ಆದಿಯಲ್ಲಿ ಶಾಂತಿಮಂತ್ರ ಮೋದದಿಂದ ಪಠಿಸಿ ವೇದ | ಕಾದಿದೇವ ನಿನ್ನ ಸ್ತುತಿ ಮಾಡುವೆನು |
ಮೇದಿನಿಯೊಳ್ ನಡೆದ ಮಹಾಯುದ್ಧ ರಂಗದ ವಾರ್ತೆಯನು | ನಾದದಲ್ಲಿ ನಾದಬೆರಸಿ ಹಾಡುವೆನು||೧||

ಶಾಂತ ಚಿತ್ತದಿಂದ ಬುದ್ಧಿವಂತ ಹಿಂದೂ-ಬಂಧುಭಗಿನಿ ಕುಂತು ಕೇಳ್ರಿ ಯುದ್ಧ ರಂಗದ ವಾರ್ತೆಯನು
ಎಂತು ಏನು ಎಂಬ ಪ್ರಶ್ನೆಕುತ್ತರ ವೀಯುವೇನೀಗ | ನಿಂತ ನಡು ಸಭಾಮಧ್ಯದಾಗ ನಾನು||೨||

ವೀರ ಧೀರ ಶೂರ ಪುಣ್ಯಪೂರಾಂಗ್ಲ ಸಾಮ್ರಾಜ್ಯಕ್ಕ | ಯಾರು ಜೋಡಿದ್ದಿಲ್ಲ ಈ ಭೂಮಿಮ್ಯಾಗ |
ಘೋರ ಸ್ವಾರ್ಥದಿಂದ ಯುದ್ಧ ಸಾರಿದಂಥ ಹೇರ ಹಿಟ್ಲರಗಾರು ಗೆಟ್ಟಾನೀತ ದ್ವಿತೀಯರಂಗದಾಗ||೩||

ರಸಿಯಾದ ರಣರಂಗದಾಗ ಕಸುವುಗೆಟ್ಟ ಹಿಟ್ಲರನ | ಕೆಸರಲಿಂಗ ರೋಮದಯುದ್ಧ ಭೂಮಿಯಾಗ|
ಕಸುವುಕೆಟ್ಟು ಓಡಿಹೋದ ದಿಕ್ಕ ತಿಳಿಯದಾಂಗ | ಆದ ಆಂಗ್ಲವೀರ ಅಲೇಗ್ಝಾಂಡ್ರನ ಹೊಡತದಾಗ||೪||

ಇತಿಹಾಸ ಪ್ರಸಿದ್ಧವಾದ ಇಟಲಿಯ ರಾಜಧಾನಿ | ಕೆಥೋಲಿಕ್ ಪವಿತ್ರ ಕ್ಷೇತ್ರ ರೋಮ ನಗರ |
ಪತನ ತಾನಾದಮ್ಯಾಲೆ ಕ್ಷಿತಿಯೊಳದ್ಭುತವಾದ ದ್ವಿತೀಯ ರಂಗದಾರಂಭವಾಯ್ತು ಘೋರ||೫||

ದಿವ್ಯ ದ್ವಿತೀಯ ರಂಗ ಸುದ್ದಿ | ಕಾವ್ಯಾವಾಣಿಯಿಂದ ನವನವ್ಯವಾಗಿ ವರ್ಣಿಸಿ ಹಾಡುವೆನು |
ಶತೃಮಿತ್ರ ಸೇನೆ ಸಿದ್ಧವಾಗಿಬಂದು ನಿಂತ ನಾರಮಂಡಿ ದಂಡೆಯ ಚಿತ್ರವನು||೬||

ಆರು ಸಾವಿರ ಹಡಗದ ಸಂಖ್ಯೆ | ನೀರದಾರಿಯಿಂದ ಬಂದು | ನಾರಮಂಡಿ ದಂಡಿಯಲಿ ನಿಂತಾಕ್ಷಣ |
ಶೂರಧೀರ ವೈಮಾನಿಕದಂಡು ಮೇರೆದಪ್ಪಿ ಗಗನದಿಂದ | ಹಾರಿಬಂದು ತುಂಬಿದಾಗ ರಣಾಂಗಣ||೭||

ಹಿಟ್ಲರ ಕಟ್ಟಿಸಿದಕೋಟೆ | ಹದಿನೆಂಟನೂರ ಮೈಲೂದ್ದ ಹರವು ಮೂವತ್ಮೂತು ಮೈಲು ವಿಸ್ತಾರಪೂರ
ಮೀರಿದಂಥ ಮಾರ್ಬಲ | ಅದ್ಭುತ ವಿಮಾನದಳ | ಅಗಣಿತ ಕ್ರೂಝರ-ಟ್ಯಾಂಕು ಮಹಬಲ||೮||

ಹಿಂದಿನ ಪುರಾಣದಾಗಿಲ್ಲ | ಅಂದಿನ ಭಾರತದಾಗಿಲ್ಲ ಮುಂದ ಎಂದೂ ಆಗುದಿಲ್ಲ ಇಂಥ ರಣ |
ಹಿಂದೇ ಕಟ್ಟಿದ ದ್ರೋಣಾಚಾರಿ ಚಕ್ರವ್ಯೂಹ ಜರ್ಮನ್ ರಣಕ ಆನಿಮುಂದ ಆಡಿನ ಠಣಾ ಪುಣಾ||೯||

ಆರನೇ ತಾರೀಖು ಮಂಗಳವಾರ ಜೂನ ಹತ್ತೊಂಬತ್ತು | ನೂರ ನಲ್ವತ್ ನಾಲ್ಕನೇ ಇಸ್ವಿದಿನಾ |
ಘೋರ ಯುದ್ಧ ಆರಂಭವಾಯ್ತು ನಾರಮುಂಡಿ ದಂಡಿಯೊಳ್ ಅಮೇರಿಕನ್ ಜರ್ಮನ್ ಇಂಗ್ಲೀಷ್ ಯದ್ಧಾಂಗಣ||೧೦||

ಅಮೇರಿಕನ್ ಸೇನಾಧಿಕಾರಿ | ಐಷನ್ ಹಾವರ ನಾಮಧಾರಿ | ಸೇನ ಸೂತ್ರಧಾರಿ ಆರಂಗದೊಳು |
ಜರ್ಮನ್ ಸೇನಾ ಸೂತ್ರ ಕರ್ಮದಾರಿ ಹೇರಹಿಟ್ಲರ ಬಂದುನಿಂತ ರಣರಂಗ ಮಧ್ಯದೊಳು||೧೧||

(ಇಳವು)

ಚಕ್ರವರ್ತಿ ಕೊಟ್ಟ ಸಂದೇಶ | ಆಂಗ್ಲಸಾರ್ವಭೌಮ ಭೂಮೀಶ ಸಾಮ್ರಾಜ್ಯಶಾಂತಿ ಜಯದಾಶಾ
ದೇವರನು ಪ್ರಾರ್ಥಿಸಲಿದೇಶ ಜಗದೀಸ್ವರನೇ | ಜನಪಾಲಕನೆ | ಜವನೀಡು ಜಗತ್ಪತಿ
ಜಯವನ್ನು||೧೨||

(ಏರು)

ಶೂರತನದಿ ಫ್ರಾನ್ಸದುತ್ತರ ಸೀಮೆಯನ್ನಾಕ್ರಮಿಸುತಾಗ | ಏರಿಬಂದ ಜರ್ಮನ್ನರ ಬೆನ್ನಟ್ಟಿ
ದೂರ ಸರಿದು ನಿಂತರಾಗ ಅಮೇರಿಕನ್ ಕೆನೇಡಿಯನ್ನಿಂಗ್ಲೀಷ ವೀರರೆಲ್ಲರೆದೆ ತಟ್ಟಿ ತಟಿಟ್ಟ  ||೩||

ಹಡಗದ ಮ್ಯಾಲೆ ಹಡಗ ಬಂದವು | ಹಿಡಿಯದಾಂಗ ಸಮುದ್ರವೆಲ್ಲ | ಕೊಡೆಯ
ವಿಮಾನ ಬಂದವೂ ಪೂರಾ ಪೂರಾ | ದುಡುಕಿಬಂತ ಜರ್ಮನ್ನರಿಗೀಗ | ಪ್ರಳಯಕಾಲವೆಂದನಾಗ | ಮಿಡುಕಿದನು ಹಿಟ್ಲರ ಹಿಟ್ಲರ||೧೪||

ಶತೃ-ಮಿತ್ರ ಸೈನ್ಯದವರು | ಬಾಂಬು ತೋಪು ಮಸೀನಗನ್ನು | ಒತ್ತರದಿಂದ ಮದ್ದು ಗುಂಡು
ಸುರಿಸಿದರು | ಒದರಿತಾಗಾಶ ಚಿಕ್ಕಿ | ಉದರಿ ಬಿದ್ದವಾಕ್ಷಣ | ಚದುರಿದರು ಹಿಟ್ಲರನ ಸೈನಿಕರು ||೧೫||

ರೊಚ್ಚಿಗೆದ್ದು ಹಿಟ್ಟರನಾಗ | ಎಚ್ಚರದಪ್ಪಿ ಎದುರಿಗೆ ಬಂದು | ಕಿಚ್ಚ ಸುರಿದು ಪ್ರಳಯಮೇಘ
ಮಳಿಗರದಾಂಗ | ಸ್ವಿಚ್‌ಕೊಟ್ಟ ಐಷನ್‌ಹಾವರ | ಬಾಂಬ-ತೋಫ ಮಸೀನಗನ್ನಿಗೆ | ನೆಚ್ಚಿದೆಮ್ಮಿಕೋಣನ್ನಿ ದಾಂಗಾತೊ ಆಗ||೧೬||

(ಇಳುವು)

ಕಳವಳಗೊಂಡ ಹಿಟ್ಲರ ಮುಂದಾವುದಿದಕ ಪರಿಹಾರ | ಬಂದದ್ದು ಬರಲಿ ಅನಿವಾರ |
ಸಾಗಿಸವೆ ಯುದ್ಧ ನಿರ್ಧಾರ | ಹುರಿಮಾಡಿದನು | ಗುರಿಹೂಡಿದನು | ಪಲ್ಗಚ್ಚಿದನು | ಕಂಣ್ಮುಚ್ಚಿದನು|

(ಏರು)

ಭೌತಿಕ ಸೃಷ್ಠಿಯ ನಾಡು | ಭೂಮಿಯೊಳಿಲ್ಲ ಜೋಡು | ರಾಸಾಯನಿಕ ರಾಜ ಸಿದ್ಧಿಯ
ನಾಡು | ಜಗದೊಳ್ ಮಿಗಿಲಾದ ನಾಡು | ಸೊಗದೊಳ್ ಸ್ವರ್ಗದ ನಾಡು | ಮುಗಿಲೊಳ್ ತಿರುಗುವ ಉಗಿ ಹೊಗೆಯನಾಡು||೧೭||

ವಿದ್ಯಾ ಸಂಪನ್ನ ನಾಡು | ಶುದ್ಧಿ ಸಂಸ್ಕೃತಿ ನಾಡು | ತಿದ್ದಿ ತೀಡಿದ ಜರ್ಮನಿಯ ನಾಡು | ಬುದ್ಧಿ ಬೆಳಕಿನ ನಾಡು | ವೃದ್ಧಿ ಉತ್ಪತ್ತಿನಾಡು | ಯುದ್ಧದಲಿ ಸೋಲದಂತ ನಮ್ಮ ನಾಡು||೧೮||

ಕಲಿಯ ಕಂಗಳ ನಾಡು | ಮಳೆಯ ಹೊನ್ನಿನನಾಡು | ಬಲದಿಸಿಂಹ ಬಲಶೂರನಾಡು | ಛಲಿ ಪ್ರಾಣಗಳ | ಬಲಿಯ ಕೊಡುವನಾಡು | ನೆಲದೊಳಿಲ್ಲ ನಮ್ಮನಾಡ ಜೋಡು||೧೯||

(ಏರು)

ಎಂದಾಡಿ ಡುಬ್ಬ ಚಪ್ಪರಿಸಿ | ಹಿಟ್ಲರ ಸೇನೆಗೆಚ್ಚರಿಸಿ | ಬಂದು ನಿಂತ ಜರ್ಮನಿ ಶೂರ |
ರಣದಲ್ಲಿ ಗೆಲೆವ ನಿರ್ಧಾರ ಮುಂದಾಗುವದು | ರಣರಂಗವಿದೂ | ಬಹುಭೀಕರ ಪ್ರಳಯ                         ಪ್ರಂಗವಿದು||೨೦||

ಇತ್ತ ಕೇಳಿರಿ ಜಪಾನದವರು | ಒತ್ತಿ ಓಡಿ ಬಂದು ಬೇಗ | ಗತ್ತಿನಿಂದ ಬ್ರಹ್ಮದೇಶ
ತಕ್ಕೊಂಡರು | ತಾತ್ಕಾಲಿಕ ವಿಜಯದಿಂದ | ಮತ್ತರಾಗಿ ಭರತಖಂಡ ಕೆತ್ತಿ ಬಂದು | ಮೃತ್ಯುವಿನಾಲಿಂಗಿಸಿದರು||೨೧||

ಮತ್ತೆ ಮತ್ತೆ ಸುತ್ತಿ ಸುತ್ತಿ ಮುತ್ತಿ ಮತ್ತಿ ಬೇಸತ್ರು | ಗೊತ್ತುಗಾಣದಾದ್ರು ರಣರಂಗದಾಗ |
ಹುತ್ತಿನಿಂದ ಹೊರಗೆಬಂದು ಹಾವುಹಣಿಕಿ ನೋಡಿದಂತೆ | ಕುತ್ತನೋಡಿ ಹಿಂದಕ
ಸರಿಯುವರು||೨೨||

ಮಣಿಪೂರ ಪಟ್ಟಣಕಬಂದು ಹಣಿಸಿಗೊಂಡು ಓಡಿಹೋದ್ರು | ಎಣಿಕೆಯಿಲ್ಲದಷ್ಟು ಹಾನಿ ಹೊಂದಿದರು ಆ ಸಮಪ್ರಾಂತಕ್ಕೆ ಬಂದು | ವಾಸಮಾಡಿ ಗುಡ್ಡದಾಗ | ಅಡಗಿಕೊಂಡು ಕಳ್ಳ ಯುದ್ಧ ಮಾಡಿದರು||೨೩||

ಇಂಫಾಲಕ್ಕ ಗುಂಪಾಗಿಬಂದು | ತಂಪಾಗಿ ಹಿಂದಕ ಸರದರು | ಕಂಪಹುಟ್ಟಿ ಕಾಣದದ್ರು ಜಾಪಾನರು | ಸತ್ತು ಹುಟ್ಟಿದಾಂಗ ಅವರು | ಅತ್ತಿತ್ತ ಓಡಿಹೋದ್ರು | ಸುತ್ತಮುತ್ತ ಕಾಣದಾದ್ರು ಕಂಣಿಗವರು||೨೪||

(ಇಳುವು)ಸಾಮಾನ್ಯರೇನು ಸೈನಿಕರು | ಭಾರತೀಯ ರಕ್ತ ರಂಜಿತರು | ಶಾರ್ದೂಲ ಸಿಂಹ ಸಮ      ಬಲರು | ಬಲಶಾಲಿ ಶೀಖ-ಗೂರ್ಖರು | ಬಂಗಾಲ ತೆನಗು ನಾಡುವರು | ರಣದಲ್ಲಿ
ರಕ್ತ ಸುರಿಸಿದರು| ಬ್ರಹ್ಮದೇಶದಲಿ | ಮುನ್ನಡೆಯುತಲೀ ಜಾಪಾನರ ಗರ್ವವ
ನಿಳಿಸಿದರು  ||೨೫||

ಅತ್ತ ಜರ್ಮನ್ ರಂಗದಾಗ | ಸತ್ತು ಹೋದ ಹಿಟ್ಲರ | ಶಕ್ತಿ ಪಾತವಾಗಿ ಬಿದ್ದ ಭೂಮಿಮ್ಯಾಗ |
ಇತ್ತ ಜಪಾನ ರಣರಂಗದಾಗ | ಆಟಂಬಾಂಬು ಹಾಕಿದರಾಗ | ಸುತ್ತು ಮುತ್ತು ವೈರಿ
ಕಾಟವಿಲ್ಲದಾಂಗ||೨೬||

ಬತ್ತಿ ಉರಿಯದಾಂಗ ಆಯ್ತು | ಎಂಣಿಯತಿಲ್ಲದಾಗಿ ಆಗ | ಶತೃಸೇನೆ ನಷ್ಟವಾಯ್ತು ಭೂಮಿ ಮ್ಯಾಗ | ಕುತ್ತು ಕಡಿದು ಹೋದ ಮ್ಯಾಗ | ಮಿತ್ರ ರಾಷ್ಟ್ರದವರು ಕೂಡಿ | ಎತ್ತಿದರು ವಿಜಯದಾರತಿಯನ್ನು ಬೇಗ ||೨೭||

ಶ್ರೀಕಂಠ ಕಾವ್ಯ ಸುರವಾಣಿ | ಏಕಾಂತಕೈದ ನಿಜರಮಣಿ | ಲೋಕಾಂತ ಬೆಳಗಲಿದ್ಯು
ಮಣಿ | ಪ್ರಾಕಾಶಿತ ಪದ್ಯದ ಲಾವಣಿ | ಜಯಶೋಭಿಸಲಿ | ಜಯಘೋಷಿಸಲಿ | ನಿಜಬಂಧು ಭಾರತರು ಮೋದಿಸಲಿ ||೨೮||

 ರಚನೆ : ನಲವಡಿ ಶ್ರೀಕಂಠಶಾಸ್ತ್ರಿ
ಕೃತಿ : ರಾಷ್ಟ್ರಗೀತಾವಳಿ