ಚಿಕ್ಕ ಬಾಲಕ ಸಬಿಕರಿಗಿ ಚಿಕ್ಕ ಕಡದಂಗ ಹೇಳತಿನಿ
ಸುಕ್ಕಾ ಕೇಳಿರಿ ಮುಸಲ್ಮಾನರ ಶಾಸ್ತ್ರ ಶಿಲಶಿಲಾ ||
ಮುಖ್ಯ ಪೈಗಂಬರನ ಭಕ್ತಿಗಿ ಮೆಚ್ಚಿದ ಮಹ್ಮದ ರಸುಲುಲ್ಲಾ
ಪಕ್ಕಾ ಪಾಕ ಖುರಾನ ಕಿತಾಬ ಬರದಾರ ಶರಣರ ಲೀಲಾ
ದಕ್ಕಿನ್ ದೇಶ ಹಿಂದೂಸ್ಥಾನ ನಾಲ್ಕು ದಿಕ್ಕ ಶೋಧ ಮಾಡಿ
ಮಕ್ಕಾ ಶಹರ ಕಟ್ಟಿ ಮುಗಶಾರ ಇಬ್ರಾಹಿಮ ಖಲಿಲುಲ್ಲಾ
ಹಕ್ಕ ಹಮಚೌಕ ಮಕ್ಕಾದ ಪಾಯಾ ಹಾಕ್ಯಾರ ನಿಂತಿಲ್ಲ  || ಜೀ ||

ಎಷ್ಟು ದಿನ ಪೈಗಂಬರರು ಕಷ್ಟು ದೇಹದ ಬಿಟ್ಟಿದಾರು
ನಿಷ್ಠಿ ನೇಮ ಸತ್ಯೇ ಸಮಾಜ ಮಾಡಿ ದುಡದಾರ
ಜ್ಞಾನ ದೃಷ್ಟಿ ಎಂಬೋ ಹರದಾಡುವ ಮನಸ ಹಿಡಿದಾರ
ಅಂಗುಷ್ಟದ ಮೇಲೆ ನಿಂತು ಅಂತರಲೆಸಿ ಸಿಡಿದಾರ
ಸೃಷ್ಟಿಯೊಳಗ ಹಿಂತಾ ಕೀರ್ತಿ ಹುಟ್ಟಿಸಬೇಕಂತ ಅವರು
ಘಟ್ಟಿಯಾಗಿ ಮನಸ ಎಂಬೋ ನೂಲ ಹಿಡಿದಾರ
ಶ್ರೇಷ್ಠ ಮುಕ್ತಿ ಸ್ಥಳ ಮಾಡಬೇಕೆಂದು ತಾವೆ ನಡೆದಾರ  || ಜೀ ||

ಸ್ವಯಂ ಪೈಗಂಬರ ತಾನು ಖಾಯಂ ಆಗಿ
ಇಬ್ರಾಹಿಂ ಖಾಯಪೂರ ಶೋಧ ಮಾಡಿ ಮಕ್ಕಾದ ಪಾಯ ಹೊಡಶಾರ
ನಿರಭಯ ಎಂಬೋ ದೀನ್ ಹೊಡಿದು ಝಂಡಾ ನಡೆಶ್ಯಾರ
ಚಿನ್ಮಯ ಸ್ವರೂಪ ಎಂಬೋ ಗುನ್ಯಾ ಹಿಡಸ್ಯಾರ
ಕಾಯಾ ವಾಚಾ ಮನಸಾ ಪೂರಕ ಪಾಯಾ ತುಂಬಿ ಪೈಗಂಬರರು
ರಾಯ ತೆಗೆದು ಕಟ್ಟುವಂತ ಕಾರಖಾನಿ ನಡಶ್ಯಾರ
ಅಷ್ಟ ಮದಾ ಹಮಾಲರಿಗಿ ಸ್ವತ ದುಡಶ್ಯಾರ  || ಜೀ ||

ಇಷ್ಟು ಕೇಳಿ ಸತ್ಯ ಶರಣ ನಿಶ್ಚಯ ಮಾಡಿ ಮನಸನ್ಯಾಗ
ಗಚ್ಚ ಹಾಕಿ ಕಟ್ಟಿ ಮಕ್ಕಾದ ಪಾಯ ತಿರವ್ಯಾರ
ಸುರು ಸಾಲಿಗಚ್ಚಾರಪ್ಪಾ ತಿಳಿದಿಲ್ಲ ಆಗೋ ಹುನ್ನಾರ
ಅವರು ನಿಚ್ಚಳಾಗಿ ಕಟ್ಯಾರ ಆ ದಿನ ಐದಾರು ಧರ
ಮುಚ್ಚಿ ಮನಗ್ಯಾರ ರಾತ್ರಿ ವ್ಯಾಳಿ ಗಚ್ಚ ಹಾಕಿ ಕಟ್ಟಿದ ಗ್ವಾಡಿ
ಬಿಚ್ಚ ಕಲ್ಲ ಬಿದ್ದಾವಪ್ಪ ನೆಲದ ಹವಾರ
ಮುಂಜಾನಿ ಎಚ್ಚರಿಕಿ ಆಗಿ ಪೈಗಂಬರ ಆಗಿದ ದಿಲ್‌ಗಿರ  || ಜೀ ||

ದುಮಾಲಿ
ಗಚ್ಚ ಹಾಕಿ ಗ್ವಾಡಿಕಟ್ಟಿದರಾ ||
ಆಗತಿತ್ತು ಅದ್ರ ತದ್ರ  || ಜೀ ||
ರಾತ್ರಿ ಅದು ಬಿತ್ತು ಹೊತ್ತ ಹೊಂಡರಟಗಿ ||
ದಿಕ್ಕಾಪಾಲ ಕಲ್ಲ ಅಂತರಟಗಿ  || ಜೀ ||

ಅವರು ಕಟ್ಟತಿರು ದಿನರೋಜಾ ||
ನಿಂದ್ರುವಲ್ಲದು ಗುಂಬಜ || ಜೀ ||
ಪುನಾಃ ಪಾಯ ಹಿಡಿದು ಹಚ್ಯಾರ ಖಟಗಿಗಿ
ನಿಂದ್ರುವಲ್ಲದು ಶಿವನ ಕುಂಟಲಾಟಗಿ || ಜೀ ||
ನಜು ಓದಿ ಹೇಳ್ಯಾರ ಸೋಳಾಣಿ
ಇಬ್ರಾಹಿಂ ಧನಿ  || ಜೀ ||
ಕೊಡರಿ ಕುರಬಾನಿ ಫಲಸಿದ ಗಂಟಿಗಿ ||
ಸತ್ರಿ ಹಜಾರ ಪಾಯದ ಮ್ಯಾಲ ಕೊಯ್ಯಿರಿ ಒಂಟಿಗಿ || ಜೀ ||

ಏರು
ಹತ್ತೂರ ಮಾತ ಮೀರಲದೆನೆ
ಸತ್ರಿಹಜಾರ ಒಂಟಿ ಪಾಯದ ಮೇಲೆ ಕೊಯ್ದು
ನೆತ್ತರ ನೀರಾಗಿ ಹರಿತಿತ್ತು ಊರ ಸುತ್ತೆಲ್ಲ
ಎತ್ರ ಎತ್ತಗೈ ಮುಳಗಷ್ಟು ಲೋಟ ಹೋಯ್ತು ಭೂಮಿಯ ಮ್ಯಾಲ
ಆ ನೆತ್ತರದಾಗ ಕೆರಿಬಾವಿ ತುಂಬ್ಯಾವ ನಾಲಾ  || ಜೀ ||     ಚೌಕ : ೧

ಪರವಾಯಿಲ್ಲದೆ ಪೈಗಂಬರ ಗುರುವಿನ ಮ್ಯಾಲ ಭಕ್ತಿಯಿಟ್ಟು
ಕುರುಬಾನಿ ಮಾಡಿ ಪಾಯದ ಮ್ಯಾಲ ಒಂಟಿ ಕೊಯಿದಿದ
ಇದು ಇನ್ನರೆ ನಿಂತಿತೆಂದು ಪಾಯ ಹಾಕಿದಾ  ||
ಅವರು ನಿರಾಹಾರ ಇದ್ದಿದಾರೋ ಅನ್ನ ನೀರಿಲ್ಲದ
ದಾರಾ ಕಿತ್ತಿ ಸಂ ಜೀವ ಮಾಡಿ ತೋರಲಾರಸದೆ ಮನಿಗಿ ಬಂದು
ಆರ ತಾಗಿಸಿ ಅವಾರ ಗ್ವಾಡಿ ಲಾಗ ಬಿಗದಾದ
ನೋಡಿ ಮಾರಿ ಮಾಡಿ ಪೈಗಂಬರ ಖಿನ್ನ ಆಗಿದಾ  || ಜೀ ||

ಕಟ್ಟಲದೆ ಇದು ಭಾಗ ಇಲ್ಲ ಕಟ್ಟಿ ಕಟ್ಟಿ ಬೇಸರ ಅದಾ
ಬಿಟ್ಟ ಮನಗಿದ ಗಾಡ ನಿದ್ರಿ ಹತ್ತಿ ಬಿಟ್ಟಾದ
ಕೆಟ್ಟ ಕನಸಬಿತ್ತು ಜುಬ್ರಾಹಿಲ ಭೇಟಿ ಕೊಟ್ಟಿದ
ಹುಟ್ಟಿದ ಮಗನಿಗಿ ಪಾಯದ ಮೇಲೆ ಕೊಯ್ಸು ಮಕ್ಕಾ ಹುಟ್ಟಿತಾದ  ||

ಇಷ್ಟ ಹೇಳಿ ಇಬ್ರಾಹಿಂ ಕಬುಲಿ ಬಿಟ್ಟ ಮನಸಿನಾಗೆ
ಗಟ್ಟಿ ಮಗನಿಗಿ ಕೊಯಿತಿನೆಂತ ವಚನ ಕೊಟ್ಟಿದ
ನಿಷ್ಠಿಗಿ ಖರೆ ಎಂದು ಜುಬ್ರಾಹಿಲಗ ಪಾದ ಮುಟ್ಟಿದ  || ಜೀ ||

ಗಬರಾಸಿ ಎಚ್ಚರಕಿ ಆಗಿದಾನೋ ಅಬ್ಬರಿಸಿ ಒಮ್ಮೆ ಎದ್ದು ಕೂತ
ಒಬ್ಬರಿಗಿ ಹೇಳಲಾರದೆ ತನ್ನ ಮನಸಿಗಿ ತಿಳಿದಿದ
ಸೂಚಿರ ಭೂತ ಸಾಬೂನ ತಂದು ಮಗನ ಮೈ ತೊಳದಿದ
ಇಬ್ರು ನಮಾಜಕ ಹೋಗೋಣಂತ ಮಗನಿಗಿ ಬೋಧ ಹೇಳಿದ
ಶುಭ ಲಕ್ಷಣ ಸುರಮಾ ಹಚ್ಚಿ ಮಗನಿಗಿ ಮಾತ ತಿಳಿಸಿ ಮುಂದಕ ನಡದಿದಾ  ||
ಅಲ್ಲಾನ ಹೆಸರ ಮ್ಯಾಲ ಪ್ರಾಣ ಕೊಡಲಾರ ಮಗ ತಯ್ಯಾರಾಗಿದ್ದ  || ಜೀ ||

ತಂದಿ ಮಗಾ ಇಬ್ರು ಕಲತು ಒಂದೇ ಮನಸಿಲಿ ಹೋಗತಾರ
ಮುಂದೆ ದಾರ್ಯಾಗ ಒಬ್ಬ ಪೀರಸತಾ ಬಂದು ಮಗನಿಗಿ ತಡದಿದ
ಹಿಂದೆ ನೋಡಿದಿಲ್ಲ ಪೈಗಂಬರ ಮುಂದ ನಡದಿದಾ
ಅವರು ನಿಂದ್ರ ಎಂಬೋ ಶಬ್ದ ಕೇಳಿ ಸ್ವಲ್ಪ ತಡದಿದಾ
ಮುಂದಿನ ಭವಿಷ್ಯ ಕೇಳೋ ತಮ್ಮ ಮುಂದ ಎಕಡಿ ಹೋಗತಿ ನೀನು
ನಿಮ್ಮ ತಂದಿ ಪಾಯಕ ಆಹಾರ ಕೊಡತಾನ ಕುತ್ತಿಗಿ ಕೊಯ್ದಾ
ನಿನ್ನ  ಜೀವ ಉಳಸಲಾಕ ಬಂದಿನಿ ಜಲ್ದಿ ಹೋಗಪಾ ಸಿಡದಾ || ಜೀ ||

ದುಮಾಲಿ
ಯಾಂವ ಇದ್ದಿ ಹೇಳೋ ಶತ ಮೂರ್ಖ ||
ತಿಳುಯಲ್ದೆನ ಲೆಕ್ಕ || ಜೀ ||
ತಂದಿ ತನ ಮಗನಿಗಿ ಹ್ಯಾಂಗ ಕೊಯಿತಾನ
ಸುಳ್ಳ ಹೇಳಿ ಕಟಗೊಂಡಿ ಖೈಂತಾನ  || ಜೀ ||
ನಿಂದ್ರ ಬ್ಯಾಡ ಇಲ್ಲಿಂದ ನಡಿ ||
ಹೇಳ ಬ್ಯಾಡೋ ನುಡಿ  || ಜೀ ||

ತೆಲಿ ಕೆಡಸಬ್ಯಾಡಂತ ಎರಡು ಥಳಶ್ಯಾನ
ಹೇಳಬ್ಯಾಡಂತ ಅವರಿಗ ತಿಳಿಶ್ಯಾನ
ಓಡಿ ಹೋಗಿದಾನೋ ನೋಡಲಿಲ್ಲ ತಿರಗಿ
ತಂದಿಗಿ ಅಂವ ಕೂಗಿ  || ಜೀ ||
ಹೋದ ಬೆನ್ನಿಗಿ ಹೋಗಿ ಕಲತಾನ
ಬಾಬಾ ಹೋಗರಿ ಗುಡ್ಡದ ಮ್ಯಾಲ ಇನ್ನಾ  || ಜೀ ||

ಏರ
ಇಸ್ಮಾಯಿಲ್ ಪೈಗಂಬರ ಇಬ್ರಾಹಿಂ ಮಗನ ಹೆಸರ
ಇಬ್ರು ಕಲ್ತು ಪಾಯದ ಮ್ಯಾಲ ನಿಂತಾದ ಭಾಗಿಲ್ಲ
ಮಗನಿಗಿ ಅಂತಾರ ಹೇಳಿದ ಮಾತಿಗಿ ಆಗಪ್ಪ ಕಬೂಲ
ಕೇಳರಿ ಅವರಿಗಾದರನೂ ದುಃಖ ಬಂತು ಹೇಳೂಕ ಬರೋದಿಲ್ಲ  || ಜೀ ||     ಚೌಕ : ೨

ತಿಪ್ಪಲ ಇಲ್ಲದೆ ಅಪ್ಪ ಮಗನಿಗಿ ತಿಳಿಸಿ ಹೇಳಿದ ಪಾಯದ ಮ್ಯಾಲ
ಒಪ್ಪಿ ಮನಾ ಕೈಕಾಲ ಕಟ್ಟಂತ ಹೇಳ್ಯಾನ ಹಗ್ಗಿಲಿ
ಅಂಗಿ ಹರದು ಅರಬಿ ಕಟ್ಟಂತ ಹೇಳ್ಯಾನ ಹಿಗ್ಗಿಲಿ
ಹಡದಿದ ಮಗನಿಗಿ ನೋಡಿ ನಿನ್ನ ಮನಾ ನೊಂದಿತು ಹಂತಿಲಿ
ಒಪ್ಪಿದ ದೇಹ ಶಿವನಿಗಿ ನಂದು ಸಪ್ಪಳ ಇಲ್ಲದೆ ಕೊಯಿ ಅಂದಾ  ಜೀವ ಹೋಗಲಿ
ಪಾಯಾ ನಿಂತು ಆವಾರ ಗ್ವಾಡಿ ಶರೀಫ ಆಗಲೀ  || ಜೀ ||

ಮುಸಕಿ ಹಿಡಿದು ಕಟ್ಟಿದಾನು ಮಗನಿಗಿ ಮಿಸಕಲಾಕ ಭಾಗ ಇಲ್ಲ
ತುಸು ಸೈಲ ಮಾಡೋ ತಂದಿ ಅಂತ ಹೇಳ್ಯಾನ ಬಾಯಿಲಿ ||
ಅದೇ ವ್ಯಸನ ಇತ್ತು ಕೂಸಿ ಶಬ್ದ ಕೇಳ್ಯಾನ ಕಿವಿಲಿ ||
ಒಳ್ಳೆ ಮಸದ ಛೂರಿ ತಗೊಂಡಾನ ಬಲಗೈಲಿ
ಆಶಾ ಇಲ್ಲದೆ ಪೈಗಂಬರ ವೇಷ ತೊಟ್ಟ ನಿಂತಿದಾರೋ
ಭೇಷಕ ಛೂರಿ ಕುತಗಿ ಮ್ಯಾಲ ಕೊಯಿದಾನ ಜೋರಿಲಿ
ಒಂದು ಕೂದಲು ಕೊಯಿದಿಲ್ಲ ಛೂರಿ ಮಂಡ ಮಸದಂಗ ಕಲ್ಲೀಲಿ  || ಜೀ ||

ಇಷ್ಟಪರಿ ಆಗದರಾಗೆ ಕೊಟ್ಟ ಹಕಾರಿ ಆಕಾಶವಾಣಿ
ತೋಲ ಸಿಟ್ಟಿಗಿ ಬಂದು ಮಗನಿಗಿ ಕೊಯ್ಯಿಯೋ ನೋಡಬ್ಯಾಡ ದುಷ್ಟಿಲಿ
ನಿನ್ನ ಕಣ್ಣ ಕಟ್ಟೋ ಅಂಗಿ ಹರದು ಅರಬಿ ಪಟ್ಟಿಲಿ
ಇಷ್ಟು ಕೇಳಿ ಇಬ್ರಾಹಿಂ ಖಲಿಲುಲ್ಲಾ ನಿಂತಾರೋ ಅಟ್ಟಿಲಿ
ಕಣ್ಣ ಕಟ್ಟಿ ಇಬ್ರಾಹಿಂ ಕೊಯದರಾಗೆ ಜಿಬ್ರಾಹಿಲ ಕುರಿ ಛೂರಿ ಬಾಯಾಗ ತಂದು ಕೊಟ್ಟಲಿ
ಮಗನಿಗಿ ಕಡಿಗಿ ಮಾಡಿ ಕುರಿ ಕೊಯ್ದು ಛೂರಿ ಹಾರಿತೋ ಸಿಟ್ಟಿಲಿ  || ಜೀ ||

ಅಂತರಲೇನೆ ಚೂರಿ ಹಾರಿ ಸಮುದ್ರದೊಳಗ ಬಿದ್ದಿತರೆಣ್ಣ
ಖುದ್ದ ಕೊಯ್ದು ಹಲಾಲ ಐತು ಮೀನಿನ ಕೊರಳಲ್ಲಿ
ಚಿದ್ರ ಚಿದ್ರ ಆಗಿ ಹಾರಿ ಹೋಯ್ತು ಈಡಿಯ ತಲಿ
ಅದು ಮುಡದಾರಾಗಿ ಹಂಗೆ ನಿಂತು ಮುಗಿಯ ತನಕಲಿ
ಮುಸಲಮಾನ ಶಾಸ್ತ್ರದಾಗ ಅಸಲವಣತ ಬರದಾದರೆಪ್ಪ
ತುಂಬಾ ಕುರಿ ಇರತಾವ ನೋದ್ರಿ ಅರಬ ಸ್ಥಾನದಲ್ಲಿ
ಅದರ ಮೂರು ವರ್ಷಕ ಒಮ್ಮೆ ಕುರಿಗಿ ಸೊಕ್ಕ ಬಂತು ಬಾಲದಲ್ಲಿ  || ಜೀ ||

ದುಮಾಲಿ
ಪೈಗಂಬರನ ಭಕ್ತಿಗಿ ಮೆಚ್ಚಿ
ಪಾಯ ನಿಂತು ಘಟ್ಟಿ
ಅರ್ಧ ಏಳಿಕೋಟಿ ಮಕ್ಕಾದ ಗಸಿ
ಚಾರ ಮೀನಾರ ಬಿಟ್ಟಾರೋ ಮುಗಸಿ
ಬಾಹತ್ತರ ಕಂಬದ ಮೇಲೆ ಬುರಜಾ
ಬಳಗ ನಮಾಜ  ||
ಮಾಡಿ ಬರ‍್ರಿ ಹಜ್ಜ ಹೋಗಿ ನೀವೂ ಬಗಸಿ
ಮನ್ಯಾಗ ಫೋಟೋ ಇಡರಿ ನೀವು ತಗಸಿ

ತಪ್ಪಿದರೆ ತಾಳಿರಿ ನನ್ನ ನುಡಿ
ಹೇಳತಾನ ಕವಿ ಮಾಡಿ
ಹಾಡಿನ ಅಡಿ ಪ್ರಾಸಗಳು ಕೂಡಿಸಿ
ಸರ್ವರಿಗಿ ಹೇಳತಿನಿ ಕೈ ಜೋಡಿಸಿ  || ಜೀ ||

ಏರ
ಉಸ್ಮಾನ ಭಾಷಾನ ರಿಯಾಸತ್ ಖಸಬಿ ಹಳ್ಳಿ ದ್ಯಾಗಾಂವ ಊರ
ಹೆಸರೈತು ಶೇಖ ಸಾಬನ ದರ್ಗಾ ಅಣಿಮ್ಯಾಲ
ಅದರ ಸೇವಾ ಮಾಡೋ ಹಜರತ ಮುಲ್ಲಾ
ನೋಡಿ ಇನಾಮ ಕೊಟ್ರ ಸರಕಾರದಾಗ ನಂಬರ ಹೊಲಾ  || ಜೀ ||   ಚೌಕ : ೩