ಏನ ಹೇಳಲಿ ಜನ್ಮದ ಗೋಳಾ
ಇಂಗ್ರಜಿ ಉಪದರ್ ಆದೀತ ಬಾಳಾ
ಬಡವರ ಅಳತಾರೊ ಗಳಗಳಾ
ಮಾಡತಾರ ಚಿಂತಿ

೧ನೇ ನುಡಿ

ಮದಲಿಂದ ಕೇಳರಿ ಮಜಕೂರಾ
ಬಂದಾರ ಗಾಡಿನ್-ಸಾಹೇಬ ಸರದಾರಾ
ಕುಂತಕೊಂಡ ತಗದ ಒಂದ ಹಂನ್ನಾರಾ
ದುಡ್ಡ ಎಳೋ ಈ ಗತಿ

ಗಾಡಿನ್ ಸಾಹೇಬ ಹೇಳತಾನ ತೋರಿ
ಹಸನ ಮಾಡಿಸ್ತೇನ ರಾ-ದಾರಿ
ಇದಕ ನೀವ ಏನ ಅಂತೀರಿ
ಕೆಲಸ ನಿಮದs ಅತಿ

ಪಂಚರ್ ಎಲ್ಲಾರು ಆದಾರಾ ಕಬೂಲಾ
ಮುಂದ್ ಹಿಂಗ್ ಆದೀತ ಅನ್ನುದು ತಿಳಿಲಿಲ್ಲಾ
ದುಡ್ಡಿನ ಗರ್ವಿಲಿ ತೆರದಾರ ಹಳ್ಳಾ
ಇಲ್ಲ ಕಕಲಾತಿ    ||ಚಾಲ||

ಆಗ ಹಾಕಿದಾರ ಕೇಳ ಕಷ್ಟಪಟ್ಟಿ
ಕಠಿಣ ಬಡವರದ ತುಂಬುದು ಹೊಟ್ಟಿ
ಮಾರಿ ಕೊಟ್ಟಾರೊ ನೂಲುವ ರಾಟಿ

ದುಡ್ಡಿನ್ ಆಸೆ ಹತ್ತಿತ ಸರಕಾರಕ
ಚೌಕಾಶಿ ಬಾಳಾತ ದಿನದಿನಕ
ಸಗಣಿ ಗುಟ್ಟಿ ಮಾಡ್ಯಾರ ಆ ಕ್ಷಣಕ

ಕಟಗಿ ಮಾರತಾರ ಮಾಡಿ ತೊಕ
ಪ್ಯಾಂಡಾರೆರು ಲಮಾಣೆರು ಕಟಗಿ
ಮಾರಿ ತಮ್ಮ ಮಕ್ಕಳ್ನ ಮಾಡತಿದ್ರ ಜೋಕಿ
ಈಗ ಬೇಡೂದ ಬಂದತಿs ಬಿಕ್ಕಿ
ಕೆಲಸ ಹೀಂಗ್s ಅತಿ

೨ನೇ ನುಡಿ

ಸರಕಾರಕ ದೊರಿತ ಮಸಲತ್ತಾ
ಕರಪಟ್ಟಿ ಹಾಕ್ಕಾರ ತುರತಾ-ತುರತಾ
ರೈತರ ದುಡ್ಡ ಎಳುವ ಹಿಕಮತ್ತಾ
ಮಾಡಿದಾರ ಹೀಂಗ

ಸರಕಾರದ ಆತ ಬಲಜೋರಿ
ಲೋಟಿಸ ಕೊಟ್ಟ ವಾಯಿದೆ ಮಾಡಾರಿ
ಕೊಡಲಿದ್ರ ಬೆಸಕ ಜೋರಿ
ನಡಸರಿ ಅಂಜಿಕಿಲದ್ಹಾಂಗೆ

ಕಲೆಕಟರ ಸಾಹೇಬ ಬಂದ ಆಗ
ಬಂದು ಇಳದಾನ ಬಂಗಲೇದಾಗ
ಜನರೆಲ್ಲ ಹೋಗಿ ಮುತ್ತಿದಾರ್ ಅವಂಗ
ಶಿವಾ ಇಳದ್ಹಾಂಗ

ವಾಯಿದೆ ಮೀರಿದರ್-ಹಚ್‌ಚರಿ ಬಡ್ಡಿ
ಮನಿ ಮಾರ ತಗೋಳ್ರಿ ಲಿಲಾವ ಮಾಡಿ
ಬಾಳ ಮಂದಿ ಕೊಟ್ಟಾರೊ ಗೋಳಿ-ಆಡಿ
ಹೆದರಿ ಮನದಾಗ||ಚಾಲ||

ದೈವದವರೆಲ್ಲಾ ಕೂಡಿ ಸಮಸ್ತಾ
ಅರ್ಜಿ ಕೊಟ್ಟಾರೊ ಮಾಡಿ ಮಸಲತ್ತಾ
ಚೌಕಾಶಿ ಮಾಡರಿ ದಣೇರಕುಂಟಾ
ಪಟ್ಟಿ-ಕುಡೊ ನಮಗ್-ಇಲ್ಲ ತಾಕತ್ತಾ

ಸಾಹೇಬ ಮನಸಿಗೆ ತರಲಿಲ್ಲಾ
ಈ ಮಾತ ನಮ್ಮ ಕಡೆ ಇಲ್ಲಾ
ಓಡಿಯಾಡಿ ಹೋದವ ಕೈ-ಕಾಲಾ
ಕುಳ ನೀರ ಬಿಟ್ಟ ಕುಂತರ್-ಅಲ್ಲಾ

ಸೌಕಾರ ವಸ್ತೊಡವಿ ತಗದಿಟ್ಟು
ಹರಕ ದೋತರ ಅಂಗಿಯ ತೊಟ್ಟು
ಬಂಗಲೆಕೆ ಹೋಗುವ ನಾಚಿಕಿ ಬಿಟ್ಟು
ಬಡವರಾ ಗತಿ

೩ನೇ ನುಡಿ

ಸಾವಕಾರ ಮಾಡ್ಯಾರ ಯದಿಗಟ್ಟಿ
ಬಿಟ್ಟೀತಂತ ನಮಗೆ ಕರಪಟ್ಟಿ
ಬಾಳಾ ಬಿಟ್ಟರ್ ಅಣ್ಣಾ ಕಟಪಟಿ
ಬಂಗಲೆಕ ಓಡಿಯಾಡಿ

ಕೂಡಿ ಕುಂತರಣ್ಣಾ ಸಾವಕಾರಾ
ಕುಂತಂಗ ಕುಂತ್ರೋ ಕೂಲಿ ತಳವಾರಾ
ತಮ್ಮ ತಮ್ಮೊಳಗ ಹಾಕತಾರ ಉಸರಾ
ತೆಳಕ ಮಾರಿ ಮಾಡಿ

ಊರೆಲ್ಲ ಪಟ್ಟಿ ಯತ್ಯಾರು
ಕಮರಿ ಪ್ಯಾಟ್ಯಾಗ ಬಂದ ಕುಂತಾರು
ಜೋರಿಲಿಂದ ಬದಕ ತರಸ್ಯಾರು
ಜಪ್ತಿ ಮಾಡಿ

ಪಟಿಗಾರ ಹೇಳ್ಯಾರ ಸುಭೆದಾರಗ
ನೀ ನಮ ಹಡದಿ ತಂದಿ ಹಾಂಗ
ಸೊಲ್ಪ ಕರಣ ಬಂದ ಹೊಟ್ಯಾಗ
ಬಿಡೊ ದಯ ಮಾಡಿ

ತುಮ ಖಾವಂದ ಛೇ ಮಾಯ ಬಾಪ್
ಹಮಾರೆ ಪಟ್ಟಿ ಕರೋ ತುಮಿ ಮಾಪ್
ಕಾಟ್‌ಲಾಯಾ ಚೋಳೆನು ಚಾಪ್
ದಿದಾ ರಡಿ-ರಡಿ||ಚಾಲ||

ಹಲಗಿ ಕುಂಟೀ ರೆಸಮಿ-ಪಟ್ಟಿ
ಬಾಂಡೆ-ಸಾಮಾನಾ ಜುಮಾನು-ತಾಟಿ
ಲಿಲಾವ ಮಡಸ್ಯಾರು ಕಿಮ್ಮತ ಕಟ್ಟಿ||ಚಾಲ||

ಬಾಳ ಕೆಟ್ಟರ್ ಅಣ್ಣಾ ಸರಕಾರಾ
ಬಡವರ ತಂದಾರ ಕಣ್ಣೀರಾ
ಹೆಂತಾ ಯಾಳೇ ತಂದಿ ಈಶ್ವರಾ
ನಮಗ್ಯಾರದಿಲ್ಲ ಆಧಾರಾ

ಲೈ ರಡ್ಯಾ ಕಹ್ ತರಿ ಸಬಿ ಬೈಟಿ
ಕಾ ಕರೆ ತರ್-ಬಿ ಚುಕ್ತ ನೈಪಟ್ಟಿ
ಚಡಾಯ್-ಲಾಯಾ ಜವಯನು-ತಾಟಿ
ಕರಿ ಕಹ್ ನ ಚಾತಿ

 

೪ನೇ ನುಡಿ

ಹರಪನಳ್ಳಿ ರಾಯಪ್ಪ ಬರಕೊಟ್ಟಾ
ಇವರಿಗಿ ಹುಟಾಜ್-ಐತಿರಿ ಯತ್ತಿಷ್ಟಾ
ಬಡವರ ಸುತ್ತ ತಂದನೊ ಕಷ್ಟಾ
ಉಳೀಲಿಲ ದರಮಾ

ಕಮರಿ ಪ್ಯಾಟಿ ಮುಸಲಾರ್-ಒಳೆಗಟ್ಟಿ
ಕೊಡುದಿಲ ಹೋಗಂದಾರ ಕರಪಟ್ಟಿ
ಬೇಕಾರ ತಗೋಳ್ರಿ ದಂಡಾ ಕಟ್ಟಿ
ಇದರ ನಿಮ ಹುಕುಮ

ಸುಭೆದಾರ ಸಿಟ್ಟಲಿ ಆದ ಬೆಂಕಿ
ಮನಿ-ಮನಿ ನೋಡ್ಯಾನೊ ಎಲ್ಲಾ ಹುಡಿಕಿ
ತಾಂಬರ-ಚೂರ ಕರವಾಯಿ ಸುಟಕಿ
ವೊದದ್ದ ಕೇಳ್ರಿ ನೇಮಾ||ಚಾಲ||

ಮುಸಲರ ಎಲ್ಲಾ ಕುಂತಾರ ಕೂಡಿ
ಮಸೂತಿ ವಳಗ ಮಸಲತಾ ಮಾಡಿ
ಕಾ ಹೈ ಧೂಂಡ್‌ಕರ್ ಲಕಾವ್-ಅರೆ ಲಕಡಿ
ಹಿಂದಕ ಸರಿದಿರಿ ಅನಮಾನ ಮಾಡಿ

ಮಸಲತ್ತ ಹಾಕಿದಾರ ಹೀಂಗ
ಬೇಸೇಕ ಹೊಡುನು ಬಂದವಂಗ
ಆದ್ರ ಬೀಡಿ ಹಾಕ್ಯಾರ ನಮಗ
ಮತ್ತೇನ ಮಾಡ್ಯಾರ ಇದ್ರ ಮ್ಯಾಗ

ಬಡೆ ಕಟೈ ನವೆ ರೆ ದಿವಾನಾ
ಸರಕಾರ್-ಕೆ ಸಾತ್ ಮಾಸ್ತಿ ನಾ ಕರ‍್ನಾ
ಮಾ ಬಾಪ್ ಕ ರಕೋ ಪಾವಾ ಪಡ್ನಾ
ಕಯಿ ತೊ ಮೇರ್ ಆತಿ

೫ನೇ ನುಡಿ
ಎಲಪಾಟ್ ಸಾಹೇಬ ಬಂದ ಸರದಾರಾ
ಬಡವರ ಮ್ಯಾಲ ಇದ್ದ ಬಲ ಫೇರಾ
ಆಗ ಕುಂತ ಮಾಡ್ಯಾನ ವಿಚಾರಾ
ಕೇಳರಿ ಹೀಂಗ

ಆಗ ಮುಸಲರೆಲ್ಲಾರು ಕೂಡ್ಯಾರು
ಮಸಲತ ಮಾಡಿ ಅರ್ಜಿ ಕೊಟ್ಟಾರು
ಬಂಗಲೆಕ ಬಂದ ಎಲ್ಲಾರ ಕೂಡ್ಯಾರು
ಕೇಳರಿ ಆಗ

ತುಮ್ ಖಾವಂದ ಅರ್ಜಿ ಯಿ ಸುನ್ನಾ
ಹಮಾರಿ ಪಟ್ಟಿ ಮಾಪ್ ತುಂ ಕರ‍್ನಾ
ನಿಂತಕೊಂಡ ನೋಡಿದಾನ ಬಡವರನಾ
ಕರುಣ ಹೊಟ್ಯಾಗ

ಸಾಹೇಬ ನೋಡಿದಾನ ಸೋಸಿ
ಲಗುಮಾಡಿ ಅರ್ಜಿ ಕುಡಂತಾನ ಬರಸಿ
ಅವನ ಹೊಟ್ಯಾಗ-ಆತ ಕಸವಿಸಿ
ಬೆಂಕಿ ಬಿದ್ದಾಂಗ

ಹೆಂಗಸರುಟ್ಟಂತ ಹರಕ ಪರಕ ಸೀರಿ
ನಿಂತಕೊಂಡ ನೋಡಿದನ ಐಸ್ವರಿ
ಗರ್‌ಮೆ ನೈ ಕರ್‌ಕೋ ಜಾರಿ
ಅಳತಾರ ಆವಾಗ
ಆಗ ಸರದಾರಾ ಮಾಡ್ಯಾನ ವಿಚಾರಾ
ಕುಂತಿದಾರಣ್ಣಾ ದೊಡ್ಡ ಸಾವಕಾರಾ
ಬಡವರ ಮಾಡ್ಯಾರ ನಮಸ್ಕಾರಾ

ಸಾಹೇಬ ಕೇಳಿದ ಕಿವಿಗೊಟ್ಟಾ
ಇವರಿಗಿ ಹುಟಾಜ್-ಅತಿ ಹೇಳ್ರಿ ಎಷ್ಟಾ
ಹಿಟಾಳಿ ಈರಬದ್ರಪ್ಪಾ ಬರಕೊಟ್ಟಾ
ಐನೂರ ರೂಪಾಯ್ದ ಅಂದಾಜಿಟ್ಟ
ನೀವ ಹೇಳಬ್ಯಾಡ್ರಿ ಕಿರೆ-ಸುಟ್ಟಾ
ಪಂಚರ ಕಿವಿಮ್ಯಾಗ್ ಇಟ್ಟಾ

೬ನೇ ನುಡಿ

ಎಲ್ಲಾರ ಕೂಡಿ ಮಾಡತಾರ ಲೆಕ್ಕಾ
ತಮತಮೊಳಗ ಹಾಕತಾರ ತೂಕ
ಎಷ್ಟೂಂತ ಹೇಳಲಿ ಜನರ ದುಕ್ಕ
ಕೆಲಸ ನಡದತಿ

ಪ್ರತಮ್ ಕೂಡಿ ಮಾಕಪ್ಪ ಪುಣಿವಂತಾ
ಲೆಕ್ಕ ಹಾಕಿ ಮಾಡಿದಾ ತಾ ಕುಂತಾ
ಎಲ್ಲರ ಮನಸ ಆತ ಸನಮಂತಾ
ಕೇಳರಿ ಇನ್ನಾ

ಬಡವರ ನಿಂತಾರ ಮಾರಿ-ಮಾರಿಗಿ
ನಿಂತ ಬೇಡಿಕೊಂಡಾರೊ ದೊರಿಗಿ
ಕೊಟ್ಟಂತ ಪಟ್ಟಿ ಕೊಡಿಸಿದಾನ ತಿರಿಗಿ
ಸಾಯೇಬ ಪುಣಿವಾನಾ

ಮುಸಲರ ಅಂತಾರ ಅರೆ ಅಲ್ಲಾ
ವರ್ಸಾತ ಗೋದಿ ಅಕ್ಕಿ ಉಂಡಿಲ್ಲಾ
ನಮ್ಮ ಪಡಿಪಾಟ್ಲ ಶಿವನೆ ಬಲ್ಲಾ
ಕೊಡುನು ನಾವ್-ಏನಾ

ಪರಮಧೂತ-ನಾಮ-ಸಂವಚ್ಛರಾ
ಕರಪಟ್ಟಿ ಹಾಕಿತಣ್ಣಾ ಸರಕಾರಾ
ಬಡವರ ಮರಗಿದಾರ ಮರಮರಾ
ಸ್ವಾಮಿ ಭಗವಾನಾ

ಪರಜೋತ್ಪತ್ಯಾ-ಸಂವಚ್ಛರ ತನಕ
ಜನರ ಆದಾರೊ ಬಾಲ ಹಲಾಕ
ಬಡತನ ಬಂತಂತಾರ ಸರಕಾರಕ
ಹೋಗುನುತಾರ ಮತ್ತೊಂದು ರಾಜೆಕ
ಬಾಳ ಸರಾಪ್ಯಾರ ಪಂಚರ ಗುಣಕ
ಶೆಟ್ಟಿ ಸುಭೇದಾರ ಕಾಮ್ದಾಜನಕ

ಈ ಪದಾ ಹುಟ್ಟಿತ ಹುಬ್ಬಳ್ಯಾಗ
ಅಂಕುಸ್-ತುರಾಯ ಡಬ್ಬಿನ ಮ್ಯಾಗ
ವಸ್ತಾದ ಹನುಮಂತ್ರಾವನ ಮಗ
ಗುರು ಸಿದ್ದೇಶನ ದಯಾನ ಮ್ಯಾಗ
ಕವಿ ಗುರುಸಿದ್ಧ ದಾನ-ಚಾತುರಾ
ಮಾಡಿ ಹೇಳಿದಾನ ಅಕ್ಷರಾ
ಕುಂತ ಕೇಳಾರೆಣ್ಣಾ ಮಜಕೂರಾ
ಆದ ಪಜೀತಿ

ಕವಿ : ಗುರುಸಿದ್ಧ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು