ಪಲ್ಲಾ

ಕಿತ್ತೂರ ಚನ್ನವ್ವನ ಸೊಸಿ ಹೊಂಗಲ ಬಿಟ್ಟು ಹೋಗುವಾಗ
ಮಾಡುತಿದ್ದಳಣ್ಣ ಮಹದುಖ್ಖ
ಮತ್ತ ನಮ್ಮ ಮಲ್ಲಸರ್ಜ ಸತ್ತು ಹೋಗದಿದ್ದರ
ಹೊತ್ತು ಹೋಗುದ್ಯಾಕ ನಮ್ಮ ಬದಕಾ

೧ನೇ ನುಡಿ

ಆರು ಆನಿ ಹದಿನಾರು ವಂಟಿ ಹನ್ನೆರಡ ಸಾವಿರ
ಕಾಲಬಲಾ ಮಾರಾಯತೋಪ ಹೋದವು ಹೇರಿ
ಹತ್ತುವಂತಾ ಮುತ್ತಿನ ಪಾಲಿಕಿ ಸುತ್ತಲ್‌ಹಿಡುವ
ಹತ್ತು ಎಂಟು ಬೆಳ್ಳಿಕಾವಿನ ಆಪ್ತಾಗೇರಿ
ಚಂದದಿಂದ ಚಕ್ಕಡಿಗಳು ವೊಂದು ವುಳಿಯದ್ಹೋದವು
ತುರಂಗರಥದ ಚವರಿ

ಶಿಟ್ಟಿನ ಶಿಪಾಯಿಗಳು ದಿಟ್ಟತನದಲ್ಲಿ
ಹತ್ತುಹುತಾಯಷ್ಟು ಇದ್ದವಲ್ಲಿ ಜರದ ಮರಿ
ಕಲ್ಲೂರ ಕಲಬಸಪ್ಪ ಕನ್ನೂರ ಮಲ್ಲಪ್ಪ
ಅವರಾದಿ ವೀರಪ್ಪ ಇದ್ದರ ಕಾರ್ಬಾರಿ
ಹಿಂತಿಂತಾ ಸರದಾರು ಕುಂತರ ಬಿದ್ದ ಹೋದಾರು
ಹಂತಾ ಬಂದಿತೊ ನಮಗ ಮಾರಿ||ಚ್ಯೇ||

ಪಾಂಡವರಿಗೊನದೇಸ ಬಂದಂತೆ ಆದಿತು
ಪಾಪಿ ದುಸ್ವಾಸ ದ್ರೌಪತಿ ಸೀರಿ ಶಳೆದೋಯ್ವವಾಗ
ಭೂಪತಿಗಳೈವರು ಇದ್ದೇನು ಮಾಡುವರು
ಪಾಪಿ ಕೇಳ ನಮ್ಮಂತಾ ಪಾತಕರ‍್ಯಾರಿಲ್ಲ
ಪನ್ನಂಗಧರನ ಸ್ತುತಿಸುತ ಈರವ್ವಾ
ಪಾರ್ವತಿ ಅರಸನ ನೆನಿಸಿದಳೊ||ಯೇರ||

ಪೂರ್ವಜನ್ಮದ ಲಿಖಿತ ಪುಣ್ಣೆ ನಮ್ಮದು ತಪ್ಪಿತೆಂದು
ಬರದಾನ್ಯಾಕ ಬ್ರಹ್ಮ ಹಿಂತಾ ಪರಿ

೨ನೇ ನುಡಿ

ಹೆಣ್ಣುಮಕ್ಕಳಿಡುವ ವಸ್ತಾ ಬಣ್ಣಿಸಿ ನಾ ಪೇಳ್ವೆನು
ಸಣ್ಣ ನಡುವಿನ ದಾಬ ಬಂಗಾರಾ
ಬುಗಡಿ ಬಾವಲಿ ಜಮಿಕಿವಾಲಿ ಚಳತುಂಬು
ಚೆಂದಾದಲ್ಲಿಡವ ರ‍್ಯಾಗುಟಿ ಚೆವರಿ ಹೆಳಲ ಬಂಗಾರಾ
ಸಾವಿರದ್ಹೊನ್ನಿನ ಸರದಾಳಿಗಳು ಮೊಹರದ ಮುತ್ತಿನ
ಮೂಗತಿ ಮೇಲೆ ಕೆತ್ತಿಸಿದಂತಾ ವಜ್ಜರಾ
ಕಂಠಕ ದರಿಸುವ ಕರಿಡಿಗಿಸರಪಣಿ ಕಟ್ಟಣಿ
ಕರಿಮಣಿ ಪಟ್ಟಿಗಿ ಮುತ್ತ ಡೊರೆ
ಚಿಂತಾಕ್ಹರಡೆ ಹವಳಸರಾ
ಹಿರಿಪಿಲ್ಲಿಗಳು ಕಿರಿಪಿಲ್ಲಿಗಳು ಲುಲ್ಲುಮಿಂಟಿಕಿ
ರುಳ್ಳಿಯಗೆಜ್ಜಿ ಕಾಲ್ಕಡಗಾ ಸರಪಳಿ ಕಾಲುಂಗರಾ
ಮಂದರಧರನ ಕರುಣ ತಪ್ಪಿ ವಂದ ವುಳಿಯದ
ಹೋದವು ಮುಂದ ಇಲ್ಲೊ ನಮಗ ಆಸರಾ||ಚ್ಯೇ||

ವಕ್ಕಲಗಿತ್ತೆರು
ಸಕಲಕ ಶಹಣೆರು
ಸತ್ಯಕ ಶರಣರಾ
ಸಾಕ್ಷಿಯ ಹೇಳುವರೇನು
ಅಕ್ಕ ನಿಲ್ಲಿಸಾ ದುಖ್ಖ ಯೆನುತ
ರಾಮ ಲಕ್ಷ್ಮಣ ಪ್ರೇಮದಿಂದಿರುವಾಗ
ಕೆಟ್ಟ ರಾವಣ ಜಾನಕಿ ವೋದು ವನದೊಳಗಿಟ್ಟಾ
ಹನುಮಂತ ಹೋಗಿ ಲಂಕಾ ಸುಟ್ಟಾ
ವಿಭೀಷಣಗ ಕಟ್ಯಾರು ಪಟ್ಟಾ
ಗಟ್ಟಿ ಶಿಕೆವು ಹಾಕಿ ಹಿಂಡ ದೈತ್ಯರನೆಲ್ಲ
ಬಂಡು ಮಾಡಿದ ಭೂಪ
ತಾಯಿ ತಂದನೊ ಕುಲದೀಪಾ ||ಯೇರ||

ಹೋದಂತಾ ಮಗ ನಿಮಗ ಆದಾನು ಪೇಳವ್ವಾ ತಾಯಿ
ಭೇದಿಸಿ ಹೇಳುರು ಯೆಲ್ಲರು

೩ನೇ ನುಡಿ

ಹೊದುವಹಂತಾ ಹೊದಿಕಿಗೋಳು ಭೇದಿಸಿ ನಾ ಪೇಳ್ವೆನು
ಹೋದವು ಯೆಷ್ಟೊ ರಾಜದ ಮೇಲೆ ಹೇರಿ
ಮಕ್ಕಳ ವುಡುವ ಮಂದಿಲಸೀರಿ
ತೊತ್ತುಗಳುಡುವ ತೋಪಿನಸೀರಿ
ಉತ್ತಮರುಡುವ ವುಳ್ಳಿಗಣಿಸೀರಿ
ರಾಣಿಯವರುಡುವ ರಾಗಾವಳಿಸೀರಿ
ಬಾಲೆಯರುಡುವ ಬಾಳಿಪಟ್ಟಿಸೀರಿ
ಚೆದರೆರುಡುವ ಚಂದ್ರಕಾಳಿಸೀರಿ
ಹುಡಿಗಿಯರುಡುವ ಹೂವಿನಸೀರಿ
ಸಣ್ಣ ವರುಡುವ ಸಾಸಿಬಣ್ಣದಸೀರಿ
ಕನ್ಯೆರುಡುವ ಕಾಂಬಾವತಿಸೀರಿ
ಕೂಸಿಗೆ ಹೊಚ್ಚುವ ಕುಲಾಯಿ ಕೊಂಚಿಗಿ
ಯೇಸೊಂದು ನಾ ಪೇಳಲಿ
ಅರಳೆಲಿ ಬಿಂದಲಿ ತೊಪ್ಪಿಗೆ ನಾಗಮುರಿ
ಶೆಲ್ಯವ ಮುಂಡಸ ಶೇಲು ಶಕಲಾತಿ
ಪಚ್ಚೆದ ಅಂಗಿ ಪರಿಮಳಪಾವಡ
ಹೊದುವಂತಾ ದೋತರ ನಾಕ್ಪುರಿ
ಯೆಲ್ಲ ಹೋಗಿ ಇಲ್ಲದಾಯ್ತು ಮಲ್ಲಸರ್ಜ ಮಾಡಿದ ಬದಕು
ಬಲ್ಲಷ್ಟು ಹೇಳುವೆನದರ ಸೂರಿ||ಚ್ಯೇ||

ಅಷ್ಟು ಹೋಗಿ ನಮ್ಮ ಕಷ್ಟ ಬಿಡಲಿಲ್ಲಯ್ಯ ಪಟ್ಟನೆ
ನೆಲಕ್ಹಣಿಯ ಬಡವುತ ಈರವ್ವ ಕಟ್ಟಿ ಹಾಯುವೆನಲಗೆನುತ
ತೊತ್ತುಗಳೆಲ್ಲರು ಸುತ್ತಲೆ ಮುತ್ತಿದರು
ತಾಯಿ ನಿಮಗ ಬಂದದ್ದೆನು
ಉಮ್ಮಾಯದಿಂದಲೆ ಹೇಳೆರೀರವ್ವಗ
ಸುಮ್ಮನಿರದ ಅಳುತಿಹಳು||ಯೇರ||

ಹನ್ನೆರಡಸಾವಿರ ದಂಡು ಹರದ ಹೋತಿ ನಮ್ಮನ ಬಿಟ್ಟು
ವಡದಾಂಗ ಆದಿತು ತುಂಬಿದ ಕೆರಿ

೪ನೇ ನುಡಿ

ಹೆಂತಾ ದೊರಿಗಳು ಹೆಂತಾದಾಯಿತ ಕಂತುಹರನೆ ಕೇಳವರಿಗೆ
ಹೆಂತಾ ಹೊತ್ತ ತಂದ ಈಶ್ವರಾ
ನಾಡನಾಳುವ ದೊರಿಗಳಿಗ್ಹಿಂತ ಕೇಡ ಬರಬಾರದಂದು
ಕಿತ್ತೂರ ನಾಡೆಲ್ಲ ಮರಿಗಿತೊ ಮರ್‌ಮರಾ
ಮಾನ್ಯೇಮಾನ್ಯೆರ ಆಳುಹಂತಾ ಹನ್ನೆರಡ ಕರೂತಿ ಹಳ್ಳಿ ಹೊನ್ನು
ಯೆತ್ತುಗಳು ಹೇರಿ ಹೋದವು ಇನ್ನೂರ
ಸತ್ಯಕ ಶ್ರಾವಣಮಾಸಕ ಯೆಪ್ಪತ್ತೇಳನೂರ ಮಂದಿ
ತೃಪ್ತಿಬಡುಹಂತಾ ಜಂಗಮರ
ಹಸ್ದೇನಂದರ ಕಿವಿಯಲಿ ಕೇಳದ
ಹಣ್ಣು ಹಾಲು ಸಕ್ಕರಿ ನೀಡಿ
ದಾನಾ ಕೊಡುವರಣ್ಣಾ ವಸ್ತರಾ
ಧರ್ಮಾ ಹೋಗಿ ಕರ್ಮಾ ಹೆಚ್ಚಿ ವರ್ಮಾ ವೆತ್ತಿ
ಪೇಳುವೆನು ಮರ್ಮ ಸಾಗವದು ಮಡದರು ಮೂವರು ||ಚ್ಯೇ||

ರಾಜ್ಜೇಕ ರಾಯನಾಯಕ ಗೋಜ ಹಚ್ಚದಿದ್ದರ}
ಮೋಜಾಗಿ ದವಲತ್ತು ಸಾಗತಿತ್ತನ್ನುತಲಿ
ಮೂಜನರೆಲ್ಲ ಮರಗುವರು
ಪಟ್ಟಿಗಟ್ಟಿ ದೇಸಾಯಿಗೆ ಗಟ್ಟಿ ಶಿಕೆವ ಹಾಕಿ
ಅತ್ತಿ ಚೆನ್ನವ್ವಾನೊಯ್ದು ಹೊಂಗಲದಾಗ ಹಾಕಿದರೂ
ಸಾಕಿದ ಮಗನೆಂಬುವರು
ಟಾಕುರ್‌ಸಾಬ್ ಬಂದು ಟಾರ್‌ಆಗಿ ಮಡದನು
ದೀರರಿದರೊಳು ಹುಟ್ಟಿ ಊರು ತೊಗೊಳರೆಂದು
ಭೋರಿಡುತ ಜನರಳುತಿಹರು||ಯೇರ||

ಆಕಾಶದ ಮೇಗಿನ ಚಂದ್ರ ಲೇಸಾಗಿ ಬೆಳಕಿಲ್ಲದಿದ್ರ
ಯೇಸೊಂದಿದ್ದರೇನ ನಕ್ಷತ್ರ

೫ನೇ ನುಡಿ

ವ್ಯಾಳೇ ವ್ಯಾಳೇಕ ವುತ್ತರ ಹೇಳಿ ಹೇಳಿ ಬರದಾರು
ನಾಳಿ ಹೊಂಡಂಬುವ ಪತ್ತರಾ
ವಸ್ತಾ ವಡವಿ ಯಲ್ಲಾ ಉಚ್ಚಿ
ಪೊಡವಿಗೆ ವಗದಾಳೊ ಬಡವಿ
ಉದರಸ್ತಾಳೊ ಕಣ್ಣೀರಾ
ಸಂಗಡೆಲ್ಲ ಹೇರಿ ಬಂಡಿ
ಯೆತ್ತು ಸಾಗಲಿ ಮುಂದಕ ಯೆಂದು
ಬಿಚ್ಚಿ ಹೊಡೆದಾರೆಲ್ಲ ದನಕರಾ
ಗುರುವಿನ ಕರಿಶಿ ಪಾಲಿಕಿ ತರಶಿ
ಮೇಲೆ ಆಪ್ತಾಗೇರಿ ಹಿಡಸಿ
ಹಾರಸ್ತ್ ಹೊಂಟರ ಚಿತ್ತರ ಚಾಮರಾ
ಸಣ್ಣ ಮಗಳಯ್ಯಾ
ನಾನು ಸಾರಿ ನಿಮಗೆ ಪೇಳುವೆನು
ತಪ್ಪ ಕೇಳೊ ಅಪ್ಪ ಸರದಾರಾ||ಚ್ಯೇ||

ಹೊಂಡ ಹೊಂಡಂದರ ಮಂಡಾಟ ಹಿಡದಾಳೊ
ಬಂಡ ಮಾಡಿ ಅವರು ಯೆಳಿಯಕ ಹೋದರ
ಕಂಡವರ ಕಾಲ ಹಿಡಿದಾಳೊ
ಮಂಡಲನಾಳುವ ಪುಂಡರು ಮಡದಲ್ಲೆ
ಕೆಂಡ ಹಾದು ನಾನು ಪ್ರಾಣ ಕೊಡಲಿಲ್ಲೆಂದು
ಗಂಡನ ನೆನಿಸಿ ಅಳುತಾಳೊ
ದಿಕ್ಕಿನೊಳು ನಮ್ಮಂತ ದೆಶಿಗೆಡಿ ಯಾರಿಲ್ಲ
ನಮ್ಮ ಹೊಟ್ಟಿಲಿ ವಂದು ಪುತ್ರನ ಇದ್ದರ
ದೇಸ್ಗತಿ ಯಾಕ ಮುಣಗುವದು||ಯೇರ||

ನೀರ ಇಲ್ಲದ ಮಲ್ಲಿಗಿ ಬೇರ ವೊಣಗಿ ಹೋದಂತೆ
ಆತಂತ್ರವಾಯಿತು ಸಂಸಾರ

೬ನೇ ನುಡಿ

ಯೆಷ್ಟು ಮಾಡಿದರ ನಮ್ಮನ ಬಿಟ್ಟ ಹೋಗುದಿಲ್ಲವೆಂದು
ನಿಷ್ಟದಿಂದ ಮಾಡ್ಯಾಳ ವೀರನ ಸ್ತುತಿ
ಅತ್ತಿಮಾವನ ನೆನದು ಹತ್ತಿದಳು ಡೋಲಿಯ
ಹೊತ್ತರಣ್ಣ ಬೋವೆರು ಯೆತ್ತಿ
ಮುಂದ ಮುನ್ನೂರ ಕುದುರಿಮಂದಿ
ಹಿಂದ ಇನ್ನೂರ ಬಾರಿನಮಂದಿ
ಮಾಡುತ್ಹೊಂಟರಣ್ಣ ಪಾರಾಗಸ್ತಿ
ರಾಯನಾಯಕ ಬರತಾನೆಂದು
ರೌಡ ಮಾಡಿ ನಡಿರೆಂದು
ಯಡಬಲ ಹತ್ತೆಂಟು ಹಿರದ ಕತ್ತಿ
ದಾಸೊಕದಿಂದ ದಾರಿ ಹಿಡಿದು
ಧಾರ್ವಾಡಕ ತಾಂವು ಹೋಗಿ
ಸರದಾರ ಕೇಳಿದ ಅವರ ಸ್ತಿತಿ
ಕೊಟ್ಟ ಅನ್ನ ಬಿಟ್ಟಕೇರ
ಕೆಟ್ಟ ಬುದ್ಧಿಯನ್ನು ಇಷ್ಟು
ಮಾಡತಿದ್ದಿ ನಮ್ಮ ಮೇಗ ಜ್ಯಾಸ್ತಿ
ರಾತ್ರಿಲಿ ರಾಯನಾಯಕನ್ಹಚ್ಚಿ ರೌಡ ಮಾಡಿ
ಸುತ್ತಿನ ಹಳ್ಳಿ ಅವನ ಕೈಲಿಂದ ಸೂಡಿಸ್ತಿ
ಕೊಲಬ್ಯಾಡರಿ ಕುಸುಗಲ್ಲ ಗೋಡಿಯೊಳಗ
ಈಕಿನ ವೈದು ವೊಬ್ಬಳಿಡರೆಂದನಲವಸ್ತಿ ||ಚ್ಯೇ||

ಹೊತ್ತರು ಬೋವೆರು ಕುಸುಗಲ್ಲಿಗೆ ವೈದರು
ಮೆಲ್ಲಕ ಕಿಲಿಯವ ಪೋಗುವಾಗ
ಈರವ್ವ ಬಲ್ಹಾಂಗ ದುಖ್ಖ ಮಾಡಿದಳು
ತಾಯಿಲ್ಲದ ಮಕ್ಕಳಿಗೆ ಆಯಿಲ್ಲೊ ಸಿರಿಯಿಲ್ಲ
ಕಾಯ ಇಡಬಾರದೆಂದು ಬಾಯ ಬಿಡುತೀರವ್ವಾ
ಸಾವ ಬೇಡಿದಳು ಶಿವನಲ್ಲಿ
ಅಕ್ಕ ತಾ ಈರವ್ವಾ ದುಖ್ಖವು ಮಾಡ್ಯಾಳೊ
ಬಕ್ಕನ ಬಾಯವ ಬಿಡವುತಲೀರವ್ವಾ
ಜಕ್ಕನೆ ಜೇರಿಗಿಳದಾಳೊ ||ಯೇರ||

ನೀರವಳಗಿನ ಮೀನ ತಗಿದು ಬ್ಯಾರಿ ಚೆಲ್ಲಿದ್ಹಾಂಗ
ನಮದು ಸೂರಿ ಅತಿ ನಮ್ಮ ಅವಸ್ತಿ

೭ನೇ ನುಡಿ

ಇನ್ನು ಈ ದರೆಯಲ್ಲಿ ಮುನ್ನ ಇರಬಾರದೆಂದು
ಅನ್ನವುದಕ ಯಲ್ಲ ಬಿಟ್ಟಳೂ
ಸಣ್ಣವಾದವು ಕೈಕಾಲು
ಮಣ್ಣಪಾಲವಾಗಲಿಯೆಂದು
ಬಣ್ಣ ವಣಗಿಸಿ ಬಿಟ್ಟಳೂ
ಸಂಗ್ರಾಣಿಬ್ಯಾನಂತ ಸರ‍್ವಾಂಗವೆಲ್ಲ
ವಣಗಿಸಿ ಸುಣ್ಣದ್ಹಾಂಗ ದೇಹ ಸುಟ್ಟಳೂ
ನಾಡವಳಗ ನವಲಗುಂದ ಕಾಡಶಿದ್ದನ್ಹಂತೆಲಿ ಹೋಗಿ
ನೀರ ಮಿನದು ಮಡಿಯನುಟ್ಟಳೂ
ಜಂಗಮತೀರ್ಥವ ಪಡೆದು
ಅಂಗದ ಮೇಲಿನ ಸ್ಮರಣಿ ಮೆರೆದು
ಲಿಂಗದ ಮೇಲೆ ಧ್ಯಾನ ಇಟ್ಟಳೂ
ಭಕ್ತಿಲಿ ವಿರಕ್ತರ ಕರಶಿ
ತಕ್ಕಡಿ ತುಂಬ ಭಂಗಾರ ತರಿಸಿ
ತೂಕಾ ಮಾಡಿ ದಾನ ಕೊಟ್ಟಳೂ
ಮುಕ್ತಿ ಕೊಡೊ ನಮಗ ನೀನು
ಮುಕ್ಕಣ್ಣ ಹರ ಗುರುವೆಯೆಂದು
ಧಾರ್ವಾಡಕ ಹೊಂಟ ಬಂದಳೂ||ಚ್ಯೇ||

ಚಿಕ್ಕ ಮಗ ಮಲ್ಲಸರ್ಜ ಶಿಕ್ಕನೆಂಬುದು ಕೇಳಿ
ಜಕ್ಕನ ಜೇರಿಗೆ ಇಳದಳೊ ಈರವ್ವಾ
ಮುಕ್ಕಣ್ಣ ಹರನ ನೆನದಾಳೊ
ಕೊಡ ಹೊನ್ನಿದ್ದರೇನು ಬಡಿವ್ಯಾಗಿರುವುದು ಲೇಸು
ಮಡದಿಗಿ ರಾಯರು ಮನಿವಳಗಿದ್ದರ
ವಡವಿವಸ್ತಗಳಿಡಲೇಸು
ವಡವಿವಸ್ತುಗಳೆಲ್ಲಾ ಬಿಡದೆ ದಾನವ ಕೊಟ್ಟು
ಕಿತ್ತೂರ ದವಲತ್ತು ಕಿರದಾದಿತೆಂಬುತಲಿ
ಭರದಿಂದೀರವ್ವಾ ಅಳುತಾಳೊ||ಯೇರ||

ಧಾರ್ವಾಡಕ ಬಂದು ತಾನು ಮೂರಾರ ದಿನಿದ್ದು
ಮರಣಕಾಲ ಬಂದ ಪ್ರಾಣ ಬಿಟ್ಟಳೂ

೮ನೇ ನುಡಿ

ಸತ್ತಂತ ಶ್ರವನೆಲ್ಲ ಯೆತ್ತಿ ಕುಂಡ್ರಿಸಿ
ಮುಖವ ದೊಳಿದು ವಿಭೂತಿ ಮೇಲೆ ಧರಿಶಾರೂ
ಅತ್ತಿ ಚನ್ನವ್ವಾ ವುಡವ ಮುತ್ತಿನ ಶರಗಿನಸೀರಿ
ವುತ್ತುಮರು ನೀರಿಗ್ಹೊದ ವುಡಶರೂ
ಕಸ್ತೂರಿಗಂಧವ ಪೂಸಿ ವಸ್ತದಪೆಟ್ಟಿಗಿ ತರಸಿ
ವಿಸ್ತರಿಸಿ ಮೈಮೇಲೆ ಇಡಶರೂ
ಹತ್ತುಯೆಂಟು ಸಾವಿರದ್ಹೊನ್ನಿನ ರತ್ನವ
ತೆತ್ತಿಸಿದ ನತ್ತು ಮತ್ತ ಮೂಗಿನೊಳಗ ಇಡಿಶರೂ
ಬುಕ್ಕಿಟ್ಟ ವೂದಿನಕಡ್ಡಿ
ಲೆಖ್ಖವಿಲ್ಲದ ಸುಡುವುತಲೆ ಕಂಚಾರ್ತಿ
ಕಲಸ್ಗಿಂಡಿ ತುಂಬಿಟ್ಟರೂ
ಪುರಾಣಪುಸ್ತಕ ವೋದುವಂಥ
ಶಾಸ್ತರಕಥಿಯ ನಡಸುವಂಥ
ನಾಡನಾಡ ಜಂಗಮರ ನೆರದಾರೂ
ಮಾಯವಾದ ಮರಣವೆಂದು
ಮಾಹನಾಡ ಜನರು ಕೂಡಿ
ನಿಂತ ಸುರುಶಾರೊ ಕಣ್ಣೀರೂ||ಚ್ಯೇ||

ಅತ್ತಿಮಾಂವರು ಇಲ್ಲ ಅತ್ತಿಗಿನಾದನೆರು ಇಲ್ಲ
ಹೊತ್ತ ಬಂದಾಗ ಮರಗು ಹೆತ್ತವ್ವ ನೀ ಇಲ್ಲೆಂದು
ತೊತ್ತುಗಳೆಲಾ ಅಳುತಿಹರೂ
ಅಣ್ಣ ಅಕ್ಕಗಳಿಲ್ಲ ತಂಗಿತಮ್ಮಗಳಿಲ್ಲ
ಅರಮನಿವಳಗ ಇನ್ನ ಅಡ್ಡಾಡವರಿಲ್ಲೆಂದು
ಅರಿಪರಿವುತ ಅಳುತಿಹರೂ
ಪುರುಷನ ಕೂಡೊಂದು ಕಾಲ ಸರಸವು ಆಡಲಿಲ್ಲಾ
ಅರಸು ಬಾಪುಸಾಬ್ ಇನ್ನೊಂದೊರಂಷವಿರಲಿಲ್ಲೆಂದು
ರಾಹುತರೆಲ್ಲಾ  ಮರುಂಗಿದರೂ||ಯೇರ||

ಉಪ್ಪ ವುಂಡ ಮಕ್ಕಳು ಯೆಲ್ಲಾ ದಪ್ಪನ ನೆಲಕ ಬಿದ್ದು
ಬಾಪುಸಾಹೆಬನ ಮಡದಿ ನೆನದಳುವರು

೯ನೇ ನುಡಿ

ರಾಜರಾಜೆದ ಜನರೆಲ್ಲಾ ರೇಜಗಟ್ಟಲ್ಲಿಗೆ ಬಂದು
ನೆರದಾರು ರಾಹುತರಾಣಿರೂ
ಬಲ್ಲಂಥ ಬಡಿಗೆನ ಕರಿಸಿ ಯೆಲ್ಲ ಸಾಹಿತ ಕೊಡಿಸಿ
ಮಾಡೆರು ವಿಮಾನವಿಸ್ತಾರಾ
ತರತರಕ ಕನ್ನಡಿ ನಿರತ ನೋಡಿ
ಹೊಂದಿಸಿ ಸರತ ನೋಡಿ ಹಾಕೆರ ಹೂವಿನ ಹಾರಾ
ಹತ್ತುಯೆಂಟು ಸಾವಿರದ್ಹೊನ್ನಿನ ಮುತ್ತಿನ ಗೊಂಡೆಗಳು
ಸುತ್ತಲಿ ಬಿಗದರು ಶೇಲು ಜರತರಾ
ಸತ್ತಂಥ ಶ್ರವವು ತಾಂವು ಹೊತ್ತುಕೊಂಡು ನಡದರು
ಹಾರಸ್ತರ ಮೇಲೆ ಛತ್ರ ಚ್ಯಾಮರ
ಬುಟ್ಟಿಬುಟ್ಟಿಲಿ ಬುಕ್ಕಿಟ್ಟ ಕಟ್ಟವಿಲ್ಲದ
ಹಾರಸ್ತ ಹಿಡದ ಹೊಂಟರ ಮಳಿಗಿ ಬಾಜರ
ಹಲಿಗಿ ಕಾಳಿ ಕರ್ನಿ ಕರಡಿ ಸಂಬಾಳ ಸಂಪರದಾನಿ
ಬಾರಸ್ತ್ ಹೊಂಟ ಮುಂದ ಸರದಾರಾ
ದಿಕ್ಕದಿಕ್ಕಿನ ಮಂದಿ ಯೆಲ್ಲಾ
ಅಕ್ಕಾ ಈರವ್ವನ ನೋಡಿ
ದುಖ್ಖ ಮಾಡ್ಯಾರೆಷ್ಟು ಜನರು||ಚ್ಯೇ||

ಧಾರ್ವಾಡದ ಮಂದಿ ಭೋರಿಡುತಳುವಾಗ
ಪಹರದಾಗಿದ್ದ ಮಗ ಶಂಕರನ
ಸ್ತುತಿಸುತ ನೂರೊಂದು ದುಖ್ಖ ಮಾಡಿದನೂ
ಯೆತ್ತುಭಂಡಿಗಳು ಹತ್ತುವ ಕುದುರಿಗಳು
ಸತ್ತ ಶ್ರವದ ಮುಂದ ಸಾಗಿ ಹೋಗುದು ಕಂಡು
ಶೋಧಿಸಿ ದುಖ್ಖ ಮಾಡಿದನೂ
ದಾನಧರ್ಮವ ಕೊಟ್ಟು ನೇಮನಿತ್ತೆವ ತೀರ್ಶಿ
ಮುಂದ ಮುಕ್ತಿಯ ಕೊಡುವ ಬಸವನ ಸ್ತುತಿಸುತ
ಮಣ್ಣೊಳಗಿಟ್ಟ ತಿರಗಿದರೂ||ಯೇರ||

ಸುಂದರ ಹೆಬ್ಬಳ್ಳಿ ಬಸವ ಕಂಡಷ್ಟು
ಕವಿಯ ಹೊಂದಿಸಿ ಮಾಡಿದ ವಿಸ್ತಾರಾ

 ಕವಿ : ಹೆಬ್ಬಳ್ಳಿ ಬಸವ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು