ಹೇ, ಸುಜ್ಞಾನಿ ಸಭಾದಾಗ ಅಜ್ಞಾನಿ ಹಾಡುವೆನು
ಇನ್ನ ಶಾಂತಾಗಿ ಕೇಳಬೇಕು ಸಂಧಾನ
ಹೇ, ಹಾಡ ಕೇಳಿದ ಮ್ಯಾಗ ಹತ್ತಕ್ಕೊಬ್ಬರು
ಮಾಡಬೇಕು ಇಂತಹ ಗೆಳಿತಾನ  || ಜೀ ||  ||ಪ ||

ಈರಣ್ಣ ಸಂಗಣ್ಣ ಪ್ರೇಮದ ಗೆಳಿಯರು
ಈರಣ್ಣ ಹೋಗಿದ್ದಿಲ್ಲ ಸಂಗಣ್ಣನ ಮನಿಗ
ಸಂಗಣ್ಣ ಹೋಗಿದ್ದಿಲ್ಲ ಈರಣ್ಣನ ಮನಿಗ
ಅವರ ಗೆಳಿತಾನ ಇತ್ತು ತಾಲೀಮದಾಗ
ಹೇ, ಪ್ರೇಮದಿ ಎಡವುತಾರ ಅವರ ಕೈಯಾಗ
ಇತ್ತು ಗೆಳಿತಾನ ಸದಾ ತಾಲೀಮದಾಗ  || ಜೀ ||

ಸಂಗಣ್ಣನ ಲಗ್ಗಣ ಸಣ್ಣಾಂವ ಇದ್ದಾಗಾಗಿತ್ತು
ಲಗ್ನ ಆಗಿದ ಖೂನ ಇಲ್ಲ ದೋಸ್ತ ಈರಣ್ಣಗ
ಇವನ ಹೆಂಡ್ತಿ ಮೈನೆರೆದು ಬಂದಿದಳು ಮನಿಗ
ಇಕಿನ ರೂಪ ಅಂದ್ರ ಹುಣ್ಣಿವಿ ಚಂದ್ರ ಬೆಳಕ ಬಿದ್ದಂಗ
ಹೇ, ಒಂದಾನೊಂದು ದಿವಸ ಆ ಬಾಲಿ ಮನಿಯಾಗ
ನೋಡಿ ಸೀರಿ ಉಟ್ಟಾಳ ತನ್ನ ಮೈಯ್ಯಾಗ  || ಜೀ ||

ಹೇ, ಚಂದ್ರಕಾಳಿ ಸೀರಿ ತನ್ನ ಮೈಯಾಗ ಉಟ್ಟಾಳ ಬಾಲಿ
ಭಕ್ತಿ ಎಂಬೋ ಕೊಡೆ ಹಿಡಿದು ತನ್ನ ಕಯ್ಯಾಗ
ನಿಲಗಿ ಒದ್ದು ಹೊಂಟಿದಾಳು ಬಾಲಿ ನೀರಿಗ
ದೋಸ್ತ ಈರಣ್ಣ ಕುಂತಿದಲ್ಲಿ ಕಟ್ಟಿಯ ಮ್ಯಾಗ
ಹೇ, ಹೋಗಬಾಲಿಗಿ ಈರಣ್ಣ ದಿಟ್ಟಿಸಿ ನೋಡಿ
ಎಂಥಾ ಹೆಣ್ಣ ಬಂದಾದ ನಮ್ಮ ಊರಾಗ  || ಜೀ ||
ಹೇ, ಇಕಿನ ರೂಪ ಲಾವಣ್ಯ ಅಂತು ಎಲ್ಲಾಕಿನ್ನ ಹೆಚ್ಚಿಗಿ ಐತಿ
ನಾ ಯಾವಾಗ ಹೋಗಿ ಮಾಡಬೇಕಂದ್ರ ಇಕಿ ನಸಂಗ
ಹೆಣ್ಣಿನ ಚಿಂತ್ಯಾಗ ಈರಣ್ಣ ಬಂದ ತಾಲಿಮದಾಗ
ಬಂದು ಗಪ್ಪಾಗಿ ಮಲಗಿಕೊಂಡ ಬಿಟ್ಟ ಹೇಳುದ್ಯಾರಿಗ
ಹೇ, ಈರಣ್ಣ ಮಲಗಿದಾನು ಸಂಗಣ್ಣ ಸೀದಾ ತಾನು
ಬರಂಗ ಬಂದ ತಾಲಿಮ ಖೋಲಿಗ  || ಜೀ ||

ತಾಲೀಮಕ ಬಂದು ಸಂಗಣ್ಣ ಏನಂತ ಕೇಳತಾನ
ತಮ್ಮ ಹಿಂಗ್ಯಾಕ ಮಲ ಗೀದಿ ಏನಾಗ್ಯಾದ ನಿನಗ
ನಿನ್ನ ಮುಖ ಯಾಕ ಸಣ್ಣದೈತೋ ಹೇಳಪ್ಪ ನನಗ
ಅಣ್ಣ ಪುಕ್ಕಟ್ಟೆ ಹೇಳೋ ಮಾತಲ್ಲಪ್ಪ ನಿನಗ
ಇವತ್ತು ನಾ ಬೇಡಿದು ನೀ ಕೊಡತೀಯೇನು
ನನಗ ಕೈ ಮುಟ್ಟಿ ವಚನ ಕೊಟ್ಟು ಹೇಳ ನನಗ  || ಗೀ ||

ಹೇ, ಸಂಗಣ್ಣ ಆಗ ತನ್ನ ಆತ್ಮಕ ಅಂದ ಹಾಂಗ
ಅಪ್ಪ ಯಾವ ಸಂಕಷ್ಟ ಬಂತು ನನ್ನ ತಮ್ಮಗ
ಅಪ್ಪ ನಿನ್ನ ಸಂಕಷ್ಟದಾಗ ನಂದು ಇದರಾಗ
ಇವತ್ತು ಅರ್ಧ ಪಾಲು ಐತು ನಿನ್ನದರಾಗ
ಈರಣ್ಣ ನೀ ಬೇಡಿದು ನಾನು ಕೊಡತಿನಂತ
ತಾನು ವಚನ ಕೊಟ್ಟಾನ ದೋಸ್ತ ಈರಣ್ಣಗ  || ಜೀ ||

ಹೇ, ವಚನ ಕೊಟ್ಟ ಕೂಡಲೆ ಈರಣ್ಣ ಎದ್ದೂ ಕೂತ
ಆಗ ನಕ್ಕೋತ ಅಂದ ತನ್ನ ಆತ್ಮದ ಒಳಗ
ಪಕ್ಕಾ ನನ್ನಣ್ಣ ಸಿಕ್ಕ ನನ್ನ ಕೈಯಾಗ
ಅಣ್ಣ ಮತ್ತೊಂದು ಮುಸಕಿಲ ಬಂತು ನಿನ್ನ ಕೊಳ್ಳಿಗ
ಅಪ್ಪ ಇವತ್ತು ನಾನು ಸಹಜ ಕಟ್ಟಿ ಮ್ಯಾಗ ಕೂತಿದ್ದೆ
ಒಂದು ಹೊಸ್ದಾಗ ಹೆಣ್ಣ ಬಂದಾದ ಊರಾಗ  ||  ಗೀ ||

ಅಪ್ಪ ಆ ಹೆಣ್ಣ ನೋಡಿನಿ ಮನಸಂತು ಮಾಡಿನಿ
ಅಕಿನ ರೂಪ ಲಾವಣ್ಯ ಅದಾ ಎಲ್ಲಾಕ ಹೆಚ್ಚಿಂದ
ನೀನು ಯಾವಾಗ ಬಿಟ್ಟು ಬರತಿ ಹೇಳು ಅಕಿನ ಮನಿಯಾಗ
ಆಗ ಸಂಗಣ್ಣ ತಿಳಕೊಂಡ ತನ್ನ ಆತ್ಮದಾಗ
ಏಪ್ಪಾ ಹೊಸ್ದಾಗಿ ನನ್ನ ಹೆಂಡ್ತಿ ಬಂದಾಳ ಊರಿಗ
ಇಂವಾ ಪಕ್ಕಾ ನೋಡ್ಯಾನ ನನ್ನ ಹೆಂಡ್ತಿಗ  || ಜೀ ||
ಹೇ, ಹೊಸ್ತಾಗಿ ಬಂದಾಳಂದ್ರ ಸುಸ್ತನೆ ಮಾಡಬಾರದೆಂದು
ತಮ್ಮ ಸೀರಿ ಯಾವದಿತ್ತು ಅಕಿನ ಮೈಯ್ಯಾಗ
ಚಂದ್ರಕಾಳಿ ಸೀರಿ ಅಂದಾಗ ಸಂಗಣ್ಣ ಅಂದ ಮನದಾಗ
ಯಪ್ಪಾ ಇವತ್ತು ನನ್ನ ಹೆಂಡ್ತಿ ಸೀರಿ ಅದೆ ಉಟ್ಟಾಳ
ಇಂವಾ ಪಕ್ಕಾ ನೋಡ್ಯಾನ ನನ್ನ ಹೆಂಡ್ತಿಗ  || ಜೀ ||

ಹೇ ವಚನ ಕೊಟ್ಟಾಗ ಸಂಗಣ್ಣ ಆತ್ಮಕ ಅಂದ ಹಾಂಗಾ
ಈಗ ನನ್ನ ಹೆಂಡ್ತಿ ಪಕ್ಕಾ ಸಿಕ್ಕಳು ನನ್ನ ಕೈಯಾಗ
ಏನಾ ಇವತ್ತು ಹೋಗಿದ್ದಿ ನೀನು ಬಾವಿ ನೀರಿಗ
ನನ್ನ ದೋಸ್ತ ಕುಂತಿದ ಅಲ್ಲಿ ಕಟ್ಟಿಯ ಮ್ಯಾಗ
ಹೇ ಕುಂತಂತ ದೋಸ್ತ ನೋಡಿ ನಿನ್ನ ಮ್ಯಾಗ
ಇವತ್ತ ಮನಸ ಮಾಡ್ಯಾನ ಮುಂದ ಮಾಡ್ಲಿ ಹ್ಯಾಂಗ  || ಜೀ ||

ಅಲ್ಲಟ ಮನಸಂತು ಮಾಡ್ಯಾನ ಗಪ್ಪಾಗಿ ಮಲಗ್ಯಾನ
ಇವತ್ತು ವಿನಂತಿ ಮಾಡಿ ಹೇಳತಿನಿ ನಿನಗ
ಇವತ್ತು ರಾತರ್ಯಾಗ ನಾನೆ ಎಂದು ಅವನಿಗ
ನೀನು ತಗೋಬೇಕು ನಿನ್ನ ಮಂಚದ ಮ್ಯಾಗ
ಹೇ ಈ ಮಾತ ಅಂದಾಗ ಬಾಲಿ ಅನುಮಾನ ಇಲ್ದೆ
ತಾನು ಕತ್ತರಿಸಿ ಬಿದ್ದಾಳೂ ಧರಣಿಯ ಮ್ಯಾಗ  || ಜೀ ||

ಹೇ, ತೆಳಗ ಬಿದ್ದು ಆಗ ಭಗವಂತಗ ಬೈತಾಳ
ದೇವರೆ ಮಣ್ಣು ಚೆಲ್ಲಬಾರದೇನೋ ನನ್ನ ರೂಪಿನ ಒಳಗ
ಇನ್ನ ಕೈ ಮುಟ್ಟಿ ವಚನ ಕೊಟ್ಟೆ ನನ್ನ ಗಂಡಗ
ಇನ್ನ ಹ್ಯಾಂಗ ಸುಳ್ಳ ಮಾಡಬೇಕು ಅವನ ಮಾತಿಗ
ಯವ್ವ ಪತಿ ಆಗ್ನೆ ಮೀರಿದರೆ ಪತಿವೃತೆ
ಹಾಳಾಯಿತೆಂದು ಕರಕೊಂಡು ಬರ‍್ರಿ ನಿಮ್ಮ ಗೆಳಿಯಗ  || ಜೀ ||

ದುಮಾಲಿ
ಇಷ್ಟು ಅಂದಾಗ ಸಂಗಣ್ಣ ಮನಿಯಾಗ ನಿಂತಾನಾ
ಹೌದು ಅವನು ನಿಂತಾನ
ತನ್ನ ಹತಿಯಾರ ಮನಿಯಾಗ ಗೂಟಿಗೆ ಸಿಗಶ್ಯಾನ  || ಜೀ ||
ಮನಿಯಾಗ ಗೂಟಿಗೆ ಸಿಗಸಿ ಸಂಗಣ್ಣ ಓಡಿ ಬಂದಾನ
ಹಾದು ಅವನು ಬಂದಾನ
ಬಂದು ತಾಲೀಮದಾಗ ನಿಂತಾನ ಸಂಗಣ್ಣ ನಿಂತಾನ  || ಜೀ ||

ತಮ್ಮ ಸೂಳಿ ಕಬೂಲಾಗ್ಯಾಳಪ್ಪ ನೀ ಹೋಗಬೇಕು
ಅಲ್ಲಿ ತಾನ ಹೌದು ಅಲ್ಲಿ ತಾನ
ಸ್ವಂತ ಕೈ ಹಿಡಕೊಂಡು ಸಂಗಣ್ಣ ಮನಿಕಡಿ ಹೊಂಟಾನ  || ಜೀ ||

ಹೇ ತನ್ನ ಮನಿಗಿ ಹಚ್ಚಿ ದೋಸ್ತ ಸಂಗಣ್ಣ ತಾನು
ಹೊಳ್ಳಿ ತಾಲಿಮಕ ತಾನು ಬಂದಾನ
ಯಾವ ಸಂಶಯ ಇಲ್ದೆ ತಾನು ಬಂದು ಮಲಗ್ಯಾನ  || ಜೀ ||

ಏರ
ಇದು ಎಂತಾದು ತಿಳಿಕೊಳ್ರಿ ನೀವು ಗೆಳಿತಾನ
ಹೇ, ಹಾಡಕೇಳಿದ ಮ್ಯಾಗ ಹತ್ತಕೊಬ್ಬರು
ಮಾಡಬೇಕು ಇಂಥಾ ಗೆಳಿತಾನ  || ಜೀ ||        ಚೌಕ : ೧

ಹೇ, ಈರಣ್ಣ ಮನಿ ಮುಂದ ಹೋಗಿ ನಿಂತಾಗ
ಬಾಲಿ ಹ್ಯಾಂಗ ಕರಿಯತಾಳ ದೋಸ್ತ ಈರಣ್ಣಗ
ಸಾಕ್ಷಾತ್ ಗಂಡನ ಮನಿಯಾಗ ಕರದಂಗ
ಒಯ್ದು ಕೂಡಿಸಿ ಬಿಟ್ಟಾಳ ಮಂಚದ ಮ್ಯಾಗ
ಅಪ್ಪ ಪ್ರೇಮದ ಪಾನ ಸುಪಾರಿ ಮಾಡುವ ಹ್ಯಾಂಗ
ಮಾದರ ಚೋದ ಮನಸ ಮಾಡತಾದ ಹ್ಯಾಂಗ  || ಜೀ ||

ಹೇ ಪಾನ ಸುಪಾರಿಯಂತು ಮನಿಯಾಗ ಮುಗಿತರೆಣ್ಣ
ಇಂವ ಕಕ್ಕಾ ಬಿಕ್ಕಾ ನೋಡಲಿಕತ್ತ ಕುಂತ ಮನಿಯಾಗ
ಎಳದು ಕೂಡದು ನಡಸಿದ ಮಂಚದ ಮ್ಯಾಗ
ಎಪ್ಪ ಯಾವಾಗ ಬರತಾಳ ನನ್ನ ಸನೆದಾಗ
ಹೇ ಅತ್ತ ಇತ್ತ ನೋಡೋ ಟೈಮಿಗಿ ಇವನ
ನಿಗಾ ಬಿದ್ದಾದ ಗೂಟಿನ ಮ್ಯಾಗ  || ಜೀ ||

ಹೇ, ಅತ್ತಾ ಇತ್ತಾ ಇಂವ ನೋಡೋ ಟೈಮಿಗಿ
ಸೀದಾ ನಿಗಾ ಬಿದ್ದಾದ ಗೂಟಿನ ಮ್ಯಾಗ
ಹೇ, ಗೂಟಿಗೆ ನೋಡ್ಯಾನ ಹತಿಯಾರ ಕಂಡಾನ
ಅಪ್ಪಾ, ಹತಿಯಾರ ಯಾಕೋ ಈ ಬಾಲಿ ಮನಿಯಾಗ
ಆಗ ಹತ್ತಿಯಾರ ನೋಡಿ ಪಕ್ಕಾ ಸಂಶಯ ಬಂದಾದ
ಇಂಥ ಹತ್ತ್ಯಾರೆಷ್ಟು ಇರತಾವರೆಪ್ಪ ಜನದಾಗ
ಪುನಃ ಅತ್ತ ಇತ್ತ ಇಂವಾ ನೋಡೋ ಟೈಮಿಗಿ
ಆಗ ನಿಗಾ ಬಿದ್ದಾದ ಗ್ವಾಡಿಯ ಮ್ಯಾಗ  || ಜೀ ||

ಹೇ, ಗ್ವಾಡಿಗಿ ನೋಡ್ಯಾನ ಫೋಟೋ ಕಂಡಾನ
ಯಪ್ಪ, ಅಣ್ಣನ ಮನಿ ಐತಿ ಮಾಡಲೆಂದ ಹ್ಯಾಂಗ
ಸದ್ಯ ಮನಸ ಮಾಡಿನಿ ನಾನು ಅಣ್ಣನ ಹೆಂಡ್ತಿಯ ಮ್ಯಾಗ
ಅಣ್ಣನ ಹೆಂಡ್ತಿ ಅಂದರ ಹೆತ್ತ ತಾಯಿ ನನಗ ಇದ್ದಂಗ
ಹೇ, ಪಾಪಗೇಡಿ ಮನಸ್ಸು ಇವತ್ತು ಕುರಸಾಲೆ
ನಾನು ಇವತ್ತು ಮನಸು ಮಾಡಿದಂಗ ನನ್ನ ತಾಯಿಮ್ಯಾಗ  || ಜೀ ||

ಹೇ, ಆಗ ಪುನಃ ನೋಡ್ರಿ ಈರಣ್ಣ ಅಂದ ಹ್ಯಾಂಗ
ತಾಯಿ ಸ್ವಲ್ಪನೆ ಬಾರೆ ನನ್ನ ಸನಿದಾಗ
ನಿನ್ನ ಗಂಡನ ಹೆಸರ ಸ್ವಲ್ಪ ಹೇಳವ್ವ ನನಗ
ಆಗ ಏನಂದ ಶಬ್ದ ಬಂತು ಇಕಿನ ಬಾಯಿಗ
ಅಪ್ಪ ನನ್ನ ಗಂಡನ ಹೆಸರ ಯಾಕ ಬೇಕು
ನೀ ಕುರಸಾಲೆ ಮನಸ ಮಾಡಿದಿ ನನಮ್ಯಾಗ  || ಜೀ ||

ಹೇ, ನೀನೆ ಕುತ್ತು ಸದ್ಯ ಮನಸು ಯಾವಾಗ ಮಾಡಿದಿ ಅಂದಾಗ
ಅವತ್ತೆ ನನಗಂಡ ಸತ್ತಾನಪ್ಪ ತಾಲೀಮದಾಗ
ಆಗ ಈರಣ್ಣ ಅಂದ ತನ್ನ ಆತ್ಮದಾಗ
ಇಂತ ಪಾಪಿ ಮುಖ ಹ್ಯಾಂಗ ತೋರಸಬೇಕು ಅಣ್ಣಗ
ಇವತ್ತು ಅಣ್ಣನ ಮನಿಯಾಗ ಪ್ರಾಣ ಕೊಡಬೇಕೆಂದು
ಎದ್ದು ನಿಂತಾನ ಮಂಚದ ಮ್ಯಾಗ  || ಜೀ ||

ಹೇ, ಎದ್ದು ನಿಂತವ ತಾನು ಅನುಮಾನ ಮಾಡಲಿಲ್ಲ
ಸಿಗಸಿದ ಆತನ ಹತ್ತಿಯಾರ ಹಿಡಕೊಂಡ ಕೈಯಾಗ
ಏರಿ ಹುಟ್ಟಿ, ಹಿಡಕೊಂಡು ಇಳಿತು ಹ್ಯಾಂಗ
ಆಗ ಬೈಕೋತಾನ ತನ್ನ ಮನಸಿಗ
ಏ, ಹಿಂದ ಮುಂದ ನೋಡಲಿಲ್ಲ ಪ್ರಾಣದಾಸಿ ಇಡಲಿಲ್ಲ
ಈರಣ್ಣ ಹೊಡಕೊಂಡ ಕುತ್ತಿಗಿ ಮ್ಯಾಗ  || ಜೀ ||
ಹೇ, ಒಂದೇ ಏಟಿಗಿ ಕುತ್ತಿಗಿ ಕಡಿದು ತೆಳಗ ಅಲ್ಲಿ ಬಿತ್ತು
ಆ ಬಾಲಿ ಎದ್ದು ನೋಡತಾಳ ಈರಣ್ಣಗ
ಈಗ ನನಗ ಬಂದು ಗಂಡ ಕೇಳತಾನ ಇದು ಹ್ಯಾಂಗ
ನಾನು ಏನಂತ ಹೇಳಬೇಕು ನನ್ನ ಗಂಡಗ
ಯವ್ವ ತಪ್ಪಚ್ಚಿ ನನ್ನ ಗಂಡ ಹ್ಯಾಂಗಾರ ಕಡಿತಾನ ನನ್ನಗ
ಇರಬಾರದರೆವ್ವ ಗಂಡ ಬರದರೊಳಗ  || ಜೀ ||

ಇಲ್ಲದೊಂದು ತಪ್ಪ ಹಚ್ಚತಾನ ನನಗಂಡ
ರಂಡಿ ನೀನೆ ಕಡದಿದಿ ಗೆಳಿಯ ಮಲಕೊಂಡಾಗ
ಈ ತಪ್ಪಂತು ಪಕ್ಕಾ ಬಂತು ನನ್ನ ತಲಿಮ್ಯಾಗ
ಹೀಗಂದು ಬಾಲಿ ಬಿದ್ದಿದ್ದ ಹತ್ತಿಯಾರ ಹೆಣದ ಕೈಯಿಂದ
ಹೇ ಆ ಹತಿಯಾರ ಬಂದು ನೋಡಿತ ಗಿಳಿರಾಮ
ಸಾಕಿಟ್ಟಾರಾಗ ಪಂಜರದಾಗ  || ಜೀ ||

ಹೇ ಹತ್ತಿಯಾರ ಹಿಡಿದಾಗ ಗಿಳಿ ಏನಂತ ಹೇಳತೈತಿ
ತಾಯಿ ಕಾಲಿಗಿ ಬಿದ್ದು ಹೇಳತಿನವ್ವ ನಿನಗ
ನೀನು ಪ್ರಾಣ ಹೊಡಕೋಬ್ಯಾಡ ಇವತ್ತು ಮನಿಯಾಗ
ಅಪ್ಪ ಗಿಳಿಮಾತ ಒಟ್ಟಾಗಿ ಇಕಿಗಿ ಲಕ್ಷ್ಯಕ್ಕ ಬರಲಿಲ್ಲ
ತಾಯಿ ಹೊಡಕೊಂಡಾಳ ಹತ್ತಿಯಾರ ಹೊಟ್ಟ್ಯಾಗ
ಹೇ ಹೊಟ್ಯಾಗ ಹೊಡದಾಗ ತಾಯಿ ಕಳ್ಳು ಚೂರು ಚೂರಾಗಿ
ಆ ಬಾಲಿ ಬಿದ್ದಾಳು ಧರುಣಿಯ ಮ್ಯಾಗ  || ಜೀ ||

ಎರಡು ಹೆಣಗಳು ವಾರಸಿಲ್ದೆ ಬಿದ್ದಾವ ಹೇಳುದ್ಯಾರಿಗ
ಆಗ ಸಂಗಣ್ಣ ಅಂದ ತನ್ನ ಆತ್ಮದಾಗ
ಅಪ್ಪ ಬಂದು ತಾಸಂತು ಹೊತ್ತು ಏರೈತಿ
ನನ್ನ ಗೆಳಿಯ ಯಾಕ ಬಂದಿಲಪ್ಪ ಮನಿಯ ಹೊರಗ
ಹೇ, ನನ್ನ ಮನಿ ಕಡಿಗಿ ಸ್ವಲ್ಪ ಹಾಯ್ದು ಬರಬೇಕಂದ
ಆಗ ಸಂಗಣ್ಣ ಸೀದಾ ಬಂದ ತನ್ನ ಮನಿಕಡಿಗ  || ಜೀ ||

ಬಂದು ದೂರ ನಿಂತ ನೋಡತಾನ ಮನಿ ಬಾಗಿಲಿಗ
ಬಾಗಿಲು ಹಾಗೆ ಇತ್ತು ಮೊದಲು ಮುಚ್ಚಿದಂಗ
ಹೇ, ಮುಚ್ಚಿದ ಬಾಗಿಲು ಸಂಗಣ್ಣ ನೋಡಿ
ತಾನು ಒತ್ತಿ ಬಂದು ನೋಡತಾನ ಸಣ್ಣ ಸಂದಿಗ
ಹೇ ಸಣ್ಣ ಸಂದಿಗಿ ಬಂದು ಹಾಗೆ ನೋಡು ಟೈಮಿಗೆ
ಸ್ವಲ್ಪ ರಕ್ತ ಹರಿದು ಬಂದಿತ್ತು ಬಾಗಿಲದಾಗ  || ಜೀ ||

ರಕ್ತ ಕಂಡು ಬಾಗಿಲು ಮುರಿದ ಅಷ್ಟರೊಳಗ
ಹೋಗಿ ನೋಡ್ಲಾಕ ಹತ್ತಿದ ತನ್ನ ಮನಿಯಾಗ
ಹೇ ಒಳಗ ಹೋಗ್ಯಾನ ಎರಡು ಹೆಣ ಕಂಡವು
ಆಗ ದುಃಖಾನು ಮಾಡ್ತಾನ ದೋಸ್ತನ ಮ್ಯಾಗ  || ಜೀ ||

ಹೇ ಸಂಗಣ್ಣ ಆಗ ಏನಂತ ದುಃಖ ಮಾಡ್ದ
ತಮ್ಮ ಗಾತ ಮಾಡಿ ಕೈ ಬಿಟ್ಟು ಹೋದೆಪ್ಪ ನನಗ
ಆಡಿನ ಮಲಿಯಂತೆ ಜೋಡ ಇಬ್ರು ಗೆಳಿಯಾರು ಜಗದಾಗ
ಯಾವಾಗ ಒಂಟಿ ಮಾಡಿ ಅಗಲಿಸಿ ನೀನು ಹೋದಿ ಅಂದಾಗ
ತಮ್ಮ ನೀ ಒಬ್ಬ ಹೋದ ಮ್ಯಾಗ ನಾ ಇದ್ದು ಫಲ ಇಲ್ಲ
ನಾನು ಬರತೆನು ನಿನ್ನ ಬೆನ್ನಿಗ  || ಜೀ ||

ಗೇ, ಆಗ ಸಂಗಣ್ಣ ಅನುಮಾನ ಮಾಡ್ದೆ
ಅದೇ ಬಿದ್ದ ಹತ್ತಿಯಾರ ಹಿಡದ ತನ್ನ ಕೈಯಾಗ
ಹತ್ತ್ಯಾಯ ಹಿಡಿದಾಗ ಕೈಯಾಗ ಸಂಶಯ ಬಂತು ಯಾರಿಗ
ಗಿಳಿಯು ದುಃಖ ಮಾಡಿ ಹೇಳತಾದ ಸಂಗಣ್ಣಗ
ಕಾಕ ನಿನ್ನ ಕಾಲಿಗೆ ಬಿದ್ದು ನಾ ಹೇಳತಿನಿ
ಸ್ವಲ್ಪ ನೀನು ಬಾರೋ ನನ್ನ ಸನಿಯದಾಗ  || ಜೀ ||

ಅಪ್ಪ, ನಿಮ್ಮ ಗೋಳಂತು ನನ್ನ ಕಣ್ಣಿಲಿ ನೋಡಲಾರೆ
ಮೊದಲು ನನ್ನ ಕುತ್ತಿಗಿ ಕೊಯ್ದು ಒಗಿಯಪ್ಪ ತೆಳಗ
ಒಟ್ಟ ಗಿಳಿಮಾತು ಬರಲಿಲ್ಲ ಇವನಿಗಿ ಲಕ್ಷ್ಯದಾಗ
ಇವನ ಚಿಂತಿ ಹೋಗಿತ್ತು ಇಬ್ಬರ ಮ್ಯಾಗ
ಹೇ, ಹಿಂದ ಮುಂದ ನೋಡಲಿಲ್ಲ ಪ್ರಾಣದಾಸೆ ಇಡಲಿಲ್ಲ
ಸಂಗಣ್ಣ ಹೊಡಕೊಂಡ ಕುತ್ತಿಗಿ ಮ್ಯಾಗ  || ಜೀ ||

ಹೇ, ಒಂದೇಟಿಗಿ ಕುತ್ತಿಗಿ ಕಡದು ತೆಳಗ ಬಿತ್ತು
ಮೂರು ಹೆಣಗಳು ಸೀದಾ ಬಿದ್ದಾವ ಹೇಳುದ್ಯಾರಿಗ
ಗೌಡ ಕುಲಕರ್ಣಿ ಅಂದ್ರು ಆಗಿನ ಕಾಲದಾಗ
ಸಾಕ್ಷಾತ್ ತಾಯಿ ತಂದಿ ಊರಾಗ ಇದ್ದಂಗ
ಹೇ ಗೌಡ ತಾನು ಅನುಮಾನ ಮಾಡಲಿಲ್ಲ
ರಿಪೋರ್ಟ ಕೊಟ್ಟಿದಾನು ಫೌಜುದಾರಗ  || ಜೀ ||

ಹೇ, ಫೌಜದಾರ ಬಂದು ತಾನು ಚೌಕಾಸಿ ನಡೆಸಿದಾನು
ಆಗ ತ್ರಾಸ ಕೊಟ್ಟಿದ ತನ್ನ ಬೈದರ ಒಳಗ
ಬಾಳ ಹೊಡಿ ಬಡಿ ಮಾಡಲ ಕತ್ತಿದ ಮಗ್ಗಲ ಮಂದಿಗ
ಆಗ ಗಿಳಿ ಬಂದು ಹೇಳತಾದ ಫೌಜದಾರಗ
ಅಪ್ಪ ನಿಮ್ಮ ಖೈದಿ ನಿಮ್ಮ ಕೈಯಾಗ ಆದವು
ನೀವು ಯಾಕ ತ್ರಾಸ ಕೊಟ್ಟಿರಿ ಊರಾನ ಮಂದಿಗ  || ಜೀ ||

ಇವತ್ತು ನಾ ಹೇಳಿದಂತೆ ಕಾಗದ ಮ್ಯಾಗ ಬರಿಬೇಕು ನೀವು
ಯಾರು ಹೊಡಿಯಲಿಲ್ಲ ಕೇಳ್ರಿ ಇವರು ಮೂರು ಮಂದಿಗ
ತಾವೇ ಸತ್ತರ ತಮ್ಮ ತಮ್ಮ ಮನಸಿನ ಕಾಲಾಗ
ನೀವು ವಿನಾ ಕಾರಣ ತ್ರಾಸ ಕೊಡಬೇಡ್ರಿ ಊರಾಗ
ಹೇ ಗಿಳಿಮಾತು ಕೇಳಿ ಪಂಚನಾಮ ಮಾಕೊಂಡು
ಫೌಜದಾರ ಹೋಗಿ ಬಿಟ್ಟ ತನ್ನ ಜಾ ಗೀಗ  || ಜೀ ||

ಹೇ, ಫೌಜರಾದ ಹೋಗಿದಾನು ಮೂರು ಗಳಿಗೆಯಿಂದ
ದಫನ ಮಾಡಬೇಕಂದ ಮೂರು ಹೆಣಗಳಿಗ
ಲೆಕ್ಕಿಲ್ದೆ ಕಟ್ಟಿಗಿ ಒಟ್ಯಾದ ಸ್ಮಶಾನದಾಗ
ಮೂರು ಹೆಣಗಳಿಗೆ ತಗೊಂಡು ಹೋದ್ರು ಅಲ್ಲಿಗ
ಹೇ, ಲೆಕ್ಕಿಲ್ದೆ ಮಂದಿ ಕಿಚ್ಚ ಕೊಡಿಸೋ ಮುಂದ
ಗಿಳಿ ಹೋಗಿ ಬಿಟ್ಟಾದ ಅವರ ಜೋಡಿಗ  || ಜೀ ||

ದುಃಖ ಮಾಡಲಿಕ್ಕೆ ಹತ್ತಿತು ಮನಸಿಗಿ ಬಲ್ಲಂಗ
ಯಪ್ಪ ನನ್ನ ತಾಯಿ ತಂದಿ ಯಾವಾಗ ಹೋಗ್ಯಾರಂದಾಗ
ನಾ ಅಲ್ಲೆ ಹೋಗಬೇಕಂತಿದ್ದೆ ಕಿಚ್ಚ ಕೊಡವೋ ಸಲುವಾಗ
ಹೇ ಗಿಳಿ ದುಃಖ ಮಾಡುವಾ ಒಬ್ಬ ಮುಪ್ಪಾನ ಮುದಕ
ಸಹಜ ಬಂದಿದ ಮನಿ ಅಂಗಳದಾಗ  || ಜೀ ||

ಹೇ, ದುಃಖ ಮಾಡುತ ಗಿಳಿ ಮುದಕಗ ಕರಿತೈತಿ
ಕಾಕ ಸ್ವಲ್ಪನೆ ಬಾರೋ ನನ್ನ ಸನಿದಾಗ
ಅಪ್ಪ ನನ್ನ ತಾಯಿ ತಂದಿ ಕೈ ಬಿಟ್ಟು ಹೋಗ್ಯಾರೋ ನನಗ
ನನ್ನ ಫಕ್ಕ ಕೆತ್ತಿದಾರ ಸಣ್ಣವ ಇದ್ದಾಗ
ಕಾಕ ನಿನ್ನ ಕೈಯಾಗ ಹಿಡಕೊಂಡು ಜಲ್ದಿ ಮಾಡಿ ನಡಿ
ನೀನು ತಗೊಂಡ ನಡಿ ಸ್ಮಶಾನದ ಕಡಿಗ  || ಜೀ ||

ಹೇ, ಗಿಳಿ ಮಾತಿನಂಗ ಮುದಕ ಎತ್ತಿಕೊಂಡ ಗಳಗ್ಯಾಗ
ಎತ್ತಿಕೊಂಡು ಹೊಂಟಿದಾನು ಸ್ಮಶಾನದ ಕಡಿಗ
ಗಿಳಿಕೇನಂತ ತಾಕಿತ ಮಾಡತಾದ ಹಾದ್ಯಾಗ
ಕಾಕ ದೂರಂತು ನಿಂದರಬ್ಯಾಡ ನೀನು ಮಂದ್ಯಾಗ
ಅಪ್ಪ ಒತ್ತಿ ಸನ್ಯಾಕ ಹೋಗಿ ನಿಂದ್ರೆಂದು ಉರಿ ಮಗಲಾಗ
ಲೌಕಿಕ ಮಾಡಿತಪ್ಪ ಮುದಕಗ  || ಜೀ ||

ಗಿಳಿಮಾತಿನಂಗ ಮುದಕ ಸನ್ಯಾಕ ಹೋಗಿನಿಂತ
ಆ ಮುದಕನ ಚಿಂತಿ ಹೋಯ್ತೋ ಅವರ ಮ್ಯಾಗ
ಚಿಂತ್ಯಾಗ ಸೈಲ ಕೈಯಾಯ್ತು ಹೇಳುದ್ಯಾರಿಗ
ಹೇ ಕೈ ಅಂತು ಸೈಲ ಈಗ ಆಗ್ಯಾದ ಮುದಕಗ
ಗಿಳಿ ಅನಾಮಾತ ಎದ್ದು ನಿಂತಾದ ಅವನ ಕೈಯಾಗ  || ಜೀ ||

ಹೇ, ಅನಾಮಾತ ಮುದಕನ ಕೈಯಾಗ ಗಿಳಿ ಎದ್ದು ನಿಂತು
ಯಪ್ಪಾ ನಾಯಾಕ ಒಬ್ಬ ಇರಬೇಕು ಹೋಗಿ ಅಂತ ಮನ್ಯಾಗ
ಯಾವಾಗ ನನ್ನ ತಾಯಿ ತಂದಿ ಕೈ ಬಿಟ್ಟ ಹೋಗ್ಯಾರಂದಾಗ
ಗಿಳಿ ಪ್ರಾಣದಾಸೆ ತ್ಯಾಗ ಮಾಡಿ ನಿಂತಾದಾವಾಗ
ಏ, ಹಿಂದ ಮುಂದ ನೋಡಲಿಲ್ಲ ಪ್ರಾಣದಾಸೆ ಇಡಲಿಲ್ಲ
ಬುರ‍್ರಂತ ಹಾರಿ ಬಿತ್ತು ಬೆಂಕ್ಯಾಗ  || ಜೀ ||

ಹೇ, ಬೆಂಕ್ಯಾಗ ಬಿದ್ದಾಗ ಭಗವಂತ ಬುತ್ತಿನೆ ಹಿಡಕೊಂಡ
ಆಹಾ ಏನಂತ ಭಗವಂತ ಅಂತಾನ ಆಗ
ಮಗನೆ ನೀ ಯಾಕ ಸಾಯಿತಿಯೋ ಇವರ ಕಾಲಾಗ
ಗಿಳಿ ಹೊಳ್ಳಿ ಬೈಯುತಾದ ಭಗವಂತಗ
ಮಗನೆ ನಾ ಸಾಯುವಾಗ ನೀನು ಅರಿವಿಗೆ ಬಂದಿದೆಂದರ
ನಿನ್ನಂತ ಬುದ್ದಿಗೇಡಿ ಇಲ್ಲ ಜಗದಾಗ  || ಜೀ ||

ಹೇ, ಮೂರು ಮಂದಿ ತಾಯಿ ತಂದಿ ಪ್ರಾಣ ಕೊಡಾಕ ನಿನಗ
ಆಗ ಯಾ ಮಗ ಹಾಕಿದಾನು ನಿಮಗ ಜೈಲಿನ ಒಳಗ
ಆಗ ಭಗವಂತ ಅಂದಿದಾನು ಗಿಳಿರಾಮಗ
ಅಪ್ಪ ನಿನ್ನ ಭಕ್ತಿ ಪಕ್ಕಾ ನಾನು ಮೆಚ್ಚಿನಂದಾಗ
ಅಪ್ಪ ನೀ ಬೇಡು ನಾನು ಕೊಡುತಿನೆಂದು
ಸದ್ಯ ವಚನ ಕೊಟ್ಟಿದ ಗಿಳಿರಾಮಗ  || ಜೀ ||

ಸದ್ಯ ನಾ ಬೇಡಿದ್ದು ನೀ ಕೊಡತಿ ನನಗ ಕೈ ಮುಟ್ಟೆಂದು
ಗಿಳಿ ವಚನ ತಗೊಂಡು ಸಾಂಬ ಭಗವಂತಗ
ಅಣ್ಣ ಮತ್ಯಾವ ಊರವ ಬೇಕಾಗಿಲ್ಲಪ್ಪ ನನಗ
ನನ್ನ ತಾಯಿ ತಂದಿ ಜನ್ಮ ಪುನಃ ಕೊಡು ನನಗ
ಹೇ ಆಗ ಭಗವಂತ ಏನಂತ ಹೇಳತಾನ
ಕೊಟ್ಟೆನು ಕರದು ಒಯ್ಯೋ ನಿನ್ನ ಮನಿಗ  || ಜೀ ||

ಸಾಕ್ಷಾತ್ ಭಗವಂತ ಕೈಯಾಗ ಸಿಕ್ಕ ಮ್ಯಾಗ
ಬಂದು ಎತ್ತಿಕೊಂಡಾರ ಗಿಳಿರಾಮಗ
ಹೇ ಗಿಳಿಯಿಂದ ಮೂರು ಮಂದಿ ಪ್ರಾಣ ಪುನಃ
ಕೇಳಿ ಆಗಿ ಬಂದಾದ ಸ್ಮಶಾನದಾಗ  || ಗೀ ||

ಗಿಳಿಯಿಂದ ಮೂರು ಮಂದಿ ಪ್ರಾಣ ಹೊಳ್ಳಿಬಂತು
ಸೀದಾ ಹೋಗ್ಯಾರ ತಮ್ಮ ತಮ್ಮ ಮನಿಗ
ಇದು ಆಗಿ ಹೋಗಿದೇನು ಯಾವ ಕಾಲದಾಗ
ಒಟ್ಟು ಕೀರ್ತಿ ಉಳಿದಾದ ಇಂದಿನ ವರಿಗ
ಹೇ ಅವರಂತ ಗೆಳಿತಾನ ನೀವು ಕಟ್ಟಬೇಕೆಂದು
ಖ್ಯಾಡಗಿ ಶಾಂತಣ್ಣ ಹಾಡಿದಾನು ಸಭಾದಾಗ  || ಜೀ ||

ಆಗಿನ ಗೆಳಿತಾನ ಇತ್ತು ಹೀಂಗ
ನಮ್ಮ ನಿಮ್ಮ ಗೆಳಿತಾನ ಹ್ಯಾಂಗ ನಡದಾವ ಕಲಿಯುವ ದೊಳಗ
ನಮ್ಮ ಗೆಳಿತನ ಅಂದ್ರ ಒಟ್ಟಿದ ಬಣವಿಗೆ ಬೆಂಕಿ ಹಚ್ಚಿದಂಗ
ನಾವು ನೀವು ಸೇರಿ ಗೆಳೆತನ ಕಟ್ಟಬೇಕಾದರ
ದೋಸ್ತನ ಹೆಂಡ್ತಿ ತಿಳಕಬೇಕು ಮನಿಯಾಗ
ದೋಸ್ತ ಪಕ್ಕಾ ಚಹಾದ ಅಂಗಡ್ಯಾಗ ಕಾಣಸ್ತಾನ  || ಜೀ ||

ಅವನಿಗಿ ಅಲ್ಲಿ ಬಿಟ್ಟು ಹೋಗ್ತೆವು ದೋಸ್ತನ ಮನಿಗ
ಹೋಗಿ ಏನಂತ ಕೇಳತೆವು ದೋಸ್ತನ ಹೆಂಡ್ತಿ
ಯಕ್ಕಾ ನಿನಗಂಡ ಹೋಗ್ಯಾನವ್ವ ಎಲ್ಲಿಗ
ಹೇ ಬಾಲಿ ಪಾಪ ಏನು ತಿಳಿದೆ ಸ್ವಲ್ಪ
ಮಾಮಾ ಅಂದರ ಸಾಕು ಯಪ್ಪಾ ಈಗಿನವರಿಗ  || ಜೀ ||
ಹೇ ಮಾಮ ಅಂದರ ಸಾಕು ಇವನಿಗೆ ಹ್ಯಾಂಗಾಗತೈತಿ
ಹೇ ತಾಗತಾದ ಮಂಗ್ಯಾ ಬಾಳಿ ತಿಂದಂಗ
ಯಪ್ಪಾ ಮಾಮಾ ಅಂತಾಳಪ್ಪ ಅಲ್ಲಿಗಿ ಹೋದಮ್ಯಾಗ
ನಾನು ಸೈಲೆನ ಬಿಡಬಾರದಂದ ಇದರಾಗ
ಹೇ ಮಾಮಾ ಅಂದರ ಮೂರ ಸಾರಿ ಕೆಟ್ಟ ಬಿಸಲಾಗ
ತಿರಗ್ಯಾಡತಾವ ಅಕಿನಮನಿ ಅಂಗಳದಾಗ  || ಜೀ ||

ಅಲ್ಲರೀ ಇಂತ ಗೆಳಿತಾನ ನಾವು ಎಂದು ಕಟ್ಟಬಾರ‍್ದು
ಅಂದ್ರ ಭಗವಂತ ಎಂದೂ ಸಿಗುದಿಲ್ಲ ನಮಗ
ಕಟ್ಟಿದರ ಗೆಳಿತನ ಕಟ್ಟಬೇಕು ಅವರಂಗ
ಒಟ್ಟ ಕೀರ್ತಿ ಉಳಿತಾದ ಭೂ ಲೋಕದಾಗ
ಅವರಂತ ಗೆಳಿತಾನ ನಾವು ನೀವು ಕಟ್ಟಿದಾಗ
ದೇವರು ಪಕ್ಕಾ ಸಿಗತಾನ ನಮಗ  || ಜೀ ||

ದುಮಾಲಿ
ಇಲ್ಲಿಗೆ ಮುಗಿತು ನೋಡರಿ ಗೆಳೆಯರು ಮಾಡಿದ ಸಂದಾನ
ಮಾಡಿದ ಸಂದಾನ
ತಪ್ಪಾದ್ರ ಕ್ಷಮಾ ಮಾಡಬೇಕು ನಾನು ಇದ್ದಿನಿ ಅಜ್ಞಾನ  || ಜೀ ||
ತಂದಿ ಶಿವಯೋಗಿ ಹಾಡೆಂದು ಹಸ್ತ ತಲಿಮ್ಯಾಲ ಇಟ್ಟಾನ
ಹೌದು ಇಟ್ಟಾನ
ಆತನ ದಪ್ಪು ಎನಗ ಕೊಟ್ಯಾನ  || ಜೀ ||
ಇಂಡಿ ತಾಲ್ಲೂಕದಾಗ ಖೇಡಗಿ ಆದ ನನ್ನ ವತನ
ಅಗಸಿ ಮುಂದು ವಾಸ ಮಾಡಿದಾನು ಸಯ್ಯದ ಸತ್ಯವನ  || ಗೀ ||

ಏರ
ಬಡವಿ ಒಳಗನನ್ನ ಒಡೆಯನ ಜಾಗದಲ್ಲಿ
ಅಲ್ಲಿ ಸಯ್ಯದ ಪೀರ ವಾಸ ಮಾಡ್ಯಾನ
ತಂದಿ ಶಿವಯೋಗಿ ಹಾಡೆಂದು ಹೇಳ್ಯಾನ
ಸಭಾದಾಗ ಎದ್ದು ಹಾಡಿದಾನು ಶಾಂತಣ್ಣ
ಹೇ, ಹಾಡ ಕೇಳಿದ ಮ್ಯಾಗ ಹತ್ತಕ್ಕೊಬ್ಬರು
ಮಾಡಬೇಕು ಇಂತ ಗೆಳಿತಾನ  || ಜೀ ||