ಪಲ್ಲಾ

ಹೊತ್ತು ಬಂದಿತು ಮತ್ತ ನೋಡರಿ ಕತ್ತಿ ಹಿಡುವ ಜನಕ
ಶಿಶ್ತಿನ ಮಂದಿ ಭಂಟರ ಹಲಗಲಿ ಮುಟ್ಟಲಿಲ್ಲ ದಡಕ

೧ನೆ ನುಡಿ

ವಿಲಾತಿಯಿಂದ ಹುಕುಮ ಕಳವಿದರ ಕುಂಪಣಿಸರಕಾರಾ
ಎಲ್ಲ ಜನರನಾ ತರಿಸಿ ಜೋರಿ ಮಾಡಿ ತರಬೇಕ ಹತಾರಾ

ಕತ್ತಿ ಕಟಾರಿ ಕೈ-ಚೂರಿ ಬಾಕು ಗುರ್ದಿ ಸುರಾಯಿ ಚಕ್ರಾ
ಬಾಲಿಯ ಬರ್ಚಿ ಬಿಚ್ಚುಗತ್ತಿ ನೋಡ ಬಾಣಬಿಲ್ಲಿನವರಾ

ಪಟಾತ ಪಿಸ್ತುಲ ಕರುಲಿ ತೇಗಾ ಚಾಪಗೊಡ್ಲಿಶಸ್ತ್ರಾ
ತೋಪು ತುಬಾಕಿ ಹೊಡವು ಮದ್ದ ಗುಂಡ ಬಿಡಬ್ಯಾಡರಿ ಚೂರಾ

ಮುಚ್ಚಿ ಇಟ್ಟವರಿಗೆ ಮೂರು ವರ್ಷದ ಬೇಡಿ ಹಾಕರಿ ಪೂರಾ
ಕೊಡದ ದಿಟಾಯಿ ಮಾಡಿದವರನಾ ಕಡದ ಹಾಕರಿ ತಾರಾ||ಚ್ಯಾಲ||

ಬೇಡಿದಾ ಕ್ಷಣಕ ತಾವು ತಂದು
ಕೊಡತಾರ ಹಿಡಿಹಿಡಿರ್ ಎಂದು

ವತ್ನ ಕೊಡತೇವ್ ಅನ್ನರಿ ವೊಂದ್ ಒಂದು
ತಂದು ಕೊಡತಾರ ತಮ್ಮ ಕುಸಿಲಿಂದು

ಬಂದಿತು ಹುಕುಮ ಹೀಂಗ್ ಎಂದು
ಡಣ್ಗರ ಸಾರಿದರ ಮುಂದು

ಶೂರ ಸಿಪಾಯಿ ಜನರ ತಾವು ತಿಳಿದು
ಅಳತಾರು ಕಣ್ಣಿಗೆ ನೀರ್ ತಂದು ||ಯೇರ||

ಬಹಳ ಚಿಂತಿಯ್ ಆಗಿ ದುಃಖದಿಂದ ಅವರು ಬಿದ್ದರ್-ಅಣ್ಣ ನೆಲಕ

೨ನೇ ನುಡಿ

ಕೇಳುತ ಹುಕುಮಾ ಕೆಳವರ ತಂದ ಕಂದ ಕೊಟ್ಟಾರ ಆವಾಗ
ಬಹಳ ಬೆಲಿವು ಹೆಚ್ಚಿನ ಹತಾರಾ ಮುಚ್ಚಿ ಇಟ್ಟರ ವೊಳಗ

ಸಾಲಸಮದ ಮಾಡಿ ದನ-ಕರ ಮಾರಿ ತಂದಿನ್ನಿ ಹಬ್ಬದಾಗ
ನೋಡ ನೋಡ ಹ್ಯಾಂಗೆ ಕೊಡುನ್ ಅಂತ ಹುಗಿದ್ ಇಟ್ಟರ ನೆಲದಾಗ

ಶೂರ ಚಟೆಗಾರು ಜಾಯಿತಸಾಹೇಬ ಬಂದಾರ ಆವಾಗ
ಸಂದಿಯಗೊಂದಿ ವೊಂದು ಉಳಿಯದ್ ಆಂಗ ಹೊಕ್ಕ ಹುಡಿಕೆರ ಮನಿಯಾಗ್
ತೆಪ್ಪಿತ್ ಉಪಾಯಿ ಇನ್ನ ಮಾತರ ಮಾಡೂನ್ ಅಂತರ ಹ್ಯಾಂಗ
ವೊಬ್ಬರಕ್‌ಒಬ್ಬರ ಚ್ಯಾಡ ಹೇಳತರ ವರ‍್ಮ ಸಾಧಿಸಿದ್‌ಹಾಂಗ|ಚ್ಯಾಲ||

ಜ್ಯಾಡಸಿ ಹೋದವೊ ಯಲ್ಲಾ
ನಾಡ್ ಒಳಗೆ ಯೇನು ಉಳಿಲಿಲ್ಲಾ

ಅಜ್ಜ ಮುತ್ತೆರ ಹಿಡುವ ಪಿಸ್ತುಲ
ಕಾಸದ್‌ಓದರ ಕತ್ತಿಯ ಡಾಲಾ

ಕವಚ ಬೆಳ್ಳಿಯ ಮಕಮಾಲಾ
ರತ್ನದ ಹಿಡಿಕಿವ ಹೋದವು ಯೆಲ್ಲಾ||ಯೇರ||

ಹೋದ ಹತಾರಕ ಹೊಟಿಬ್ಯಾನಿ ಹಚ್ಚಿಕೊಂಡ ನಿಂತರ ಸಾವುದಕ

೩ನೇ ನುಡಿ

ಹಲ್ಲ ಕಿತ್ತಿದಾ ಹಾಂವಿನ ಪರಿಯು ನಮಗ ಆದಿತ್‌ಅಲ್ಲಾ
ರಂಡಿ ಮುಸುಕ ಹಾಕಿ ತಿರಿಗಿದರ ನಮ ಮಾನ ಉಳಿಯುವದಿಲ್ಲಾ

ಮಗ್ಗಲದಾಗಿನ ಹೇಣತಿ ಕೊಟ್ ಅಂಗ ಆತಿ ಹೇಡಿ ಆದೇವ್‌ಅಲ್ಲಾ
ಸತ್ತ ಹೆಣಕ ಶೃಂಗಾರ ಮಾಡಿದ ಪರಿ ಆದಿತ್‌ಅಲ್ಲಾ

ಸಾವಕಾರು ನಮ್ಮ ಜೀವ ಹೋದಿತ್‌ಅಂತ ಚಿಂತಿ ಮಾಡೇರ್‌ಅಲ್ಲಾ
ಹಗಲಿ ಮನಿ ಹೊಕ್ಕ ಹಣಾವೋದರ ಕೇಳವರ್‌ಯಾರ್‌ಇಲ್ಲಾ

ಪುಂಡ ಪಾಳೆಗಾರ ಪಚ್ಚ್ಯಾ ವಜೀರರು ಪಂತ ಹಿಡಿಯಲಿಲ್ಲಾ
ದಂಡನ್ ಆಳುವ ಧೊರಿ ದೌಲತರ್‌ಅಂಜಿ ಕುಳಿತರ್‌ಅಲ್ಲಾ||ಚ್ಯಾಲ||

ದೇವರ ತಂದ ಪಡಿಪಾಟಾ
ಚಿಂತಿ ಹತ್ತಿ ಆದರೋ ನಷ್ಟಾ

ಅಧಿಕಾರ ಉಳಿಯಲಿಲ್ಲ ಯೆಳ್ಳ್‌ಅಷ್ಟಾ
ಕೇಡಗಾಲ ಬಂದಿತು ಕನಿಕಷ್ಟಾ

ಹೆಂಗಸ್‌ಆಗಿ ಶೀರಿಯ ವುಟ್ಟಾ
ಸೋಂಡ್‌ಒಣಗಿ ಆದೀತೋ ಬೊಬ್ಬಾಟಾ

ಅದ್‌ಹಾಂಗ್‌ಅತಿ ಸ್ತ್ರೀಯರ ಕ್ರೀಡಾದಆಟಾ
ಭಂಟರಿಗೆ ಬಂದಿತೊ ಬಿಕ್ಕಷ್ಟಾ||ಯೇರಾ||

ಪಕ್ಕಾ ಕಿತ್ತಿ ಪಕ್ಷಿ ಗತಿ ಆಗಿ ಚಿಂತಿ ಅದರ ಮನಕ

೪ನೇ ನುಡಿ

ಹಲಗಲಿ ಅಂಬುವ ಹಳ್ಳಿ ಮುಧೋಳರಾಜ್ಯದಾಗ ಇತ್ತು
ಪೂಜೆರಿ ಹಣಮಾ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತು

ಕೈನ ಹತಾರ ಕೊಡಬಾರದೊ ನಾವು ನಾಲ್ಕು ಮಂದಿ ಜತ್ತು
ಹತಾರ ಹೋದ್‌ಇಂದ ಬಾರದ ನಮ್ಮ ಜೀವ ಸತ್‌ಓಗುದು ಗೊತ್ತು

ಸುತ್ತಿನ ಹಳ್ಳಿ ಮತ್ತ ಧೊರಿಗಳಿಗೆ ತಿಳಶೆರ ಹೀಂಗ್‌ಅಂತು
ಮಾಡರಿ ಜಗಳಾ ಕೂಡ್‌ಇರತೇವು ಕುಮುಕಿ ಯಾವತ್ತು

ವೊಳಗಿಂದ್‌ಒಳಗ ವಚನ ಕೊಟ್ಟರೊ ಬ್ಯಾಡರ್ ಎಲ್ಲ ಕಲಿತು
ಕಾರಕೂನನ ಕಪಾಳಕ ಬಡದರ ಶಿಪಾಯಿ ನೆಲಕ ಬಿತ್ತು ||ಚ್ಯಾಲ||

ದುಃಖದಿಂದ ಅವರು ಅಲ್ಲಿಗ್‌ಹೋಗಿ
ಸಾಹೆಬಗ ಹೇಳಿದರ ಕೂಗಿ

ಕೇಳಿ ಸಾಹೇಬ ಯೆದ್ದ ಸಿಟ್ಟಿಗಿ
ತಿರಿಗಿ ಹೋದ ಆವಾಗ ಕಲಾದಗಿ

ಕರ‍್ಸಿ ಕೃಷ್ಣನಾಯಕಗೌಡ ಕುಂದರಗಿ
ಕರಶ್ಯಾನ ಸಂಧಾನಕ್ಕ್‌ಆಗಿ ||ಯೇರ||

ಹಟಾ ಮಾಡಬಾರದು ನಿಮ್ಮ ಹತಾರ ಕೊಡಿರಿ ಸಾಹೇಬನ್ ಈಶಕ

೫ನೇ ನುಡಿ

ಹತಾರ ಕೊಡಲಿಕೆ ಹೆಂಗಸ್‌ಆಗಿ ಬಳಿಯ್‌ಇಟ್ಟಿಲ ಕೈಯಾಗ
ಯಾವ ಬಂದೀರಿ ಜೀವಹೋದರು ಕೊಡುದಿಲ್ಲ ಸುಮ್ಮನ್‌ಹೋಗರಿ ಈಗ

ಅಂತ ಮಾತ ಯೆಲ್ಲ ಬಂದ ಹೇಳಿದಾನ ಆವಾಗ ಸಾಹೆಬಗ
ಶಿಟ್ಟಿಲಿ ಮುಂಗೈ ಕಟ್ಟನೆ ಕಡಕೊಂಡ ಹುಕುಮ ಕೊಟ್ಟರ್‌ಆಗ

ಕುದರಿಯಮಂದಿ ಕೂಡಿ ಮುಟ್ಟಿತೊ ಹಲಗಲಿಸ್ಥಳದ ಮೇಗ
ವೊಳಗಿನ ಮಂದಿ ವೊಟ್ಟರಲೆ ಹೊಡದರ ಮುಂಗಾರಿ ಮಳಿ ಸುರದ್‌ಆಂಗ

ಹೊರಗಿನ ಮಂದಿ ಗುಂಡ ಹತ್ತಿಕೆರ ತಿರಿಗೆರ ಆವಾಗ
ಕಾಗದ ಬರದ ಕಳವೆರ ಬೇಗನೆ ದಂಡ ಬರಲ್‌ಎಂತ ಹೀಂಗ||ಚ್ಯಾಲ||

ದಂಡ ಬಂತ ನೋಡ ತಯಾರ್‌ಆಗಿ
ಜಲದ ಮಾಡಿ ಬಂತ ಹಲಗಲಿಗಿ

ಆರ ತಾಸ ರಾತ್ರ್ಯಾಗ ಹೋಗಿ
ಊರಿಗಿ ಹಾಕಿದಾರ ಮುತ್ತಿಗಿ

ಗುಂಡ ಹೊಡದಾರ ವಿಪರೀತ ಸೂರಿಆಗಿ
ಅಂಜಿ ವೋಡಾಕ್‌ಹತ್ತಿತ ಮುಂದ್‌ಆಗಿ

ಬೆನ್ನ ಹತ್ತಿ ನೋಡಿದಾರ ಇವರ್ ಆಗಿ
ಬಿದ್ದಾವ ಹೆಣಗೋಳು ಸೂರಿ ಆಗಿ||ಯೇರ||

ಮುತ್ತಿಗಿ ಹಾಕಿ ಅವರು ಕತ್ತಿಲಿ ಕಡದರ ಅಂಜಲಿಲ್ಲ ಯಾತ್‌ಎತಕ

೬ನೇ ನುಡಿ

ಬೆನ್ನ ಹತ್ತಿ ತಿರಿತಿರಿವಿ ಕಡದರೊ ಯೇನು ಉಳಿಯದ್‌ಅಂಗ
ನಡವಿ ಹಾಕಿಕೊಂಡ ಹೊಡದರ ಗುಂಡ ದರಜ ಇಲ್ಲದ್‌ಹಾಂಗ

ಕವಾತ ಫೈರಾ ಸುತ್ತಗಟ್ಟಿ ತಂಬು ನುಡಿಶಾರ ಆವಾಗ
ತೋಪು ತುಬಾಕಿ ಕರುಲಿ ಪಿಸ್ತುಲ ಬಾಕ ನಡವಿನಾಗ

ಶಿಡಿಲಿನ ಹಂತ ಗುಂಡ ಹೊಡವುತ ಕತ್ತಿಲಿ ಕಡದರ ವೊಲತ್‌ಅಂಗ
ನಡುಗಿತು ಬ್ಯಾಡಕಿ ಕೆನ್-ಧೂಳ ಹರಿದ್-ಅಂಗ ಕಡದಾಟವು ಹ್ಯಾಂಗ

ಕೇಡ-ಗಾಲ ಬಂದಿತ ನಡವಿ ಶಿಕ್ಕರೊ ಬಿಡಸವರ್-ಯಾರ್-ಈಗ
ಚಟೆಕಾರರು ಚಾಟಿ ಮಾಡುತ ನಡದರ ಗುಡದಾಗ||ಈಲವು||

ಅಗಸಿಗೆ ಬಂದು ನಿಂತಿತು
ಹೆಬಲಕ್-ಸಾಹೇಬಂದು ತಾವು ನಿಂತು
ಹೇಳತಾರ ಬುದ್ಧಿಯ ಮಾತು
ಕೊಡತೇವ ಕವಲ ಈ ಹೊತ್ತು
ಹೋಗಬ್ಯಾಡರಿ ವೆರ‍್ತಾ ನೀವು ಸತ್ತು||ಯೇರ||

ಯೆಂಬು ಮಾತಿಗೆ ನಂಬಿಗೆ ಸಾಲದ ಹಣಮ ಬಂದ ಮುಂದಕ

೭ನೇ ನುಡಿ

ಜಡಗ ಹೇಳತನ ಹೊಡಿ ಇವರನಾ ಈಗ ಘಾತಕರೊ ಯಿವರಾ
ಇಸವಸ-ಘಾತಾ ಮಾಡಿ ನೆಂಬಿಗಿಲೆ ಮಾಡತಾರು ಫೀತುರಾ

ಮಾಸ-ಮಾಡಿ ಬಲ-ದೇಶ ತಗೋತರ ಮುಂದ ನಮಗ ಗೋರಾ
ಅಂದ ಹೊಡದಾರ ವೊಂದು ಗುಂಡಿಗೆ ಆದ ಸಾಹೇಬ ಟಾರಾ

ಕಾರ್-ಸಾಹೇಬ ಬೆಂಕಿ-ಚೂರ ಆಗಿ ತಾನು ಲೂಟಿ ಮಾಡ್-ಅಂದ ವೂರ
ಹುರಪಿಲಿ ಹೊಡದರ ಮಳಿ ಆದ ಹಾಂಗ ಗುಂಡ ಸುರದವು ಬರಪೂರಾ

ಹಣಮ ಹೇಳತನ ಗುಂಡ ಹೊಡದಕೆರ ಕೆಡವುನ್-ಅಷ್ಟು ಬಾರಾ
ಮುನ್-ನೂರ ಮಂದಿ ಯನ್ನ ಮೇಗೆ ಬಿಟ್ಟ ಆಗ ನೋಡರಿ ಜೋರಾ||ಚ್ಯಾಲ||

ಭೀಮನು ಇದರಿಗೆ ನಿಂತಾ
ಐ-ನೂರ ಮಂದಿಗೆ ಮಲತಾ

ಬಾಲನು ಮಾಡಿದ ಕಸರತ್ತಾ
ಕುದರಿಯ ಕಡದನೊ ಹತ್ತಾ

ರಾಮನ ಕಡತ ವಿಪರೀತಾ
ಕಾವಲಿ ಹರಿತೊ ರಕ್ತಾ

ಸಾವಿರ ಆಳಿಗೆ ವೊಬ್ಬ ಮಲತಾ
ಕೂಗುತಾನೊ ಕಡಿ-ಕಡಿರ್-ಎಂತಾ||ಯೇರ||

ನಾಲ್ಕು ಮಂದಿ ಹೀಂಗ ಕಡದ ಸತ್ತರೊ ಭಂಟರ್-ಅನಸೆರ ಜನಕ

೮ನೇ ನುಡಿ

ಯಾರು ಕೇಳಲಿಲ್ಲ ಆರು ಗುಂಡ ತಾಕಿ ಹಣಮ ಬಿದ್ದ ನೆಲಕ
ಚೀರಿ-ಆಡುತ ಜನ ಸುತ್ತಗಟ್ಟಿತೊ ಅಂಜಿ-ಕೊಂಡ ಜೀವಕ
ಶೂರವೊಬ್ಬ ಬಹಳ ಜೋರ ಮಾಡಿದನ ಹತಾರ ತಗೊಳುದಕ
ಯೇರಿ ಬರು ಕುದರಿ ಕಾಲ ಕಡದನೊ ಸ್ವಾರ ಬಿದ್ದ ನೆಲಕ

ರಾಮಿ ಗುಂಡಿಲಿ ಜೋರ ಮಾಡಿ ಹೊಡದಳೊ ಮೂರ ಮಂದಿ ಶಿರಕ
ಆರ ಕುದರಿಯ ಕಡದ ಸಿಡದಳೊ ಬಾಲನ ಸೂರಾಯಕ||ಚ್ಯಾಲ||

ಯರ್-ಯಾರು ಇಲ್ಲದ್-ಆದೀತು
ಊರ್-ಎಲ್ಲಾ ಲೂಟಿ ಆಗಿ ಹೋತು

ಮಂದಿ ಮನಿ ಹೊಕ್ಕ ಹುಡಕಿತು
ದನ-ಕರಾ ಲಯಾ ಆದೀತು

ಸಣ್ಣ ಕೂಸಗಳು ಹೋದವು ಸತ್ತು
ಬೆಂಕಿ ಹಚ್ಚ್ಯಾರ ವೂರ ಸುಟ್ಟಿತು

ನಷ್ಟ ಆತಿ ನೋಡರಿ ಈವತ್ತು
ನಾ ಹೇಳತೇನ ಈ ಮಾತು||ಯೇರ||

ಇಷ್ಟ್-ಎಲ್ಲ ಅಳವ್-ಆಗಿ ಹೋದಿತೊ ಮುಟ್ಟಲಿಲ್ಲ ಯಾತ್-ಎತಕ

೯ನೇ ನುಡಿ

ಕತ್ತಿ ಕುದರಿ ಮುತ್ತು ಮಾಣಿಕಾ ಯಾವದು ಬಿಡಲಿಲ್ಲಾ
ಬೆಳ್ಳಿ ಭಂಗಾರಾ ಹರಳಿನ್-ಉಂಗರಾ ಹೊನ್ನ್-ಉಂಗರ ಗೋಲಾ

ಸರಗಿ ಸರ‍್ದಳಿ ಬುಗುಡಿ ಬಾವಲಿ ಬಿಡಲಿಲ್ಲಾ
ಕಡಗ ಕಂಕಣಾ ನಡವಿನ-ಡಾಬಾ ನಡಕಟ್ಟು ರುಮಾಲಾ

ಕುಬಶಾ ಶೀರಿ ಹಪ್ಪಳ ಶಾಂಡಿಗಿ ಕುರ್ಚಿಗಿ ಕುಡಗೋಲಾ
ಕೊಡಲಿ ಕೋಟಿ ಕುಡ-ಕಬ್ಬಿಣಾ ಮಸರು ಬೆಣ್ಣೆ ಹಾಲಾ

ಉಪ್ಪ ಯೆಣ್ಣಿ ಅರಶಿಣ ಜೀರಿಗಿ ಅಕ್ಕಿ ಸಕ್ಕರಿ ಬೆಲ್ಲಾ
ಗಂಗಳ ಚರಗಿ ಮಂಗಳ-ಸೂತ್ರಾ ತಕೊಂಡ ಹೋದರ ಬಿಸು-ಕಲ್ಲಾ||ಇಳವ||

ಹಾಳ್-ಆಗಿ ಹೋದಿತೊ ಇಷ್ಟು
ವರ್ಣಿಸಿ ಹೇಳಲು ಎಷ್ಟು

ಯೆಲ್ಲ ತಗೊಂಡರೊ ಶಿಕ್ಕ್-ಅಷ್ಟು
ಸರ‍್ದ ನಿಂತರೊ ವೂರಿಗೆ ಕೊಳ್ಳಿಕೊಟ್ಟು

ಬೂದಿ ಮಾಡೆರ ಹಲಗಲಿ ಸುಟ್ಟು
ಹಲಗಲಿ ಗುರ‍್ತ ಎಳ್ಳಷ್ಟು

ಕಾಣಸ್ತ ಹೋದಿತೊ ಕೆಟ್ಟು
ವರ್ಣಿಸಿ ಹೇಳಿದೆನು ಇಷ್ಟು||ಯೇರ||

ಕುರ‍್ತಕೋಟಿ-ಕಲ್ಮೇಶನ ದಯದಿಂದ ಹೇಳುದ-ಕೇಳುದಕ

ರಚನೆ : ಕುರ‍್ತಕೋಟಿ ಕಲ್ಮೇಶ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು