ಧೊರೀ ಚನ್ನವನ ಸೊಸೀ ಹೋದಳು ಶೆರೀ
ಕಿತ್ತೂರ ರಾಜ್ಯದ ಇಲ್ಲ ದೊರೆಯೇ||ಪಲ್ಲ||

ಸುಬೇದಾರ ಬಂದಾನು ಹೊಂಗಾಲತಳಕೆ ನಿಂತಾ ದಂಡ
ಕಂಡಿಶ್ಯಾನೊಂದ್ವಿಪರೀತ ದಂಡಿಘೇಳತಾನ
ಬಾಳೆಚ್ಚರ ಇರಂತಾ
ರಾಯಣ್ಣಾ ರಾತ್ರಿ ಬರತಾನಂತಾ ಡಂಗೂರ ಹೊಡಿಶ್ಯಾನ
ಅವನೂರ ನೋಡಿರೆಂತ
ನಾಳಿ ಹೋಗೂನು ಸೋಮಾರದ್ಹೊತ್ತ
ಚವಕಿ ನಿಂತತಿ ಸವಾನೂರ ಕುದರಿ
ಕಿತೂರ ರಾಜ್ಯಕೆ ಇಲ್ಲ ದೊರಿಯೆ||೧||

ಸೋಮಾರದುಂದಯಕೆ ಮಸಲತ ಮಾಡ್ಯಾರಲ್ಲ
ಪಾಲಕೀ ಮಾಲಿಗೋದರಲ್ಲ
ದುಖಾ ಮಾಡ್ಯಾಳ ಶಿವ ಸಾವ ಕೊಡಲಿಲ್ಲಾ
ಎಡಾ ಬಲ ಮನಿ ಮಕ್ಕಳಿಲ್ಲ
ಹನ್ನೆರಡ ಸಾವಿರದರ್ಬಲಾ ಮುಣಗಿತಲ್ಲ
ಶಿಲೇದಾರ ಸರದಾರ ಒಬ್ಬಲ್ಲ
ಮನಿಯ ದೇವರ ವೀರಭದ್ರ ಪರಬುನಲ್ಲ
ಆಕಿ ವೆಳ್ಯಕ ಯಾರ‍್ಯಾಕ ದಿಕ್ಕಿಲ್ಲ
ದುಃಖಾ ಮಾಡ್ಯಾಳ ಅತ್ತಿ ಮಾವ ನೆನೆಸಿ ಭಾರಿ
ಕಿತ್ತೂರ ರಾಜ್ಯಕೆ ಇಲ್ಲ ದೊರಿಯೆ||೨||

ಪಾಲಕಿ ಸುತ್ತಮುತ್ತ ನೋಡು ಕೆಂಪ ಕಂಡತಿ ಭಾರಿ
ಸಿಲೇದಾರ ಸರದಾರ ರಾವುತರು
ರಾವಜೀಟೈತಿ ಮುಂದ ಮುಂದ ಸುಬೇದಾರಗ
ಟೇಪೋಲ ಸಂಗಾಟದಲ ಬಾಲಾ
ಹೊಂಗಲನು ಬಿಟ್ಟು ಅವನುರನ ಹೊಂಡಿಶ್ಯಾರು
ಸಂಗೊಳ್ಳಿ ಹಾದಿ ಹಿಡಸಿದರು
ಅತ್ತಿ ರುದ್ರವ್ವಗೆ ನಿಂತ ಕಾಯಿ ವಡಸಿದರು
ಕೊದಾಪುರ ಮುಕ್ಕಾಮ ಮಾಡಿದರು
ಗರಗದ್ಹಳ್ಳಕ ಅಲ್ಲಿ ಢೇರೆ ಹೊಡಿಸಿದರು
ರಾಯಂಣಾನ ಹಾದಿ ನೋಡಿದರು
ರಾಯಂಣ ಬರಲಿಲ್ಲ ಸುಭೇದಾರ ಶಿಟ್ಟು ಭಾರಿ
ಕಿತ್ತೂರ ರಾಜ್ಯಕೆ ಇಲ್ಲ ದೊರಿಯೆ||೩||

ಸುಬೇದಾರ ಹೇಳತಾನ ಯಾಕ ದುಃಖಾ ಮಾಡಿ ಅಳತಿ
ಅಲ್ಲಿ ಹೋದಲ್ಲಿ ಖೂಶಾಲ ಇರುವಂತೆ
ಮಾಲ ಇಳದಾಳ ಇಂದೀಗೆ ಎರವಾಯಿತು
ಪಾಲಕಿ ತಯ್ಯಾರನಾಗೇತಿ
ದುಃಖ ಮಾಡಿಕೊಂತ ಪಾಲಕಿ ತಾನು ಹತ್ತಿ
ಆಕಿ ಹಿಂದ ಮುಂದ ಬಟಂಗಿ ಆಗುತೈತಿ
ಚೌರಿ ಚಾಂಬೂರಿ ಹಾರ‍್ಯಾವು ಎಡಬಲಕೆ
ಆಕಿ ಇಡ ತೇಜಿ ಮುಂದ ನಡೂತತಿ
ಹಗಲಿ ದೀವಟಿಗೆ ಹಿಡಿಶ್ಯಾರ ಅಪತಗೀರಿ
ಕಿತ್ತೂರ ರಾಜ್ಯಕೆ ಇಲ್ಲ ದೊರಿಯೆ||೪||

ಬುದವಾರದುಧಿಯಾಕ ಧಾರವಾಡಕೆ ಓದರಲ್ಲಾ
ಅಕಿ ಮಜಕೂರ ಟೀಕ ಕಾಣಲಿಲ್ಲಾ
ಕುಸುಗಲ್ಲ ಶಹರಾ ಅಲ್ಲಿ ಮನಿ ಮಾಡ್ಯಾರಲ್ಲಾ
ಅಕಿ ದುಃಖ ಸಮಸವರ‍್ಯಾರಿಲ್ಲ
ಮಲರ ಪಕೀರ ಕಂಡಷ್ಟು ಹೇಳೆನಲ್ಲಾ
ಅಕಿ ಮೋಜಿನ ಸಿದ್ಧಕ್ಯಾಲ ಬಾಳಾಡಮಗಿ
ಬಸುಣ ಡಪ ತುರಾಯಿ ಹಚ್ಯಾನ ಬಾರಿ
ಕಿತ್ತೂರ ರಾಜ್ಯಕೆ ಇಲ್ಲ ಧೊರಿಯೆ||೫||

 ಕವಿ : ಮಲರ ಪಕೀರ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು