ಮಕ್ಕಾ ಮದಿನಾದ ಲೆಕ್ಕಾ ಕೇಳಿರಿ ಚುಕ್ಕಿನೊಳು ಇದ್ದ ಮಹ್ಮದ ಮುಸ್ತಫಾ  ||
ಅವನ ಮಿಕ್ಕಿದ ಅಳಿಯ ಮೌಲಾಲಿ ಭೂಪ  ||
ದಿಕ್ಕೆಂಟು ಕೇಳುವಿರಿ ಪ್ರತಾಪ  ||
ನಬಿ ಹಬೀಬರ ಚರಿತ್ರೆ ಕೇಳಿದರ ಪ್ರತಿಯೊಬ್ಬಗ ದೊರಕುವುದು ನಫಾ  || ಜೀ ||

ಮದಿನಾದಲ್ಲಿ ನಬಿ ಶರಣರು ಸಮಾಜ ಮುಗಿಸಿ ಒಂದು ದಿನ ||
ಚಂದದಿಂದ ಮಾಡಿಕೊಂಡು ಯೋಚನ ||
ಬಂದ ಮಂದಿ ಮೇಲೆ ಮಾಡಿರು ಪ್ರನಾ ||
ಸರಳ ಹೇಳಿದಾರ ಎರಳಿ ಮಾಂಸ ಉಣಬೇಕು ಭಂಗ ಆಗ್ಯಾದ ನನ್ನ ಮನಾ || ಜೀ ||

ಯಾರು ತಂದು ಕೊಡತಿರೆಂದು ಕೇಳಿರು ನಾ ತರತೀನಿ ಅಲಿ ಅಂದಾನ  ||
ಅದು ಅಸಾಬ ಮನಿತನ ಖಾನದಾನ  ||
ಒಬ್ಬ ಅಸಾಬ ಎದ್ದು ಬಂದಾನ ಹಜರತ್‌ಕು ಲಾಕೆ ಹಂ ಖಿಲಾಯಂಗೆ ಅಂದಾನ  ||
ಮೌಲಾಲಿ ಇದು ಕೇಳಿ ನೊಂದಾನ  || ಜೀ ||

ತ್ರಿಲೋಕಕ ಮೌಲಾಲಿ ಮೀರಿದಾನೆಂದು ಖಂದೂರ ಅರಸ ಕೇಳ್ಯಾನ  ||
ತನ್ನ ಸೈನಿಕರಿಗೆ ಕರ‍್ದು ಹೇಳ್ಯಾನ  ||
ಮೌಲಾ ನನ ಕೈಯಾಗ ಹ್ಯಾಂಗ ಬಾಳ್ಯಾನ  ||
ಮೌಲಾಲಿ ತಲಿಕೊಯ್ದು ತಂದವರಿಗಿ ತನ್ನ ಮಗಳ ಕೊಡತಿನಂದಾನ  || ಜೀ ||

ದುಮಾಲಿ
ಆಗಿಂದಾಗ ಹೊಡಸಿದ ಡಂಗೂರ ಕೇಳಿರಿ ಜರಾ  ||
ರಾಜ ಖಂದೂರ ಹಿರಸ ತೊಟ್ಟಿದ ಹೀಗೆಂದು ವೀಳ್ಯೆ ಇಟ್ಟಾದ  || ಜೀ ||
ಮೇಕಾತಿಲ ಮಂತ್ರಿ ಕೇಳಿ ಕ್ರೂರ ಆದ ತಯ್ಯಾರ  ||
ಬಿಡಿರಿ ರಾಜರ ಮಾತಾ ಎಷ್ಟರದ ತನ್ನ ಸೈನ್ಯಕ ಹುಕುಮ ಕೊಟ್ಟಿದ  || ಜೀ ||
ರಣಭೇರಿ ವಾದ್ಯ ನುಡಿಸ್ಯಾರ ಕಾಳಿ ಹಿಡಶ್ಯಾರ ಕುದರಿ ಬಿಡಶ್ಯಾರ
ಪಾಗಾಕ ಕಟ್ಟಿದ ಪ್ರಧಾನಿ ಚಿಲಕತ ಉಟ್ಟಿದ  || ಜೀ ||

ಏರ
ಯುದ್ಧ ಸಾಮಗ್ರಿ ಸಿದ್ಧಪಡಿಸಿದರು ಸದ್ಯ ಹೇರಸಿರು ರಣಟೋಪ ||
ಹದಿನಾಲ್ಕು ನೂರು ಸಾವಿರ ಸೈನ್ಯ ಘಟ ಟೋಪ ||
ದಿಕ್ಕೆಂಟರೊಳು ವೀರ ಪ್ರತಾಪ  ||
ನಬಿ ಹಬೀಬರ ಚರಿತ್ರೆ ಕೇಳಿದರ ಪ್ರತಿಯೊಬ್ಬಗ ದೊರಕುವದು ನಫಾ  || ಜೀ ||           ಚೌಕ : ೧

ಓಂ ಸಾಬ ಎಂಬ ಅಸಾಬ ಅಶರಣ ಹೊಂಟಿದ ಶಿವನಾಮ ಸ್ಮರಿಸುತ ||
ಒಂದು ಎರಳಿ ಎದರಿಗಿ ಬಂತು ಹಾರುತ ||
ಅದಕ ಬೆನ್ನು ಹತ್ತಿದಾನು ಚೀರುತ ||
ನೀವು ಹೋಗಿ ಮಾಡುವುದು ಯಾವ ಕೃತಾ ||
ಮೌಲಾಲಿ ತಲಿ ಕೊಯ್ಯುವುದಕ ಬಂದಿನೆಂದು ಮೇಕಾತಿಲ್ ಹೇಳಿದ ವೃತ್ತಾಂತ  || ಜೀ ||

ನಾನೇ ಮೌಲಾಲಿ ಎಂದು ಹೇಳಿದ ಶರಣ ಕೇಳಿ ಹಿಗ್ಗಿದಾನು ಪ್ರಸತಾ ||
ಇನ್ನು ಮಾಡಬಾರದೆಂದಿದ ಸುಸ್ತಾ ||
ಸೈನಿಕರಿಗಿ ಕಣ್ಣ ಸೊನ್ನಿ ಮಾಡಿದಾನು ಕ್ಷಣದಲಿ ಆಗಿರು ಸುತ್ತಾಮುತ್ತಾ  || ಜೀ ||

ಮೌಲಾಲಿ ನಾಮ ನುಡಿದ ಓಂಸಾಬ ಶರಣ ಯುದ್ಧ ಮಾಡಿದಾನು ಅದ್ಭುತ ||
ಏಳುನೂರು ಮಂದಿ ಬಿದ್ದರು ಸತ್ತ
ಮೇಕಾತಿಲ್ ಮಂತ್ರಿಗಿ ಆಗಿತ್ತು ಗೊತ್ತ
ಫಂದ ಮಾಡಿ ಹಿಂದಿಂದ ಬಂದು ಓಂಸಾಬನ ತಲಿ ಕೊಯ್ದು ವಿಪರೀತ  || ಜೀ ||

ತಲಿಕೊಯ್ದು ತಾಟಿನೊಳು ಇಟಕೊಂಡು ಫಾಟಲೆ ನಡದಿದ ನಗುನಗುತ ||
ನನ್ನ ಕಾರ್ಯ ಕೊನೆಗೊಂಡಿತ ||
ಚುಕ್ತಾ ಖಂದೂರ ಅಳ್ಯಾ ಅದೇನು ಪುಕ್ತ ||
ಉಲ್ಲಾಸದಿಂದ ಊರ ದಾರಿ ಹಿಡದಿದಾನು ಮುಂದಿನದು ಕೇಳಿರಿ ಗಮ್ಮತ್ತ || ಜೀ ||

ದುಮಾಲಿ
ಓಂ ಸಾಬನದು ಒಯ್ದಿರು ರುಂಡ ಬಿದ್ದಿತು ಅಲ್ಲಿ ದಂಡ ||
ಕಾಗಿ ಅಲ್ಲಿ ಕಂಡುಬಂದಿತು ವತ್ತರ ಕುಡಿದಿತು ಆತನ ನೆತ್ತರ  || ಜೀ ||
ಕಾಗಿ ನೆರದಿವು ಹಿಂಡಿಗಿ ಹಿಂಡಿ ರಕ್ತ ಕುಡಿದವು ಮನಗಂಡ ಒಡೆದಿತು ಹಿಂಡ ||
ಹಾರಿವು ಅಂತರ ಬೇರೆ ಐತಿ ಗುರುವಿನ ತಂತರ || ಜೀ ||
ಮೌಲಾಲಿ ಮಕ್ಯಾಕ ಇದ್ದರು ಪುಂಡ ಪ್ರತಾಪಿಗಳ ಗಂಡ ಮನಿ ಮೇಲೆ ಝಂಡಾ ||
ಹಚ್ಚಿದಾರೋ ಹಸರ ಮೇಲ ಮಹ್ಮದ ಪೈಗಂಬರನ ಹೆಸರ || ಜೀ ||

ಹಿಂಡ ಅಗಲಿ ಗಂಡಕಾಗಿ ಹಾರಿಹೋಗಿ
ಜಂಡಾದ ಮೇಲೆ ಕೂತಿತು ಸಾಪ ||
ಅಲ್ಲಿ ಸಮಾಜಕ ನಡದಿರು ಜಪಜಪ ||
ಕಾಗಿ ಬಾಯಾನ ರಕ್ತ ಬಿದ್ದಿತು ಕೆಂಪ  ||
ನಬಿ ಹಬೀಬರ ಚರಿತ್ರೆ ಕೇಳಿದರ
ಪ್ರತಿಯೊಬ್ಬಗ ದೊರಕುವುದು ನಫಾ || ಜೀ ||   ಚೌಕ : ೨

ನೆತ್ತರ ಕಂಡು ವಿಚಿತ್ರಾಯ್ತು ಮೌಲಾಲಿಗಿ ||
ಒತ್ತರ ಹೋಗಿರು ಮಸೂತಿಗಿ ||
ಕರೆದು ಕೇಳಿರು ನಬಿಸಾಬ ಮಾವಗ ||
ಕಾಗಿ ರಕ್ತ ಮೈಮೇಲ ಬಿದ್ದಾದ ಅದರ ಬಗಿ ಹೇಳಿರಿ ಎನಗ || ಜೀ ||

ನಬಿಸಾಬ ಹೇಳಿರು ಓಂಸಾಬ ಶರಣ ಸತ್ತಾನ ನಿನ್ನ ಹೆಸರ ಮ್ಯಾಗ ||
ನಾಯೇನ ಹೇಳಲಿ ಆತನ ಭೋಗ ||
ವರ್ಣನ ಮಾಡಂಗಾಯಿತು ತ್ರಿಜಗ ||
ಅದೇ ರಕ್ತ ನಿನ್ನ ಮೈಮೇಲ ಬಿದ್ದಿತೆಂದು ಮಾವ ಹೇಳಿರು ಅಳಿಯಾಗ  || ಜೀ ||

ಮೊಗದ ಅನ್ನುವ ಖಂದೂರದ ಅರಸ ಬಂದೂರ ಹನ ಈ ಜಗದಾಗ ||
ಅಂವ ಹುಟ್ಟಿದಾನು ಕ್ರತಾಯುಗದಾಗ ||
ಯಾರ್ಯಾರು ಇಲ್ಲ ಅವನ ನಿಗದಾಗ ||
ಮೌಲಾಲಿಗಿ ಉರಪ ಇಟ್ಟಿತರೆಣ್ಣ ಆತನ ಹೆಸರ ತೆಗೆದಾಗ || ಜೀ ||

ಮತ್ತೇನು ಆಯಿತೆಂದು ಮಾವಗ ಕೇಳಿರು
ದಂಡೆತ್ತಿ ಖಳುವಿರು ನಿನ್ನ ಮ್ಯಾಗ ||
ಬಂದಿರು ನಿನ್ನ ತೆಲಿಯ ಕೊಯ್ಯುವ ಸಲುವಾಗಿ ||
ಓಂಸಾಬ ಸಿಕ್ಕಿದ ಅವರ ಕಯ್ಯಾರ ||
ನಾನೇ ಮೌಲಾಲಿ ಎಂದು ಹೇಳಿದ ಪಾಪ ಪ್ರಾಣ ಕೊಟ್ಟಿದ ನಿನ್ನ ಕಾಲಾಗ || ಜೀ ||

ಪುಂಡ ನಬಿಸಾಬರ ಮಾತ ಕೇಳಿ ಗುಂಡ ಬಡಿದಂಗಾಯಿತು ಮೌಲಾಗ ||
ಹಂಗೆ ಮನಿಗಿ ಬಂದಿದ ಹೌಲಾದಾಗ  ||
ಧೂಲ್ ಧೂಲ್ ಕುದರಿ ತೆಗೆದ ಬಯಲೀಗ  ||
ಶಿವನ ಮನಿ ಹೂಲಿ ನಡೆದಿದ ಮೌಲಾಲಿ ನಡಗಲಕತ್ತಿತು ಮೂಜಿಗ || ಜೀ ||

ಓಂ ಸಾವಿನ ತೇ ಒಯ್ದಿದ ಪ್ರಧಾನ ಬೀಳದಂತೆ ಅನ್ಯರ ನೆದರೀಗ ||
ಒಯ್ದಿಟ್ಟಿದ ಅರಸನ ನೆದರೀಗ  ||
ಮುಜರಿ ಹೊಡೆದು ನಿಂತಿದ ಸದರೀಗ ||
ಮೌಲಾಲಿ ತಲಿಕೊಯ್ದು ತಂದಿನಿ ಮಾಂವ
ಮಗಳಕೊಟ್ಟು ಮದವಿ ಮಾಡು ಚದರೀಗ || ಜೀ ||

ದುಮಾಲಿ
ತಯ್ಯಾರ ನಡಸೀರು ಲಗ್ನ ಶೃಂಗರಿಸಿ ಪಟ್ಟಣ ಕಟ್ಟಿರು ತೋರಣ ||
ವಾದ್ಯದ ನಾದ ಅಷ್ಟೊತ್ತಿಗೆ ಮೌಲಾಲಿ ಹೋಗಿದ್ದ || ಜೀ ||
ನೋಡಿ ಅಲಿ ಮೌಲಾಲಿ ನಾಮಕರಣ ಹಾರಿತೋ ಹರಣ ಮಾಡತಿದ್ದರೋ ವರ್ಣ
ಬಿದ್ದಿತೋ ಗಾದ ಇವ ಯಾರೆಂದು ನಡಸೀರು ಶೋಧ || ಜೀ ||
ಖಂದೂರ ಎದರಿಗಿ ಬಂದ ಅದೇ ಕ್ಷಣ ಕೇಳಿರಿಪೂರ್ಣ  ||
ಹೇಳೆಂದು ನಾಮಕರಣ ಕೇಳಿದನು ಜಿಗಿದ ಅಲಿ ಉಸರೀರು ಕಲ್ಲಿನ ತೆಗೆದ || ಜೀ ||

ಏರ
ವಿಶ್ವಾಸ ಘಾತಕಿ ಮುಸಲ್ಮಾನರ ಅಂಶ
ದುಷಮನ್ನರಿದ್ದಾರೋ ಏ ಎಪ್ಪ
ಮೌಲಾಲಿಗಿ ನೀ ಮಾಡಿಸಿದೆಂದು ಸಫಾ ||
ತಲಿ ನೋಡುವುದಕ ಬಂದಿದ ಭೂಪ
ನಬಿ ಹಬೀಬರ ಚರಿತ್ರ ಕೇಳಿದರ
ಪ್ರತಿಯೊಬ್ಬಗ ದೊರಕುವುದು ನಫಾ || ಜೀ ||   ಚೌಕ : ೨

ಮೌಲಾಲಿ ತಲಿ ಬಲ್ಲವ ಬಂದಾನೆಂದು ತಂದು ತೋರಸಿರು ತತ್ಕಾಲ ||
ಇವನೆ ಮೌಲಾಲಿ ಎಂಬುದು ಬರಲಿಲ್ಲ ಖ್ಯಾಲ ||
ಯಾರಿಗಿ ತಿಳಿಯದು ಶಿವನ ತಿಪ್ಪಲ ||
ರುಂಡ ಕಣ್ಣಾರ ಕಂಡು ಮೌಲಾಲಿಗಿ ಒಡಲೊಳು ಇಟ್ಟಿತು ಘಾಲಮೇಲ || ಜೀ ||

ಖಂದೂರಗ ಬಂದೂರ ಮೌಲಾಲಿ ಬಿಲ್‌ಕುಲ್ ನಿನಗ ಬುದ್ದಿನೆ ಇಲ್ಲ
ಬಲಕಿ ನಿನ ಮಸ್ತಕ ಶುದ್ದಿಲ್ಲ ||
ಇದು ಏನ ಮಾಡಿಟ್ಟಿದಿ ಗದ್ದಲ ||
ಓಂಸಾಬ ಎಂಬ ಶರಣನ ತಲಿ ಇದು ಬೇಕಂತ ಕೊಯಿಸಿ ಬಿದ್ದಿದಿ ಹುದಲಿ || ಜೀ ||

ಮೌಲಾಲಿ ಅಂದರ ಹೆಂತವ ಇರತಾನೆಂದು ನಿಂತು ಕೇಳಿದರು ಸುತ್ತೆಲ್ಲ ||
ಅವನ ಸ್ವರೂಪ ನಮಗೇನು ಗೊತ್ತಿಲ್ಲ ||
ನೀ ಸುಳ್ಳ ಹೇಳಗೀಳಿ ತಿಪ್ಪಲ ||
ನಾನೇ ಮೌಲಾಲಿ ಎಂದು ಹಕಾರಿ ಹೊಡದಿದ ಯುದ್ದ ನಡೆದಿತು ಮೊಖಾಬಲ  || ಜೀ ||

ಖಂದೂರ ಸೈನ್ಯ ಒಂದು ಉಳಿಯಲಿಲ್ಲ ಎಲ್ಲರು ಆಗಿರು ನಿಕಾಲ ||
ಪರಮೇಶ್ವರಗ ಬಂದಿತು ಖ್ಯಾಲ ||
ಜುಬ್ರಾಹೀಗ ಕರೆದು ಹೇಳಿರು ಸ್ವಲ್ಪ ||
ಯುದ್ಧ ಮಾಡಿ ಸದೈ ಬೆಂಡ ಬಡಿದಾನ ಖಂದೂರದೊಳು ಹಜರತ ಮೌಲಾ || ಜೀ ||

ಈಗಿಂದೀಗ ಮದಿನಾ ಪಟ್ಟಣಕ ಹೋಗಿ ನಬಿ ಶರಣರಿಗಿ ಹೇಳು ಪೈಲಾ ||
ಖಂದೂರಕ ಹೋಗೆಂದು ತತ್ಕಾಲ ||
ಬರದ ವರದಿಕೊಟ್ಟಿದ ಜುಬ್ರಾಹಿಲ ತಯಾರಾಗಿ ನಡದಿರು ರಸುಲುಲ್ಲಾ  ||
ಅಷ್ಟೊತ್ತಿಗಿ ನಾನೂರು ಗಾಯಗಳು ಮೌಲಾಗ ಆಗಿವು ಮೈಯೆಲ್ಲ || ಜೀ ||

ದುಮಾಲಿ
ನಬಿಸಾಬ ಶರಣ ನಡೆದಾನ ಹಸನ್ ಹುಸೇನ ಹತ್ತಿದಾರು ಬೆನ್ನ ||
ಮುತ್ಯಾ ತಡಿತಡಿರಿ ನಾವು ಬರತೆವು ಕರಕೊಂಡ ನಡಿರಿ  || ಜೀ ||
ಶರಣ ತಿಳಿದ ಮೊಮ್ಮಕ್ಕಳ ಭಾವನಾ ಬರ‍್ರಿ ಅಂದಾನ ಕಂಬಳ ಹಾಸಿ ಗಮನಾ ||
ಮೇಲಕುಂತು ನಡಿರಿ ಅಲ್ಲಾ ಹೋ ಅಕ್ಬರ್ ಎಂದು ಹೊಡದಿರು ಛಡಿರಿ || ಜೀ ||

ನೀರಿನ ಮೇಲೆ ಕಂಬಳಿ ನಡದಿತು ಸನನ ಒಂದೇ ಸವನ ಹೋಗಿ ಮುಟ್ಟಿರಂಣ್ಣಾ ||
ಇಲ್ಲ ನಿಲಗಡಿರಿ ಹಸನ್ ಹುಸೇನಾಯಿನ್ ಕಂಡಿರು ತಂದಿ ಅಡಿರಿ  || ಜೀ ||

ಏರ
ನಬಿ ಶರಣರ ಚರಣ ದರ್ಶನ ಆದಾಗೆ ಮೌಲಾಲಿಗಿ ತುಂಬಿತು ಹುರುಪ ||
ಮೊಗದ ಅರಸನ ಮುಕಳಿ ಇಟ್ಟಿತು ಉರುಪ ||
ಖಂದೂರಗೆ ಮಾಡಿ ಬಿಟ್ಟಿರು ತಿರಪ ||
ನಬಿಹಬೀಬರ ಚರಿತ್ರೆ ಕೇಳಿದರ ಪ್ರತಿಯೊಬ್ಬಗ ದೊರಕುವುದು ನಫಾ || ಜೀ ||
ಚೌಕ : ೪
ನಬಿ ಶರಣರು ಹೋಗಿ ಮೌಲಾಲಿಗಿ ನೋಡಿ ಕೈಯಾಡಿಸಿರು ಮೈಮ್ಯಾಗ ||
ಗಾಯಿ ಹೋಗಿ ಬಿದ್ದಿತು ಥಣ್ಣಗ ||
ಮಾವ ಮತ್ತು ಹೇಳಿದರು ಅಳಿಯಾಗ ||
ಸತ್ಯ ಶಿವನ ಜ್ಞಾನ ನಿನಗೈತಿ ತಿರವ್ಯಾಡಿ ಬಿಡು ಬಿಡುವಿಲ್ಲದಂಗ || ಜೀ ||

ನಬಿಶರಣರು ತಮ್ಮ ಜುಬ್ಬಾ ತೆಗೆದು ತೊಡು ಅಂದಿರು ಮೌಲಾಲಿಗಿ ||
ಗಾಯಿ ಮಾಯ್ದು ಹೋಗಿವು ಗಳಿಗ್ಯಾಗ ||
ಹಾರಿ ಕೂತಿದಾರು ಕುದರಿ ಮ್ಯಾಗ  ||
ಅಲಿ ಎಂದು ಹುಲಿ ಹೊಕ್ಕಿರು ರಣದಲ್ಲಿ ತಲಿ ಕೊಯ್ದಿದ ಮೇಕಾತಿಲಗ  || ಜೀ ||

ದಂಡ ಸಫಾಗಿರು ಕಂಡುಬಂದೂರ ಹುಲ್ಲ ಕಲ್ಲ ಹಿಡಿದಿದ ಬಾಯಾಗ
ದಂಡತ್ವ ಹಾಕಿದ ಅಲಿ ಮೌಲಾಲಿಗ ||
ಪಾದ ಹಿಡಿದ ಮಹ್ಮದ ಪೈಗಂಬರಗ ಕಲಮ ಓದಿಸಿ ಎನಗ ||
ದಿಲ್‌ದಾರ ಮಾಡಿ  ಜೀವದಾನ ಮಾಡಬೇಕು ಎನಗ ||

ದಮಾಲಿ
ನಾ ಸೋತೆ ನೀ ಗೆದ್ದೆ ಎಂದು ಅಲಿ ಖಂದೂರ ಬಾಯಿಲಿ ಶಿವನ ಮನಿ ಹುಲಿ ||
ಪಡದಿದಿ ಹೆಸರ ಮೊಹ್ಮದ ಪೈಗಂಬರರ ಹೆಸರ || ಜೀ ||
ತಂದಿ ಮಗಳು ಅದೇ ಕ್ಷಣದಲ್ಲಿ ಕಲಮಾ ಬಾಯಿಲಿ ಓದಿ ಶಿವಲೀಲಿ ||
ಅಲ್ಲಾ ಹೂ ಅಕ್ಬರ್ ಹಿಂದ ನುಡಿದಿದಾನು ಖಂದೂರ || ಜೀ ||
ಸುಗ್ರ ಎಂಬ ಮಗಳಿಗಿ ಈ ಮಾಮಾ ಹಸನ್‌ಗ ಕೊಟ್ಟಿದಾನೋ
ಆಗ ಲಗ್ನ ಮಾಡ್ಯಾರ ಬೀಗರಾಗಿ ಪ್ರೇಮಿಲೆ ಕೂಡ್ಯಾರ || ಜೀ ||
ಖಂದೂರ ರಾಜಕೀಯ ಒಪ್ಪಿಸಿದ ಆಗ ಅಲಿಮೌಲಾಗ ಮದಿನಾಕಬೇಗ
ಬಂದು ಕೂಡ್ಯಾರ ಓಂಸಾಬಗ ಇಂಬ ಮಾಡ್ಯಾರ || ಜೀ ||

ಏರ
ಧರೆಯೊಳು ಹಿರೇ ಸಾವಳಗಿ ಶ್ರೀ ಸಿದ್ಧ ಅಲ್ಲಿ ಮಾಡಿದ ತಪ  ||
ಕವಿ ಮಹ್ಮದ ಪಟಿಸಿದ ಅವರ ಜಪ
ದಿಕ್ಕೆಂಟರೊಳು ವೀರ ಪ್ರತಾಪ ||
ನಬೀ ಹಬೀಬರ ಚರಿತ್ರ ಕೇಳಿದರ ಪ್ರತಿಯೊಬ್ಬಗ ದೊರಕುವುದು ನಫಾ  || ಜೀ ||         ಚೌಕ : ೫