ಹರನೆ ನಿನ್ನ ನಾಮಸ್ಮರಣೆ ಮುರಿಯಲಾರೆನು ಕರುಣಿಸೋ ಕಂಬು ಕಂದರಾ |
ನಿಮ್ಮ ಚರಣಕ ಎರಗುವೆ ಧರಾ ದ್ವಾರಕ ನಗರ ಅಳುವ ಧೀರ
ವಾಸುದೇವ ದೇವಕಿ ಸುತ ಮುರಲಿ ಧರಾ  || ಗೀ  ಗೀ ||

ಸಾಂಬನೆಂದು ತುಸು ಹಂಬಲಿಸಿದರೆ ನಂಬಿ ಕೊಡಾಂವ ನೀ ವರಾ
ಪ್ರತಿಬಿಂಬ ನಿಮ್ಮ ಹೆಸರ ಗೋಕುಲದೊಳು ಗೋಪಾಲ ಕೃಷ್ಣ
ಗೋವರ್ಧನ ಅಂದಿರು ಸುರ ನರಾ  || ಗೀ  ಗೀ ||

ಸೋಳಾ ಸಹಸ್ರ ಗೋಪಿಯರಿಗಿ ಆಳಿದಿ ಸಾಕ್ಷಾತ್ ಪರಮೇಶ್ವರ |
ಲಕ್ಷ್ಮೀ ಪತಿಯನ ಹರಾ ಗರು ಬಂದವರ ಸಿರ
ಹರಿಯೋ ಸಲುವಾಗಿ ತಾಳಿಕೊಂಡಿದಿ ದಶ ಔತಾರ  || ಗೀ  ಗೀ ||

ದುಮಾಲಿ
ಬೈರ ಬಂದಿತು ಬ್ರಹ್ಮನಲಿ ಬೇರೆ ನಿನ ಲೀಲಿ |
ಆತನ ತೆಲಿ ಗುಪ್ತದಲಿ ಎರಡು ಹೋಳು ಮಾಡಿದಿ  || ಗೀ  ಗೀ ||
ಗರು ಬಂದಿತು ಗಿರಿ ರಾಜ್ಯಾಗ ಸುರವಿಗಿ
ಕೂರ್ಮ ಅವತಾರ ತಾಳಿ ಮಹಾ ಮೇರು ಪರ್ವತ ಎತ್ತಿ ಹಿಡದಿ  ||  ಗೀ  ಗೀ  ||
ಸೊಕ್ಕ ಬರುವ ರಕ್ಕಸರಿಗಿ ನೀರು ಸುದರ್ಶನ ಎಂಬೋ ಚಕ್ರ ಪಿಡಿದು
ದಿಕ್ಕರಿಸಿ ಕಕ್ಕಸ ಬಿಡಿಸಿ ಮುಕ್ಕಣ್ಣ ಮುರಹರಿ ಎನಿಸಿದಿ  || ಗೀ  ಗೀ  ||

ವರಹ ಔತಾರ ತಾಳಿ ನರಕಾಸುರ ಕಟ್ಟಿದ ಕೋಟೆ ಒಡೆದು
ಒಂದು ಏಟಿಗಿ ಆತನ ಹೊಡದಿ ||
ನರಸಿಂಹನ ಔತಾರ ತಾಳಿ ಹಿರೆಣ್ಣಕ ಶಪ್ಪುವಿನ ಹೊಟ್ಟೆ ಸೀಳಿ
ಕರಳ ಕೊರಳಿಗಿ ಹಾಯ್‌ಕೊಂಡು ಆತನ ರಕ್ತ ಕುಡದಿ
ವಾಯುದೇವನ ಔತಾರ ತಾಳಿ ಮೂರು ಪಾದದ ಅಳತಿ
ಭೂಮಿ ಬೇಡಿ ಬಲಿ ಚಕ್ರವರ್ತಿಗಿ ಪಾತಾಳಕ ಮೆಟ್ಟಿ ನೀ ತುಳದಿ  || ಗೀ  ಗೀ ||

ಏರ
ರಾಮನ ಔತಾರ ತಾಳಿ ನಾರಾಯಣ ರಾವಣ ಮಾಡಿರಿ ಸಂಹಾರ
ಮೂ ಜಗದೊಳು ನಿನ್ನ ಹೆಸರ | ದ್ವಾರಕ ನಗರ ಆಳೋ ಧೀರ
ವಾಸುದೇವ ದೇವಕಿ ಉದರದೊಳು ಜನಿಸಿದರಾ  || ಗೀ  ಗೀ ||        ಚೌಕ : ೧

ಅಂಜನಿ ಸುತನಿಗಿ ಆಶ್ರಯ ಕೊಟ್ಟು ಸೇತುವೆ ಕಟ್ಟಿಸಿದಿ ತತ್ಕಾಲ
ಲಂಕಾದ ಸುತ್ತ ಇಟ್ಟಿ ಕಾವಲ |
ರಾವಣನ ಅಷ್ಟ ಐಶ್ವರ್ಯ ಸುಟ್ಟು ಮಾಡಿದಿ ನಿಕಾಲ  || ಗೀ  ಗೀ ||

ಅಪರಾಧ ರಕ್ಷಕ ತ್ರಿಪುರ ಸಂಹಾರ ರೌದ್ರ ಅವತಾರ ಕೇವಲ
ನೀ ತೊಟ್ಟು ನಿಂತಿ ಅಕೇಲ |
ತ್ರಿಪುರ ದೈತ್ಯರನ ಮುಳಗಸಿ ಇಟ್ಟಿದಿ ಸತ್ಯದಿ ನಿತ್ಯ ನಿರ್ಮಲ  || ಗೀ  ಗೀ ||

ಮಾವ ಕೌಂಸನ ವಂಶ ನಿರ್ವಂಶ ಮಾಡಿದಿ ಶ್ರೇಷ್ಠ ಕೌಂಸ ಬಲರಾಮ ಬಲ
ಖಾಸ ಅಣ್ಣ ಖಬರ ಇಡಲಿಲ್ಲ ||
ಕುರುಕ್ಷೇತ್ರದಲಿ ಕೌರವರ ಮಾಡಿಟ್ಟಿದಿ ನಿಷ್ಪಲ ||  ಗೀ  ಗೀ ||

ದುಮಾಲಿ
ಮೃಢ ಮುರ ಹರಿಯೇ | ಜಗದ ಒಡಿಯೇ |
ಆ ಬಡು ಪಾಂಡವರ ಧೃಡಕ ಮೆಚ್ಚಿ
ಘಡನೆ ಬಂದು ಅವರ ಮನಿಯಾಗ ಆಳಾಗಿ ದುಡದಿ |
ಆ ಪಾಂಡವರ ಪೈಕಿ ಪಾರ್ಥನಿಗೆ ನೀ ಮೆಚ್ಚಿ
ಪಾಸು ಪತಾಸ್ತ್ರ ಎಂಬ ಬಾಣ ಕೊಟ್ಟು ಸ್ವಂತ ಸಾರಥಿಯಾಗಿ
ಛಪ್ಪನ್ನ ದೇಶದ ರಾಜರ ಕಡಿಂದ ಕಪ್ಪ ಕಾಣಿಕಿ ತಂದಿ ||
ಆ ಚಕ್ರ ಬಿಂಬದಲ್ಲಿ ಸೂರ್ಯ ನಾರಾಯಣಗ ಚಕ್ರವೇರಿಸಿ
ಪಾರ್ಥನ ಪ್ರಾಣ ಹೋಗು ವಂಥದು ಉಳಿಸಿ
ಜೈದ್ರಥನ ವದಾ ಮಾಡಿಸಿ ಸುಟ್ಟು ಧನ ಮಾಡಿದಿ  ||  ಗೀ  ಗೀ ||

ರತ್ನಾಪುರ ಪಟ್ಟಣಕ ಹೋಗಿ ಮಯೂರ ಧ್ವಜಾನ ಸೂತ
ತಾಮ್ರ ಧ್ವಜನ ಅರ್ಜುನ ಗೆದಿಯುವಂಗ ಮಾಡಸಿದಿ |
ಆ ತಾಮ್ರ ಧ್ವಜನ ಬಾವಕ ಮೆಚ್ಚಿ ಭಗವಂತ ನಿನ್ನ ಸೇವಕ
ಅರ್ಜುನನ ಮೂರ್ಛಿತಗೊಳಿಸಿದಿ ||
ಮಹತ್ತಿಕ ಪುರುಷ ಮೋರಚಿತ ಮಯೂರ
ಧ್ವಜಾನ ಮನಿಗೆ ಹೋಗಿ ಮಹಾರಾಯ
ಬಿಕ್ಷಾಂದೇಹಿ ಎಂದು ಅರ್ಧ ಶರೀರ ದಹನ ಆಗಿ ಬೇಡಿದಿ  ||  ಗೀ  ಗೀ ||

ಏರ
ಕುಂಟಲಾದಿಶ ಮೈಕುಂಟ ಪತಿ ನೀ
ಕೋಶದಿ ಅವನ ಶರೀರ ಮೆಚ್ಚಿ ಬಾವಕ ಕೊಟ್ಟಿದಿ ವರಾ ||
ದ್ವಾರಕಾ ನಗರ ಆಳೋ ಧೀರ
ವಾಸುದೇವ ದೇವಕಿ ಸುತ ಮುರಲಿಧರಾ  || ಗೀ  ಗೀ ||    ಚೌಕ : ೨

ದ್ರೌಪದರಾಜಾ ದ್ರೌಪದ ದೇವಿಗಿ ಪಾರ್ಥಗ ಕೊಡತಿನಿ ಅಂದಿದ
ಪೃಥ್ವಿಯೊಳು ಸ್ತುತಿ ಸಾರಿದ
ಪಾಂಡವರು ಅರಗಿನ ಮನ್ಯಾಗ ಮಡದಾರೆಂದು ಸುತ್ತ ಸುದ್ದಿ ಹರದಾ  || ಗೀ  ಗೀ ||

ಆ ವಾರ್ತೆ ಕೇಳಿ ಮಹಾ ಮಹಾರಾಜರೆಲ್ಲರೂ
ನೆರದಿದಾರು ಬಂದು ಬಂದ ಆಗ ಪಾಂಡವರಿಗಿತ್ತು ಕಟಬಂದ |
ಏಕ ಚಕ್ರದಿಂದ ತರಿಸಿ ಕೊಂಡಿರಿ ನಿನ್ನ ಕುಂಟಲಾಟ ಯಾರಿಗಿ ತಿಳಿದಾದ  || ಗೀ  ಗೀ ||

ಬಾಕಿ ರಾಜರಿಗಿ ಬಾಣ ಏಳಲಿಲ್ಲ ಕುಂತರು ಎದಿ ಒಡದ |
ಆಗ ಕರ್ಣ ಎದ್ದು ನಿಂತಿದ ಕರ್ಣ ಪರ್ಯಂತರ ಎತ್ತಿ ಹೊಡಿಯುವಾಗ
ಮೋಸಗೊಳಿಸಿದಿ ನೀ ಮುಕುಂದ  || ಗೀ  ಗೀ ||

ದುಮಾಲಿ
ಪಾರ್ಥ ಫಾಲ್ಗುಣ ಕಿರೀಟ ಧನಂಜಯ
ದಶನಾಮದ ಪೈಕಿ ಅರ್ಜುನಗ ಆಗ ಎಬ್ಬಿಸೀದಿ ||
ಆ ಕೊಪ್ಪರಿಗಿ ನೆರಳಾಗ ಜಪ್ಪಿಸಿ ನೋಡಿ
ಮುಚ್ಚಿ ಬಲಗಣ್ಣು ಉಚ್ಚಿ ಬಿದ್ದಿತೆಂದು
ಮೆಚ್ಚಿ ಸಾಹಸಿಕ ದ್ರೌಪದ ದೇವಿಗಿ
ಪಾರ್ಥಗ ನೀ ಕೊಡಸೀದಿ  || ಗೀ  ಗೀ ||
ಬಪ್ಪರೆ ಪಾರ್ಥ ಬಪ್ಪರೆ ಸಮರ್ಥನೆಂದು
ಬಂದರಾಜರು ಅವನ ಸ್ತುತಿ ಹೊಗಳಿರು
ಪಾಂಡವರಿಗಿ ಹೆಸರಿಗಿ ತಂದಿ  || ಗೀ  ಗೀ ||

ಮಹಾ ವಿಷ್ಣುವಿನ ಅವತಾರ ತಾಳಿದರು
ಎಂಬತ್ತು ಕೋಟಿ  ಜೀವರಾಶಿಗಳಿಗೆ
ತೃಪ್ತಿಗೊಳಿಸಿದಿ ಇಂತಹ ಅನೇಕ ಮಹತ್ವ ಮಾಡಿ
ಕಲಿಯುಗದೊಳು ಕಲಂಕಿ ಅವತಾರ ಧರಿಸಿ
ಬಹುದ್ಯಾ ವಿಠಲನೆಂದು ಅನಿಸೀದಿ
ಕೃಷ್ಣ ಅವತಾರ ಪರಮಾತ್ಮ ನೀರ ಪರಂಜ್ಯೋತಿ ನೀ
ಪರ ಹಿಂಸಕ ಪರ ರಕ್ಷಕ ನೀ |
ಇಂಥ ಸಹಸ್ರ ನಾಮ ಧರಿಸೀದಿ  || ಗೀ  ಗೀ ||

ಏರ
ಹರ ಹಮೋಶಾ ಹಿಂಗ ಹರದಾಸ ಮಹ್ಮದ
ಪಿಡಿದಿರು ಏನು ನಿಮ್ಮ ಚರಾ |
ಗುಪ್ತದಲಿ ಮಾಡು ಪರಿಹಾರ  || ಗೀ  ಗೀ ||      ಚೌಕ : ೨