಗೆ ಸಹಕಾರ ನೀಡಿದ್ದಿದ್ದರೆ, ತಮ್ಮ ಯೋಜನೆಗಳೆಲ್ಲ ಫಲಿಸುತ್ತಿದ್ದುವೋ ಏನೋ ! ತಮ್ಮಲ್ಲೇ ಜಗಳವಾಡದೆ, ದೂರದೃಷ್ಟಿಯ ರಾಣಿಯ ಸಮಯೋಚಿತ ಸಲಹೆಗಳಿಗೆ ಕಿವಿಗೊಟ್ಟಿದ್ದರೆ, ಅಹಮದ್ ನಗರದ ಇತಿಹಾಸವೇ ಬದಲಾಗಬಹುದಾಗಿತ್ತು.

ಅಹಮದ್ ನಗರದ ವೀರ ರಮಣಿ ಚಾಂದ್ ಬೀಬಿ ತನ್ನ ಧೈರ್ಯ, ಸಾಹಸ ಮತ್ತು ಚಾತುರ್ಯಗಳಿಂದ ಭಾರತದ ಇತಿಹಾಸದಲ್ಲಿ ಅಮರಳಾಗಿ ಉಳಿದಿದ್ದಾಳೆ.