ದಲಿತ ಖಣಿ ದಲಿತ ಧ್ವನಿ ದಲಿತ ಶ್ರೇಷ್ಟಾದ ತೆನಿ
ಹುಸಿ ಆಗಲಿಲ್ಲ ಅಂಬೇಡ್ಕರರ ವಾಣಿಯೂ
ಅಸ್ಪೃಶ್ಯತೆಯೊಳು ತೇಲದುಕಂಡು ಭಾರತ ಧರಣಿಯೂ
ಶೋಷಣೆ ನಾಶ ಮಾಡದಕ್ಕಾಗಿ ಹಿಡಿದ ಲೆಕ್ಕಣಿಯೂ
ಬುದ್ಧ ಬಸವನ ನೀತಿಯಿಂದ ಸಂವಿಧಾನ ಗ್ರಂಥ ಬರದು ತಂದ
ಅಖಂಡ ಭಾರತದೊಳು ಅಂಬೇಡ್ಕರರ ಸ್ಮರಣಿಯೂ
ದಲಿತರಿಗಿ ಸಿಗುವ ಹಕ್ಕು ತೆರೆದು ಇಟ್ಟ ಭಂಗಾರ ಭರಣಿಯೂ  || ಗೀ ಗೀ ||

ದಲಿತ ಪದದ ಮೂಲ ಅರ್ಥ ತಿಳಿಸಿ ಹಾಡುವೆ ಭಾವಾರ್ಥ
ಕಂಬಾರ ಕುಂಬಾರ ಕಬ್ಬಲಗ್ಯಾರು ತಿಳಿರಿ ಗೊಲ್ಲರು
ಹಡಪದ ಹಟಗಾರ ಡೊಂಬರು ಲಮಾಣಿ ಕೊಂಚ ಕೊರವಿ ಪೋಚಾರ
ಇದರೊಳು ಮತ್ತೊಂದು ಕೂಡಿಸುವೆನು ಹರಿಜರ ಗಿರಿಜನರು
ಅಟ್ರಾ ಪಂಗಡ ಜಾತಿಗಿವರು ಶಾಣಾಂವ ಕೂಳಿ ಮಾಡಿ ಇಟ್ರು
ಹಿಂದುಳಿದವರಲ್ಲಿ ಹುಟ್ಟಿ ಬಂದ ಅಂಬೇಡ್ಕರರು
ರಾಮ ಜೀ ಭೀಮಬಾಯಿ ಪ್ರೀತಿಯ ಕಂದ ರತ್ನದ ಹರಳರು  || ಗೀ  ಗೀ  ||

೧೮೯೧ ರಂದು ಏಪ್ರಿಲ್ ೧೪ ರಂದು ಮಹಾರಾಷ್ಟ್ರದ ಮಹು ಎಂಬಲ್ಲಿ ಹುಟ್ಯಾರು
ಗುರುವಿನ ನಾಮತಾಳಿ ಸೃಷ್ಠಿಯೊಳು ಕೀರ್ತಿಗಿ ಮುಟ್ಯಾರು
ಅಗಣಿತ ಡಿಗ್ರಿ ಪಡೆದು ಶಾಣೆತನ ಆತ್ಮದಿ ಒಟ್ಟ್ಯಾರು
ಬಡವರ ದುಃಖ ದುಗಡ ಗಳಗಿ ಬರೆದು ಇಟ್ಟಿ ತನ್ನ ಬಳಿಗಿ
ಕ್ರೋಧ ಮಾಡಿ ಬ್ರಾಹ್ಮರ ಸಂಹಿತೆ ತಂದು ಸುಟ್ಟಾರು
ಕಷ್ಟ ತಿಂದವರು ಹೋದ್ರು ಮುಂದಿನವರಿಗಿ ಸುಖ ಕೊಟ್ಟಾರು  || ಗೀ  ಗೀ  ||

ಉತ್ತರಾರ್ಧ ಪದ್ಯದಲ್ಲಿ ಬಹಳ ವಿಷಯ ಬರುವುದರಿಂದ
ಸಂಕ್ಷಿಪ್ತ ವಾಕ್ಯ ಕೂಡಿಸಿ ಕವಿ ಬರದಾರು
ಪ್ರಾಚೀನ ಇಂಡಿಯಾದ ವಾಣಿಜ್ಯ ವಿಷಯಕ ಎಂ.ಎ. ಪದವಿ ಪಡದಾರು
ಅರ್ಥಶಾಸ್ತ್ರದ ಅನುಭವ ಅನುಭಾವಿ ಮುಂದ ತಿಳಿಸಿದರು
ಭಾರತದ ರಾಷ್ಟ್ರೀಯ ಲಾಭಾಂಶ ಬರೆದು ಕೊಟ್ಟ ಸಾರಾಂಶ
ಶ್ರೇಷ್ಠ ಶೋಧನೆಗಾಗಿ ಪಿಎಚ್‌.ಡಿ. ಮಾಡಿದರು
ಐತಿಹಾಸಿಕ ಅಧ್ಯಯನದಿಂದ ಡಾಕ್ಟರೇಟ ಆದರು  || ಗೀ ||

ದುಮಾಲಿ
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಪೊಲಿಟಿಕಲ್ ಸೈನ್ಸ್
ಹರುಷ ಆತು ಮನ ಸೇರಿರು ಕಾಲೇಜಕ
ಬೆಲೆ ಮಾಡವರಿಲ್ಲ ನಾಲೇಜಕ  || ಗೀ  ಗೀ ||

ಪತ್ರ ಬರೆದ ಸಯ್ಯಾಜಿರಾವ್ ಬರ‍್ರಿ ಭೀಮರಾವ
ಮಾಡ್ರಿ ದೇಶ ಸೇವ ಕುಂತರಿ ಹೊರಗ್ಯಾಕ
ಕಾರ್ಯದರ್ಶಿಯಾಗಿ ಮಾಡಿರು ನೇಮಕ  || ಗೀ  ಗೀ ||

ಅಪ್ರತಿಮ ಪದವಿಗಳಿಸಿ ಸಂಘಟನೆ ಬೆಳಸಿ
ದಲಿತರಿಗಿ ತಿಳಿಸಿ ಮಾಡಿದರು ಬಹು ಸುಖ
ಇಂಥಾದು ಕೊಟ್ಟ ಮೇಲೆ ಇನ್ನೇನೂ ಬೇಕ  || ಗೀ  ಗೀ ||

ಏರ
ಭಾರತದ ವೈದಿಕ ಸಮಾಜದಲ್ಲಿ ಭೀಮಜಿಗಿ ಮರ್ಯಾದಿ ಸಿಗಲಿಲ್ಲ
ಕಚೇರಿ ನೆಲಕ ಹಾಸಿದ ಕಾರಪೆಟ್ಟ ತೆಗದಾರು ಸುತ್ತಿಯೂ
ಅವರ ಪಾದ ಹತಿದ್ರ ಮೈಲಿಗಿ ಆತೆಂಬೋ ಇಂಥ ನೀತಿಯೂ
ಕಾಗದ ಪತ್ರಗಳ ಮೇಜಿನ ಮೇಲಿಂದ ಒಗದಾರ ಎತ್ತಿಯೂ  || ಗೀ || ಚೌಕ : ೧

ಹಸಿದು ಹೋಟೆಲ್‌ನಲ್ಲಿ ಹೋದ್ರ ಕಪ್ ಗ್ಲಾಸ್ ಬ್ಯಾರೆ ಇದ್ದು
ಕುರ್ಚಿ ಮೇಲೆ ಕೂತು ತಿನ್ನದಕ ಅವರಿಗಿ ಭಾಗಿಲ್ಲ
ಕಾಫಿ ತಿಂಡಿ ಸೇವಿಸೋದಕ ಸ್ವಚ್ಛ ಜಾಗ ಸಿಕ್ಕಿಲ್ಲ
ಕರುಣಾ ಜನಕ ಅಂಬೇಡ್ಕರರಿಗಿ ಬಂದ ಕಷ್ಟದ ಲೆಕ್ಕಿಲ್ಲ
ಹಲವು ಅಪಮಾನ ತಿಂದು ಮುಂಬೈ ಕಾಲೇಜಿನಲ್ಲಿ ಬಂದು
ರಾಜ್ಯಶಾಸ್ತ್ರದ ಅಧ್ಯಾಪಕ ಆಗಿರು ಗೋಕಿಲ
ಸ್ವಲ್ಪ ಸೇವೆ ಸಲ್ಲಿಸಿ ಹೆಚ್ಚಿನ ವಿದ್ಯಾಕ ಲಂಡನ್‌ಕ್ಕ ಹೊಕ್ಕಲ  || ಗೀ  ಗೀ ||

ಕೊಲ್ಲಾಪುರದ ಮಹಾರಾಜ ಅಂದ್ರು ಸಹಾಯ ಮಾಡಲಿಲ್ಲ ಮುಂದೆ ಬಂದ್ರು
ಎರಡು ಕಾಲೇಜಿನಲ್ಲಿ ಸೇರಿ ಪ್ರವೇಶ ಪಡದರು
ಬ್ರಿಟೀಷ ಭಾರತದಲ್ಲಿ ರೊಕ್ಕಿನ ವಿಷಯಕ ಪ್ರಬಂಧ ತಿಳಿಸಿ ಬಿಎಸ್ಸಿ ಪದವಿ ಗಳಿಸಿ
೧೯೨೩ ಕೀರ್ತಿಲಿ ಮೆರದಲ್ಲ
ಇಷ್ಟಾದ್ರು ದಲಿತರ ಚಳವಳಿ ಕರೆ ಬಂದಾಗ ಮರ್ತಿಲ್ಲ  || ಗೀ ||

ಅಂಬೇಡ್ಕರರ ಅರಿವಿನ ವಾಣಿ ಸಪ್ತ ದ್ವೀಪಗಳಲಿ ಒಂದು
ಮೇಲ ಕೀಳ ಎಂಬ ಬೇಧ ಕಿತ್ತಿ ತೆಗದೆಲ್ಲ
ಅನೇಕ ಸಂಘ ಕಟ್ಟಿ ರಾಜಕೀಯ ಪಕ್ಷಕ ಸೇರಿದ ಮುದ್ದಲ
ಅಂದಿನ ಪತ್ರಿಕೆಗಳು ದಲಿತರಿಗೆಲ್ಲ ಮಾಡಿವು ಗದ್ದಲ
ನಾನಾ ತರಹ ಹೋರಾಟ ಮಾಡಸಿ ಮೂಕ ನಾಯಕ ಪತ್ರಿಕೆ ನಡೆಸಿ
ಹಿಂದುಳಿದವರಿಗಿ ಅನಕೂಲ ಮಾಡಿ ಕೊಟ್ಟಿದ ಸುಳ್ಳಲ್ಲ
ದಲಿತರಿಗಿ ಆದ ಕಷ್ಟ ಮುಚ್ಚಿಡದಕ ನಾ ಏನು ಕಳ್ಳಲ್ಲ  ||  ಗೀ  ಗೀ ||

ಮಹಾರಾಷ್ಟ್ರದ ಕೋಲಾಬ್ ಜಿಲ್ಲೆ ಮಹಾಡ್ ಎಂಬ ಗ್ರಾಮದಲ್ಲಿ
ಸಾರ್ವಜನಿಕ ಕೆರಿ ಇದ್ದಿದು ಗೊತ್ತ ತಪಶೀಲ
ಈ ಕೆರಿ ನೀರ ದಲಿತರು ಹೋಗಿ ಮುಟ್ಟಕ ಬಾಗಿಲ್ಲ
ಸ್ವತ ದಲಿತರು ಹೊಡ್ಡ ಕೆರಿ ಏರಾನವರಿಗಿ ನೀಗಿಲ್ಲ
ನಾವು ತಗದ ಕೆರಿ ನೀರ ನಮಗಿಲ್ಲ ಕುಡಿಯುವ ಅಧಿಕಾರ
ಅಂಬೇಡ್ಕರರು ಸ್ವತಃ ನಿಂತು ಮಾಡಿರು ಮುಖಾಬಲ
ನಾಸಿಕ್ ಕಾಳಾರಾಮ ದೇವಸ್ಥಾನದ ಚಳವಳಿ ಕಾಬಿಲ  || ಗೀ  ಗೀ ||

ದುಮಾಲಿ
ನಮ್ಮ ವಿಮೋಚನೆಯು ನಮ್ಮ ಲಿಂದ
ಸ್ವಯಂ ಸಹಾಯದಿಂದ ಸ್ವಾಭಿಮಾನದಿಂದ
ನಡಿರಿ ಎಲ್ಲರು ಭಾರತದ ಮೂಲಿ ಮೂಲಿ ಇದ್ದ ದಲಿತರು  ||  ಗೀ  ಗೀ  ||

ಊರ ಉಡಗಿ ನಮ್ಮಲಿಂದ ಸಾಪ ಇವರಿಗಿಲ್ಲ ನೆಪ್ಪು
ಮೇದರರ ಸೋಪಾ ನೆನದವರು ಯಾರು
ಚಪ್ಪಲಿ ಹೊಲ್ದ ಉಪಕಾರ ಕಳಿಯುವವರು  || ಗೀ  ಗೀ ||

ಒಡ್ಡರು ಕುಂಬಾರು ಕಲ್ಲ ಗಡಗಿ ಕೊಟ್ಟು
ಅವರಿಗಿ ಮರ್ತ ಬಿಟ್ರು ಕೀತಜಾತಿ ಅಂತ ತಿಳಿದ ಅಧಮರು
ಹಗಲ ಮನಿ ಮುರಿಯುವ ಚುಮ್ಮರು  || ಗೀ  ಗೀ ||

ಏರ
ಸೈಮನ್ ಆಯೋಗ ಭಾರತ ದೇಶಕ ಭೇಟಿ ನೀಡಿತು ನೋಡಿರೆಣ್ಣ
ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿತು ಅಜ್ಞಾನಿಯೂ
ಮುಂಬಯಿ ಎಂ.ಎಲ್.ಸಿ.ಡಾ. ಅಂಬೇಡ್ಕರ ಜ್ಞಾನಿಯೂ
ಸದ್ಯ ತಿಳಿಸುವೆ ನಾನು ಅಜ್ಞಾನಿಯೂ  || ಗೀ  ಗೀ ||        ಚೌಕ : ೨

ದಲಿತರೊಳು ಒಬ್ಬ ವ್ಯಕ್ತಿ ಮುಂದೆ ಬಂದಿದ್ದಕ್ಕರೆಣ್ಣ
ಹೆಡಕ ಒಗದ ಕೋಳಿಯಂತೆ ಆಗ್ಯಾರ ಸಣ್ಣ
ಬಹಳ ದಿವಸ ಮೆರದಾಡಿದ್ದು ಮಂದಿದ್ದು ಬದಲಾಯಿತು ಬಣ್ಣ
ದಲಿತ  ಜೀವಿಗಳಿಗೆ ಜೈ ಭೀಮ ಸ್ವತಹ ಮಾಡ್ಯಾರ ಶುದ್ದಣ್ಣ
ದೇಶಕ್ಕಾಗಿ ಬೇಡಿದ ನ್ಯಾಯ ದೇಶಕ್ಕಾಗಿ ಹಾಳಾತು ದೇಹ
ಭಾರತಕ್ಕಾಗಿ ಹುಟ್ಟಿ ಬಂದ ಪುಣ್ಯ ಪುರುಷಣ್ಣ
ಹುಟ್ಟಿದ ದಿವಸ ಹಕ್ಕಿ ಪಿಕ್ಕಿ ದಲಿತರಿಗಿ ಬಹಳ ಹರುಷಣ್ಣ  ||  ಗೀ  ಗೀ ||

ಹದಿನಾಲ್ಕು ಮಂದಿ ಕಮೀಟಿ ರಚಿಸಿ ಸಂವಿಧಾನ ಬರಿಯೋದಕ್ಕಾಗಿ ತಾನು
ಅಂಬೇಡ್ಕರರು ಪಟ್ಟಕಷ್ಟ ತಮಗ ಗೊತ್ತಣ್ಣ
ಅನಾರೋಗ್ಯದಿಂದ ಒಬ್ಬಬ್ಬರು ಆಗ್ಯಾರ ಮೆತ್ತಣ್ಣ
ಎಲ್ಲಾ ಸದಸ್ಯರು ಹೊಂಟು ಹೋದ್ರು ಅಂಬೇಡ್ಕರರು ಸಿಕ್ಕಿಬಿದ್ರು
ಶ್ರೇಷ್ಠ ರಾಷ್ಟ್ರಕ್ಕಾಗಿ ಕಷ್ಟಪಟ್ಟ ಮಾತಣ್ಣ
ಸಂವಿಧಾನ ಬರಿಯೋದ್ರಾಗ ದಲಿತರ ಕಷ್ಟಕ ನೊಂದು ಅತ್ತಣ್ಣ  || ಗೀ  ಗೀ ||

ಲೋಕಸಭೆ ರಾಜ್ಯಸಭಾ ಸದಸ್ಯರಾಗಿ ದೇಶ ಸೇವೆ ಮಾಡಿದದ್ದು
ತರ್ಕ ಇಡರೆಣ್ಣ
ಅವರು ಹಾಕಿಕೊಟ್ಟ ಮಾರ್ಗದಲ್ಲಿ ನೀವು ನಡಿರೆಣ್ಣ
ನಿಮ್ಮ ಹಕ್ಕಿಗಾಗಿ ಹಗಲು ಇರುಳು ಶ್ರಮದಿ ದುಡಿರೆಣ್ಣ
ಎಲ್ಲದರಲ್ಲಿ ಮೀಸಲಾತಿ ದಲಿತರಿಗಿ ಅದರಲ್ಲಿ ಪಾಲೈತಿ
ಚುನಾವಣೆಯಲ್ಲಿ ರಿಜರ‍್ವ ಸೀಟ ಇಟ್ಟಿದ್ದು ತಿಳಿರೆಣ್ಣ
ಹಿಂದಿನಂತೆ ಊರ ಉಡಗಿ ಸಾಪ್ ಮಾಡಿದು ಬಿಡರೆಣ್ಣ  || ಗೀ  ಗೀ ||

ಏರ
ಧರೆಯೊಳು ಹಿರೇ ಸಾವಳಗಿ ಮೆರೆಯುವ ಶಿವಯೋಗಿ
ಕಲ್ಯಾಣ ಕಟ್ಟಿ ಸಿದ್ದನ ಮಠದ ಸನಿಯೂ
ಮಹ್ಮದನ ಕವಿತಾ ಮುತ್ತಿನ ಗೊನಿಯು
ಹಂಗರಗಿ ವೆಂಕಟೇಶನ ಕವಿ
ಅಂಗರದ ಗೊನಿಯು  || ಗೀ  ಗೀ ||     ಚೌಕ : ೩