ಲಾವಣಿ ಹಾಡುಗಳಲ್ಲಿ ಎರಡು ವಿಧಗಳು. ಒಂದು ಒಂಟಿ ಲಾವಣಿ, ಇನ್ನೊಂದು ಮೇಳ ಲಾವಣಿ. ಒಂಟಿ ಲಾವಣಿಯಲ್ಲಿ ಒಬ್ಬನೇ ಹಾಡುಗಾರನಿರುತ್ತಾನೆ. ಮೇಳಲಾವಣಿಗಳಲ್ಲಿ ಮೂರು ಜನರಿರುತ್ತಾರೆ. ಈ ಹೊತ್ತಿನ ಸಂದರ್ಭದಲ್ಲಿ ಒಂಟಿ ಲಾವಣಿಗಳು ಬಳಕೆಯಲ್ಲಿಲ್ಲ. ಮೇಳ ಲಾವಣಿಗಳೆ ಎಲ್ಲ ಕಡೆಗೂ ಪ್ರಚಾರ ಪಡೆದಿವೆ. ನನ್ನ ಯೋಜನೆಗೆ ಆಯ್ಕೆ ಮಾಡಿಕೊಂಡಂತಹ ಚಾರಿತ್ರಿಕ ಲಾವಣಿಗಳು ಮೇಲೆ ಗುರುತಿಸಿದ ಒಂಟಿ ಲಾವಣಿ ಮತ್ತು ಮೇಳ ಲಾವಣಿ ಎರಡರಲ್ಲೂ ಹಾಡಬಹುದು. ಇಲ್ಲಿ ಮುಖ್ಯವಾದಂತಹ ವಿಷಯ ತತ್ವ, ನೀತಿ, ಆದರ್ಶ ಮತ್ತು ಘಟನಾವಳಿಗಳಿಗೆ ಸಂಬಂಧಿಸಿದವಾಗಿರುತ್ತವೆ. ಯಾವುದೇ ಕಾಲಕ್ಕಾದರೂ ಸಂಸ್ಕೃತಿ ತನ್ನ ಗುಣಮೌಲ್ಯಗಳನ್ನು ಕಾಪಾಡಿಕೊಂಡು ಬರಲು ಒಂದೊಂದು ಮಾಧ್ಯಮವನ್ನು ಬಳಸಿಕೊಂಡು ಬಂದವು. ಹಾಗೆಯೇ ಅವುಗಳ ಅಂತರಾಳದಲ್ಲಿ ಹುದುಗಿರುವ ಸಾಹಿತ್ಯ, ಕಲೆ, ಗ್ರಾಮೀಣ ಸಂಸ್ಕೃತಿಯ ಅಂತರಂಗದಿಂದಲೆ ಸೃಷ್ಟಿಯಾಗುತ್ತದೆ. ಇಲ್ಲಿಯ ಹಾಡುಗಳಲ್ಲಿ ಕಂಡುಬರುವ ತಾತ್ವಿಕತೆಯನ್ನು ಒಬ್ಬೊಬ್ಬರ ಚರಿತ್ರೆಯ ಹಿನ್ನೆಲೆಯಲ್ಲಿ ಗ್ರಹಿಸಿಕೊಂಡು ನೋಡುವುದಾಗಿದೆ. ಸ್ಥಳೀಯ ಚರಿತ್ರೆ, ಮುಸ್ಲಿಂ ಸಂತರ ಚರಿತ್ರೆಯನ್ನು ಗಮನಿಸುವಾಗ ಭಾರತೀಯ ಸಂಸ್ಕೃತಿಯನ್ನು ಹೇಳುವುದಿಲ್ಲ. ರಕ್ತಪಾತದಂತಹ ಸಾಂದರ್ಭಿಕ ಸೃಷ್ಟಿ ಅಲ್ಲಿ ನಡೆಯುತ್ತದೆ. ಆದರೆ ಅದೇ ಕೊನೆಯದಾಗಿ ಉಳಿಯುವುದಿಲ್ಲ. ಸತ್ಯದ ಬಲಿದಾನವಾಗುವುದಿಲ್ಲ. ಸತ್ಯದ ಜಯವಾಗುತ್ತದೆ. ಹಾಗಾಗಿ ಇಲ್ಲಿಯ ದಾರ್ಶನಿಕರ ಬದುಕು ಚರಿತ್ರೆಯಾಗಿ ಉಳಿಯುತ್ತದೆ.

ಆದಿಯಿಂದ ಇಂದಿನವರೆಗೂ ಪೌರಾಣಿಕ ವ್ಯಕ್ತಿಯೆಂದು ಕರೆಯುವವರ ಚರಿತ್ರೆಯನ್ನು ಲಾವಣಿಕಾರ ಸೂಕ್ಷ್ಮ ಸಂವೇದನೆಯ ಮೂಲಕ ಕಟ್ಟಿಕೊಟ್ಟಿದ್ದಾನೆ. ಅಲ್ಲಿಯೂ ಭಕ್ತಿಗೆ ಪ್ರಾಧಾನ್ಯತೆ ಇದೆ. ದಾರ್ಶನಿಕರ ಕುರಿತು ಹೇಳುವಾಗ ಮಧ್ಯಕಾಲೀನ ಸಂದರ್ಭದ ಶರಣರ ಚರಿತ್ರೆಯ ಆಯ್ಕೆ ಇದೆ. ಒಟ್ಟಾರೆ ಸಂಸ್ಕೃತಿಯ ಚರಿತ್ರೆ ಶಿಷ್ಟದಲ್ಲಿದ್ದರೂ ಅದನ್ನು ಜನಪದರು ಗ್ರಹಿಸುವ ಕ್ರಮದಲ್ಲಿಯೇ ಇಲ್ಲಿಯ ಹಾಡುಗಳು ರಚನೆಗೊಂಡಿರುವುದು ಸ್ಪಷ್ಟವಾಗಿದೆ. ಸಾಮಾಜಿಕ ಚರಿತ್ರೆಯಲ್ಲಿ ಕೌಟುಂಬಿಕ ಜೀವನ ಚಿತ್ರಣ ತೋರಿಸಿದ್ದಾರೆ. ವಿಶೇಷವಾಗಿ ಅಂಬೇಡ್ಕರರ ಕುರಿತು ವಿಶ್ಲೇಷಿಸಿದ್ದಾರೆ. ಇಲ್ಲಿ ಸಂಗ್ರಹಗೊಂಡಂತಹ ಲಾವಣಿಗಳು ಜೀವನದ ವಿವಿಧ ಮುಖಗಳ ದರ್ಶನ ಮಾಡಿಸುತ್ತವೆ. ಜನಪದರು ಇವುಗಳ ಮೂಲಕ ತಮ್ಮ ಬೌದ್ಧಿಕ ಬೆಳವಣಿಗೆಯ ಜೊತೆಗೆ ಚೇತನಾಶಕ್ತಿಯನ್ನು ಪಡೆದುಕೊಂಡಿದ್ದಾರೆ. ಸಾವಿರಾರು ಜನರನ್ನು ಒಂದೇ ಕಡೆ ಕೂಡಿಸಿ ಮನಸ್ಸನ್ನು ತಣಿಸಿ ಮಂತ್ರ ಮುಗ್ಧರನ್ನಾಗಿ ಮಾಡುವ ಸುಮಧುರ ಜಾನಪದ ಸಂಗೀತ ಕಲೆಯೂ. ಕಥನ ಗೀತೆಯೂ ಈ ಚಾರಿತ್ರಿಕ ಲಾವಣಿಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ.

ಸ್ಥಳೀಯ ಚರಿತ್ರೆಯನ್ನು ಹೆಣೆಯುವಾಗ ಹಾಡುಗಾರರು ತಮ್ಮ ಪ್ರತಿಷ್ಠೆಯನ್ನು ಮೆರೆಯುತ್ತಾರೆ. ಕವಿ ಅಥವಾ ಹಾಡುಗಾರರು ಸ್ಥಳೀಯರೆ ಆಗಿರುವುದರಿಂದ ಆ ಮಹಾತ್ಮರ ಮತ್ತು ದಾರ್ಶನಿಕರ ಚರಿತ್ರೆ ಹಾಡು ಕೇಳುಗರಿಗೂ ಸಹ ಗೊತ್ತಿರುವ ಸಂಗತಿಯೇ ಸರಿ. ಹಾಗಾಗಿ ಚರಿತ್ರೆ ಕೇಳುವವರು ಮುಖ್ಯವಾಗಿ ಹಾಡುಗಾರರ ನಿರೂಪಣಾ ಶೈಲಿ, ಕಥೆಯಲ್ಲಿ ಬಳಸುವಂಥಹ ತಂತ್ರ ಎರಡೂ ಮುಖ್ಯವೆ. ಅಲ್ಲದೇ ಆ ಚರಿತ್ರೆ ಹೇಳುವುದರಿಂದ ದೇವರ ಅಥವಾ ಮಹಾತ್ಮರ ಬಗೆಗಿರುವ ಭಕ್ತಿ ಇಮ್ಮಡಿಯಾಗಿಸುವುದು ಕಂಡುಬರುತ್ತದೆ. ಈ ಸಾಂಸ್ಕೃತಿಕ ವೀರರು ಜೀವನ ಚರಿತ್ರೆಯನ್ನು ಹೇಳುವಾಗ ಯಾರಿಗೂ ಕಥೆ ಕೇಳಬೇಕಾದ ಅವಶ್ಯಕತೆ ಇಲ್ಲ. ಇವರ ಕುರಿತಾದ ನಂಬಿಕೆ, ಜನರಲ್ಲಿರುವ ಭಕ್ತಿ ಅವರ ಪವಾಡಸದೃಶ್ಯವಾದ ಜೀವನ ಹೇಳುತ್ತಾನೆ. ಸ್ಥಳೀಯ ಚರಿತ್ರೆಯ ಉದ್ದಕ್ಕೂ ಶರಣಬಸವೇಶ್ವರರ ಕುರಿತಾಗಿಯೇ ಹೇಳಲಾಗಿದೆ. ಈತ ಒಬ್ಬ ಯುಗ ಪುರುಷ, ತಾನು ಶಿವನನ್ನು ಒಲಿಸಿಕೊಳ್ಳಬೇಕಾದರೆ ದೇಹದಂಡನೆ ಮಾಡಲಿಲ್ಲ. ತನ್ನ ದೈವೀಶಕ್ತಿಯ ಮೂಲಕವೆ ಆ ಭಾಗದಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರ, ದರೋಡೆ, ದಬ್ಬಾಳಿಕೆಯಂತಹ ಕೃತ್ಯಗಳನ್ನು ಹತ್ತಿಕ್ಕುತ್ತಾ ಬಂದವನಾಗಿದ್ದಾನೆ.

ಯುಗ, ಧರ್ಮ ಬೇರೆಯಾದಾಗ ಆ ಯುಗದಲ್ಲಿ ಬದುಕಿದ ಜನರ ಅಭಿರುಚಿಗಳು ಸಹಜವಾಗಿ ಬದಲಾಗುತ್ತವೆ. ಇವುಗಳಿಗನುಗುಣವಾಗಿ ಅಭಿವ್ಯಕ್ತಿ ಮಾಧ್ಯಮ ರೂಪುಗೊಳ್ಳುತ್ತದೆ. ಶರಣಬಸವೇಶ್ವರರ ಕುರಿತಾಗಿ ಹೇಳಬೇಕೆಂದರೆ ಆಗ ಜನರು ಸಮಷ್ಠಿಯ ಬದುಕನ್ನೇ ಬದುಕುತ್ತಿದ್ದ ಕಾಲ. ಅಂತಹದರಲ್ಲಿ ಸುಮಾರು ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ, ಯುಗ ಪ್ರವರ್ತಕರು ನಾಡಿನಾದ್ಯಂತ ಕಾಣಿಸಿಕೊಂಡ ಕಾಲವದು. ಗರಗದ ಮಡಿವಾಳ ಶಿವಯೋಗಿಗಳು, ನವಲಗುಂದದ ನಾಗಲಿಂಗಪ್ಪನವರು, ಶಿಶುನಾಳ ಶರೀಫರು, ಹುಬ್ಬಳ್ಳಿಯ ಸಿದ್ಧಾರೂಢರು, ಅಂತವರ ಸಾಲಿನಲ್ಲಿ ಕಾಣಿಸಿಕೊಂಡವರೆ ಕಲಬುರ್ಗಿಯ ಶರಣಬಸವೇಶ್ವರರು. ಆ ವ್ಯಾಪ್ತಿಯ ಯಾವುದೇ ಸ್ಥಳದಲ್ಲಿ ಅತ್ಯಾಚಾರ, ಅನ್ಯಾಯಗಳು ನಡೆದರೆ ಅಲ್ಲಿ ಪರೋಕ್ಷವಾಗಿಯೇ ಸಮಸ್ಯೆಗಳನ್ನು ತಿಳಿಗೊಳಿಸುತ್ತಿದ್ದರೆಂಬ ವದಂತಿ ಇಂದಿಗೂ ಜನಮಾನಸದಿಂದ ಹಿಂದಕ್ಕೆ ಸರಿದಿಲ್ಲ. ಅಂತಹ ಅವರ ಪವಾಡಗಳು ಸಾಹಿತ್ಯದ ರೂಪವಾಗಿ ಹೊರಗೆ ಬಂದವು. ಮೌಖಿಕ ಪರಂಪರೆಯಲ್ಲಿ ಸಾಹಿತ್ಯಕ್ಕಿಂತಲೂ ಅತೀಮಾನುಷ ಶಕ್ತಿಯಾಗಿ ಹಾಡುಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಅವರ ಲೀಲೆಗಳು ಒಂದಲ್ಲ, ಎರಡಲ್ಲ, ಸಾವಿರಾರು. ಅಂತಹ ಲೀಲೆಗಳೇ ಇಲ್ಲಿ ಸಂಗ್ರಹಗೊಂಡಂತಹ ಮೂರು ಹಾಡುಗಳಲ್ಲಿ ಕಾಣಿಸುತ್ತವೆ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಜೀವನವನ್ನು ಬದುಕಿ ತೋರಿಸಿದವರೂ ದಾಸೋಹದ ಮೂಲಕ ಮನುಷ್ಯ, ಪ್ರಾಣಿ, ಪಕ್ಷಿಗಳಾದಿಯಾಗಿ ಜೀವ ಒಂದೇ ಎಂದು ತಿಳಿಸಿದರು. ಮುಸ್ಲಿಂ ಸಂತರ ಜೊತೆಗಿನ ಸಂವಾದವಂತೂ ಹೇಳತೀರದಷ್ಟು ಪರಿಣಾಮಕಾರಿಯಾಗಿ ಹಾಡುಗಳಲ್ಲಿದೆ.ನಾನು ಎಂಬ ಅಹಂಕಾರವನ್ನು ಮೆಟ್ಟಿ ನಿಂತಂತ ಧೀರರ ಚರಿತ್ರೆಯಲ್ಲಿ ಒಂದಾದ ಶರಣ ಬಸವೇಶ್ವರ ಚರಿತ್ರೆ ತುಂಬಾ ಮಾದರಿಯಾಗಿ ಕಂಡುಬರುತ್ತದೆ.

ಮುಸ್ಲಿಮರಲ್ಲಿಯೂ ಶರಣರು ಇದ್ದರು ಎನ್ನುವ ಕಾರಣಕ್ಕಾಗಿಯೇ ನಿಕ್ಕಿ ಜಾಬೀರ, ನಬಿಹಬೀಬ, ಇಬ್ರಾಹಿಂ ಖಲಿಲುಲ್ಲಾ ಅವರ ಚರಿತ್ರೆ ತುಂಬಾ ಮಾರ್ಮಿಕವಾಗಿ ಚಿತ್ರಿತಗೊಂಡಿದೆ. ಅವರಲ್ಲಿರುವ ಭಕ್ತಿಯೇ ಒಂದೊಂದು ಚಾರಿತ್ರಿಕ ಸಂಗತಿಗಳನ್ನು ತಿಳಿಸಿಕೊಡುತ್ತದೆ. ಹಾಗಾಗಿ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡುವುದರ ಮೂಲಕ ಭೂತ ಕಾಲದ ಬಗೆಗಿನ ಅಧ್ಯಯನವು ಅರ್ಥವಾಗುತ್ತದೆ. ಇಸ್ಲಾಂ ಧರ್ಮವು ಪ್ರಮುಖವಾಗಿ ಮೂರು ಸಂಗತಿಗಳಲ್ಲಿ ಅಚಲವಾದ ಭಕ್ತಿಯನ್ನು ಇರಿಸಿದೆ. ಏಕದೇವತಾರಾಧನೆ, ಪ್ರವಾದೀತ್ವ, ಪರಂಪರೆ ಮತ್ತು ನಿರ್ಣಾಯಕ ದಿನಗಳೇ ಆ ಮೂರು ಸಂಗತಿಗಳು. ಸಮಗ್ರ ವಿಶ್ವವನ್ನು ಸೃಷ್ಟಿಸಿದ ಆ ಸರ್ವಶಕ್ತನು ಸರ್ವಜ್ಞನು ಆದ ಮತ್ತು ಜನನ ಮರಣಗಳಿಲ್ಲದ ಆ ಏಕೈಕ ಪ್ರಭುವಿಗೆ ಮಾತ್ರ ಮಾನವನು ತಲೆಬಾಗಬೇಕು, ಆತನ ಆಜ್ಞೆಗಳನ್ನು ಮನಃಪೂರ್ವಕ ಪಾಲಿಸಬೇಕೆಂಬುದು ಏಕದೇವತಾರಾಧನೆಯ ಅಂತಃಸತ್ವವೆಂದೆನಿಸಿದೆ. ಇಲ್ಲಿ ಉಲ್ಲೇಖಗೊಳ್ಳುವ ಎಲ್ಲ ಹಾಡುಗಳ ಸಂತರೆಲ್ಲರ ಮಹ್ಮದ ಪೈಗಂಬರರ ಪ್ರವಾದಿಗಳಾಗಿಯೇ ಕಾಣುತ್ತಾರೆ. ಆ ದೇವರು ಮಾನವರೊಳಗಿಂದ ಉತ್ಕೃಷ್ಟ ವ್ಯಕ್ತಿಗಳನ್ನು ಆಯ್ದು ಅವರಿಗೆ ದಿವ್ಯ ಜ್ಞಾನವನ್ನು ನೀಡಿ ಅವರ ಮೂಲಕ ಮಾನವ ಜನಾಂಗಕ್ಕೆ ಮಾರ್ಗದರ್ಶನ ಮಾಡಿದ್ದಾನೆ. ಆ ಅರಿವು ಮುಸ್ಲಿಂ ಬಾಂಧವರಲ್ಲಿ ಇನ್ನೂ ಒಡಮೂಡಿದೆ.

ಈ ಹಾಡುಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಮೂಡಿಸುವುದಕ್ಕಾಗಿ ಒಂದೇ ಹೆಸರಿನಲ್ಲಿ ಹಿಂದೂಮುಸ್ಲಿಮರ ಹೆಸರುಗಳನ್ನು ಸೇರಿಸಿಕೊಂಡು ಹೋಗಿದ್ದಾರೆ ಕವಿಗಳು. ಉದಾಃ ನಬಿಸಾಬ ಶರಣ, ಮಹಿಬೂಬ ಶರಣ -ಮುಂತಾದವುಗಳನ್ನು ಹಾಡಿನುದ್ದಕ್ಕೂ ಕಾಣಿಸುತ್ತಾರೆ. ಇಲ್ಲಿ ಜಾಬೀರ ಎನ್ನುವ ಶರಣನ ಚರಿತ್ರೆ ಹೇಳುವಾಗ, ಅವನು ಗುರುವನ್ನು ಕುರಿತಾದ ಏಕೋನಿಷ್ಠಿ ಭಾವವನ್ನು ತಾಳಿಕೊಂಡಿರುವುದನ್ನು ಸೂಚಿಸುತ್ತಾನೆ. ತನ್ನ ಗುರುವಾದ ನಬಿಸಾಬ ಶರಣನ ಬಗೆಗೆ ಅಪಾರ ಭಕ್ತಿಯನ್ನು ಹೊಂದಿದ ಜಾಬೀರ ತಾನು ಗುರುವಿಗೆ ಊಟಕ್ಕೆ ಒಂದು ಶುಕ್ರವಾದ ದಿವಸ ಆಹ್ವಾನ ನೀಡುತ್ತಾನೆ. ಆ ದಿವಸದ ಪೂರ್ವ ತಯಾರಿಯಾಗುವುದರೊಳಗಾಗಿಯೇ ಹಲವಾರು ಅವಘಡಗಳು ಘಟಿಸಿಹೋಗುತ್ತವೆ. ಶುಕ್ರವಾರ ಗುರುವಿನ ಸಲುವಾಗೆಂದು ಊಟಕ್ಕೆ ಕುರಿ ಕುಯ್ಯುವುದನ್ನು ಕಣ್ಣಾರೆ ಕಂಡ ಜಾಬೀರನ ಎರಡು ಮಕ್ಕಳು ಕುರಿ ಕುಯ್ದ ಚೂರಿಯಿಂದಲೆ ಕೊಯ್ದುಕೊಂಡು ಹತರಾಗುತ್ತಾರೆ. ಆದರೂ ಆತ ಭಕ್ತಿಯಿಂದ ವಿಚಲಿತನಾಗದೆ ಮಕ್ಕಳು ತೀರಿಕೊಂಡಿದ್ದಾರೆಂದು ಗುರುವಿಗೆ ಹೇಳದೇ ಊಟಕ್ಕೆ ತಯಾರಿ ನಡೆಸುತ್ತಾನೆ. ಆಗ ನಬಿಸಾಬರು ನಿನ್ನ ಮಕ್ಕಳಿಗೂ ಊಟಕ್ಕೆ ಕರೆ ಎಂದು ತಿಳಿಸಿದಾಗ ಶಿಷ್ಯ ವಿಚಲಿತನಾಗುತ್ತಾನೆ. ಇದೆಲ್ಲವು ಗೊತ್ತಿದ್ದ ಗುರು ಶಿಷ್ಯನಿಗೆ ಮೆಚ್ಚಿ ಅವನ ಮಕ್ಕಳನ್ನು ಸಾಕ್ಷಾತಪಡಿಸುತ್ತಾನೆ. ಇಲ್ಲಿ ಸಾಕ್ಷಾತ್‌ಪಡಿಸುವ ಕ್ರಿಯೆ ಏನಿದೆಯೋ ವೈಜ್ಞಾನಿಕ ಕಾಲದಲ್ಲಿ ತಪ್ಪೆನಿಸಬಹುದು. ಆದರೆ ಒಬ್ಬ ಕವಿಗೆ ಮುಖ್ಯವಾಗಿ ಜನರಿಗೆ ಏಕದೇವೋಪಾಸನೆಯ ಅರಿವು ಮೂಡಿಸುವುದು ಮುಖ್ಯವಾಗಿದೆ. ಅದಕ್ಕಾಗಿ ಆ ನಿಟ್ಟಿನಲ್ಲಿ ಈ ಹಾಡು ಸಾಗುತ್ತದೆ.

ಎರಡನೇ ಹಾಡಿನಲ್ಲಿಯು ನಬಿಸಾಬ ಶರಣರೆ ಮುಖ್ಯ ವಸ್ತುವಾಗಿದ್ದಾರೆ. ಕವಿಗೆ ಇಲ್ಲಿ ಕಥೆ ಹೇಳುವುದು ಮುಖ್ಯವಾಗಿದೆ. ಖಂದೂರ ಅರಸ ತುಂಬಾ ಗರ್ವದಿಂದ ಮೆರೆಯುತ್ತಿದ್ದನು. ತನ್ನ ಸರಿ ಸಮಾನವಾಗಿದ್ದ ಮೌಲಾಲಿಯ ತಲೆ ಕೊಯ್ದು ತಂದವರಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಹೇಳುತ್ತಾನೆ. ಅದೇ ರಾಜ್ಯದ ಮೇಕಾತಿಲ ಮಂತ್ರಿ ರಾಜನ ಮಗಳ ಜೊತೆ ಮದುವೆಯಾಗಲು ಮೌಲಾಲಿಗೆ ಹುಡುಕುತ್ತಿರುತ್ತಾನೆ. ಆಗ ಮೌಲಾಲಿಯ ಗೆಳೆಯ ಹಿಂದೂ ಧರ್ಮೀಯನಾದ ಮೌಲಾಲಿ ಎಂದು ಹೇಳುತ್ತಾನೆ. ಓ ಸಾಬ ಶರಣ ನಾನೇ ಮೈ ಕಾತಿಲನಿಂದ ಹತನಾಗುತ್ತಾನೆ. ಈ ಸುದ್ದಿ ಮೌಲಾಲಿಗೆ ಕಾಗೆಯೊಂದು ಅವನ ಕೈ ಮೇಲೆ ರಕ್ತ ಕಾರುವುದರ ಮೂಲಕ ಗೊತ್ತಾಗುತ್ತದೆ. ಒಬ್ಬ ಮುಸ್ಲಿಂನ ಪರವಾಗಿ ಹಿಂದೂ ಹತ್ಯೆಯಾಗುವುದು ಕ್ರಿಯೆ ಗ್ರಾಮೀಣ ಪ್ರದೇಶದಲ್ಲಿ ಜಾತಿ ಬಾಂಧವ್ಯವನ್ನು ಕುದುರಿಸುವ ಕೆಲಸವಾಗಿದೆ. ಈ ಸಾಂಸ್ಕೃತಿಕ ಸಾಮರಸ್ಯವನ್ನು ಜನಪದ ಕವಿಗಳು ಮಾಡಿದ್ದಾರೆ ಎನಿಸುತ್ತದೆ.

ಒಬ್ಬ ಜನಪದ ಕವಿ ಲೋಕಜ್ಞಾನವನ್ನು ಹೊಂದಿದ್ದಾನೆನ್ನುವ ಸಲುವಾಗಿ ಮಹ್ಮದ ಪೈಗಂಬರರ ಚರಿತ್ರೆಯನ್ನು ಹೇಳುವ ಉದ್ದೇಶದಿಂದ ದಖನ್ ದೇಶದಲ್ಲಾದ ಚರಿತ್ರೆಯನ್ನೆ ಕೇಳುಗರ ಮುಂದಿಡುತ್ತಾನೆ. ಮೊಹ್ಮದ ಪೈಗಂಬರರ ಅಪಾರವಾದ ಶಕ್ತಿಯನ್ನು ಪ್ರದರ್ಶಿಸುತ್ತಲೆ, ಮಕ್ಕಾ ಮದಿನಾ ಕಟ್ಟುವ ಒಂದು ಸಾಂಕೇತಿಕತೆಯ ಸುತ್ತಮುತ್ತ ಕಥೆ ಸೃಷ್ಟಿಯಾಗುತ್ತಾ ಹೋಗಿದೆ. ಮೊಹ್ಮದ ಪೈಗಂಬರರು ಎಷ್ಟೇ ಕಷ್ಟಪಟ್ಟು ಮಕ್ಕಾಮದಿನಾದ ಗೋಡೆ ಕಟ್ಟಿದರೂ ದಿನಾಲು ಬೀಳುತ್ತಿತ್ತು. ಇಂತಹ ಪ್ರಾಪಂಚಿಕ ಐತಿಹಾಸಿಕ ಸ್ಥಳದ ಚರಿತ್ರೆ ಹೇಳುವ ಕವಿಗಳು ನಡೆದ ಘಟನೆಗಳ ಕಥೆಯನ್ನು ಜನರ ಮುಂದೆ ಹೂಬಾ ಹೂಬಾ ಸೃಷ್ಟಿ ಮಾಡುತ್ತಾರೆ. ಶಿವನ ಆಟ ಯಾರಿಗೂ ತಿಳಿಯದೆಂದು ಅಲ್ಲಿ ಸತ್ತರಾ ಹಜಾರ ಒಂಟೆಗಳ ಬಲಿಯಾಗಬೇಕೆಂದು ಅಂದಾಗ ಮಕ್ಕಾ ಮದಿನಾದ ಗೋಡೆ ನಿಲ್ಲುವುದೆನ್ನುವ ಹಿನ್ನೆಲೆಯಲ್ಲಿ, ಸತ್ತರಾ ಹಜಾರ ಒಂಟೆ ಕೊಯ್ದರು ಗೋಡೆ ನಿಲ್ಲುವುದಿಲ್ಲ. ಕೊನೆಗೆ ಖಲಿಲುಲ್ಲಾ ತನ್ನ ಮಗನನ್ನೆ ಬಲಿಕೊಡುವೆನೆಂದು ಪಣ ತೊಟ್ಟು ಗೋಡೆ ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತಾನೆ. ಅದಕ್ಕೆ ಮಗನು ಕೂಡ ಒಪ್ಪಿರುತ್ತಾನೆ. ಮಗನನ್ನು ಬಿಗಿದು ಹಗ್ಗ ಕಟ್ಟುತ್ತಾನೆ. ಅಲ್ಲಿಗೂ ಮಗ ಹತ್ಯೆ ಮಾಡು ಹಗ್ಗ ಸಡಿಲಿಸೆಂದು ಹೇಳುತ್ತಾನೆ. ಇದು ತಂದಿ ಮಗನಿಗೆ ಗೊತ್ತಿದ್ದ ವಿಷಯವೇ ಆದರೂ ಭಕ್ತಿಗಾಗಿ ಇಂಥ ಏಕೋ ನಿಷ್ಠಿಯರು ಇರುತ್ತಾರೆಂದು ತೋರ್ಪಡಿಸುವುದೆ ಕವಿಯ ಜಾಣ್ಮೆ. ಮಗ ಹತನಾಗುತ್ತಾನೆ. ಮಕ್ಕಾ ಮದಿನಾದ ಗೋಡೆ ನಿಲ್ಲುತ್ತದೆ. ದೇವರು ಪ್ರತ್ಯಕ್ಷನಾಗಿ ಖಲಿಲುಲ್ಲಾನ ಭಕ್ತಿಗೆ ಮೆಚ್ಚಿ ಮಗನನ್ನು ವಾಪಸ್ಸು ಕೊಡುತ್ತಾನೆ.

ಕವಿ ಹೆಣೆಯುವ ಮುಸ್ಲಿಂ ಸಂತರ ಪ್ರತಿ ಹಾಡಿನಲ್ಲಿಯೂ ಒಬ್ಬ ಭಕ್ತನನ್ನು ಹನ್ಯ ಹನ್ಯವಾಗಿ ದುಡಿಸಿಕೊಂಡಿರುವುದನ್ನು ಕಾಣುತ್ತೇವೆ. ಇಲ್ಲಿಯೂ ಕೂಡ ಮಹಿಬೂಬ ಸುಬಾನಿಯ ಚರಿತ್ರೆಯನ್ನು ಹೇಳುವಾಗ ಕವಿ ಸತ್ವ ಪರೀಕ್ಷೆ ಮಾಡಿದ್ದು, ಮಹಿಬೂಬ ಸುಬಾನಿಯ ತಂದೆಯಿಂದಲೆ ಅವರದು ಶರಣರ ಮನೆತನವೆಂದು ಗೊತ್ತುಪಡಿಸುವ ಗುರಿ ಹೊಂದಿರುತ್ತಾನೆ. ನಿಷ್ಠೆಯನ್ನು ಕೂಡ ಕವಿಗೆ ಹೇಳಬೇಕಾಗಿದೆ. ಮಹಿಬೂಬ ಸುಬಾನಿಯ ತಂದೆ ಹಬೀಬ ಸಲೀಂ ತಾನು ಯಾರದೋ ನೀರಿನಲ್ಲಿ ಹರಿದುಬಂದ ಸೇಬಿನ ಹಣ್ಣನ್ನು ತಿಂದು ಅದರ ಜಾಡಿಯನ್ನೇ ಹಿಡಿದುಕೊಂಡು ಹೋಗುತ್ತಾನೆ. ಯಾರ ಹಣ್ಣೋ, ಎಷ್ಟೊಂದು ಜೋಪಾನ ಮಾಡಿದ್ದಾರೆ, ನಾನು ತಿಳಿಯದೇ ಗಿರ್ದಾ ಹಣ್ಣು ತಿಂದೆನೆಂದು ಪರಿತಪಿಸಿ, ನಾನ್ನೂರು ಮೈಲಿ ನಡೆದುಕೊಂಡೆ ಹೋಗಿತ್ತಾನೆ. ತೋಟದ ಮಾಲಿಕನನ್ನು ಕಂಡು ಗಿರ್ದಾ ಹಣ್ಣು ತಿಂದಿದ್ದೇನೆ, ಕೊಟ್ಟ ಶಿಕ್ಷೆ ಪಡೆಯುವೆನೆನ್ನುತ್ತಾನೆ. ತೋಟದ ಮಾಲಿಕ ದಿನಾಲು ನೂರಾರು ಜನ ಹಣ್ಣು ತಿಂದು ಹೋಗುತ್ತಾರೆ ಎಂದು ನುಡಿಯುವುದರಲ್ಲಿಯೇ ಕವಿಗೆ ಸಮಕಾಲೀನ ಪ್ರಜ್ಞೆಯು ಇದೆ ಎಂದು ಓದುಗರಿಗೆ ಗೊತ್ತಾಗುವುದು. ಆದರೆ ಹಬೀಬ ಸಲಿಂನಂತ ನಿಷ್ಠೆಯುಳ್ಳ ಮನುಷ್ಯ ಸಿಗುವುದಿಲ್ಲೆಂದು ತೋಟದ ಮಾಲೀಕ ಹನ್ನೆರಡು ವರ್ಷ ದುಡಿಯಲು ಹೇಳುತ್ತಾನೆ.

ಹನ್ನೆರಡು ವರ್ಷ ಮುಗಿಯುತ್ತಾ ಬಂದಾಗ ಹಬೀಬ ಸಲೀಂ ಮಾಲಿಕನಿಗೆ ಹೇಳುತ್ತಾನೆ, ಆತ ಇನ್ನೊಂದು ಕೆಲಸ ಮಾಡಿಕೊಡಬೇಕು, ಮನೆಯಲ್ಲಿ ಕರಿಬಣ್ಣದ, ಕುಂಟ ನನ್ನ ತಂಗಿಯನ್ನು ಮದುವೆಯಾಗಬೇಕೆಂದು, ಅದಕ್ಕೂ ಹೂಂ ಎನ್ನುತ್ತಾನೆ. ಮದುವೆ ಮುಗಿಯುತ್ತದೆ. ಸಧ್ಯ ಆಕೆ ಆ ರೀತಿ ಇರುವುದಿಲ್ಲ. ಆಕೆಯ ಸೌಂದರ್ಯವನ್ನು ಕವಿ ವರ್ಣಿಸುವ ಪರಿಯೇ ಬೇರೆ. ಆದರೂ ಕೂಡ ಮಾಲಿಕ ಹೇಳಿದಂತೆಯೂ ಇಲ್ಲವೆಂದು ಆಕೆಯನ್ನು ಮುಟ್ಟುವುದಿಲ್ಲ. ಇಲ್ಲಿಯೂ ಆತನ ನಿಷ್ಠೆ ಇದೆ. ಮರುದಿವಸ ಮಾಲಿಕನಿಗೆ ಕೇಳಿ, ಇಲ್ಲ ಆಕೆ ನಿನ್ನ ಹೆಂಡತಿನೇ ಎಂದು ಖಚಿತಪಡಿಸಿಕೊಂಡಾಗ ಏಕಾಂತ ಹೊಂದುತ್ತಾರೆ. ಆಗಲೆ ಮಹಿಬೂಬನ ಜನನವಾಗುತ್ತದೆ.

ಮಹಿಬೂಬ ಸುಬಾನಿಯಿಂದಲೇ ಮುಸ್ಲಿಮರಲ್ಲಿರುವ ಗ್ಯಾರವಿ ಆಚರಣೆ ಹುಟ್ಟಿಕೊಂಡಿರುವುದೆಂಬ ಉಲ್ಲೇಖ ಕವಿ ಕೊಡುತ್ತಾನೆ. ತಂದೆ ಮಗನಲ್ಲಿ ಆಂತರಿಕ ಯುದ್ಧ ನಡೆಯುತ್ತದೆ. ಸತ್ತ ಮಗುವನ್ನೇ ಪ್ರತ್ಯಕ್ಷಪಡಿಸಿದ ಮಹಿಬೂಬ ಸುಬಾನಿಯ ಮಹಿಮೆ ಕೇಳಿ ತಂದೆ ಧನ್ಯ ಧನ್ಯನೆನ್ನುತ್ತಾನೆ. ಸ್ಮಶಾನದಲ್ಲಿಯ ಹೂಗಳನ್ನು ಜೀವಂತಪಡಿಸುತ್ತಾನೆ. ಅಲ್ಲದೆ ಜಿಂದಾ ಮದರಸಾಬನ ಜೊತೆ ಆಂತರಿಕ ಸಂಘರ್ಷ ಹೀಗೆ ಹನ್ನೊಂದು ಸಂಧಿಗಳ ಕಥೆ ಇಲ್ಲಿ ಸಂಪೂರ್ಣವಾಗಿ ಮುಸ್ಲಿಂ ಜನಾಂಗದ ಸಾಂಸ್ಕೃತಿಕ ಚರಿತ್ರೆಯನ್ನು ಎತ್ತಿ ತೋರಿಸುವ ಸಂಗತಿಗಳು, ದೇಶಿ ಭಾಷೆಯ ಮೂಲಕ ಸೃಷ್ಟಿ ಮಾಡಿರುವುದು ಜನಪದ ಕವಿಗಳ ಈ ಕೆಲಸ ಅನುಪಮವಾದುದು.

ರಾಮಾಯಣ ಮಹಾಭಾರತದ ಚರಿತ್ರೆ ಹೇಳುವುದೆಂದರೆ ಜನಪದ ಕಲಾವಿದರಿಗೆ ಅವೇ ಮೂಲ ಬಂಡವಾಳವಾಗಿ ಸಿಗುತ್ತವೆ. ಮಹಾಭಾರತದ ಶ್ರೀಕೃಷ್ಣ ಇಡೀ ಮಹಾಭಾರತದ ರೂವಾರಿ. ಆತನ ಚರಿತ್ರೆಯನ್ನು ಹೇಳುವುದರ ಮೂಲಕ ಹಾಡುಗಾರರು ಅವನನ್ನು ಶಿವನ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಮುರಲಿಧರ ಎಂಬ ನಾಮ ಪಡೆದುಕೊಂಡ ಕೃಷ್ಣನ ಹತ್ತಾರು ಅವತಾರಗಳ ಪರಿಚಯ ಮಾಡಿಕೊಂಡು ಹೋಗಲಾಗಿದೆ. ಆತನ ಸುದರ್ಶನ ಚಕ್ರದ ಸ್ಪರ್ಶ ಅನ್ಯಾಯ ಎಲ್ಲಿ ಸಂಭವಿಸುವುದೋ ಅವರ ಪರವಾಗಿ ನಿಂತು ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದ್ದಾನೆ. ದ್ರೌಪದಿಯ ವಸ್ತ್ರಾಪಹರಣದಲ್ಲಿ ಶ್ರೀಕೃಷ್ಣ ಸಹಾಯಕ್ಕೆ ಬರುವುದು, ನರಸಿಂಹನ ಅವತಾರ ತಾಳಿ ಹಿರಣ್ಯಕಶಪುವನ್ನು ಸಂಹರಿಸುವುದು. ನಂತರ ಎರಡನೆಯ ಚೌಕಕ್ಕೆ ಬರುತ್ತಲೆ ರಾಮಾಯಣದ ರಾಮನಾಗಿ ಹನುಮಂತನ ಸಹಾಯ ಪಡೆದುಕೊಂಡಿದ್ದು ಲಂಕೆಯನ್ನು ಸುಡಿಸಿ ಸಂಹರಿಸಿದ್ದು ಹೇಳುತ್ತಾನೆ. ಅಲ್ಲದೇ ಮುಖ್ಯವಾಗಿ ಹೇಳಬೇಕಾಗಿರುವುದು ಶ್ರೀಕೃಷ್ಣನನ್ನು ಕುರಿತಾಗಿ, ಹಾಗಾಗಿ ಕರ್ಣ ಅರ್ಜುನರ ಪ್ರಸ್ತಾಪವನ್ನು ಮಾಡುತ್ತ ಕರ್ಣ ಒಳ್ಳೆಯವನು, ಆದರೆ ಪಾಂಡವರ ಕಡೆ ವಾಲಿ ತನ್ನ ಪ್ರಾಣವನ್ನು ಕಳೆದುಕೊಂಡ ಎನ್ನುವುದನ್ನು ಖಚಿತಪಡಿಸುತ್ತಾನೆ. ಇದು ಅನಿವಾರ್ಯವೆಂದು ಹೇಳುವುದು ಕಂಡುಬರುತ್ತದೆ. ಕೊನೆಗೆ ಶ್ರೀಕೃಷ್ಣನನ್ನು ಬ್ರಹ್ಮ, ವಿಷ್ಣುವೆಂದು ಹೇಳುವುದು ಕಂಡುಬರುತ್ತದೆ. ಕೊನೆಗೆ ಶ್ರೀಕೃಷ್ಣನನ್ನು ಬ್ರಹ್ಮ, ವಿಷ್ಣು, ರುದ್ರರೇ ನೀನು ಎಂದು ಹೇಳುತ್ತಾನೆ. ಇಡೀ ರಾಮಾಯಣ ಮಹಾಭಾರತಕ್ಕೆ ಒಬ್ಬ ಸೂತ್ರದಾರನಿದ್ದ, ಅವನೇ ಸಾಕ್ಷಾತ್ ಶಿವನೆಂಬ ಅರಿವು ಕೇಳುಗರಲ್ಲಿ ಮೂಡಿಸುವುದಾಗಿದೆ.

ಎಲ್ಲಮ್ಮನಿಗೆ ದಲಿತ ವರ್ಗದ ದೇವತೆಯೆಂದೆ ಪರಿಗಣಿಸಲಾಗಿದೆ. ಲಕ್ಕಮ್ಮ, ಮಾರೆಮ್ಮ, ಮಾಪುರಿ, ಜಗದಂಬ ಆಯಾ ಪ್ರಾದೇಶಿಕ ನೆಲೆಯಲ್ಲಿ ನಾನಾ ಹೆಸರುಗಳುಂಟು. ಆದರೆ ಎಲ್ಲಾ ದೃಷ್ಟಿಯಿಂದಲೂ ಎಲ್ಲಮ್ಮನನ್ನು ಕ್ಷುದ್ರ ದೇವತೆಯೆಂದು ಕರೆಯಲಾಗುತ್ತದೆ. ಈ ಹಾಡು ಮೇಲ್ನೋಟಕ್ಕೆ ಸವಾಲ, ಜವಾಬಿನಂತೆ ಕಂಡರೂ ಒಳಮೈಯಲ್ಲಿ ಎಲ್ಲಮ್ಮನ ಜೀವನ ಚರಿತ್ರೆಯನ್ನೇ ಬಿಚ್ಚಿಡುತ್ತದೆ. ಹಾಡಿನ ಮಧ್ಯದಲ್ಲಿ ಸವಾಲಿನ ಒಂದು ಭಾಗ ನುಸುಳಿ ಹೋಗುತ್ತದೆಯೇ ವಿನಃ ಅದೇ ಪ್ರಧಾನವಾಗಿ ನಿಲ್ಲುವುದಿಲ್ಲ. ಇಲ್ಲಿ ಚರಿತ್ರೆಯೇ ಹಾಡಿನ ಜೀವಾಳವಾಗಿದೆ. ಹಾಡುಗಾರ ಇನ್ನೊಂದು ಮೇಳವನ್ನು ತಿರಸ್ಕರಿಸಿಯೇ ಹಾಡುತ್ತಿದ್ದಾನೆಂಬ ಭಾವನೆ ಇಲ್ಲಿ ಮುಖ್ಯ. ಜೋಗಾ ಮಾಡೋ ಜೋಗತ್ಯಾರೆಲ್ಲ ಜಗ ತೆಲಿಮ್ಯಾಲ ಹೊತ್ತು ಎಂಬ ಪಲ್ಲದಲ್ಲಿಯೇ ದೇವಿಯ ಹೆಸರಿನ ಮೇಲೆ ನಡೆಯುವ ಕುರಿ, ಕೋಣ ಬಲಿ, ದೇವದಾಸಿ ಆಚರಣೆ, ಕಂದಾಚಾರಗಳನ್ನೆಲ್ಲ ಬಯಲಿಗೆ ಎಳೆದು ಎಲ್ಲಮ್ಮನನ್ನು ಅನುಸರಿಸಿ ಬಾಳುವುದರಿಂದ ಮೇಲ್ಜಾತಿಯವರಿಗೂ ದಲಿತರಿಗೂ ಇರುವ ವ್ಯತ್ಯಾಸವನ್ನು ತಾಳೆ ಹಾಕಿದ್ದಾನೆ. ಚರಿತ್ರೆ ಹೇಳುವ ಸಂದರ್ಭದಲ್ಲಿ ವಿಡಂಬನಾತ್ಮಕ ಶಬ್ದ ಬಳಸುವುದರಿಂದ ಸಮಾಜ ಶುದ್ಧೀಕರಿಸುವ ಕಾರ್ಯವು ಈ ಹಾಡಿನ ಮೂಲಕ ನಡೆದಿದೆ ಎಂದು ಅರಿತುಕೊಳ್ಳಬಹುದು.

ಚರಿತ್ರೆ ಹೇಳುವುದಕ್ಕಾಗಿಯೇ ಒಂಟಿ ಲಾವಣಿ ಎನ್ನುವವು ಹುಟ್ಟಿಕೊಂಡಿರಬೇಕೆನಿಸುತ್ತದೆ. ಶಿಷ್ಟ ಸಾಹಿತ್ಯ ಓದಿದವರದಾದರೆ ಜನಪದ ಸಾಹಿತ್ಯ ಕೇಳುವವರದು. ಆದರೆ ಶಿಷ್ಟ ಪದದವರು ಜನಪದರಿಗೆ ಹೇಳುವವರಲ್ಲ. ಜನಪದರಲ್ಲಿಯೇ ವಿಶೇಷವಾದ ಜಾಣ್ಮೆ ಹೊಂದಿದಂತಹ ವ್ಯಕ್ತಿ ಶಿಷ್ಟರು ನುಡಿಯುವ ವಿಚಾರಗಳೆಲ್ಲ ಕಲಾತ್ಮಕವಾದ ರೀತಿಯಲ್ಲಿ ಜನಸಾಮಾನ್ಯರಿಗೆ ಉಣಬಡಿಸುವ ಕೆಲಸ ಮಾಡಿದರೂ ಆ ಪ್ರತಿಫಲವೆ ಇಂದಿನ ಚಾರಿತ್ರಿಕ ಲಾವಣಿಗಳಲ್ಲಿ ಸಿಗುವಂತಹ ಇಂತಹ ಸನ್ನಿವೇಶಗಳು, ತಿರುನೀಲಕಂಠರ ಕುರಿತು ಪುರಾಣಗಳು, ಪ್ರವಚನಗಳು ಮಠಮಾನ್ಯಗಳಲ್ಲಿ ನಡೆದಿರುವುದರಿಂದ ಶರಣರ ಸಾಹಿತ್ಯ ಕುರಿತು ತುಂಬಾ ಉತ್ಸಾಹಕರಾಗಿ ಹಾಡುಗಾರರು, ಹರಿಹರನು ಚಿತ್ರಿಸಿದ ಶಿವಶರಣರೆಂಬ ಮಾಹಿತಿ ಹಾಡುಗಾರನಿಗಿಲ್ಲ. ಮುಖ್ಯವಾಗಿ ಅವನು ಗ್ರಹಿಸುವುದು ಭಕ್ತಿಯನ್ನು, ಕಾವ್ಯದ ನಾಯಕನಾದ ತಿರುನೀಲಕಂಠ ಶಿವನ ಕುರಿತಾದ ಭಕ್ತಿ ಯಾವ ರೀತಿಯಲ್ಲಿ ಇಟ್ಟುಕೊಂಡಿದ್ದಾನೆಂದು ಜನರಿಗೆ ತಿಳಿಯಪಡಿಸುವುದು. ಹರಿಹರನಲ್ಲಿ ಒಂದೇ ಪಠ್ಯ ಸಿಕ್ಕರೆ ಜನಪದರಲ್ಲಿ ಸಾವಿರಾರು ಪಠ್ಯಗಳು ಅದಕ್ಕೆ ಪೂರಕವಾಗಿಯೇ ತಯಾರಾಗುತ್ತವೆ. ಶಿವನ ಕೃಪೆ ಬಯಸುವ ಭಕ್ತನು ಶಿವನು ಒಡ್ಡುವ ಹಲವಾರು ಸಮಸ್ಯೆ ಮತ್ತು ಸವಾಲುಗಳಿಗೆ ಎದೆತಟ್ಟಿ ನಿಲ್ಲಬೇಕು. ಅದೇ ಪಾರಮಾರ್ಥದ ಪರೀಕ್ಷೆಯೂ ಆಗುತ್ತದೆ. ಇಂತಹ ಪರೀಕ್ಷೆಯಲ್ಲಿ ಜಯ ಗಳಿಸಿದನೆಂದರೆ ಅವನಿಗೆ ಮೋಕ್ಷ ಪ್ರಾಪ್ತಿಯೆಂಬ ಸಾಮಾನ್ಯವಾದ ನಂಬಿಕೆ ಇದೆ.

ತಿರುನೀಲಕಂಠನ ಕುರಿತು ಹಾಡುಗಾರರು ಅವನಲ್ಲಿರುವ ಅವನ ಬಗೆಗಿನ ಭಕ್ತಿಯನ್ನು ಎತ್ತಿ ತೋರಿಸುತ್ತಾರೆ. ಸಾಮಾನ್ಯ ಮನುಷ್ಯನಾಗಿ ಸಾಧು ವೇಷ ಧರಿಸಿ ಊರೂರು ತಿರುಗಿ ಅಲೆದಾಡುವಂಥವನಿಗೆ ವೇಶ್ಯೆಯ ಜೊತೆಗಿನ ಅನೈತಿಕ ಸಂಬಂಧವನ್ನು ಹೊರಿಸಿ ತನ್ನ ಹೆಂಡತಿಯೇ ನನ್ನನ್ನು ಮುಟ್ಟಿದೊಡೆ ಶಿವನಾಣೆ ಎಂದು ಹೇಳುತ್ತಾಳೆ. ನಿರಪರಾಧಿಯಾಗಿದ್ದ ತಿರುನೀಲಕಂಠನಿಗೆ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿ ಪರಿಪರಿಯಾದ ಕಷ್ಟಗಳನ್ನು ಕೊಡುವುದು ಕಂಡುಬರುತ್ತದೆ. ಸಹಜವಾಗಿದ್ದರೂ ಕಷ್ಟಕೊಟ್ಟು ನಿಷ್ಠೆಗೆ ಭಂಗ ತರಬೇಕೆಂಬ ಸಂಚಿಗೆ ತಿರುನೀಲಕಂಠ ಒಳಗಾಗುವುದಿಲ್ಲ. ಶಿವನ ಮೇಲಿಟ್ಟಿರುವ ಆಣೆಯಿಂದ ತಮ್ಮ ಇಡೀ ಜೀವನದ ವೃದ್ಧಾಪ್ಯಕ್ಕೆ ಬಂದು ನಿಲ್ಲುವವರೆಗೂ ಬ್ರಹ್ಮಚಾರಿಯಾಗಿಯೇ ಮುಂದುವರಿಯುತ್ತಾರೆ. ಗಂಡನಷ್ಟೇ- ಹೆಂಡತಿ ತತ್ವಕ್ಕೆ ಬದ್ಧಳಾಗಿ ನಡೆಯುವುದನ್ನು ಇಲ್ಲಿ ಚಿತ್ರಿಸಿಕೊಂಡು ಹೋಗಲಾಗಿದೆ. ಕೊನೆಗೆ ಶಿವನೆ ಸಾಕ್ಷಾತ್ಕಾರನಾಗಿ ಸಾಧುವೇಷ ಧರಿಸಿಕೊಂಡು ಬಂದು ತಿರುನೀಲಕಂಠ ಮತ್ತು ಮುತ್ತೈದೆಯರಿಗೆ ಸಮಾಗಮ ಮಾಡಿಸಿ ಮತ್ತೆ ಪ್ರಾಯದವರನ್ನಾಗಿ ಮಾಡುವ ಕ್ರಿಯೆಯು, ದೇವರ ಮೇಲಿನ ಅಚಲವಾದ ಭಕ್ತಿ, ನುಡಿದಂತೆ ನಡೆ, ದುಶ್ಚಟದಿಂದ ದೂರವಿದ್ದರೆ ಅದಕ್ಕೆ ಪರಿಹಾರ ಸಿಕ್ಕೆ ಸಿಗುತ್ತದೆಂಬ ನಂಬಿಕೆ ಜನಪದರದ್ದಾಗಿದೆ.

ಹರಿಹರನು ಹೇಳುವಂತೆ ಬಸವಣ್ಣ ಮೊದಲು ಶಿವನ ಒಡ್ಡೋಲಗದಲ್ಲಿ ವೃಷಭ ಮುಖನೆಂಬ ಗಣನಾಗಿದ್ದನು. ಪ್ರಭುದೇವ ನಿರ್ಮಾಯನೆಂಬ ಗಣೇಶ್ವರ, ಆದಯ್ಯ ಅನಾದಿ ಗಣೇಶ್ವರ, ರೇವಣಸಿದ್ಧೇಶ್ವರ ಅವತಾರ ತಾಳಿದ್ದು ಹನ್ನೊಂದನೆಯ ಶತಮಾನದಲ್ಲಿ ರೇವಣಸಿದ್ಧನು ಐತಿಹಾಸಿಕ ವ್ಯಕ್ತಿಯಾಗಿದ್ದು, ಬಸವಾದಿ ಶರಣರಂತೆ ಇವನು ಕೂಡ ಒಬ್ಬ ಶರಣನಾಗಿದ್ದನು. ಬರೀ ರೇವಣಸಿದ್ಧೇಶ್ವರನ ಚರಿತ್ರೆಯನ್ನು ಹೇಳದೆ ಹಾಡುಗಾರ ಲಾವಣಿಯ ಇನ್ನೊಂದು ಮುಖ್ಯ ಸವಾಲಿನ ಪ್ರತೀಕವಾಗಿಯೂ ನೋಡಲು ಪ್ರಯತ್ನಿಸಿರುವುದು ಇದೆ. ಮಾಯೆ ಸಾಕ್ಷಾತ್ ಪಾರ್ವತಿಯೆಂದು ಭಾವಿಸುವ ಹಾಡುಗಾರರು, ಆಕೆ ಅಲ್ಲಮಪ್ರಭುವಿನ ಆಜ್ಞೆಯ ಮೇರೆಗೆ ಕೊಲ್ಲಾಪುರಕ್ಕೆ ಬರುತ್ತಾಳೆ. ಯುದ್ಧದಲ್ಲಿ ನೌಕೋಟಿಸಿದ್ಧರನ್ನು ಗೆದ್ದು ಜೋಳಿಗೆಯಲ್ಲಿ ಹಾಕಿರುತ್ತಾಳೆ. ಇಷ್ಟು ಮಾಯೆಯ ಕುರಿತು ಪರಾಕ್ರಮ ಹೇಳಿದ ಹಾಡುಗಾರ, ನೌಕೋಟಿ ಸಿದ್ಧರಿಗೆ ವಿಷದ ಹಾಲನ್ನು ಕುಡಿಸಿ ಸಾಯಿಸುವ ಹುನ್ನಾರದಲ್ಲಿರುತ್ತಾಳೆ. ಆಗ ಅಲ್ಲಿಗೆ ರೇವಣಸಿದ್ಧನ ಪ್ರವೇಶವಾಗುತ್ತದೆ. ಪಾರ್ವತಿ ಪರಮಾತ್ಮರ ಅಪರಾವತಾರವೆ ಮಾಯೆ ಮತ್ತು ರೇವಣಸಿದ್ಧರು ಎಂಬುದನ್ನು ಹಾಡುಗಾರರು ಜನ ಸಾಮಾನ್ಯರಿಗೆ ನಿವೇದಿಸುತ್ತಿರುತ್ತಾರೆ. ರೇವಣಸಿದ್ಧ ಶಿವನ ಒಡ್ಡೋಲಗದಿಂದ ನೇರವಾಗಿ ಕೊಲ್ಲಾಪುರಕ್ಕೆ ಹೋಗಿ ನಿಲ್ಲುತ್ತಾನೆ. ನೌಕೋಟಿ ಸಿದ್ಧರನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿದ್ದೇನೆಂದು ಮಾಯೆಗೆ ಹೇಳುತ್ತಾನೆ.

ಮಾಯೆ ಇದಕ್ಕೇನು ತಕರಾರು ತೆಗೆಯುವುದಿಲ್ಲ. ಆದರೆ ತಾನು ಏಳು ಖಂಡಗ ವಿಷದ ಹಾಲನ್ನು ತುಂಬಿದ್ದು, ಅದನ್ನು ಕುಡಿಯಲು ರೇವಣಸಿದ್ಧನಿಗೆ ಹೇಳುತ್ತಾಳೆ. ಆಗ ರೇವಣಸಿದ್ಧ ತನ್ನ ಜೋಳಿಗೆಯೊಳಗಿನ ಕುಂಡಲವನ್ನು ತೆಗೆದುಕೊಂಡು ಇದರಲ್ಲಿ ನಿನ್ನ ಹಾಲು ಹಾಕು ಉಳಿದರೆ ನಾನು ಕುಡಿಯುತ್ತೇನೆಂದು ಹೇಳುತ್ತಾನೆ,. ಆಗ ಪ್ರಾರಂಭವಾಗುತ್ತದೆ ಮಾಯೆಯ ಪ್ರಲಾಪ. ತಾನು ಎಷ್ಟು ಹಾಲು ಹಾಕಿದರೂ ಕುಂಡಲಿ ತುಂಬುವುದೇ ಇಲ್ಲ. ತನ್ನ ಮೊಲೆಯ ಹಾಲು ಹಿಂಡಿ ಹಾಕಲು ಆರಂಭಿಸುತ್ತಾಳೆ. ತುಂಬುವುದಿಲ್ಲ. ರೇವಣಸಿದ್ಧ ತನ್ನ ಶಕ್ತಿಯಿಂದ ನೌಕೋಟಿ ಸಿದ್ಧರಿಗೆ ಕುರಿ ಮಾಡುತ್ತಾನೆ. ಮಾಯೆ ಜೈಲಿನ ಕೀಲಿ ತೆಗೆದಾಗ ಸಿದ್ಧರು ಕುರಿಯಾಗಿ ಹೊರಹೋಗುತ್ತಾರೆ. ಮಾಯೇ ತನ್ನ ಪರಾಕ್ರಮ ತೋರದೆ ಸೋಲು ಅನುಭವಿಸುತ್ತಾಳೆ. ರೇವಣಸಿದ್ಧನ ಅಗ್ನಿ ಕುಂಡಲಿಗೆ ಸಿಕ್ಕು ಸುಟ್ಟು ಕರಕಲಾಗುತ್ತಾಳೆ. ಆಗ ರೇವಣಸಿದ್ಧ ಎಲ್ಲಿದ್ದಿ ಮಾಯೆ ಅಂದಾಗ ನಾನು ನಿನ್ನ ರೋಮ ರೋಮದಲ್ಲಿದ್ದೇನೆಂದು ತಿಳಿಸುತ್ತಾಳೆ. ಇಲ್ಲಿ ಒಟ್ಟಾರೆ ಹೆಣ್ಣಿನ ಸೋಲು ,ಗಂಡಿನ ಮುಂದೆ ಎಂದು ಹೇಳುವ ರೇವಣಸಿದ್ಧನ ಚರಿತ್ರೆ ನಮಗೆ ಲಭ್ಯವಾಗಿದೆ.

ಮಧ್ಯಕಾಲೀ ಭಕ್ತಿ ಮತ್ತು ಅನುಭಾವ ಸಾಹಿತ್ಯ ಇಂದಿನವರೆಗೂ ಜನಸಮ್ಮುಖಿಯಾಗಿ ಬೆಳೆದುಕೊಂಡು ಸಾಹಿತ್ಯದಲ್ಲಿ ಪುನರ್ ವ್ಯಾಖ್ಯಾನ ಪಡೆದುಕೊಂಡು ಬರುತ್ತಿರುವುದು ಸರ್ವವಿಧಿತ. ಹನ್ನೆರಡನೆಯ ಶತಮಾನದ ಸಂದರ್ಭದಲ್ಲಿ ವಚನಕಾರರಿಂದ ಹುಟ್ಟಿಕೊಂಡ ಸಾಹಿತ್ಯ ಜನವಾಣಿಯು ದೇವರ ವಾಣಿಗೆ ಏರದಿದ್ದಾಗ ದೇವವಾಣಿಯನ್ನೇ ಜನವಾಣಿಗಿಳಿಸಿದ ಕೀರ್ತಿ ವಚನಕಾರರದು. ಹಾಗಾಗಿ ಭಕ್ತಕವಿ ಕ್ರಾಂತಿಕಾರಿಯಾಗಿ ಕಂಡ ಬಸವಣ್ಣನ ಚರಿತ್ರೆಯನ್ನು ಹೇಳದ ಲಾವಣಿಕಾರರೇ ಇಲ್ಲ. ಬಸವಣ್ಣನವರ ಆಧ್ಯಾತ್ಮಜ್ಞಾನ, ಷಟ್‌ಸ್ಥಲ ಮಾರ್ಗ ಮುಂತಾದವುಗಳನ್ನು ಜನಸಾಮಾನ್ಯರಿಗೆ ತಿಳಿಯಹೇಳುವ, ಬಸವಣ್ಣನವರ ದರ್ಶನ ಮಾಡಿಸುವ ಕೆಲಸ ಗೀಗೀ ಪದಕಾರರದಾಗಿದೆ. ಶಿವನನ್ನು ಅರಿಯಲು ಹಾತೊರೆಯುವಂತಹವರೆಲ್ಲರೂ ಶರಣರು. ಅವರು ಸೃಷ್ಟಿಗೆ ಮೂಲ ಕಾರಣವಾಗಿರಬಹುದಾದ ಶಕ್ತಿಯ ಬಗೆಗೆ ವಿಜ್ಞಾನಿಯಷ್ಟೇ ಕುತೂಹಲವನ್ನು ಭಾರತೀಯ ತತ್ವಜ್ಞಾನಿಗಳು ವ್ಯಕ್ತಪಡಿಸಿದರು. ಬಸವಣ್ಣನನ್ನು ಕುರಿತು ಹೇಳುವಾಗ ಕವಿಗಳು ಆತನನ್ನು ಮಹೋನ್ನತ ವ್ಯಕ್ತಿಯಾಗಿ ಚಿತ್ರಿಸಲಾಗುತ್ತದೆ. ಬದನೆಕಾಯಿಯನ್ನು ಲಿಂಗವನ್ನಾಗಿ ಪರಿವರ್ತಿಸಿದ ಪವಾಡವನ್ನು ವರ್ಣಿಸುತ್ತಾರೆ. ಜನಪದರ ಬದುಕನ್ನು ಒಂದು ತತ್ವದ ಹಂತಕ್ಕೆ ತಂದು ನಿಲ್ಲಿಸುವಲ್ಲಿ ಬಸವಣ್ಣನ ಪಾತ್ರ ಪ್ರಮುಖವಾಗಿದೆ.

ಹನ್ನೆರಡನೆಯ ಶತಮಾನದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ಕ್ರಾಂತಿ ಮಾಡುವ ವಿಚಾರ, ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮಾಡಿದ, ಸಮಾಜವನ್ನು ಸುಧಾರಿಸಲು ಸಲುವಾಗಿ ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಅನುಭವ ಮಂಟಪದಲ್ಲಿ ದಲಿತರಿಗೆ ಪ್ರವೇಶ ಕೊಟ್ಟನೆಂಬುದೆ ಇಂದಿನವರೆಗೂ ಚರ್ಚಾಸ್ಪದವಾದ ವಿಷಯವಾಗಿದೆ. ಹಾಗಾಗಿ ಬಸವಣ್ಣ ಕೆಳವರ್ಗದವರ ಇಷ್ಟ ದೈವವಾಗಿ ನಿಲ್ಲುತ್ತಾನೆ. ತನ್ನ ಭೋಗಲಾಲಸೆಯನ್ನು ರಾಜ್ಯ ವೈಭವವನ್ನು, ಬುದ್ಧ ಎಲ್ಲವನ್ನು ಬಿಟ್ಟು ಕಾಡಿಗೆ ಹೋದಂತೆ ಬಸವಣ್ಣ ಎಲ್ಲವನ್ನಿಟ್ಟುಕೊಂಡ ಇಹ ಜೀವನದಲ್ಲಿ ಸಮಾನತೆ ತರಬಯಸಿದುದರಿಂದ, ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಕಾರಿ ವ್ಯಕ್ತಿಯಾಗಿ ಕಾಣುತ್ತೇವೆ. ಬಸವಣ್ಣ ಭೂಮಿಯ ಮೇಲೆ ಇದ್ದು ಮರ್ತ್ಸ್ಯ ಮಾನವರೊಡನೆ ತನ್ನ ಸುಖದುಃಖಗಳನ್ನು ಹಂಚಿಕೊಂಡು ಬಾಳಿದ ಕೌಟುಂಬಿಕ ವ್ಯಕ್ತಿ ಸಮಾಜದಲ್ಲಿ ತುಳಿತಕ್ಕೊಳಗಾದವರ ನೋವಿಗಾಗಿ ಸ್ಪಂದಿಸಿದನು. ಅಂತರ್ಜಾತಿ ವಿವಾಹ ನೆರವೇರಿಸಿದ. ಬಿಜ್ಜಳನ ವಿರುದ್ಧ ಯಾವ ಕೆಟ್ಟ ಕೆಲಸವನ್ನು ಮಾಡದೆ ಇದ್ದರೂ ಹೊಟ್ಟೆಕಿಚ್ಚಿನ ಜನರ ರೋಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡ. ಅದಕ್ಕಾಗಿ ಮಾನವೀಯ ಹೃದಯ ಹೊಂದಿದ ಮಹಾನುಭಾವ ಬಸವಣ್ಣ ಜನಸಾಮಾನ್ಯರ ಹಂತವನ್ನು ಮೀರಿ ನಿಲ್ಲುತ್ತಾನೆ. ಜನಪದರಿಗೆ ಆಶಯವಾಗಿ ಕಾಣುತ್ತಾನೆ.

ವಚನಕಾರರಲ್ಲಿ ಪ್ರಮುಖನಾದಂತಹ ಸಿದ್ಧರಾಮನನ್ನು ಕುರಿತು ಜನಪದರು ಹೇಳುವಾಗ ಆತನ ಜನನದಿಂದಲೆ ಆರಂಭ ಮಾಡುವ ಚರಿತ್ರೆ ಕಾಣುತ್ತೇವೆ. ಒಬ್ಬ ಮಹಾನ್ ವ್ಯಕ್ತಿಯು ಜನಪದರ ಕೈಯಲ್ಲಿ ಸಿಕ್ಕಾಗ ಆತನನ್ನು ನಮ್ಮ-ನಿಮ್ಮಂತೆಯೇ ಸಾಮಾನ್ಯವಾಗಿ ಚಿತ್ರಿಸುವ ಪರಿ ಇಲ್ಲಿದೆ. ಸಿದ್ಧರಾಮನು ತಂದೆ ತಾಯಿಯನ್ನು ಹೊಂದಿದ ವ್ಯಕ್ತಿ. ಆತನ ಆದರ್ಶ ತುಂಬಾ ಮಹತ್ವದ್ದಾಗಿ ಕಾಣುತ್ತದೆ. ಸಾಕ್ಷಾತ್ ಶಿವನನ್ನು ಒಲಿಸಿಕೊಳ್ಳುವ ಸಲುವಾಗಿ ತನ್ನ ಹಟಯೋಗ ಮುಂದುವರಿಸಿಕೊಂಡು ಬರುವ ಕಥೆ ಇದೆ. ದನ ಕಾಯಲು ಅಡವಿಗೆ ಹೋದಂತಹ ಸಿದ್ಧರಾಮ ಒಬ್ಬ ಮುದುಕ ಜಂಗಮನನ್ನು ಕಾಣುತ್ತಾನೆ. ಆತ ಸಿದ್ಧರಾಮ ಹಾಕಿದ ಊಟ ತಿಂದು ಹೊಟ್ಟೆ ಉರುಪು ಇಟ್ಟಿತೆಂದು ಹೇಳಿ ನುಚ್ಚು ಮಜ್ಜಿಗೆ ತರಲು ಮನೆಗೆ ಕಳುಹಿಸುತ್ತಾನೆ. ನಂತರ ಬಂದ ಸಿದ್ಧರಾಮ ಮುದುಕನನ್ನು ಹುಡುಕುವನು. ಆತ ಸಿಗದಿದ್ದ ಪಕ್ಷದಲ್ಲಿ ಅದೇ ದಾರಿಯಿಂದ ಬರುತ್ತಿರುವ ಭಜನೆ ಮೇಳದವರಿಗೆ ಕೇಳುತ್ತಾನೆ. ಅವನ ಹತ್ತಿರವೆ ಹೋಗುತ್ತಿದ್ದೇವೆಂದು ಹೇಳುತ್ತಾರೆ. ಅವರ ಹಿಂದೆಯೇ ಬಂದ ಸಿದ್ಧರಾಮನಿಗೆ ಶ್ರೀಶೈಲದ ಗುಡಿ ತೋರಿಸಿ ಇವನೇ ಮಲ್ಲಯ್ಯನೆಂದು ಹೇಳುತ್ತಾರೆ. ಸಿದ್ಧರಾಮ ಸಮಾಧಾನಪಡಲಿಲ್ಲ. ಕಮರಿ ಹಾರಲು ಪ್ರಯತ್ನಿಸುತ್ತಾನೆ. ಆಗ ಶಿವ ಬಂದು ಕಾಪಾಡುತ್ತಾನೆ. ಹೀಗೆ ಸಿದ್ಧರಾಮ ತನ್ನ ಹಟಯೋಗದ ಮೂಲಕ ಶಿವನನ್ನು ಕಂಡುಕೊಂಡನೆಂದು ಕಥೆ ವಿಸ್ತರಿಸಿಕೊಂಡು ಹೋಗುತ್ತದೆ.

ವೃಷಭ ಮುಖವನ್ನೆತ್ತಿ ಧರೆಗಿಳಿದ ಆದಿಬಸವನ ಚರಿತ್ರೆಯಿಂದ ಹಿಡಿದು ಹನ್ನೆರಡನೆಯ ಶತಮಾನದ ಬಸವಣ್ಣನವರನ್ನು ಕೂಡಿಸಿಕೊಂಡು ಇಂದಿನ ದನ ತಿನ್ನುವ, ಮಾಂಸ ಭಕ್ಷಣೆ ಮಾಡುವ ಜನರನ್ನು ಕುರಿತು ಹೇಳುವ ಕಥೆಯ ವಸ್ತುವೆ ವೀರಬಾಹುಕನ ವೃತ್ತಾಂತ. ವೀರಬಾಹುಕನ ಚರಿತ್ರೆಯನ್ನು ಹೇಳಹೊರಟ ಕವಿ ಅಸ್ಪೃಶ್ಯ ಶರಣ ಭಕ್ತಿ, ಸತ್ಯ ನೀತಿಯನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ದಲಿತರಲ್ಲಿಯು ಶರಣರು ಇದ್ದಾರೆಂದು ಹೇಳುವ ಪ್ರಯತ್ನ ಮಾಡಿದ್ದಾನೆ. ದಲಿತ ಶರಣನ ಗುಣಗಾನ ಮಾಡುವಲ್ಲಿ ಸತ್ಯ ಎತ್ತಿ ಹಿಡಿದಿದ್ದಾನೆ. ದಲಿತರನ್ನು ಕುರಿತಾಗಿ ಹಾಡುಗಳು ಇರುವುದಿಲ್ಲ. ಆದರೂ ಕೂಡ ಮಹಾನುಭಾವ ಬಸವೇಶ್ವರ ಹನ್ನೆರಡನೆ ಶತಮಾನದಲ್ಲಿ ತಂದ ಸಮಾನತೆಯನ್ನು ಯಾವ ಜನಪದ ಹಾಡುಗಾರರು ಮರೆಯುವಂತಿಲ್ಲ. ಇಂದಿನ ಹಾಡುಗಳು ಕೂಡ ಶರಣರ ಪುನರಾವಲೋಕನದ ಸೃಷ್ಟಿಗಳೆ ಆಗಿವೆ.

ಜನಪದ ಕಲೆಗಳು ನಿಜವಾಗಿಯೂ ಜನಸಾಮಾನ್ಯರಲ್ಲಿ ನೈತಿಕತೆಯನ್ನು ಬಿತ್ತುವ ಕೆಲಸ ಮಾಡಿದವು. ಸಾಮಾಜಿಕ ಜೀವನದಲ್ಲಿ ಹತ್ತಾರು ರೀತಿಯ ಜನರಿರುತ್ತಾರೆ. ಆದರೆ ಗಂಡ-ಹೆಂಡತಿಯರು ಸಾಮರಸ್ಯದಿಂದ ಬಾಳ್ವೆ ಮಾಡಬೇಕೆಂದು ಹೇಳಿಕೊಡುವ ಹಾಡೆ ಈ ಹೊನ್ನಮ್ಮ ಚನ್ನಮ್ಮರ ಚರಿತ್ರೆಯಾಗಿದೆ. ಹೊನ್ನಮ್ಮ ಮತ್ತು ಚನ್ನಮ್ಮ ಇಬ್ಬರ ಗುಣ- ಸ್ವಭಾವಗಳನ್ನು ವರ್ಣಿಸುವ ಕವಿ, ಹೊನ್ನಮ್ಮನ ಸಿಡುಕುತನ, ಗಯ್ಯಾಳಿತನ, ಕ್ರೂರತೆಯೆಲ್ಲವನ್ನು ಎತ್ತಿ ತೋರಿಸುತ್ತಾನೆ. ಅಂತಲೇ ಚನ್ನಮ್ಮನಲ್ಲಿರುವ ಸಾತ್ವಿಕ ಗುಣ, ಶಾಂತಚಿತ್ತವನ್ನು ಗುಣಗಾನ ಮಾಡುತ್ತಾನೆ. ಒಂದು ದಿವಸ ಚನ್ನಮ್ಮ ಗಂಡನ ಸೇವೆ ಮಾಡುವುದನ್ನು ಕಂಡು ಹೊನ್ನಮ್ಮನು ಕೂಡ ಅದೇ ರೀತಿ ಮಾಡಲು ಪ್ರಯತ್ನ ಮಾಡುತ್ತಾಳೆ. ಆದರೆ ಅದು ಶಾಶ್ವತ ಇರುವುದಿಲ್ಲ. ಚನ್ನಮ್ಮ ಗಂಡನ ಸೇವೆ ಮಾಡುವುದನ್ನು ಕಂಡು ಹೊನ್ನಮ್ಮನು ಮಾಡುತ್ತಾಳೆ. ಆದರೆ ಆಕೆಯ ಗಂಡನಿಗೆ ನಂಬಿಕೆ ಬರುವುದಿಲ್ಲ. ಜಂಗಮನನ್ನು ಮನೆಗೆ ಊಟಕ್ಕೆ ಬರ ಹೇಳುತ್ತಾಳೆ. ಬಂದಂತಹ ಜಂಗಮನಿಗೆ ಒನಕೆಯಿಂದ ಒರಳಲ್ಲಿ ಭತ್ತ ಕುಟ್ಟುತ್ತಿರುವಾಗ ಕೈ ಬಿಡುತ್ತಾಳೆ. ಜಂಗಮನ ಬಾಯಿಗೆ ಒನಕೆ ಬಿದ್ದು ಹಲ್ಲು ಉದುರುತ್ತವೆ. ಜಂಗಮ ಮನೆಯಿಂದ ಊಟ ಮಾಡಿಸುವ ಅವನನ್ನು ಕರೆತರಲು ಬೆನ್ನು ಹತ್ತುತ್ತಾಳೆ. ಆದರೆ ಆತ ಸಿಗುವುದಿಲ್ಲ. ತಿರುಗಿ ಮನೆಗೆ ಬಂದು ಗಂಡನಿಗೆ ಹೊಡೆಯುತ್ತಾಳೆ. ಇಂತಹ ಹೆಂಗಸರು ನೀವಾಗಬೇಡಿರೆಂದು ಹಾಡುಗಾರ ಕರೆಕೊಡುವ ರೀತಿ ಅವಿಸ್ಮರಣೀಯವಾಗಿದೆ.

ಈರಣ್ಣ ಮತ್ತು ಸಂಗಣ್ಣ ಎಂಬುವ ಜೀವದ ಗೆಳೆಯರಿದ್ದರು. ಸಂಗಣ್ಣನಿಗೆ ಮದುವೆಯಾಗಿತ್ತು. ಈರಣ್ಣನಿಗೆ ಆಗಿದ್ದಿಲ್ಲ, ಇವರಿಬ್ಬರು ತಾಲೀಮದಲ್ಲಿಯ ಜೀವದ ಗೆಳೆಯರು. ಸಂಗಣ್ಣನಿಗೆ ಚಿಕ್ಕಂದಿನಲ್ಲಿಯೇ ಮದುವೆಯಾಗಿದ್ದರಿಂದ ಹೆಂಡತಿ ವಯಸ್ಸಿಗೆ ಬಂದ ಮೇಲೆ ಗಂಡನ ಮನೆಗೆ ಕರೆ ತರುತ್ತಾರೆ. ಊರಿಗೆ ಹೊಸದಾಗಿ ಬಂದ ಹೆಣ್ಣಿನ ಮೇಲೆ ಈರಣ್ಣನ ದೃಷ್ಟಿ ಬೀಳುತ್ತದೆ. ಗೆಳೆಯನ ಹೆಂಡತಿಯೆಂದು ಗೊತ್ತಿಲ್ಲದೆ ಆಕೆ ಬೇಕೆಂದು ಸಂಗಣ್ಣನ ಮುಂದೆ ಬಂದು ಹೇಳುತ್ತಾನೆ. ಸಂಗಣ್ಣ ಅವನು ಹೇಳುವ ಪರಿ ಕಂಡು ತನ್ನ ಹೆಂಡತಿಯೆಂದೆ ಗೊತ್ತುಪಡಿಸಿಕೊಳ್ಳುತ್ತಾನೆ. ಗೆಳೆತನಕ್ಕಿಂತಲೂ ಹೆಂಡತಿ ಹೆಚ್ಚಿನವಳಲ್ಲವೆಂದು ಹಾಡು ಸಾರಿ ಹೇಳುತ್ತದೆ. ಗೆಳೆಯನ ಜೊತೆ ಮಲಗಲು ಹೆಂಡತಿಗೆ ಒಪ್ಪಿಸಿ ತನ್ನ ಹತ್ತಿಯಾರ ಗೂಟ ಸಿಕ್ಕಿಸಿ ಗೆಳೆಯನನ್ನು ಕರೆತರಲು ಹೋಗುತ್ತಾನೆ. ಗೆಳೆಯ ಈರಣ್ಣ ಆ ಹೆಣ್ಣಿನ ಮನೆಗೆ ಬರುತ್ತಾನೆ. ಮಂಚದ ಮೇಲೆ ಕೂತಾಗ ಗೆಳೆಯನ ಹತಿಯಾರ ನೋಡಿ ಈಕೆ ಗೆಳೆಯನ ಹೆಂಡತಿ ಅಣ್ಣನೆಂದು ಕರೆಯುವ ಗೆಳೆಯನ ಹತಿಯಾರ ನೋಡಿ ಗೆಳೆಯನ ಹೆಂಡತಿ ಅತ್ತಿಗೆ ತಾಯಿ ಸಮಾನವೆಂದು ಪಶ್ಚಾತ್ತಾಪಪಟ್ಟು, ಅದೆ ಅತಿಯಾರ (ಖಡ್ಗ)ದಿಂದ ಹತನಾಗುತ್ತಾನೆ. ಗಂಡ ಹೊಡೆಯುವನೆಂದು ಹೆಂಡತಿ ಹತಳಾಗುತ್ತಾಳೆ. ಗೆಳೆಯ ಬರಲಿಲ್ಲವೆಂದು ಸಂಗಣ್ಣ ಬಂದು ನೋಡಿ ಆತನು ಹತನಾಗುತ್ತಾನೆ. ಅವರು ಸಾಕಿದ ಗಿಳಿ ಅವರಿಗೆ ಕೊಟ್ಟ ಕಿಚ್ಚಿನಲ್ಲಿ ಸಾಯಲು ಹೋಗುತ್ತದೆ. ಶಿವ ಪ್ರತ್ಯಕ್ಷನಾಗಿ ಗಿಳಿಯನ್ನು ಎತ್ತಿ ಹಿಡಿಯುತ್ತಾನೆ. ಇಲ್ಲಿ ಮೂವರು ಹತರಾದವರು ಪಾವಿತ್ರದಿಂದ ಇದ್ದವರು ಎಂದು ಸುದ್ದಿ ಗಿಳಿ ಮುಟ್ಟಿಸುತ್ತದೆ. ಆಗ ಮತ್ತೆ ಯಥಾವತ್ತಾಗಿ ತಮ್ಮ ಮನೆಗೆ ಹೋಗುತ್ತಾರೆ.

ಹಾಡುಗಾರರು ರಂಗ ನೋಡಿ ರಾಗ ತೆಗೆಯುವ ಕಲೆಗಾರಿಕೆಯನ್ನು ಕರಗತ ಮಾಡಿಕೊಂಡವರಾಗಿದ್ದಾರೆ. ದಲಿತ ಓಣಿಗಳಲ್ಲಿ ಹಾಡಲು ನಿಂತರೆ ಅಂಬೇಡ್ಕರರ ಜೀವ ಚರಿತ್ರೆಯ ಹಾಡನ್ನು ಹಾಡುವುದು. ಸಾರ್ವಜನಿಕ ಸ್ಥಳದಲ್ಲಿ ನೀತಿ, ತತ್ವದ ಹಾಡು ಹಾಡುವುದನ್ನು ಮಾಡುತ್ತಾರೆ. ಕಲಿಯುಗದಲ್ಲಿ ದಲಿತರಿಗೆ ನ್ಯಾಯ ಸಿಕ್ಕಿದೆಯೆಂದು ಹೇಳಿದರೆ, ಅದು ಅಂಬೇಡ್ಕರ ಎಂಬ ಮಹಾನ್‌ ವ್ಯಕ್ತಿಯಿಂದ ಮಾತ್ರ ಸಾಧ್ಯ. ಹಾಗಾಗಿ ಅಂಬೇಡ್ಕರ್‌ರ ಚರಿತ್ರೆ ಓದು ಬರಹಬಲ್ಲವನಿಗೆ ಗೊತ್ತು, ಆದರೆ ಅನಕ್ಷರಸ್ಥ ಜನರಿಗೂ ಸಮಾನತೆಯ ಹರಿಕಾರನ ಜ್ಞಾನ ಮುಟ್ಟಿಸುವ ಸಲುವಾಗಿ ಲಾವಣಿ ಹಾಡುಗಾರರು ಹಾಕುವ ಶ್ರಮ, ಜನರ ಮನೆಬಾಗಿಲಿಗೆ ಒಯ್ದು ನಿಲ್ಲಿಸುವ ಅಂಬೇಡ್ಕರರ ತತ್ವ ಸಿದ್ಧಾಂತಗಳು ನಿಜವಾಗಿಯೂ ಓದುಬರಹ ಬಂದವರಿಗೂ ಸಾಧ್ಯವಾಗಲಿಕ್ಕಿಲ್ಲ. ಅಂಬೇಡ್ಕರರ ಕಷ್ಟಕಾಲದ ಜೀವನದಿಂದ ಹಿಡಿದು ಸಯ್ಯಾಜಿರಾವ್ ಗಾಯಕ್ವಾಡ್ ಅವರು ಶಿಷ್ಯವೇತನ ಕೊಡಿಸಿ ಅವರಿಗೆ ಹೊರದೇಶಕ್ಕೆ ಅಭ್ಯಾಸಕ್ಕಾಗಿ ಕೊಟ್ಟು ಕಳುಹಿಸುವ ಚರಿತ್ರೆ ನಿರರ್ಗಳವಾಗಿ ಹೇಳುತ್ತಾರೆ.

ಜಾತಿ ವ್ಯವಸ್ಥೆಯ ಕುರಿತಾದಂತಹ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕಾಳಾರಾಮ ದೇವಾಲಯ ಪ್ರವೇಶ, ಚೌಡಾರ ಕೆರೆಯ ನೀರನ್ನು ಮುಟ್ಟಿ ದಲಿತರಿಗೆ ಒಂದು ಶಕ್ತಿಚೇತನವಾಗಿ ಕಂಗೊಳಿಸಿದ ಚರಿತ್ರೆ ಶಿಷ್ಟದಿಂದ ಜನಪದಕ್ಕೆ ಪರಿವರ್ತಿಸಿ ಹಾಡುವ ಕ್ರಿಯೆ ಪರಿಣತಿ ಪಡೆದಂತಹ ಲಾವಣಿ ಹಾಡುಗಾರನಿಗೆ ಮಾತ್ರ ಲಭ್ಯ. ಅಲ್ಲದೆ ಭಾರತದ ಸಂವಿಧಾನ ಬರೆಯುವುದಕ್ಕಾಗಿ ದೇಶ ವಿದೇಶಗಳನ್ನು ತಿರುಗಿ ಬಂದದ್ದು, ನಂತರ ಸಂವಿಧಾನ ಕಮಿಟಿ ಆಗಿದ್ದು, ದಲಿತರೆಂದರೆ ಯಾರ‍್ಯಾರು? ಬರೀ ಹೊಲೆಯ ಮಾದಿಗರಲ್ಲ. ನೂರೆಂಟು ಜಾತಿಯವರೆಲ್ಲ ದಲಿತರೆ ಎಂದು ತಿಳಿಯಹೇಳುವ ಕೆಲಸ ಲಾವಣಿಕಾರರು ಮಾಡುವುದು ಎಷ್ಟೊಂದು ಸಮಂಜಸವೆನಿಸುತ್ತದೆ ಎಂದರೆ ಇಂದಿನ ನಮ್ಮ ಭಾರತ ಪ್ರಜಾಸತ್ತಾತ್ಮಕವಾಗಲು ಹಳ್ಳಿ ಹಳ್ಳಿಗಳಿಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಲಾವಣಿಕಾರರು ನಿರಂತರವಾದ ಶ್ರಮಪಟ್ಟಿದ್ದಾರೆ. ಇತ್ತೀಚೆಗೆ ಪಾರ್ಲಿಮೆಂಟಿನಲ್ಲಾದ ಬದಲಾವಣೆಗಳನ್ನು ತಿಳಿಸುವ ಕೆಲಸವು ಲಾವಣಿಕಾರರು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಲಾವಣಿಯು ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಾಗಿ ಬೇಕಾದ ಕಲೆಯಾಗಿದೆ.

ಡಾ. ಹರಿಶ್ಚಂದ್ರ ದಿಗ್ಸಂಗಿಕರ್