ನೀವು ಕುಳಿತು ಕೇಳಿರಿ ಸರ್ವಜನಾ | ನರಗುಂದ ಬಂಡಾಯದ ಕಥನಾ |
ಬಾಬಾಸಾಹೇಬ ಕೊಲ್ಲಿಸಿದ ತಾನಾ | ಆಂಗ್ಲರ ಮೆನಸನ್ ದೊರೇನಾ||೧||

ಸುದ್ದಿ ಕೇಳಿ ಬಂದರೋ ಕಮೀಶನರಾ | ದಂಡಿತ್ತೊ ಅತಿ ಭಯಂಕರಾ |
ನರಗುಂದ ಸುತ್ತು ಮುತ್ತು ಪಾರಾ | ಬಾಬಾ ಸಾಹೇಬಗಿದ್ದಿಲ್ರಿ ದರಕಾರಾ||೨||

ಮುಂಡರಗಿ ಭೀಮ-ರಾಯನಿಗೆsss | ಸುರಪೂರ ಊರ ನಾಯಕಗ |
ಪತ್ರ ಬರೆದ ತಾನು ಅವರಿಗೆ | ಸಹಾಯಕ್ಕೆ ಬರಬೇಕ್ರಿ ನೀವು ನನಗೆ||೩||

ಸರ್‌ಮಾಲಕಂ ಸಾಹೇಬರಾ | ಪತ್ರ ನೋಡಿ ಆದರೋ ತಯ್ಯಾರ |
ಬನಿಯಾ ಬಾಪು ಹರಾಮ ಖೋರಾ | ಆಂಗ್ಲರಿಗೆ ಕೊಟ್ಟಾನೊ ಫಿತೂರಾ||೪||

ಮದ್ದಿನಲ್ಲಿ ರಾಡಿ ಬೆರೆಸಿದರಾ | ಯುದ್ಧದಲ್ಲಿ ಸೋಲಿಸಲು ಅವರಾ |
ಕಾಳಗ ನಡದೀತೊ ಘನಘೋರಾ | ಮದ್ದ ಹಾರಲಿಲ್ಲ ಒಂದ ಚೂರಾ||೫||

ಸಹಾಯಕ್ಕ ಬರಲಿಲ್ಲ್ರೀ ಯಾರ‍್ಯಾರ | ಬಾಬಾಸಾಹೇಬ ಅಂಜದಾದಾನೊ ಧೀರಾ |
ಅರಮನೆಗೆ ನಡದಾನೊ ಸರದಾರಾ | ಸುರಿಸುತ ಬಹಳ ಕಣ್ಣೀರಾ||೬||

ನಮಸ್ಕಾರ ಮಾಡಿದ ತಾಯಿಗೆ | ಹೇಳತಾನೊ ತನ್ನ ಹೆಂಡತಿಗೆ |
ಎಂಥ ಹೊತ್ತು ಬಂದಿತ್ತೋ ನನಗೆ | ನನ್ನ ಜನರು ಕೊಯ್ದರೊ ಕುತ್ತಿಗೆ||೭||

ಉಳಿಸಿಕೊಳ್ಳಿರಿ ನೀವು ನಿಮ್ಮ ಮಾನಾ | ಈಗ ಓಡಿ ಹೋಗುವೆ ನಾನಾ |
ಎಂಥ ಹೊತ್ತು ತಂದೆಯೊ ವೆಂಕಟರಮಣಾ | ಆದೀತೊ ಕಡೆಯ ದರ್ಶನಾ||೮||

ಬಾಬಾಸಾಹೇಬ ಫರಾರಿಯಾದಾ | ಆಂಗ್ಲರಿಗೆ ಕೈವಶ ನರಗುಂದಾ |
ಯೂನಿಯನ್ ಜಾಕಾವು ಅಂದಾ | ಕಿಲ್ಲೇದಮ್ಯಾಲೆ ಹಾರಿತೊ ಒಳೆ ಚಂದಾ||೯||

ಬಾಬಾಸಾಹೇಬನ ಮುಪ್ಪಿನತಾಯಿ | ಹೆಂಡತಿ ಸಾವಿತ್ರಿ ಬಾಯಿ |
ಹಾರಿದರೋ ಮಲಪ್ರಭಾ ನದಿಯನ್ನಾ | ಅತ್ತೆ ಸೊಸೆಯು ಕೊಟ್ಟಾರೊ
ತಮ್ಮ ಪ್ರಾಣಾ  ||೧೦||

ಮುಂಡರಗಿ ಸುರಪುರ ನಾಯಕರಾ ಇಬ್ಬರು ಬಂದಾರೊ ಸಹಾಯಕ್ಕೆ |
ಇಬ್ಬರು ನಿಂತಾರೊ ಯುದ್ಧಕ | ಭೀಮರಾಯ ಮಡಿದಾನೊ ಆ ಕ್ಷಣಕ||೧೧||

ನಾಯಕ ವಿಷಾ ತಿಂದು ಸತ್ತಾ | ಇಬ್ಬರಿಗೂ ಬಂದಿತೊ ಜೀವದಸುತ್ತಾ |
ಬನಿಯಾ ಬಾಪು ಹೋದನೋಸತ್ತಾ | ತೋಫಿನ ಬಾಯಿಗೆ ತುತ್ತಾ||೧೨||

ಹಾಳಾತು ಕೇಳಿರಿ ನರಗುಂದಾ | ಮೋಸಗಾರ ನೀಚ ಜನರಿಂದಾ |
ಗುರುವರನ ಪೂರ್ಣ ದಯದಿಂದಾ | ಶಾಲೆ ಬಾಲರು ಹಾಡ್ಯಾರೊ
ಬಹಳ ಚಂದಾ  ||೧೩||


ರಚನೆ :
ಶ್ರೀ ಬಿ.ಎಂ. ಕಿತ್ತೂರ
ಕೃತಿ : ಕ್ರಾಂತಿವೀರ ಬಾಬಾಸಾಹೇಬ