ಬಸವ ವಿಜಯದಾಗ ಬರೆದ ಭವಿಷ್ಯ ಕುಂತು ಕೇಳಿರಿ ಹಿರಿ ಕಿರಿಯರಾ ||
ಕಲ್ಯಾಣ ಅನಿಸಿತು ಕೈಲಾಸ ಕಡಿದ್ವಾರ  ||
ಲಕ್ಷದ ತೊಂಬತ್ತಾರು ಸಾವಿರ ಜಂಗಮರ ||
ಮಹಾನುಭಾವ ಬಸವೇಶ್ವರ ಜನಿಸಿದ ಭೂಲೋಕ ಮಾಡುವದಕ ಉದ್ಧಾರ  || ಜೀ ||

ಶ್ರೇಷ್ಠ ಬಸವ ಅಷ್ಟಾವರ್ಣದ ಮಹತ್ವ ಸೃಷ್ಟಿಯೊಳು ಮಾಡುತ ಪ್ರಚಾರ  ||
ಗುರು ಲಿಂಗ ಜಂಗಮ ಇವು ಮೂರ ||
ಪಾದೋದಕ ಪ್ರಸಾದದ ವಿಚಾರ ||
ವಿಭೂತಿ ರುದ್ರಾಕ್ಷಿ ಮಂತ್ರ ಎಂಟು ವಿಧ ತಿದ್ದು ಹೇಳತಿರೋ ಸಮಾಚಾರ  || ಜೀ ||

ಜಗಭರಿತ ಜಂಗಮ ಲಿಂಗ ಮಧ್ಯ ಜಗ ನಗರೋಳಧಿಕ ಧೀರ ||
ಗುರುವಿನಕಿಂತಲೂ ಅಧಿಕಿಲ್ಲ ಯಾರ  ||
ಮನಶ್ಯಾನ ಜನ್ಮಕ ಗುರುತ ಹೇಳುತ ನಿರತ ನಡದಿರು ಚರಚರ  || ಜೀ ||

ಮಿಕ್ಕಿದ ವೀರಶೈವ ಮತ ಇರುವದೆಂದು ಸಿಕ್ಕವರಿಗೆ ಮಾಡುವ ಸಂಸ್ಕಾರ  ||
ಶಿವನಾಮ ನುಡಿರೆಂದು ಎಚ್ಛಾರ ||
ಅಡಿ ಅಡಿಗೆ ಹೇಳತಿರು ಎಚ್ಚರ  ||
ಭಾಸಿ ಪಾಲಿಪನ ಮಾತು ಫಾಸ ಬೀಳದೆ ನಿಂದೆ ಮಾಡ ತೀರು ಲುಚ್ಚೇರಾ  || ಜೀ ||

ದುಮಾಲಿ
ಹಿಂಗ ಬಸವ ಕೊಡತಿದ್ದನೋ ಬೋಧ  ||
ತೋರುತ ದಾರಿ ಸೀದ  || ಸೇರಿಸಿ ನಾದ  ||
ಮಾಡತಿದ್ದ ಗುಂಗ ಕಂಡು ಹಿಡಿದು ಕಟ್ಟತಿದ್ದ ಲಿಂಗ  || ಜೀ ||

ಜೈನ ಜನರಿಗೆ ಬಿತ್ತು ಗಾದ  || ಬಸವ ಅಶುದ್ಧ ನಡಶ್ಯಾನ ಬೇಬದ್ಧ ||
ಮಾಡಬೇಕು ಹ್ಯಾಂಗ ಸರ್ವರಿಗಿ ಅನು ಅಂತಾನ ಸವನಾ  || ಜೀ ||
ನಮಗ ಶ್ರೇಷ್ಟಾದ ಕೃಷ್ಣರಾಧ ಹಿಡಿದು ಅವರ ಪಾದ  ||
ಓದುವೆವು ವೇದ || ಅನ್ನುತ ಪಾಂಡುರಂಗ
ಪ್ರಭುದೇವರದು ನಮಗಿಲ್ಲ ಹಂಗ  || ಜೀ ||

ಏರ
ಬಸವ ತ್ರಿಪುಂಡ ಧರಿಸಿದವರಿಗೆಲ್ಲ ಭವಿ ಅಂತಾನ ಬಸವ ಪಡದಾರ  ||
ತಾಯಿ ಹೊಟ್ಯಾಗ ಕಟ್ಟಿಗಿಟ್ಯಾನೇನು ಉಡದಾರ ||
ಯಾರು ಕೇಳೋದಿಲ್ಲ ಬಾಯಿ ಬಾಯಿ ಬಡಿದರ ||
ಮಹಾನುಭಾವ ಬಸವೇಶ್ವರ ಜನಿಸಿದ ಭೂಲೋಕ ಮಾಡುವುದಕ ಉದ್ಧಾರ  || ಜೀ ||             ಚೌಕ : ೧

ಬ್ರಾಹ್ಮಣರ ಹೊಟ್ಟಿಯೊಳು ಹುಟ್ಟಿದ ಬಸವಣ್ಣ ವೀರಶೈವ
ಮತ ಬೆಳಸಿಟ್ಟ  ||
ಬ್ರಾಹ್ಮರ ಭೋಗಕಿದು ಬಹು ಕೆಟ್ಟ  ||
ಮತ ಅಭಿಮಾನಿಗಿ ಮಾತಿನ ಪೆಟ್ಟು ||
ಕುಲದಣ್ಣನ ಕುಂಡ್ಯಾಗ ಕುಲದಣ್ಣ ಸೇರಿ ಅಳು ಮಾಡಿದಂಗಾಯಿತು ಘಟ್ಟ  || ಜೀ ||

ಹತ್ತೆಂಟು ಮಂದಿ ಥೊಂಟರು ಕೂಡಿ ತಮ್ಮ ತಮ್ಮರೊಳು
ಮಾಡಿರು ಅಟ್ಟ  ||
ಹೊಂಬ ಬಸ್ಯಾ ನಡಶ್ಯಾನ ಹುಡುಗಾಟ
ನಮ್ಮ ಹೊಟ್ಟಿಯೊಳು ತುಂಬೈತಿ ಕುಟ್ಟ ||
ಮೋಸಗಾರಿಕಿ ವೇಷ ಹಾಕಿಕೊಂಡು ಹೋಗಿ ದಾಸೋಹದಾಗ ಮಾಡನು ಊಟ  || ಜೀ ||

ಕುಂಟಲ ಗಿತ್ತಿ ಮಗ ಥೊಂಟ ಹೇಳತಾನ ಮಸ್ತ ಅವಾ ಬದನಿ ತೋಟ  ||
ಕರಿ ಬದನಿಕಾಯಿ ಆಗ್ಯಾವ ಘಟ್ಟ ||
ಮನಶಾಗೊಂದೊಂದು ಕಡಕೊಂಡು ಜಟಪಟ  ||
ಬುತ್ತಿ ಅರವ್ಯಾಗ ಹಾಕಿ ಕಂಟದೊಳು ಕಟಕೊಂಡು
ಹಣಿ ಮೇಲಿಡೋಣ ಬುದಿ ಬುಟ್ಟಿ  || ಜೀ ||

ರೈಟ ಕೆಲಸ ಪೈಟಿನ ಮೇಲೆ ಹೇಳಿದೆಂದು ಹಾಗೆ ಮಾಡಿದರು ಪಟ ಪಟ  ||
ದಾಸೋಗಕ ಬಂದಿರು ಲಟ ಲಟ ||
ಸುಮನೆ ಮಂತ್ರ ನುಡದಿರು ವಟ ವಟ ||
ಕಂಟದೊಳು ಲಿಂಗ ಕಟ್ಟಿದು ನೋಡಿ ಕಾವಲುಗಾರ
ಅವರಿಗೆ ಒಳಗ ಬಿಟ್ಟ  || ಜೀ ||

ದುಮಾಲಿ
ನಮ್ಮ ಕೆಲಸೈತೆಂತರ ನಕ್ಕು ದಾಸೋಗದಾಗ ಚೊಕ್ಕ ಕುಂತಿದಾರೋ
ಹಾಕಿ ಚಪಗಾಲ ||
ಪೂಜಾದ ಘಂಟಿ ಅಂದಿತು ಘಣ ಘಣಲ್  || ಜೀ ||
ಥೊಂಟರ ಕುಂಡಿ ಅಂದಿತು ಪುಕ್ ಪುಕ್ ಸುಮ ಸುಮನೆ
ಮಾಡಿಕೊಂಡೆವು ದುಃಖ ||
ಎದಿ ಅಂದಿತು ಝಲ್ಲ  || ಬುಡಕ ನಡಗ ತೀವು ಕೈ ಕಾಲ  || ಜೀ ||
ಅದರೊಳಗೊಬ್ಬ ಹೇಳಿದ ಹುಸುಕ ದೋತರ ಹಾಕಿ
ಮುಸಕ ಪೂಜಾ ಬೇಷಾಕ ||
ಮಾಡುತ ಬಂದವರಿಗೆಲ್ಲಾ ಆ ಜಂಗಮರಿಗೆ ಜಯವಿಲ್ಲ  || ಜೀ ||

ಏರ
ಬಡು ಬ್ರಾಹ್ಮಣನ ಮಗ ಬಹಳ ಥೊಂಟ ಕರಿ ಬದನಿಕಾಯಿ
ಬಿಟ್ಟಿ ಹಿಡಿದಿದ ಎದರ  ||
ಬರೋಬರಿ ಕಾಣತಿದ್ದಿಲ್ಲ ಅವನ ನೆದರ ||
ಮಾರಿಗಿ ಹಾಕಿ ದೋತರ ಪದರ ||
ಮಹಾನುಭಾವ ಬಸವೇಶ್ವರ ಜನಿಸಿದ ಭೂಲೋಕ
ಮಾಡವುದಕ ಉದ್ಧಾರ  || ಜೀ ||      ಚೌಕ :೨

ಹುಚ್ಚ ಬ್ರಾಹ್ಮಣ ಬದನಿಕಾಯಿ ಬಿಚ್ಚಿ ಹಿಡಿದಿದ ನೀಚ
ಜಂಗಮ ಇದ್ದ ಅವನ ಬಗಲಾಗ  ||
ಹಣಕಿ ಹಾಕಿ ನೋಡಿದ ಅವನ ಮಗಲಾಗ  ||
ಬದನಿಕಾಯಿ ಥುಂಭ ಕಂಡಿತು ಬೆಳ್ಳಗ
ಏ ಎಪ್ಪ ಬದನಿಕಾಯಿ ತುಡುಗರು ಬಂದಾರ ನಮ್ಮ ದಾಸೋಗದಾಗ  || ಜೀ ||

ನಾ, ಬಾ ನೀ, ಬಾ ಎಂದು ನೆರೆದಿದರು ಥೊಂಟರು ಹೋಗಿ ನಿಂತಿರು ಮೂಲ್ಯಾಗ ||
ಅವರಿಗಿ ಹಿಡಿದು ತಂದಿರು ಬಯಲೀಗ ||
ಮಾತಾಡೆನೆಂದರ ಏಳುವಲ್ಲದು ನಾಲೀಗ ||
ಘನ ಮಹಿಮ ಬಸವಗ ಗಳಂಗರು ಹೇಳಿರು ಮಾತ ಮಾತ್ರ ಆಗೈತಿ ಧಗಾ  || ಜೀ ||

ವಾದ ವಿವಾದ ದಾಸೋಗದಾಗ ನಡದೀರು ಬಸವಗ ಬಂದಿತು ಖ್ಯಾಲಿಗ ||
ಗಡನೆ ನಡೆದು ಹೋಗಿದಾರು ಅಲ್ಲೀಗ  ||
ಅವರ ಅಂಗದ ಮೇಲೆ ಹಾಕಿರು ನಿಗ ||
ಮಹಾಪ್ರಭು ಸಂಗಮೇಶ್ವರ ದೇವ ನಿನ ಕಡಿನೆ ಬಂತು ಈ ಪ್ರಸಂಗ  || ಜೀ ||

ಜಗ ಜನಕ ಬಸವಾಗ ಜಂಗಮರು ಅಂದಿರು
ಭವ ಹದಗೆಡಿಸಿ ಬಿಟ್ಟಿರೋ ಹಿಂಗ ||
ಬದನಿಕಾಯಿ ಕಟ್ಯಾರ ಕೊರಳಾಗ ||
ಭಯವಿಲ್ಲದೆ ಭಯಗೇಡಿ ಸೂಳಿ ಮಕ್ಕಳು
ಹಿಂಗ ಮಾಡಿ ಕೆಡಶ್ಯಾರ ಜಗ  || ಜೀ ||

ಬಸವಣ್ಣ ಹೇಳಿರು ಬಾಕಿ ಜನರಿಗೆಲ್ಲ ನೀವು ಮಾಡಿರಿ ಹಾಂಗ  ||
ಅವರು ಬದನಿಕಾಯಿ ಕಟಿದ್ಹಾಂಗ  ||
ಬಸವ ಹಸ್ತ ಮುಟ್ಟಿದ ಆಗಿವ್ರ ಲಿಂಗ ||
ದಂಗ ಆಗಿ ಮಂಗ್ಯಾ ಥೊಂಟರು ಬಸವಗ ಹಾಕಿರು ಸಾಷ್ಟಾಂಗ  || ಜೀ ||

ದುಮಾಲಿ
ಬಸವ ಥೊಂಟರಿಗಿ ಕೊಟ್ಟಿರು ಗುರು ಬೋಧಿ ||
ಬಿಡರಿ ಹಿಂಥ ಹಾದಿ  || ಆಗಿ ಛಲವಾದಿ ||
ಇರ‍್ರಿ ಊರ ಹೊರಗ ಕೇಳಿ ಬ್ರಾಹ್ಮರು ಆಗಿರುವ ಬೆರಗ  || ಜೀ ||
ಥೊಂಟರು ಅಂದಿರು ಬಸವ ನಿಧಿ ಬಂತು ಭವ ಭಾದೀ ||
ನಮ ನಮ ಗೂಧಿ ||
ನಾವೇ ಖೆಡವಿಕೊಂಡೆವು ಕಡಿಗ ||
ದೋಷ ಯಾಕ ಕೊಡಾನು ನಿಮ್ಮ ಅಡಿಗ  || ಜೀ ||

ಶರಣರು ಸತ್ತಿದ್ದು ಕೇಳಿ ವರದಿ ಗಂಟಿಕಟ್ಟಿ || ಗರದಿ ಎದರ ನಿಂತ ತೋರಿದಿ  ||
ಸುತ್ತಾ ಜಗದಾಗ ಬ್ರಾಹ್ಮರ ಪೂಜಾ ಕಲಿಯುಗದಾಗ  || ಜೀ ||

ಬಸವಾನೆ ಶಿವ ಶಿವ ಹೌದೆಂದು ಥೈ ಥೈ ಕುಣದಿರು ಸಿದ್ಧ ಸಾಧರು ||
ಹಿಂಗ ಜೈ ಘೋಷ ಹೊಡದಿರು ಸಂತ ಸಾಧರು ||
ಎಲ್ಲಾ ಪುರಾತರು ಅಂದಿರು ಬಸವ ಬಹದ್ದೂರ ||
ಮಹಾನುಭಾವ ಬಸವೇಶ್ವರ ಜನಿಸಿದ ಭೂಲೋಕ ಮಾಡುದಕ ಉದ್ಧಾರ  || ಜೀ ||
ಚೌಕ : ೩
ಮೊದಲಿನ ಕಾಲದ ಕುಲಕ್ಕೊಬ್ಬ ಶರಣೆಂದು ಕಲ್ಯಾಣದೊಳು ಕೂಗ್ಯಾರ  ||
ಎಷ್ಟೋ ಮಹಾತ್ಮರು ಆಗಿ ಹೋಗ್ಯಾರ ||
ಮಾನವರು ಅವರ ಪಾದಕ ಬಾಗ್ಯಾರ ||
ಶಿವ ಶರಣರ ನಾಮ ಇಟ್ಟು ತೊಟ್ಟಿಲ ಕಟ್ಟಿ ತೂಗ್ಯಾರ  || ಜೀ ||
ಮುಸಲ್ಮಾನ ಮತದಲ್ಲಿ ಮಹ್ಮದ ಪೈಗಂಬರ ಜನಿಸಿ ಬಂದಿದಾರು ಸರದಾರ ||
ಬಾಗಿ ಹೊಡಿಯೋದು ಬಾ ಎಂದು ಕರದಾಗ  ||
ಕಲಮಾ ಓದಿಸಿ ಮಾಡಸಿರು ದೀನ್‌ದಾರ  ||
ಯಾವ ಕಾಲದೊಳು ಅಂದ್ರು ಕೊಂಡಿ ಮಿಂಚಣ್ಣಗಳು
ಆಗು ಈಗು ಇದ್ದೆ ಇರತಾರ  || ಜೀ ||
ಹತ್ತು ಎಂಟು ಮಂದಿ ಥೊಂಟರು ಕೂಡಿ ನಬಿ ಶರಣರಿಗಿ ತಡದಾರ ||
ಕೈಯಾಗ ಹಿಡಿ ಹಿಡಿ ಹಳ್ಳ ಹಿಡದಾರ ||
ಇವು ಏನ ಅವಾ ಎಂದು ನುಡಿದಾರ ||
ಇದ್ದ ಮಾತು ಸಿದ್ಧಾಂತ ಹೇಳಿದರ ಪಾದಕ ಮಾಡತೆವು ನಮಸ್ಕಾರ  || ಜೀ ||
ನಬಿ ಶರಣರು ಹೇಳಿರು ಅವರಿಗಿ ನಿಮ ಕಿವಿಗಿ ಹಚಕೋರಿ ಎತ್ತರ ||
ಅವೆ ದಿನಸ ಕೊಡತಾವ ಉತ್ತರ ||
ಆ ವ್ಯಾಳ್ಯಾಕ ಆಗತಿರಿ ಗುರು ಪುತ್ತರ ||
ನಾನು ನಿಮ್ಮಂತೆ ಮನಶ್ಯಾ ಇರುವೆನು ನನ್ನ ಮೈಯೊಳು ಐತಿ ನೆತ್ತರ  || ಜೀ ||
ಬಿಡಕಿ ಥೊಂಟರು ಕಡಕ ಶಬ್ದ ನುಡಿದಿತು ಅಲ್ಲಾ ಹೂ ಅಕಬರಾ ||
ಮತ್ತು ಲಾಹಿಲಾ ಇಲ್ಲಲ್ಲ ತುರಾ ||
ಮಹ್ಮದ ರಸುಲುಲ್ಲಾ ಪರವರದಿಗಾರ ||
ಇಷ್ಟ ಕೇಳಿ ಜಟ್ಟನೆ ಪಾದಕ ಬಿದ್ದಾರ  ||  ಜೀ ||

ದುಮಾಲಿ
ಮೂಢತನದ ಬುದ್ಧಿ ಮಾಡಿ ಧೀನ್ ಹೊಡೆಯದೆ ಖೂನ್ ಆದೆವು ಅಪಮಾನ ||
ಶರಣರ ರಸೂಲುಲ್ಲಾ ಮರಣ ರಹಿತ ಮಾಡಿಕೋರಿ ಚೀಲಾ  || ಜೀ ||
ರಾಮ ರಹಿಮ ನೀನೆ ರಹಿಮಾನ ಖರೆ ನಿಮ್ಮ ಖುರಾನ್ ಆಗತೆವು ಮುಸಲ್ಮಾನ ||
ನುಡದಿರು ಬಿಸಮಿಲ್ಲಾ ಆಗ ಪೈಗಂಬರ ಕುರಸಿರು ಪ್ಯಾಲ  || ಜೀ ||
ಸವಾಲಾಕ ಕೂಡಿತು ಜನ ಮಕ್ಕಾ ಮದಿನ ಶರಣರ ವತನ ||

ಏರ
ಧರೆಯೊಳು ಹಿರೆ ಸಾವಳಗಿ ಜಗದುರು ಶಿವಯೋಗಿ
ಕಮರಿಯೊಳು ಸಿದ್ದರ ೩೬೦ ಇನಾಮ ಗೆದ್ದಾರ ||
ಮಹ್ಮದ ಕವಿ ಅವರಿಂದೆ ಉದ್ಧಾರ ||
ಮಹಾನುಭಾವ ಬಸವೇಶ್ವರ ಜನಿಸಿದ ಭೂಲೋಕ ಮಾಡುವುದಕ ಉದ್ಧಾರ             ಚೌಕ : ೪