(ಸುನೋ ಸುನೋ ಏ ದುನಿಯಾ ಬಾಪೂಜಿಕಾ ಅಮರಕಹಾನೀ ಎಂಬಂತೆ)

ಕೇಳಿರಿದೋ ಈ ಕ್ರಾಂತಿಯ ಕಥೆಯಾ ಹೈದರಾಬಾದಿನ ಶರಣಾಗತಿಯಾ
ಕಾಂಗ್ರೆಸ್ಸಿನ ಕರೆ ಕಣ್ಣೀರಿನ ಮೊರೆ ಕಾಸೀಮ ರಜವೀ ನರಹತಿಯಾ||ಪ||

ಭಾರತದೇಶವು ಸ್ವತಂತ್ರವಾಯಿತು ಬ್ರಿಟಿಶರಾಜ್ಯದಾಳಿಕೆ ಮುಗಿದು
ಭಾರತ ಸಂಸ್ಥಾನಿಕರು ಸೇರಿದರು ಹಿಂದೀ ಒಕ್ಕೂಟವನೊಲಿದು
ಭಾರತಿ ಕಣ್ಣಲಿ ನೋಡಿ ನಲಿದಳು ಆನಂದಾಶ್ರುಗಳನು ಸುರಿದು
ಸಾರಲೇನು ಹದಗೆಟ್ಟಿತು ಹೈದರಾಬಾದವು ಕಾಂಗ್ರೆಸ್ಸನು ಜರಿದು
ಯಾರದಿಲ್ಲ ಅಧಿಕಾರವೆಂದ ನೈಜಾಮ ದೊರೆಯು ಮಾರ್ಗವ ತೊರೆದು||೧||

ಪ್ರಜಾರಾಜ್ಯವಾಗಲು ಬೇಕೆಂದರು ದೇಶನಿಷ್ಠ ಕಾಂಗ್ರೆಸ್ಸಿಗರು
ನಿಜಾಮ ಪ್ರಭುವಿಗೆ ನಾನಾ ಬಗೆಯಲಿ ನಮ್ರ ನಿವೇದನೆ ಮಾಡಿದರು
ಪ್ರಜಾಮತದಿ ರಾಜ್ಯವ ನಡೆಸೆಂದರು ರಾಜನೀತಿಯನು ಬಲ್ಲವರು
ಅಜೇಯರಾಗಲಿ ಸಹಕಾರದಿ ಹಿಂದು ಮುಸ್ಲಿಮ ಸಹೋದರರು
ಸಜಾತೀಯತೆಯು ನಷ್ಟವಾಗಲೆಂದರು ನಾಡಿನ ಸರ್ವಪ್ರಜರು||೨||

ಕೇಳದಾದ ನೈಜಾಮ ಪ್ರಭುವು ಕಾಂಗ್ರೆಸ್ಸಿನ ಕೂಗನು ಮೈಮರೆದು
ಹಾಳಾಗುವ ಆಲೋಚನೆ ಮಾಡಿದ ಮಂತ್ರಿಮಂಡಲವ ಕರೆಕರೆದು
ಏಳಗೊಡದೆ ಕಾಂಗ್ರೆಸ್ಸಿಗರನು ಸೆರೆಹಿಡಿಯಿರೆಂದ ಕತ್ತಿಯ ಹಿರಿದು
ತಾಳಗೆಟ್ಟ ಹೈದರಾಬಾದಿನೊಳು ಮೂಡಿತೊಂದು ಗ್ರಹ ಮೈದೆರೆದು
ಕಾಳಗತ್ತಲೆಯ ಕಾರಭಾರದಲಿ ಕೆಡುಹಲು ಬಂದಿತು ಮುಂದರಿದು||೩||

ನಿಜಾಮರಾಜ್ಯದಿ ಧೂಮಕೇತುವು ಮೂಡಿತು ಕೇಡಿನ ಸೂಚನೆಯಾ
ಮಾಡಿಸಿತಾಕ್ಷಣ ಕೊಲೆಗಡಕರ ರಜಕಾರರ ಸಂಘ ಸ್ಥಾಪನೆಯಾ
‘ಇತ್ತೆಹಾದಿ’ ಎಂಬ ನಾಮವಿತ್ತನಾ ಸಂಸ್ಥೆಗೆ ರಜವೀ ಸ್ವಾರ್ಥಮಯಾ
ಹಿಂದೂ ಜನರನು ಕೊಂದು ಹಾಕಿಸಿದ ಹರಿಸಿದ ರಕ್ತದ ಕಾಲುವೆಯಾ
ಕಣ್ಣೀರಲಿ ಮೈದೊಳಿದನೆಲ್ಲರ ಕಾಸೀಮ ರಾಜವೀ ಕಲ್ಲೆದೆಯಾ||೪||

ಹೈದರಾಬಾದಿನ ನಾಲ್ಕು ನಿಟ್ಟಿನಲಿ ನಡೆಸಿದ ನಾಡಿನೊಳನ್ಯಾಯ
ಸುಲಿಗೆ ಕೊಳ್ಳೆ ಕೊಲೆಮಾಡಿದರೆಂದು ರಜಕಾರರನಟ್ಟಿದ ಪಾಪಮಯ
ಅಕ್ಕ-ತಂಗಿಯರ ಮಾನಭಂಗಕೆ ಮಾಡಿಸಿದನು ನಿಷ್ಕರುಣಾಹೃದಯ
ನಡೆದತ್ಯಾಚಾರವ ಕೇಳಿದರೂ ಮಿಡುಕಲಿಲ್ಲ ಜಿನ್ನಾ ಹೃದಯ||೫||

ಸಾವಿರಾರು ಜನ ನಿರಪರಾಧಿಗಳ ಸಜೀವ ಸುಡಿಸಿದ ಚಿತ್ರಗಳು
ಗಂಡರ ಕಂಬಕೆ ಕಟ್ಟಿ ಹೆಂಡರನು ಕೆಡಿಸಿದ ಪಾಪದ ಕೃತ್ಯಗಳು
ಸಣ್ಣ ಕೂಸುಗಳ ಚೆಂಡನಾಡಿ ತೂರಾಡಿದ ರಾಕ್ಷಸನೃತ್ಯಗಳು
ಮಾನಕಂಜಿ ಭಾವಿಯ ಹಾರಿದರು ಅಸಂಖ್ಯ ಹಿಂದು ಮಾತೃಗಳು
ಪಾಪಕೃತ್ಯಗಳ ನೋಡಿ ಭಾರತಿಯು ಕಣ್ಣಲಿ ನೀರನು ಸುರಿಸಿದಳು||೬||

ಹತ್ತೊಂಬತ್ತನೂರಾ ನಾಲ್ವತ್ತೆಂಟನೆಯ ಜನವರಿ ತಿಂಗಳ ಕಡೆ ಮೊದಲು
ಕೊಲೆಗಾರಂಭವದಾಯಿತು ಹೈದರಾಬಾದಿನ ಹಿಂದೂ ಜನತೆಯೊಳು
ಮೂರನೂರು ಐವತ್ಮೂರು ಹಳ್ಳಿಗಳ ಸುಟ್ಟು ಸುಲಿದ ಚಿನ್ನಾಟಗಳು
ಸಿರಿವಂತರ ಮನೆ ಲೂಟಿಸಿ ಜಗ್ಗಿದ ಕೋಟ್ಯಾವಧಿ ಧನ ನಾಣ್ಯಗಳು
ಹರಿದು ಹೋಗುತಿರೆ ಸ್ವಾಮಿ ರಮಾನಂದರು ಕೇಳ್ದರು ನಾಡಿನ ಗೋಳು||೭||

ನೋಡಿ, ನಡೆದ ಕೊಲೆ ಹೈದರಾಬಾದಿನ ನಾಡೊಳು ಮೂಡಿದ ಉದಯರವಿ
ಗಾಢ ಕತ್ತಲೆಯ ಕಳೆಯಲು ಬಂದನು ರಮಾನಂದ ಲೋಕಾನುಭವಿ
ಹೂಡಿದ ಮಾನವ ಸ್ವಾತಂತ್ರ್ಯದ ರಥಕೆರಡು ಕುದುರೆಗಳು ಶೀಘ್ರ ಜವಿ
ಜೋಡಿಸಿ ಕಟ್ಟಿದ ಸತ್ಯಶಾಂತಿಗಳ ಗಾಂಧೀತತ್ವಾಮೃತದ ಸವಿ
ಕೇಡಿನಿಂದ ಕಡೆಗಾಗಲೆಂದು ನೈಜಾಮರಿಗರುಹಿದ ಶಾಂತಿ ಪವಿ||೮||

ದೊರೆ ನಿಜಾಮ ಕೇಳ್ ಭಾರತ ರಾಜ್ಯವು ಸ್ವತಂತ್ರವಾದುದ ನೀನರಿಯಾ
ಅರಸು ಪ್ರಜೆರ ಸ್ವಾತಂತ್ರ್ಯವ ಕಸಿವುದು ಪಾಪವೆಂಬುದನು ನೀನರಿಯಾ
ತೊರೆದು ಪ್ರಜಾಮತ ರಾಜ್ಯವಾಳಿದರೆ ಚಿರಕಾಲವು ನೀ ಬಾಳುವೆಯಾ
ಭರತರಾಜ್ಯದಲಿ ಲೀನವಾಗಿ ನೀ ಹೋದರೇನು ಹಾಳಾಗುವೆಯಾ
ಉರಿಯ ಹಚ್ಚಿ ಹಿಂದೂ ಮುಸ್ಲೀಮರು ಉರಿದ ಕಿಚ್ಚ ನೀ ನೋಡುವೆಯಾ||೯||

ಮೀರಲಾಯಕ ಅಲಿ ಮಂತ್ರಿ ನಿಜಾಮರ ಕಾರಸ್ಥಾನೀ ಮಂಡಲವು |
ವೈರಭಾವದಿಂ ಮೀರಿ ಹಿತೋಕ್ತಿಯ ಗೈಸಿದ ತೀರ್ಥರ ಬಂಧನವು |
ಘೋರ ತಾಪದುರಿ ಕಿಡಿಗಳನುಗುಳಿತು ಕಾರಿತು ಬೆಂಕಿ ಪ್ರಜಾಮನವು |
ತೀರಿದ ಪುಣ್ಯ ನಿಜಾಮ ದೊರೆಗಳನು ದುರ್ಗತಿಗೊಯ್ಯುವುದೇ ನಿಜವು |
ಊರಕೇರಿಯಲಿ ನಗರ ಬೀದಿಯಲಿ ಉದ್ಭವಿಸಿತು ಕೋಲಾಹಲವು||೧೦||

ನೀತಿವಂತ ನಿರ್ಮಲ ಮನಸಿನ ಇಂಬ್ರೋಜ ಪತ್ರ ಸಂಪಾದಕರು |
ಖ್ಯಾತಿವಂತ ಶೋಬುಲ್ಲಾಖಾನರು ಮುಸಲೀಮ್ ಧರ್ಮಪ್ರಚಾಕರು |
ಪಾತಕತನವಿದು ಪ್ರಜೆರ ಕೊಲ್ಲುವದು ಬೇಡವೆಂದು ನಿಜ ಸಾರಿದರು |
ಘಾತಿಸುತವರನು ಕೊಲೆ ಮಾಡಿದಿರು ರಜವೀ ರಾಜ್ಯ ಸ್ಥಾಪಕರು||೧೧||

ಗಾಣದಾಳ ಸ್ಟೇಶನ್ನದಿ ಗಾಡಿಯ ನಿಲ್ಲಿಸಿ ಲೂಟಿಯ ಮಾಡಿದರು
ಮಾನವತಿಯರನು ಹಿಡಿದೆಳೆದೊಯ್ಯುತೆ ಮಾನಹಾನಿಯನ್ನೆಸಗಿದರು
ಕೋಣನಂಥ ರಜಕಾರರು ಕೆಲವರ ಪ್ರಾಣಗಳನ್ನೇ ಹೀರಿದರು
ಪ್ರಾಣಭಯವ ತೋರಿಸಿ ನಾರಿಯರನ್ನೊಯ್ದು ಕಣ್ಗೆ ಮರೆಮಾಚಿದರು
ಗೋಣಿಗೆ ನೇಣನು ಸುತ್ತಿ ಗಿಡಗಳಿಗೆ ಜೋತುಗಟ್ಟಿ ತೂಗಾಡಿದರು||೧೨||

ಎತ್ತಲು ಸುತ್ತಲು ಕೊಯ್ಯುವ ಕೊಲ್ಲುವ ಕೃತ್ಯಗಳನು ಕಿವಿಗೇಳಿದವು
ಎತ್ತು ಎಮ್ಮೆ ಕುರಿ ಕೋಣ ಕೋಳಿಗಳ ನೆತ್ತರದಿಂ ತೊಯ್ದಿತು ನೆಲವು
ಅತ್ತು ಕರೆದು ಕೊರಚಿಟ್ಟು ಚೀರುತಿಹ ಮುತ್ತೈದೆರ ಬಾಯಾರಿದವು
ಹೆತ್ತೆ ಏಕೆ ಹಡದಮ್ಮ ನಮ್ಮನೆಂದತ್ತು ಅತ್ತು ಕೊರಳುಬ್ಬಿದವು
ಕತ್ತು ಮುರಿದು ಕೂಸುಗಳ ಚೆಲ್ಲಿದರು ಕಾಣಲಿಲ್ಲ ತಾಯಿಗೆ ಮಗುವು||೧೩||

ಭಾರತ ಹೈದರಾಬಾದ ಒಪ್ಪಂದವ ಮುರಿದು ಗೈದ ಒಳಸಂಧಾನ |
ಮೀರಲಾಯಕ ಅಲಿ ಮಂತ್ರಿ ನಡಿಸಿದನು ಗುಪ್ತ ಯುದ್ಧ ಕಾರಸ್ಥಾನ |
ಹೇರಿ ವಿಮಾನದಿ ತುಂದುಕೊಟ್ಟ ಶಸ್ತ್ರಗಳನು ಸಿಡ್ನೆ ಕಾಟನ್ನಾ |
ಮಾರಿದ ಹಣ ಐವತ್ತು ಕೋಟಿ ನೈಜಾಮರಿತ್ತು ಕಳುಹಿದರವನಾ |
ಚೋರ ಕ್ರೂರತನ ಹೈದರಾಬಾದಿನ ಕೇಳಲಿಲ್ಲ ಪಾಕಿಸ್ತಾನ||೧೪||

ಕೇಳಿ ಹೈದರಾಬಾದಿನ ಕೋಲಾಹಲ ಕೆರಳಿತು ಭಾರತ ಸರಕಾರ
ಹೇಳಿ ಬುದ್ಧಿ ನೈಜಾಮ ದೊರೆಗಳಿಗೆ ಮಾಡಿತು ರಕ್ಷಣೆಯ ವಿಚಾರ
ಕೇಳಲಿಲ್ಲ ಹೈದರಾಬಾದಿನ ದೊರೆ ನಡೆಯಿತು ಮಾನವ ಸಂಹಾರ
ಮೇಳಗೂಡದಾಯಿತು ಮೌಂಟಬ್ಯಾಟನ್ನರು ನಡೆಸಿದರು ಸಹಕಾರ
ತಾಳಗೆಟ್ಟ ನಾಡಿನ ರಕ್ಷಣೆ ಮಾಡುವದೇ ಭಾರತ ನಿರ್ಧಾರ||೧೫||

ಹೈದರಾಬಾದನು ಹಿಂದೀ ಒಕ್ಕೂಟದಿ ಸೇರ್ಪಡಿಸಲು ತಿಳಿಸಿದರು
ಹೈದರಾಬಾದಿನ ಏಜಂಟ ಜನರಲ್ ಕೆ.ಎಮ್.ಮುನಶಿ ಎಂಬವರು
ಕೈದು ಮಾಡುತವರನ್ನು ನಿಜಾಮರು ಸುಡುವಾಲೋಚನೆ ನಡೆಸಿದರು
ಸಂಧಿಮಾಡಿಸಲು ಬಂದರು ಮೈಸೂರಿನ ಮಿರ್ಜಾ ಯಿಸ್ಮಾಯಿಲರು
ಒಂದುಗೂಡಿಸದೆ ಹಿಂದಕೆ ಸರಿದರು ದೈವಬರಹ ಮೀರುವವರಾರು||೧೬||

ಪಡುವಣ ಮೂಡಣ ತೆಂಕಣ ಬಡಗಣ ಗಡಿಯಲಿ ಅತ್ಯಾಚಾರಗಳು
ಸುಡುವ ಕೊಲ್ಲುವ ಗುಂಡಿಕ್ಕುವ ಜಾತ್ಯಂತರಗೊಳಿಸುವ ಖಲಕೃತ್ಯಗಳು
ಹಿಡಿದೆಳೆಯುವ ಹಿಂದೂ ಹೆಂಗಳೆಯರ ಹರಿದವು ಮಂಗಲಸೂತ್ರಗಳು
ಹೊಡೆದು ಕೆಡಹಿ ಮಾಂಸವ ತಿನಿಸುವ ರಜಕಾರರ ಕಕ್ಕಸ ಬಲುಮೆಗಳು
ನಡೆದವು ಬೀದರ ಬಿಜವಾಡ ರಾಯಚೂರ ದುದನಿ ಕೊಪ್ಪಳ ಗಡಿನಾಡಿನೊಳೂ||೧೭||

ಗಡಿಯಲಿ ಕೊಪ್ಪಳ ಇಟಗಿ ಶಾಂತಗಿರಿ ಹೆಂಗಳೆಯರು ಹೋರಾಡಿದರು
ಕುಡಗೋಲಿನ ಕೈಯಿಂದ ವೈರಿಗಳ ಸುಡುಗಾಡಿಗೆ ಎಡೆಮಾಡಿದರು
ಕಡುಗಲಿ ಕಿತ್ತೂರಿನ ಚೆನ್ನಮ್ಮನ ಕದನ ಶೌರ್ಯವನು ತೋರಿದರು
ತುಡುಗ ಪಠಾಣರು ಬರಲು ಮಾಳಿಗೆಯನೇರಿ ಕಲ್ಲು ಮಳೆ ಸುರಿಸಿದರು
ಹೆಡೆಯೆತ್ತಿದ ಸರ್ಪ ಕಾಣುತೆ ರಜಕಾರರು ಹೇಳದೆ ಓಡಿದರು||೧೮||

ಕನ್ನಡ ಕಡುಗಲಿ ಕೆ.ಎಸ್.ಪಾಟೀಲರು ರಕ್ಷಕದಳ ರಚಿಸಿದರು
ಮುನ್ನಡೆಯಲಿ ರಜಕಾರರೆಲ್ಲಿಯು ನಿಲ್ಲದಂತೆ ಪ್ರತಿಭಟಿಸಿರು
ಮಾನ್ಯ ಮಹೋದಯ ಶರಣಗೌಡ ಗುಲ್‌ಬುರ್ಗೆಯ ಶೌರ್ಯನಿಕೇತನರು
ಮಣ್ಣು ಮುಕ್ಕಿಸುತ ವೈರಿಯ ಜೀವದ ಹಂಗುದೊರೆದು ಕಾದಾಡಿದರು
ಕಣ್ಣು ಕಂಡಕಡೆಗೋಡುತಲಿದ್ದರು ಕಾಸೀಮ ರಜವೀ ಬೆನ್ನಿಗರು||೧೯||

ಶೂರಧೀರ ಸರದಾರ ಪಟೇಲರು ವೀರಘೋಷಣೆಯ ಮಾಡಿದರು |
ಸೇರಿಸಿಕೊಳ್ಳಲು ಹೈದರಾಬಾದನು ಮೂರೇ ದಿನ ಸಾಕೆಂದವರು |
ಮಾರುತ್ತರದಲಿ ಮೀರಲಾಯಕ ಅಲಿ ಗುಂಪಿನವರು ಉರಿ ಕಾರಿದರು |
ಭಾರತ ಹೈದರಾಬಾದದ ಗೊಡವೆಗೆ ಬಾರದಿರುವದೊಳಿತೆಂದರು |
ಮೇರೆದಪ್ಪಿದರೆ ತೋರಿಸುವರು ಕೈ ನಿಜಾಮನಾಡಿನ ರಕ್ಷಕರು||೨೦||

ವಿಷವ ಕಾರುತಲಿ ಕಾಸೀಮ ರಜವಿಯು ಹಸಿ ಬಿಸಿ ಹುಸಿಮಾತಾಡಿದನು |
ಅಸಫಜಾಹಿ ಧ್ವಜ ಹಾರಿಸುವೆವು ದಿಲ್ಲಿಯ ಕಿಲ್ಲೆಯೊಳೆಂದುಸುರಿದನು |
ಮಸೆದು ಹಲ್ಲು ಕಡಿಯುತ್ತ ಕರೆದು ರಜಕಾರರಿಗಾಜ್ಞೆಯ ನೀಡಿದನು |
ಹೊಸೆದು ಮೀಸೆ ಹಿಂದುಗಳ ಬಿಡದೆ ಹಿಂಸಿಸುವ ಪ್ರತಿಜ್ಞೆಯ ಗೈಸಿದನು |
ಹಸಿದ ಹುಲಿಯು ಆರ್ಭಟಿಸುವಂತೆ ಭಾರತಯುದ್ಧವನೇ ಸಾರಿದನು||೨೧||

ತಡೆದು ತಡೆದು ಕಡೆ ಕಡೆಗೆ ಸಹಿಸದಲೆ ಭಾರತ ಪ್ರಧಾನ ಮಂಡಲದಿ |
ನಡೆದು ನಡೆದು ಹೈದಾರಾಬಾದಿನ ಬಗೆಗೊಳಿಸುವ ವಿಚಾರ ಮಂಡನದಿ |
ಕಡೆಯ ಮಾತು ಜನ ವಿತ್ತಜೀವಿಗಳ ರಕ್ಷಣೆ ಮಾಡುವ ದೃಢಪಣದಿ |
ನುಡಿದ ನೆಹರೂ ಘೋಷಣೆ ಹಿಂದೂ ಬಂಧು ಭಗನಿಯರ ರಕ್ಷಣದಿ |
ತಡಮಾಡದೆ ಮುನ್ನಡೆಯಿತು ಭಾರತ ಸೈನ್ಯವು ನಿರ್ಗತ ಶಾಸನದಿ||೨೨||

ಹತ್ತೊಂಭತ್ತನೂರಾ ನಾಲ್ವತ್ತೆಂಟನೆಯ ಸೆಪ್ಟೆಂಬರ್ ಹನ್ನೆರಡರಲಿ
ಇತ್ತ ನೆಹರೂ ಘೋಷದ ಮರುದಿನ ಹದಿಮೂರರ ನಡುರಾತ್ರಿಯಲಿ
ಗೊತ್ತರಿಯದ ಸೊಲ್ಲಾಪುರದಲ್ಲಿ ಹ ಹಿಂದೀ ಸೈನ್ಯದ ಶಿಬಿರದಲಿ
ಹತ್ತಿ ವಿಮಾನದಿ ಬಂದ ಪಟೇಲರು ಸೈನ್ಯಕಿತ್ತ ಸಂದೇಶದಲಿ
ಸುತ್ತು ವೀರರಸ ಉಕ್ಕಿತು ಸೈನ್ಯದಿ ಪಶ್ಚಿಮ ದಂಡಿನ ಯಾತ್ರೆಯಲಿ||೨೩||

ಪೂರ್ವ ದಂಡಯಾತ್ರೆಯು ಹೊರಟಿತು ಬಿಜವಾಡದಿಂದ ಬಹು ಒತ್ತರದಿ
ಸರ್ವಸಿದ್ಧಿ ಸಂಗ್ರಾಮಸಾಧನ ಸಮೂಹದಿಂದ ಜಯದಾತುರದಿ
ಗರ್ವ ಭೇದಿಸುವ ಮದ್ದು ಗುಂಡುಗಳ ಮಳೆಗರೆಯುತ ಸಿಡಿಲಬ್ಬರದಿ
ಪೂರ್ವ ರಂಗ ನಿರ್ವೈರ ಭಾರತವ ಕಟ್ಟುವ ಕಾದುವ ದೃಢಮನದಿ
ಊರ್ವಿ ಭಾರ ರಜಕಾರ ಹಿಂಸಕರ ನಿರ್ಮೂಲನ ಗೈಯುವ ತೆರದಿ||೨೪||

ಮೇಜರ್ ಜನರಲ್ ಚೌದರಿ ಹಿಂದೀ ಸೇನಾಪತಿ ಪೂರ್ವೋತ್ತರದಿ |
ತೇಜೋರಾಶಿ ಕಮಾಂಡರ ಶ್ರೀ ರಾಜೇಂದ್ರಸಿಂಹ ದಳ ಪಶ್ಚಿಮದಿ |
ನೈಜ ಸೈನ್ಯಪತಿ ರುದ್ರ ಬ್ರಿಗೇಡರ ಜಾಳರು ಹಂಪಿಯ ದಕ್ಷಿಣದಿ |
ಓಜಃಶಾಲಿ ಮಂಡಲ ಪತಿಗಳು ಹಿಂದೀಜನ ಸಂರಕ್ಷಣದಿ |
ರಾಜ್ಯಘಾತುಕರ ತುಂಡರಿಸಲೀ ಮಾಡಿದರಾಜ್ಞೆಯನೊಂದೇ ಕ್ಷಣದಿ ||೨೫||

ಬನ್ನಿರಿ ನಲದುರ್ಗವ ನೋಡುವ ಜವ ಹಿಂದೀಬಾಂಧವ ಭಗಿನಿಯರು |
ದಿನ್ನೆ ದಿಬ್ಬಗಳು ಸುತ್ತ ಮುತ್ತು ಕಾಣಿಸುವವು ನಿಮ್ಮಯ ಕಣ್ಣೆದುರು |
ಬಣ್ಣಿಸಲವು ರಜಕಾರರ ಗರ್ವದ ಮುದ್ದೆಗಳೆಂಬೊಲು ಮಣ್ಣೇರು |
ಧನ್ಯ ನಿಜಾಮರ ಸಿರಿಯ ಕೊಬ್ಬಿನಬ್ಬರವ ಸೂಚಿಸುವ ಕಡಿದೇರು |
ಮುನ್ನವೆ ನಲರಾಜನು ಕಟ್ಟಿದ ನಲದುರ್ಗವು ಸೌಂದರ್ಯದ ತವರು||೨೬||

ಅಂದಿನ ಸೆಪ್ಟೆಂಬರ ಹದಿಮೂರರ ಬೆಳಗು ಮೂಡುವುದರೊಳಗಾಗಿ |
ಬಂದ ಮೂರುಸಾವಿರ ನೈಜಾಮರ ಸೈನ್ಯ ತಕ್ಷಣದಿ ಹತವಾಗಿ
ಅಂದವಾಗಿ ನಲದುರ್ಗಕೋಟೆಯದು ಹಿಂದೀ ಸೈನ್ಯದ ವಶವಾಗಿ
ಮುಂದೆ ನಡೆದ ಚೌದರಿಯ ಸೈನ್ಯವದು ಮಿಂಚಿನ ವೇಗದಿ ಮುಂದಾಗಿ
ಬಂದುದು ರಾಜೇಶ್ವರ ಹುಮುನಾಬಾದ ಕೇಂದ್ರ ಝಹಿರಬಾದಿಗೆ ಸಾಗಿ||೨೭||

ಹತರಾದರು ನೈಜಾಮ ಸೈನಿಕರು ಸಿಡಿದ ಗುಂಡುಗಳಿಗೆದೆಯೊಡೆದು
ಮೃತರಾದರು ರಜಕಾರರು ರಣದಲಿ ಕಾಸೀಮ ರಜವಿಯ ನೆನೆನೆನೆದು
ಗತಿಗಾಣದೆ ಮನಬಂದ ಬಂದಕಡೆಗೋಡುತಲಿದ್ದರು ಸಿಡಿಸಿಡಿದು
ಪತನವಾಯ್ತು ನಲದುರ್ಗ ನಿಜಾಮರ ಅರಸುತನ ಜಗದಲಿ ಮುಗಿದು
ಗತಿಯಾವುದು ಶರಣಾಗತಿ ಎಂದೆನುತಿದ್ದರು ಸರ್ವರು ಕೈಮುಗಿದು||೨೮||

ಇತ್ತ ದಕ್ಷಿಣದಿ ಮುನಿರಾಬಾದದಿ ತುಂಗಭದ್ರೆಯ ದಂಡೆಯಲಿ
ಮುತ್ತಿದ ಪಠಾಣ ರಜಕಾರರ ಪಡೆ ಮೂರು ಸಾವರಿದ ಸಂಖ್ಯೆಯಲಿ
ಒತ್ತಿ ಬಂದ ಹಿಂದೀ ಸೇನಾದಳವಿತ್ತು ಮೂರುನೂರಂಕಿಯಲಿ
ಎತ್ತಲು ನಡೆಯದ ಹೈದರಾಬಾದಿನ ಪೋಲೀಸ ಕ್ರಮ ಘಟನೆಯಲಿ
ಸತ್ತರಸಂಖ್ಯರು ನೈಜಾಮ ಸೈನಿಕರು ಅಚ್ಚಗನ್ನಡರ ಕೆಚ್ಚಿನಲಿ||೨೯||

ಕಡೆಗಾಣದೆ ನೈಜಾಮರು ಕೊನೆಯಲಿ ಶರಣಾಗತಿಯನು ಸಾರಿದರು |
ಸಡಲಿದ ಹೈದರಾಬಾದಿನ ಶಕ್ತಿಯ ಪತನದ ವಾರ್ತೆಯ ಕೇಳಿದರು |
ತಡಮಾಡದೆ ಭಾರತ ಸೇರ್ಪಡೆಯಾಗಲು ಎಂಡ್ರಸನ್ನರನಟ್ಟಿದರು |
ಬಿಡದಾಗಲೆ ಸೋಲನ್ನೊಪ್ಪಿದ ಬಿಳಿ ನಿಶಾನೆಗಳ ಹಿಡಿದೆತ್ತಿದರು |
ನುಡಿದರು ಜಯ ಜಯ ಹಿಂದ ಎಂದು ಜಯ ದನಿಯಲಿ ಹಿಂದೀ ಸೈನಿಕರು||೩೦||

ಆರತಿ ಜಯ ಜಯ ಭಾರತಿ ಗಾಂಧಿ ಮಹಾತ್ಮರ ಪಡೆದ ದಯಾಧರಣಿ |
ಶೂರ ಸರದಾರ ಸುಭಾಷ ನೇಹರೂ ವೀರರತ್ನಗಳ ಗರ್ಭಖಣಿ |
ಸೇರಲಿ ಹೈದರಾಬಾದ ನಿಜಾಮರು ಭಾರತ ಒಕ್ಕೂಟದಿ ಜವದಿ
ಏರಲಿ ರಾಷ್ಟ್ರೀಯ ಧ್ವಜ ಹೈದರಬಾದಿನ ಸರ್ವಜಗಜ್ಜನದಿ |
ಆರತಿಗೈಯಲಿ ಭಾರತಮಾತೆಗೆ ಪ್ರೇಮದಿಂದ ಹಿಂದೂ ಭಗನಿ||೩೧||

ಕವಿ :
 ನಲವಡಿ ಶ್ರೀಕಂಠಶಾಸ್ತ್ರಿ
ಕೃತಿ :  ಹೈದರಾಬಾದ ರಜಕಾರ ಲಾವಣಿ