ಕಲಬುರ್ಗಿ ಶರಣರ ಮರ್ಮ ಕೇಳಿದರ ಕರ್ಮ ಆಗುವುದು ನಿವಾರಣ ||
ಮೊದಲು ಕೈಲಾಸದಲ್ಲಿ ಇದ್ದ ಬಸವಣ್ಣ ||
ಅರಳ ಗುಂಡಗಿಯೊಳು ಆಗ ನಿರ್ಮಾಣ ||
ಬ್ರಹ್ಮಪೂರಕ ಬಂದು ಬಹು ಮಹತ್ವ ತೋರಿದ ಶಿವನ ಅವಾತಾರಿ ನಿಜ ಶರಣ  || ಜೀ ||

ಇದೇ ಕಲಬುರ್ಗಿ ಶೇಖರೋಜಾದಲ್ಲಿ ಮುಗ್ಧಂ ಹುಸೇನಿ ದೇವರ ಹೆಸರ ||
ಬ್ರಹ್ಮ ಪೂರಕ ಹೋಗಬೇಕು ಒತ್ತರ ||
ಶ್ರೀ ಶರಣ ಬಸವನ ಹತ್ತರ ||
ಮಧ್ಯರಾತ್ರಿ ಅವಗ ಅನ್ನ ನೀರ ಬೇಡಿ ಸತ್ವ ಮಾಡಬೇಕು ಅಪಹರಣ  || ಜೀ ||

ಸಾಹೇಬರು ಹೇಳಿದಂತೆ ಏಳು ನೂರು ಫಕೀರರು ಬ್ರಹ್ಮಪುರದ ಕಡಿ ನಡದಾರ ||
ಕೈಯೊಳು ಚಮನಗಳು ಹಿಡಿದಾರ  ||
ಆ ಮುಗ್ದುಂ ಹುಸೇನಿ ದೀನ್ ಹೊಡದಾರ ||
ಏಳು ನೂರು ಮಂದಿ ಫಕೀರರು ಕೂಡಿ ಶರಣರ ಹತ್ತರ ಹಿಂಗ ನುಡದಾರ  || ಜೀ ||

ದುಮಾಲಿ
ನಮಗ ಅನ್ನದಾನ ಮಾಡಿ ಪುಣ್ಯ ಪಡಿಯಬೇಕು ನಿಜ ಶರಣ ||
ಬಡವರ ಮೇಲೆ ಮಾಡಿರಿ ಅಂತಃಕರಣ  || ಜೀ ||
ಮಧ್ಯರಾತ್ರಿ ಅಂದರ ಸದ್ಯೆ ಹೋಗುವದು ನಮ್ಮ ಪ್ರಾಣ  ||
ಶಾಪ ಕೊಟ್ಟು ಹೋಗುವೆವು ಪೂರ್ಣ  || ಜೀ ||
ತ್ರಿಕಾಲ ಜ್ಞಾನಿ ಶರಣರು ತೆರದಿರು ಜ್ಞಾನದ ಕಣ್ಣ ||
ಚುಕ್ತ ತಿಳಿಕೊಂಡಿರು ವಾತಾವರಣ  ||  ಜೀ ||

ಪ್ರಾಸ ನುಡಿ
ದಿಟ್ಟ ಶರಣರು ಪಟ ಪಟ ಎದ್ದು ಪಟಿಸಿದರು ಶಿವನಾಮಸ್ಮರಣ ||
ಹೋಗಿ ಪಾತ್ರೆಯೊಳು ನೋಡಿರು ಅದೇ ಕ್ಷಣ ||
ಹಿಡಿಯನ್ನ ಉಳಿದಿತ್ತರಿ ಪರಿಪೂರ್ಣ ||
ಬ್ರಹ್ಮಪೂರಕ ಬಂದು ಮಹತ್ವ ತೋರಿದ ಶಿವನವತಾರಿ ನಿಜ ಶರಣ || ಜೀ || ಚೌಕ : ೧

ಪುರುಷ ಬಟ್ಟಲು ಒಲಿ ಮೇಲಿಟ್ಟು ಪುರುಷ ನೋಟಲೆ ಶರಣ ನೋಡ್ಯಾನ ||
ಪಂಚಾಕ್ಷರಿ ನುಡಿಯುತ್ತ ನೋಡ್ಯಾನ ||
ಬಂದ ಫಕೀರರಿಗಿ ನೀಡ್ಯಾನ ||
ಅಖಿನ ಮುಜಾಫರ್ ಬಿರ್ಯಾನಿ ಬೇಕೆಂದು ಅದರಾಗೆ ಚುಮ್ಮ ಒಬ್ಬ ಕಾಡ್ಯಾನ || ಜೀ ||

ಬೇಡಿದವರಿಗಿ ಬೇಡಿದ ಪ್ರಕಾರ ಅವರವರಿಗೆ ದೊರದಿತ್ತು ಅನ್ನ ||
ಏಳು ನೂರು ಫಕೀರರು ಆಗಿರು ಖಿನ್ನ ||
ಒಂದು ತಾಸಿನೊಳು ಮುಗಸಿರು ಬಿನ್ನ ||
ಸಾಹೇಬರ ಮಾತ ಕೇಳಿ ಸುಮನೆ ಬಂದೆವು ಶರಣರ ಮಹತ್ವ ಐತಿಘನ್ನ  || ಜೀ ||

ಕಂಡಂಗೆ ಉಂಡು ಭಂಡ ಫಕೀರರು ಷಂಡರಾಗಿ ಬಿದ್ದಿರು ಭಿನ್ನ ||
ಶರೀರ ಉರ್ಫ್ ಇಟ್ಟಿತು ಘನ್ನ ||
ಪೂರಾ ತಿಳಿಕೊಂಡಿರು ಶರಣರ ಬೆನ್ನ ||
ಕೂಳಾ ಹೆಚ್ಚಾಗಿ ಏಳಲಿಲ್ಲ ಬರಲಿಲ್ಲ ಮೂಳರು ಮಾಡತಿರು ರೋಧನ  || ಜೀ ||

ದುಮಾಲಿ
ನಾವು ಮಾಡಿ ಉಂಡೆವು ಮಾಫಿ ಮಾಡು ಶರಣಪ್ಪ ||
ಬಿಲ್‌ಕುಲ್ ಐತಿ ನಮ ತಪ್ಪ  || ಜೀ ||
ದಯಾನಿಧಿ ಶರಣ ಅವರ ತಪ್ಪು ಮಾಡಿದನು ಮಾಫ ||
ಆಗ ತಣ್ಣಗಿಟ್ಟಿತು ಮೈ ಉರ್ಫ್  ||
ಶೇಖ ರೋಜಾದ ಕಡಿ ಹೊಂಟ ಹೋಗಿರು ಸೀದಾಸಾಫ ||
ಸಾಹೇಬಗ ಹೇಳಿರು ಶರಣರ ಪ್ರತಾಪ || ಜೀ ||

ಪ್ರಾಸ ನುಡಿ
ಏಳು ನೂರು ಮಂದಿ ಫಕೀರರು ಕೂಡಿ ಸಾಹೇಬರಿಗೆ ಹೇಳಿರು ಶರಣರ ವರ್ಣ ||
ಕೇಳಿ ಕೆಂಪಗಾಗಿವು ಆತನ ಕಣ್ಣ ನಾನೆ ಹೋಗುವೆನೆಂದು ಬೆಳೆಸಿದ ಪಯಣ ||
ಬ್ರಹ್ಮಪೂರಕ ಬಂದು ಬಹು ಮಹತ್ವ ತೋರಿದ ಶಿವನವತಾರಿ ನಿಜಶರಣ || ಜೀ ||      ಚೌಕ : ೨

ಹಾರೂಗೇರಿಗೆ ಶೇಖ ರೋಜಾದ ಸಾಹೇಬರು ಹೋಗುದಕ ನಿಂತಾರ ತತ್ಕಾಲ ||
ಕೈಯೊಳು ತಗೊಂಡು ಮಾಂಸದ ಅಗಲ ||
ಸಂಗಾತ ತಗೊಂಡು ಮತ್ತೊಬ್ಬ ಚೀಲ ||
ಸಿಂದಿ ಸರಾಯಿ ಮಗಿ ಅವನಿಗಿ ಹೊರಿಸಿ ಹೊಕ್ಕಿರು ಶರಣರ ಬಾಗಿಲ || ಜೀ ||

ಹೋಗಿ ಶರಣರ ದರ್ಶನಗೊಂಡು ಹರ್ಷದಿಂದ ಕೊಟ್ಟರು ಅಗಲ ||
ಶರಣರು ಹಸ್ತ ಇಟ್ಟರು ಅಗಲಿನ ಮೇಲ ||
ಸಿಂದಿ ಸರಾಯಿ ಹೋಗಿ ಆಗಿವು ಹಾಲ ||
ಮಾಂಸ ಹೋಗಿ ಗುಲಾಬಿ ಹೂ ಮೊಗ್ಗಿ ಆಗಿದವು ಕಂಡು ಬಡಕೊಂಡ ಗಲ್ಲಗಲ್ಲ || ಜೀ ||

ಮಶಾಖಸಾಬ ಖುಷಿಯಿಂದ ಹೇಳಿರು ||
ಸರ್ವಾಂತರ್ಯಾಮಿ ಹಾನ ಕೇವಲ ||
ಯಾರಿಗೂ ತಿಳಿಯದು ಅವನ ಲೀಲ ||
ನಾವು ನೀವು ಒಂದೇ ಅಂಶಿಕರೆಂದು ತಿರುಗಿ ಹೋಗಿದಾರು ತಮ್ಮ ಸ್ಥಲ || ಜೀ ||

ದುಮಾಲಿ
ಶಹರ ಕಲಬುರ್ಗಿಗೆ ಬಂದು ಶರಣ ಮಹಿಮ ಮಾಡಿದ ಅನಗಾಡ ||
ಚಿಗರಿಸಿ ತೋರಿಸಿದನು ಒಣ ಕೊಡ್ಡ  || ಜೀ ||
ಶರಣನ ಆಶೀರ್ವಾದದಿಂದ ಆಕಳಿದಾವು ಗೊಡ್ಡ  ||
ಕಣ್ಣು ಕಳಕೊಂಡ ಕುರಿಗಳು ಕುಡ್ಡ  ||

ಶರಣರ ಪ್ರತಾಪ ಬಲ್ಲವರಿಗಿ ಹೇಮಲಯದ ಗುಡ್ಡ
ಅಜ್ಞಾನಿ ಏನು ಬಲ್ಲದು ದಡ್ಡ  || ಜೀ ||
ನಗು ನಗುತ ಶರಣರು ತಗ್ಗಿಗಿ ಅಂದಿರು ಒಡ್ಡ ||
ರಾಜ ರಾಜರದು ಇಳಸಿರು ಜಿಡ್ಡಿ  || ಜೀ ||

ಪ್ರಾಸನುಡಿ
ಧರೆಯೊಳು ಮೆರೆಯುವ ಹಿರೇಸಾವಳಗಿ
ಜಗದ್ಗುರು ಶಿವಯೋಗಿ ಮುಕ್ಕಣ್ಣ
ಕವಿ ಮಹ್ಮದ ಹಿಡಿದ ಆತನ ಚರಣ ||
ಆತನ ಶಿಷ್ಯರು ಜಗದ ಮೇಲಣ್ಣ
ಬ್ರಹ್ಮಪೂರಕ ಬಂದು ಬಹು ಮಹತ್ವ ತೋರಿದ
ಶಿವನವತಾರಿ ನಿಜ ಶರಣ || ಜೀ ||