ಜೋಗಾ ಮಾಡೋ ಜೋಗತ್ಯಾರೆಲ್ಲ ಜಗ ತಲಿಮ್ಯಾಲ ಹೊತ್ತು
ಜೋಗಯ್ಯ ಎಲ್ಲಮ್ಮನ ನಾಮ ಸ್ಮರಿಸುತ ಜೋಕಿಲೆ ಹೊಕ್ಕಾರ ||
ನಮ ಎಲ್ಲಿನೆ ಅಧಿಕೆಂದು ಬಾಯಿಲಿ ಬಲ್ಲಂಗ ಕೂಗತಾರ ||
ಮಾಯಿ ಪರಶುರಾಮನ ತಾಯಿಯೆಂದು ತಲಿ ತೂಗತಾರ ||
ದೇವರಿಗಿ ಇವರಿಗಿ ಬಿಟ್ಟ ಮೇಲೆ ದೇವರಂಗೆ ಇರಬೇಕು
ದೆವ್ವನಂಗೆ ದಬದಬ ಹಡಸಿ ದೆವ್ವನಂಗೆ ನಗತಾರ ||
ಈ ಭಂಡ ಸೂಳ್ಯಾರು ತುಂಡಿಗಾಗಿ ಬಾಗತಾರ || ಜೀ ||

ರೇಣುಕಾ ರಾಜನ ಮಗಳು ರೇಣಕಾ ದೇವಿ ಇದ್ದಳು
ರಾಜನ ಗ್ರಾಮ ದೇವತಿ ಹೆಸರ ಎಲ್ಲಮ್ಮ ಇಟ್ಟಾರ ||
ಪೂರ್ಣ ಬಾರಾ ವರ್ಷದ ಪ್ರಾಯ ಬಂದಿತು ಭರಪೂರಾ ||
ಅಕಿನ ದಿವ್ಯಾ ರೂಪ ಬೆಳಗಿದಂಗೆ ಕರ ಪೂರಾ ||
ಛಪ್ಪನ್ನ ದೇಶ ರಾಜಧಾನಿ ವೃತ್ತಿಲಿಂದ ತಿರಗಿದಾರ
ಛಪ್ಪನ್ನೆ ರೇಣುಕಿಗಿ ಕೊಟ್ಟು ಬಿಡಬೇಕೆಂದರಾ ||
ಎಂಥ ಸುಂದರ ಇದ್ದರೂ ಎಲ್ಲೆಂದೆ ತಗದಿಳು ತೊಂದರ  || ಜೀ ||

ರೇಣುಕಾ ಮಹಾರಾಜ ಮಗಳು ರೇಣುಕಾಗ ಕೇಳಿದಾನು
ಪೂರ್ಣ ಈ ಧುರಣಿಯೊಳು ಯಾರು ನಿರಥರಾ ||
ಅಂಥ ವೀರ ಶೂರ ಧೀರ ಪುರುಷ ನಿನಗ ಯಾರು ಗುರುಥರಾ  ||
ಝಟ್ಟನೆ ರೇಣುಕಿ ನುಡದಿದಾಳು ಅಷ್ಟದಿಕ್‌ಪಾಲರೊಳು
ಶ್ರೇಷ್ಠ ಜಮದಗ್ನಿ ಮುನಿ ಸೃಷ್ಟಿಗಿ ಕರಥರಾ ||
ಅವನಿಗಿ ಬಿಟ್ಟು ಮತ್ಯಾರಿಗಿ ವಲ್ಲ ಕರಸಿರಿ ತ್ವೊರಾ ||  ಜೀ ||

ದುಮಾಲಿ
ನೀ ರಾಜನಲ್ಲಿ ಆಗಿ ಪ್ರಕಟ ನುಡಿಬೇಡ ಕೆಟ್ಟ ||
ನಿನ್ನ ಅದೃಷ್ಟ ಕೇಳಿತು ನಾಳ ನಾ ನಿನಗ ಹೇಳುದಿಲ್ಲ ಬಹಳ  || ಜೀ ||
ರೇಣುಕಾ ತಂದಿಗಿ ಹೇಳಿಳು ಸ್ಪಷ್ಟ ಜನದಗ್ನಿಗಿ ಕೊಟ್ಟ ||
ಲಗ್ನ ಝಟಪಟ ಮಾಡಿಕೊಂಡು ಸರಳ ಹೇಳುತ ಕೂಡಬೇಡ ರಗಳ  || ಜೀ ||
ರೇಣುಕಾ ರಾಜ ಹೋಗಿದ ಹೊಂಟ ಜಮದಗ್ನಿ ಇದ್ದ ಬೆಟ್ಟ  ||
ಪುಟಸಲಿ ಹಾಕಿ ಮುಟ್ಟಾ ಮಗಿ ಮುಚ್ಯಾಳ ಕಂಡು ಅಂದ ಮಗಳು ಹುಚ್ಚ ಹಳಾ  || ಜೀ ||

ರೇಣುಕಾ ಮಹಾರಾಜ ಹೊರಗ ಕೈ ಮುಗಿದು ಅಂದಾನು ಮಹಾಕೀರ್ತಿ
ಜಗ ಭರಿತ ಜಮದಗ್ನಿಯವರಾ ||
ಒಳ್ಳೆ ಜಾಗೃತದಿಂದ ಕೇಳಿರೆಂದು ಹೇಳಿದ ಸಮಾಚಾರ ||
ನನ್ನ ಮಗಳು ನಿನಗ ಕೊಡಬೇಕೆಂದು ಬಂದಿನಿ ಮಹಾವೀರ ||
ದೇವರಿಗಿ ಇವರಿಗಿ ಬಿಟ್ಟ ಮೇಲೆ ದೇವರಂಗೆ ಇರಬೇಕು
ದೆವ್ವಿನಂಗ ದಬ ದಬ ಹಡಸಿ ದೆವ್ವಿನಂಗೆ ನಗತಾರ
ಈ ಭಂಡ ಸೂಳ್ಯಾರು ತುಂಡಿಗಾಗಿ ಕಂಡವರಿಗಿ ಬಾಗತಾರ || ಜೀ ||  ಚೌಕ: ೧

ಜಮದಗ್ನಿ ಮಹಾಯೋಗಿ ಅಂದ ರೇಣುಕಾ ಮಹಾರಾಜರಿಗಿ
ಮುಖ್ಯ ನಿನ್ನ ಮಗಳು ಕೇಳಬೇಕು ನಾ ಹೇಳಿದಂಗ ||
ಅವಳು ಹೇಳಿದಂಗ ಕೇಳೂದಕ ನಾ ಅಲ್ಲ ಮಂಗ ||
ಮೊದಲು ಮಾತಿಂದ ಕರಾರ ಹಿಂದಿಂದು ಲಗ್ನ ಆಗಲಿ, ಸಾಂಗ ಪಾಂಗ ||
ಕೂಡ ಅಂದ್ರ ಕೊಡಬೇಕು ಅಡಗಿ ಮಾಡ ಅಂದ್ರ ಮಾಡಬೇಕು
ಹೇಳಿದ ವ್ಯಾಳಿಗ ನಾ ಮಲಗಿಲ್ಲ ಅಂದಾಳು ಕರೆಸಿ ಕೇಳಿರಿ ಅವಳೀಗಿ  || ಜೀ ||

ರೇಣುಕಾ ರಾಜ ಮಗಳಿಗಿ ಕರಸಿದ ಖುಷಿ ಸಮಾಚಾರ ತಿಳಿಸಿದ
ರೇಣುಕಾ ದೇವಿ ಖುಷಿ ಮಾತಿಗಿ ಆಗಿಳು ಒಪ್ಪಿಗ ||
ನಾಳ ಗೋಳ ಆದಿತು ಹೇಳಿದರ ಕೇಳಾಂವ ತಪ್ಪಿಗ ||
ಹೇಳಿ ಕೇಳಿ ಮುಗದ ಹೋತು ಗಂಧರ್ವ ಲಗ್ನ ಮಾಡಿ ಮುಗಿಸಿತು
ರೇಣುಕಿಗಿ ಕರಕೊಂಡು ಬಂದ ತಾಂವಿದ್ದ ಅಡಿಗ ||
ಗುಡಿಸಲದೊಳು ಕರಸಿ ಗುರುಬೋಧ ಮಾಡಿದ ನುಡಿನುಡಿಗ  || ಜೀ ||

ಹಾವಿನ ಸಿಂಬಿ ಉಸುಕಿನ ಕೊಡಾ ಹೊತ್ತು ಖುಸಿ ಖುಸಿಲೆ
ದೌಡ ರಸ ಕಸವಿಲ್ಲದೆ ನೀರು ತರಬೇಕು ಹೋಗಿ ಹೊಳಿಗ ||
ವ್ಯಾಳ್ಯಾಗಳಿಯದೆ ತಿರಗಿ ಬರಬೇಕು ಬಹಳ ಮೇಳಿಗ ||
ಇದರಾಗ ಫೇರ ಬಿದ್ದರ ಗೋಳ ಬಂದ ಕುಂತಿತು ನಾಳಿಗ ||
ಜಮದಗ್ನಿ ಹೇಳಿದ ನಗುನಗುತ ರೇಣುಕಿ ನಡದಿಳು ಕೊಡ ಹೊತ್ತ ||
ವ್ಯಾಳ್ಯಾ ಬಂದು ಒದಗಿ ತರೆಣ್ಣ ಅಗದಿ ತಾಳಿಗಿ ||
ಗಂಡು ಹೆಣ್ಣು ಮೀನು ತಳಕ ಬಿದ್ದಿವು ತಮ್ಮ ಕಿಳ್ಳಿಗಿ  || ಜೀ ||

ರೇಣುಕಿ ನೋಡಿಳು ಮೀನಿನ ಆಟ ಕೊಡ ಅಲ್ಲೆ ಇಟ್ಟ ||
ಮನಿ ಕಡಿ ಕುದಿಬಿಟ್ಟು ಆಗಿದಾಳು ಬ್ರಷ್ಟ ನಾ ಎಂದು ಕೂಡೆನು ಹಿಂಗ ಕುಟ್ಟ || ಜೀ ||
ಅದರಾಗೆ ಟೈಮು ಆಗಿತು ಗಂಟ ಎದ್ದು ಝಟಪಟ ಕೊಡದ ಕಡಿ ಹೊಂಟ ||
ಸಿಂಬಿ ಹೋಗಿ ಹಾವಾಗಿ ನಿಂತು ಮುಟ್ಟ ಕಂಡು ರೇಣುಕಿ ಎದಿ ಅಂತು ಲಟ್ಟ || ಜೀ ||

ಕೊಡ ಹಿಡಿಯೋದು ನಡಸೀಳು ಖಡಿಪಟ ಉಸಕ ಆಗಿ ಬಿಟ್ಟ ||
ಬುಸಗರಿಯುತ ಹಾಂವ ನಡಸಿತು ಆಟ ರೇಣುಕಿ ಅಂದಿಳು ಬಂತ ಬಿಕ್ಕಟ್ಟ || ಜೀ ||
ಹೆಣ್ಣಿನ ಬಡಾಯಿ ಹಾಡುವಂತ ಬಾಡಿಗಿ ಮೂಗ್ಯಾರ ||
ಆ ವ್ಯಾಳ್ಯಾಕ ಮಹಾಗಾಂವ ಕಲಬುರ್ಗಿಯವರು ಎಲ್ಲಿ ಹೋಗ್ಯಾರ ||
ದೇವರಿಗಿ ಇವರಿಗಿ ಬಿಟ್ಟ ಮೇಲೆ ದೇವರಂಗೆ ಇರಬೇಕು
ದೆವ್ವಿನಂಗ ದಬದಬ ಹಡಸಿ ದೆವ್ವಿನಂಗ ನಗತಾರ ||
ಈ ದಂಡ ಸೂಳ್ಯಾರು ತುಂಡಿಗಾಗಿ ಕಂಡವರಿಗಿ ಬಾಗತಾರ  || ಜೀ ||             ಚೌಕ : ೨

ಇಳಿಯುತ ಬಂದಂಗ ತಿಳಿಯುತ ಬರತೈತಿ
ಅಳುತ ರೇಣುಕಿ ಮೆಲ್ಲಕ ಬಂದು ನಿಂತಿದಾಳು ಗಂಡನ ಎದರಿಗ ||
ಜಮದಗ್ನಿ ಮುನಿ ಕೇಳಿದಾನು ರೇಣುಕಿ ಚದರೀಗ ||
ಹಾವಿನ ಸಿಂಬಿ ಉಸಕಿನ ಕೊಡ ತಗೊಂಡು ಹೋಗಿದಿ ನೀರಿಗ ||
ಕೊಡ ಸಿಂಬಿ ಏನ ಆಯ್ತು ಘಡನೆ ಹೇಳೆಂದ ಮತ್ತ
ಎದಿ ಒಡದು ನಡಗುತ ಶರಗ ಹಾಕಿದಳು ಮಾರಿಗ ||
ಘೋರ ದುಖ ಮಾಡುತ ಹೇಳಿದಾಳು ಭರಿ ಭರಿಗ || ಜೀ ||

ಕೊಡ ಸಿಂಬಿ ತಗೊಂಡ ಪ್ರಿಯ ಹೊಳಿಗ ಹೋದ ಮಹಾರಾಯ
ಹೆಣ್ಣು ಗಂಡು ಮೀನು ಕುಟ್ಟಿ ಕುಂತಿವು ಸರಿಯಾಗಿ ||
ನಾ ಸ್ಪಷ್ಟ ನೋಡುತ ನಿಂತಿದೆನು ಅಲ್ಲೆ ಮರಿಗಿ ||
ಆಟ ಬಿಟ್ಟ ಮೇಲೆ ಕೊಡದ ಕಡಿಗೆ ಬಂದಿದೆ ತಿರಗಿ ||
ಸಿಂಬಿ ಹೋಗಿ ಹಾಂವ ಆತು ಕೊಡ ಒಡದು ಉಸಕ ಆತು
ಎದಿ ಧಸ್ಸೆಂದು ನಾ ಬಂದಿದೆನು ತಿರಗಿ ||
ಆ ಮೀನಿನ ಕುಟ್ಟೆದಾಟ ಇಷ್ಟ ಹಾಕಿತ ಗುದಮುರಗಿ || ಜೀ ||

ದುಮಾಲಿ
ಜಮದಗ್ನಿಗಿ ಬಂದಿತು ಕೋಪ || ಕಣ್ಣ ಮಾಡಿಕೆಪ್ಪ ||
ಕೊಟ್ಟಿದಾನು ಶಾಪ ಮಹಾರೋಗಿಯಾಗಿ ಹೋಗು ಎಂದಿದ ಇಲ್ಲಿಂದ ಸಾಗಿ || ಜೀ ||
ರೇಣುಕಿ ಮೈ ಆಗಿತು ದಪ್ಪ ಆಗಿಂದಾಗೆ ಕಪ್ಪ ||
ಬಂದ ಒದಗಿತು ತಪ್ಪ ಕಾಲಕ ಒದಗಿ ಏನ ಹೇಳದೈತಿ ಮಂದಿಗಿ || ಜೀ ||
ಹಿರೇ ಗುಡ್ಡಕ ಹೋಗಿದಾಳು ಝಪಝಪ || ಗೈಯುತ ಜಪ ||
ಜೋಗಮುನಿ ಭೂಪ || ಕೈಯಾಗ ಎರಗಿ ಆಗಿದು ಹೇಳಿಳು ಗುದಮುರಗಿ ||
ಜೋಗಯ್ಯ ಎಕ್ಕಯ್ಯ ಕುಡಿ ಮುನ್ನಿಪ || ಉದರಿಸು ಅಂದಿರು ಸರತಿಗಿ  || ಜೀ ||

ಏರ
ಮುಪ್ಪಿನ ಜಮದಗ್ನಿ ಮುನಿ ಪಾದೋದಕ ಮೇಲೆ ಚೆಲ್ಲಿದ
ಪೈಲೆದಂತೆ ಸ್ವರೂಪ ಆತು ಪಾಪ ನೀಗ್ಯಾರ ||
ಮುನಿ ಗುರುತ ಮರ್ತ್ಯೆದೊಳಿರಲೆಂದು
ಮೂವರು ಕೂಗ್ಯಾರ ಜೋಗಯ್ಯ ಎಕ್ಕಯ್ಯ ತಿರಗಿ
ಅದೆ ಗುಡ್ಡಕ ಹೋಗ್ಯಾರ  || ಜೀ ||
ದೇವರಿಗಿ ಇವರಿಗಿ ಬಿಟ್ಟ ಮೇಲೆ…     ಚೌಕ : ೩

ಜಮದಗ್ನಿ ರೇಣುಕಿ ಹೊಟ್ಟಿಯೊಳು ನಾಲ್ವರು ಮಕ್ಕಳು
ಹುಟ್ಟಿದಾರೂ ಮೊದಲಿನವನ ಹೆಸರು ಪರಶುರಾಮ ಇಟ್ಟಾರ ||
ಹಿಂದಿನ ಮೂವರ ಹೆಸರ ನಾಗೇಶಿಯವರಿಗಿ ಕೇಳತಿನಿ ಜರಾ ||
ತಿಳಿದರ ಹೇಳಿರಿ ತಿಳಿಯದಿದ್ದರ ಇಲ್ಲರಿ ತಕರಾರ
ಪರಶುರಾಮ ನಿತ್ಯೆ ಸತ್ಯೇಕ ಸಾಲಿಗಿ ಹೋಗತಿದ್ದ
ಕಾಮದೇನು ಇತ್ತು ಜಮದಗ್ನಿ ಹತ್ತಿರ ||
ಕಾರ್ತ್ಯವೀರ್ಯ ಅರ್ಜುನಗ ಗೊತ್ತಾಗಿತ್ತು ಸೂತರ  || ಜೀ ||

ಜಮದಗ್ನಿ ಆಶ್ರಮಕ ಕಾರ್ತ್ಯವೀರ್ಯ ಬಂದಿದಾನು
ಸಾವಿರ ತೆಲಿ ಎರಡು ಸಾವಿರ ಕೈ ಇದ್ದವು ಪೂರಾ ||
ಕಾರ್ತ್ಯವೀರ್ಯನ ಸ್ವರೂಪ ನೋಡಿ ರೇಣುಕಿ ಹೊಯ್ತನೆದರ ||
ಏನು ಬೇಡತಿ ಬೇಡು ಬೇಡಿದು ಕೊಡುವೆನು ಸನಿಹಕ ಬಂದರ ||
ಎದರಾಗ ಆದ ನಿನ ಗಂಡನ ಮರಣ ||
ಹೇಳಿದ್ರ ಬರ್ತಾ ಅಂದ ಜಾಣ ಪಾತಕಿ ಹೊಡಸಿಳು ಗಂಡನ ಪ್ರಾಣ ||
ಎಂಥ ಪಾತಕರಾ ಮಿಂಡನ ತುಂಡಿಗಾಗಿ ಗಂಡನ ಪ್ರಾಣ ಕಳ್ಯಾ ಘಾತಕರಾ || ಜೀ ||

ಜಮದಗ್ನಿ ಸತ್ತ ಹೇಳಿಕೇಳಿ ರೇಣುಕಿ ತಗದಿಳು ರಂಡಿ ಬಳಿ
ಪರಶುರಾಮ ಸುದ್ದಿ ಕೇಳಿ ಹೊರಳಿ ಬಂದಾರ ||
ಕಾರ್ತ್ಯವೀರ್ಯನ ಗುಡ ಯುದ್ಧ ಮಾಡಿ ಅವನ ಕೊಂದಾರ ||
ತಿರುಗಿ ಬಂದು ತಂದಿ ಪ್ರಾಣ ಪ್ರತಿಷ್ಠ ಪಡಿಸಿದ ಬಂದೂರ ||
ಜಮದಗ್ನಿಗಿ ಬಂದಿತು ಸಿಟ್ಟ ರೇಣುಕಿಗಿ ಬಿಡು ಅಂದ ಸುಟ್ಟ ||
ದಿಟ್ಟ ಪರಶುರಾಮ ತಾಯಿಗಿ ಸುಟ್ಟ ಚೆದರ ||
ಹಿಂಗ ಹಡಸೋ ಹೆಂಗಸರಿಗಿ ಹ್ಯಾಂಗ ಪತಿವೃತ ಅಂದಾರ || ಜೀ ||

ದುಮಾಲಿ
ಅದೇ ಜಮದಗ್ನಿ ಕೊಡ ಹೊರತಾರ ಅದೇ ಮರತಾರ
ಉಟ್ಟಿ ತರತರ ಉಡತಾರ ಪೋಷಾಕ ಪರಶುರಾಮ ಅಂತಾರ ಬೇಷಾಕ || ಜೀ ||
ಸದ್ದೆ ಹಿರೇ ಗುಡ್ಡಕ ಹೋಗತಾರ ಈಗಿನ ಜೋಗತ್ಯಾರ ||
ಜೋಗಯ್ಯ ಎಕ್ಕಯ್ಯ ಎಂದು ವೈಶಾಖ ಬಳಿ ಒಡದು ಬರತಾರ ವರ್ಷಕ || ಜೀ ||
ಜೋಗಯ್ಯ ಎಕ್ಕಯ್ಯ ಎಂದು ನುಡಿತಾರ ಬಳಿ ಒಡಿತಾರ
ಕರ ಮಣಿ ಕಡಿತಾರ ಮಾಡಿದ ದೋಷಕ ನಾವು ಆಡಿದರೆ ರೋಷಾಕ || ಜೀ ||
ಜೋಗತ್ಯಾರು ಸದಾ ತುಂಡ್ಯಾರು ರಂಡ ಮುಂಡ್ಯಾರು
ಜಗ ಭಂಡ್ಯಾರು ಕಾರಣ ಹಾಶಕ ಇವರ ಹೂರಣ ಗೊತ್ತೈತಿ ದೇಶಕ  || ಜೀ ||

ಏರ
ಧರೆಯೊಳು ಹಿರೇ ಸಾವಳಗಿ ಜಗದ್ಗುರು ಶಿವಯೋಗಿ
ಜಾಣ ಮಹ್ಮದ ಕವಿ ಜೋಗಣ್ಯಾರ ಚರಿತ್ರ ಕೂಗತಾರ
ಜೋಗಯ್ಯ ಎಕ್ಕಯ್ಯ ಹೆಸರ ಮೇಲೆ ಬದಕ್ಯಾರ
ನಿಮ್ಮ ಜೋಗತ್ಯಾರ  || ಜೀ ||          ಚೌಕ : ೪