ಹೊಲಿಯೊಳು ಹುಟ್ಟಿದವರು ನಾವು ನೋವು ಹೊಲಿಯಾರು
ಹೊಲಿ ಯಾರಿಗಿ ಬಿಟ್ಟಿಲ್ಲಣ್ಣ  ||
ಆ ಹೊಲೆವು ಎಲ್ಲಾದಕ್ಕೂ ಮೇಲಣ್ಣ  ||
ಹೊಲಿಯೊಳು ಹುಟ್ಟಿ ಹೊಲಿ ಹೊಲಿ ಅನಿಸಿಕೊಂಡ
ವೀರಬಾಹುಕ ಹೊಲಿಯ ನಿಜ ಶರಣ  || ಜೀ ||

ಗುರುಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ
ರುದ್ರಾಕ್ಷಿ ಮಂತ್ರ ಅಷ್ಟಾವರಣ ||
ಸ್ಪಷ್ಟ ಇಟ್ಟು ನಡದ ತ್ರಿಕರಣ ||
ಅವನ ನಿಷ್ಠಿಗಿ ಒಲಿದಿದ ಬಸವಣ್ಣ ||
ಅಷ್ಟಸಿದ್ಧಿ ಶೋಡಶೋಪಚಾರಗಳಿಂದ ದಿಟ್ಟ ಮಾಡಿದಾನು ಲಿಂಗಧಾರಣ || ಜೀ ||

ಕುಲಕ್ಕೊಬ್ಬ ಶರಣೆಂದು ಕೂಗಿ ಬಸವಣ್ಣ ಕೈಲಾಸ ಅನಿಸಿತು ಕಲ್ಯಾಣ ||
ಗಲ್ಲಿ ಗಲ್ಲಿಯೊಳು ಶರಣರ ಠಾಣ ||
ಖುಲ್ಲಾ ಬ್ರಾಹ್ಮರಿಗಿ ಬಂದಿತೋ ಕಠಿಣ ||
ಶರಣರು ಮಿಂದ ನೀರ ದಾಟಬಾರದೆಂದು ದೂರಿಂದ ಮಾಡತಿರು ಪ್ರಯಾಣ  || ಜೀ ||

ದುಮಾಲಿ
ಶರಣರು ಮಿಂದ ನೀರ ಸಂದಿಗೊಂದಿ ಆಗತಿತ್ತು ಕೆಸರ ||
ಹಾಸಗಟ್ಟಿ ಕಾಣತಿತ್ತು ಹಸರ  || ಜೀ ||
ಹಾರ ಜನರು ನೀರ ಹಾರತಿರು ಹಿಡಿದ ಉಸರ  ||
ಹಾರಿದಕ ಹಾರು ಅಂತ ಬಂತ ಅವರ ಹೆಸರ  || ಜೀ ||
ಬ್ರಾಹ್ಮರಿಗಿ ಭವದಲ್ಲಿ ಉಳಿದಿಲ್ಲ ಬಸವನ ಆಚಾರ ||
ಬಲತೆ ಕಡಿ ಆಗಿರು ಬ್ಯಾಸರ  || ಜೀ ||

ಏರ
ಸಮಗಾರ ಹರಳಯ್ಯ ಡೋಹರ ಕಕ್ಕಯ್ಯ ಮಾದಿಗರ ಚನ್ನಯ್ಯ ಅಂತಾರ ಶರಣ  ||
ಅಲ್ಲಮಹಾಪ್ರಭುಗ ಅಂತಿರು ಮುಕ್ಕಣ್ಣ  ||
ಮಿಕ್ಕಿ ಲೆಕ್ಕಾ ಇಲ್ಲದೆ ಇದದ್ದಾವೋ ನಾಮಕರಣ  || ಜೀ ||          ಚೌಕ : ೧

ನಿರಾಕಾರ ಆಕಾರ ಮಾಡುವಾಗ ಬಸವಣ್ಣ
ಜಲಮುನಿ ಮಕ್ಕಳಿಗಿ ಹೆಚ್ಚಾನ ||
ಅವರ ರಕ್ತ ನೀರು ಮಾಡಿ ಬಿಟ್ಟಾನ  ||
ಮಕ್ಕಳಿಗಿ ಕೊಂದಿದಕಾಗಿ ದುಃಖಿಸಿ ಜಲಮುನಿ
ಹೊಟ್ಟ್ಯಾಗ ತುಂಬಿತೋ ಸಿಟ್ಟನ  || ಜೀ ||

ಜಲಮುನಿ ನುಡದಿದ ಜಾಗೃತ ಇರು ಬಸವಾ
ಜಗದ ವೈರಾಗ್ಯ ತೊಟ್ಟಾನ ||
ನಿನ್ನ ವೈರಿ ಆಗುವೆನೆಂದು ಶಾಪ ಕೊಟ್ಟಾನ ||
ಮಾದಿಗ ಆಗಿ ಮರ್ತ್ಯೆದೊಳು ಹುಟ್ಯಾನ  ||
ಸತ್ತಾಗ ಎದಿಯೊಳು ನಿನಗ ಉಳಿ ಹೊಡಿತಿನೆಂದು
ಹೊಟ್ಟಿಯೊಳು ತುಂಬಿಕೊಂಡ ಕುಟ್ಟವನ  || ಜೀ ||

ವಿಶ್ವಾಸವುಳ್ಳ ವೀರಬಾವುಕ ಹೊಲಿಯಾಗ
ಬಸವ ಕೊಟ್ಟಿದ ಹೊಲಿತನ ||
ಶ್ರೀ ಬಸವಾ ಅವನಿಗಿ ಒಲಿತಾನ  ||
ವೀರ ಬಾವುಕ ವಿಶ್ವಾಸ ನುಡಿ ಕಲಿತಾನ ||
ಸತ್ತಿದ ದನಕ ಒಯ್ದು ಹೂತು ಹೂಳತಿದ್ದ
ಮಿತ್ಯ ನುಡಿಲಿಲ್ಲ ಗಲತವನ  || ಜೀ ||

ದುಮಾಲಿ
ಹುಗಿದ ಎಲವು ತೆಗದ ನೋಡಿದ್ರ ಆಗತಿತ್ತೋ ಹೆಮ್ಮ ||
ನಿಕ್ಕಿ ಬಂಗಾರ ಚಿಣಿ ತಮ್ಮ  || ಜೀ ||
ವಜ್ರ ವೈಡುರ್ಯ ರತ್ನ ಮೋಸಿಯೊಳು ಅದಾವು ಜಮಾ  ||
ಬೆಳ್ಳಿ ಹಿತ್ತಾಳಿ ಬಸವನ ರೋಮ ರೋಮ  || ಜೀ ||
ಬಸವನ ಚೌದಾ ಹಲ್ಲುಗಳು ಚೌದಾ ರತ್ನ ಆಗಿದಾವೋ ತಮ್ಮ  ||
ಬಸವನ ಖೋಡಿನ್ಯಾಗ ಖೊಂಬ ಹುಟ್ಟಿ ಓಂ  || ಜೀ ||
ವೀರಬಾವುಕ ಶ್ರೀಮಾನ ಆಗಿದ ಹಿಡಿದು ಈ ನೇಮ  ||
ತ್ರೀ ಜಗದೊಳು ಆತನ ನೇಮ  || ಜೀ ||

ಏರ
ಮಹಿಮರು ಕೇಳಿರಿ ಮಾದಿಗರ ಮನಿಯಲ್ಲಿ ಪದ್ಮ ಜಾತಿ ಹೆಣ್ಣ
ವೀರ ಬಾಹುಕ ಮನಿಯೊಳು ಜನಿಸಿದ ತರುಣ  || ಜೀ ||

ವೀರ ಬಾಹುಕನ ಮಗ ಯಾಕ ಬಂದಿದ ಮಕಮಲ ಬಟ್ಟಿಮ್ಯಾಲ  ||
ಇದು ಅಲ್ಲದೆ ಹೊಚ್ಚಿದ ಕುತನಿ ಶಾಲ  ||
ಕೈಯಾಗ ಇಟ್ಟಿದ ಬಂಗಾರ ಗೋಲ  ||
ದಾರಿ ಹಿಡಿದು ಆಡುತ ಹೊಂಟಾನ ಬಂದೊದಗಿತು ಕಾಡೋಕಾಲ  || ಜೀ ||

ಮಾದಿಗರ ಮನಿಮುಂದ ಮಾವಿನ ಗಿಡ ಇತ್ತು ಮಹಾರಾಯ
ಅಲ್ಲಿಗೆ ಹೋಗಿದ್ದ ಸುಶಿಲ  ||
ಪದ್ಮ ಜಾತಿಯ ಹೆಣ್ಣ ಕಡಿಂದ ಅಸಲ  ||
ಶುದ್ಧ ಬಿದ್ದಂಗ ಆಗಿತು ಸೂರ್ಯನ ಬಿಸಲ  ||
ಮನ್ಮತನ ಬಾಣ ಎದಿಯೊಳು ಬಡದಿತ್ತು ಸಿಡಿದು ಬಿದ್ದಿದ ಸೇರಿತು ಸುಸಲ  || ಜೀ ||

ಹಾತ ಹರದು ಹಾದಿ ತರಬಿ ಕೇಳಿದ ಹರದಿ ಏನ ಹೇಳ ನಿನ ಮೋಲ ||
ನೀ ಬೇಡಿದ ಕೊಡುವೆನು ಕಡಿಮಿಲ್ಲ  ||
ಸಾಲು ಟಿಕ್ಯಾ ಮೇಲು ಟಿಕ್ಯಾ ಘೇಜ್ಜಿಟಿಕ್ಯಾ
ಕಟ್ಟುವೆ ಸಾಲಿಗಿ ಸಾಲ  || ಜೀ ||

ಗಪ್ಪಾಗಿ ಹೋಗಿ ಅಕಿ ಅಪ್ಪಗ ಹೇಳಿಳು
ಝಪ್ಪಿಸಿ ಅಂವಾ ತಿಳಿಕೊಂಡ ಮೂಲಾ  ||
ಈಗ ಒದಗಿ ಬಂದಾದ ಹಿಂದಿನ ಕಾಲ ||
ಮಗಳಿಗಿ ತಿಳಿಸಿ ಹೇಳಿದ ಸ್ವಲ್ಪ ||
ಧನ ದ್ರವ್ಯ ಏನು ಬೇಕಾಗಿಲ್ಲ ಒಂದು ದುಡ್ಡಿನಷ್ಟು ಕೊಡ ಅನು ತೊಗಲ  || ಜೀ ||

ದುಡ್ಡಿನಷ್ಟು ತೊಗರಿ ತಂದು ಕೊಟ್ಟಿದ ಗುಡ್ಡದಷ್ಟು ಹಣ್ಣಾಯಿತು ನಿಕಾಲ ||
ಉಳಿಲಿಲ್ಲ ಬಂಗಾರ ಬಾಗಿಲ ||
ಮನಿ ಆಗಿ ಕುಂತಿತು ಹಳಿ ದೇಗುಲ ||
ಹೊರಗಿಂದು ಬಂದು ವೀರಬಾಹುಕ ನೋಡಿದ ಅದೇ ಕ್ಷಣ
ಎದು ಅಂದಿತು ಝಲ್ಲ  || ಜೀ ||

ದುಮಾಲಿ
ಶಿವ ಶಿವ ಕೊಟ್ಟಿದನೆಂದು ದೊಡ್ಯಾಗ ಒಡ್ಡಿದ ಬೇಗ ||
ಕೆದ ನೋಡಿದ ದನ ಹೂಳಿದ ಜಾಗ  || ಜೀ ||
ಹೊನ್ನು ಮಣ್ಣು ಗೂಡಿತ್ತು ಶರಣ ಆಗಿದ ಥಣ್ಣಗ  ||
ಮಗಾ ಹುಟ್ಟಿ ಮಾಡಿದ ನುಣ್ಣಗ  || ಜೀ ||
ಮಹಾನೀಯರು ಕುಂತಿರಿ ಕೇಳಿರಿ ಮುಂದಿನ ಭಾಗ ||
ಮಹಾನುಭಾವ ಬಸವನ ಯೋಗ  || ಜೀ ||

ಏರ
ಮಗಾ ಹುಟ್ಟಿ ಎನಗ ದಗಾ ಮಾಡಿದನೆಂದು
ವೀರ ಬಾಹುಕಂದು ಹಾರಿತು ಹಣಕ ||
ಬಾಗಿ ಬಾಗಿ ಮಾಡಿದ ಬಸವನ ಸ್ಮರಣ ||
ಮುಂದಿದ ಕೇಳಿರಿ ಪ್ರಕರಣ  || ಜೀ ||

ಜಲಮುನಿ ಮಕ್ಕಳಿಗಿ ಸಂವರಿಸಿ ಬಸವ ಜಗಾ ತಯಾರ ಮಾಡಿದ  ||
ಅದೇ ವ್ಯಾಳ್ಯಾಕ ಜಲ ಮುನಿ ಆಡಿದೆ ||
ನಿನ ಪೈರವಿ ಆಗುವೆನೆಂದು ನುಡಿದದಾ ||
ಮರ್ತ್ಯೆದಲ್ಲಿ ಮಾದಿಗ ಆಗಿ ಹುಟ್ಟಿ
ಇಪ್ಪತ್ತೆಂಟು ಯುಗ ಕಳಿದದಾ  || ಜೀ ||

ದುಡ್ಡಿನಷ್ಟು ತೊಗಲ ಕೈಯಾಗ ಸಿಕ್ಕಾಗೆ
ತಗಲಿಲ್ಲದೆ ಮಾದಿಗ ಮೀರಿದ ||
ಬಸವನ ಹೆಗಲ ತೊಗಲಾದ ಉಳಿ ಊರಿದ  ||
ಬಸವನ ಕಾಳಜಿನೊಳು ನಡು ನಟ್ಟು ಬೇರಿದ  ||
ವೀರಬಾಹುಕ ನಿನ್ನಷ್ಟು ಆಗೆಂದು ಬಸವನ ಮುಖದಿಂದ ಹಾರ್ಯಾದ  || ಜೀ ||

ವೀರ ಬಾಹುಕನ ಮನಿಯಾನ ದೃವ್ಯ ಮಾದಿಗರ ಮನಿ ಹೋಗಿ ಸೇರ್ಯಾದ ||
ವೀರಬಾಹುಕನ ಕಣ್ಣು ತೋರ್ಯಾದ ||
ಮಾಡಿದಂವ ಮಾಡಿ ಮಾಡಿ ಉಂಡು ಕಾರಿದ ||
ಮುಂದ ಮಾದಿಗನ ಮನಿಬಿಟ್ಟು ಅದೇ ದೃವ್ಯ
ಮಾರ‍್ವಾಡ್ಯಾನಲ್ಲಿ ಜಾರ್ಯಾದ  || ಜೀ ||

ದುಮಾಲಿ
ಅಂದಿನಿಂದ ದನ ಹೊತ್ತು ಒಯ್ದು ಹುಗಿಯುದು ಆಯ್ತು ಖಟ್ಟ ||
ಮಾಂಸ ಭಕ್ಷಣ ನಡಸಿರು ಒಟ್ಟ  || ಜೀ ||
ಅದೇ ವಂಶದವರು ಈಗ ಎಲು ಒಡಿತಾರ ಕಟಕಟ ||
ಅದು ಅಂದಾಗೆ ಆಗತೈತಿ ಪೆಟ್ಟ  || ಜೀ ||
ಮಗಾ ಹುಟ್ಟಿ ಬಸವ ಕೋಟ್ಯಾದ ಐಶ್ವರ್ಯ ಕಳದಿಟ್ಟ  ||
ಹೊಲಿತನ ಬಂದ ಉಳದಿತು ದಿಟ್ಟ  || ಜೀ ||
ಪದ್ಮ ಜಾತಿ ಮಾದಿಗರ ಹೆಣ್ಣ ಮಾಡಿ ಬಿಟ್ಟಿತು ಅಷ್ಟು ನಷ್ಟ ||
ಗುರು ಪುತ್ರರು ತಿಳಿರಿ ಇದರ ಗುಟ್ಟ  || ಜೀ ||

ಏರ
ಧರೆಯೊಳು ಹಿರೇ ಸಾವಳಗಿ ಶಿವಯೋಗಿ ನೆನದಿದ ಮುಕ್ಕಣ್ಣ  ||
ಕವಿ ಮಹ್ಮದ ಓದಿದ ಬಸವ ಪುರಾಣ ||
ವೀರ ಬಾಹುಕನದು ಹೇಳಿ ಪ್ರಕರಣ  || ಜೀ ||    ಚೌಕ : ೪