ಕಿತ್ತೂರ ಚನ್ನವ್ವನ ಸೊಸಿ
ಹೊಂಗಲ ಬಿಟ್ಟು ಹೋಗುವಾಗ
ಮಾಡತಿದ್ದಳು ಮಹಾ ದುಖ್ಖವಾ |
ಮಲ್ಲಾ ಸರ್ಜಾ ಮಾಡಿದ ಬದಕು
ಮಾಜದ ನಾ ಪೇಳುವೆನು
ಸೋಜಿಗದ ಬದಕ ಎಲ್ಲ ಸೂರೀ |
ಆರು ಆನಿ ಹದಿನಾರು ಒಂಟಿ
ಹನ್ನೆರಡು ಸಾವಿರ ಕಾಲಬಲ
ಮಹಾರಾಯ ಟೋಪುಗಳು ಹೋದವು ಹೇರಿ |
ಹತ್ತು ಅನೀ ಮುತ್ತಿನ ಪಲ್ಲಕ್ಕಿ
ಸುತ್ತಲ್ಹಿಡುವ ಹತ್ತು ಎಂಟು
ಬೆಳ್ಳಿ ಕಾವಿನ ಅಪ್ತಾಗಿರಿ |
ಚಂದವಾದ ಚಕ್ಕಡಿಗಳು
ಒಂದು ಉಳಿಯದ ಹೋದವು
ತುರಂಗ ರಥದ ಚವ್ವರಿ |
ಶಿಟ್ಟಿನ ಶಿಪಾಯಿಗಳು ದುಷ್ಟತನದಲ್ಲಿ
ಹತ್ತುವಂತ ಕುದರಿ ಇದ್ದವು ಜರ್ದಾಮರಿ |
ಕಲ್ಲೂರ ಕಲ್ಲಬಸಪ್ಪ ಕನ್ನೂರ ಮಲ್ಲಪ್ಪ
ಅವರಾದಿ ವೀರಪ್ಪ ಕಾರಶೂರಿ

ಎಂತೆಂತ ಸರದಾರಗಳು ||ಏರು||
ಕಾಂತಾರ ಬಿದ್ದು ಹೋಗುವಾಗ
ನಮಗ ಬಂದಿತಲ್ಲೊ ಯುಥಾ ಮಾರಿ |
ಅಷ್ಟು ಹೋಗಿ ಇಷ್ಟು ಉಳಿತು
ಕುತುಹರನು ಬಂದು ನಿಂತಾ
ಕುತುಹರನ ನೆನದಾಳಲ್ಲ ಸಾರಿ||ಇಳವು||

ಪಾಂಡವರಿಗೊನದೇಶ ಬಂದ್ಹಾಂಗ ಆದೀತೆಂದು |
ಪಾಪಿ ದುಶ್ಯಾಸ ದ್ರೌಪತಿ |
ಶಾಲಿ ಸೆಳದೊಯ್ಯುವಾಗ |
ಭೂಪರಿದ್ದೇನು ಮಾಡಿದರು |
ಶಿಕೇದ ಮಗನೊಬ್ಬ ಸಿಗದ ಹೋದನೆ ತಾಯಿ |

ಬಗೆದ ತರುವೇನೆನ್ನುವಳು |
ಪಾಪಿಕೇಳೊ ನಮ್ಮಂತೇ ಪಾಪಿಗಳ್ಯಾರಿಲ್ಲ |
ಪನ್ನಂಗಧಾರನಾ ಸ್ತುತಿಸುತಲೀರವ್ವ |
ಪಾರ್ವತೀ ಅರಸನ ನೆನದಾಳು ||ಏರು||

ಪೂರ್ವಜನ್ಮದಲ್ಲಿ ಪುಟ್ಟಿ
ಮುನ್ನೆ ನಮಗ ತಪ್ಪಾದಿಂದು |
ಬ್ರಹ್ಮ ಯಾಕ ಇಂತಾ ಪರೀ||೧||

ಹೆಂಣು ಮಕ್ಕಳಿಡುವ ವಸ್ತ
ಬಂಣಿಸಿ ನಾ ಪೇಳ್ವೆನು
ಸಣ್ಣ ನಡುವಿನ ಡಾಬ ಭಂಗರ |
ಬುಗಡಿ ಬಾವ್ಲಿ ಜುಮಕಿನ ವಾಲಿ
ಚಂದವಾದ ಚಳತುಂಬುಗಳು
ರಾಗೂಟಿ ಚವರಿ ಹೆಳಲು ಭಂಗರ |
ಸಾವಿರ ಹೊನ್ನಿನ ಸರದಾಳಿಗಳು
ಮೋಹರಾದ ಮುತ್ತಿನ ಮೂಗುತಿ
ಮೇಲ್ಕೆಚ್ಚಿಸಿ ದಂತವಜ್ಜರ |
ಕಂಟಕ ಧರಿಸು ಕರಡಿಗಿ ಸರ್ಪಣಿ
ಪಟ್ಟಿ ಮುತ್ತು ಹೆಳಲ ಭಂಗರ |
ಹರಡಿ ಹವಳದ ಸರ
ಹಿರಿ ಪಿಲ್ಲಿಗಳು ಕಿರಿ ಪಿಲ್ಲಿಗಳು |
ಕಾಲಸರ್ಪಳಿ ಕಾಲುಂಗರ |
ಮಾರಹರನ ಕರುಣ ತಪ್ಪಿ
ಒಂದು ಉಳಿಯದ ಹೋದವು
ಮುಂದ ಇಲ್ಲೊ ನಮಗೆ ಆಸರ ||ಇಳವು||

ಇಷ್ಟು ಹೋಗೀ ನಮ್ಮ ಕಷ್ಟ ಬಿಡಿಸುವರಿಲ್ಲ |
ಪಟ್ಟನಾ ಹಣಿ ನೆಲಕ ಬಡವೂತಲೀರವ್ವ |
ಕಷ್ಟಿ ಹಾಯತಿ ಅಲಗೆನುತ |
ತೊತ್ತೂಗಳೆಲ್ಲಾರೂ ಸುತ್ತಲೇ ಮುತ್ತಿದರು |
ಮುಕ್ಕಣ್ಣ ಹರನ | ದಯದಿಂದ ಯಿರವ್ವ
ಮಕ್ಕಳೈದಾರ ತಾಯಿ ನಿನಗ |

ಉಮ್ಮಾಯ ದಿನದಲ್ಲೆ ಎಲ್ಲಾರು ಹೇಳಿದರ |
ಸುಮ್ಮನೀರದಳುವಳು||ಏರು||

ಹನ್ನೆರಡು ಸಾವಿರ ದಂಡು
ಹರದ ಬಿಟ್ಟು ಹೋಗುವಾಗ
ಒಡದ್ಹಂಗದೀತಲ್ಲೋ ತುಂಬಿದ ಕೆರಿ||೨||

ಹೋದ ಹೋದ ಹೊದಕಿಗಳು
ಭೇದಿಸಿ ನಾ ಪೇಳ್ವೆನು
ಸುಲಗಿಯಾದವಲ್ಲ ರಾಜ್ಯದ ಮೇಲೆ |
ರನ್ನೆಯರುಡುವ ರಾಗಾವಳಿ ಸಾಲೆ
ಚದುರೇರುಡುವ ಚಂದ್ರಕಾಳಿ ಶಾಲಿ
ಬಾಲೇರುಡುವ ಬಾಳಿಪಟೀ ಶಾಲಿ |
ಹುಡುಗರುಡುವ ಹುವ್ವಿನ ಶಾಲಿ
ಮಕ್ಕಳುಡುವ ಮಂಜರ ಶಾಲಿ
ಸಣ್ಣವರುಡುವ ಸಾಸಿಬಂಣ ಶಾಲಿ |
ಕನ್ನೆಯರುಡುವ ಕಂಭವತಿ ಶಾಲಿ
ತೊತ್ತುಗಳುಡುವ ಟೋಪಿನ ಶಾಲಿ |
ಒಳ್ಳೆವರುಡುವ ಉಳ್ಳಿಗಣಿ ಶಾಲಿ |
ಕೂಸುಗಳುಡುವ ಕುಲಾಯಿ ಕುಂಚಿಗಿ
ಏಸೊಂದು ನಾ ಪೇಳಲಿ |
ಅರಳೆಲಿ ಬಿಂದಲಿ ನಾಗಮುರಿ |
ಶೇಲು ಶಕಲಾತಿ ಶಲ್ಯ ಮುಂಡಾಸ
ಪಚ್ಚೇದಂಗಿ ಪರಿಮಳ ಪಾವಡ
ಉಡುವ ಧೊತ್ರ ಜೋಡು ನಾಗಮುರಿ |
ಮಲ್ಲಾ ಸರ್ಜಾ ಮಾಡಿದ ಬದಕು
ಯಲ್ಲಾ ಹೋಗಿ ಇಲ್ಲದಾಯ್ತು
ಬಲ್ಲಷ್ಟು ಹೇಳುವೆನು ಸೂರಿ||ಇಳವು||

ರಾಮಲಕ್ಷಣ್ಣಾರು ಕ್ಷೇಮದಿಂದಿರುತಿಹರು |
ತುಡುಗ ರಾವಣ ಜಾನಕಿಯ |
ಕದ್ದೊಯಿದು ವನದೊಳಗಿಟ್ಟ |
ಹನುಮ ಹೋಗಿ ಲಂಕೆಯ ಸುಟ್ಟ |
ಕಟ್ಟ್ಯಾರು ವಿಭೀಷಣಗ ಪಟ್ಟ |
ಕರದ ಶೀಕೆಯ ಕೊಟ್ಟು
ಹಿಂಡು ದೈತ್ಯರನೆಲ್ಲ ಬಂಡ ಮಾಡಿದ ಭೂಪ |
ತಾಯಿ ತಂದವ ಕುಲದೀಪ ||ಏರು||

ಹೋದಂತ ಮಕ್ಕಳು ನಿನಗಾದರೇನ ತಾಯಿ
ಯಂದು ಭೇದಿಸಿ ಹೇಳ್ಯಾರು ಜನರೆಲ್ಲ ||೩||

ಎಂಥಾ ಧೊರೆಗಳಿಗೆಂಥಾದಾಯ್ತು
ಕಂತುಹರನೆ ಕೇಳಯ್ಯ |
ಎಂತಾ ಹೊತ್ತು ತಂದ್ಯೊ ಈಶ್ವರಾ |
ನಾಡನಾಳುವ ಧೊರೆಗಳಿಗೆ
ಇಂಥಾ ಕೇಡು ಬರಬಾರದೆಂದು
ಕಿತ್ತೂರ ನಾಡೆಲ್ಲ ಮರಗಿತು ಮರಮರ |
ಮಹಾರಾಯನು ಆಳುವಂತ
ಹನ್ನೆರಡು ಕರೂಲಿಗಳು
ಹೊನ್ನು ಹೇರಿ ಹೋದವೆತ್ತು ನೂರಾ |
ಸತ್ಯಕ ಶ್ರಾವಣ ಮಾಸದಾಗ
ಎಪ್ಪತ್ತೇಳು ನೂರು ಮಂದಿ
ತೃಪ್ತಿ ಮಾಡಿಸುವರಲ್ಲಿ ಜಂಗಮರ |
ಹಸ್ತೀನಂದರೆ ಕಿವಿಲ್ಕೇಳದ
ಹಾಲು ಹಣ್ಣು ಸಕ್ಕರಿ ಉಣಿಸಿ
ದಾನ ಕೊಡುವರನ್ನ ವಸ್ತರಾ |
ಧರ್ಮ ಮುಣಗಿ ಕರ್ಮ ಹೆಚ್ಚಿದ
ವರ್ಮ ಸಾಧಿಸಿದರು ಪೇಳುವೆನು
ವರ್ಮಕ ಸಾಗಿ ಹೋದರು ಮೂವರ ||ಇಳವು||

ಪಟ್ಟಗಟ್ಯಾರು ದೇಶಾಯೀಗೆ |
ಶಿಕೇವ ಹಾಕಿದರೆಂದು |
ಅತ್ತಿ ಚನ್ನವ್ವನೊಯಿದು
ಹಾಕ್ಕಾರು ಹೊಂಗಲದಾಗ |
ಸಾಕಿದಾ ಮಗಾನನ್ನುವರು |
ಠಾಕೂರ ಸಾಹೇಬ ಬಂದು ಠಾರಾಗಿ ಮಡಿದನು |
ಧೀರರೊಳಗೆ ಗೋಖಲೆ ತಕ್ಕೊಂಡಾನೆಂದು ||ಏರು||

ಆಕಾಶದಲ್ಲಿ ಪುಟ್ಟಿ ಚಂದ್ರ
ಲೇಸಾಗಿ ಬೆಳಕ ಬಿದ್ದರೆ
ತಾರೆ ಮೂಡ್ಯಾವು ಲಕ್ಷಾಂತರ ||೪||

ವೇಳೆವೇಳೆಕುತ್ತರ ಹೇಳಿ ಹೇಳಿ
ಬರದರೊ ನಾಳೆ ಹೊಂಡೆಂಬುವ ಉತ್ತರ |
ಒಡವಿ ವಸ್ತಗಳೆಲ್ಲ ಪೊಡವಿ ಮೇಲೆ ಚಲಿಕಾಸ |
ಬಡವಿ ಸುರಸ್ಯಾಳಂತು ಕಣ್ಣೀರ |
ಸದಲ ಹೇರುವ ಬಂಡಿಗಳೆಲ್ಲ
ಸಾಗಿ ಮುಂದಕ ಹೋಗತಿಂದು
ಬಿಟ್ಟ ಹೊಡಿಶಾಳುಣ ದನಕರ |
ಹತ್ತು ಎಂಟು ಕುದುರೆಗಳಿಗೆ
ಮುತ್ತಿನ ಜೀನವ ಬಿಗಿಸಿ
ಮುಂದ ಹಿಡಿದರುಣ ಮೋತದಾರ |
ಎತ್ತು ಕುದುರೆಗಳು ತೊತ್ತುಗಳು ಹತ್ತಿಕೊಂಡು
ಹೇರಿದಾರೊ ಬೆಳ್ಳಿ ಭಂಗಾರ |
ಗುರುವಿನ ಕರಿಸಿ ಪಾಲಕಿ ತರಿಸಿ
ತಲಿಮೇಲಪ್ತಾಗಿರಿ ಹಿಡಿಸಿ
ಹಾರಸ್ತ್ಹೊಂಟಾರೊ ಛತ್ರ ಚಾಮರ |
ಸಣ್ಣ ಮಗಳಯ್ಯ ನಾನು
ಸಾರಿ ನಾನು ಪೇಳ್ವೆನು
ತಪ್ಪ ಕೇಳೊ ಅಪ್ಪಾ ಸರದಾರ ||ಇಳವು||

ಹೊಂಡಹೊಂಡೆಂದಾರೆ ಮಂಡಾಟ ಹಿಡಿದಾಳು
ಗಂಡುಮಕ್ಕಳು ಹೋಗಿ ಯಳಿಯಾಕ ಹೋದರೆ |
ಕಂಡವರ ಕಾಲ ಹಿಡಿದಾಳೊ |
ಮಂಡಲನಾಳುವ ಪುಂಡರು ಮಡದಾರು |
ಕೆಂಡದಂತಾ ಪ್ರಾಣ ಕೊಡಲಿಲ್ಲವೀರವ್ವ
ಗಂಡನ ನೆನಸಿ ಅಳುವಳು ||ಏರು||

ನೀರ ಒಳಗಿನ ಮೀನಗಳು
ಬೇರೆ ತಗದ ಚಲ್ಲೀದಂತೆ
ಆದವಣ್ಣ ಅವರ ಅವಸ್ಥೆ ||೫||

ಎಷ್ಟ ಮಾಡಿದರ ಯನ್ನ ಬಿಟ್ಟು ಹೋಗುದಿಲ್ಲವೆಂದು
ಮಾಡಿದಳು ಅತ್ತಿ ಚನ್ನವ್ವನ ಸ್ತುತಿ |
ಅತ್ತಿ ಮಾವನ ನೆನಸಿ ಹತ್ತಿದಾಳೊ ಡೋಲಿಯನು
ಎತ್ತಿ ನೆಗವಿ ಹೊತ್ತಾರು ಬೋಯ್ಯರು |
ರಾಯನಾಯಕ ಬರತಾನೆಂದು ರೌಡಮಾಡಿ ನಡಿರೆಂದು
ಎಡಬಲಕ ಹಚ್ಚ್ಯಾರೊ ಹಿರಿದ ಕತ್ತಿ |
ಮುಂದ ಮುನ್ನೂರ ಕುದರಿ
ಹಿಂದ ಮುನ್ನೂರು ಬಾರಿನ ಮಂದಿ
ಮಾಡುತ ಹೊಂಟ ಚೌಕಿ ಪಾರಾದ ಗಸ್ತಿ |
ದೇಶಗದಿಂದ ಧಾರವಾಡ ದಾರಿ ಹಿಡಿದ ಹೋಗಿ
ಸರದಾರ ನಿಂತು ಕೇಳಿದರೊ ಆಕಿ ವಸ್ತ |
ಕೊಟ್ಟ ಅನ್ನದ ಮೇಲೆ
ಸೊಕ್ಕು ಮಾಡಬಾರದು ನೀವು
ಮಾಡಬೇಡಿರಿ ನಮ್ಮ ಮೇಲೆ ಜಾಸ್ತಿ |
ಕೊಲ್ಲಬೇಡರೀಕಿಯನ್ನು
ಕುಸೂಗಲ್ಲ ಕಿಲ್ಲೇದಾಗ ಒಬ್ಬಳನ್ನು ಹಾಕಂದ ವಸ್ತಿ ||ಇಳವು||

ಹೊತ್ತಾರೊ ಬೋಯ್ಯರು ಕುಸೂಗಲ್ಲಿಗೊಯಿದಾರು |
ಮೆಲ್ಲಕ ಕಿಲ್ಲೇವ ಇಳವುತಲೀರವ್ವೆ |
ಬಲ್ಹಾಂಗ ದುಃಖ್ಯ ಮಾಡಿದಳು |
ಅರಸನಾ ಕೂಡೊಂಮೆ ಸರಸನಾಡಾಲಿಲ್ಲ |
ಅರಸು ಭಾಪುಸಾಹೇಬ | ವರುಷಗಳಿರಲಿಲ್ಲ |
ಅರಸಿ ವೀರವ್ವ ಅಳುವಳೊ ||ಏರು||

ನೀರ ಇಲ್ಲದ ಮಲ್ಲಿಗಿ ಗಿಡ
ಬೇರು ಒಣಗಿದಾಂಗ ಆದವಲ್ಲೊ ಅವರ ಅವಸ್ಥಿ||೬||

ಇನ್ನು ಈ ಧರಿಯೊಳು
ಮುನ್ನ ಇರಬಾರದೆಂದು
ಅನ್ನ ಉದಕವ ಬಿಟ್ಟಳು |
ಸರ್ವಾಂಗವು ಬೇನೆಯಂದು
ಶರೀರ ಒಣಗಿಸಿಕ್ಕಾರ
ಸುಟ್ಟ ಸುಂಣದ ಹರಳ ಮಾಡ್ಯಾಳು |
ಸಂವಾದವು ಕೈಕಾಲು
ಮಂಣಪಾಲವಾಗಲೆಂದು
ಅನ್ನ ಉದಕವ ಬಿಟ್ಟಳು |
ನಾಡೊಳಗ ನವಲಗುಂದ
ಕಾಡಸಿದ್ದನ ಬದಿಯಲೆ ಬಂದು
ನೀರ ಮಿಂದು ಮಡಿಯನುಟ್ಟಳು ||
ಅಂಗೈಯೊಳಗೆ ಲಿಂಗವ ಧರಿಸಿ
ಜಂಗಮ ತೀರ್ಥವ ಪಡಿದು
ಲಿಂಗದ ಮೇಲೆ ಧ್ಯಾನ ಇಟ್ಟಳು |
ಭಕ್ತಿಯಿಂದಲಿ ವೀರವ್ವನ ಕರಸಿ
ತಕ್ಕಡಿ ತುಂಬ ಭಂಗಾರ ತರಿಸಿ
ದಾನ ಧರ್ಮವ ಕೊಟ್ಟಳು |
ಮುಕ್ಕಂಣ ಹರನೆ ಯನಗ
ಮುಕ್ತಿಕೊಡುಯನುತತಿಸ್ತುತಿಸುತ
ಧಾರವಾಡದ ದಾರಿ ಹಿಡಿದಳು ||ಇಳುವು||

ಶಿಕೇದ ಮಗನೊಬ್ಬ ಶಿಕ್ಕನೆಂಬುದ ಕೇಳಿ |
ದಪ್ಪನೇ ಎದಿ ನೆಲಕ ಬಡವುತಲೀರವ್ವ |
ಜಕ್ಕನೇ  ಜರಿಗಿಳಿದಾಳೊ |
ಕೊಡಹೊನ್ನಿದ್ದಾರೇನು ಬಡಿವ್ಯಾಗಿರುವುದು ಲೇಸು |
ಮಡದಿ ರಾಯರ ಕೂಡ ಮನಿಯೊಳಗೆ ಇದ್ದರೆ
ಒಡವಿವಸ್ತಗಳಿಡ ಲೇಸು||ಏರು||

ಧಾರವಾಡಕ ಬಂದು ಮೂರು ಆರು ದಿನ ಆಗುತಲೆ
ಮರಣಕಾಲ ಬಂದು ಪ್ರಾಣಬಿಟ್ಟಳು||೭||

ಸತ್ತಂತ ಶ್ರವ ನೋಡಿ ಎತ್ತಿ ಕುಂಡರಿಸಿಕ್ಕಾರ
ಮುಖ ತೊಳದು ವಿಭೂತಿ ಧರಿಸ್ಯಾರು |
ಅತ್ತಿ ಚನ್ನವ್ವ ಉಡುವ ಮುತ್ತಿನ ಶರಗಿನ ಸೀರಿ
ಉತ್ತಮರು ನಿರಿಗಿ ಹೊಯ್ದು ಉಡಿಸ್ಯಾರು |
ಹತ್ತು ಎಂಟು ವರಹ ಕೊಟ್ಟು ರತ್ನ ಕೆಚ್ಚಿದಂತಾ
ಸರಜಾ ನತ್ತು ಮೂಗಿನೊಳಗಿಡಿಶಾರು |
ಬುಕ್ಕಿಟ್ಟಿ ಊದೀನಕಡ್ಡಿ ಲೆಖ್ಕವಿಲ್ಲದ ಸುಡಸೂತ
ಕಂಚಾರತಿ ಕಳಸ ಗಿಂಡಿ ತುಂಬಿಟ್ಟರು |
ಗಂಧ ಕಸ್ತೂರಿ ಪೂಸಿ ವಸ್ತ್ರದ ಪೆಟ್ಟಿಗಿ ತರಿಸಿ
ವಿಸ್ತರಿಸಿ ಮೈಯೊಳಗೆ ಇಟ್ಟರು |
ಕವಿಕಥಿ ಹೇಳುವಂಥ ಪುರಾಣ ಪುಸ್ತಕ ಹೇಳುವಂಥ
ಬಂದು ಜಂಗ್ಮರು ನೆರದರು |
ರಾಜ್ಯ ರಾಜ್ಯದ ಬಣಜಿಗರೆಲ್ಲ ರೇಜಗಟ್ಟಿ ಅಲ್ಲಿಗೆ
ಮಹಾಜನರು ಸುರಿಸ್ಯಾರು ಕಂಣೀರ||ಇಳುವು||

ಧಾರವಾಡದ ಮಂದಿ ಭೊರೆಂದು ಅಳುವರು |
ಪಾರಾದೊಳು ನಮಗಾ ಶಂಕರನ ಸ್ತುತಿಸೂತ |
ಭೊರೆಂದು ದುಖ್ಕ ಮಾಡಿದನು |
ಅಕ್ಕತಂಗಿಯರಿಲ್ಲ ಅತ್ತಿಗಿ ನಾದಿನ್ಯಾರಿಲ್ಲ |
ಹೊತ್ತು ವೇಳೆ ಬಂದಾಗ ಯಾರಿಲ್ಲವೆನುತಲೆ |
ತೊತ್ತುಗಳೆಲ್ಲರು ಅಳುವರು||ಏರು||

ಕಿರಿದಿನೊಳಗ ಕಿತ್ತೂರು ಕಿರಿದಾದಿತೆನುತಲೆ |
ಅರಮನಿಯೊಳಗಿನ್ನ ತಿರಿಗ್ಯಾಡುವರ‍್ಯಾರಿಲ್ಲೆಂದು
ರಾವುತ ರಾಣ್ಯಾರು ಅಳುವರು||೮||

ಕವಿ : ಅಜ್ಞಾತ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು