ಗಲಗಲಿ ದೇಸಾಯಿ ನವರತ್ನ ಬಿಟ್ಟ ಹೋದ
ತನ್ನ ಸಂಸ್ಥಾನ
ಚಂದ್ರಮನಂತ ಚಲುವನ ಮೇಗ
ಶಿವ ಮುನಿದನಾಯತವಾರದಿನ ||ಪಲ್ಲ||

ಏನು ಹೇಳಲಿ ದುಃಖ ಬರತೈತಿ
ದೊರೆಗಳ ಮನದನ ಅಕ್ಕರತಿ
ಲೋಡ ಲೇಜಮಿ ತಾಲಿಮಖಾನೆ
ಶಿವಪೂಜೆಯ ಮೇಲೆ ಬಲ ಪ್ರೀತಿ
ಚಲ್ವಿಕೆ ಬಾಳ ದಿಂಡ ಗತಿ
ಕಾಮನಂತೆ ಸಂಣ ನಾಮ ಹಚ್ಚುವ
ಸದರಿಗೊಪ್ಪುವ ಸೂರಪತಿ
ಶಿಪಾಯಿ ಶಿಲೇದಾರ ಬಲಭರ್ತಿ
ಚಾಬುಕ ಸ್ವಾರ ಕುದರಿಯ ಹತ್ತಿ
ಅವನ ಮುಂದ ಮುಂದ ಹೊಗಳು
ಚೋಪದಾರ ಅಂತಾನ ದೊರೆಗಳ ಕೀರತಿ
ಸುತ್ತ ನಾಡಾಗಿನ ದೇಸಗತಿ
ಎಲ್ಲರ ವಳಗೆ ಅವಚಡತಿ
ಯಾರೊಬ್ಬರಂತರ ಏನ ಧೊರಿ ಇವನ
ಪೂರ್ವದ ಪುಣ್ಯ ಹೆಚ್ಚೈತಿ ||ಚಾಲ||

ಸರ್ವ ಮಾತಿಗೆಲ್ಲ ಸಂಪನ್ನ
ಅವಗ ನಡಸತಿದ್ದ ಭಗವಾನಾ
ಜೈನಾಪುರಕೆ ಹೋದಾರ ಒಂದಿನಾ
ಧೊರಿಗಳಿಗೆ ತಟ್ಟಿತೋ ವಿಗ್ನ
ಉರಿ ಬಡದ ಬಿಗೀತೊ ಬೆನ್ನ
ಬಾಯಿ ಇಸಾ ಕಯಿ ಆಯಿತೊ ಅನ್ನಾ
ಸದಾಶಿವಪ್ಪ ಕೇಳೋ ನೀನಾ
ನಂನ ಜೀವಕ್ಕೆ ಇಲ್ಲೊ ಚಯನ||ತೋಡ||

ತಿರಿಗಿ ಬಂದರೊ ಮರದಿನ
ದೊರೆಗಳಿಗಿಲ್ಲೊ ಸಮಾದಾನಾ
ಚಂದ್ರಮನಂತೆ ಚಲವನ ಮೇಲೆ
ಶಿವಾ ಮುನಿದನ ಆಯಿತವಾರದಿನ||೧||

ಒಂದಿನ ಗಲಗಲಿ ಊರಾಗ
ಕುಂತಿದ್ದ ಹೊಸಮನಿ ಸದರಾಗ
ಮೋಸ ಮಾಡಿಕಾರ ವಿಷಾ ಹಾಕಿದಾರ
ದೂದಪೇಡ ಸಕ್ಕರಿಯೊಳಗ
ಫಳಾರ ಮಾಡ್ಯಾರ ರಾತ್ರ್ಯಾಗ
ಧೊರಿ ಮಲಗಿದ ಮಂಚದ ಮೇಗ
ಕನಸ ಬಿದ್ದಿತೊಂದು ಮನಸಿಗ
ಟಾವಿಕೆ ಧೊರಿ ಕುಂತನ ಚಿಂತಿಯ ಒಳಗ
ಮರದಿನ ಮುಂಜನಿ ಹರಿಯಾಗ
ಶಿಪಾಯಿ ಬಸಪ್ಪಾ ಬಾ ಈಗ
ಹೊಟ್ಟಿ ಉಬ್ಬೆತಿದೇನಕಾರಣ
ಬೇನಿ ಇಕ್ಕೆವ ಗಂಟಲದಾಗ
ಶಿಪಾಯಿ ಬಸಪಂದ ಧೊರಿ ನಿಮಗೆ
ಕಸಾರಕಿ ಬಂದೈತಿ ಮೈಯಾಗ
ಇತ್ತವರಾಗ್ಯಾಟ ಗಂಟಲದಾಗ
ಉಗಳಿದ್ದಿರಿಏ ಹೇಸಕಿ ಮೇಗ||ಚಾಲ||

ಆ ದಿನಾ ಹೊದರ ಕೋಲುರಿಗೆ
ಗುಂಡಪ್ಪ ಸ್ವಾಮಿ ದೇವರಿಗೆ
ಅಲ್ಲಿ ಜಡಾ ಆಯಿತ ಧೊರಿಗಳಿಗೆ
ಎಂಟಾನ ಎಂಟ ದಿನ ಮಲಗಿ
ತಿರಿಗಿ ಬಂದಾರ ಎಡಳ್ಳಿ ಊರಿಗೆ
ತಾ ಇರುವ ಸದರ ಅರಮನಿಗೆ
ಬೇಡಿಕೊಂಡ ಮನಿಯ ದೇವರಿಗೆ
ಉಣಿಸೇನಂತ ಐಗೊಳಿಗೆ||ತೋಡ||

ರಾಮಪ್ಪ ಅಂತಾನಾ ಕಾರಕೂನಾ
ಮಾರಿ ಕಪ್ಪ ಹಿಡದೈತಿ ಚಿನ್ನಾ
ಚಂದ್ರಮನಂತ ಚಲವನ ಮೇಲೆ
ಶಿವಾ ಮುನಿದನಾಯತವಾರದಿನಾ||೨||

ದೇಸಾಯಿ ಅಂತಾನ ಸಮರ್ತಾ
ಯಾಕ ಮುನಿದ ನೀ ಭಗವಂತಾ
ಎಂತಾ ಬೇಸಿದು ಯಾರಿಗೆ ಟಾವಿಕೆ
ಮೈಯಲ್ಲ ಇಟ್ಟತಿ ಇರತಾ
ಬಾಯಿ ಸಾಬಳು ಹೇಳ್ಯಾಳು ಅಳತ
ಗೋವಿಂದಪ್ಪ ಕೇಳೊ ಮಾತಾ
ಎಲ್ಲಿದ್ದಲ್ಲಿ ವೈದ್ಯಗಾರನ
ಈ ವೇಳ್ಯಕೆ ತರಸರಿ ತುರ್ತಾ
ಗೋವಿಂದಪ್ಪಾ ತಾ ಗುಣವಂತಾ
ವೈದ್ಯಗಾರ ಕರಿಸೆನು ಮಸ್ತಾ
ವೈದ್ಯಗಾರರು ತಿಂದ ಹೋದರೊ
ರುಪಾಯಿ ಮುನ್ನೂರ ಅರವತ್ತಾ
ಅಗಸುದ್ದೆ ಮಾಡಸ್ತ ಮಾಡಸ್ತಾ
ವರಸದಿನಾ ದೊರಿ ಬೇಸತ್ತಾ
ದಿನಕ ದಿನಕ ಚಡತಾದಿತ ಬೇನಿ
ತಿಳಿಯವಲ್ಲದಿದರ ಅಂತಾ||ಚಾಲ||

ಅಬಿಷಾಕ ನಡಿಸ್ಯಾನ ದೇವರಿಗೆ
ಸಾಹಿತ್ತ ಕೊಟ್ಟ ಬ್ರಾಮರಿಗೆ
ಜಾಗಾ ಬದಲು ಮಾಡಬೇಕು ಧೊರಿಗಳಿಗೆ
ಅಂತ ಓದರ ಹಂಚಿನಾಳ ಊರಿಗೆ ಧೊರಿಗೆ
ಹೇಳ್ಯಾನ ತಂನ ಮಂದಿಗೆ
ವೈಯಬೇಡರಿ ನಂನ ಬೇಲುರಿಗೆ
ತಾ ನೋಡಿ ತಂನ ಮಡದೀಗೆ
ನೀರ ತಂದಾನ ಕಂಣೀಗೆ||ತೋಡ||

ಬಾಯಿಸಾಬಳು ನೆನಸ್ಯಾಳು ಶಿವನ
ನೀ ಕಾಯೊ ನಂನ ಮುತ್ತೇದಿತನ
ಚಂದ್ರೆಮನಂತ ಚಲುವನ ಮುಂದ
ಶಿವಾ ಮುನಿದನಾಯತವಾರದಿನಾ||೩||

ಹಂಚಿನಾಳ ಊರಾಗ ದೊರಿಯಿದ್ದ
ಜೈನಾಪುರ ದೇಸಾಯಿ ಬಂದ
ಸೊನ್ನದ ದೇಸಾಯಿ ಗುರಸಿದ್ದಪ್ಪಾ
ದೊರಿ ಮೋರಿ ನೋಡಿ ಅಳತಿದ್ದ
ದೊರಿಗೊಳ ತಂಗೆರ ದುಃಖ ಬಂದ
ಏನು ಹೇಳಲಿ ನಿಂಮ ಮುಂದ
ಅಕ್ಕತಂಗೆರ ಮಹಾದುಃಖ ಮಾಡತಾರ
ಅಳತಾರ ಧೊರಿ ಕೊರಳಿಗ ಬಿದ್ದ
ಸದಾಶಿವಪ್ಪನ ಧೊರಿ ಕರದ
ಲಗುಮಾಡಿ ಮೇಣೆವು ಬರಲಂದ
ಎಡಳ್ಳಿ ಊರಿಗೆ ತೊಗೊಂಡ ನಡೀರಿ
ಬೇನಿ ಹಗರ ಆದಿತ ನಂದಾ
ಸದಾಶಿವಪ್ಪ ಹೀಂಗ ತಿಳಿದ
ಲಗುಮಾಡಿ ಮೇಣೆವು ತರಸಿದ
ಮೇಣೆದ ವಳಗೆ ಮನಗ್ಯಾನ ದೊರಿಯೆ
ಎಡಳ್ಳಿ ಊರಿಗೆ ತಾ ಬಂದ ||ಚಾಲ||

ಅರಮನಿ ಮನಗುವ ಕೋಲಿ
ಧೊರಿ ನೋಡುತಾನ ಸುತ್ತಲಿ
ಬಾಯಿಸಾಬಳ ಕುಂತಹಂತೀಲಿ
ನೀರ ಚಲ್ಲತಾಳ ಕಂಣೀಲಿ
ಬಹು ಚಿಂತಿ ಆಗಿ ಮನದಲ್ಲಿ
ಯಾಕೆ ಶಿವಾ ಮುನದಿ ನಂನಮೇಲಿ
ಸವಸವದು ಸಿಂಪಿಯಾದಲ್ಲಿ
ದುಃಖ ಬರತತಿ ಏನು ಹೇಳಲಿ||ತೋಡ||

ಹೀಗ ಮಾಡಿದಿ ಭಗವಾನಾ
ಎದ್ದ ಮಾಡಲಿಲ್ಲ ಧನಿತನ
ಚಂದ್ರೆಮನುತ ಚಲುವನ ಮೇಲೆ
ಶಿವಾ ಮುನಿದನಾಯತವಾರ ದಿನ||೪||

ಹೊರಕಡಿಗ ಹತ್ತಿತು ಧೊರಿಗೊಳಿಗೆ
ಶಕ್ಕಿಯಾದಿತೊ ಮೈವಣಗಿ
ಕಿತ್ತ ಬೀಳುವ ನೆತ್ತರ ಬಾಯಿಲೆ
ಧೊರಿ ತಿಳದನ ತಂನ ಮನಸೀಗೆ
ಸಂಕ್ರಾರ ದಿನ ತಂಮ ಗುರಗೊಳಿಗೆ
ಕರಸಿಕೊಂಡ ತಂನರಮನಿಗೆ
ಎರಡ ಆಕಳಾ ಅಚ್ಚೆರ ಬಂಗಾರ
ದಾನಕೊಟ್ಟ ತಂಮೈಗೊಳಿಗೆ
ಉಪ್ಪೆಂಣಿ ಕೊಟ್ಟರ ಮಠದವರಿಗೆ
ಒಂದೊಂದು ಬಿಳಿ ಹೊಳ ಎಲ್ಲರಿಗೆ
ಅದೇ ದಿನಾ ಒಂದು ಕುದರಿ ಕೊಟ್ಟನೊ
ಪುಣೇದ ಐಗುರ ಸ್ವಾಮಿಗೆ
ಶನಿವಾರ ಮೂರು ತಾಸ ರಾತ್ರಿಗೆ
ಕರಸಿಕೊಂಡ ತಂನ ಮಡದೀಗೆ
ಜಮದರ ಖಾನಿ ಕೀಲಿಕೈ
ಹಿಡಿ ನೀ ಕೊಡಬೇಡ ಯಾರೀಗೆ||ಚಾಲ||

ಹೀಗಂತ ಹಾಕಿದಾನ ಉಸರಾ
ಮಾತಾಡತ ಹಾರಿತೊ ಖಬರಾ
ಧೊರಿ ಮಾಡತಾನು ಎತ್ತಾರಾ
ಮೇಲುಸರ ಇಕ್ಕಿತೋ ಘೇರಾ
ಬಾಯಿಸಾಬಳ ಎದಿ ವಡದಾ ನೀರಾ
ದುಃಖ ತುಂಬಿ ಬಂತೊ ಸಮದರಾ
ಅಳತಾರೊ ಅಕ್ಕ ತಂಗೇರ
ಬಿಟ್ಟ ಹೊಂಟೊ ನಂಮ ಸರದಾರಾ||ತೋಡ||

ಬೆಳಗು ತಾಸ ಉಳಿದೀತ ಇನ್ನಾ
ಜೀವ ಬಿಟ್ಟ ಮನಮೋಹನ್ನಾ
ಚಂದ್ರೆಮನಂತ ಚಲುವನ ಮೇಲೆ
ಶಿವಾ ಮುನಿದನಾಯತವಾರದಿನಾ||೫||

ಆಯತವಾರದಿನ ಹರಿಯಾಗ
ಸುದ್ದಿ ಹರಿತ ಸುತ್ತ ನಾಡೀಗ
ಸುದ್ದಿ ಕೇಳಿ ಎದಿಬಯಿ ಬಡಕೊಂಡು
ಬಿದ್ದಳತಾರ ಧರಣಿಯ ಮೇಗ
ಅಗಾಧ ಹದಿನಾರ ಹಳ್ಳ್ಯಾಗ
ಘೊಳಿಟ್ಟತಿ ಅರಮನಿಯಾಗ
ಕೊಂಣೂರ ಮಂಟೂರ ಚಪಲಕಟ್ಟಿ
ಅಕ್ಕತಂಗೆರ ಬಂದರಾವಾಗ
ಜೈನಾಪೂರ ಧೊರಿಯಾಗ ಸುದ್ದಿಕೇಳಿ
ಮುದವಳದಾಗ
ಬತ್ತಲಿಗುದರಿ ವತ್ತರಮಾಡಿ ಹತ್ತಿ ಬದ
ಮೂರ ಘಳಿಗ್ಯಾಗ
ಏನು ಹೇಳಲಿ ನಾ ನಿಮಗೆ
ಸರ್ವ ಸಾಹಿತ್ತ ಮಾಡ್ಯಾರಾಗ
ಡಂಕೆ ನಿಶಾನಿ ನಗಾರಿ ನೌಬತ್ತ
ಬಂದ ನಿಂತವೊ ಅಂಗಳದಾಗ||ಚಾಲ||

ಸರ್ವ ಶಿಂಗರ ಕುದರಿಗೆ ಮಾಡಿ
ಚಾಬಕ ಸ್ವಾರ ಬೋರ‍್ಯಾಡಿ
ಇಮಾಮ ಗೈಬ ದುಃಖ ಮಾಡಿ
ಅಳತಾರೊ ಮಂಣಾಗ ಹೊರಳಾಡಿ
ಮುಂದ ಹಿಡದವೊ ಕುದರಿಯ ಜೋಡಿ
ಕುದರಿ ಅಳತಾವೊ ಮೊಕ ಬಾಡಿ
ಕುದುರಿಯ ಕಂಣನ ನೀರ ನೋಡಿ
ಅಳತೈತಿ ಜನಾ ಬೋರ‍್ಯಾಡಿ||ತೋಡ||

ಹೊರಗ ಹೊಂಟಿತೊ ಇಮಾನ
ಸುತ್ತಗಟ್ಟಿ ಅಳತತಿ ಜನ
ಚಂದ್ರಮನಂತ ಚಲುವನ ಮೇಲೆ
ಶಿವಾ ಮುನಿದನಾಯತವಾರದಿನಾ||೬||

ಸ್ವಾರಿ ಹೊಂಟಿತೊ ಊರ ಹೊರಗ
ಧೊರಿ ಕುಂತ ಇಮಾನ ಸದರಾಗ
ರತ್ನ ತುಂಬಿದ ಹಡಗ
ಮುಣಗಿತೊ ದುಃಖ ಎಂಬ ಸಮದರದಾಗ
ಬಾಯಿಸಾಬಳ ಹೇಳ್ಯಾಳಗ
ಕೊಟ್ಟ ನಡದಿ ಯಾರ ಕೈಯಾಗ
ದಿಕ್ಕ ಇಲ್ಲದೆ ಪರದೇಶಿ ಮಾಡಿ
ಬಿಟ್ಟ ಹೊಂಟಿ ನಡ ನೀರಾಗ
ಧೊರೆಗಳ ತಂಗೇರಾವಾಗ
ಏನು ಹೇಳಲಿ ನಾ ನಿಮಗೆ
ತವರಮನಿ ಶರಿಸೂರಿ ಆದಿತಂತ
ಬಿದ್ದಳತರ ಭೂಮೀ ಮೇಗ
ಇಳಿವ್ಯಾರ ತಂಮನ ತಡಿಯಾಗ
ಬಾಯಿಸಾಬಳ ಹೊಕ್ಕಳ ವಳಗ
ತೆಕ್ಕಿ ಹಾದ ಮಾ ದುಃಖ ಮಾಡತಾಳ
ಮುಣಗ್ಯಾಳ ಚಿಂತೀ ಮಡದಾಗ||ಚಾಲ||

ನಂಮ ಧೊರೀನ ಕಂಣ ತುಂಬ ನೋಡಿ
ಹ್ಯಾಂಗ ಹೋಗುನ ಮಂಣ ಮರಿಮಾಡಿ
ಭಾಳ ಮಂದಿ ಜನ ಅಲ್ಲಿ ಕೂಡಿ
ಬಾಯಿಸಾಬಳ ಸಮಾಧಾನ ಮಾಡಿ
ರೊಕ್ಕ ರುಪಾಯಿ ದಾನಾ ಮಾಡಿ
ತಿರಿಗಿ ಬಂದರ ಊರ ಕಡಿ
ವಿರಗೈಬು ಪಾದಾ ನೋಡಿ
ಹುಶೆನ ಸಾಹೆಬ ವಸ್ತಾದ ಕವಿ ಮಾಡಿ||ತೋಡ||

ಬಾಳಾರಾಮ ಅಂತಾನ ರಹಿಮಾನ
ಸೂರಿ ಆದಿತ ದೊಡ್ಡ ಸಂಸ್ಥಾನಾ
ಚಂದ್ರಮನಂತ ಚಲುವನ ಮೇಲೆ
ಶಿವಾ ಮುನಿದನಾಯತವಾರದಿನಾ||೭||

*/song stress/¨Á½ EAn UÀļÉÃzÀUÀÄqÀØ 30£Éà eÁ£ÉªÁj 1874 E || (MAzÀÄ ¸ÀAQë¥ÀÛ ¸À» EzÉ).

ಕವಿ : ಹುಸೇನಸಾಬ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು