ಬುದ್ಧಿವಂತರ ಮುಂದ ತಿದ್ದಿ ಪೇಳುವೆನು ವೃದ್ಧ ಶರಣರ ಪ್ರಕರಣ ||
ಶುದ್ಧ ಪದ್ಯದ ಅಧ್ಯಾಯ ತಿಳಿದವ ಪೂರ್ಣ || ಅಧ್ಯಾಯ ತಿಳಿಯಲಾರದವ ಗಾರ್ದಭಕೋಣ ||
ಶುದ್ಧ ಮನದಿಂದ ಅಧ್ಯಾಯ ಕೇಳಿದರೆ ಉದ್ಧಾರಾದುವೋ ತ್ರಿಕರಣ || ಜೀ ||

ಅರಳಗುಂಡಗಿ ಅಣ್ಣ ಹಣಮಂತ್ರಾಯನ ಉದರದಿ ಶರಣರು ಆಗಿರು ನಿರ್ಮಾಣ ||
ಸಂಗಮ್ಮ ಅವರ ತಾಯಿ ನಾಮಕರಣ  || ಆದಯ್ಯ ಮಡಿಯಮ್ಮನ ಸಾಕು ತರುಣ ||
ಅರಕೇರಿ ಗುರು ಮರುಳಾರಾಧ್ಯರ ಮೇರೆಗೆ ಬ್ರಹ್ಮಪೂರಕ ಮಾಡಿರು ಪ್ರಯಾಣ ||ಜೀ ||

ಹಾರುಗೇರಿ ಗೌಡ ದೊಡ್ಡಪ್ಪರ ಮನೆಯಲ್ಲಿ ಶರಣರು ಮಾಡಿದ್ದು ಕೇಳಿರಿ ಪೂರ್ಣ ||
ಸರಿಯಾಗಿ ಕೇಳಿದ್ರ ತಿಳಿತೈತರೆಣ್ಣ ತಿಳಿಯಲಾರದವ ಕಿಂವಚುವುದೆ ಹೂರ್ಣ ||
ಹುಟ್ಟು ಬಂಜಾರ ಹೊಟ್ಟಿಲಿ ಸಂತಾನ ಖಟ್ಟ ಕರುಡರಿಗಿ ಕೊಟ್ಟಿದ್ದ ಕಣ್ಣ ||ಜಿ ||

ಲಾಕೋ ಮೂಕರು ಎದುರಿಗಿ ಬಂದರು ಮಾತಾಡಸಿರು ಠೊಕ ಅದೇ ಕ್ಷಣ ||
ಶರಣರ ವರ್ಣ ತಿಳಿದವ ಪೂರ್ಣ ಸಂಪತ್ತಿ ಸಂತತಿ ||
ವದಂತಿಯಲಿ ಒಂದೇ ನಾಲಗಿಯಲಿ ತಿಳಿಯದು ವರ್ಣ || ಜೀ ||

ದುಮಾಲಿ
ಪೂರ್ಣ ಶರಣರ ಅವತಾರ ಧರಣಿಯೊಳು ಪ್ರಚಾರ ಕ್ವಾಣಿನಂತ ಜನರಿಗಿ ಆಶ್ಚರ್ಯ ||
ಫಾಲ್ಗುಣ ಹುಣ್ಣವಿಗಿ ಹತ್ತೆಂಟು ಹುಡುಗರು ಕೂಡ್ಯಾರ ಕೂಡಿ ಮೋಜಿಲೆ ಆಟ ಹೂಡ್ಯಾರ ||
ಒಬ್ಬ ತರುಣ ಹುಡುಗಗ ಹೆಣದ ಸೋಂಗ ಮಾಡ್ಯಾರ ಓಣ್ಯಾಗ ಕುಂದರಿಸಿ ಆಡ್ಯಾರ || ಜೀ ||
ಸತ್ತವನಿಗಿ ಎಬ್ಬಿಸಿರೆಂದು ಶರಣರಿಗಿ ಕಾಡ್ಯಾರ || ಸಾಧು ಶರಣರು ಹೀಂಗ ಆಡ್ಯಾರ || ಜೀ ||

ಪ್ರಾಸ ನುಡಿ
ವಿದ್ಯಾಹೀನರಾಗಿ ಅಶುದ್ಧ ನುಡಿದಿದರಿಂದ ಇದ್ದಕ್ಕಿದ್ದಂತೆ ಮಾಡಿದ ಶರಣ ||
ಸತ್ತವನಿಗಿ ಹೊತ್ಯಾಕ ತಂದಿರಿ ಒಣ || ಸತ್ತ ಕತ್ತಿಗಿ ಹೊತ್ತು ಒಯ್ದು ಮಾಡಿರಿ ಮಣ್ಣ ||
ಶುದ್ಧ ಮನದಿಂದ ಅಧ್ಯಾಯ ಕೇಳಿದ್ರ ಉದ್ಧಾರಾದವು ತ್ರಿಕರಣ  || ಜೀ ||    ಚೌಕ : ೧

ಸತ್ತವನ ಹೆಂಡತಿ ಅತ್ತು ಬಂಡ ಮಾಡಿ ಹೇಳಿಳು ಶರಣ ಪುಂಡರಿಗ ||
ಹೆಂಡಿ ಬಡಿದಂಗಾಯ್ತು ತೊಂಡಲ ದಂಡೀಗ || ಈ ಮಾತು ಬಂದೈತಿ ಹೊಲಬಂಡೀಗ ||
ನಿತ್ಯ ನಿರ್ಮಲಕ ಶರಣರೆ ಮಾತು ಕತೆಯಿಲ್ಲದೆ ಮರಣಾಗ್ಯಾದ ನನಗಂಡಗ ||ಜೀ ||

ಮುತ್ತೈದಿ ಶಾನ್ ಕೊಟ್ಟು ಕಾಪಾಡು ಶರಣೆಂದು ಬಿದ್ದೀಳು ಶರಣರ ಚರಣೀಗ ||
ಶರಣರೆ ಅಂತಕರಣ ಮಾಡಿರು ಈ ತರುಣಿಗ ಬಿಡಗಡೆ ಇಲ್ಲದೆ ನಿಂತೆನು ನಿಮ್ಮ ಸ್ಮರಣೀಗ ||
ತ್ರಾಯಿ ತ್ರಾಯಿ ಪಾಯಿ ಮಹಂಗಿರಿವರನೆಂದು ಹಣಿ ಒಯ್ದು ಹಚ್ಚೀಳು ಚರಣೀಗ ||ಜೀ ||

ಹೊತ್ತು ತಂದಿರುವ ಕತ್ತಿ ಸೂಳಿ ಮಕ್ಕಳು ಹೇಳಿದ್ರು ಉತ್ತಮ ಹುಡುಗಿದ್ದ ಓಣ್ಯಾಗ ||
ಅಗ್ರಗಣ್ಯ ಇದ್ದ ಸಂಸಾರದಾಗ ಸತ್ತವಂಗ ಹೊತ್ತು ತಂದಿವಿ ಅವಸರದಾಗ ||
ಪ್ರಾಣ ಇವರಿಗಿ ಪಡಿಸಲಿ ಶರಣ ಹ್ಯಾಂಗೊಯ್ದು ಹಾಕೋನು ಮಣ್ಣಗ ||ಜೀ ||

ಕಪಟ ಕೃತ್ಯ ಎಂದು ದಿಟ್ಟ ಶರಣರು ಮುಟ್ಟ ತುಂಬಿ ಕೊಂಡಿರು ಕಣ್ಣಾಗ ||
ಝಟ್ಟನೆ ಹಸ್ತ ಇಟ್ಟಿರು ಹೊಟಿ ಮ್ಯಾಗ ದುಷ್ಟ ಅಷ್ಟೊತ್ತಿಗೆ ಆಗಿದ ತಣ್ಣಗ ||
ಶರೀರ ಧರಿಗಳು ಶರೀರ ಬಿಟ್ಟು ಸರಳ ಕೂಡುವರು ಮಣ್ಣಾಗ ||

ದುಮಾಲಿ
ಶರಣರು ಟೊಣ್ಯಾರಿಗಿ ಒಯ್ದು ಮಾಡಿರಿ ಇವನ ಮಣ್ಣ ||
ಇವರು ಕ್ವಾಣಿನಂತೆ ಹಾಕಿರು ಗೋಣ  || ಜೀ ||
ಶರಣ ಶ್ಯಾಣ್ಯಾ ಅಂತ ತಿಳಿದಿದ್ದೇವು ಶರಣನ ಬಲ್ಲಿ ಇಲ್ಲಹೂರ್ಣ ||
ಶರಣರ ಕಾರಣ ತಿಳಕೊಂಡೆವು ಪೂರ್ಣ || ಜೀ ||
ಹೆಣದ ಹೆಣತಿಯಾದ ಹುಡುಗಂದು ಹಾರಿತ್ತು ಹರ್ಣ ||
ಹೊರಳಿ ಶರಣಂದು ಹಿಡಿದ ಚರಣ || ಜೀ ||
ಶರಣ ತರುಣಿಗಿ ಹೇಳಿರು ಹಣಿಬಾರದ ಪ್ರಯಾಣ
ಯಾರ ಸ್ವತಂತ್ರ ಇಲ್ಲ ಜನನ ಮರಣ  || ಜೀ ||

ಪ್ರಾಸ ನುಡಿ
ಅಬದ್ಧರು ಕೂಡಿಕೊಂಡು ಸದ್ದೆ ಹೆಣ ಹೊತ್ತುಕೊಂಡು ತಿಳಿದು ನಡದಿರು ಶರಣರ ತ್ರಾಣ ||
ಹೋಗಿ ಮುಟ್ಟಿದರು ಹೊತ್ತು ತಂದ ಠಾಣ ಏಳೆಂದು ಎಬ್ಬಿಸಿರು ಹೋಗಿತ್ತು ಪ್ರಾಣ ||
ಶುದ್ಧ ಮನದಿಂದ ಅಧ್ಯಾಯ ಕೇಳಿದ್ರ ಉದ್ಧಾರಾದವು ತ್ರೀಕರಣ ಚೀ ||       ಚೌಕ ೨

ಹ್ಯಾಗಿಗಳು ಹೊತ್ತುಕೊಂಡು ಹಿಗ್ಗಿನಾಗೆ ಹೋಗಿರು ಕೂಗಿ ಎಬ್ಬಿಸಿದರು ಆಗಿದ ಗಪ್ಪ ||
ಇದು ಎಂತಹದು ಬಂತೋ ತಾರೀಫ ನಾವು ಶರಣರ ಹತ್ತಿರ ಹೋಗಿದ್ದೆ ತಪ್ಪ ||
ಲಗಿ ಬಗಿ ಮೂಗಿಗೆ ಕೈ ಹಚ್ಚಿ ನೋಡಿರು ದಗಿ ಮಾಡಿದರೆಂದು ಆಗಿದರು ಸಂಪ || ಜೀ ||
ಹೆಣ ಆದವಂದು ಈ ಗತಿಯಾಯ್ತು ಹೆಣತಿಯಾದವಂಗ ಬಂದಿತು ಸ್ತ್ರೀ ರೂಪ ||
ಕ್ವಾಡಗ ಬಾಡ್ಯಾ ಮಾಡಿಕೊಂಡ ತಪ್ಪ ತಪ್ಪ ಎಲ್ಲಿಂದಲ್ಲೆ ಆಗಿರು ಗಪಚೂಪ ||
ಸರ್ವ ಆವಯವ ತಯಾರಾಗಿವು ಎದಿ ಮೇಲೆ ಕುಚ ಬಂದಿವು ನ ದಪ್ಪ || ಜೀ ||

ಮೂಢತನ ಮಾಡಿದ್ದು ಪಾಡಾಯಿತೆಂದು ಮಾಡಿದವ ಎಣ್ಣವು ನಮ್ಮಪ್ಪ ||
ಮನ್ಯಾನ ಹೆಣತಿಗಿ ಹೇಳಿದರೆ ಗಪ್ಪI ತಾಯಿ ತಂದಿ ಸುದ್ದಿ ಕೇಳಿದ್ರ ತಾಪ ||
ಗಡಿಬಿಡಿಲಿಂದ ಒಳಹೋಗಿ ನೋಡಿಕೊಂಡ ತೊಡಿ ಸಂದ್ಯಾಗ ಆಗಿತು ಸಾಪ ||  ||ಜೀ ||
ಹಾರೂಗೇರಿ ಜನ ಪೂರಾಬಂದಿತು ನೋಡುವದಕ ಅವರ ತಾರೀಫ ||
ನೋಡಿ ಬಿಟ್ಟಿತು ಕೊಂಕಳ ನೀರಪ್ಪ, ಏಕಾಏಕಿಯಾಗಿದು ಎಂತ ತಾರೀಫ ||
ಶರಣರಿಗಿ ಕಾಡಿದಕ್ಕಾಗಿ ಇಂತಹ ಘೋರಪ್ಪ ||ಜೀ ||

ಸುದ್ದಿ ಕೇಳಿ ತಾಯಿ ತಂದಿ ಬಂದು ಬಳಗದವರು ಬಂದು ಬಡಿದರು ದಪ ದಪ ||
ಒಬ್ಬ ಅದರಲ್ಲೆ ಹೇಳಿರು ಶರಣರ ತಾರೀಫ ಇವರ ಸುತ್ತ ಐತಿ ಎಂತಹ ಗ್ರಹಚಾರಪ್ಪ ||
ನಿಂದಕರೆ ಇಂದುಧರನಲ್ಲಿಗೆ ನಡಿರೆಂದು ಮುಂದಾಗಿ ನಡೆದಿರು ಝಪ ಝಪ ||ಜೀ ||

ದುಮಾಲಿ
ಅಂದಾಡಿ ಅವರು ಶರಣರ ಹತ್ತರ ಹೋಗ್ಯಾರ ||
ಶರಣರ ಚರಣಕ ಶಿರ ಬಾಗ್ಯಾರ || ಜೀ ||
ತ್ರಾಹಿ ಶರಣರೆ ಕಾಯಿರೆಂದು ನಾಯಿಯಂತೆ ತಲಿದೂಗ್ಯಾರ ||
ನೀವೆ ಪರವಸ್ತು ಎಂದು ಕೂಗ್ಯಾರ ||ಜೀ ||
ತಪ್ಪು ಮಾಫಿ ಮಾಡಿರೆಂದು ಚರಣದ ಮೇಲೆ ಬಿದ್ದಾರ ||
ಒಂಟಿಗಾಲಲಿ ನಿಂತಿರು ನಿರ್ಧಾರ ||ಜೀ ||

ಪ್ರಾಸ ನುಡಿ
ಶರಣರು ಅಂದಿರು ಮರಣ ಎಲ್ಲರಿಗುಂಟು ತಿರಗಿ ಬರಲಾರದು ಸತ್ತವನ ಪ್ರಾಣ ||
ಸರ್ವರು ಯಾಕ ಬಂದಿರಿ ಒಣ || ಎಲ್ಲರೂ ಕೂಡಿ ಮಾಡಿರಿ ಮಣ್ಣ ||
ಶುದ್ಧ ಮನದಿಂದ ಅಧ್ಯಾಯ ಕೇಳಿದ್ರ ಉದ್ಧಾರಾದವು ತ್ರೀಕರಣ  || ಜೀ ||   ಚೌಕ ೩

ಸತ್ತವನಿಗಿ ನೀವು ಹೊತ್ತು ತಂದಿದು ಹೌದು ಸತ್ತನೆಂದು ಹೇಳಿರೆಲ್ಲ ||
ನೀವು ತಂದಿದ್ದು ನಿಮಗದು ಗೊತ್ತಿಲ್ಲ ಅವ ಸತ್ತಿದ್ದು ಇದ್ದಿದು ಸದ್ದೆ ತಿಪ್ಪಲ ||
ಸತ್ತವನಿಗಿ ಮತ್ಯಾಂಗ ಬದುಕಿಸಲಿ ಸತ್ತ ಆಗಿತ್ತು ನಿಕಾಲಿ ||ಜೀ ||
ಮೆರ್ದ ಶರಣರಿಗಿ ನೆರದವರು ಅಂದಿದಾರೋ ನಿರ್ಧಾರ ಶರಣರೆ ನೀವೆ ಕೇವಲ ||
ನಿಮಗ ನೋವಿಲ್ಲ ಸಾವಿಲ್ಲ ಗೀವಿಲ್ಲ ನಿಮ್ಮ ಹತ್ತಿರ ಅವು ಬಾವ ಇಲ್ಲ ||
ಸತ್ತವನಿಗಿ ಪ್ರಾಣ ಪ್ರತಿಷ್ಟ ಮಾಡಿ ಬಿರ್ದ ಪಡಿಯಿರಿ ಧರಣಿಯ ಮೇಲ  ||ಜೀ ||

ಸತ್ಯ ಚತ್ಕಲ ಚಿತಾ ಭಸ್ಮ ಹೊಡೆದಾಗೆ ಸತ್ತವ ಎದ್ದಿದ ತತ್ಕಾಲ ||
ಕೂತ ನಿಂತವರು ಅಂದಿರು ಚಾಂಗ ಭಲೆ ಎರಡು ಹಸ್ತ ಮುಗಿದು ||
ಥತ್ತರಿಸುತ್ತಾ ಬಂದು ಸತ್ತವ ಹಿಡಿದಿದ ಶರಣ ಕಾಲ ||ಜೀ ||
ಹೆಣದ ಹೆಣತಿಯಾದ ತರುಣಿ ಬಂದು ಶರಣರ ಚರಣಕ ಪಿಡಿದಳು ಕಮಲ ||
ನಾ ಪೂರ್ಣ ತಿಳಿದಿದ್ದೆ ಶರಣರ ಅಮಲ ||
ನೀನೆ ಮೃಡಹರ ಅನ್ನುವದಕ ಅಡ್ಡಿನೆ ಇಲ್ಲ ||
ಕರುಣಾನಿಧಿ ಶರಣರೆ ಉದ್ಧಾರ ಮಾಡಿರೆಂದು ಚರಣದ ಇಟ್ಟಿಳು ಮುಖ ಮಂಡಲ ||

ದುಮಾಲಿ
ನನ್ನ ಪ್ರಾಣ ಪ್ರತಿಷ್ಟ ಮಾಡಿರೆಂದು ತರುಣಿ ಆದವ ಹೊಡದಿದ ಕೂಗ
ಆಗ ಶರಣರು ಮಾಡಿರು ಸಾಗ || ಜೀ ||
ಗಂಡ ಹೋಗಿ ಹೆಣ್ಣಾದಿ ನಿನ್ನ ಪುಣ್ಯದ ಭೋಗ ||
ತರುಣಿ ಗುಣಮಣಿ ಬ್ರಹ್ಮ ಬರೆದಿದ ಭೋಗ || ಜೀ ||

ತಿರುಗಿ ಮನಿಗಿ ಹೋಗೋಣಿಲ್ಲ ಶರಣರ ಜೀವ ಮಾಡತೀನಿ ತ್ಯಾಗ ||
ಎತ್ತಿ ತಿರಗೋಣಿಲ್ಲ ನನ್ನ ಮೂಗ || ಜೀ ||
ದಯಾನಿಧಿ ಶರಣ ಭಸ್ಮ ಧರಿಸೆಂದಿರು ಸರ್ವಾಂಗ ||
ಗಂಡ ಪುಂಡಾದ ಮೊದಲಿನಂಗ || ಜೀ ||
ಸುತ್ತಮುತ್ತ ನಿಂತ ಜನ ಆಯಿತು ದಂಗ ||
ಈಶ ಶರಣ ಗಂಗಾಧರ ಮಂಗಲಾಂಗ || ಜೀ ||

ಪ್ರಾಸ ನುಡಿ
ಧಣಿಯಲಿ ಮೆರೆಯುವ ಕರಣಿ ಮಠದ ಹಿರೇಸಾವಳಗಿ
ಜಾಣ ಮಹ್ಮದ ನೋಡಿ ಶರಣರ ಪುರಾಣ ಶುದ್ಧ ಆಧ್ಯಾತ್ಮ ಮಾಡಿಕೊಂಡ ವ್ಯಾಕರಣ ||
ಅವರ ಹೃದಯಾದಿ ವಿದ್ಯಾರ್ದಿ ಭರಣ ||
ಶುದ್ಧ ಮನದಿಂದ ಅಧ್ಯಾಯ ಕೇಳಿದ್ರ ಉದ್ಧಾರಾದವು ತ್ರೀಕರಣ || ಜೀ ||