ಹರಿಹರಾಟ ಗೀಯ ಗೀಯ ಗಿಯ ಹಾ ಹಾss ||

ಧರಣಿ ಮ್ಯಾಲ ಬಾಳ ಮಂದಿ ಶರಣರು |
ಬಿತ್ತಿಟ್ಟ ಕೇಳಿರೆಣ್ಣ ಸಂಪೂರಣ |
ಕೇಳಿದರ ನಮ್ಮ ನಿಮ್ಮ ಜನ್ಮ ಆಗುವದು ಉದ್ದರಣ |
ಏ ಪರಮೇಶ್ವರನ ಪ್ರೇಮದ ಪುತ್ರ
ಅನಿಸಿದ ವೀರ ಧರ ಮಹಿಬೂಬ ಶರಣ  ||ಗೀ ||

ಮಹಿಬೂಬ ಸುಬಾನಿ ತಂದಿ ಹಬಿಬ ಸಲಿಂ ಶರಣ
ದೊಡ್ಡ ಶರೀಫದಲ್ಲಿ ಅವರ ಠಿಕಾಣ
ನೇಮ ನಿಷ್ಠಿದಿಂದ ನಡಿತದ ದಿನ್ನಾ
ಐದು ಹೊತು ಸಮಾಜ ಮಾಡಾಂವ ಶರಣ
ಮುಂದ ಕೇಳ್ರಿ ಒಂದಿನ ಹಬಿ ಹೊಳಿಗಿ ಹೋಗಿ
ಅವಸರಲೆ ಸ್ನಾನ ಮಾಡತಿದ್ದ ಸ್ಥಾನ
ನೀರಾಗ ಮುಳಗಿ ಏಳುವ ಟೈಮಿಗಿ
ಮ್ಯಾಲ ಹರಿಯುತ ಬಂತು ಸೇಪಿನ ಹಣ್ಣ
ಶರಣ ಹಣ್ಣ ನೋಡಿ ಕಯ್ಯಾಗ ಹಿಡಿದಾನ
ನದಿ ದಂಡಿಗಿ ಬಂದಿದ ಶರಣ  ||ಗೀ ||

ಒಂದು ಹಣ್ಣಿನೊಳಗ ಗಿರ್ದಾ ಹಣ್ಣ ತಿಂದಾನ
ಈ ಹಣಿಗಾಗಿ ಎಷ್ಟೋ ನೀರ ಹಾಕಿ ಬೆಳಶ್ಯಾರೇನೋ
ನಾ ತಿಳಿಲಾರದೆ ತಿಂದೆ ಮತ್ತೊಬ್ಬರ ಹಣ್ಣ
ಯಾವಾಗ ಮುಟ್ಟಿಸಲೆಂದ ಹಣ್ಣಿನ ರಿಣ
ಉಳಿದ ಹಣ್ಣ ಪದರಾಗ ಕಟ್ಯಾನ ||
ಚಾರ‍್ಸೆ ಮೈಲಿ ಹಿಂಗೆ ನಡಕೋತ ಹೋಗಿ ಗಿಲಾನಿ ದೇಶಕ ಮುಟ್ಯಾನ
ಗಿಲಾನಿ ದೇಶಕ ಹೋಗ್ಯಾನ ಸೇಪಿನ ಬನ ಕಂಡಾನ
ಇದು ಇಲ್ಲಿಂದೆ ಹರದ ಬಂದಾದ ಹಣ್ಣ  || ಗೀ ||

ತ್ವಾಟದ ಮಾಲಕಗ ಹೋಗಿ ಭೇಟ್ಟಿಯಾಗ್ಯಾನ
ಒಂದು ಹಣ್ಣಿನಾಗ ತಿಂದಿನ್ರಿ ಗಿರ್ದಾ ಹಣ್ಣ
ಗಿರ್ದಾ ಹಣ್ಣಿನ ರಿಣ ಮುಟ್ಟಿಸಿ ಹೋಗಬೇಕಂತ
ನಾನು ಬಂದಿನಿರೆಂದ ಇಲ್ಲಿತಾನ
ತ್ವಾಟದ ಮಾಲಕ ಕೇಳಿದ ಧನ್ಯಧನ್ಯ ಅಂದಿದ
ಎಷ್ಟೋ ಮಂದಿ ತಿಂದ ಹೋಗತಾರ ಛಂತಾನ
ಒಬ್ಬ ಮಗ ಬರಲಿಲ್ಲ ನನ್ನ ಬಲ್ಲ ತಾನ
ಇಂವಾ ಗಿರ್ದಾ ಹಣ್ಣಿಗಾಗೆ ಎಷ್ಟ ದೂರ ಬಂದಾನ
ಸತ್ಯ ಶರಣ ಹಾನ ಇವನಿಗಿ ಬಿಡಬಾರ್ದು
ಬಾರಾ ವರ್ಷ ದುಡಿಬೇಕು ಅಂದಾನ  ||ಗೀ ||

ದುಮಾಲಿ
ಗಿರ್ದಾ ಹಣ್ಣಿನ ಕಾಲಾಗ ಬಾರಾ ವರ್ಷ ದುಡಿಲಾಕ ನಿಂತಾನ ಹೌದು ನಿಂತಾನ
ಮಾಲಕ ಹೇಳಿದ ಕೆಲಸ ತ್ವಾಟದ ಒಳಗ ಮಾಡ್ಯಾನ ಹೌಡು ಮಾಡ್ಯಾನ
ಮುಂದ ಇನ್ನ ಹನ್ನೆರಡು ವರ್ಷ ಹೊತ್ತ ಹಾಕ್ಯಾನ ಹೌದು ಹಾಕ್ಯಾನ
ಇನ್ನ ಒಂದೇ ದಿವಸ ಕಡಿಮಿ ಇತ್ತು ಮಾಲಕಗ ಹೋಗಿ ಕೇಳ್ಯಾನ ಹೌದು ಕೇಳ್ಯಾನ  ||ಗೀ ||

ಏರ
ನಾಳಿಗಿ ಬಂದಿನಾದ್ರ ಹನ್ನೆರಡ ವರ್ಷ ಮುಗಿತಾವ್ರಿ
ಮುಟ್ಯಾದಿಲ್ರಿ ನಿಮ್ಮ ಹಣ್ಣಿನ ರಿಣ,
ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧರ ಮಹಿಬೂಬ ಶರಣ  ||       ಚೌಕ : ೧

ತ್ವಾಟದ ಮಾಲಕ ಕೇಳಿದ ಮತ್ತೊಂದು ಹಂಚಿಕಿ ತಗದಿದ
ಇನ್ನಾ ಉಳದಾದೋ ನನ್ನ ಹಣ್ಣಿನ ರಿಣ
ನನ್ನ ಮಗಳಿಗಿ ಆಗಬೇಕೋ ನೀನೆ ಲಗ್ಗಣ
ಕೈಗಾಲ ಇಲ್ಲ ಖೂಳ ಮಗಳು ಮನ್ಯಾಗ ಅಂತಾನ
ಕೈಯಿಲ್ಲ ಕಾಲಿಲ್ಲ ಬಣ್ಣ ನೋಡಿದ್ರ ಕಾಗಿ ಹಂಗ
ಅಕಿ ಸರಿ ಆಗ ಬೇಕೋ ನೀನೆ ಲಗ್ಗಣ  || ಗೀ ||

ಹಬೀಬ ಶರಣ ಕೇಳಿದ ಧನ್ಯ ಧನ್ಯ ಅಂದಿದ
ಏ ನನ್ನ ಮಣ್ಣ ಇಲ್ಲೇ ಆಗಂಗ ಕಾಣತಾದ ಅಂತಾನ
ಇನ್ನ ಹಂಗಿನ ರಿಣ ಉಳಿದಾದ ಹೂಂ ಅಂದಾನ
ಲಗ್ಗಣ ಕಾರ್ಯ ತಯಾರಾತರೆಣ್ಣ
ಕಾರಣ ಮುಗಶ್ಯಾರ ಮಾವಗ ಅಂತಾರ
ಏ ಚಿತ್ತಿಲಿ ಕೇಳಿರಿ ಮುಂದಿನ ಸೂಚನ  || ಗೀ ||

ದುಮಾಲಿ
ಮದವಿ ಕಾರ್ಯ ತೀರಿದ ಮ್ಯಾಲ ಏಕದ ಖೋಲಿಗಿ ನಡದಾರ ಹೌದು ನಡದಾರ
ಬಲಗಾಲ ಒಯ್ದು ಬಾಗಲಾಗ ಇಟ್ಟಾರ  || ಗೀ ||
ಬಾಲಿ ಮುಖ ಚಂದ್ರನಂಗ ಹೊಳಿತಿತ್ತು ನೋಡಿ ಗಾಬರಾಗ್ಯಾನ ಹೌದು ಆಗ್ಯಾನ
ಕೈ ಕಾಲ ಇಲ್ದ ಖೂಳ ಅಂದಾನ ಘಾಸಿ ಮಾಡಿ ಖಳಸ್ಯಾನ  || ಗೀ ||

ಏರ
ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧರ ಮಹಿಬೂಬ ಶರಣ  || ಗೀ ||           ಚೌಕ : ೨

ಪರಸ್ತ್ರಿಯರಿಗಿ ಮುಟ್ಟಿದ್ರ ಪಾಪ ಅಂದಾರ ಜಗದಾಗ
ಅಲ್ಲಾನ ಸ್ಮರಣಿ ಹಿಡಿದು ಅಲ್ಲೆ ಕೂತ ಬಾಗಲಾಗ
ಮುಂದ ಹೊತ್ತೆ ಹೊರಟಿತು ಶಿವನ ಸ್ಮರಣ್ಯಾಗ
ಮುಂಜಾನಿ ಬಂದು ಕೇಳತಾನ ತನ್ನ ಮಾವಗ
ಕೈಕಾಲ ಇಲ್ಲ ಖೂಳ ಮಗಳ ಹಳಾ ಅಂತ ಹೇಳಿರಿ
ಅಂತಹ ಹೆಣ್ಣೆ ಇಲ್ಲ ಖೋಲ್ಯಾಗ  || ಗೀ ||

ಮಾಂವ ಈ ಮಾತ ಕೇಳಿದ ಬಹಳ ಆನಂದ ಆಗಿದ
ನಿನ್ನ ಮನಸ ನೋಡಲಾಕೆ ಹೇಳಿನೋ ಹಿಂಗ
ಅಕಿನೆ ನಿನ್ನ ಸತಿ ಹೋಗೋ ಅದೇ ಖೋಲಿಗ
ಮಾವನ ಆಜ್ಞಾದಿಂದ ಮರದಿವಸ ಹೋಗ್ಯಾನೋ
ಸತಿ ಪತಿ ಕೇಳ್ರಿ ಏಕಾಂತ ಆಗ್ಯಾರ  || ಗೀ ||

ಸತಿ ಪರಿ ಕೂಡಿ ಏಕಾಂತ ಆಗ್ಯಾರೋ
ಮುಂದ ಮಹಿಬೂಬ ಸುಬಾನಿ ಹುಟ್ಟುವ ಯೋಗ
ಪಾದ ಇಟ್ಟಿದ ತಾಯಿ ಒಡಲಾಗ
ಅಕಿನ ಮುಖ ಹೊಳಿತಿತ್ತೋ ಚಂದ್ರನಂಗ
ಒಂಬತ್ತು ತಿಂಗಳ ತುಂಬ್ಯಾವ ದಿನಮಾನ
ಒಂದಿನ ಕೇಳತಾಳ ಪತಿರಾಯಗ  || ಗೀ ||

ಎಂದ ಹೋಗಿಲ್ರಿ ನಾ ಇಂದ ಹೋಗಿ ಬರ್ತಿನಿ
ನನ್ನ ಮನಸ ಆಗ್ಯಾದ್ರಿ ಹಣ್ಣಿನ ಮ್ಯಾಗ |
ಪತಿಗಿ ಕೇಳಲಾರದೆ ಸತಿ ಹೊರಗಿ ಹೋಗತಿದ್ದಿಲ್ಲ
ಪತಿವರ್ತೆರಂತಾರ ಅಂತವರೀಗ |
ಗಂಡನ ಆಜ್ಞೆದಿಂದ ಹೋಗ್ಯಾಳ ತ್ವಾಟದ ಒಳಗ
ತನಗ ಬೇಕಾದ ಹಣ್ಣ ಉಡಿಯೊಳಗ ಹರಕೊಂಡಾಳ
ಒಂದು ಬಾರಿ ಗಿಡ ಇತ್ತರೆಣ್ಣ ಬಾವಿ ದಂಡೀಗ  || ಗೀ ||

ಬಾರಿ ಗಿಡದಾಗ ಒಂದೇ ಹಣ್ಣ ಕಾಣತ್ತಕಿತ್ತು
ತಾಯಿ ಮನ ಹೋಯ್ತು ಆ ಹಣ್ಣಿನ ಮ್ಯಾಲ
ಒಂದು ಮಿಡಿನಾಗರ ಹಾವ ಕಾಯಿತಿತ್ತು ಆ ಹಣ್ಣಿಗ
ಇಲ್ಲಿ ಯಾರ ಒಂದು ಹರಿತಾರ ಈ ಹಣ್ಣಿಗ
ಹಣ್ಣ ಹರದವರಿಗಿ ಕಜ್ಡೆ ಬಿಡತಿನೆಂದು
ಏಸೋದಿನ ತಫ ಕೂತಿತು ಬಾರಿ ಗಿಡದಾಗ  || ಗೀ ||

ಆವಾಗ ಮಹಿಬೂಬ ಸುಬಾನಿಗಿ ಆರುವ ಆಯಿತರೆಣ್ಣ
ತಾಯಿದು ವ್ಯರ್ಥ ಪ್ರಾಣ ಹೋಗತಾದ ಮಾಡಲಿ ಹ್ಯಾಂಗ
ಶಿವಣ ಸ್ಮರಣಿ ಮಾಡತಾನ ಎದ್ದ ಹೊಟ್ಯಾಗ
ಕಟ್ಟಂತ ಚಿವಟಿ ಬಿಟ್ಟ ತಾಯಿ ಹೊಟ್ಯಾಗ
ಕಣ್ಣಿಗಿ ಬವಳಿ ಬಂದು ಕಡಕೊಂಡ ಬಿದ್ದಾಳ
ಏ ಮಹಿಬೂಬ ಸುಬಾನಿ ಬರತಾನಾವಾಗ ಬಯಲೀಗ  || ಗೀ ||

ದುಮಾಲಿ
ಏ ಮಹಿಬೂಬ ಸುಬಾನಿ ಭಕ್ತಿಗೆ ಬಂದಾನ ಕಂದಗೊರಳ
ಕಂದಗೊರಳ ನೀ ದರುಣಿಗಿ ಬಾರೋ ನನ್ನ ಬಾಲ  || ಗೀ ||
ಇವನ ದನಿ ಕೇಳಿ ಮಹಿಬೂಬ ಹೊಂಟಾನ ಸರಳ
ಹೊಂಟಿದಾನೋ ಸರಳ  || ಗೀ ||

ಏರ
ಅವನ ನಾಲಿಗಿ ಮ್ಯಾಲೆ ಬರೆದ ಮೂರಕ್ಷರ ಗಾಳ
ಏ ಪರಮೇಶ್ವರ ಪ್ರೇಮದ ಪುತ್ರ ಅನಿಸಿದ
ವೀರ ಧರ ಮಹಿಬೂಬ ಶರಣ  || ಗೀ ||           ಚೌಕ : ೩

ನಡಿದಂಗೆ ನುಡಿಬೇಕು ನುಡಿದಂಗೆ ನಡಿಬೇಕು
ಸತಿ ಶರಣಂಗನಿಸು ನೀ ಜಗದಾಗ
ಹಿಂಗ ಆಶೀರ್ವಾದ ಮಾಡಿದಾನು ಮಹಿಬೂಬಗ
ಮಹಿಬೂಬ ಎಂದು ನಾಮ ಇಟ್ಟು ಹೋಗಿದಾನು ಮ್ಯಾಗ
ತಾಸಿನ ಮ್ಯಾಲ ತಾಯಿ ಅರುವಂಗಾಯಿತರೆಣ್ಣ
ಅದೇ ಮಹಿಬೂಬ ಎಂಬ ನಾಮ ಬಂತು ಅವರ ಬಾಯಿಗ  || ಗೀ ||

ಎಳಿಬಾಳಿ ಸುಳಿಯಂತೆ ಖಳಿಯುಳ್ಳ ಮಹಿಬೂಬ
ಬೆಳೆಯುತಿದ್ದ ದಿನದಿನಕ್ಕೆ ಬೆಳಿ ಬೆಳದಂಗ
ಮುಂದ ನಾಲ್ಕು ವರ್ಷಿನವ ಆದಾಗ
ಆತ ಆಡತಿದ್ದ ಸಣ್ಣ ಹುಡುಗರದಾಗ
ಆಟದಲ್ಲಿ ಒಂದಿನ ಜಗಳ ಬಂದಿತರೆಣ್ಣ
ಆ ಜಗಳದ ಫಿರಾದಿ ತಂದಾನ ಮನಿಗಿ  || ಗೀ ||

ತಾಯಿ ಸಿಟ್ಟಿಗಿ ಬಂತು ಫಟ್ಟಂತ ಹೊಡದಾಳೊಂದು
ಇಲ್ಲದೊಂದು ಜಗಳ ತರತೇನೋ ಮನಿಗ
ಮಹಿಬೂಬ ಹೇಳತಾನ ಹಡದ ತಾಯಿಗ
ನಾ ಮಾಡಿದುಪಕಾರ ತೀರಿತವ್ವ ಇಂದಿಗ
ತಾಯಿ ಕೇಳತಾಳ ಮೆನೆ ಹುಟ್ಟಿದಿ ಮಗ್ಯಾನ
ಅಂತಾದೆನ ಉಪಕಾರ ಮಾಡಿದ್ಯೋ ನನಗ  || ಗೀ ||

ಮಾತಿಗಿ ಬಂದಾಗ ತಾಯಿಗಿ ಹೇಳತಾನ
ನೀ ಆವಾಗ ಸಾಯಿತಿದ್ದೆ ಬಾರಿ ಗಿಡದಾಗ
ಮಿಡಿನಾಗರ ಹಾಂವ ಕಡಿತಿತ ತಾಯಿ
ಅಸೆ ಉಪಕಾರ ಮಾಡಿನಿ ನಿನಗ  || ಗೀ ||

ತಾಯಿ ಕೇಳ್ಯಾಳ ಧನ್ಯ ಧನ್ಯ ಅಂದಾಳ
ನಾ ಹೊಡಿದಿದು ತಪ್ಪಾಯಿತೋ ಮಹಿಬೂಬಗ
ಐದು ಬೆರಳ ನಿನಗ ಹಚ್ಚಿ ಹೊಡಿಯೋದಿಲ್ಲ
ಮುಂದ ಐದು ವರ್ಷನವ ಆದಾಗು |
ಅವನ ನಮಾಜ ಸುರು ಆಯಿತೋ ಅಲ್ಲಿಂದ
ನಾಲ್ಕೈದು ಹುಡುಗರು ಅವನ ಜೋಡಿಗ
ಆತಂಗಾಡತಿದ ಎಲ್ಲರಿಗಿ ಮೂರ್ಛಿತ ಮಾಡತಿದ
ಅಂವ ನಮಾಜ ಮಾಡಿ ಬರತಿದರೆಣ್ಣ ಸರಸರದಿನಾಗ  || ಗೀ ||
ನಮಾಜ ಮಾಡಿ ಬರತಿದ ಎಲ್ಲ ಹುಡುಗರಿಗಿ ಎಬ್ಬಿಸತಿದ
ಉಣ್ಣಕೇರಿ ಅದೇ ಒಂದಿನ ಅದೇ ಊರಾಗ  |
ಒಬ್ಬಕಿ ರಂಡಿ ಮುಂಡಿ ಹೆಣ್ಣು ಮಗಳು ಮತ್ತೊಂದು ಕೆರ್ಯಾಗ
ಅಕಿಗಿ ಒಂದೇ ಮಗ ಇತ್ತರೆಣ್ಣ ಮುತ್ತೈದಿಗ
ಮಧ್ಯರಾತ್ರಿಯಲ್ಲಿ ಹಾಂವ ಕಡದು ಸತ್ತಿತು
ಬಹಳ ದುಃಖ ಮಾಡತಾಳ ಹೇಳೋದ್ಯಾರಿಗ  || ಗೀ ||

ನೆರಿ ಹೊರಿಯವರು ಹೇಳತಾರ ಸುಮನೆಯಾಕ ಅಳತಿದಿ
ಇಲ್ಲಿ ಅಬಸಲ್ಲೇ ಶರಣ ಹಾನ ಮಸೂತ್ಯಾಗ
ನೀ ಜಲ್ದಿ ಮಾಡಿ ಒಯ್ಯೋ ನಿನ್ನ ಮಗನೀಗ
ಎಬ್ಬಸತಾನ ಬಂದ ಘಳಗ್ಯಾಗ
ಬಾಲಿ ಅಲಗಿ ಒಯ್ದಾಳ ಮಸೂತಿ ಮುಂದ ಹಾಕ್ಯಾಳ
ಅಬಸಲ್ಲೆ ಶರಣ ಅಂತಾನ ಹಿಂಗ್ಯಾಂಗ  || ಗೀ ||

ಹುಟ್ಟಸಾಂವ ಬ್ರಹ್ಮ ಹನ ಹಡದಾಂವ ವಿಷ್ಣ ಹನ
ತಾಯಿ ಕಾಯಲಾರ ರುದ್ರ ಕೈಲಾಸದಾಗ
ದೇವರ ಹಿಂತ ಅಧಿಕಾರ ಕೊಟ್ಟಿಲ್ಲ ನನಗ
ನಾ ಗಾಳಿ ಧೂಳಿ ಆದರ ಚಿಟ್ಟಿ ಕಟ್ಟಾಂವ ರಟ್ಯಾಗ
ಈ ಕೆಲಸ ಮಣಿಯೋದಿಲ್ಲ ನಾ ಅಂತು ಮಾಡೋದಿಲ್ಲ
ಹ್ಯಾಂಗ ತಂದಿರಿ ಹಂಗೆ ಒಯ್ಯೆ ನಿನ್ನ ಮಗನೀಗ  || ಗೀ ||

ಬಾಲಿ ಹೊತಗಂದ ತಿರಗಿ ಮನಿಗಿ ಹೊಂಟಾಳ
ಮಹಿಬೂಬ ಸುಬಾನಿ ಗೆಳೆಯ ಭೇಟ್ಟಿ ಆದ ದಾರ್ಯಾಗ
ತಾಯಿ ಏನಾಗ್ಯಾರವ್ವ ನಿನ್ನ ಮಗನೀಗು
ಇದ್ದ ಹಕ್ಕಿಕತ ಹೇಳ್ಯಾಳ ಅವನೀಗ
ಮಹಿಬೂಬ ಸುಬಾನಿ ಅನ್ನಾವ ಸಣ್ಣ ಹುಡುಗ ಅಡವ್ಯಾಗ
ಅಂವ ನಮಾಜಕ ಹೋಗತಾನವ್ವ ಅರ್ಧ ತಾಸಿಗ  || ಗೀ ||

ಎಲ್ಲರಿಗಿ ಮೂರ್ಛಿತ ಮಾಡತಾನ
ನಮಗ ಮಾಡತಾನ ಬರತಾನ
ಮತ್ತ ಬಂದ ಎಬ್ಬಸತಾನ ಇದ್ದಕ್ಕಿದ್ದಂಗ
ನಿನ್ನ ಮಗನಿಗಿ ತಂದ ಹಾಕವ್ವ ನಮ್ಮ ಮಗಲಾಗ
ಅವನು ಏಳತಾನ ನಾವು ಎದ್ದಂಗ  || ಗೀ ||

ದುಮಾಲಿ
ಹುಡುಗನ ಮಾತ ಕೇಳ್ಯಾಳ ದಿಡಿಗ ಅಲ್ಲಗಿ ಒಯ್ದಾಳ  |
ಏ ಒಯ್ದು ಮನಗಶ್ಯಾಳ ಹುಡುಗರ ಮಗಲಾಗ  || ಗೀ ||
ಮಗಲಾಗ ಒಯ್ದ ಮಲಗಶ್ಯಾಳ ಕಂಟಿ ಮರಿಗಿ ಕುಂತಾಳ
ನಮಗ ಮಾರಿ ಬಂದ ಮಹಿಬೂಬ ದಿನ್ನ ಬಂದಂಗ  || ಗೀ ||
ಬಂದು ಛಡಿ ಎಳದಾನ ಎಲ್ಲರ ಚಿನ್ನ ಮ್ಯಾಗ
ಎಲ್ಲ ಹುಡುಗರೆದ್ದರೆಣ್ಣ ದಿನ್ನಾ ಏಳಂಗ  || ಗೀ ||

ಐದಾರು ಹುಡುಗರದಾಗ ಸಣ್ಣ ಹುಡುಗ ಬ್ಯಾರೆ ಕಾಣತು
ಬಾಲಿ ಓಡಿಬಂದು ಎತಗೋತಾಳ ತನ್ನ ಮಗನೀಗ
ಆಗ ಮಹಿಬೂಬ ಅಂತಾ ಮಾತಂಗಾಯಿತಲ್ಲಗಾದ ಆಯಿತೋ ಅಂದಗಾದ  || ಗೀ ||

ನಾ ಮಾಡಲಾರದ ಕೆಲಸ ಮಾಡಿಸಿ ಕೈಲಾಸದಾಗ ಏನ ಹೇಳಲಿ ಅಂತ
ಆ ಬಾಲಿಗಿ ಕರದಾನ ಆಗಿದ ಮಾತ ಹೆಂತ ಹೌದು ಆಗಿತ  || ಗೀ ||

ಏರ
ಇನ್ನ ಮನಿಗಿ ಹೋಗ ತಾಯಿ ಯಾರಿಗಿ ಹೇಳಬೇಡ ಈ ಮಾತ
ಏ ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧೀರ ಮಹಿಬೂಬ ಶರಣ  || ಗೀ ||          ಚೌಕ : ೪

ಯಾರಿಗಿ ಹೇಳಬೇಡ ಉಸಲ ನೀನು ಬಿಡಬ್ಯಾಡ
ನಾಳ ಸತ್ತ ಹೆಣ ಎಲ್ಲಾರು ತರಂಗಾರ ಇಲ್ಲೀಗ
ಹೇಳಿ ಕೇಳಿ ಖಳಶ್ಯಾನ ಆ ಬಾಲಿಗ
ಅಕಿಸುಮ್ಮ ಹೋಗಲಿಲ್ಲ ಅಕಿನ ಮನಿಗ
ಬಾಳ ಸಿಟ್ಟ ಬಂದಿತು ಮಸುತಿ ಮುಂದೆ ಹೈದಾಳ
ಕೆಟ್ಟ ಕೆಟ್ಟ ಬೈಗುಳ ಬೈತಾಳ ಅವಸರನ್ಯಾಗ  || ಗೀ  ||

ಊರಾನ ತುಕಡಿ ತಿಂತಿದಿ ಮಳ ಗಡ್ಡ ಬಿಟ್ಟಿದಿ
ನೀ ಸುಮನೆ ಬಿದ್ದಿದೆಲ್ಲೋ ನಮ್ಮ ಊರಾಗ
ಪುಣ್ಯ ಬರಲಿ ಸಣ್ಣ ಮಹಿಬೂಬಗ
ಅವನೇ ಎಬ್ಬಶ್ಯಾನ ನನ್ನ ಮಗನೀಗ
ತಂದಿ ಕೇಳಿದ ಕರಕರ ಹಲ್ಲ ತಿಂದಿದ
ನಾ ಬಟ್ಟೆ ಇಡಬಾರದೆಂದ ಮೈಬ್ಯಾಗ  || ಗೀ ||

ತೊಗಲ ಬಾರಕೋಲ ಹಿಡಕಂಡಾನ ಹೊಡಿಲಾಕ ಹೊಂಟಾನ
ದೂರಿಂದೆ ನೋಡಿದಾನೋ ಬರುವ ತಂದಿಗ
ನಾರಿ ಹೋಗಿ ಹೇಳ್ಯಾಳಪ್ಪ ಊರಾಗ
ನಮ್ಮ ತಂದಿ ಸಿಟ್ಟ ಬಾಳ ಜಗದಾಗ
ಗೆಳಿಯರಿಗಿ ಕರದಾನ ಮಹಿಬೂಬ ಸುಬಾನಿ ಅಂತಾನ
ಯಾರು ಸಿಗಬ್ಯಾಡ್ರೋ ನಮ್ಮ ತಂದಿ ಕಯ್ಯಾಗ  || ಗೀ ||

ಎಲ್ಲರು ಬಿಟ್ಟು ಚಟ್ಟ ಅಡವ್ಯಾಗ ಓಡ್ಲಾಕತ್ರು
ಮಹಿಬೂಬ ಮಾತಾಡಿಸತಾನ ದೊಡ್ಡ ಗುರುಗಳಿಗ
ನೀವರೆ ಅಡಕ ಮಾಡಿ ತೋರ‍್ರೋ ಹೊಟ್ಯಾಗ
ನಮ್ಮ ತಂದಿ ಹೊಡಿಲಾಕ ಬೆನ್ನ ಹತ್ಯಾನ್ರೋ ನಮ್ಮಗ
ಗಿಡ ಸಹಿತ ಮಾತಾಡತಾವ ನಿಮ್ಮ ತಂದಿ ಸಿಟ್ಟಿಕೆಟ್ಟ
ನೆದರ ಎತ್ತಿ ನೋಡಿದರ ಸುಟ್ಟ ಬೂದಿ ಆತೆವ ಆವಾಗ  || ಗೀ ||

ಅಲ್ಲಿಂದ ಬಿಟ್ಟ ಹೋಗಿ ಸ್ಮಶಾನದಾನ ನಿಂತಾಗ
ಕೂಗಿ ಕರಿಯತಾನ ಸತ್ತ ಹೆಣಗಳಿಗ
ಸುಮನೆ ಯಾಕ ಕೂತಿರೋ ಖಂಡಗ ಮಣ್ಣಗ
ನಮ್ಮ ತಂದಿ ಹೊಡಿಲಾಕ ಹತ್ತ್ಯಾನೋ ನನಗ
ನೀವೆಲ್ಲರು ಬರಬೇಕು ನನ್ನಂಗ ರೂಪ ತರಬೇಕು
ಯಾರಿಗಂತ ಹೊಡಿತಾನ ಇಷ್ಟ ಮಂದ್ಯಾಗ  || ಗೀ ||

ಮಹಿಬೂಬನ ದನಿ ಕೇಳಿ ಒಂದೊಂದ ಹೆಣ ಬರ ಬರಲ್ಲಾಕತ್ತವು
ನೂರಾರ ಹೆಣ ಗಾಳಿಗೆದ್ದವು ಆಗಿಂದಾಗ
ತಂದಿ ಓಡಿ ಬಂದಾನ ಸನಿಗ |
ಏನು ಎಲ್ಲರ ರೂಪ ಮಹಿಬೂಬನಂಗ
ಏರಿದ ಸಿಟ್ಟ ಇಳಿತು ಕೈಯಿಂದ ಬಾರಕೋಲ ಬಿತ್ತು
ನಾ ಯಾರಿಗಿಂತ ಹೊಡಿಲೆಂದ ಇಷ್ಟ ಮಂದ್ಯಾಗ  || ಗೀ ||

ದುಮಾಲಿ
ಐದು ಬೆರಳ ಹಚ್ಚೋದಿಲ್ಲ  |
ನಿನಗೆ ನಾನು ಹೊಡಿಯೋದಿಲ್ಲ || ಗೀ ||
ಖರೆ ಮಹಿಬೂಬ ಯಾರಿದ್ರಿ ಬರ‍್ರೋ ಇದರಾಗ
ಖರೇ ಮಹಿಬೂಬ ಯಾರಿದ್ರಿ ಬರ‍್ರೋ ಇದರಾಗ  || ಗೀ ||

ಏರ
ಮಹಿಬೂಬ ಬಂದಾನ ತಂದಿ ಕಾಲಿಗಿ ಬಿದ್ದಾನ
ಆಶೀರ್ವಾದ ಮಾಡಿದಾನೋ ತನ್ನ ಮಗನಿಗೆ
ಏ ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧೀರ ಮಹಿಬೂಬ ಶರಣ  || ಗೀ ||          ಚೌಕ : ೫

ತಂದಿ ಹೇಳತಾನ ಹಿಂತ ಕೆಲಸ ಮಾಡಬ್ಯಾಡ
ನಾಳಿಗಿ ಏನ ಉತ್ತರ ಕೊಡಲೋ ಕೈಲಾಸದಾಗ
ತಂದಿ ಮಗಾ ಕೂಡಿ ಹೊಂದಿ ಮನಿಗಿ ಹೊಂಟಾರ
ಎಲ್ಲಾ ಹೆಣಗಳು ಹೊಂಟಾವ ಅವರ ಬೆನ್ನಿಗ  || ಗೀ ||

ಮಹಿಬೂಬ ಹೊಳ್ಳಿ ನೋಡಿ ಹೆಣಗಳಿಗಿ ಅಂತಾನ
ನೀವೆಲ್ಲಿಗಿ ಹೊಂಟಿರಿ ಹೋಗ್ರೋ ನಿಮ ನಿಮ ಜಾ ಗೀಗ
ಅದರಾಗ ಬೆಂಕಿ ಹೆಣ ಅಂತಾದ ಮಹಿಬೂಬಗ
ಮತ್ಯಾಕ ಖಳುತೆಪ್ಪ ಖಂಡಗ ಮಣ್ಣಾಗ
ಪುಣ್ಯವಂತ ನಮಗ ಬೈಲಿಗಿ ತಗೆಂಗ ತೆಗದಿರಿ
ಹಿಂಗೆ ಬಿಡ್ರಿ ಇರತೀವಿ ನಾವು ಗಾಳಿಗ  || ಗೀ ||

ಅದರಾಗ ಕೇಳಿರೆಣ್ಣ ಮತ್ತೊಂದ ಹೆಣ ಅಂತಾದ
ನೀವು ತಾಸೆ ಅಪ್ಪಣೆ ಕೊಡ್ರಿ ಹೋಗಿ ಬರತಾ ಮನಿಗ
ನಾನು ಗಂಟ ಹೂಳಿ ಇಟ್ಟಿನೆಪ್ಪ ಎತ್ತಿನ ಕೊಟಗ್ಯಾಗ
ನಾ ಸಾಯೋ ಮುಂದ ಹೇಳಿಲ್ಲ ಹೆಂಡರ ಮಕ್ಕಳಿಗ
ಗಂಟ ತೋರಿಸಿ ಬರತಿನಿ ಮತ್ತ ಇಲ್ಲೆ ಇರತಿನಿ
ಮಹಿಬೂಬ ಅಂತಾನ ಹೆಣದ ಮಾತಿಗ  || ಗೀ ||

ನೀ ಇಟ್ಟ ಗಂಟ ಹೆಂಡರ ಮಕ್ಕಳಿಗಿ ಕೊಡತಿನಿ ಹೋಗೋ
ಸಮಾಧಾನ ಹೇಳಿದಾನೋ ಎಲ್ಲಾ ಹೆಣಗಳಿಗ
ನೀವು ಮತ್ತು ಬರಾಕತ್ರೋ ನಿಮ್ಮ ಕಾಲ ಬಂದಾಗ
ತಂದಿ ಮಗಾ ಕೂಡ್ಯಾರ ಹೊಂದಿ ಮನಿಗಿ ಹೊಂಟಾರ
ಚಿತ್ತಿಟ್ಟ ಕೇಳ್ರೋ ಮುಂದಿನ ಭಾಗ  || ಗೀ ||

ದುಮಾಲಿ
ಇದರಂತೆ ಮಹಿಬೂಬ ಸುಬಾನಿ ಚರಿತ್ರೆ ಹನ್ನೊಂದು ಸಂದ ಬರದಾದ
ಹೌದು ಬರದಾದ  || ಗೀ ||
ಇಲ್ಲಿಗಿ ಎರಡೆ ಸಂದ ಮುಗದಾವು ಒಂಬತ್ತು ಉಳದಾವೋ | ಒಂಬತ್ತು ಉಳದಾವೋ || ಗೀ ||

ಏರ
ಏ ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರಧೀರ ಮಹಿಬೂಬ ಶರಣ          ಚೌಕ :೬

ತಂದಿ ಮಗ ಕೂಡ್ಯಾರ ಹೊಂದಿ ಮನಿಗಿ ಹೊಂಟಾರು
ನಿನ್ನ ಸತ್ಯ ಇಷ್ಟಾದ ನನಕ ಹೆಚ್ಚಿಗ |
ಹಿಂತ ಕೆಲಸ ಮಾಡಬ್ಯಾಡೋ ನಿನ್ನ ಕೈಮ್ಯಾಗ
ತಂದಿ ಹೇಳತಾನ ಮಗನಿಗ
ಮುಂದ ಬರದರಾಗ ಮತ್ತೊಬ್ಬ ಶರಣ
ಬಂದ ಮಹಿಬೂಬನ ಜತಿಗ  || ಗೀ ||

ಜಿಂದಾ ಮದರಸಾಬ ಬಂದ ಬೆಟ್ಟಿಯಂಗಾದ
ಯಾಕ ಬಂದಿರಿ ಶರಣರೆ ಇಲ್ಲಿಗ
ಮದರಸಾಬ ಹೇಳತಾನ ಮಹಿಬೂಬಗ
ನಾ ಆಟ ಆಡಲಾಕ ಬಂದಿನಿ ನಿನ್ನ ಜೋಡಿಗ
ಶರಣ ಶರಣರು ಕೂಡಿ ಆಟಂಗಾಡ್ಯಾರು
ಯಾವ ಆಟ ಆಡಲಾಕ ಬಂದಿದಿಲ್ಲಿಗ  || ಗೀ ||

ಜಿಂದಾ ಮದರಸಾಬ ಮಹಿಬೂಬಗ ಹೇಳತಾನ
ಕಣ್ಣ ಮುಚ್ಚಗಿ ಆಟ ಆಡೋಣ ಅಡವ್ಯಾಗ  || ಗೀ ||
ಯಾರ ಸೋಲತಾರ ಯಾರ ಗೆದಿಯತಾರ
ಕಣ್ಣ ಮುಚ್ಚಿಗಿ ಆಟ ಆಡೋಣ ಅಡವ್ಯಾಗ  || ಗೀ ||

ಆಗ ಮಹಿಬೂಬ ಶರಣ ಅಂತಾನ ಬ್ಯಾಡ್ಯಾರಂತಾರ ನಡಿರಿ
ಬಯಲು ಅಡವಿಯಲ್ಲಿ ಆಟ ಹೂಡಿರಿ |
ಮೊದಲು ಕಣ್ಣುಮುಚ್ಚಿ ಖರೆ ಮಾಡಿರಿ  || ಗೀ ||
ಮಹಿಬೂಬ ಸುಬಾನಿ ಅಂತಾನ ನಾನೆ ಮುಚಗೋತಿನಿ
ನಿವೇ ಹೋಗಿ ಅಡಗಿರಿ ಬೇಕಾದ ಜಾಗ  || ಗೀ ||
ಮಹಿಬೂಬಸಾಬ ಕಣ್ಣ ಮುಚ್ಚಿದ
ಮದರಸಾಬ ಓಡಿ ನಡಿದ
ನಾ ಎಲ್ಲಿ ಹೋಗಿ ಅಡಗಲೆಂದ ಜಾಗದಾಗ  || ಗೀ ||

ದುಮಾಲಿ
ಅರಿವುಳ್ಳ ಶರಣರಿಗಿ ಗುರ್ತೆ ಇರತಾದ
ಸೀದಾ ಹೋಗಿ ನಿಂತಿದಾನೋ ಗೋಧಿ ಹೊಲದಾಗ  || ಗೀ ||
ಇಲ್ಲೆ ಅಡಗ್ಯಾನ ಯಾವ ತನ್ಯಾಗ  || ಗೀ ||
ಮದರಸಾಬ ಅಡಗಿದ ತೆನಿ ಮಹಿಬೂಬಸಾಬ ಕೈಯಾಗ ಹಿಡಿದ
ಉಗರಚುರ್ಚಿ ಒಂದಕಾಳ ತೆಗೆದಾಗ ಹೊರಗ || ತೆಗದಾನ ಹೊರಗ  || ಗೀ ||
ಗೋಧಿಕಾಳ ಹೊರಗ ತೆಗೆದಾಗ | ಜಿಂದಾಮದರಸಾಬ ಇದ್ದ ಅದೇಕಾಳನ್ಯಾಗ  || ಗೀ ||

ಏರ
ಏ ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧೀರ ಮಹಿಬೂಬ ಶರಣ  || ಗೀ ||          ಚೌಕ : ೭

ಗೋಧಿಕಾಳ ಮೊದಲ ಗುಂಡ ಇದ್ದವರೆಣ್ಣ
ಉಗರ ಒತ್ತದಲ್ಲೆ ಕಚ್ಚ ಬಿದ್ದಾದ ಗೋಧಿಗಿ
ಮಹಿಬೂಬ ಸುಬಾನಿ ಉಗರ ಒತ್ತಿ ಕಚ್ಚಹಾಯ್ದ
ಇನ್ನಾವರಿಗಿ ಕಚ್ಚ ಅದಾರಿ ಗೋಧಿ ಕಾಳಿಗ
ನಿನ್ನ ಆಟ ಮುಗದಂಗಾಯ್ತು ನಂದೆ ಉಳಿತರೆಣ್ಣ
ನೀ ಕಣ್ಣ ಮುಚಗೋ ಅಂದ ನನ್ನಂಗ  || ಗೀ ||

ಮದರಸಾಬ ಹೋಗಿ ಕಣ್ಣ ಮುಚಗೊಂಡ ನಿಂತ
ನಾ ಹೋಗಿ ಅಡಗಲೇನ ಅಂದ ಮ್ಯಾದ್ಯಾಗ
ದೂರ ಹೋಗಬಾರದು ನಾನು ಅಡವ್ಯಾಗ
ಇಂವ ಹೈರಾಣಕ ಬೀಳತಾನ ಬಿಸಲಾಗ
ಮಹಿಬೂಬ ಸುಬಾನಿ ಎಲ್ಲಿ ಕಂಟ್ಯಾಗ ಅಡಗಲಿಲ್ಲ
ಅಲ್ಲೆ ಹಾರಿಕುಂತ ಅವನ ಕಣ್ಣ ರೆಂವ್ಯಾಗ  || ಗೀ ||

ಕಣ್ಣ ರೆಂವ್ಯಾಗ ಕೂತಾನ ಕಣ್ಣ ತೆರಿ ಅಂದಾನ
ಕಣ್ಣ ತೆರದು ಹುಡುಕತಾನ ಅಡವ್ಯಾಗ
ಕಂಟಿ ಕಮರಿ ಕಂಡಿದ್ದೆ ಜಾಗ |

ಮಹಿಬೂಬನ ಸುಳಿವೆ ಹತ್ತವಲ್ದು ಬಿಸಲಾಗ
ತಿರಗಿ ತಿರಗಿ ಬ್ಯಾಸತ್ತು ಗಿಡದ ನೆಳ್ಳಿಗಿ ಕುಂತ
ಎಲ್ಲಿ ಅಡಗಿ ಹೋಗ್ಯಾನೇನೋ ಯಾ ಜಾಗದಾಗ  || ಗೀ ||

ಜಿಂದಾ ಮದರಸಾಬ ಮಹಿಬೂಬಗ ಅಂತಾನ
ನಾ ಸೋತೆ ನೀನೆ ಗೆದ್ದಿ ಇದರಾಗ
ಎಲ್ಲಿ ಅಡಗಿದಿ ನನ್ನ ಎದರಿಗಿ ಬಾ ಅಂದ
ಅಲ್ಲೆ ಕುಂತಿದ ಅವನ ಕಣ್ಣ ರೆಂವ್ಯಾಗ
ಮಹಿಬೂಬ ಸಾಬ ಬಂದು ಎದರ ನಿಂತಾನ
ಈ ಇಬ್ಬರದು ಆಗಿತೋ ದರ್ಶನ  || ಗೀ ||

ದುಮಾಲಿ
ಸತ್ಯೆ ಶರಣರು ಇಂಥ ಆಟ ಆಡ್ಯಾರ ಹೌದು ಆಡ್ಯಾರ
ಇದು ಶರಣರು ಮಾಡಿದ ವರಣ  || ಗೀ ||
ಸತ್ತ  ಜೀವ ಪಡಸವರಿಗಿ ಸತ್ಪುರುಷರಂತಾರ ಅಂತವರಿಗಾ  || ಗೀ ||

ಏರ
ಅಂದಿದ್ದೆ ಆಗತ್ತಿತ್ತು ಅವರ ವಾಕ್ಯ ಹುಸಿ ಇಲ್ಲ
ಈವ ಆಶೀರ್ವಾದ ಮಾಡಿದಾನೋ ಮಹಿಬೂಬಗ
ಏ ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧೀರ ಮಹಿಬೂಬ ಶರಣ || ಗೀ ||           ಚೌಕ : ೮

ಮುಂದ ಕೇಳ್ರಿ ಒಂದಿನ ಆಟ ಆಡತಿದ್ದ
ಅವನ ಚಂಡ ಹೋಗಿ ಬಡಿತು ಮುಪ್ಪನ ಮುದಕಿಗ |
ಮುದಕಿ ಬಯಿತಾಳ ಮಹಿಬೂಬಗ
ಎಷ್ಟ ಉರಿಯತಿದೋ ಊರಾಗ
ಹಣ್ಣ ಶರೀರ ನಿನ್ನ ಚಂಡ ಬಡಿದಾದ
ಹೊಡಿಲಾಕ ಓಡಿ ನಡಿದಾಳ ಮಹಿಬೂಬಗ  || ಗೀ ||

ಆವಾಗ ಮಹಿಬೂಬ ಮುದಕಿಗಿ ಅಂತಾನ
ತಾಯಿ ನೀನು ಹೊಡಿಬ್ಯಾಡ ನನಗ |
ಮಕ್ಕಳ ಇಲ್ಲ ನಿನ್ನ ಹೊಟ್ಟಿಗ
ಒಂದು ಮಗಾ ಕೊಡತಿನಿ ಹೋಗವ್ವ ಅಂದಾನು
ಇಟ್ಟ ಕೇಳಿ ಮುದಕಿ ಆಗ ಸಿಟ್ಟಿಗ ಬಂದಾಳ
ಮಗ ಹಡಿ ಅಂತೆನೋ ನನಗ ಮುದಕಿ ಆದಾಗ  || ಗೀ ||

ಮತ್ತ ಹೊಡಿಲಾಕ ಹೋಗ್ಯಾಳ ಮಹಿಬೂಬ ಅಂತಾನ
ಎರಡ ಮೂರ ಹಡಿ ಹೋಗ ನಿನ್ನ ಮನ್ಯಾಗ
ಯಾಕೋ ಮಹಿಬೂಬ ಸುಬಾನಿ ಗಮ್ಮತ ಹಚ್ಚಿದೆಂದು
ಮುದಕಿ ಸಿಟ್ಟಿಗಿ ಬಂದ್ಳೋ ಆವಾಗ
ಮುದಕಿ ಸಿಟ್ಟಾಗಿ ಬಂದಾಳ ಲಟ್ಟಬಡಗಿ ಹಿಡದಾಳ
ಹೊಡಿಲಾಕ ಹೋಗಿದಾಳೋ ಮಹಿಬೂಬಗ
ನಾಲ್ಕೈದು ಮಕ್ಕಳ ಆಗ್ಲಿ ಹೋಗವ್ವ ನಿನ್ನ ಮನ್ಯಾಗ
ಮತ್ತಿಷ್ಟು ಸಿಟ್ಟ ಬಂತೋ ಮುದಕಿಗ  || ಗೀ ||

ಅರವತ್ತು ವರ್ಷಿನವರು ಮಕ್ಕಳ್ಯಾಂಗ ಆಗತಾವ
ಒಳ್ಳೆ ಗಮ್ಮತ ಹಚ್ಚಿದ್ಯೋ ನಮಗ
ಮತ್ತ ಮಯಿಮ್ಯಾಲ ಹ್ವಾದಾಗ ಮಹಿಬೂಬ ಅಂತಾನ
ಹತ್ತ ಮಕ್ಕಳ ಹಡಿಹೋಗ ನಿನ್ನ ಮನ್ಯಾಗ  |
ಒಂದಲ್ಲ ಎರಡರಲ್ಲ ಹತ್ತ ಮಕ್ಕಳ ಹಡಿ ಅಂದ
ಬಾಳ ಸಿಟ್ಟ ಬಂದಿತರೆಣ್ಣ ಮುದಕಿಗ  || ಗೀ ||

ದುಮಾಲಿ
ಹತ್ತ ಬ್ಯಾಡ ತಾಯಿ ಹನ್ನೊಂದು ಮಕ್ಕಳ ಹಡಿಯೋ
ಇದರ ಮುಂದ ಇಲ್ಲ ಮನಿಗಿ ನಡಿಯೋ || ಗೀ ||
ಇದು ನನ್ನ ವಾಕ್ಯ ನಿನಗೆ ಹೇಳಿನಿ ಕಡಿಯೋ
ವರ್ಷಿಗಿ ಒಂದೊಂದು ಹಡಿಯೋ  || ಗೀ ||

ಏರ
ಏ ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧೀರ ಮಹಿಬೂಬ ಶರಣ || ಗೀ ||           ಚೌಕ : ೯

ಮನಿಗಿ ಹೋಗ್ಯಾಳ ಮುದಕಿ ಮುದಕಗ ಹೇಳತಾಳ
ಸಣ್ಣ ಮಹಿಬೂಬ ಹಿಂಗ ಅಂದಾನ ನನಗ
ಚಿನ್ನ ಬ್ಯಾರೆ ಐತೋ ಇಬ್ಬರಿಗ
ಸತಿ ಪತಿಯೆಂದು ಏಕಾಂತ ಆಗ್ಯಾರ
ಖರೆ ವಯ್ಯಾದವರು ಇದ್ದಂಗ  || ಗೀ ||

ಮುಂದ ಕೇಳ್ರಿ ಒಂದ ಗಂಡಸ ಮಗ ಹುಟ್ತು
ಬಾಳ ಸಂತೋಷ ಆಯ್ತು ಅವರ ಮನದಾಗ
ಒಂದು ವರ್ಷದ ಕೂಸು ಐತು ಜವಳ ತಗಿಬೇಕ ಅನದರಾಗ
ಮತ್ತೊಂದು ಹೊಟ್ಟಿನಿಂತು ವರ್ಷದ ಒಳಗ  || ಗೀ ||

ನವಮಾಸ ತುಂಬಿ ಎರಡನೆ ಮಗ ಹಡದಾಳ
ಜವಳ ತೆಗಿವದು ಜೊತೆ ಹ್ಯಾಂಗ
ತಗಿಯಬೇಕು ಮುಂದಣಗಿಗಿ ಇಬ್ಬರಿಗ
ವರ್ಷ ತುಂಬದರಾಗ ಮತ್ತೊಂದು ಹೊಟ್ಟಿ ನಿಂತರೆಣ್ಣ
ಜವಳ ತೆಗಿವಲ್ದಾಗಲ್ದು ಅವರೀಗ  || ಗೀ ||

ಇನ್ನ ವರ್ಷಿಗಿ ಒಂದು ಹನ್ನೊಂದು ಮಕ್ಕಳ ಹಡದಾರ
ಆವಾಗ ಕಾರ್ಯ ಸಾವರ ಶ್ಯಾರ  || ಗೀ ||
ಮಕ್ಕಳ ಜಾವಳ ತೆಗಿಲಾಕ ಹನ್ನೊಂದು ಕುರಿ ಖರೀದಿ ಮಾಡ್ಯಾರ
ಜಾವಳ ಕಾರಣ ಆಯಿತೋ ತಯ್ಯಾರ |
ಹನ್ನೊಂದು ಜಂಡಾ ಹೊಲಿಸಿ ಹನ್ನೊಂದು ಮಕ್ಕಳಿಗಿ ಕೊಟ್ಟಾರ
ಒಂದೊಂದು ಕೊಟ್ಟಾರ ದೀನ ಹೊಡಕೋತ ದರಗಾಕ ನಡದಾರ  || ಗೀ ||

ಹನ್ನೊಂದು ದೀಪ ಹಚ್ಚಿ ಹನ್ನೊಂದು ಮಕ್ಕಳ ಜವಳ ತೆಗದಾರಾ
ಅಂದೇ ಮಹಿಬೂಬನ ಗ್ಯಾರವಿ ಮಾಡ್ಯಾರ
ಜವಳ ತೆಗೆದು ಜಂಡಾ ಏರಿಸಿ ಹನ್ನೊಂದು ದೀಪ ಹಚ್ಯಾರ ದರಗಾದೊಳಗ
ಮಹೀಬೂಬ ಸುಬಾನಿ ಗ್ಯಾರವಿ ಹುಟ್ಟೀತ ಆವಾಗ
ಶರಣರ ಮಹತ್ವ ನಮಗ್ಯಾಂಗ ತಿಳಿತಾದ
ಬ್ಯಾರೆ ಇರತಾದ ಶರಣರ ಮಾರ್ಗ  || ಗೀ ||

ಹನ್ನೊಂದು ದೀಪ ಹಚ್ಚಿ ಗ್ಯಾರವಿ ಮಾಡಿಬಂದ್ರು
ಮಹಿಬೂಬ ಸುಬಾನಿ ಗ್ಯಾರವಿ ನಡದಾದ ಅಂದಿಗಿಂದಿಗ
ಶರಣರ ವರ್ಣ ಇನಾ ಮಾಡಬೇಕಾದರ
ಒಂದೇ ನಾಲಗಿಲಿ ತೀರದು ಮಹಿಬೂಬನ ಸ್ವರಣ
ಅಂದಿದೆ ಆಗತಿತ್ತು ನುಡಿದಂಗೆ ನಡಿತಿದ್ದ
ಸತ್ಯ ಶರಣ ಅನಿಸಿದಾಗ ಜಗದಾಗ  || ಗೀ ||

ನಡಾ ನುಡಿ ತೊಡಿ ಶುದ್ಧ ಬೇಕರೆಣ್ಣ
ಖರೆ ದೇವರೊಲಿತಾನ ಅಂತವರಿಗ |
ಧರಣಿ ಮ್ಯಾಲ ಬಾಳ ಮಂದಿ ಶರಣರ ಹಾರ
ಒಬ್ಬರಕಿನ್ನ ಒಬ್ರು ಹೆಚ್ಚಿಗ |
ಎಲ್ಲರಕಿನ್ನ ಬಲ್ಲಿದಾಂವ ಮಹಿಬೂಬ ಶರಣ ಹಾನ ಜಗದಾಗ  || ಗೀ ||

ದುಮಾಲಿ
ಮಹಿಬೂಬನ ಮ್ಯಾಲ ಭಕ್ತಿಯಿಟ್ಟು ಸದೋ ಕಾಲ ನೀವು ನಡಿರಿ
ಅವನ ಸೇವಾದಲ್ಲಿ ನೀವು ದುಡಿರಿ  || ಗೀ ||
ಹುಟ್ಟಿ ಬರಲಾಕ ಹುಲ್ಲಿನ ಬೀಜ ಅಲ್ಲ ಇದೇ ಜಲ್ಮ ಕಡಿರಿ |
ಇದರೊಳಗೆ ಬೇಕಾದ್ದು ಪಡಿರಿ  || ಗೀ ||
ನಾ ಯಾರೆಂಬುದು ತಿಳಿದರ ಸಿಗತಾದ ಸ್ವರ್ಗದ ಸಿಡಿರಿ
ಅಜ್ಞಾನದೊಳಗ ನೀವು ನಡಿರಿ  || ಗೀ ||

ಏರ
ಧರುಣಿಯೊಳಗೆ ನಾವು ವರವೀಶನಾರೆ,
ಚಿತ್ತವಿಟ್ಟು ಕೇಳಿರೆಣ್ಣ
ದೇಶದೊಳಗ ನಮ್ಮ ವಾಸುಳ್ಳ ಬಿದನೂರ
ಶರಣು ಬಸಯ್ಯ ಒಂದು ಮಾಡ್ಯಾರ ಗಾನ
ಪರಮೇಶ್ವರನ ಪ್ರೇಮದ ಪುತ್ರ ಅನಿಸಿದ
ವೀರ ಧೀರ ಮಹಿಬೂಬ ಶರಣ  || ಗೀ ||          ಚೌಕ : ೧೦