ಬಾಬಸಾಬ ಮಹಾರಾಯನ ದೌಲತ
ಬಹಳ ದಿನದ ರಾಜೂಕಿ |
ಬ್ರಾಮ್ಹರ ಧರ್ಮಾ ಸರಿತೊ ಇಲ್ಲಿಗೆ
ಮುಣಗಿತಂಣ ಅರಸೂಕಿ ||
ಜನರೆಲ್ಲ ಮಾಡತಾರೊ ದುಖೀ||ಪಲ್ಲ||

ಪುಣೇದ ಪ್ರಾಂತ ಹಿಡದ ಚನ್ನಪಟ್ಟಣಕೆ
ಮೆಣಸಿನ ಸಾಹೇಬ ಒಬ್ಬ ಧೊರೆ |
ವಿಲಾಯತೀಲೆ ಹುಕುಂ ತರಿಸಿದಾ
ರಾಜರಿಗ್ಹಾಕೂದು ಶರಿ |
ಕತ್ತಿ ಕಸ್ತ ಕಟ್ಟಿಸಿದ ಹೊರೀ |
ಮೊದಲ ಬಂದ ಜಮಖಂಡಿ ಅರಸಗ
ಹಿಡಿದನಲ್ಲೊ ಕೈಶರಿ |
ಮೇಣೇವು ಪಿಂಜರದಾಗ್ಹಾಕಿ ಕಳಿಸಿದಾ
ಜಮಖಂಡ್ಯಾತೊ ಶರೆ ಸೂರಿ |
ವಾಡೇದಾಗ ಕೊಶಾನ ದನ ಕುರೀ |
ಮುನಸಿಗ್ಹೇಳತನ ಬಹಳ ಶಿಟ್ಟಲೆ
ಬಾಬಾ ಸಾಹೇಬಗ ಬರಿ |
ಪತ್ರ ಒಂದು ಬಾಬಾ ಸಾಹೇಬಗ ಬರೀ |
ಜಲ್ದಿ ಪತ್ರ ರವಾನಿ ಆಗಬೇಕು
ಷಾನ ತುರುಪಿನ ಕೂದರಿ |
ಕುದರಿ ಕರ‍್ಯಾಕ ಬಂದವು ತರತೂರೀ |
ಪತ್ರ ಓದಿ ನೋಡುವಾಗ
ಬಾಬಾಸಾಬರು ಸಂಣದ ಮಾಡ್ಯಾರೋ ಮಾರೀ |
ವೆಂಕೋಬಾನ ಹೆಸರು ತಕೊಂಡು
ರಾತ್ರಿಲೆ ಹಿಡದಾರು ಜಮಖಂಡಿ ದಾರಿ |
ಸಾಹೇಬನ ಹುಜೂರಿಗೆ ಹೋತ ಇವರ ಸ್ವಾರಿ |
ಖುರ್ಸೇ ಮೇಲೆ ಕುಂತಾನ ಹಲ್ಲ ತಿಂದ ಕರಕರಿ |
ಇಂಥಾ ಭಂಡಾಯೀ ಏನ ಮಾಡೇವು ನಾವೂ
ಯಾಕ ಹಲ್ಲ ತಿಂತಿರೀ |
ನಿಮ್ಮ ಕೈಯನ ಗುಬ್ಬಿ ಮರೀ |
ಅಪಣಿ ಕೊಟ್ಟ ನಡಿಯಂದ ನರಗುಂದಕ
ಕಿಲ್ಲೇವು ತೆರವು ಮಾಡರೀ |
ಹೊಂಡ ಒಡಸಿ ತಟ್ಟ ಬಂದಿ ಕೆಡವಿಕ್ಯಾನ
ಸುತ್ತಲ್ಯಾಗ ಬೇಕೊ ದಾರಿ |
ಇದರ ಹೊರ‍್ತ ಊರಾಗಿನ ಕೆರಿ |
ತಿರಿಗಿ ಬಂದ್ರು ನರಗುಂದಕ ಬಾಬಾಸಾಬ
ತೆಪ್ಪಿತಂಣ ಹಂಚಿಕಿ||೧||

ತನ ಮಂದಿ ಕರಸಿ ವೀಳ್ಯವ ಕೊಟ್ಟರೊ
ತಮ್ಮಾ ಶುಕ್ರವಾರ ದಿನಾ |
ವೆಂಕೋಬಾನ ಪಲ್ಲಕ್ಕಿ ತಗಸಿ ಕಾಸ
ತೋಪ ಹಾರ್ಸೀರು ಧಂಧನಾ |
ಸುತ್ತ ರಾಜ್ಯದ ಕೇಳಿತ ಜನಾ |
ನವಲಗುಂದ ಸುಭೇದಾರ
ಮೆಣಸಿನ ಸಾಹೇಬಗ
ಪತ್ರ ಬರದ ಮರದಿನಾ |
ನರಗುಂದರಸ ಭಂಡಾಯಿ ಮಾಡೂದು
ತಯಾರ ಮಾಡಿಸ್ಯಾನ ಸಾಮಾನ |
ಹೀಂಗ ಬರದಿದ್ದ ವರತಮಾನ |
ಮೆಣಸಿನ ಸಾಬ ರಾಮದುರ್ಗಕ ಬಂದನೊ
ನೇಮಸಿ ಆಯಿತ್ಯಾರ ದಿನಾ |
ತೋಟದಾಗ ಇಳದ ಕರೇಕಳಿಸಿದಾ
ಶಿಟ್ಟಿಲೆ ರಾವ ಸಾಬನಾ |
ಬಾಯಿ ಬಿಡತಿತ್ತೊ ಶಿಪಾಯಿ ಜನಾ |
ಅಡ್ಡಬಿದ್ದ ರಾವಸಾಬ ಸಾಹೇಬಗ
ಕರಗಲಿಲ್ಲೊ ಅವನ ಮನಾ |
ಅಣ್ಣನ ಮಾತಿನಾಗ ತಸ್ಮಾತ್ರಿಲ್ಲಾ
ಕ್ರಿಯವ ಕೊಟ್ಟರಾದಿನಾ |
ಕುಮಕಿಗೆ ತಕ್ಕೋ ನಮ ಕುಡರಿನಾ
ಧೀರ ಆಗಲಿಲ್ಲೊ ಹೊಂಟ ಸಾಹೇಬ
ಇಳದಾನ ಸೂರೇಬಾನ |
ಬಸವಣ್ಣನ ಗುಡಿಯಾಗ
ವದಗಿ ಬಂತಲ್ಲೊ ಅವನ ಮರಣ |
ಬಾಬಾಸಾಬ ಅಂದ ಅರ್ಜುನ |
ಬಾಬಾಸಾಬ ಜೀವದಿಂದ ಹಿಡೀ ಅಂದ್ರ
ಕೇಳಿಲಿಲ್ಲೊ ಕೂಡಿದ ಜನಾ |
ಹಿರೇಕೊಪ್ಪದ ಶಾನಭೋಗ ಬಂದಕ್ಯಾಸ
ಕೊಯಿದ ಸಾಹೇಬನ ಕುತ್ತಿಗಿನಾ |
ರಣಕತ್ಲ ಆತೊ ಆ ದಿನಾ ಜಿ |
ರುಂಡ ಬಿತ್ತ ಚಂಡು ತಕ್ಕೊಂಡ
ರಾತ್ರಿಲೆ ಬಂದರಲ್ಲೊ ತಿರಿಗ್ಹಾಕಿ ಬ್ರಾಮ್ಹರ ಧರ್ಮಾ||೨||

ಸೋಮಾರ‍್ಹೋತು ಮಂಗಳಾರುದೇಕ
ಕೂಡಿತಣ್ಣ ದರ್‌ಭಾರಾ |
ಅಮರಗೊಳ್ಳದ ಮೇಗ ತಂದ ಇಳಸಿಕ್ಯಾಸ
ಹೊಡಸಿದಾನ ತಂಬೂರಾ |
ಮಲಕನ್ ಸಾಹೇಬ ದಂಡಿನ ಸರದಾರಾ |
ಕಾಲ ಕೆದರಿ ಕೆಂಗಳಿಸಿ ಲಢಾಯಕೆ
ಹೊಂಟನಂಣ ರಣಧೀರಾ |
ಬಾಬಾಸಾಬ ಹೊಂಟನಂಣ ರಣಧೀರಾ |
ತಲಿ ಮೇಲೆ ಮುತ್ತಿನ ಅಪ್ತಾಗಿರಿ
ಕೈಯಾಗ ಹಿಡಿದ ಹತಿಯಾರ |
ಮುಂದ ಹುಶಾರಕಿ ಕೊಡುವ ಮಾಲದಾರ |
ದಿಬ್ಬಕ್ಹೋಗಿ ಫರೆಗಟ್ಟಿ ನಿಂತರೊ
ಬಿಗಲ್ಮಾಡಿದ ಸರದಾರ |
ಏಕದಮ್ಮ ಧುಮಕಿಶಾನ ಕುದರಿ
ಮೈಸೂರು ಶೀಮಿ ರಿಸಾಲದಾರ |
ಬಾಳ ದಂಡ ಆತು ಚಕಚೂರಾ |
ಅಮರಗೊಳ್ಳಕ್ಹರದಾರಿ ನರಗುಂದ |
ಹರಿದಾಡಿ ಹೋತೊ ನೆತ್ತರ |
ಹಾಲಭಾವಿಗೆ ತಂದ
ಟೋಪ ಹಚ್ಚಿದಾ ದಂಡ
ದುರುಬಿನ ಸರದಾರಾ |
ಮಂದಿ ಬಿಟ್ಟ ನಡೀತೊ ಮನಿಮಾರಾ |
ಬಾಬಾಸಾಬ ಬಂದ ಸದರಿಗೆ ನಿಂತರೋ
ಸುತ್ತಲಿಲ್ಲ ಯಾರ‍್ಯಾರ |
ದಗೇ ಅತಿ ಕೈವಾಸ ಆಗತೀನಿ
ಪಾರಮಾಡೊ | ಈಶ್ವರ |
ಕುದರಿ ಹಿಡದಿದ್ದ ಮೋತದಾರ |
ಯರಡು ತಾಸ ಹೊತ್ತಿತ್ತು
ಕುದರಿಮೇಗ್ಹತ್ತಿ ಮಾಡ್ಯಾರೊ ನಮಸ್ಕಾರ
ಸಂಣ್ಣ ಅಗಸಿ ತೆರಿಸಿಬಿಟ್ಟರೊ ಕುದರಿ
ದಿವಸ ಇತ್ತ ಮಂಗಳವಾರ |
ಬಿಟ್ಟ ಹೋದರೊ ನರಗುಂದ ಶಾರಾ |
ಅರಣ್ಯವಾಸ ಜಗದೀಸ ಮಾಡಲಿಕೆ
ಕೊಟ್ಟಿದ್ದಾ ಅರಸುಕೀ || ಬ್ರಾಮ್ಹರ ಧರ್ಮಾ ||||೩||

ಬಾಬಾಸಾಬರಾ ಮಡದಿ ಪತಿವ್ರತಾ
ಸರಿಯಿಲ್ಲಿವರ ಪುಂಣ್ಯಕ |
ವಿಷಾ ಅಂಬುದು ಪರಾಭವ
ಮಾಡು ತಾಯಿಗಿಂತ ವೇಳೆ ಬರಬೇಕ |
ಹೀಂಗ ಮರಗತೈತಿ ಜನಲೋಕ |
ಅತ್ತಿ ಸೊಸಿಗೆ ಹೇಳತಾಳ
ಪ್ರಾಣ ಇನ್ನೇನಂತ ಇಡಬೇಕ |
ಕಿಲೇದಾಗಿಲ್ಲ್ಯಾತಕ ಇರಬೇಕ |
ದಂಡಿನ ಜಪಾಟ್ಯಾಗ ಶಿಗಬಾರದಪ್ಪಾ
ಮುಣುಗೂನು ನಡಿ ಹೊಳಿಯಾಗ |
ಮಗ ಬಿಟ್ಟ ಹೋದ ನಮ್ಮಗ |
ಮೇಣೇವ ಪಾಲಕ್ಕಾಗ ಕುಂಡರವರು ನಾವು
ನಡದ ಹ್ಯಾಂಗ ಹೋಗಬೇಕ |
ಇಂಥಾ ಅನ್ನೇವು ಏನು ಮಾಡಿದ್ದೇವ
ಠಾವಿಕಿ ವೆಂಕೋಬಾಗ |
ದುರಮರಣ ತಂದ ನಮ್ಮಗ |
ಕಲ್ಲ ತುಳದ ಮುಳ್ಳ ನಟ್ಟ
ನೆತ್ತರ ಹರೂತಾವು ಇಬ್ಬರ ಕಾಲ |
ಹೊಳಿದಾರಿ ಹಿಡದ್ಹೋಗುವಾಗ
ಬಾಯಿ ತೆರವರು ಆಕಾಶಕೆ ||
ಹೊಳಿದಂಡಿಗ್ಹೋದರಾವಾಗ |
ನಡಕ ನಡಾ ಸುತ್ತಿ ಅಂಗವಸ್ತ್ರದಲೆ
ಬಿಗದಾರ ಗಂಗಾದಾಗ |
ಹರಹರ ಜಿಗದರು ಗಂಗಾದಾಗ
೧ತು೧

[1]ಳಸಿದಳಾ ಬಾಯಾಗ್ಹಿಡದಿರ್ದಂತ
ಹೋದರು ಕೈಲಾಸಕ |
ನೆನವಿಟ್ಟರೊ ಮರ್ತ್ಯದೊಳಗ |
ಕೆರೂರ ಮೂಲಕರಿ ಹುಕುಂ ತರಿಸಿದಾ
ಟಪಾಲ್ಕುದರಿಮೇಗ್ಹಾಕಿ |
ಅತ್ತಿಸೊಸಿಗೆ ನಿಂತ ದಹನ ಮಾಡಿದಾ
ದೇವರಿಡಲಿ ಅವಗ ಸುಖೀ||೪||

ಇಷ್ಟ ಸಂಸ್ಥಾನದ ವಳಗ
ಶ್ರೇಷ್ಠ ನಮ್ಮ ಬಾಬಾಸಾಬರ ಹಂಚಿಕೀ |
ಎಷ್ಟ ತೆಪಸಿದರ ತೆಪ್ಪಲಿಲ್ಲ
ಬರದಿದ್ದ ಬ್ರಮ್ಹ ಲಿಖಿ |
ಬಿಟ್ಟ ಹೋದರೊ ಚಂದರ ಮುಖಿ |
ಕಾಲಕುಪಾಯಿ ಯಿಲ್ಲಂತ
ಕೈಯ ಮುಗದ ಹೊಂಟ ತುಳಸಿ ಮುದ್ರಿಕಿ |
ವೈದಿಕಿ ಬ್ರಾಮ್ಹರು ಅಡ್ಡಬಿದ್ದು ಅಳುವಾಗ
ತೆಲಿಮ್ಯಾಗಿಟ್ಟರ‍್ಹಸ್ತಿಕಿ |
ಮಾರಿ ನೋಡಲಿಲ್ಲ ತಿರಿಗ್ಹಾಕಿ |
ಒಳ್ಳೆ ಲೋಡಿಗಾಂತ ಕುಂಡ್ರು
ದೀಕ್ಷಿತರಿಗೆ ಕುಂಡ್ರಾಕಿಲ್ಲೊ ಹಾಸಿಕಿ |
ಜಾಡಿ ಹಾಸಿಕಾಸ ಮಲಗುವಾಗ
ಅಳುವರೊ ಕಣ್ಣಿರ‍್ಹಾಕಿ |
ಮುಗಲ್ಹರದ ಬಿತ್ತೊ ತಾರಕಿ |
ಅರಸಪಿಂಡ ಮುಕ್ಕುಂಡ
ಖರೇ ನಿನಗ ಸಲ್ಲದೊ ಶಿಕೇದ ಮುದ್ರಿಕಿ || ಬ್ರಾಮ್ಹರ||೫||

ಅಪಾಸಾಬ ಬಾಬಾಸಾಹೇಬರು
ದೇವರ ಮೇಗ ಭಗತಿ |
ಯಾವ ದೇವರ ಅಡ್ಡಾಗಲಿಲ್ಲ ಅವರಿಗೆ
ಶೆಟವಿ ಹಾಕಿದ ಮಿತಿ
ಏನ ಸರಿತೊ ದೌಲತಿನರತಿ |
ಗುಡಿ ಮೇಲೆ ಅನಛತ್ರ ಭೋಜನಾ
ಸದಾ ಅದಲ್ಲೆ ನಡುತೈತಿ |
ದೇವರ ಮುಂದ ಸುಗಂಧ ಪುಷ್ಪಗಳು
ಹಚ್ಚ್ಯಾವು ಅಮರ ಬತ್ತಿ |
ಮುಂದ ಹರಿದಾಸ ಬಾವಾರ ಕಥಿ |
ಪಾತ್ರ ಕಂಣೂದು
ಸಾರಂಗಿ ವೀಣೆ ಮೃದಂಗ ತಾಲ ನಡುತೈತಿ |
ಸರ್ವ ವಾದ್ಯ ತಯ್ಯಾರ
ದೇವರ ಮುಂದ ಆನಿ ಜಲಾಸತೈತಿ |
ಮುಂದ ಸಂಕ ಸನಾದಿ ಸಂತೀ
ತಳಲುಬೊತಾಟಿಮಾಯಮರತಾಬ
ನಿಶಾನಿ ಮುಂದ ನಡುತೈತಿ |
ಯರಡು ಬಾಜಿತಿ ಚೋಪದಾರ
ಭಟ್ಟಂಗಿ ಸಾರತೈತಿ |
ಪಾಯಾಸುದ್ದ ದೌಲತ ನಡೀತಿ |
ಅರಸರೊಳಗ ಬಲ್‌ಸರಸಿತ್ಹೋದ
ಮುಂದಿದ್ದವರಿಗಿಲ್ಲೊ ಸುಖಿ | ಬ್ರಾಮ್ಹರ ||೬||

ಬಾಬಾಸಾಹೇಬ ರಾಮನೀ ಪುರೋಹಿತ
ಸವಾಲ್ ಮಾಡಿದ ಸದರೀಗೆ |
ಸದರಿನ ಕಂಬಾ ಪೇಟಿಗ್ಹಾಕಿಸಿ
ಮಾರಿದ ಸಾವಕಾರಿಗೆ |
ಬ್ರಾಮ್ಹಣನ ಬೇಕೆನೊ ಅವನೀಗೆ |
ಧಣೇರ ಉಪ್ಪ ಉಂಡು
ನಿಂದೆ ಮಾಡತಾರ ತಿಳಿವಲ್ದೀ ಜನರಿಗೆ |
ಠಳಕಠಕ ನುಡಿಕಟ್ಟಿ ಹೇಳಿದನು
ಸಂಪಾಸಿನು ಇಲ್ಲಿಗೆ |
ನೆನಸ್ತೇನು ನಮ್ಮ ವಸ್ತಾದಿಗೆ |
ಸೈದ ಹುಶೇನಿ ಸೋನಾಜಿ
ಹೇಳತಾರ ತಾಲ ಹಿಡಿರಿ ಗತ್ತೀಗೆ |
ರಾಜುಮಲ್ಲ ಉಮ್ಮಾಜಿಯ
ದನಿಯು ಕೇಳಿರಿ ಬೇಗಿನ ಹೊತ್ತಿಗೆ |
ಬೆಲ ಇಲ್ಲ ಜಾತ ಮುತ್ತೀಗೆ |
ಹಳೇಹಾಡ ಹಳವಂಡ ತಗೂತಿ
ತುಸಾ ಯಿಲ್ಲೊ ನಾಚಿಕಿ |
ಹರದಾಸಿ ನಿನಗ ತುಸಾ ಯಿಲ್ಲೊ ನಾಚಿಕಿ |
ಸಭೆ ರಮ್ಯ ಆಗುವಂತಾದ್ಹೇಳೊ
ಬಂದಿತ ಶಹಬಾಸಿಕಿ ||
ಜನರೆಲ್ಲ ಮಾಡತಾರೊ ದುಖೀ ||
ಸಮಾಪ್ತಿಯು ||||೭||

ಕವಿ : ರಾಜು ಮಲ್ಲ ಉಮ್ಮಾಜಿ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು[1]