ಗಂಗಾನದಿ ತೀರದಲ್ಲಿ ಪಾಟಲಿಪುತ್ರವೆಂಬ ಪಟ್ಟಣ ವಿತ್ತು. ಅದನ್ನು ಕುಸುಮಪುರವೆಂದೂ ಕರೆಯುತ್ತಿದ್ದರು. ಒಂದು ದಿನ ಆ ಊರಿನ ಅನ್ನಛತ್ರದ ಮುಂದೆ ಒಬ್ಬ ಬ್ರಾಹ್ಮಣ ಉರಿಬಿಸಲಿನಲ್ಲಿ ಸರಸರನೆ ಬರುತ್ತಿದ್ದ. ಅವನ ಕಣ್ಣುಗಳಲ್ಲಿ ಕಾಂತಿ ಚಿಮ್ಮುತ್ತಿತ್ತು.

ಗರಿಕೆಯ ನಾಶ

ಬರುವ ಆತುರದಲ್ಲಿ ಆತ ದಾರಿಯಲ್ಲಿದ್ದ ಗರಿಕೆಯನ್ನು ಎಡವಿ ಮುಗ್ಗರಿಸಿದ. ತುಂಬಾ ಕೋಪ ಬಂತು. ಗರಿಕೆಯ ಬೇರು ತುಂಬಾ ಆಳಕ್ಕೆ ಇಳಿದಿರುತ್ತದೆ. ಆದರೇನು? ಆತನ ಕೋಪಕ್ಕೆ ಯಾರೂ ಎದುರು  ನಿಲ್ಲುವಂತಿಲ್ಲ, ಉಳಿಯುವಂತಿಲ್ಲ. ಆ ಉರಿಬಿಸಲಿನಲ್ಲಿ ಅಲ್ಲಿಯೇ ಕುಳಿತು ಆ ಗರಿಕೆಯನ್ನು ಬೇರು ಸಹಿತ ಕಿತ್ತೆಸೆದು ಮುಂದೆ ಹೊರಟ.

ಆತನ ಹೆಸರು ಚಾಣಕ್ಯ .

ಇದನ್ನೆಲ್ಲ ನೋಡುತ್ತ ಛತ್ರದ ಬಾಗಿಲಲ್ಲಿ ಒಬ್ಬಾತ ನಿಂತಿದ್ದ. ಆತನು ಚಿಕ್ಕ ವಯಸ್ಸಿನವನು. ತೇಜಸ್ವಿ. ಆತನ ಹೆಸರು ಚಂದ್ರಗುಪ್ತ. ಆತನು ಛತ್ರದ ಅಧಿಕಾರಿ. ಆತನಿಗೆ “ಅಬ್ಬಾ, ಎಂತಹ ಛಲಗಾರ! ಇವನ ಸಹಾಯವನ್ನು ಪಡೆಯಬೇಕು”ಎನ್ನಿಸಿತು. ಚಾಣಕ್ಯನನ್ನು ತುಂಬ ಗೌರವದಿಂದ ಮಾತನಾಡಿಸಿ, ಭಕ್ತಿಯಿಂದ ಅನ್ನಛತ್ರದೊಳಕ್ಕೆ ಕರೆದುಕೊಂಡು ಹೋದ.

ಕ್ಷೇಮ ಸಮಾಚಾರ ವಿಚಾರಿಸುತ್ತ ಚಾಣಕ್ಯ ಕೇಳೀದ “ನೀನು ಯಾರು? ನಿನ್ನ ಮನಸ್ಸಿನಲ್ಲೇನೋ ಯೋಚನೆ ಇದ್ದಂತಿದೆ?”

ರಾಜ್ಯವನ್ನು ಕೊಡಿಸುತ್ತೇನೆ

ಅಧಿಕಾರಿ ಭಯಭಕ್ತಿಯಿಂದ ಕೈಮುಗಿದು ಹೇಳಿದ “ಸ್ವಾಮಿ, ನನ್ನ ಹೆಸರು ಚಂದ್ರಗುಪ್ತ”.

“ನಿನ್ನನ್ನು ನೋಡಿದರೆ ತುಂಬಾ ನೊಂದಿರುವಂತೆ ಕಾಣುತ್ತದೆ. ಚಿಂತೆಯಲ್ಲಿರುವಂತೆ ಕಾಣುತ್ತದೆ. ಏಕೆ ಹೇಳು?”  ಬುದ್ಧಿವಂತ ಚಾಣಕ್ಯ ಕೇಳಿದ.

“ಏನೋ, ಕಷ್ಟದಲ್ಲಿದ್ದೇನೆ, ಸ್ವಾಮಿ ಹೇಳಿ ನಿಮಗೇಕೆ ಬೇಸರಪಡಿಸಲಿ?” ಎಂದ ಚಂದ್ರಗುಪ್ತ.

“ಇಲ್ಲ, ಹೇಳು ನನ್ನಿಂದ ಸಾಧ್ಯವಾದರೆ ಸಹಾಯ ಮಾಡುತ್ತೇನೆ” ಎಂದ ಚಾಣಕ್ಯ.

ಚಂದ್ರಗುಪ್ತ ತನ್ನ ಕಷ್ಟದ ಕಥೆಯನ್ನು ಪ್ರಾರಂಭಿಸಿದ. “ನಮ್ಮ ತಾತ ಸರ್ವಾರ್ಥಸಿದ್ಧೀರಾಜ. ಆತನಿಗೆ ಇಬ್ಬರು ಹೆಂಡತಿಯರು- ಸುನಂದಾದೇವಿ, ಮುರಾದೇವಿ. ಸುನಂದಾದೇವಿಗೆ ಒಂಬತ್ತು ಜನ ಗಂಡು ಮಕ್ಕಳು. ಅವರನ್ನು ನವನಂದರೆಂದು ಕರೆಯುತ್ತಾರೆ. ಮುರಾದೇವಿಗೆ ಒಬ್ಬನೇ ಮಗ ಆತನ ಹೆಸರು ಮೌರ್ಯ. ಆತನೇ ನನ್ನ ತಂದೆ. ನಾವು ಒಂದುನೂರು ಜನ ಅಣ್ಣ ತಮ್ಮಂದಿರು. ನಮ್ಮ ಮೇಲೆ ಹೊಟ್ಟೆಕಿಚ್ಚಿನಿಂದ ನಂದರು ನಮ್ಮನ್ನೆಲ್ಲ ಕೊಂದು ಹಾಕಬೇಕೆಂದು ಪ್ರಯತ್ನ ಮಾಡಿದರು. ಎಲ್ಲರೂ ಸತ್ತು ಕೊನೆಗೆ ನಾನೋಬ್ಬ ಹೇಗೋ ಉಳಿದುಕೊಂಡಿದ್ದೇನೆ. ನನಗೆ ಬಾಳೇ ಬೇಸರವಾಗಿದೆ. ನನ್ನ ಕಷ್ಟವನ್ನೇಲ್ಲಾ ತಮ್ಮಲ್ಲಿ ಬಿನ್ನಹ  ಮಾಡಿಕೊಂಡಿದ್ದೇನೆ. ನಂದರಿಂದ ಬಹಳವಾಗಿ ನೊಂದಿದ್ದೇನೆ. ತಾವು ನನಗೆ ಸಹಾಯ ಮಾಡಬೇಕು.”

ಈ ಕರುಣ ಕಥೆ ಕೇಳಿ ಚಾಣಕ್ಯನಿಗೆ ತುಂಬಾ ಕನಿಕರವಾಯ್ತು. ಏನಾದರಾಗಲಿ, ಇವನಿಗೆ ಸಹಾಯ ಮಾಡಬೇಕು” ಎಂದು ಆತನ ಮನಸ್ಸಿಗೆ ಬಂತು. “ನಿನಗೆ ರಾಜ್ಯಾಧಿಕಾರ ನಾನು ಕೊಡಿಸುತ್ತೇನೆ. ಆದರೆ ನೋಡು, ಈ ನಂದರು ನೇರವಾಗಿ ನನಗೇನೂ ಅಪರಾಧವನ್ನು ಮಾಡಿಲ್ಲ. ಅವರು ಏನಾದರೂ ಅಪರಾಧ ಮಾಡುವಂತೆ ಒಂದು ಉಪಾಯ ಹೂಡುತ್ತೇನೆ. ಆ ಮೇಲೆ ನಿನ್ನ ರೊಟ್ಟಿ ಜಾರಿ ತುಪ್ಪದಲ್ಲಿ  ಬಿತ್ತೆಂದು ತಿಳಿ” ಎಂದು ಸಮಾಧಾನದ ಮಾತುಗಳನ್ನು ಹೇಳಿದ.

‘ನಿಮ್ಮ ವಂಶವನ್ನು ನಾಶ ಮಾಡುವ ತನಕ

ಮಧ್ಯಾಹ್ನದ ಸಮಯ. ಛತ್ರದಲ್ಲಿ ಊಟಕ್ಕೆ ಏರ್ಪಾಟಾಗಿದೆ. ಸಾಲು ಸಾಲಾಗಿ ಬಾಳೆಲೆಗಳನ್ನು ಹಾಕಿದ್ದಾರೆ. ನೂರಾರು ಜನ ಕುಳಿತಿದ್ದಾರೆ. ಅಲ್ಲೇ ಒಂದು ಕಡೆ  ಒಂದು ಸಿಂಹಾಸನವಿತ್ತು. ಚಾಣಕ್ಯ ಸ್ನಾನ ಮಾಡಿಕೊಂಡು ನೇರವಾಗಿ ಬಂದು ಆ ಸಿಂಹಾಸನದ ಮೇಲೆ ಕುಳಿತುಬಿಟ್ಟ. ಅಷ್ಟರಲ್ಲಿ ನವನಂದರೂ ಅಲ್ಲಿಗೆ ಬಂದರು. ರಾಜರು ಕೂಡುವ ಜಾಗದಲ್ಲಿ ಯಾರೋ ಒಬ್ಬ ಸಾಧಾರಣ ಮನುಷ್ಯ ಕುಳಿತ್ತಿದ್ದುದನ್ನು ನೋಡಿ ಅವರಿಗೆ ತುಂಬಾ ರೋಷ ಬಂತು. ಚಾಣಕ್ಯನನ್ನು ಬಲಾತ್ಕಾರವಾಗಿ ನೂಕಿಸಿಬಿಟ್ಟರು.  ಆಗ ಅತನ ತಲೆಗೂದಲು  ಗಂಟು ಬಿಚ್ಚಿಹೋಯಿತು. ಕೋಪ ಬಂತು. ಹಾವಿನಂತೆ ಬುಸುಗುಟ್ಟುತ್ತ , “ನೀಚರೇ, ನಿಮ್ಮ ವಂಶವನ್ನೇ ನಾಶಮಾಡುವ ತನಕ ಈ ನನ್ನ ತಲೆಗುದಲನ್ನು ಕಟ್ಟುವುದಿಲ್ಲ. ಇದೇ ನನ್ನ ಪ್ರತಿಜ್ಞೆ. ನೆನಪಿರಲಿ” ಎಂದು ಅರ್ಭಟಿಸುತ್ತ ಚಾಣಕ್ಯ ದಢದಢನೆ ಹೊರಟು ಹೋದ. ನಂದರು ಭಯಪಡಲಿಲ್ಲ. “ಈ ಭಿಕಾರಿ ಬ್ರಾಹ್ಮಣನ ಮಾತಿನಿಂದ ಆಗುವುದೇನು,  ಹೋಗುವುದೇನು? ” ಎಂದು ತಾತ್ಸಾರ ಮಾಡುತ್ತ ಅಪಹಾಸ್ಯವಾಗಿ ಮಾತನಾಡಿಕೊಳ್ಳುತ್ತ ಅರಮನೆಯ ಕಡೆಗೆ ನಡೆದರು.

ನಂದರ ಕಡೆತುಂಬಾ ಬುದ್ಧಿವಂತನಾದ ಒಬ್ಬ ಮಂತ್ರಿ ಇದ್ದ. ಆತನ ಹೆಸರು ಅಮಾತ್ಯರಾಕ್ಷಸ. ಆತ ಬಹಳ ಶೂರ, ಕಾರ್ಯದಕ್ಷ, ರಾಜಕಾರ್ಯದಲ್ಲಿ ಪಳಗಿದ ಕೈ. ಕಣ್ಣನ್ನು ರೆಪ್ಪೆಗಳು ಕಾಪಾಡುವಂತೆ ಆತ ನಂದರನ್ನು ಕಾಪಾಡುತ್ತಿದ್ದ.

ಚಾಣಕ್ಯ ಸ್ವಲ್ಪವೂ ಹಿಂದೆಗೆಯಲಿಲ್ಲ. ತಾನೊಬ್ಬನೇ ನಂದರ ಅಧಿಕಾರಕ್ಕೆ ಅಮಾತ್ಯರಾಕ್ಷಸನ ಬುದ್ಧಿ ಶಕ್ತಿಗೆ  ಎದುರಾಗಿ ನಿಂತ. ನಂದರನ್ನು ಸಿಂಹಾಸನದಿಂದ ಇಳಿಸಿದ. ಚಂದ್ರಗುಪ್ತನನ್ನು ಸಿಂಹಾಸನದಲ್ಲಿ ಕೂಡಿಸಿದ. ಚಂದ್ರಗುಪ್ತನನ್ನು ನಾಶಮಾಡಲು ಎಲ್ಲ ರೀತಿಯ ಸಾಹಸ ಪಟ್ಟ ಅಮಾತ್ಯರಾಕ್ಷಸನನ್ನೆ ಮಂತ್ರಿಯನ್ನಾಗಿ ಮಾಡಿದ.

ಇದು ನಮ್ಮ ದೇಶದ ಚಾಣಕ್ಯನ ವಿಷಯವಾಗಿ ನೂರಾರು ವರ್ಷಗಳಿಂದ ಜನಪ್ರೀಯವಾದ ಕಥೆ. ಆದರೆ ಚರಿತ್ರಕಾರರ  ಪ್ರಕಾರ ಇದನ್ನು ನಿಜವೆಂದು ಸಂಪೂರ್ಣವಾಗಿ ಒಪ್ಪುವಂತಿಲ್ಲ.

ಆದರೆ ಒಂದು ವಿಷಯವನ್ನು ಒಪ್ಪಬೇಕು. ಈ ಕಥೆಯಲ್ಲಿ ಹೇಳಿದಂತೆಯೇ ಎಲ್ಲ ಸಂಗತಿಗಳೂ ನಡೆದವೋ ಇಲ್ಲವೋ, ಆದರೆ ಚಾಣಕ್ಯ ಸ್ವಭಾವವನ್ನಂತೂ ಇದು ಚೆನ್ನಾಗಿ ತೋರಿಸುತ್ತದೆ.

ಅಸಾಧಾರಣ ಪುರುಷ

ಚಾಣಕ್ಯ ತುಂಬ ಪ್ರತಿಭಾವಂತ. ಹಿಡಿದ ಕೆಲಸವನ್ನು ಪಟ್ಟು ಹಿಡಿದು, ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ. ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತರೋಪಾಯ ಚತುರ. ಯುದ್ಧ ವಿದ್ಯೆಯಲ್ಲಿ ತುಂಬಾ ಅನುಭವಿ, ಸೂಕ್ಷ್ಮಮತಿ. ಆತನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಬಹಳ ರಹಸ್ಯವಾಗಿ ಕೆಲಸ ಮಾಡುವವನು. ಬಹುದೂರದ ಅಲೋಚನೆ, ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ, ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ. ಮಹಾತ್ಯಾಗಿ, ಮಹಾ ತಪಸ್ವಿ. ಹೊರನೋಟಕ್ಕೆ ತುಂಬ ಕಠೀಣ ಸ್ವಭಾವದವನು. ಅಪಾರ ಲೋಕಾನುಭವವಿದ್ದವನು. ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ. ಆತನಿಗೆ ತಿಳೀಯದ ಶಾಸ್ತ್ರವಿಲ್ಲ. ಗೊತ್ತಿಲ್ಲದ ವಿಚಾರವಿಲ್ಲ. ಅದೊಂದು ಪ್ರತಿಭಾಪುಂಜ. ಯಾವ ದೃಷ್ಟಿಯಿಂದ ನೋಡಿದರೂ ಚಾಣಕ್ಯನಿಗೆ ಸರಿಸಮಾನರಾದಂತಹ ವ್ಯಕ್ತಿಗಳು ಜಗತ್ತಿನಲ್ಲಿಯೇ ಅಪರೂಪ. “ಚಾಣಕ್ಯ ತಂತ್ರ” ಎಂಬ ಮಾತು ಈಗಲೂ ಗಾದೆಯಾಗಿದೆ.

ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಕನಾಗಿ ಮೆರೆದ ಪುಣ್ಯ ಪುರುಷ ಚಾಣಕ್ಯ.

ಚಾಣಕ್ಯನಿಗೆ ಕೌಟಿಲ್ಯ ಎಂದು ಇನ್ನೊಂದು ಹೆಸರು. ಚೀಣಾ ದೇಶದಲ್ಲಿ ಹುಟ್ಟಿದುದರಿಂದ ಚಾಣಕ್ಯ ಎಂದು ಹೆಸರು ಬಂದಿತು ಎಂದು ಹೇಳುತ್ತಾರೆ.  ಈತನ ಪ್ರತಿಭೆಯನ್ನು ತೊರಿಸುವ ಒಂದು ಪುಸ್ತಕ ಇಂದೂ ಉಳಿದಿದೆ. “ಅರ್ಥಶಾಸ್ತ್ರ” ಎಂದು ಅದರ ಹೆಸರು. ಅದು ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ.

ದುರದೃಷ್ಟವೆಂದರೆ ಈತನ ವಿಷಯ ಖಚಿತವಾಗಿ ತಿಳಿದಿರುವುದು ಬಹು ಸ್ವಲ್ಪ. ಬೇರೆ ಬೇರೆ ಪುಸ್ತಕಗಳಲ್ಲಿ ದೊರೆಯುವ ಅಷ್ಟಿಷ್ಟು ಸಾಮಗ್ರಿಗಳನ್ನೆಲ್ಲ ಸೇರಿಸಿ ನಾವು, “ಪ್ರಾಯಶ: ಇದು ಇವನ ಜೀವನ ಚರಿತ್ರೆ” ಎಂದು ಹೇಳಬಹುದು.

ತಕ್ಷಶಿಲೆಯ ವಿದ್ಯಾರ್ಥಿ

ಚಾಣಕ್ಯನ ವಿದ್ಯಾಭ್ಯಾಸ ತಕ್ಷಶಿಲೆ ಎಂಬ ಊರಿನ ಪ್ರಸಿದ್ಧ ಶಾಲೆಯಲ್ಲಿ ಆಯಿತು. ತಕ್ಷಶಿಲೆಯ ಅಧ್ಯಾಪಕರು ಜಗತ್ಪ್ರಸಿದ್ಧ ವಿಧ್ವಾಂಸರು. ಭಾರತದ ಎಲ್ಲಾ ಭಾಗಗಳಿಂದ ವಿದ್ಯಾಭ್ಯಾಸಕ್ಕಾಗಿ ಅಲ್ಲಿಗ ವಿದ್ಯಾರ್ಥಿಗಳು ಬರುತ್ತಿದ್ದರು.  ರಾಜರು ಸಹ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಕಳುಹಿಸುತ್ತಿದ್ದರು.  ಇಲ್ಲಿ ಒಬ್ಬ ಉಪಾಧ್ಯಾಯನ ಬಳಿ ಒಂದು ನೂರು ಒಂದು ಮಂದಿ ವಿದ್ಯಾರ್ಥಿಗಳು ಇದ್ದರಂತೆ. ಅಷ್ಟು ಮಂದಿಯೂ ರಾಜಕುಮಾರರಂತೆ!  ಸಾಮಾನ್ಯವಾಗಿ ಹದಿನಾರನೆಯ ವರ್ಷಕ್ಕೆ ವಿದ್ಯಾರ್ಥಿ ಈ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಿದ್ದ.  ವೇದಗಳನ್ನೂ ಧನುರ್ವಿದ್ಧೆ, ಬೇಟೆ, ಆನೆಗಳನ್ನು ನೋಡಿಕೊಳ್ಳುವುದು ಹೇಗೆ ಎಂಬುವುದನ್ನೂ ಹದಿನೆಂಟು ಕಲೆಗಳನ್ನೂ ಕಲಿಸುತ್ತಿದ್ದರು. ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಸಮರಸಶಾಸ್ತ್ರ, ಇವುಗಳಿಗಾಗಿ ಇಲ್ಲಿದ್ದ ವಿದ್ಯಾ ಸಂಸ್ಥೆಗಳು ಭಾರತದಲ್ಲಿ ಮಾತ್ರವಲ್ಲ, ಆಚೆಯೂ ಸಹ ಪ್ರಖ್ಯಾತವಾಗಿದ್ದವು.

ಇಂತಹ ಕೇಂದ್ರದಲ್ಲಿ ವಿದ್ಯಾಭ್ಯಾಸವಾಯಿತು ಚಾಣಕ್ಯನಿಗೆ. ಪ್ರತಿಭಾವಂತನಾದ ಆತನಿಗೆ ಇಂತಹ ಶಿಕ್ಷಣ ದೊರೆತ್ತದ್ದು ವಜ್ರಕ್ಕೆ ಸಾಣೆ ಇಟ್ಟ ಹಾಗಾಯಿತು.

‘ಸಿಂಹಾಸನದಿಂದ ಇಳಿಸುತ್ತೇನೆ’

ಚಾಣಕ್ಯನಿಗೂ ನಂದರಿಗೂ ದ್ವೇಷವೇಕೆ ಬಂದಿತು?

ಚಾಣಕ್ಯ ತಕ್ಷಶಿಲೆಯಿಂದ ಪಾಟಲಿಪುಟ್ಟಕ್ಕೆ ಬಂದ. ವಿದ್ವತ್ತಿನ ಕೇಂಧ್ರ, ವಿದ್ವಾಂಸರಿಗೆ ಇಲ್ಲಿ ಗೌರವವುಂಟು ಎಂದು ಪ್ರಸಿದ್ಧವಾಗಿತ್ತು ಪಾಟಲಿಪುತ್ರ. ಬೇರೆ ಬೇರೆ ಶಾಸ್ತ್ರಗಳಲ್ಲಿ ಬಹು ದೊಡ್ಡ ವಿದ್ವಾಂಸರು ಎನ್ನಿಸಿಕೊಂಡವರು ಅಲ್ಲಿದ್ರು.  ತನ್ನ ವಿದ್ವತ್ತನ್ನು ತೋರಿಸಿ ಮನ್ನಣೆ ಪಡೆಯಲು ಚಾಣಕ್ಯ ಇಲ್ಲಿಗೆ ಬಂದ. ಆಗ ಅಲ್ಲಿ ಅರಸನಾಗಿದ್ದವನು ನಂದರಲ್ಲಿ ಒಬ್ಬನಾದ ಧನನಂದ ಎಂಬುವನು. ಈತ ಬಹು ದುರಾಸೆಯವನು. ಎಷ್ಟು ಹಣ ಬಂದರೂ ಸಾಲದು,  ಹಣಕ್ಕಾಗಿ ಎಷ್ಟು ತೆರಿಗೆ ಹಾಕಿದರೂ ತೃಪ್ತಿಯಿಲ್ಲ. ತೊಗಲ ಮೇಲೆ ತೆರಿಗೆ, ಮರದ ಮೇಲೆ ತೆರಿಗೆ, ಕಲ್ಲ ಮೇರೆ ತೆರಿಗೆ ಎಂದು ಜನ ದೂರುವ ಸ್ಥಿತಿಯಾಗಿತ್ತು.  ಅವನ ಆಸ್ತಿ ಎಷ್ಟೋ ಖಚಿತವಾಗಿ ಯಾರಿಗೂ ತಿಳೀಯದು. ತನ್ನ ಸಂಪತ್ತನ್ನೆಲ್ಲ ಗಂಗಾನದಿಯ ಪಾತ್ರದಲ್ಲಿ ಒಂದು ಬಂಡೆಯ ಕೆಳಗೆ ಹೂತಿಟ್ಟಿದ್ದ ಎಂದು ಹೇಳುತ್ತಾರೆ.

ನಿನ್ನನ್ನು ಸಿಂಹಾಸನದಿಂದ ಕೆಳಕ್ಕಳಿಸುತ್ತೇನೆ

ಚಾಣಕ್ಯ ಬರುವ ಹೊತ್ತಿಗೆ ಅವನ ಸ್ವಭಾವದಲ್ಲಿ ಮಾರ್ಪಾಡು ಪ್ರಾರಂಭವಾಗಿತ್ತು. ದಾನಕ್ಕೂ ಮನಸ್ಸು ಮಾಡುತ್ತಿದ್ದ. ತನ್ನ ದಾನಗಳನ್ನೆಲ್ಲ ವ್ಯವಸ್ಥೆ ಮಾಡಿ ಆಡಳಿತ ನಡೆಸಲು ಒಂದು “ದಾನ ಶಾಲೆ”ಯನ್ನು ಸ್ಥಾಪಿಸಿದ. ಅದರ ಆಡಳಿತ ನೋಡಿಕೊಳ್ಳಲು ಒಂದು ಸಂಘ. ಈ ಸಂಘಕ್ಕೆ ಒಬ್ಬ ಮಹಾವಿದ್ವಾಂಸ ಅಧ್ಯಕ್ಷನಾಗಿರುತ್ತಿದ್ದ. ಸದಸ್ಯರೂ ಹಿರಿಯ ವಿದ್ವಾಂಸರೇ. ಅಧ್ಯಕ್ಷನಿಗೆ ಒಂದು ಕೋಟಿ ಚಿನ್ನದ ನಾಣ್ಯಗಳಷ್ಟು ಹಣ ದಾನ ಮಾಡುವ ಅಧಿಕಾರವಿದ್ದಿತಂತೆ:  ಸಂಘದ ಕಟ್ಟಕಡೆಯ ಸದಸ್ಯ ಒಂದು ಲಕ್ಷ ನಾಣ್ಯಗಳನ್ನು ದಾನ ಮಾಡಬಹುದಾಗಿತ್ತು.

ಚಾಣಕ್ಯನದು ಅಸಾಧಾರಣ ಪಾಂಡಿತ್ಯ. ಪಾಟಲಿಪುತ್ರದ ವಿದ್ವಾಂಸರು ಅವನ ವಿಧ್ವತ್ತನ್ನು ಗುರುತಿಸಿದರು, ಗೌರವಿಸಿದರು. ಅವನು “ಸಂಘದ” ಅಧ್ಯಕ್ಷನಾದ.

ಸಂಘದ ಕಾರ್ಯ ರಾಜನ ದಾನಧರ್ಮಗಳ ವ್ಯವಸ್ಥೆ ತಾನೇ? ಆದುದರಿಂದ ಸಂಘದ ಅಧ್ಯಕ್ಷ ಮತ್ತೇ ಮತ್ತೇ ರಾಜನನ್ನು ಭೇಟಿ ಮಾಡಬೇಕಾಗಿತ್ತು.

ಅಧ್ಯಕ್ಷ ರಾಜನನ್ನು ಮೊದ ಲಬಾರಿಗೆ ಕಂಡಾಗ ಚಾಣಕ್ಯನು ಕುರೂಪವನ್ನು ಕಂಡು ರಾಜನಿಗೆ ಬೇಸರವಾಯಿತು. ಚಾಣಕ್ಯನ ವಿಷಯದಲ್ಲಿ ತಿರಸ್ಕಾರ ಬಂದಿತು.

ಚಾಣಕ್ಯನ ಮಾತು, ರೀತಿಗಳಲ್ಲಿ ನಯವೂ ಇರಲಿಲ್ಲ. ನೇರವಾದ, ಒರಟಾದ ಮಾತು. ಬಹು ಗಾಢವಾದ ಆತ್ಮಾಭಿಮಾನ.

ಪ್ರಶಂಸೆ, ವಿಧೇಯತೆ ಇವುಗಳನ್ನೇ ಎಲ್ಲರಿಂದ ಪಡೆದವನು ರಾಜ. ಈ ಹೊಸ ವಿಧ್ವಾಂಸನ ರೀತಿ  ಅವನಿಗೆ ಸರಿಬರಲಿಲ್ಲ. ಅವನನ್ನು ಸಂಘದ ಅಧ್ಯಕ್ಷ  ಪದವಿಯಿಂದ ಕಿತ್ತೆಸೆದ.

ಚಾಣಕ್ಯ ಸಿಟ್ಟಿನಿಂದ ಕೆಂಡವಾದ. ಅವನು ಯಾವ ತಪ್ಪನ್ನೂ ಮಾಡಿರಲಿಲ್ಲ. ಅವನ ವಿದ್ವತ್ತೂ ಅಸಾಧಾರಣ ಎಂದು ಇತರ ವಿದ್ವಾಂಸರೂ ಒಪ್ಪಿದರು.

ಜ್ವಾಲಾಮುಖಿಯಾದ ಚಾಣಕ್ಯ ರಾಜನಿಗೆ, “ನಿನ್ನ ಪದವಿಯಿಂದ ನಿನಗೆ ಅಹಂಕಾರ ತುಂಬಿಹೋಗಿದೆ. ಯಾವ ತಪ್ಪನ್ನು ಮಾಡದ ನನ್ನನ್ನು ಕಿತ್ತು ಹಾಕಿದ್ದೀಯೆ. ನೀನು ಹೇಗೆ  ನಡೆದುಕೊಂಡರೂ ಎಷ್ಟು ಅನ್ಯಾಯ ಮಾಡಿದರೂ ಕೇಳುವವರಿಲ್ಲ ಎಂದುಕೊಂಡಿದ್ದೀಯೆ. ನನ್ನ ನ್ಯಾಯವಾದ ಸ್ಥಾನದಿಂದ ನನ್ನನ್ನು ಕಿತ್ತಿ ಹಾಕಿದೆ, ನಿನ್ನನ್ನು ಸಿಂಹಾಸನದಿಂದ ಕೆಳಕ್ಕಿಳಿಸುತ್ತೇನೆ:” ಎಂದ.

ಈ ಮಾತುಗಳನ್ನು ಕೇಳಿ ರಾಜ ಸುಮ್ಮನಿರುತ್ತಾನೆಯೇ? ಸಿಡಿದೆದ್ದ. ಚಾಣಕ್ಯನನ್ನು ಬಂಧಿಸುವಂತೆ ಆಜ್ಞೆ ಮಾಡಿದ.

ಚಾಣಕ್ಯ ಸನ್ಯಾಸಿಯಂತೆ ವೇಷ ಧರಿಸಿದ. ರಾಜಧಾನಿ ಯಿಂದ ತಪ್ಪಿಸಿಕೊಂಡು ಹೋದ.

ಇವನೇ ಸರಿ

ಅನಂತರ ಅವನಿಗೆ ಚಂದ್ರಗುಪ್ತನ ಭೇಟಿ ಆಯಿತು.

ಚಂದ್ರಗುಪ್ತನ ವಿಷಯವೂ ತಿಳಿದಿರುವುದು ಬಹು ಸ್ವಲ್ಪ. ಅವನ ವಂಶದ ವಿಷಯದ ಬಗ್ಗೆ ಹಲವಾರು ಹೇಳಿಕೆಗಳಿವೆ. ಪ್ರಾಯಶಃ ಅವನು ಮೌರ್ಯ ವಂಶದವ. (ಮುಂದೆ ಅವನಿಗೆ ಚಂದ್ರಗುಪ್ತ ಮೌರ್ಯವೆಂದು ಹೆಸರಾಯಿತು. ಅವನ ರಾಜವಂಶ ಮೌರ್ಯವಂಶವಾಯಿತು) ಪ್ರಾಯಶಃ ತಾಯಿ ಹಳ್ಳಿಯ ಮುಖಂಡನೊಬ್ಬನ ಮಗಳೂ. ತಂದೆ ಪಿಪ್ಪಟವನದ ರಾಜ. ಯುದ್ಧದಲ್ಲಿ ತೀರಿಕೊಂಡ. ತಾಯಿ ಮಗನನ್ನು ಕರೆದುಕೊಂಡು ಪಾಟಲಿಪುತ್ರಕ್ಕೆ ಬಂದು ಸೇರಿಕೊಂಡಳು.

ಹುಡುಗ, ಹಳ್ಳಿಯ  ಹುಡುಗನಾಗಿ ಹಳ್ಳಿಯ ಹುಡುಗರ ಜೊತೆಯಲ್ಲಿ ಬೆಳೆಯುತ್ತಿದ್ದ. ಆದರೆ ಹುಟ್ಟು ನಾಯಕ ಅವನು. ಆ ವಯಸ್ಸಿನಲ್ಲಿಯೇ ಉಳಿದ ಹುಡುಗರೆಲ್ಲ ಅವನನ್ನು ನಾಯಕ ಎಂದು ಒಪ್ಪಿದರು. ಅವನ ಮಾತೇ ಅವರಿಗೆ ಅಪ್ಪಣೆ.

ಚಂದ್ರಗುಪ್ತನೂ ಇತರ ಹುಡುಗರೂ ಬಯಲಲ್ಲಿ ಆಟವಾಡುತ್ತಿದ್ದರು. ಅಲ್ಲೊಂದು ಎತ್ತವಾದ ಕಲ್ಲು. ಬಾಲಕಚಂದ್ರಗುಪ್ತ ಅದರ ಮೇಲೆ ಕುಳಿತುಕೊಳ್ಳುವನು. ಅವರ ಆಟದಲ್ಲಿ ಅವನೇ ರಾಜ. ಇತರ ಹುಡುಗರು ಅವನ ಪ್ರಜೆಗಳು. ಅವರ ಜಗಳಗಳನ್ನು ಅವನ ಮುಂದೆ ವಿವರಿಸುವರು. ಅವನು ಅವರ ವಾಧ-ವಿವಾದಗಳನ್ನು ಕೇಳಿ ತೀರ್ಪು ಕೊಡುವನು.

ಆ ದಾರಿಯಲ್ಲಿ ಚಾಣಕ್ಯ ಬರುತ್ತಿದ್ದ. ಬಂಡೆಯ ಮೇಲೆ ಕುಳಿತ ಹುಡುಗನ ಠೀವಿ. ಮುಖದ ತೇಜಸ್ಸು ಅವನ ಕಣ್ಣನ್ನು ಸೆಳೆದವು. ಆಟ ನೋಡುತ್ತ ನಿಂತ.

ಹುಡುಗರ ಜಗಳಗಳನ್ನು ತೀರ್ಮಾನಿಸುವಾಗ  ಅವನ ಚುರುಕು ಬುದ್ಧಿ, ಮಾತಿನ ವೈಖರಿ ನೋಡುತ್ತ ನೋಡುತ್ತ ಬೆರಗಾದ ಚಾಣಕ್ಯ.

ಅರಸ ನಂದನನ್ನು ಸಿಂಹಾಸನದಿಂದ  ಇಳಿಸಿದರೆ, ರಾಜ್ಯಕ್ಕೆ ಸಮರ್ಥನಾದ ರಾಜ ಬೇಕಲ್ಲವೇ? ಈ ಹುಡುಗ ಒಳ್ಳೆಯ ರಾಜನಾಗುತ್ತಾನೆ ಎಂದು ತೋರಿತು ಚಾಣಕ್ಯನಿಗೆ.

ಹುಡುಗರ ಆಟ ಮುಗಿಯುವತನಕ ನೋಡುತ್ತ ನಿಂತ. ಆಟ ಮುಗಿಯುತ್ತಲೇ ಹೋಗಿ ಅವನನ್ನು ಮಾತನಾಡಿಸಿದ. ಚಾಣಕ್ಯ ನೋಡಲು ಕುರೂಪಿ. ಆದುದರಿಂದಲೇ ನಂದರಾಜ ಅವನನ್ನು ತಿರಸ್ಕಾರದಿಂದ ಕಂಡಿದ್ದ. ಆದರೆ ಹುಡುಗ ಚಂದ್ರಗುಪ್ತ ಆ ಮುಖದಲ್ಲಿನ ಪ್ರತಿಭೆಯನ್ನು ಗುರುತಿಸಿದ. ಬೆರಗಾದ.

ಚಾಣಕ್ಯ ಅವನನ್ನು ವಿಶ್ವಾಸದಿಂದ ಮಾತನಾಡಿಸಿದ. ಅವನು ಯಾರು, ಅವನ ಸ್ಥಿತಿಗತಿಗಳೇನು ಎಂದೆಲ್ಲ ವಿಚಾರಿಸಿಕೊಂಡ. ಹುಡುಗನ ಜೊತೆಗೆ ಅವನ ಮನೆಗೆ ಹೋದ.ಅವನ ತಾಯಿಯನ್ನೂ ಇತರ ಹಿರಿಯರನ್ನೂ ಮಾತನಾಡಿಸಿದ.  “ಹುಡುಗನನ್ನು ನನ್ನ ಜೊತೆಗೆ ಕಳುಹಿಸಿ, ತಕ್ಷಶಿಲೆಯಲ್ಲಿ ವಿದ್ಯಾಭ್ಯಾಸ ಮಾಡಿಸುತ್ತೇನೆ” ಎಂದ.

ಚಂದ್ರಗುಪ್ತನ ಪಟ್ಟಾಭಿಷೇಕ

ಅವನ ತಾಯಿಗೆ ಮಗನನ್ನು ಅಪರಿಚಿತನ ಜೊತೆಗೆ ಉರುಳಿಸಿದ್ದಾಯಿತು. ಕಿ.ಪೂ. ೨೩೧ರಲ್ಲಿ ಅಲೆಗ್ಸಾಂಡರನ ಸಾಮ್ರಾಜ್ಯವನ್ನು ಆತನ ಅಧಿಕಾರಿಗಳು ತಮ್ಮ ತಮ್ಮಲ್ಲಿಯೇ ಹಂಚಿಕೊಂಡರು. ಸಿಂಧೂ ನದಿಯ ಪೂರ್ವದ ಭಾಗ ಯಾವುದೂ ಈ ಹಂಚಿಕೆಯಲ್ಲಿ ಸೇರಲಿಲ್ಲ. ಈ ಭಾಗ ತಮ್ಮ ಕೈಬಿಟ್ಟು ಹೋಯಿತು ಎಂದು ಗ್ರೀಕರೇ ಒಪ್ಪಿಕೊಂಡಂತಾಯಿತು.

ಮೊದಲ ತಪ್ಪುಗಳು

ಇನ್ನು ಚಾಣಕ್ಯ- ಚಂದ್ರಗುಪ್ತರ ಮುಂದೆ ಉಳಿದ ಕೆಲಸವೆಂದರೆ ನಂದರಾಜನನ್ನು ಸಿಂಹಾಸನದಿಂದ ಇಳಿಸುವುದು. ನಂದರಾಜರೂ ಕ್ರೂರಿಗಳಾಗಿ, ಮನಸ್ಸು ಬಂದಂತೆ ತೆರಿಗೆಯನ್ನು ಹೇರಿ ಪ್ರಜೆಗಳ ದ್ವೇಷವನ್ನು ಕಟ್ಟಿಕೊಂಡಿದ್ದರು. ಇವರ ಮುಷ್ಟಿಯಿಂದ ಪಾರಾದರೆ ಸಾಕು ಎಂದು ಜನ ಹಾರೈಸುತ್ತಿದ್ದರು. ಚಾಣಕ್ಯನ ಹೋರಾಟ ತನ್ನನ್ನು ಅಪಮಾನ ಮಾಡಿದ ಅರಸನ ವಿರುದ್ಧ ಮಾತ್ರವಾಗಿರಲಿಲ್ಲ-ವೈಯುಕ್ತಿಕವಾಗಿ ತನಗಾದ ಅಪಮಾನವನ್ನು ತೊಡೆದು ಹಾಕುವ ಛಲಮಾತ್ರವಾಗಿರಲಿಲ್ಲ.  ಪ್ರಜೆಗಳಿಗೆ ಹಿಂಸೆ ಕೊಡುತ್ತಿದ್ದ, ಬಗೆ ಬಗೆಯ ತೆರಿಗೆಳಿಂದ ಜನರನ್ನು ಹಿಂಡುತ್ತಿದ್ದ ರಾಜನ ವಿರುದ್ಧವಾಗಿತ್ತು.

ಆದರೆ ನಂದನನ್ನು ಉರುಳಿಸುವುದು ಸುಲಭವಾದ ಕೆಲಸವಾಗಿರಲಿಲ್ಲ.

ನಂದರಾಜರ ಹಲವಾರು ರಾಜ್ಯಗಳನ್ನು ಗೆದ್ದು ವಿಸ್ತಾರವಾದ ಸಾಮ್ರಾಜ್ಯವನ್ನು ಕಟ್ಟಿದ.  ಅವನ ಸೈನವು ಬಲವಾಗಿತ್ತು. ಎರಡು ಲಕ್ಷ ಕಾಲಾಳುಗಳು ಇಪ್ಪತ್ತು ಸಾವಿರ ಕುದುರೆಗಳೂ, ಎರಡು ಸಾವಿರ ರಥಗಳೂ, ಮೂರು ಸಾವಿರ ಆನೆಗಳೂ ಇದು ಅವನ ಸೈನ್ಯದ ಬಲ.

ಇದರ ವಿರುದ್ಧ ಹೊರಾಟ- ಚಾಣಕ್ಯ ಮತ್ತು ಚಂದ್ರಗುಪ್ತರದು.

ದುರದೃಷ್ಟದಿಂದ ಈ ಮಹಾ ಹೋರಾಟದ ವಿಷಯಕ್ಕೂ ತಕ್ಕಷ್ಟು ಚಾತ್ರಿಕ ಸಾಮಗ್ರಿ ಇಲ್ಲ.

ಮೊದ ಮೊದಲು ಅವರಿಗೆ ಸೋಲೇ ಸಂಭವಿಸಿತು. ರಾಜ್ಯದ ಮಧ್ಯಭಾಗದಲ್ಲಿ ತನ್ನ ಹೋರಾಟವನ್ನು ಚಂದ್ರಗುಪ್ತ ಪ್ರಾರಂಭಿಸಿದ.  ಆದರೆ ಆದರೆ ಸೋತ. ಅನಂತರ ತನ್ನ ಯುಕ್ತಿಯನ್ನು ಬದಲಾಯಸಿದ.

ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಕಥೆ ಹೇಳುತ್ತಾರೆ.

ಚಂದ್ರಗುಪ್ತನ ಗೂಢಚಾರನೊಬ್ಬ ಒಂದು ಹಳ್ಳಿಯಲ್ಲಿ ಸೇರಿಕೊಂಡಿದ್ದ. ಒಂದುಗುಡಿಸಲಲ್ಲಿ ಒಬ್ಬ ಹೆಂಗಸು ತನ್ನ ಮಗನಿಗೆ ಒಂದು ಚಪಾತಿಯನ್ನು ಕೊಟ್ಟಳು. ಗೂಢಚಾರನು ಅಲ್ಲೆ ಇದ್ದ. ಹುಡುಗ ಚಪಾತಿಯ ಮಧ್ಯಭಾಗವನ್ನು ತಿಂದ, ಅಂಚನ್ನೆಲ್ಲ ಬಿಸುಟ.

“ಚಂದ್ರಗುಪ್ತನ ರಾಜ್ಯದ ಮೇಲೆ ದಾಳಿದ ಹಾಗೆಯೇ ನೀನು ಚಪಾತಿ ತಿನ್ನುವುದು ಎಂದಳು ತಾಯಿ”.

“ಯಾಕಮ್ಮ, ಚಂದ್ರಗುಪ್ತ ಏನು ಮಾಡಿದ?” ಹುಡುಗ ಕೇಳಿದ. ಗೂಢಚಾರನ ಕಿವಿ ನಿಮಿರಿತು.

“ನೀಣು ಚಪಾತಿಯ ಮಧ್ಯಭಾಗವನ್ನು ಮಾತ್ರ ತಿಂದು ಅಂಚನ್ನೆಲ್ಲ ಬಿಸುಟ್ಟೆ. ಚಂದ್ರಗುಪ್ತನಿಗೆ ರಾಜನಾಗಬೇಕು ಅಂತ ಆಸೆ. ರಾಜ್ಯದ ಗಡಿಯಿಂದ ಆಕ್ರಮಣ ಪ್ರಾರಂಭಿಸಿ, ದಾರಿಯಲ್ಲಿ ಪಟ್ಟಣಗಳನ್ನು ವಶಮಾಡಿಕೊಳ್ಳುವುದನ್ನುಬಿಟ್ಟು, ರಾಜ್ಯದ ಮಧ್ಯ ದಾಳಿ ಪ್ರಾರಂಭಿಸಿದ್ದಾನೆ. ಅವನ ಸೈನ್ಯ ಮಧ್ಯೆ ಸಿಕ್ಕಿಕೊಂಡು ನುಚ್ಚು ನೂರು ಆಗಿದೆ, ಇನ್ನೇನು ಆಗಲು ಸಾಧ್ಯ? ಎಂದಳು ತಾಯಿ.

ಗೂಢಚಾರನಿಂದ ಚಾಣಕ್ಯನಿಗೂ ಈ ಮಾತು ತಲುಪಿತು. ಅವನು ತಲೆದೂಗಿದ. ತಮ್ಮ ದಾಳಿಯ ರೀತಿಯನ್ನು ಬದಲಾಯಿಸಿದ. ಇದೊಂದು ಕಥೆ- ಎಷ್ಟು ನಿಜವೋ ಹೇಳುವುದು ಕಷ್ಟ.

ನಂದರಾಜ ಸೋತ

ಚಾಣಕ್ಯ-ಚಂದ್ರಗುಪ್ತರು ತಮ್ಮದಾಳಿಯ ರೀತಿಯನ್ನೇ ಬದಲಾಯಿಸಿದರು. ಮಗಧ ರಾಜ್ಯದ ಗಡಿನಾಡಿನಲ್ಲಿ ಆಕ್ರಮಣವನ್ನು ಪ್ರಾರಂಭ ಮಾಡಿದರು. ಆದರೆ ಮತ್ತೇ ತಪ್ಪು ಮಾಡಿದರು. ಗೆದ್ದ ಪ್ರದೇಶದಲ್ಲಿ ಚಂದ್ರಗುಪ್ತ ಸೈನ್ಯದ ತುಕಡಿಗಳನ್ನು ನಿಲ್ಲಿಸಲಿಲ್ಲ. ಇದರಿಂದ ಅವನು ಮುಂದಕ್ಕೆ ಸಾಗಿದಾಗ, ಅವನು ಗೆದ್ದ ಪ್ರದೇಶಗಳ ಜನರು ಮತ್ತೇ ಒಂದುಗೂಡಿದರು. ಅವನ ಸೈನ್ಯವನ್ನು ಸುತ್ತುಗಟ್ಟಿದರು.  ಸೋಲಿಸಿದವರನ್ನೇ ಮತ್ತೇ ಮತ್ತೇ ಎದುರಿಸಬೇಕಾಯಿತು ಅವನು.

ಚಂದ್ರಗುಪ್ತ-ಚಾಣಕ್ಯರು ಈ ತಪ್ಪುಗಳಿಂದ ಪಾಠ ಕಲಿತರು. ಗೆದ್ದ ಪ್ರದೇಶದಲ್ಲಿ ಶತ್ರುಗಳು ತಲೆಯೆತ್ತದಂತೆ ಸೈನ್ಯದ ಭಾಗಗಳನ್ನು ನಿಲ್ಲಿಸಿದರು. ಚಾಣಕ್ಯ ಬುದ್ಧಿವಂತಿಕೆಯಿಂದ ಪರ್ವರ್ತನ (ಅಥವಾ ಎರಡನೇಯ ಪೋರಸ್) ಸ್ನೇಹ ಬೆಳೆಸಿದ್ದ. ಈಗ ಪರ್ವತಕನೂ ಅವನ ತಮ್ಮ ವೈರೋಚಕನೂ ಮಗ ಮಲಯಕೇತುವೂ ಸೈನ್ಯವನ್ನು ತಗೆದುಕೊಂಡು ಬಂದರು.

ನಂದರಾಜನಿಗೆ ದೊಡ್ಡ ಸೇನೆಯ ಬಲವಿತ್ತು. ಅಷ್ಟೇ ಮುಖ್ಯವಾದ ಇನ್ನೊಂದು ಆಧಾರವಿತ್ತು- ಅವನ ಮಂತ್ರಿ ಅಮಾತ್ಯರಾಕ್ಷಸನ ಬೆಂಬಲ. ಅಮಾತ್ಯರಾಕ್ಷಸ ಬಹು ಬುದ್ಧಿವಂತ. ನಂದರಾಜನಲ್ಲಿ ಅವನಿಗೆ ಅಪಾರ ನಿಷ್ಠೆ. ಚಾಣಕ್ಯನಿಗೆ ತಿಳೀದಿತ್ತು- ನಂದನ ಸೈನ್ಯವನ್ನು ಗೆಲ್ಲುವುದು ಎಷ್ಟು ಮುಖ್ಯವೋ ಅಮಾತ್ಯರಾಕ್ಷಸನನ್ನು ಗೆಲ್ಲುವುದು ಸಹ ಅಷ್ಟೇ ಮುಖ್ಯ.

ಚಾಣಕ್ಯನ ಸ್ನೇಹಿತ ಇಂದು ಶರ್ಮ ಎಂಬುವನು. ಚಾಣಕ್ಯನು ಅವನಿಗೆ, “ಮಿತ್ರ, ನೀನು ವೇಷಾಂತರಿಸಿಕೊಂಡು ಅಮಾತ್ಯ ರಾಕ್ಷಸನ ಬಳಿ ಸೇರಿಕೊಂಡು, ಸ್ನೇಹಿತನಂತೆ ವರ್ತಿಸುತ್ತ ಅವನಿಗೆ ಜ್ಯೋತಿಷ್ಯವನ್ನು ಹೇಳುತ್ತಾ ಇರು. ಜೀವಸಿದ್ಧಿ ಎಂದು  ಹೆಸರಿಟ್ಟುಕೊಂಡು ನೀನು ಅಲ್ಲಿನ ವರ್ತಮಾನಗಳನ್ನು ನಿನ್ನ ಶಿಷ್ಯರ ಮೂಲಕ ನನಗೆ ಅತಿ ಜಾಗರೂಕತೆಯಿಂದ ತಿಳಿಸಬೇಕು. ನಂದವಂಶ ನಾಶಕ್ಕೆ ನಿನ್ನ ಸಹಾಯ ನನಗೆ ತುಂಬ ಅಗತ್ಯವಗಿದೆ. ಎಲ್ಲ ಕಾರ್ಯಗಳಲ್ಲೂ ಎಚ್ಚರಿಕೆಯಿರಲಿ”- ಎಂದು ರಹಸ್ಯವಾಗಿ ತಿಳಿಸಿ ಅವನನ್ನು ಅಮಾತ್ಯರಾಕ್ಷಸನಲ್ಲಿಗೆ  ಕಳುಹಿಸಿಕೊಟ್ಟ. ಇಂದು ಶರ್ಮನ ಶಿಷ್ಯರೂ ವೇಗ ಶರ್ಮ, ಸಿದ್ಧಾರ್ಥ, ಮಾಸೋಪವಾಸಿ, ಅಮಾತ್ಯ ರಾಕ್ಷಸನ ಮತ್ತು ಸೈನ್ಯದ ಅಧಿಕಾರಿಗಳ ಬಳಿಯಲ್ಲಿ ಸೇವಕ ವೃತ್ತಿ ಮಾಡುತ್ತಿದ್ದರು.

ನಂದರೂ ಅಮಾತ್ಯರಾಕ್ಷಸನೂ ಚಂದ್ರಗುಪ್ತ- ಚಾಣಕ್ಯರನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡರು.

ನಂದನಿಗೂ ಚಾಣಕ್ಯ- ಚಂದ್ರಗುಪ್ತರಿಗೂ ನಡೆದ ಕದನದ ವಿವರಗಳು ಸ್ಪಷ್ಟವಾಗಿಲ್ಲ. ಆದರೆ ಕದನ ಬಹು ಘೋರವಾಗಿತ್ತು ಎಂಭುವುದು ನಿಜ.  ನಂದರಾಜ ಸತ್ತುಬಿದ್ದ.  ಅವನ ಮಕ್ಕಳು- ಬಂಧುಗಳು ಸತ್ತರು. ಅಮಾತ್ಯರಾಕ್ಷರನೂ ನಿಸ್ಸಾಹಯಕನಾದ. ಚಂದ್ರಗುಪ್ತ ವಿಜಯಿಯಾದ. ನಂದರ ತಂದೆ ಸರ್ವಾರ್ಥಸಿದ್ಧ ಎಂಬುವವನು ಮಾತ್ರ ಉಳಿದುಕೊಂಡ. ಪಾಪ, ತುಂಬ ಮುದುಕ ಅವನು,ನನಗಿನ್ನೇನೂ ಬೇಡ. ಕಾಡಿಗೆ ಹೋಗಿ ತಪಸ್ಸು ಮಾಡುತ್ತೇನೆ, ಅನುಮತಿ ಕೊಡಿ” ಎಂದು ಬೇಡಿದ. ಚಾಣಕ್ಯ- ಚಂದ್ರಗುಪ್ತರು ಒಪ್ಪಿದರು. ಅವನೂ ಅವನ ಹೆಂಡತಿಯೂ ಕಾಡಿಗೆ ಹೋದರು.

ಕೆಲವು ದಿನಗಳಾದ ಮೇಲೆ ಚಾಣಕ್ಯ ಅವನನ್ನೂ ಅವನ ಹೆಂಡತಿಯನನ್ನೂ ಕೊಲ್ಲಿಸಿದ ಎಂದು ಹೇಳುತ್ತಾರೆ. ಅಮಾತ್ಯರಾಕ್ಷಸನು ಅವನಿಗೆ ಯಾರನ್ನಾಧರೂ ದತ್ತು ಮಾಡಿಸಿದರೆ, ಅವರು ಸಿಂಹಾಸನ ನಮ್ಮದು ಎಂದು ಗಲಾಟೆ ಎಬ್ಬಿಸಬಹುದು, ನಂದರ ವಂಶ ನಿರ್ಮೂಲನವಾಗಬೇಕು ಎಂದು ಹೀಗೆ ಮಾಡಿದ ಎಂದ ಹೇಳುತ್ತಾರೆ.

ಎರಡು ಮಾರ್ಗಗಳು

ಆದರೆ ವೈಯುಕ್ತಿಕ ಛಲವನ್ನು ತೀರಿಸಿಕೊಳ್ಳುವುದಷ್ಟೇ ಚಾಣಕ್ಯನ ಗುರಿಯಾಗಿರಲಿಲ್ಲ. ರಾಜ್ಯ ಸುಭದ್ರವಾಗಿರಬೇಕು. ರಾಜ್ಯದ ಆಡಳಿತ ಸುಗಮನವಾಗಿರಬೇಕು. ರಾಜ್ಯದ ಆಡಳಿತ ಸುಗಮವಾಗಿ ಪ್ರಜೆಗಳಿಗೆ ನೆಮ್ಮದಿಯಾಗುವಂತೆ ಸಾಗಬೇಕು.

ಇದಕ್ಕೆ ಅವನು ಕಂಡ ಮಾರ್ಗಗಳು ಎರಡು- ಒಂದು ಅಮಾತ್ಯ ರಾಕ್ಷಸನನ್ನು ಚಂದ್ರಗುಪ್ತನ ಮಂತ್ರಿಯನ್ನಾಗಿ ಮಾಡುವುದು. ಎರಡನೆಯದು : ರಾಜನಾದವನು ಹೇಗೆ ನಡೆದುಕೊಳ್ಳಬೇಕು, ಶತ್ರುಗಳಿಂದ ತನ್ನನ್ನೂ ರಾಜ್ಯವನ್ನೂ ರಕ್ಷಿಸಬೇಕು, ರಾಜ್ಯದಲ್ಲಿ ಶಾಂತಿಯನ್ನೂ ಶಿಸ್ತನ್ನೂ ಕಾಪಾಡಬೇಕು ಎಂದೆಲ್ಲ ವಿವರಿಸಿ ಒಂದು ಗ್ರಂಥವನ್ನೇ ಬರೆದಿಡಬೇಕು.

ಅಮಾತ್ಯ ರಾಕ್ಷಸ

ಅಮಾತ್ಯರಾಕ್ಷಸ ಚಂದ್ರಗುಪ್ತನ ಮಂತ್ರಿ.

ಚಾಣಕ್ಯನ ಯೋಚನೆಗೆ ವಿಚಿತ್ರ ಎನಿಸುತ್ತದೆ ಅಲ್ಲವೇ? ಅಮಾತ್ಯ ರಾಕ್ಷಸ ನಂದರಿಗೆ ನಿಷ್ಠನಾಗಿದ್ದವನು. ಅಂತಹವನು ಚಂದ್ರಗುಪ್ತನಿಗೆ ಮಂತ್ರಿಯಾಗಲು ಒಪ್ಪುತ್ತಾನೆಯೇ?

ನಂದರೆಲ್ಲ ತೀರಿಕೊಂಡ ಮೇಲೂ ಅಮಾತ್ಯರಾಕ್ಷಸ ಚಂದ್ರ ಗುಪ್ತನನ್ನು ಕೊಲ್ಲಿಸಲು ಮಾಡಿದ ಪ್ರಯತ್ನಗಳು, ಚಾಣಕ್ಯ ಹೆಜ್ಜೆ ಹೆಜ್ಜೆಗೂ ಚಂದ್ರಗುಪ್ತನ ಮಂತ್ರಿಯನ್ನಾಗಿ ನಿಲ್ಲಿಸಿದ್ದು, ಇದು ಮುದ್ರಾರಾಕ್ಷಸ ಎಂಬ ನಾಟಕದ ಕಥಾವಸ್ತು. ಇದನ್ನು ಬರೆದವನು ವಿಶಾಖದತ್ತ ಎಂಬುವನು.  ಈ ಕೃತಿಯಲ್ಲಿರುವುದೆಲ್ಲ ನೆಚ್ಚಬಹುದಾದ ಚರಿತ್ರೆ ಎನ್ನುವ ಹಾಗಿಲ್ಲ. ಆದರೆ  ಒಟ್ಟಿನಲ್ಲಿ ಚಾಣಕ್ಯ- ಅಮಾತ್ಯರಾಕ್ಷಸರ ಸತ್ವಪರೀಕ್ಷೆಯ ಚಿತ್ರವನ್ನೂ ಇದು ಕೊಡುತ್ತದೆ.

ಅಮಾತ್ಯರಾಕ್ಷಸನು ಚಂದ್ರಗುಪ್ತನನ್ನು ಕೊಲ್ಲಲು ಅನೇಕ ರೀತಿಗಳಲ್ಲಿ ಪ್ರಯತ್ನಪಟ್ಟ. ಒಂದು ಉದಾಹರಣೆ : ಚಂದ್ರಗುಪ್ತ “ಕುಮಾರ ಭವನ” ಎಂಬ ಹೊಸ ಅರಮನೆಯನ್ನು ಕಟ್ಟಿಸುತ್ತಿದ್ದ.  ಭುವನಪಾಲನೆಂಬ ಅಧಿಕಾರಿಯನುನ ಕರೆಸಿಕೊಂಡು ಅಮಾತ್ಯರಾಕ್ಷಸ ಹೇಳಿದ- “ಮಿತ್ರನೇ, ನಿನ್ನಿಂದ ಬಹು ದೊಡ್ಡ ಕೆಲಸವಾಗಬೇಕಾಗಿದೆ. ಕುಮಾರ ಭವನವನ್ನು  ದಿವ್ಯವಾಗಿ ಅಲಂಕಾರ ಮಾಡು.  ರಾಜನಾದ ಚಂದ್ರಗುಪ್ತ ಅಲ್ಲಿ ವಾಸಮಾಡುವಂತೆ ಸಕಲ ಅನುಕೂಲತೆಗಳನ್ನೂ ಮಾಡು. ಮಲಗುವ ಕೊಣೆಯಲ್ಲಿ ಮಂಚದ ಬಳಿ ದೊಡ್ಡ ದೊಡ್ಡ ನಿಲವು ಗನ್ನಡಿಗಳನ್ನು ಜೋಡಿಸಿಡು. ಅವುಗಳ ಹಿಂದೆ ಗೋಡೆಯಲ್ಲಿ ಗೂಡುಗಳನ್ನು ಮಾಡು. ಅಲ್ಲಿ ಬಿಚ್ಚುಗತ್ತಿ ಹಿಡಿದ ಕೆಲವು ಸೈನಿಕರಿರಲಿ. ಅವರು ಸಮಯ ಸಾಧಿಸಿ ಚಂದ್ರಗುಪ್ತನನ್ನು ಕೊಲ್ಲತಕ್ಕದ್ದು. ಇದು ರಹಸ್ಯವಾಗಿರಲಿ. ಈ ಹಣದ ಚೀಲವನ್ನು ಬಹುಮಾನವಾಗಿ ತೆಗೆದುಕೋ”. ಅಮಾತ್ಯ ರಾಕ್ಷಸನ ಸೂಚನೆಯಂತಎ- ಚಂದ್ರಗುಪ್ತನಿಗೆ ಏನೊಂದು ಸುಳಿವು ಗೊತ್ತಾಗದಂತೆ -ಭುವನ ಪಾಲ ಕುಮಾರ ಭವನದಲ್ಲಿ ಏರ್ಪಾಟುಗಳನ್ನು ಮಾಡಿದ.

ಚಂದ್ರಗುಪ್ತ ತನ್ನ ಬಿಡಾರವನ್ನು ಕುಮಾರ ಭವನಕ್ಕೆ ಬದಲಾಯಿಸಬೇಕೆಂದು ‌ಪ್ರಸ್ತಾಪ ಮಾಡಿದಾಗ ಚಾಣಕ್ಯ “ಆಗಬಹುದು, ಆದರೆ ನಾನು ಮೊದಲು  ಆ ಭವನವನ್ನು ಪರೀಕ್ಷೆ ಮಾಡಬೇಕಾಗಿದೆ. ಎಲ್ಲವೂ ಸರಿಯಾಗಿದ್ದರೆ ಒಂದು ಶುಭ ದಿನದಲ್ಲಿ ನೀನು ಅಲ್ಲಿಗೆ ಹೋಗು” ಎಂದ. ಗುರುಗಳ  ಮಾತಿಗೆ ಆತ ಒಪ್ಪಿದ. ಚಾಣಕ್ಯ ಆಪ್ತರಾದ ಕೆಲವು ಸೈನಿಕರನ್ನು ಹಿಂದಿಟ್ಟುಕೊಂಡು ಕುಮಾರ ಭವನಕ್ಕೆ ಹೋದ. ಅಲ್ಲಿನ ಅಂದ ಚಂದ, ಅಲಂಕಾರ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೂ ಅತನ ಕಣ್ಣುಗಳು ಬಹಳ ಸೂಕ್ಷ್ಮ. ಈ ಕನ್ನಡಿ ಇಲ್ಲಿರಬಾರದು; ಅಲ್ಲಿ  ಹಾಕಿ: ಈ ಪಟ ಆ ಕಡೆ ಬೇಡ, ಇಲ್ಲಿಡಿ ಎಂದು ತೆಗಸಿದ. ಅವುಗಳ ಹಿಂದೆ ಗೂಡುಗಳಲ್ಲಿದ್ದ ಬಿಚ್ಚುಗತ್ತಿಯ ಸಿಪಾಯಿಗಳು ಕಣ್ಣೀಗೆ ಬಿದ್ದರು. ಚಂದ್ರಗುಪ್ತನನ್ನು ಕೊಲೆ ಮಾಡಲು ಅಮಾತ್ಯರಾಕ್ಷಸ ಅವರನ್ನು ಅಲ್ಲಿ ನಿಲ್ಲಿಸಿದ್ದ. ಚಾಣಕ್ಯನ ಅಪ್ಪಣೆಯಂತೆ ಅವರನ್ನು ಸೆರೆಹಿಡಿದು,ಅವರ ತಲೆಗಳನ್ನು ಕತ್ತರಿಸಿಹಾಕಲಾಯಿತು.

ಚಂದನದಾಸ ಗಲ್ಲಿಗೆ !

ಅಮಾತ್ಯ ರಾಕ್ಷಸ ಪಾಟಲಿಪುತ್ರವನ್ನು ಬಿಟ್ಟು ಓಡಿ ಹೋಗುವಾಗ ಅವನ ಹೆಂಡತಿ ಮಕ್ಕಳನ್ನು ಕರೆದೊಯ್ಯಲು ಆಗಲಿಲ್ಲ. ಅವನ ಹೆಂಡತಿ ಗರ್ಭಿಣಿ. ಚಂದನದಾಸ ಎನ್ನುವವನು ಅವನ ಪ್ರಾಣ ಸ್ನೇಹಿತನ. ಅಮಾತ್ಯರಾಕ್ಷಸ ಹೆಂಡತಿ  ಮಕ್ಕಳನ್ನು ಅವನ ಮನೆಯಲ್ಲಿ ಬಿಟ್ಟು ಹೋದ.

ಅಮಾತ್ಯರಾಕ್ಷಸ ಎಲ್ಲಿದ್ದಾನೆ ಎಂದು ತಿಳಿಯಲು ಚಾಣಕ್ಯ ಬಹು ಸಾಹಸ ಮಾಡಿದ,. ಬಹು ಉಪಾಯದಿಂದ ಅವನ ಹೆಂಡತಿ ಮಕ್ಕಳನ್ನು ಚಂದನದಾಸನ ಮನೆಯಲ್ಲಿದ್ದಾರೆಂಬುವುದನ್ನು ಕಂಡು ಹಿಡಿದ.ಅನಂತರ ಚಂದನದಾಸನನ್ನು ಕರೆಸಿದ. ಆ ಮತು ಈ ಮಾತು ಆಡುತ್ತ ಇದಕ್ಕಿದ್ದಂತೇ “ಅಮಾತ್ಯರಾಕ್ಷಸನ ಹೆಂಡತಿ  ಮಕ್ಕಳು ನಿನ್ನ ಮನೆಯಲ್ಲಿದ್ದಾರೆ ಅಲ್ಲವೇ?” ಎಂದು ಕೇಳೀದ.

ಚಂದನದಾಸ ನಡುಗಿ ಹೋದ. ತನ್ನನ್ನು ಏಕೆ ಕರೆಸಿದ್ದಾರೆಂಬುವುದು ಅವನಿಗರ್ಥವಾಯಿತು.  ಇದರಲ್ಲಿ ಪ್ರಾಣಕ್ಕೆ ಅಪಾಯವೂ ಇದೆ ಎಂದು ಊಹಿಸಿಕೊಂಡ. “ಆದರೇನು? ಸ್ನೇಹಿತನಿಗೆ ಎಂದೂ ಮೋಸಮಾಡಬಾರದು.  ಅಮಾತ್ಯರಾಕ್ಷಸನ ಮಡದಿ ಮಕ್ಕಳನ್ನು ಒಪ್ಪಿಸುವುದು ಧರ್ಮವಲ್ಲ. ಚಾಣಕ್ಯ ಮಹಾಕ್ರೂರಿ. ಅವನರನ್ನು ಏನು ಮಾಡಲು ಹಿಂಜರಿಯದವನು.ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ಮಿತ್ರದ್ರೋಹವೆಂದಿಗೂ ಮಾಡಲಾರೆ”, ಎಂದು ತೀರ್ಮಾನಿಸಿಕೊಂಡ ಚಂದನದಾಸ: ಮಹಾಸ್ವಾಮಿ, ಅವನ ಸುದ್ಧಿ ನನಗೆ ತಿಳೀಯದು” ಎಂದ.

ನೀವು ಚಂದ್ರಗುಪ್ತನ ಮಹಾಮಂತ್ರಿಗಳಾಗಬೇಕು

ಚಾಣಕ್ಯನ ಕಣ್ಣು ಕೆಂಪಾಯಿತು.”ಎಚ್ಚರಿಕೆಯಿಂದ ಯೋಚನೆ ಮಾಡಿ ಸತ್ಯಹೇಳು, ಚಂದನದಾಸ. ರಾಜದ್ರೋಹ ಮಾಡುವವರಿಗೆ ಒಂದೇ ಶಿಕ್ಷೆ- ಮರಣದಂಡನೆ ನೆನಪಿರಲಿ” ಎಂದ.

ಚಂದನದಾಸನಿಗೆ  ತನ್ನ ಸಾವು ಸಮೀಪಿಸುತ್ತದೆ ಎಂದು ಅರ್ಥವಾಯಿತು. ಆದರೆ ಅಮಾತ್ಯರಾಕ್ಷಸನ ಮನೆಯವರ ಸುದ್ಧಿ ನನಗೆ ತಿಳಿಯದು. ಇಷ್ಟು ಮಾತ್ರ ನಾನು ಹೇಳಬಲ್ಲೆ” ಎಂದು ಕೈಮುಗಿದ.

ಚಾಣಕ್ಯ ಅವನ ನಿಷ್ಠೆಯನ್ನು ಮೆಚ್ಚಿಕೊಂಡ. “ಎಂತಹ ಸಂದರ್ಭ ಬಂದರೂ ಈ ಸತ್ಯವಂತ ಮಿತ್ರದ್ರೋಹ ಮಾಡುವುದಿಲ್ಲ. ಇವನಜ\ ಜೀವ ತೆಗೆಯಕೂಡದು. ಇವನ ಪ್ರಾಮಾಣಿಕತನವನ್ನು ಯಾರಾದರೂ ಮೆಚ್ಚಬೇಕಾದದ್ದೇ. ಇಂತಹ ಸಜ್ಜನನ್ನು ಕೊಲ್ಲುವುದು ಧರ್ಮವಲ್ಲ. ಇರಲಿ. ಇವನನ್ನು ಶೂಲಕ್ಕೇರಿಸುವ ಆಜ್ಞೆ ಹೊರಡಿಸಿ, ಆ ಸುದ್ಧಿ ರಾಕ್ಷಸನ ಕಿವಿಗೆ ಬೀಳುವಂತೆ ಮಾಡಿದರೆ ಆಗ ರಾಕ್ಷಸ “ತಾನಾಗಿ ಇಲ್ಲಿಗೆ ಬರುತ್ತಾನೆ” ಎಂದು ಚಾಣಕ್ಯ ಯೋಚಿಸಿದ.  “ಈ ರಾಜದ್ರೋಹಿಯನ್ನು “ಸೆರೆಯಲ್ಲಿಡಿ ಎಂದು ಆಜ್ಞೆ ಮಾಡಿದ. ಚಂದನದಾಸನನ್ನು ಗಲ್ಲಿಗೆ ಹಾಕಲಾಗುವುದು ಎಂದು  ಘೋಷಿಸಿದ.

ಅಮಾತ್ಯರಾಕ್ಷ ಬಂದ

ಚಂದನದಾಸನನ್ನು ಗಲ್ಲಿಗೇರಿಸುತ್ತಾರೆ ಎಂಬ ಸುದ್ಧಿ ಅಮಾತ್ಯರಾಕ್ಷಸನಿಗೆ ತಲುಪುವಂತೆ ಮಾಡಿದ ಚಾಣಕ್ಯ. ಅವನ ಹತ್ತಿರ ಗೂಢಚಾರರನ್ನು ನೇಮಿಸಿಯೇ ಇದ್ದ.

ಸುದ್ಧಿಯನ್ನು ಕೇಳಿ ರಾಕ್ಷಸನಿಗೆ ತುಂಬಾ ಸಂಕಟವಾಯಿತು. ತನ್ನ ಹೆಂಡತಿ ಮಕ್ಕಳಿಗೆ ಆಶ್ರಯ ಕೊಟ್ಟಿದ್ದರಿಂದ ಹೀಗಾಯಿತು ಎಂದು ಅವನ ದುಃಖ ಇನ್ನೂ ಹೆಚ್ಚಿತು. ಅವನನ್ನು ಉಳಿಸಲೆಬೇಕು ಎಂದು ಪಾಟಲಿ ಪುತ್ರಕ್ಕೆ ಬಂದ.

ರಾಕ್ಷಸ ನಗರದ ಹೊರಗಿನ ಉದ್ಯಾನಕ್ಕೆ ಬಂದ. ಮಾಡಬೇಕಾದ ಕಾರ್ಯವನ್ನು ಆಲೋಚನೆ ಮಾಡುತ್ತಲೇ ಅಲ್ಲಿಯೇ ಕ್ಷಣಕಾಲ ಮರದ ಕೆಳಗೆ ಕುಳಿತ. ಪಾಟಲಿಪುತ್ರದ ಪ್ರತಿಯೊಂದು ಭಾಗವೂ ಆತನಿಗೆ ಚಿರಪರಿಚಿತ. ಬಹು ದಿನಗಳ ನಂತರ ಆ ನಗರಕ್ಕೆ ಬಂದಿದ್ದಾನೆ. ನಂದರ ಸಂಗಡ ತಾನು ಕಳೆದ ಸುಖದ ದಿನಗಳು,ಆ ಕಾಲದ ರಾಜವೈಭವ ಎಲ್ಲವೂ ನೆನಪಿಗೆ ಬಂದು ಅಮಾತ್ಯರಾಕ್ಷಸನ ಕಣ್ಣಲ್ಲಿ  ನೀರು ಬಂತು. ಎಲ್ಲವೂ ದೈವಲೀಲೆ ಎಂದುಕೊಂಡ. ಅಷ್ಟರಲ್ಲಿ, ” ಈ ದಿನ ಚಂದನದಾಸನನ್ನು ಶೂಲಕ್ಕೇರಿಸಲಾಗುತ್ತದೆ” ಎಂದು ಯಾರೋ ಕೂಗಿ ಹೇಳುವುದು ಕೇಳಿ ರಾಕ್ಷಸ ಬೆಚ್ಚಿ ಬಿದ್ದ.

ಅಷ್ಟರಲ್ಲಿ ಗೋಳೀನ ಧ್ವನಿ ಕೇಳಿಸಿತು. ಚಂದನದಾಸನ ಹೆಂಡತಿ  ಮಕ್ಕಳು ಅಳುತ್ತ ಬರುತ್ತಿದ್ದಾರೆ- ಚಂದನದಾಸನನ್ನು ಸೈನಿಕರು ಶೂಲಕ್ಕೇರಿಸಲು ಕರೆದುಕೊಂಡು ಹೋಗುತ್ತಿದ್ದಾರೆ. “ಇನ್ನು ಇಲ್ಲಿ  ನೀವುಗಳು ಇರಕೂಡದು, ಹೊರಟುಹೋಗಿ” ಎಂದು ಸೈನಿಕರು ಕೈಲಿದ್ದ ಕತ್ತಿಗಳನ್ನು ಝಳಪಿಸುತ್ತ ಅಬ್ಬರಿಸಿದರು.

ಇದೆಲ್ಲವನ್ನೂ ಕಂಡು ಅಮಾತ್ಯರಾಕ್ಷಸನು ಸೈನಿಕರ ಹತ್ತಿರ ಬಂದು,”ಅಯ್ಯಾ ಈ ನನ್ನ ಸ್ನೇಹಿತನನ್ನು ಬಿಟ್ಟು ಬಿಡಿ. ಅದಕ್ಕೆ ಬದಲಾಗಿ ನನ್ನನ್ನು ಶೂಲಕ್ಕೇರಿಸಿ. ನಾನು ಸಾಯಲು ಸಿದ್ಧನಾಗಿದ್ದೇನೆ: ಎಂದ.

ಸೈನಿಕರು, “ಹಾಗೆಂದು ರಾಜಾಜ್ಞೆಯಾಗಬೇಕು. ಚಾಣಕ್ಯರ ಅಪ್ಪಣೆಯಾಗಬೇಕು. ಅವರೇನಾದರೂ ನಿಮ್ಮ ಅಭಿಪ್ರಾಯವನ್ನೊಪ್ಪಿದರೆ ಆಗಬಹುದು. ಆದುವರೆಗೂ ಚಂದನದಾಸನನ್ನು ಶೂಲಕ್ಕೇರಿಸುವುದಿಲ್ಲ” ಎಂದು ಹೇಳಿದರು. ನಾಲ್ಕು ಜನ ಸೈಣಿಕರು ಅಮಾತ್ಯರಾಕ್ಷಸನನ್ನು ಚಾಣಕ್ಯರ ಆಶ್ರಮಕ್ಕೆ ಕರೆತಂದರು.

ಒಂದು ಕೆಲಸ ಮಾಡಬೇಕು

ಚಾಣಕ್ಯನೆದುರು ಅಮಾತ್ಯರಾಕ್ಷಸ !

ವರ್ಷಗಳಿಂದ ಬದ್ಧವೈರದಿಂದ ಹೋರಾಡಿದ ಇಬ್ಬರು ಛಲಗಾರರು, ನಿಷ್ಠ ರಾಜಸೇವಕರು ಎದುರು ಬಂದರು.! ಚಾಣಕ್ಯನ ಅಂಗೈಯಲ್ಲಿ ರಾಕ್ಷಸನ ಜೀವ!

ಚಾಣಕ್ಯ ಪೀಠದಿಂದ ಇಳೀದು ಬಂದ.

ರಾಕ್ಷಸನನ್ನು ಕಂಡು ಗೌರವದಿಂದ ಮಾತನಾಡಿಸಿದ.

ರಾಕ್ಷಸ ಬೆಕ್ಕಸಬೆರಗಾದ. ಈ ಮಹಾನುಭಾವ ಎಂತಹ ತೇಜಸ್ವಿ, ಎಂತಹ ವೈರಾಗ್ಯ ಶೀಖಾಮಣಿ, ಎಂತಹ ಪ್ರಜ್ಞಾನಿಧಿ ಎಂದು ಮೆಚ್ಚಿಕೊಂಡ.

ಚಾಣಕ್ಯ, ಆತನಿಗೆ ಪೀಠವನ್ನು ಕೊಟ್ಟು ಕುಳ್ಳಿರಿಸಿ ಹೇಳೀದ: “ಅಮಾತ್ಯರೇ, ತಾವು  ಮಿತ್ರಶ್ರೇಷ್ಠನಾದ ಚಂದನದಾಸನು ಉಳಿದುಕೊಳ್ಳಬೇಕೆಂದು ಬಯಸುತ್ತೀರೆನು?”

“ಹೌದು. ಆತ ನನ್ನ ಪ್ರಾಣ ಪ್ರೀಯ ಮಿತ್ರ” ರಾಕ್ಷಸ ಗದ್ಗದ ಕಂಠದಿಂದ ಹೇಳಿದ.

“ಹಾಗಾದರೆ ನೀವೊಂದು ಕೆಲಸ ಮಾಡಬೇಕು” ಚಾಣಕ್ಯ ಖಚಿತವಾದ ಧ್ವನಿಯಲ್ಲಿ ಹೇಳಿದ.

ರಾಕ್ಷಸನಿಗೆ ಆಶ್ಚರ್ಯ, ಚಿಂತೆ ಏನೂ ಹೇಳುವನೋ ಚಾಣಕ್ಯ.

“ಆಗಲಿ” ಎಂದ.

ಚಾಣಕ್ಯ ಹೇಳಿದ : “ನೀವು ಚಂದ್ರಗುಪ್ತ ಮಹಾಸಾಮ್ರಾಜ್ಯದ ಮಹಾಮಂತ್ರಿಗಳಾಗಬೇಕು. ಈ ರಾಜ್ಯದ ಕ್ಷೇಮಕ್ಕಾಗಿ ಹಗಲಿರುಳು ಪ್ರಯತ್ನಿಸಬೇಕು”.

ರಾಕ್ಷಸನಿಗೆ ತನ್ನ ಕಿವಿಗಳನ್ನೇ ನಂಬಲು ಸಾಧ್ಯವಾಗಲಿಲ್ಲ.”ಏನಂದಿರಿ? ನಾನು? ಚಂದ್ರಗುಪ್ತನ ಮಹಾಮಂತ್ರಿ?”

“ಹೌದು”.

ಅಮಾತ್ಯರಾಕ್ಷಸ ತುಂಬು ಮನಸ್ಸಿನಿಂದ ಮೌರ್ಯ ಸಾಮ್ರಾಜ್ಯದ ಮಹಾಮಂತ್ರಿ ಪದವಿಯನ್ನು ಸ್ವೀಕರಿಸಿದ.

ಮಾರನೆಯ ದಿನ ಚಂದ್ರಗುಪ್ತನಿಗೆ ಶಾಸ್ತ್ರೋಕ್ತವಾಗಿ ಸಾಮ್ರಾಜ್ಯ ಪಟ್ಟಾಭಿಷೇಕ ನಡೆಯಿತು.

ಚಾಣಕ್ಯನ ಪ್ರತಿಜ್ಞೆ ನೆರವೇರಿತು. ಮಗಧ ರಾಜ್ಯಕ್ಕೆ ಒಳ್ಳೆಯ ಅರಸನೂ ದೊರೆತಿದ್ದ.

ಅನಂತರ ಚಾಣಕ್ಯ ಏನಾದ ಎಂಬುವುದು ಸ್ಪಷ್ಟವಾಗಿಲ್ಲ. ಚಂದ್ರಗುಪ್ತನ ಮಂತ್ರಿಯಾಗಿದ್ದ ಅವನ ಅನಂತರ ಅವನ ಮಗ ಬಿಂದುಸಾರನ ಮಂತ್ರಿಯಾಗಿಯೂ ಕೆಲವು ಕಾಲ ಇದ್ದ ಎಂದು ಕೆಲವು ಹೇಳುತ್ತಾರೆ. ಕೆಲವು ವರ್ಷಗಳ ನಂತರ ಚಂದ್ರಗುಪ್ತ ಜೈನನಾದ. ಆಗ ಚಾಣಕ್ಯ- ಚಂದ್ರಗುಪ್ತರಿಗೆ ಮನಸ್ತಾಪ ಬಂದಿತು ಎಂದು ಕೆಲವು  ಹೇಳುತ್ತಾರೆ.  ಚಂದ್ರಗುಪ್ತನ ಪಟ್ಟಾಭಿಷೇಕವಾಗುತ್ತಲೇ ತಪ್ಪಸ್ಸಿಗಾಗಿ ಹೊರಟು ಹೋದ ಎಂದೂ ಹೇಳುತ್ತಾರೆ.

‘ಅರ್ಥಶಾಸ್ತ್ರ’

ಚಾಣಕ್ಯ ಬರೆದ “ಅರ್ಥಶಾಸ್ತ್ರ” ಎನ್ನುವ ಪುಸ್ತಕ ಇಂದು ಜಗತ್ಪ್ರಸಿದ್ಧ. ಯೂರೋಪಿನ ರಾಜ್ಯ ಶಾಸ್ತ್ರ ನಿಪುಣರು, ಸಮಾಜ ಶಾಸ್ತ್ರ ನಿಪುಣರು, ಅರ್ಥಶಾಸ್ತ್ರನಿಪುನರು ಇದನ್ನು ಕುತೂಹಲದಿಂದ ಅಧ್ಯಯನ ಮಾಡುತ್ತಾರೆ.

ರಾಜಕುಮಾರನನ್ನು ಹೇಗೆ ಬೆಳೆಸಬೇಕು, ಅವರ ವಿದ್ಯಾಭ್ಯಾಸ ಹೇಗಾಗಬೇಕು ಇವುಗಳ ವಿವರಣೆಯಿಂದ “ಅರ್ಥಶಾಸ್ತ್ರ” ಪ್ರಾರಂಭವಾಗುತ್ತದೆ. ಅನಂತರ ರಾಯಭಾರಿಗಳ ಆಯ್ಕೆ, ಗೂಢಚಾರರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಇವುಗಳ ವಿಚಾರಣೆ. ರಾಜನಿಗೆ ಅಪಾಯ ಒದಗದ ಹಾಗೆ ರಕ್ಷಣೆ ಕೊಡಬೇಕು ಎಂದು ಚಾಣಕ್ಯ ವಿವರಿಸುತ್ತಾನೆ. ಕಾನೂನು, ಪೋಲಿಸರ ಕೆಲಸ ಕಾರ್ಯ, ಶ್ರೀಮಂತರನ್ನು ಹೇಗೆ ಅಧೀನದಲ್ಲಿ ಇಟ್ಟುಕೊಳ್ಳಬೇಕು, ಅವರು ದಾನ ಮಾಡುವಂತೆ ಹೇಗೆ ಪ್ರಚೋದಿಸಬೇಕು, ನೇರವಾಗಿ ಯುದ್ಧವನ್ನು ತಪ್ಪಿಸುವ ವಿಧಾನಗಳು, ಜ್ಯೋತಿಷ್ಯ, ಪುರೋಹಿತ ಮತ್ತಿತರರ ಕರ್ತವ್ಯವೇನು, ಶತ್ರುರಾಜರನ್ನು ಉಪಾಯದಿಂದ ಕೊಲ್ಲುವುದು ಹೇಗೆ, ಮನುಷ್ಯರ ಮತ್ತು ಪ್ರಾಣಿಗಳು ನಿದ್ರೆ ಮಾಡುವಂತೆ ಮಾಡುವ ಕ್ರಮ- “ಅರ್ಥಶಾಸ್ತ್ರ”ದಲ್ಲಿ ಚಾಣಕ್ಯ ಚರ್ಚೆ ಮಾಡುವ  ವಿಷಯ ನೂರಾರು. ಎಷ್ಟು ವಿಷಯಗಳನ್ನು ಪರಿಶೀಲಿಸುತ್ತಾನೆ ಎನ್ನುವುದೇ ಬೆರಗನ್ನುಂಟು ಮಾಡುತ್ತದೆ.  ಅವನ ಕುಶಾಗ್ರ ಬುದ್ಧಿ ವಿಸ್ಮಯಗೊಳಿಸುವಂತಹದು.  ಚಾಣಕ್ಯನ ಪ್ರಕರ ರಾಜನ ಮುಖ್ಯ ಕರ್ತವ್ಯ ಧರ್ಮರಕ್ಷಣೆ. ಧರ್ಮವನ್ನು ಎತ್ತಿಹಿಡಿದ ರಾಜನಿಗೆ ಇಹದಲ್ಲೂ ಪರದಲ್ಲೂ ಸುಖ. ಮತ್ತೊಂದು ಮಾತನ್ನು ಚಾಣಕ್ಯ ಹೇಳುತ್ತಾನೆ- ಬಹುಸ್ವಾರಸ್ಯವಾದುದು,  ಮುಖ್ಯವಾದುದು ರಾಜ ತನ್ನ ಅಧಿಕಾರವನ್ನು ಅನ್ಯಾಯವಾಗಿ ಉಪಯೋಗಿಸಿದರೆ ಅವನಿಗೂ ಶಿಕ್ಷೆ ಆಗಬೇಕು.

“ರಾಜನಿಗೆ ಸದಾ ಪ್ರಜೆಗಳ ಹಿತಕ್ಕಾಗಿ ದುಡಿಯುವುದೇ ವ್ರತಃ ರಾಜ್ಯದ ಆಡಳಿತದ ಕೆಲಸವೇ ಶ್ರೇಷ್ಠ ಧರ್ಮಾಚರಣೆ: ಎಲ್ಲರನ್ನೂ ಸಮಾನರಾಗಿ ಕಾಣುವುದೇ ಬಹು ದೊಡ್ಡ ದಾನ.”.

“ಜನರ ಸುಖವೇ ರಾಜನ ಸುಖ, ಅವರ ಕಲ್ಯಾಣವೇ ಅವನ ಕಲ್ಯಾಣ, ಅವನುಜ ತನ್ನ ಸುಖದ ಕಡೆಗೆ ಲಕ್ಷ್ಯ ಕೊಡಬಾರದು. ತನ್ನ ಪ್ರಜೆಗಳ ಸಂತೋಷದಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕು”.

ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಈ ಮಾತುಗಳನ್ನು ಬರೆದ ಚಾಣಕ್ಯ ರಾಜ್ಯಶಾಸ್ತ್ರ ನಿಪುಣ, ವಿವೇಕಿ; ತಂತ್ರಗಾರಿಕೆ, ಬುದ್ಧಿವಂತಕೆ, ಛಲ ಸಾಹಸಿಗಳಿಗೆ ಮತ್ತೊಂದು ಹೆಸರು ಚಾಣಕ್ಯ.