ಜನರು ಕೇಳಿರಿ ಕೇಳಿರಿ ಕಿವಿಗೊಟ್ಟು |
ಕಥೆಯಲ್ಲದ ಕಥೆ ಕಂಡ ಮಾತು |
ಪಿರಂಗೇರ ದೌಲತ ಬಂದಿತ್ತು |
ಶಾರ ವಿಲಾತಿ ವಿಲಾತಿ ಕಳಕತ್ತೆ |
ಮುಮ್ಮಯಿ ಸುರಪುರಗಿತ್ತು |
ಬಹಳ ಶೃಂಗಾರ ಶೃಂಗಾರ ಶೃಂಗಾರವಾಗಿದತ್ತು |
ವಜ್ರ ವೈಡೂರ್ಯವ ಕೆಚ್ಚಿತ್ತು |
ಲಾಜವರ ಬಣ್ಣ ಬಣ್ಣದ ಗೋಡಿಸುತ್ತು |
ಅಳವರಿ ಮುತ್ತು ಬಿಗಿಸಿತ್ತು |
ಊರು ಬಾಜಾರ ಬಾಜಾರ ಯಾವತ್ತು |
ಬಂಗಾರದ ಸಾರಣಿ ಮಾಡಿತ್ತು||೧||

ಮುಮ್ಮಯಿ ಮುಮ್ಮಯಿ ದೊಡ್ಡಶಾರ
ಆ ಊರೊಳಗಾಗುವ ವ್ಯಾಪಾರ |
ಬಿಡದೆ ಹೇಳುವೆ ಹೇಳುವೆ ಶೃಂಗಾರ
ಚಿನ್ನ ಮಾರುವ ಚಿನಿವಾರ |
ಹಡಗ ವ್ಯಾಪಾರ ವ್ಯಾಪಾರ ಗುಜ್ಜರ |
ಮುತ್ತು ಮಾರುವ ಮಾಣಿಕಗಾರ
ಚಿಕ್ಕ ತಕ್ಕಡಿ ತಕ್ಕಡಿ ಅಂಗಡಿಕಾರ |
ಬಣ್ಣ ಬರಹುವ ಬರಹುವ ಚಿತ್ರಗಾರ |
ಸುಳಿವ ಮಕಮಲು ಮಕಮಲು ಜರತಾರ |
ಬುಟಿ ನೇಯೋ ಚಾತೂರ||೨||

ಕುಂಪಣಿ ಕುಂಪಣಿ ಸರಕಾರ |
ಬಿಡದೆ ಹೇಳುವೆ ಶೃಂಗಾರ |
ತೋಪು ಹದಿನಾರು ಹದಿನಾರು ಸಾವಿರ |
ಗಾಡಿ ರಥ ಬಾರ ಹಜಾರ |
ಆನಿ ಐನೂರು ಐನೂರು ಸಾವಿರ |
ಕೋಟಿ ಕುಣಿವ ಕುದರಿ ಸ್ವಾರಿ |
ಬಹಳ ಬಂದೂಕ ಬಂದೂಕ |
ಹತ್ಯಾರ ಲೆಕ್ಕವಿಲ್ಲದೆ ಕುವಾಡ |
ಹೇಳಲಳವಲ್ಲ ಅಳವಲ್ಲ ಪರಂಗೀರ ದೌಲತ
ಮಾಡುವ ಚಮತ್ಕಾರ ಜನರು ಕೇಳಿರಿ||೩||

ಪಾರಂಗಿ ಪಾರಂಗಿ ಹೊಂಟನ್ನೋಡಿ |
ಮೂರು ಲಕ್ಷ್ಯದ ದಂಡಕೂಡಿ |
ಸಾರ ಟೊಪ್ಪಿಗಿ ಟೊಪ್ಪಿಗಿಯ ಚಕ್ಕಡಿ |
ಜರದ ಮರಿಕುದರಿ ರಥಕ್ಕೆ ಹೂಡಿ |
ಕಾಲ ಬಲವೆಲ್ಲ ಬಲವೆಲ್ಲ ತಯ್ಯಾರ ಮಾಡಿ |
ಮಂಡಲ ಸಾಹೇಬ ದುರ್ದುಂಬಿ ಮಾಡಿ |
ಸಾರ ಶೃಂಗಾರ ಪಟ್ಟಣ ನೋಡಿ |
ಭರದಿ ಬಂದು ಮುತ್ತಿಗಿಯ ಮಾಡಿ |
ಠಾಣ್ಯ ತಕ್ಕೊಂಡ ತಕ್ಕೊಂಡ ಪಿತೂರಿ ಮಾಡಿ |
ವೀರಸಾಯ್ಬನ ಹಾಕ್ಯಾರ ಬೇಡಿ||೪||

ಅಲ್ಲಿಂದ ಅಲ್ಲಿಂದ ಶ್ರೀಮಂತರ |
ದೌಲತ ಮಾಡೋ ಪುಂಣ್ಯೆಶರ
ಠಾಣ್ಯ ಹಾಕಿದ ಯುಕ್ತಿಗಾರ |
ಮಂಡಲ ಸಾಹೇಬೆಂಬೋ ಸರದಾರ
ಮಲಸರ್ಜ ಜಾಗೀರ |
ಮಾಡಿಕೊಂಡು ಇದ್ದನು ಕಿತ್ತೂರ |
ಜಗಳದ್ವಿಸ್ತಾರ ವಿಸ್ತಾರ |
ಮುಂನೂರ ಚೆನ್ನವ್ವ ಕರಿಶ್ಯಾಳು ಹಬ್ಸೇರ |
ಹಲ್ಲು ಕಡಿವಂತ ಕಡಿವಂತ ಬಂಟರ |
ಬಾಗಿಲದೊಳು ಇಟ್ಟರು ಪಾರೆಹ||೫||

ಬತ್ತಲ ಬತ್ತಲ ಕುದರಿ ಹತ್ತಿ |
ಪಿರಂಗೇರೂರಿಗೆ ಮುತ್ತಿ |
ಬಾರು ಮಾಡಿದರು ಮಾಡಿದರು ಕೋವಿಯೆತ್ತಿ |
ಸಾಯಿ ತೋಟಿಗೆ ಕೊಟ್ಟರು ಒತ್ತಿ |
ಚೆನ್ನವ್ವ ಕೇಳ್ಯಾಳು ಚಿಂತಿ ಹತ್ತಿ |
ಬಂಟರಿಗೆ ಹಿರಿಯೆಂದಳು ಕತ್ತಿ |
ಹಬ್ಸೇರೆಲ್ಲಾರು ಎಲ್ಲಾರು ನಡುವ ಸುತ್ತಿ |
ಕಡಿಕಡಿಯೆಂದಳು ಬೆನ್ಹತ್ತಿ |
ನೆತ್ತರು ಹರದೀತು ಹರದೀತು ಕಂಪ್ಹತ್ತಿ |
ಟಕಾರ ಸಾಯ್ಬ ಸತ್ತನು ಗುಂಡ್ಹತ್ತಿ||೬||

ಸರದಾರ ಸರದಾರ ಸತ್ತ ಸುದ್ದಿ ಕಳುಹಿದರು ಇಲಾತಿಗೆ |
ಹುಕುಮ ಆದಿತು ಆದಿತು ಚೆನ್ನವ್ವಗೆ |
ಕೊಯ್ದು ಬಿಡಿರವಳ ಮೊಲಿ ಮೂಗ |
ಅಪ್ಪಣಿ ಅಪ್ಪಣಿ ಕೊಟ್ಟರು ಅವಗೆ |
ಬಂದು ಮುತ್ತಿದರು ಮುತ್ತಿದರು ಕಿತ್ತೂರಿಗೆ |
ಮಂದಿ ಸಿಕ್ಕೀತು ಮಂದಿ ಸಿಕ್ಕೀತು ಒಳುತಾಗೆ
ಸಾಯಿತತಿ ಹೊಯ್ದು ಬಿಟ್ಟರವಗೆ||೭||

ಕೇಳಿರಿ ಕೇಳಿರಿ ಕಿತ್ತೂರ ಸೂರಿ |
ಬೆಳ್ಳಿ ಬಂಗಾರ ಹೊನ್ನು ಹೇರಿ |
ಕೊಟ್ಟು ಕಳುಹಿದರು ಕಳುಹಿದರು ಹುಕುಮು ಮೀರಿ |
ಸೊಸಿ ಈರವ್ವನ ದೊರಿ ಸೂರಿ |
ದುಃಖ ಮಾಡ್ಯಾಳು ಮಾಡ್ಯಾಳು ಬಲಭೋರಿ |
ನೆಲ ಕೆದರಿ ಮಣ್ಣ ಸೂರಿ |
ಹಾರ ಹರುವಳು ಹರುವಳು ಗಂಡನ ಮಾರಿ |
ಕಾಣೆನಯ್ಯಯೋ ಯೆನುತ ಧರೆಗೆ ಬಿದ್ದಾಳು ಬಾಯಾರಿ |
ಏನು ಹೇಳಲಿ ಅಳುವ ಸೂರಿ | ಜನರು ಕೇಳಿರಿ||೮||

ಮೈಸೂರು ಮೈಸೂರು ನಗರದಾಗೆ |
ನಾಕ ಎಪ್ಪತು ಕೇಳು ಬಾಲಗಾ |
ದಂಡು ಕೂಡೀತು ಕೂಡೀತು ಹ್ಯಾಗೆ |
ಹವಳ ಮುತ್ತುಗಳ ಬೆರಸಿದ್ಹಾಗೆ |
ಜಗಳವಾದೀತು ಒಳುತಾಗೆ |
ಸುದ್ದಿ ಹತ್ತಿತು ಪಿರಂಗಿಗೆ |
ಬಹಳ ಸಿಟ್ಟಾದನು ಸಿಟ್ಟಾದನು ಮನದಾಗ |
ಹಲ್ಲು ತಿಂದಾ ಅವರ ಮ್ಯಾಲೆ |
ಬಂದು ಕಸಗೊಂಡ ಕಸಗೊಂಡನು
ಅವಗೆ ಕರ್ಚು ಕೋವಿಟ್ಟೆಯ ಕೈಯಾಗೆ||೯||

ಪವನ್ನಾಳು ಪವನ್ನಾಳು ಪವನಗಡ |
ಭರ್ತಪುರ ಡಿಳ್ಳಿ ದಾರವಾಡ ಪುಣ್ಯ |
ಪಟ್ಟಣ ಪಟ್ಟಣ ಜೋಡನಾಡ |
ಸುರಪುರ ಸಿವಮಗ್ಗಿಯ ಕೂಡ |
ಠಾಣೆ ಬಿದ್ದಾವು ಬಿದ್ದಾವು ಗಜೇಂದ್ರಗಡ |
ದೇಶದೇಶದಲ್ಲಿ ಬಹಳ ತೋಡಾ |
ಮಾಡಿ ಗೆದ್ದಾನು ಗೆದ್ದಾನು ಇವರ ಜೋಡ |
ಕಾಣೆ ಕಾಳಗ ಕಾಳಗ ಕವಿತಮಾಡಿ |
ಬಹುಜಾಣರೆಲ್ಲರು ಗಾಡಾ||೧೦||