ಗತಿಸಿ ಹೋದ ಕಾಲದ ಇತಿಹಾಸ ನೋಡಿದರ ಪ್ರತಿಯೊಬ್ಬರಿಗೆ |
ಆಗುವದು ಮನದಟ್ಟಾ |

ಹಿತಶತ್ರುಗಳಂತೆ ವರ್ತನ ಮಾಡಿದಲ್ಲೆ ಬ್ರಿಟಿಸರು ಹೋದ್ರ |
ನಮ್ಮ ದೇಶ ಬಿಟ್ಟಾ||ಪ||

ಹದಿನೆಂಟನೂರಾ ಐವತ್ತೇಳನೆ ಇಸ್ವಿಯು ಸ್ವಾತಂತ್ರ ಹೋರಾಟ |
ಕ್ರಾಂತಿಯ ಕಾಲಾ ||

ಅಂದಿನಿಂದ ಇಂದಿನವರೆಗೆ ಒಂದೇ ಸವನೆ ಮುಂದೆ ಸಾಗಿದ |
ಪ್ರಗತಿಯ ಕಾಲಾ ||

ಒಂದ ಸಾವಿರ ಎಂಟನೂರ ಇಪ್ಪತ್ನಾಲ್ಕರಲ್ಲಿ ಚಾಲು ಆದೀತ |
ಬಂಡಾಯದ ಕಾಲಾ |

ನೊಂದ ಹಿಂದಿಯರೆಲ್ಲಾ ಹೊಂದಗೂಡಿಕೊಂಡ ಅಂದಾರ |
ಪರದಾಸ್ಯವಿದು ತರವಲ್ಲಾ ||

ಕಿತ್ತೂರ ಸಂಸ್ಥಾನದ ದತ್ತಕದ ಸಲುವಾಗಿ ಫಿರಂಗೇರು |
ಆಗಲಿಲ್ಲ ಅನುಕೂಲಾ |

ಪ್ರತ್ಯಕ್ಷ ಚನ್ನಮ್ಮರಾಣಿ ಹತ್ತಿ ಕುದರಿ ಕತ್ತಿ ಹಿರದ ಸಿಸ್ತ |
ಯುದ್ಧ ಮಾಡಿ ಆದಾಳ ಪ್ರಬಲಾ ||

||ಚಾಲ||

ಕನ್ನಡ ನಾಡಿನ ಸಂಗೊಳ್ಳಿ ರಾಯಂಣಾ |
ಅನ್ಯಾಯ ಸರಕಾರದ್ದು ಮಾಡಿದಪಮಾನಾ ||

ಬೀಡಿ ಸಂಪಗಾಂವಿ ಕಚೇರಿ ಸುಟ್ಟಾನಾ |
ಕೂಡಿದ ಫಿರಂಗ್ಯಾರ ದಂಡ ಸವರ‍್ಯಾನಾ ||

ಫಿತೂರಾಗಿ ನಮ್ಮೊಳಗಿನ ಜನಾ |
ಸ್ವತ ಹಿಡದ ಕೊಟ್ರ ಶೂರನ್ನಾ ||

ಒತ್ತರದಿಂದ ರಾಯಣ್ಣನ ಹತಮಾಡಿ ಬಿಟ್ಟರವರು
ನಂದಗಡದೂರಲ್ಲಿ ಘಾಸಿಕೊಟ್ಟಾ
ಸುರಪುರ ವೆಂಕಟಪ್ಪ ನಾಯಕನ್ನ ಪರಿಪರಿ ಕಾಡಿದರು |
ಪರಕೀಯ ಸರಕಾರದವರು ಅಳತಿಲ್ಲದಾ |
ಸರಳತನ ಇಲ್ಲ…. ರೊಕ್ಕಾ ಹಿರಿಯಲಿಕ್ಕೆ ತರತರದ ಕಲ್ಪನೆ | ತಗತಗದಾ ||
ಬೇಡರೆಲ್ಲಾ ಕೂಡಿ ಮಾತಾಡಿಕೊಂಡ ದೊಡ್ಡ ದಂಡ ಮಾಡಿಕೊಂಡ |
ಹೂಡಿದರು ಘನಯುದ್ಧಾ |
ಗಂಡುಗಲಿ ಮುಧೋಳ ನಾಡ ಪುಂಡರು ಇಂಗ್ಲಂಡದ ದಂಡಿನ ಮೇಲೆ |
ಗುಂಡಿನ ಮಳೆಗರೆದಾ ||
ಸೋತನಂತರ ಬೇತಿಲಿಂದ ಮತ್ತಷ್ಟ ಸೈನ್ಯ ತರಿಸಿ ಸಿಟನ್‌ಕರ್ |
ಅಂಬುವ ಸಾಹೇಬ ಊರ ಸುಡಸಿದಾ |
ಹತ್ತೊಂಬತ್ತ ಮಂದಿ ಬಂಡಾಯದ ಮುಖಂಡರು ಸುಸ್ತಿ |
ಮಾಡದೆ ಗಲ್ಲಿಗೇರಿಸಿದಾ ||

||ಚಾಲ||

ಮುಂಡರಗಿ ಭೀಮರಾಯನ ಇದ್ದ ಬಂಟಾ |
ಬಂಡಾಯ ಮಾಡುವಲ್ಲಿ ಅತಿ ಶ್ರೇಷ್ಟಾ ||
ಜಹೀಗಿರದಾರರು ದೇಸಾಯರು ಸರ್ವಸಗಟಾ |
ಸಹಾಯ ಸಹಕಾರ ಮಾಡತಿದ್ದರಂಗವಸ್ಪಷ್ಟಾ ||
ಹಮ್ಮಿಗಿ ಕೋಟಿಯೊಳು ಮದ್ಗುಂಡು ಕೂಡಿಸಿಟ್ಟಾ |
ಸುಮ್ಮನೆ ತಿರಗತಿದ್ದ ಎಲ್ಲ ಭಯ ಬಿಟ್ಟಾ ||

||ಏರು||

ಪತ್ತೆ ಹಚ್ಚಿ ಸರಕಾರ ಡಂಬಳದ ಪೌಜಧಾರ ಕೋಟಿ ಬಾಗಿಲಿಗೆ |
ಮೋಹರ ಮಾಡಿಕೊಂಡ ಹೊಂಟಾ||೨||

ಕೀಲಿ ಮುರದ ಭೀಮರಾಯ ಶಸ್ತ್ರಾಸ್ತ್ರ ಬೇಡರಿಗೆ ಕೊಟ್ಟ |
ಕೊಪ್ಪಳ ಕೋಟಿ ವಶಮಾಡಿಕೊಂಡಾ |

ಅಲ್ಲಿಂದ ಹುಜೇಸ ಎಂಬುವ ಸೈನ್ಯಾಧಿಕಾರಿಯು ಬಂದ |
ಎಲ್ಲಾ ಕಡೆಯಿಂದ ತರಿಶಾನ ದಂಡಾ ||

ಬಹಳ ಸೈನ್ಯ ಕೂಡಿದಲ್ಲೆ ಮಹಾಯುದ್ಧವಾಗಿ ಸಹಜ ಕೋಟಿ |
ಹೋಯ್ತ ಕಣಗಂಡಾ |

ಬಹದ್ದೂರ ರಣಶೂರ ಭೀಮರಾಯ ಗಂಭೀರ ವೀರ ಸ್ವರ್ಗವನು |
ಪಡಕೊಂಡಾ ||

ನರಗುಂದ ಬಾಬಾಸಾಹೇಬ ತಮ್ಮನಾದ ರಾಮದುರ್ಗ ಧೊರಿಗೆ |
ಬಂಡಾಯ ಮಾಡುನಂತ ಪತ್ರ ಬರದ ಗಡಾ |

ಅರಸ ಪತ್ರ ಓದ ತೋರಿಸಿದ ಮ್ಯಾನಸನ್ ಸಾಹೇಬಗ |
ಅಲಿಪ್ತನಾಗಿತಾ ಉಳಕೊಂಡಾ ||

||ಚಾಲ||

ಧಾರವಾಡಕ ಮ್ಯಾನಸನ್ ಸಾಹೇಬ ಹೊರಟಾ |
ಸುರೇಬಾನಕ ವಸ್ತಿಯ ಕೊಟ್ಟಾ ||

ಅರಿತ ಬಾಬಾಸಾಹೇಬ ರಾತ್ರಿ ಊರಬಿಟ್ಟಾ |
ನೂರಾರು ಜನರು ಸಂಗತೀಲೆ ಘಟ್ಟಮುಟ್ಟಾ ||

ಸುರೇಬಾನ ಊರಿಗೆ ಬಂದ್ರ ಭರಾಟಾ |
ಗೋರಾ ಮ್ಯಾನಸ್‌ನ್ನಂದು ಹಾರಿಶಾರ ಹೊಟ್ಟಾ ||

||ಏರು||

ಪ್ರೇತ ಬಿಟ್ಟ ರಂಡಾ ನರಗುಂದಗಸಿಗೆ ಕಟ್ಟಿದರೆಂದು |
ಹುಲಕುಂದ ಭೀಮೇಶ ಹೇಳಿದ ಹಸನಕಟ್ಟಾ||೩||

ಕವಿ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು