ಚಾಮರಾಜನಗರವು ಜಿಲ್ಲಾ ಕೇಂದ್ರವೂ ಹಾಗೂ ತಾಲೂಕು ಕೇಂದ್ರವೂ ಆಗಿದೆ. ಚಾಮರಾಜನಗರ ತಾಲೂಕಿನ ಪಶ್ಚಿಮ ಮತ್ತು ದಕ್ಷಿಣ ಪ್ರದೇಶವು ಎತ್ತರವಾಗಿದ್ದು ಮಧ್ಯ ಮತ್ತು ಉತ್ತರ ಭಾಗವು ತಗ್ಗಾಗಿದೆ. ಪೂರ್ವದಲ್ಲಿ ಬಿಳಿಗಿರಿರಂಗನ ಬೆಟ್ಟವನ್ನು ದಕ್ಷಿಣದಲ್ಲಿ ತಮಿಳುನಾಡು, ಪಶ್ಚಿಮದಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡು ತಾಲೂಕು ಉತ್ತರದಲ್ಲಿ ನರಸೀಪುರ ಮತ್ತು ಯಳಂದೂರು ತಾಲೂಕಿನ ಮಧ್ಯದಲ್ಲಿದೆ.

೧೮೧೮ರವರೆಗೂ ಈ ಊರಿಗೆ ಅರಿಕುಠಾರ ಎಂಬ ಹೆಸರಿತ್ತು. ಮೈಸೂರು ಅರಸು ಮನೆತನದ ಚಾಮರಾಜ ಒಡೆಯರ್ ಜನಿಸಿದ್ದರಿಂದ ಅವರ ನೆನಪಿಗಾಗಿ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಚಾಮರಾಜನಗರ ಪಟ್ಟಣದಲ್ಲಿ ೧೮೩೮ರಲ್ಲಿ ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯವು ಜನನ ಮಂಟಪ, ಜೈನ ಬಸದಿಗಳು, ವೀರಭದ್ರೇಶ್ವರ ದೇವಾಲಯ ಹೊಂದಿದೆ. ಇದೊಂದು ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವು ಆಗಿದೆ.

ಚಾಮರಾಜನಗರ ತಾಲೂಕಿನಲ್ಲಿ ೫ ಹೋಬಳಿಗಳಿದ್ದು, ೨೨೦ ಜನವಸತಿ ಪ್ರದೇಶಗಳನ್ನು ಹೊಂದಿದೆ.

 

ಚಾಮರಾಜೇಶ್ವರ ದೇವಾಲಯ


ಚಾಮರಾಜೇಶ್ವರ ದೇವಾಲಯ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ದೇವಾಲಯ ಸ್ಥಾಪನೆಯಾದದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಒಂದು ಕಾಲದಲ್ಲಿ ಅರಿಕುಠಾರ ಎಂಬ ಗ್ರಾಮವಾಗಿದ್ದು, ಇದು ಚಾಮರಾಜ ಒಡೆಯರ್ ಜನಿಸಿದ್ದರಿಂದ ಚಾಮರಾಜನಗರ ಎಂಬ ಹೆಸರನ್ನು ಪಡೆಯಿತು.

 

ದೇವಾಲಯದ ಮಹಾದ್ವಾರ

ಪೂರ್ವ ದಿಕ್ಕಿಗಿದ್ದು ೫ ಅಂತಸ್ತಿನ ಗೋಪುರವಿದೆ. ತುದಿಯಲ್ಲಿ ೫ ಸುಂದರ ಚಿನ್ನದ ರಂಗಿನ ಕಲಶಗಳಿದ್ದು ಮುಂದೆ ಗರುಡಗಂಬವಿದೆ. ದೇವಾಲಯ ಪ್ರವೇಶ ಮಾಡಿದಾಗ ಈಶ್ವರನಿಗೆ ಮುಖ ಮಾಡಿರುವ ಬೃಹತ್ ನಂದಿ ಇದೆ. ದೇವಾಲಯದ ಪ್ರಕಾರದಲ್ಲಿ ೬೪ ಪುರಾತನ ಭಕ್ತರ ವಿಗ್ರಹಗಳಿವೆ. ಉತ್ತರದಲ್ಲಿ ಈಶ್ವರ ವಿಗ್ರಹ, ಈಶಾನ್ಯದಲ್ಲಿ ಯೋಗಶಾಲೆ, ಆಗ್ನೇಯದಲ್ಲಿ ಪಾಕ ಶಾಲೆಯೂ ಇದೆ.

ಇಲ್ಲಿ ವಾಸ್ತುಶಿಲ್ಪವು ಹೊಯ್ಸಳರ ಕಲೆಯನ್ನು ನೆನಪಿಸುತ್ತವೆ. ಈ ದೇವಾಲಯದ ಒಳಭಾಗದಲ್ಲಿ ಕಂಡು ಬರುವ ಚಿತ್ರಗಳೆಂದರೆ ಗಿರಿಜಾ ಕಲ್ಯಾಣ ಸಮುದ್ರಮಧನ ಮತ್ತು ಚಾಮುಂಡೇಶ್ವರಿ, ಇವು ೧೦೦ ವರ್ಷದ ಹಳೆಯವು. ಇಲ್ಲಿ ಪ್ರತಿವರ್ಷ ಆಷಾಢ ಮಾಸದಲಿ ಆಷಾಡದ ಹುಣ್ಣಿಮೆಯ ದಿನ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ನವದಂಪತಿಗಳು ಹಣ್ಣು ಜವನವನ್ನು ಎಸೆದು ಭಕ್ತಿ ಭಾವ ಮೆರೆಯುವರು.

 

ದೀನ ಬಂಧು

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಿ.ಎಸ್. ಜಯದೇವ್  ಇವರು ದೀನ-ದಲಿತರ ಉದ್ಧಾರಕ್ಕಾಗಿ ಹೆಸರೇ ಸೂಚಿಸುವಂತೆ ದೀನಬಂಧು ಸಂಸ್ಥೆಯನ್ನು ೧೯೯೨ರಲ್ಲಿ ಪ್ರಾರಂಭಿಸಿದರು. ಇದು ಜಿಲ್ಲಾ ಕೇಂದ್ರದಿಂದ ೩ ಕಿ.ಮೀ. ದೂರದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಪಕ್ಕದ ಅರಣ್ಯ ಇಲಾಖೆಯ ನರ್ಸರಿ ಫಾರಂಗೆ ಹೊಂದಿಕೊಂಡಂತೆ ಇದೆ.

ಸಂಸ್ಥಾಪಕರ ಮೆಚ್ಚುಗೆಗೆ ಪಾತ್ರರಾದ ಅನೇಕ ಸಂಘಸಂಸ್ಥೆಗಳು ಮತ್ತು ದಾನಿಗಳ ಉದಾರ ಕೊಡುಗೆಯಿಂದ ೧ ರಿಂದ ೮ನೇ ತರಗತಿಯವರೆಗೆ ಸ್ವಂತ ಕಟ್ಟಡದಲ್ಲಿ “ಸೃಜನಶೀಲ ಕಲಿಕೆ” ತತ್ವದ ಮಾದರಿಯಲ್ಲಿ ನಡೆಯುತ್ತದೆ. ಅನಾಥ ಮಕ್ಕಳ ವಸತಿ ಸಹಿತ ಶಾಲೆ ಗಂಡು ಹೆಣ್ಣು ಮಕ್ಕಳಿಗೆ ದೀನಬಂಧು ಮಕ್ಕಳ ಮನೆ ಎಂಬ ಹೆಸರಿನ ವಸತಿ ಸಹಿತ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿದೆ. ಇದು ಶಿಕ್ಷಕರ ಸಂಪನ್ಮೂಲ ಕೇಂದ್ರ ಹೊಂದಿದ್ದು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಅವಿರತ ಪ್ರಯತ್ನ ನಡೆಸುತ್ತಿದೆ.

 

ಸುವರ್ಣಾವತಿ ಜಲಾಶಯ

ಚಾಮರಾಜನಗರ ತಾಲೂಕಿನ ಜೀವನಾಡಿ ಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ ಗಜ್ಜಲ ಹಟ್ಟಿ ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ. ಕಾವೇರಿ ಕಣಿವೆಗೆ ಸೇರಿದ ಈ ಜಲಾಶಯದ ನೀರಿನ ಸಾಮರ್ಥ್ಯ ೨೫೮,೭೮ ಕ್ಯೂಸೆಕ್ಸ್ ಇದೆ.

ಇದರ ೨ ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿ ಚಿಕ್ಕಹೊಳೆ ಅಣೆಕಟ್ಟು ಇದ್ದು ಇದು ಮಧ್ಯಮಗಾತ್ರದ ಅಣೆಕಟ್ಟು ಆಗಿದೆ. ಈ ಎರಡೂ ಜಲಾಶಯಗಳು ನಿಸರ್ಗದ ಮಡಿಲಲ್ಲಿದ್ದು, ನೀರಾವರಿ, ಮೀನುಗಾರಿಕೆ, ತೋಟಗಾರಿಕೆಗೆ ಪ್ರೋತ್ಸಾಹವಿದೆ.

ಇದು ನೀರಾವರಿ ಇಲಾಖೆಗೆ ಸೇರಿದ್ದು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ. ಜಿಲ್ಲಾ ಕೇಂದ್ರದಿಂದ ೧೮ ಕಿ.ಮೀ. ದೂರದಲ್ಲಿದೆ.

 

ಗಂಗರ ಇತಿಹಾಸ ಬಿಂಬಿಸುವ ನರಸಮಂಗಲ

ಚಾಮರಾಜನಗರದಿಂದ ೨೪ ಕಿ.ಮೀ.

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ನೈರುತ್ಯಕ್ಕೆ ಸುಮಾರು ೨೪ ಕಿ.ಮೀ. ದೂರ ದಲ್ಲಿರುವ ಗ್ರಾಮ ನರಸಮಂಗಲ, ಈ ಸ್ಥಳವು ಪ್ರಾಚೀನ ರಾಮಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗಂಗರ ಕಾಲದಲ್ಲಿ ಅನೇಕ ಸುಂದರ ದೇವಾಲಯ ಮತ್ತು ಬಸದಿಗಳು ನಿರ್ಮಾಣಗೊಂಡವು ಅವುಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ಶಿವಲಿಂಗವು ೬ ಅಡಿ ಎತ್ತರ ೧೨ ಅಡಿಗಳನ್ನು ಸುತ್ತಳತೆ ಹೊಂದಿದೆ.

ಈ ದೇವಾಲಯವು ವಿಶಾಲವಾದ ಗರ್ಭಗೃಹ, ಕಿರಿದಾದ ಸುಖನಾಸಿ ಒಂಭತ್ತು ಅಂಕಣಗಳ ನವರಂಗಗಳಿವೆ. ಮೇಲೆ ವಿಮಾನ ಗೋಪುರವಿದೆ. ಇದು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುವುದು. ಶಿಲ್ಪಗಳು ಬಹು ಸುಂದರ ಕಲಾ ಕೃತಿಗಳಾಗಿವೆ.

ರಾಮಾಯಣ ಮಹಾಭಾರತ ಕಥೆಗೆ ಸಂಬಂಧಪಟ್ಟ ಹಲವಾರು ಸನ್ನಿವೇಷಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದೇವಾಲಯವನ್ನು ಭಾರತ ಸರ್ಕಾರವು ೧೯೫೮ರಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ.

 

ಮಲೆಯೂರಿನ ಕನಕಗಿರಿ

ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ.

ಚಾಮರಾಜನಗರ ಪಶ್ಚಿಮಕ್ಕೆ ೨೫ ಕಿ.ಮೀ. ದೂರದಲ್ಲಿರುವ ಮಲೆಯೂರಿನ ಕನಕಗಿರಿ ಜಗತ್ತಿನ ಸುಪ್ರಸಿದ್ಧ ಜೈನ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಪಶ್ಚಿಮಕ್ಕಿರುವ ಈ ಬೆಟ್ಟದ ಬಂಡೆಗಳ ಮೇಲೆ ಚರಣ ಪಾದುಕೆಗಳು, ಶಿಲಾಶಾಸನಗಳು, ಸಮಾಧಿಮಂಟಪ ಮತ್ತು ಗುಹೆಗಳಿವೆ. ೧೦ನೇ ಶತಮಾನಕ್ಕೆ ಸೇರಿದ ಕನಕಗಿರಿ ಮೇಲಿನ ಪಾರ್ಶ್ವನಾಥ ಬಸದಿ ಅತಿ ಪುರಾತನ ಹಾಗೂ ಸುಂದರ ಬಸದಿಯಾಗಿದೆ. ಈ ಸ್ಥಳದಲ್ಲಿ ನಾಗಾರ್ಜುನನಿಗೆ ಪದ್ಮಾ ವತಿ ಅಮ್ಮನವರು ಲೋಹ ವನ್ನು ಚಿನ್ನ ಮಾಡುವ ವಿದ್ಯೆಯನ್ನು ತಿಳಿಸಿದರು. ಈ ಕಾರಣದಿಂದ ಇದಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ.

ಗಂಗರು ಮತ್ತು ಹೊಯ್ಸಳ ಕಾಲದ ಕಟ್ಟಡಗಳು, ಶಿಲಾಶಾಸನಗಳು ಇಲ್ಲಿ ಕಂಡು ಬರುತ್ತವೆ. ಇಲ್ಲಿನ ಶಿಲಾಶಾಸನಗಳ ಪ್ರಕಾರ ಅಜಿತಮುನಿ ಚಂದ್ರಸೇನಾಚಾರ್ಯ ಮುಂತಾದ ಹಲವರು ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಪಡೆದರೆಂದು ತಿಳಿಯುತ್ತದೆ. ‘ಕಲ್ಯಾಣಕಾರಕ ಚಿಕಿತ್ಸಾಶಾಸ್ತ್ರ” ಗ್ರಂಥ ಬರೆದ ಶ್ರೀ ಪೂಜ್ಯಪಾದರು ಈ ಊರಿನವರು.

ಹರದನ ಹಳ್ಳಿ ದಿವ್ಯಲಿಂಗೇಶ್ವರ ದೇಗುಲ

ಚಾಮರಾಜನಗರದಿಂದ : ೫ ಕಿ.ಮೀ.

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ೫ ಕಿ.ಮೀ. ದೂರದಲ್ಲಿರುವ ಹೋಬಳಿ ಕೇಂದ್ರ ಹರದನ ಹಳ್ಳಿ ಗ್ರಾಮದಲ್ಲಿ ಈ ದೇವಾಲಯವಿದೆ. ಹೊಯ್ಸಳರು, ವಿಜಯನಗರ ಅರಸರು ಮತ್ತು ಮೈಸೂರು ಅರಸರು ಆಳುತ್ತಿದ್ದರು. ಈ ಊರಿನಲ್ಲಿ ಹಿಂದೆ ಕೋಟೆಯಿದ್ದು ಈಗ ಹಾಳಾಗಿದೆ. ಈ ಊರಿಗೆ ಕಳಸಪ್ರಾಯವಾಗಿರುವುದು ದಿವ್ಯ ಲಿಂಗೇಶ್ವರ ದೇವಾಲಯ. ಈ ದೇಗುಲವು ಗೋಪುರ ಮತ್ತು ಗರುಡಗಂಭವನ್ನು ಒಳಗೊಂಡು ಸುಂದರವಾಗಿದೆ. ೧೩ನೇ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳದ ಕಾಲದಲ್ಲಿ ನಿರ್ಮಾಣವಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಕಲಾತ್ಮಕವಾಗಿದೆ. ಇದರಿಂದ ೧೦೫ ಅಡಿ ದೂರದಲ್ಲಿ ನಂದೀಶ್ವರನ ವಿಗ್ರಹವಿದೆ. ಇದೊಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದು ಆಕರ್ಷಿಣಿಯ ಸ್ಥಳವಾಗಿದೆ. ಈ ಗ್ರಾಮವು ಮಹಿಮಾಪುರುಷರಾದ ಎಡೆಯೂರು ಸಿದ್ಧಲಿಂಗೇಶ್ವರ ಜನ್ಮಸ್ಥಳವೂ ಹೌದು.

 

ಬೂದಿ ಪಡಗ

ಚಾಮರಾಜನಗರದಿಂದ ೩೦ ಕಿ.ಮೀ. ದೂರ


ಸುವರ್ಣಾವತಿ ಜಲಾಶಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ಧ ವನ್ಯಜೀವಿ ವಿಶ್ರಾಂತಿಧಾಮ, ಮೈಸೂರು ಮಹಾರಾಜರು – ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ವಸತಿಗೃಹಗಳು ವಿಶಾಲಹುಲ್ಲು ಮೈದಾನ. ಅಮೂಲ್ಯ ವನ್ಯ ಜೀವಿಗಳು, ಬೂದಿಪಡಗದ ವಿಶೇಷಗಳು, ವನ್ಯಜೀವಿ ಛಾಯಾ ಗ್ರಾಹಕರಿಗೆ, ಪ್ರವಾಸಿಗರಿಗೆ ಸಂಶೋಧಕರಿಗೆ ಇದು ಅಚ್ಚುಮೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಬೂದಿಪಡಗ ಬಿಳಿಗಿರ ರಂಗನ ಬೆಟ್ಟ ವನ್ಯ ಜೀವಿಧಾಮದ ಭಾಗವಾಗಿದೆ.

 

ಬೇಡಗುಳಿ

ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ನೀಲಗಿರಿ ಶ್ರೇಣಿಯ ಅಂಜಿನಲ್ಲಿರುವ ಬೇಡಗುಳಿ ಕರ್ನಾಟಕ – ತಮಿಳುನಾಡಿನ ಸೀಮಾರೇಖೆ. ಚಾಮರಾಜನಗರ ದಿಂದ ೫೦ ಕಿ.ಮೀ. ದೂರ ದಲ್ಲಿರುವ ನಿತ್ಯಹರಿದ್ವರ್ಣದ ವನ್ಯಜೀವಿಧಾಮ. ಬೇಡಗುಳಿ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ನರ ಕಾಲದ ಕಾಫಿ ತೋಟಗಳು ವಿಶೇಷಗಳು. ಬೇಡಗುಳಿ ಗಿರಿಜನ ಹಾಡಿಗಳು ಅವರ ಹಾಡುಪಾಡು. ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ಸುಂದರ ಗಿರಿಶ್ರೇಣಿಗಳು ಅದ್ಭುತ ಕಣಿವೆಗಳು ಮನೋಹರ ಜಲಪಾತಗಳು ಆಕರ್ಷಕ. ವನ್ಯಜೀವಿಗಳು ಬೇಡಗುಳಿ ಅರಣ್ಯ ಪ್ರದೇಶದ ವಿಶೇಷ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾಗಿದೆ. ವನ್ಯಜೀವಿ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ.

 

ಜೋಡಿಗೆರೆ


ಜೋಡಿಗೆರೆ ಸೌಂದರ್ಯವನ್ನು ಒಂದೆರಡು ಮಾತಿನಲ್ಲಿ ವರ್ಣಿಸಲಾಗದು. ಇದೊಂದು ಪ್ರಕೃತಿಯ ಅಪ್ರತಿಮ ಕೊಡುಗೆ ನಿಂತು ನೋಡಿದರೆ ನೋಡಿದಷ್ಟು ಆನಂದ. ವಿಶಾಲ ಹುಲ್ಲು ಗಾವಲು. ಶೋಲಾ ಅರಣ್ಯ ಪ್ರದೇಶ. ಮನಬಿಚ್ಚಿ ಓಡಾಡುವ ವನ್ಯಜೀವಿಗಳು ಸುಯ್‌ಗುಡುವ ತಂಗಾಳಿ. ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ. ಜಗತ್ತಿನ ಅಪರೂಪದ ಪ್ರದೇಶವೆಂಬಂತೆ ವನ್ಯಜೀವಿಗಳು ಹುಲ್ಲುಗಾವಲಿನಲ್ಲಿ ಗುಂಪುಗುಂಪಾಗಿ ನಲಿದಾಡುವುದನ್ನು ನೋಡಿದರೆ ಇದೊಂದು ಮಿನಿ ಜುರಾಸಿಕ್ ಪಾರ್ಕ್‌ನಂತೆ ಕಾಣುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೧೬೦೦ ಮೀಟರ್‌ಗಳಷ್ಟು ಎತ್ತರದಲ್ಲಿರುವ ಜೋಡಿಗೆರೆ ಬಿಳಿಗಿರಿ ರಂಗನಬೆಟ್ಟ ವನ್ಯಜೀವಿಧಾಮದ ಒಂದು ಭಾಗವಾಗಿದ್ದು ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ.

 

ಕೆ. ಗುಡಿ (ಕ್ಯಾತೇದೇವರ ಗುಡಿ)

ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ. ಸಮುದ್ರ ಮಟ್ಟದಿಂದ ೧೪೫೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿ ಕರ್ನಾಟಕ ಜಂಗಲ್ ಲಾಡ್ಜ್ ನ ವನ್ಯಜೀವಿ ಪ್ರವಾಸೋದ್ಯಮ ಕೆಲಸ ಮಾಡುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಅರಣ್ಯ ಇಲಾಖೆಯ ಆನೆ ಸಫಾರಿ ಮತ್ತು ವನ್ಯಜೀವಿ ಸಫಾರಿ ಬಹಳ ಪ್ರಸಿದ್ಧ. ಕೆ. ಗುಡಿಗೆ ದೇಶ-ವಿದೇಶಗಳು ಪ್ರವಾಸಿಗರ ಆಗಮನವಿದೆ. ಪ್ರಾಣಿ ಪಕ್ಷಿ, ಪ್ರಕೃತಿ ಸಂಶೋಧಕರಿಗೆ ಮತ್ತು ಪ್ರವಾಸಿಗರಿಗೆ ಕೆ. ಗುಡಿ ರಮ್ಯತಾಣವಾಗಿದ್ದು ಇಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಡವೆ ಈ ಅರಣ್ಯದ ಪ್ರಮುಖ ವನ್ಯಜೀವಿಗಳು.

 

ಬೆಲ್ಲತ್ತ ಪಕ್ಷಿರಾಶಿ

ಚಾಮರಾಜನಗರ ತಾಲ್ಲೋಕಿ ನಲ್ಲಿರುವ ಬೆಲ್ಲತ್ತ ಜಲಾಶಯ ಬಿಳಿಗಿರಿರಂಗನ ಬೆಟ್ಟದ ಕಾಡಂಚಿನಲ್ಲಿದೆ. ಕಾಡಂಚಿಗೆ ತಾಗಿಕೊಂಡಿರುವ ಹಿನ್ನೀರಿ ನಿಂದಾಗಿ ಪ್ರಾಣಿಗಳು ಪಕ್ಷಿಗಳಿಗೆ ಸಮೃದ್ಧ ಪ್ರದೇಶವಾಗಿದೆ. ಈ ಜಲಾಶಯದ ಸುತ್ತ ದೇಶ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ಸಮ್ಮಿಲನವಾಗುತ್ತದೆ. ನಿಸರ್ಗ ಪ್ರಿಯರಿಗೆ ಪಕ್ಷಿ ಛಾಯಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಇದೊಂದು ಉತ್ತಮ ತಾಣವಾಗಿದೆ.