ಶ್ರೀ ಗುರುವೆ ನಮಃ ಎಂದು ಪ್ರಣಾಮ ಪಠಿಸಿ ಪೇಳುವೆನು ||
ಶ್ರವಣ ಮನನ ನಿತ್ಯ ದ್ಯಾನದಿ ಕೇಳಿದಿ ಈ ಗಾನಾ ||
ಜನ್ಮಭೂಮಿ ಅರಳ ಗುಂಡಗಿಯಲ್ಲಿ ಜನಿಸಿ ಬಂದ ಶರಣ ||
ಮುಂದ ಕಲಬುರ್ಗಿಯಿಂದ ಕಲ್ಯಾಣಕ ಮಾಡುವರು ಪ್ರಯಾಣ ||
ಬ್ರಹ್ಮಪುರದ ಬ್ರಾಹ್ಮಣರು ಶರಣಬಸವಗ ವರಿಗಿ ಹಚ್ಯಾರ ||
ಅವರ ಮಹಿಮ ಪರೀಕ್ಷಿಸಿ ಧನ್ಯರಾಗಿ ಬಾಗಿ ಹಿಡಿದಾರ ಚರಣ  || ಜೀ ||

ಸೃಷ್ಟಿಕರ್ತ ಗುರು ಆಗ್ನೇಯಂತೆ ಬಿಟ್ಟುಹೊರಟಾ ಅರಳಗುಂಡಗಿ ||
ಮೊಟ್ಟಮೊದಲು ಹೇಳಿ ಅವರಾದಿಯಲ್ಲಿ ವಸತಿ ಕೊಟ್ಟಾರು ||
ಸೃಷ್ಟಿ ದಂಡಗುಂಡರಾಯ ಗೌಡರ ಮನಿಯಾಗ ದಾಸೋಹ ಇಟ್ಟಾರು ||
ಅಷ್ಟಾವರಣ ಪಂಚಾಚಾರ ನಿಷ್ಠಿ ನೇಮಕ ಮುಟ್ಯಾರು ||
ಹಟಯೋಗದ ಸಾಧನ ಇತ್ತು ಅಷ್ಟಸಿದ್ಧಿ ವಶ ಆಗಿತ್ತು
ಕಲ್ಯಾಣ ಪಟ್ಟಣದ ಬಸವಣ್ಣನವರು ಬೆಟ್ಟಿಕೊಟ್ಟಾರು
ಕೆಟ್ಟ ಬರಗಾಲದ ಉದ್ಧಾರಕ್ಕಾಗಿ ಕಲಬುರ್ಗಿ ಗ್ರಾಮದಲ್ಲಿ ತಾಟ್ಯಾರು || ಜೀ ||

ದೊಡ್ಡಪ್ಪ ಗೌಡರಲ್ಲಿ ಭಕ್ತಿ ಹುಟ್ಟಿ ಕರ ಜೋಡಿಸಿ ಶರಣಗ ಅಂದ್ರು
ಐದು ಊರ ಗೌಡಕಿ ಐದು ಊರ ವತನಾ ಐದು ಊರ ಜಮೀನುದಾರರು
ನೀವು ನುಡಿದ ವಚನಕ ಅಡ್ಡಿ ಇಲ್ಲ ನಡೆಸಿಕೊಡುತೇವ ಅಂದಾರು
ದೃಡ ಪರೀಕ್ಷಿಸಿ ನೋಡಿ ಶರಣ ಬಸವ ಅಲ್ಲೆನೆನೆದಿದಾರೋ
ಗೌಡರ ಮನಿಯಾನ ಕಾಳ ಕಡ್ಡಿ ತರಸಿ
ವಡಸಿದ ನುಚ್ಚ ಬಡವರಿಗಿ ಊಣಸಿ
ಮೃಡಹರನ ಸ್ಮರಣಿಯಲ್ಲಿ ಮಗ್ನನಾದರೂ
ಮಾಡಿದ ಪ್ರಸಾದ ನುಚ್ಚಿಗಾಗಿ ಕುರುಡು ಕುಂಟರು ನೆನೆದಾರು  || ಜೀ ||
ಸಾವಿರ ರೂಪಾಯಿಗೊಂದ ಸಂತಾನ ಕೊಡತಿನೆಂದು ಶರಣಬಸವ
ನಾವು ಸಜ್ಜನರ ದರ್ಶನಕ್ಕಾಗಿ ಬರುವರು ಹೋಗುವರು
ವಾಯಿಣಿ ಕೇಳಿ ಭವ್ಯ ಜನರು ಶರಣನ ಚರಣಕ ಬಾಗ್ಯಾರು
ಹಾವನೂರ ಗೌಡತಿಗಿ ಸಂತಾನ ಇದ್ದಿದಿಲ್ಲ ಸುದ್ದಿ ಕೇಳಿ ಸಾಗ್ಯಾರು
ಭಾವ ಭಕ್ತಿ ತಿಳಿದುಕೊಂಡು ದಿವ್ಯ ಫಲಾ ಎಡಿಯಲ್ಲಿ ನೀಡಿ
ಆಶೀರ್ವಾದ ಕೊಡಾಗ ಗೌಡತಿ ಮನದಾಗ ಹಿಗ್ಯಾರು ||
ದೇವರು ಗಂಡಸ ಮಗಾನೆ ಕೊಡತಾನ ಮಗಳೆ
ಹೋಗೆಂದು ಕೂಗ್ಯಾರು  || ಜೀ ||

ದುಮಾಲಿ
ಕಟ್ಟಿಕೊಂಡು ಫಲಾ ತಾನು ಉಡಿಯಲಿI
ನಿಷ್ಠಿವಂತ ಬಾಲಿ ||
ಹುಟ್ಟಿದರೆ ಗಂಡಸ ಮಗಾ ನನಗೊಂದುI
ಅಷ್ಟು ರೂಪಾಯಿ ಎಲ್ಲಿಂದ ಕೊಡಲಿನಾ ತಂದು || ಜೀ ||

ಎನ್ನ ಮಾತ ಕೇಳಲ್ಲ ಎನಗಂಡ |
ಶರಣಗ ಬೇಡಿಕೊಂಡ  ||
ಹರಕಿ ಬೇಡಿದು ದಂಡಾದೆತ್ತು ನಂದು |
ತಗದಾರೋ ಒಗತಾನದಾಂದು  || ಜೀ ||

ದಾರ್ಯಾಗ ಇತ್ತು ಗೌಡರ ಹೊಲ |
ಸಾಫ ಮಾಡಿ ನೆಲ |
ಶರಣ ಕೊಟ್ಟ ಫಲಾ ಇಟ್ಟಾರೋ ಮಣ್ಣಿಗಿ |
ಮಣ್ಣ ಮುಚ್ಯಾರೋ ಫಲಾ ಒಳಗ ಒಗದಾ || ಜೀ ||

ಚಾಲ
ಫಲಾ ಭೂಮ್ಯಾಗ ಮುಚ್ಚಿ ಇಟ್ಟು
ಸ್ವಲ್ಪ ಬಿಟ್ಟಾರ ಗೌಡತಿಯವರು |
ನೆಲದಾಗ ಕೂಡ ಬೆಳಿಲಾಕತ್ತು ಪ್ರಸಾದದ ಲಕ್ಷಣ |
ಕಾಲ ಕೈ ಕಣ್ಣ ಮೂಗ ಅವಯುವಗಳು ಆದುವರಿ ಸಂಪೂರ್ಣ |
ಅಲ್ಲೆ ದೇವರ ಕಾವಲ ದೇವಗನ್ನಕಿರು ಮಾಡ್ಯಾರ ಜೋಪಾನ || ಜೀ ||       ಚೌಕ :೧

ನವಮಾಸ ನವದಿನಗಳು ಅವಯವಗಳು ಬಲತಿವರೆಣ್ಣ |
ಶಿವಸ್ವರೂಪಿ ಜಂಗಮ ಮೂರ್ತಿ ಬಂದ ಶರಣನಲ್ಲಿ  ||
ಸಾವಿರ ರೂಪಾಯಿ ಕೊಡರಿ ಮಗನ ಲಗ್ನ ನೆಮಿಸಿ ಬಂದಿನಿ ಮನೆಯಲ್ಲಿ ||
ಯಾವ ಬರವು ರೊಕ್ಕ ಶರಣ ಅಂದ ಬರಲಿಲ್ಲ ಕೈಯಲ್ಲಿ
ಹಾವನೂರು ಗೌಡತಿಯರ ಮನಿಯಾಗ ಮಗಾ ಹುಟ್ಯಾದ
ಸಾವಿರ ರೂಪಾಯಿ ಹರಕಿ ಅದಾ ||
ಅವುಕ ಬಿಟ್ಟು ಬರವು ಹಣ ಇಲ್ಲರಿ ಯಾವಲ್ಲಿ
ನೀವು ತೀವ್ರ ಹೋಗಿ ಶರಣರ ಪತ್ರ ಕೊಡರಿ ಕೈಯಲ್ಲಿ || ಜೀ ||

ಬಿಡಕಿ ಜಂಗಮ ಪತ್ರ ತಗೊಂಡು ಖಡಕ ಸಿಪಾಯಿ ಆಗಿ ಹೋದ ||
ಗಡಾ ಮಾಡಿ ಗೌಡಗ ಕೇಳತಾನ ಪತ್ರ ಕೊಟ್ಟು ಕೈಯಲ್ಲಿ ||
ಹಡದು ಮಗನಿಗಿ ಆಡಸೋದೆ ಬರತಾದ ಕೊಡೋದ ಕಲತ್ತಿಲ್ಲರಿ ಸಾಲಿ  ||
ಬೇಡಕೊಂಡ ಹರಕಿ ಶರಣನ ಸಾವಿರ ಹಣ ಕೊಡರಿ ಕೈಯಲ್ಲಿ  |
ಗೌಡ ಕೇಳಿ ಸಿಟ್ಟಿಗಿ ಬಂದಾ ಕ್ವಾಡಕ ಜಂಗಮಗ ಬುದ್ಧಿ ಇಲ್ಲಾ
ಬಡಗಿ ತಗೊಂಡ ಹೊಡಿಲಾಕ ಬಂದ ಲಟ್ಟ ಹಿಡಿದು ಕೈಯಲ್ಲಿ ||
ಯಾವ ಭಾಡ್ಯಾನ ತೊಟಲಾಗ ಕೂಸಾ ಅದಾ ತೋರ್ಸಿಕೂಡು ನೀ ಇಲ್ಲಿ  || ಜೀ ||

ಯಾಂವ ಸಾಧು ಶರಣ ಹಣ ಅವನಿಗಿ ಕರಕೊಂಡ ಬಾರೋ ಇಲ್ಲಿ ||
ಅವಾಗ ರೂಪಾಯಿ ಸಿಗತಾವ ಎದ್ದೋಗೋ ಹುಚ್ಚಪ್ಯಾಲಿ ||
ಹೌಹಾರಿ ಜಂಗಮ ಬಂದ ಶರಣನ ಹಂತಿಲಿ ||
ನೀವು ಸುಳ್ಳ ಹೇಳಿ ಯಾಕ ಬಳಸಿರಿ ಕೂಸ ಇಲ್ಲ ತೊಟ್ಟಲಲ್ಲಿ ||
ಹೌದು ಸ್ವಾಮಿ ಶರಣ ಅಂದ ನಾಳೆ ಉದಯಕ ಹೋಗೋಣಂತ
ಬೆಳಗಿನ ಜಾವಕ ಜಂಗಮಗ ಕರಕೊಂಡ ಶರಣಹೋದ ಶೀಘ್ರದಲ್ಲಿ ||
ಹಾವನೂರ ಗೌಡರ ಮನ್ಯಾಗ ನಿಂತು ಅಂದಾ ರೂಪಾಯಿ ಎಣಿಸಿರಿ ಇಲ್ಲಿ  || ಜೀ ||

ದುಮಾಲಿ
ಕೂಸಿಗಿ ತೋರಿಸೋ ಶರಣ ಏಸು ಬೇಕು ಹಣಾ
ಬೇಡಿದಷ್ಟು ರೂಪಾಯಿ ಕೊಡತಿನಿ ಕೈ ಮುಟ್ಟ
ಕಾಡೋ ಗ್ರಹಿಸಿ ಬಂದಾದ ನಿನಗ ಕೆಟ್ಟ  || ಜೀ ||

ಮಗಾ ಕೊಟ್ಟಿದ ಗೌಡತಿ ಉಡಿಯಲ್ಲಿ || ವಗದಿರಿಯಾವಲ್ಲಿ ||
ಹುಗದಿದ ಜಾಗ ತೋರಸು ಮಗಳೆ ಭಯಬಿಟ್ಟ |
ಗೌಡತಿಗಿ ಕರಕೊಂಡ ಶರಣ ಹೊರಗ ಹೊರಟ || ಜೀ ||
ಹೂಣಿದ ಜಾಗಕ ಬಂದ ನಿಂತಬಿಟ್ಟ | ಮಣ್ಣ ಮಾಡಿ ಬಗಟ |
ಸೂರ್ಯನ ಮುಕುಟ ಹೊಳದಿತು ಲಟ ಲಟ
ಮಣ್ಣಾಂದ ಕೂಸಿಗಿ ತೆಗೆದು ಶರಣ ಕೊಟ್ಟು  || ಜೀ ||

ಚಾಲ
ಕೂಸಿಗಿ ಬಗಲಾಗ ಎತ್ತಿಕೊಂಡು
ಹರುಷದಿಂದ ಮನಿಗಿ ಬಂದು
ಎಣಿಸಿ ಸಾವಿರ ರೂಪಾಯಿ ಕೊಟ್ಟು ಹಿಡಿದವರ ಚರಣ ||
ಆ ಕೂಸಿಂದೆ ವಂಶಾವಳಿ ಹಾವನೂರ ಗೌಡರ ಖಾನದಾನ  || ಜೀ ||  ಚೌಕ :೨

ಹಾರಂವ ಒಬ್ಬ ಹಾರುತ ಬಂದು ಕರಜೋಡಿಸಿ ಶರಣಗಕೆಳದಾ |
ನೆರತ ಮಗಳ ಮನಿಯಾಗ ಕೂತಾಳ ವರ ಬಂದಾದ ಮನಿತನಕ |
ಆರ ಏಳ ನೂರ ರೂಪಾಯಿ ಕೊಡರಿ ಬಡವರ ಕಾರಣಕ ||
ಊರ ಶರಣ ಕೊರಳಿಗಿ ಹಾಕ್ಯಾನ ಮಾತು ಬಂತು ಹೈರಾಣಕ
ಶರಣನ ಬಲ್ಲಿ ಎಲ್ಲಿಂದ ರೊಕ್ಕ || ಜೀ ||

ಧೈರ್ಯ ಬೇಕು ಮನದಲ್ಲಿ ಪಕ್ಕ ||
ಕರಕೊಂಡು ಬ್ರಾಹ್ಮಣಗ ಶರಣಬಸವ ಕಲಬುರ್ಗಿ ಖಿಲ್ಯಾಹೊಕ್ಕ ||
ಅರಸರ ದೃವ್ಯದ ಮ್ಯಾಲ ಏಳ ಹೆಡಿ ಶರ್ಪ ಇತ್ತರಿ ಕಾವಲಕ || ಜೀ ||

ಭಾಗ್ಯದೇವಿ ಬಾ ಎಂದು ಕೂಗ ಹೊಡಿದ ಶರಣ |
ಭಗ್ ಅಂತ ಬೆಂಕಿ ಕಿಡಿ ಹಾರಿತು ಅಂತರಕ |
ಝಗ್ಗನೆ ಬೆಳಕ ಬಿದ್ದು ಏಳ ಹೆಡಿ ಶರ್ಪ ಬಂತರಿ ಹೊರಿಯಾಕ ||
ಆಗ ಶರಣ ಅಂದ ಭಾಗ್ಯದೊರಿತು ನಿನ್ನ ಹಣಿ ಬಾರಕ |
ಬೇಗ ಹೋಗಿ ಹಿಡಿರೋ ಕೈಲಿ ಕೂಗ ಹೊಡದ ಸಾಧು ಶರಣ ||
ನಡಗ ಹುಟ್ಟಿತು ಸರ್ಪಿಗಿ ನೋಡಿ ಅಂಜಿ ಸರದಾ ಹಿಂದಕ |
ಮಗಳ ಮದವಿಕಿಂತ ನನ್ನ ಮದಿಗೆ ಆಗತಾದ
ನಾ ಹಿಡಿದರ ಇದಕ  || ಜೀ ||

ಹಾಯಿದು ಹೋಗಿ ಹಿಡಿರಿ ಭಟ್ಟ  ಜೀ ಭಯಪಡ ಬೇಡಿರೆಂದ |
ಕೈ ಕಾಲ ಒಡ ಮುರಕೊಂತ ಬಂದು ನಿಂತಾನ ಸನಿಯಾಕ  ||
ಹಾವಿಗಿ ನೋಡಿ ಕಾಲ ಮಡಿ ನಡಿದಾವ ಮೆಲ್ಲಕಾ  ||
ಹಾವಿಗಿ ನಿಲ್ಲ ಅಂದಕೂಡಲೆ ಶರಣ ನಿಂತ ಅವರ ಸಲ್ಯಾಕ ||
ಹಾಂವ ನಿಲ್ಲೋತಾನ ನಿಂತು ಹವರಗ ಹುತ್ತಿನಾಗ ನಡಿತು ||
ದೆವ್ವಿನಂಗ ಯಾಕ ನಿಂತಿ ಹೆಂತಾ ಎದಿವಡಕ |
ಗೇಣ ಹೊರಗ ಬಾಲ ಇತ್ತು ಹೋಗಿ ಹಿಡದಾಗೆ ಕಡದ ಬಂತ್ರಿ ಕಡಿಯಾಕ ||

ದುಮಾಲಿ
ಹಿಡಕಿ ಬಿಚ್ಚಿ ನೋಡತಾನ ಐತು ಬಂಗಾರ ಚಿಣಿ
ಬಡಕೋ ತಾನ ಹಣಿ ||
ಕೂಡಸಿ ಹಿಡಿದ ಅಷ್ಟು ಹಾವಿಗಿ |
ದೊಡ್ಡ ಶ್ರೀಮಂತ ಆಗತಿದ್ದ ಕಲಬುರ್ಗಿಗಿ ||

ಬ್ರಾಹ್ಮಣ ಹೆಣತಿಗಿ ಹೇಳಿದಾ ಶರಣ ಹಿಡಿ ಅಂದಾ  ||
ತ್ರಾ ಇಲ್ಲದಕ ನಡಗಿತು ಎದಿಗುಂಡಿಗಿ ||
ಹಾಂವಿಗಿ ನೋಡಿ ಪ್ರಾಣ ಬಂತು ಕಡಿದಂಡಿಗಿ || ಜೀ ||

ಕೇಳಿ ಬ್ರಾಹ್ಮಣನ ಹೆಣತಿ ಬೈತಾಳ
ಖಳಖೇಡಿ ಕಸ ಮೂಳಾ ||
ವ್ಯಾಳೆ ಸಾಧಿಸಿತು ನಮಗ ಸರಿಯಾಗಿ
ಕಳದಿಟ್ಟ ಗಂಡ ಭಾರಿಗಿ || ಜೀ ||

ಜಾಲ
ಕಣ್ಣ ಇಲ್ಲದವರಿಗಿ ಕಣ್ಣ ಕೊಟ್ಟ
ಹಸ್ತವರಿಗಿ ಅನ್ನ ಕೊಟ್ಟ |
ಹಣ ಬೇಡಿದವರಿಗಿ ಹಣ ಕೊಟ್ಟ ಖೀಳವಿದಾನು ಶರಣ |
ಕವಿ ಪಂಚಾಕ್ಷರಿ ಮಾಡಿ ಹೇಳಿದ ಶರಣನ ವರಣ |
ನೀಲೂರ ಶರಣರ ಪ್ಯಾಲ ಕುಡಿದರ ಜನ್ಮ ಐತು ಉದ್ಧರಣ ||       ಚೌಕ : ೩