ಸಣ್ಣ ಮಾತ ಅಲ್ಲ ಕೇಳರಿ ಸನ್ ಹತ್ತೊಂಭತ್ತನೂರಾ
೪೨ನೇ ಇಸ್ವಿ ಬಂತ ಒದಗಿ
ನೌಕ್ರಿ ಜನರಿಗೆ ಬಂದೀತಾಗ ಬಾಳ ಬಿಗಿ
ಇನ್ನು ಹೇಳತೇನ ಕೇಳ್ರಿ ಆದಂತಾ ಬಗಿ ||
ಮೀರಿದ ಚಳವಳಿಯಾಗಿ ಸೂರಿ ಆತ್ರಿ ನಾಡಮ್ಯಾಗ
ಕುತ್ತ ಬಂದ ಕವದೀತ ಬ್ರಿಟಿಷರಿಗಿ
ಪೋಲೀಸ ಪಾರ್ಟಿ ಬರತಿತ್ತ ನಮ್ಮ ತಿಗಡೊಳ್ಳಿಗಿ ||

ಚಿತ್ತಗೊಟ್ಟ ಕೇಳಿರಿನ್ನು ಸುತ್ತ ನಾಡಾನ ಜನಾ
ಸತ್ತಾರ ಬಲುಮಂದಿ ಗುಂಡಿಗಿ
ತುತ್ತ ಆಗಿ ಹೋದ್ರ ಫೌಜುದಾರನ ಪಿಸ್ತೂಲಿಗಿ
ಬೈಲಹೊಂಗಲದಲ್ಲಿ ಹಾರಿತ್ರೆಪ್ಪಾ ಮದ್ದಿನ ಹೊಗಿ ||
ಜಯಭೇರಿ ನುಡಸುತ ಝೇಂಡಾ ಏರಸಾಕ ಹ್ವಾದ್ರ
ಜಡಾ ಬಂತ ದಡ್ಡಗೇಡಿ ಫೌಜದಾರಿಗಿ
ಗುಂಡ ಹೊಡದ ಬಿಟ್ಟ ಆಗ ಏಳ ಮಂದೀಗಿ ||

ಸತ್ತಾವರ ಮನ್ಯಾನ ಮಂದಿ ದಿಕ್ಕ ತಪ್ಪಿ ಕುಂತಾರ
ದುಕ್ಕಾ ಮಾಡತಿದ್ರ ಒಳ್ಳೆ ಮರಮರಗಿ
ದುಕ್ಕ ತಡಿವಲ್ತ ಬರತಿತ್ತ ಹೆಚ್ಚಾಗಿ
ಅಳುತ ಕುಂತಾರ ಕಣ್ಣೀರ ಚೆಲ್ಲಿ ಧರಣೀಗಿ ||
ಬೆಳಗಾಂವಿಗೆ ತಾರ ಹೋತ ತಡಾ ಇಲ್ಲದ ಪಾರ್ಟಿಬಂತ
ಬಂದೋ ಬಸ್ತಿ ಇಟ್ಟಾರಾಗ ಕಚೇರಿಗಿ
ಇಲ್ಲಿ ವಲ್ಲೇನಂದ ವರ್ಗ ಆತ ಫೌಜುದಾರಿಗಿ ||

ಸೈಲ ಬಿಡಲಿಲ್ಲ ಜನಾ ಲೈನಹಾದಿ ಪೂಲ ಮತ್ತ
ತಾರ ಕಂಬ ಹೋದುವರಿ ಹಾಳಾಗಿ
ಭಯಾ ಬರಲಿಲ್ಲ ಆವಾಗ ಯಾರ‍್ಯಾರಿಗಿ
ಟೋಳಿ ಟೋಳಿ ಆಗಿ ತಿರಗತಿದ್ರ ಹಳ್ಳಿ ಹಳ್ಳಿಗಿ ||
ಇಳೆಯೊಳು ವಂದs ಸವನ ಕಾಳಗವಿತ ಚಳವಳಿ
ಗೋಳ ಬಂತ ಬಿಳಿಮೋತಿ ಪಿರಂಗೇರಿಗಿ
ಕಂಬಾ ಕಾಯಲಿಕ್ಕ ಕಾವಲಾ ಇಟ್ರಿ ಲೈನ ಹಾದಿಗಿ ||

ಒಂದನೇ ಚಾಲ

ದಪ್ತರ ಗಂಟ ಏನ ಉಳಿಲಿಲ್ಲ ಸುಟ್ಟಹೋದು ಎಲ್ಲಾ
ಸಣ್ಣದೊಡ್ಡ ಪುಸ್ತಕ ಕಾಗದಾ
ಕುಲಕರ್ಣಿ ಕೊಡತಿದ್ರಪ್ಪಾ ತಗದಾ ||
ವಾಲಿಕಾರ ಕೈಯಾನ ಹತಿಯಾರ ಬಾಳ ತಯ್ಯಾರ
ಇದ್ದುವ ಒಂದೊಂದಾ
ತಂದ ಕೊಡತಿದ್ರ ತಾಂವಾಗಿ ಬಂದಾ ||

ಎರಡನೇ ಚಾಲ

ರಾಯಫಲ್ಲ ಇದ್ದವು ಪೊಲೀಸರ ಕೈಯಾಗ
ಖಾರಾ ಒಗದ್ದಾರಿ ಅವರ ಕಣ್ಣಾಗ ||
ರಾಯಫಲ್ಲ ಕಸಗೊಂಡ ಓಡ್ಯಾರ ಸಿಗದಂಗ
ಹಿಂಗ ನಡದಿತ್ತ ಸುತ್ತವರದ ನಾಡಾಗ ||

||ಏರ||

ಹಿಂದುಸ್ತಾನದ ಮಂದಿ ಕೂಡಿ ಹಿಂದ ಮುಂದ ನೋಡಲಿಲ್ಲ
ದಿಂಗ ಹಚ್ಚಿಬಿಟ್ಟಿದಾರ ಇಂಗ್ಲೀಷರಿಗಿ
ಏನ ಬಂದೀತಂತಾರ ಅವರು ಕಾಲ ಒದಗಿ
ಅಳತಿ ಹಾಕತಾರ ಹರಿವಲ್ತ ಆಗ ಅವರಿಗಿ ||
ಮೀರಿದ ಚಳವಳಿಯಾಗಿ ಸೂರಿ ಆತ್ರಿ ನಾಡಮ್ಯಾಗ
ಕುತ್ತ ಬಂದ ಕವದೀತ ಬ್ರಿಟಿಷರಿಗಿ
ಪೋಲೀಸ ಪಾರ್ಟಿ ಬರತಿತ್ತ ನಮ್ಮ ತಿಗಡೊಳ್ಳಿಗಿ ||||೧||

ಏಳೆಂಟ ಊರಮಂದಿ ಕೂಡಿ ಟೋಳಿ ಆಗಿ ನಡದಾರ
ರೇಲ ಹಳಿ ತಾರ ಕಂಬ ಕೀಳೋದಕ
ಸ್ಟೇಶನ್ ತಿಜೋರಿ ಟೆಲಿಫೋನ ಒಡಿಯುದಕ
ಹಿಂಗ ಮಸಲತ್ತ ಮಾಡಿ ಹೊಂಟ್ರ ಮಲ್ಲಾಡಕ ||
ಸಣ್ಣದೊಡ್ಡ ಮಂದಿ ಕೂಡಿ ಗುಡ್ಡಾಹಿಡದ ನಡದಾರ
ತಾವರಗಟ್ಟಿ ನಾಗರಗಾಳಿ ಆಳ್ನಾವರಕ
ಎಲ್ಲಾ ಧ್ವಂಸ ಮಾಡಿ ಬಂದಾರ ಆ ಕ್ಷಣಕ ||

ಸರಕಾರಿ ಸಾಲಿ ಬಿಡಲಿಲ್ಲ ಹಾಜರಿ ಬುಕ್ಕ ಖುರ್ಚಿಮೇಜ
ಎಣ್ಣಿಗೊಜ್ಜಿ ಸುಟ್ಟಾರ ಅದಕ್ಕಿಲ್ಲ ಲೆಕ್ಕ
ಸಿಂದಿ ಸೆರೇದಂಗಡಿ ಸೇರಿವ್ಯಾಗಿ ಬಿದ್ದು ನೆಲಕ
ಇನ್ನೂ ಏನೇನ ಮಾಡೂಣಂತ ಹಾಕತಾರ ಲೆಕ್ಕ ||
ಟಪಾಲ ಮೋಟೋರ ಎಲ್ಲಾ ಲೂಟಿ ಮಾಡಿ ಕಳಿಸಿದಾರ
ಬರೇ ಗಾಡಿ ಹೋತ ಪೋಸ್ಟ್ ಆಫೀಸಕ
ಚಾವಡಿ ಬಂಗಲೆಗಳು ಸುಟ್ಟ ಬಿದ್ದುವ ನೆಲಕ ||

ತೂಕಾ ತಗದ ನಡದಾರ ತೋಲಿಗಿ ಇರಸಾಲ ಬಡಿಯೂದಕ್ಕ
ಪೋಲೀಸ ಪಾರ್ಟಿ ಇತ್ತ ಬಂದೂಬಸ್ತಿ ಮಾಡೂದಕ
ಸೋಗ ಹಾಕಿ ಹೋಗಿ ಕುಂತ್ರ ಪಾಳೆ ಕೊಡೇದಕ
ಪಾರಾ ಮಾಡಾವನ್ನ ಹಿಡದಾರ ರಿಕ್ಕ ಮುಕ್ಕ ||
ಬಂದ ಹೊಕ್ಕೀತ ಮಂದಿ ಹಿಂದ ಮುಂದ ನೋಡಲಿಲ್ಲ
ಬಂದೂಕ ಬಾನೆಟ್ ತಗೊಂಡ್ರ ತಮ್ಮ ತಾಬಾಕ
ಗುಡಗ ಹೊಡಿತಿತ್ತು ಗುಂಡಿನ ಮಳಿ ಇಲ್ಲ ಲೆಕ್ಕ ||

ಗಾಬರಿಯಾಗಿ ಹವಾಲದಾರಿ ಗಂಟ್ಲಾಬಿಡರಿ ಅಂತಾನ
ಕೋಟ ಪಾಟ್ಲೋಣ ಕಳದ ಕೊಟ್ರ ಒಂದ ಹೊಡತಕ್ಕ
ಪೋಲೀಸರು ಓಡಿಹೋಗಿ ಕುಂತಾರ ಚಾದಂಗಡಿ ಹೊಕ್ಕ
ಗದ್ಲಾ ನೋಡಿ ಬರಲಿಲ್ಲ ಅವರು ಎದ್ದುಮುಂದಕ ||

ಕಾಡತೋಸ ಕಾಗದ ಪತ್ರ ರೂಪಾಯಿ ರೊಕ್ಕ ಲೂಟಿ ಮಾಡಿ
ತಡವಿಲ್ಲದೆ ಹೊಳ್ಳಿ ಬಂದ್ರ ತಟ ಹಳ್ಳಕ್ಕ
ರೂಪಾಯಿ ತಂದಿದ್ರ ನಾಲ್ಕುನೂರಾ ಐವತ್ತನಾಲ್ಕ ||

ಸುತ್ತಹಳ್ಳಿ ಕುಲಕರ್ಣೀರು ಸಾಕಷ್ಟು ರೂಪಾಯಿ
ಗಪ್ಪ ಮಾಡಿ ಇಟ್ಟಕೊಂಡ್ರ ತಮ್ಮ ತಾಬಾಕ
ಕಾಗದ ಪತ್ರ ಉಳಿಯಲಿಲ್ಲ ಲೆಕ್ಕಾ ತೋರಿಸೋದಕ
ಬಂದ ಮಂದಿ ಬಡದ ಓದರಂತ ಮಾಡತಾರ ದುಕ್ಕ ||
ಚಳವಳಿ ಮಂದಿಮ್ಯಾಗ ಚಾಡಾ ಹೇಳಿ ಉಳಕೊಂಡಾರ
ಮಿಲ್ಟ್ರಿಗಾಡಿ ಬಂದ್ವು, ಇರಸಾಲ ಒಯ್ಯಾಕ
ಹೊಳ್ಳಿ ಹೋಗಿದಾವ ಹಣಾ ಅಲ್ಲಿ ಇಲ್ಲದಕ್ಕ ||

ಒಂದನೇ ಚಾಲ

ಗಂದಿಗವಾಡದಲ್ಲಿ ಮಾತಾಡತಾರ ಕುಂತ ಮಾಡ್ಯಾರ ಮಸಲತ್ತ
ಹೊಂಟ ಹೋದ್ರ ಆಗಿ ತಯ್ಯಾರಾ
ಮೂರು ಸಂಜಿಕ ಮುಟ್ಟ್ಯಾರ ಅಳ್ನಾವರಾ ||

ಬ್ಯಾಂಕಿನಲ್ಲಿ ಇರುವಂತಾ ರೊಕ್ಕ ಮುರಿದಾರ ಸಂದಕ
ನಾಲ್ವತ್ತ ಸಾವಿರಾ
ತಗೊಂಡಾರ ಮಾಡಿ ಅವಸರಾ ||

ಎರಡನೇ ಚಾಲ

ಹೊಳ್ಳಿ ಹೋದಾರ ಬೈಲಹೊಂಗಲಕ
ದೊಡ್ಡ ಬ್ಯಾಂಕ ಒಡಿಬೇಕಂತ ಲೆಕ್ಕ ||

ತಿಜೂರಿ ಕೈ ಸಿಗಲಿಲ್ಲ ವ್ಯಾಳ್ಯೇಕ
ಬಾಳ ಗೋರ ಬಿಟ್ಟಾರ ಬೆಳತನಕ ||

ಹಣಾ ಸಿಗಲಿಲ್ಲ ಅವರಿಗೆ ಹೊಡಿಯೋದಕ
ಗಡಬಡದಿಂದ ಬಂದಾರ ಹಿಂದಕ ||

ತಿಗಡೊಳ್ಳಿ ಸೊಸೈಟಿ ಲೂಟಿ ಆದ ಸುದ್ದಿ ಕೇಳಿ
ಡಿಎಸ್‌ಪಿ ಫೌಜುದಾರ ಹೊಂಟ್ರ ತಪಾಸಿಗಿ
ಮೋಟೋರ ಬಿಟ್ಟಿದ್ರ ಬಸರಕೊಡದ ಅಗಸಿಗಿ
ಅದನ್ನ ಹೇಳ ಬೇಕಂದ್ರ ಬರತೈತಿ ನಗಿ ||

ಮೀರಿದ ಚಳವಳಿಯಾಗಿ ಸೂರಿ ಆತ್ರಿ ನಾಡಮ್ಯಾಗ
ಹತ್ತಿ ಬಂದ ಕವದೀತ ಬ್ರಿಟಿಷರಿಗೆ
ಪೋಲೀಸ ಪಾರ್ಟಿ ಬರತಿತ್ತ ನಮ್ಮ ತಿಗಡೊಳ್ಳಿಗಿ||೨||

ಲೈನ ಇಲ್ಲ ತಿಗಡೊಳ್ಳಿಗಿ ಕಾಲಹಾದಿ ಹಿಡದ ಬಂದ್ರ
ಗೌಡ್ರ ಮುನಿಯಲ್ಲಿ ಇಳಕೊಂಡ್ರ ಎಲ್ಲಾ ಜನರಾ
ಫೌಜದಾರಾ ರೊಚ್ಚಿಗೆದ್ದ ಬೈಯತಿದ್ದ ಇಲ್ಲದರಕಾರಾ
ಊಟಕ್ಕ ಕೇಳತಿದ್ದ ಬೆಣ್ಣಿ ಹಾಲ ಮಸರಾ ||
ಗೊತ್ತ ಇಲ್ಲ ಇವರಿಗೆ ಬತ್ತದ ವಣ ಹುಲ್ಲ ಒಟ್ಟಿ
ವತ್ತರದಿಂದ ಸುಟ್ಟ ಬಿಟ್ರ ಮೋಟೋರಾ
ನೋಡಿ ದಿಕ್ಕೆಟ್ಟ ಓಡಿಹ್ವಾದ ಡ್ರಾಯವರಾ ||

ಊಟಕ್ಕ ಕುಂತಿತ್ತ ಪೋಲೀಸ ಮಂದಿ ಬಂತ ಮೋಟೋರ ಸುಟ್ಟಸುದ್ದಿ
ಅಗದಿ ಅಳಾಪಮಾಡಿ ಹೇಳತಾನ ಡ್ರಾಯವರಾ
ತಾನs ತಿವಕೊಂಡಿದ್ದ ಹಾಯತಿತ್ತ ನೆತ್ತರಾ
ಎದ್ದಿ ಎದಿ ಎದಿ ಗುದ್ದಿಕೊಂಡು ಡಿಎಸ್ಪಿಯವರಾ ||
ಊಟಾ ಮಾಡೊ ಮುಸರಿ ಕೈ ಪಾಟ್ಲೋಣಕ ತಿಕ್ಕಿಕೊಂತ
ದಿಕ್ಕೆಟ್ಟ ಓಡತಾರ ಇಲ್ಲ ಖಬರಾ
ಹ್ಯಾಟ ಬಿಟ್ಟಹ್ವಾದ್ರ ಅವಸರಾ ||

ಒತ್ತರಲೆ ಓಡುವಾಗ ತತ್ರ್ಯಾಡಿ ಬೀಳತಿದ್ದ ಸಾಬ
ಫಾಯರ್ ಫಾಯರ್ ಅಂತಾನ ಅಂಜಿ ಆಗಿ ನೀರಾ
ಅರ್ಧಾ ತಾಸಿನೊಳಗ ಬಸರಕೊಡ ಮುಟ್ಟಿದರಾ
ಹೋಗೋದರೊಳಗ ಉಳಿದಿದ್ದಿಲ್ಲ ಮೋಟೋರಾ ||
ಇದರಿಗೆ ಸಿಕ್ಕವರನ್ನ ಬಲ್ಲಂಗ ಬಡಿತಿದ್ದರ
ಹೆದರಿ ಓಡ್ಯಾರ ಎಷ್ಟೋ ಜನರಾ ||

ಬೆಳಗಾಂವಿ ಕಲೆಕ್ಟರನ ಮುಂದ ನಿಂತ ಅತ್ತತ್ತ ಹೇಳತಾನ
ದೇಗಾಂವಿ ತಿಗಡೊಳ್ಳಿಯವರು ಸುಟ್ರು ನನ್ನ ಮೋಟೋರಾ
ಅವರಿಗೆ ಮದತ್ತ ಮಾಡಿದಾರ ಬಸರಕೊಡದವರಾ
ಈಗ ಬೇಡೋದಕ್ಕ ಬಂದಿದೇನ ಹೆಚ್ಚಿನ ಅಧಿಕಾರಾ ||
ಮೂರೂ ಊರಿಗೆ ಕೂಡಿ ಮೂರ ತಾಸ ಮುದ್ದತ ಕೊಡ್ರಿ
ಗನ್ನ ಮಶಿನ್ ಹಚ್ಚಿ ಮಾಡತೇನ ಸಂಹಾರಾ
ಕೊಟ್ಟ ನೋಡ್ರಿ ಅಧಿಕಾರ ಬಂದ ಜರಾ ||

ಒಂದನೇ ಚಾಲ

ಇಬ್ರೂ ಕೂಡಿ ಹ್ವಾದ್ರ ಮುಂಬೈಕ ಗೌರ‍್ನರನ ಹಂತೇಕ
ನಾವು ಮಾಡಬೇಕ ಇನ್ನೇನಾ
ಹೆಚ್ಚಾಗೇತ್ರಿ ಚಳವಳಿ ಒಂದ ಸವನಾ ||

ಗೌರ‍್ನರ ಹೇಳ್ಯಾನ ತತ್ಕಾಲಕ ಇಸಕೊಳ್ರಿ ಅವರ ಬಂದೂಕ
ಹಿಂಸಾ ಮಾಡಬ್ಯಾಡ್ರಿ ಯಾರನ್ನಾ
ಹಿಡದ ಜೇಲಿಗ್ಹಾಕರಿ ಎಲ್ಲರನಾ ||

ಎರಡನೇ ಚಾಲ

ಕಲಮ ಜಾರಿ ಆತ್ರಿ ನೂರಾ ನಾಲ್ವತ್ನಾಲ್ಕ
ಸಂಶೆ ಬಂದ್ರ ಅಡ್ಡಿಯಿಲ್ಲ ಹಿಡಿಯುದಕ ||

||ಏರ||

ಅಧಿಕಾರ ಸಿಕ್ಕಿತಂತ ಅಡಬಡಿಸಿ ಮುಂಬಯಿಂದ
ಗಡಬಡಿಸಿ ಹೊಳ್ಳಿ ಬಂದ್ರ ಬೆಳಗಾಂವಿಗಿ
ಅಲ್ಲೆ ಕರಿಸಿಕೊಂಡ ಹೇಳತಾರ ಫೌಜುದಾರಗಿ
ಇನ್ನ ಅಂಜೋದೇನ ಗರ್ಜ ಇಲ್ಲ ಯಾರ‍್ಯಾರಿಗಿ ||
ಮೀರಿದ ಚಳುವಳಿಯಾಗಿ ಸೂರಿ ಆತ್ರಿ ನಾಡಮ್ಯಾಗ
ಕುತ್ತ  ಬಂದ ಕವದೀತ ಬ್ರಿಟಿಷರಿಗಿ
ಪೋಲೀಸ ಪಾರ್ಟಿ ಬರತಿತ್ತ ನಮ್ಮ ತಿಗಡೊಳ್ಳಿಗಿ||೩||

ಏಳ ತಿಂಗಳ ಒಂದು ಸವನ ಕಾಳಗವಿತ ಚಳವಳಿ
ಬಾಳ ಜೋರಿನಿದ ಆಗಿತ್ತರಿ ಪ್ರಬಲ್ಲಾ
ಎಷ್ಟೋ ಪೋಲೀಸರು ಆಗಿ ಹೋದ್ರ ಬುಡಮೇಲಾ
ರಾಯಫಲ್ ಹೊತಗೊಂಡ ತಿರಗತಿದ್ರ ರಾತ್ರಿ ಹಗಲಾ ||
ತುರತಕ್ಕ ಅವರಿಗಿ ಯಾರ‍್ಯಾರು ಸಿಗಲಿಲ್ಲ
ಜನರನ್ನ ಬಡಿತಿದ್ರ ಕೇಳವರು ಯಾರಿಲ್ಲಾ
ಅದಕ ಅಳತಿಲ್ಲಾ ||

ದಡ್ಡಗೇಡಿ ಪೋಲೀಸರು ಮಡ್ಡಿಮಾಳಾ ಮೊದಲಮಾಡಿ
ದಡದಡ ತಿರಗತಾವ ಖಬರಿಲ್ಲಾ
ಗಿಡದ ಬಡ್ಡಿಮರಿಗಿ ನಿಂತ ನೋಡತಿದ್ವಿ ಇದನ್ನೆಲ್ಲಾ
ಪಾರ್ಟಿಮಂದಿ ಬಿದರ ಬೆಟ್ಟಾ ಬಿಡಲಿಲ್ಲಾ ||
ಹೊಟ್ಟಿಕಿಚ್ಚಿನಿಂದ ಹುಡಕತಾವ ಹಾಂತವರದ
ಯಾರ‍್ಯಾರು ಅವರಿಗೆ ಸಿಗಲಿಲ್ಲಾ
ಹಸದ ಹಲ್ಲ ಕಿಸದ ನಿಂತಾವ ಕೂಳಿಲ್ಲಾ ||

ಊರಕೇರಿಗೆ ಹೋದವರನ್ನ ದಾರಿಯೊಳಗ ಹಿಡಿತಂದ
ಸಂಶೆ ಬಂದ ಬಡಿತಾರ ಅನುಮಾನ ಇಲ್ಲಾ
ದಾರಿ ನೋಡತಿದ್ರ ಮುನಿಯಾಗ ಇನ್ನೂ ಬರಲಿಲ್ಲಾ
ಅವರನ್ನ ಹಿಡದಿರಬಹುದು ಅಂತಿದ್ರ ಜನರೆಲ್ಲಾ ||
ಬಂದ ಬಂದ ಮಿಲ್ಟ್ರಿಮಂದಿ ಹಿಂದಮುಂದ ನೋಡಾಕಿಲ್ಲ
ಕಂಡಾವರನ್ನ ಬಡಿತಿದ್ರ ಕುಂಡಿಮ್ಯಾಲಾ
ಹೊಡತಕ್ಕ ಮೈಯ್ಯಾಗೇನು ಕಸರ ಉಳಿಲಿಲ್ಲಾ ||

ಬಂದೂಕಿನ ಸಲುವಾಗಿ ಸಂದಿಗೊಂದಿ ಉಳೀಲಿಲ್ಲ
ಗ್ವಾಡಿ ಹೆಂಡಿ ಕಿತ್ತ ಹುಡಕತಾರ ಮನಿಯೆಲ್ಲಾ
ನೀರಿನ ಹಂಡೆಗಳ ಉಳಿಸಿದಾರ ಕೊಡ ಮೊದಲಾ
ಬತ್ತದ ಕಣಜಾ ಕಿತ್ತ ಮಾಡಿದಾರ ಬುಡಮೇಲಾ ||
ಸರಕ ಗಳಿಗಿ ಹಳಿ ಹರವಿ ಅರವಿ ಅಂಚಡಿ ಹರಿವ್ಯಾಡತಾತ
ಕಾಡತೂಸ ಅದಾವಂತ ಅಡಕಲಗಡಿಗಿ ಉಳಿಲಿಲ್ಲ
ಆಗ ಮುಂದ ನಿಂದ್ರೊ ಧೈರ್ಯ ಯಾರಿಗಿದ್ದಿಲ್ಲಾ ||

ಒಂದನೇ ಚಾಲ

ದುರಿಗಿ ಬ್ಯಾನಿ ಬಂದ ಹೊಕ್ಕಂಗ ಎಲ್ಲಾ ಊರೊಳಗೆ
ಬಂದ ಮಾಡತಿದ್ರೋ ಧುಮಸೇನಾ
ಖಬರ ಹಾರಿ ಓಡ್ಯಾಡತಿದ್ರ ಜನಾ ||

ಎಲ್ಲಾ ಮಂದಿಗೆ ಹೊಕ್ಕಿತರಿ ತಗಿಬಗಿ ಬಂದಿತರಿ ಬಿಗಿ
ಸಿಗವಲ್ತ ಪರಾರಿಯ ಜನಾ
ತಗೊಂಡ ಹ್ವಾದ್ರ ಅಣ್ಣತಮ್ಮರನಾ ||

ಎರಡನೇ ಚಾಲ

ತಿರಗತಾವ ಸುತ್ತೊರದ ಆಗಿ ಗೋಳಾ
ನಮ್ಮನ್ನ ಹುಡಿಕಿ ಸತ್ತಾವ ಪೋಲೀಸಗೋಳಾ ||
ಹಳ್ಳಿ ಒಳಗಿನ ಸಾವಕಾರ ಶೆಟ್ಟಿಗಳಾ
ಅಂಜಿಬಿಟ್ಟಾರ ತಮ್ಮ ಮನಿಗಳಾ ||

||ಏರ||

ಪಿರಂಗೇರ ಬೆನ್ನಹತ್ತಿ ಪಿತೂರಿ ಮಾಡೋಮಂದಿ
ಹಾಂತವರದ ತಿರಗತಿದ್ರ ಹಳ್ಳಿಹಳ್ಳಿಗಿ |
ಒಬ್ಬ ಸಿಐಡಿ ಬಂದ ಸಿಕ್ಕಿದ್ದ ತಿಗಡೊಳ್ಳಿಗಿ
ಅವನ ಪಾಡಾಗಿ ಜಡದ ಕಳಿವ್ಯಾರ ತಿರುಗಿ ||

ಮೀರಿದ ಚಳವಳಿಯಾಗಿ ಸೂರಿ ಆತ್ರಿ ನಾಡಮ್ಯಾಗ
ಕುತ್ತ ಬಂದ ಕವದೀತ ಬ್ರಿಟಿಷರಿಗಿ
ಪೋಲೀಸ ಪಾರ್ಟಿ ಬರತಿತ್ತ ನಮ್ಮ ತಿಗಡೊಳ್ಳಿಗಿ ||
ದಿಕ್ಕತಪ್ಪಿ ಮಿಲ್ಟ್ರಿಮಂದಿ ಲೆಕ್ಕತಪ್ಪಿ ತಿರಗತಾರ
ತಿಂದೇವಂತಾವ ಕೂಳ ಇಲ್ಲ ಹೊಟ್ಟಿಗಿ
ಮಜ್ಜಿಗಿ ಆಗೇತಂತ ನಿಂತಗೊಂಡ ಕಾಲ್ಹೋಗಿ ||
ಪರಾರಿ ಇದ್ದ ಮಂದಿ ಪತ್ತೆ ಹತ್ತಲಿಲ್ಲ
ಅವರ ಸಂಬಂಧಿಕರ‍್ನ ಹಾಕ್ಯಾರ ಜೇಲಿಗಿ
ಭಯಾ ಬಂತಾಗ ಎಲ್ಲರಿಗಿ ||

ಬಿಕ್ಕಟ್ಟ ಬಂತ ಎಲ್ಲಾರಿಗಿ ಪುಕ್ಕಟ್ಟ ನಮ್ಮ ಮಂದಿ ಓದ್ರ
ಹಾಜರಾಗಿ ಬಿಡಸೋಣಂದ್ರ ತಾವಾಗಿ
ಹೊಂಟಹೋಗಿ ಭೆಟ್ಟಿ ಆದ್ರ ಫೌಜದಾರಿಗಿ
ಎಷ್ಟೋಮಂದಿನ ಹಿಡದಿದ್ದರ ಅಷ್ಟೊತ್ತಿಗಿ ||
ಬಡದು ಹೊಡದು ಮಾಡಬ್ಯಾಡ್ರಿ ಖರೆ ಖರೆ ಹೇಳತೇವ
ಮಾಡಿದಂತಾ ಗುನ್ನಾ ಎಲ್ಲಾ ಇಲ್ಲಿವರಿಗಿ
ಹಿಂಗ ಆದೀತಂದ ತಿಳಿಲಿಲ್ಲ ಮೊದಲೀಗಿ ||

ಹಿಂದ ಓದ ಬಂದೂಕ ತಂದ ಕೊಡತೇವಂತ
ಒಂದೂ ಬಿಡದ ಓದಕೊಟ್ರ ತಾವಾಗಿ
ಮುಂದ ಖಟ್ಲೆಹಾಕಿ ಕಳಿವಿದಾರ ಜೋರಿಗಿ
ಹಿಂಗ ನಡದಿತ್ತ ನಾಡತುಂಬ ಸುತ್ತೊರಗಿ ||
ಜೇಲಿನೊಳಗ ಕಾಲಿ ಇಟ್ಟ ಊಟಾ ಹಾಕತಿದ್ರ ನಮಗ
ಗೋದಿ ರೊಟ್ಟಿ ಬೆಲ್ಲಾ ಐತಾರ ಸಂಜಿಗಿ
ಉಲ್ಲನ ಕಂಬಳಿ ಕೊಡತಿದ್ರ ಮಲಗೊ ಸಲುವಾಗಿ ||

ಹೆಡ್ ಕ್ವಾರ್ಟರ್ ಹಿಂಡಲಗಿ ಜೇಲ ಕಿಲ್ಲಾದೊಳಗ ಕಾಲಿ ಇಲ್ಲ
ಪಾರ್ಟಿ ಕಳವಿಕೊಟ್ರ ಎರೋಡಾ ಇಸಾಪುರ ಜೇಲಿಗಿ
ನಾಶಿಕ ಕಾರವಾರ ರತ್ನಾಗಿರಿಗಿ
ಅಲ್ಲಿ ಮಂದಿ ತರತಿದ್ರ ಇಲ್ಲಿಗಿ ||

ಕಟಪಟಿ ಮಾಡಿ ಕೋರ್ಟಿನೊಳಗೆ ಖಟ್ಲೆ ನಡೆಸಿದಾರ
ಜಡಜಿ ಸಾಹೇಬರ ಎದುರಿಗಿ
ನಿರ್ದೋಷಿ ಆದ್ರೂ ಡೆಟಿನ್ಯೂ ಆತ ಎಲ್ಲಾರಿಗಿ ||

ಒಂದನೇ ಚಾಲ

ಮುಂಜಾನೆ ಗಂಜಿಕೊಡತಿದ್ರ ಏಳು ಘಂಟೇಕ
ಬ್ಯಾಳಿರೊಟ್ಟಿ ಊಟ ಮಧ್ಯಾಹ್ನಕ
ಕೊರತಿಲ್ಲ ಯಾವುದಕ ||
ಚಹಾ ಪುಡಿ ಸಕ್ಕರಿ ಹಾಲ ಭೈಮಂಗ ಬೆಲ್ಲ
ಎರಡೂ ವೆಳ್ಳೇಕ
ಬಾಜಿ ರೊಟ್ಟಿ ಬ್ಯಾರೆ ಸಂಜೀಕ ||

ಎರಡನೇ ಚಾಲ

ಔಷಧ ಕೊಡತಿದ್ರ ಇದ್ದಲ್ಲಿಗೆ ತಂದಾ
ಸೋಡಾ ಸಾಬೂನ ಒಮ್ಮೆ ಎಂಟಿ ದಿನದ್ದಾ ||

ಪತ್ರಾ ಬರಿಲಿಕ್ಕಿ ಕಾರ್ಡ ವಾರಕ್ಕೊಂದಾ
ಹಿಂದಿ ಕಲತೇವ ನಾವು ಅಂದಾ ||

||ಏರ||

ಸದ್ದೆ ಆದದ್ದನ್ನ ತಿದ್ದಿತಿದ್ದಿ ತಿಳದಷ್ಟ ಹೇಳತೇನ
ತಿಗಡೊಳ್ಳಿ ಬಲಭೀಮನ ಚರಣಕ್ಕೆರಗಿ
ನಾಲ್ವತ್ತ ನಾಲ್ಕರೊಳಗ ಬಿಡಗಡಿ ಆತ ಎಲ್ಲಾರಿಗಿ
ಪದಾ ಮಾಡಿದಾನ ಮರಿಕಲ್ಲ ಹೊಸದಾಗಿ ||

ಮೀರಿದ ಚಳವಳಿಯಾಗಿ ಸೂರಿ ಆತ್ರಿ ನಾಡಮ್ಯಾಗ
ಕುತ್ತ ಬಂದ ಕವದೀತ ಬ್ರಿಟಿಷರಿಗಿ
ಪೋಲೀಸ ಪಾರ್ಟಿ ಬರತಿತ್ತ ನಮ್ಮ ತಿಗಡೊಳ್ಳಿಗಿ ||

ಕವಿ :  ಮರಿಕಲ್ಲಕವಿ
ಕೃತಿ :  ಮರಿಕಲ್ಲಕವಿಯ ಗೀಗೀ ಪದಗಳು