ದೊಡ್ಡ ಶರಾ ಪಗಡಿ ಬಾಜಾರಾ ಅಯಿತಿ ಬಲದೂರ
ಕಾಣವದು ಚಂದ ಬಳವಲ ದೇಶ
ಬಲಸೂರಿ ಆಯಿತೊ ನರಗುಂದ||ಪಲ್ಲ||

ನಾಡೊಳಗ ಇಲ್ಲ ಅದರ ತಾಡಿ
ಎಂಕೊಬನ ಗುಡಿ ಕಲ್ಲ ಪಡಿ ಪಡಿ
ಗುಡ್ಡದ್ವಾರ‍್ಯಾಗ ಆ ಗುಡಿಯ ವಿಸ್ತಾರಾ
ವರ್ಣಿಸಿ ಹೇಳುವೆ ನಿಮಗೆ
ಏನಂದೊ ಅದರ ವಿಸ್ತರಾ ಗಚ್ಚ ಮಂದಿರಾ
ಗಡ್ಡಿಯ ತೇರಾ
ಚಾವಣಿಯ ಮೇಗ ಹಂಚೀನ ಲೇವಿಗಳ
ಇಳಿಸಿದ ವಿಸ್ತಾರ ಹ್ಯಾಂಗ
ಏನ ಗರಡಗಂಬದ ಮೇಲೆ ಗಡಗಿ ಕಂಡೆದ
ಮಡಗಿ ಹೊಂದಿಶ್ಯಾನ ಬಡಗಿ
ಶಾಣ್ಯಾ ಬಲ್ಹಾಂಗ ಏನ ಪದರಗಂಬ ನುಡಿ ಚದರ
ವಿಚಿತ್ರದೊಳಗೆ ಕೆತ್ತಿ ಪಟಕೆ ಹೊಂದಿಶಾರೆಲ್ಲಾ
ಕಬ್ಬಿಣದ ಕೀಲಾ ಉಕ್ಕಿನದ ತಲಾ
ಕೊಂಡಿ ಅದರಾಗ ಏನ ಗಂಟಿ ಜಾಂಗುಟಿ
ಪಾತಾಳದಕಣಮಾ ಅಂಕಣ ಮೇಗ||ಚಾಲ||

ಬಾಳ ಚಾತುರ್ಯದ ಗುಡಿಯೂ
ಸುತ್ತಿನ ಫವಳಿ ಕಲ್ಪಡಿಯೂ
ಜರದಮ್ಮ ದಣಿಯೂ ಸಬರಹಿಡಿಯೂ
ನಾ ಮೇಲ ತೋರಸತೀನ ನಡಿಯೂ
ನೆಲ್ಲಕ್ಕಿ ಗಚ್ಚ ತಿಳಮಡಿಯೂ
ಅಲ್ಲಿ ಸಂಣ ಬಿದಿರಿನ ಚಡಿಯೂ||ತೋಡ||

ಬಾಳೊತ್ತ ನಿಂತ ನೋಡಿದಿ ಅಕಲಧಿಂಗಾದಿ
ಹೀಂಗ ಪದಿ ಪದಿ
ನಡಸತಲಿ ಬಂದ ಬಳವಲದೇಶ
ಬಲಸೂರ‍್ಯಾಯಿತೊ ನರಗುಂದ||೧||

ಉದಿಯಕ್ಕ ಎಂಕೊಬನ ಪೂಜಿ ಆಗೊದು ಬಲು
ಸಂಜಿ ಬಾಗಲಮುಂದ ಬಜಿ ಆಗೋದು ಚಣಚಣಕೆ
ಕಂಚಿನ ಕಾಳಿಗಳ ಹಿಡಿಯುತಾರ ಈ ಕ್ಷಣಕೆ
ವಾದ್ಯಾ ಆಗುದ ಅರನ ಬದಿಯಲಿ ತಾಳಮದ್ದಲಿ
ಸಂಶ ಜಾಂಗಟಿಲಿ ಬಾರ‍್ತ್ಯಾರಿಶ್ಯಾಡುದಕ
ಏನ ವೇಣ ತಾಂಬುರಿ ಸ್ವರಾ ಸಾರಿಂಗಿ  ಟೀಕ
ಸ್ನಾನ ಮಾಡಿ ಬಂದಾರ ಬ್ರಾಮರಾ
ಉಡುವ ಧೋತರಾ ಓದಿ ಮಂತರಾ ಮಾಡಿ ಅಭಿಷೇಕ
ಏನ ತಾಲಿ ತಂಬಿಗಿ ತುಂಬಿ ಇಟ್ಟರ ಎಡಬಲಕ
ಅಕ್ಷತಿ ಹಚ್ಚುವರು ಗಂಧ ಷೋ

[?] ವೃಂದಂದ
ಕಿರಿ ಅಟವ ತಂದ ಇಟ್ಟರ ಪುಸ್ತಕ
ಏನ ಹೆಸರ ಪಚ್ಚ ಶ್ರೀ ಪೇಚ
ಹೊಳುವತವ ಜುಳಕ
ಆಗ ಬಂದಿತು ಉಪದ್ಯರ ಗಂಮಿ
ಗುಡಿಯ ದಿಮದಿಮಿ
೧ಕಾಂಚಿನಾ೧[1] ಸಮೆ ಹಚ್ಚರ ಲಾಕ ಲಾಕ
ಆ ದೀವಿಗಿ ಬೆಳಕ ಬಿದ್ದಿತು ಶೀವಸವಾಸನಕ
ಅವನ ಮಲಗುವ ಮಂಚ ಬಲ ಇಂಬ
ಲೇಪ ಅದರ ತುಂಬ ಕುತನಿ ತಲಿಗಿಂಬ
ಅವನ ಮಲಗಂದಕೆ ಬಹು ಕುಶಾಲದಿಂದ
ಸವ ನಿದ್ದಿ ಮಾಡು ಬೆಳತನಕ||ಚಾಲ||

ದಂಡಂವಂತ ಭಕ್ತ ಪೂಜಾರಿ
ಅವ ವಿದ್ಯೇದಲ್ಲಿ ಬೇರಿ
ಹಸಿ ಹಾಲು ಚಿನ್ನಿ ಸಕ್ಕರಿ
ತುಪ್ಪದಲ್ಲಿ ಅನ್ನ ಬುರಬೂರಿ
ಕಾಯಿ ಕಜುರಿ ವಣ ಕೊಬರಿ
ಮೇಲೆ ಪಳಾರ ಮಾಡ್ಯಾರ ಚೂರಮರಿ||ತೋಡ||

ಇಷ್ಟೆಲ್ಲ ತಂದ ತನ್ನ ಸತಾ ದೇಹಕೆ ಹಿತಾ
ಸ್ವಾಮಿ ಸಲಸಂದ ಬಳವಲಾ ದೇಶ
ಬಲಸೂರಿ ಆಯಿತು ನರಗುಂದ||೨||

ಆ ಊರಿಗೆ ಬಾಬಸಾಬ ದೊರಿ
ಪನ್ನಾಸ ಪಾಗದ ಕುದರಿ ಚಿಟಾನೀ ಮರಿ
ಬಂತ ಶೃಂಗರನಿ ಅದರ ಅಳತಿ ಅಂಬಾರಿ
ಬಂಣದ ಚವಡಲೆ ಬಿಗಸಿ
ತನ್ನ ರಂಗಮಾಲಿನಾಗ ದನಿ ದೊಡ್ಡ ಅರಮನಿ
ಪಾತ್ರದ ಚಂದ್ರೆಸಾನಿ ಅವನ ಶ್ರೀ ಅರಸಿ
ಏಕಂತ ಕೋಲಿಯೂಳು ಮಾಡುತಾರ ನಗಿಹಾಸಿ
ಏಕಂತ ಕೋಲಿ ತಾರಿಪ ರಂಗಮಂಟಪ
ಮಂಚದ ಮೇಲ ಲೇಪ
ಕುತನಿಯದು ಗಾಸೆ
ಏನ ಬಂಣದ ರಜಾಯಿ ಗಂಜಿ ಹಚ್ಚಡಾ ಹಾಸಿ
ಹೋಗಿ ಕುಂತರ ಅವರಿಬ್ಬರಾ
ತಬಕದಲಿ ಪೂರಾ
ತಂದ ೨[2]ಹಾಜಿರಾ ಪರ‍್ಯ೧[3] ಕೊಳಿಗೆ ಧರಿಸಿ
ತನ್ನ ಮಾನುನಿ ಕಂಡು ಹುರಿಮಾಡುತಾನೊ ಮೀಶಿ
ಭಾಳ ಮಾನುನಿ ಮಂಚದ ಮೇಗ
ಮಾಡುರಂಗ್ಯಾಂಗಾಂಗ
ಆಡಿ ಚದರಂಗ ಅವನ ಸೋಲೀಸಿ
ಬಲ ಕುಶಾಲದಿಂದ ಮಾಡುತಾರ ನಗಿಹಾಸಿ||ಚಾಲ||

ಅವರು ಬಂದ ಹರ‍್ಯಾಗಿನ ಹೊತ್ತ
ಮಾರ್ಜಾಲ ಮಲ ಮಂದಿ ಅವನ ಸುತ್ತ
ಇರಬೇಕೊ ಇಂಥ ದವಲತ್ತ
ಏನ ಸಕಲ ಗುಣಕ ಪಂಡೀತ
ಕಡಮಿಲ್ಲ ಕೇಳ ಇವನ ದಂಡ
ಏನ ಬ್ರಹ್ಮರ ಬರದ ದೇವಲಿಖಿತ||ತೋಡ||೨

ಅಂಬುದು ಅಬಿ ಅಬಿ ಹೊನ್ನಿನ ಢಬಿ
ಹೇಳದ ಬೇಗ ಬಂದ ಬಳವಲ ದೇಶ
ಬಹು ಸೂರಿ ಆಯಿತು ನರಗುಂದ||೩||

ದೊಡ್ಡ ಮರಾಯಂದು ತಂನ ಕಿಲೆ
ಗುಡ್ಡದ ಮೇಲೆ ಅಯಿತಿ
ಬಲರಲಿ ನೀರಿನ ಜವಳಾ
ಆ ಗುಡ್ಡದ ಮೇಗ ನೀರಿನ ಶಲಿ ಭಾಳಾ
ಮತ್ತೊಂದು ಮಾಡ್ಯಾರ ಮಸಲತ್ತ
ಜಕೀರದ ಗೊತ್ತ ಸರಳ ಸಾಯಿತ್ತ
ಹೊಟ್ಟಿಯ ಕೂಳ ಏನ ಹಗೆ ಅಂಬರಿ
ಕಡಶಿ ತುಂಬಿದಾರ ಜೋಳಾ
ಗಡ ತೊಗೊಂಡಿದ್ದಿಲ್ಲ ಯಾರ‍್ಯಾರಾ
ಹಿಂದಕೆ ಭಾದೂರಾ ಮುತ್ತಿಗಿ ಜೀರಾ
ಮೂರು ತಿಂಗಳಾ ಒಂದು ಸವsನ
ಟೋಪು ಹೊಡಿದು ಮಾಡಿದರ ಜಗಳಾ
ಆಗ ಬಿಟ್ಟಿತು ಪಡುವಲ ಘಾಳಿ |
ಬಿತ್ತ ಜಡಿಮಳಿ
ಹಚ್ಚಿರೋ ಕಾಳಿಗುಂಡ ಜಳಜಳಾ
ಆಕಾಶಕೆ ತೋಪ ಹೊಡದ ಹಾರಿತ ಕೆಂಧೂಳಾ
ಕಾದಾಡಿ ಕಲಕಿದವ ಕಂಣ
ಬಾರೊ ಕಾಳಂಣ
ಮಾರಿ ಬಹುಸುಣ ಮಾಡಿದನು ಕಾಳಾ
ದುಃಖದಲಿ ಕಂಣತುಂಬ ನೀರ ತಂದ ಬಳಬಳಾ||ಜಾಲ||

ಅಸ್ಕರಿ ಆಯಿತೊ ಲಡಾಯಿ
ಆಗ ನಿಂತಿತೊ ಕಾಳಂಣನ ಕೈ
ಇದಕೇನು ಮಾಡುನು ಉಪಾಯಿ
ಶಿಟ್ಟೀಲೆ ರಾಮದುರ್ಗದ ಬಾಯಿ||ತೋಡ||

ಬಪ್ಪರೆ ಪುಂಡ ಭಾದೂರಾ ದೊಡ್ಡ ಸರದಾರಾ
ರಾಜ್ಯಕೆ ಜಾಹೀರಾ ಮಾಡಿದೊಂದೊಂದ ಬಳವಲದೇಶ
ಬಲಸೂರಿ ಆಯಿತು ನರಗುಂದ||೪||

ಹಿಂದಿನ ಕರ್ಪದಲಿ ತಗಿ ಹೇಳುವೆನು ಬಗಿ
ಹಿಂದಕೆ ಹೀಂಗಾಗಿ ಹೋದಿತ್ಹಳಿಮಾತು
ಇಂಗ್ರಾಜರೀಗ ಮತ್ತೊಂದು ಮಾಡ್ಯಾರ ಮಸಲತ್ತ
ಬಾಜಿರಾಯ ಎದ್ದಾಗಿನ ಸುವ್ವ ರಾಜ್ಯವು
ಬೊಬ್ಬಾಟ ಮಾಡಿರೊ ಆಟ ಕತ್ತಿ ಕುಡರಂತ
ಬಾಳ ದಂದಲಿ ಪಾಳೆಗಾರರ ಸುತ್ತ
ಈ ಮಾತು ಕೇಳುವದು ತಡಾ
ಜಲದಿ ಭಡಭಡಾ
ಹೋದಿತಿಂದು ಗಡಾಗಡದ ಮೇಲೆ
ಕುಳಿತ ತನ ಮಂದಿಗ್ಹೇಳತಾನ
ಹುಶಾರ ಇರೊ ಸ್ವಸ್ತ
ಇಂಗ್ರಾಜರು ಶೋಧಿಸಿ ನೋಡಿ
ಆಯಿತೊ ಹಡಬಿಡಿ
ಬಂದರೊ ಓಡಿ ಊರ ಸುತ್ತಮುತ್ತ
ನಂಮ ಭೆಟ್ಟಿಗೆ ಬಾರೊ ಅದಾವೊ ಮೂರು ಮತನಾ
ಬರುವುದಿಲ್ಲ ನಿಂಮ ಭೇಟಿ
ಬರದ ಲಕ್ಕುಟಿ ಕಳುವುತಲಿ ಕುಳಿತಾ
ನೀವು ಹೇಳಿದ ಚಾಕರಿಗ್ಹಜೀರ ಇರತೇವಂತ
ಇಟ್ಟ್ಯಾಕ ಬಿಡೊ ನಿನ್ನ ಕೋಪ
ಚಲ್ಲಿಸಕರೊ ಟೋಪ
ಗಂದಕ ಮದ್ದಿನ ಉಪ್ಪ
ಹೇರಿ ಕಳುಹಂತರಕವಾಲಿ ಕಂದರಿ
ಧಾರವಾಡಕೆ ಕಟ್ಟಿದಾವು ಶೇತ||ಚಾಲ||

ಅವರಿಬ್ಬರು ಅದರ ಸುರಳಿತ ಮಾತಾಡತಾರ ಏಕಂತ
ನೀ ಬಿಡೊ ಮನಸಿನ ಬುದ್ಧಿವಂತ
ಸಂವಿ ಅಡಗಿ ಊಟ ಉಂಣಂತ||ತೋಡ||

ಇಂಗ್ರಜರದಾರೊ ಮಿತ್ಯ ಎನಗೆ ಬಲ ಸತ್ಯ
ಅಗಕರತ್ಯ ಹೇಳುವೆನು ಮುಂದ
ಬಳುವಲದೇಶ ಬಲು ಸೂರಿ ಆಯಿತೊ ನರಗುಂದ||೫||

ಧನಿ ಕಡಿಯಿಲ್ಲ ಜರಕೊಂದ
ಅನ್ಯಯಾವಾದ ಕರಿಯ ಕಳವೀದ
ಎಲ್ಲ ನುಂಣದ
ಮಸಲತ್ತ ಹುಟ್ಟಿತೊ ಮಾಸೋಜರ ಹೊಟ್ಟ್ಯಾಗ
ಆ ಊರ ಪೈಕಿ ಹಳಬರಾ ಸವಾನೂರ ಹಾರಾ
ಹಿರದ ಕತ್ತಿ ಭಾರ ಬಂತೊ
ಅಗಶ್ಯಾಗ ನಾವು ಲಡಾಯಿ ಮಾಡತೀವಿ
ಕತ್ತಿ ಕೊಡಾಕಿಲ್ಲ ನಿಮಗೆ
ಧನಿ ತಗದ ಹೇಳತಾನ ಬಾಯ
ಮುಗದಕ್ಕಾರ ಕೈ
ನಮಗ ಅಪಾಯ ತಂದಿರೊ ಈಗ
ಭಾಳ ದೈನ್ಯಾಸ ಬಿಟ್ಟು ಹೇಳತಾನ ಮಂದ್ಯಾಗ
ಆಗುವಂಥ ಕೀರ್ತಿ ಆಗಲಿ ಎದಿಮೆಲ
ಹೊಗಲಿ ನಮ್ಮ ತಲಿ
ಎದಿಯ ಮೇಗ ಮಲಿ ಅದಾವೆನೊ ನಮಗ
ಸಂಕದಾಳ ನಾಯಿಕ ಶಿಟ್ಟ ಆದನೊ ಧನಿಮೇಗ
ಏನ ಮುನ್ಯಾಸ ಮಂಕಿನ ಮೇಲೆ ದಂಡ
ಮೆಣಸಿನ ಸಾಹೆಬ ಚಂಡ
ತಂದ ಕೋಕೊಂಡ ಕಟ್ಟಿದರ
ಹೊರಗ ಭಾಳ ಬೆಂಕಿ ಬಿದ್ದಿತೋ
ಇಂಗ್ರೇಜರ ಹೊಟ್ಟ್ಯಾಗ
ತೋಪ ಹೂಡಂದ ನರಗುಂದ ಮೇಲಿ
ಸಂಣ ಜಂಜಾಲಿ ಬಂದುಕ ಪಿಸ್ತುಲಿ ಕರೊಲಿ ಕೈಯಾಗ
ಏನ ಕಡಾಟ ಲಡಾಯಿ ಮಂಗಳಾರ ಮಧ್ಯಾನದಾಗ||ಚಾಲ||

ಮಳ್ಳರಸ ಕಿಲೇದಾಗಿದ್ದ ತಿಳಿಯದಲೆ ತಾನ ಹೊರಬಿದ್ದ
ಅವರ ಕೂಡ ಮಾಡಿದಾನ ಜಿದ್ದ
ಹರುಷದಲಿ ತಾನು ಹೊರಬಿದ್ದ
ಅವರ ಕೂಡ ಮಾಡಿದಾನ ಯುದ್ಧ
ಇಂಗ್ರಾಜರ ಸೋಲಿಸಿ ಗೆದ್ದ||ತೋಡ||

ಸೋಜರ ದಂಡ ಬಂದಿತೊ ತುರಿ ಕಡದು ಶರಿ ಸುರಿ
ಆ ಶಿಕ್ಕನೊ ಧೊರಿ ಆದ ಕೈಶೆರಿ
ಆಗಲಿಲ್ಲ ಮುಂದ ಬೆಳವಲ ದೇಶ
ಬಲು ಸೂರಿ ಆಯಿತು ನರಗುಂದ||೬||

ಏನ ಫಿತುರ ಮಾಡಿದಿ ಬೇಮಾನ
ಉಂಡ್ಯೊನಂನ ಬೋನ ದೊಡ್ಡ ಕಾರಕೂನ
ತಿರಗಿದ್ದಿಲ್ಲಾರು ಮುಂದ್ಹ್ಯಾಂಗ ನಿನಗೆ
ಮೆಚ್ಚ್ಯಾನೋ ದೇವರಾ ನಂನ ಗಂಡನ
ಸರಪಂತಿ ಉಂಡಿ ಐಶ್ವರ್ಯ ಕಂಡಿ
ಶೇಲ ಹೊತಕೊಂಡಿ ಶರಗ ಜರತಾರಾ
ಅಂತಾದೇನು ಮಾಡಿದರೊ ನಿನಗೆ ನಂಮವರಾ
ಸ್ವಾಮಿ ನನಗೆ ತಂದಿ ವನವಾಸ
ಹತ್ತಲಿ ನಂನ ದೋಷ ನನಗೆ
ಆಸರ ಇಲ್ಲ ಯಾರ‍್ಯಾರ
ಅತ್ತಿಸೊಸಿ ತೆಕ್ಕ್ಯಾದ ದುಃಖ ಮಾಡುವರು
ಎಷ್ಟ ಇತ್ತೊ ಮನಸಿನಂತ ಜಿದ್ದ ತೋಸಿದೆಲ್ಲ
ಮದ್ದ ಟೋಪ ಅರಿದ್ದ ದೂರ ಹೋಗಲಿಲ್ಲ
ನಿಂಮವನ ನೆಟ್ಟರಿಟಿಗ ಭಾಳ ಮಾಡಿದೊ ಪೇರಾ||ಚಾಲ||

ಕಾರಕೂನ ಬಹಳ ಶಿಟ್ಟೀಲಿ
ಗುರತಾಸಿ ಹೋದ ಮೈಮೇಲಿ
ನಿನಗ್ಯಾಕ ಹೆಂಗಸ ಮೈಮೇಲಿ
ನಿನಗ್ಯಾಕ ಹೆಂಗಸ ಬಾಲಿ
ಕಳವೇನು ಉಟ್ಟಿರೋ ಶಾಲೆ
ಈ ಕ್ಷಣಕೆ ಸೋಜರ ದಂಡ ಬರಲಿ
ಹಿಡಕೊಡತಿನ ಅವರ ಕೈಯಲಿ||ತೋಡ||

ಆಕಿ ಮೇಣೆದಾಗ ಕುಂಡರಸಿ
ಅಂಜಿ ಅಡರಾಸಿ ಕುದರಿ ದುಮಕಾಸಿ
ಹೊಳಿಯ ವಳಬಿದ್ದ ಬೆಳವಲದೇಶ
ಬಲು ಸೂರಿ ಆಯಿತು ನರಗುಂದ||೭||

ಆ ಲಡಾಯಿ ಸುದ್ದಿ ಕೇಳಂಣ
ಕತ್ತಿ ಚಣಪಣ ದಾರಿಗೊಂಟ ಹೆಣ
ಬಿದ್ದಿದವು ಎಷ್ಟ ಈಗ
ಮೂರು ಲೋಕದೊಳಗಿರಲಾಕಿಲ್ಲ
ಇಂಥ ನಷ್ಟ
ಪ್ರಾಯದವರ ಮಾರಿ ಮೇಲೆ
ದಸಿ ಕಾಣತತಿ ಬೇನಿ ವತ್ತಿ
ಮಾಕ ಮೀಶಿ ಬಂದವೊ ಈಟೀಟ
ಎನ ಭಗರಿ ಗಡ್ಡ ರಣಗೂದಲ
ಜಾಡಿಸಿ ಬಿಟ್ಟ
ಅವರ ತೊಟ್ಟರ ಚವಕಿನ ಚಂಣ
ಎದ್ದಿಶರ ಮಂಣ
ಸುತ್ತಿದರ ಸಂಣ ಕಾಸಿ ನಡಕಟ್ಟ
ಮೈಯೊಳಗ ಚಂದಕಿನ ಕಾಪದ ಅಂಗಿಯ ತೊಟ್ಟ
ತಮ ದನಿಗೆ ಮುಜರಿಯ ಹೊಡರು
ಕತ್ತಿ ಡಾಲ ಪಿಡಿದು ಕರುಲಿ ಗುಂಡ ಬಡಿದು
ಗಾಯ ಗಂಟ ಬಿದ್ದು ರಣದೊಳಗ
ಮಡದರೊ ದರಣಿಗೆ ತಲಿಯಗೊಟ್ಟು
ಕೊಂದು ಕುರಿಯ ಹಾಕಿದಾಂಗ ಪಾಲ
ರಕ್ತ ಜಲಜಾಲ
ಭೂಮಿ ಉಳಿಲಿಲ್ಲ ನೋಡೊ ಎಳಿ ನಷ್ಟ
ಎನ ಕರಳ ಪಚ್ಚ ಹೊರಬಿದ್ದವೊ ನೋಡೋ ಎಷ್ಟ||ಚಾಲ||

ಅವರ ಹೆಂಡರದು ಬಲು ಸೂರಿ
ಬಳಿ ವಡಿದು ಕರಿಮಣಿ ಹರಿದು
ಅವರಕ್ಕ ತಂಗ್ಯಾರ ಬೋರ‍್ಯಾಡಿ ಬಡಕೊಂತ
ಬಂದಳೋ ಭೋರಿ ಅವರವ್ವನ ಹೊಟ್ಟಿಲಿ
ಗುಮರಿ ಹೊಡಕೊಂಡು ಬಂದಳೊ ಮಾರಿ||ತೋಡ||

ಏನ ಲಡಾಯಿ ಮಾಡಿದಾರ ಶರ್ತ
ಅವರದೇನ ಗುರ್ತ ಸತ್ಯರೋ ಯರ್ಥ
ಆಗಲಿಲ್ಲ ಮುಂದ ಬೆಳವಲದೇಶ
ಬಲುಸೂರಿ ಆಯಿತು ನರಗುಂದ||೮||

ಅರಮನಿ ಆದಿತೋ ಲೂಟಿ
ಮಾರಾಯಿ ದೊಡ್ಡಪೇಟಿ ಜಿಂದಗನಿ ಕಟ್ಟಿ
ಹೇರ ಕಳಹು ಅಂತ
ಪಾಂಡವರ ಮನಿ ಕೌರವರು ಸುಲಿಗಿ ಮಾಡಿದಂತ
ರಾವುತರ ಕುದರಿ ಸಾಮಾನ
ಹೇಳಲಿನ್ನೇನ ಹಾಕುರು ಜರಜೀನ
ರೇಸಮೀ ತಡಿ
ಇನ್ನ ಮಾರಿ ಮೂರಕಿ ಬಂಣದ ಸರಸರ ಗೊಂಡಿ
ರೇಸಮಿ ಬದಕು ಬಲು ಸಹಾ
ಕಾಣತದ ತುಸಾ ಶಾಲಿ ಕುಪ್ಪಸಾ
ಬಾಲೆರುಡು ಮಡಿ
ಏನ ಜವಳಿ ಅಂಗಡಿ ಹೊಕ್ಕ
ಸುಲಗಿಯನು ಮಾಡಿ
ಪಟ್ಟಣಕೆ ದೊಡ್ಡ ಸಾವಕಾರಾ
ಬೆಳ್ಳಿ ಬಂಗಾರಾ
ಹೇಳಲಿನ್ನೇನ
ಮುತ್ತಿನಾ ದಂಡಿ ಬೆಳ್ಳಿಯ ತಳಗಿ
ಚಿನ್ನಾದ ಹರಿವಾಣ ಗಿಂಡಿ
ಓಕ್ಕಲಗೇರ ಮೂರ ಹೊತ್ತ
ಮಿಣಿಯ ಖಣೀ ಸುತ್ತ
ಹೂಡು ಎಂಟೆತ್ತ
ದೊಡ್ಡಹಳ್ಳಿ ಭಂಡಿ ಜೆತ್ತೀಗಿ ನಗಾ
ಹೊಲ ಬಿತ್ತುವ ಕೂರಿಗಿ ಶೆಡ್ಡಿ
ರೇವಡಿಗಾರ ಅಂಗಡಿಯ ಮೇಲೆ
ಮಾಜುಮದಲಿ ಹುರದ ಹುರಕಡ್ಲಿ
ಚುರ್ಮರಿ ಉಂಡಿ ಎನ ಸಕ್ಕರಿ ಬದುಕು
ಮುಕ್ಕ್ಯಾರ ಪಾವನ ಮಾಡಿ||ಚಾಲ||

ನರಗುಂದಕೆ ಬಂದಿತ ಕಾಲ
ಇಂನ್ಯಾರ ಉಳವಿಕೊಳಲಿಲ್ಲ
ಗಣನಾಥ ರೊಕ್ಕದ ಚೀಲ
ಕಳಕೊಂಡ ಹೋದ ಚಿನಿವಾಲ
ಊರ ಬಿಟ್ಟು ಹೋದರೊ ಎಲ್ಲ
ಮನಿಮಾರಿನೊಳಗೆ ಯಾರಿಲ್ಲ||ತೋಡ||

ಧರಿಯೋಳು ಕಬ್ಬೂರ ಶಹರಾ
ಕಲ್ಯ ದೇವರ ಮಾಡಿ ಚಮತ್‌ಕಾರಾ
ಲಾವಣಿ ತಂದ ಬೆಳವಲ ದೇಶ
ಬಲು ಸೂರಿ ಆಯಿತು ನರಗುಂದ||೯||

* /song stress / ಬಾಳಿ ಇಂಟಿ ಗುಳೇದಗುಡ್ಡ ೨೯ನೇ ಜಾನೆವಾರಿ ೧೮೭೪ ಇ || (ಒಂದು ಸಂಕ್ಷಿಪ್ತ ಸಹಿ ಇದೆ).

 

ಕವಿ : ಕಲ್ಕ ದೇವರು
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು


[1] ಕಂಚ ಚಿನಾ

[2] ಇದರ ಬಳಿ ಧನಿತಾನ ಎಂಬ ಶಬ್ದವೂ ಮೂಲ ಹಸ್ತಪ್ರತಿಯಲ್ಲಿದೆ.

[3] ಈ ಪದ ಹೀಗೆ ತಿದ್ದಲ್ಪಟ್ಟಿದೆ ; ಅಬೀಠಾ