ಕಿಡಕ ಹಡಕ ಸೂಳ್ಯಾರೆಲ್ಲ ಅಡಕಿಗಿ ತೊಡಕಾದವರು
ಬುಡಕ ಬಿದ್ದು ಹೆಡಕ ಹಾರಿಸಿ ನಿಂತಿರಿ ಯುದ್ದಕ ||
ಕುಡಕ ಬಿದ್ದ ಕೋಳಿಯಂತೆ ಖಟ ಪಟ ನಡಸಿರಿ ಸದ್ಯಕ ||
ನಾ ಜಟ ಪಟ ಮಾಡಿ ಹೇಳುವೆನು ಗುದ್ದಾಟ ಗುದ್ದಾಕ
ಒಡಕ ಮಡಕಿ ತಲಿಮ್ಯಾಲ ಹೊತ್ತು ಸಿಡಕ ಪಡಕ ಮಾಡಬೇಡಿರಿ
ನಡಕಟ್ಟಿನವ ಜಗಜಟ್ಟಿ ಬಂದಾನ ಮಿಡಕುವದ್ಯಾಕ
ಸೀದಾ ಸಡಕ ಹಿಡಿದು ನಡಿರಿ ಬಿಡಕ್ಯಾರೆ ಹಚ್ಚಿರಿ ಅದ್ಯಾಕ  || ಜೀ ||

ಅಲ್ಲಮ ಪ್ರಭುನ ಆಜ್ಞೆ ಮೇರೆಗೆ ಬಿಲ್ಲಣ ನಡೆಸಿದ ಪಾರ್ವತಿ ತಾನು
ಮಾಯಿ ರೂಪ ಧರಿಸಿ ಬಂದಿಳು ಕೊಲ್ಲಾಪುರ ಸ್ಥಲಕ
ಏಳು ಖಂಡಗ ವಿಷದ ಹಾಲು ಮೊಲಿಯೊಳು ತುಂಬಿದಳು ಸಿಲಕ
ನೌಕೋಟಿ ಸಿದ್ಧರಿಗೆ ಗೆದ್ದು ಮುಕಳಿಲಿ ಹಾಕತಿಹಳು ಮೆಲಕ
ಅಲ್ಲಮ ಪ್ರಭು ರೇವಣಸಿದ್ಧ ಶಿವನೆ ಮಾಡುವುದಕ ಹೊಂಟಿದ ಜಿದ್ದ
ಭಸ್ಮ ಕುಂಡಲ ಉರಿ ನೇತ್ರ ತ್ರಿಶೂಲ ಠಳಕ
ಸ್ವರ್ಗ ಮೃತ್ಯು ಪಾತಾಳ ಮೂರೇಳು ಲೋಕಕ ಆತನ ಬೆಳಕ || ಜೀ ||

ಕಂದುಗೊರಳ ಕಪಾಲ ಧರ ಕೊಲ್ಲಾಪುರಕ
ಹೊಂಟಿದಾನೋ ಲೀಲಾ ಮಾಡುತ ಹೋಗಿ ನಿಂತಿದ ಮಾಯಿ ಬಲ್ಯಾಕ
ನೀವು ಬಂದಿರಾರೆಂದು ಶಕ್ತಿ ಕೇಳಿಳು ಅದೇ ಕಾಲಕ
ಶಕ್ತಿ ಸಾವಧಾನ ಕೇಳು ಇಷ್ಟೊಂದು ಜಲ್ಯಾಕ
ನೌಕೋಟಿ ಸಿದ್ಧರಿಗಿ ಕಳುಹಿದ ಇಲ್ಲಿ ತಿರಗ್ಯಾರು ಬರಲಿಲ್ಲ ನನಬಲ್ಲಿ
ಸಿಂಗುಟಿ ಹಚ್ಚಿ ಲಂಗುಟಿ ಹಾಕಿ ಬಂದಿನಿ ಕರೆಯುವುದಕ
ಇಷ್ಟಂದಕ್ಷಣನೆ ಮಾಯಿ ಮೈಯೆಲ್ಲ ಹತ್ತಿತು ಉರಿಯುದಕ  || ಜೀ ||

ದುಮಾಲಿ
ನೀ ಯಾರು ನಿನ್ನ ಹೆಸರೇನು ಹೇಳು
ಕೇಳುತಾನ ತಾಳು ಆ ಮೇಲೆ ಹೇಳು ||
ಬಾ ಬಾರೋ ಬಾಲ
ಮೊದಲು ಕುಡಿಯೆನ್ನ ಮೊಲಿಹಾಲ ||
ರೇವಣಸಿದ್ಧ ಅಂತರ ಜನನಿ ಜಗದೊಳು ನೀಕೇಳು ಕಲಿಯುಗದೊಳು
ನಡೆಯುವದು ಪ್ರಬಲ ರೇವಗ್ಗಿ ರಟಿಗಲನ ಸ್ಥಲ  || ಜೀ ||
ಮಾಯಿ ಹೇಳಿದಳು ಕೇಳು ಸಿದ್ಧ ದೊರಿಗಳು ನೌಕೋಟಿ ಕುರಿಗಳು
ಬಿದ್ದಿರುವರು ಜೊಲ್ಲು ಕುಡಿದು ಸೋರಿಸಲಿಲ್ಲ ಮೊಲಿಹಾಲ  ||
ಹುಡುಕುತ ಬಂದರ ನೆಟ್ಟಗಾತು ದುಡಕ ಬೇಡ ರೇವಣಸಿದ್ದ
ಮಿಡಕಿದರ ಫಲವಿಲ್ಲೆಂದು ನುಡಿದಿಳು ಮೆಲ್ಲಕ
ನೀ ಆದರೂ ತಡಕ ಪಡಕ ಹಾಲು ಕುಡಿ ಬಿಡತಿನಿ ಝಲ್ಯಾಕ  || ಜೀ ||

ಒಳ್ಳೆ ಕಡಕದಿಂದ ನುಡಿದಿದಾಳೋ ಕುಡಿ ಕುಡಿ ಒಲ್ಯಾಕ
ಒಡಕ ಮಡಕಿ ತಲಿ ಮ್ಯಾಲ ಹೊತ್ತು ಸಿಡಕ ಪಡಕ ಮಾಡಬೇಡ
ನಡಕಟ್ಟಿನವ ಜಗಜಟ್ಟಿ ಬಂದಾನ ಮಿಡಕುವದ್ಯಾಕ
ಸೀದಾ ಸಡಕ ಹಿಡಿದು ನಡಿರಿ ಬಿಡಕ್ಯಾರೆ ಹಚ್ಚಿರಿ ಅದ್ಯಾಕ  || ಜೀ ||            ಚೌಕ : ೧

ನೌಕೋಟಿ ಸಿದ್ಧರ ಮೇಲೆ ದಿಟ್ಟ ಅನಿಸಿದ ರೇವಣಸಿದ್ದ
ಜೋಳಗ್ಯಾನ ಅಗ್ನಿಕುಂಡ ತಗದಿಟ್ಟ ಚಾಮುಂಡಿ ಎದರೀಗ
ಪ್ರಕಟ ಚುಕ್ತಾ ಹಾಲು ಹಿಂಡಿ ಹಾಕೆಂದ ಇದರಾಗ
ಮಹಾವೀರ ಹೇಳ ಮಾತು ಬರಲಿಲ್ಲ ಮಾಯಿ ನೆದರಾಗ
ಎರಡು ಮೊಲಿ ಹಿಂಡಿ ಹಿಂಡಿ ಬೆಂಡ ಒಡೆದು ಕುಂತಿಳೋ ಮಿಂಡಿ
ಚೆಂಡಂದರ ತುಂಬಲಿಲ್ಲ ಆಗಿದಳು ಬೆರಗ
ಮೂಗಿನ ಮೂಗುತಿ ಸಹ ಅದರಾಗೆ ಬಿದ್ದಿತು ಕಂಡಿಲ್ಲ ಚೆದರಿಗ  || ಜೀ ||

ಅಗ್ನಿ ಕುಂಡ ತುಂಬಲಿಲ್ಲ ಗಂಡ ಸಿದ್ಧ ಹಾಲ ಕುಡಿಯಲಿಲ್ಲ
ಹಿಂಡಿ ಹಿಂಡಿ ಬೆಂಡ ಒಡೆದು ಬಿದ್ದಳು ಭೂಮಿಗ
ಶುದ್ಧ ಸಿದ್ದನ ಮಹತ್ವ ಕಂಡು ಬಂದಿತು ಮಾಯಿ ಕಾಮಿನಿಗ
ಮೂಗುತಿ ಛಾಯಾ ಹಾಲಾಗ ಕಂಡಿತು ಕೈ ಹಚ್ಚಿ ನೋಡಿಳು ಮೂ ಗೀಗ
ಮೂಗಿನಾಗ ಮೂಗುತಿಯಿಲ್ಲ ಮೂಳಿ ಎದಿ ಅಂದಿತೋ ಝಲ್ಲ
ಮತ್ತೈತನ ಕಾಪಾಡೆಂದು ಬಿದ್ದೀಳು ಕಾಲೀಗ
ಮಲ್ಲೇರೆ ಎಷ್ಟ ಮೇಲಕ್ಕೇರಿಸಿರಿ ಕಾಲ ಹಿಡಿದ ಪ್ಯಾಲಿಗ  || ಜೀ ||
ರೇವಣಸಿದ್ಧ ಬಂದನೆಂಬುವ ಸುದ್ದಿ ನೌಕೋಟಿ ಸಿದ್ಧರು ಕೇಳಿ ವರದಿ
ನಾ ನೋಡು ನೀ ನೋಡು ಎಂದು ಸದ್ಯ ಗದ್ದಲ ನಡಸಿರು ಜೇಲನ್ಯಾಗ
ಮಹಿಮಪಾಲ ಸಿದ್ದ ತಿಳಿದು ಹುಸು ಅಂದಿದ ಮನದಾಗ
ನೌಕೋಟಿ ಸಿದ್ಧರೆಲ್ಲ ಕುರಿ ಆಗಿ ಕುಂತಿರು ಮೂಲ್ಯಾಗ
ರೇವಣಸಿದ್ಧ ಅಂದಿದ ಚದರೀಗ ಬಿಡಗಡಿ ಮಾಡು ಸಿದ್ಧರಿಗ
ಹೋಗಿ ಕೀಲಿ ತೆರದಿಳು ಕುರಿ ಹಾರಿ ಬಂದಾವೋ ಹೊರಗ
ಆ ಕುರಿ ನೋಡಿ ಅರು ಮರು ಹಿಡಿದು ಆಗಿದಳೋ ಬೆರಗ  || ಜೀ ||

ದುಮಾಲಿ
ರೇವಣಸಿದ್ಧಗ ಬಂದಿತೋ ಬಾಯಿಗಿ ಹೇಳಿದ ಮಾಯೀಗಿ |
ಕುಂಟಲ ತುಂಬು ಲಗು ಹಿಂಡಕರವ್ವ ನಿನ್ನ ಪರಾಕ್ರಮ ಇಲ್ಲಿ ತೋರವ್ವ
ಆಗ ಗುಡಗ ಹಿಡಿದಿತ್ತು ದೇವಿಗಿ ನಿಮ್ಮ ಮಾಯಿಗಿ
ನೆನಸಿ ಶಿವನಿಗಿ ಆ ಗೀಳು ಜೇರವ್ವ ಎರಡು ಕಣ್ಣು ಹಿಡಿದಿಳು ತಾರವ್ವ  ||

ಚುಕ್ತಾ ನಾಗೇಶವರು ಕೂಡಿ ಹೋಗಿ ಹೇಳಿರಿ ಅವಳಿಗಿ ಬಾಳಗೇರಿ ಸೂಳಿಗಿ
ಕುಡಿರಿ ತಾರವ್ವ ನಿನ್ನ ಮೊಲಿಹಾಲು ಹಿಂಡಿ ಹಾಕು ಬಂಗಾರೆವ್ವ  ||
ಫಡಕಿ ಉಟ್ಟ ಸೂಳೆರೆಲ್ಲ ಕುಡಕ ಕೂತು ಬಿಟ್ಟಂಗಾಯಿತು
ಮಿಡಕಿ ಮಿಡಕಿ ಸಾಯೋದು ಬಂತು ನಿಮ್ಮ ಪಾಲಕ
ಸೆಡಕ ಐತಿ ದವಡ ಹೋಗಿರಿ ಕೊಲ್ಲಾಪುರಕ ||
ಕೆಲಸ ತಡಕ ಪಡಕ ಮಾಡಿಕೊಳ್ಳಿರಿ ಮಾತಾಯಿ ತೊಡಕ
ಒಡಕ ಮಡಕಿ ತಲಿಮ್ಯಾಲ ಹೊತ್ತು ಸಿಡಕ ಪಡಕ ಮಾಡಬೇಡ
ನಡಕಟ್ಟಿನೆವ ಜಗಜಟ್ಟಿ ಬಂದಾನ ಮಿಡಕುವದ್ಯಾಕ
ಸೀದಾ ಸಡಕ ಹಿಡಿದು ನಡಿರಿ ಬಿಡಕ್ಯಾರೆ ಹಚ್ಚಿರಿ ಅದ್ಯಾಕ  || ಜೀ ||            ಚೌಕ : ೨

ಚರ್ಮ ಸುಲಿದು ತುಂಬಿಳು ಮಾಯಿ ರಕ್ತಮಾಂಸ ತುಂಬಿಳು ಮಾಯಿ
ಮೈ ಉರಿಲಿಕತ್ತಿತು ಮಾಯದ ಕುಂಡ ತುಂಬಲಿಲ್ಲ
ಆ ಪುಂಡ ಸಿದ್ದ ಗಂಡುಗಲಿ ಹತ್ತಿದ ಹಂಬಲ
ನಿಮ್ಮ ಮಾಯಿ ಶಕ್ತಿ ಬಂದು ನಿಂತು ಹೋಗಿತ್ತು ಆಸ್ತಿ ಮುಂಬಲ
ಉರಿನೇತ್ರ ಬಿಚ್ಚಿ ಬಿಟ್ಟಿದ ಸಿದ್ದ ಮಾಯಿ ಸುಟ್ಟು ಆಗಿಳು ಶುದ್ಧ
ಭೂದಿ ಶರೀರಕ ಧರಿಸಿಕೊಂಡು ಏನು ಉಳಿಲಿಲ್ಲ
ಸುಟ್ಟು ಭಸ್ಮ ಮಾಡಿ ಬಿಟ್ಟಿದ ಶಿಷ್ಯರ ಒಟ್ಟ ತಿಳಿಲಿಲ್ಲ  || ಜೀ ||
ಎಲ್ಲಿದ್ದಿ ದೇವಿಯೆಂದು ರೇವಣಸಿದ್ಧ ಕೇಳಿದನು
ಬುದ್ಧಿ ಹೀನಳು ತಿದ್ದಿ ಹೇಳಿಳು ನಾನೇನು ಬ್ಯಾರಿಲ್ಲ
ನಾ ನಿನ್ನ ಸಂದು ಸಂದು ಸೇರಿದೆನು ನಿನ್ನ ಬಿಟ್ಟು ದೂರಿಲ್ಲ
ನಂದಿವಾಹನ ನಿನ್ನ ಮುಂದೆ ಯೆನಗ ಕೊಡು ಅಂದಿಳು ಸ್ಥಲ |
ರೇವಗ್ಗಿ ಗುಡ್ಡಕ ಒಯ್ದ ಯೋಗಿ ಮಾಯಿ ಜನ್ಮ ಶಕ್ತಿ ನೀಗಿ
ಸಿದ್ಧನ ಎದರಿಗಿ ಸದ್ಯ ನಿಂತಳು ದೂರಿಲ್ಲ
ಕಾಲು ಜಾರಿ ಕೆಳಗ ಬಿದ್ದು ಬಾರಗಿ ಮೇಲಕ ಬರಲಿಲ್ಲ  || ಜೀ ||

ಮೂಕಾಲ ಬೃಂಗಿಗಿ ಶಾಪಿಲಿ ಪಾರ್ವತಿ ಗುಂಗಿ ಹುಳ ಆಗಿದ್ದಳು
ಮಂಗ ಲಾಂಗ ಮಾಡಿದನು ಅದರ ತಿಪ್ಪಲ
ಮಂಗ ಹೆಂಗೆಳಿಯರಿಗಿ ಹ್ಯಾಂಗ ತಿಳಿದಿತ್ತು ಶಿವಲಿಂಗದ ಟಪಾಲ
ಮೂಕಾಲ ಬೃಂಗಿ ಶರೀರ ಬಿಟ್ಟು ಚರ್ಮ ಮಾಂಸ ತೆಗದೊಕಟ
ಎಲುಬಿನ ಸಾಟದ ಮೇಲೆ ನಿಂತಿದ ಅನುವ್ರತ ಕೇವಲ
ಕರಿತ ಕರಿವಿತ ಶಿವಕರ್ತ ಸಮರ್ಥ ಶಿವ ಅವನ್ಹೊರತ ಮತ್ಯಾರಿಲ್ಲ  || ಜೀ ||

ದುಮಾಲಿ
ಶಿವನ ಬಿಟ್ಟು ಶಕ್ತಿ ಬಂದಿಳು ಕೆಳಗ ಹೋಗಲಿಲ್ಲ ಮ್ಯಾಗ
ಮುಂದಿನ ಗತಿ ಹ್ಯಾಂಗ ಮಹಾಗಾಂ ಮೀರವ್ವ ಅಕಿಗಿ ಕಳುಹಿ ಬಾರವ್ವ
ಯಾರಿಗರೆ ಕರಕೋ ಜತಿಗ ನಿನ್ನ ಗೆಳತಿಗ ಅದಾಳ ಅಳತಿಗ
ಕಲಬುರ್ಗಿ ಇಟ್ಟವ್ವ ಕೇಳಿ ಹೊಟ್ಟಿ ಹಿಡದಿತ ಕುಟ್ಟವ್ವ
ಯಾರು ಉಳದಿಲ್ಲ ಇಂಗಳಗ್ಯಾಗ ಹಾಗೂ ಕ್ವಾರಳ್ಯಾಗ
ಚಾಂದಕೋಟಿ ಗುಡಿ ಹೊಡದಾಳ ಲಾಗವ್ವ ತೆಗನೂರದವರ ಎದರ ಉಳಿಲಿಲ್ಲ ಮೂಗವ್ವ
ದಿಕ್ಕೆಂಟರೊಳು ಮಿಕ್ಕಿ ಮೆರೆಯುವ ಅಧಿಕ ಹಿರೆ ಸಾವಳಗಿ ಮುಕ್ಕಣ್ಣ
ಶಿವಯೋಗಿ ನೆನದಾನ ಅಲ್ಲಿ ಜಗದಾತ್ಮ ಮದ್ಯಾಕ
ಕವಿಗಾರ ಮಹ್ಮದನ ಮನ ಆನಂದಾಗಿ ನಿಂತಿದ ಶಿವನ ಪದ್ಯಾಕ
ಅವನ ಶಿಷ್ಯ ಕಾಶೀನಾಥ ಅಂದಿದ ಸೂಳೇರೆ ನಮಗೂಡ ಜಿದ್ಯಾಕ
ಒಡಕ ಮಡಕಿ ತಲಿ ಮ್ಯಾಲ ಹೊತ್ತು ಸಿಡಕ ಪಡಕ ಮಾಡಬೇಡಿರಿ
ನಡಕಟ್ಟಿನವ ಜಗಜಟ್ಟಿ ಬಂದಾನ ಮಿಡಕುವದ್ಯಾಕ
ಸಿದಾ ಸಡಕ ಹಿಡಿದು ನಡಿರಿ ಬಿಡಕ್ಯಾರೆ ಹೆಚ್ಚಿರಿ ಅದ್ಯಾಕ  || ಜೀ || ಚೌಕ : ೩