ಬಾಬಾ ಸಾಹೇಬ ಮಹಾರಾಜರ ದೌಲತ ಬಾಳದಿಂದ ರಾಜುಕಿ
ತಮ್ಮ ಕೇಳೊ ಬಾಳದಿಂದ ರಾಜುಕಿ
ಪುಣೆ ಚೆನ್ನಪಟ್ಟಣತನಕ ಮೆನಸನ್‌ಸಾಬ ಒಬ್ಬ ದೊರಿ
ವಿಲಾಯತಲಿಂದ ಹುಕುಂ ತರಿಸಿದರೊ ರಾಜರಿಗೆ ಹಾಕುದೈತಿ ಸೆರಿ
ಕತಿ ಕಟ್ಟಿ ಹೊರಸಿದರು  ಹೋ|| ಜಿ

ಮೊದಲ ಮುಂಚೆ ಜಮಖಂಡಿ ಅರಸಗ ಹಿಡಿದಾರಣ್ಣ ಕೈ ಸೆರಿ
ತಮ್ಮ ಕೇಳೋ ಹಿಡಿದಾರಣ್ಣ ಕೈಸೆರಿ
ಮೆಣೆ ಪಿಂಜರದಾಗ ಹಾಕಿದರೊ ಜಮಕಂಡಿ ಆತೂ ಶರ್‌ಸುರಿ
ಸಿಟ್ಟಿಗೆದ್ದು ತನ್ನ ಮುನಸುಪಗ ಹೇಳತಾನೋ ಜಲ್ದಿ ಮಾಡಿ ಪತ್ರ ಬರಿ
ಬಾಬಾಸಾಹೇಬಗ ಬರೆದ ಪತ್ರರವಾನಿಯಾಗಬೇಕು ಧನ್ ಕುದರಿಯ
ಮಾರ್ಬೋಲಾ ಹೊ || ಜಿ

ಕತ್ತಲದಾಗ ಪತ್ರನೋಡಿ ಸಣ್ಣದ ಮಾಡಿದ ಮಾರಿ
ಬಾಬಾಸಾಹೇಬ ಹಿಡಿದನು ಜಮಕಂಡಿ ದಾರಿ
ಬುಧವಾರ ದಿವ್ಸ ಉದಯ ಹಾಯುವದರಾಗ ಸಾಹೇಬಗಾತು ಮುಜರಿ
ಏನು ಭರ‍್ತಿ ಜಮಕಂಡಿ ಕಛೇರಿ
ಕುರ್ಚೆದ ಮೇಲೆ ಕುಂತಸಾಹೇಬ ಹಲ್ಲ ತಿಂದ ಕರಿಕರಿ ಹೊ||ಜಿ

ಇವರನ್ನ ನೋಡಿ ಹಲ್ಲತಿಂದ ಕರಿ ಕರಿ
ಅಂತಾ ಅನ್ನೇವು ನಾವೇನು ಮಾಡೆವಿ ಹಲ್ಲ ಯಾಕ ತಿಂತಿರಿ
ಅಪ್ಪಣೆ ಕೊಟ್ಟು ನಡಿಯೆಂದರು ನರಗುಂದ ಕಿಲ್ಲೆ ತೆರವು ಮಾಡಿರಿ
ಹೊಂಡ ಒಡೆಯಿಸಿ ಬಂಡಿ ಕೆಡವಬೇಕು ಸುತ್ತಾಗಬೇಕು ದಾರಿ
ಇದರ ಹೊರ್ತ ಊರಾಗಿನ ಕೆರಿ ಹೋ|| ಜಿ

ಬಾಬಾಸಾಹೇಬ ನರಗುಂದಕ್ಕ ತಿರುಗಿ ಬಂದು ಪಲ್ಲಕ್ಕಿನ ತಗದಾರೊ ಯಂಕೋಬಾನ
ತೋಫ ಹಾರಿಸ್ಕಾರೊ ಧನ್ ಧನ್
ಸುದ್ದಿ ಕೇಳಿತು ಸುತ್ತಲಿನ ಜನ
ನವಲಗುಂದದ ಸುಭೇದಾರ ಮೆನಸನ್‌ಸಾಬಗ ಪತ್ರಬರೆದ ಮರುದಿನ
ನರಗುಂದ ಬಂಡಾಯ ಮಾಡಲಿಕ್ಕೆ ತಯಾರ ಮಾಡ್ಯಾನೋ ಸಾಮಾನ  ಹೊ||ಜಿ

ಇಷ್ಟು ಬರೆದಾನ ವರ್ತಮಾನ
ಮೆನಸಿನಸಾಹೇಬ ರಾಮದುರ್ಗಕ್ಕೆ ನೇಮಿಸಿ ಬಂದ ಅಯತಾರ ದಿನ
ತೋಟದಾಗ ಇಳಿದು ಕರೆಯ ಕಳುಸಿದನು ಸಿಟ್ಟಲೆ ರಾವಸಾಹೇಬರನ
ಆಗ ಬಾಯಿ ಬಿಡತಾವೋ ಸಿಪಾಯಿ ಜನ
ಇಷ್ಟು ಮಾತಿನ ಧೈರ್ಯಸಾಲದೆ ಹೊಂಟರಣ್ಣಾ ಸೂರೇಬಾನಕ  ಹೊ|| ಜಿ

ಸೂರೇಬಾನ ಬಸವಣ್ಣನ ಗುಡಿಯಾಗ ಒದಗಿ ಬಂತು ಮರಣ
ಬಾಬಾಸಾಹೇಬ ಹೊಂಟನೋ ಅರ್ಜುನಾ
ಹಿರೇಕೊಪ್ಪದ ಶಾನುಭೋಗ ಹೋಗಿ ಕೊಂದಾನೋ ಸಾಹೇಬನ ಕುತ್ತಿಗಿನಾ
ರಣ ಕತ್ತಲ ಆಯಿತೊ ಆದಿನ
ದಿಡಾ ಬಿತ್ತು ಚಂಡುತೊಗೊಂಡು ಬಂದರಣ್ಣ ತಿರಗುಹಾಕಿ  ಹೊ|| ಜಿ

ಊರಮುಂದಿನ ಅಗಸಿಗೆ ತೂಗ್ಹಾಕಿ
ಸೋಮರಾ ಹೋತು ಮಂಗಳವಾರ ದಿನ ಕೂಡಿತಣ್ಣಾ ಗಲ್‌ಬಲಾ
ಇಂಗ್ರೇಜಿ ದಂಡು ಕುಡಿತಣ್ಣಾ ಗಲ್‌ಬಲಾ
ಅಮರಗೋಳದ ಯದ್ದಿನ್ನಿಮೇಲೆ ಹೊಡಿಸಿದರು ತಂಬುನಾ
ಮಲಕಮ್‌ಸಾಂಬ ದಂಡಿನ ಸರ್ದಾರಾ  ಹೊ|| ಜಿ

ಏಕ ಧುಮಕಾಶೇನ ಕುದರಿ ಮೈಸೂರ ಸೀಮಿ ಸರ್ದಾರ
ಬಹಳ ಮಂದಿ ಆಯಿತು ಚಕ್‌ಚುರಾ
ಅಮರಗೋಳ ನರಗುಂದಕ ಹರದಾರಿ ಹರದಾಡಿತೋ ನೆತ್ತರ
ತಮ್ಮ ಕೇಳೋ ಹರದಾಡಿತೋ ನೆತ್ತರ
ಹಾಲಬಾವಿಯ ಮೇಲೆ ಹಚ್ಚಿದರೊ ದಂಡಿನ ದರ್ಬಲಾ  ಹೊ||ಜಿ

ಮಂದಿ ಬಿಟ್ಟ ಹೊಂಟಿತೋ ಮನಿಮಾರಾ
ಬಾಬಾಸಾಬ ಅಪ್ಪಾ ಸಾಹೇಬರು ದೇವರ ಮೇಲೆ ಬಾಳ ಭಕ್ತಿ
ಯಾವ ದೇವರು ಅಡ್ಡಾಗಲಿಲ್ಲ ಸೆಟವಿ ಬರೆದ ಲಿಖಿ
ಏನ ಸರಿತೊ ದೌಲತ್ತಿನ ರೀತಿ
ಬ್ರಹ್ಮರ ಧರ್ಮ ಸರಿಯಿತಿಲ್ಲಿಗೆ ಮುಳುಗಿತು ಅವರ ಅರಸುಕಿ  ಹೊ|| ಜಿ

ಜನರೆಲ್ಲ ಮಾಡತಾರ ದುಃಖ
ಬಾಬಾಸಾಬ ಯಂಕುಬಾಗ ಮಾಡ್ಯಾನೊ ನಮಸ್ಕಾರ
ಸಣ್ಣ ಅಗಸಿಲೆ ಬಿಟ್ಟಾರ ಕುದರಿ ದಿವಸ ಇತ್ತು ಮಂಗಳವಾರ
ಬಿಟ್ಟ ಹೋದಾರೋ ನರಗುಂದ ಶಹರಾ
ಅತ್ತಿ ಸೊಸೆಗೆ ಹೇಳತಾಳ ಇಲ್ಯಾತಗ ಇರಬೇಕ  ಹೊ|| ಜಿ

ದಂಡಿನ ಜಪಾಟ್ಯಾಗ ಸಿಗಬಾರದವ್ವ
ಮುಳುಗುನ ನಡಿಯ ಗಂಗಾದಾಗ ಮಗಬಿಟ್ಟ ಹೋದ ನಮಗ
ಅತ್ತೆವ್ವಾ ಮೆಣೆ ಪಲ್ಲಕ್ಕ್ಯಾಗ ಕುಂಡ್ರೋರು
ದಾರಿ ಹ್ಯಾಂಗ ನಡಿಬೇಕ
ಅಂತಾ ಅನ್ನೇವು ನಾವೇನು ಮಾಡೇವು ಠಾವಕಿ ಇರಲಿ ಯಂಕುಬಾವ
ಮರುಮರಣ ತಂದ ನಮಗ  ಹೊ|| ಜಿ

ದಾರಿ ಹಿಡಿದು ಅವರು ಹೋಗುದರೊಳಗ ಬಾಯಿ ತೆಗೆದರೂ ಆಕಾಶಕ
ಹೋಗಿ ನಿಂತಾರೊ ಗಂಗಾದಾಗ ಅಂಗುಸ್ತ್ರದಲ್ಲಿ
ನಡಕ ನಡಾ ಕಟ್ಟಿ ಕೊಂಡು ಜಿಗಿದಾರೊ ಗಂಗಾದಾಗ
ಹರಾ ಹರಾ ಅಂತಾ ಜಿಗಿದಾರೊ ಗಂಗಾದಾಗ
ತುಳಸಿದಳಾ ಬಾಯಲಿ ಹಿಡಿದಾರೊ ಹೊ|| ಜಿ

ಹೋದಾರೋ ಕೈಲಾಸಕ ಇಟ್ಟಾರೊ ಮರ್ತೆದೊಳಗ
ಕೆರೂರು ಮಾಲಕರಿ ಹುಕುಂ ತರಿಸಿದನೊ
ಅತ್ತೆ ಸೊಸೆಗೆ ನಿಂತು ದಹನ ಮಾಡಿದನೊ
ದೇವರಿಡಲಿ ಅವನಿಗೆ ಸುಖಿ ಜನರೆಲ್ಲ ಮಾಡತಾರ ದುಃಖಿ
ದನಿಯರ ಉಪ್ಪುಂಡು ನಿಂದಿ ಮಾಡತಾರೊ | ಇಂಥವರಿಗೆ ಇಲ್ಲ ಸುಖಿ  ಹೊ||ಜಿ

ಠಳಕ ಠಳಕ ನುಡಿಕಟ್ಟಿ ಹೇಳತೇವೋ ಸಂಪಾಸಿತೋ ಇಲ್ಲಿಗೆ
ಮಮ್ಮದಸಾಬ ಸಕಲಿ ಹೇಳ್ಯಾರೊ ಬೇಗಿನ ಹೊತ್ತಿಗೆ
ಬೆಲೆಯಿಲ್ಲೊ ಜಾತ ಮುತ್ತಿಗೆ
ಬ್ರಹ್ಮರ ಧರ್ಮ ಸರಿಯಿತು ಇಲ್ಲಿಗೆ ಮುಳುಗಿತೊ ಅವರ ಅರಸುಖಿ
ಜನರೆಲ್ಲ ಮಾಡತಾರೊ ದುಃಖಿ  ಹೊ|| ಜಿ

ರಚನೆ : ಶ್ರೀ ಎಂ. ಆರ್. ಸಕಲಿ
ಕೃತಿ : ಕ್ರಾಂತಿವೀರ ಬಾಬಾಸಾಹೇಬ