ಮಕ್ಕಾ ಮದಿನಾದ ಲೆಕ್ಕ ಕೇಳಿರಿ ನಿಕ್ಕಿ ಜಾಬೀರ ಎಂಬವ ನಿಜ ಶರಣ  ||
ನೌಲಾಕ ಜನರೊಳು ಅವನೆ ಪ್ರಮುಖರೆಣ್ಣ ||
ಪಕ್ಕ ಒಂದೇ ನಾಲಗಿಲಿ ತೀರದು ವರ್ಣ ||
ಧಕ್ಕನ್‌ರೊಳು ಅವನಸರಿ ಯಾರಿಲ್ಲೆಂದು ನಕ್ಕು ಹೇಳಿದ ನಬಿಸಾಬ ಶರಣ || ಜೀ ||

ನಬಿ ಶರಣರ ತಂದೆ ಅಬ್ದುಲ್ ಪೈಗಂಬರ ಬೀಬೀ ಅಮಿನಾ ಅವರ ತಾಯಿ ನಾಮಕರಣ ||
ಅಲಿ ಮುತಾಲಿಕ್ ಅವರ ಕಾಕ ಜಾಣ ||
ಅರಬ ಸ್ಥಾನದಲ್ಲಿ ಅವರ ಠಿಕಾಣ ||
ನಬೀ ಶರಣರು ಮಗಳು ಬೀಬೀ ಫಾತಿಮಾಗ ಮೌಲಾಗ ಕೊಡು ಅಂದಿದ ಮುಕಣ್ಣ || ಜೀ ||

ನಬಿಸಾಬ ಶರಣರು ಮೈರಾಜಕ ಹೋಗಿ ಬಂದಿರು ನಾಲ್ಕನೆ ಸ್ವರ್ಗಕ ಪ್ರಯಾಣ ||
ದ್ವಿತೀಯ ಶಂಬೋ ಅವನೆ ಆದ ಬಸವಣ್ಣ  ||
ದೀನ್ ಇಸ್ಲಾಂ ಧರ್ಮ ಮಾಡಿದು ದಾರಣ  ||
ಕಂಡ ಕಂಡವರಿಗಿ ಕಲ್ಮಾ ಓದಿಸಿ ಭವಿಗಳಿಗೆ ಮಾಡಿರು ಉದ್ಧರಣ || ಜೀ ||

ದುಮಾಲಿ
ನಬಿ ಶರಣರ ಮನಿತಾನ ಹೋಗಿದಾನೋ ಜಾಬೀರ ||
ಬಾಗಿ ಮಾಡಿದಾನೋ ನಮಸ್ಕಾರ ||  ಜೀ ||
ಯಾಕ ಬಂದಿರಿ ಜಾಬೀರ ಎಂದು ನಬಿಸಾಬ ಕೇಳ್ಯಾರ  ||
ಸಹಜ ಜಾಬೀರಗ ಹೀಂಗ ಹೇಳ್ಯಾರ || ಜೀ ||
ಬಡ ಖಟಪಟಕ್ಯಾಗ ಬಿದ್ದಿದೆಂದು ನುಡಿದಿದರು ಶರಣರ  ||
ಬರುತಿನೆಂದು ನುಡಿದರು ದುರಿಣರ  || ಜೀ ||

ಏರ
ತಿರುಗಿ ನಮಸ್ಕಾರ ಮಾಡಿ ಶರಣರಿಗಿ ಜಾಬೀರ  ||
ನಬಿ ಶರಣರು ತಿಳಿದಿರು ಧರ್ಮಗುಣ ||
ವಿನಾಕರಣ ಬಿದ್ದಿದಿ ಹೈರಾಣ ||
ದಕ್ಕನ್‌‌ರೊಳು ಅವನ ಸರಿಯಾರಿಲ್ಲೆಂದು ನಕ್ಕು ಹೇಳಿದ ನಬಿಸಾಬ ಶರಣ  || ಜೀ || ಚೌಕ : ೧
ಬರುಬರುತ ಜಾಬೀರ ಶರಣ ಹೋಗಿ ಹೊಕ್ಕಿದ ಕುರುಬರ ಕೇರಿ  ||
ಒಳ್ಳೆ ಸೊಕ್ಕಿಂದ ನೋಡಿ ತಗೊಂಡ ಕುರಿ  ||
ಖಾಲೆ ಹದಿನಾರು ರೂಪಾಯಿ ಕೊಟ್ಟ ಬರೋಬರಿ ||
ಸಂದಿಗೊಂದಿ ತಿರಗ್ಯಾಡಿ ಬಂದು ಕುರಿ ಕೊಟಗ್ಯಾಗ ಕಟ್ಟಿದ ಪರಬಾರಿ  || ಜೀ ||

ಜಾಬೀರ ಹೆಂಡತಿ ಬೀಬೀ ಖುತುಜಾ ಸತಿ ಮಾತಾಯಿ ಇದ್ದಳು ಸುಂದರಿ ||
ಪತಿ ಆಜ್ಞಾ ಮೀರಕಿ ಅಲ್ಲ ಚಂದಿರಿ ||
ಗಂಡಗ ಅಂದಿಳು ಇದು ಎದಕ ತಂದರಿ  ||
ಹೆಣತಿ ಮಾತಿಗಿ ಜಾಬೀರ ಉತ್ತರಕೊಟ್ಟು ಹೇಳುವೆ ಕೇಳು ಕಂಬುಕಂದರಿ ||  ಜೀ ||

ನಬಿ ಶರಣರಿಗಿ ನಾಳಿನ ಶುಕ್ರವಾರ ಹೇಳಿ ಕೇಳಿ ಬಿನ್ನ ಕೊಟ್ಟಿನಿ ಸಾರಿ ||
ಮನಿ ಸಾರುಣಿಗಿ ಹಾಕು ನೀ ತರಾತುರಿ  ||
ಮೆಣಸಿನಕಾಯಿ ಮಸಾಲಿ ಎಣ್ಯಾಗ ಹುರಿ ||
ಅಕ್ಕಿ ಗೋಧಿ ಬ್ಯಾಳಿ ಬೆಲ್ಲ ತರತೀನಿ ಮಹಮೂದ ಖಾಸೀಮ ಮಕ್ಕಳಿಗಿ ಎರಿ  || ಜೀ ||

ಸರು ಸಾಮಗ್ರಿ ಸಿದ್ಧಪಡಿಸಿದರು ಶುಕ್ರವಾರ ನಾಲ್ಕಕ ಎದ್ದಿಹರ  ||
ಮುಲ್ಲಾಗ ಕರದಿರೂ ತಂದಿದ ಚೂರಿ ||
ಜಾಬೀರ ಶರಣ ಹಿಡಿದು ಖೆಡವಿದ ಕುರಿ ||
ಮಹಿಮೂದ ಖಾಸಿಮ ಶರಣನ ಮಕ್ಕಳು ನಿಂತ ನೋಡತಿರು ಚಮತ್ಕಾರಿ  || ಜೀ ||

ದುಮಾಲಿ
ಮುಲ್ಲಾ ಚೂರಿ ಹಾಕಿದ ಮೇಲೆ ಇವರು ಅಂಗಳಾನ ಕುರಿ ಎತ್ಯಾರ ||
ಮನ್ಯಾಗ ಒಯ್ದು ಸುಲಿಲಿಕ ಹತ್ಯಾರ  || ಜೀ ||
ಮಹಿಮೂದ ಖಾಸಿಮ ನೋಡುತ ಜರಾ ಕುಂತಾರ  ||
ಚೂರಿ ತಗೊಂಡು ಹೊರಗ ಒತ್ತ್ಯಾರ  || ಜೀ ||
ಅಣ್ಣ ತಮ್ಮರು ಕೂಡಿ ಮ್ಯಾಳಿಗಿ ಮೇಲೆ ಓಡ್ಯಾರ  || ಜೀ ||
ಪರಬಾರಿ ಆಟ ಹೂಡ್ಯಾರ || ಜೀ ||
ಖಾಸಿಮ ಮಹಿಮೂದಗೆ ಹೇಳಿದ ನಾ ಕುರಿ ಆಗತಿನಿ ಜೋರದಾರ  ||
ನನ್ನ ಕೊರಳ ಕೊಯ್ಯೋ ನೀ ಪೂರ  || ಜೀ ||

ಏರ
ಚಿಕ್ಕಮಕ್ಕಳು ಕೂಡಿ ನಕ್ಕು ಆಟ ನಡಸಿರು ಚಿಕ್ಕ ತಮ್ಮಗ ಖೆಡವಿದ ಅಣ್ಣ ||
ಹಿಡಿದಿದ ಆತನ ಗೋಣ ||
ಮಿಸಕಬೇಡೆಂದು ಮುಚ್ಚಿದ ಅವನಕಣ್ಣ ||
ದಕ್ಕನೊರೊಳು ಅವನ ಸರಿಯಾರಿಲ್ಲೆಂದು ನಕ್ಕ ಹೇಳಿದ ನಬಿಸಾಬ ಶರಣ || ಜೀ ||     ಚೌಕ : ೨

ತಾಯಿ ತಂದಿಗಿ ಕುರಿ ಮಾಂಸ ಕೊಯುದು ಮನಿಯೊಳು ನಡೆದಿತು ಖಟಪಟ ||
ಇವರು ಮ್ಯಾಳಿಗಿ ಮೇಲೆ ಹೂಡಿರು ಆಟ ||
ಅಣ್ಣ ತಮ್ಮಗ ಕೊಯಿದಿದ ಜಟಪಟ ||
ದಂಡ ರುಂಡ ಎರಡು ಬಿಡಗಡಿಯಾದ ಮೇಲೆ ರಕ್ತಾ ಹರಿತಿತು ಹರದಂಗ ಲೋಟ || ಜೀ ||

ಬಾಯಿ ತೆರೆದು ನೋಡಿ ಹಾಯ್ ಹಾಯ್ ಎಂದು ಕಯ್ಯಾನ ಚೂರಿ ಬಿಟಕೊಂಡ
ಭಾಯಿ ಭಾಯಿ ಎಂದು ಭವಳಿ ಬಂತು ಮುಟ್ಟ ||
ಮ್ಯಾಳಿಗಿ ಮೇಲಿಂದ ಕೆಳಗ ಹಾರಿದ ದಿಟ ಪಟ  ||
ಬಿದ್ದು ಪ್ರಾಣ ಹೊರಟ ಹೋಯಿತು ಯಾರಿಗೂ ತಿಳಿಯದ ಶಿವನಾಟ || ಜೀ ||

ಸರು ಸಿದ್ದಪಡಿಸಿ ಗಡಗಿ ಒಲಿಮೇಲಿರಿಸಿ ಸತಿಗೆ ಹೇಳಿ ಜಾಬೀರ ಹೊರಗೆ ಹೊಂಟ ||
ಬಾಯಾಗ ಹಿಡಿದಿದನು ಸಿಗರೇಟ ||
ತಲಬಾಗಿಲ ದಾಟಿ ಬಲಗಾಲಿಟ್ಟ ||
ಮಹಿಮುದನ ಪ್ರೇತ ಕಿಣ್ಣಿಲಿ ನೋಡಿ ಎತ್ತಿ ಮನ್ಯಾಗ ಒಯ್ದು ಮುಚ್ಚಿಟ್ಟ || ಜೀ ||

ದುಮಾಲಿ
ಪ್ರಭು ಪರೀಕ್ಷಾ ಕಾಲ ತಂದೆಂದು ಹೊರಗ ಬಂದಿರು ಒತ್ತರ ||
ಪಣೊಳಗಿಯೊಳು ಹರಿತಿತು ನೆತ್ತರ  || ಜೀ ||
ಅದು ನೋಡಿದೆ ನೋಡಿ ಮ್ಯಾಳಿಗಿ ಮೇಲೆ ಓಡಿದ ಚಾತುರ  ||
ನಿಂತು ನೋಡಿದ ಚಮತ್ಕಾರ || ಜೀ ||
ಕಣ್ಣ ನೀರ ತಗಿಲಿಲ್ಲ ಎರಡು ಮಕ್ಕಳು ಸತ್ತರ  ||
ಜಾಬೀರ ಎಂಥ ಗುರು ಪುತ್ತರ  || ಜೀ ||
ಗಂಡಹೆಂಡತಿ ಮಾತಾಡಿರು ಮಂದಿ ನೆರಿತೈತಿ ಅತ್ತರ
ಸಣ್ಣ ಮಗನಿಗಿ ಇಬ್ಬರು ಹೊತ್ತಾರ  || ಜೀ ||

ಏರ
ದುಃಖ ಮಾಡದಂತೆ ಚಕ್ಕನೆ ಮನ್ಯಾಗ ಒಯ್ದು ಅಂಟದೊಳೆ ಮುಚ್ಚಿಟ್ಟರು ಹೆಣ  ||
ಮೇಲ ಶಾಲ ಹೊಚ್ಚಿರು ಕೂಡದಂತೆ ನೊಣ ||
ದಕ್ಕನ್‌‌ರೊಳು ಅವನ ಸರಿಯಾರಿಲ್ಲೆಂದು ನಕ್ಕು ಹೇಳಿದ ನಬಿಸಾಬ ಶರಣ  ||            ಚೌಕ : ೩

ಶುಕ್ರವಾರ ಸೂರ್ಯಾಸ್ತ ಆದ ಮೇಲೆ ನಬಿ ಶರಣರು ಊಟಕ ಬಂದಾರ ||
ಜಾಬೀರ ಅಸ್ಸಲಾಮ ವಾಲೆಕುಮ್ ಅಂದಾರ ||
ಕೇಳಿ ಶರಣರು ಕಣ್ಣಿಗಿ ನೀರ ತಂದಾರ ||
ಸೃಷ್ಟಿಯಲ್ಲಿ ಇವನಂತ ಏಕೋನಿಷ್ಠಿ ನಾನೆಲ್ಲಿ ಕಾಣಲಿಲ್ಲ ಖಂದೂರ  || ಜೀ ||

ನೀರ ತಂದು ಕೊಟ್ಟಿರು ನಬಿಸಾಬ ಕೈಕಾಲ ತೊಳಕೊಂಡು ಊಟಕ ಕುಂತಾರ
ನಿಮ್ಮ ಮಕ್ಕಳಿಗಿ ಲಘು ಕರಿರಿ ಅಂತಾರ  ||
ಇವರು ಮೆಲ್ಲಗ ನಡಸೀರು ಮಂತರ ||
ಆಟಕ ಹೋಗ್ಯಾರವರು ಬಂದು ಉಣತಾರ ನಿಮ್ಮ ಊಟ ಐತಿ ನಿಮ್ಮ ಸ್ವತಂತರ  ||  ಜೀ ||

ಜಿದ್ದಿಲೆ ಶರಣರು ಜಾಬೀರಗ ಕರೆದಿರು ಇದ್ದಿದು ಹೇಳಿಬಿಡು ನಿರ್ಧಾರ
ಜಾಬಿರ ನಿಂತ ನಡಗಿದ ಥರ ಥರ  ||
ನೀವು ಊಟ ಮಾಡಿರಿ ಅವರು ಬರತಾರ  ||
ಅಕನಿ ಮುಜಾಫರ ಬಿರ್ಯಾನಿ ಖಷ್ಕಾ ಎಲ್ಲಾನು ಇಟ್ಟಿದೆವು ತರತರಾ || ಜೀ ||

ಸತ್ಯ ಹೇಳು ತನಕ ನಬಿ ಶರಣರು ಅಂದಿರು ಮಕ್ರು ಐತಿ ಮುಡದಾರ ||
ನಾನು ಉಣ್ಣೋದಿಲ್ಲೆಂದು ನುಡದಾರ  ||
ಇವರು ಗಂಡಾ ಹೆಂಡಿರು ಎದಿ ಒಡದಾರ  ||
ಎರಡು ಮಕ್ಕಳು ಕೂಡಿ ವಿಪರೀತ ಆಟ ಆಡಿ ಈಗಿಂದಿಗೆ ಸತ್ತಾರ  || ಜೀ ||

ದುಮಾಲಿ
ಇಷ್ಟು ಕೇಳಿ ನಬಿ ಶರಣ ಕುಂಬೆ ನಿಜನಿಲ್ಲ ಮಂತ್ರನುಡಿದಾ ||
ಮಡದ ಹುಡುಗರ ಮೇಲೆ ಕೈ ಬಡದಾ || ಜೀ ||
ಊಟ ಮಾಡಿರಿ ಎಳಿರೆಂದು ಮಹ್ಮದ ಪೈಗಂಬರ ನುಡಿದ ||
ಹುಡುಗರು ಎದ್ದು ಬಂದು ಕಾಲ ಹಿಡಿದ || ಜೀ ||
ಎಲ್ಲಾರಿಗಿ ಕರಕೊಂಡು ಉಂಡು ನಬಿ ಶರಣರು ಎದ್ದು ನಡಿದಾ ||
ಜಾಬೀರ  ಜೀತೆ ರಹೋ ಎಂದು ಬೆನ್ನ ಮೇಲೆ ಬಡದಾ || ಜೀ ||

ಏರ
ದಿಕ್ಕೆಂಟರೊಳು ಅಧಿ ಹಿರೇ ಸಾವಳಗಿ
ಜಗದ್ಗುರು ಶ್ರೀ ಶಿವಯೋಗಿ ಮುಕ್ಕಣ್ಣ ||
ಲೆಕ್ಕಿಲೆ ಮಹ್ಮದ ಹಿಡಿದ ಆತನ ಚರಣ ||
ದಕ್ಕನ್‌ರೊಳು ಅವನ ಸರಿಯಾರಿಲ್ಲೆಂದು
ನಕ್ಕು ಹೇಳಿದ ನಬಿಸಾಬ ಶರಣ ||  ಜೀ ||         ಚೌಕ : ೪