ಪೌರಾಣಿಕ ವಾಣಿಯನ್ನು ಪಾರಾಯಣ ತವರಿಗಿ ಪ್ರಿಯ |
ದಾಣಿ ಉಡಗಿ ಗೋಣಿ ತುಂಬುವ ವಾಣಿ ನಿಚರ  |
ಜಾಣಿ ಪೋತರಾಜನ ರಾಣಿ ಗುಣಕ ಮೆಚ್ಚಿರಿ |
ಹೆಣ್ಣ ಹೊನ್ನ ಮಣ್ಣ ಕಣ್ಣಿಲಿ ಕಂಡು ಕಣ್ಣು ಮುಚ್ಚಿರಿ |
ಹೊನ್ನಮ್ಮ ಚನ್ನಮ್ಮನ ಐತಿಹಾಸಿಕ ಮನ್ನಿಸಿ ಮಾನುವರು ಕೇಳಿರಿ |
ಪನ್ನಂಗ ಧರನೆಂದು ಪತಿ ಸೇವೆಯು ಮಾಡಿರಿ  || ಜೀ ||

ಪೂರ್ವ ಹಿಡಿದು ಪಶ್ಚಿಮ ತನಕ ಸ್ತ್ರೀಯರ ಧರ್ಮದ ದಾರಿ ಬೇರೆ |
ಶೃತಿ ಸಾರೋದು ವೇದ ಆಗಮದ ಆಧಾರ |
ಮರ್ತ್ಯೇದೊಳು ಕೀರ್ತಿ ಮೆರಿಸೋದಕಾಗಿ ಶರ್ತಿಗಿ ಬಿದ್ದಾರ |
ಗರ್ತೇರು ಮಾಡೋ ಕಾರ್ಯಕ್ಕ ಮರುಳಾಗಿ ಹಾಡಿ ಹರುಶ್ಯಾರ ಸಿದ್ದರ |
ಗಂಡನ ಚರಣ ಸೇವೆಗಾಗಿ ಪೂರ್ವಪಂಡಿತ ಕರ್ಮವು ನೀಗಿ |
ಪೂರ್ಣ ಬ್ರಹ್ಮ ತಿಳಿದುಕೊಂಡು ಹರನಿಗಿ ಗೆದ್ದಾರ  || ಜೀ ||

ಚನ್ನಮ್ಮ ಗಂಡನ ಮೇಲೆ ಪ್ರೇಮ |
ಹೊನ್ನಮ್ಮ ಗಂಡನ ಮೇಲೆ ಗರಮ |
ಮನಿಗಿ ಗಂಡ ಬಂದರ ಸಾಕು ಹಲ್ಲ ತಿಂತಳು ಕರಕರ |
ಸ್ನಾನಕ ನೀರ ಕಾಸಂದ್ರ ದಣು ಬರತಿತ್ತು ಭಯಂಕರ |
ಹಣಿಗಿ ಹನ್ನೆರಡು ಗಂಟ ಕಣ್ಣ ಕೆಂಪಗ ಕ್ವಾಣಿನ ಪ್ರಕಾರ |
ನಿನ್ನ ಬಾಯಾಗ ಮಣ್ಣ ತುಂಬಲಿ ಹೆಣ ಹ್ಯಾಂಗ ಹೋದೆತು ಹೊರಗ |
ಏಸ ದಿನ ಮೂಲಾಗಿ ಕೂತಿತೆವ್ವ ಹಾಟ್ಯಾನ ಮಗಾ ದಡಾರ  || ಜೀ ||

ಜೋಗಿ ಜಂಗಮರು ಮನಿಗಿ ಬಂದರ ಮೀಸಿ ಹಿಡಿದು ಹೆಟ್ಟತೀಳು  |
ಪಾಸಿ ಬಿದ್ದು ಯಾವರೆ ಬೇಡಕೊಳ್ಳವರ ಕಯ್ಯಾಗ ಸಿಕ್ಕರ  |
ತಾಸ ತನಕ ಬಾರಗಿ ಪೂಜಾ ತ್ರಾಸ ಮಾಡಕಿ ಅನವ್ಯಾರ |
ದೇಶಮುಖ ದೇಶಪಾಂಡೆ ಅಕಿನ ಗುಣರ ಆಗಿರು ಬೇಸರ  |
ಬದಮಾಸ ಬಟ್ಟೆ ಬಾಜಿ ಹೆಂಗಸೆಂದು ಒಬ್ಬ ಮಗಾ ಅಕಿಗಿ ಕೆಣಕತಿದ್ದಿಲ್ಲ |
ಕಣ್ಣಿನ ಕಸ ಗಂಡನ ಬೈಯಕ್ಕಿ ಕುಲಕ್ಕೊಂದು ಬ್ಯಾರೆ ಬ್ಯಾರ  || ಜೀ ||

ದುಮಾಲಿ
ಹೆಣ್ಣ ಮಾಯಿ ಗಂಡ ನಾಯಿ ಬೇರಾ |
ಅಂತಿದ ಹಣಿಬಾರಾ ಮಾಡಲೇನು ಇದಕ |
ಬಿಟ್ರ ಮಾಡಕೋಳ್ಳಾಕ ನನಗಿಲ್ಲ ದಿಕ್ಕ  || ಜೀ ||

ಬಿಡತಿ ನೆಂದ್ರ ಸಾಕಿದ ಕೆಣಕಿ
ಸವರಸ ತಾಳ ಒಣಕಿ | ಅಂಜಿ ಕುಂತ ಸುಮಕ |
ಸಂಜಿ ಮುಂಜಾನೆ ಹೋಗಾಂವ ಹೊರಗೆ ಹೊಲಕ || ಜೀ ||

ಚಾಲ
ಏನ ಬೋದಾ ಮಾಡಿದರೇನು
ಜ್ಞಾನ ಶೂನ್ಯ ಇದ್ದವರಿಗಿ
ಕೋಣಿನ ಮುಂದ ಬಾರ‍್ಸಿದ್ಹಾಂಗ
ಆಗೋದು ಕಿನ್ನರಿ |
ಜಾಣಿ ಜಾರಿ ಬಿದ್ರ ಕಾಣಲ್ದೆ ಏಳವಾಗ
ಅನಬೇಕು ಹುಶ್ಯಾರಿ
ಹೆಣ್ಣ ಹುಟ್ಟಿದರೆ ಹುಣ್ಣ ಹುಟ್ಟಿತೆಂಬ ಮಾತ
ಆದ ಬರೋಬರಿ || ಜೀ ||    ಚೌಕ :೧

ಚನ್ನಮ್ಮನ ಗುಣ ವರ್ಣನೆ ಚೆನ್ನಿಗರೆಲ್ಲಾ ಕೇಳಿರಿ ನೀವು |
ಪಂಚ ಪ್ರಾಣ ಪತಿಯಂದು ಸೇವಾ ಮಾಡಲೇಳು ಪ್ರೀತಿಲಿ |
ತನ್ನ ಗಂಡನ ಸ್ನಾನ ಮಾಡಸಿ ಊಟ ಉಣಸಕ್ಕಿ ತನ್ನ ಕೈಲಿ |
ದಿನ ಮಂಚದ ಮೇಲೆ ಮಲಗಿಸಿ ತೂಗಲೇಳು ಹರುಷದಲಿ |
ಮನಿಯಾನ ದಗದಾ ಮಾಡಕೋತ ತ್ರಿಕಾಲ ಗಂಡನ ಪೂಜೆ ಮಾಡಿ
ಗಂಡ ಗುರು ಎಂಬ ಭಾವನೆಯು ಇತ್ತು ಮನದಲ್ಲಿ  || ಜೀ ||

ಅತ್ತಿ ಮಾವನ ಸೇವಾ ಅಂದ್ರ ಪತ್ರಿ ಬಂಗಾರಕ್ಕಿಂತ ಶ್ರೇಷ್ಠ
ನೀತಿವಂತಿ ಚನ್ನಮ್ಮನ ಗುಣ ಇತ್ತು ಹೂಮಾಲಿ |
ಪತಿ ಆಗ್ನೇ ಮೀರಿತೆಂಬ ಭೀತಿ ಇತ್ತು ಮನದಲ್ಲಿ
ಮುತ್ತೈದಿ ಮಗಳು ಮುತ್ತಿನಂಥ ಮಾಂಗಲ್ಯ ಕೊರಳಲ್ಲಿ
ಪತಿ ವರ್ತೆರ ಮಹತ್ವವನ್ನು ಪಾತರದವರಿಗಿ ಏನ ಮಾಹಿತಿ
ದೋತರದವರ ಗುಡಾ ದೋಸ್ತಿ ಕಟ್ಟಿ ಬೋಳಸವರು ಕತ್ತಿಲಿ  || ಜೀ ||

ಜೋಗಿ ಜಂಗಮರು ಮನಿಗಿ ಬಂದ್ರ ಬಾಗಿ ಪಾದಕ ಎರಗಲೇಳು
ತ್ಯಾಗ ಮೂರ್ತಿ ಆಗಿಂದಾಗ ಕರಿಯಕ್ಕಿ ಮನಿಯಲ್ಲಿ
ಲಿಂಗಾಚಾರ ಮಾಡಿ ಪಂಚ ಪಕ್ವಾನ್ ಮಾಸಕಿ ಭಕ್ತಿಲಿ
ಹೋಗಾಗ ಆಶೀರ್ವಾದ ಪಡಕೊಳ್ಳಾಕಿ ನಗೆ ಮುಖದಿಂದ ಬಾಲಿ
ನಗುತ ನಿರ್ಮೂಲ ನಿರಾಕಾರ ಭಗವಾನನ ಕೃಪಾದಿಂದ
ಭೋಗ ಪ್ರತಿಜ್ಞದ ಫಲ ಪಡಕೊಂಡು ಭಕ್ತಿಲಿ  || ಜೀ ||

ದುಮಾಲಿ
ಹೊನ್ನಮ್ಮ ಬಂದಾಳ ಚನ್ನಮ್ಮನ ಬೆಟ್ಟಿ | ಕಳವಿ ಕುಟ್ಟಾಗ
ಸುಳ ಬುಳು ಮಾತಾಡುತ ಕುಂತಾರ
ಜಂಗಮ ಮೂರ್ತಿ ಬಿಕ್ಷಾಕ ಬಂದಾರ  || ಜೀ ||
ಒಣಕಿ ಹಿಡಿದಿಳು ತನ್ನ ಕೈಯಾಗ |
ಕೈ ಎತ್ತಿ ಬಿಟ್ಟಾಳ ಮ್ಯಾಗ |
ಮ್ಯಾಗಿಂದು ಮ್ಯಾಗ ನಿಂತು ಅಂತರ
ಜಂಗಮಗ ಬಿಕ್ಷ ನೀಡಿ ಬಂದು ಕುಂತಾರ

ಜಾಲ
ಹೊನ್ನಮ್ಮನ ಪ್ರಶ್ನೆಕ ಚನ್ನಮ್ಮ ತಾಯಿ ಹೇಳತಾಳ
ತನು ಮನ ಧನ ಗಂಡನ ಚರಣಕ ನೀಡಿರಿ
ಅನ್ಯೋನ್ಯ ಭಾವದಿಂದ ಜಂಗಮನ ತೀರ್ಥ ಸೇವಿಸಿರಿ |
ಘನವಾದ ಪುಣ್ಯ ಮಾಡಿದವರೆ ಪುನೀತರಾಗಿರಿ || ಜೀ ||   ಚೌಕ : ೨

ಗಂಡನೆ ಗುರು ಎಂದು ತಿಳಿದು ಗಂಡನ ಪೂಜಾ ಮಾಡಿದರೆ
ಬ್ರಹ್ಮಾಂಡ ನಾಯಕನೆ ನಿಂದ್ರ ಬೇಕಾಗತಾದ ಅಂತರಲಿ
ಖೆಂಡದಂತ ಗಂಡನ ಸೇವಾ ಕಂಡಿರಿ ಕಣ್ಣಿಲಿ |

ಕಂಡವರ ಕಂಡ ಹಿಡಿಯುವ ಮಾತ ಇದಲ್ಲಾ ಗಂಡನ ಚರಣದಲಿ
ಬಂಡಿ ಬಂಗಾರ ಇದ್ದಂಗ ಗಂಡ ಗುಂಡದಾಳಿಗಿ ಆಧಾರ ಗಂಡ |
ದಂಡಿ ಕುಂಕುಮ ಬಳಿ ಕಾಲೂಂಗರ ಮೂಗುತಿ ಮೂಗಿನಲಿ  || ಜೀ ||
ಆಡೋ ಮಾತ ಕೇಳಿದ ಕೂಡಲೆ ಓಡುವ ಹೋದಳು ಅಡಿಕಡಿಗಿ
ಹಿಂಡಕಂಡ ತಂದು ಗಂಡನ ಕೂಡಸಿ ಎರದಾಳ ಬಚ್ಚಲಲ್ಲಿ
ಅಡಗಿ ಗಡ ಬಡನೆ ಮಾಡಿ ಉಣಶ್ಯಾಳ ತನ್ನ ಕೈಲಿ  |

ಜಾಡಸಿ ಜಮಖಾನಿ ಹಾಸಿ ಮಲಗಶ್ಯಾಳ ಮಂಚದ ಮ್ಯಾಲಿ |
ಮಾಡೋ ದಗದಾ ಮಾಡಿ ಅಕಿನಂಗ ಕೂಡಾಗ ನಿಂತಾಗ ಮಂಚ ತೂಗುತ |
ನೋಡೋಣ ಅಂತಾಳ ಗಂಡನ ಮಹತ್ವ ತಿಳಿತಾದ ಇದರಲ್ಲಿ  || ಜೀ ||

ಬಾಯಿ ತೆರೆದು ರೊಟ್ಟಿ ಬೇಡಿದರೆ ನಾಯಿ ಹಂಗ ಬರತಿಳು ಮ್ಯಾಗ |
ಇಕಿಗಿ ಯಾವ ದೇವರು ಬುದ್ಧಿ ಕೊಟ್ಟಿರಬೇಕು ಮನದಲಿ |
ಸಿಹಿ ಸಿಹಿ ಪದಾರ್ಥ ತಿಂದು ವಿಚಾರ ಮಾಡತಾನ ಮಲಗಿ ಕೊಂಡಲ್ಲಿ |
ಯಾವ ದಿವಸ ಏನ ಮಾಡತಾಳ ಏನೋ ಭಯ ಭೀತಿ ಮನದಲ್ಲಿ |
ಜೀವ ಕುದ್ದು ಸಣ್ಣಾಗಲಿ ಬತ್ತು ಹಾವ ಬಾವ ಇಕಿಂದ ಹೆಚ್ಚಿಗಿ ನಡಿತು |
ದೆವ್ವ ಬಡಿದಂಗ ಓಡ್ಯಾಡತೀಳು ಮನಿಯಲ್ಲಿ  || ಜೀ ||

ದುಮಾಲಿ
ಎಂಟ ದಿನ ಜಂಗಮನ ಹಾದಿ ನೋಡುತ  |
ಬರಲಿಲ್ಲ ಯಾಕಂತ  |
ಊರ ಹೊರಗ ಮಠದಾಗ ಪರದೇಶಿ ಜಂಗಮ  |
ನಾಳಿಗಿ ಮನಿಗಿ ಬರ‍್ರಿ ಅಂತಾಳ ಮುದ್ದಾಮ  || ಜೀ ||

ಜಂಗಮ ಅಂದ ತನ್ನ ಮನಕ
ಹೋದ್ರ ಮನಿ ತನಕ
ಬಾರಗಿ ತಗೊಂಡು ಬೆನ್ನ ಹತ್ತಿಳು ಸ್ವಯಂಮ
ಯಾಂವ ಗುರು ಬೋದಾ ಮಾಡ್ಯಾನೇನೋ ರಾಮ  || ಜೀ ||

ಬರತಿನಂತ ಕೊಟ್ಟಿದ ವಚನ
ಮುಂಜಾನಿ ಎದ್ದಾನ |
ದಂಡ ಕೋಲ ಜೋಳಗಿ ತಗೊಂಡ ಸಂಗ್ರಾಮ  |
ಹ್ಯಾಗರೆ ಬಕ್ಕಳ ಹಿಟ್ಟ ನೀಡತಾಳ ಹೊನ್ನಮ್ಮ  || ಜೀ ||

ಜಾಲ
ಮುಂಜಾನೆ ಎದ್ದು ಮಾರಿ ತೊಳಕೊಂಡು
ಛಂಜಿ ಜಿಪರಿ ಕೊರಳಾಗ ಹಾಕಿ |
ಒಳ್ಳೆ ನವಣಿ ಕಳವಿ ಹಾಕಿ ಕುಟ್ಟುತ ಕೂತಾಳರಿ |
ತಾಳ ಗತ್ತಿನ ಮೇಲೆ ಪದಾ ಹಾಡತಾಳ ಚಟಿಗುಟ್ಟಲೆ ಚೀರಿ |
ಮಳ್ಳಗೇಡಿ ಗಂಡ ಮಂಚದ ಮೇಲೆ ಸತ್ತಂಗ ಮಲಗಿತರಿ  || ಜೀ ||   ಚೌಕ : ೩

ಒಣಕಿಲಿ ಕಳವಿ ಕುಟ್ಟುವಾಗ ಹಣಕಿ ಹಾಕುತ ಜಂಗಮ ಬಂದ |
ಘಣಲ್ ಅಂತ ಘಂಟಿ ನುಡಿಸಿ ಗುರು ಸೈಪಾಕ ಅಂದಾಗ
ಕಣ್ಣಿಲಿ ಜಂಗಮಗ ನೋಡಿ ಕೈದಾನ ಒಣಕಿ ಎತ್ತಿ ಒಗದಾಳ ಮ್ಯಾಗ  |
ಒಣಕಿ ನಿಂತಾದಿಲ್ಲಂತ ಮಾರಿ ಮ್ಯಾಲಕ ಮಾಡಿತು ಹುಚ್ಚಮಂಗ |
ಒಣಕಿ ಏಟ ಪುಟದ ಬಿತ್ತು ಸೋಣಕದ ತುಂಬ ರಕ್ತ ಆತು
ಕಣ್ಣ ಕೆಂಪಗ ಮಾಡಿ ಒಣಕಿ ತಗೊಂಡು ಬೆನ್ನ ಹತ್ಯಾಳ ಜಂಗಮಗ  || ಜೀ ||

ನಿಂದ್ರ ನಿನ್ನ ಬಾಯಾಗ ಮಣ್ಣ ಅಂದಾಗ ಚಿಗರಿ ಹಂಗ ಜಿಗಿಲಕತ್ತು |
ಜೋಳಗಿ ಒಗದು ರಸ್ತಿ ಹಿಡಿದು ಓಡತಾನ ಆರು ಹಾರಿ ಊರ ಹೊರಗ |
ನಿಗರ್ಯಾಡುತ ಚಿರುತ ಬೆನ್ನ ಹತ್ಯಾಳ ಬಿಡುವಲ್ಲ ಎಲ್ಲಿ ಅಂವಗ |
ಖಬರ ಹಾರಿ ಮರ ಸೇರಿ ಕೂತು ತಟ್ಟಿ ಮುಚ್ಚಿ ಗುಳಿ ಎಳಕೊಂಡ ಬಾಗಿಲಗ |
ತಿರಗಿ ಒಣಕಿ ಕೈಯಲಿ ಹಿಡಿದು ಹಾರಕೋತ ಹೋಗಿದಾಳು |
ಥರ ಥರ ಗಂಡ ನಡಗುತ ಮಲಗಿತು ಮಂಚದ ಮ್ಯಾಗ  || ಜೀ ||

ಹತ್ತ ನನ ಹಟ್ಯಾನ ಮಗನೆ ಮೆತ್ತಗ ತಿಂದು ಮಲಗಿದೆಂತ
ಸುತ್ಯಾಕಿ ಗಂಡನ ಹೊಡದಿದಾಳು ಒಣಕಿಲಿಂದ ಅಂವಗ
ದೋತರ ಕಳದು ಬೆತ್ತಲೆ ಮಾಡಿ ಬಡದಾಳ ಗಂಡಗ |
ಬಸ್ತಾನಿ ಮಾಡತಾಳ ಎಂಬೋ ಭೀತಿ ಮೊದಲೆ ಇತ್ತು ಅವನೀಗ |
ಸತ್ಯೆನಾಸ ಆಗಿ ಹೋಗಲಿ ಸತ್ಯೆ ಗಂಡನ ಬಲ್ಲಿ ಇಲ್ಲ ಅಂತಾ
ಅದೇ ಒಣಕಿಲಿ ಏಟ ಕೊಟ್ಟಳು ಗಂಡನ ಟೊಂಕಿಗ  || ಜೀ ||

ದುಮಾಲಿ
ಹೊನ್ನಮ್ಮನ ಮಾರಿ ಕೂತು ಬಾತಾ  |
ಐ ಗೊಟ್ಟಿ ಐನೋರ ಹೇತಾ |
ಗಂಡ ಓಡಿ ಹೋಯಿತರಿ ಹೌಹಾರಿ |
ಹೊನ್ನಮ್ಮ ತೊಳದ ಕೊಂಡಿದಾಳು ಮಾರಿ  || ಜೀ ||

ಹೊನ್ನಿ ಹೊಡದಂಗ ನಿವೆಲ್ಲರು ಹೊಡದೀರಿ |
ಗಂಡಗ ಬಡದೀರಿ ಹಡದವ್ವದೇರೆ ನೀವು ಕೇಳಿರಿ |
ದುಡದಂವಗ ಖಾಯಂ ಹಾನ ಪಂಡರಿ || ಜೀ ||
ಹೆಣ್ಣಿನ ಜನ್ಮಕ ಗಂಡನೆ ಗುರು |
ಅವನೆ ದೇವರು |
ಗಂಡನ ಪಾದದಲ್ಲಿ ನೀವು ದುಡಿಯಿರಿ |
ಆ ಚನ್ನಮ್ಮ ತಾಯಿಯಂತೆ ನೀವು ನಡಿಯಿರಿ || ಜೀ ||

ಚಾಲ
ಚನ್ನಮ್ಮನಂತೆ ನಡಿಯಿರೆಂದು
ವಿನಯ ಪೂರ್ವಕ ಹೇಳುವೇನು |
ಉನ್ನತ ಮಹಾಗಾಯಿ ಗ್ರಾಮದಲ್ಲಿ
ಶ್ರೀ ವಾಹೇದ ಹುಸೇನರಿ |
ಜ್ಞಾನ ದೃಷ್ಟಿಯಿಂದ ಬರದಿದಾನು
ಕವಿ ಪಂಚಾಕ್ಷರಿ |
ಅನಾಥನಿಗಿ ಪ್ರಸನ್ನಾಗೋ
ನೀನೆ ನೀಲೂರ ದಸ್ತಗಿರಿ  || ಜೀ ||