ಪುಣೇ ಶಾರದಾಗ ಬಾಜಿರಾಯಂದು ಮೂರು ಲಕ್ಷ ದಂಡ |
ಭಲಾಕೀ ಜಾಣ ಮೂರು ಲಕ್ಷ ದಂಡ |
ಗಂಗಾಧರಶಾಸ್ತ್ರೀಗೆ ಬಡಕೊಂಡು ರಾಜ್ಯವ ಕಳಕೊಂಡ   ||ಪಲ್ಲ||

ಭಾವೆ ಗೋಖಲೆ ಭಲೇ ಶಿಪಾಯಿ ಮಾಣಿಕದನ್ನ ಮುತ್ತು | ಭಲಾಕಿ |
ನಾಲ್ಕು ತಿಂಗಳಾ ಕರಾರ ಮಾಡಿ ಅವರಿಗೆ ತರಿಸಿತ್ತು |
ನಿಪ್ಪಾಣಿ ದೇಶಾಯಿ ಚಿಂತಾಮಣಿರಾವ ಸುದ್ದಿಯು ಹೋಗಿತ್ತು |
ರಾಸ್ತ್ಯಂದ ಬಂದೀಖಾನಿ ಬಿಡಸಿ ತರಿಸಿತ್ತು |
ನಾನಾ ಫಡಣೀ ಸಮನ ಸುಭೇದಾರನು ಸಲತ್ತಿಯಾಗಿತ್ತು | ಭಲಾಕಿ |
ಸವಾಯಿ ಮಾಧವರಾವ ಅಂದ ಗೋಖಲ್ಯಾಗ ಜಗಳ ಯಾಹೊತ್ತು |
ಕಾರಕೂನರ ಲೆಖ್ಖ ಹೇಳತೇನ ಮೂರು ಲಕ್ಷ ದಂಡಾ || ಗಂಗಾಧರ ||||೧||

ಇಂಗ್ರೇಜಿ ಬಹದರಾ ಅಂಬತಾನ ನಮ್ಮದು ಚೌಥಾಯಿ | ಕೊಡಬೇಕು |
ಬಾಜೀರಾವ ನಿಮ್ಮ ಹಿರೇರು ಪತ್ರ ಬರೆದು ನಮ್ಮಗ ಕೊಟ್ಟಿತ್ತು |
ಐದಕಿಲ್ಲೆತ್ರ್ಯಮ್ಮುಕಜೀಗೆ ಹಿಡದ ಕೊಡಬೇಕು |
ಬಾಜಿರಾವ ಹಿಡದ ಕೊಡಬೇಕು |
ಪುರಂದರಾ ಶಿಂಗೇರಿ ಧಾರವಾಡ ಸೋಡೀ ಬಿಡಬೇಕು |
ಪೇಶವಿಯವರದು ರಾಜ್ಯವು ಹೋತು ಇನ್ನ ತಿಳಿಯಬೇಕು |
ಬಾಜಿರಾವರು |
ಅಂದ ಗೋಖಲ್ಯಾ ಒಮ್ಮೆ ಅವರಿಗೆ ಝಂಗಳಾ ಕೊಡಬೇಕು |
ಇನ್ನೂರ ತೋಪಾ ಮದ್ದಗುಂಡ ನೋಡ ಜಲ್ದಿ ತರಸಬೇಕು |
ಬಾಜಿರಾವ ಜಲ್ದಿ ತರಸಬೇಕು |
ಏಕಾದಶೀ ದಿನ ಗಣೇಶ ಖಿಂಡೀ ಮೇಲೆ ಝಗಳ ಆಗಬೇಕು |
ಪ್ರಥಮ ಲಢಾಯಿದಾಗ ದೀಕ್ಷಿತ ನಾನಾಗ ಬಡೀತಲ್ಲ ಗುಂಡಾ | ಗಂಗಾಧರ||೨||

ಸರದಾರ ಖಾನಾ ಪಠಾಣ ಬಿದ್ದಾ ಚೂಣೇ ಜಗಳದಾಗ |
ಭಲಾಕಿ | ಜಾಣಾ ಚೂಣೆ ||
ಗೋಖಲ್ಯಾ ನೋಡ ಹಲ್ಲಾ ಮಾಡಿದನ ಫರಂಗೇರ ಮೇಗ |
ಗುಂಡಿನ ಹಿಂದ ಗುಂಡ ಹಾರತಾವ ಚಂಡ ಹಾರಿದ್ಹಾಂಗ |
ನಾಕ ಸಾವಿರಾ ಮಂದಿಯು ಬಿತ್ತೊ ಲೆಖ್ಕವಿಲ್ಲದ್ಹಾಂಗ ಜೀ |
ಬಾಪು ಗೋಖಲ್ಯಾ ಉದಾಸ ಆದ ತನ್ನ ಮನಸಿನಾಗ | ಭಲಾಕಿ ||

ದಂಡಿನ ವಳಗ ಫಿತೂರ ನಡೂತತಿ ಏನ ಹೇಳಲಿ ನಿನಗ |
ಅಚಲ ಕರಾ ಪಟವರ್ಧನ ಅವರ ಫಿತೂರ‍್ಯಾಗ | ಭಲಾಕಿ |
ನಿಪ್ಪಾಣಿಲಿಂದ ಕಾಗದ ಬಂತೊ ಪರಂಗೇರ ವಳಗ ಜಿ |
ಬೆಳಗ ಆದಿತೊ ಕೂಚ ಮಾಡರೀ ಒಡೀತಲ್ಲೊ ದಂಡ | ಭಲಾಕಿ ||
ಗಾರಫೆರ ಮೇಲೆ ಹೋಗಿ ಇಳೀತೊ ಗೋಖಾಲ್ಯಾನ ದಂಡಾ||೩||

ಅಪ್ಪಾ ಮವನದಾರ ಮಾಮಾ ಸುಭೇದಾರ ಹೊಂಟಾರು ಹ್ಯಾಂಗ್ಹ್ಯಾಂಗ ಭಲಾಕಿ |
ಇಪ್ಪತ್ಸಾವಿರಾ ಖಾಸಾ ಕುದರೀ ಜರ ಪಟಕಾ ಮೇಗ ಜಿ |
ಹುಲಗಾಂವಿ ಮೇಲ್ಬಂದ ಪರಂಗಿ ಝಂಗಳಾ ಇಬ್ಬರಿಗೆ |
ಭಲಾರೆ | ಝಗಳಾ ಇಬ್ಬರಿಗೆ |
ಸುಭೇದಾರ ಹೊಕ್ಕ ಕಡೀತಾನ ತುರಪ ಸವಾರದಾಗ ಜೀ |
ಗುಂಡಿನ ಹಿಂದ ಗುಂಡ ಬಡೂತಾವ ತಾಳಾ ಬಡದ್ಹಾಂಗ |
ಭಲಾರೇ | ತಾಳಾ ಬಡದ್ಹಾಂಗ |
ಆರೇರ ಕುದರೀ ಮುಂದ ವೋಡತಾವ ಪುಣೇದ ಭೈಲಾಗ ಜೀ |
ಹೊಳಿಯೆರ ಮೇಲೆ ಬಂದ ಫರಂಗಿ ಹೊಡದ ಛಬೇಲೀಗೆ |
ಭಲಾರೇ ಹೊಡದಾ ಛೆಬೇಲೀಗೆ |
ಹತ್ತ ಸಾವಿರಾ ಅರಬ ಗೊಸಾವಿ ಉಳ್ಳಿ ಹೋತ ಆಗ ಜಿ |
ಬಾಜಿರಾಯನಾ ಸುದ್ದಿ ಮುಟ್ಟಿತೊ ಹೋದ ಜೇಜೂರಿಗೆ |
ಭಲಾರೆ ಹೋದ ಜೇಜೂರೀಗೆ |
ಎಲ್ಲಾ ಸರದಾರ ಬೆನ್ನ ಹತ್ತಿದರ ತಿರಗಲಿಲ್ಲ ಆಗ ಜಿ |
ಬಾಪು ಗೋಖಲ್ಯಾ ಭಲೇ ಶಿಪಾಯಿ ನಿಂತನಲ್ಲ ಪುಂಡಾ |
ಭಲರೆ ನಿಂತನಲ್ಲ ಪುಂಡಾ || ಗಂಗಾಧರ ||||೪||

ಕಲ್ಪಿಕದಾ ಕಡಿ ಆಟ ಹೇಳತೀನಿ ಕೇಳೀರೊ ಯಲ್ಲಾ |
ಗೆಣ್ಯಾ ನೀಉ ಕೇಳೀರೊ ಎಲ್ಲಾ |
ಕಾಲಗ್ನಾನ ಸಾರಿದ ಮಾತು ಸುಳ್ಳ ಆಗಲಿಲ್ಲಾ |
ಇಂಗ್ರೇಜಿ ಬಹದರ ಬೆನ್ನಹತ್ತಿದನ ಅಗದೀ ಬಿಡಲಿಲ್ಲಾ |
ಭಲಾರೇ ಆಗದೀ ಬಿಡಲಿಲ್ಲಾ |
ಬಾಜೀರಾಯಾ ಮುಂದ ಓಡತಾನ ಜರಾ ತಿರಗಲಿಲ್ಲಾ |
ಜಾಗೆಜಾಗೆದಾಗ ಲಢಾಯಿ ಕೊಟ್ಟರ ಅಷ್ಟುರಮೇಲೆ ಹಲ್ಲಾ |
ಭಲಾರೇ ಅಷ್ಟುರಮೇಲೆ ಹಲ್ಲಾ |
ಬಾಪು ಗೋಖಲ್ಯಾ ಮುಧೋಳದ ಅರಸಾ ಠಾರ ಅದರಲ್ಲಾ |
ಮುಂದ ಆಗಿದ್ದು ವರ್ತಮಾನಾ ನಮಗ ಠಾವಿಕಿಲ್ಲಾ |
ಭಲಾರೆ ನಮಗ ಠಾವಿಕಿಲ್ಲಾ |
ಕರ್ನಾಟಕದ ನರಗುಂದ ವಳಗ ಮಲಿಂಗಶ್ಯಾಬಲ್ಲಾ |
ಬಾಪೂರಾಮಾ ಪದಾ ಹೇಳತಾರ ಅವರಿಗೆ ಜೋಡಿಲ್ಲಾ |
ಡಬ್ಬಿನ ಮೇಲೆ ತುರಾಯಿ ನಿಶಾನಿ ಶಿವನ ಬಿರದ ಎಲ್ಲಾ |
ಹಟೇಲ ಸಾಹೇಬ ಕುಂತ ಹೇಳತಾನ ನಾಗೇಶರ ಗಂಡಾ || ಗಂಗಾಧರ ||||೫||

ಕವಿ : ಮಲಿಂಗಶ್ಯಾಬಲ್ಲ – ಬಾಪೂರಾಮ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು