ತುರಂಗದೊಳಗ ಜರಗುವ ಮರ್ಮ ಕೇಳರಿ ನಿರ್ಮಲ |
ಮನಸ್ಸಿನಿಂದ ನೀವೆಲ್ಲಾ |
ವೈರಾಗ್ಯ ಬಂದ ಮೇಲೆ ಆರಾಮ ಇರತಾರ ಯಾರ‍್ಯಾರ
ಅಂಜಿಕೆ ಇರುವುದಿಲ್ಲಾ||ಪ||

ಜೇಲಿನೊಳಗೆ ಹೋಗಿ ಕಾಲ ಹಾಕುದರೊಳಗ ಗಾಬ |
ಮಾಡುರ ಮೊದಲ ಪೋಲಿಸರಾ |
ಮೇಲ್ಮಾಳಿಗೆಯ ಮೇಲೆ ಕರಕೊಂಡ್ಹೋಗಿ ಮಾಲ ಜಪ್ತಿ |
ಮಾಡುವರು ಕಾರಕೂನರಾ ||
ಮರಳಿ ಗುದಾಮ ಶೋದ ಅರಿವಿ ತಗಸಿ ತಮ್ಮ ಅರವಿ |
ಕೊಡುವರು ಮಾಚಮನರಾ |
ಎರಡ ಅಂಗಿ ಎರಡ ಚೊಣ್ಣ ಲಂಗೂಟ ಟೋಪಿಗಿ ಮ್ಯಾಲ |
ವಂದ ಮಪಲರಾ ||
ತಂಡಿ ಸಲುವಾಗಿ ಗರಮ ಬಂಡಿ ಎಂಬುವ ಕಂಬಳಿ |
ಅಂಗಿ ಒಂದ ಕೊಡವುವರಾ |
ಹಾಸಿ ಕೊಳ್ಳಲಿಕ್ಕೆ ದಪ್ಪ ತಟ್ಟಿ ಗೊಂಗಡಿ ಹೊತ್ತಕೊಳ್ಳಲಿಕ್ಕೆ |
ರಗ್ಗ ಚಾದರಾ ||
ಊಟಕಾಗಿ ತಾಲಿ ಪಾಟಿ ಅಂಬುವವು ಪರ‍್ಯಾಣದಷ್ಟ |
ಅದರ ಆಕಾರಾ |
ನೀರು ಕುಡಿಯುವ ಅಳಿಯು ಸೇರಿನಂಥವು ತಗಡಿನ್ನು |
ಇರತಾವ ತಯ್ಯಾರಾ ||

||ಚಾಲ||

ಏಳ ಕೀಲಿ ಒಳಗ ಓದ ಇಟ್ಟಾ ವ್ಯಾಳೆ ವ್ಯಾಳೆಕ |
ಗಸ್ತಿಯವರದು ಕಾಟಾ ||
ಲೆಕ್ಕಾ ಹೇಳುವರು ವಾಚಮನ್ರು ಸ್ಪಷ್ಟಾ ತಾಸಿಗೊಬ್ಬಬ್ರು |
ಎದ್ದೆದ್ದ ನಿದ್ದಿಗೆಟ್ಟಾ ||
ಎರಡ ಅಂತಸ್ತಿ ನಾಗ ಮಲಗುದು ಐಟಾ ಬರಾಕ ಅಂತ |
ಅದಕ ಹೆಸರಿಟ್ಟಾ ||

||ಏರು||

ಶಿಕ್ಷಾ ಆಗುದಕಿಂತ ಮೊದಲ ಅಪರಾಧಿಯ ಓದ |
ಇಡುವುದ ಅಂಡರ್ ಟ್ರಾಯಲಾ||೧||

ಮುಂಜಾನೆ ಎದ್ದ ಸ್ನಾನ ಸಂಧ್ಯಾ ತಿರಿಸಿ |
ಗಂಜಿ ಕುಡಿಯಬೇಕು ಬಿಸಿ ಬಿಸಿದಾ |

ಹನ್ನೊಂದು ಘಂಟೇಕ ಇನ್ನೇನ ಹೇಳಲಿ ಉಣ್ಣುದಕ |
ಬ್ಯಾಳಿ ರೊಟ್ಟಿ ಬರುವುವದಾ ||

ಹದಿನಾಲ್ಕು ಅಂಶ ತೂಕ ಒಂದೊಂದ ರೊಟ್ಟಿ ಎರಡ ರೊಟ್ಟಿ |
ಬ್ಯಾಳಿ ಹಾಕಿ ಕಲಿಸುವದಾ |

ಒಂದ ಸೌಟ ಉಪ್ಪ ತಂದ ವಗದರ ಕಂಣ ಮುಚ್ಚಿಕೊಂಡ |
ಅಷ್ಟು ನುಂಗುವದಾ ||

ಸಂಜೆ ಐದು ಘಂಟೇಕ ಸಜ್ಜಿ ಭಕ್ರಿ ಕೂಡ ಕಾಯಿಪಲ್ಲೆ |
ಬಾಜಿ ಅಂಬು ಹೆಸರಿನಿದಾ |

ಎಪ್ಪತ್ತ ತರದ ತೊಪ್ಲ ಪಪ್ಪಾಳಿ ಕಾಯಿ ಎಳಿ ಎಳಿ |
ಕಟಗಿ ಹುಳಾ ಒಂದೊಂದಾ ||

ಹೆಸರ ಬ್ಯಾಳಿ ಕಡ್ಲಿ ಬ್ಯಾಳಿ ಚನ್ನಂಗಿ ಬ್ಯಾಳಿ ತೊಗರಿ ಬ್ಯಾಳಿ |
ದಿವಸಕೊಂದ ಚಂದಾ ಚಂದಾ |

ಆದಿತ್ಯವಾರ ಗೋಧಿ ರೊಟ್ಟಿ ಬೆಲ್ಲ ಕೊಟ್ರ ಮಾದಿಲಿ |
ಮಾಡುದು ಏನಹದಾ ||

||ಚಾಲ||

ವಾರದಾಗೆರಡ ಸಾರೆ ಉಳ್ಳಾಗಡ್ಡಿ ಹಲ್ಲ ಇಲ್ಲದವರಿಗೆ |
ಅಕ್ಕಿಯ ಕಿಚಡಿ ||
ಸೀತ ಆದರ ಡಾಕ್ಟರ ನೋಡಿ ಎಲ್ಲಾ ರೋಗಕ್ಕೆಲ್ಲಾ
ವಂದ ಔಷದ ಕುಡಿ |
ದಿವಸಕೆರಡು ಸಾರಿ ಲೆಕ್ಕಾ ಮಾಡಿ ಕೂಡ್ರಸೂರ ಇಬ್ಬರ |
ಜೋಡಿ ಜೋಡಿ ||

||ಏರು||

ನಳದ ನೀರಿನ ಜಳಕ ಪರಸಿನ ಮ್ಯಾಲ ಪಾಯಖಾನೆಗೆಲ್ಲಾ |
ಸಂಗಮರಿ ಕಲ್ಲಾ ||೨||
ವಾರಕ್ಕೊಮ್ಮೆ ಅರಿವಿ ನೀರಾಗ್ಹಾಕುದರ ಸರ್ವರಿಗು ಬರುವದು |
ಸೋಡಾ ಪುಡಿ |
ಪೂರಾ ಎಂಟ ಘಂಟೇಕ ಕ್ಷೌರದವರ ಬಂದರ ನೀರ |
ಹಚ್ಚಿಕೊಳ್ಳುದೊಳೆ ಗಡಿಬಿಡಿ ||

ತಿಂಗಳಿಗೊಮ್ಮೆ ಭೆಟ್ಟಿ ಸಂಗಡ ವಾಚಮನರು ರಂಗ |
ಕಾಮದಲಿ ದಾಖಲ ಮಾಡಿ |
ಸಿಪಾಯಿಗೋಳ ಬಂದ ಫುಕಾರ ಮಾಡಿದ ಮ್ಯಾಲ |
ಆಫೀಸತನಕ ಬೇಗ ನಡಿ ||

ಮಾಸ ಕೊಂದ ಪತ್ರ ಖಾಸಗೀದ ಬರದರ ಹಕ್ಕೀನ |
ಪತ್ರ ಬಂದ ಹಿಂದಿಗಡಿ |
ಟಪಾಲುಗಳು ಎಲ್ಲಾ ತಪಾಸ ಮಾಡಿದ ಮ್ಯಾಲ |
ಕಳಿಸುದಕ ಸುಪ್ರಿಡೆಂಟಿ ಸಹಿ ಮಾಡಿ ||

ಬಂದ ಪತ್ರಗಳು ತಂದ ಕೊಡುವರು ಒಂದೊಂದ |
ಅವರ ನಂಬರ ನೋಡಿ |
ಹದಿನೈದ ದಿವಸಕ್ಕೊಮ್ಮೆ ಬಂದ ಡಾಕ್ಟರ ತೂಕಕ ಕಟ್ಟಸತಿದ್ದ ತಕ್ಕಡಿ ||

||ಚಾಲ||

ತೂಕ ಕಡಿಮಿ ಅದರ ಚಪಾತಿ ಎಂಟ ಔಂಸ ಹಾಲ ಅವನ ಪೂರ್ತಿ ||
ಸೀತ ಅದರ ಪಲಂಗ ಮ್ಯಾಲ ವಸ್ತಿ ಗಾದಿ ತಲಗಿಂಬ |
ಪರ‍್ಯಾಣ ಅವನ ಹಂತಿ ||
ವಾರದಾಗೆರಡ ಸಾರೆ ಸಿವ್ಹಿಲ್ ಸರ್ಜನ ಸರತಿ ಬಂದ ತಗೊಂಡ |
ಹೋಗಾಂವ ಎಲ್ಲಾ ಮಾಹಿತಿ ||

||ಏರು||

ಬಾಯಿ ಮಾತಿನ ಮ್ಯಾಲ ರಿಪೋರ್ಟು ಪೋಲಿಸರದು |
ಭೀಮೇಶಂದ ಯಾವ ಮಾತಿಗೆ ಕಡಿಮಿಲ್ಲಾ||೩||

ರಚನೆ :
 ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು