ತ್ರಿಪೂರ ಸಂವರಿಸಿದಂತ ತ್ರಿಮೂರ್ತಿಯಲ್ಲಿ ಶ್ರೇಷ್ಟನಾದ ತ್ರಿಂಭಕೇಶ್ವರ ||
ಶ್ರೀ ಶೈಲದಲ್ಲಿ ನೆಲೆಸಿದ ಮುಕ್ಕಣ್ಣ ||
ನೀವು ತ್ರಿಕರಣ ಶುದ್ಧ ಆತ್ಮರಾಗಿ ಕೇಳಿರಿ ಪ್ರಕರಣ ||
ಶ್ರೀ ಶೈಲದ ಹತ್ತಿರ ಶಿವಶೈಲ ಎಂಬುದು ಇತ್ತೊಂದು ಪಟ್ಟಣ ||
ಸತಿ ಪತಿ ದಂಪತಿ ಕೂಡಿದು ಜೋಡಿ ||
ಕಂತು ಪಿತನ ನಾಮ ಕೊಂಡಾಡಿ ||
ಮುತ್ತೈದಿ ಎಂಬ ಸತಿನ ವಡಗೂಡಿಕೊಂಡು ಇದ್ದಾರೂ ನಿಜ ಶರಣ ||
ತಿರುನೀಲಕಂಠರ ವಿದ್ಯ ಕೇಳಿದರ ಜನ್ಮ ಉದ್ಧರಣ  || ಜೀ ||

ಆಚಾರ ವಿಚಾರ ನಿಷ್ಟಾಚಾರದ ಶಿವಚಾರ ತತ್ವದ ಸ್ವಾದ  ||
ಆತನ ಸತಿ ಮುತ್ತೈದಿ ಆದರೂ ನಿಪೂರ್ಣ ||
ಪಾರ್ವತಿ ಲಕ್ಷ್ಮಿ ಸರಸ್ವತಿಯರಂತೆ ಸದಾ ಪತಿ ಪಾರಾಯಣ ||
ಸತಿ ಪತಿ ಇಬ್ಬರೂ ಹಿತದಿಂದ ಇದ್ದಾರೂ ಭೂಷಣ ||
ಶಿವನಕ್ಕಿಂತ ಅಧಿಕ ಯಾರೂ ಇಲ್ಲ ಶಿವನಿಗಿ ಬಿಟ್ಟು ದೇವರಿಲ್ಲ
ಭವರೋಗದಿಂದ ಮುಕ್ತಿ ಮಾಡೆಂದು ಹರನಾಮ ಸ್ಮರಣ ||
ಶಿವನೆ ಉತ್ತಮನೆಂದು ಹಿಡಿಯುವರು ಶಿವಶರಣರ ಚರಣ ||  ಜೀ ||

ಶಿವರಾತ್ರಿ ಪ್ರದೋಶಕಾಲದ ವ್ಯರ್ಥ ಹದಿನಾರು ಸೋಮವಾರದ ವೃಥ
ಶ್ರೀ ಸತ್ಯೆ ಶಂಕರ ವೃಥ ಆಚಾರದ ಭರಣ ||
ಹುಚ್ಚ ಜನ ಸಮುದಾಯಕ ಹ್ಯಾಂಗ ಮಾಡುವರು ಸುಧಾರಣ ||
ಅವರ ಖುದ್ದಾಗೊಂಡು ಭವದ ಜನರು ಆಗಿದಾರೂ ಜಾಣ ||
ಹತ್ತೆಂಟು ಮಂದಿ ಹೆಣ್ಣು ಮಕ್ಕಳು ಕೂಡಿ
ಮುತ್ತೈದಿ ಬಲ್ಲಿ ಬರುವರು ಒಡ್ಡಿ
ಶಿವನಾಮ ಭಜನ ಶಿವನಾಮ ಸ್ಮರಣ ಹೇಳುವರು ಪುರಾಣ ||
ಅವರ ನೇಮ ಕೇಳಿ ಕುಗ್ರಾಮದವರಿಗಿ ಆಗಿತ್ತು ಜ್ಞಾನ ಪೂರ್ಣ || ಜೀ ||

ದುಮಾಲಿ
ತಿರುನೀಲಕಂಠರ ಸತಿ ಮುತ್ತೈದಿ || ಹೆಣ್ಣು ಮಗಳು ಕಲಸಕಿ ಬುದ್ಧಿ ||
ಗಂಡನೆ ಕೇವಲ ಗಂಡನ ಹೊರತು ಮತ್ತ್ಯಾರಿಲ್ಲ  || ಜೀ ||
ಹೊರಗ ಹೋದರ ಹಾದಿ ಬೀದಿ || ಪಾದ ಕುಡಿಯುವಳು ಉದ್ದಿ ||
ಗಂಡನ ಮರ್ಯಾದಿ ಕಾಯಿರೆವ್ವ ಅಸಲ || ಸ್ಥಾವರಕ ಅರ್ಥ ಬರಬೇಕು ಖುಸಿಲ || ಜೀ ||
ತಿರುನೀಲಕಂಠರು ನಿದ್ದಿ || ಗಂಡಸರಿಗೆ ಬುದ್ಧಿ || ಹೇಳುವರು ತಿದ್ದಿ ||
ಸತಿ ವೃಥಾ ಮೇಲ || ಸತಿಯಿಂದ ಸದ್ಗಿತಿ ಪ್ರಬಲ  || ಜೀ ||

ಏರ
ತಿರುನೀಲಕಂಠ ಸತಿಪತಿಯರು ಶಿವ ಪಾರ್ವತಿಯಂತ ಜತಿ ||
ತ್ರಿಭುವನಗಳಲ್ಲಿ ವಾರ್ತೆಕೀರ್ತಿ ಅವರ ನಾಮಕರಣ
ಅಂತೆ ಆಳಿನ ಆಳಾಗಿ ದುಡಿಯಾಂವ ಭುಜಂಗ ಭೂಷಣ
ಶ್ರೀಶೈಲದ ಹತ್ತಿರ ಶಿವಶೈಲ ಇತ್ತೊಂದು ಪಟ್ಟಣ
ಸತಿ ಪತಿ ದಂಪತಿ ಕೂಡಿರು ಜೋಡಿ
ಕಂತು ಪಿತನ ನಾಮ ಕೊಂಡಾಡಿ
ಮುತ್ತೈದಿ ಎಂಬ ಸತಿನ ಒಡಗೂಡಿಕೊಂಡು ಇದ್ದಾರ ನಿಜ ಶರಣ ||
ತಿರುನೀಲಕಂಠರ ಏರ ಪದ್ಯ ಕೇಳಿದವರ ಜನ್ಮ ಉದ್ಧರಣ  || ಜೀ ||            ಚೌಕ : ೧

ಉದರ ಪೋಕ್ಷಣಕ ಪರ ಊರಿಗಿ ಹೋಗಿರು ||
ತಿರುನೀಲಕಂಠರು ತಿರುಗಿ ಹೊಂಟಿರು ||
ಪಾತರ ದವಳ ಮನೆ ಮುಂದೆ ಬಂದಿದಾರೋ ಭವಳಾ ||
ಅದೇ ವ್ಯಾಳ್ಯಾ ಅರಿತು ಬಂದು ಒದಗಿತು ಕಂಟಕ ಕಾಳ ||
ಪಾತರ ದವಳು ಎಲಿತಿಂದು ಪಿಕುದಾನಿ ತುಂಬಿದಾಳು ಉಗಳ ||
ನೋಡಲಾರದೆ ಚೆಲ್ಲಿದಾಳೋ ಮರತು ||
ತಿರುನೀಲಕಂಠರ ಮೈಮೇಲೆ ಬಿತ್ತು ||
ಕಣ್ಣಿಲೆ ಕಂಡು ಎದಿ ಒಡದು ಓಡುತ ಬಂದಾಳ ||
ತ್ರಾಹಿ ತ್ರಾಹಿ ಪಾಹಿ ಮಮ್ಮಗಿರಿ ವರನೆಂದು ಪಾದ ಹಿಡಿದಾಳ  || ಜೀ ||

ನಿರದೋಷದಿಂದ ಆಗ್ಯಾದ ವೀಶಾ
ತಪ್ಪಿಗಿ ಮಾಫಿ ಮಾಡಿರಿ ಮಹೇಶ
ಮಹಾ ಪ್ರಭುನ ಮಗಳೆಂದು ತಿಳಿರಿ ಎಂದು ಹೊರಳ್ಯಾಡಿ ನುಡಿದಾಳ ||
ಪಾಪಿಗಿ ಕೋಪಿಲೆ ಶಪಿಸ ಬ್ಯಾಡರೆಂದು ಪಾದ ಬಡದಾಳ ||
ಝಳಕಾ ಮಾಡಿಸಿ ಝಳ ಝಳ ಮಾಡುವೆನೆಂದು ಕೈ ಹಿಡದಾಳ ||
ಎಚ್ಚರದಿಂದ ಬಚ್ಚಲಕ ವೈದಿಳು ಸ್ವಚ್ಛ ಆಚಾರ |
ಸ್ನಾನ ಮಾಡಸೀಳು ಉಚ್ಛ ವಿಚಾರ  ||
ಎಣ್ಣಿ ಕೈಗಿ ಹಚ್ಚಿ ಕಂಠಕ ಪರಶ್ಯಾಳ ||
ಮಖಮಲ ಸುರತಾಲ ಅಂಗಿ ಮುಂಡಾಸ ಉಲನ್‌ಶಾಲ ಹೆಗಲಿಗಿ ಧರಶ್ಯಾಳ || ಜೀ ||

ಜಗಮಣಿ ಹಾಕಿ ಮೂರ್ತಿ ಮಾಡಿಸಿ ಹರಶ್ಯಾಳ ||
ಹಣ್ಣು ಹಂಪಲ ಹಾಲ ತಂದ ಇರಶ್ಯಾಳ ||
ಸ್ವೀಕಾರ ಮಾಡೆಂದು ಎರಡು ಕರಗಳು ಜೋಡಶ್ಯಾಳ ||
ಪರ ಶಿವ ಸ್ವರೂಪಿ ನೀನೆಂದು ಆನಂದ ಪಡಶ್ಯಾಳ ||
ಗುರು ಸೇವಾದಲ್ಲಿ ತನ್ನ ಶರೀರ ಪರಿಪರಿ ದುಡಶ್ಯಾಳ ||
ಮೈಯಾನ ಬಟ್ಟೆ ಒಗದ ಇಡತಿನಿ ||
ನಾಳಿಗಿ ತಂದು ನಾನೇ ಕೊಡತಿನಿ ||
ಅವ್ವಾವರು ದಾರಿ ನೋಡತಿರಬೇಕು ಹೋಗಿರೆಂದು ನುಡಿದಾಳ ||
ಮಹಾಮಹಿಮರ ಕಡಿಂದ ಪೂ ಆಶೀರ್ವಾದ ಪರದಾಳ || ಜೀ ||

ದುಮಾಲಿ
ಬಾರಾ ಬಂದರ ದಿತ್ತರ ಅಮಲ || ಒಬ್ಬ ಸುಳಿವಿಲ್ಲ || ತಿರುನೀಲಕಂಠ ಭೂಪಾಲ ||
ಹೋಗಿದಾರು ಮನಿಗಿ || ಒಳ್ಳೀರು ಮಡದಿ ಮುತ್ತೈದಿಗಿ || ಜೀ ||
ನಿದ್ರಿ ಹತ್ತಿತು ಮಡದಿಗಿ ತೋಲ || ಎಚ್ಚರ ಇದ್ದಿದಿಲ್ಲ ಒಳ್ಳಿದ ಮ್ಯಾಲ ||
ಎದ್ದಿಳು ಲಗಿ ಬಗಿ ಬಂದು ಬಾಗಿಲು ತಗದೀಳು ಜಗ್ಗಿ  || ಜೀ ||
ಮುರಗಿ ಮುಂಡಾಸ ಇತ್ತ ತಲಿ ಮೇಲ || ಕೊರಳಾಗ ಹೂ ಮಾಲ ||
ಮೈ ತುಂಬ ಗುಲಾಲ ಕಂಡಿತು ನದರಿಗಿ ಸಿಟ್ಟು ಬಂತು ಮುತ್ತೈದಿ ಚದರಿಗಿ || ಜೀ ||
ಎಂದು ಇಲ್ಲದೆ ಇಂದ್ಯಾಕ ಇಷ್ಟೆಲ್ಲ ಹೇಳು ಖುಲ್ಲ || ತಿಳಿಸು ತಪಶೀಲ ||
ಹೇಳಿದ ಸರಿಯಾಗಿ ಮತ್ತಷ್ಟು ಸಿಟ್ಟು ಭರಿಯಾಗಿ || ಜೀ ||

ಏರ
ಖಾತ್ರಿ ಐತಿ ಎನ್ನ ಮನಸಿಗ ಮಧ್ಯೆರಾತ್ರಿ ಆಗ್ಯಾದ ಈಗ ದಾತ್ರಿಪ ||
ಗುರುವೆ ಬಲ್ಲೆನು ಥತ್ತರ ಬತ್ತರ ಗುಣ ||
ನೀವು ಪಾತರ ದವಳ ಸಹವಾಸ ಮಾಡಿ ಬಂದಿರಿ ಪತಿಪೂರ್ಣ ||
ನನಗ ಮುಟ್ಟಿಗಿಟ್ಟಿರೆಂದು ಶಿವನಾಣಿ ಇಟ್ಟಿಳೂ ಪ್ರಮಾಣ ||
ಸತಿ ಪತಿ ದಂಪತಿ ಕಡಿದರೂ ಜೋಡಿ ||
ಕಂತು ಪಿತನ ನಾಮ ಕೊಂಡಾಡಿ ||
ಮುತ್ತೈದಿ ಸತಿನ ಒಡಗೂಡಿಕೊಂಡು ಇದ್ದಾರ ನಿಜ ಶರಣ ||
ತಿರುನೀಲಕಂಠರ ಪದ್ಯ ಕೇಳಿದರ ಜನ್ಮ ಆಗುವುದು ಉದ್ಧರಣ || ಜೀ ||       ಚೌಕ : ೨

ಶಿವಣ ಆಣಿ ಹಾಕಿ ಮುತ್ತೈದಿ ಶರಣಿ ||
ಕೋಣ್ಯಾಗ ಹೋಗಿ ಮಲಗಿಳು ಜಾಣಿ ||
ಕೆಟ್ಟ ಅನಸಿ ತಿರುನೀಲಕಂಠಗ ಬಂದಿತೋ ದ್ಯಾಸಿಗಿ ||
ಶಶಿಧರ ಹರನೆ ವರಿಗಿ ಹಚ್ಚಿ ನೋಡಬೇಕು ಅಂದೇನು ಕೂಸಿಗಿ ||
ಪರವಸ್ತು ಪೂರಾ ತೀರಿಸಿಕೊಳ್ಳಿರಿ ನಿಮ್ಮ ಆಶಿಗಿ ||
ಪರಮೇಶ್ವರ ಅರಿಯೆನ್ನ ಕಟ್ಟಾ ಬ್ರಹ್ಮಚಾರಿ ವತ್ತಾವು ತೊಟ್ಟ ||
ಇಲ್ಲಿಗೆ ಬಿಟ್ಟ ಮಾಡುವೆ ಹೋಗೋದು ಮಡದಿ ಹಾಸಿಗಿ ||
ಯಾರ್ಯಾರ ಊಟ ಉಪಚಾರ ಕಡಿಗೆ ನಡದಿತು ಬಿದ್ದಿತು ಯಾಸಿಗಿ || ಜೀ ||

ಬಟ್ಟಿ ತಗೊಂಡು ಪಾತರದವಳು ಬಂದಿಳೂ ||
ಏನು ಮಾಡತೀರಿ ಗುರು ತಾಯಿ ಅಂದಿಳು ||
ಅಪ್ಪಾ ಅವರು ಎಲ್ಲಿಗಿ ಹೋಗ್ಯಾರೆಂದು ಕೇಳಿಳೂ ದಿಟ್ಟಾಗಿ ||
ತಾಯಿ ತಾಯಿ ತಿಂದ ಪಿಕದಾನಿ ಉಗಳಿದೆ ಒಟ್ಟಿಗಿ ||
ನಾ ನೋಡಲಾರದೆ ಒಗದರ ಅಪ್ಪಾವರು ಬರಲಿಲ್ಲ ಸಿಟ್ಟಿಗಿ ||
ಪಾತರದವಳು ಹೇಳಿಳು ಸ್ವಚ್ಛ
ಹಡದವರಕ್ಕಿಂತಲೂ ಪಡದವರ ಹೆಚ್ಚ
ಎಚ್ಚರವಿಲ್ಲದೆ ನಾನೇ ಹಾಕಿದೆ ತಿಪ್ಪಿಗಿ ||
ಸಾಂಗ್ಲೆಟ ಸಾಬೂನ ಹಚ್ಚಿ ಸ್ವಚ್ಛಿತ ಮಾಡಿನಿ ನೋಡರಿ ಒಟ್ಟಿಗಿ || ಜೀ ||

ಮೂಳ ಆಧಾರ ಮುತ್ತೈದಿಗಿ ತಿಳಿತು ಮುಖ ||
ನನ್ನ ಮಾತೆ ಕಳಿತು ಪತಿ ದ್ರೋಹಿ ಪಾಪಿ ನಾನೇ ಆದೆನು ಕಡಿಗಿ ||
ನಾನೇ ನುಡಿದು ನಾನೇ ಕಲಂಕ ಹಚ್ಚಿಕೊಂಡೆನು ನುಡಿಗಿ ||
ಬುದ್ಧಿಹೀನಳು ನಾನೇ ಗುದ್ದಿಕೊಂಡಂಗಾತು ನನ್ನ ತೊಡಿಗಿ ||
ಅಡಗಿ ಅಂಬಲಿ ಗಡಗಿ ಕಡಿಗಿ ಹಾಸಿ ಹೊಚ್ಚಿಗಿ ಆಸನ ಕಡಿಗಿ ||
ಮಾಡಿದ್ದೆಲ್ಲ ಮಣ್ಣಗೂಡಿ ಹೋಯಿತು ಇಲ್ಲ ಉಡಗಿ ತೊಡಗಿ ||
ಮೂಢ ಮಂದಮತಿ ಪತಿ ಗುಡ ನಾನೇ ನಿಂತೆನು ವಡಚಡಿಗಿ || ಜೀ ||

ದುಮಾಲಿ
ಗತಿಸಿ ಹೋಗಿವು ಹನ್ನೆರಡು ವರ್ಷ ಮುಗಿತು ಆಯುಷ್ಯ ||
ಇನ್ನೇನು ಭವಿಷ್ಯ ಬರದಾನೇನು ಬ್ರಹ್ಮ
ಬಿಲ್‌ಕುಲ್‌ ನನ್ನ ಬುದ್ಧಿನೆ ಕಮ್ಮ || ಜೀ ||
ಹೆಣ್ಣು ಗಂಡು ಮಾಡತಾರ ಹಾಸ್ಯ ಹೇಸಿ ಆದೆ ನಾಶ ||
ಪತಿವೃಥ ಪ್ರಕಾಶ ಆಗಿ ಹೋಗಿತು ಗಮ್ಮ ||
ನನಗ ಯಾಕ ಬಂದಿತೋ ಹಮ್ಮು ದಿಮ್ಮ  || ಜೀ ||
ಪತಿನ ಅಗಲಿದೆನು ಕರಕಶ ಸಂಪತ್ತು ಅದೃಶ ||
ಸಂತತಿ ಕ್ಲೇಶ ಮಾಡಿಕೊಂಡೆ ಗುಮ್ಮ ||
ಕರ್ಮಕ ಕರದು ಮಾಡಿಕೊಂಡೆ ಜಮಾ || ಜೀ ||

ಏರ
ಬಾರದು ಎಂದಿಗಿ ಬಪ್ಪುವುದಲ್ಲ ಬಪ್ಪುದು ಎಂದಿಗಿ ತಪ್ಪುದಲ್ಲ ||
ಉರಗಭೂಷಣ ಸ್ವರ್ಗ ದೀಪ ಮುಚ್ಯಾನೇನು ಕಣ್ಣ ||
ಪತಿನಿಂದ ಮಾಡಿದರ ನನ ನಾಲಿಗಿಗಿ ಯಾಕ ಹುಟ್ಟಿತೇನೋ ಹುಣ್ಣ ||
ಥತ್ತರ ಬತ್ತರ ನಾನೆ ಮಾಡಿಕೊಂಡೆ ಘತ್ತರ ಘಾಣ ||
ಸತಿ ಪತಿ ಕೂಡಿ ಜೋಡಿ ಪಿತನ ನಾಮ ಕೊಂಡ್ಯಾಡಿ
ಮುತ್ತೈದಿ ಸತಿನ ಒಡಗೂಡಿಕೊಂಡು ಇದ್ದಾನ ನಿಜ ಶರಣ ||
ತಿರುನೀಲಕಂಠರ ಪದ್ಯ ಕೇಳಿದರ ಜನ್ಮದ ಉದ್ಧರಣ || ಜೀ ||       ಚೌಕ :೩

ಹನ್ನೆರಡು ವರ್ಷ ಜರುಗಿ ಹೋಗಿವು ಭವದಲ್ಲಿ ಶಿವನಿಗೆ ಆರು ಆತು
ಅಲ್ಲಿ ಪರಬ್ರಹ್ಮಗ ಕರೆಸಿ ನೋಡಿದ ಜಾತಕ ||
ತಿರುನೀಲಕಂಠನ ಸತಿ ಶಿವನಾಣೆ ಇಟ್ಟು ಮಾಡಿಳು ಸೂತಕ ||
ಅದೇ ದೋಷ ಬಡಿದು ಸತಿ ಪಾತಿಗಳಿಗೆ ಸುತ್ತಿತು ಪಾತಕ ||
ಕಾಯಕದ ವೇಷ ಹಾಕಿ ಮಹೇಶ ಭೂ ಲೋಕ ಮಾಡಿದ ಪ್ರವೇಶ ||
ಶಿವಶೈಲ ಪಟ್ಟಣಕ ಬಂದು ತುರುತಸೆ ತುರುತಕ ||
ಇವನೆ ಶಶಿಧರ ಶಿವನೆಂದು ಯಾರಿಗಿ ಬರಲಿಲ್ಲ ಗುರುತಕ  || ಜೀ ||

ಶಿವಶೈಲ ಊರಲ್ಲಿ ಸಾರುತ ನಡಿದಾ
ಸಾರಿ ಸಾರಿ ಶ್ರಮ ಪಡದಾ
ತಿರುನೀಲಕಂಠರಾಯನ ಮನಿಗಿ ಹೋಗಿದ ಬೇಶಾಕ ||
ತಿರುನೀಲಕಂಠನ ಕೈಯಾಗ ಕೊಟ್ಟಿದ ತನ್ನ ಪೋಷಾಕ ||
ಬೆಳ್ಳಿ ಬಟ್ಟಲ ಮುಚ್ಚಿ ಇಡು ಯಾರರೆ ಎತ್ತ್ಯಾರ ಆಶಾಕ ||
ಹೇಳಿ ಕೇಳಿ ಶಿವ ಹೋಗಿದ ಮಾಯಿಕಾರ ಮಾಯಾಗಿ ||
ರಾತ್ರಿನೆ ಎದ್ದಿದ ಮುರಹರ ದೇವ ಮುಂಜಾನಿ ಬಂದು ಕೊಡು ಅಂದಿದ ರೋಷಾಕ ||
ಪೆಟಿಗಿ ತೆರದು ನೋಡಿದ ತಿರುನೀಲಕಂಠ ತೊಡಕಿದ ಪಾಶಕ  || ಜೀ ||

ದಿಕ್ಕ ತಪ್ಪಿ ಹಕ್ಕಿ ಪಕ್ಕಿಯಾಗಿ ನಿಕ್ಕಿ ಮನಿ ತುಂಬ ನೋಡಿದ ತಿರಗಿ ||
ದುಃಖ ಮಾಡಿ ಬಿಕ್ಕ ಹಿಡಿದು ಕುಣದಿದ ಧಕ ಧಕ ||
ಅಂವ ದುಃಖ ಮಾಡದು ನೋಡಿ ಶ್ರೀ ಮುಕ್ಕಣ್ಣ ನಕ್ಕ ||
ಪಂಚರಬಲ್ಲಿ ಹೋಗಿದಾನು ಶಿವ ಸ್ವಚ್ಛ ತಿಳಿಸಿದಾನು ಹಾವಬಾವ
ಬೆತ್ತಾ ಬಟ್ಟಲು ತಿರುನೀಲಕಂಠಗ ಕೊಟ್ಟಿದೆನು ಚೊಕ್ಕ ||
ನಾ ಕೊಟ್ಟಿದು ನನಗೆ ಕೊಡು ಅಂದರ ಇಲ್ಲ ಅಂದಾನು ಲೂಕ  || ಜೀ ||

ತಿರುನೀಲಕಂಠಗ ಕರೆಸಿ ಕೇಳಿರು
ಸ್ವಾಮಿದು ಸ್ವಾಮಿಗಿ ಕೊಡು ಎಂದು ಹೇಳಿರು
ತಿರುನೀಲಕಂಠರು ತಿರಗಿ ಅವರಿಗೆ ಹೇಳಿದಾರು ಠೀಕ ||
ಮಹಾಸ್ವಾಮಿಗಳು ಬೆತ್ತಾ ಬಟ್ಟಲು ಇಟ್ಟಿದು ಖರೆ ಅದ ಠೋಕ ||
ನಾ ಮನಿತುಂಬ ಹುಡುಕಿ ನೋಡಿನಿ ಸಿಗಲಿಲ್ಲ ಆಗಿನ ಮುಕ ||
ಸತಿ ಪತಿ ಇರ್ವರು ಕೈ ಕೈ ಹಿಡಿರಿ ||
ನೀರಾಗ ಮುಳಗಿ ಪ್ರಮಾಣ ಕೊಡರಿ ||
ಮುಟ್ಟಬೇಡಿರಿ ಶಿವನಾಣಿ ಇಟ್ಟಾಳಸತಿ ಎಂಥ ಮೂರ್ಖ ||
ಇಂಥ ಪಾತಕರಿಗೆ ಸತ್ಯ ಸತ್ಯ ತಪ್ಪುದು ನರಕ || ಜೀ ||

ದುಮಾಲಿ
ಬೆತ್ತ ನಡು ಹಿಡದಿದ ಶಶಿಧರ || ಸತಿಪತಿ ಇರುವರ |
ಹಿಂದ ಮುಂದ ಹಿಡದಾರ || ಜೀ ||
ನೀರೊಳು ಹೋಗಿ ಮುಳಗಿ ||
ನಿಜರೂಪ ಧರಿಸಿದ ಶಿವಯೋಗಿ || ಜೀ ||
ಇಲ್ಲಿಗೆ ಸರಿತೋ ಗೃಹಚಾರ ಇರಲಿ ಎಚ್ಚರ
ಬಿಡರಿ ಮಚ್ಚರ  || ಜೀ ||
ಬಿಶಾಡಿರಿ ತಿರಗಿ ||
ಪರಮೇಶ್ವರ ಹೇಳಿದ ಕೂಗಿ || ಜೀ ||
ವಯೋ ಹೋಗಿ ಆಗಿರು ಮುಪ್ಪಿನವರ ||
ಆಗಿರಿ ಪ್ರಾಯದವರು || ಮಾಡಿರಿ ಸಂಸಾರ  || ಜೀ ||
ಸಂತತಿ ಪಡದು ಕಡಿಗಿ ||
ಬಂದು ಮುಟ್ಟಿರಿ ಮುಕ್ಕಣ್ಣನ ಅಡಿಗಿ || ಜೀ ||
ಹೇಳಿ ಅದೃಶ ಆದ ಗಿರಿವರಾ || ಅಂದಿರು ಹರಹರಾ ||
ದಂಪತಿ ಕಡ್ಯಾರ  || ಜೀ ||
ಶಿವ ಶಿವ ಅಂದಿರೂ ನುಡಿ ನುಡಿಗಿ ||
ಕೈಲಾಸಕ ಮುಟ್ಟಿರು ದಡಿಗಿ || ಜೀ ||

ಏರ
ದಾತ್ರಿಯೊಳು ಹಿರೇಸಾವಳಗಿ ತ್ರಿಸಿತ್ರ ಉಳ್ಳಾಂವ ಶಿವಯೋಗಿ ||
ತ್ರಿಕೂಟ ಕಮರಿ ಮಠದೊಳು ನೆನದಿದ ಮುಕ್ಕಣ್ಣ ||
ಅವರ ಸ್ತೋತ್ರ ಮಾಡಿ ಪುತ್ರ ಮಹ್ಮದ ಪಡದ ಅವರ ಚರಣ ||
ಸತಿ ಪತಿ ದಂಪತಿ ಕೂಡಿರು ಜೋಡಿ
ಕಂತು ಪಿತನ ನಾಮ ಕೊಂಡಾಡಿ
ಸತಿ ಮುತ್ತೈದಿನ ಒಡಗೂಡಿ ಕೊಂಡು
ಇದ್ದಾರು ನಿಜ ಶರಣ
ತಿರುನೀಲಕಂಠರ ಪದ್ಯ ಕೇಳಿದರ ಜನ್ಮದ ಉದ್ಧರಣ || ಜೀ ||       ಚೌಕ : ೪