ದೊಡ್ಡ ಶಾರಾ ಪಗಡಿ ಬಾಜಾರಾ |
ಐತಿ ಬಾಳ ದೂರಾ | ಕಾಣಸ್ತೈತಿ ಚಂದಾ ||
ಬೆಳವಲಾ ದೇಶ ಬಲು ಸೂರಿ ಆತೊ ನರಗುಂದ||ಪಲ್ಲ||

ನಾಡವಳಗ ಇಲ್ಲ ಇದರ ತಾಡಿ |
ಕಲ್ಲ ಪಡಿಪಡಿ |
ವೆಂಕೋಬಾನ ಗುಡಿ | ಗುಡ್ಡದೋರ‍್ಯಾಗ |
ಆ ಗುಡೀ ವಿಸ್ತರಾ ವರ್ಣಿಸಿ ಪೇಳ್ವೆನು ನಿಮಗ |
ಏನಂದರದರ ವಿಸ್ತಾರಾ |
ಗಚ್ಚ ಮೌನಾಗಿರಾ ಗಡ್ಡಿಯಾ ತೇರ
ಚಾವಣಿಮೇಗ | ಹಂಚಿನಾ ಲ್ಯಾವಿ ನೋಡು
ಇಳವಿದ ವಿಸ್ತಾರ ಹ್ಯಾಂಗ |
ಏನ ಗರಡಗಂಬದ ಮೇಗ ೧ಗ೧

[1]ಡಗಿ |
ಖಂಡೇದ ಮಡಿಗಿ ಹೊಂದಿಶಾನ ಬಡಗಿ
ಶಹಣೆ ಬಲ್ಹಾಂಗ |
ಯೇನ ಪದರಗಂಬ ನೋಡೊ
ಚದುರ ವಿಚಿತ್ರದೊಳಗ |
ಯಡಬಲಕ ನೋಡಿದರ ಹುಡಿಕಿ |
ಬಣ್ಣದಾ ಕಿಡಿಕಿ ||
ಒಂದು ಬೆಟ್ಟಡಿಕಿಯಷ್ಟು ಕೊರದೀಗ |
ಏನ ತುಳಸಿಕಟ್ಟೆ ಶೃಂಗಾರವು
ನಡುಗುಡಿಯಾಗ |
ಕೆತ್ತಿ ಪಡಕ ಹೊಂದಿಸ್ಯಾನ ಮೇಲೆ |
ಕಬ್ಬಿಣದ ಕೀಲ |
ಉಕ್ಕಿನಾ ತಾಲ ಕೊಂಡಿ ಅದರಾಗ |
ಏನ ಗಂಟಿ ಜಾಗುಟಿ
ಪಾತಾಳಂಕಣದಾಗ||ಇಳುವು||

ಬಹಳ ಚಾತೂರ್ಯದ ಗುಡಿಯೊ |
ಸುತ್ತಿನಾ ಪೌಳಿ ಕಲ್ಪಡಿಯೊ |
ಜರದ್ಹಣಿಯದಮ್ಮಸಬರ‍್ಹಿಡಿಯೊ |
ಆಮೇಲೆ ತೋರಸ್ತೀನ ನಡಿಯೊ |
ನೆಲಕ್ಕಿ ಗಚ್ಚು ತಿಳಿಮಡಿಯೊ |
ಅಲ್ಲಿ ಸಣ್ಣ ಬಿದರಿನಾ ಚಡಿಯೊ||ಏರು||

ಬಹಳ್ಹೊತ್ತು ನಿಂತು ನೋಡಿದೆ |
ಅಕಲದ್ಹಾಂಗದೆ |
ಹೀಂಗ ಪದೆಪದೇ ನೋಡೊ
ಸುತ್ತ ಬಂದಾ || ಬೆಳವಲಾ||೧||

ಉದಿಯಕ್ಕ ವೆಂಕೋಬಾನ ಪೂಜಿ |
ಆಗೋದು ಬಲ ಸಾಜಿ |
ಬಾಗಿಲದೊಳು ಬಾಜಿ ಆಗತಾವ ನಾಲ್ಕು |
ಕಂಚಿನಾ ಕಾಳಿ ನೋಡು
ಹಿಡುವತಾವು ಕ್ಷಣಕ್ಷಣಕೆ |
ವಾದ್ಯವಾಗೂದು ಅವನ ಬದೀಲೆ |
ಶಂಖು ಜಾಗುಟಿಲಿ | ತಾಳ ಮದ್ದಲಿ |
ಬಾರ್ಸಿ ಹಾಡಾಕ |
ಏನ ವೀಣ ತಾಂಬೂರಿ ಸಾರಂಗಿಯ
ಸ್ವರ ಟೀಕ |
ಸ್ನಾನಾ ಮಾಡಿ ಬಂದರೊ ಬ್ರಾಹ್ಮರಾ |
ಹಿಂಡು ಥರಥರಾ |
ವೋದಿ ಮಂತರ ಮಾಡಿ ಅಭಿಷೇಕ |
ಏನ ತಾಲಿ ತಂಬಿಗಿಯಿಟ್ಟಕೊಂಡರು
ಯಡಬಲಕ |
ಅಕ್ಷತೀ ಹಚ್ಚಿದರು ಗಂಧ |
ಪುಷ್ಪ ಒಂದೊಂದ ಕಿರೀಟವ ತಂದ
ಪುಸ್ತಕದ ಮೇಲೆ |
ಏನ ಹಸರ ಪಚ್ಚ ಶಿರಪೇಚ
ಹೊಳೂತಾವ ಜುಳಕ |
ಆಗ ಬಂದಿತೊ ಉಪಾಧ್ಯಾರಗುಮೀ |
ಗುಡಿಯಂ ದಿಮಿದಿಮಿ ಕಂಚಿನಾ ಸಮೇ
ಉರುತ ಲಕಲಕ |
ಆ ದೀವಿಗಿ ಬೆಳಕು ಬಿದ್ದಿತೊ ಸಿಂಹಾಸನಕ |
ಅವರು ಮಲಗು ಮಂಚ ಬಲು ಇಂಬು |
ತೀಪ ಅದರ ತುಂಬು |
ಕಂತನಿ ತಲಿಗಿಂಬು | ಅವಗ ಮಲಗಾಕ |
ಬಹಳ ಸ್ನೇಹದಿಂದ
ಸ್ವಪ್ನ ನಿದ್ರಿ ಮಾಡ್ಯಾರೊ ಬೆಳತನಕ||ಇಳವು||

ದೃಢ ಭಕ್ತಿವಂತ ಪೂಜಾರಿ |
ಆವ ನೈವೇದ್ಯ ತಂದನೊ ಬ್ಯಾರಿ |
ಹಸೆ ಹಾಲು ಚಿನ್ನಿ ಸಕ್ಕರಿ |
ತುಪ್ಪದಾ ಆಣ ಬುರಬೂರಿ |
ಕಾರೀಕಾ ಖಜೂರ ವಣಖೊಬ್ರಿ |
ಮೇಲೆ ಫಳಾರ ತಂದ ಚೂರಮರಿ||ಏರು||

ಇಷ್ಟೆಲ್ಲ ತಂದ ತನ್ನ ಸ್ವತಾ |
ದೇಹಕ ಹಿತಾ | ಕುಂತ ಅರ್ಪಿತಾ
ಸ್ವಾಮಿ ಸಲಿಸಂದಾ||೨||

ಆ ಊರಿಗೆ ಬಾಬಾಸಾಬ ಧೊರಿ |
ಪಾಗಾದ ಪನ್ನಾಗ ಕುದರಿ |
ಚಿಷಾನಿಯ ಮರಿ ಬಂತೊ ಶೃಂಗರಿಸಿ |
ಅದರಳಿವಿನ ಬಂಣದ ಚೌಡಾಲು ಅಂಬಾರಿ ಬಿಗಸಿ |
ತನ್ನ ರಂಗಮಾಲಿನಾಗ ಧಣಿ ಕೊಟ್ಟ ಅರಮನಿ
ಪಾತ್ರದ ಕೋಣಿಯೊಳು ಹೋಗಿ ಕುಂತರೊ ಪುರಮಾಸಿ ||
ಏಕಾಂತ ಕೋಣಿ ತಾರೀಪ |
ರಂಗಮಂಟಪ | ಮಂಚದ ಮೇಲೆ ತೀಪ |
ಕುತನಿಯ ಗಾಸಿ |
ಏನ ಬಂಣದ ರಾಜಿಯ
ಗಂಜಿಯ ಹಚ್ಚಡ ಹಾಸಿ |
ಅಲ್ಲೆ ಹೋಗಿ ಕುಂತರಿಬ್ಬರು ||
ತಬಕದಾಗ ೧ಮಾ೧[2]ರು |
ತಂದ ಅಭೀರು ಕೊರಳಿಗೆ ಧರಸಿ |

ತನ್ನ ಮಾನಿನಿ ಕಂಡು
ಹುರಿಯ ಮಾಡತಾನ ಮೀಸಿ |
ಬಹಳ ಮೌಜಿಲಿ ಮಾಡುವರೋ ಹ್ಯಾಂಗ |
ಮಂಚದ ಮೇಗ |
ಅಡಿ ಚದುರಂಗ ಅವನ ಸೋಲೀಸಿ |
ಬಹಳ ಕುಶಾಲದಿಂದ ಮಾಡತಾರೊ ನಗಿಹಾಸ್ಯ||ಇಳವು||

ಅವ ಬಂದ ಹರಿಯಾಗಿನ ಹೊತ್ತು |
ಮಹರ್ಬಲಾ ಅವನ ಮಂದಿ ಸುತ್ತು |
ಇರಬೇಕು ಇಂಥಾ ದೌಲತ್ತು |
ಏನಬರದ ಬ್ರಮ್ಹ ಲಿಖಿತು||ಏರು||

ಧನಿ ತಾನಂಬೂದು ಹಬಿಹಬಿ |
ಹೊನ್ನಿನಾ ಹಬಿ |
ದೇವೇಂದ್ರನ ಸಭೆ ಇಳದ ಬೇಗಬಂದ || ಬೆಳವಲ ||೩||

ದೊಡ್ಡ ಮಹರಾಯಂದು ಧನಿಕಿಲ್ಲೆ |
ಗುಡ್ಡದ ಮೇಲೆ ಐತಿ ಬಹಳ ಶಲೆ |
ನೀರಿನಾ ಜವಳಾ |
ಆ ಗುಡ್ಡದ ಒಳಗ ನೀರಿನ ವಿಶಾಲ್ಯವು ಬಹಳ |
ಮತ್ತೊಂದು ಮಾಡ್ಯಾನು ಮಸಲತ್ತು |
ಜಕೇರಿಯ ಗೊತ್ತು |
ಸಕಲ ಸಾಹಿತ್ಯ ಹೊಟ್ಟಿಯಾ ಕೂಳಾ |
ಏನ ಹಗೇವ ಅಂಬರೀ ಕಡಿಸಿ
ತುಂಬಿದರ ಜೋಳಾ |
ಆಗ ಬಿಟ್ಟಿತು ಪಡವಲ ಗಾಳಿ |
ಬಂತೊ ಜಡಿ ಮಳಿ |
ಹತ್ತಿರೇ ಖಾಳಿಗೊಂಡು ಝಳಝಳಾ |
ಆಕಾಶಕ ಟೋಪ ಹೊಡುವತಾರೊ ಕೆಂಧೂಳಾ |
ಕಾದಾಡಿ ಕಲಕಿದವೊ ಕಣ್ಣ |
ಬಾರೊ ಕಾಳಣ್ಣ ಮಾರಿ ಸಣ್ಣಣ್ಣ |
ಮಾಡಿದಾನೊ ಕಾಳಾ |
ದುಃ೧ಖ೧[3]ದಲಿ ಕಣ್ಣತುಂಬ
ನೀರ ಬಂದವೊ ಬಹಳ||ಇಳವು||

ಅಸ್ಕರೀ ಆತೊ ಲಢಾಯಿ |
ಆಗ ತಪ್ಪಿತೊ ಕಾಳಣ್ಣನ ಕೈಯಿ |
ಶಿಷ್ಟಿಲೆ ರಾಮದುರ್ಗ ಬಾಯಿ |
ಇನ್ನೇನೊ ಇದಕ ಉಪಾಯಿ||ಏರು||

ಬಪ್ಪರೇ ಪುಂಡ ಬಹದೂರಾ |
ದೊಡ್ಡ ಸರದಾರಾ |
ರಾಜ್ಯಕ ಜಾಹೀರ ಮಾಡಿದೊಂದೊಂದಾ ||ಬೆಳವಲ ||೪||

ಹಿಂದಿನಾ ಕರ್ಪದನತಗಿ |
ಅರೇವು ಅದರ ಬಗಿ
ಹಿಂದಕ್ಕ ಹೀಂಗಾಗಿ ಹೋಗಿತ್ತೊ ಹಳೆಮಾತು |
ಇಂಗ್ರೇಜಿ ಅವರಿಗೆ
ಮತ್ತೊಂದ್ಮಾಡ್ಯಾರೊ ಮಲಸತ್ತು |
ಬಾಜಿರಾಯನ ಇದ್ದಾಗಿನ ಗುಟ್ಟಾ
ರಾಜನ ಬೊಬ್ಬಾಟ | ಮಾಡಿದಾರ ಹಟಾ |
ಕತ್ತಿ ಕೊಡರೆಂತ |
ಬಹಳ ಬಹಳ ಧಾಂದಲೆ ಪಾಳ್ಯಗಾರರ ಸುತ್ತ |
ಈ ಸುದ್ದಿ ಕೇಳುವದು ತಡಾ |
ಜಲದ ಭಡಭಡಾ ಹೋಗಿ
ತನ್ನ ಗಡದ ಮೇಲೆ ಹೋಗಿ ಕುಂತಾ |
ತನ್ನ ಮಂದಿಗ್ಹುಶಾರಿ ಹೇಳತಾನೊ ತಾ ಸ್ವಸ್ಥಾ |
ಇಂಗ್ರೇಜಿ ಶೋಧಿಸೀ ನೋಡಿ |
ಆದಿತೊ ಗಡಿಬಿಡಿ |
ಬಂದರೋಡೋಡಿ ಊರ ಸುತ್ತಮುತ್ತ |
ನಮ್ಮ ಭೆಟ್ಟಿಗೆ ಬಾರೊಂದದಾವು ಮೂರ ಮಾತಾ |
ನಾ ಬರುವದಿಲ್ಲೊ ನಿಮ್ಮ ಭೆಟ್ಟಿ |
ಮಾಡಬ್ಯಾಡ್ರೊ ಹಟಿ |
ಬರದ ಲಕೂಟಿ ಕಳುಹಿ ತಾ ಕುಂತ |
ನೀವು ಹೇಳಿದ ಚಾಕರಿಗ್ಹಾಜರ ಇರತೇನಂತ |
ಇಷ್ಟ್ಯಾಕೊ ಬಿಡೊ ನಿನ್ನ ಕೋಪಾ |
ಚಲ್ಲಿಶಾವೊ ಟೋಪ |
ಗಂಧಕ ಮದ್ದನುಪ್ಪ ಹೇರಿ ಕಳಸುತ |
ರಖವಾಲಿ ಕುದರಿ
ಧಾರವಾಡಕ ಕಟ್ಟಿದವು ಸೇತ||ಇಳವು||

ಅವರಿಬ್ಬರದು ಸುರಳೀತಾ |
ಮಾತಾಡತಾರೊ ಏಕಾಂತ |
ನೀ ಬಿಡೊ ಮನಸಿನನ್ನ ಚಿಂತಾ |
ಬುದ್ಧಿ ಹೇಳತಾರೊ ಹೀಂಗಂತಾ
ಸವಿ ಅಡಿಗಿ ಊಟ ಮಾಡೊ ಕುಂತಾ |
ನಿನ್ನ ಮಾಲಿನೊಳಗ ನೀ ಸ್ವಸ್ಥಾ||ಏರು||

ಇಂಗ್ರೇಜಿ ಆದರೊ ಮಿತ್ರ |
ನನಗ ಬಾಯಿ ಸತ್ವ | ಆಗುವ ಕರ್ತುತ್ವ |
ಪೇಳುವೆ ನಿನ್ನ ಮುಂದ || ಬೆಳವಲ ||೫||

ಧನಿ ಕಡೇ ಇಲ್ಲ ಜರ ಕುಂದ |
ಅನ್ನೇವು ಯಾವದಾ |
ಹೇಳಿ ಕಳುವಿದಾನೆಲ್ಲ ನುಣ್ಣಗ |
ಮಸಲತ್ತ ಹುಟ್ಟಿತೊ
ಮಹಾ ಚದುರ ಹೊಟ್ಟ್ಯಾಗ |
ಈ ಊರ ಪೈಕಿ ಹಳಬರಾ |
ಸವ್ವಾನೂರ ಬಾರಾ |
ಹಿರದ ಕತ್ತಿ ಪಾರಾ ಬಂತೊ ಅಗಸ್ಯಾಗ |
ನಾವು ಲಢಾಯಿ ಮಾಡತೇವು
ಟೋಪ ಕೊಡುವದಿಲ್ಲ ನಿಮಗ |
ಧನಿ ತೆರದ ಹೇಳತಾನ ಬಾಯಿ |
ಮುಗದನೊ ಕೈಯಿ |
ನನಗ ಅಪಾಯಿ ತಂದಿರೋ ಈಗ |
ಬಹಳ ದೈನಾಸ ಬಿ೧ಟ್ಟು೧[4]ಹೇಳತಾನೊ ಮಂದ್ಯಾಗ |
ಆಗುವಂತ ಸತ್ತಕೀರ್ತ್ಯಾಗಲಿ |
ಹೋಗಲೀ ನಮ್ಮ ತೆಲಿ |
ಅದಾವೇನ ಮೊಲಿ ನಮ್ಮ ಯದಿಮೇಗ |
ಸಂಕದಾಳ ನಾಯಿಕಾ ಶಿಟ್ಟಾದನೊ ಧನಿಮೇಗ |
ಏನು ಮುನಿದೊ ಮೋಕಿನ ಮೇಗಿನ ದಂಡಾ |
ಮೆಣಸಿನ ಸಾಹೇಬನ ಚಂಡಾ |
ತಂದಾರು ಕೋಕೊಂಡ ಕಟ್ಟಿದರು ಹೊರಗ |
ಬಹಳ ಬೆಂಕಿ ಬಿದ್ದಿತೊ ಇಂಗ್ರೇಜರ ಹೊಟ್ಟ್ಯಾಗ |
ಟೋಪ ಹೂಡಂದ ನರಗುಂದ ಮೇಲಾ |
ಸಂಣ ಜಂಜಾಲಾ |
ಟುಬಾಕಿ ಪಿಸ್ತೋಲ ಕರೂಲಿ ಕೈಯಾಗ |
ಏನ ಗದ್ನಿಕಡಾಟಾ ಮಂಗಳಾರ ಮಧ್ಯಾನದಾಗ||ಇಳವು||

ಮಳ್ಳರಸು ಕಿಲ್ಲೇದ ಮೇಗಿಂದಾ |
ತಿಳಿಯದಲೆ ಇಳಿದು ತಾ ಬಂದಾ |
ಮನದೊಳಗ ಹುಟ್ಟಿತೊ ಜಿದ್ದಾ |
ಹರುಷದಲೆ ಇಳದ ಹೊರಬಿದ್ದಾ |
ಅವರ ಕೂಡ ಮಾಡಿದನೊ ಯುದ್ಧಾ |
ಇಂಗ್ರೇಜಿ ಸೋಲಿಸಿ ಗೆದ್ದಾ||ಏರು||

ಸೊಜರಾ ದಂಡ ಬಿತ್ತು ತೂರೆ |
ಕಡದ ಶರೆಸೂರೆ |
ಹುಡಕತಾರ ಧೊರಿ |
ಕೈಶರೀ ಆದಾ || ಬೆಳವಲಾ||೬||

ಆ ಲಢಾಯಿ ಸುದ್ದಿ ಕೇಳಣ್ಣಾ |
ಕತ್ತಿ ಛಣಫಣಾ |
ದಾರಿಗುಂಟ್ಹೆಣಾ ಬಿದ್ದಿದವೊ ಎಷ್ಟಾ |
ಇಂತಾ ನಷ್ಟಾ |
ಪ್ರಾಯದವರ ಮಾರಿ ಮೇಗ ದೆಸಿ |
ಕಾಣುತೈತಿ ಬೇಸಿ |
ವತ್ತಿ ಮಕ ಮೀಸಿ |
ಬಂದದಾವೀಟೀಟಾ |
ಏನ ಬಗರಿ ಗಡ್ಡ
ರಣಗೂದಲ ಜಾಡಿಸಿ ಬಿಚ್ಚಿ |
ಅವರು ತೊಟ್ಟಾರೊ ಚಬಕಿನ ಚಂಣಾ |
ಎದ್ದಿಸ್ಯಾರೊ ಮಣ್ಣ |
ಸುತ್ತಿದರೊ ಸಂಣ ಕಾಸಿ ನಡಕಟ್ಟಿ |
ಮೈ ವಳಗ ಚಂದ
ಚಿಲಕೋತಿನ ಅಂಗಿಯ ತೊಟ್ಟ |
ತಮ್ಮ ಧಣಿಯರಿಗೆ ಮುಜರಿಯಾ ಹೊಡದು |
ಕತ್ತಿಡಾಲ್ಹಿಡಿದು |
ಕರೂಲಿ ಗುಂಡ ಬಡಿದು
ಕಾಯ ಘಟ ಬಿದ್ದು |
ರಣದೊಳಗೆ ಮಡಿದ ಮಲಿಗ್ಯಾರೊ
ದಾರಿಗೆ ತಲಿಗೊಟ್ಟು |
ಕೋದ ಕುರೀ ಹಾಕಿದ್ಹಾಂಗ ಪಾಲಾ |
ರಕ್ತ ಝಲಝಲಾ |
ಭೂಮಿ ಉಳಿಯಲಿಲ್ಲ ಒಂದು ಯಳ್ಳಷ್ಟು |
ಏನ ಕರಳ ಪುಚ್ಚ ಹೊರಬಿದ್ದವೊ
ಹೊಟ್ಯಾಗ ನಟ್ಟು||ಇಳವು||

ಅವರ‍್ಹೆಂಡರದು ಬಹು ಸೂರಿ |
ಬಳಿ ವಡದು ಕರಿಮಣೀ ಹರಿ೧ದು೧[5]
ಅವರಕ್ಕತಂಗೇರು ಗೋಳ್ಯಾಡಿ |
ಬಡಕೊಂಡ ಬಾತದಾವೊ ಮಾರಿ |
ಅವರವ್ವನ ಹೊಟ್ಟ್ಯಾಗ ಕುಮರಿ |
ಗೂಡಿಸೀ ಹಾಕತಾಳ ಭೋರಿ||ಏರು||

ಏನ ಲಢಾಯಿ ಮಾಡಿದರೊ ಗುರ್ತಾ |
ಸತ್ತುಹೋದರು ವ್ಯರ್ಥಾ |
ಅವರದೇನ ಸ್ವಾರ್ಥಾ |
ಆಗಲಿಲ್ಲೊ ಮುಂದಾ ||ಬೆಳವಲಾ||೭||

ಏನ ಫಿತುರ ಮಾಡಿದೊ ಬೇಮಾನ |
ದೊಡ್ಡ ಕಾರಕೂನ | ಉಂಡ್ಯೊ ನನ್ನ ಬೋನ |
ತಿರಿಗಿದ್ಹಾಕೂವಾ |
ಮುಂದ ಹ್ಯಾಂಗ ಗುಣಕ ಮೆಚ್ಚುವನೋ ದೇವರಾ |
ನನ್ನ ಗಂಡನ ಪಂಙಲೆ ಉಂಡಿ |
ಐಶ್ವರ್ಯವು ಕಂಡಿ |
ಶೇಲ ಹೊತ್ತಕೊಂಡಿ | ಶರಗ ಜರತಾರ |
ಅಂತಾದು ಏನ ಮಾಡಿದ್ದರಯ್ಯ ನಮ್ಮವರ |
ನನಗ ಏನು ತಂದ್ಯೊ ವನವಾಸ |
ಹತ್ತಲಿ ನನ್ನ ದೋಷಾ |
ನನ್ನ ಸರಿಯಿಲ್ಲ ನಿನಗ ಯಾರ‍್ಯಾರ |
ಏನ ಅತ್ತಿಯು ಸೊಸಿಯು
ತಗದ ದುಃ೨ಖ೨[6] ಮಾಡುವರಾ |
ಎಷ್ಟಿತ್ತೊ ಮನಸಿನಾಗ ಜಿದ್ದಾ |
ತೋಸಿದೆಲ್ಲೊ ಮದ್ದಾ |
ಟೋಪ ಹಾರಿಹೋಗಲಿಲ್ಲೊ ದೂರದೂರಾ |
ನಿಮ್ಮವ್ವನ ನೆಂಟ
ಬಹಳ ಮಾಡಿದೆಲ್ಲೊ ಫೇರಾ||ಇಳುವು||

ಕಾರಕೂನ ಬಹಳ ಶಿಟ್ಟಿಲೆ |
ಗುರುಕಾಸಿಹೋದ ಮೈಮೇಲೆ |
ನಿನಗ್ಯಾಕ ಹೆಂಗಸೂ ಬಾಲೆ |
ಕಳಿಶಾನ ಉಟ್ಟಿರುವ ಶಾಲೆ |
ಈ ಕ್ಷಣಾ ಸೊಜರು ದಂಡ ಬರಲೆ |
ನಿನ್ನ ಹಿಡಕೊಡತೇನ ಕೈಯಲ್ಲಿ||ಏರು||

ಅತ್ತಿ ಮನಸಿನಾಗ ಕಸವಿಸಿ |
ಕುದರಿ ಮೇಗ ಸೊಸಿ |
ಹೋಗಿ ಧುಮಕಾಸ್ಗಿ
ಹೊಳಿಯೊಳು ಬಿದ್ದು ||ಬೆಳವಲಾ||೮||

ಅರಮನೀ ಆದಿತೋ ಲೂಟಿ |
ಮಹಾರಾಯ ದೊಡ್ಡಪ್ಯಾಟಿ |
ಜಿಂದಗಾವಿ ಕಟ್ಟಿ ಹೇರುವದು ಕಂಡೆ |
ಪಾಂಡವರ ಮನಿಯ ಕೌರುವರು
ಸುಲಿಗಿಯಾ ಮಾಡೆ |
ಧನಿ ಹೊರುವ ಶೇಲ ಶಕಲಾತಿ |
ಮುಂಡಾಸವು ಬತ್ತಿ |
ಹಾಕಿದಾವೊ ಸುತ್ತಿ ಗೂಟಕ ಮೋಡಿ |
ಏನ ಚಂದ ಚಂದಡಗಲಿಟ್ಟಿವೊ
ಮುರಿಗಿಯ ಮಾಡಿ |
ರಾವುತರ ಕುದರಿ ಸಾಮಾನ |
ಹೇಳಲಿನ್ನೇನ |
ಹಾಕುವ ಜೀನ ರೇಸಿಮೀತಡಿ |
ಏನ ಮಾರಿ ಮಾರಿ
ಕಬ್ಬಿಣದ ಸರಾಸರಿ ಗೊಂಡೆ |
ಪಟ್ಟಣಕ ದೊಡ್ಡ ಸಾವಕಾರ |
ಬೆಳ್ಳಿ ಭಂಗಾರು ಮಾಣಿಕಕ ಚೂರ |
ಮುತ್ತಿನಾ ದಂಡಿ |
ಏನ ಬೆಳ್ಳಿ ತಳಿಗಿ ಹರಿವಾಣದ ಚಿನ್ನದ ಗಿಂಡಿ |
ಒಕ್ಕಲಿಗೇರ ಮುರವತ್ತು |
ಕುಡಮಿಣಿ ಸುತ್ತು |
ಹೂಡುವ ಎಂಟೆತ್ತು ದೊಡ್ಡಹಳಿ ಬಂಡಿ |
ಏನ ಜತ್ತಿಗಿ ನಾಗೋಸ
ಬಿತ್ತುವ ಕೂರಿಗಿ ಶಡ್ಡಿ |
ರೇಸಿಮೀ ಬದಕ ಬಲ ಹಸಾ |
ಕಾಣಸ್ತಾವ ಕಾಸಾ |
ಶೀರಿ ಕುಪ್ಪಸಾ ಬ್ರಾಹ್ಮರುಡು ಮಡಿ |
ಏನ ಜವಳಿ ಅಂಗಡಿ ಹೊಕ್ಕ
ಸುಲಿಗಿಯಾ ಮಾಡಿ |
ರೇವಡಿಗಾರಾ ಅಂಗಡಿಯ ಮೇಲಾ |
ಮಾಜೂಮದ ಹಾಲಾ |
ಗರ್ದಿ ಹುರಕಡ್ಲಿ ಚೂರ್ಮರಿ ಉಂಡಿ |
ಏನ ಸಕ್ಕರಿ ಬದಕು ಮುಕ್ಕ್ಯಾರ ಪಾವನ ಮಾಡಿ||ಇಳವು||

ನರಗುಂದಕ ಬಂದಿತೋ ಕಾಲಾ |
ಯಾರ‍್ಯಾರು ಇಳವಿಕೊಳಲಿಲ್ಲ |
ಕೋಣತದ ರೊಕ್ಕದಾ ಚೀಲಾ |
ಕಳಕೊಂಡ ಕುಂತಾನೊ ಚಿನಿವಾಲಾ |
ಊರ ಬಿಟ್ಟು ಹೋದರೋ ಎಲ್ಲಾ |
ಮನಿಮಾರಿನೊಳಗ ಯಾರಿಲ್ಲಾ||ಏರು||

ಧರಿಯೊಳು ಕಬ್ಬೂರ ಶಾರ |
ಕಲ್ಲಮೇಶ್ವರಾ |
ಮಾಡಿದ ಚಮತ್ಕಾರಾ |
ಲಾವಣೀ ತಂದಾ || ಬೆಳವಲಾ ||೯||
|| ಸಮಾಪ್ತಿಯು ||

 

* /song stress/ಬಾಳಿ ಇಂಟಿ ಗುಳೇದಗುಡ್ಡ ೩೦ನೇ ಜಾನೆವಾರಿ ೧೮೭೪ ಇ || (ಒಂದು ಸಂಕ್ಷಿಪ್ತ ಸಹಿ ಇದೆ)

ಕವಿ : ಕಬ್ಬೂರ ಕಲ್ಮೇಶ್ವರಾ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು[1] ಗು? ಗೂ?

[2] ಪೂ

[3] ಖ್ಕ

[4] ಟು

[5] …………..

[6] ಖ್ಕ