ನಾಲ್ವತ್ತೆರಡನೇ ಇಸ್ವಿ ಕಾಲ ವದಗಿ ಬಂತ |
ಪೋಲೀಸರಿಗೆ ಗೊತ್ತು | ತು | ತು |
ಮೇಲಾಧಿಕಾರಿ ಆಜ್ಞೆ ಪಾಲಿಸಲಿಕ್ಕೆ ಹೋಗಿ |
ಮಾಲಿ ಕೊರಳಿಗೆ ಬಿತ್ತು | ತು | ತು ||


ಸಿಪಾಯಿಗಳು ಎಲ್ಲಾ ಝಪಾಟಿಗೆ ಸಿಕ್ಕ |
ಉಪಾಯವಿಲ್ಲದಾಯ್ತು | ತು | ತು |
ಅಪಾಯ ಮಾಡಾಕ ಬಂದ ರಾಯಫಲ ಕೊಟ್ಟ |
ಜಪಾ ಮಾಡುದಾಯ್ತು | ತು | ತು ||


ಕಾನಸ್ಟೇಬಲರು ಬ್ಯಾನಿಟ್ಟು ಕೊಟ್ಟ |
ಗೋಣ ಹಾಕುದಾಯ್ತು | ತು | ತು |
ಖೊಟ್ಟಿ ಫೌಜದಾರ ಕೊಟ್ಟ ಪಿಸ್ತೂಲ |
ಸಿಟ್ಟ ಇಳದ ಹೋಯ್ತು | ತು | ತು ||


ಧಿಟ್ಟ ಹವಾಲದಾರ ಬೂಟ ಪಾಟ್ಲೋನ |
ಕೋಟ ಕಳದ ನಿಂತು | ತು | ತು |
ಪೋಷ್ಟ ಆಫೀಸರ ರನ್ನರ ಮಾಸ್ತರದು |
ಆದೀತ ಏಪರೀತು | ತು | ತು ||


ಸ್ವರಾಜ್ಯ ಸಲುವಾಗಿ ಅರಾಜಕತಿಯಾಗಿ |
ಗೌರ್ಮೆಂಟ ಅಂಜೀತು | ತು | ತು ||
ಬರಾಬರೀ ಸಖ ಹುಲಕುಂದ ಭೀಮಾ |
ಪೂರಾ ಹೇಳಿದ ಮಾತು | ತು ||

ಕವಿ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು