ಇಂಗ್ರೆಜಿ ದಣಿ ಖಾವಂದ ದೊರಿ
ಯಾರು ಇಲ್ಲರಿ ಇವರ ಸರಿ |
ಮೂಡು ಮುಣಗಾವಲಿಯೇಕ ಛೆತ್ರಪತಿ
ಅಂತ ಹೊಗಳತತಿ ಶ್ರುತಿ ಸಾರಿ||ಪಲ್ಲ||

ಪ್ರಥಮ ಬಂದ್ರ ಹಿಂದು ದೇಶಕ್ಕ |
ವುದ್ಮಿ ವೆವಹಾರಾ ಮಾಡಂದಕ |
ಯೆಲಿಸ್ವಿತ ಮಾಹಾರಾಣಿಯವರು |
ಅಧಿಕಾರ ಆದ್ರಾ ಗಾದಿಯ ಸ್ಥಲಕ |
ಲಂಡನವೆಂಬ ಪಟ್ಟಣಕ |
ಸಿಕೆಹಾಕಿ ಬಿಟ್ಟಾರದಕ |
ರತ್ನ ಜಡಿದು ದೇವೇಂದ್ರ ಸಭಿಗೆ
ಸರಿ ಆಗಿ ಕಾಣತತಿ ಈ ಜನಕ |
ಸಿಂಹಾಸನ ಭಂಗಕ ಚೊಕ್ಕ |
ಮುತ್ತ ಬಿಗಿದ ಮನ ಪೂರ್ಣಕ್ಕ
ರಾಣಿಯವರು ಸದಕೇರಿ ಕುಂತ್ರ
ಸುತ ಜಗಜೆಗಿಸುತ ಬೀಳುದ ಬೆಳಕ||ಚ್ಯಾಲ||

ಹಮೆಲ್ಪನ ಸಾಹೇಬ ಖಾವಂದ್ರು ಬಂದರಾಗಾ
ಹಿಂದು ದೇಶ ಹೊಕ್ಕರು ನಾಡಾಗ |
ಪಾಛನ ಹುಕುಮ ಇದ್ದಿತು ಆವಾಗ |
ಬಂದ ನಡಿಸ್ಯಾರ ವ್ಯಾಪಾರ ವೊದ್ಯೊಗ |
ಆ ಪಾಛನ ಮಗಳಿಗೆ ಮೈಯಾಗ |
ಸ್ವಸ್ತ ಇದ್ದಿಲ್ಲ ಆಕಿಯ ಜೀವದಾಗ||ಯೇರ||

ಬಂದು ಇವರು ಈ ದೇಶದೊಳಗ ಆಕಿ |
ಗೊಂದು ಔಷಧವ ಕೊಟ್ಟಕ್ಹಸ್ತಕೆ |
ಚಂದವಾಗಿ ಲೇಸ ಬಂದಿತಿವರಿಗೆ |
ಮುಂದ ಪಾಛಮನದೊಳಗ ವಿಚ್ಯಾರಕ |
ತಂದು ಧ್ಯಾನಕ ತಾ ತಿಳಿದ ಸರ್ದರಗ |
ಅಂದ ಯೇನ ಬೇಡತಿ ಬೇಡು ನೀ |
ಮುಂದ ಸರ್ದರಾ ಆಗ ಪಾಛೆಗ |
ಅಂದ ನಿಂಮ ನಾಡೊಳಗ ನಂಮ ಜನ |
ಬಂದ್ರ ನಂಮ ಹೆಸರ‍್ಯಾರು ತಗಿಯದ್ಹಾಂಗೊಂದು
ಮಾಡಿಕೊಡ್ರಿ ನಂಮ ಕಯ್ಯಲಿ |
ಚಂದದಿಂದ ಪಾಛ ತಿಳದ ನೋಡಿದ ಮನಕ |
ತಂದು ತಿಳದ ಆವಾಗ ಕೈಯೆತ್ತಿ||ಯೇರ||

ಸಿಕೆ ಹೊಡದ ಕೊಟ್ಟನು ಪಾಛಾ ಆ ಕ್ಷಣಕ |
ಅಲ್ಲಿಂದಾತಿ ಅಂಜದ್ಹಾಂಗ್ಯಾತ್ಯಾತಕ |
ತಂಮ ಕೈಲಿ ತೊಗೊಂಡ್ರ ಯಲ್ಲಾ ಮಾಡಿರಿಕ್ಕ |
ಮೋಕಳೀಕ | ಆತಿ ಟೀಕ |
ಯುಕ್ತಿ ಮಾಡರ‍್ಯಾತ್ಯಾತರದು ಇಲ್ಲೊ ಟಕ್ಕ||ಇಳವ||

ಅಲ್ಲಿಂದ ಕೂಡಶಕ ದಂಡ |
ಯುಕ್ತಿ ಮಾಡಿಕೊಂಡ |
ಯಲ್ಲ ಯಳಕೊಂಡ್ರ ತಂಮ ಕಯ್ಯಾಗ |
ತಿಳಬಲ್ಲ್ರ ಕಲ್ಪನದ ವಳಗ |
ವಳಗಿಂದೊಳಗ ಮಾಡೆರ ತಯ್ಯಾರ |
ಯದ್ರ ವಂದ ಬಾರಾ | ಮಾಡಿ ಹುಂನರ |
ಹೊಂಟರ ಆವಾಗ ಯೇಕದ್ರುಮಕ
ಪಾಛೆನಮ್ಮೆಗ||ಯೇರ||

ರಾಜಿಲಿಂದ ದೇಶ ಕೊಟ್ಟನರಿ |
ಇವರ ಯುಕ್ತಿಗ್ಯಾರಿಲ್ಲ ಸರಿ |
ಮೂಡು ಮುಣಗುವಲಿ
ಯೇಕ ಛತ್ರಪತಿ ಅಂತ
ಹೊಗಳತತಿ ಸುತಿಸಾರಿ||೧||

ಹೀಂಗ ದೇಶದಾಸಾದಂಗಿರೊ |
ಮಾಡಿಕೊಂತ ನಡದರ ಹಂಚಿಕಿ |
ದೇಶ ಸಾದುಣಿರ ಮಾಡಿ ತೊಗೊಂತರ
ತಂಮ ಬುದ್ಧಿ ಕಲ್ಪನ ಹಾಕಿ |
ಮಚಲಿ ಬಂಗಾಲ ದೇಶ ತಗದ್ರ ಹಾಡಿಕಿ |
ನಿಜಾಮದಿಲ್ಲಿಯೆಶಗ್ಹಚ್ಚಿದಕ್ಕಿ
ಸಾಷ್ಡಿಗಡ್ಡಿ ಕನಡ ಕರ್ನಾಟ
ಬುಂದೆಲ ಖಂಡ ದೇಶ
ತೊಗೊಂಡ್ರ ಪೀಶ್ವನ ದುಡಕಿ |
ಕಟಕ ದಿಲ್ಲಿ ಕಾನದೇಶ ಸುಖಿ |
ತೊಗೊಂಡ್ರ ಹೋಳಕರನ ಕಡದ ಹಾಕಿ |
ಅಜಮೀರ ಮಾರಾಷ್ಟ್ರ ಪುಣೆ
ಅಸ್ಮ ಅರಕಾನನ ಬ್ರಂಮ್ಹ ದೇಶ
ಗೆದ್ರ ಟಾಣೆಹಾಕಿ||ಚ್ಯಾಲ||

ಸಿಂಧು ದೇಶ ಗೆದ್ದರೊ ಅಲ್ಲಿಂದ |
ಅಮೀರನು ಅರಸನ ಕಡಶಿಂದ |
ಪಂಜೆ ದೇಶಕ ಟಾಣೆವ ಹಾಕಿದಾ |
ಸಿಕ್ಕರೆಂಬು ಅರಶಿನ ಕಿತ್ತ ವಗದಾ |
ಪೈಗು ದೇಶಕ ಹೋದರು ಮಾಡಿ ಜಲ್ದ |
ನಾಗಪೂರ ತೊಗೊಂಡ್ರು ನಿಜಾಮಂದ||ಯೇರ||

ಮತ್ತು ಅಯೊದ್ಧ್ಯಾನಗರಕ ಬಂದರು |
ವತ್ರ ಮಾಡಿ ಧಮಕಾಸ್ತ ವೂರಿಗೆ |
ನಿತ್ರ ಟಾಣೆ ಹಾಕಿ ಡೇರೆ ಹೊಡದ ಬಲು |
ಶತ್ರು ಕೈದು ಸಂಹರಿಸಿ ಅಯೊದ್ಧೆನ |
ನೆತ್ರ ಧರಣಿಗ ಕೆಡವಿಬಿಟ್ಟರ ಜಗ |
ಕರ್ತರಂತ ಅನಸುವರು ಭುವನಕ |
ನಿತ್ತೆ ಪುಂಣೆದ ಸದಾಚ್ಯಾರವನು |
ಅರ್ತಿಲಿಂದ ನಡಸುವರು ಕರುಣವಿಟ್ಟ |
ಪಾರ್ಥಗಾಗಿಲ್ಲ ಇವರ‍್ಹಂತ ಸಮರ್ಥ |
ನಿರ್ತದಲ್ಲಿ ಮಹ ನಿಷ್ಟವುಳ್ಳವರು |
ಅರ್ತ ಸಂವರಿಸಿ ಬಿಚ್ಚಿಕೇರ||ಯೇರ||

ಹೀಂಗ ಹೇಳಿಕೊಂತ ಹೋದರ ತೀರಕಿಲ್ಲಾ |
ಬಲ ವೀರರ ಮಾಡಿದ ಬಲ್ಮಿನೆಲ್ಲಾ |
ಸಾಕ್ಷಾತ ದೇವರಿವರು ಮತ್ತ್ಯಾರಿಲ್ಲಾ ||
ಧರಿಮೇಲಾ | ಬಂದರಲ್ಲಾ |
ಯೇಕ ಛತ್ರಪತಿ ಅನಸಿಕೊಂಡ್ರ ಮೇಲ||ಇಳವ||ಣ

ಪುಂಣೆ ಕಂಮ ಅರಸರ ಸಂಚಿತಾ |
ಕಳಕೊಂಡ್ರ ದವಲತ |
ಆದ್ರ ಅನರ್ತ ಮುಟ್ಟಲಿಲ್ಲ ದಡಕ |
ಹರಿಬೀಳಲಿಲ್ಲ ಲೌಕಿಕಕ |
ಮಹಾರಾಣಿ ಖಾವಂದರ ಸರಿಗಿ
ಯಾರೆರ ಇಲ್ಲರಿ |
ಪುಂಣೆದ ಜೆರಿ ಇವರ ಹಂತೇಕ |
ಹಾಂಗಂತ ಆಳತರ ಲೋಕ||ಯೇರ||

ಭೂಮಿಗೆ ಅಧಿಪತಿ ಆದ್ರ ಧೊರಿ |
ಬಂದ್ರ ಭುವನದೊಳು ರತವೇರಿ||೨||

ಪುಂಣೆವಾನ ಇಂಗ್ರೆಜಿ ಸರಕಾರಾ |
ಹೀಂಗ ನಡಸತರ ಕಾರ್ಬಾರಾ |
ದಿಲ್ಲಿ ಕಾಸಿ ಪರ್ವತ ಮಂಮಯದಾಗ
ದಂಡ ಇಟ್ಟುದರ ತರತರ |
ಹತ್ತಲಕ್ಷ ದಂಡ ಬರಪೂರಾ |
ಮಂದಿ ಇದ್ದಿತೊದಲ್ಲ ಬಾರಾ |
ತುರಪ ಘನತುರಪ ಕಾಲ
ಫೌಜ ಕರಿ ಮಂದಿ ಬ್ಯಾರಿ
ಕೆಂಪ ಸೋಜರ |
ದಂಡಿನೊಳಗ ವೊಬ್ಬ ಸರದಾರಾ |
ಯಡಬಲ ಕುದರಿಯ ರಾಹುತರ |
ತೋಪು ತುಬಾಕಿ ಕರುಲಿ ಪಿಸ್ತುಲ
ಮಸ್ತ ಮಂದಿ ಹಿಡು ಹತಿಯರ||ಚ್ಯಾಲ||

ಹುಕಮ ಸರಕಾರಕಾ ಇದೆ ಬಂದು ಬಸ್ತಾ |
ಯರ್ಡು ಹೊತ್ತು ನಡಸುರು ಕಾವಾತಾ |
ಗುಂಡು ಮದ್ದು ಹಿಂಬಲ ಸಾಹಿತ |
ರಣ ಪೈರಾಗಿ ಯೇಳುದು ತಂಬು ನುಡತಾ |
ತಡಪಡ ಅವಾಜ ಗುಂಡಿಂದ ಇಲ್ಲ ಗಣತಾ |
ಬರರರ ಮಳಿಯ ಬಡದ್ಹಾಂಗ ವಿಪರೀತ||ಯೇರ||

ಇಷ್ಟು ಸಾಹಿತ ಮಾಡಿ ತಯಾರಾಗಿ |
ಹೊಂಟದ ಗಡಗೊಳ ಜೈಸಿಕೊಳ್ಳಲಾಕ |
ಬಂಟ ಹೌದ ಇಂಗ್ರೆಜಿ ಧೊರಿಯು ಕೊಪ |
ತೊಟ್ಟ ಸವರಿಸಿ ಬಿಟ್ಟ ಸಾಮನಗಡ |
ಶ್ರಿಷ್ಟಿಲಿ ಹಲಗಲಿ ನರಗುಂದ ಪರ‍್ಸಗಡ |
ಅಷ್ಟು ತೊಗೊಂಡರ ವಂದ ಬಿಡದಲೆ |
ದ್ರುಷ್ಟಿಗಡಾ ರುದ್ರ ಭದ್ರ ಮನೋಹರ |
ಇಷ್ಟು ತೊಗೊಂಡರ ನಂದಗಡ ಚಂದಗಡ |
ನಿಷ್ಟಾವಂತರ‍್ಯಾರಿಲ್ಲ ಇವರ ಸರಿ |
ಅಷ್ಟು ರಾಜರ ವಳಗ ಇವರ ಮಾಹ |
ಶ್ರೇಷ್ಟರೆನಿಸಿಕೊಂಡರು ಧರ್ಮದಿಂದ |
ಯೆಷ್ಟು ಬಲಾವುಳ್ಳ ದಂಡ ಇವರ ವಾಕ್ಕೆ||ಯೇರ||

ಮುಟ್ಟಿ ನಡುದು ಇವರ‍್ಹೆಳಿದಂತೆ |
ಬೆಂಕಿ ಹಾಯೆಂದ್ರ ಅಗ್ನಿಯೊಳ್ಬೀಳುರಂತೆ ||
ಬಾಳ ಬರಸ ಯಾರ‍್ಯಾರಿಗೆ ಲಣಿಯದಂತೆ ||
ಹಿಕಮತ್ತೆ | ನಡಸುರಂತೆ |
ಸಾರಿ ಪೇಳುವೆ ಸಭಿಯೊಳು ನಿಂತು ಮತ್ತೆ||ಇಳವ||

ಜಿದ್ದ ತೊಟ್ಟ ವೈರಿಗಳ ಯಲ್ಲಾ |
ವಬ್ಬ್ರವುಳಿಲಿಲ್ಲಾ |
ಪುಂಣೆದ ಬಲ | ಕಂಮ ಅವರಲ್ಲೆ |
ಹಾಂಗಂತ ಇರಲಿಲ್ಲ ಲೋಕದಲೆ |
ಇವರೇಕ ಛತ್ರಪತಿಯಾಗಿ |
ನಿಂತರ ಧರಣಿಗಿ |
ಅಳವ ಯೆಂದೆಂದಿಗಿ | ಇಲ್ಲ ಯೆಲ್ಲೆಲ್ಲಿ |
ಇವರೊಚನ ಆಗಲಿ ಕಿಲಕಾಲಿ||ಯೇರ||

ಸತ್ತೆಕರನ ಬೇಕ ಇವರ ಸರಿ |
ಇವರ ಹೊರ್ತ ಮತ್ತ್ಯಾರಿಲ್ಲರಿ||೩||

ಧರ್ಮ ಸಂಚೆರದ ಧನಿ ಇವರು |
ಲೋಕ ಜನದ ಮೇಲೆ ಬಲ ಪೇರು |
ಗಲ್ಲ ಟಾಪು ಚಳುವಗ ಯುಕ್ತಿಯ ಹೇಳಿ
ವುಳವಿಕೋ ಯೆಂಬುವರು |
ಲೋಕದ ತುಂಬ ಸಾಲಿ ಹಾಕಿದರು |
ವಿದ್ದೆ ದಾನಕ ನಿಂತಾರು |
ಸಣದು ದೊಡ್ಡದು ಗಂಡ ಹೆಂಣಿಗೆ
ಜ್ಞಾನಬೋಧ ಬಲ ಮಾಡಿದರು |
ಇವರ ಬಂದು ತರ್ಮ ಕಡದಾರು |
ಮನಿ ಪಾಳೆ ಕೊಡತಿದ್ದ ಬಿಡಸಿದರು |
ಬಹಳ ಆನಂದದಿಂದ ಇಟ್ರಿ
ತಂಮ ನಾಡನೆನಸಿಕೊಂತರೆ ಲೋಕದ ಜನರು||ಚ್ಯಾಲ||

ಲೈನ ದಾರಿ ಮಾಡ್ಯಾರೊ ಸುತ್ತು ಕಡಸಿ |
ಗಿಡಗಳ ಹಚ್ಯಾರ ಯಡಬಲ ತರತರಶಿ |
ನೆರಳ ನೋಡಿ ಜನಕ ಬಂತ ಕೂಸಿ |
ನಿತ್ತೆ ವುಣತರ ಇವರಂನ ನೆನನೆನಸಿ |
ವೂರುರಿಗೆಲ್ಲಾ ಕೆರಿ ಭಾಂವಿಗಳ ಕಡಸಿ |
ಅಲ್ಲೆ ಮಟ ಮಾನೆ ಗುಡಿಯಂಗಳ ಕಟಸಿ |
ಮೈಲಿ ತಗಸಾಕ್ಹಚ್ಚೆರ ತಿಳದ ಸೋಸಿ |
ಸಂಣ ಸಂಣ ಹುಡಗರಿಗೆ ಮಾಡದೆ ಸ್ವಲ್ಪ ಘಾಸಿ||ಯೇರ||

ಪುಂಣೆ ಬಾಳ ಜೋರತ್ತ ಇವರದು |
ಅಂನೆ ಅಂಬುದು ಸ್ವಲ್ಪ ಮಾಡುದಿಲ್ಲ |
ಸಣದು ದೊಡದು ಸಂವನಾಗಿ ನೋಡತರ |
ದನಿಕರ ಅಂತನ ಬೇಕ ಇವರಿಗೆ |
ಮುನ್ನ ಮತ್ತ ಯಾರ‍್ಯಾರು ಅಳಕಿಲ್ಲವರ |
ಸಂನಿಧಾನದೋಳಿರವು ಜನರು |
ಕುಲಕರ್ಣಿ ಗೌಡ ಕಾರ್ಕುನರು ವಕೀಲರು |
ಪುಂಣೆ ವುಂಣತೇವಂತರಿವರದು |
ಇಂನು ಸಾರುವದು ಅಳತಿ ಇಲ್ಲ ಬಲು |
ಹೊನ್ನ ದ್ರವ್ಯ ಹಾಕಿದರು ಲೋಕದಲಿ |
ಧಂನೆವಂತ್ರ ಅನಬೇಕ ಇವರಿಗೆ||ಯೇರ||

ಈಂನ್ಯಾತ್ಯಾತ್ರ ವಳಗಾದ್ರು ತಗುಹಾಂಗಿಲಾ |
ಹೀಂಗ ಲೋಕವು ಯಾರ‍್ಯಾರು ಅಳಿದ್ದಿಲ್ಲಾ |
ಸರ್ವ ಮಾತಿಗಾದ್ರು ಯೇನು ಕಡಿಮಿ ಇಲ್ಲ |
ಜನರೆಲ್ಲಾ | ಅಂತರಲ್ಲಾ |
ಸುಖಿಯಾಗಿ ಅದೆವು ಇವರ ಬಲದ ಮೇಲಾ||ಇಳವ||

ಈ ದರ್ಬರಿರಲಿ ಬಹುದಿನಾ |
ಇದರ ಹೊರತೆನ | ಬ್ಯಾಡೊ ಭಗವಾನಾ |
ನಡಸಿ ಕೊಡಸೀನ |
ಲಾಲಿಸೊ ಗುರುವೆ ವಚನವನ |
ಪುಂಣೆ ಬಾಳ ಇವರ ಹಂತೆಕ |
ಅಳಲಿ ಲೋಕ | ಇರಲಿ ಕಡಿತನಕಾ |
ಹಾಕಿ ಸಲವನ್ನ | ರಕ್ಷಣೆ ಮಾಡುವಂವ ನೀನಾ||ಯೇರ||

ಸೂರ್ಯ ಚಂದ್ರ ಇರುತನಕನರಿ |
ಇವರ ಮ್ಯಾಗ ಬರಬರದೊರಿ||೪||

ಇಂಗ್ರೆಜಿ ಶಾಣೆ ತಾನೆ ಬಲಾ |
ಇವರ ಯುಕ್ತಿಗೆನ ಕಡಿಮಿಲ್ಲಾ |
ಬಹಳ ಪ್ರಕಟವಾಗಿ ತುಮ
ಶಹಣೆತನ ತೋರ‍್ಸಿಬಿಟ್ಟರೊ ಜನಕೆಲ್ಲಾ |
ತರತರದರಿಬಿ ಸಕಲತಿ ಸೇಲಾ |
ಅಚ್ಚಿನರಿಬಿ ಮೇಲೆ ತೊಡು ಜ್ಯಾಲಾ |
ದಿವ್ಯಾಜ್ಞಾನದ ದೀಪದ ಕಡ್ಡಿ
ಮಾಡಿಬಿಟ್ಟರ ಹೆಚ್ಚಿನ ಅಕಲಾ
ಅಗಿನಗಾಡಿಗೆ ಮೊಹಲಿಲ್ಲಾ |
ಯೆತ್ತು ಕುದರಿ ಅದಕ ಬೇಕಿಲ್ಲಾ |
ಕ್ಷಣದೊಳು ಹಂನೆರ್ಡ ಗಾವದ್ಹೊಗತತಿ
ಗಾಳಿಕಿಂತ ಹೆಚ್ಚಾತೆಲ್ಲಾ||ಚ್ಯಾಲ||

ಜೋಡ ತಂತಿ ನಡಶಾರು ಬಹುದೂರ |
ಕ್ಷಣದೊಳು ಹೋಗಿ ಬರವುದು ವೂತ್ತರ |
ಕಡಿಮಿ ಇಲ್ಲೊ ಇವರ ಹೂನಾರಾ |
ಹಿಂದಕು ಮುಂದಕು ಮಾಡಿದ್ದಿಲ್ಲೊ ಯಾರಾ |
ನೂಲ ಹುಟ್ಟಶರು ವೊಂದೊಂದು ತರತರ |
ಹಸರುಕೆಂಪ್ಹಳದಿಬಿಳದು ಹಂಟಸವರ||ಯೇರ||

ಮತ್ತ ಮಾಡಿದರ ಕಬ್ಬಿಣ ಸಾಹಿತ |
ಗೊತ್ತ ಇಲ್ಲದ ಹುಂನಾರ ತರತರ |
ಹತ್ತುವ ಚೆಕಡಿ ಬಂಡಿಯ ಗಾಲಿಗೆ |
ಸುತ್ತು ಕಬ್ಬಿಣದ ಪಟ್ಟಿ ಇಂಗ್ರಜಿವು |
ಮತ್ತು ಸಳ್ಳಜಿನ ಗುಟ್ಟು ಪರಿಪರಿ |
ಗೊತ್ತ ಇಲ್ಲದ ಕೀಲಿ ಹುಟಸುವರ |
ನಿತ್ತೆ ರುಪಾಇ ರೊಕ್ಕಾ ಭಂಗಾರ ಹುಟ್ಟಸುದು |
ಹತ್ತು ಲಕ್ಷ ವಂದ ಕ್ಷಣದೊಳಗಾಗುದು |
ಬಿತ್ತಿ ಬಿಟ್ಟರೊ ತಂಮ ದೇಶದ ಮೇಲೆ |
ಹೊತ್ತ ನೋಡುವ ತಾಸು ಗಡ್ಯಾಲ ಗಣತ |
ಗೊತ್ತ ಮಾಡಿ ಹರವಿದರು ಲೋಕದ ಮೇಲೆ |
ಚಿತ್ತ ಇಟ್ಟ ನೀವ ಕೇಳರೀಗ||ಯೇರ||

ಮತ್ತು ಹಳತೆವು ಯೇನೆನ ವುಳಿಯದ್ಹಾಂಗ |
ಮಾಡಿ ಇಟ್ಟರೊ ಹೇಳಿದರ ತೀರದ್ಹಾಂಗ |
ಬಾಳ ಶ್ರೇಷ್ಟವಂತರು ಅಷ್ಟು ರಾಜರೊಳಗ |
ಯಾಂವ್ಯಾಂವಗ | ತಿಳಿಯದ್ಹಾಂಗ |
ಮಾಡಿ ಇಟ್ಟರು ಯೆಂದೆಂದಿಗೆ ಬಾರದ್ಹಾಂಗ||ಇಳವ||

ಬ್ಯಾರೆಬ್ಯಾರೆ ಇವರ ಹುಂನರ |
ಮಾಡೆರ ತರತರ | ದಾಂವತಿಲ್ಲ ಜರ |
ಇವರ ಕೆಲಸಕ್ಕ | ಬುದ್ಧಿಂತ ಹಿರುತರ ರೊಕ್ಕಾ |
ತಿಳಿಗೊಡಂದಿಲ ಈ ಜನರಿಗೆ |
ಹೀಂಗ ಯಾರಿಗೆ | ಬಾರ‍್ದ ಯೆಂದಿಗೆ |
ಹಿಂತ ಕವತೂಕಾ | ಹೆಚ್ಚಿಂದ ಆತಿ ಇವರ ಬೆಳಕ||ಯೇರ||

ಅಕಲತ ಗುರು ಹೊಂಟ್ಹಾಂಗ ಜರಿ |
ಖರೆ ಮಾತ ಇದ ಸುಳ್ಳಲ್ಲರಿ||೫||

ನರಮನುಷರ ಇವರಿಗನಬಾರದು |
ಸಾಕ್ಷಾತ ದೇವಲೋಕದ ವರ‍್ಹವದು |
ಹಾಂಗ ಅಂತ ಅಗಾದ ಹುನಾರಾ
ಮಾಡತಾರ ಯಾರಿಗೆ ಬಾರದು |
ರಾಟ ಮಾಡೆರ ಹತ್ತಿ ಅರವುವದು |
ನೋಡರಿ ನೀಗಿ ತಯಾರಿಂದು |
ರಥಾ ಯೇರಿ ಕುದರಿಲ್ಲದ ನಡಸತಾರ
ಯಾರ ಮಾಡಿದ್ರ ಹಿಂದ ಹಿಂತಾದ್ದು
ಮತ್ತು ಭೂಮಿ ಸಾಗ ಆಗುವದು |
ನೇಗಲ ಮಾಡೆರ ಹೆಚ್ಚಿಂದು |
ಯೆತ್ತ ಇಲ್ಲದ ಯಳಕೊಂಡ ಹೋಗಿ ನೆಲ
ಕಿತ್ತ ಬೀಳತತಿ ಗೊತ್ತಲ್ಲದು||ಚ್ಯಾಲ||

ತೊಲಿಕೊರವುದು ಮಾಡೆರು ತಯಾರ
ವಂದ ನಿಮುಷಕ ಆಗುವ ಐಸೂರ |
ಹಿಂತಾ ಜಿನ್ಸ ಮಾಡಿದ್ದಿಲ್ಲೊ ಯಾರಾ |
ಹಿಂದಿನವರಿಗೆ ಅನಬಾರ್ದು ಸತ್ತೆಕರ |
ದೊಷಾರದಲ್ಲೆ ಅರ್ಜುನ ರಣಸೂರಾ |
ಅಂತ ಹೆಳತಾವು ಪುರಾಣ ಶಾಸ್ತರ||ಯೇರ||

ಮುಂದ ಸಮೂದ್ರಕ ಸೇತು ಕಟ್ಟಿದ ಬಾಣ |
ದಿಂದ ಅವನ ಸಾಮರ್ತ ಹೆಚ್ಚಲಿಲ್ಲ |
ಹಿಂದು ರಾಮ ಕಟ್ಟಿದನು ಗುಡ್ಡಕ ಗುಡ್ಡ ಹೊಂದಿಸಿ ಸೇತುಕಟ್ಟೆ ಅಚಿಕ ದಾಟಿದನು |
ಚಂದದಿಂದ ನೀವ ನೋಡರಿವರು ಹೆ |
ಚ್ಚಿಂದು ಆಗ ಬೊಟಾ ಮಾಡಿ ಸಮುದ್ರದಲಿ
ಇಂದು ಪರಿಯಂತ್ರ ನಡಸುವರು ನೀರಮೇಲೆ |
ಹಿಂದಿನವರಕಿಂತ ಹೆಚ್ಚ ಇವರ ಬಲ |
ಯೆಂದೆಂದಿಗೆ, ಇವರ ಸರಿಯ ಅವರ ಅಲ್ಲ
ಮುಂದ ಮತ್ತ ಇಂನ್ಯಾರು ಹುಟ್ಟಾಕಿಲ್ಲಿವರು |
ಬಂದ್ರ ಅಚಕ ರಾಮಂದ ಶೈನ ಆಗಿ |
ಚಂದದಿಂದ ಇವರಿದ್ರ ಪೂರ್ವದಲಿ |
ಮುಂದ ರಾಮಾವತಾರ ಸಮಾಪ್ತವಾಗ್ವಗಿವ||ಯೇರ||

ರುದ್ರ ನಮಗ ಯೇನ ಕೊಡತಿರಂತ |
ವರವ ಬೇಡೆರು ರಾಮನ ಇದರ ನಿಂತ |
ಯಂನ ಸುತರೆಂದು ತಿಳಿದಳಾವಾಗ ಸೀತಾ ||
ಕರುಣ ಪೂರ್ತಾ | ಇಟ್ಟ ಚಿತ್ತಾ |
ಬಾಳೆ ಆನಂದದಿಂದ ಯೆತ್ತಿ ಇಟ್ಟರ‍್ಹಸ್ತಾ||ಇಳವ||

ವಾಕ್ಕೆ ಕೊಟ್ಟ ರಾಮ ಭೂಪತಿ |
ಯೇಕ ಛತ್ರಪತಿ | ಆಗರೆಂತ ಪೂರ್ತಿ |
ಹೊಂಟಿತೊ ವಚನಾ |
ರಾಮವಾಖ್ಯ ಸುಳ್ಳಾಗುವದೇನ |
ಹಾಂಗಂತ ಆಳತರ ಲೋಕ |
ಸ್ವಲ್ಪ ಯಾತೆತಕ | ಹಚಿಕೊಳದಸೇಕ |
ಆಳತರ ಭುವನ |
ಯೆಷ್ಟ ಹೇಳಿದ್ರ ತೀರದಿವರ ವರ್ಣ||ಯೇರ||

ಯೆಂದೆಂದಿಗೆ ಇವರಿಗೆ ಆಳವಿಲ್ಲರಿ |
ಬಾಳ ಇವರ ಪುಂಣೆದ ಜೋರಿ||೬||

ಇಂಥದರ ಬರ ಇರಲೇಕಪತಿ |
ಲೋಕ ಜನರ ಹಿಂಗ ಅಂತತಿ |
ಈಗ ವಿಕ್ತೊರಿಯೆಂಬು
ಮಹಾರಾಣಿಯವರ ಗಾದಿ ಹೆಚ್ಚಿಂದತಿ |
ಅವರಿಗೆ ಇರಲಿ ಬಹುಶಾಂತಿ |
ನಡಸಿಕೊಡೊ ಗುರುನಾಥ ಪತಿ |
ಹರುಷದಿಂದ ಅವರಿದ್ರ
ಲೋಕಕ ಬಾಳ ಶಾಂತವಾಗಿರತತಿ |
ಗುರುವೆ ಕೊಡೊ ಇವರಿಗೆ ಶಾಂತಿ |
ದಯಾ ಇರಲಿ ನಿಂದ ಬಾಳೆ ಪ್ರೀತಿ |
ಇವರ ಮೇಲೆ ಬಂದ ವೈರಿಗಳ
ಹಂಮ ಮುರುಹಾಂಗ ಕೊಡ ಸಾಮರ್ತಿ||ಚ್ಯಾಲ||

ನಿಂನ ಕರುಣವಿರಲೊ ಗುರುರಾಯಾ |
ಬೇಡಿದ ನಡಶಿಕೊಡೊ ಮಹಾರಾಯಾ |
ರಾಣಿಯವರ ಮೇಗಿರಲೊ ನಿಂನ ದಯಾ |
ಹೀಂಗ ನಡಸೊ ಇದರಂತ ಇಟ್ಟ ಮಾಯಾ |
ಗುರುನಾಥಾ ಜೊಡಸುವೆನು ಕಯ್ಯಾ |
ಯಂನ ವಚನವು ಲಾಲಿಸಿ ಮಾಡೊ ಸೋಯಾ||ಯೇರ||

ಕಂತುಹರನೆ ಹೀಂಗ ನಡಿಲಿ ಇವರ ಶಕ |
ನಿತ್ತೆ ಕಾಲದಲಿ ನೆನಸು ಹಾಂಗ ಜನ |
ಅರ್ತಿಲಿಂದ ದಿಗ್ಗದೇಶನಾಳಲಿ |
ಮತ್ತು ಯಾರ ಇಂನಿವರ ಮೇಲೆ |
ವೈರೆಂತು ಬಾರದ್ಹಾಂಗ ಕರುಣವಿರಲಿ ನಿಂದ
ಚಿಂತಿಯಲ್ಲ ಮನದಂದ ಬಿಟ್ಟ ಬಹು |
ಶಾಂತದಿಂದ ಈ ಲೋಕನಾಳಲಿ ಆ |
ನಂತ ಕೋಟಿ ಕೋಟ್ಯಾಂತ್ರ ವರುಷ ದಿನ |
ಅಂತು ಪಾರವಿಲ್ಲದಲೆ ಗುರುವೆ
ನೀನಿಂತು ಯಾ ಹೊತ್ತು
ನೀ ಇವರ ಬೆಂನಮೇಲೆ |
ಹೆಂತೆಂತಾದ ಬಂದದ್ದ ಮಾರಿಯಲ್ಲ |
ಗೊಂತು ಇಲ್ಲದ ಕೇಡಾಗಿ ಹೋಗಲಿ |
ಇವರ ನಿಂತ್ರ ರಣಾಗ್ರಕ ಬಲ್ಮಿ ಕೊಡೊ |
ಹೀಂಗಂತ ಬೇಡಿಕೊಂಬುವೆನು ನಿನಗ ನಾ |
ಯೆಂತು ಪೇಳಲಿ ಗುರುವೆ ಇವರ್ಗೆ||ಯೇರ||

ನೀನಿಂತು ಆಸರವಾಗಿ ಬೆಂನಮೇಲೆ |
ಕೊಡೊ ಜೈಸು ಹಾಂಗ ಯೆಲ್ಲಿ ಬೇಕಾದಲ್ಲಿ |
ಯಲ್ಲಾ ಸ್ವಾದಿನ ಇರಲಿ ಈವರ ಕೈಲಿ |
ಅಗಲಿ | ಜಗದ ಕೀಲಿ |
ಸರ್ವಲೋಕ ಇರಲಿ ಇವರ ಆಜ್ಞದಲಿ||ಇಳವ||

ವಿಕ್ತೊರಿಯ ಯಂಬ ರಾಣಿ ವಚನ |
ನಡಶಿಕೊಡ ನೀನ | ಸರ್ವ ಲೋಕವನ |
ರಕ್ಷಣೆ ಮಾಡುವರು |
ಲೋಕ ಜನರ ಮೇಲೆ ಬಲಪೇರು |
ವೂರ ಬೈಲಹೊಂಗಲ ಟೀಕಣ |
ಅಪ್ಪು ದ್ಯಾಮಣ | ಕವಿತದಲಿ ಪೂರ್ಣ |
ಸೂರಿ ಮಾಡುವರು |
ಬಾಳ ಸ್ವಛ ಜ್ಞಾನ ತಿಳದವರು||ಯೇರ||
ಪರ‍್ಸ ರಾಮನರಶಿಂಗ ಹೆಳತಾರರಿ |
ಧನಿ ಇಂಗ್ರಜಿ ಕರ್ತುಕ ಸಾರಿ||೭||

ಕವಿ : ದ್ಯಾಮಣ್ಣ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು