ಎಂದೆಂದೂ ಹಿಂದ ಮುಂದ ಆಗದಂಥಾದ್ದು ಆಗಿ ಹೋತು
ದೇಶದೊಳಗೆ ರಾಮದುರ್ಗ ದುರಂತ

ಜಲ್ಮ ಘಾಸಿಯಾಗಿ ಹೋದ್ರು ಆಗಲಿಲ್ಲ ಮಾಹಿತ
ನಿರಾಸೆಯಿಂದ ಪ್ರಾಣದಾನ ಕೊಟ್ಟ್ರು ಸ್ವತಃ
ದೇಶಭಕ್ತರನ್ನು ಒಯ್ದು ಪಾಶೇಕ ಹಾಕಿಕೊಂದ ಕಥೆ
ಧ್ಯಾಸ ಇಟ್ಟು ಕೇಳಿರೆಪ್ಪ ಈ ಮಾತ ಕಾಲ ವಿಪರೀತ

ಬಂದದ್ದೆಲ್ಲ ಬರಲಿ ನಾವು ಹಿಂದ ಇರತೇವೆಂತ
ಹೇಳಿ ಚಂದವಾಗಿ ಬೋಧ ಮಾಡಿ ನಾನಾ ತರ
ಹಳ್ಳಿ ಮಂದಿಗೆಲ್ಲ ಹುರುಪ ಹಾಕಿ ಬೆರಕಿಯವರ
ಬಾಳ ತೊಂದರೆಗೆ ಹಾಕಿದಾರ ಮೋಸದಿಂದ ಪೂರ
ಭಲಲಲ ಶಹಬಾಶ್ ಎಂದು ಹೊಲ್ಯಾನ ಉಬ್ಬಿಸಿ ಕೊಳ್ಳಕ ಹಾಕಿ
ಮಲವಿನೊಳು ಹಾಕಿದಾರ ಬಿಲಗಾರರ ಇವರು ನೆಲೆಹೀನರ

ರಾಮದುರ್ಗ ಸಂಸ್ಥಾನ ಮೂವತ್ಮೂರು ಹಳ್ಳಿಯವರು
ಸಾವಧಾನದಿಂದ ಸಣ್ಣ ದೊಡ್ಡವರ
ಶಾಂತಿಯಿಂದ ಚಳವಳಿ ನಡೆಸಿದರ ಜೋರ
ಕ್ರಾಂತಿಕಾಲ ಬಂತ ತಿಳಿಯಲಿಲ್ಲ ಹುನ್ನಾರ
ಪಂಚ ಪಿತೂರಿಗಾರರು ಕೂಡಿ ಹೊಂಚುಹಾಕಿ ಒಳಗಿಂದೊಳಗ
ಸಂಚುಮಾಡಿ ಕೆಡಸಿದಾರ ವಂಚಕರ ಆತ್ಮಘಾತಕರ
ಸತ್ಯವಂತ ಪ್ರಜಾಸಂಗ ಅತ್ಯಾಚಾರ ಮಾಡಿತ್ತೆಂದು
ಯುಕ್ತಿಯಿಂದ ಖಟ್ಲೆ ಹಾಕಿ ಸರಕಾರ
ಮುಖ್ಯ ತತ್ವ ಚಳವಳಿ ಮುರಿಸುಗೋಸ್ಕರ
ಬಂದೋಬಸ್ತ ಸಾಕ್ಷಿಗಳು ನಾನಾ ಪ್ರಕಾರ
ಮಿಲ್ಟ್ರಿ ಮತ್ತು ಪೋಲಿಸರ ಪಲ್ಟಣದ ಗುಂಪ ನೋಡಿ
ಭಯಗೊಂಡ ಎಲ್ಲ ಹಳ್ಳಿಗಳ ಜನರ ಹಾಕತಾರ ಉಸರ

||ಚ್ಯಾಲ||

ಊರ ಮನಿ ಬಿಟ್ಟ ಓಡಿದಾರ ವಸ್ತಿ ಮಾಡ್ಯಾರ ಪರ ಊರಿಗೆ ಹೋಗಿ
ನಜರಿಗೆ ಬಿದ್ದವರನ್ನು ಓದ ಕಟ್ಟ್ಯಾರ ಚಾವಡೀಗಿ

ತಪ್ಪು ಇಲ್ಲದವರು ಕೆಲವರು ಸಂಭಾವಿತ ಜನರು ನಡುಗಿ ಘಾಬರಿ ಆಗಿ
ಹುಲಿಬಾಯೊಳು ಕುರಿಮರಿ ಸಿಕ್ಕ್ಹಾಂಗ ಆದೀತು ಹೋ

ನೂರಾರು ಮಂದೀನ್ನ ಹಿಡದ ಕೆಡವಿದಾರು ಬಡದ ಸುಳ್ಳ ಗುದಮುರಗಿ
ನ್ಯಾಯ ಅನ್ಯಾಯ ವಿಚಾರ ಇಲ್ಲ ಜೋರ ವಾರಂಟ ಎಲ್ಲಾರಿಗಿ
ಅತ್ತೆ ತಪ್ಪ ಮಾಡಿದ್ರ ಸೊಸಿ ಮ್ಯಾಲ ಕೇಳಾವ್ರ ಯಾರ ಇಲ್ಲ ರಾಜರ ಕಡಿಗಿ

ಎಷ್ಟ ತಪ್ಪ ಇದ್ದರೇನ ಗಟ್ಟಿಗ್ಹಚ್ಚವರಿಲ್ಲ ಹೋಗಿ
ನ್ಯಾಯ ಅನ್ಯಾಯ ವಿಚಾರವನ್ನು ಯಾರು ಮಾಡುವವರಿಲ್ಲ
ಏಕದಂ ಆರೋಪ ಪ್ರಜಾಸಂಗದ ಮ್ಯಾಲ
ಬಾಳ ಪಸಂದಾದೀತಂತ ಪೋಲೀಸರ ಒಗದಾರ ಜಾಲ
ಕಾಂಗ್ರೆಸ ಮುಖಂಡರನ್ನ ತಂದ ಹೊಗಿಸಿದಾರ ಜೇಲ

ದಯಾಮಯಾಮೂರ್ತಿ ರಾಜಾ ಸಾಹೇಬರಿಗೆ ಹೇಳೆಗಿಲ್ಲ
ಇಲ್ಲದಗಿಲ್ಲಾ ಹೇಳಿ ಕೆಡಿಸಿ ಇಟ್ಟಾರ ಇದನೆಲ್ಲ

ಒಟ್ಟಿಗೆ ಹೇಳೂದೇನ ಬಂದಿತು ವಿನಾಶದ ಕಾಲ
ವೀರ ಧೀರ ಧೈರ್ಯವುಳ್ಳ ದೇಶಭಕ್ತರ ಮ್ಯಾಲ

||ಏರು||

ಸ್ವಾರ್ಥ ತ್ಯಾಗ ಮಾಡಿದಂಥ ಸತ್ಯವಂತ ಕಾಂಗ್ರೆಸ್‌ದ
ಕರ್ತರಿಗೆ ಬಂತ ಅಪಮಾನದ ಹೊತ್ತ
ನಾವು ಮರತೇವಂದ್ರ ಮರೆಯದಂಥಾ ವೃತ್ತಾಂತ
ಇದು ಭರತಖಂಡದಲ್ಲಿ ಉಳದೀತ ಗುರ್ತ
ದೇಶಭಕ್ತರನ್ನು ಓದು ಪಾಶೇಕ ಹಾಕಿ ಕೊಂದ ಕಥಿ
ದ್ಯಾಸ ಇಟ್ಟ ಕೇಳಿರಪ್ಪ ಈ ಮಾತ ಕಾಲ ವಿಪರೀತ||೧||

ದಾವರರ ಕೋರ್ಟಿನೊಳು ದಾದ ಇಲದೆ ಸುಳ್ಳ ಹೇಳಿ
ಸಾಧಿಸಿಕೊಂಡಾರ ತಮ್ಮ ಅದಾವತಿ
ಸತ್ಯ ಧರ್ಮ ವ್ಯಕ್ತಿಗಳ ಜಲ್ಮ ಆತಿ ಹತಿ
ಪ್ರಜಾಸಂಗದಲ್ಲಿ ಉಳಿಯಲಿಲ್ಲ ನಿಜಶಕ್ತಿ
ಚೆನ್ನಾಗಿ ಬೆಳೆದ ಕಬ್ಬ ಗಾಣಕ ಹಚ್ಚಿದ್ಹಾಂಗ ಆತಿ
ಗೋಣ ಕೋದಾರೆಂಬುದಾಗಲಿಲ್ಲ ಮಾಹಿತಿ ಘಾತ ಆಗಿ ಹೋತಿ
ಮೆಹರಬಾನ ದಾವರರು ಶ್ಯಾರ ರಾಮದುರ್ಗಕ ಬಂದು
ಸಾರೋದ್ಧಾರ ತಕ್ಕೊಂಡಾರ ಎಲ್ಲ ಮಾಹಿತಿ
ಇಲ್ಲಿ ಘೋರ ದುರಂತದ ವಿಚಾರ ನಡೀತ
ಕಾಯ್ದೆಶೀರ ಸಾಕ್ಷಿ ಬೇಡಿದಾನ ನ್ಯಾಯಮೂರ್ತಿ
ಏಕ ಪಕ್ಷದಿಂದ ಸಾಕ್ಷಿ ಬೇಕಾದಷ್ಟು ಹೇಳಿದಾರ
ಪ್ರಜೆಗಳ ಮ್ಯಾಲ ಕೊಟ್ಟ್ರ ಅಪಕೀರ್ತಿ ಹೊರಿಸ್ಯಾರ ಪೂರ್ತಿ

||ಚ್ಯಾಲ||

ಕಾಂಗ್ರೆಸ ಮುಖಂಡರು ನಿಂತ ಸಾಧಿಸಿ ತಮ್ಮ ಪಂಥ ಬದಲಿಸಿ ಬಣ್ಣ
ನಿಂತ ಜವಾಬ ಕೊಟ್ಟಾರ ಪೂರ್ಣ
ಪ್ರಜಾಸಂಘದಲ್ಲಿ ಇದ್ದಾವ್ರ ಬಿಟ್ಟು ಹೋದ್ರು ದೂರ ಅಡಗಿಕೊಂಡ ಜನ
ಹೇಳಿದಂತೆ ಕೇಳ್ತೇವಂತ ಬರೆದುಕೊಟ್ರ ಲೇಖಿಯನ
ಪ್ರಜಾಸಂಘದೊಳಗ ಮಂದಾದ ಮಂದಿನ್ನ ಹಿಡಿದ ಮಾಡಿದಾರ ಸಣ್ಣ
ಕೊಟ್ಟಾರ ಘೋರ ಶಿಕ್ಷೆಯನ
ಹಿಂತಾವ್ರ ಆರೋಪಿಗಳು ಅಂತಾ ಹುಕುಮಾತಿ ತುರ್ತ ಮಾಡೋದಿನ್ನೇನ
ಮಹಾರಾಜಸಾಹೇಬರು ನೋಡಲಿಲ್ಲ ತೆರೆದ ಕಣ್ಣ
ಅತ್ತಿಯವರ ಸೇಡ ಬಚ್ಚಲದಾಗ ಹೇಳತಾರ ಹೀಂಗ ಹಿರ‍್ಯಾರು ವಚನ
ಸುಳ್ಳ ಆಗಲಿಲ್ಲ ಪ್ರತ್ಯಕ್ಷ ಕಂಡೀವ್ರಿ ಇದನ

||ಪದ||

ಮುಖ್ಯ ಆರೋಪಿಗಳು ಹನ್ನೊಂದು ಮಂದಿಯೆಂದು ನಿಶ್ಚೈಸಿ
ಗಲ್ಲಿಗೆ ಏರಿಸುವ ಹುಕುಂ ಮಾಡ್ಯಾರು
ಹಿಂಡಲಗಿ ಜೇಲಿನ ಮುಖ್ಯ ಅಧಿಕಾರಿಗಳಿಗೆ ತಿಳಿಸಿದರು
ಆರೋಪಿಗಳ ಬಂಧು-ಬಾಂಧವಾದಿಗಳಿಗೆ ಆದ ಸುದ್ದಿ ಕಳಿಸಿದರು ಖೇದಗೊಳಿಸಿದರು
ಅಸಂಖ್ಯಾತ ಜನರು ಹಿಂಡಲಗಿಗೆ ಹೋದರು
ದರ್ಶನಾರ್ಥವಾಗಿ ಆಶಿಸಿ ನಿಂತಿದ್ದರು
ಆ ಕಾಲಕ್ಕೆ ಆರು ಮಂದಿಯಲ್ಲಿ ಮುಖ್ಯಸ್ಥನಾದ ಬಸಪ್ಪ ಎಲಿಗಾರ ಈತನು
ಬಂದ ಜನರಿಗೆ ವಂದಿಸಿ ವಿನಯದಿಂದ ಹೇಳಿದ ಸದ್‌ಬೋಧ
||ಅಡಪದ||ನಂದದಿಂದಲಿ ಕೇಳಿರಿ ಪ್ರಿಯ ಬಂಧುಗಳೆಲ್ಲರು
ಇದು ಪ್ರೇಮ ಪ್ರಜಾವೃಂದ ಸಮಾಜಕ್ಕೆ
ಮುಂದೆ ಆದ ಕಥೆ ವಂದಿಸಿ ಹೇಳುವೆ
ದ್ವಂದ್ವಭಾವನ ದೂರಮಾಡಿ ನೀವು
ಒಂದೆ ಮನಸ್ಸಿನಿಂದ ಹೊಂದಿ ನಡೆಯಿರಿ

ಜಾತಿ ಬೇಧವನ್ನು ಅಳಿಯಿರಿ ನಿಜ ನೀತಿಯ ತಿಳಿಯಿರಿ
ನಾಸ್ತಿಯಾಗುವ ಅಸ್ಥಿರ ದೇಹದ
ಆಸೆಯಿಲ್ಲದೆ ಶಾಂತಿಯಿಂದಲಿ
ಶಿಸ್ತಿನಿಂದ ನಾವು ಸುಸ್ಥಿರ ಮೋಕ್ಷದ
ರಸ್ತಾ ಹಿಡಿದು ಸ್ವರ್ಗಸ್ಥರಾಗುವೆವು

ಜೀವದಾನವನು ಕೊಡುವೆವು ಭೂದೇವಿಯ ಪಾದಕೆ
ಸತ್ತರೆಂದು ನೀವು ಅತ್ತರೇನು ಫಲ
ಅರ್ಥಿಯಿಂದ ದೇಶಭಕ್ತರಾಗಿರಿ
ಮಹಾತ್ಮನು ಹೇಳಿದ ಸತ್ಯ ಅಹಿಂಸಾ
ತತ್ವಪಾಲಿಸಿ ನೀವು ಚಳವಳಿ ನಡೆಸಿರಿ

||ಏರು||

ನಾವು ಸತ್ತ ಹೋದ ಮ್ಯಾಲ ಕೂಡಬೇಡಿರೆಪ್ಪ ಸ್ವಸ್ಥ
ನಿರುಪಾಯರಾಗಿ ಕೊಡಬೇಡಿರೆಪ್ಪ ಸ್ವಸ್ಥ
ಏಕೀಕರಣ ಮುರದ ಹೋದ್ರ ಅಗತದ ಘಾತ
ನಾವು ಹೋಗತೇವ ಇದೇ ನಮ್ಮ ಕಡೀ ಮಾತ||೨||

ಬಲಶಾಲಿ ಬಹಾದ್ದೂರ ಎಲಿಗಾರ ಬಸಪ್ಪನು
ಕಿಲಕಿಲಿ ನಗತಾನ ಗುಣವಂತ
ಸಾವುತೇನಿ ಎಂಬ ಭಯ ಇಲ್ಲ ಇದ್ದ ಶಾಂತ
ಆತ್ಮಬಲಿ ಕೊಡಲಿಕ್ಕೆ ಸಿದ್ಧನಾಗಿ ನಿಂತ
ಬಂಧು-ಬಳಗಕ್ಕೆಲ್ಲ ನಿಂತ ಚಂದವಾಗಿ ಹೇಳತಾನ
ನಂದದಿಂದ ಇರಹೋಗ್ರಿ ನಕ್ಕೊಂತ ಅಳಬ್ಯಾಡ್ರಿ ವ್ಯರ್ಥ

ನಿರ್ಮಲಾಗಿ ನಿತ್ಯದಲ್ಲಿ ಓಂ ನಮಃ ಶಿವಾಯ ಎಂದು
ನಾಮವನ್ನು ಭಕ್ತಿಯಿದ ಭಜಿಸುತ
ನೀವು ಬೇಡಿಕೊಳ್ಳಬೇಕ ಮುಕ್ತಿ ಆಗಲೆಂತ
ಒಳ್ಳೆಯ ಧೈರ್ಯದಿಂದ ಮನೆತನ ಸಾಗಿಸುತ
ಹುಚ್ಚರಾಗಬ್ಯಾಡ್ರಿ ನೀವು ಎಚ್ಚರಕಿಲೆ ಇರಬೇಕ
ನಮ್ಮ ನಿಮ್ಮ ಋಣ ತೀರಿತ ಈವತ್ತ ಹೋಗತೇನಿ ಮರತ

ಹಿರೇಮಠ ಮಹಾಲಿಂಗಯ್ಯ ಪರಮಜ್ಞಾನಿ ಪಂಡಿತ
ಮರಗಲಿಲ್ಲ ಮನಸಿನೊಳು ಬಂದ ಸ್ವತಃ
ಭೆಟ್ಟಿಗೆ ಬಂದವರಿಗೆಲ್ಲ ನಮಸ್ಕರಿಸುತ
ನಾನು ಪರಲೋಕ ಯಾತ್ರೆಗೆ ಹೋಗುವೆನಂತ
ಶಾಂತಿಯಿಂದ ಶರಣ ಮಾಡಿ ಪ್ರಾಂತ ಮಾತೆಯ ಪಾದಕ್ಕೆ
ಆತ್ಮಬಲಿ ಕೊಡತೇನಿ ಈವತ್ತು ನಾನು ನಗುನಗುತ

||ಚ್ಯಾಲ||

ತೀರಲಿಲ್ಲೋ ಮನಸಿನ ಇಚ್ಛಾ ಬಂದಿತೋ ಪೇಚ ತಂದ ಗುರುರಾಯ
ನಮ್ಮ ಸಂಸ್ಥಾನ ಆಳೋ ಅರಸಗ ಬರಲಿಲ್ಲ ದಯಾ

ಮುಟ್ಟಿತೋ ಭೂಮಿಯ ರಿಣಾ ಇನ್ನೊಂದು ದಿನ ತೀರಿತೋ ಕ್ರಿಯಾ
ನಿಮ್ಮನ್ನಗಲಿ ಹೋಗತೀನ ಕಾಂಗ್ರೆಸ್ಸಕ್ಕಾಗಲಿ ಜಯ

ಭೂಮಾತೆ ನಿನ್ನಯ ಸೇವಾ ಮುಗೀತೇನವ್ವ ನೀಡೇ ನನಗೆ ಅಭಯ
ನಿನ್ನ ಮಡಲಿನೊಳಗ ಮರೆಯಾಗುವೆ ಹಿಡಿಯವ್ವ ಕೈಯ

ಧರ್ಮದ ಕಟ್ಟುಗಳು ಸಡಲಿ ಬಿದ್ದಿತೋ ಕೊಡಲಿ ಶಿರದಮ್ಯಾಲ ಘಾಯ
ಘಾಯವಾಗಿ ಜಲ್ಮ ಹೋಗುತದ ಇಲ್ಲ ಉಪಾಯ

ಸುರಿಸುವಿರಿ ಯಾಕ ಕಣ್ಣೀರ ಹಾಕಬ್ಯಾಡ್ರಿ ಉಸಿರ ತಾಳಬೇಕ ಧೈರ್ಯ
ಮನಿಮಂದಿಗೆಲ್ಲ ಹೀಂಗ ಹೇಳಿದ ಮಹಾಲಿಂಗಯ್ಯ

||ಚ್ಯಾಲ||

ಈ ಪ್ರಕಾರ ಭಕ್ತೀಲೆ ಮಾಡತಿದ್ದ್ರ ಶಿವಭಜನ
ಶಿವನಾಮ ಭಜಿಸುತ ಪ್ರೇಮದಿ ಕೊಡುವೆವು ಪ್ರಾಣ

ಈ ಪ್ರಪಂಚವೆಂಬುದು ಮಾಯಾ ಮೋಹದ ಗಾಣ
ಮರಣಾಗೂದು ತಪ್ಪಿಲ್ಲ ತಿರುಗತೈತಿ ಹತ್ತಿ ಬೆನ್ನು

ಜನಸೇವಾದಿಂದ ನಾವು ಕೃತಾರ್ಥರಾದೆವು ಪೂರ್ಣ
ಕಾಂಗ್ರೆಸ ಭಕ್ತರಿಗೆ ವಿನಯದಿ ಮಾಡತೇವ ಶರಣ

ಇಷ್ಟೆಲ್ಲ ಆದರೂ ಕುಂದಲಿಲ್ಲ ಮುಖ ಚಿಹ್ನೆ
ಮಹಾನಂದದಿಂದಲಿ ಹೇಳತಿದ್ದ್ರ ಉದಾಹರಣ

ಮಹಾಧೈರ್ಯಶಾಲಿಗಳ ಮ್ಯಾಲೆ ಮುನಿದ ಭಗವಾನ
ನಾ ಹೇಳಲಾರೆನು ದುಃಖದ ವರ್ಣ

ಬಂಧು-ಬಾಂಧವಾದಿಗಳು ಮಾಡತಾರ ರೋದನ
ಅಸಂಖ್ಯಾತ ದೇಶಭಕ್ತರಿಗೆ ಆದೀತ ವ್ಯಸನ

||ಏರು||

ಯೋಗಿಯಂತೆ ಕಂಡುಬಂದ ಜೋಗಿಯವರ ಗಿರೆಪ್ಪ
ರಾಗ ಭೋಗ ಭಾಗ್ಯದಲ್ಲಿ ಇಲ್ಲ ಚಿತ್ತ
ಅನುರಾಗದಿಂದ ಜಲ್ಮ ಕೊಡಲಿಕ್ಕೆ ನಿಂತ
ಸ್ವಾರ್ಥತ್ಯಾಗ ಬುದ್ಧಿಯಿಂದ ಆತ್ಮ ಅರ್ಪಿಸುತ
ಹರಗೋಲ ಪತ್ರೆಪ್ಪ ಇವನು ಮರಗಲಿಲ್ಲ ಮನಸ್ಸಿನೊಳು
ಕೊರಗಲಿಲ್ಲ ಪ್ರಾಣವನ್ನು ನೀಡುದಕ
ದೇಹ ಸೊರಗಲಿಲ್ಲ ಸ್ವರ್ಗವಾಸಿ ಆಗುದಕ
ಮನ ತಿರಗಲಿಲ್ಲ ಇಹಲೋಕದ ವಾಸನಕ
ಬಂಧು-ಬಳಗದ ಚಿಂತೆ ಇಲ್ಲ ಸಂದಿ ಹಾದಿಗಳು ಇಲ್ಲ
ವಂದಿಸಿದ ಬಂದಿರುವ ಸಮಾಜಕ ಭಕ್ತಿಪೂರ್ವಕ
ಹತ್ತೊಂಭತ್ತನೂರ ನಾಲ್ವತ್ತನೆಯ ಇಸ್ವಿ ಮೇ ತಿಂಗಳ
೬ನೇ ತಾರೀಖ ಸೋಮವಾರ ಉದಯಕ

ಶಿಲುಬೆಗೇರಿದಾರ ಅರಮಂದಿ ಆ ಕಾಲಕ
ಜೀವದಾನ ನೀಡ್ಯಾರ ದೇಶ ಉದ್ಧಾರಕ
ಸೂರ್ಯ ಚಂದ್ರರಿಗೆ ಬಂದ ಕ್ರೂರ ಗ್ರಹಣ ಹಿಡಿದ್ಹಾಂಗ
ಘೋರ ದುಃಖ ಅತಿ ಕರ್ನಾಟಕ ಅನಿವಾರ್ಯ ಶೋಕ
ಮಾನ್ಯವಂತ ಪುರುಷರಿವರು ಧನ್ಯ ಧನ್ಯ ಲೋಕದೊಳು
ಸೃಷ್ಟಿಯಲ್ಲಿ ದೃಷ್ಟಾಂತ ಕಡೀತನಕ
ರೆಕ್ಕೆ ಮುರದ ಹೋದ ಪಕ್ಷಿ ಬಿದ್ಹಾಂಗಾಗಿ ನೆಲಕ
ಮೃತ್ಯುಲೋಕ ಬಿಟ್ಟು ಹೋದ್ರು ಸತ್ಯ ಕೈಲಾಸಕ
ಸ್ವಾರ್ಥತ್ಯಾಗ ಮಾಡಿದಂಥಾ ಭಾರತ ಭಕ್ತರೆಲ್ಲ ಹೋಗಿ
ವ್ಯರ್ಥ ಕೈದಿ ಸೋಸಿದಾರೋ ಸುಮ ಸುಮಕ ದುರಂತ ಅದದಕ

||ಚ್ಯಾಲ||

ಮಹಾ ಪುಣ್ಯವಂತರು ಆಪತ್ತಿಗೆ ಅಂಜದೆ
ಜಯವೆಂದು ಜಯ ಘೋಷ ಸಾರಿದರು
ಸತ್ಯವಂತರ ಪ್ರಾಣ ಹತವಾಗುವಾಗ
ಪಾರ್ಥನ ತೆರನಂತೆ ಚೀರಿದರು
ಕೀರ್ತಿಯ ಮಾಲೆಯ ಕೊರಳಿಗೆ ಧರಿಸುತ
ಮುಕ್ತಿಯ ಸೋಪಾನ ಏರಿದರು
ಜನರೆಲ್ಲ ಕಣ್ಣೀರ ಸುರಿಸಿದರು
ಮರ್ಮವು ತಿಳಿಲಿಲ್ಲ ಕರ್ಮಕ್ಕ ಸರಿಲಿಲ್ಲ
ರಾಮದುರ್ಗದ ರಾಜೇಸಾಹೇಬರು
ಪ್ರಜಾಪಾಲಕನೆಂಬ ರಾಜನೀತಿಯ ಬಿಟ್ಟು
ಅನಿವಾರ್ಯ ದೋಷಕ ಗುರಿಯಾದರು
ರೊಖ್ಖದ ಬಲದಿಂದ ಮಿಲಿಟರಿ ಪಲ್ಟಣ ತರಿಸಿ
ಜನರನ್ನು ಪರಿ ಪರಿ ಕಾಡಿದರು
ದೋಷವಿಲ್ಲದ ನಮ್ಮ ದೇಶಭಕ್ತರ ಜಲ್ಮ
ಘಾಸಿಮಾಡುತ ಪಾಶೇಕ ಹಾಕಿದರು ನಿರ್ದಯ ರಾಮದುರ್ಗ ಯಜಮಾನರು

||ಚ್ಯಾಲ||ಖಾಸ ಸದ್ಗುಣವ ದೇಶಭಕ್ತರ ಕೊಲೆಯ ಆದ ವಿಸ್ತಾರ
ವಿಸ್ತರಿಸಿ ಹೇಳಲು ಕಣ್ಣಾಗ ಬರತಾವ ನೀರ
ಪೃಥ್ವಿ ಮುಳುಗುವ ವರೆಗೆ ಉಳದೀತ ವೀರರ ಹೆಸರ
ನರಜನ್ಮ ಧರಸಿ ಬಂದ ಸ್ವಾರ್ಥ ಹೊಂದಿದಾರ ಪೂರ
ಭೊಲೋಕ ಬ್ಯಾಸರಾಗಿ ಸೇರ‍್ಯಾರ ಕೈಲಾಸನಗರ
ಶ್ರೇಷ್ಠವಾದ ಕೀರ್ತಿಯಿಂದ ಬಿಟ್ಟಾರೋ ನರಶರೀರ

||ಏರು||

ಸೃಷ್ಟಿಯೊಳು ಹುಲಕುಂದ ಗ್ರಾಮ ಜಾಹಿರ
ಪಟ್ಟದ್ದೇವರು ಶಿವಲಿಂಗಕವಿ ಮಾಡ್ಯಾರು ಕವಿಚಾತುರ||೪||

 

ಮಾಹಿತ – ಮಾಹಿತಿ,  ಧ್ಯಾಸ – ಲಕ್ಷ್ಯ,  ಪಾಶೇಕ – ನೇಣು,  ಮಲವಿನೊಳು – ಬಲೆಯಲಿ

ಪಲ್ಲಣ-ಪ್ಲಟೂನ್ (Platoon), ನಜೂರಿಗೆ -ದೃಷ್ಟಿಗೆ, ಗುದಮುರಗಿ-ಗದ್ದಲ, ಏಕದಂ-ಒಮ್ಮಿಲೆ, ಪಸಂದ-ಹಿಡಿಸು, ಇಲ್ಲದಗಿಲ್ಲ-ಇಲ್ಲದ್ದೆಲ್ಲ

ದಾದ – ಲಕ್ಷಿಸು,  ಗಮನಿಸು,  ಅದಾವತಿ – ಹಗೆತನ,  ಹಲಿ – ನಾತಿ, ಹೋತಿ – ಹೋಯ್ತು, ನಡೀತಿ – ನಡೆಯಿತು, ಜವಾ – ಉತ್ತರ, ಹುಕುಂ – ಆಜ್ಞೆ

ರಿಣ – ಋಣ

 


ಕವಿ :
 ಶಿವಲಿಂಗಸ್ವಾಮಿ ಹಿರೇಮಠ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ