ಮುಧೋಳ ನಾಡ ಹಲಗಲಿ ಬಾರ ಭರತಿಲಿ
ಗದ್ಗದುರಿಸಧಾಂಗ ಹುಲಿ ಆಯಿತೊ ಗುಡ್ಡದಾಗ
ಎಷ್ಟಂತ ಕೇಡ ಹೇಳಲಿ
ಆತ ಮದಕೊಲಿ ಕೆತ್ತಿ ಕಾಲಾಗ ||ಪಲ್ಲ||

ಬಡ್ಡಿಂದ ಕೇಳರಿ ಮಜಕುರಾ
ಢಾಯಿಂದಾಕಾರಾ
ಕುಂಪಣಿ ಸರಕಾರಾ ಇದರ ಯಾರ ಇಲ್ಲ
ಶ್ರೀಮಂತ ಆದ ಹಿಮ್ಮೆಡಿ ಹೋದರೊ
ಓಡಿ ಹತ್ಯಾರ ಹಿಂಬಾಲ ಕುಂಪಣಿ
ಇರುವ ಇಲಾಖೆ ವಿಲಾತಿ
ಕವಲ ಕಟ್ಟೇತಿ ನಾಡಾಗಿನ ಕತ್ತಿ
ತೊಗೊಂಡಾರೆಲ್ಲಾ
ಮುದವಳಕೆ ಬಂದಿತೋ ವರದಿ
ಮುಂದಿನ ಗರ್ದಿ ವದಗಿತೋ ಮೂಲಾ
ಬಾಬಾಸಾಹೇಬ ಲಕುಟಿ ವಡದನು ಓದಿಕೊಂಡನು
ಉಸರ ಹಾಕ್ಯಾನ ಹೋದವ ಕೈಕಾಲಾ
ಕುಂತಿತ್ತ ಭರಕಚೇರಿ
ಶಿಪಾಯಿ ಮಾನ ಕರಿ ನೋಡ್ಯಾರ ಸುತ್ತೆಲ್ಲಾ ||ಚಾಲ||

ಬಕ್ಷೀನ ಕರದ ಕೇಳ್ಯಾನು
ಹ್ಯಾಂಗ ಮಾಡುನು ಹೇಳರಿ ಹಂಚೀಕಿ
ಹೆಳರಿ ಹಂಚೀಕಿ
ಶಿಟ್ಟಿನ ಕಾರಸಾಹೆಬ
ಒಳೇ ಜರಬ ಬರದನ ಬದಾಕಿ
ನಿಂಮ ನಾಡಾಗಿನ ಹತಾರ ಕತ್ತಿ ಕಟಾರ
ಕಳಸಂದ ತುಬಾಕಿ ತುಬಾಕಿ
ಬಕ್ಷೀ ಹೇಳಿದ ಉತ್ತರ
ಸ್ವಾಮಿ ಈಶ್ವರ ಮಾಡುವವ ಜೋಕಿ
ಮಾಡುವವ ಜೋಕಿ
ಕಾರಬಾರಿ ಹೊಡಿಸಿದ ಡಂಗುರ
ಬಡವರ ಹತ್ಯಾರ ಎಲ್ಲ ಕೂಡಾಕಿ
ಎಲ್ಲ ಕೂಡಾಕಿ||ತೋಡ||

ಶಿಪಾಯಿ ಮಂದಿ ಅಂತಾರ ಸಾಪ ಉತ್ತರ
ಕೈಯಾಗಿನ ಹತ್ತಾರ ಕೊಡೋದಿಲ್ಲೀಗ
ಎಷ್ಟಂತ ಕೇಡ ಹೇಳಲಿ
ಆತ ಮತಕೊಲಿ ಕತ್ತಿ ಕಾಲಾಗ||೧||

ಶಿಲೆದಾರ ಮಂಡಲಿ ಬಣ
ಹೊಂಟರಾಕ್ಷಣ ಮಾಡ್ಯಾರ ಹೊರಪ್ಯಾಣ
ಬಂದ ಊರ ಹೊರಗ ಹೊಂಟಾರ
ಬಿಟ್ಟು ಮನಿಮಾರಾ
ಹೋಗಿ ಕುಂತಾರಾ ಮಡ್ಡಿಯ ಮೇಗ
ಮಾರಾಜ ಅವರನ್ನು ಕರಸಿ ಕೇಳ್ಯಾನ ರಂಬಿಸಿ
ಹತಾರ ತರಸಿ ಇಟ್ಟನ ಊರಾಗ
ಇನ್ನ ಮುಂದ ಐತಿ ಬಲ ಗೋರ
ಹೆಂಡರ ಮಕ್ಕಳ ಜೋಕಿ ಮುನಿಯಾಗ
ಏನು ಆಗೋದು ಆಗಲಿ
ಸಾಕಿದ ಹುಲಿ ಐತಿ ಹಲಗಲಿ
ನಂಮ ನಾಡಾಗ ಹಳಬರ ಮಂದಿ
ತರತುರಿ ಕತ್ತಿ ಕಟಾರಿ ಇದ ಕ್ಷಣಾದಾಗ||ಚಾಲ||

ಬಕ್ಷೀ ಹುಕುಮ ಮಾಡಿದ
ಕಾರಕೂನ ಹೋದ ಹಲಗಲೂರೀಗ
ಹಲಗಲೂರಿಗ
ಹಳಬರನೆಲ್ಲ ಕರಿಸಿ
ಕೆಳ್ಯಾನ ರಂಬಸಿ ಉರಾನ ಮಂದೀಗೆ
ಊರಾನ ಮಂದೀಗೆ
ನಿಂಮ ಕೈಯಾಗಿನ ಹತಾರ
ಕೊಡಬೇಕು ಎಲ್ಲರ ಇಂಗ್ರಾಜರೀಗೆ
ಇಂಗ್ರಾಜರೀಗೆ
ಕೊಡೊದು ಅವರೀಗೆ
ಕರಾಕರಾ ತಿಂದರೊ ಹಲ್ಲಾ ಹಳಬರೆಲ್ಲರಾ
ಬಂದಾರ ಚಾವಡೀಗೆ
ಚಾವಡೀಗೆ||ತೋಡ||

ಜಮಾದಾರ ಶಿಟ್ಟಿಗೆ ಬಂದ
ಬಾಯಿಮೇಲೆ ಬಡದ ಕಾರಕೂನನ ಹೊಡದ
ಹೊಂಟ ಊರ ಹೊರಗ
ಎಷ್ಟಂತ ಕೇಡ ಹೇಳಲಿ
ಆತ ಮದಕೊಲಿ ಕತ್ತಿ ಕಾಲಾಗ||೨||

ಕಾರಕೂನ ತಿರಗಿ ಹೋದನು
ಹಲಗಲೊರ್ತಮಾನ ಹಾರು ಹೇಳ್ಯಾನು
ಟೀಕ ಕಾಣುದಿಲ್ಲ ಬೈಶಾಕ
ಬಾಯಿಗೆ ಬಡದ
ಎನ್ನ ಚಂಡ ಹಿಡದ ನೂಕಶಾರೆಲ್ಲಾ
ಮಾಚಕನೂರ ಬೀಮಂಣ
ಮಾತಿಲೆ ಜಾಣ ಮಾಡಿ ಕರಶರಣ
ಇಳಿಯವ ಹಿಡಿದಲ್ಲಾ
ಬಾಬಾಜೀ ನಿಂಬಳಕಾರ ಬರದ ಪತ್ತರ
ಯಾರೀಗ ತಿಳಿಲಿಲ್ಲಾ
ಭೀಮಪ್ಪ ಹೊಂಟನಾವಾಗ ಮೂರು ಸಂಜಿನಾಗ
ಹಲಗಲೂರಿಗೆ ಹೋಗಿ ನಿಂತಲ್ಲಾ
ಜಡಗಪ್ಪ ಕಂಡ ಕಂಣಿಲೆ
ಬಂದ ಶಿಟ್ಟಿಲೆ ಹೊಡದ ಕುದರಿ ಮೇಲ||ಚಾಲ||

ಹಳಬರು ಅಂತಾರ ಕಡಿ ಬಡಿ ಕುದರಿಯ
ತಡಿ ಹೊರಶಾರ ತಲಿ ಮೇಲ
ಬೀಮಪ್ಪ ಹೋದನೊ ಓಡಿ
ಬಂಗಾರದ ತಡಿ ಅವಗೆ ದೊರಿಲಿಲ್ಲಾ
ಅವಗೆ ದೊರಿಲಿಲ್ಲಾ
ಮುದವಳಕ ಹೋದ ಬೀಮಪ್ಪ
ಆದ ತಾರೀಪ ಹೇಳತಾನೆಲ್ಲಾ
ಹೇಳತಾನೆಲ್ಲಾ
ಮಾರಾಜಘತ್ತಿತೊ ಚಿಂತಿ
ಬಡೀತೋ ಭ್ರಾಂತಿ ಅನ್ನ ಉಣವಲ್ಲಾ
ಅನ್ನ ಉಣವಲ್ಲಾ||ತೋಡ||

ಕಾರ ಸಾಹೆಬಗ ಮುಟ್ಟಿತೋ ವರದಿ
ಹೇಳಿದಾಗ ಸುದ್ದಿ
ಮಲಕನ ಸಾಹೆಬ ಹೋಗಬೇಕೀಗ
ಎಷ್ಟಂತ ಕೇಡ ಹೇಳಲಿ
ಆತ ಮದಕೊಲಿ….ಕತ್ತಿ ಕಾಲಾಗ||೩||

ಮಲಕನ ಸಾಹೇಬ ಬಾದೂರಾ
ಬುದ್ದಿ ಸಮದಾರ
ಮಾಡಿ ತಯ್ಯಾರ ಕುದರಿಯ ಮಂದಿ
ಅವರ ಸರಲಿ ಹೋದ ಕಾದು ಕಾದು
ಹರಕೇರಿ ಮೊಕಾಮ ಕೂಡಿತೋ ಗರದಿಕ್ಯಾದಾರಿ
ಬಾಡಪೆದಾರ ಬಂದ ಅವಸರ
ಹಲಗಲಿ ವಿಚಾರ ಹೇಳತಾನ ಸುದ್ದಿ
ಊರ ಸುತ್ತಲಿ ಬಂದೋ ಬಸ್ತಿ
ತಿರಗತತಿ ಗಸ್ತಿ ಏಳನೂರ ಮಂದಿ
ಸಾವಿರ ಮಂದಿ ಬೇಡಿಕಿ ನಿಂತ ಚೇವಕಿ ಮಾಡಿ
ಹಂಚಿಕಿ ಲಡಾಯದ ವರದಿ
ಮದ್ದು ಗುಂಡು ಮಾಡ್ಯಾರು ತಯ್ಯಾರಾ
ಮಕ್ಕಳು ಹೆಂಡರಾ ಹಿಡಿಸಿದರ ಹಾದಿ||ಚಾಲ||

ಊರಾನ ರೈತರ ರಾಣೆರ
ಬೆಳ್ಳಿ ಬಂಗಾರಾ ಅವರ ಕೈಯಾಗ
ಅವರ ಕೈಯಾಗ
ಹಳಬರು ಉಣತರೊ ಕುಂತು
ಬಂಗಾರದ ತುತ್ತು ಲಡಾಯಿದ ಕಾಲಾಗ
ಲಡಾಯಿದ ಕಾಲಾಗ
ಹತ್ತೆಂಟ ಕಡೂತಾರ ಬೇಟಿ
ಶರೇದ ಬಟ್ಟಿ ಇಟ್ಟತಿ ಊರಾಗ
ಇಟ್ಟತಿ ಊರಾಗ
ಮೈಯಲ್ಲ ಹಳದಿಯ ಮಂಣ
ಕೆಂಪಿಯ ಚೊಂಣ ತೊಸ್ತ ತಾನಿ ನಡಿನಾಗ
ತೊಸ್ತ ತಾನಿ ನುಡಿನಾಗ
ಹಣಿ ಮೇಗ ಕೇಸರೀ ಗಂದಾ
ಹೂವು ಮಕರಂದ ತುರಾಯಿ ತಲಿಮ್ಯಾಗ
ತುರಾಯಿ ತಲಿಮ್ಯಾಗ||ತೋಡ||

ಜಾವಿಗಿ ಹಚ್ಚಿ ಲಾಲಬಂದ
ತಯಾರ ಗುಂಡ ಮದ್ದ ರಂಜಕ
ಹರದೀತು ಬೆಂಕಿ ಕೈಯಾಗ
ಎಷ್ಟಂತ ಕೇಡ ಹೇಳಲಿ
ಆತ ಮದಕೊಲಿ ಕತ್ತಿ ಕಾಲಾಗ||೪||

ಮಲಕನ ಸಾಹೆಬ ಕೇಳಿದ
ಬರದ ಕಾಗದ
ವಿಜಾಪುರಕೋದ ಕುದುರಿಯ ಸ್ವಾರಾ
ಕಾರ ಸಾಹೇಬ ಓದಿಕೊಂಡ ಚೀಟಿ
ಹೋದ ನಡಕಟ್ಟಿ ಆಗಿ ತಯ್ಯಾರಾ
ಹೊಂಟೀತು ಕುದರಿ ಇನ್ನೂರಾ
ಕಾನಿ ಶಿಲೆದಾರಾ ಬಿಟ್ಟ ವಿಜಾಪುರಾ
ಶಿಪಾಯಿ ರಣಸೂರಾ
ಸಂಗಾಟ ತೊಗೊಂಡ ದಲ್ಬಲಾ
ಹೊಂಟನವಸರಾದಿನ ಅಯತವಾರ
ಬೆಳತನಕ ಬಂದಿತೊ ದಂಡ
ತಯ್ಯಾರ ಮದ್ದಗುಂಡ
ಹಲಗಲಿ ಪುಂಡ ಕೇಳತಿವಿ ಹೆಸರಾ
ಅಂತಾನ ಕಾರಸಾಹೆಬ ಹೊಡೆತಿ
ರಣಗಂಬ ಕಾಯೊ ಈಶ್ವರಾ||ಚಾಲ||

ಹದಿನೈದ ಮಂದಿ ಬೇಡಿಕಿ
ಇತ್ತ ಚವಕಿ ಕಲಾದಗಿ ಹಾದ್ಯಾಗ
ಕಲಾದಗಿ ಹಾದ್ಯಾಗ
ಅಲ್ಲೆ ಹೋಗಿ ಹತ್ತಿತೊ ಅಣಿ
ಒಳ್ಳೆ ಕಣಪಿಣಿ ಆಯಿತೊ ಅಡವ್ಯಾಗ
ಚಿಕ್ಕಂಣವರ ಬೀಮಂಣ ಮಾಡಿ ಕರಶರಣ
ಕತ್ತಿ ಹಿರದಾಗ
ಇನ್ನೂರ ಕುದುರಿಗೆ ಒಬ್ಬ ಮಾಡಿದಾನ
ಗಾಬ ಒಂದ ಕ್ಷಣದಾಗ
ಒಂದು ಕ್ಷಣದಾಗ
ಇನ್ನೂರ ಲಳಿಗೆ ಆವಾಗ
ಅರಳ ಹುರಿಧಾಂಗ ಸುತ್ತ ಅವನ ಮೇಗ
ಸುತ್ತ ಅವನ ಮೇಗ||ತೋಡ||

ಬೇಟ್ಯಾಗ ಬಿದ್ದಿತೋ ಹುಲಿ
ತೊಕೊಂಡರ ತಲಿ
ಪುಂಡ ಹಲಗಲಿ ಹೆಸರ ನಾಡಾಗ
ಎಷ್ಟಂತ ಕೇಡ ಹೇಳಲಿ
ಆತ ಮದ ಕೊಲಿ ಕತ್ತಿ ಕಾಲಾಗ||೫||

ಸರದಾರ ಹೇಳತಾನಲ್ಲಾ ಲಡಾಯಿ ಮಾಡುದಿಲ್ಲಾ
ಕಾಳ ಕತ್ತಲಾ ಆಗಲೀ ಬೆಳಕ
ಹಿರಿತಾನ ಮಂದಿ ಕರಶ್ಯಾನು
ಬುದ್ದಿ ಹೇಳ್ಯಾನು ಮಾಡಬೇಡ ಸೊಕ್ಕ
ಬೇಡಿಕಿ ಜನಾ ಮಳ್ಳ ಕುಲಾ
ಆಗಿ ಕುಶಿಯಾಲಾ ಕತ್ತಿ ಕೊಡಲಿಲ್ಲಾ
ಆಗಿನ್ಯಾಳೇಕ
ಮೈಮರತು ಮಲಗಿತೊ ಮಂದಿ
ಹತ್ತಿತೊ ನಿದ್ದಿ ಹೊತ್ತು ಏರು ತನಕ
ಮಲಕನ ಸಾಹೆಬ ಬಾದೂರಾ
ಕುದುರಿ ಮುನ್ನೂರ ತೊಗೊಂಡ
ಅವಸರ ಬಂದ ಬೆಳತನಕ
ದಂಡಾಯಿತೊ ಊರ ಸುತ್ತಲಿ
ಹಚ್ಚಿಧಾಂಗ ಬೇಲಿ ಮಾಡಿದಾನು ಗಿರಕ||ಚಾಲ||

ಬೆಳಗಾಗಿ ಬಂತೊ ಹೊತ್ತೇರಿ
ಬಂದವೋ ಕುದುರಿ ಕೆರಿಯ ದಂಡ್ಯಾಗ
ಕೆರಿಯ ದಂಡ್ಯಾಗ
ಐವತ್ತ ಮಂದಿ ಹಳಬಿಕಿ ಇತ್ತ ಚವಕಿ
ಕರೆಂಣನ ಹುಡೆದಾಗ ತಯ್ಯಾರ ಆದಾರ
ನಡಕಟ್ಟಿ ನಿಂತರ ಸುತ್ತಗಟ್ಟಿ ವಗದರಾವಾಗ
ವಗದರಾವಾಗ
ಕುದುರೆವರು ವರದರೊ ಗುಂಡು
ಹಳಬರ ಬಂಡು ಏನ ಹೇಳಲೀಗ
ಏನ ಹೇಳಲೀಗ
ಮಳಿ ಸುರಿಧಾಂಗ ಆದಿತೋ ಗುಂಡ
ಕೈಕಾಲ ರುಂಡ ಹಾರಿಧಾಂಗ ಚಂಡ
ಚಿಣಿ ಪುಟಧಾಂಗ
ಎಷ್ಟಂತ ಕೇಡ ಹೇಳಲಿ
ಆತ ಮದ ಕೊಲಿ ಕತ್ತಿ ಕಾಲಾಗ||೬||

ಗುಂಡಿನ ಸಪ್ಪಳ ಕೇಳಿ ಹಿಡಿತು ಹುಲಿಗಾಳಿ
ಹೆಂಡರ ಗುಳದಾಳಿ ಹರದರಾವಾಗ
ಕಾಳುಂಗರೊಡರೊ ಬಳಿ ಉಬ್ಬಿಯ
ಹೋಳಿ ಹತ್ತಿತೊ ಊರಾಗ ಊರೆಲ್ಲ
ಓಣಿ ಹೂಡಕಿ ಶಿಕ್ಕ ಬೇಡಿಕಿ
ಇಟ್ಟ ತುಬಾಕಿ ಅಡ್ಡಬಿದ್ದರಲ್ಲಾ
ಬಾಬಾಜಿ ನಿಂಬಳಕರ ಕುಡಲಿಲ್ಲ ಹತಾರ

ಒಗದರಾವಾಗ ಅಂತಾನ
ಜಡಗ ಬಾಲಂಣ ಮಾಡಿ ಕರಶರಣ
ತೆರಿಬೇಕೊ ಕಂಣ ಹಳಬರಾ ಮೇಗ
ಏನು ಮಾಡುದೆಲ್ಲ ಮಾಡರಿ
ಕೊಲ್ಲಬೇಡರಿ ವೈದು ಆಡಿವ್ಯಗ ||ಚಾಲ||

ಊರಸುತ್ತ ಹಚ್ಚಿದಾರ ಬೆಂಕಿ
ಸುಟ್ಟಂಗ ಲಂಕಿ
ಹೋಗಿ ಹಣಮಂತ
ಊರಾಗ ಆಯಿತೊ ಗಡಿಬಿಡಿ
ದಂಡನಾ ತುಕಡಿ ಮಾಡಿದ ಶಮರಂತ
ಮಾಡಿದ ಶಮರಂತ
ಜಗಳಾದೀತೊ ಶರಸೂರಿ
ಕಡಧಾಂಗ ಕುರಿ ಹರೀತೊ ರಗತ
ಹರೀತೊ ರಗತ
ಬೇಡಿಕೆ ಮಂದಿ ಮುರದಿತು
ಮನಿಯ ಹೊಕ್ಕಿತು ಮುನಿದ ಭಗವಂತ
ಮುನಿದ ಭಗವಂತ
ಕಾರ ಸಾಹೆಬ ಬೆನ್ನ ಹತ್ಯಾನು
ಬೆಂಕಿ ಹಚ್ಚ್ಯಾನು ಸತ್ತರಾವಾಗ
ಸತ್ತರಾವಾಗ||ತೋಡ||

ಊರ ಸುಟ್ಟ ಹಾರಿತೊ ಹೊಗಿ
ರಯತರ ಜಿವ ಹೋಗಿ
ಆಯಿತೊ ಸೂಲಗಿ ಮೂರ ಘಳಿಗ್ಯಾಗ
ಎಷ್ಟಂತ ಕೇಡ ಹೇಳಲಿ
ಆತ ಮದ ಕೊಲಿ ಕತ್ತಿ ಕಾಲಾಗ||೭||

ಊರೆಲ್ಲ ಬಿದ್ದವೋ ಹೆಣ
ಆದತತಿ ರಣ ಲಂಕೆ ಪಟ್ಟಣ ಹಾಳಬಿಧಾಂಗ
ಸರಕಾರ ಜರಬ ಕುಂಪಣಿ
ನೋಡತರ ಮನಿಹೊಕ್ಕ ಆವಾಗ
ಅರವತ್ತ ಮದಿ ಹಳಬಿಕಿ
ಹೊತ್ತ ತಂಬಾಕಿ ನಿಂತ
ಬೇಡಿಕಿ ಎರಡು ಅಗಶ್ಯಾಗ
ಓಡ್ಯಾಡಿ ಕಡುವ ಹುಡುಗರು
ಓಡಿ ಹೋದರು ಗುಡ್ಡದ ವಳಗೆ
ಕಾರ ಸಾಹೇಬ ಆಗಿ ವಳೆ ಶಿಟ್ಟ
ಅಂತಾನೊ ಬಂಟ ಹಳಬರಾ
ಚೆಟ್ಟ ಹಾರಿಶ್ಯಾನಾಗ
ಆಗ ತಯ್ಯಾರಾದರ ಸಂಗಟ
ಬಿದ್ದಿತೊ ಗಂಟ ಹಲಿಗಲಿಗೆ ನಮಗ||ಚಾಲ||

ಶಿಕ್ಕಷ್ಟ ಹಳಬರೆಲ್ಲರು
ಹಿಡದ ವೈದರು ಶಾರ ಮುದವಳಕ
ನಿಂತಾನ ಬುದನಿ ಬೀಮಂಣ
ಚುರಚಿ ರಾಮಂಣ ಸಾಹೆಬನಂಥ್ಯಾಕ
ಸಾಹೆಬನಂಥ್ಯಾಕ
ಅವರಿಬ್ಬರನ ಕೂಡಿಸಿ
ಕೊಟ್ಟರೋ ಪಾಶಿ ಆಗಿನಾಕ್ಷಣಕೆ
ಆಗಿನಾಕ್ಷಣಕ
ಬಾಲ ಬಸರಂಣಾ ಇಬ್ಬರಿಗೆ
ಕಟ್ಟ್ಯಾರ ತೋಪಿಗೆ ಬಿದ್ದವೊ ತುಣಕ
ಬಿದ್ದವೊ ತುಣಕ||ತೋಡ||

ಒಂಬತ್ತು ಮಂದಿ ಹಳಬರಾ
ಕಂಬಕಂಬಕ ಕಟ್ಟ್ಯಾರ
ಗುಂಡಿಲೊಗಶಾರ ಮುದೊಳದೂರಾಗ
ಎಷ್ಟಂತ ಕೇಡ ಹೇಳಲಿ
ಆತ ಮದ ಕೊಲಿ ಕತ್ತಿ ಕಾಲಾಗ||೮||

ಕಂಬಕ ನಿಂತ ಜಡಗಂ
ಲಕ್ಷಮಿ ಭರಮಂಣ
ಅಮಾತ್ಯಾ ಗೋವಿಂದಂಣ
ಹುಚ್ಚ ಬಾಯೀಲೆ ಅಂತಾನ
ಹೊಲ್ಯಾರ ದ್ಯಾಮಂಣ ಎಲ್ಲಪ ಬಾಗುಣ
ನೋಡಿರಿ ಮೇಗ ಅರ ಮಂದಿನ
ಹಲಗಲಿಗೆ ತಂದು ಹಚ್ಚೆರ ಜೇರ ಬಂದು
ಕಂಬಕ ಬಿಗಿದು ವಗದಾರ ಗುಂಡೀಲೆ
ಅಳತಾನ ಸರವಿ ಸಾಬಂಣನರಿ
ರಾಮಂಣ ನೋಡಿ ಹಲಗಲಿಗೆ ಬಂದ
ಭಂಡಿಗಂಣಿನ ನಿಂಗಪ್ಪ
ಹುಡೇದ ಕರಿಯಪ್ಪ ಗಿಡ್ಡ ಎಲ್ಲಪ್ಪ
ನೋಡಿರಿ ಸುತ್ತಾಲಿ ಅಂತಾನ
ಶಿರಗುಪ್ಪಿ ಹನುಮಪ್ಪ
ಒಗಿ ನಂಮಪ್ಪ ಜೀವ ಹೋಗಲಿ||ಚಾಲ||

ಉಳಕಿ ಮಂದಿಯೆಲ್ಲ ಬಿಟ್ಟರು
ಹುಕುಮ ಕೊಟ್ಟರು ಊರಾಗ ಇರಲಾಕ
ಊರಾಗ ಇರಲಾಕ
ಇಂಗ್ರಾಜ ಭಾದುರಾ ಧನಿ ಹುಕುಮ
ಕುಂಪನಿ ಸುತ್ತ ರಾಜೇಕ
ಸುತ್ತ ರಾಜೇಕ
ಅನ್ಯಾಯ ಮಾಡಲಾಕಿಲ್ಲ ಶಾಸ್ತ್ರ ಇಂಜಾಲ
ಓದಿ ಪುಸ್ತಕ ಕೃಷ್ಣ ದಂಡಿಲಿ
ಗಲಗಲಿ ಊರಾಗೈಬು
ದೇವರ ನಿತ್ಯ ಸೇವಾಕ
ನಿತ್ಯ ಸೇವಾಕ
ಹಶೆನ ಸಾಹೆಬ ನಂಮ ವಸ್ತಾದ
ಕವೇಶ್ವರ ಮರ್ದ ಇದ್ದ ಅಬದಾಕ
ಇದ್ದ ಅಬದಾಕ||ತೋಡ||

ಬಾಳರಾಮ ಹೇಳಿದ ರಹಿಮಾನ
ಹಲಿಗಲೊರ್ತಮಾನ
ಕೇಳತತಿ ಜನ ಕುಂತ ಸಭೆದಾಗ
ಎಷ್ಟಂತ ಕೇಡ ಹೇಳಲಿ
ಅದ ಮದ ಕೊಲಿ ಕತ್ತಿ ಕಾಲಾಗ||೯||

ಕವಿ : ಬಾಳರಾಮ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು