ಅಂದು ಪತ್ರಿಕೆಗಳಲ್ಲಿ ಸುದ್ದಿ ಬಂದಿತ್ತು.

ಜನ ಓದಿದರು. ಹೆದರಿದರು.

ಪೂನಾ ನಗರದ ೨೭ ವರ್ಷ ವಯಸ್ಸಿನ ಒಬ್ಬ ಯುವಕನನ್ನು ಗಲ್ಲಿಗೆ ಹಾಕಲಾಗಿತ್ತು.

ನಾಸಿಕ್ ತಾಲ್ಲೂಕಿನ ಭಗೂರು ಎಂಬ ಹಳ್ಳಿ. ಅಲ್ಲಿಯ ೧೫ ವರ್ಷದ ಹುಡುಗನೊಬ್ಬ ಆ ಸುದ್ದಿಯನ್ನು ಓದಿದ. ಊಟ ಸೇರಲಿಲ್ಲ. ನಿದ್ರೆ ಬರಲಿಲ್ಲ. ಓದುತ್ತಾ ಪತ್ರಿಕೆಯ ಹಾಳೆಗಳು ಕಣ್ಣೀರಿನಿಂದ ಒದ್ದೆ ಆದವು.

ಬಾಲವೀರ

ನಾಲ್ಕಾರು ದಿನಗಳು ಹೀಗೆಯೇ ಉರುಳಿದವು. ಒಂದು ರಾತ್ರಿ ಮನೆಯವರಿಗೆಲ್ಲ ಸುಖನಿದ್ರೆ. ಊರೆಲ್ಲ ನಿಶ್ಯಬ್ದ. ದೇವರ ಮನೆಗೆ ಹೋಗಿ ಮನೆಯ ದೇವಿಯ ಎದುರು ಹುಡುಗ ಅಡ್ಡಬಿದ್ದ. ’ಊದುಬತ್ತಿಯಂತೆ ತಾನೂ ಸುಟ್ಟುಕೊಂಡು ಬೂದಿಯಾಗಲೇ?’ ’ಶಿವಾಜಿಯಂತೆ ವಿಜಯಿಯಾಗಿ ತಾಯಿ ಭಾರತಿಗೆ ಸ್ವರಾಜ್ಯದ ಕಿರೀಟ ಇಟ್ಟು ರಾಜ್ಯಾಭಿಷೇಕ ಮಾಡುತ್ತೇನೆ. ಇಲ್ಲದಿದ್ದರೆ ಆ ಯುವಕನಂತೆ ನಾನೂ ಗಲ್ಲಿನ ಹಲಗೆ ಹತ್ತಿ ಹೋಗುತ್ತೇನೆ’, ’ದೇಶದ ಸ್ವಾತಂತ್ರ‍್ಯ ಸಾಧಿಸಲು ಶಸ್ತ್ರ ಹಿಡಿದು ಕೊನೆ ಉಸಿರಿನ ವರೆಗೆ ಕಾದಾಡುತ್ತೇನೆ’. ’ದೇವಿ, ಆಶೀರ್ವಾದ ಮಾಡು’/. ಹುಡುಗನ ಮನಸ್ಸು ಮಾತಾಡುತ್ತಿತ್ತು.

ಗಲ್ಲಿಗೆ ಹೋದ ಯುವಕನ ನೆನಪಿನ ಚಿತ್ರ ಕಣ್ಣಮುಂದೆ. ನಿದ್ದೆ ಬಾರದು. ಗಲ್ಲಿಗೆ ಹೋದ ಯುವಕನ ಮೇಲೆ ಕವನ ಬರೆಯಲು ತೊಡಗಿದ. ಥಟ್ಟನೆ ಯಾರೋ ಭುಜದ ಮೇಲೆ ಕೈ ಇಟ್ಟರು. ಹುಡುಗನ ತಂದೆ ದಾಮೂ ಅಣ್ಣ. ಮಗ ಗಲ್ಲಿಗೆ ಏರಿದವನ ಮೇಲೆ ಕವನ ಬರೆಯುತ್ತಿದ್ದಾನೆ. “ಮಗೂ, ನಮ್ಮ ಮನೆಯ ಆಸೆಯಲ್ಲ ನಿನ್ನ ಮೇಲೆ. ಇಂಥ ಕೆಲಸಕ್ಕೆ ಕೈ ಹಾಕಬೇಡ. ಕವನ ಬರೆಯಲು ಬೇರೆ ವಿಷಯಗಳಿವೆ. ಓದಿ ದೊಡ್ಡವನಾದ ಮೇಲೆ ಬೇಕಾದ್ದು ಮಾಡುವೆಯಂತೆ” ತಂದೆ ಹೇಳಿದರು.

ಹುಡುಗನ ಮನಸ್ಸು ಮಾತ್ರ ಪತ್ರಿಕೆಯ ಸುದ್ದಿಯ ಮೇಲೇ. ಕವನದ ಸಾಲುಗಲು, ಮಧ್ಯೆ ಮಧ್ಯೆ ಪ್ರಶ್ನೆಗಳು:

’ಸ್ವದೇಶ ಬಾಂಧವರ ಮೇಲೆ ನಡೆಯುವ ಹಿಂಸಾಚಾರ ಕೇಳಿ, ರಕ್ತ ಕುದಿದು ದೇಶಕ್ಕಾಗಿ ಪ್ರಾಣ ನೀಡುವ ತರುಣ ರನ್ನು ಧನ್ಯರೆನ್ನಬಾರದೇಕೆ?’ ’ಅನೇಕರು ಹುಟ್ಟುತ್ತಾರೆ, ಸಾಯುತ್ತಾರೆ. ಆದರೆ ಯಾರು ದೇಶಕ್ಕಾಗಿ ಸಾಯುತ್ತಾರೋ ಅಂಥವರನ್ನು ಮಹಾಪುರುಷರ ಸಾಲಿಗೆ ಸೇರಿಸುತ್ತಾರಲ್ಲವೇ?’

ಇನ್ನೂ ಕೆಲವು ತಿಂಗಳುಗಳು ಉರುಳಿದವು. ಗಲ್ಲಿಗೆ ಹೋದ ಯುವಕನ ತಮ್ಮಂದಿರಿಬ್ಬರೂ ಗಲ್ಲಿಗೆ ಹಾಕಲ್ಪಟ್ಟರು. ಹುಡುಗನ ಮನಸ್ಸು ಚಡಪಡಿಸಿತು. ಬಾಯಲ್ಲಿ ಮಾತು ಹೊರಡದು.

ಮನೆಯ ದೇವಿಯೆದುರಿಗೆ ಪುನಃ ಹುಡುಗ ಹೋದ. ಕಣ್ಣಲ್ಲಿ ನೀರು. ಎದೆಯಲ್ಲಿ ನೋವು. ದೇವಿಯನ್ನೇ ಸಾಕ್ಷಿಯಾಗಿಟ್ಟುಕೊಂಡು ಗಲ್ಲಿಗೆ ಹೋದ ಯುವಕರಿಗೆ ವಚನ ಕೊಟ್ಟ:

“ಕಾರ್ಯ ಮುಗಿಯುವ ಮೊದಲೇ ಹೋರಾಡುತ್ತಾ ಮಡಿದಿರಲ್ಲವೇ? ಚಿಂತಿಸಬೇಡಿ…. ನಿಮ್ಮ ಕಾರ್ಯವನ್ನು ನಾವು ಮುಂದುವರಿಸುತ್ತೇವೆ”.

ಆ ಚಿಂತಿತನಾದ ಬಾಲಕವಿಯೇ ಮುಂದೆ ಸ್ವಾತಂತ್ರ‍್ಯ ವೀರ ಸಾವರಕರ‍್ ಆದರು. ಗಲ್ಲಿಗೆ ಕುತ್ತಿಗೆಯೊಡ್ಡಿದ ಯುವಕರೇ ದಾಮೋದರ ಚಾಪೇಕರ‍್, ಬಾಳಕೃಷ್ಣ ಚಾಪೇಕರ‍್ ಮತ್ತು ವಾಸುದೇವ ಚಾಪೇಕರ‍್, ಇವರೇ ಚಾಪೇಕರ‍್ ಸಹೋದರರ ಎಂದು ಪ್ರಸಿದ್ಧರಾದ ಕ್ರಾಂತಿಕಾರಿಗಳು.

ಬಾಲ್ಯ

ಚಾಪೇಕರ್ ಮನೆತನದ ಮೂಲಸ್ಥಳ ಪೂನಾ ಹತ್ತಿರದ ಚಿಂಚವಡಹಳ್ಳಿ, ಚಾಪೇಕರರ ತಂದೆ ಹರಿಭಾವು. ತಾಯಿ ಲಕ್ಷ್ಮಿ ಬಾಯಿ. ಹರಿಭಾವು ತಕ್ಕಮಟ್ಟಿಗೆ ಇಂಗ್ಲೀಷ್ ಶಿಕ್ಷಣ ಪಡೆದು, ಸಂಸ್ಕೃತವನ್ನೂ ಕಲಿತಿದ್ದರು. ಒಂದು ಸರ್ಕಾರಿ ನೌಕರಿಯಲ್ಲಿದ್ದರು. ಗುಲಾಮಗಿರಿಗಿಂತ ಸ್ವತಂತ್ರ ವೃತ್ತಿಯೇ ಮೇಲೆಂದು ಅವರು ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟರು.

ಕೀರ್ತನಕಾರನಾಗುತ್ತೇನೆ, ಅದರಿಂದ ಇಹಪರ ಎರಡರಲ್ಲೂ ಒಳ್ಳೆಯದನ್ನು ಗಳಿಸುತ್ತೇನೆ ಎಂದು ಅವರು ಯೋಚಿಸಿದರು. ಸ್ವಾತಂತ್ರ‍್ಯದಾಹ, ಸ್ವಾಭಿಮಾನ, ಕೆಚ್ಚು ವಂಶಪಾರಂಪರ್ಯವಾಗಿ ಅವರ ಮಕ್ಕಳಾದ ಚಾಪೇಕರ‍್ ಸಹೋದರರಲ್ಲೂ ಇಳಿದು ಬಂದಿತ್ತು.

ಹರಿಭಾವು ಸ್ವತಃ ಕಥೆ, ಅದಕ್ಕೆ ಬೇಕಾದ ಕವನಗಳನ್ನು ರಚಿಸಿದರು. ಕೀರ್ತನೆಯಲ್ಲಿ ವಿನೋದ, ಚೊಕ್ಕ ನಿರೂಪಣೆಯೂ ಸೇರಿತ್ತು.

ಅವರ ಮೊದಲನೆಯ ಮಗ ದಾಮೋದರ ಚಾಪೇಕರ‍್ ೧೮೬೯ ಜೂನ್ ೨೫ನೇ ಶುಕ್ರವಾರ ಚಿಂಚವಡದಲ್ಲಿ ಹುಟ್ಟಿದನು. ೧೮೭೩ರಲ್ಲಿ ಬಾಳಕೃಷ್ಣನೂ ೧೮೭೯ರಲ್ಲಿ ವಾಸುದೇವನೂ ಕ್ರಮವಾಗಿ ಚಿಂಚವಡದಲ್ಲೂ ಮತ್ತು ಪೂನಾದಲ್ಲೂ ಹುಟ್ಟಿದರು.

ಎತ್ತಿನ ಬದಲು

ಹರಿಭಾವುರವರ ತಂದೆಯವರಿಗೆ ಮನಸ್ಸಿನಲ್ಲಿ ಕಾಶಿಯಾತ್ರೆಯ ಬಯಕೆ ಉಂಟಾಯಿತು. ಪಿತೃಋಣ ತೀರಿಸುವಂತೆ ಅಜ್ಜ ಹಠ ಹಿಡಿದರು. ಯಾತ್ರೆ ಕೈಗೊಳ್ಳಲು ಕೈಯಲ್ಲಿ ಕಾಸಿಲ್ಲ. ಜೊತೆಗೆ ಕ್ಷಾಮದ ಪರಿಸ್ಥಿತಿ. ಹಣವನ್ನು ಸ್ವಲ್ಪ ಸಾಲವಾಗಿ, ಸ್ವಲ್ಪ ಕೀರ್ತನೆ ಮಾಡಿ, ಹರಿಭಾವು ಕೂಡಿಸಿದರು. ಆಗಿನ ಕಾಲದಲ್ಲಿ ಯಾತ್ರೆ ಬಲು ಕಷ್ಟಕರ. ಆದರೂ ಮೂರು ಎತ್ತಿನ ಗಾಡಿಗಳಲ್ಲಿ ಮನೆಯವರೆಲ್ಲಾ ಹೊರಟರು. ಕಾಶಿಯಲ್ಲಿ ವಿಶ್ವೇರ್ಶವರನ ದರ್ಶನ, ಗಂಗಾಸ್ನಾನ ಮತ್ತು ದಾನಧರ್ಮಗಳನ್ನು ಮಾಡಿ, ಧನ್ಯರಾದೆವು ಎಂದುಕೊಂಡು ಹಿಂದಕ್ಕೆ ಹೊರಟರು. ಬರುತ್ತಾ ದಾರಿಯಲ್ಲಿ ಗಾಡಿಯ ಒಂದು ಎತ್ತು ಸತ್ತು ಹೋಯಿತು. ಹರಿಭಾವು ಮತ್ತು ಅವರ ತಮ್ಮ ಎತ್ತಿನ ಬದಲು ತಾವೇ ಎತ್ತಿನಂತೆ ಹೆಗಲು ಕೊಟ್ಟು ಗಾಡಿಯನ್ನು ಎಳೆಯುತ್ತಾ ಬಂದರು. ಅದನ್ನು ನೋಡಿ ಜನ ಆಶ್ಚರ್ಯ ಚಕಿತರಾದರು. ಒಂಬತ್ತು ಹತ್ತು ತಿಂಗಳಲ್ಲಿ ಕಾಶಿಯಾತ್ರೆ ಪೂರ್ತಿಯಾಯಿತು. ಸ್ವಂತ ಊರಾದ ಚಿಂಚವಡಕ್ಕೆ ಎಲ್ಲರೂ ವಾಪಸಾದರು.

ಬಾಲ ಕೀರ್ತನಕಾರರು

ಹಳ್ಳಿಗೆ ಬಂದ ಮೇಲೆ ಹರಿಭಾವು ತಮ್ಮ ಇಬ್ಬರು ಮಕ್ಕಳಾದ ದಾಮೋದರ ಮತ್ತು ಬಾಳಕೃಷ್ಣರಿಗೆ ಸಂಸ್ಕೃತ ಕಲಿಸಲು ತೊಡಗಿದರು. ಆದರೆ ಅದರಿಂದ ಬದುಕು ನಡೆಯಲು ಹೇಗೆ ಸಾಧ್ಯ? ಆದ್ದರಿಂದ ವೈದ್ಯಶಾಸ್ತ್ರ ಕಲಿಸಲು ಆರಂಭಿಸಿದರು. ಅದು ಈ ಸಹೋದರರಿಗೆ ರುಚಿಸಲಿಲ್ಲ.

ದಾಮೋದರನಿಗೆ ಮರಾಠಿ ಮತ್ತು ಇಂಗ್ಲಿಷ್ ಕಲಿಸಲು ಅವರ ತಂದೆ ಪ್ರಯತ್ನಿಸಿದರು. ಆದರೆ ಆತನಿಗೆ ಇಂಗ್ಲಿಷ್ ವಿದ್ಯಾಭ್ಯಾಸ ಎಂದರೆ ತಿರಸ್ಕಾರ. ’ಅದನ್ನು ಯಾರಾದರೂ ಕಲಿಯಲು ಆರಂಭಿಸಿದ ಕೂಡಲೇ ತಮ್ಮ ಪೂರ್ವಜರನ್ನು ಮೂರ್ಖರೆಂದೂ ತಮ್ಮ ಪ್ರಾಚೀನ ಧರ್ಮ ಮತ್ತು ಅದರ ನಿಯಮಗಳನ್ನು ತುಚ್ಛವೆಂದೂ ಕಾಣತೊಡಗುತ್ತಾರೆ’ ಎಂದು ಅವನ ಅಭಿಪ್ರಾಯ.

ತಂದೆ ಮಕ್ಕಳೆಲ್ಲ ಚಿಂಚವಡದಿಂದ ಪೂನಾ ನಗರಕ್ಕೆ ಬಂದು ನೆಲಸಿದರು. ತಂದೆ ಕೀರ್ತನಕಾರರು. ಅವರ ಮೂರು ಮಕ್ಕಳು ಪಕ್ಕವಾದ್ಯಕಾರರು. ಈ ಚಾಪೇಕರ್ ಸಹೋದರರಿಗೆ ಸಂಗೀತವೂ ಪೂರ್ವಜನ್ಮದ ಕೊಡುಗೆಯೋ ಏನೋ! ಅಷ್ಟು ಆಕರ್ಷಕ ದಾಮೋದರನ ಹಾರ್ಮೊನಿಯಂ ವಾದನ, ಬಾಳಕೃಷ್ಣನ ಜಲತರಂಗ ಮತ್ತು ಸ್ವರಮಂಡಲ ಹಾಗೂ ವಾಸುದೇವನ ತಾಳ. ಈ ಕೀರ್ತನ ಮಂಡಳಿಗೆ ಜನಪ್ರಿಯತೆ ಹಾಗೂ ಜನಪ್ರೋತ್ಸಾಹ ಬೆಳೆಯತೊಡಗಿತು.

ಬರಬರುತ್ತಾ ತಂದೆಯ ಜೊತೆಯಲ್ಲಿ ಹಾರ್ಮೋನಿಯಂ ನುಡಿಸುತ್ತಾ ದಾಮೋದರನಿಗೂ ಉತ್ತಮ ಕೀರ್ತನೆ ಮಾಡುವ ಅಭ್ಯಾಸ ಮೈಗೂಡಿತು. ಬಾಳಕೃಷ್ಣನೂ ಹಾಗೆಯೇ ರೂಪುಗೊಂಡ. ದಾಮೋದರನ ಹೃದಯ ಕವಿಹೃದಯ. ಆದ್ದರಿಂದ ಕಾವ್ಯರಚನೆಗೂ ತೊಡಗಿದ. ಅವನು ರಚಿಸಿದ ಕಾವ್ಯಗಳನ್ನು ಒಮ್ಮೊಮ್ಮೆ ಹಾಡಿಯೂ ತೋರಿಸುತ್ತಿದ್ದ. ಜನ ಮೆಚ್ಚಿಕೊಳ್ಳತೊಡಗಿದರು.

ತಂದೆ ಹರಿಭಾವು ಶಿಸ್ತಿನ ಸಿಪಾಯಿ. ಗೊತ್ತಾದ ಸಮಯಕ್ಕೆ ಚಾಚೂ ತಪ್ಪದೆ ಕೀರ್ತನೆ ಆರಂಭವಾಗಬೇಕು. ಅವರು ಯಾರಿಗೂ ಕಾಯುತ್ತಿರಲಿಲ್ಲ.

ತಂದೆಯೊಡನೆ ಚಾಪೇಕರ್ ಸಹೋದರರು ಕೀರ್ತನೆಗಾಗಿ ಊರೂರನ್ನು ತಿರುಗಬೇಕಾಯಿತು. ಈ ದೇಶ ಪರ್ಯಟನೆಯಿಂದ ಕೀರ್ತನೆಗಳಲ್ಲಿ ಪುರಾಣ – ಪುಣ್ಯಕಥೆಗಳ ಶ್ರವಣಮನನಗಳಿಂದ ಈ ಸಹೋದರರಲ್ಲಿ ಈಶಭಕ್ತಿ ಮತ್ತು ದೇಶಭಕ್ತಿಗಳ ನೆಲಗಟ್ಟು ಚೆನ್ನಾಗಿ ಬೇರೂರಿತು. ತೀರ್ಥ ಕ್ಷೇತ್ರಗಳ ದರ್ಶನ, ಸಾಧುಜನರ ಸಮಾಗಮ, ಪಂಡಿತ ಪ್ರಾಜ್ಞರ ಪರಿಚಯ, ನಮ್ಮ ಧರ್ಮ ಸಂಸ್ಕೃತಿ ಈ ಸಂಚಾರ ಗಳಿಂದ ನೆಲೆಗೊಂಡಿತು.

ಫಡಕೆ

ಚಾಪೇಕರರು ಈಗ ೧೪-೧೫ವರ್ಷಗಳ ಕಿಶೋರರು. ಅದು ೧೮೮೩-೮೪ರ ಕಾಲ. ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದ ೨೨ ವರ್ಷಗಳ ಅನಂತರ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆ ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭಿಸಿದ್ದ. ಪೂನಾ ನಗರದ ಪ್ರತಿ ವಿಚಾರವಂತ ಯುವಕನೂ ಫಡಕೆಯ ಚಟುವಟಿಕೆಯಿಂದ ಪಭಾವಿತ ನಾಗಿದ್ದ. ಫಡಕೆಯ ಹೋರಾಟ, ಬಂಧನ, ಬಲಿದಾನದ ವಾರ್ತೆಗಳನ್ನು ಕೇಳುತ್ತಾ ದಾಮೋದರ ಚಾಪೇಕರನಿಗೆ ಆನಂದ ಮತ್ತು ದುಃಖಗಳ ಅನುಭವವಾಗುತ್ತಿತ್ತು. ಫಡಕೆ ಏಡನ್ ಪಟ್ಟಣದ ಸೆರೆಮನೆಯನ್ನು ಸೇರಿ, ಕೊನೆ ಉಸಿರು ಎಳೆದದ್ದು ದಾಮೋದರನ ಅಂತಃಕರಣವನ್ನು ಕಲಕಿತು. ಫಡಕೆ ಕ್ರಾಂತಿ ಎಬ್ಬಿಸಿ ಹೋರಾಡಿದ ರೀತಿಯಲ್ಲಿ ನಾವೇಕೆ ಹೋರಾಡಬಾರದು, ಎಂಬ ಭಾವನೆ ಅವನಲ್ಲಿ ಉಕ್ಕಿತು.

ಗುಲಾಮಗಿರಿಕೂಡದು, ಇಂಗ್ಲಿಷರ ದರ್ಪ ದಬ್ಬಾಳಿಕೆಯ ವಿರುದ್ಧ ಹೋರಾಡಲು ಶರೀರಬಲ ಬೇಕು, ಸಂಘಟನೆ ಬೇಕು- ಈ ರೀತಿ ಚಾಪೇಕರ್ ಸಹೋದರರು ನಿರ್ಧರಿಸಿದರು.

ಮೊದಲು ಶರೀರ ಬಲ

ಶಾರೀರಿಕ ಬಲವನ್ನು ಹೆಚ್ಚಿಸಿಕೊಳ್ಳಲು ಚಾಪೇಕರರು ನಿತ್ಯ ವ್ಯಾಯಾಮವನ್ನು ಪ್ರಾರಂಭಿಸಿದರು. ದಂಡ, ಬೈಠಕ್, ಕುಸ್ತಿಯ ಪಟ್ಟುಗಳನ್ನು ಕಲಿಯಲಾರಂಭಿಸಿದರು. ಗಂಟೆಗಟ್ಟಳೆ ಇದೇ ದಿನಕ್ರಮ. ಇದನ್ನು ನೋಡಿ ತಂದೆ ಹರಿಭಾವುಗೆ ತುಸು ಕೋಪ ಬಂತು. ಆಗ ಅವುಗಳನ್ನು ಬಿಟ್ಟು ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡತೊಡಗಿದರು. ಇದು ಮಹಾರಾಷ್ಟ್ರದ ಮನೆಗಳಲ್ಲಿ ಈಗಲೂ ಧಾರ್ಮಿಕ ಸಂಪ್ರದಾಯ. ಆಗ ತಂದೆ ಹೇಗೆ ಅಡ್ಡಿ ಮಾಡಿಯಾರು? ಒಂದೇ ಸಮನೆ ೧೨೦೦ ನಮಸ್ಕಾರಗಳನ್ನು ಹಾಕತೊಡಗಿದರು. ಜೊತೆಗೆ ನಿರಂತರ ಓಟದ ಅಭ್ಯಾಸ. ಒಮ್ಮೆ ೨೦ ಮೈಲಿಗಳು ಎಲ್ಲೂ ನಿಲ್ಲದೆ ಓಡಿದ ದಾಮೋದರ. ಹೀಗೆ ಇವರ ವ್ಯಾಯಾಮ ನಿಷ್ಠೆ ಹೆಚ್ಚುತ್ತಲೇ ಹೋಯಿತು. ಚಾಪೇಕರ‍್ ಸಹೋದರರ ವ್ಯಾಯಾಮದ ಅಭ್ಯಾಸ ಅವರು ಫಾಸೀ ಕಂಬವನ್ನು ಹತ್ತುವವರೆಗೂ ನಿಲ್ಲಲಿಲ್ಲ.

ಕೆಲವು ಎಳೆಯ ಗೆಳೆಯರನ್ನು ಕಲೆಹಾಕಿದರು

೧೮೮೭ರಲ್ಲಿ ದಾಮೋದರನಿಗೂ ಅದಾದ ಮೂರು ವರ್ಷಗಳ ನಂತರ ಬಾಳಕೃಷ್ಣನಿಗೂ ೧೮೯೪ ರಲ್ಲಿ ವಾಸುದೇವನಿಗೂ ಮದುವೆಯಾಯಿತು. ದಾಮೋದರನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಬಾಳಕೃಷ್ಣನಿಗೂ ಒಂದು ಹೆಣ್ಣುಮಗು ಆಯಿತು. ಮನೆಯಲ್ಲಿ ಆನಂದ. ಆದರೆ ಅದರ ಮಧ್ಯೆ ಅವರ ಮನಸ್ಸಿನಲ್ಲಿ ದಿನರಾತ್ರಿ ದಾಸ್ಯತೆಯ ವಿರುದ್ಧ ತಳಮಳ.

ಕೀರ್ತನೆಗಳ ಮಧ್ಯೆ ಪಿಸ್ತೂಲು

ಯೌವನದ ಹುಮ್ಮಸ್ಸಿನಲ್ಲಿ ಚಾಪೇಕರ್ ಸಹೋದರರಿಗೆ ಸೈನ್ಯಕ್ಕೆ ಸೇರಿ ಯುದ್ಧತಂತ್ರ ಕಲಿಯುವ ಮನಸ್ಸಾಯಿತು. ಬ್ರಿಟಿಷರ ಸೈನ್ಯವನ್ನು ಸೇರಿ ತರಬೇತಿ ಪಡೆಯುವುದು ಸುಲಭಸಾಧ್ಯವಾಗಿರಲಿಲ್ಲ. ಯುದ್ಧ ಕಲೆಯಲ್ಲಿ ಪ್ರವೀಣತೆಯನ್ನು ಪಡೆಯಬೇಕೆಂದು ಯೋಚಿಸಿದರು. ಹಲವು ಸಂಸ್ಥಾನಗಳಲ್ಲಿ ಸೈನ್ಯ ಸೇರಲು ಪ್ರಯತ್ನಿಸಿದರೂ ಫಲವಾಗಲಿಲ್ಲ.

ನಿರಾಶೆಯ ಸ್ವಭಾವ ಇವರದಾಗಿರಲಿಲ್ಲ, ಸೈನ್ಯಕ್ಕೆ ಮನಸ್ಸುಮಾಡಿದರು, ಸಣ್ಣಪುಟ್ಟ ಆಯುಧಗಳನ್ನು ಕಲೆ ಹಾಕಿದರು. ಒಂದು ಅಂಗಡಿಯಿಂದ ರಿವಾಲ್ವರನ್ನೇ ಹಾರಿಸಿ ತಂದರು. ಪಿಸ್ತೂಲು ಉಪಯೋಗಿಸುವುದನ್ನು ಕೀರ್ತನೆಗಳ ಸಂಚಾರದಲ್ಲೇ ಕಲಿತರು.

ಧರ್ಮದ ತಳಹದಿ

ಬ್ರಿಟಿಷರನ್ನು ಈ ದೇಶದಿಂದ ಹೊಡೆದೋಡಿಸಲು ಸ್ವಂತ ಸೈನ್ಯವನ್ನಾದರೂ ಕಟ್ಟಿ ಹೋರಾಡಬೇಕು. ವಾಸುದೇವ ಬಲವಂತ ಫಡಕೆ, ರಾಸಬಿಹಾರಿ ಬೋಸ್, ಅರವಿಂದ ಘೋಷ್ ಮುಂತಾದ ದೇಶಭಕ್ತರು ಸೈನ್ಯ ಕಟ್ಟಲು ಯತ್ನಿಸಿರಲಿಲ್ಲವೇ? ಅವರಂತೆ ನಾವೂ ಏಕೆ ಮಾಡಬಾರದು? ಕೆಲವು ಎಳೆಯ ಗೆಳೆಯರನ್ನು ಕಲೆ ಹಾಕಿ ಅವರಿಗೆ ಊರಹೊರಗಿನ ಬೆಟ್ಟದ ತಪ್ಪಲುಗಳಲ್ಲಿ ವ್ಯಾಯಾಮ, ಸೇನೆಯ ರೀತಿಯಲ್ಲಿ ದಾಳಿ, ಪ್ರತಿದಾಳಿಗಳನ್ನು ಕಲಿಸ ತೊಡಗಿದರು. ತಮ್ಮ ತರುಣ ಸಂಘಟನೆಗೆ ಆರಾಧ್ಯದೈವ ವನ್ನಾಗಿ ಮಾರುತಿಯನ್ನು ಆರಿಸಿದರು.

ಅದಕ್ಕೆ ಸರಿಯಾಗಿ ಅವರಿಗೆ ಮಾರುತಿಯ ಕಲ್ಲಿನ ಮೂರ್ತಿಯೊಂದು ಸಿಕ್ಕಿತು. ಆ ಮಾರುತಿ ವಿಗ್ರಹ ಮತ್ತು ಲೋಕಮಾನ್ಯ ತಿಲಕರು ಚಾಪೇಕರರಿಗೆ ಸ್ಫೂರ್ತಿ ಕೇಂದ್ರವಾಗಿದ್ದರು.

ಚಾಪೇಕರ್ ಸಹೋದರರ ಹತ್ತಿರ ಇದ್ದ ಶಸ್ತ್ರಾಸ್ತ್ರಗಳ ಗೆಳೆಯರಲ್ಲಿ ಅವನ್ನು ಬಚ್ಚಿಟ್ಟು ತಮ್ಮ ಸಂಸ್ಥೆಯನ್ನು ಹಠಾತ್ತನೆ ಮುಚ್ಚಿದರು.

ತಮ್ಮ ಧ್ಯೇಯಕ್ಕೆ ಅನುಗುಣರಾದ ಕೆಲವೇ ಗೆಳೆಯರನ್ನು ಕೂಡಿಸಿಕೊಂಡು ಹೊಸ ಮಿತ್ರಮಂಡಳಿಯನ್ನು ಸ್ಥಾಪಿಸಿದರು. ಆ ಮಂಡಳಿಯಲ್ಲಿ ಗಣೇಶ ಶಂಕರ ದ್ರವಿಡ್, ರಾಮಚಂದ್ರ ಶಂಕರ ದ್ರವಿಡ್ ಎಂಬ ಸಹೋದರರು ಮುಖ್ಯರು. ಗಣೇಶ ದ್ರವಿಡನಿಗೆ ಪೊಲೀಸ್ ಖಾತೆಯಲ್ಲಿ ಕೆಲಸ.

ಕ್ರಾಂತಿಕಾರಿ ಕೆಲಸಗಳಿಗಾಗಿ, ಸ್ವಾತಂತ್ರ‍್ಯಕ್ಕೋಸ್ಕರ ಬಲಿದಾನ ಮಾಡಲು ಹಿಂಜರಿಯದ ೧೦-೨೦ ಮಂದಿ ಅರಿಸಿದ ಯುವಕರನ್ನು ದಾಮೋದರ ಸೇರಿಸಿದ. ಕ್ರಮೇಣ ಅದು ’ಚಾಪೇಕರ‍್ ಕ್ಲಬ್’ ಎಂದು ಕರೆಯಲ್ಪಟ್ಟಿತು.

ಅಂತರಂಗ ಮಿತ್ರರ ಈ ತಂಡಕ್ಕೆ ’ಆರ್ಯಧರ್ಮ ಪ್ರತಿಬಂಧ ನಿವಾರಕ ಮಂಡಳಿ’ ಎಂಬ ಹೊಸ ಹೆಸರನ್ನೂ ಇಡಲಾಯಿತು.

ಚಾಪೇಕರರಿಗೆ ಅನೇಕ ಕ್ರಾಂತಿಕಾರಿಗಳ ವಿಚಾರಗಳು ಸ್ಫೂರ್ತಿಸೆಲೆಯಾಗಿದ್ದವು. ಅರವಿಂದ ಘೋಷರ ’ಭವಾನಿ ಮಂದಿರ’ದ ಗುಪ್ತ ಸಂಸ್ಥೆಯಲ್ಲಿ ಬಾಂಬು ತಯಾರಿಸುವ ಮೊದಲು ಉಪನಿಷತ್ ವಾಚನವಾಗುತ್ತಿತ್ತು. ಅವರ ತಮ್ಮ ಬಾರೀಂದ್ರ ಕುಮಾರ‍್ ಘೋಷ್, “ಜನರಲ್ಲಿ ಕೇವಲ ರಾಜಕೀಯ ಪ್ರಚಾರದಿಂದ ಲಾಭವಾಗದು. ಆಧ್ಯಾತ್ಮಿಕ ತಳಹದಿಯ ಮೇಲೆ ಸಂಕಟವನ್ನು ಎದುರಿಸಲು ಸಿದ್ಧಮಾಡಬೇಕು. ಮಕ್ಕಳಿಗೆ ಧಾರ್ಮಿಕ ಪುಸ್ತಕಗಳನ್ನು ಓದಲು ಕಲಿಸಬೇಕು” ಎಂದು ಹೇಳುತ್ತಿದ್ದರು. ಕಾಕೋರಿ ಕಾಂಡದ ಸಚೀಂದ್ರನಾಥ ಸಂನ್ಯಾಲ್ ಅಭಿಪ್ರಾಯದಲ್ಲಿ: ’ಧರ್ಮಾಭಿ ಮಾನ ಬಿಟ್ಟು ಕ್ರಾಂತಿಯ ಕಲ್ಪನೆಯೇ ಸಫಲವಾಗಲಾರದು’. ಹೀಗೆ ಕ್ರಾಂತಿಕಾರಿಗಳ ಧರ್ಮಾಭಿಮಾನದ ಮನೋರಚನೆ ಚಾಪೇಕರ‍್ ಸಹೋದರರಿಗೆ ತುಂಬ ಹಿಡಿಸಿತು.

ಹಿಂದು ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಕ್ರಿಶ್ಚಿಯನ್ ಪ್ರಸಾರಕರನ್ನು ಚಾಪೇಕರರು ವಿರೋಧಿಸುತ್ತಿದ್ದರು. ಈಗ ದಾಮೋದರನಿಗೆ ೨೬ ವರ್ಷ. ತಮ್ಮ ಬಾಳಕೃಷ್ಣನಿಗೆ ೨೨ ವರ್ಷ. ವಾಸುದೇವನಿಗೆ ೧೬ ವರ್ಷ. ಸುಮಾರು ಈ ವೇಳೆಗೆ ಚಾಪೇಕರ‍್ ಸಹೋದರರಿಗೆ ಲೋಕಮಾನ್ಯ ತಿಲಕರ ನಿಕಟ ಪರಿಚಯವಾಯಿತು ಅವರು ಲೋಕಪ್ರಿಯ ಗೊಳಿಸಿದ ಶಿವಾಜಿ ಮತ್ತು ಗಣೇಶ ಉತ್ಸವಗಳಲ್ಲಿ ಈ ಸಹೋದರರು ಭಾಗವಹಿಸಿದರು. ಸ್ಫೂರ್ತಿ ಹಾಗೂ ವೀರಾವೇಶದಿಂದ ಕೂಡಿದ ಹಾಡುಗಳನ್ನು ಕಟ್ಟಿ ಹಾಡಿದರು. ಲೋಕಮಾನ್ಯರ ’ಕೇಸರಿ’ ಪತ್ರಿಕೆಯಲ್ಲೂ ಅವರು ಪ್ರಕಟವಾದವು. ಈ ಕವನಗಳಲ್ಲಿ ಸ್ವದೇಶಾಭಿಮಾನ ತುಂಬಿ ತುಳುಕುತ್ತಿತ್ತು. ಪಾರತಂತ್ರ‍್ಯದ ವಿಷಯದಲ್ಲಿ ಧಿಕ್ಕಾರ ತುಂಬಿರುತ್ತಿತ್ತು.

ಗಣೇಶೋತ್ಸವಗಳಲ್ಲಿ ಹಿಂದು ಧರ್ಮಾಭಿಮಾನವನ್ನು ತುಂಬಲು ಅನುಕೂಲವಾಗುವಂತೆ ದೇಶಭಕ್ತಿಯ ಹಲವಾರು ಹಾಡುಗಳನ್ನು ರಚಿಸಿ ದಾಮೋದರ ಪ್ರಕಟಿಸಿದ. ಆದರೆ ಅದರ ಪ್ರತಿಗಳೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡರು. ಅಂದು ದೇಶಭಕ್ತಿ ಅಪರಾಧವಾಗಿತ್ತು!

ಚಕ್ರವರ್ತಿನಿಯ ವಿಗ್ರಹ

ನಮ್ಮ ದೇಶದ ಸ್ವಾತಂತ್ರ‍್ಯವನ್ನು ಅಪಹರಿಸುವುದು, ನಮ್ಮ ಧರ್ಮವನ್ನು ಹಾಳುಮಾಡುವುದು-ಇದಕ್ಕಾಇಯೇ ಇಂಗ್ಲಿಷರು ರಾಜ್ಯವಾಳುತ್ತಿರುವುದು ಎಂಬುದು ಚಾಪೇಕರರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಏನಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಆಗ ಬ್ರಿಟಿಷ್ ಸಾಮ್ರಾಜ್ಯದ ಮಹಾರಾಣಿ ವಿಕ್ಟೋರಿಯ. ಆಕೆಯ ಅಪಮಾನ ಮಾಡಿದರೆ ಇಂಗ್ಲಿಷರಿಗೆಲ್ಲ ಅಪಮಾನ ಮಾಡಿದಂತೆ. ಆದರೆ ಆಕೆ ಭಾರತದಲ್ಲಿ ವಾಸಿಸುವುದಿಲ್ಲವಲ್ಲ? ಏನು ಮಾಡುವುದು? ಎಂದು ಯೋಚಿಸಿದರು.

ಮುಂಬಯಿ ಕೋಟೆ ಪ್ರದೇಶದಲ್ಲಿ ವಿಕ್ಟೋರಿಯ ಮಹಾರಾಣಿಯ ಒಂದು ದೊಡ್ಡ ಅಮೃತಶಿಲೆಯ ಪ್ರತಿಮೆ ಇತ್ತು. ಚಾಪೇಕರ‍್ ಸಹೋದರರು ಹಳೆಯ ಚಪ್ಪಲಿಗಳ ಒಂದು ಹಾರ ಸಿದ್ಧಮಾಡಿದರು. ಜೊತೆಗೆ ಪೇಟೆಯಿಂದ ಟಾರ‍್ (ಡಾಂಬರ‍್) ಕೊಂಡು ತಂದರು. ಅದಕ್ಕೆ ಕೆಲವು ಅಂಟುವಸ್ತುಗಳನ್ನು ಸೇರಿಸಿ ಒಂದು ಸೈಕಲ್ ಟ್ಯೂಬಿಗೆ ತುಂಬಿಕೊಂಡರು. ವಿಜಯದಶಮಿಯ ಶುಭದಿನ ದಾಮೋದರ ಮತ್ತು ಬಾಳಕೃಷ್ಣಚಾಪೇಕರರು ಮಧ್ಯರಾತ್ರಿ ವಿಕ್ಟೋರಿಯ ಮಹಾರಾಣಿಯ ಆ ಪ್ರತಿಮೆಗೆ ’ಅಭಿಷೇಕ’ ಮತ್ತು ’ಹಾರಾರ್ಪಣೆ’  ಮುಗಿಸಿದರು. ಅಣ್ಣ ತಮ್ಮಂದಿರಿಬ್ಬರೂ ಸದ್ದಿಲ್ಲದೆ ಮನೆಗೆ ಮರಳಿ ತಮ್ಮ ಹಾಸಿಗೆಯಲ್ಲಿ ಮಲಗಿದರು. ಆ ಪ್ರತಿಮೆಯ ಹತ್ತಿರವೇ ಪೊಲೀಸ್‌ಠಾಣೆಯಿತ್ತು. ಹತ್ತಿರದಲ್ಲೇ ಒಬ್ಬ ಪೊಲೀಸ್ ಪೇದೆ!

ಮಾರನೇ ದಿನ ಆ ಪ್ರತಿಮೆಯನ್ನು ನೋಡಲು ಜನರ ನೂಕುನುಗ್ಗಲು. ಈ ಸಾಸಕೃತ್ಯವನ್ನು ಮಾಡಿದವರ ಕೈಚಳಕವನ್ನು ಎಲ್ಲರೂ ಮನಸಾರಿ ಹೊಗಳುವವರೇ. ಆ ನೂಕುನುಗ್ಗಲಲ್ಲಿ ಬೆಳಗ್ಗೆ ಬಂದು ಚಾಪೇಕರರೂ ಸೇರಿಕೊಂಡರು. ಜನರೊಡನೆ ಅವರೂ ಸಂತೋಷಪಟ್ಟರು. ಪೊಲೀಸರು ಬಂದು ’ಹಾರ’ವನ್ನೇನೋ ತೆಗೆದರು. ಆದರೆ ಟಾರ‍್ ತೆಗೆಯುವುದು? ಇಂಗ್ಲಿಷ್ ರಾಜ್ಯಕ್ಕೆ ಸುರಂಗ ಇಡುವ ಪ್ರಯತ್ನಗಳು ಅಲ್ಲಲ್ಲಿ ಪ್ರಾರಂಭವಾಗಿತ್ತು. ’ರಾಜ್ಯದ್ರೋಹ’ಕ್ಕೆ ಕಲಶ ಇಡುವ ಕೃತ್ಯಗಳು ಊರೂರಲ್ಲಿ ಹರಡತೊಡಗಿದವು.

ಇಂಗ್ಲಿಷರ ಅಹಂಕಾರಕ್ಕೆ ಬೆಂಕಿ

೧೮೯೬ರಲ್ಲಿ ಮುಂಬಯಿ ನಗರಕ್ಕೆ ಹೊಸದಾಗಿ ಪ್ಲೇಗ್ ರೋಗ ಕಾಲಿಟ್ಟಿತು. ಜನ ಸಾಯುವ ರೀತಿ ನೋಡಿ ನಗರವೆಲ್ಲ ನಡುಗಿತು. ಭೀತಿಯಿಂದ ಜನರು ವಲಸೆ ಹೊರಟರು. ಅದೇ ವೇಳೆಗೆ ಮೆಟ್ರಿಕ್ ಪರೀಕ್ಷೆ ದಿನಗಳು. ಅದನ್ನು ಮುಂದೆ ಹಾಕಲು ಮಾಡಿದ ಮನವಿಗಳೆಲ್ಲ ವ್ಯರ್ಥವಾದವು. ಸರ್ಕಾರ ಪರೀಕ್ಷೆ ನಡೆಸಲು ವಿಶಾಲವಾದ ಮಂಟಪವನ್ನು ಕಟ್ಟಿಸಿತು. ಸರ್ಕಾರದ ದರ್ಪವನ್ನು ಕುಗ್ಗಿಸಲು ಚಾಪೇಕರರ ಬುದ್ದಿ ಚುರುಕಾಯಿತು. ಉಡುವ ಪಂಚೆಗಳನ್ನು ಸೇರಿಸಿ ಉದ್ದಮಾಡಿ, ಸೀಮೇಎಣ್ಣೆಯಲ್ಲಿ ಅದ್ದಿದ ಅದರ ಒಂದು ಕೊನೆಗೆ ಬೆಂಕಿ ಇಟ್ಟು, ಅದು ಕ್ರಮೇಣ ಹತ್ತಿಕೊಂಡು ಇಡೀ ಮಂಟಪವೆಲ್ಲ ಬೆಂಕಿಗೆ ಆಹುತಿಯಾಗುವಂತೆ ಮಾಡಿದರು. “ಯಾರೇ ಈ ಕೆಲಸ ಮಾಡಿರಲಿ, ಸರ್ಕಾರಕ್ಕೆ ಚೆನ್ನಾಗಿಯೇ ಬುದ್ದಿ ಕಲಿಸಿದರು” ಎಂಬ ಜನಗಳ ಹೊಗಳಿಕೆಯ ಮಾತುಗಳಿಂದ ಚಾಪೇಕರರು ಹಿಗ್ಗಿದರು. ಪರೀಕ್ಷೆಗಳು ಮುಂದೆ ಹಾಕಲ್ಪಟ್ಟವು. ಇಂಗ್ಲಿಷರ ದರ್ಪಕ್ಕೆ ಭಾರಿ ಹೊಡೆತ.

ನಗುತ್ತಾ ನೇಣುಗಂಬ ಏರಿದೆನೆಂದು ಹೇಳಿ’

ಪ್ಲೇಗನ್ನು ಮೀರಿದ ರ್ಯಾಡ್ ಪಿಡುಗು

 

ಪ್ಲೇಗ್ ರೋಗವು ಪೂನಾ ನಗರಕ್ಕೂ ಹಬ್ಬಿತು. ಈ ಪಿಡುಗನ್ನು ತೊಡೆದುಹಾಕಲು ಬ್ರಿಟಿಷ್ ಸರ್ಕಾರ ಕೇವಲ ಕಾಟಾಚಾರದ ಕ್ರಮಗಳನ್ನು ಮಾತ್ರ ಕೈಗೊಂಡಿತು. ಅದಲ್ಲದೆ ಜನಗಳನ್ನು ಹಿಂಸಿಸಲು ಮತ್ತು ತುಳಿಯಲು ಈ ಸಂದರ್ಭವನ್ನು ಸರ್ಕಾರ ಉಪಯೋಗಿಸಿಕೊಂಡಿತು. “ಸ್ವರಾಜ್ಯ ನನ್ನ ಆ ಜನ್ಮಸಿದ್ಧ ಹಕ್ಕು” ಎಂದು ಸಾರಿದ ಲೋಕಮಾನ್ಯ ತಿಲಕರ ಜನಪ್ರಿಯತೆಯನ್ನು ಅಳಿಸುವ ಪ್ರಯತ್ನವನ್ನು ಮಾಡಿತು. ೧೮೯೭ ಫೆಬ್ರವರಿ ೪ ತಂದು ಶಾಸವನ್ನು ಬ್ರಿಟಿಷ್ ಸರ್ಕಾರ ಜಾರಿಗೆ ತಂದಿತು. ಇದರ ಮೂಲಕ ಜನಗಳ ಮೂಲಭೂತವಾದ ಎಲ್ಲ ಹಕ್ಕುಗಳೂ ಮೊಟಕು ಮಾಡಲ್ಪಟ್ಟವು. ಶ್ರೇಷ್ಠ ನ್ಯಾಯಾಲಯಕ್ಕೆ ಅಪೀಲು ಹೋಗುವ ಅಧಿಕಾರವನ್ನು ಈ ಕಾನೂನು ಕಿತ್ತುಕೊಂಡಿತು.

ಆ ಕಾಲಕ್ಕೆ ಪೂನ ನಗರ ಇಡೀ ದೇಶದ ರಾಷ್ಟ್ರೀಯ ಚಟುವಟಿಕೆಗಳ ಕೇಂದ್ರ. ಲೋಕಮಾನ್ಯ ತಿಲಕರ ರಾಜಕೀಯ ಚಟುವಟಿಕೆಗಳ ಕೇಂದ್ರವೂ ಅದೇ. ಹೀಗಾಗಿ ಬ್ರಿಟಿಷ್ ಸರ್ಕಾರವು ಜಾಗೃತವಾದ ಪೂನಾ ಜನತೆಯನ್ನು ಹತ್ತಿಕ್ಕಲು ರ‍್ಯಾಂಡ್ ಎಂಬ ಇಂಗ್ಲಿಷ್ ಅಧಿಕಾರಿಯನ್ನು ನೇಮಿಸಿತು. ಈತ ದರ್ಪಕ್ಕೆ,ದಬ್ಬಾಳಿಕೆಗೆ, ಕ್ರೌರ್ಯಕ್ಕೆ ಪ್ರಸಿದ್ಧ, ಭಾರತೀಯರನ್ನು ಕಂಡರೆ ಆತನಿಗೆ ತುಂಬ ರೋಷ.

ಪೂನಾದಲ್ಲಿ ಪ್ಲೇಗ್ ಬೇಗ ಹರಡುತ್ತಾ ಇದೆ. ಅದನ್ನು ಎದುರಿಸಲು ಜನಗಳ ಅಥವಾ ಸಾರ್ವಜನಿಕ ಸಂಸ್ಥೆಗಳ ಸಹಾಯವನ್ನೂ ಸರ್ಕಾರ ಲೆಕ್ಕಿಸುತ್ತಿಲ್ಲ. ರ‍್ಯಾಂಡ್‌ಗೆ ಸಹಾಯಕರಾಗಿ ಇಬ್ಬರು ಬ್ರಿಟಿಷ್ ಮಿಲಿಟರಿ ಅಧಿಕಾರಿಗಳು ಬೇರೆ! ಸಂಶಯದ ಮೇಲೆ ದೊಡ್ಡ ದೊಡ್ಡ ಮನೆಗಳನ್ನು ಸುಡುವುದು. ಅಲ್ಲಿ ಪ್ಲೇಗ್ ರೋಗ ಬಂದಿರಲೇಬೇಕೆಂದಿಲ್ಲ. ಇಲಿಗಳು ಸತ್ತು ಬೀಳುತ್ತಿವೆಯೆಂದು ಮನೆಗಳಿಗೆ ನುಗ್ಗುವುದು. ಮನೆಗಳನ್ನು ಒಡೆದು ಬೆಲೆಬಾಳುವ ವಸ್ತುಗಳನ್ನು ಕೊಳ್ಳೆ ಹೊಡೆಯುವುದು. ದೇವರ ಮನೆಗೆ ಬೂಟುಕಾಲಿನಲ್ಲಿ ನುಗ್ಗುವುದು ವಿಗ್ರಗಹಗಳನ್ನು ಒದೆಯುವುದು. ಹೆಂಗಸರಿರುವ ಕೋಣೆಗಳನ್ನೂ ಬಿಡದೆ ಒಳಹೊಕ್ಕು ಶೋಧಿಸುವುದು. ಕೆಲವು ಬಾರಿ ಹೆಂಗಸರ ಮೇಲೆ ಅತ್ಯಾಚಾರ. ಪ್ಲೇಗಿನಿಂದ ಸತ್ತಿರುವ ಮತ್ತು ಸಾಯುತ್ತಿರುವವರನ್ನು ಸಾಗಿಸುವ ನೆಪದಲ್ಲಿ ಪ್ರತ್ಯೇಕವಾಗಿ ಇಟ್ಟು ಉಪಚಾರ ಮಾಡುವ ಆಸ್ಪತ್ರೆ ಶಿಬಿರಗಳಿಗೆ ಬದುಕಿರುವವರನ್ನು ಬಲವಂತವಾಗಿ ಎಳೆದುಹಾಕುವುದು- ಆ ಕರಾಳ ಶಾಸನದ ನೆಪದಲ್ಲಿ ಇವು ರ‍್ಯಾಂಡ್ ಮಾಡುತ್ತಿದ್ದ ಪಾಪಕೃತ್ಯಗಳು. ಆ ಶಿಬಿರಗಳಲ್ಲಿ ಸಾಕಷ್ಟು ಸ್ಥಳಾವಕಾಶವಾಗಲೀ, ಆಹಾರವಾಗಲೀ, ಕುಡಿಯಲು ನೀರಾಗಲೀ ಎಲ್ಲಿ? ಸಹಾನೂಭೂತಿಯೂ ಇಲ್ಲ. ಅಲ್ಲಿನ ಶುಶ್ರೂಷೆಗಿಂತ ಸಾವೇ ಮೇಲು. ರಕ್ಷಕರಾಗಿ ಬಂದಿದ್ದ ಈ ಬ್ರಿಟಿಷ್ ಅಧಿಕಾರಿಗಳು ಪೂನಾ ನಗರದ ಭಕ್ಷಕರಾಗಿ ಮೆರೆದರು. ಲೋಕಮಾನ್ಯ ತಿಲಕರು ಕಳುಹಿಸಿದ ಪ್ರತಿಭಟನೆಯ ಪತ್ರವನ್ನು ರ‍್ಯಾಂಡ್ ಮಹಾಶಯ ಕಸದ ಬುಟ್ಟಿಗೆ ಎಸೆ. ತಿಲಕರು ತಮ್ಮ ಕೇಸರಿ ಪತ್ರಿಕೆಯಲ್ಲಿ ಬರೆದರು – “ರ‍್ಯಂಡ್ ಶಾಹಿ ಕೊನೆಯಾಗಲೇ ಬೇಕು. ಜನತೆ ಈ ದಬ್ಬಾಳಿಕೆಯನ್ನು ಸಹಿಸದು. ಈ ದುರಾಚಾರದಿಂದ ಸಾಯುವುದಕ್ಕಿಂತ ಶಸ್ತ್ರ ಹಿಡಿದಾಗಲೀ, ಅಥವಾ ಪ್ಲೇಗಿನಿಂದಾಗಲೀ ಸತ್ತೇವು ಎಂಬ ಇಚ್ಛಾಶಕ್ತಿ ಜನತೆಯಲ್ಲಿ ಹುಟ್ಟೀತು.”

ಒಂದೇ ಮಾರ್ಗ

ಪೂನಾದ ಜನ ರೋಸಿದರು. ಪತ್ರಿಕೆಗಳೆಲ್ಲ ರ‍್ಯಾಂಡ್ ಶಾಹಿಯನ್ನು ಖಂಡಿಸಿದವು. ತಿಲಕರು ಬ್ರಿಟಿಷರ ದಬ್ಬಾಳಿಕೆ ಅತ್ಯಾಚಾರಗಳ ವಿರುದ್ಧ ಹೋರಾಡಲು ಕರೆಕೊಟ್ಟರು. ಬ್ರಿಟಿಷರ ಕಿವಿಗಳು ಕಲ್ಲುಕಿವುಡು. ಪಿಸ್ತೂಲಿನ ಶಬ್ದ ಮಾತ್ರ ಅವರಿಗೆ ಕೇಳುವುದು ಎನಿಸಿತು. ಜನರಿಗೆ ಉಳಿದಿದ್ದು ಒಂದೇ ಮಾರ್ಗ- ಅತ್ಯಾಚಾರಿ ರ‍್ಯಾಂಡ್‌ನನ್ನು ಯಮಸದನಕ್ಕೆ ಅಟ್ಟುವುದು. ಇದರಿಂದ ಜನರ ತೀವ್ರ ಅಸಮಾಧಾನವನ್ನು ಪ್ರಕಟಿಸುವುದು. ಒಬ್ಬ ಇಂಗ್ಲಿಷ ಅಧಿಕಾರಿಯನ್ನು ಕೊಲ್ಲುವುದರಿಂದ, ’ಸೂರ್ಯ ಎಂದೂ ಮುಳುಗದೇ ಇರುವ ಬ್ರಿಟಿಷ್ ಸಾಮ್ರಾಜ್ಯ’ವನ್ನು ಮುಳುಗಿಸಬಹುದೆಂದು ಯಾರೂ ಭಾವಿಸಿರಲಿಲ್ಲ. ಕೇವಲ ಅತ್ಯಾಚಾರವನ್ನು ತಡೆಗಟ್ಟಲು ಕರೆಗಂಟೆಯನ್ನು ಬಾರಿಸುವುದು – ಇಷ್ಟೇ ಉದ್ದೇಶ. ರ‍್ಯಾಂಡ್‌ನ ಕೊಲೆಯಾದರೆ ದರ್ಪದಿಂದ ಅತ್ಯಾಚಾರ ಮಾಡುವ ಇಂಗ್ಲಿಷ್ ಅಧಿಕಾರಿಗಳಿಗೆ ಭಯ ಉಂಟಾಗಬಹುದು ಮತ್ತು ಜನರಲ್ಲಿ ಆತ್ಮವಿಶ್ವಾಸ ಬೆಳೆದು ಅತ್ಯಾಚಾರದ ವಿರುದ್ಧ ನೈತಿಕ ಬಲ ಹೆಚ್ಚಬಹುದು.

ಆ ಮಾರ್ಗದಲ್ಲಿ

ಈ ಎಲ್ಲ ದಬ್ಬಾಳಿಕೆ, ದೌರ್ಜನ್ಯವನ್ನು ನೋಡುತ್ತಿದ್ದ ಚಾಪೇಕರರ ಮನಸ್ಸು ಏನಾಗುತ್ತಿರಬಹುದು? ಜನಗಳನ್ನು, ದೇವರನ್ನು, ಸ್ತ್ರೀಯರನ್ನು ಅಪಮಾನಗೊಳಿಸಿದರೆ ಸುಮ್ಮನಿರಬೇಕೆ? ಬಾಳಕೃಷ್ಣನು ಕೇಸರಿ ಪತ್ರಿಕೆಯಲ್ಲಿ ಕವಿತೆಯೊಂದನ್ನು ಬರೆದ. “ತಾಯಿ, ತಂಗಿಯರ ಮೇಲೆ ಕೈ ಮಾಡಿದವರನ್ನು ಶಿಕ್ಷಿಸಲಾಗದ ಹೇಡಿಗಳು ಬದುಕಿ ಏನು ಪ್ರಯೋಜನ? ಶಿವಾಜಿ ಕಾಲದ ತರುಣನಾಗಿದ್ದರೆ ಕತ್ತಿ ಹಿಡಿದು ನಿಲ್ಲುತ್ತಿದ್ದ” ಎಂದು ತನ್ನ ಭಾವನೆಗಳನ್ನು ತೋಡಿಕೊಂಡ.

ಚಾಪೇಕರ ಸಹೋದರರ ಲೋಕಮಾನ್ಯರನ್ನು ಕಂಡರು. ಬ್ರಿಟಿಷರ ಅತ್ಯಾಚಾರವನ್ನು ಕೊನೆಗಾಣಿಸುವುದು ಹೇಗೆಂದು ಕೇಳಿದರು. ತಿಲಕರು ಸಿಡಿದೆದ್ದರು. “ಇನ್ನೊಬ್ಬರನ್ನು ಹೇಡಿಗಳೆಂದು ಕರೆದು ಏನು ಪ್ರಯೋಜನ? ನೀವೆ ಕೈಲಾಗದವರು. ಇಲ್ಲದಿದ್ದರೆ ರ‍್ಯಾಂಡ್‌ನ ಈ ’ಆಟ’ ಪೂನಾದಲ್ಲಿ ನಡೆಯುತ್ತಿತ್ತೆ?” ಎಂದರು.

ರ‍್ಯಾಂಡ್‌ನ ಈ ದೌರ್ಜನ್ಯಕ್ಕೆ ಪೂರ್ಣವಿರಾಮ ಹಾಕಲು ಒಬ್ಬ ಸಶಕ್ತ, ಸದೃಢ ವ್ಯಕ್ತಿ ಬೇಕಾಗಿತ್ತು. ಸ್ವಯಂಪ್ರೇರಣೆಯಿಂದ ಜನಮನಸ್ಸಿನ ಭಾವನೆಗಳನ್ನು ವ್ಯಕ್ತಗೊಳಿಸಲು ಒಬ್ಬ ತರುಣ ಮುಂದಾದ. ಅವನೇ ದಾಮೋದರ ಚಾಪೇಕರ್.

ಪ್ಲೇಗ್ ಪೂನಾದಲ್ಲಿ ಹಬ್ಬುತ್ತಲೇ ಚಾಪೇಕರ ಮನೆಯವರು ಊರು ಬಿಟ್ಟು ಖಡಕಿಯ ಹತ್ತಿರಕ್ಕೆ ವಲಸೆ ಹೋದರು. ಈ ಊರಿನಲ್ಲಿರುವಾಗ ಚಾಪೇಕರರು ಗುಪ್ತವಾಗಿ ಮದ್ದುಗುಂಡುಗಳನ್ನು ಕೆಲವರ ಸ್ನೇಹ ಮಾಡಿ ಕೊಂಡು ಸಂಗ್ರಹಿಸಿದರು. ತನ್ನ ಮಕ್ಕಳು ಹಗಲಿರುಳೆನ್ನದೆ ಮನೆ ಬಿಟ್ಟು ತಿರುಗಾಡುವುದನ್ನು ತಂದೆ ಹರಿಭಾವು ಗಮನಿಸದೆ ಇರಲಿಲ್ಲ. ಆದರೆ ಮಕ್ಕಳು ಗುಟ್ಟನ್ನು ತಮ್ಮ ಹೆಂಡತಿಯರಿಗೂ ಬಿಟ್ಟು ಕೊಟ್ಟಿರಲಿಲ್ಲ. ಮಕ್ಕಳ ಈ ಓಡಾಟದಿಂದ ಬೇಸರಗೊಂಡ ಹರಿಭಾವು ಪೂನಾಕ್ಕೆ ಮನೆ ಬದಲಾಯಿಸಿದರು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು!

ರ್ಯಾಂಡ್‌ನನ್ನು ಮುಗಿಸುವ ಯೋಜನೆ ಈಗ ಸಿದ್ದವಾಯಿತು. ದಾಮೋದರನ ಜೊತೆಗೆ ತಮ್ಮಂದಿರಾದ ಬಾಳಕೃಷ್ಣ ಮತ್ತು ವಾಸುದೇವ ನೆರಳಿನಂತೆ ನೆರವಾದರು. ಅದರಂತೆಯೇ ರಾನಡೆ, ಅಪ್ಟೆ ಮತ್ತು ಸಾಠೆ. ರ‍್ಯಾಂಡ್‌ನ ಚಲನವಲನಗಳನ್ನು ಪತ್ತೆ ಹಚ್ಚುವುದು ಆರಂಭವಾಯಿತು.

ರ್ಯಾಂಡ್ ಪೂನಾ ಹೋಟೆಲಿನ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದ. ಹೆಂಡತಿ, ಮಕ್ಕಳಿರಲಿಲ್ಲ. ಅವನಿಲ್ಲದ ಸಮಯ ನೋಡಿಕೊಂಡು ಒಮ್ಮೆ ಈ ಸಹೋದರರು ಅವನ ಕೊಠಡಿಯನ್ನು ನೋಡಿಕೊಂಡು ಬಂದರು. ಅವನು ಕುದುರೆ ಸಾರೋಟಿನಲ್ಲೇ ಓಡಾಡುತ್ತಿದ್ದುದು. ಅದರ ಬಣ್ಣ, ಚಲನವಲನ, ಕುದುರೆ ಇವುಗಳೆಲ್ಲವನ್ನೂ ಗೊತ್ತುಮಾಡಿ ಕೊಂಡರು.

ಚಾಪೇಕರರಿಗೆ ರ‍್ಯಾಂಡನನ್ನು ಕೊಲ್ಲುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಅನೇಕ ಕೊಲೆ ಬೆದರಿಕೆಗಳು ಅವನಿಗೆ ಈಗಾಗಲೇ ಬಂದಿದ್ದ ಕಾರಣ ಈ ಮಹಾಶಯ ಬಲು ಹುಷಾರ್‌! ಸದಾ ಕೆಲವು ಅಂಗರಕ್ಷಕರು ಅವನೊಡನೆ. ರಾತ್ರಿ ೯ ಘಂಟೆ ಒಳಗೇ ಕೊಠಡಿ ಸೇರುತ್ತಿದ್ದ. ಆದರೂ ಅವನನ್ನು ಕೊಲ್ಲಲು ಅನೇಕ ಸಾರಿ ಪ್ರಯತ್ನಗಳು ನಡೆದವು; ಆದರೆ ವಿಫಲವಾಗಿದ್ದವು.

ಚಾಪೇಕರರು ಒಂದು ಸಾರಿ ರ‍್ಯಾಂಡ್‌ನನ್ನು ಹಿಡಿಯಲು ಉಪಾಯವೊಂದನ್ನು ಹೂಡಿದರು. ಹಳೆಯ ಮನೆ ಯೊಂದರಲ್ಲಿ ಪ್ಲೇಗ್ ಇಲಿಗಳು ಬಿದ್ದಿವೆಯೆಂಬ ಸುಳ್ಳುಸುದ್ದಿ ಕೊಟ್ಟರು. ಅಲ್ಲಿಗೆ ಸಶಸ್ತ್ರರಾಗಿ ಹೋಗಿ ಕಾದರು. ಆದರೆ ರ‍್ಯಾಂಡ್‌ಆ ದಿನ ಅಲ್ಲಿಗೆ ಬರಲೇಬೇಡವೇ? ಚಾಪೇಕರರು ಬಂದೂಕನ್ನು ಹಿಡಿದು ಮತ್ತೊಂದು ಕಡೆ ಕಾದರು. ಸುತ್ತಲೂ ಅಂಗರಕ್ಷಕರಿದ್ದುದರಿಂದ ರ‍್ಯಾಂಡ್ ಬದುಕಿಕೊಂಡ. ಕಬ್ಬಿಣದ ಸಲಾಕಿ ಹಿಡಿದುಕೊಂಡು ಇನ್ನೊಂದು ಕಡೆ ಕಾಯುತ್ತ ಕುಳಿತರು. ಪೊಲೀಸ ಒಬ್ಬ ಬಂದದ್ದರಿಂದ ಅಲ್ಲಿಂದ ಜಿಗಿದು ಓಡಿದರು. ಚರ್ಚಿನ ಹತ್ತಿರವೂ ಇನ್ನೊಮ್ಮೆ ಕಾದು ವಿಫಲರಾದರು.

ಪ್ಲೇಗ್ ರೋಗವು ಈಗ ಪೂನಾದಲ್ಲಿ ಸ್ವಲ್ಪ ಇಳಿಯತೊಡಗಿತು. ಆದರೆ ಸಶಸ್ತ್ರ ಕಾವಲು ಮಾತ್ರ ಬಿಗಿಯಾಗಿಯೇ ಇತ್ತು. ಒಂದು ಸ್ಮಶಾನದ ಹತ್ತಿರ ಮಾರುತಿಯ ಗುಡಿ. ಸ್ವಲ್ಪ ವಿಶ್ರಾಂಥಿಗಾಗಿ ಸೈನಿಕರು ಅಲ್ಲಿಗೆ ಬರುತ್ತಿದ್ದರು. ಆ ಗುಡಿಯ ಪೂಜಾರಿಯ ಸ್ನೇಹ ಬೆಳೆಸಿ, ಅವನು ಒಂದು ವಾರ ರಜ ತೆಗೆದುಕೊಳ್ಳುವಂತೆ ದಾಮೋದರ ಮಾಡಿದ. ಆತನ ಬದಲು ಇವನೇ ಪೂಜಾರಿ ಆದ. ವಿಶ್ರಮಿಸಲು ಬರುತ್ತಿದ್ದ ಸೈನಿಕರ ಎರಡು ರೈಫಲ್‌ಗಳನ್ನು ಹಾರಿಸಿದ.

ವಜ್ರಮಹೋತ್ಸವ

೧೮೯೭ರ ಜೂನ್ ೨೨. ಬ್ರಿಟಿಷ್ ಸಾಮ್ರಾಜ್ಯದ ಮಹಾರಾಣಿ ವಿಕ್ಟೋರಿಯಾ ಪಟ್ಟಕ್ಕೇರಿದ ವಜ್ರ- ಮಹೋತ್ಸವದ ದಿನ. ಪೂನಾದಲ್ಲೂ ಅದರ ಭವ್ಯ ಸಿದ್ಧತೆಗಳು ಮೊದಲಾದವು. ಮುಂಬಯಿ ರಾಜ್ಯದಲ್ಲಿ ಪ್ಲೇಗ್ ಮಾರಿ, ಕಲ್ಕತ್ತೆಯಲ್ಲಿ ಭೂಕಂಪದ ಹಾವಳಿ, ದೇಶದ ಉಳಿದ ಕಡೆಗಳಲ್ಲಿ ಕ್ಷಾಮದ ಪೀಡೆ– ಹೀಗೆ ಜನಗಳೆಲ್ಲ ಕಷ್ಟದಲ್ಲಿ ಸಿಕ್ಕಿ ನರಳುತ್ತಿರುವಾಗ ಮಹಾರಾಣಿಯಾದಳು ಮೋಜು ಮಾಡಿಸಿಕೊಳ್ಳಬಹುದೇ? ಚಾಪೇಕರರ ಮನಸ್ಸು ರೇಗಿತು. ಅಂದೇ ರ‍್ಯಾಂಡ್ ಮಹಾಶಯನನ್ನು ಮುಗಿಸುವುದೆಂದು ನಿರ್ಧಾರ ಮಾಡಿದರು.

ಮಹಾರಾಣಿಯ ವಜ್ರಮಹೋತ್ಸವದ ದಿನ. ಪೂನಾ ನಗರದಲ್ಲಿ ಗವರ್ನರ‍್ ಸ್ಯಾಂಡ್ ಹರ್ಸ್ಟ್‌‌ನು ಸರ್ಕಾರದ ಪರವಾಗಿ ದೊಡ್ಡ ಮೇಜವಾನಿ ಏರ್ಪಡಿಸಿದ. ಊರಿನ ಪ್ರಮುಖರಿಗೂ ಅಧಿಕಾರಿಗಳಿಗೂ ಅಂದು ಆಮಂತ್ರಣ. ಕಾರ್ಯಕ್ರಮ ಏರ್ಪಾಡಾಗಿದ್ದುದು ಪ್ರೇಕ್ಷಣೀಯವಾದ ಗಣೇಶ ಖಿಂಡಿಯ ಗೌರ್ನಮೆಂಟ್ ಹೌಸಿನಲ್ಲಿ. ವಿಶೇಷ ದೀಪದ ವ್ಯವಸ್ಥೆ. ಪಟಾಕಿಗಳ, ಬಾಣಬಿರುಸುಗಳ ಏರ್ಪಾಡನ್ನು ಮಾಡಲಾಗಿತ್ತು. ಸಮರಾತ್ರಿಯವರೆಗೂ ಸಡಗರ.

ಶಿಕ್ಷೆಯಾಯಿತು.

ಅಂದು ಮಂಗಳವಾರ. ಆ ದಿನ ಪೂರ್ತಿ ಚಾಪೇಕರ ಸಹೋದರರು ಉಪವಾಸ ಮಾಡಿದರು. ದೇವರ ಮನೆಯಲ್ಲಿ ಕುಳಿತು ತಮ್ಮ ಕಾರ್ಯಾಚರಣೆ ನಿರ್ವಿಘ್ನವಾಗಿ  ನಡೆಯಲೆಂದು ಮನಸಾರ ಬೇಡಿಕೊಂಡರು. ಸಂಜೆಯ ಮುಂದೆ ಮನೆ ಬಿಟ್ಟು ಹೊರಟರು.

ದಾಮೋದರ, ಬಾಳಕೃಷ್ಣ ಚಾಪೇಕರರು ಮತ್ತು ರಾನಡೆ, ಆಪ್ಟೆ ಹೊರಟರು. ವಾಸುದೇವ ಬಟ್ಲರನ ವೇಷ ಹಾಕಿಕೊಂಡು  ರ್ಯಾಂಡನ ಬೆನ್ನುಹಿಂದೆಯೇ ತಿರುಗುತ್ತಿದ್ದ. ಉಳಿದವರು ಗೌರ್ನಮೆಂಟ್ ಹೌಸ್‌ನ ಮುಂದಿರುವ ಮುಖ್ಯ ದ್ವಾರಕ್ಕೆ ಹೋಗುವ ದಾರಿಯ ಮರಗಳ ದಟ್ಟ ನೆರಳಿನಲ್ಲಿ ಮರೆಯಾಗಿ ಕುಳಿತುಕೊಂಡರು. ರಾತ್ರಿ ೧೦ ಘಂಟೆ ಸುಮಾರಿಗೆ ವಾಸುದೇವ ಬಂದ. ಮೇಜವಾನಿ ಮುಗಿದು ರ‍್ಯಾಂಡ್ ಹೊರಡುವ ಬಗೆಗೆ ಸೂಚನೆ ಕೊಡುವೆನೆಂದು ಹೇಳಿಗೌರ‍್ನಮೆಂಟ್ ಹೌಸ್‌ಗೆ ಹಿಂತಿರುಗಿದ.

ಸುಮಾರು ಮಧ್ಯರಾತ್ರಿಗೆ ಮೇಜವಾನಿ ಮುಗಿಯಿತು.ಆಯರ್ಸ್ಟ್‌ಎಂಬ ತರುಣ ಅಧಿಕಾರಿ ತನ್ನ ಹೆಂಡತಿಯೊಡನೆ ಬಂದು ಕುದುರೆಗಾಡಿಯಲ್ಲಿ ಕುಳಿತ. ಅವನ ಹಿಂದೆ ಇನ್ನೂ ಕೆಲವು ಇಂಗ್ಲಿಷ್ ಅಧಿಕಾರಿಗಳು ಅವರವರ ಗಾಡಿಗಳಲ್ಲಿ ಕುಳಿತುಕೊಂಡರು. ಆದರೆ ಆಯರ್ಸ್ಟ್‌ಹತ್ತಿ ಹೊರಟ ಕುದುರೆ ಗಾಡಿಯು ನೋಡುವುದಕ್ಕೆ ರ‍್ಯಾಂಡ್‌ನ ಗಾಡಿಯಂತೆಯೇಇತ್ತು. ಅದು ಬರುತ್ತಿದ್ದಂತೆಯೇ ಬಾಳಕೃಷ್ಣನು ರಾನಡೆ ಕೈಯಿಂದ ಬಂದೂಕನ್ನು ತೆಗೆದುಕೊಂಡು ಆ ಗಾಡಿಯ ಹಿಂದೆ ಏರಿ ಆಯರ್ಸ್ಟ್‌‌ನ ತಲೆಗೆ ಸರಿಯಾಗಿ ಗುಂಡು ಹಾರಿಸಿದ. ಪಕ್ಕದಲ್ಲಿದ್ದ ಅವನ ಹೆಂಡತಿ ಬಹಳ ಕತ್ತೆಲ ಇದ್ದುದರಿಂದ ದೊಡ್ಡ ಪಟಾಕಿ ಬಂದು ಬಿತ್ತೆಂದು ತಿಳಿದಳು. “ಈ ನೇಟಿವ್ ಜನರಿಗೆ ಬುದ್ಧಿಯಿಲ್ಲ” ಎಂಬು ಬೈಯತೊಡಗಿದಳು. ಆಗ ಅವಳ ಗಂಡ, “ಓ, ನನಗೆ ಗುಂಡಿನೇಟು” ಎಂದು ಕಿರುಚಿಕೊಂಡು ಕೆಳಗೆ ಬಿದ್ದ. ಜೋರಾಗಿ ಓಡುತ್ತಿದ್ದ ಗಾಡಿಯನ್ನು ನಿಲ್ಲಿಸಲು ಅವಳು ಕೂಗಿಕೊಂಡಳು.

“ಗೋಂದ್ಯಾ ಆಲಾರೇ”- ಎಂಬ ಸಂಕೇತ ವಾಕ್ಯವನ್ನು ವಾಸುದೇವ ಕೂಗುತ್ತಾ ಸೂಚನೆ ಕೊಟ್ಟ. “ಗೋಂದ್ಯಾ ಆಲಾರೇ! ಗೋಂದ್ಯಾ” – ಪುನಃ ವಾಸುದೇವನ ಧ್ವನಿ. ಸರಿ, ದಾಮೋದರ ಕೂಡಲೇ ಸಿಂಹದಂತೆ ಮುನ್ನುಗಿದ. ರ‍್ಯಾಂಡನ ಗಾಡಿಯನ್ನು ಹಿಂಬದಿಯಿಂದ ಏರಿದ. ರ‍್ಯಾಂಡನ ಬೆನ್ನಿಗೆ ಗುಂಡು ಹಾರಿಸಿದವನೇ ಕೆಳಗೆ ಧುಮುಕಿ ಕತ್ತಲಲ್ಲಿ ಮಾಯವಾದ.

ಗಾಡಿಗಳು ನಿಂತವು. ರ‍್ಯಾಂಡ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆಯರ್ಸ್ಟ್‌‌ನ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಮೂವರನ್ನೂ ಆಸ್ಪತ್ರೆಗೆ ಸೇರಿಸಿದರು. ಆರ್ಯಸ್ಟ್ ಕೆಲವು ಗಂಟಗಳಲ್ಲೇ ಸತ್ತ. ರ‍್ಯಾಮಡ್ ಮಾತ್ರ ಪ್ರಜ್ಞಾಶೂನ್ಯವಾಗಿ ೮-೧೦ ದಿನಗಳವರೆಗೂ ಒದ್ದಾಡಿ ಕೊನೆಗೆ ಜುಲೈ ೩ರಂದು ಅಸುನೀಗಿದ. ದೇವರೇ ರ‍್ಯಾಂಡ್‌ನಿಗೆ ಹೀಗೆ ಒದ್ದಾಡುವ ಶಿಕ್ಷೆ ನೀಡಿದ ಎಂದು ಪೂನಾ ಜನ ಅಂದುಕೊಂಡರು.

ಚಾಪೇಕರರಿಗೆ ಅವರ ಕೆಲಸ ಸಫಲವಾದ್ದಕ್ಕೆ ಆನಂದ ದಿಂದ ರಾತ್ರಿಯೆಲ್ಲ ನಿದ್ರೆಯೇ ಹತ್ತಲಿಲ್ಲ.

ದ್ರೋಹ

ಆಯರ್ಸ್ಟ್‌ ಮತ್ತು ರ್ಯಾಂಡ್ ವಧೆ ಸುದ್ದಿ ಎಲ್ಲ ಕಡೆ ಹರಡಿತು. ಆಬಾಲವೃದ್ಧರಾದಿಯಾಗಿ ಸಮಸ್ತ ವರ್ಗದ ಜನಗಳಿಗೂ ತುಂಬ ಆನಂದ. ಎಲ್ಲೆಲ್ಲೂ ಪೊಲೀಸರ ಸರ್ಪಗಾವಲು. ಕೊಲೆಗಡುಕರಿಗಾಗಿ ಹುಡುಕಾಟ. ಪೊಲೀಸರು ಕಂಡಕಂಡವರನ್ನೆಲ್ಲಾ ಹಿಡಿದು ಹಿಂಸಿಸಲು ಪ್ರಾರಂಭಿಸಿದರು. ಇದರ ವಿರುದ್ಧ ತಿಲಕರ ಲೇಖನಿಕೇಸರಿ ಪತ್ರಿಕೆಯಲ್ಲಿ ಝಳಪಿಸಿತು. ಕೊಲೆಗಾರರನ್ನು ಹಿಡಿದು ಕೊಟ್ಟವರಿಗೆ ಸಾವಿರ ರೂ ಬಹುಮಾನವನ್ನೂ ಸರ್ಕಾರ ಸಾರಿತು. ಆದರೆ ಯಾವ ಪತ್ತೆಯೂ ಆಗಲಿಲ್ಲ. ತಿಂಗಳುಗಳು ಉರುಳಿದವು. ಸರ್ಕಾರಕ್ಕೆ ತಿಲಕರ ಮೇಲೆ ಅನುಮಾನವಿದ್ದರೂ ಪುರಾವೆಯೆಲ್ಲಿ?

ಸರ್ಕಾರವು ತಿಲಕರಿಗೆ ಪರಿಚಯವಿದ್ದ ಬ್ರೆವಿನ್ ಎಂಬ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿತು.

ಚಾಪೇಕರರ ಜೊತೆಗಾರನಾಗಿದ್ದ ಗಣೇಶ ಶಂಕರ ದ್ರವಿಡ್ ಬ್ರೆವಿನ್ನಿನ ಪ್ರಚೋದನೆಯಿಂದ ೨೦ ಸಹಸ್ರ ರೂ. ಗಳ ಆಸೆಗೆ ಬಲಿಬಿದ್ದ. ಚಾಪೇಕರ‍್ ಕ್ಲಬ್‌ನ ಕೆಲವು ಮಾಹಿತಿಗಳನ್ನು ನೀಡಿದ. ರಾನಡೆ, ಸಾಠೆ ಮುಂತಾದ ವರ ಹೆಸರುಗಳನ್ನು ಹೇಳಿದ. ಸೆಪ್ಟೆಂಬರ‍್ ೩೦ರಂದು ದಾಮೋದರನನ್ನು ಮುಂಬಯಿಯಲ್ಲಿ ಬಂಧಿಸಿ ಪೂನಾಕ್ಕೆ ತರಲಾಯಿತು. ಇಂಗ್ಲಿಷ್ ಪತ್ರಿಕೆಗಳು ಈ ಜೋಡಿ ಕೊಲೆಗಳ ಬಗ್ಗೆ ವಿಷ ಕಾರಿದವು. ಲೋಕಮಾನ್ಯ ತಿಲಕರನ್ನು ಜುಲೈ ೨೭ರಂದು ಮುಂಬೈಗೆ ಹೋಗುವ ಮಾರ್ಗದಲ್ಲಿ ಬಂಧಿಸಿದರು.

’ನಿನ್ನ ಬಂಧುಬಳಗಕ್ಕೆ ಸಂದೇಶವೇನು?’

ಬಾಳಕೃಷ್ಣ, ವಾಸುದೇವ, ರಾನಡೆ ತಲೆತಪ್ಪಿಸಿ ಕೊಂಡಿದ್ದರು. ದಾಮೋದರನೇ ಕೊಂದನೆಂದು ಹೇಳಲು ಏನೂ ಸಾಕ್ಷಿಗಳಿರಲಿಲ್ಲ. ಆದರೂ ಬ್ರಿಟಿಷ್ ಸರ್ಕಾರ ನ್ಯಾಯದ ನಾಟಕ ಆಡಿತು. ದಾಮೋದರ ಚಾಪೇಕರನಿಗೆ ಮರಣದಂಡನೆ ವಿಧಿಸಲ್ಪಟ್ಟಿತು. ತೀರ್ಪನ್ನು ಕೇಳಿ, “ಇದಕ್ಕಿಂತ ಹೆಚ್ಚಿನ ಶಿಕ್ಷೆ ಏನೂ ಇಲ್ಲವೇ?” ಎಂದು ಕಿಕ್ಕಿರಿದು ತುಂಬಿದ ಕೋರ್ಟಿನಲ್ಲಿ ದಾಮೋದರ ಕೇಳಿದ.

ದಾಮೋದರನನ್ನು ಕಾನೂನು ಪ್ರಕಾರ ಉಳಿಸುವ ಪ್ರಯತ್ನಗಳೆಲ್ಲ ವಿಫಲವಾದವು.

೧೮೯೮ರಲ್ಲಿ ಏಪ್ರಿಲ್ ೧೮ರಂದು ದಾಮೋದರನನ್ನು ನೇಣಿಗೆ ಹಾಕುವ ದಿನ. ತನ್ನ ಕೊನೆ ಇಚ್ಛೆಯಾಗಿ ಸೆರೆಮನೆಯಲ್ಲಿದ್ದ ತಿಲಕರನ್ನು ದರ್ಶನ ಮಾಡಲು ಬಯಸಿದ. “ನಾನು ಸಾವಿಗಾಗಿ ಕಾಯುತ್ತಿದ್ದೇನೆ. ನಿಮ್ಮ ಕೈಯಿಂದ ಭಗವದ್ಗೀತೆಯ ಪ್ರತಿಯೊಂದನ್ನು ಕೊಡಿ” ಎಂದು ಪ್ರಾರ್ಥಿಸಿದ. ಅಧಿಕಾರಿಗಳ ಒಪ್ಪಿಗೆ ಪ್ರಕಾರ ತಿಲಕರು ತಮ್ಮ ಸಹಿ ಮಾಡಿದ ಒಂದು ಭಗವದ್ಗೀತೆಯನ್ನು ಅವನಿಗೆ ಕೊಟ್ಟರು.

ಗಲ್ಲಿಗೆ ಹಾಕುವ ಹಿಂದಿನ ದಿನ ದಾಮೋದರ ಪೂರ್ಣ ಉಪವಾಸ ಮಾಡಿದ. ಪ್ರಾರ್ಥನೆ, ಮಂತ್ರಪಠಣಗಳಲ್ಲಿ ಇಡೀ ದಿನ ಕಳೆದ. ಅಂದು ರಾತ್ರಿ ಹಿಂದೆಂದೂ ಮಾಡದಷ್ಟು ಸುಖನಿದ್ರೆ ಮಾಡಿದ. ಗಲ್ಲಿಗೆ ಹಾಕುವ ದಿನ ಅವನನ್ನು ಎಬ್ಬಿಸುವುದೇ ಕಷ್ಟವಾಯಿತು. ಸೆರೆಮನೆ ಬ್ರಿಟಿಷ್ ಅಧಿಕಾರಿ ಗಲ್ಲಿಗೆ ಹಾಕಲು ಅರ್ಧಗಂಟೆ ತಡವಾಗಿ ಬಂದ. ದಾಮೋದರ ನಗುನಗುತ್ತಾ “ಇಂಗ್ಲಿಷರ ಸಮಯಪಾಲನೆ, ನಿಯಮ ಪಾಲನೆ ಎಲ್ಲಿ ಹೋಯಿತು?” ಎಂದು ತಮಾಷೆ ಮಾಡಿದ. ಅಲ್ಲಿದ್ದ ಪತ್ರಕರ್ತರು ಆಶ್ಚರ್ಯಚಕಿತರಾದರು.

“ನಿನ್ನ ಬಂಧುಬಳಗದವರಿಗೆ ನಿನ್ನ ಸಂದೇಶವೇನು?”

“ನಗುತ್ತಾ ನೇಣುಗಂಬ ಏರಿದೆನೆಂದು ಹೇಳಿ” ಎಂದ ದಾಮೋದರ.

ಇನ್ನೇನು ಗಲ್ಲಿನ ಹಲಗೆ ಏರುತ್ತಿರುವಾಗ ದಾಮೋದರನು, “ನಾರಾಯಣ, ನಾರಾಯಣ, ಜಯ ಗೋಪಾಲ ಹರಿ” ಎನ್ನುತ್ತಾ ಒಂದು ಗೀತಾ ಶ್ಲೋಕವನ್ನು ಹೇಲುತ್ತಾ, ಯಾರ ಸಹಾಯವೂ ಇಲ್ಲದೆ ನೇಣು ಮೆಟ್ಟಿಲನ್ನು ಏರಿ ನಿಂತನು. ಕುತ್ತಿಗೆಗೆ ನೇಣು ಬಿದ್ದರೂ ಮಂತ್ರಧ್ವನಿ ಅವನ ಬಾಯಿಂದ ಹೊರಡುತ್ತಾ ಕ್ಷೀಣವಾಗಿ ಸುತ್ತಲಿದ್ದವರಿಗೆ ಕೇಳುತ್ತಲೇ ಇತ್ತು. ಕೊನೆಗೆ ಪ್ರಾಣಪಕ್ಷಿ ಹಾರಿಹೋಯಿತು. ಕೈಯಲ್ಲಿದ್ದ ಭಗವದ್ಗೀತೆಯನ್ನು ಕಿತ್ತು ತೆಗೆಯಬೇಕಾಯಿತು!

ಮೊಟ್ಟ ಮೊದಲು ಬಾರಿಗೆ ಶ್ರೀಭಗವದ್ಗೀತೆಯನ್ನು ಇಂಥ ರಾಜಕೀಯ ಹೋರಾಟದಲ್ಲಿ ಬಳಸಿಕೊಂಡವರೇ ಚಾಪೇಕರರು” ಎಂದು ಉದ್ಗಾರ ತೆಗೆದರು ಪಂಜಾಬ ಕೇಸರಿ ಲಾಲ ಲಜಪತರಾಯರು.

ಗಲ್ಲಿಗೆ ಹೋಗುವ ಮೊದಲು ದಾಮೋದರ, ತನ್ನ ತಂದೆಗೆ ಒಂದು ಪತ್ರ ಬರೆದ. ತಾನು ಮಾಡಿದ ಕಾರ್ಯಕ್ಕೆ ಬೈಯ್ಯಬಾರದೆಂದೂ ಆರ್ಶೀವದಿಸಬೇಕೆಂದೂ ಮದುವೆಯ ಮೆರವಣಿಗೆಗಿಂತಲೂ ಈ ಸಾವಿನ ಮೆರವಣಿಗೆ ಹೆಚ್ಚಿನದೆಂದೂ ಮುಂದಿನ ಜನ್ಮದಲ್ಲಿ ಅವರೇ ತಂದೆ ತಾಯಿಯಗಳಾಗಿ-ರಬೇಕೆಂದೂ ಕಳಕಳಿಯಿಂದ ಬರೆದಿದ್ದ.

ಬಾಳಕೃಷ್ಣ ಚಾಪೇಕರನು ಇನ್ನೂ ಪತ್ತೆಯಾಗಿರಲಿಲ್ಲ. ತಲೆಮರೆಸಿಕೊಂಡು ವಿವಿಧ ವೇಷಗಳಲ್ಲಿ ಓಡಾಡುತ್ತಿದ್ದ. ನಿಜಾಮನ ಸಂಸ್ಥಾನವನ್ನೂ ಹೊಕ್ಕ. ಕಾಡುಮೇಡುಗಳನ್ನು ಸುತ್ತುತ್ತಾ ಅಲೆದ. ಕೊನೆಗೆ ಪೊಲೀಸರ ಕೈಗೆ ತಾನಾಗಿ ಸಿಕ್ಕಿಬಿದ್ದ.

ವಾಸುದೇವ ಚಾಪೇಕರನನ್ನೂ ಮತ್ತು ರಾನಡೆಯನ್ನೂ ಪೊಲೀಸರು ಬಂಧಿಸಿರಲಿಲ್ಲ. ದ್ರೋಹಿಗಳಾದ ದ್ರವಿಡ ಬಂಧುಗಳು ಇವರುಗಳ ಬಗೆಗೆ ಹೆಚ್ಚಾಗಿ ದೂರು ಕೊಟ್ಟಿರಲಿಲ್ಲ. ಪೊಲೀಸರ ಹತ್ತಿರ ಸಾಕಷ್ಟು ಮಾಹಿತಿಯೂ ಇರಲಿಲ್ಲ.

ಬಾಳಕೃಷ್ಣನು ಆಯರ್ಸ್ಟ್‌‌ನನ್ನು ಕೊಂದ ಆಪಾದನೆಗೆ ಗುರಿಯಾಗಿದ್ದ.

ದೇಶದ್ರೋಹಿಗಳಿಗೆ ಶಾಸ್ತಿ

ದಾಮೋದರ ಮತ್ತು ಬಾಳಕೃಷ್ಣರ ಬಂಧನಕ್ಕೆ ಕಾರಣರಾದ ದ್ರವಿಡ ಬಂಧುಗಳಿಗೆ ತಕ್ಕ ಬುದ್ಧಿ ಕಲಿಸಲು ವಾಸುದೇವ ಮತ್ತು ಸಾಠೆ ನಿಶ್ಚಯಿಸಿದರು. ಒಂದು ರಾತ್ರಿ ಸುಮಾರು ೮-೩೦ ಗಂಟೆಗೆ ದ್ರವಿಡ ಬಂಧುಗಳ ಮನೆಗೆ, ಪಂಜಾಬಿಗಳಂತೆ ವೇಷ ಧರಿಸಿ, ವಾಸುದೇವ, ಸಾಠೆ ಮತ್ತು ರಾನಡೆ ಹೋದರು.

ಪೊಲೀಸ್ ಅಧಿಕಾರಿಗಳು ಅವರುಗಳನ್ನು ಕರೆತರಲು ಹೇಳಿದ್ದಾರೆಂದು ತಿಳಿಸಿದರು. ಇಸ್ಟೀಟ್ ಆಟ ಆಡುವುದರಲ್ಲಿ ಮಗ್ನರಾಗಿದ್ದ ದ್ರವಿಡ ಬಂಧುಗಳು ಇಷ್ಟವಿಲ್ಲದಿದ್ದರೂ ಅವರೊಡನೆ ಮನೆಯಿಂದ ಈಚೆಗೆ ಬಂದರು. ಅವರ ಮನೆಯಿಂದ ನೂರು ಗಜದಷ್ಟು ದೂರ ಸಾಗಿಬಂದಿರಲಿಲ್ಲ. ’ಢಮಾರ್‌’ಶಬ್ಧ! ರಕ್ತದ ಮಡುವಿನಲ್ಲಿ ದ್ರೋಹಿಗಳಿಬ್ಬರೂ ಸತ್ತುಬಿದ್ದಿದ್ದರು. “ಕೊಲೆ, ಕೊಲೆ” ಎಂದು ಕೂಗುತ್ತ ಜನ ಸೇರಿದರು. ವಾಸುದೇವ, ರಾನಡೆ ಮತ್ತು ಸಾಠೆ ಮಾಯವಾಗಿದ್ದರು. ದೇಶದ್ರೋಹಿಗಳಿಗೆ ತಕ್ಕ ಶಾಸ್ತಿ ಮಾಡುವುದನ್ನು ಭಾರತದ ಕ್ರಾಂತಿಕಾರಿ ಇತಿಹಾಸದಲ್ಲಿ ಆರಂಭಿಸಿದವರೇ ಇವರು.

ಪೂನಾ ನಗರದಲ್ಲಿ ಪೊಲೀಸ್ ರಾಜ್ಯ ತಾಂಡವವಾಡಿತು. ಎಲ್ಲೆಲ್ಲೂ ಭಯ. ಪೊಲೀಸ್ ದೌರ್ಜನ್ಯ. ಕೊಲೆಗಾರರಿಗಾಗಿ ಹುಡುಕಾಟ.

’ಒಟ್ಟಿಗೆ ಗಲ್ಲಿಗೆ ಹಾಕಿ’

ಈ ಎರಡನೇ ಬಾರಿಯ ಜೋಡಿಕೊಲೆಯನ್ನು ಕಂಡು ಹಿಡಿಯಲು ಪೊಲೀಸರು ಸರ್ವಸಾಹಸ ಮಾಡಿದರು.

ಪೊಲೀಸರು ಪ್ರಶ್ನಿಸುತ್ತಿದ್ದಾಗ ವಾಸುದೇವ ತಾನೇ ದ್ರವಿಡರನ್ನು ಕೊಂದೆನೆಂದು ಧೈರ್ಯವಾಗಿ ಹೇಳಿದ. ತನ್ನ ಅಣ್ಣ ದಾಮೋದರನಿಗೆ ದ್ರೋಹ ಮಾಡಿದ್ದರ ಸೇಡು ತೀರಿಸಿಕೊಳ್ಳಲು ಕೊಲೆಮಾಡಿದೆನೆಂದ. ತನ್ನ ಇನ್ನೊಬ್ಬ ಅಣ್ಣ ಬಾಳಕೃಷ್ಣನೊಡನೆ ತಾನೂ ಗಲ್ಲುಗಂಬಕ್ಕೇರುವೆನೆಂದು ಹೇಳಿದ. ವಾಸುದೇವ ಮತ್ತು ರಾನಡೆ ಇಬ್ಬರಿಗೂ ಮರಣದಂಡನೆ ವಿಧಿಸಲ್ಪಟ್ಟಿತು. ಜೊತೆಗಿದ್ದ ಸಾಠೆಗೆ ಏಳು ವರ್ಷ ಜೈಲುವಾಸ ಶಿಕ್ಷೆ.

ಬಾಳಕೃಷ್ಣನಿಗೂ ವಾಸುದೇವ ಮತ್ತು ರಾನಡೆಯೊಡನೆ ಗಲ್ಲುಶಿಕ್ಷೆ. ಬಾಳಕೃಷ್ಣ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದ. “ತನ್ನನ್ನು ತಮ್ಮ ವಾಸುದೇವನ ಜೊತೆಗೇ ನೇಣುಹಾಕಬೇಕು. ಆಗಲೇ ತನಗೆ ಸಮಾಧಾನ”. ರಾನಡೆಯೂ ಅದೇ ರೀತಿ ಇಚ್ಛೆ ವ್ಯಕ್ತಪಡಿಸಿದ. “ಮೂವರನ್ನೂ ಒಟ್ಟಿಗೆ ಗಲ್ಲಿಗೆ ಹಾಕಿ, ಹೇಗಿದ್ದರೂ ಮೂರು ಕುಣಿಕೆಗಳಿರುತ್ತವೆ. ಜೈಲು ಅಧಿಕಾರಿಗಳಿಗೆ ವ್ಯವಸ್ಥೆಯ ತೊಂದರೆಯೂ ತಪ್ಪುತ್ತದೆ”.

೧೮೯೯ ಮೇ ೮ರಂದು ವಾಸುದೇವನನ್ನು ಗಲ್ಲಿಗೆ ಹಾಕುವ ದಿನ. ಕೈಯಲ್ಲಿ ಭಗವದ್ಗೀತೆ ಹಿಡಿದು ವಧಾಸ್ಥಾನಕ್ಕೆ ಹೊರಟ. ದಾರಿಯಲ್ಲಿ ಅಣ್ಣನಾದ ಬಾಳಕೃಷ್ಣನ ಕೊಠಡಿ. “ಬಾಪೂ, ನಾನು ಹೋಗುತ್ತೇನೆ” ಎಂದ ವಾಸುದೇವ. “ಹೋಗಿ ಬಾ” ಎಂದು ಬಾಳಕೃಷ್ಣ ಬಾಯ್ತುಂಬ ಹರಸಿದ. ವಾಸುದೇವನನ್ನು ಗಲ್ಲಿಗೆ ಹಾಕಿದಾಗ ದಾಮೋದರನ ಧೀರಗಂಭೀರ ದೃಶ್ಯವೇ ಕಣ್ಣಿಗೆ ಕಟ್ಟುವಂತಿತ್ತು.

ದಿನಾಂಕ ೧೦-೫-೧೮೯೯ ರಾನಡೆ ಸರದಿ. “ಬಾಳಾ, ನಾನೂ ಹೊರಟೆ” ಎಂದು ಬಾಳಕೃಷ್ಣನ ಕೋಣೆಯ ಹತ್ತಿರ ಬಂದಾಗ ನುಡಿದ. ಆಗ ಬಾಳಕೃಷ್ಣ, “ನಾನೂ ಇನ್ನೆರಡು ದಿನಗಳಲ್ಲಿ ಬರುವೆ, ಸ್ವಾಗತಕ್ಕೆ ಸಿದ್ಧಮಾಡುವೆಯಲ್ಲವೆ?” ಎಂದ!

ದಿನಾಂಕ ೧೨-೫-೧೮೯೯ ಬಾಳಕೃಷ್ಣ ಫಾಸಿ ಏರಿದ.

ಚಾಪೇಕರ್ ಸಹೋದರರ ಮತ್ತು ರಾನಡೆಯು ಅವಸಾನ ನಿರ್ವಿಘ್ನವಾಗಿ ನಡೆಯಿತು.!

ಬಲಿದಾನ ವ್ಯರ್ಥವಾಗುವುದಿಲ್ಲ

ಭಾರತ ಸ್ವಾತಂತ್ರ‍್ಯ ಗಳಿಕೆಯ ಯಜ್ಞಕುಂಡಕ್ಕೆ ಚಾಪೇಕರ‍್ ಸಹೋದರರು ತಮ್ಮ ಬದುಕನ್ನು ಸಮಿತ್ತಿನಂತೆ ಅರ್ಪಿಸಿದರು. ಅವರ ಈ ಕಾರ್ಯದಿಂದ ಸ್ಫೂರ್ತಿಗೊಂಡ ಸಾವರ್‌ಕರ‍್ ಸಹೋದರರೂ ಚಾಪೇಕರರು ಉರಿಸಿದ ಯಜ್ಞಕುಂಡವನ್ನು ತಮ್ಮ ಬಲಿದಾನಗಳಿಂದ ಬೆಳಗಿದರು. “ನಾವು ಮೂವರ ಬದಲು ಏಳು ಸಹೋದರರಿದ್ದರೂ ಈ ಯಜ್ಞಕುಂಡದಲ್ಲಿ ಹಾಕಿಕೊಳ್ಳುತ್ತಿದ್ದೆವು. ಅದನ್ನು ಇನ್ನೂ ಪ್ರಜ್ವಲಿತಗೊಳಿಸುತ್ತಿದ್ದೆವು” ಎಂದು ಸಾವರ್‌ಕರ್‌ರು ಸೆರೆಮನೆಯಿಂದ ಬರೆದರು.

ಬಾಪೂ ನಾನು ಹೋಗುತ್ತೇನೆ’

“ಹುತಾತ್ಮರ ಬಲಿದಾನ ಎಂದೂ ವ್ಯರ್ಥವಾಗುವುದಿಲ್ಲ”- ಅಲ್ಲವೆ? ದೇಶ ಬೇರೆ ಬೇರೆ ರೂಪದಲ್ಲಿ ಸಿಡಿದೆದ್ದಿತು.

ನಿಜ,ಮಗೂ- ಫಡಕೆ, ಚಾಪೇಕರ‍್, ಸಾವರಕರ‍್, ಧಿಂಗ್ರಾ, ಖುದಿರಾಮ್, ಭಗತ್‌ಸಿಂಗ್, ಆಜಾದ್, ತಿಲಕ್, ಗಾಂಧೀಜಿ, ಹೆಡಗೆವಾರ‍್ ಮುಂತಾದ ಗೊತ್ತಿರುವ, ಗೊತ್ತಿಲ್ಲದಿರುವ ಅನಂದ ದೇಶಭಕ್ತರ ತ್ಯಾಗ, ಹೋರಾಟ, ಬಲಿದಾನಗಳಿಂದ ಬ್ರಿಟಿಷರು ಗಂಟುಮೂಟೆ ಕಟ್ಟಿಕೊಂಡು ಭಾರತದ ದಡದಿಂದ ಹೊರಟುಹೋಗಬೇಕಾಯಿತು. ನಾವೀಗ ಸ್ವತಂತ್ರರು. ನಾವು ಎಲ್ಲರಿಗೂ ಸರಿಸಮಾನರು. ಭಾರತ ಭಾಗ್ಯವಿಧಾತರು.