ಜಾತಿ ಹೀನನ ಮನೆಯಲ್ಲಿ ಜ್ಯೋತಿ ತಾ ಹೀನವಲ್ಲ
ನೀತಿ ಮಾತ್ರ ಬೇಕು ನಮ್ಮ ನಿಮ್ಮಲ್ಲಿ ಸುಶೀಲ
ಸತ್ಪಾಳೆಂಬು ಪ್ರಾಂತದಲ್ಲಿ ಮಹೂ ಎಂಬ ಗ್ರಾಮದಲ್ಲಿ
ಜೈ ಭೀಮ ಜನ್ಮ ಎತ್ತ್ಯಾರ ಜಗಕ್ಕೆಲ್ಲ  || ಜೀ ||

ರಾಮಜೀ ಸುಭೇದಾರ ಭೀಮಬಾಯಿ ತಾಯಿ ತಂದಿ
ಜೈ ಭೀಮ ಹನಾಲ್ಕನೆಯ ಪುತ್ರರಿವರು ವರ್ಣಕ ಅಳತಿಲ್ಲ
ಬಡತನದ ಬಾಧೆ ಇವರಿಗಿ ಹಗಲು ಇರುಳು ಕಾಡುತಿತ್ತು
ಅನ್ನವಸ್ತ್ರ ಸಿಗತಿದ್ದಿಲ್ಲ ವ್ಯಾಳೇದ ಮ್ಯಾಲ  || ಜೀ ||

ಮಿಲಿಟ್ರಿ ಕ್ಯಾಪ್ಟನ್ ನೌಕ್ರಿ ರಾಮಜಿ ಸುಭೇದಾರಗಿತ್ತು
ಮಾಂಸ ಮಧ್ಯ  ಜೀವನದಲ್ಲಿ ಮುಟ್ಟಿದವರಲ್ಲ
ವಿಠಲನ ಭಕ್ತರಿವರು ವಿಠಲ ವಿಠಲ ನುಡಿಯತಿದ್ರು
ನಿಷ್ಠೆಯಿಂದ ನಡಿಯತಿದ್ರು ಅವರು ಆ ಕಾಲ  || ಜೀ ||

ಹದಿನಾಲ್ಕು ಮಕ್ಕಳು ಮತ್ತು ತಾವು ಇಬ್ರು ಸತಿಪತಿ
ಹದಿನೈದು ರೂಪಾಯಿ ಸಂಬಳ ಸಿಗುತ್ತಿತ್ತು, ಅದಕೂ ಹೆಚ್ಚಿಲ್ಲ
ಇದ್ದಿದರೊಳಗ ಮಕ್ಕಳ ಕರಕೊಂಡ ಗಂಜಿ ಕಾಸಿ ಕುಡಿತಿದ್ರು
ಕಡಿಮಿ ಬಿದ್ರ ಮಂದಿಗಿ ಏನೂ ಬೇಡವರಲ್ಲಾ  || ಜೀ ||

ರಾಮ ಜೀ ಸುಭೇದಾರಗ ಅಲ್ಲಿಂದ ಗೋರೆಗಾಂವಕ ಬದಲಿ ಆತು
ಗೋರೆಗಾಂವ ಮೈಸೂರು ಸೈಟ್‌ದ ಸನೇದ ದಾರೆಲ್ಲ
ಹಿರೇಮಗಳ ತುಳಸಿ ಬಾಯಿಗಿ ಅಡಗಿ ಮಾಡುವ ಕೋಸ್ಕರವಾಗಿ
ಕರಕೊಂಡ ವೈದ್ರು ಸುಭೇದಾರ ತಮ್ಮ ಹಿಂಬಲ

ಇಳುವ
ಮನೆ ಕಡಿಗಿ ನೆದರ ಇರಲೆಂತ ಹೇಳಿ ಹೋಗ್ಯಾರ
ಮುಂದೆ ಮೇ ತಿಂಗಳ ಸೂಟಿ ಜೈ ಭೀಮ ಮಾಡಿ ವಿಚಾರ  || ಜೀ ||
ಅಣ್ಣ ಆನಂದರಾಯಗ ಅಂದ ಜೈ ಭೀಮ ಸುರಿಸಿ ಕಣ್ಣೀರ
ಅಪ್ಪನ ಕಡಿ ಹಂಬಲಾತು ನಡಿ ಅಣ್ಣ ತಯ್ಯಾರ  || ಜೀ ||

ಅಣ್ಣ ತಮ್ಮರು ರೈಲ್ವೆ ಹತ್ತಿ ಗೋರೆಗಾಂವಕ ಬಂದ ಇಳದಾರ
ಅಣಿಯಾದ ಆರು ಮೈಲು ದಾರಿ ಅಲ್ಲಿಂದ ಅಂತರ  || ಜೀ ||
ನೀರ ಬೇಡ್ಯಾರ ಕ್ಯಾಂಟೀನದಾಗ ಮೊದಲು ಕುಲ ಕೇಳ್ಯಾರ
ನಿಲ್ಲಗೊಡಲಿಲ್ಲ ಅವರಿಗೆ ಹೋಗ್ರಿ ಮುಂದಕ ಹೊಲಿಯಾರ

ಕೂಡಪಲ್ಲ
ಹಳಿ ಎತ್ತಿನ ಗಾಡಿ ಬಿಟಕೊಂಡು ನೆರಳಿಗೊಬ್ಬ ಕೂತಿದ್ದ ಮುದಕ
ಅನಾಯಾಸ ಬಾಡಿಗಿ ಅವತ್ತು ಅವನಿಗಿ ಸಿಕ್ಕಿಲ್ಲ  || ಜೀ ||            ಚೌಕ : ೧

ಡಬಲ್ ಬಾಡಿಗಿ ಆಶೆಕ್ಕಾಗಿ ಕುಲಕೇಳಲಿಲ್ಲ ಇವರಿಗಿ
ಗಂಟ ಗಾಡ್ಯಾಗ ಇಟ್ಟು ಮಕ್ಕಳು ಏರಿ ಕುಳಿತಾರ
ಗಾಡಿ ಒಂದ ಮೈಲ ಹೋತು ಗಾಡಿಯಂವಗ ಸಂಶಬಂತು
ಹುಡುಗರೆ ನೀವು ಹೇಳಿರೆಪ್ಪ ಯಾರ ಮನಿಯವರಾ  || ಜೀ ||

ಹುಡುಗರು ಹಿಂಗ ಹೇಳತಾರ ನೋಡ್ರಿ ನಾವು ಹೊಲಿಯಾರು
ಹಡದ ತಂದಿ ಮಿಲಿಟ್ರಿ ಕ್ಯಾಪ್ಟನ್ ರಾಮ ಜೀ ಸುಭೇದಾರ
ಹುಡುಗರ ಮೇಲೆ ಸಿಟ್ಟಿಗೆದ್ದ ಹುಡುಗರ ಕಪಾಳಿಗಿ ಹೊಡದಾ
ಗಂಟ ಗಾಡಿ ಕೆಳಗ ಒಗದ ಬೈದ ಭಯಂಕರ  || ಜೀ ||

ಹೊಲಿಯರೆಂದು ಹೇಳಿದ್ರ ನನಗ ಮೊದಲೆ ತರತಿದ್ದಲ್ಲೋ ನಿಮಗ
ಕುಲಾ ಕೆಡಿಸಿರಿ ಮುಟ್ಟಿ ನನಗ ಕೊಡತಾರ ಬಹಿಸ್ಕಾರ
ಹ್ಯಾಂಗ ಮಾಡಲಿ ಅಂತಾನ ಬಡ ಬಡಕೊಂಡು ಅವಳತಾನ
ಹುಡುಗರಿಗಿ ಬಿಟ್ಟು ನಡದಾನ ಕಾನನ ಘೋರ  || ಜೀ ||

ಕಣ್ಣೀರ ತೆಗೆದು ಜೈ ಭೀಮ ಅಂದಾ ಕೇಳ್ರಿ ಪಾಟೀಲ ಬಾಬಾ ಶಬ್ದ
ಬೇಕಾದ್ರ ಡಬಲ್ ಬಾಡಿಗಿ ತಗೋರಿ ಅಂದಾರ
ಬಾಡಿಗಿ ಆಶಕ್ಕಾಗಿ ಮತ್ತೆ ಹುಡುಗರಿಗಿ ಕೂಡಿಸಿಕೊಂಡ
ಹಗ್ಗ ಮುಟ್ಟದೆ ಗಾಢಿಯೊಳಗ ಕೂಡ್ರೆಂದ ದೂರ  || ಜೀ ||

ಗಾಡಿಯೊಳಗ ಬರುದಿಲ್ಲ ನಾನು ನಡಕೊಂತೆ ಬರುವೆನು
ಬ್ಯಾಸಿಗಿ ಬಿಸಿಲು ಮುದಕ ನಡದು ಬಂದ ವತ್ತರ
ಮುಂದೆ ಮೈಲಿ ಸಾಗಿದ ಮೇಲೆ ಜೈ ಭೀಮಗ ನೀರಡಿಕಿ ಆತು
ಜೈ ಭೀಮ ಪಾಟೀಲ ಬಾಬಾಗ ಕೇಳಿದ ನೀರಾ  || ಜೀ ||

ಇಳುವ

ಹೊಲಸ ನೀರಿನ ಕೆರಿ ಇತ್ತು ಹಂದಿ ಹೊರಳಾಡತಿದ್ದು ನೀರಾಗ
ಅಲ್ಲಿ ನೀರ ಕುಡಿರಿ ಅಂತ ಮುದಕ ತೋರಿಸಿದ ಮಕ್ಕಳಿಗ
ಹಾತೊರೆದು ಮಕ್ಕಳು ಮಲಿನ ನೀರ ಎತ್ತ್ಯಾರ ಬೊಗಸ್ಯಾಗ
ಬೊಗಸಿ ತುಂಬ ಹುಳಾನೆ ಬಂದುವು ಹೆಂತಾದು ಹೊಲಿಯರ ಭೋಗ  || ಜೀ ||

ಎಂಟು ವರ್ಷದ ಜೈ ಭೀಮ ಬಿದ್ದು ಅಳತಾನ ಭೂಮಿ ಮ್ಯಾಗ
ಯಾಕ ಹುಟ್ಟಿಸಿದಿ ಶಿವನೆ ಹೊಲಿಯರ ಕುಲಾ ಜಗದಾಗ  || ಜೀ ||
ಇದೊಂದು ಕುಲಾ ಕಡಿಮಿ ಬಿದ್ದಿತೇನೋ ನಿನ್ನ ನಾಟಕದಾಗ
ನನ್ನ ಹೊಲಿಯಾರ ಗೋಳ ನೋಡಿ ಹಾರಲೇನು ಯಾವ ಹೊಂಡಿದಾಗ  || ಜೀ ||

ಕೂಡಪಲ್ಲ
ನೀರ ಛಲ್ಲಿ ತಿರಗಿ ಬಂದ್ರು ಬಂಡಿ ಏರಿ ಕೂತಕೊಂಡ್ರು
ಬಂಡಿ ಹೋತು ಗೋರೆಗಾಂವ ಅಗಸಿ ಬಾಗಿಲ  || ಜೀ ||    ಚೌಕ : ೨

ನೀರ ಹಾಕಿ ಬಂಡಿ ಹಗ್ಗ ಎತ್ತ ಸಹಿತ ತೊಳಕೊಂಡ ಹೋಗಿ
ಪಾಟೀಲ ಬಾಬಾ ಹೋಗಿ ಹೊಕ್ಕಾನ ಮನ್ಯಾಗ
ಕಣ್ಣೀರ ಸುರಿಸುತ್ತ ಜೈ ಭೀಮ ಆನಂದರಾವ ಇಬ್ರು ಹೋದ್ರು
ತಂದಿ ರಾಮಜಿ ಸುಭೇದಾರ ಇದ್ದ ಸ್ಥಳದಾಗ

ಅಪ್ಪನ ಕೊರಳಿಗಿ ಬಿದ್ದು ಅಬ್ಬರಿಸಿ ಅಳತಾರ
ಆದ ವೃತ್ತಾಂತ ಹೇಳತಾರ ತಂದಿಗಿ ಹಿಂಗ
ಅಪ್ಪಿಕೊಂಡು ಸುಭೇದಾರ ಶಾಂತಿ ರೀತಿ ಹೇಳತಾನು
ಮರುದಿನ ಮುಂಜಾನೆ ಭೀಮ ಗ್ರಂಥ ಹಿಡಿದಿರು ಕೈಯಾಗ

ಅಭ್ಯಾಸ ಮಾಡಲು ನದಿ ದಂಡಿಗಿ ಹೂ ಬಿಸಲಲ್ಲಿ ಕುಳಿತಾ ಹೋಗಿ
ಶೀಲವಂತರ ಗುಂಡ ಮ್ಯಾಲಕಿದ್ದುವ ಹೋಳ್ಯಾಗ
ಹರಿಜನರ ಗಿರಿಜನರ ಗುಂಡ ದೂರ ತೆಳಿಯಾಕ ಇದ್ದುವ ಆಗ
ವಾರ್ತೆ ಏನು ಗುರ್ತ ಹೊಸಬ ಹೋದ ಹುಡಗಗ  || ಜೀ ||

ನೀರಡಿಸಿ ಹೋಗಿ ಭೀಮ ನೀರು ಕುಡಿಬೇಕ ಅನ್ನುದರೊಳಗ
ದನ ಕಾಯೋ ಹುಡುಗರು ಬಂದ್ರು ಬಡಗಿ ಕಯ್ಯಾಗ
ಹರಿಜನರ ಹುಡುಗ ನೀನು ನಮ್ಮ ಗುಂಡ ಮುಟ್ಟಿದಿಯೆಂದು
ತಿರವ್ಯಾಡಿ ಬಡದ್ರು ಭೀಮುಗ ದನಕ ಬಡದಂಗ  || ಜೀ ||

ಅಪ್ಪಗ ಬಂದು ಹೇಳುತಾನು ಅಪ್ಪಾ ನಮ್ಮ ತಪ್ಪ ಏನು
ಸುಭೇದಾರ ರಂಬಸಿ ಒಯ್ದಾನ ತನ್ನ ಮನ್ಯಾಗ
ಕಷ್ಟಾ ಬೆಳದು ಮುಂಜಾನೆದ್ದು ನಾಯಿದರ ಅಂಗಳಕ ಹೋದ ಭೀಮ
ಎಮ್ಮಿ ಬೋಳಸತಿದ್ದ ನಾಯಿದ ಅಂಗಳದಾಗ  || ಜೀ ||

ಇಳುವ
ನನಗ ಕಷ್ಟ ಮಾಡರೆಂದು ಭೀಮ ಎದರಿಗಿ ನಿಂತಿದ
ಭೀಮಗ ನಾಯಿದರಾಂವ ಕಣ್ಣು ಕಿಸಿದು ನೋಡಿದ  || ಜೀ ||
ಇದು ಹೊಲಿಯರ ಹುಡುಗ ನಮ್ಮ ಅಂಗಳಕ ಯಾಕ ಬಂದಾದ
ಇದರ ನೆರಳ ಬಿದ್ರ ಕತ್ತಿ ಮುಡಚಿಟ್ಟ ಆಗತಾದ  || ಜೀ ||

ಝಟ್ಟನೆ ಕತ್ತಿ ಹಡಪಿಯೊಳಗ ವೈದು ಮುಚ್ಚಿಟ್ಟಿದ
ಕೆಟ್ಟಗಣ್ಣಿಲೆ ನೋಡಿ ನಾಯಿದ ಹಿಂಗ ಉತ್ತರ ಕೊಟ್ಟಿದ  || ಜೀ ||
ಎಲೋ ಹೊಲಿಯಾರ ಹುಡುಗ ನೀನು ಹಿಂಗ ಊರಾಗ ಬರಬಾರದ
ನೀ ನಡಿದ ಹೆಜ್ಜಿ ಮೇಲೆ ನಾವ ಹ್ಯಾಂಗ ನಡಿಯೂದ  || ಜೀ ||

ಕೂಡಪಲ್ಲ
ಬಿಕ್ಕಿ ಬಿಕ್ಕಿ ಅಳತಾನ ಮಿಕ್ಕಿದ ಮಹಾ ಅಪಮಾನ
ಅಕ್ಕಗ ಹೇಳಿದ ಮನಿಗಿ ಬಂದು ಆದ ಕಥಿಯೆಲ್ಲ  || ಜೀ ||            ಚೌಕ : ೨

ಕತ್ತರಿ ತಗೊಂಡ ಭೀಮುನ ತಲಿ ಕತ್ತರಶ್ಯಾಳ ಅಕ್ಕ ತುಳಸಾ
ಒಂದು ವಾರ ಗಳಿದು ಇಬ್ರು ಊರಿಗಿ ಬಂದಾರ
ಶಾಲೆ ಚಾಲು ಆತು ಮುಂದ ಜೈ ಭೀಮ ಆನಂದರಾವಕೂಡಿ
ಸರಿಯಾಗಿ ತಮ್ಮ ಶಿಕ್ಷಣ ಮುಂದುವರಿಶ್ಯಾರ  || ಜೀ ||

ಗೋರೆಗಾಂವದಿಂದ ಸುಭೇದಾರಗ ಅಂಬೇವಾಡಕ ಬದಲಿ ಆತು
ಮಡದಿ ಮಕ್ಕಳನ್ನ ಕರಗೊಂಡ ಅಲ್ಲೆ ಮನಿ ಹಿಡದಾರ
ಮಹೂದಿಂದ ಸರ್ಟಿಫಿಕೇಟ್ ಅಂಬಾವಾಡೆದ ಶಾಲೆಗೆ ವೈದ್ರು
ಹಾ ಜೀರ ಮಾಡಿ ಅಣ್ಣ ತಮ್ಮರು ಕಲೀಲಿಕ ಹತ್ಯಾರ  || ಜೀ ||

ಏಳು ಎಂಟು ವರ್ಷ ಅಲ್ಲಿ ಕಾಲ ಹಿಂಗ ನೂಕದರಲ್ಲಿ
ಅಲ್ಲಿದಿಂದ ರತ್ನಾಗಿರಿಗಿ ಕ್ಯಾಂಗ ಒಗದಾರ
ರತ್ನಾಗಿರಿಯ ಶಾಲೆಯಲ್ಲಿ ಜೈ ಭೀಮ ಆನಂದರಾಯರು ಅಲ್ಲಿ
ಭಕ್ತಿಯಿಟ್ಟು ಮೊದಲಿನಂತೆ ನಿತ್ಯ ಕಲಿತಾರ  || ಜೀ ||

ಕಲ್ಲ ಸುರದಂತೆ ಏರೋ ಪ್ರಕಾರ ಮೇಲೆ ಮಳಿ ಧಾರಾಕಾರ
ಭೀಮ ಬಾಯಿ ಕಾಯಿಲೆ ಜ್ವರದಲ್ಲಿ ಆಗ್ಯಾರ ಜೇರ
ಗುಳಗಿ ಹಾಕಲಾಕ ಗತಿಯಿಲ್ಲ ಏಳು ದಿವಸ ಉಪವಾಸ ಇದ್ರು
ಹೇಳಲಾರದೆ ಅವರ ಘೋಳ ಭಾಳ ಅವಸರ  || ಜೀ ||

ಹೊಟ್ಟಿ ಬಟ್ಟಿದು ಹೈರಾಣ ಕೆಟ್ಟ ತ್ರಾಸ ನಡಿತರೆಣ್ಣ
ಮರ ಮರನೆ ಮರಗ ತಿದ್ರು ಮಕ್ಕಳೆಲ್ಲರ
ತಾಯಿ ತಂದಿ ಶಕ್ತಿ ನಿಂತು ದುಡೆವರಾರು ಇಲ್ಲದಂಗಾತು
ಜೈ ಭೀಮ ಅಳತಾನ ಕುಂತು ಸುರಸಿ ಕಣ್ಣೀರ  || ಜೀ ||

ಇಳುವ
ಶಾಲೆ ಟೈಮು ಬಂದಿತೆಂದು ಉಪವಾಸ ನಡದ ಸಾಲಿಗಿ
ಕೋಮಲ ಮಕ್ಕಳ ಮುಖ ನೋಡಿ ದುಃಖ ಬಂದಿತು ಜನನಿಗಿ
ಮಗು ತಡಿರೆಪ್ಪ ಕಡಾ ಹಿಟ್ಟ ಕೇಳತಿನಿ ಹೋಗಿ ನೆರಿಹೊರಿಗಿ
ಹೊರಗ ಮಳಿ ಬರಗೊಡೋದಿಲ್ಲ ಹೊಚಗಂಡ ಹೋಗ್ಯಾಳ ಕುಂಚಗಿ  || ಜೀ ||

ಅದ್ದನ ಹಿಟ್ಟಕಡಾ ತಂದ ನಾಲ್ಕು ರೊಟ್ಟಿ ಮಾಡ್ಯಾಳ ಲಗುಬೇಗಿ
ಹರಿದು ಹಂಚಿ ಕೊಟ್ಟಿಳ ಮೇಲೆ ಉಪ್ಪ ಸಹಿತ ಇಲ್ಲ ಸಂಗ್ತಿಗಿ
ಒಣರೊಟ್ಟಿ ಎರಡೆರಡ ತುತ್ತ ಮಕ್ಕಳ ತಿಂದ್ರು ಹಸಿವೆಯಾಗಿ
ಆದ್ರ ಜೈ ಭೀಮ ಅಂತಾನ ಹ್ಯಾಂಗ ಬಿಟ್ಟು ತಿನ್ನಲಿ ತಾಯಿಗಿ  || ಜೀ ||

ಕೂಡಪಲ್ಲ
ಅಣಿಹಾಕಿ ತಾಯಮ್ಮಗ ಒಂದು ತುತ್ತು ತಿನಶ್ಯಾನ ಆಗ
ಉಳದ ತುತ್ತ ಉಂಡ ಹೋದ ಶಾಲಿಗಚೌಕ : ೪

ಅಣ್ಣ ತಮ್ಮರು ಹೋಗುವಾಗ ಮಳೆ ಬಹಳ ಹೆಚ್ಚಿಗಾತು
ಗ್ವಾಡಿ ಮರಿಗಿ ನಿಂತ್ರ ಸಹಿತ ಮಳಿ ಜೋರಾತು
ಅಣ್ಣ ಹೇಳಿದ ಭೀಮನ ಮುಂದ ಒಂದೆ ಹರಕ ಛಿತ್ರಿ ನಮದ
ಇಬ್ರು ಅದರ ಆಸರಕ ಹೋದರ ಅನಕೂಲ ಆದಿತ್ತು  || ಜೀ ||
ಹಟವಾದಿ ಭೀಮ ಹಿಂಗ ಸ್ಪಷ್ಟ ಹೇಳಿದ ಹಿರಿ ಅಣ್ಣಗ
ನಿನ್ನ ಛತ್ರಿಲಿ ನೀನೆ ಹೋಗು ಅಂತ ಅಳತಾನ ನಿಂತ
ಬಿಟ್ಟ ಹೋದ ಆನಂದರಾಯ ಮತ್ತಿಷ್ಟ ಮಳಿ ಹೆಚ್ಚಿಗಾತು
ಸಿಡ್ಲ ಮಿಂಚಿನ ಅಬ್ರು ಬಹಳ ಗುಡಗ ಹಿಡದಿತ್ತು  || ಜೀ ||

ತೊಯಿದ ಬಳಿಕ ಅಂಜಿಕಿ ಎದಕ ಹಾಯಿದ ನಡದ ಮಳ್ಯಾಗ ಭೀಮ
ಹೋಗುತನಕ ಶಾಲೆಯ ವೇಳೆ ಹೆಚ್ಚಿಗಾದಿತ್ತು
ತೋಯಿಸಿಕೊಂಡು ಶಾಲೆಗೆ ಹೋಗಿ ಪ್ರವೇಶ ಮಾಡಿ
ಗುರುಗಳಿಗಿ ನಮಸ್ಕರಿಸಿ ನಿಂತಾನಲ್ಲಿ ಕೆಟ್ಟ ತಿಳಿದಿತ್ತು  || ಜೀ ||

ಅಂಬೇಡ್ಕರಗ ಗುರುಗಳಂತಾರ ತೊಯಿಸಿಕೊಂಡು ಬಂದಿ ಭೀಮ
ಅಂತಹದೇನು ಶಾಲೆಯ ಒಳಗ ಮೀರಿ ನಡದಿತ್ತು
ಮನಿಯಿಂದ ಬಟ್ಟೆ ತರಿಸಿ ಇವನ ವ್ಯವಸ್ಥೆ ಸ್ವಂತ ಮಾಡಿ
ಗುರುಗಳು ಇವಗ ಕಾಪಾಡಿದ್ರು ಕರುಣೆ ಹುಟ್ಟಿತು  || ಜೀ ||

ಸಹ್ಯಾಜಿರಾವ್ ಬಡೋದೆಕರ ಮಹಾರಾಜ ಕಡದಿಂದ
ಸಾಹೇಬ್ರ ಸವಾರಿ ಅನಾಯಾಸ ಅಲ್ಲಿಗಿ ಬಂದಿತ್ತು
ಫಳಾದ ಮೇಲೆ ಬರೆದ ಇಟ್ಟ ಪ್ರಶ್ನೆ ಯಾರು ಬಿಡಿಸಲಿಲ್ಲ
ಜೈ ಭೀಮ ಬಿಡಿಸಲೆಂದು ಆಜ್ಞೆ ಆದಿತ್ತು  || ಜೀ ||

ಇಳುವ
ಫಳಾದ ಹಿಂದೆ ಕಪಾಟ ಇತ್ತು ರೊಟ್ಟಿ ಇಡತಿದ್ರು ಹುಡುಗರೆಲ್ಲ
ಫಳಾ ಮುಟ್ಟಿದ ಕೂಡಲೆ ಹುಡುಗರು ಎಬ್ಬಶ್ಯಾರೆ ಗದ್ದಲ  || ಜೀ ||
ಹೊಲ್ಯಾರ ಹುಡುಗ ರೊಟ್ಟಿ ಮುಟ್ಟಿ ಹೊಟ್ಟಿ ಮೇಲೆ ಕೊಟ್ಟ ಕಾಲ
ಎಲ್ಲಾ ರೊಟ್ಟಿ ಬಿಚ್ಚಿ ವೈದು ವಗದಾರ ರೋಡಿನ ಮ್ಯಾಲ  || ಜೀ ||

ನೋಡಿ ಭೀಮ ತಾಪಾಯಿತು ತಪ್ಪ ಹೊತ್ತಕೊಂಡ ತಲಿಮ್ಯಾಲ
ಖೋಡಿ ಇದು ಎಂಥಾ ಕುಲಾನಂದು ಹುಟ್ಟಿಸಿ ಇಟ್ಟ ಕೇವಲ || ಜೀ ||

ಕೂಡಪಲ್ಲ
ಶಾಲೆ ಬಿಟ್ಟು ಮಕ್ಕಳು ಹೋದ್ರು ಅಂಬೇಡ್ಕರ ಗುರುಗಳು ಉಳಿದ್ರು
ಭೀಮಗ ಅಂತಾರ ಇವತ್ತು ನೀ ಯಾಕ ದೌಡ ಬರಲಿಲ್ಲ  || ಜೀ ||
ಏನ ಹೇಳಲಿ ಗುರುದೇವ ನನ್ನ ಸ್ಥಿತಿ ಕೆಟ್ಟ ದೈವ
ನನ್ನ ತಾಯಿಗಿ ಆರಾಮ ಇಲ್ಲ ಮಲಗ್ಯಾಳ ಮನೆಯಲ್ಲ
ಜ್ವರ ಬಂದ್ರು ಕೇಳಲಿಲ್ಲ ಕಡಾ ಹಿಟ್ಟು ತಂದು
ಅಡಗಿ ಮಾಡಿ ಉಣಿಸಿ ಖಳಸ್ಯಾಳ ಗುರುವೆ ಬಡತನದಲ್ಲಿ  || ಜೀ ||

ಕಣ್ಣೀರ ತೆಗದು ಗುರುಗಳಂದ್ರು ಬಡತನ ಅಂದ್ರ ಬಹಳ ಕೆಟ್ಟ
ದಿವಸಾ ಬಂದು ಊಟ ಮಗು ಉಣ್ಣು ನಮ್ಮಲ್ಲಿ
ನಿನ್ನ ವಿದ್ಯಾ ಬುದ್ಧಿ ಕಂಡು ನಿನಗ ಭಕ್ಷಿಸ ಕೊಡುವೆ ಬಂದು
ಅಂಬೇಡ್ಕರ ಅಡ್ಡ ಹೆಸರು ಇಂದಿಗಿ ನಿನಗಿರಲೆಂದು  || ಜೀ ||

ಗುರುಗಳು ಬಕ್ಷಿಸ ಕೊಟ್ಟ ಹೆಸರಾ ಧರಣಿಗಿ ಇಂದಿಗಿ ಉಳಿತು ಅಮರ
ಅಂಬೇಡ್ಕರ ನಾಮ ಪಡದ್ರು ಭೀಮ ಆ ಮೇಲು
ಸ್ಥಿರವಾಗಿ ವಿದ್ಯಾ ಕಲಿತು ಧೈರ್ಯದಿಂದ ಕಾಲ ಕಳಿದ್ರು
ದೇಶದ ಚಿಂತಿ ಮಾಡತಿದ್ರು ತ್ರಿಕಾಲದಲ್ಲಿ  || ಜೀ ||

ಇದೇ ರೀತಿ ಮಳಿಹತ್ತಿ ತೋಯಿಸಿಕೊಂಡ ಶಾಲೆಗೆ ಹೋಗಿ
ತನ್ನ ಗೋಳ ಹೇಳತಿದ್ದ ಗುರುಗಳ ಬಲ್ಲಿ
ಇದೇ ಹೊತ್ತ ಇರುದಿಲ್ಲ ಮಗು ಧೈರ್ಯದಿಂದ ಕಾಲನೂಕು
ತಿದ್ದಿ ಗುರು ಹೇಳತಿದ್ರು ಶಾಂತ ರೀತಿಲಿ  || ಜೀ ||

ಇಳುವ
ಗುರುವೆ ನನ್ನ ತಾಯಿ ಮಾತ್ರ ಇದರಾಗು ಉಳಿಯೋ ಭರೋಸಿಲ್ಲ
ಕರಳು ನಡಗಿಸಿ ಅಳತಾನು ಬಿದ್ದು ಗುರುವಿನ ಪಾದದ ಮೇಲಾ  || ಜೀ ||
ಅಷ್ಟರೊಳಗ ಮನಿದಿಂದ ಒಬ್ಬ ಓಡುವ ಬಂದ ತತ್ಕಾಲ
ಭೀಮ ನಿನ್ನ ತಾಯಿ ದೇಹ ಬಿಟ್ಟಾಳೆಂದು ಶಬ್ದ ಹಾಕಿದ ಕಿವಿಮ್ಯಾಲ  || ಜೀ ||

ಕತ್ತರಿಸಿ ಭೂಮಿಗಿ ಬಿದ್ದಾ ಘಾ ತಾಯಿತು ಮುನಿದಾ ಕೇವಲಾ
ಶಾಂತಿ ಹೇಳಿ ಗುರುಗಳು ಕರದ ತಂದಾರ ಮನಿಗಿ ಆಮೇಲ  || ಜೀ ||
ತಾಯಿ ಸಮಾಧಿ ಕ್ರಿಯಾ ಮುಗಿಸಿ ಜನಾ ಆತ್ರಿ ಬೈಲಿಗಿ ಬೈಲ
ಮುಂಬೈದಾದರೊಳು ಸೋದರತ್ತೆ ಇದ್ದಾಳು ಅಲ್ಲೆ ಮೊದಲ  || ಜೀ ||

ಕೂಡಪಲ್ಲ
ಅಣ್ಣ ಸುಭೇದಾರ ಮತ್ತು ಆನಂದರಾವ ಜೈ ಭೀಮಗ
ಕರಕೊಂಡ ವೈದಾಳ ದಾದರಕ್ಕ ದುಃಖಕ ಅಳತಿಲ್ಲ  || ಜೀ ||         ಚೌಕ : ೬

ಭೀಮನ ಸೋದರತ್ತೆಯ ಆಯಿ ಬಿಳಿ ತಲೆಯ ಮುದಕಿ ಇತ್ತು
ಕ್ಯಾಸ ಬ್ಯಾಗ ಎತಗೋ ಬೇಕಂತಾನ ಆಕೆಯ ಎಲಿಚೀಲ
ಶಿಕ್ಷಣ ಮುಂದೆ ಬಲಿಯಬೇಕಾದ್ರ ರೊಕ್ಕಾ ಯಾರ ಕೊಡತಾರಂತ
ಝಳಕಕ ಕೂತಾಗ ಎತ್ತಿ ಹೊಡದಾ ಚೀಲ ಬಿಡಲಿಲ್ಲ  || ಜೀ ||

ಕಳ್ಳತನ ಮಾಡಬೇಕಾದ್ರು ಅದಕ್ಕೂ ಒಳ್ಳೆದ ಅವನ ದೈವಬೇಕು
ಹೊರಗ ಬಂದು ನೋಡಿ ಭೀಮು ಬಡಕೊಂಡ ಗಲ್ಲ ಗಲ್ಲ
ಹಳೆ ಎರಡು ದುಡ್ಡು ಬಿಳಿ ತಲಿ ಮುದಕಿ ಚೀಲದಾಗ ಇದ್ದು
ಹೊಡಿ ಮಚ್ಚಿಲಿ ದೈವಕಂತ ಅಳತಾನ ತೋಲ  || ಜೀ ||

ಕ್ಲಾಸಮೆಂಟ ಇದ್ದ ಸೂರತದಾಗ ಭರೋಸ ಮಾಡಿ ಭೀಮ ಹೋದ
ಅಡ್ರಾಸ ತಗೊಂಡ ಉಪವಾಸ ಭೇಟ್ಟಿ ಆದ ವಿಧಿ ಲೀಲಾ
ಭೀಮನ ಮುಖ ನೋಡಿ ಗೆಳೆಯ ಕಣ್ಣೀರ ಹಾಕತಾನ
ಡ್ರೆಸ್ ಕೊಡಿಸಿ ಊಟ ಉಪಚಾರ ಮಾಡಿಸಿದ ಆಮೇಲ

ಬಂದ ತಾತ್ಪರ್ಯ ಕೇಳತಾನ ಭೀಮು ಹೀಂಗ ಹೇಳತಾನ
ಪಾಸ್ ಪೋರ್ಟ್‌ ಒಂದು ಕೊಡಿಸು ಗೆಳೆಯ ಆಗು ಶಾಮಿಲ
ಅಮೇರಿಕಾಕ ಹೋಗತಿನಿ ವಿದ್ಯಾ ಕಲ್ತು ಬರ್ತಿನಿ
ರಾಷ್ಟ್ರ ಚಿಂತಿ ಆಗ್ಯಾದ ನನಗ ರಾತ್ರಿ ಹಗಲಾ  || ಜೀ ||

ಒಳ್ಳೆದು ಗೆಳೆಯ ಒಂದು ಬಾರ ಇರು ಆ ಮೇಲ
ಹಣ ಬರತಾದ ನಂದು ಬೆಳಗಾಗಿ ಎದ್ರು ಎಂಥ ಕಾಡುವಕಾಲ
ಬಾಂಬೆದಿಂದ ಫೋನ ಬಂತು ನಿನ್ನ ತಂದಿ ಸಾಯಿತಾನಂತ
ನಿನಗಾಗಿ  ಜೀವ ಹಿಡದಾನ ಭೀಮ ಬಾರೋ ತತ್ಕಾಲ  || ಜೀ ||

ಇಳುವ
ಭೀಮನ ಗೆಳೆಯ ಹೇಳತಾನ ಭೀಮ ನಿನ್ನ ಟೈಮ ಸರಿಯಿಲ್ಲ
ನಿಮ್ಮ ತಂದಿ ಸಿಗುದಿಲ್ಲ ನಡಿ ಟಿಕಿಟ ಕೊಡಿಸುವೆ ತತ್ಕಾಲ  || ಜೀ ||
ಟಿಕಿಟಿ ಕೊಡಿಸಿ ಗೆಳೆಯ ಹೋದ ಮನದಾಗ ಭೀಮನ ಹಂಬಲ
ಅಪ್ಪಗ ಪೇಡೆ ವೈಯಿಬೇಕಂತ ಹೋದ ದೂರಿತ್ತು ಹೋಟಲ

ತಿರುಗಿ ಬರೋದ ರೊಳಗ ಗಾಡಿಹೋತು ಬಿದ್ದ ಅಳತಾನ ಭೂಮಿಮ್ಯಾಲ
ಟಿಕಿಟ ರಿಟನ್ ಮಾಡಬೇಕಂತ ಇಷ್ಟು ಸಹಿತ ತಲಿ ನಡಿಲಿಲ್ಲ
ರೈಲ್ವೆ ಹಳಿ ಹಿಡಿದು ಓಡತಾನ ಎದದ್ಮೂರು ದಿನ ಬರೆಗಾಲ
ಏನು ಕಷ್ಟಾಗಿರಬೇಕು ಆ ಕಷ್ಟ ದೇವರೆ ಬಲ್ಲ

ಕೂಡಪಲ್ಲಿ
ಭೀಮ ಬಂದು ತಂದಿ ಬಾಯಾಗ ಕೆನೆ ಹಾಲ ಹಾಕಿದಾಗ
ರಾಮಜಿ ಸುಭೇದಾರನ ಪ್ರಾಣ ಹೋಯಿತು ತತ್ಕಾಲ  || ಜೀ ||      ಚೌಕ : ೭

ಪಿತನ ಅಗಲಿದ ಬ್ರಾಂತಿದಿಂದ ಭೀಮ ಅನ್ನ ಬಿಟ್ಟು ಬಿದ್ದ
ಸೈಯಾಜಿರಾವ ಮಹಾರಾಜ ಈ ಸುದ್ದಿ ಕೇಳಿದರು
ರಾಮಜಿ ಮಗನ ಕರಕೊಂಡ ಬರ‍್ರೆಂತ ಸಿಫಾಯಿ ಕೊಟ್ಟ ಕಳಶ್ಯಾರ ತುರ್ತು
ಜೈ ಭೀಮ ಹೋಗಿದರಬಾರಕ ಹಾಜರಾಗಿದರು  || ಜೀ ||

ಏನುಬೇಕೋ ತಮ್ಮ ಅಂತ ಮಹಾರಾಜರು ಕೇಳ್ಯಾರ ಸ್ವಂತ
ಅಮೇರಿಕದ ಐದು ವರ್ಷದ ಪಾಸ್‌ಪೋರ್ಟ ಬೇಡಿದರು
ಅಮೇರಿಕಾಕ ಹೋಗಿ ಬಂದ್ರ ಹೊರಳಿ ಬಂದು ಏನು ಮಾಡತಿ
ಸಯ್ಯಾಜಿ ರಾವ್ ಬಡೋದೆಕರ ಪ್ರಶ್ನೆ ಕೇಳಿದರು  || ಜೀ ||

ಪೇಶ್ವೆಯರ ಕಾಲಾಗ ಹೋಗಿ ನಮ್ಮ ಭಾರತ ಸಿಗಿ ಬಿದ್ದಾದ
ಬಹಳ ತ್ರಾಸ ಕೊಟ್ಟಾರ ದೇಶಕ ಮಂಗ್ಯಾ ಬ್ರಿಟಿಷರು
ಕಾನೂನ ಮಂತ್ರಿಯ ಕೋರ್ಸಕಲ್ತು ಕಾನೂನ ಗ್ರಂಥ ಬರೆದು
ನನ್ನ ದೇಶಕ್ಕಾಗಿ ಹೋರಾಡುವೆನೆಂದು ಉತ್ತರ ನೀಡಿದರು  || ಜೀ ||

ಪರವೆ ಇಲ್ಲ ನಿನ್ನ ಉತ್ರ ಪರಮ ಸಂತೋಷವೆಂದು
ಐದು ವರ್ಷದ ಪಾಸ ಪೋರ್ಟ ತೆಗೆದು ಕಳಸಿದರೂ
ಅಮೇರಿಕದ ಶಿಕ್ಷಣದಲ್ಲಿ ಪ್ರಥಮ ನಂಬರ ಫಾಸ ಆಗಿ
ಡಾಕ್ಟರ ಅಂಬೇಡ್ಕರ ಎಂದು ಬಿರ್ದ ಪಡದಾರು  || ಜೀ ||

ಕಾನೂನ ಪೂರ್ತಿ ಎಲ್ಲಾ ಅಂತು ಐದು ವರ್ಷ ಸರಿಯಾಗಿ ಕಲಿತು
ಹೊರಳಿ ಇಂಗ್ಲಂಡಕ್ಕ ಮೂರು ವರ್ಷ ಹೋಗಿದ್ದರೂ
ಮೌಲಾನ ಅಜಾದ ಮತ್ತು ಜವಾಹರಲಾಲ ನೆಹರು ಟಿಳಕ
ಅಂಬೇಡ್ಕರ ನಾಲ್ವರು ಒಂದೇ ಶಾಲೆಗೆ ಇದ್ದರು  || ಜೀ ||

ಇಳುವ
ಅಲ್ಲೆ ಕಾಯ್ದೆ ಫಾಸ ಮಾಡಿ ಕಾನೂನೆಲ್ಲ ಕಲತಿದಾರು
ಅದರಲ್ಲಿ ಮೂವರು ಮಹಾತ್ಮ ಗಾಂಧಿಗಿ ಹೇಳ್ಯಾರ
ಅಗಷ್ಟ ಹದಿನೈದಕ ಬ್ರಿಟೀಷರಿಗಿ ಗೆಟಾವುಟಿ ಅಂದಾಗ
ಬ್ರಿಟಿಷರು ಚಳುವಳಿಗಿ ಅಂಜಿ ಓಡ್ಯಾರ
ಇಂಥ ಕಷ್ಟ ಕಾಲದಲ್ಲಿ ಕಾನೂನ ಬರದು ಜೈ ಭೀಮ ಡಾಕ್ಟರ
ರಾಜೇಂದ್ರ ಪ್ರಸಾದ ಇದಕ ಆಶ್ರಯದಾತ ಗಂಬೀರ

ಇಂದಿಗಿ ಪೂಜ್ಯ ಮಹಾತ್ಮರು ಅನಸಿ ಭಾರತದಲ್ಲಿ ಮೆರಿತಾರ
ನಾವು ಎಂದಿಗಿ ಮರಿಬಾರದು ಇಂಥ ಮಹಾತ್ಮರ ಉಪಕಾರ

ಕೂಡಪಲ್ಲ
ಅಕ್ಕಲಕೋಟ ತಾಲೂಕದಾಗ ಮಿಕ್ಕಿದ ಅಂದೇವಾಡಿಜಾಗ
ಸೌಖ್ಯ ಗೈಬಿಶಾನ ಕವಿತಾ ಸಕ್ಕರಿ ಹಾಲ  || ಜೀ ||           ಚೌಕ : ೮