ಪ್ರಾಣದಾಸೆ ಬಿಟ್ಟವರೀಗೆ ಪರಮೇಶ್ವರ ಸಿಗತಾನ
ಆಶೆ ನೀಗಿ ಉದಿಸಿಕೊಂಡ್ರು ಸತ್ಯೆ ಶರಣರ
ಶುದ್ಧ ಭಾವದಿಂದ ಕೇಳ್ರಿ ಸಿದ್ಧರಾಮನ ಪುರಾಣ
ಹೇ, ಸಿದ್ಧರಾಮನ ತಂದೆ ತಾಯಿ ಸುಗ್ಲಾದೇವಿ ಮುದ್ದನ ಗೌಡ
ಸೊನ್ನಲಾಪುರದಲ್ಲಿ ಅವರ ಠಿಕಾಣ
ಭಾವ ಭಕುತಿಯಲ್ಲಿ ಸಿರಿಯಾಳರಾಜ ಚಾಂಗುಣಿ ಸಮಾನ
ನಿತ್ಯ ಕಾಲದಲ್ಲಿ ಮಾಡತಿದ್ರು ಜಂಗಮರ ಭೋಜನಾ
ಗುರುಲಿಂಗ ಜಂಗಮರ ಕಂಡರ ಬಂಗಾರ ಕಂಡಂಗ ಮಾಡತಿದ್ರು
ಗಂಗಾಧರನ ಸ್ಮರಣಿಯಲ್ಲಿ ಬೇಗ ಬೆಳಗಾನ
ನಿತ್ಯ ಕೊಡತಿದ್ರು ಅನ್ನ ಅರವಿ ವಸ್ತ್ರದಾನ  || ಗೀ ||

ಹೇ ಭಾವ ಭಕ್ತಿಯಿಂದ ದೇವರ ಸೇವೆ ಮಾಡುದು ಕಂಡು
ಶಿವ ಕೊಟ್ಟು ಮರತಿದನರಿ ಶ್ರೀಮಂತನ
ಹುಟ್ಟು ಭಂಜಿ ಇದ್ರು ಅವರ ಹೊಟ್ಟಿಯಲ್ಲಿ ಇದ್ದಿದಿಲ್ಲ ಸಂತಾನ
ನೋಡಿ ಅಂತಕರಣ ಹುಟ್ಟಿತಲ್ರಿ ಭಗವಾನ
ಎಪ್ಪತ್ತು ವರ್ಷ ಮುಪ್ಪಿನವರಿಗೆ ಮಕ್ಕಳ ಕೊಡುವುದಕ್ಕಾಗಿ
ಕಂದು ಗೊರಳ ಒಪ್ಪಿಕೊಂಡು ಬಂದು ಮನಿ ಮುಂದ ನಿಂತಾನ
ಅವರ ಬಾಗಿಲಿಗ್ಹೋಗಿ ಬಿಕ್ಷಾ ನೀಡಿರಿ ತಾಯಿ ಅಂತಾನ  || ಗೀ ||

ಹೇ, ಇಷ್ಟ ಕೇಳಿ ಸುಗ್ಲಾದೇವಿ ದಿಗ್ಗನೆ ಎದ್ದು ಬಂದು ಬಿಕ್ಷಾ ನೀಡಿ
ಸ್ರಾಷ್ಟಾಂಗ ನಮಸ್ಕಾರ ಮಾಡ್ಯಾಳ ಬಂದು ಸಾಂಬ ಶಿವನ
ಬಂದು ಶಿವ ಪುತ್ರ ಮಗನ ಹಿಡಿಯಂತ ನುಡಿದಾನ ಭಗವಾನ
ಕೇಳಿ ಮುದ್ದನ ಗೌಡ ಅಂತಾನ ನಿಮ್ಮದು ಎಂಥ ವಚನ
ಮುಪ್ಪಾನ ಮುದುಕರು ನಾವು ಮಕ್ಕಳ ಕಾಣದು ಬಗಿ ಹ್ಯಾಂಗ
ಮೈ ಒಳಗ ನಮಗೇನು ಇಲ್ಲ ಚೈತನ್ಯ
ದೊಡ್ಡ ಶರಣರು ಕಾಣಸ್ತಿರಿ ಸುಳ್ಳ ಆಡುದೇನ ಕಾರಣ  || ಗೀ ||

ದುಮಾಲಿ
ಇಷ್ಟ ಕೇಳಿ ಅಂದ ಶಂಕರ ಕೇಳೋ ಸಾಹುಕಾರ
ದಂಪತಿಗಳು ಇಬ್ಬರು ಕೂಡಿ ಮಾಡ್ರಿ ಸ್ನಾನ
ಆ ಮ್ಯಾಲ ತಿಳಿದಿತರಿ ನಮ್ಮ ಖೂನ  || ಗೀ ||

ಒಂದು ತೀರ್ಥ ಗುಂಡ ತಯ್ಯಾರ ಮಾಡಿದ ಈಶ್ವರ
ಇಬ್ಬರು ಮುಳಗ್ಯಾರ ಹೋಗಿ ಆ ದಿನಾ
ಬದಲಾಯ್ತೋ ಮಾರಿಯ ಚಿಹ್ನ  ||  ಗೀ ||

ನಾಲ್ವತ್ತು ವರ್ಷದವರಂಗ ಆಗಿ ನಿಂತಾರ
ಶಿವನ ತಂತರ ಯಾತರ ಅವಮಾನ
ಗಾಬರಿಯಾಗತಿರಿ ಊರಾನ ಜನ  || ಗೀ ||

ಏರ
ಹೇ, ಸತಿ ಪತಿ ಇಬ್ಬರು ಕೂಡಿ ಸೋಮವಾರ ಸಂಜಿ ಮಾಡಿ
ಮಲಗಿಕೊಂಡ್ರೋ ಕಂಡೆವಂತ ಶಿವನ ಚರಣ
ಶುಭ ಮೂರ್ತದಲ್ಲಿ ಗರ್ಭ ಮೂಡಿತರಿ ಸತ್ಯ ಶರಣ
ಗರ್ಭ ಮೂಡಿದ ಕೂಡಲೆ ತಾಯಿ ಮುಖ ಚಂದ್ರನ ಕಿರಣ
ಪ್ರಾಣದಾಸಿ ಬಿಟ್ಟವರಿಗಿ ಪರಮೇಶ್ವರ ಸಿಗತಾನ
ಆಸೆ ನೀಗಿ ಉದಿಸಿಕೊಂಡ್ರು ಸತ್ಯ ಶರಣ
ಶುದ್ಧ ಭಾವದಿಂದ ಕೇಳಿ ಸಿದ್ಧರಾಮನ ಪುರಾಣ  || ಗೀ ||            ಚೌಕ : ೧

ಹೇ, ಮುಂದ ಕೇಳ್ರಿ ಒಂದು ದಿವಸ ತಾಯಿಯಾದ ಸುಗ್ಲಾದೇವಿ
ನಿದ್ರಿ ಹತ್ತಿ ಮಲಗಿ ಕೊಂಡ್ಲು ಮಂಚದ ಮ್ಯಾಗ
ಶರಣ ಹುಟ್ಟುವ ಸುದ್ದಿ ಹೋಯ್ತರಿ ಸ್ವರ್ಗದ ಮ್ಯಾಗ
ಪೂರ್ಣ ನೌಮಾಸ ತುಂಬಿದಾವರಿ ಅಷ್ಟರೊಳಗ
ಸರಸ್ವತಿ ಪಾರ್ವತಿ ಲಕ್ಷ್ಮಿ ಮೂವರ ಕೂಡಿ ಪ್ರತ್ಯಕ್ಷ
ನೋಡಲಿಕ್ಕೆ ಬಂದಾರ ತೆಳಗ
ಸಿದ್ದರಾಮನೆಂದು ನಿಂತು ಕೂಗ್ಯಾರ ಅವರ ಮನಿಯೊಳಗ
ಸಿದ್ಧರಾಮ ಗರ್ಭದಿಂದ ಬಂದನ್ರಿ ಹೊರಗ  || ಗೀ ||
ಹಿಂಗ ಸುಗ್ಲಾದೇವಿ ನಿದ್ರಿ ಹತ್ತಿ ಮನಗಿದ್ಲಾವಾಗ
ಸರಸ್ವತಿ ಪಾರ್ವತಿ ಲಕ್ಷ್ಮಿ ಮೂವರು ಕೂಡಿ ತಗೋಂಡ್ರ ಕಯ್ಯಾಗ
ನಾವು ಏನಂತ ನಾಮಕರಣ ಇಡಬೇಕ್ರಿ ಈತಗ
ಹುಟ್ಟಿದ ವ್ಯಾಳ್ಯೆ ನಕ್ಷತ್ರ ತಗದು ಆಗ
ಸಿದ್ಧರಾಮಂತ ಖಾಯಂ ಮಾಡಿ ತೊಟ್ಟಿಲದಾಗ ಹಾಕ್ಯಾರ ಆಗ
ಅವರು ಮೂವರು ಕೂಡಿ ಜೋಗುಳ ಪದಾ ಹಾಡ್ಯಾರಾವಾಗ  || ಗೀ ||

ದುಮಾಲಿ
ಏ ಸೊನ್ನಲ ಪೂರದ ಶ್ರೀಮಂತ
ಶ್ರೀ ಸಿದ್ಧರಾಮ ಜೋ ಜೋ ss ||
ಏ, ಮುಡಿ ಮಲ್ಲಯನಾ ಭಕ್ತನಾಗು
ಶ್ರೀ ಸಿದ್ಧರಾಮ ಜೋ ಜೋss ||
ಹಿಂದಿನ ಶುಕ್ರತ ಮಂದರಗಿರಿವರ
ಶ್ರೀ ಸಿದ್ಧರಾಮ ಜೋ ಜೋss

ಏರು
ಹೇ, ಹರ್ಷದಿಂದ ನಾಮ ಇಟ್ಟು ಕೈಲಾಸಕ್ಕೆ ಹ್ವಾದರು ಹೊಂಟು
ಯಾರು ನೋಡಲಿಲ್ಲ ಕೇಳ್ರಿ ಹೊತ್ತು ಹೊಂಡು ತಾನ
ಮುಂಜಾನೆ ಬ್ರಂಗಿ ಎಂಬ ಜಂಗಮ ಅವರ ಮನಿಗಿ ಬಂದಾನ
ಅವರ ಮನಿಗಿ ಬರತಿದ್ದ ನೋಡ್ರಿ ಬೇಗ ಬೆಳತಾನ
ಪ್ರಾಣದಾಸಿ ಬಿಟ್ಟವರಿಗಿ ಪರಮೇಶ್ವರ ಸಿಗತಾನ
ಆಸೆ ನೀಗಿ ಉಡಿಸಿದಾರು ಸತ್ಯ ಶರಣರ
ಶುದ್ಧ ಭಾವದಿಂದ ಕೇಳ್ರಿ ಸಿದ್ಧರಾಮನ ಪುರಾಣ  || ಗೀ ||
ಚೌಕ : ೨
ಹೇ, ಕೂಸಿನ ಮುಖ ನೋಡಿ ಹರ್ಷದಿಂದ ಕುಣಿದಾಡಿ
ಕೂಗಿ ಕೂಗಿ ಎಬ್ಬಿಸ ತಾನ್ರಿ ಮನಿ ಮಂದಿಗಿ
ಈ ಸಪ್ಪಳ ಕೇಳಿ ಎಚ್ಚರಾಯಿತರಿ ಸುಗ್ಲಾದೇವಿಗಿ
ಮೈ ಹಗುರಾದ ಕಾರಣೇನು ಅಂತಾಳ ಗಾಬರ್ಯಾಗಿ
ಅಸುರು ಕಂಡು ಕೂಸಿನ ನೋಡಿ ಈಶಾನ ನಾಮಕರಣ ಕೊಂಡಾಡಿ
ಅದೆ ನಾಮಕರಣ ಬಂತು ಅವರ ಬಾಯಿಗಿ
ಬಹಳ ಆನಂದಾಯಿತ್ರಿ ಅವರ ತಾಯಿ ತಂದಿಗಿ  || ಗೀ ||
ಹೇ, ಬಡವರ ಮನಿಗಿ ಭಾಗ್ಯ ತಾನು ಸಾಗಿ ಬಂದಂತಾಗಿ
ಹಿಡಿಲಾರದಷ್ಟು ಸಂತೋಷ ಅವರ ತಾಯಿ ತಂದಿಗಿ
ಬಂಡಿ ಹೇರಿ ಸಕ್ಕರಿ ಹಂಚ್ಯಾರ ಸಂದಿ ಸಂದಿಗಿ
ಅವರು ಬೇಡಿದಷ್ಟು ದಾನ ಕೊಟ್ಯರ ಬಂದ ಮಂದಿಗಿ
ದೇಶ ಎಲ್ಲಾ ಆಳುವಂತ ಈಶನ ನಾಮಕರಣದಿಂದ
ಏಸು ಕಾಲ ಆದರು ನಾವು ಮುರಿಬಾರದು ಮಂದಿಗಿ
ಹೋಗುಕಾಲಕ್ಕ ಕೊಟ್ರು ನಮ್ಮ ಕಯ್ಯಾಗ ಹೊನ್ನಿನ ಬಿಂದಿಗಿ  || ಗೀ ||

ಹೇ, ಎಳಿ ಬಾಳಿ ಸುಳಿಯೆಂಥ ಖಳಿಯುಳ್ಳ ಸಿದ್ಧರಾಮ
ದಿನ ದಿನಕ ಬೆಳಿತಿದ್ದ ಇಂಥ ಪರಿಯಾಗಿ
ಅವರ ತಂದಿ ಪುಣ್ಯ ನೋಡರೆಣ್ಣ ಮಂದಲಗಿರಿಯಾಗಿ
ಓಂ ಶಿವಾ ಎಂಬು ಶಬುದ ಬಂತೋ ಮೊದಲ ಬಾಯಿಗಿ
ಆರು ವರುಷತಾನ ಹುಡುಗ ಯಾರ ಗುಡ ಮಾತಾಡಲಿಲ್ಲ
ಆಕಳ ತಗೊಂಡ ಹೊಲಕ ಹೋದ ಮೊದಲ ಸುರವಿಗಿ
ಎಂದ ಕಡೆನಂದ ಮುಕ್ತಿ ಕೊಡುವ ಗುರುವಿಗಿ  || ಗೀ ||

ಏ ಆಕಳ ಒಯ್ದು ಹೊಲ್ದಾಗ ಬಿಟ್ಟು ಅಡ್ಯಾಡಿಕೊಂತ ತಿರುಗಾಡ್ತಿದ್ದ  |
ಒಂದು ದಿವಸ ಬಂದ ನಿಂತ ಹೊಲ್ದ ಸೀಮಿಗಿ
ಇಷ್ಟಲಿಂಗ ಮತ್ತೊಂದು ಬಿದ್ದೀತಲ್ಲರಿ ಅವನ ನೆದರಿಗಿ
ಪೂರ್ಣ ಆತನ ಮ್ಯಾಲ ಇಟ್ಟಿದಾನ್ರಿ ತನ್ನ ನೆಂಬಿಗಿ
ಮನ್ಯಾಗ ಕಟ್ಟಿದ ಬುತ್ತಿ ರೊಟ್ಟಿ ದೇವರಿಗೆ ನವದೆ ಮಾಡಿ
ಅದೇ ಬುತ್ತಿ ಊಟ ಮಾಡತಿದ್ದ ಆರು ತಾಸಿಗಿ
ಇಂಥ ಶಾಂತ ಗುಣ ಆರು ವರುಷದ ಸಣ್ಣ ಕೂಸಿಗಿ  || ಗೀ ||

ದುಮಾಲಿ
ಮಲ್ಲಿಕಾರ್ಜುನ ಅವತಾರ ತೊಟ್ಟು ಶಿವ ಸಂ ಜೀವ ನೋಡಲಾಕ
ಭಕ್ತೀ ಬಂದಾನರಿ ಅವರ ಹೊಲಕ
ಮಡದಿನ್ನ ಕರಕೊಂಡ ಬಂದಾನ್ರಿ ಅವರ ಸ್ಥಳಕ  || ಗೀ ||
ಸಿದ್ಧರಾಮಗ ಹುಟ್ಟಿತು ನೋಡ್ರಿ ಅರುವ
ಇವನೆ ನಮ್ಮ ಗುರುವ ಮುಗಿದ ನಿಂತ ಕರವ ಬಿದ್ದ ಪಾದಕ
ಯಾವುರವರು ಬಂದಿರಿ ಇಲ್ಲಿಗ್ಯಾಕ  || ಗೀ ||
ನಿಮ್ಮ ನಾಮಕರಣ ಹೇಳೋ ದೇವ ಆಗೇದೇನೋ
ಹಸುವಾ ಮಾಡುವೆನು ನಿಮ್ಮ ಸೇವಾ ಕೇಳತಾನ್ರಿ ಮೆಲ್ಲಕ
ಕಬ್ಬು ಸೀತನಿ ತರತೀನ್ರಿ ತಿಲ್ಲಾಕ  || ಗೀ ||

ಏರ
ಇಷ್ಟು ಕೇಳಿ ಮಲ್ಲಯ್ಯನವರು ಎಷ್ಟು ದಯಾಳು
ಗುಣವಂತ ಹುಡುಗ
ಸೃಷ್ಟಿಯೊಳು ಕಾಣಲಾರೆ ಇಂಥ ತಿರುಳನ
ಪೂರ್ಣ ವಿಚಾರ ನೋಡಬೇಕಂತಾನ ಆತನ ಗುಣ
ಪ್ರಾಣದಾಸಿ ಬಿಟ್ಟಿವಾನಿಗಿ ಪರಮೇಶ್ವರ ಸಿಗತಾನ
ಆಶೆನೀಗಿ ಉದಿಸಿಕೊಂಡ್ರು ಸತ್ಯ ಶರಣ
ಶುದ್ಧ ಭಾವದಿಂದ ಕೇಳ್ರಿ ಸಿದ್ಧರಾಮನ ಪುರಾಣ  || ಗೀ ||            ಚೌಕ : ೩

ಏ ತಮ್ಮ ನನ್ನ ಹೆಸರು ಮಲ್ಲಯ್ಯನವರು ಜಾತಿಯಲ್ಲಿ ಜಂಗಮರು
ಮಡದಿ ಹೆಸರು ಗಂಗಾದೇವಿ ಅಂತ ನುಡಿದಾನೋ
ಕೇಳಿ ಸಿದ್ಧರಾಮ ಮತ್ತು ಅವರ ಪಾದ ಹಿಡದಾನೋ
ಅವುರ ಕಡೆಯಿಂದ ಪೂ ಗುಚ್ಛ ಪಡದಾನೋ
ಕಬ್ಬು ಸೀತನಿ ಸುಲಗಾಯಿ ತಂದು ಮುಂದ ಇಟ್ಟ ಸಿದ್ಧರಾಮ
ಮಡದಿನ್ನ ಕರಕೊಂಡ ಮಲ್ಲಯ್ಯ ತಿಂದಾನೋ
ಕೇವಲ ಶಿಷ್ಯ ತಂದ ಪದಾರ್ಥ ಬಹಳ ಸೆಂವಿ ಅಂದಾನೋ  || ಗೀ ||

ಹೇ ತಿನ್ನುದೆಲ್ಲಾ ಆದ ಮ್ಯಾಲೆ ಟೆಂಗಿನ ನೀರು ತಂದ ಕೊಟ್ಟ ಸಿದ್ಧರಾಮ
ಕುಡದ ಕೂಡ್ಲೆ ಮಲ್ಲಯ್ಯನವರು ನೆಲಕ ಬಿದ್ದಾನು
ಹೊಟ್ಯಾಗ ಉರಪ ಎದ್ದಾದಂತ ಅಲ್ಲೆ ಹೊರಳಾಡತಿದ್ದಾನೋ
ಮಡದಿ ಗಂಗಾ ದೇವಿ ದುಃಖ ಅಂತೂ ಹೇಳಲಾರೆನು
ಗಾಬರಿಯಾಗಿ ಸಿದ್ಧರಾಮ ಹೌ ಹಾರಿ ಕೇಳತಾನ
ಏನು ಬೇಕ್ರಿ ಸ್ವಾಮಿ ನಿಮಗ ತಂದು ಕೊಡುವೆನು
ನೀವು ಹೇಳದಿದ್ರ ಪ್ರಾಣ ನಾನು ಇಲ್ಲಿ ಬಿಡುವೆನು ||  ಗೀ ||

ಹೇ, ಬಾಲ ಸಿದ್ಧರಾಮ ಆಡು ಮಾತ ಕೇಳಿ ಮಲ್ಲಯ್ಯನವರು
ಕೈ ಸನ್ನಿ ಮಾಡಿ ಹುಡಗನ ಮುಂದಕ ಕರದಾನೂ
ಏನು ಹೇಳಲಿ ಸಿದ್ಧರಾಮ ತಾಳಲಾರೆನು
ಹೊಟ್ಯಾಗ ಉರುಪ ಎದ್ದು ಬೆಂಕಿ ಬಿದ್ದಾಂಗ ಹೇಳಲಾರೆನು
ಅರ್ಧ ತಾಸಿನೊಳಗ ನೀನು ನುಚ್ಚ ಮಜ್ಜಗಿ ತಂದು ಕೊಟ್ರ
ತಮ್ಮ ಸಂತೋಷಾಗಿ ತಿಂದು ಏಳುವೆನೂ
ನೀನು ತರಲ್ದೆ ಹ್ವಾದರ ನಾನು ಪ್ರಾಣ ಇಲ್ಲೆ ಬಿಡುವೆನು ||  ಗೀ ||

ಏ ಇಷ್ಟ ಕೇಳಿ ಸಿದ್ಧರಾಮ ಓಡಕೋತ ಮನಿಗಿ ಹೋದ
ನುಚ್ಚ ಮಜ್ಜಿಗಿ ಮಾಡಂತ ತಾಯಿಗಿ ಹೇಳ್ಯಾನ
ಬುತ್ತಿ ಕಟ್ಟಿಸಿಕೊಂಡು ಓಡಕೋಂತ ಮನಿಗಿ ಬಂದಾನ
ಬರುವದರಾಗಿ ಮಲ್ಲಯ್ಯ ಮಾಯವಾಗಿದ್ದನು
ಹೊಲ ಎಲ್ಲಾ ತಿರಗಾಡಿ ಮೊದಲ ಕುಂತ ಜಾಗ ನೋಡಿ
ಸಣ್ಣ ಹುಡುಗ ಕಣ್ಣ ತುಂಬ ನೀರ ತಂದಾನ
ಮಗನೆ ಮಗನೆ ಅಂತ ಜಂಗಮನನ್ನ ಪ್ರಾಣ ಕೊಂದಾನು  || ಜೀ ||

ಹೇ, ಗಾಬರಿಯಾಗಿ ಸಿದ್ಧರಾಮ ನೆರಿ ಹೊಲ್ದವರಿಗಿ ಕೇಳತಾನ
ಮಲ್ಲಯ್ಯ ಅನ್ನುವ ಜಂಗಮನನ್ನ ನೋಡಿರೇನು
ನನಗ ಏನರೆ ಹೇಳಂತ ಎಲ್ಲಿಗಿ ಹೋಗ್ಯಾನೇನು
ಈ ಹಾದಿ ಹಿಡಿದು ಮಲ್ಲಯ್ಯ ಜಂಗಮ ಹೋಗ್ಯಾನೇನು
ದಿಡಗ ಮಾಡಿ ನೆರಿ ಹೊಲದವರು ಸಿದ್ಧರಾಮಗ ಕರದ ಹೇಳತಾರ
ಇಲ್ಲೆ ದಾರ್ಯಾಗ ಕುಂದ್ರೋ ಬಂದ್ರ ಅವನಿಗೆ ತಪಾಸ ಮಾಡೂನ
ಅಂವ ಬರಲ್ದಿದ್ರೆ ನಾವು ನಮ್ಮ ಮನಿಕಡಿಗ್ಹೋಗೋನ  || ಗೀ ||

ದುಮಾಲಿ
ಸಿದ್ಧರಾಮ ಹಿಡಿದ ಒಂದೇ ಹಟ ಮಲ್ಲಯ್ಯನ ಮುಕುಟ
ನೋಡು ತಾನ ಊಟ ನಾನು ಮಾಡೂದಿಲ್ಲ
ಪ್ರಾಣ ಹ್ವಾದರ ಸಹಿತ ಬಿಡುದಿಲ್ಲ  || ಗೀ ||

ಕಾಂತರವನ ಸೇರಿ ಕೆಟ್ಟ ಶರೀರದಾಸೆ ಬಿಟ್ಟನಲ್ಲ ಬ್ಯಾಸಗ್ಯಾಗ
ಸುಟ್ಟ ಉರದಾವರಿ ಅಂಗಾಲ
ಮೂರು ದಿವಸ ಕಣ್ಣಿಗಿ ನಿದ್ದಿ ಇಲ್ಲ  || ಗೀ ||

ಏರ
ತಾಯಿ ತಂದಿ ಆಯಿ ಮುತ್ಯಾ ಅಣ್ಣ ತಮ್ಮರ ಆಸೆ ಅವನಿಗಿಲ್ಲ
ಅವರಿಗಿ ಬಿಟ್ಟು ಸೇರಿಕೊಂಡ ಅಡವಿ ಆರ್ಯಾಣ
ಸಣ್ಣ ಹುಡುಗ ಓಡಿ ಓಡಿ ಹಸ್ತ ಆದ ಹೈರಾಣ
ಪ್ರಾಣದಾಸೆ ಬಿಟ್ಟವರಿಗಿ ಪರಮೇಶ್ವರ ಸಿಗತಾನ
ಆಸೆ ನೀಗಿ ಉಡಿಸಿಕೊಂಡ್ರು ಸತ್ಯೆ ಶರಣ
ಶುದ್ಧ ಭಾವದಿಂದ ಕೇಳ್ರಿ ಸಿದ್ಧರಾಮನ ಪುರಾಣ  || ಗೀ ||            ಚೌಕ : ೪

ಹೇ, ಆರೇಳು ಮಂದಿ ಜಂಗಮರು ಹೆಗಲ ಮ್ಯಾಲ ಕಂಬಳಿ ಹೊತ್ತು
ಹಾದಿ ಹಿಡಿದು ಹೊಂಡಿದಾರು ಅದೇ ವ್ಯಾಳ್ಯಾಕ
ಶ್ರೀ ಮಲ್ಲಯ್ಯ ಮಲ್ಲಯ್ಯ ಅನ್ನಕೋತ ಬಂದಾರ ಹಳ್ಳಕ
ಆಗ ಸಿದ್ಧರಾಮ ಓಡಿ ಹೋದ ಅವರಿಗಿ ಕೇಳುದಕ
ಮಲ್ಲಯ್ಯನ ಹೆಸರ ನೀವು ಉಸರುವದು ಕಾರಣವೇನು
ಹೇಳಿ ಕೊಡ್ರಿ ಮಲ್ಲಯ್ಯ ಇರತಾನ ಯಾವ ಸ್ಥಾನಕ
ನೀವು ಹೇಳಿಕೊಟ್ರ ಕೋಟ ಪುಣ್ಯ ನಿಮ್ಮ ಪಾದಕ  || ಗೀ ||

ಹೇ, ಆರೇಳು ಮಂದಿ ಜಂಗಮರು ಹುಡುಗನ ಕರದು ದಿಡಗ ಮಾಡಿ
ಹೇಳತಾರ ಸದ್ಯ ನಾವು ಹೋಗತಿವೋ ಶ್ರೀಶೈಲಕ
ಆ ಮಹಾತ್ಮನಾದ ಮಲ್ಲಯ್ಯನ ದರ್ಶನ ಮಾಡುದಕ
ನಮ್ಮ ಸಂಸಾರದಲ್ಲಿ ಸುಖ ನೀಡಂವನಲ್ಲಿ ಸುಖ ಬೇಡದಕ
ಸಿದ್ಧರಾಮ ಅಂತಾನ ಸ್ವಾಮಿ ಸಂಸಾರ ಸುಖ ನನಗಿಲ್ಲ
ಸದ್ಯ ನಾನು ಬರ್ತೀನಿ ನಡಿರಿ ಅವುನ ನೋಡದಕ
ಅವರು ಬ್ಯಾಡಂದ್ರ ಸುರು ಮಾಡಿದ ಹಿಂದಿಂದ ಓಡದಕ || ಗೀ ||

ಹೇ, ತಿಂಗಳ ದಿನ ಅವರ ಹಿಂದೆ ತಿರಗ್ಯಾಡಿ ತಂಗಳ ರೊಟ್ಟಿ
ಒಪ್ಪತ್ತ ತಿಂದು ಬಂದು ನಿಂತಾರ ಯುಗಾದಿ ಪಾಡ್ಯಾಕ ನೌದ್ವಾರಕ
ಅದು ಕಲಿಯುಗದಲ್ಲಿ ದೊಡ್ಡ ಕ್ಷೇತ್ರ ಕಡಿ ಬಾಗಿಲಕ
ಆತನ ಶಿಖರ ಕಂಡ್ರೆ ನಮ್ಮ ಜನ್ಮ ಆಗುದು ಸಾರ್ಥಕ
ಗರ್ಭ ಗುಡಿಯ ಮುಂದ ಕುಂತು ಸಿದ್ಧರಾಮಗ ಕರದು ಹೇಳತಾರ
ಜಲ್ದಿ ಮಾಡಿ ಬೀಳು ಹೋಗೋ ಮಲ್ಲಯ್ಯನ ಪಾದಕ
ಅಲ್ಲಿ ಪವಿತ್ರ ನೋಡೋ ಪಾತಾಳ ಗಂಗಾ ಹರಿಯುದಕ  || ಗೀ ||

ದುಮಾಲಿ
ಸಿದ್ಧರಾಮ ನೋಡಿ ಆದ ದಂಗಾ ಜಂಗಮರೆಂತ ಮಂಗ
ಮಾಡಬಾರದು ಸಂಗ ವಿಶ್ವಾಸ ಇಡುದಿಲ್ಲಾ
ಇವರ ಮಾತು ಕೇಳಿ ನಾನು ಬಂದದಲ್ಲಾ  || ಗೀ ||
ಮಲ್ಲಯ್ಯಾಗ ತೋರಸ್ತಿವಿ ಅಂದ್ರೆಲ್ಲಾ ಅಡವ್ಯಾಗ ತಂದ್ರಲ್ಲಾ
ಗಿರಿಯೇರಿ ನೋಡತಾನ ಗುಡಿಯೆಲ್ಲ
ಇದು ದೇವರಲ್ಲರಿ ಕರಿಕಲ್ಲು  || ಗೀ ||

ಮಲ್ಲಯ್ಯ ಇದ್ದ ನನಂಗ ಕಣ್ಣು ಕಾಲ ಮೂಗ ಶರೀರ ಇತ್ತು
ಅವಗ ಕನ್ನಡ ಮಾತ ಬರತಿತ್ತು ಹಸನಲ್ಲಾ
ಐದು ದೂಪರ್ತಿ ಹಚ್ಚಿದಂಗ ಬಿಸಲ  || ಗೀ ||

ಏರ
ಹೇ, ತಾಯಿ ತಂದಿ ಆಯಿ ಮುತ್ಯ ಅಣ್ಣ ತಮ್ಮರ ಆಸೆ ಅವನಿಗಿಲ್ಲ
ಅವರಿಗಿ ಬಿಟ್ಟು ಸೇರಿಕೊಂಡ ಅಡವಿ ಅರ್ಯಾಣ
ಸಣ್ಣ ಹುಡುಗ ಓಡಿ ಓಡಿ ಹಸಿದು ಆದ ಹೈರಾಣ
ಪ್ರಾಣ ದಾಸಿ ಬಿಟ್ಟವರಿಗಿ ಪರಮೇಶ್ವರ ಸಿಗತಾನ
ಆಸೆ ನೀಗಿ ಉಳಿಸಿಕೊಂಡ್ರು ಸತ್ಯ ಶರಣ
ಶುದ್ಧ ಭಾವದಿಂದ ಕೇಳ್ರಿ ಸಿದ್ಧರಾಮನ ಪುರಾಣ  || ಗೀ ||            ಚೌಕ : ೫

ಹೇ, ಇದರಂತೆ ಏಳು ದಿವಸ ನೀರ ಸಹಿತ ಕುಡಿಲಾರದೆ
ಗಿರಿ ಏರಿ ಶಿಖರದ ಮೇಲಿಂದ ನೋಡ್ಯಾನ್ರಿ ಕೆಳಗ
ಒಂದು ಕಲ್ಲು ತಗೊಂಡ ಒಗದಿದಾನ್ರಿ ಕಮರಿ ಮಠದಾಗ
ಒಂದು ತಾಸಿನ ಮ್ಯಾಗ ಕಲ್ಲು ಹೋಗಿ ಮುಟ್ಟಿತ್ರಿ ತೆಳಗ
ಕಂದು ಗೊರಳ ಸಿಗುವುದಿಲ್ಲ ಬಂದನ ಬಿಟ್ಟು ಸುಖವಿಲ್ಲ
ಹಿಂದ ಮುಂದ ನೋಡಬಾರದು ನಾನು ಇದರಾಗ
ಹಿಂದಕ ಮೂರ ಮೂರ ಮಳ ಹೋಗಿ ಬಂದು ಹಾರ್ಯಾನ ಅದರಾಗ  || ಗೀ ||

ಹೇ, ಕಮರಿಯೊಳಗ ಹಾರದರಾಗ ಮಲ್ಲಯ್ಯಗ ನೆನಪಾತು
ಜಲ್ದಿ ಮಾಡಿ ಬಂದು ಹಿಡಕೊಂಡ್ರು ತೆಕ್ಯಾಗ
ಏನ ಘಾತ ಮಾಡತಿದ್ದ್ಯೋ ಸಿದ್ಧರಾಮ ಅಪವಾದ ಭವದಾಗ
ನೀ ಏನ ಬೇಡತಿ ಬೇಡು ವರುವ ಕೊಡತಿನಿ ಈ ಕ್ಷಣದಾಗ
ಸಿದ್ಧರಾಮ ಅಂತಾನ ಸ್ವಾಮಿ ಸಾಕು ನಿಮ್ಮ ಸಾದುರ ಸಂಗಾ
ಸುಳ್ಳ ಜಂಗಮ ಏನ ಕೊಡತ್ಯೋ ನೀ ನನಗ
ಮೊದಲ ನುಚ್ಚ ಮಜ್ಜಗಿ ಊಟ ಮಾಡೋ ಬಿಡತಿನಿ ನಿನಗ  || ಗೀ ||
ಏ ಸತ್ಯ ಸೇವಕ ಹೌದೆಂದು ಬುತ್ತಿ ಬಿಚ್ಚಿ ಮಲ್ಲಯ್ಯನವರು
ಹುಡುಗನ ಕರಕೊಂಡ ಊಟ ಮಾಡ್ಯಾರ ತನ್ನ ಅಗಲಾಗ
ಮುಖಕ ಮುಖ ಹಚ್ಚಿ ಮುದ್ದಾಡತಾನೋ ತನ್ನ ಬಗಲಾಗ
ನಿನ್ನ ತಾಯಿ ತಂದಿ ಅಳಕೊಂತ ಕುಂತಾರೋ ನಿನ್ನ ಊರಾಗ
ಸೊನ್ನಲಾಪುರ ಹೋಗಿ ಸೊಲ್ಲಾಪೂರ ಶಹರವಾಗಲಿ
ಸದಾ ಲಕ್ಷ್ಮೀ ವಾಸ ಇರಲೋ ನಿನ್ನ ಊರಾಗ
ಸುತ್ತ ಗಂಗಾ ಆಗಿ ಹುಟ್ಲೋ ನಡು ನೀರಾಗ  || ಗೀ ||

ದುಮಾಲಿ
ದೇವರ ಒಲಿಸಬೇಕಾದ್ರ ಇಡಬೇಕ್ರಿ ನಾವು ಭಕ್ತಿ
ಭಕ್ತಿ ಇಟ್ಟರ ಸಿಗತಾದ್ರಿ ಮುಕ್ತಿ
ಕಷ್ಟ ಬಂದ ಕಾಲಕ ಮ್ಯಾಲ ಶಿವ ಶಿವ ಅಂತಿ  || ಗೀ ||

ಸುಖ ಇದ್ದಾಗ ಶಿವಗ್ಯಾಕ ಮರತಿ
ಮರವಿನ ಸಂಸಾರ ಮೂರೆ ದಿಂಬು ಇದು ಸಂತಿ
ಮರವಿನೊಳಗ ಎಲ್ಲಾ ಮರತ ಕುಂತಿ  || ಗೀ ||
ಸುತ್ತ ದೇಶದೊಳಗ ಇಂಗಳಗಿ ಊರ ಒಳೆ ಪಂಥಾ
ಹಾ ಲಾಳೇಶನ ಕವಿಗಳು ಸ್ವಂತ  || ಗೀ ||

ಏರ
ಖಾಸ ಇಂಗಳಗಿ ಊರಾಗ ಇರುವಂಥ ಈಶನ ಕರುಣದಿಂದ
ಕೂಸ ಲಾಳೇಶ ತಿಳಿಸಿದ್ದ ಇಂಥ ಕೀರ್ತನ
ಇದು ಕೇಳಿದವರಿಗಿ ದೂರ ಆಗುವದು ಜನನ ಮರಣ  || ಗೀ ||
ಪ್ರಾಣದಾಸೆ ಬಿಟ್ಟವರಿಗಿ ಪರಮೇಶ್ವರ ಸಿಗತಾನ
ಆಸೆ ನೀಗಿ ಉದಿಸಿಕೊಂಡ್ರು ಸತ್ಯ ಶರಣ
ಶುದ್ಧಭಾವದಿಂದ ಕೇಳ್ರಿ ಸಿದ್ಧರಾಮನ ಪುರಾಣ  || ಗೀ ||ಚೌಕ : ೬